ಕನ್ನಡ ನಾಡಿನ ಕಳೆದು ಹೋಗಿದ್ದ ಭೂಭಾಗಗಳೇನೋ ಐವತ್ತೆಂಟು ವರ್ಷಗಳ ಹಿಂದೆ ಚೂರುಪಾರು ಮರಳಿ ಬಂದು ಮತ್ತೆ ಮನೆ ಸೇರಿಕೊಂಡಿವೆ, ಆದರೆ ಕನ್ನಡದ ಮನಸುಗಳೂ ಮತ್ತೆ ಒಂದಾದವ? ಎನ್ನುವ ಪ್ರಶ್ನೆಯನ್ನ ಎತ್ತಿಕೊಂಡು ಉತ್ತರ ಹುಡುಕಹೋದರೆ ನಿರುತ್ತರ ಕುಮಾರರಾಗಿ ಹಿಂದಿರುಗುವಷ್ಟು ವಿಕಾರ ವಾಸ್ತವಗಳು ನಮ್ಮ ಕಣ್ಣಿಗೆ ರಾಚುತ್ತವೆ. ಹಳೆ ಮೈಸೂರಿನವರ ಒಡ್ದತನ, ಮುಂಬೈ ಪ್ರಾಂತ್ಯದಿಂದ ಬಂದವರ ದಡ್ಡತನ, ಪ್ರಜಾ ಪೀಡಕ ನಿಜಾಮನ ಮರಿಗಳಂತಹ ರಾಜಕಾರಣಿ ಹೆಗ್ಗಣಗಳಿಂದ ಅಭಿವೃದ್ಧಿಯ ಹೆಸರಿನಲ್ಲಿ ತಮಗಾಗುತ್ತಿರುವ ಅನುಗಾಲದ ವಂಚನೆಯನ್ನ ಗ್ರಹಿಸದ ಮಾಜಿ ಹೈದರಾಬಾದ್ ಸಂಸ್ಥಾನದ ಪ್ರಜೆಗಳ ಮಡ್ಡತನ, ತಾವು ಇನ್ನೆಲ್ಲರಿಗಿಂತ ಅತಿ ಶ್ರೇಷ್ಠರೆಂಬ ಜಂಭದಲ್ಲಿ ಮೇಲರಿಮೆ ಖಾಯಿಲೆಯಿಂದ ನರಳುತ್ತಿರುವ ಕರಾವಳಿ ಮಂದಿಯ ಹೆಡ್ಡತನ ಹೀಗೆ ಎಲ್ಲರಲ್ಲೂ ಒಂದೊಂದು ಬಗೆಯ ವೈಕಲ್ಯ ಎದ್ದು ಕಾಣುವಂತೆ ಇವೆ.
ಕರುನಾಡಿನಲ್ಲಿ ಆಧುನಿಕತೆಯ ಹವೆ ಸ್ವಾತಂತ್ರೋತ್ತರದಲ್ಲಿ ತುಸು ಹೆಚ್ಚೇ ಬೀಸಿದೆ. ಆದರೆ ಇದು ಪ್ರಾದೇಶಿಕವಾಗಿ ಸರಿ ಸಮನಾಗಿಲ್ಲ ಅನ್ನುವುದು ಸತ್ಯ. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸಿ ವಿ ರಂಗಾಚಾರ್ಲು, ಕೆ ಶೇಷಾದ್ರಿ ಆಯ್ಯರ್, ವಿ ಪಿ ಮಾಧವ ರಾವ್, ಟಿ ಆನಂದರಾಯರು, ಸರ್ ಎಂ ವಿಶ್ವೇಶ್ವರಯ್ಯ, ಎ ಆರ್ ಬ್ಯಾನರ್ಜಿ, ಮಿರ್ಜಾ ಇಸ್ಮಾಯಿಲ್ ಮುಂತಾದವರು ತಮ್ಮ ಕರ್ತವ್ಯ ನಿಷ್ಠೆಯಿಂದ ಮೈಸೂರು ಸಂಸ್ಥಾನವನ್ನು ಆಧುನಿಕತೆಯೆಡೆಗೆ ತಿರುಗಿಸಿದ್ದರು. ಅದಾಗಲೆ ಮೈಸೂರು ಸಂಸ್ಥಾನದ ಭದ್ರಾವತಿ, ಮಂಡ್ಯ, ಬೆಂಗಳೂರುಗಳಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾಗಿಯಾಗಿತ್ತು. ಕಾವೇರಿಗೆ ಅಡ್ದಲಾಗಿ ಕೃಷ್ಣರಾಜ ಸಾಗರವನ್ನ ಕಟ್ಟಲಾಗಿ, ಹೇಮಾವತಿಗೆ ಗೊರೂರಿನಲ್ಲಿ ಅಣೆಕಟ್ಟು ನಿರ್ಮಿಸಲಾಗಿ, ಭದ್ರೆಗೆ ಲಕ್ಕವಳ್ಳಿಯಲ್ಲಿ ಆಣೆಕಟ್ಟು ಮಾಡಲಾಗಿ ಸಂಸ್ಥಾನದಾದ್ಯಂತ ನೀರಾವರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಇಲ್ಲಿನ ರೈತಾಪಿಗಳು ಪ್ರಗತಿಪರರಾಗಲು ಸಾಧ್ಯವಾಗಿತ್ತು.
ಕೋಲಾರದಲ್ಲಿ ಚಿನ್ನ ಅಗೆಯಲಾಗುತ್ತಿದ್ದರೆ ಕೆಮ್ಮಣ್ಣುಗುಂಡಿ ಹಾಗೂ ಕುದುರೆಮುಖದಲ್ಲಿ ಅಗೆದ ಕಬ್ಬಿಣದ ಅದಿರನ್ನ ಸಾಗಿಸಲು ಆ ಕಾಲದಲ್ಲಿಯೆ ನರಸಿಂಹರಾಜಪುರದ ಮೂಲಕ ಅಲ್ಲಿಗೆ ಮೀಟರ್ ಗೇಜ್ ರೈಲುಗಳನ್ನ ಓಡಿಸಲಾಗುತ್ತಿತ್ತು. "ಮೈಸೂರು ಮರಾಠ ರೈಲ್ವೇಸ್" ಮೂಲಕ ಆರ್ಥಿಕ ರಾಜಧಾನಿಗಳಾದ ಮದರಾಸು ಹಾಗೂ ಬೊಂಬಾಯಿವರೆಗೆ ರೈಲ್ವೆ ಸಂಪರ್ಕವನ್ನ ಏರ್ಪಡಿಸಿಕೊಳ್ಲಲಾಗಿತ್ತು. ಹಿರೇಭಾಸ್ಕರ ಹಾಗೂ ಶಿವನ ಸಮುದ್ರದಲ್ಲಿ ಜಲವಿದ್ಯುತ್ ಆಗರಗಳನ್ನ ನಿರ್ಮಾಣ ಮಾಡಿ ವಿದ್ಯುತ್ ಉತ್ಪಾದನೆಯನ್ನ ಆರಂಭಿಸಲಾಗಿತ್ತು. ಬೆಂಗಳೂರಿನಲ್ಲಿ ಟಾಟಾ ಸಂಸ್ಥೆಯ ಸಹಯೋಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ರಾಷ್ಟ್ರೀಯ ವೈಮಾನಿಕ ಸಂಶೋಧನೆಯ ಕೇಂದ್ರಗಳು ಆರಂಭವಾಗಿದ್ದವು. ಸಂಸ್ಥಾನದ ಉದ್ದಗಲಕ್ಕೂ ಕೆರೆಕಟ್ಟೆ ಬ್ಯಾರೇಜುಗಳನ್ನ ನಿರ್ಮಿಸಿ ನೀರಾವರಿಯ ಅಗತ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಅ ಕಾಲದಲ್ಲಿಯೆ ಅನೇಕ ನದಿಗಳು ಸೇತುವೆ ಕಂಡವು. ವಿಲಾಯತಿ ಔಷಧ ಪದ್ಧತಿಯ ಸಾರ್ವನಿಕ ಲೋಕಲ್ ಫಂಡ್ ಆಸ್ಪತ್ರೆಗಳನ್ನೂ ಆರಂಭಿಸಲು ಸರಕಾರದಿಂದ ಒತ್ತಾಸೆ ನೀಡಲಾಯಿತು.
ಕೈಗಾರಿಕೆ, ಆರೋಗ್ಯ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಸಂಬಂಧಿಸಿದಂತೆ ಮೈಸೂರು ಸಂಸ್ಥಾನದ್ದು ಅಭಿವೃದ್ಧಿಯ ನಾಗಲೋಟದ ಕಥೆಯಾದರೆ ಏಕೀಕರಣದವರಗೂ ಬೊಂಬಾಯಿ ಪ್ರಾಂತ್ಯದ ದಕ್ಷಿಣ ಭಾಗವಾಗಿದ್ದ ಕನ್ನಡದ ಜಿಲ್ಲೆಗಳು ಆ ನಿಟ್ಟಿನಲ್ಲಿ ಮೈಸೂರಿನ ಹೋಲಿಕೆಯಲ್ಲಿ ಅರೆವಾಸಿಗಿಂತಲೂ ಹೆಚ್ಚು ಹಿಂದುಳಿದಿದ್ದವು. ಬ್ರಿಟಿಷರ ನೇರ ಆಡಳಿತದ ಪ್ರಾಂತ್ಯವಾಗಿದ್ದೂ ಬೊಂಬಾಯಿ ಪ್ರಾಂತ್ಯದ ಕನ್ನಡದ ಜಿಲ್ಲೆಗಳು ಅದೆ ಪ್ರಾಂತ್ಯದ ಮರಾಠವಾಡ, ಸೌರಾಷ್ಟ್ರ ಹಾಗೂ ಸಿಂಧ್'ಗಳಿಗಿಂತಾ ಹೋಲಿಕೆಯಲ್ಲಿ ಗಮನಾರ್ಹವಾಗಿ ಅಭಿವೃದ್ಧಿ ದರದಲ್ಲಿ ವಂಚಿತವಾದದ್ದು ತುಸು ಆಶ್ಚರ್ಯ ಹುಟ್ಟಿಸುತ್ತದೆ. ಬೆಳಗಾವಿ, ಧಾರವಾಡ ಹಾಗೂ ಬಿಜಾಪುರ ನಿರಂತರ ಮಲತಾಯಿ ಧೋರಣೆಗೆ ತುತ್ತಾಗಲಿಕ್ಕೆ ಅಂದಿನ ಆಧಿಕಾರ ವಲಯದಲ್ಲಿ ಅಲ್ಲಿನ ಪ್ರಭಾವಿಗಳ ಕ್ರಿಯಾಹೀನತೆ ಮೂಲಭೂತ ಕಾರಣವಾದರೆ, ವಿಪರೀತ ವಿಸ್ತೀರ್ಣ ಹೊಂದಿದ್ದ ಅಗಾಧ ಬೊಂಬಾಯಿ ಪ್ರಾಂತ್ಯದ ತ್ರಿವಿಕ್ರಮ ಗಾತ್ರವೆ ಆನೆ ಹೊಟ್ಟೆಗೆ ಸಿಗುತ್ತಿದ್ದ ಅರೆಕಾಸಿನ ಮಜ್ಜಿಗೆಯಂತಾ ಅನುದಾನದ ಸಮರ್ಪಕ ಹಂಚಿಕೆಗೆ ಕಲ್ಲು ಹಾಕಿರಲಿಕ್ಕೂ ಸಾಕು. ಅಲ್ಲದೆ ಅದಾಗಲೆ ಕನ್ನಡ - ಮರಾಠಿ ಅಸ್ಮಿತೆಯ ತಿಕ್ಕಾಟವೂ ಶೈಶವಾವಸ್ಥೆಯಲ್ಲಿದ್ದು ಅದರ ಕರಿ ನೆರಳೂ ಅಭಿವೃದ್ಧಿ ಪಥದ ದೀಪಗಳನ್ನ ಮಂಕಾಗುವಂತೆ ಮಾಡಿರಲಿಕ್ಕೆ ಸಾಕು. ಮುಲ್ತಾನ್, ವಿದರ್ಭ ಹಾಗೂ ಮಧ್ಯಪ್ರಾಂತ್ಯದ ಕೆಲವು ಜಿಲ್ಲೆಗಳು ಸಹಾ ಅದೆ ಬೊಂಬಾಯಿ ಪ್ರಾಂತ್ಯದ ಅಧೀನದಲ್ಲಿದ್ದು ಅವುಗಳ ಅಭಿವೃದ್ಧಿಯೂ ಅಷ್ಟಕ್ಕಷ್ಟೆ ಆಗಿರುವುದನ್ನ ಗಮನಿಸಿದರೆ ಈ ಮಾತಿಗೆ ಆಧಾರ ಸಿಗುತ್ತದೆ.
ನಿಜಾಮನ ಪೈಶಾಚಿಕ ರಜಾಕಾರರ ಅಧೀನವಾಗಿದ್ದ ಕನ್ನಡದ ಮೂರು ಜಿಲ್ಲೆಗಳಂತೂ ಇನ್ನೂ ಕರ್ನಾಟಕದ ಇನ್ನಿತರ ಜಿಲ್ಲೆಗಳನ್ನ ಅಭಿವೃದ್ಧಿ ದರದಲ್ಲಿ ಸರಿಗಟ್ಟಲು ಏದುಸಿರು ಬಿಡುತ್ತಿವೆ ಏಕೀಕರಣದ ಹಂತದಲ್ಲಂತೂ ಅವುಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಮೂಲಭೂತ ಸೌಕರ್ಯಗಳ ವಿಪರೀತ ಕೊರತೆಯಿಂದ ಅಲ್ಲಿನ ಜನ ನರಳುತ್ತಿದ್ದರು. ಬರಡು ನೆಲದಲ್ಲಿ ಹಸಿರು ಹುಟ್ಟಿಸಲು ಮಳೆಯ ಹೊರತು ಇನ್ನೊಂದು ಮಾರ್ಗವಿಲ್ಲದೆ ಅಲ್ಲಿನ ಮಂದಿ ಪರದಾಡುತ್ತಿದ್ದರು. ಮೈಸೂರಿನ ಸಮೃದ್ಧಿ ಅವರನ್ನ ಆದಷ್ಟು ಬೇಗ ಹಳೆ ಮೈಸೂರಿಗರೊಂದಿಗೆ ಕೂಡಿ ತಾವೂ ಮುಂದುವರೆಯುವ ಹೊಸ ಕನಸುಗಳನ್ನ ಹುಟ್ಟಿಸುತ್ತಿರಲಿಕ್ಕೂ ಸಾಕು. ಆದರೆ ಇಲ್ಲಿಯವರೆಗೂ ಅವರನ್ನ ಆಳಿದ ಪಾಳೆಗಾರಿಕೆ ಮನಸ್ಥಿತಿಯ ಮರಿ ನಿಜಾಮನಂತಹ ಚುನಾಯಿತ ಜನಪ್ರತಿನಿಧಿಗಳು ಆ ಭಾಗದ ಜನರಿಗಾಗಿ ಬಿಡುಗಡೆಯಾದ ಅಷ್ಟೂ ಹಣವನ್ನ ನುಣ್ಣಗೆ ನುಂಗಿ ನೊಣೆದು ಇನ್ನೂ ಆ ಭಾಗವನ್ನ ದಟ್ಟ ದಾರಿದ್ರ್ಯದಲ್ಲೆ ಇಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿನ ಜನರೂ ಸಹ ವಲಸೆಯ ಮೂಲ ಮಂತ್ರಕ್ಕೆ ಜೋತುಬಿದ್ದು ಹೈದರಾಬಾದು ಹಾಗೂ ಬೆಂಗಳೂರಿನತ್ತ ಸಾಗಿ ನೆಲೆಸುವಲ್ಲಿ ತೋರುವ ಉತ್ಸಾಹವನ್ನ ಅನುದಾನ ದಂಡಿಯಾಗಿ ದಕ್ಕಿದರೂ ಸ್ಥಳಿಯ ಪ್ರದೇಶಾಭಿವೃದ್ಧಿ ಮಾಡದ ಹಲಾಲುಕೋರ ಶಾಸಕ ಸಂಸದ ದಂಡಪಿಂಡಗಳ ಕೊರಳುಪಟ್ಟಿಗೆ ಕೈ ಹಾಕಿ ಕೆಲಸ ಮಾಡಿಸುವಲ್ಲಿ ತೋರುತ್ತಿಲ್ಲ. ಒಟ್ಟಿನಲ್ಲಿ ಆ ಪ್ರದೇಶಗಳಿಗೆ ಅದೇನೆ ಸಂವಿಧಾನದ ವಿಶೇಷ ವಿಧಿಯ ನೆರವಿನ ಹಸ್ತ ಚಾಚಿದರೂ ಆದರ ಪೂರ್ಣ ಫಲ ಅವರನ್ನ ಮುಟ್ಟುವ ಖಾತ್ರಿಯಂತೂ ಯಾವತ್ತಿಗೂ ಇಲ್ಲವೆ ಇಲ್ಲ.
ಇದ್ದುದ್ದರಲ್ಲಿ ಮೈಸೂರಿಗೆ ಸ್ವಲ್ಪ ಮಟ್ಟಿಗೆ ಪೈಪೋಟಿ ನೀಡುವ ಶಕ್ತಿ ಇದ್ದದ್ದು ಮದರಾಸು ಪ್ರಾಂತ್ಯದ ಭಾಗವಾಗಿದ್ದ ಕಾಸರಗೋಡು, ಉಡುಪಿ ಸಹಿತ ಅಖಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ! ಬ್ರಿಟಿಷ್ ಲೋಕೋಪಯೋಗಿ ಇಲಾಖೆ ಇಲ್ಲಿನ ಬಂದರುಗಳನ್ನ ವ್ಯವಸ್ಥಿತವಾಗಿಟ್ಟಿದ್ದರೆ, ಜಿಲ್ಲೆಯಾದ್ಯಂತ ಸಮುದ್ರ ಮುಖಿಯಾಗಿ ಹರಿಯುವ ನದಿಗಳಿಗೆ ಬ್ರಿಟಿಷ್ ಇಂಡಿಯಾದ ಮೋರ್ಗನ್ ಕಂಪನಿಯ ತಂತ್ರಜ್ಞರು ಗಟ್ಟಿಮುಟ್ಟಾದ ಸಿಮೆಂಟಿನ ಸೇತುವೆಗಳನ್ನ ನಿರ್ಮಿಸಿ ಜಿಲ್ಲೆಯ ಭಟ್ಕಳದಿಂದ ( ಆಗ ಅದು ಮೈಸೂರು ಸಂಸ್ಥಾನದ ಆಸ್ತಿಯಾಗಿತ್ತು.) ಕಾಸರಗೋಡಿನ ದಕ್ಷಿಣದ ಹೊಸದುರ್ಗದವರೆಗೆ ಜಿಲ್ಲೆಯನ್ನ ಏಕತ್ರಗೊಳಿಸಿದ್ದರು. ಅದುವರೆಗೂ ಉಗ್ಗಗಳಲ್ಲಿ, ದೋಣಿಗಲಲ್ಲಿ, ಜಟಕಾಗಳಲ್ಲಿ ದಿನಗಟ್ಟಲೆ ಪ್ರಯಾಣಿಸುತ್ತಿದ್ದ ಜನರಿಗೆ ಸೇತುವೆಗಳ ಮೂಲಕ ಘಂಟೆಗಳ ಲೆಕ್ಖದಲ್ಲಿ ಜಿಲ್ಲೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ತಂದು ಮುಟ್ಟಿಸುತ್ತಿದ್ದ ಸಿಪಿಸಿ ಕಂಪನಿಯ ಬಸ್ಸುಗಳು ವಾಣಿಜ್ಯಿಕ ಕಾರಣಗಳಿಗಾಗಿ ಹೊಸ ಸಾಧ್ಯತೆಗಳನ್ನೆ ಸೃಷ್ಟಿಸಿದ್ದವು. ಸಾಲದ್ದಕ್ಕೆ ಪ್ರಾಂತ್ಯದ ರಾಜಧಾನಿ ಮದರಸಿನಿಂದ ಕೇರಳದ ಪಾಲ್ಘಾಟ್, ಶೊರನೂರು, ಕಣ್ಣೂರು, ಪಯ್ಯನೂರು ಮಾರ್ಗವಾಗಿ ನೇರ ರೈಲಿನ ಸೌಲಭ್ಯವೂ ಜಿಲ್ಲಾ ಕೇಂದ್ರ ಮಂಗಳೂರಿಗಿತ್ತು.
ವಿದ್ಯೆ ಹಾಗೂ ಆರೋಗ್ಯ ಸೇವೆಯಲ್ಲಿ ಬಾಸೆಲ್ ಮಿಷನ್ ಹಾಗೂ ಕ್ಯಾಥೋಲಿಕ್ ಮಿಷನರಿಗಳು ಸಕ್ರಿಯವಾಗಿದ್ದರಿಂದ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯ ಶಾಲಾ ಕಾಲೇಜುಗಳು ಹಾಗೂ ಆಸ್ಪತ್ರೆಗಳು ತಲೆ ಎತ್ತಿದ್ದವು. ಇದರ ಜೊತೆಜೊತೆಗೆ ಜಿಲ್ಲಾ ಬೋರ್ಡ್ ಕೂಡಾ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳನ್ನ ಆರಂಭಿಸಿ ಜನರನ್ನ ಸುಶಿಕ್ಷಿತವಾಗಿಸುವತ್ತ ವಿಶೇಷ ಗಮನ ಕೊಟ್ಟಿತ್ತು. ಹೆಚ್ಚು ಕಡಿಮೆ ಹತ್ತಿರ ಹತ್ತಿರದಲ್ಲಿ ಒಂದೆ ಕಾಲ ಘಟ್ಟದಲ್ಲಿ ಮಂಗಳೂರು ಹಾಗೂ ಮಣಿಪಾಲಗಳಲ್ಲಿ ಶುರುವಾದ ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ಜಿಲ್ಲೆಯನ್ನ ದೇಶದಲ್ಲಿಯೆ ಬ್ಯಾಂಕಿಂಗ್ ಕ್ಶೇತ್ರದಲ್ಲಿ ಮುಂಚೂಣಿಗೆ ಬರುವಂತೆ ಮಾಡಿದ್ದವು. ಸದರಿ ಬ್ಯಾಂಕುಗಳ ಜಾಲ ಜಿಲ್ಲೆಯಾದ್ಯಂತ ನಿಧಾನವಾಗಿ ವ್ಯಾಪಿಸುತ್ತಿದ್ದವು. ಹೊರ ರಾಷ್ಟ್ರಗಳ ಜೊತೆಗೆ ವಾಣಿಜ್ಯ ಸಂಪರ್ಕಕ್ಕೆ ಮಂಗಳೂರಿನ ಹಳೆ ಬಂದರು ಹಾಗೂ ಭಟ್ಕಳದ ಬಂದರು ಬಳಕೆಯಾಗುತ್ತಿದ್ದವು. ಯುರೋಪಿಯನ್ ಕಂಪನಿಗಳು ಆರಂಭಿಸಿದ್ದ ಹೆಂಚಿನ ಕಾರ್ಖಾನೆಗಳು ಜಿಲ್ಲೆಯ ಮನೆಗಳ ಸ್ವರೂಪವನ್ನೆ ಬದಲಿಸಿದ್ದಲ್ಲದೆ ಘಟ್ಟದ ಮೇಲಿನ ಊರುಗಳಲ್ಲಿಯೂ ಈ ನವ ತಾಂತ್ರಿಕತೆಯ "ಮಂಗಳೂರು ಹಂಚು"ಗಳಿಗೆ ವಿಪರೀತ ಬೇಡಿಕೆ ಹುಟ್ಟ ತೊಡಗಿತ್ತು. ಜಿಲ್ಲೆ ಆ ಕಾಲದಲ್ಲಿಯೂ ಗೋಡಂಬಿ ಹಾಗೂ ಬೀಡಿ ಉದ್ಯಮದಲ್ಲಿ ಮುಂದಿತ್ತು. ಉಪ್ಪಿನ ವ್ಯಾಪಾರಕ್ಕೂ ಅಲ್ಲಿನವರು ಹೆಸರು ವಾಸಿಯಾಗಿದ್ದರು. ಒಟ್ಟಿನಲ್ಲಿ ಜಿಲ್ಲೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯನ್ನ ದಾಖಲಿಸುತ್ತಿತ್ತು.
ಆದರೆ ರಾಜ್ಯ ಮರುವಿಂಗಡನೆ ಆಗುವ ಕ್ಷಣಕ್ಕೆ ಈ ಒಂದೆ ತಾಯಿಯ ಮಕ್ಕಳಲ್ಲಿದ್ದ ಅಭಿವೃದ್ಧಿಯ ವ್ಯತ್ಯಾಸ ಪರಸ್ಪರರ ಮನಸಿನಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವನೆ ಮೂಡಿಸುವ ಬದಲಿಗೆ ಒಬ್ಬರ ಮೇಲೊಬ್ಬರಿಗೆ ಮತ್ಸರ ಹುಟ್ಟಿಸಿದ್ದು ಮಾತ್ರ ವಿಪರ್ಯಾಸ. ನೂರಾರು ಎಕರೆ ಜಮೀನಿನ ಒಡೆಯನಾಗಿದ್ದರೂ ನೀರಿನ ಲಭ್ಯತೆಯ ಕೊರತೆಯಿಂದ ಶುಚಿತ್ವದಲ್ಲಿ ಸ್ವಲ್ಪ ಮಟ್ಟಿಗೆ ಅನಾಸಕ್ತನಾಗಿದ್ದ ಬೊಂಬಾಯಿ ಪ್ರಾಂತ್ಯದ ಹಾಗೂ ಹೈದರಾಬಾದು ಪ್ರಾಂತ್ಯದ ಕನ್ನಡಿಗರ ಬಗ್ಗೆ ಕರಾವಳಿಯ ಬುದ್ಧಿವಂತ ಗಡವಗಳಿಗೆ ಮುಚ್ಚಿಡಲಾಗದ ತಿರಸ್ಕಾರ! ಮೈಸೂರು ಸಂಸ್ಥಾನದ ಸಮೃದ್ಧಿಯ ಮಟ್ಟಿಗೆ ತಾವು ಏರುವುದರ ಬಗ್ಗೆ ಆಲೋಚಿಸ ಬೇಕಾದ ಉತ್ತರ ಕರ್ನಾಟಕದ ಮಂದಿಗೆ ತಮಗೆ ಸೇರಬೇಕಾದ ಹಕ್ಕಿನ ಸ್ವತ್ತುಗಳ ಮೇಲೂ ಈ "ನಾಜೂಕಯ್ಯ" ಹಳೆ ಮೈಸೂರಿಗರ ಕಬ್ಜಾ ಆಗಿದೆ ಎನ್ನುವ ವಿಚಿತ್ರ ಗುಮಾನಿ! ಇನ್ನು ಈ ಉತ್ತರ ಕಾರ್ನಾಟಕದ ಒರಟರು ನಮ್ಮೊಂದಿಗೆ ಸೇರಿ ನಮ್ಮ ರಾಜಕೀಯ "ಮಡಿ"(?)ಯನ್ನ ಸಂಪೂರ್ಣ ಕೆಡಿಸಿದರು ಎಂದು ಎದುರಿಗೆ ಸಿಕ್ಕಾಗ ಹಲ್ಲು ಕಿರಿದಾರೂ ಬೆನ್ನ ಹಿಂದೆ ಹಲ್ಲು ಕಡಿಯುವ ಹಳೆ ಮೈಸೂರಿಗರ ಇಬ್ಬಂದಿತನ. ಒಟ್ಟಿನಲ್ಲಿ ಕನ್ನಡೆಮ್ಮೆಯ ಈ ನಾಲ್ಕು ಮುದ್ದು ಕರುಗಳಿಗೆ ತಮ್ಮ ಅಮ್ಮನ ನಾಲ್ಕು ಕೆಚ್ಚಲುಗಳಲ್ಲಿ ಸರಿ ಸಮವಾಗಿ ಸುರಿಯುವ ಪೋಷಕ ಹಾಲಿನ ಬಗ್ಗೆಯೆ ತೀರದ ಸಂಶಯ! ಗಂಜಿಯೋ, ತಿಳಿಯೋ ಸಿಕ್ಕಿದ್ದನ್ನ ಹಂಚಿಕೊಂಡು ತಿನ್ನ ಬೇಕಾದವರು ಪರಸ್ಪರರನ್ನು ಕಂಡು ಕುರುಬುವ ಹಂಚಿಕೆಯಲ್ಲಿಯೆ ಕಾಲ ಹಾಕುತ್ತಿರೋದು ಮಾತ್ರ ನಿಜವಾಗಿಯೂ ಕರುನಾಡಿನ ದೌರ್ಭಾಗ್ಯ.
ಇಂದು ನಾವೆಲ್ಲ ಕರ್ನಾಟಕವೆಂಬ ಒಂದೆ ಛತ್ರಿಯ ನೆರಳಿಗೆ ಬಂದು ಐವತ್ತ ಎಂಟು ವರ್ಷಗಳನ್ನ ಪೂರೈಸಿದ್ದೇವೆ. ಈ ಸುದೀರ್ಘ ಅವಧಿಯ ಕಾಲದಲ್ಲಿ ನಮ್ಮ ಕೃಷ್ಣೆ- ಕಾವೇರಿಯ ಪಾತ್ರಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ನಮ್ಮಲ್ಲಿ ಯಾರೂ ವಾಸ್ತವವನ್ನು ಗ್ರಹಿಸಲಾದಷ್ಟು ಆಪ್ರಬುದ್ಧರೂ ಅಲ್ಲ. ಪ್ರಾಂತ್ಯವಾರು ಕನ್ನಡಿಗರೆಲ್ಲರಲ್ಲಿಯೂ ಯಾವುದದರೊಂದು ಅಸ್ಮಿತ ಹೆಚ್ಚುಗಾರಿಕೆ ಇರುವಂತೆಯೆ ಮತ್ತಿನ್ನೇನಾದರೂ ನ್ಯೂನತೆಯೂ ಇದ್ದೇ ಇದೆ. ಆಲ್ಲದೆ ತುಳುವರು, ಮರಾಠಿಗರು, ಕೊಂಕಣಿಗರು, ತೆಲುಗರು, ತಮಿಳರು ಹಾಗೂ ಮಲಯಾಳಿಗಳು ಸಹ ಅಲ್ಪ ಸಂಖ್ಯೆಯಲ್ಲಾದರೂ ಸರಿ ನಮ್ಮ ಕನ್ನಡ ಜನಸಂಖ್ಯೆಯ ಭಾಗವೆ ಅಗಿರುವುದನ್ನ ನಾವ್ಯಾರೂ ಮರೆಯುವಂತಿಲ್ಲ.
ಒಬ್ಬೊಬ್ಬರ ಹಿರಿಮೆಯನ್ನ ಇನ್ನೊಬ್ಬರು ಗೌರವಿಸುತ್ತಾ, ಇನ್ನೊಬ್ಬರ ತಪ್ಪನ್ನ ಒಬ್ಬರು ತಿದ್ದಿ ಸರಿ ಪಡಿಸುತ್ತಾ ನಾವೆಲ್ಲರೂ ಒಂದೆ ತಾಯಿಯ ಮಕ್ಕಳೆನ್ನುವ ಹಿರಿಮೆಯನ್ನ ಕೇವಲ ಈ ದೇಶಕ್ಕ್ಷ್ಟೆ ಅಲ್ಲ ಇಡಿ ಜಗತ್ತಿಗೆ ತೋರಿಸಿ ಕೊಡಬೇಕಾದ ಹೊಣೆಗಾರಿಕೆ ಬೀದರಿನಿಂದ ಬೆಂಗಳೂರಿನವರೆಗೆ, ಬೆಳಗಾವಿಯಿಂದ ಕೊಳ್ಳೆಗಾಲದವರೆಗೆ, ರಾಯಚೂರಿನಿಂದ ಮಂಗಳೂರಿನವರೆಗೆ ಹರಡಿರುವ ಕನ್ನಡದ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬ ಹುಟ್ಟು ಕನ್ನಡಿಗರ ಹೊಣೆಗಾರಿಕೆಯಾಗಿದೆ. ಅದನ್ನ ಬಿಟ್ಟು ಕಡು ಮೂರ್ಖರಂತೆ ನಾಡು ಒಡೆವ ಸ್ವಾರ್ಥದ ಪಥ ಹಿಡಿದರೆ ಎಲ್ಲರೂ ಹೋಗಿ ಪಕ್ಕದ ಮನೆಯ ಕೋಡಂಗಿಗಳು ಮಾಡಿಕೊಳ್ಳುತ್ತಿರುವ ಹಾಗೆ ನಾವೂ ಸಹ ಹಗಲು ಕಂಡ ಹಾಳು ಬಾವಿಗೆ ಹಾಡು ಹಗಲೆ ಬೀಳುವ ಹುಚ್ಚರಾಗುತ್ತೇವೆ ಅಷ್ಟೆ. ಒಡೆದ ನಾಡು ಮತ್ತೆ ಒಂದಾಗ ಬಹುದಾದರೆ ಸ್ವಲ್ಪ ವಿವೇಚನೆ ಬಳಸಿ ಅನುಸರಿಸಿ ನಡೆದರೆ ಒಡಕಿನ ಧ್ವನಿ ಎದ್ದಿರುವ ಮನಸುಗಳೂ ಸಹ ಮತ್ತೆ ಒಂದಾಗುವುದು ಹೆಚ್ಚು ಕಷ್ಟವೇನಲ್ಲ. ಒಡೆಯುವುದು ಅಥವಾ ಉಳಿಸಿಕೊಳ್ಳುವುದು ಎರಡೂ ಸಹ ವಿವೇಕವಿರುವ ಕನ್ನಡಮ್ಮನ ಮಕ್ಕಳಾದ ನಮ್ಮ ನಮ್ಮ ಕೈಯಲ್ಲಿಯೇ ಇದೆ.
No comments:
Post a Comment