ಕನಸಿನಾಳ...ಮನಸಿಗೆ ಬಿದ್ದ ಮೋಹದಗಾಳ
ವಿವರಿಸುವ ಬಗೆ ಗೊತ್ತಾಗುತ್ತಿಲ್ಲ....
ಎಲ್ಲೆಲ್ಲೂ ನಿನ್ನದೇ ಪರಿಮಳ,
ನನ್ನೆದೆ ಗ್ರಹಿಕೆಗೆ
ನಿನ್ನೆದೆ ಒಪ್ಪಿಗೆಯ ಗಳಿಕೆ...
ನನ್ನ ಚಿರಕಾಲದ ಸಾಯಲಾರದ ಕನಸು/
ನಾ ಸೋತ ಸೋಲಿನಲ್ಲೆಲ್ಲ ನಿನ್ನ ಗೆಲುವಿದೆ...
ನೀ ಮರೆತ ಬದುಕ ಸಾಲಿನಲ್ಲೆಲ್ಲ,
ಇನ್ನೂ ನನ್ನ ಒಲವಿದೆ//
ಮುಂಜಾನೆ ಮನದಾಳದಲ್ಲಿ ಮೂಡಿ ಬಂದ ರಾಗ
ನನ್ನೆದೆಯ ವೀಣೆ ನುಡಿಸಿದ ಮೆಲುನಾದ...
ನನ್ನುಸಿರ ಕೊಳಲು ಉಲಿದ ಹೆಸರು,
ಮತ್ತೆ ಹೇಳಲೆ ಬೇಕ?
ಅದು ನೀನು/
ನಿನ್ನ ಕಣ್ ಬೆಳಕಿಂದ ನನಗೆ ಹಗಲು....
ಅದರ ಅಂಚಲಿ ಅಂಟಿರುವ ಕಾಡಿಗೆಯಿಂದಲೆ ಆರಂಭ ನನ್ನಿರುಳು,
ಬಾಳಪೂರ್ತಿ ನಾ ಹೆಜ್ಜೆ ಹಾಕುವಾಗಲೆಲ್ಲ ಬಿಡದೆ ಹಿಂಬಾಲಿಸುವುದು
ನಿನ್ನ ನೆನಪ ನೆರಳು//
ಮೋಡದೊಂದಿಗೆ ನೆಲದ ಮುನಿಸು
ಮಳೆಯ ಧಾರೆ ಹನಿಯದೆ ಇರೋದಕ್ಕೊ?,
ಇಲ್ಲ ಬಾನಿನ ಮನ ಕರಗದೆ ಇರೋದಕ್ಕೊ?
ಗೊಂದಲವಿದೆ/
ಕಳೆದು ಹೋದ ಮಾತು...
ತೀರಿಸಲಾಗದ ಹಲವು ಸಾಲಗಳು ನನ್ನ ಮೇಲಿವೆ,
ಯಾಕೋ ಕೊಟ್ಟವರು ಮುನಿಸಿಕೊಂಡಿದ್ದಾರೆ...
ಏನ ಮಾಡಲಿ....?//
No comments:
Post a Comment