ಉಸಿರ ಲಯದಲ್ಲಿ ಏರುಪೇರು....
ಕಪೋಲಗಳಿಗೇಕೊ ಏರಿ ಕೊಂಚ ನೆತ್ತರು....
ಅವು ರಂಗಾದಂತೆ ಕಣ್ಣೆರಡೂ ಮಿನುಗಿ ಕವಿದ ಕತ್ತಲಲೂ ನನಗೆ ಬೆಳಕಿನ ಅನುಭವವಾದರೆ....
ಅಂದು ನಿನ್ನ ಕನಸು ಬಿದ್ದಿದ್ದೆ ಎಂದೇ ಅರ್ಥ,
ಮೌನಕೆ ನೂರು ಅರ್ಥ...
ಮಾತಿನ ಬಾಣಗಳಿಗಿಂತ ಅದು ಹರಿತ....
ವಿರಹದ ಕತ್ತಿಯ ಮೊನೆಯ ಮೇಲೆ ಕುಳಿತ ನನಗಿಂತ ಚೆನ್ನಾಗಿ ಅದನ್ನರಿಯಲು ಇನ್ಯಾರಿಗೆ ಸಾಧ್ಯ?/
ತುಂಬಾ ಮನ ಮುಟ್ಟುವಂತಿದೆ...
ಎದೆಯ ಕದ ತಟ್ಟುವಂತಿದೆ,
ನಿನ್ನ ನೆನಪಿನ ಸೆಳಕು...
ಕತ್ತಲ ಮನಸೊಳಗೂ ಹಚ್ಚುವಂತಿದೆ ಬೆಳಕು//
ನಿನ್ನ ನಿಲುವಿನ ಹಿಂದೆ ಇರುವ ಉದ್ದೇಶ ಗೊತ್ತಿಲ್ಲದ ನನಗೆ.....
ಅದರಲ್ಲೆ ನಿನ್ನ ನೆಮ್ಮದಿಯಿದ್ದರೆ.....
ನನಗೆ ನೋವೆಲ್ಲ ಉಳಿದರೂ ಸರಿ ;
ನಿನ್ನಿಂದ ದೂರವಾಗಿಯೆ ಇರುವ ಮನಸಾಗುತ್ತಿದೆ,
ನೋವಿನ ಬೀಜ ಮೊಳಕೆಯೊಡೆದು ಬರುವ ಕುಡಿಯೆ ಒಲವೋ?
ಸಂತಸದ ಗರ್ಭಕ್ಕೆ ವಿರಹದ ಹುಟ್ಟೆ ಮೂಲವೋ?
ಗೊಂದಲವಿದೆ/
ನೀರಲ್ಲಿ ಕಂಡ ಬಿಂಬ ಭ್ರಮೆ...
ಕನ್ನಡಿ ಪ್ರತಿಬಿಂಬಿಸಿದ್ದೂ ಕೂಡ ಹುಸಿ ಮಾಯೆ,
ಸಂತಸದ ಹಗಲಲ್ಲಿ ಜೊತೆ ಬಂದರೂ ಕತ್ತಲಲ್ಲಿ ಕೈಬಿಡುವ ಸ್ವಾರ್ಥಿ ಸ್ವಂತದ ಛಾಯೆ...
ಇವೆಲ್ಲ ತಿಳಿದೂ ಪ್ರೀತಿಸುವುದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ//
ನೆಲಕೆ ಮುತ್ತಿಡುವ ಮುಂಜಾನೆಯ ಇಬ್ಬನಿ ಹನಿಯಂತೆ....
ನನ್ನ ಮನಸೊಳಗೆ ಹೊಳೆಯುತಿದೆ ನಿನ್ನ ಬಿಂಬ,
ನಿನ್ನದೇನು ತಪ್ಪಿಲ್ಲಬಿಡು...
ಅಷ್ಟಕ್ಕೂ ನಾನು ಕೇಳಿದ್ದು ಒಲವಿನ ಭಿಕ್ಷೆ,
ಭಿಕ್ಷುಕನನ್ನು ಯಾರಾದರೂ ಮನೆಯೊಳಗೆ ಬಿಟ್ಟು ಕೊಳ್ಳುತ್ತಾರ?
ನೀನೋ ಕೊಡುವುದನ್ನೆಲ್ಲ ಕೊಟ್ಟು ಹೊಸ್ತಿಲಿನಿಂದಾಚೆಗೆ ವಾಪಾಸು ಕಳಿಸಿದರೆ ತಪ್ಪೇನು?/
ಕಟ್ಟಿದ ಕನಸಿನ ಮನೆಯೆಲ್ಲ ಮರಳಿನ ಕಣಗಳ ಮೇಲೆ ನಿಂತಿತ್ತು....
ಪೋಣಿಸಿದ ನಿರೀಕ್ಷೆಯ ಮಾಲೆಯೆಲ್ಲ ಮಣ್ಣಿನ ಮಣಿಗಳಿಂದಾಗಿತ್ತು,
ಅದರ ಅರಿವಾದದ್ದು ಅನಿರೀಕ್ಷಿತವಾಗಿ ಅಕಾಲದಲ್ಲಿ ತಿರಸ್ಕಾರದ ಮಳೆ ಬಂದಾಗಲೆ...
ಆದರೇನು,ಕಾಲ ಮಿಂಚಿ ಹೋಗಿತ್ತಲ್ಲ!//
No comments:
Post a Comment