ಮನದಾಳದ ಸಾಗರದಲ್ಲಿ ಹೆಪ್ಪುಗಟ್ಟಿದ....
ನೋವಿನ ನೀರ್ಗಲ್ಲೆಲ್ಲ,
ಆಗಾಗ ಕರಗಿ ಕಣ್ಣ ನೀರಾಗುತ್ತವೆ/
ನಿನಗೆ ಮಾತ್ರ ನಾ ಬರೆದು ಕಳಿಸುವ...
ಈ ತರಹದ,
ನಾಲ್ಕೆ ನಾಲ್ಕು ಶೋಕದ ಸಾಲಾಗುತ್ತವೆ//
ನಿನ್ನ ಹೆಸರನ್ನಷ್ಟೆ ಬರೆದು
ಹರಿವ ಹೊಳೆಯಲ್ಲಿ ನಾ ತೇಲಿಬಿಟ್ಟ ಹಸಿರು ಎಲೆಗಳು.....
ನೆಮ್ಮದಿಯ ತೀರವನ್ನೆ ಹೋಗಿ ಮುಟ್ಟಲಿ,
ನಾನಿನ್ನ ಕಳೆದುಕೊಂಡರೇನು?
ಕನಿಷ್ಠ ನನ್ನಷ್ಟೆ ನಿನ್ನ ಇಷ್ಟ ಪಡುವ...
ಮನಸೊಂದರ ತಲೆಬಾಗಿಲಿಗೆ ಅದು ಸಾಗಿ ತಾಕಲಿ/
ಎದೆ ಬಿರಿದರೆ ನೋವು,
ತುಟಿಬಿರಿದರೆ ನಲಿವು...ಸಂತಸಕ್ಕೂ ಕಣ್ಣೀರು
ಸಂಭ್ರಮಕ್ಕೂ ಅದೆ
ಬದುಕಿನ ವೈರುಧ್ಯದ ಈ ಎರಡು ಮುಖಗಳಿಗೆ....
ಏನೋ ಒಂಥರಾ ಒಳ ಸಾಮ್ಯತೆ ಇದೆ//
ಮೋಡದ ತೊಳ್ತೆಕ್ಕೆಯಿಂದ ಜಾರಿದ ಹನಿಯೊಂದು
ನೆಲದೊಡಲ ಒಲವ ಪಾಲಾಯ್ತು....
ನೀ ನನ್ನ ಕೈ ತಪ್ಪಿ ಇನ್ನೊಂದು ಜೀವದ ಕನಸಲ್ಲಿ ಲೀನವಾದ ಹಾಗೆ,
ಕೊಗಿಲೆಯೊಂದರ ಮೊಟ್ಟೆಗೆ ಕಾವು ಕೂತಂತೆ ಕರಿಕಾಗೆ!/
ಸಣ್ಣ ತಪ್ಪಿಗೇಕೆ ಸಂಕಟದ ಘೋರ ಶಿಕ್ಷೆ?
ಎಷ್ಟು ಅಂತ ಮಾಡಲಿ ಹೇಳು ನಿತ್ಯ ನಾ ನಿನ್ನ ಪ್ರತೀಕ್ಷೆ?....
ಸುಮ್ಮನೆ ಮರಳಿ ಬರಬಾರದೆ ನೀನು?,
ನಂದಿ ಹೋಗುವ ಮುನ್ನ ನನ್ನ ಕಣ್ಣ ನಿರೀಕ್ಷೆ//
ನಾ ಬರೆವ ಸಾಲುಗಳನ್ನ
ನೀ ಯಾವ ರಾಗದಲ್ಲಾದರೂ ಹಾಡು......
ನನ್ನೆದೆಯ ಭಾವಗಳಿಗೆ
ಯಾವ ಬಣ್ಣಗಳನ್ನಾದರೂ ಹಚ್ಚು,
ನಿನಗಿಂತ ಮಿಗಿಲೇನು ನನಗೆ ಈ ಲೋಕದ ಪಾಡು?
ನನಗಿಂತಲೂ ನನಗೆ ನೀನೆ ಹೆಚ್ಚು/
ನಿತ್ಯ ನಸುಕಲ್ಲಿ ನಿನ್ನುಸಿರ ಕನವರಿಕೆ....
ಇರುಳ ತುಂಬೆಲ್ಲ ನಿನ್ನ ಕನಸ ಕಾತರಕೆ,
ಕಾದು ಬಸವಳಿದ ನನ್ನ ಮನಸಿಗೆ.....
ನೆನಪಿನ ನಾವೆಯಲ್ಲಿ ತೇಲೋದರಲ್ಲಿಯೇ
ಅದೇನೂ ಅಪರಿಮಿತ ಸುಖ//
No comments:
Post a Comment