Sunday, November 3, 2013

ಕರುನಾಡು ಕರಗಿದ ಹೊತ್ತು......

ಕನ್ನಡಮ್ಮನ ಮತ್ತೊಂದು ಜನ್ಮದಿನ.

ನಮ್ಮ ಕರುನಾಡು ಕರ್ನಾಟಕವೆಂಬ ಹೊಸ ಹೆಸರು ಹೊತ್ತು ಭರ್ತಿ ಐವತ್ತೆಂಟು ವರ್ಷ. ೧೯೧.೯೭೬ ಚದರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನ "ಕರ್ನಾಟಕ"ವನ್ನಾಗಿ ಆಧಿಕೃತವಾಗಿ ಘೋಷಿಸುವಾಗ ಅಚ್ಚ ಕನ್ನಡದ ಅನೇಕ ಪ್ರದೇಶಗಳು ಆಕ್ಕಪಕ್ಕದ ರಾಜ್ಯಗಳ ಪಾಲಾಗಿ ಆದ ಅನ್ಯಾಯಕ್ಕೂ ಈಗ ಅಷ್ಟೆ ಪ್ರಾಯವಾಗಿದೆ! ಅಲ್ಲಿನ ಕನ್ನಡಿಗ ಇನ್ನೂ ಅತಿ ಅಸೆಯಿಂದ ನಮ್ಮತ್ತ ದೀನನಾಗಿ ನೋಡುತ್ತಿರುವಂತೆಯೆ ಕನ್ನಡಿಗರ ಜನಸಂಖ್ಯೆಯನ್ನ ಅರು ಕೋಟಿ ಹನ್ನೊಂದು ಲಕ್ಷದ ಮೂವತ್ತು ಸಾವಿರದ ಏಳುನೂರಾ ನಾಲ್ಕಕ್ಕೆ ಏರಿಸಿಕೊಂಡಿದ್ದೇವೆ!

ಸದ್ಯ ೩೦ ಜಿಲ್ಲೆಗಳು, ೨೨೦ ತಾಲೂಕುಗಳು,



೫೨ ಉಪ ವಿಭಾಗಗಳು ಅಸ್ತಿತ್ವದಲ್ಲಿರುವ ನಮ್ಮ ಕರ್ನಾಟಕದಲ್ಲಿ ಕನ್ನಡವೆ ಅಧಿಕೃತ ಆಡಳಿತ ಭಾಷೆ. ಆದರೆ ಇಂದು ಇದು ಕೇವಲ ಬೂಟಾಟಿಕೆಯ ಮಾತಾಗಿ ಕಾಗದ ಹಾಗೂ ಸರಕಾರಿ ಸುತ್ತೋಲೆಯ ಕಡತಗಳಲ್ಲಿ ಮಾತ್ರ ಉಳಿದಿದೆ ಅನ್ನೋದು ಮಾತ್ರ ಕಠೋರ ಸತ್ಯ. ಕನ್ನಡವನ್ನೆ ವಿವಿಧ ಮಾಧ್ಯಮಗಳಲ್ಲಿ ಅನ್ನ ಸಂಪಾದನೆಯ ಹಾದಿಯನ್ನಾಗಿಸಿಕೊಂಡವರಲ್ಲಿ ಅನೇಕರು ಮೇಲೆ ಆದರ್ಶದ ಬೋಳೆ ಮಾತು ಹೊಡೆಯುತ್ತಾ ಒಳಗೊಳಗೆ ಕೇಂದ್ರೀಯ ಪಠ್ಯ ವ್ಯವಸ್ಥೆಯಿರುವ ಆಂಗ್ಲ ಮಾಧ್ಯಮದಲ್ಲಿ ತಮ್ಮ ಕುಲೋದ್ಧಾರಕ, ಕುಲೋದ್ಧಾರಕಿಯರನ್ನ ಓದಿಸುತ್ತಿದ್ದಾರೆ. ಎಲ್ಲೋ ಆಪರೂಪಕ್ಕೆ ಕನ್ನಡ ಮಾಧ್ಯಮಗಳಲ್ಲಿ ಬದ್ಧತೆಯಿಂದ ಓದಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಕುಂದರಾಜ್'ರಂತವರನ್ನ ಕಾಣಬಹುದು. ಇನ್ನು ಬಹುಸಂಖ್ಯಾತರದು ಊಸರವಳ್ಳಿ "ಕನ್ನಡೆಮ್ಮೆಯ ಶೇವೆ"! ನಾಲಗೆಯ ಮೇಲೊಂದು ಅಸಲಲ್ಲಿ ಇನ್ನೊಂದು. ಇಂತಹ "ಉಟ್ಟು ಖನ್ನಡ ಓರಾಟಗಾರ"ರ ಹಾವಳಿಯಲ್ಲಿ ಕನ್ನಡಮ್ಮ ನಲುಗಿ ಹೋಗುತ್ತಿದ್ದಾಳೆ.

ಪೇಟೆಯಲ್ಲಿ ಮೂರು ಕಾಸಿನ ಸಾಮಾನು ಖರೀದಿಸಲಿಕ್ಕೂ ಇಲ್ಲಿನ ರಾಜಧಾನಿಯಲ್ಲಿ ಆಂಗ್ಲದಲ್ಲಿ ವ್ಯವಹರಿಸುವಂತೆ ಆಗಿದ್ದರೆ; ಅದಕ್ಕೆ ಅದನ್ನ ಮಾರುವ ಭಂಡ ವ್ಯಾಪಾರಿಯ ದೌಲತ್ತಿನಷ್ಟೆ ನಮ್ಮ ಮಕ್ಕಳ ಮುಂದೆ ಚೂರೂ ಬಾರದಿದ್ದರೂ ಕೆಟ್ಟ ಆಂಗ್ಲದಲ್ಲೆ ಹರುಕು ಮುರುಕು ವ್ಯವಹಾರ ನಡೆಸಿ ಅವರಿಗೂ ಅದರ ಮೇಲ್ಪಂಕ್ತಿ ಹಾಕಿಕೊಡುವ ಹೆತ್ತವರ ಕೊಡುಗೆಯೂ ಸಾಕಷ್ಟಿದೆ. ಅದರ ನಡುವೆಯೂ ಮತ್ತೆ ಕರುನಾಡಿನಲ್ಲಿ "ಕನ್ನಡ ತಾಯಿ"ಯ ಜನ್ಮದಿನ ಆವರಿಸಿದೆ. ಆಕೆಗೆ ಮುಂದಾದರೂ ಇಂತ (ಕಳ್ಳ ನನ್ನ) ಮಕ್ಕಳ ಕಾಟದಿಂದ ಮುಕ್ತಿ ಸಿಗಲಿ.

ಕರುನಾಡ ಕಿರು (ಕಿರಿಕಿರಿ) ಪುರಾಣ.....

ನಮ್ಮ ಕರ್ನಾಟಕದ ಸದ್ಯದ ಭೂಪಟದ ಅಸ್ತಿತ್ವಕ್ಕೆ ಐವತ್ತೆಂಟು ವರ್ಷ ಮಾತ್ರ ತುಂಬಿದ್ದರೂ ಕರುನಾಡಿನ ಪ್ರಸ್ತಾಪ ಮಹಾಕಾವ್ಯ ರಾಮಾಯಣ ಹಾಗೂ ಭಾರತದ ಇತಿಹಾಸ ಮಹಾಭಾರತದಲ್ಲೂ ಕಾಣ ಸಿಗುತ್ತದೆ. ರಾಮಾಯಣದ ಕಿಷ್ಕಿಂದೆಯ ಕಪಿಗಳು ನಮ್ಮ ನಾಡಿನ ನಟ್ಟ ನಡು ಭಾಗದ ಇಂದಿನ ಕೊಪ್ಪಳ, ಬಳ್ಳಾರಿ ಸೀಮೆಯ ಆದಿವಾಸಿಗಳಾಗಿರಲಿಕ್ಕೆ ಸಾಕು. ಭಾರತೀಯರ ಧಾರ್ಮಿಕ ನಂಬುಗೆಯನುಸಾರ ಅಸ್ತಿತ್ವದಲ್ಲಿರುವ ವಿಂಧ್ಯ ಪರ್ವತದ ಬೆಳವಣಿಗೆಯನ್ನ ನಿಗ್ರಹಿಸಿ ದಕ್ಷಿಣ ಹಾಗೂ ಉತ್ತರ ಭಾರತಗಳನ್ನ ಸಮವಾಗಿ ವಿಭಜಿಸಿದ ಸಪ್ತ ಋಷಿಗಳಲ್ಲಿ ಒಬ್ಬರಾಗಿದ್ದ ತಮಿಳು ಮೂಲದ ಅಗಸ್ತ್ಯ ಮುನಿಗಳು ದೇವಗಂಗೆಗೆ ಸರಿಸಮವಾಗಿ ಜಲಧಾರೆಯ ಬುಗ್ಗೆ ಸೃಷ್ಟಿಸಲಿಕ್ಕೆ ಆಯ್ದುಕೊಂಡದ್ದು ಇಂದಿನ ಕೊಡಗಿನ ಬ್ರಹ್ಮಗಿರಿಯನ್ನ. ಇಂದಿಗೂ ಚಿರಂಜೀವಿಯಾದ ಅವರು ಅಲ್ಲಿಯೆ ಸುಳಿದಾಡುತ್ತಿದ್ದಾರೆ ಎನ್ನುವ ಗಾಢ ನಂಬುಗೆಯಿದೆ.

ಸೃಷ್ಟಿಗೆ ಪ್ರತಿ ಸೃಷ್ಟಿಯನ್ನ ಆಗ ಮಾಡಿ ತೋರಿಸಿದ ಹಟಯೋಗಿ ಮಹಾಮುನಿ ವಿಶ್ವಾಮಿತ್ರರೂ ಕರುನಾಡಿನ ಮೂಲದವರೆ ಎಂಬ ನಂಬುಗೆ ಚಾಲ್ತಿಯಲ್ಲಿದೆ. ತೆಂಗಿಗೆ ಪ್ರತಿಯಾಗಿ ತಾಳೆಯನ್ನೂ, ದನಕ್ಕೆ ಪ್ರತಿಯಾಗಿ ಎಮ್ಮೆಯನ್ನೂ ಸೃಷ್ಟಿಸಿದ ಖ್ಯಾತಿಯಿರುವ ವಿಶ್ವಾಮಿತ್ರ ಮಹಾಮುನಿಗಳ ಮುಖದಿಂದ ಹೊರಬಂದ ಗಾಯತ್ರಿ ಮಂತ್ರವೆ ರುದ್ರವನ್ನು ಹೊರತು ಪಡಿಸಿದರೆ ಇಂದಿಗೆ ಹಿಂದೂಗಳ ಪಾಲಿಗೆ ಅತಿ ಶ್ರೇಷ್ಠ ಬೀಜ ಮಂತ್ರ. ಶ್ರೀರಾಮನ ವಿದ್ಯಗುರುಗಳೂ ಸಹ ಇದೇ ಕನ್ನಡಿಗ ವಿಶ್ವಾಮಿತ್ರರು. ಮಹಿಷಾಸುರನ ಆಧೀನದಲ್ಲಿದ್ದ ಮಹಿಷೂರು ಪ್ರಾಂತ್ಯವೆ ಮಹಿಷೂರು ಅಥವಾ ಇಂದಿನ ಮೈಸೂರು. ಪಾಂಡವರಿಗಾಗಿ ಖಾಂಡವವನ ದಹನದ ನಂತರ ಬೆಂಕಿಯಲ್ಲಿ ಬೇಯಲು ಬಿಡದೆ ಪ್ರಾಣ ಭಿಕ್ಷೆ ನೀಡಿದ್ದಕ್ಕೆ ಪ್ರತಿಯಾಗಿ ತನ್ನ ನೈಪುಣ್ಯತೆ ಹಾಗೂ ಕೌಶಲ್ಯವನ್ನ ಬಳಸಿ ಅತಿ ಸುಂದರ ನಗರಿ ಅಂದಿನ ಇಂದ್ರಪ್ರಸ್ಥ ಅಂದರೆ ಇಂದಿನ ರಾಷ್ಟ್ರ ರಾಜಧಾನಿ ದೆಹಲಿಯನ್ನ ವಿನ್ಯಾಸ ಗೊಳಿಸಿದ ವಾಸ್ತು ವಿನ್ಯಾಸಗಾರ ಮಯಾಸುರನೂ ಇದೇ ಮಹಿಷಾಸುರನ ಪ್ರಜೆಯಂತೆ! ಸುಟ್ಟ ಇಟ್ಟಿಗೆಯ ಬಳಕೆಯ ಬಗ್ಗೆ ಮಾಹಿತಿಯಿರದಿದ್ದ ಉತ್ತರದವರಿಗೆ ಮಯ ಈ ಮೂಲಕ ಆವುಗಳನ್ನ ಬಳಸಿ ಗಟ್ಟಿಮುಟ್ಟಾದ ಭವನಗಳನ್ನ ನಿರ್ಮಿಸುವ ತಾಂತ್ರಿಕತೆ ಪರಿಚಯಿಸಿ ಬೆರಗುಗೊಳಿಸಿದನಂತೆ. ಅಲ್ಲಿಗೆ ಕನ್ನಡಿಗರು ಆಗಲೆ ತಾಂತ್ರಿಕವಾಗಿ ಇನ್ನುಳಿದ ಭಾರತೀಯರಿಗಿಂತ ಮುಂದಿದ್ದರು ಅಂತಾಯಿತಲ್ಲ!

ತಮಾಷೆಯೆಂದರೆ ಮಹಾಭಾರತದಲ್ಲಿ ಬರುವ ಇದೆ ಮಯಾಸುರ ರಾಮಾಯಣದಲ್ಲೂ ಪ್ರತ್ಯಕ್ಷನಾಗುತ್ತಾನೆ! ಅತಿಸುಂದರಿಯಾಗಿದ್ದ ಮಂಡೋದರಿ ಇವನ ಮಗಳು, ಪಂಚ ಮಹಾಪತಿವೃತೆಯರಲ್ಲಿ ಒಬ್ಬಳಾಗಿ ಪರಿಗಣಿಸಲಾಗುವ ಮಂಡೋದರಿಯನ್ನ ರಾವಣಾಸುರ ಮೋಹಿಸಿ ಮದುವೆಯಾಗಿ ಪಟ್ಟದ ರಾಣಿಯನ್ನಾಗಿಸಿಕೊಂಡಿದ್ದ! ಅಲ್ಲಿಗೆ ಮಹಿಷಮಂಡಲದ ಹೆಣ್ಣುಗಳು ಆ ಕಾಲದಲ್ಲೂ ಸೌಂದರ್ಯದ ಖನಿಗಳಾಗಿದ್ದರು ಎಂದು ನಂಬಲು ಆಧಾರ ಸಿಕ್ಕಂತಾಯಿತು! ರಾವಣ ಹಾಗೆ ನಮ್ಮ ನಾಡ ಅಳಿಯ! ಆ ಕಾಲಕ್ಕೇ ಅವನ ಬಳಿ ಪುಷ್ಪಕ ವಿಮಾನವೂ ಇದ್ದು ಅದರ ತಾಂತ್ರಿಕತೆಯಲ್ಲೂ ನಮ್ಮ ಕರುನಾಡ ಬುದ್ಧಿವಂತ ಮೆದುಳುಗಳ ಕೈವಾಡ ಇದ್ದಿರಲಿಕ್ಕೆ ಸಾಕು. ವಸಿಷ್ಠ ಮಹಾಮುನಿಗಳ ವಿನಂತಿಯ ಮೇರೆಗೆ ಮಕ್ಕಳಿಲ್ಲದ ದಶರಥನಿಗೆ ಪುತ್ರಕಾಮೇಷ್ಟಿ ಯಾಗ ಮಾಡಿಸಿದ ಮುನಿ ಋಷ್ಯಶೃಂಗರು ಕೂಡ ನಮ್ಮ ಕರುನಾಡಿನ ಅಪ್ಪಟ ಕನ್ನಡಿಗರು. ಅವರ ಹೆಸರೆ ಅವರು ಜನಿಸಿ ಬಾಳಿ ಬದುಕಿದ್ದ ಶೃಂಗೇರಿಯಾಗಿ ಪವಿತ್ರ ತೀರ್ಥಯಾತ್ರಾ ಸ್ಥಳಗಳಲ್ಲೊಂದಾಗಿ ಪ್ರಸಿದ್ಧವಾಗಿದೆ. ಇಂದಿಗೆ ಇವೆಲ್ಲ ಪೌರಾಣಿಕ ನಂಬುಗೆಗಳ ಅಜ್ಜಿಕಥೆಗಳ ಕಥೆಯಾಯಿತು!.

ಕಪಿ ಶೂರರಾದ ಹನುಮ, ಸುಗ್ರೀವ, ಅಂಗದರು ಗಣಿನಾಡು ಬಳ್ಳಾರಿಯವರೋ?, ಕುಳ್ಳ ತಮಿಳ ಅಗಸ್ತ್ಯರು ನಮ್ಮ ತುಂಬಿ ಹರಿವ ಕಾವೇರಿಯ ಮುದ್ದಿನ ಗಂಡನಾಗಿದ್ದರೋ?, ದಪ್ಪ ಚರ್ಮದ ಕೋಣಗಳ ಹುಟ್ಟೂರು ನಮ್ಮ ಕಸ್ತೂರಿ ಕನ್ನಡದ ಕರುನಾಡೆ ಇರಬಹುದೋ? ಇಂದಿನ ಪೂರ್ವದ ಸಿಲಿಕಾನ್ ಕಣಿವೆಯಾದ ನಮ್ಮ ಹಿರಿಮೆ ಗಮನಿಸಿದರೆ, ಎನ್ ಎ ಎಲ್ ಹಾಗೂ ಹೆಚ್ ಎ ಎಲ್ ಮೂಲಕ ಸ್ವತಂತ್ರ ಭಾರತದ ವೈಮಾನಿಕ ಅನ್ವೇಷಣೆಗಳ ಪ್ರಯೋಗಾಲಯವಾದ ನಮ್ಮ ನಾಡಿನ ಹೆಚ್ಚುಗಾರಿಕೆಯನ್ನ ಗ್ರಹಿಸಿದರೆ ನಾವು ಕನ್ನಡಿಗರು ಅಂದು ಇಂದು ಎಂದೂ ಮುಂದೂ ಹೀಗೆ ಇದ್ದೆವು- ಇದ್ದೇವೆ- ಇದ್ದೇ ತೀರುತ್ತೇವೆ ಅನ್ನುವುದು ಖಚಿತವಾಗುತ್ತದೆ.


ಯಾವ್ಯಾವಾಗ ಕನ್ನಡಿಗರು ಭಾಷೆಯ ಆಧಾರದ ಮೇಲೆ ರಾಜಕೀಯವಾಗಿ ಒಗ್ಗೂಡಿದ್ದರೋ ಆಗೆಲ್ಲ ಬಾಹ್ಯ ಶಕ್ತಿಗಳಿಗೆ ಅವರನ್ನ ಮಣಿಸಲಿಕ್ಕಾಗಿಲ್ಲ. ಸಾಲದ್ದಕ್ಕೆ ಆಂತಹ ಒಗ್ಗಟ್ಟಿನ ಕಾಲದಲ್ಲಿ ಅವರ ಸಮೃದ್ಧಿ ನೆರೆಕೆರೆಯ ಉಳ್ಳವರ ಕಣ್ಣು ಕುಕ್ಕಿಸಿದೆ. ಅದು ಆರಂಭದ ಸ್ವಾಭಿಮಾನಿ ಕನ್ನಡಿಗ ಸಾಮ್ರಾಜ್ಯ ಹಲಸಿಯ ಕದಂಬರಿಂದ ಹಿಡಿದು ಕೊನೆಯ ಮೈಸೂರು ಸಂಸ್ಥಾನದವರೆಗೂ ಅನೂಚಾನವಾಗಿ ಕಾಣಸಿಗುವ ಇತಿಹಾಸದ ಪುಟಗಳ ನಿರಾಕರಿಸಲಾಗದ ಸಂಗತಿ. ಅಷ್ಟೆ ಪ್ರಮುಖವಾಗಿ ಬಾಹ್ಯ ಶಕ್ತಿಗಳು ಕನ್ನಡಿಗರ ನಡು ಮುರಿದಾಗ ನಮ್ಮ ನಾಡನ್ನ ಭಾಷಾತೀತ ಹಾಗೂ ಧರ್ಮಾತೀತವಾಗಿ ಹರಿದು ಹಂಚಿಕೊಂಡಾಗ ಮಾತ್ರ ನಮ್ಮ ಉಕ್ಕುವ ಉತ್ಸಾಹವನ್ನ ಕಟ್ಟಿಡಲು ಸಾಧ್ಯವಾಗಿದೆ ಅನ್ನುವುದನ್ನೂ ಕೂಡ ನಿರಾಕರಿಸೋದು ಅಷ್ಟೆ ಕಷ್ಟ.

ಪಲ್ಲವರು ಸಾಮ್ರಾಜ್ಯಶಾಹಿಗಳಾಗಿ ದಕ್ಷಿಣ ಭಾರತದ ಕರಾವಳಿ ಹಾಗೂ ದಕ್ಖನ್ ಪ್ರಸ್ತಭೂಮಿಯಾದ್ಯಂತ ಪ್ರಬಲವಾಗಿದ್ದಾಗ ಅವರ ಸೊಕ್ಕಿನ ವಿರುದ್ಧ ಸಿಡಿದೆದ್ದು ನಿಂತದ್ದೆ ಬನವಾಸಿ ಮೂಲದ ಬ್ರಾಹ್ಮಣ ಯುವಕ ಮಯೂರ ಶರ್ಮ. ಅಂದಿನ ಪಲ್ಲವ ಸಾಮ್ರಾಜ್ಯದ ರಾಜಧಾನಿ ಕಂಚಿಗೆ ಸೆಡ್ಡು ಹೊಡೆದು ಕ್ಷತ್ರಿಯನಾಗಿ ಮಯೂರವರ್ಮನ ಹೆಸರಿನಲ್ಲಿ ಆತ ಕ್ರಿಸ್ತಶಕ ೩೪೫ರಲ್ಲಿ ಸ್ಥಾಪಿಸಿದ್ದ ಕದಂಬ ರಾಜಸಂಸ್ಥಾನ ರಾಜಕೀಯವಾಗಿ ಕನ್ನಡಿಗರ ಮೊದಲ ಒಗ್ಗೂಡುವಿಕೆ ಆಗಿತ್ತು. ಸರಿಸುಮಾರು ಎರಡು ಶತಮಾನ ಆಳಿದ ಕದಂಬರ ಸಾಮ್ರಾಜ್ಯ ಇಂದಿನ ಕನ್ನಡನಾಡಿನ ಬಹುತೇಕ ಎಲ್ಲಾ ಭಾಗಗಳನ್ನ ಒಳಗೊಂಡಿತ್ತು. ಆದರೆ ಅಳುಪರ ಆಡಳಿತದಲ್ಲಿದ್ದ ಇಂದಿನ ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಅವರ ಹಿಡಿತಕ್ಕೆ ಪೂರ್ತಿ ಸಿಕ್ಕಿರಲಿಲ್ಲ.

ಕದಂಬರ ನಂತರ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕನ್ನಡಿಗರ ಕಥೆ ಇಲ್ಲಿಯವರೆಗೂ ಬಹುಕಾಲ ವಿಜಯದ ಯಶಸ್ಸಿನಗಾಥೆಯಾಗಿ ಮಾತ್ರ ಉಳಿದುಕೊಂಡಿದೆ. ಕದಂಬರ ನಂತರ ಸಾಮ್ರಾಜ್ಯ ಕಟ್ಟಿದ ಬದಾಮಿಯ ಚಾಲುಕ್ಯರ ಸಾಮ್ರಾಜ್ಯದ ವಿಸ್ತಾರ ಇಂದಿನ ಗುಜರಾತಿನಿಂದ ಹಿಡಿದು ಪಶ್ಚಿಮ ಕರಾವಳಿಯಾದ್ಯಂತ ಆವರಿಸಿ ಇಂದಿನ ಮಹಾರಾಷ್ಟ್ರ, ಆಂಧ್ರದ ತೆಲಂಗಾಣ - ರಾಯಲಸೀಮೆ ಹಾಗೂ ಸಂಪೂರ್ಣ ಕರುನಾಡನ್ನ ಒಳಗೊಂಡು ಕೇರಳದ ವಯನಾಡು ಹಾಗೂ ತಮಿಳುನಾಡಿನ ಸರಿಸುಮಾರು ಉತ್ತರದ ಅರ್ಧ ಭಾಗವನ್ನ ಒಳಗೊಂಡಿತ್ತು. ದಕ್ಷಿಣದಲ್ಲಿ ಚೋಳರನ್ನ ಬಾಲ ಬಿಚ್ಚದಂತೆ ತೆಪ್ಪಗಿರಿಸಿದ್ದ ಚಾಲುಕ್ಯರು ಉತ್ತರದ ಗುರ್ಜರ ಪ್ರತಿಹಾರರ ಸೊಕ್ಕನ್ನ ಗದಮುರಿಗೆ ಕಟ್ಟಿ ಅವರ ಆಟಾಟೋಪ ವಿಂಧ್ಯದಿಂದ ದಕ್ಷಿಣಕ್ಕೆ ಆವರಿಸಿದಂತೆ ನಿರ್ಬಂಧಿಸಿತ್ತು. ಚಾಲುಕ್ಯರ ಇಮ್ಮಡಿ ಪುಲಿಕೇಶಿ ಗುರ್ಜರ ಪ್ರತಿಹಾರರ ಸಾಮ್ರಾಟ ಕನೌಜಿನ ಹರ್ಷವರ್ಧನನನ್ನ ಸದಾ ಒತ್ತಡದಲ್ಲಿ ಆಳುವಂತೆ ಮಾಡಿದ್ದ ಹಾಗೂ ಅವನನ್ನ ನಿರ್ಣಾಯಕವಾಗಿ ಮಣಿಸಿ ಕನ್ನಡಿಗರ ಕೀರ್ತಿ ಮೆರೆದಿದ್ದ. ಸುಮಾರು ಇನ್ನೂರ ಹತ್ತು ವರ್ಷ ನಡೆದ ಚಾಲುಕ್ಯರ ದರ್ಬಾರಿನಲ್ಲಿ ಕರುನಾಡಿನ ಕೀರ್ತಿ ಏಷ್ಯಾ ಖಂಡದಾದ್ಯಂತ ಹರಡಿತ್ತು.

ಚಾಲುಕ್ಯರ ನಂತರ ಕನ್ನಡಿಗರ ಕೀರ್ತಿ ಪತಾಕೆಯನ್ನ ಇನ್ನಷ್ಟು ಎತ್ತರಕ್ಕೆ ಏರಿಸಿದವರು ರಾಷ್ಟ್ರಕೂಟರು. ಇವರ ದರ್ಬಾರು ಸಹ ಸರಿ ಸುಮಾರು ಎರಡೂಕಾಲು ಶತಮಾನ ತಡೆಯಿಲ್ಲದೆ ಸಾಗಿತು. ಇವರ ಸಾಮ್ರಾಜ್ಯ ವಿಸ್ತರಣೆಯ ದಾಹ ಅವರನ್ನ ಸಾಗರದಾಚೆಗೂ ದಂಡೆತ್ತಿ ಹೋಗುವಂತೆ ಮಾಡಿ ಬಹುತೇಕ ಅಂದು ಅಸ್ತಿತ್ವದಲ್ಲಿದ್ದ ಪೂರ್ವ ಏಷ್ಯನ್ ರಾಜಾಳ್ವಿಕೆಗಳನ್ನ ಇವರು ಸಾಮಂತರಾಗಿಸಿಕೊಂಡಿದ್ದರು. ಇಂದಿನ ದೆಹಲಿವರೆಗೂ ಇವರು ಕೈಚಾಚಿದರೂ ಅಲ್ಲಿ ಶಾಶ್ವತವಾಗಿ ತಂಗುವ ಮನಸು ಮಾಡದೆ ಮರಳಿ ಕರುನಾಡಿನಲ್ಲೆ ತಮ್ಮ ಕೇಂದ್ರವನ್ನ ಉಳಿಸಿಕೊಂಡರು. ಅವರ ಕಾಲದಲ್ಲಿ ರಾಜಧರ್ಮ ಜೈನವಾಗಿದ್ದು ಅನೇಕ ಜೈನ ವಿದ್ವಾಂಸರು ಕನ್ನಡದ ಅನೇಕ ಆರಂಭಿಕ ಸಾಹಿತ್ಯ ಜೈನ ವಿದ್ವಾಂಸರನೇಕರಿಂದ ಮೂಡಿಬಂತು. ಸ್ವತಃ ಖ್ಯಾತ ರಾಷ್ಟ್ರಕೂಟ ದೊರೆ ಆಮೋಘವರ್ಷ ನೃಪತುಂಗನೂ ಸ್ವತಃ ಕವಿಯಾಗಿದ್ದ. ಅವನ "ಕವಿರಾಜಮಾರ್ಗ" ಇಂದಿಗೂ ಕನ್ನಡ ಸಾಹಿತ್ಯದ ಉತ್ತಮ ಕೃತಿಗಳಲ್ಲೊಂದಾಗಿ ಪರಿಗಣಿತವಾಗುತ್ತಿದೆ.

ಇವರ ನಂತರ ಕಲಚೂರಿಗಳ ಹಾಗೂ ಹೊಯ್ಸಳರ ಕೆಲಕಾಲದ ಅಸ್ತಿತ್ವದ ಹೋರಾಟದ ಫಲವಾಗಿ ಹೊರಹೊಮ್ಮಿದ್ದೆ ಅದ್ವಿತೀಯ ವಿಜಯನಗರ ಸಾಮ್ರಾಜ್ಯ. ಉತ್ತರದಲ್ಲಿ ಅಫ್ಘಾನ್ ಪರ್ಶಿಯನ್ ಮೂಲದ ಮುಸಲ್ಮಾನರ ಬಿಗಿ ಹಿಡಿತ ದೆಹಲಿಯ ಸಿಂಹಾಸನದ ಮೇಲೆ ಬೀಳುತ್ತಿದ್ದಾಗ ಭಾರತೀಯ ಮೂಲದ ಹಿಂದೂ ಧರ್ಮದ ಮರು ಸ್ಥಾಪನೆ ವಿಜಯನಗರದ ಆಳರಸರ ಮೂಲಕ ದಕ್ಷಿಣ ಭಾರತದಾದ್ಯಂತ ಕಾಲಕ್ರಮೇಣ ಆಯಿತು. ಸಂಗಮ ವಂಶಜರಿಂದ ಆರಂಭವಾದ ವಿಜಯನಗರ ಸಾಳ್ವ ವಂಶದಲ್ಲಿ ದೃಢವಾಗಿ ಬೇರು ಬಿಟ್ಟು ತುಳುವರ ಕಾಲದಲ್ಲಿ ಅತ್ಯುಚ್ಛ ಮಟ್ಟ ಕಂಡು ಅರವಿಡರ ಕಾಲದಲ್ಲಿ ಸರ್ವ ಪತನ ಕಂಡಿತು. ದೆಹಲಿ ಬಾದಶಹರ ನಿದ್ದೆ ಕೆಡಿಸಿದ ವಿಜಯನಗರದ ಆಳರಸರು ಯಶಸ್ಸು ದೆಹಲಿಯ ದೊರೆಗಳ ದಕ್ಷಿಣದ ಪಾಳೆಗಾರರಾದ ಪಂಚ ಶಾಹಿ ಮುಸಲ್ಮಾನ ಸಾಮಂತರನ್ನ ಸಮಯ ಸಿಕ್ಕಾಗಲೆಲ್ಲ ರೆಕ್ಕೆ ಪುಕ್ಕ ಕತ್ತರಿಸಿ ಚಿಗುರಲಾಗದಂತೆ ಮಾಡಿಟ್ಟಿದ್ದರು. ಆದರೆ ಸಾಮ್ರಾಜ್ಯದ ಕೊನೆಯ ದಿನಗಳಲ್ಲಿ ಆಡಳಿತ ಕೇಂದ್ರ ದುರ್ಬಲವಾಗಿ ಅವರೆದುರು ತಲೆ ಎತ್ತಲಾಗದೆ ಛಪ್ಪನ್ನ ಚೂರಾಗಿದ್ದ  ಬಿಜಾಪುರ, ಅಹಮದ್ ನಗರ, ಗುಲ್ಬರ್ಗಾ, ಬೀದರ್ ಹಾಗೂ ಭಾಗ್ಯನಗರಗಳ ಪಂಚ ಶಾಹಿ ಮನೆತನಗಳು ಕೇವಲ ವಿಜಯನಗರವನ್ನ ಇನ್ನಿಲ್ಲವಾಗಿಸಲು ಒಂದಾಗಿ ಅದರಲ್ಲಿ ಯಶಸ್ವಿಯಾದ ನಂತರ ತಮ್ಮಲ್ಲೆ ಇಡಿ ಅಖಂಡ ವಿಜಯನಗರ ಸಾಮ್ರಾಜ್ಯದ ಉತ್ತರ ಭಾಗವನ್ನ ಹರಿದು ಹಂಚಿಕೊಂಡರು.

ಇಷ್ಟಾದರೂ ಕನ್ನಡಿಗರ ಒಂದಾಗುವ ತುಡಿತವನ್ನ ಬಹಳ ಕಾಲ ಹಿಡಿದಿಡಲಾಗಿಲ್ಲ. ಆರಂಭದಲ್ಲಿ ವಿಜಯನಗರದವರ ಸಾಮಂತರಾಗಿದ್ದ ಮೈಸೂರಿನ ಯದು ವಂಶಜರು ಶ್ರೀರಂಗಪಟ್ಟಣವನ್ನ ರಾಜಧಾನಿ ಮಾಡಿಕೊಂಡು ಮತ್ತೊಮ್ಮೆ ಬಲಿಷ್ಠವಾಗಿ ತನ್ನ ಮೈ ಕೊಡವಿಕೊಂಡು ಎದ್ದೆ ಬಿಟ್ಟರು. ಅದರೆ ದುರಾದೃಷ್ಟವಶಾತ್ ಅದಾಗಲೆ ಯುರೋಪಿಯನ್ನರ ಕಾಕದೃಷ್ಟಿಗೆ ಭಾರತ ಬಿದ್ದಾಗಿತ್ತು. ಮೈಸೂರಿನ ಒಡೆಯರ ನಡುವೆ ಅವರ ಆಡಳಿತದ ಹೆಸರಿನಲ್ಲಿ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನ್ ಕನ್ನಡಿಗರ ಸಾಮ್ರಾಜ್ಯವನ್ನ ಮತ್ತೆ ವಿಸ್ತರಿಸಿದರು. ಆದರೆ ಆಗ ರಾಜಕೀಯವಾಗಿ ದೇಶದಾದ್ಯಂತ ಪ್ರಬಲರಾಗುತ್ತಿದ್ದ ಬ್ರಿಟಿಷರು ಟಿಪ್ಪುವನ್ನ ಮುಗಿಸಿ ಮೈಸೂರನ್ನ ತಮ್ಮ ಅಧೀನ ಸಂಸ್ಥಾನವನ್ನಾಗಿಸಿಕೊಂಡು ಕನ್ನಡಿಗರ ಅಖಂಡತೆಯನ್ನ ಇಂದಿನ ಹದಿನೈದು ಕಂದಾಯ ಜಿಲ್ಲೆಗಳನ್ನ ಮೈಸೂರು, ಒಂದೂವರೆ ಕಂದಾಯ ಜಿಲ್ಲೆಯನ್ನ ಜಮಖಂಡಿ, ಅರ್ಧ ಕಂದಾಯ ಜಿಲ್ಲೆಯನ್ನ ಸಂಡೂರು ಹಾಗೂ ಆರು ಕಂದಾಯ ಜಿಲ್ಲೆಗಳನ್ನ ಹೈದರಾಬಾದ್ ಸಂಸ್ಥಾನಗಳಲ್ಲಿ ಹಾಗೂ ಮುಂಬೈ ನೇರಾಡಳಿತದ ಹೆಸರಿನಲ್ಲಿ ಇಂದಿನ ಆರು ಕಂದಾಯ ಜಿಲ್ಲೆಗಳನ್ನ, ಮದರಾಸು ನೇರಾಡಳಿತ ಹೆಸರಿನಲ್ಲಿ ಇಂದಿನ ಮೂರು ಕಂದಾಯ ಜಿಲ್ಲೆಗಳನ್ನ ತಮ್ಮ ನೇರ ನಿಗಾದಲ್ಲಿಟ್ಟುಕೊಂಡಿದ್ದರು.

ಹೀಗೆ ಹರಿದು ಹಂಚಿಹೋಗಿದ್ದ ಕನ್ನಡದ ನೆಲಗಳೆಲ್ಲ ತನ್ನ ಬಹುಪಾಲು ಅಚ್ಚ ಕನ್ನಡದ ಅವಿಭಾಜ್ಯ ಅಂಗವೆ ಆಗಿದ್ದ ಆಕ್ಕಲಕೋಟೆ, ಸೊಲ್ಲಾಪುರ, ಕೊಲ್ಲಾಪುರ, ಜತ್ತ, ಆಲೂರು, ರಾಯದುರ್ಗ, ಮಡಕಸಿರ, ಹೊಸೂರು, ಉದಕಮಂಡಲ, ನೀಲಗಿರಿ, ವಯನಾಡು, ಕಾಸರಗೋಡು ಮುಂತಾದ ಅನೇಕ ತಾಲೂಕುಗಳನ್ನ ತನ್ನ ಆಕ್ಕಪಕ್ಕದ ಸಹೋದರ ರಾಜ್ಯಗಳಿಗೆ ಆನಿವಾರ್ಯವಾಗಿ ಧಾರೆ ಎರೆದು ಕೊಟ್ಟು ಸೋತು ವಿರಮಿಸುತ್ತಿರುವ ವೃದ್ಧನ ಆಕಾರದಲ್ಲಿ ಇಂದು ತನ್ನ ಅಸ್ತಿತ್ವನ್ನ ಕಂಡುಕೊಂಡಿದೆ. ಇನ್ನೆರಡು ವರ್ಷಕ್ಕೆ ಇನ್ನು ಹಾರಾಡಿ ಹೋರಾಡಲಾಗದೆ ಈ ಸುಸ್ತು ಹೊಡೆದು ಕೂತಿರುವ ಮುದುಕನಿಗೆ ಆರು ದಶಕವನ್ನ ಮುಟ್ಟಿ ಷಷ್ಠಿಪೂರ್ತಿ ಆಗಲಿದೆ!. ಇನ್ನೂ ನಮ್ಮ ಅಖಂಡತೆಯ ತಿರುಕನ ಕನಸನ್ನ ಎಲ್ಲಾ ಆಳುವ ಸರಕಾರಗಳೂ ನವೆಂಬರ್ ಮೊದಲನೆ ದಿನ ವಾಡಿಕೆಯಂತೆ ಆಡಿ ಮುಂದಿನ ನವೆಂಬರ್'ವರೆಗೆ ಮುಲಾಜಿಲ್ಲದೆ ಅದನ್ನ ಮರೆತು ಬಿಡುತ್ತಾರೆ. ಇದನ್ನ ಕೇಳಿ ರೋಸಿ ಹೋದ ಬಡ ಕನ್ನಡಿಗ ಮಾತ್ರ "ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ" ಕೆಲಸಕ್ಕೆ ಬಾರದ ಠರಾವಿನಂತಹ ಇಂತಹ ಉಡಾಫೆಯ ಮೂರುಕಾಸಿಗೂ ಬಾಳದ ಹೇಳಿಕೆ ಇನ್ನಾದರೂ ಕೇಳದಂತೆ ಎನ್ನ ಕಿವುಡನ ಮಾಡಯ್ಯಾ ತಂದೆ! ಎಂದು ಕಾಣದ ಆ ದೇವರಲ್ಲಿ ಮನ ಕಲಕುವಂತೆ ದೀನವಾಗಿ ಅನುಗಾಲದಿಂದ ಮೊರೆಯಿಡುತ್ತಲೇ ಇದ್ದಾನೆ. ಆತನ ಪ್ರಾರ್ಥನೆ ಮಾತ್ರ ಫಲಿಸುತ್ತಿಲ್ಲ ಅಷ್ಟೆ?!



ಇಂದು ಸ್ವತಃ ತಮ್ಮ ಕೈಯ್ಯಾರೆ ಪಟ್ಟೆ ಬಳಿದುಕೊಂಡ ಸ್ವಯಂಘೋಷಿತ ಹುಲಿವೇಷಗಳ ಚಿತಾವಣೆಯಿಂದ ಕರುನಾಡಿನ ವಾಯುವ್ಯ ಮೂಲೆಯಲ್ಲಿ ಸಲ್ಲದ ಗಡಿ ವಿವಾದದ ಚಿಲ್ಲರೆ ಗಲಾಟೆಯ ಕಿರುಕುಳ ಎದ್ದಿದ್ದರೂ, ಐತಿಹಾಸಿಕ ದೃಷ್ಟಿಯಿಂದ ನೋಡಿದರೆ ಕೇವಲ ಆರು ಶತಮಾನಗಳ ಇತಿಹಾಸ ಹೊಂದಿರುವ ಮರಾಠಿ ಆಡಳಿತ ಭಾಷೆಯಾಗಿ ಇಂದು ವ್ಯಾಪಿಸಿರುವ ನೆಲವೆಲ್ಲಾ ಅಂದು ಅಚ್ಚ ಕನ್ನಡದ್ದೆ ಆಸ್ತಿಯಾಗಿದ್ದವು. ಇಂದಿನ ಮಹಾರಾಷ್ಟ್ರದಲ್ಲಿ ಇರುವ ಶಿಲ್ಪಕಲೆಯ ಸೊಬಗೆಲ್ಲ ಕನ್ನಡದ ಚಾಲುಕ್ಯ ಹಾಗೂ ರಾಷ್ಟ್ರಕೂಟ ವಂಶಗಳ ಕಲಾಭಿರುಚಿಯ ಕೊಡುಗೆಗಳಾಗಿ ಉಳಿದಿವೆ. ಇಂದಿಗೂ ಮಹಾರಾಷ್ಟ್ರದಲ್ಲಿ ಉತ್ಖನನ ನಡೆದಾಗ ಸಿಗುವುದು ಕನ್ನಡ ಭಾಷೆ ಹಾಗೂ ಲಿಪಿಯ ಶಿಲಾ ಶಾಸನಗಳೆ.

ಇಂದು ದೇವನಾಗರಿಯ ಮೋಹದಿಂದ ಅದೇನೆ ಇತಿಹಾಸದ ಸತ್ಯಗಳನ್ನ ಅಲ್ಲಿನ ಪುಢಾರಿಗಳು ತಿರುಚಲು ಯತ್ನಿಸಿದರೂ ಅಲ್ಲಿನ ಊರುಗಳ, ಆರಾಧನಾ ಕ್ಷೇತ್ರಗಳ ಹಾಗೂ ಸ್ಥಳನಾಮಗಳ ಕನ್ನಡದ ಛಾಯೆಯನ್ನ ಅದೇನೆ ದ್ವೇಷದ ಸೋಪು ಹಾಕಿ ತಿಕ್ಕಿದರೂ ಅವರಿಂದ ತೊಳೆಯಲಿಕ್ಕೆ ಆಗುತ್ತಲೆ ಇಲ್ಲ! ಅವರ ಕೆಲವು ವ್ಯರ್ಥ ಕಸರತ್ತುಗಳು ಕಂಡವರ ಮಾತಿಗೆ ಕಿವಿಗೊಟ್ಟು ಮತಾಂಧವವಾಗಿ ತನ್ನ ಸುದೀರ್ಘ ಹಿಂದೂ ಚರಿತ್ರೆಯನ್ನ ಸರಾಸಗಟಾಗಿ ನಿರಾಕರಿಸಿ ಸಾವಿರದ ಇನ್ನೂರು ವರ್ಷಗಳ ಹಿಂದೆ ಬರ್ಬರವಾಗಿ ಸ್ವತಃ ತನ್ನವರ ಮೇಲೆಯೆ ಧಾಳಿ ಎಸಗಿದ ಮಹಮದ್ ಶಾ ಅಬ್ದಾಲಿ, ಘಜ್ನಿ ಹಾಗೂ ಘೋರಿಯಂತಹ ಅಫ್ಘನ್, ಪರ್ಷಿಯನ್ ಆಕ್ರಮಣಕಾರರನ್ನ, ಮತೀಯ ಅಂಧನಾಗಿದ್ದ ಔರಂಗಾಜೇಬನಂತಹ ಹಿಂಸಾ ವಿನೋದಿಯನ್ನ ತಮ್ಮ ಐತಿಹಾಸಿಕ ನಾಯಕರಂತೆರಂತೆ ಚಿತ್ರಿಸಿ ಸಲ್ಲದ ಚರಿತ್ರೆಯನ್ನ ಸೃಷ್ಟಿಸಿ ತಮ್ಮ ಮಕ್ಕಳಿಗೆ ಪಠ್ಯವಾಗಿ ಸುಳ್ಳು ಸುಳ್ಳೇ ಚರಿತ್ರೆಯೊಂದನ್ನ ಬಿಂಬಿಸುತ್ತಿರುವ ಪಾಕಿಸ್ತಾನದ ದುಸ್ಸಾಹಸದಂತೆ ಕಂಡು ಕನಿಕರ ಹುಟ್ಟಿಸುತ್ತದೆ!

ಹೆಚ್ಚು ಕಡಿಮೆ ಮೂರೂವರೆ ಶತಮಾನಗಳ ಕಾಲ ಚಾಣಾಕ್ಷ ಬ್ರಿಟಿಷರು ಎರಡು ನೇರಾಡಳಿತದ ಪ್ರಾಂತ್ಯಗಳಲ್ಲಿ ಹಾಗೂ ಐದು ದೇಶೀಯ ಸಂಸ್ಥಾನಗಳಲ್ಲಿ ತಮ್ಮ ಸ್ವಾರ್ಥ ಸಾಧನೆಗಾಗಿ ಹರಿದು ಹಂಚಿದ್ದರೂ; ಆಶ್ಚರ್ಯಕರವಾಗಿ ಕನ್ನಡ ಒಂದು ಭಾಷೆಯಾಗಿ ಅಲ್ಲಿನ ಕನ್ನಡಿಗರ ಜನಮಾನಸದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ ಜೀವಂತವಾಗುಳಿದದ್ದು ಒಂದು ವಿಸ್ಮಯದ ಸಂಗತಿ ಆನ್ನುವುದನ್ನ ಒಪ್ಪಲೇ ಬೇಕು. ಬೊಂಬಾಯಿ ಪ್ರಾಂತ್ಯ ವಿಸ್ತೀರ್ಣದ ದೃಷ್ಟಿಯಿಂದ ಬೃಹತ್ತಾಗಿತ್ತು. ಕರ್ನಾಟಕದ ಇಂದಿನ ಅರು ಜಿಲ್ಲೆಗಳಾಗ ಬೊಂಬಾಅಯಿ ಪ್ರಾಂತ್ಯದ ದಕ್ಷಿಣದ ಭಾಗಗಳಾಗಿದ್ದು ನಮ್ಮ ತುಂಗಭದ್ರೆಯರು ಹಾಗೂ ಶರಾವತಿ ಅದರ ಕೊನೆಯ ಮೇರೆಗಳಾಗಿದ್ದವು. ಉತ್ತರದಲ್ಲಿ ಆ ಪ್ರಾಂತ್ಯ ಮುಲ್ತಾನಿನವರೆಗೆ; ಪಶ್ಚಿಮದಲ್ಲಿ ಸಿಂಧ್ ಪ್ರಾಂತ್ಯವನ್ನೂ ಒಳಗೊಂಡು ಇಂದಿನ ಇರಾನ್ ಗಡಿಯವರೆಗೆ ಹಬ್ಬಿತ್ತು! ಶರಾವತಿ ಜೋಗದಲ್ಲಿ ಮೈಸೂರು ಸಂಸ್ಥಾನದಿಂದ ಧಾರೆಯಾಗಿ ಧುಮುಕಿದರೆ ನೇರ ಬೊಂಬಾಯಿ ಪ್ರಾಂತ್ಯದ ಉತ್ತರ ಕನ್ನಡ ಜಿಲ್ಲೆಗೆ ಬಿದ್ದು ಮುಂದೆ ಹರಿಯುತ್ತಿದ್ದಳು! ಆ ಪ್ರಾಂತ್ಯದ ಆಡಳಿತದ ಮುಖ್ಯಸ್ಥ ರಾಜ್ಯಪಾಲನಿಗೆ ಸ್ಥಳಿಯ ವ್ಯಾಪಾರಿ ನಿಯೋಗ ಕಳೆದ ಶತಮಾನದ ಅದಿಯಲ್ಲಿ ಅರ್ಪಿಸಿದ ತಮ್ಮ ಬೇಡಿಕೆಗಳ ಮನವಿ ಪತ್ರ ಇದ್ದದ್ದು ಕನ್ನಡ ಹಾಗೂ ಸಿಂಧಿಯಲ್ಲಿ! ಗುಜರಾತಿ ಹಾಗೂ ಮರಾಠಿ ವ್ಯಾಪಾರಸ್ಥರೆ ತುಂಬಿದ್ದ ಈ ನಿಯೋಗ ಬೊಂಬಾಯಿ ಪ್ರಾಂತ್ಯದ ಅಂದಿನ ಬ್ರಿಟಿಶ್ ರಾಜ್ಯಪಾಲನ ಮೂಲಕ ಭಾರತದ ವೈಸ್'ರಾಯ್ ಸಮಕ್ಷಮಕ್ಕೆ ಕಳಿಸಿ ಕೊಟ್ಟದ್ದು ಕೂಡಾ ಕಸ್ತೂರಿ ಕನ್ನಡದಲ್ಲಿ ಬರೆದಿದ್ದ ಮನವಿ ಪತ್ರವನ್ನೆ! ಇದು ಬೊಂಬಾಯಿ ಗೆಜೆಟಿಯರ್'ನಲ್ಲಿ ಅಚ್ಚಳಿಯದಂತೆ ದಾಖಲಾಗಿ ಹೋಗಿದೆ.

ಇನ್ನು ರಾಜ್ಯದ ಇಂದಿನ ಈಶಾನ್ಯ ಭಾಗದ ಐದು ಜಿಲ್ಲೆಗಳು ವಿಜಯನಗರ ಸಾಮ್ರಾಜ್ಯದ ಪತನ ಹಾಗೂ ನಿಜಾಮನೊಂದಿಗೆ ಅನಂತರದ ಕಾಲ ಘಟ್ಟದಲ್ಲಾದ ಬ್ರಿಟಿಶ್ ಸ್ನೇಹ ಒಪ್ಪಂದದ ಪ್ರಕಾರ ಹೈದರಾಬಾದಿನ ನಿಜಾಮನ ವಶದಲ್ಲಿತ್ತು. ದೇಶದ ಇನ್ನಿತರ ಭಾಗಕ್ಕೆ ಸ್ವತಂತ್ರ್ಯದ ಸವಿ ೧೫ ಅಗೋಸ್ತು ೧೯೪೭ರಂದೆ ಸಿಕ್ಕಿದ್ದರೂ ಈ ಜಿಲ್ಲೆಗಳು ನಿಜಾಮನ ರಜಾಕಾರರ ಪಡೆಯಿಂದ ವಿಮುಕ್ತವಾಗಲಿಕ್ಕೆ ಮತ್ತೂ ಹದಿನಾಲ್ಕು ತಿಂಗಳು ದೈನೇಸಿಗಳಂತೆ ಕಾಯಬೇಕಾಯಿತು! ಕಡೆಗೂ ಸರದಾರ ಪಟೇಲರ ಸೈನಿಕ ಕಾರ್ಯಾಚರಣೆಯಿಂದ ವಿಮುಕ್ತವಾಗಿ ಭಾರತೀಯ ಒಕ್ಕೂಟದ ಭಾಗವಾದ ಈ ಜಿಲ್ಲೆಗಳು ಭಾಷಾವಾರು ಹಂಚಿಕೆಯ ಹಿನ್ನೆಲೆಯಲ್ಲಿ ೫೮ ವರ್ಷಗಳ ಹಿಂದೆ ಕರುನಾಡಿಗೆ ಮರಳಿ ಕೂಡಿಕೊಂಡವು. ನಿಜಾಮನ ಆಡಳಿತದಲ್ಲಿ ವಿದ್ಯೆ ಹಾಗೂ ಲೋಕೋಪಯೋಗಿ ಇಲಾಖೆಗಳು ನಿಷ್ಕ್ರಿಯತೆಯ ಪರಮಾವಧಿಯಲ್ಲಿದ್ದ ಕಾರಣ ಈ ಜಿಲ್ಲೆಗಳೂ ಕರ್ನಾಟಕದ ಇನ್ನಿತರ ಪ್ರಾಂತ್ಯಗಳಿಗಿಂತ ವಿದ್ಯಾಭ್ಯಾಸದ ಗುಣಮಟ್ಟ ಹಾಗೂ ಮೂಲಭೂತ ಸೌಕರ್ಯಗಳ ಮಟ್ಟಿಗೆ ಹೋಲಿಕೆಯಲ್ಲಿ ಹಿಂದುಳಿದಿದ್ದವು. ಮೈಸೂರು ಸಂಸ್ಥಾನದ ವಶದಲ್ಲಿದ್ದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳು ವಿದ್ಯೆ ಹಾಗೂ ಕೈಗಾರಿಕರಣದ ದೃಷ್ಟಿಯಿಂದ ಉತ್ತಮ ಪ್ರಗತಿ ಸಾಧಿಸಿದ್ದವು. ಅಧೀನ ಜಿಲ್ಲೆ ಕೊಡಗು ಕೂಡಾ ಎಲ್ಲಾ ರೀತಿಯಿಂದ ಪ್ರಗತಿಯ ಪಥದಲ್ಲಿತ್ತು.

ಮದರಾಸು ಪ್ರಾಂತ್ಯದ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ತನ್ನ ದಕ್ಷಿಣದ ಹೊಸದುರ್ಗ ( ಕಾಂಙಂಗಾಡ್.) ದಿಂದ ಉತ್ತರದ ಭಟ್ಕಳದವರೆಗೆ ತೃಪ್ತಿಕರ ಸಾಧನೆ ಹಾಗೂ ಪ್ರಗತಿಯನ್ನ ದಾಖಲಿಸಿತ್ತು. ಪೂರ್ವದಲ್ಲಿ ಮದರಾಸು ಪ್ರಾಂತ್ಯದ ಗಡಿಯಾಗಿದ್ದ ರಾಯಲಸೀಮೆಯ ತುದಿ ಬಿಸಿಲನಾಡು ಬಳ್ಳಾರಿ ಜಿಲ್ಲೆಯೂ ಸಮೀಪದ ನಿಜಾಮನ ಆಡಳಿತದಲ್ಲಿದ್ದ ರಾಯಚೂರು ಹಾಗೂ ಗುಲ್ಬರ್ಗದ ಮುಂದೆ ಅಗತ್ಯಕ್ಕಿಂತ ಹೆಚ್ಚು ಪ್ರಕಾಶಿಸುತ್ತಿತ್ತು!. ಒಟ್ಟಿನಲ್ಲಿ ಕರ್ನಾಟಕದ ವಿವಿಧ ಭಾಗಗಳ ಆರ್ಥಿಕ ಹಾಗೂ ಮೂಲಭೂತ ಕ್ಷೇತ್ರಗಳ ಪ್ರಗತಿ ವಿಲೀನೋತ್ತರದಲ್ಲಿ ಒಂದೊಂದು ಕಡೆ ಒಂದೊಂದು ತರಹವಿದ್ದು ಪರಸ್ಪರ ಅಭಿವೃದ್ಧಿಯಲ್ಲಿ ಸಾಮ್ಯತೆ ಇದ್ದಿರಲಿಲ್ಲ.

ಇಷ್ಟರ ನಡುವೆ ಒದಗಿ ಬಂದದ್ದೆ ಕೇಂದ್ರ ಸರಕಾರದ ಭಾಷಾವಾರು ಪ್ರಾಂತ್ಯದ ಘೋಷಣೆ. ಆಂಧ್ರದಲ್ಲಿ ತೆಲುಗು ಭಾಷಿಗ ಪ್ರಾಂತ್ಯಗಳೆಲ್ಲ ಒಗ್ಗೂಡಬೇಕೆಂದು ವಿದ್ಯಾರ್ಥಿ ಪೊಟ್ಟಿ ಶ್ರೀರಾಮುಲು ಅಮರಾಣಾಂತ ಉಪವಾಸ ಸತ್ಯಾಗ್ರಹಕ್ಕೆ ಕೂತು ಜೀವ ಬಿಟ್ಟಾಗ ಅದ್ಯಾರೋ(?) "ಭಾರತದ ಕೋಗಿಲೆ" ಎಂಬ ಆರೋಪ ಹೊತ್ತಿದ್ದ ಹದ್ದೊಂದರ ಮರಿಯೊಂದಿಗೆ ಸಾಗುತ್ತಿದ್ದ ತನ್ನ ನಿದ್ದೆ ಬಿಟ್ಟೆದ್ದ ಕಚ್ಚೆ ಹರುಕ ನೆಹರು ನೇತೃತ್ವದ ಕೇಂದ್ರ ಸರಕಾರ ಕಡೆಗೂ ತನ್ನ ಮೊಂಡು ಹಟ ಬಿಟ್ಟುಕೊಟ್ಟು ಭಾಷೆಯ ಆಧಾರದ ಮೇಲೆ ಪ್ರಾಂತ್ಯಗಳ ವಿಭಜನೆಗೆ ಸಮ್ಮತಿಸಿದ್ದು, ಇದಕ್ಕಾಗಿಯೆ ಮೇಲಿಂದ ಮೇಲೆ ಮೂರು ಮೂರು ವಿಂಗಡನಾ ಆಯೋಗಗಳು ರಚನೆಯಾದದ್ದು, ಅದನ್ನ ನಮ್ಮ ಆಂದಿನ ಹಳೆ ಮೈಸೂರಿನ ರಾಜಕಾರಣಿಗಳು ತಮ್ಮ ವಯಕ್ತಿಕ ಸ್ವಾರ್ಥಕ್ಕಾಗಿ ವಿರೋಧಿಸಿ ಅಂದಿನ ಬೊಂಬಾಯಿ ಹಾಗೂ ಹೈದರಾಬಾದಿನ ಭಾಗಗಳನ್ನು ಹಳೆ ಮೈಸೂರಿನಲ್ಲಿ ಸೇರಿಸದಂತೆ ಆಗ್ರಹಿಸಿದ್ದು, ನಾವು ಅನೇಕ ಕನ್ನಡದ ಪ್ರದೇಶಗಳನ್ನ ಕಾರಣವಿಲ್ಲದೆ ಅವೈಜ್ಞಾನಿಕವಾಗಿ ಕಳೆದುಕೊಂಡಿದ್ದು ಇವೆಲ್ಲ ಮುಂದೊಮ್ಮೆ ವಿವರಿಸಬಹುದಾದ ವ್ಯಥೆಯ ಕಥೆ.


No comments:

Post a Comment