( ಭಾಗ - ೨.)
ಬೆಂಗಳೂರು! ಅವರಿವರಿಂದ ಕೇಳಿ ಮಾತ್ರ ಅವನಿಗೆ ಗೊತ್ತಿದ್ದ ನಗರ. ಯಾವ್ಯಾವುದೋ ಚಿತ್ರಗಳಲ್ಲಿ ಮಾತ್ರ ನೋಡಿ ಗೊತ್ತಿದ್ದ ವಿಧಾನಸೌಧ-ಹೈಕೋರ್ಟಿನ ಹೊರತು, ಇನ್ಯಾವುದೋ ಕಿತ್ತು ಹೋದ ಕನ್ನಡ ಸಿನೆಮಾದಲ್ಲಿ ಕಂಡ ದೊಡ್ಡ ದೊಡ್ಡ ರಸ್ತೆಯ ಮೇಲೆ ರೌಡಿಗಳ ಹೊಡೆದಾಟದ ಹೊರತು ಅವನ ಪಾಲಿಗೆ ಬೆಂಗಳೂರು ಒಂದು ನಿಗೂಢ ನಗರಿಯಾಗಿಯೇ ಉಳಿದಿತ್ತು. ಶಂಕರ್'ನಾಗ್ ಸಿನೇಮಾವೊಂದರಲ್ಲಿ ಎಂ ಜಿ ರಸ್ತೆಯನ್ನ ಕಂಡು ಆಗೆಲ್ಲ ವಿಸ್ಮಯ ಪಟ್ಟಿದ್ದ. 'ಅಂತಹ ರಸ್ತೆಯಲ್ಲಿ ನೆಲದ ಮೇಲೆ ಅನ್ನ ಹಾಕಿಸಿಕೊಂಡು ಉಣ್ಣಬಹುದಲ್ಲ! ಅದೆಷ್ಟು ಸ್ವಚ್ಛ?!' ಎಂದು ಕೊಂಡು ಬೆರಗಾಗಿದ್ದ.
ಈಗ ಅಂತಹ ಕಾಣದ ಜನಜಾತ್ರೆಯೊಂದಕ್ಕೆ ಅನಿವಾರ್ಯವಾಗಿ ತಾನೆ ಹೊರಟು ನಿಂತಿದ್ದ. ಕಾಣದ ಊರಿನಲ್ಲಿ ಕುರುಡು ಕನಸೊಂದರ ಬೆನ್ನು ಹತ್ತಿ ಬರಿಗೈಯಲ್ಲಿ ಹೊರಟು ನಿಂತವನ ಮುಂದೆ ಇದ್ದದ್ದು 'ನಾಳೆ ಏನು?' ಎಂಬ ಉತ್ತರ ಕಾಣದ ದೊಡ್ಡ ಪ್ರಶ್ನೆ, ಅಲ್ಲಿ ಆಸರೆ ಹುಡುಕಬೇಕಾದ ಎಡೆಯೊಂದರ ವಿಳಾಸ ಬರೆದಿದ್ದ ಅದಾಗಲೆ ಬೆವರು ಕೊಳೆ ತಾಗಿ ಜೂಲಾಗಿದ್ದ ಒಂದು ಚೀಟಿ ಹಾಗೂ ಜೇಬಿನಲ್ಲಿದ್ದ ಗೆಳೆಯ ಕೊಟ್ಟಿದ್ದ ಅರವತ್ತು ರೂಪಾಯಿ ಹಣ ಮಾತ್ರ.
ಅಲ್ಲಿಯವರೆಗಿನ ಅವನ ಬಾಳ್ವೆಯಲ್ಲಿ ಹಳ್ಳಿ ಗಮಾರನಾದ ಅವ ಕಂಡು ಕಣ್ಣು ಕಣ್ಣು ಬಿಟ್ಟಿದ್ದ ಅತಿ ದೊಡ್ಡ ಊರು ಶಿವಮೊಗ್ಗ, ಅದು ಬಿಟ್ಟರೆ ವಿಸ್ಮಯದಿಂದ ಕಳೆದ ಬಾಯಿಯನ್ನ ಮರು ಮುಚ್ಚಲಿಕ್ಕೆ ಮರೆತು ನೋಡಿದ್ದು ಮಂಗಳೂರನ್ನ. ಅವನ ಕಲ್ಪನೆಯ ಸಾಮರ್ಥ್ಯಕ್ಕೆ ಅದಕ್ಕಿಂತಾ ದೊಡ್ಡ ನಗರದ ಅಗಾಧತೆ ಇನ್ನೂ ಎಟುಕಿರಲೆ ಇಲ್ಲ. ಓದುವಾಗ ಒಂದೊಮ್ಮೆ ಮಂಗಳೂರಿನಲ್ಲಿದ್ದ. ಓದಿಸಲಾಗದು ಅಂತ ಅಪ್ಪ ಹೇಳಿ ಮನೆಯಿಂದಾಚೆ ಅಟ್ಟಿದಾಗ ಕೆಲವು ತಿಂಗಳೂ ಶಿವಮೊಗ್ಗೆಯಲ್ಲಿ ಅನ್ನ ಅರಸಿ ಕಾಲ ಹಾಕಿದ್ದ. ಆಗೆಲ್ಲಾ ನಗರದ ಅತಿ ನಾಗರೀಕತೆಯ ಥಳುಕು ಅವನಿಗೆ ಕಿಂಚಿತ್ತೂ ಹಿಡಿಸಿರದಿದ್ದರೂ ಸಹ ಓದು ಹಾಗೂ ಹೊಟ್ಟೆ ಪಾಡಿನ ಅನಿವಾರ್ಯತೆ ಅವನನ್ನು ಹಲ್ಲು ಕಚ್ಚಿಕೊಂಡು ಅಲ್ಲಿನ ಕಿರಿಕಿರಿಗಳನ್ನೆಲ್ಲಾ ಸಹಿಸಿಕೊಂಡು ಕಾಲ ಹಾಕುವಂತೆ ಮಾಡಿದ್ದವು. ಆಗೇನೋ ಆಯ್ಕೆಯ ಸ್ವಾತಂತ್ರ್ಯ ಅವನಿಗಿರಲಿಲ್ಲ ಹೀಗಾಗಿ ಅಂತಲ್ಲೆಲ್ಲ ಮಸೊಪ್ಪದಿದ್ದರೂ ಇದ್ದ. ಈಗ ಅವನ ಬಾಳಿನ ಗೋಳನ್ನ ನಿವಾರಿಸಿಕೊಳ್ಳುವ ಆಶಾಕಿರಣವೊಂದು ಅಂತಹದ್ದೆ ಒಂದು ನಗರದಲ್ಲಿ ಗೋಚರಿಸುತ್ತಿದ್ದರಿಂದ ತಾನೆ ಅಲ್ಲಿಗೆ ಹೊರಟು ನಿಂತಿದ್ದ.
ಬಸ್ಸು ಅದ್ಯಾವಾಗ ಶಿವಮೊಗ್ಗ ಮುಟ್ಟಿತೋ ಅವನಿಗೆ ಅರಿವಾಗಲೆ ಇಲ್ಲ. ತನ್ನದೆ ಆಲೋಚನೆಯಲ್ಲಿ ಮುಳುಗಿ ಹೋಗಿದ್ದ ಅವನಿಗೆ ಒಂದೂವರೆ ಘಂಟೆಯ ಪಯಣ ಕ್ಷಣಾರ್ಧದಲ್ಲಿ ಕಳೆದು ಹೋದಂತೆ ಭಾಸವಾಯ್ತು. ಬಸ್ಸಿನೊಳಗಿನ ಸಹ ಪಯಣಿಗರ ಕಿರಿಕಿರಿ, ಟಿಕೇಟು ಕೊಡುವ ಗಡಿಬಿಡಿಯಲ್ಲಿ ಅಲ್ಲಿಂದಿಲ್ಲಿ ಆ ಜಂಗುಳಿಯಲ್ಲಿಯೆ ನುಗ್ಗುತ್ತಾ ನಡು ನಡುವೆ ಸುತ್ತಮುತ್ತಲಿನವರ ಕಿವಿ ತಮಟೆ ಕಿತ್ತು ಹೋಗುವಂತೆ ಸೀಟಿ ಹೊಡೆದು ನಿಂತಲ್ಲಿಂದಲೆ ಇಳಿಯುವ ಹತ್ತುವ ಮಂದಿಯ ಮಂದೆಯನ್ನ ನಿಯಂತ್ರಿಸುತ್ತಿದ್ದ ಕಂಡೆಕ್ಟರನ ಪಿರಿಪಿರಿ ಎಲ್ಲವೂ ಅವನ ಚಿತ್ತ ಪಟಲಕ್ಕೆ ಕಿಂಚಿತ್ತೂ ತಾಕಿರಲೇ ಇಲ್ಲ. ಅಷ್ಟು ತನ್ಮಯನಾಗಿ ಅವ ತನ್ನ ಕರಾಳ ಭೂತಕಾಲದಲ್ಲಿ ಕಳೆದುಹೋಗಿದ್ದ. ಶಿವಮೊಗ್ಗದಲ್ಲಿ ಒಂದಿರುಳು ಕಳೆಯಲೆ ಬೇಕಿತ್ತು. ಅಲ್ಲಿ ಕೆಲಸ ಮಾಡುವಾಗ ತಂಗಿದ್ದ ಕೊಠಡಿಯಲ್ಲಿ ಅವನ ಚೂರುಪಾರು ಬಟ್ಟೆಬರೆಗಳಿದ್ದವು. ಅಲ್ಲದೆ ಅವನ ಜೇಬಿನೊಳಗಿದ್ದ ಹಣಕ್ಕೆ ಅವನನ್ನ ಮಧ್ಯಾಹ್ನದ ರೈಲಿನಲ್ಲಿ ಮಾತ್ರ ಬೆಂಗಳೂರು ಮುಟ್ಟಿಸಲು ಸಾಲುತ್ತಿದ್ದವು.
........
ಮರು ಬೆಳಗಾದಾಗ ಅನ್ಯಮನಸ್ಕನಾಗಿಯೆ ಚಾಪೆ ಬಿಟ್ಟೆದ್ದ. ಅವನ ಬಾಳಿನ ದೊಡ್ಡ ತಿರುವಿನ ದಿನ ಅವತ್ತು. ನಿರಾಸಕ್ತನಾಗಿ ಕೋಣೆಯ ಕಿಡಕಿಯಿಂದಾಚೆ ಕಣ್ಣು ಹಾಯಿಸಿದಾಗ ಶಿವಮೊಗ್ಗದ ರಸ್ತೆಗಳ ಅನಭಿಷಿಕ್ತ ರಾಜಾ ರಾಣಿಯರಾದ ಹಂದಿಗಳು ಸಕುಟುಂಬ ಸಮೇತರಾಗಿ ಬೀದಿ ಪಕ್ಕದ ಚರಂಡಿಯನ್ನ ರಾಡಿ ಎಬ್ಬಿಸುತ್ತಿರೋದು ಕಣ್ಣಿಗೆ ಬಿದ್ದು ಹೇಸಿಗೆ ಅನ್ನಿಸಿತು. 'ಬೆಂಗಳೂರು ಇಲ್ಲಿಕ್ಕಿಂತ ನೂರು ಪಟ್ಟು ದೊಡ್ಡದಂತೆ! ಬಹುಷಃ ಅಲ್ಲಿ ಇದರ ದುಪ್ಪಟ್ಟು ಗಾತ್ರದ ವರಾಹ ಸಮೂಹ ತಮ್ಮ ದರ್ಬಾರು ನಡೆಸುತ್ತಿರಬಹುದೋ ಏನೋ!' ಅಂದುಕೊಂಡ. ಮೊದಮೊದಲಿಗೆ ಯಾರಿಗೂ ಹೇಳದೆ ಊರು ಬಿಟ್ಟು ಹೋಗಬೇಕು ಅಂತ ಅಂದುಕೊಂಡಿದ್ದ. ತಾನು ಇದ್ದರೂ ಅಷ್ಟೆ, ಸತ್ತರೂ ಅಷ್ಟೆ ಯಾರ ಗಮನಕ್ಕೂ ತನ್ನ ಅನುಪಸ್ಥಿತಿ ಬರಲಾರದು ಎಂದುಕೊಂಡಿದ್ದ. ಆದರೆ ಅದೆಷ್ಟೇ ರಹಸ್ಯವನ್ನ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದರೂ ಅದು ಅವನಿಂದ ಸಾಧ್ಯವಾಗಲಿಲ್ಲ. ಯಾರಿಗಾದರೂ ಈ ಸಂಗತಿ ತಿಳಿಸದೆ ಇಲ್ಲಿಂದ ತೊಲಗಿದರೆ ಚಂದಾಮಾಮದಲ್ಲಿನ ವಿಕ್ರಮಾರ್ಕನ ಕಥೆಯಲ್ಲಿ ಬೇತಾಳ ಬೆದರಿಸುವಂತೆ ತನ್ನ ತಲೆಯೂ ಸಿಡಿದು ಸಾವಿರ ಹೋಳಾದೀತು ಎಂದು ಬೆದರಿ ಬೆಚ್ಚಿ ಹೋದವ ಕಡೆ ಪಕ್ಷ ಸುಶ್ರುತನಿಗಾದರೂ ಹೇಳಿಯೇ ಹೋಗಬೇಕು ಅಂತ ನಿರ್ಧರಿಸಿಕೊಂಡ.
ಊರು ಬಿಡಲೇ ಬೇಕಂತ ಅಂದು ಕೊಂಡ ಎರಡು ದಿನಗಳ ಹಿಂದಿನ ಸಂಜೆ ಬಾಲ್ಯದ ಗೆಳೆಯನನ್ನ ಹುಡುಕಿಕೊಂಡು ಹೋದ. ಆ ವರ್ಷ ತಾನೆ ಕಾಲೇಜು ಮೆಟ್ಟಿಲು ಹತ್ತಿದ್ದ ಗೆಳೆಯನ ಭಾಗ್ಯ ತನಗೆ ಸಿಗಲಿಲ್ಲವಲ್ಲ ಅಂತ ಅವನ ಕೋಣೆಯುದ್ದ ಜೋಡಿಸಿಟ್ಟಿದ್ದ ಹೊಸ ಹೊಸ ಪುಸ್ತಕಗಳನ್ನ ಕಾಣುವಾಗ ಮನ ಮುಮ್ಮಲ ಮರುಗಿತು. ಏನೋ ಮಾಡಬಾರದ ಅಪರಾಧ ಮಾಡುತ್ತಿರುವಂತೆ ಆ ಪುಸ್ತಕಗಳಲ್ಲೊಂದನ್ನ ಕೈಗೆತ್ತಿಕೊಂಡು ಮೆಲ್ಲನೆ ಅದನ್ನ ನೇವರಿಸಿ ಕೆಳಗಿಟ್ಟ. ಅಳುಕುತ್ತಲೆ ತನ್ನ ಮುಂದಿನ ಯೋಜನೆಯನ್ನ ಚಡ್ಡಿದೋಸ್ತನ ಮುಂದೆ ವಿವರಿಸುವಾಗ ಅರಿವಿಲ್ಲದೆ ಅಳು ಬಂದು ಕಂಠ ಕಟ್ಟಿಕೊಂಡಿತು. ಭರವಸೆಯ ನಾಲ್ಕು ಮಾತು, ಅವನ ಉಳಿತಾಯದ ಐವತ್ತು ರೂಪಾಯಿ ಅಲ್ಲಿಂದ ಹೊರಡುವಾಗ ಇವನ ಜೊತೆಗಿದ್ದವು.
ಇದೀಗ ಬೆಂಗಳೂರಿನ ಬಂಡಿ ಹತ್ತಲಿಕ್ಕೆ ಒದಗಿ ಬರುತ್ತಿರೋದು ಅದೆ ಐವತ್ತು ರೂಪಾಯಿ! ಇದ್ದ ಐವತ್ತು ರೂಪಾಯಿಯನ್ನ ಇನಿತೂ ಖರ್ಚು ಮಾಡದೆ ಬರಿ ಹೊಟ್ಟೆಯಲ್ಲಿ ತನ್ನ ಬಟ್ಟೆಗಳ ಚೀಲ ಹೊತ್ತು ಕೊಂಡು ಪಟ್ಟಣದ ಇನ್ನೊಂದು ಭಾಗದಲ್ಲಿದ್ದ ರೈಲ್ವೆ ನಿಲ್ದಾಣವನ್ನ ಮುಟ್ಟಿದವ ಅಲ್ಲಿನ ಟಿಕೇಟಿಗಾಗಿನ ಸಾಲು ನೋಡಿ ಬೆಚ್ಚಿಬಿದ್ದ. ಅರ್ಧ ಊರೆ ಅಲ್ಲಿ ಕೌಂಟರಿನ ಮುಂದೆ ನೆರೆದಿದ್ದಂತಿತ್ತು. ತಲೆಗೊಂದು ಮಾತು, ಅಲ್ಲಲ್ಲಿ ಕೋಳಿ ಜಗಳ, ಇನ್ಯಾರದೋ ಲಲ್ಲೆ, ಮತ್ಯಾರದೋ ಅರಚುವ ಮಗುವಿನ ಸಂಭಾಳಿಕೆ ಇವನ್ನೆಲ್ಲ ಕಾಣುತ್ತಾ ತಾನೂ ಆ ಸಾಲಿನ ಕೊಟ್ಟಕೊನೆಯ ಬಾಲವಾದ. ಅಸಲಿಗೆ ಅದವನ ಜೀವದಲ್ಲೆ ಮೊತ್ತ ಮೊದಲ ರೈಲು ಪಯಣ. ಅಲ್ಲಿಯವರೆಗೆ ಕೇವಲ ಏದುಸಿರು ಬಿಡುತ್ತಾ ಇಂಜಿನಿನ ಹಿಂದೆ ಬೋಗಿಗಳು ಸರದಿಯಲ್ಲಿ ಸಾಗುವುದನ್ನ ದೂರದಿಂದ ಕಂಡಷ್ಟೆ ಅರಿತಿದ್ದನವ. ಇದೀಗ ಸಾಕ್ಷಾತ್ ಪಯಣಿಗರಲ್ಲೊಬ್ಬನಾಗುತ್ತಿರೋದಕ್ಕೆ ಕೊಂಚ ಅಳುಕು ಮನದಲ್ಲಿ ಮಿಡುಕಾಡುತ್ತಿದ್ದರೂ ಯಾರೊಬ್ಬರಿಗೂ ಅದು ಗೊತ್ತಾಗದಂತೆ ಕೆಮ್ಮಿ ಕ್ಯಾಕರಿಸಿ ತನಗೆ ತಾನೆ ಧೈರ್ಯ ತಂದುಕೊಂಡ. ಧೈರ್ಯ ಬಂತೋ ಇಲ್ಲವೋ ಕನಿಷ್ಠ ಹಾಗೆ ನಟಿಸಿದ.
ಇಷ್ಟುದ್ದದ ರೈಲು ಅದು ಹೇಗೆ ಕೇವಲ ಮೂವತ್ತೆರಡೆ ರೂಪಾಯಿಗೆ ನನ್ನನ್ನ ಅಷ್ಟು ದೂರ ಮುಟ್ಟಿಸುತ್ತೆ! ಅಂತ ಅವನಿಗೆ ಅರ್ಥವಾಗಲೆ ಇಲ್ಲ. ಇದೊಂದು ಅವನ ಪಾಲಿನ ಬಗೆ ಹರೆಯದ ಪ್ರಶ್ನೆಯಾಗಿಯೆ ಉಳಿದಿತ್ತು. ಅವನ ತರ್ಕದ ಪ್ರಕಾರ ಬಸ್ಸಿಗಿಂತ ಉದ್ದ ಹಾಗೂ ದೊಡ್ಡದಾದ ರೈಲಿನಲ್ಲಿ ಪ್ರಯಾಣದ ದರವೂ ಬಸ್ಸಿಗಿಂತ ದುಬಾರಿಯೆ ಆಗಿರಬೇಕಿತ್ತು. ಇದೊಂದೆ ಅಲ್ಲ ಅಂತಹ ಬಗೆ ಹರೆಯದ ಇನ್ನೂ ಕೆಲವು ಗೊಂದಲಗಳು ಅವನಿಗಿದ್ದವು. ಪಕ್ಕಾ ಗಮಾರನಾಗಿದ್ದ ಅವ ಮೊದಮೊದಲಿಗೆ ಟೆಲಿಫೋನನ್ನ ಕಂಡಾಗಲೂ ಅದರಲ್ಲಿ ಜನ ತಮ್ಮ ಊರಿನ ಭಾಷೆಯಲ್ಲಿಯೆ ಮಾತನಾಡುವಾಗಲೂ ಹೀಗೆ ಗೊಂದಲಕ್ಕೆ ಬಿದ್ದಿದ್ದ.
ಅವನ ಪ್ರಕಾರ ಫೋನಿನಲ್ಲಿ ಮಾತನಾಡುವವರೆಲ್ಲ ಕೇವಲ ಇಂಗ್ಲೀಷಿನಲ್ಲಿಯೇ ಅರಚಬೇಕು. ಇಲ್ಲದಿದ್ದರೆ ಆ ಕಡೆಯಿಂದ ಕಿವಿಗೊಡುತ್ತಿರುವವರಿಗೆ ಇವರ ಬಡಬಡಿಕೆಯಲ್ಲಿ ಏನೊಂದೂ ಕೇಳುವುದೇ ಇಲ್ಲ! ತನ್ನ ಊರಿನ ಮಂದಿ ತಮ್ಮದೆ ಆದ ವಿಶಿಷ್ಟ ಶೈಲಿಯ ಗ್ರಾಮ್ಯ ಕನ್ನಡದಲ್ಲಿಯೇ ಫೋನಿನಲ್ಲಿ ಮಾತನಾಡುವುದನ್ನ ಕಂಡು ಗಾಬರಿಯಾಗಿ ಅವರಿಗೆ ಬುದ್ಧಿ ಹೇಳಲು ಹೋಗಿ(?) ಮೊದಲು ಉಗಿಸಿಕೊಂಡು ಆಮೇಲೆ ಹಾಸ್ಯಾಸ್ಪದನೂ ಆಗಿಹೋಗಿದ್ದ. ಈ ತರಹದ ಕೆಲಸಕ್ಕೆ ಬಾರದ ತರ್ಕಗಳಲ್ಲಿ ತೇಜಸ್ವಿ ಕಾದಂಬರಿಯ ಯಾವುದೇ ಅತಿ ಮೂರ್ಖ ಪಾತ್ರಗಳನ್ನೂ ಮೀರಿಸುವಷ್ಟು ಅದ್ವಿತೀಯನಾಗಿದ್ದ ಇವ. ಇಂತಿರುವ ತಾನು ಮೊದಮೊದಲು ರೈಲೇರುತ್ತಿದ್ದಾನೆ ಅದೂ ಬೆಂಗಳೂರಿಗೆ. ಇವನೊಬ್ಬ ಬಾರದೆ ಪಾಪ, ಬೆಂಗಳೂರು ಬಡವಾಗಿತ್ತು!.
( ಮುಂದಿದೆ.)
No comments:
Post a Comment