Monday, February 7, 2011

ನಿನ್ನೆಡೆಗೆ...

ಭರವಸೆ ಕಳೆದು ಕೊಂಡ ಬಾಳಿನಲ್ಲಿ...
ನೆನಪುಗಳ ಸಾಂಗತ್ಯವೊಂದೆ ಉಸಿರಾಡಲು ಸ್ಪೂರ್ತಿ...
ಖಾಲಿ ರೈಲುಡಬ್ಬಿಗಳಂತೆ ಮನಸಿನ ಮಾತುಗಳೆಲ್ಲ ,
ಹಂಚಿಕೊಳ್ಳುವವರ ಜೊತೆ ಸಿಗದೆ ಹಾಗೆ ಶೂನ್ಯದಲ್ಲಿ ಕರಗಿ ಕಣ್ಮರೆಯಾಗುತ್ತಿವೆ/
ಇರುಳಲ್ಲೀಗ ಅಕ್ಷರಶಃ ನಿದ್ದೆಯಿಲ್ಲ...
ಅಪ್ಪಿತಪ್ಪಿ ಚೂರು ಕಣ್ಣಡ್ಡವಾದರೂ ನೀನೆ ಕನಸಲ್ಲೂ ನೆನಪಾಗಿ ಕಾಡುತ್ತೀಯಲ್ಲ,
ಭಾವದ ಬಲೆಯಲ್ಲಿ ಸಿಲುಕಿದ ಮನಸು....
ಒಲವ ಜೇಡನ ನಿತ್ಯ ಶಿಕಾರಿ...
ಪ್ರೀತಿಯಿಲ್ಲದ ಮೇಲೆ ಇದ್ದೇನು ಸುಖ,ಅದೆಷ್ಟೇ ಸಿರಿವಂತಿಕೆ ಕೈಗೆಟುಕಿದರೂ ನಾ ಭಿಕಾರಿ//


ತುಟಿ ಹೊಲಿದ ಹಾಗೆ...
ಮಾತುಗಳನೆಲ್ಲ ಮರೆತ ಹಾಗೆ...
ಮನದ ಮನೆಯಂಗಳದ ಮಾವಿನ ಮರದ ಟೊಂಗೆಯಲ್ಲಿ ಕುಳಿತ ಕಾಗೆ,
ವಿಲಕ್ಷಣವಾಗಿ ಕೂಗುತ್ತಲೇ ಇದೆ....
ಬರಲಿರುವುದು ನೀನೇನಾ? ಏಕೊ ನನಗನ್ನಿಸುತ್ತಿದೆ ಹೀಗೆ/
ಶೂಲಕ್ಕೇರಿಸಿದ ಒಲವ ಆತ್ಮಕ್ಕೆ ಮತ್ತೆ ಮತ್ತೆ ಹೊಡೆದ ಮೊಳೆಗಳೆ?
ನನ್ನೊಲವಿನೆಡೆಗೆ ನೀ ಬೀರುವ ಪರಮ ನಿರ್ಲಕ್ಷ್ಯದ ನೋಟ,
ಸುರಿವ ಮಳೆಯ ಧಾರೆಗಳಿಗೆ ನನ್ನ ಎದೆ ಮಿಡಿತ ಕೇಳೋದು ಯಾವಾಗಲೂ....
ಮೋಡವಾಗಿ ನೀಲಾಗಸದಲ್ಲಿ ತೇಲಿ ಬರುವಾಗಲೊಮ್ಮೆ ನಿನ್ನ ಮೊಗ ಕಂಡಿತ್ತ?
ನಿನ್ನ ಕಣ್ಣುಗಳಲ್ಲಿ ಮತ್ತದೆ ಎಂದಿನ ಹೊಳಪಿತ್ತ?
ಅನ್ನೋ ಪ್ರಶ್ನೆಯನ್ನೆ//


ಮೌನವೆ ಮನದ ವೇದನೆಗೆ ಮದ್ದು...
ನನ್ನ ಒಲವಿನ ಸತ್ಯಸತ್ಯತೆಗೆ ರುಜುವಾತು ಕೊಡುವ ದರ್ದು ನನಗಿಲ್ಲ,
ನನ್ನೆದೆಗೆ ಗೊತ್ತಿದೆ ನಿನ್ನೆಡೆಗಿನ ನನ್ನ ಪ್ರೀತಿಯ ಪ್ರಾಮಾಣಿಕತೆ...
ಸುಮ್ಮನಿರುವ ;ಒಂಟಿತನ ಕಾಡುವ ಮೌನದ ಹಿಂದೆಯೂ ವೇದನೆಯಿದೆ....
ಆದರೂ ನೀ ನನ್ನ ಒಂದೊಮ್ಮೆ ಆವರಿಸಿದ್ದೆ ಅನ್ನೋದಷ್ಟೆ ಸಾಂತ್ವಾನ/
ಕನಸಿನ ಮನೆಯ ಗೋಡೆಗೆ ಅಂತಹದ್ದೊಂದು ಕಿಡಕಿ ಇಡಿಸಬೇಕಿದೆ...
ತೆರೆದಾಗ ಕೇವಲ ನೀಲಾಗಸ ಕಾಣಬೇಕು,
ಅಲ್ಲಿ ನಿನ್ನ ಬಿಂಬ ಮಾತ್ರ ಹೊಳೆಯುತಿರಬೇಕು....
ಆ ಮನೆಯ ದಾರಿಯ ತಿರುವಿನ ಕೊನೆಯಲ್ಲೊಂದು ಮಾಮರ ನೆಡಬೇಕಿದೆ....
ನೀ ಬಂದಾಗ ಬೀಸಲು ಚಾಮರ...
ಕೋರಲು ಸ್ವಾಗತ ಕೋಗಿಲೆಯ ಇಂಚರ....
ಆದರೆ ನಿನ್ನ ಹುಸಿ ಒಲವ ಪ್ರತ್ಯುತ್ತರಕ್ಕೆ ಮುದುಡಿರುವ ಮನಸ್ಸು,
ಇನ್ನೆಂದೂ ಮರಳಿ ಅರಳುವ ದೂರದ ಲಕ್ಷಣಗಳೂ ಕಂಡು ಬರುತ್ತಿಲ್ಲ//

No comments:

Post a Comment