Saturday, September 17, 2011

"ಸತ್ಯಾನಿಕಿ ಜಯಂ ಉಂಟುಂದಿ.....?!"

ಪುರಾತನ ಪಾತಕಿಯೂ,ಕ'ಮಲ' ಪಕ್ಷದ ಬೂಸಿಯ ಸಂಪುಟದಲ್ಲಿದ್ದ ತೆಲುಗು ಸಿನೆಮಾದ 'ರೇಪು ಚೇಸಿನ ರೇಪಿಸ್ಟ್'("ಆದಿ ರೇಪು ಕಾದು...ನಾವಿಬ್ಬರೂ ಸೇರಿ ನೆನ್ನೆಯೆ ಮಾಡಿ ಮುಗಿಸಿದೀವಿ?!" ಅನ್ನೋದು 'ರಸಿಕ' ರೇಣು ಯಾರೂ ಕೇಳದಿದ್ದರೂ ಸ್ವಪ್ರೇರಿತರಾಗಿ ಕೊಡುತ್ತಿರೊ ಸಮಜಾಯಷಿ!) ಲುಕ್ಕಿನ ಆ(ಯೋ)ರೋಗ್ಯ ಸಚಿವನೂ,"ಮಂಡ್ಲೂರು ರೌಡಿಗಳ ನಿರ್ನಾಮಕ್ಕೆ ಹಾಗು ಬಳ್ಳಾರಿಯಲ್ಲಿ ಧರ್ಮಸಂಸ್ಥಾಪನೆಗೆ ಅವತಾರ ಎತ್ತಿ ಬಂದ ಅವತಾರ ಪುರುಷ ಆತ,ದುಷ್ಟ ಸಂಹಾರದಲ್ಲಿ ಒಂದೆರಡು ಕೊಲೆಮಾಡೋದೆಲ್ಲ ಆ ಪುಣ್ಯ ಪುರುಷನಿಗೆ ಮಾಮೂಲು" ಎಂದು ಕೆರೆದು-ಕೊರೆದು ಅವನಿಟ್ಟ ಸ'ಗಣಿ'ಯನ್ನು ಕಂಠಮಟ್ಟ ತಿಂದ ಋಣಕ್ಕೆ ಕೆಲವು 'ಶ್ರೀಮಾಮುಲು' ಶೈಲಿಯ ಕರಿ ಕರಪತ್ರಿಕೆಗಳ ಕರಡಿ 'ಸಂಪಾದಕ'ರಿಂದ (ಅವರು ಇಷ್ಟೆಲ್ಲಾ ಸಂಪಾದಿಸಿದ್ದು ಕೇವಲ ಪತ್ರಿಕೆಯಲ್ಲಿ ಬರೆದೊ?,ಇಲ್ಲ ಕಂಡವರನ್ನು ಪೆನ್ನಲ್ಲೆ ಹೆದರಿಸಿ ಹೆರೆದೊ ಎಂಬ ಸಂಶಯ ಕನ್ನಡಿಗರಿಗೆ ಯಾವಾಗಿನಿಂದಲೂ ಇದ್ದೇ ಇದೆ!) ಎಕ್ಕಮಕ್ಕ ಹೊಗಳಿಸಿಕೊಂಡ ಈಗಾಗಲೆ 'ನೊಂದ' ಶ್ರೀರಾಮುಲು ಈಗ ಇನ್ನಷ್ಟು ನೊಂದು ಮುಲುಗುಡುವುದು ಖಾತ್ರಿಯಾಗಿ ಹೋಗಿದೆ! ಅತ್ತ ತಾನು ನಂಬಿದ ರೆಡ್ಡಿ 'ಜನಾರ್ಧನ'ನ ಜನ್ಮಸ್ಥಾನದಲ್ಲಿ ಖಾಯಂ ಬೀಡು ಬಿಡುವ ಸೂಚನೆ ಸ್ಪಷ್ಟವಾಗಿರುವಾಗ ;ಏನೋ ಆಡಾಡುತ ತಾನು ತಮಾಷೆಗೆ ಕೊಟ್ಟ ರಾಜಿನಾಮೆಯನ್ನ ಸ್ಪೀಕರ್ ಭೂ(ಬೋ)ಪ ಕಡೆಗೂ ಅಂಗೀಕರಿಸಿ ಮಾಜಿ ಸಚಿವನಾಗಿದ್ದ ತನ್ನನ್ನ ಈಗ ಮಾಜಿ ಶಾಸಕನನ್ನಾಗಿಯೂ ಆಗಿಸಿ ಅಂಗಿ ಹರಿದುಕೊಳ್ಳುವಂತೆ ಮಾಡಲಿದ್ದಾನೆ!



ಈ "ಅಜ್ಞಾತ ಸ್ಥಳ" ಎಲ್ಲಿದೆ ಎಂದು ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ಹೇಳಿ ಪುಣ್ಯಕಟ್ಟಿಕೊಳ್ಳಿ! ಯಾವಾಗ ನೋಡಿದರೂ ಸರಕಾರದಲ್ಲಿ ಬಿಕ್ಕಟ್ಟು ಉಂಟಾದಾಗ ಎಲ್ಲಾ ಶಾಸಕರು "ಅಜ್ಞಾತ ಸ್ಥಳಕ್ಕೆ" ಹೋಗುವುದು ಇತ್ತೀಚಿನ ದಿನಗಳಲ್ಲಿ ತೀರಾ ಮಾಮೂಲಾಗಿ ಹೋಗಿದೆ.ಅವರ ಸಕಲೆಂಟು ಶೋಕಿಗಳ ಜೊತೆಗೆ ಗುಂಡು-ತುಂಡು-ಸಮೃದ್ಧ 'ತೀರ್ಥ' ಸಮಾರಾಧನೆ ನಡೆಯುವ ಅಲ್ಲಿಗೆ ಅವರನ್ನ ಇತ್ತೀಚೆಗೆ ಕುಮಾರಣ್ಣ,ಗಣಿಧಣಿಗಳು,ತೀರ ಇತ್ತೀಚಿಗೆ ಒತ್ತಾಯಕ್ಕೆ ಬಸಿರಾದವರಂತೆ ರಾಜಿನಾಮೆ ಕೊಟ್ಟ ಬೂಸಿಯ,ಈ ಕಡೆ ಶಟ್ಟರ್ ಬಳಗ ಹೀಗೆ ಎಲ್ಲರೂ ಅದೇ "ಅಜ್ಞಾತ ಸ್ಥಳ"ದಲ್ಲಿ ಕೂರಿಸಿ ಖಾತಿರ್'ದಾರಿ ಮಾಡಿದ್ದರು.ಶ್ರೀಸಾಮಾನ್ಯರಿಗೆ 'ಪ್ರವೇಶ ನಿಷೇಧಿಸಲಾಗಿರುವ' ಈ ಶಾಶ್ವತ "ಅಜ್ಞಾತ ಸ್ಥಳ' ಕನ್ನಡಿಗರಿರ ಪಾಲಿಗಂತೂ ಒಂದು ವಿಸ್ಮಯವಾಗಿಯೆ ಉಳಿದು ಬಿಟ್ಟಿದೆ.ಮನೆ ಬಿಟ್ಟು ದೂರದಲ್ಲಿ ಟೆಂಟು ಹಾಕಿದ್ದರೂ ಅವರ "ಯೋಗ ಕ್ಷೇಮ"ದ ಮಹಾಮ್ಯಹಂ ಕಂಡು ಕನ್ನಡಿಗರೆಲ್ಲರೂ ಕಂಗಾಲಾಗುವುದನ್ನು ಜೀವನದ ರೊಟೀನ್ ಮಾಡಿಕೊಂಡಿದ್ದ ಕನ್ನಡಿಗರು ಇನ್ನೇನನ್ನೂ ಮಾಡಲಾಗದೆ ಕ್ರಮೇಣ ಅದಕ್ಕೆ ಅನಿವಾರ್ಯವಾಗಿ ಒಗ್ಗಿಹೋಗಿದ್ದರು.



ಜಗತ್ತಿನಲ್ಲಿ ಲಭ್ಯವಿರುವ ಎಲ್ಲಾ ಮಾರ್ಜಕಗಳನ್ನೂ ಸರದಿಯ ಮೇಲೆ ಸುರಿದು ಅತ್ತ ಹೈದರಾಬಾದಿನಲ್ಲಿರುವ "ಸಿಬಿಐ ಮಸಾಜ್ ಪಾರ್ಲರ್'ನಲ್ಲಿ" ಸ'ಗಣಿ' ತಿಂದು ಗಬ್ಬುನಾತ ಹೊಡೆಯುತ್ತಿರುವ ಜನತಾ 'ಜನಾರ್ಧನ'ನನ್ನು ಅಲ್ಲಿನ ನುರಿತ ಮಸಾಜರ್'ಗಳು ತಿಕ್ಕಿತಿಕ್ಕಿ ತೊಳೆದು ಚೊಕ್ಕ'ಚಿನ್ನ'ವಾಗಿಸುತ್ತಿರುವ ಶುಭಸಂದರ್ಭದಲ್ಲಿ ;ಇತ್ತ ಅವರಷ್ಟೆ 'ಗಣಿ'ಧೂಳಿನಿಂದ ಮಿಂದು ಗಲೀಜಾಗಿರುವ 'ನೊಂದ ಸ್ವಾಭಿಮಾನಿ ಶ್ರೀರಾಮುಲು'ವಿಗೂ ಅಲ್ಲಿಯೆ ಒಂದು ಭರ್ಜರಿ ಅಭ್ಯಂಜನ ಮಾಡಿಸೋಣ ಅಂತಂದುಕೊಂಡು ಟಿಕೇಟೆ ಇಲ್ಲದೆ 'ಹೈದರಾಬಾದ್ ಗೋಲಿ' ನುಂಗಿಸಿ 'ಏರೋಪ್ಲೇನ್' ಏರಿಸಿಬಿಡೋದರಲ್ಲಿ ನಿಷ್ಣಾತರಾದ ಅಲ್ಲಿನ ತರಬೇತಾದ ಬೇಟೆಗಾರರು ತಮ್ಮ ಬೋನು ಹಿಡಿದು ಬಳ್ಳಾರಿಗೆ ಬಂದು ಹುಡುಕಿದರೆ ಈ ಕಾಡುಪಾಪ ಪಾಪ ಅವರ್ಯಾರ ಕೈಗೂ ಸಿಗದೆ ಮತ್ತದೆ "ಅಜ್ಞಾತ ಸ್ಥಳ"ದಲ್ಲಿ ತಲೆಮರೆಸಿಕೊಂಡುಬಿಟ್ಟಿದೆ.


ಅದು ಹೇಗೆ ತೊಳೆದರೂ ಹೋಗದ ಕೊಳೆ ಅಂಟಿಕೊಂಡಿರುವ ಈ 'ನೊಂದ ಸ್ವಾಭಿಮಾನಿ'ಯನ್ನ ಅದು ಹೇಗಾದರೂ ಸರಿ ಸೆರೆ ಹಿಡಿದು ರೆಡ್ಡಿಯೊಡನೆ ಒಂದು ರೌಂಡು ಮೀಯಿಸಿಯೆ ತೀರೋಣ ಅಂದುಕೊಂಡರೆ ಕನಿಷ್ಠ ಮೊಬೈಲನ್ನೂ ಬಳಸದಂತೆ ಗುಪ್ತ್'ಗುಪ್ತ್ ವ್ಯವಸ್ಥೆ ಮಾಡಿಕೊಂಡ ಕನ್ನಡದ ಕರಿ'ಕರ'ಪತ್ರಿಕೆಯೊಂದರ 'ಅಕ್ರಮ' ಸಂಪಾದಕನಿಂದ 'ನಡತೆ(ಗೆಟ್ಟ) ಪ್ರಮಾಣಪತ್ರ' ಖರೀದಿಸಿರುವ ಈ ಮರ್ಯಾದ ಪುರುಷೋತ್ತಮನ ಹೆಸರು ಹೊತ್ತ ಆದಿಮಾನವ ಅದೆಲ್ಲೊ ಮೊದಲೆ ಕಳೆದು ಹೋಗಿರುವ ಮಾನವನ್ನು ಇನ್ನೊಮ್ಮೆ ಬಿಟ್ಟು ಮತ್ತೆ ತಲೆಮರೆಸಿಕೊಂಡಿದೆ.ಕಳೆದವಾರ ಪದೇಪದೇ ಪದ್ಮನಾಭನಗರದ ಸುತ್ತಮುತ್ತ ಈ ಮಾಜಿ ಸಚಿವನ 'ಲ್ಯಾಂಡ್ ರೋವರ್' ಠಳಾಯಿಸಿದ್ದನ್ನು ಕಂಡವರಿಗೆ ಶ್ರೀರಾಮುಲು ಕಾಸುಕೊಟ್ಟು ದತ್ತಕಕ್ಕೆ ಖರೀದಿಸಿರುವ ಈ ಅರ್ಜೆಂಟ್ 'ಅನ್ನಯ್ಯ'ನೂ ಆಗಿರುವ ಕರಡಿ ಸಂಪಾದಕನ ಮನೆಯಲ್ಲೆ ಎಲ್ಲಾದರೂ ಆ "ಅಜ್ಞಾತ ಸ್ಥಳ" ಇದ್ದಿರಬಹುದ ಅಂತ ಸಣ್ಣದೊಂದು ಗುಮಾನಿ ಮೊಳೆತಿದೆ!" ಸದ್ಯ ರಾಮುಲು ವಿದೇಶಕ್ಕೆ ಹೋಗಿ ಅಡಗಿಕೊಂಡಿರೊ ನಕಲ ಸಾಧ್ಯತೆಯೂ ಇದೆ!" ಎನ್ನುವ ಗಾಳಿಸುದ್ದಿಯನ್ನು ಕರಿ'ಕರ'ಪತ್ರಿಕೆ ಉದ್ದೇಶಪೂರ್ವಕವೆನ್ನುವಂತೆ ಹರಡುತ್ತಿರೋದು ಕೂಡ ಈ ಗುಮಾನಿಯನ್ನ ಇನ್ನಷ್ಟು ಹೆಚ್ಚಿಸುತ್ತಿದೆ.

ಕೇವಲ ತಿಂಗಳ ಹಿಂದಿನ 'ಸ್ವಾಭಿಮಾನಿ' ಶ್ರೀರಾಮುಲುವಿಗೂ ಈಗ ತಲೆತಪ್ಪಿಸಿಕೊಂಡು 'ಬರೇಮನಿ' ಹೊತ್ತು ಓಡಿಹೋಗಿರುವ ಈ ಇನ್ಸ್'ಟೆಂಟ್ 'ನೊಂದವ'ನಿಗೂ ಹೋಲಿಕೆಕಾಣದೆ ಕಕ್ಕಾಬಿಕ್ಕಿಯಾಗುವ ಸರದಿ ಈಗ ಬಡಕನ್ನಡಿಗನದ್ದು.ಅಡಿಪಾಯದ ಕುರುಹೂ ಉಳಿಯದಂತೆ ಇದೇ ಕಪಿ ಹಿಂದೊಮ್ಮೆ ಹಾವಳಿಯಿಟ್ಟು ಕೆಡವಿ ಹಾಕಿದ "ಸುಗ್ಗುಲಮ್ಮ"ನ ಶಾಪದ ಪರಿಣಾಮವೇನಾದರೂ ಇದಾಗಿದ್ದಿರಬಹುದ? ಇಲ್ಲ ರೆಡ್ಡಿ ಗ್ಯಾಂಗಿನ ಅತಿ ಹಾರಾಟಕ್ಕೆ ಆಗ ನೊಂದು "ನಂಬಿದವರನ್ನು ಕೈಬಿಟ್ಟೆ!" ಎಂದು ಅದ್ಯಾರನ್ನೂ ನೆನೆಸಿಕೊಂಡು ಟಿವಿ ಕ್ಯಾಮರಾಗಳ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದ ಬೂಸಿಯರ ಕಣ್ಣೀರ ಶಾಪವೆನಾದರೂ...ಅದೇನೆ ಇರಲಿ ಈಗ ತೆರೆಮರೆಯಲ್ಲೆ ಬೂಸಿಯ ಕೊಡುವ ಒಂದು ಇಶಾರೆಗೆ ರಂಗಸ್ಥಳದಲ್ಲಿ ಹಲ್ಲು ಬಿಡೋದರಲ್ಲಿ ಸರಿಸಾಟಿಯಿಲ್ಲದ 'ಸದಾನಂದ'ದಿಂದಿರುವವರೇನಾದರೂ ಅಪ್ಪಿತಪ್ಪಿ ಸಮ್ಮತಿಯ ನಗುವನ್ನ ಗಹಗಹಿಸಿ ಮುದ್ರೆ ಒತ್ತಿಯೆ ಬಿಟ್ಟರೆಂದರೆ ಮುಗೀತು,ಸದ್ಯ ಬೋಪನ ಕೈಲಿರುವ ರಾಮುಲು ರಾಜಿನಾಮೆಯ ಭವಿಷ್ಯ ಅತಿಕರಾಳವಾಗಲಿದೆ.ರಾಜಕೀಯ ಆಟದಲ್ಲಿ 'ಟೈಮ್ ಪ್ಲೀಸ್' ಎನ್ನುವ ಅವರ ಆರ್ತನಾದಕ್ಕೆ ಕೊಪ್ಪಳ ಚುನಾವಣೆಗೆ ಸರ'ಕಾರಿ'ನಲ್ಲಿ ಬಂದು ತನು-ಮಾನ-ಧನದಿಂದ ದುಡಿಯುವ ಆಳುವ ಮಂದಿ ಅದಕ್ಕೊಂದು ಗೆಲುವಿನ ತಾರ್ಕಿಕ ಅಂತ್ಯ ಕಾಣಿಸುತ್ತಿದ್ದಂತೆ ಶ್ರೀರಾಮುಲು ಕಥೆಯೂ ದಾರುಣ ಅಂತ್ಯ ಕಾಣಲಿದೆ.ನಂತರ 'ನೊಂದ' ಅವರು ಇನ್ನಷ್ಟು ಮುಲುಗುತ್ತಲೇ ಶೇಷಾಯುಷ್ಯವನ್ನ ಅದೇ "ಅಜ್ಞಾತ ಸ್ಥಳ"ದಲ್ಲಿ ಸವೆಸಬಹುದು....ಅಂತೂ ಅವರ ಪರಮ ಚೋರಗುರು "ಸತ್ಯಾನಿಕಿ ಜಯಂ ಉಂಟುಂದಿ" ಅಂದದ್ದು ಕಡೆಗೂ ಸುಳ್ಳಾಗಲೇಯಿಲ್ಲ! (ಬಹುಷಃ ಈ ಚಂಡಾಳ ಶಿಷ್ಯನನ್ನ ನೆನೆದೆ ಅವರಿಗೆ ಆವಾಗ ಆ ಪರಮ ವಾಕ್ಯ ಹೊಳೆದಿರಬಹುದ?) ಪಾಪ,ಶ್ರೀರಾಮುಲು?!

No comments:

Post a Comment