ಕನಸಿನಲ್ಲಿ ನೀ ಮುತ್ತಿಟ್ಟ ಮನಸಿನ ನವಿರು ಭಾವಗಳು,
ನಸುಕ ನನಸಿನಲ್ಲಿ ಕರಗಿ ಹೋದವು/
ಹಗಲ ಮುಂದೆ ಇರುಳು ನಾಚಿ ಮರೆಯಾದಂತೆ,
ಭಾರವಾದ ಎದೆಯ ತುಮುಲಗಳೆಲ್ಲ ಆಗಾಗ ಕಣ್ಣೀರ ತೊರೆಯಾದಂತೆ//
ತುಂಟ ಮನಸೂ ಕೂಡ ಆಗಾಗ ಹದ ತಪ್ಪುವುದಿದೆ,
ಶೃಂಗಾರದ ಹೊಸ ಪದ ಅದು ಕಟ್ಟುವುದಿದೆ/
ಶೀಲ-ಅಶ್ಲೀಲದ ಪರಿಧಿಯ ಬಗ್ಗೆ ಅದಕ್ಕಿಲ್ಲ ಅಂಕೆ,
ಅಂತಹದರಲ್ಲೂ ಕೂಡ ನಿನ್ನದೆ ನೋಡು ನೆನಕೆ ಅದಕ್ಕೆ?!//
ನನ್ನೆದೆ ಗೂಡಿನಲ್ಲಿ ಮೊಟ್ಟೆ ಇಟ್ಟಿದ್ದ ನಿನ್ನೊಲವಿನ ಹಕ್ಕಿ....
ಅದು ಬೆಚ್ಚನೆ ಪ್ರೀತಿಗೆ ಹೂಮರಿಯಾಗುವ ಮುನ್ನವೆ ಹಾರಿಹೋಯಿತು/
ಮನಸಿನ ನೆಮ್ಮದಿಯ ಸಾರವನ್ನೆಲ್ಲ ಹೀರಿ ಹೋಯಿತು...
ನನ್ನ ನೆನ್ನೆಗಳೆಲ್ಲ ಅದರ ನೆನಕೆಯಲ್ಲೆ ಹಾಗೆ ಜಾರಿಹೋಯಿತು,
ನಾಳೆಗಳನ್ನೆಲ್ಲ ಮೌನದ ಗುಹೆಸೇರಿ ಸ್ತಬ್ಧವಾಗುವಂತೆ ಹೇಳಿಹೋಯಿತು//
ಎಳೆಬಿಸಿಲ ಕೋಲು ಎಷ್ಟೇ ಚುರುಕಾಗಿದ್ದರೂ,
ಒಂದು ಮಳೆ ಹನಿಯ ತೂಕ ಅದಕ್ಕಿಲ್ಲ!/
ಮುಂಜಾವಿನ ಮೊಗದ ಮೇಲಿನ ಮುಗುಳುನಗು...
ಅದೆಷ್ಟೇ ಮೋಹಕವಾಗಿದ್ದರೂ,
ನಟ್ಟಿರುಳ ನಿಟ್ಟುಸಿರಿಗೆ ಖಂಡಿತ ಅದು ಸರಿಸಾಟಿಯಲ್ಲ//
No comments:
Post a Comment