Tuesday, October 14, 2014

ನೀರ ಮೇಲೆ ಅವಳ ಹೆಜ್ಜೆ........




( ಭಾಗ - ೧.)



ಸಂಜೆಗತ್ತಲಲ್ಲಿ ಯಾವತ್ತೂ ಶಾಶ್ವತವಾಗಿ ಹುಟ್ಟಿದೂರ ಬಿಟ್ಟು ಹೊರಡಬಾರದು. ಸುತ್ತಲೂ ಆಗಷ್ಟೆ ಜಗಮಗಿಸುತ್ತಾ ಕೃತಕ ಬೆಳಕಿನ ಮಳೆಯಲ್ಲಿ ನೆನೆಯುತ್ತಾ ನಿಂತ ಇಡಿ ಊರೆ ಒಂದು ರೀತಿಯ ಹೊಸ ಸಂಭ್ರಮದಲ್ಲಿ ಮುಳುಗೇಳಲು ಕಾತರಿಸುತ್ತಿರುವಂತೆ ಕಂಡು, ಆದರೆ ತಾನೊಂದು ಜೀವ ಮಾತ್ರ ಇನ್ನುಳಿದವರ ಆ ಖುಷಿಯಲ್ಲಿ ಪಾಲ್ಗೊಳ್ಳೋಕಾಗದೆ ನೋವಿನ ಆಸರೆಯ ಮಾಡಿನ ತಾವು ಹುಡುಕಿಕೊಂಡು ಅಲೆಯುವಂತೆ ಅನ್ನಿಸುವ ಭಾವ ಆಗ ದಟ್ಟವಾಗಿ ಮನಸನ್ನ ಕಾಡಬಹುದು. ಅವನಿಗೂ ಆಗ ಹಾಗೆಯೆ ಆಗಿತ್ತು. ಇಳಿ ಸಂಜೆಯ ಮುಸುಕು ಬೆಳಕಿನಲ್ಲಿ ಊರ ಬಸ್'ಸ್ಟ್ಯಾಂಡಿನಲ್ಲಿ ಆತ ನಿಂತಿದ್ದ. ಹೇಳಿಕೊಳ್ಳಲಿಕ್ಕಾಗದ ಕಾರಣಕ್ಕೆ ಕಣ್ಣಿಗೆ ತೆಳು ಕಂಬನಿಗಳ ಪರದೆ ಬಿದ್ದಿತ್ತು. ಊರೆಲ್ಲ ಆತನ ಸಂಕಟದ ಅಲೆ ಉಕ್ಕುತ್ತಿದ್ದ ನಯನಗಳಿಗೆ ಮಂಜು ಮಂಜಾಗಿ ಕಾಣುತ್ತಿತ್ತು. ಅಂತೂ ಶಿವಮೊಗ್ಗೆಯೆಡೆಗೆ ಧಾವಿಸುವ ಬಸ್ಸು ಅತಿ ಅವಸರದಿಂದ ಅನ್ನುವಂತೆ ಅವ ನಿಂತಿದ್ದ ಕಮಾನು ಮಾಳಿಗೆಯ ತಂಗುದಾಣದೊಳಗೆ ಹೊಕ್ಕಿ ನಿಂತಾಗ ಬೆಚ್ಚಿಬಿದ್ದು ವಾಸ್ತವಕ್ಕಾತ ಮರಳಿಬಂದ.


ಕಂಡೆಕ್ಟರ್'ಗಳ ಕೂಗಾಟ, ಹಿಂದಿನ ಬಸ್ಸಿನವರ ರೇಗಾಟ, ನಡುವೆ ಹತ್ತುವ ಇಳಿವ ಪ್ರಯಾಣಿಕರ ಪರದಾಟಗಳ ಮಧ್ಯೆ ಬಲಿಪೀಠಕ್ಕೆ ಹೊರಟ ಅಸಹಾಯಕ ಕುರಿಯಂತೆ ಒಲ್ಲದ  ಮನಸ್ಸಿನಿಂದಲೇ ಬಸ್ಸನ್ನಾತ ಏರಿ ನಿಂತ. ನಿಲ್ಲಲಿಕ್ಕೆ ಎಡೆ ಸಿಕ್ಕಿದ್ದೇ ಹೆಚ್ಚು, ಬಸ್ಸು ತುಂಬಿ ತುಳುಕುತ್ತಿತ್ತು. ಮಂಗಳೂರಿನಿಂದಲೇ ತುಂಬಿ ಹೊರಟಿದ್ದ ಬಸ್ಸಿನ ಒಳಗೆಲ್ಲ ಗಾಳಿಯಾಡಲು ಸಹ ಸ್ಥಳವಿರಲಿಲ್ಲವಾಗಿ ಯಾರ್ಯಾರದೋ ಕಂಕುಳ ಬೆವರ ನಾತ, ಇನ್ಯಾರೋ ಘಾಟಿ ಹತ್ತುವಾಗ ಬಸ್ಸಿನೊಳಗೆಯೆ ಅವಸರವಸರವಾಗಿ ಮಾಡಿದ್ದಿರಬಹುದಾದ ವಾಂತಿಯ ಕಮಟು ಘಾಟು, ಪದೆ ಪದೆ ಡ್ರೈವೆರ್ ಒತ್ತಿರಬಹುದಾದ ಬ್ರೇಕಿಗೆ ಹಚ್ಚಿದ ಎಣ್ಣೆಯ ವಾಸನೆ ಮತ್ತು ಡೀಸಲ್ ಉರಿದ ಹೊಗೆಯ ಘಾಟೂ ಸೇರಿ ಒಂದು ರೀತಿಯಲ್ಲಿ ಅಲ್ಲೊಂದು ಅಸಹನೀಯ ವಾತಾವರಣವೆ ಸೃಷ್ಟಿಯಾದಂತಿತ್ತು. ಆ ಎಲ್ಲಾ ಅವಾಂತರಗಳ ನಡುವೆಯೆ ಅವನೂ ತೂರಿಕೊಂಡು ಒಂದು ಕಂಬಿ ಆಧರಿಸಿ ನಿಂತ. ಊರು ಬಿಡುವ ಹೊತ್ತಿನಲ್ಲಿ ತನ್ನ ಒಡಲೊಳಗೆ ಏಳುತ್ತಿದ್ದ ಸಂಕಟದ ಕಂಪನದ ನಡುವೆ ಈ ಎಲ್ಲಾ ಜಂಜಡಗಳು ಅವನ ಪಾಲಿಗೆ ಗೌಣವಾಗಿದ್ದವು.

ಹಾಗೆ ನೋಡಿದರೆ ಊರು ಬಿಟ್ಟು ಕಾಣದ ನಗರಕ್ಕೆ ಮುಖ ಮಾಡುವ ವಯಸ್ಸೇನೂ ಅವನಿಗೆ ಆಗಿರಲಿಲ್ಲ. ಅಸಲಿಗೆ ಹಾಗೊಂದು ಊರು ಬಿಟ್ಟು ಹೋಗಬೇಕಾದ ವಯಸ್ಸು ಅಂತೇನಾದರೂ ಇದೆಯ? ಅಂತಲೂ ಅವನಿಗೆ ಗೊತ್ತಿರಲಿಲ್ಲ. ಹಣೆಬರಹದ ಹೊಣೆ ಹೊತ್ತು ನೋವಿನ ನೆನ್ನೆಗಳನ್ನ ನಲಿವಿನ ನಾಳೆಗಳಾಗಿಸಿಕೊಳ್ಳುವ ಕ್ಷೀಣ ಆಸೆ ಹೊತ್ತು ಆತ ಅವನ ಪಾಲಿಗೇನೆ ಕಠಿಣವಾಗಿದ್ದ ಹೀಗೊಂದು ನಿರ್ಧಾರಕ್ಕೆ ಬಂದಿದ್ದ. ಹೆತ್ತವರ ಮುರುಕು ಸಂಬಂಧ, ಮುಂದೆ ಓದಿಸಲು ಒಪ್ಪದ ಅಪ್ಪ, ತನ್ನೆಲ್ಲಾ ಸ್ನೇಹಿತರು ಕಾಲೇಜು ಮೆಟ್ಟಿಲು ಹತ್ತುವುದನ್ನ ಪ್ರತಿದಿನ ಹೊಟ್ಟೆ ಪಾಡಿಗಾಗಿ ಒಂದಿಲ್ಲೊಂದು ಕೆಲಸಕ್ಕೆ ಹೋಗುತ್ತಲೇ ಕಾಣ ಬೇಕಾಗಿರುವ ಕರ್ಮ, ಅದೆಷ್ಟೆ ನಿತ್ಯದ ಸಂಪಾದನೆಯನ್ನ ಸಂಜೆ ತಂದು ಒಪ್ಪಿಸಿದರೂ ವಿನಾಕಾರಣ ರೇಗಿ ಅರಚಿ ಕೆಲವೊಮ್ಮೆ ಹೊಡೆದು ಬಡಿದು ಮನೆಯಿಂದಾಚೆ ಅಟ್ಟುವ ಅಪ್ಪನ ವಿಕೃತಿ ಇವೆಲ್ಲಾ ಅವನನ್ನು ಹೈರಾಣು ಮಾಡಿ ತಾನು ಈ ಎಲ್ಲಾ ಹಿಂಸೆಗಳಿಂದ ಪಾರಾಗಿ ಬದುಕಬೇಕೆಂದರೆ ಊರನ್ನ ಬಿಡದೆ ವಿಧಿಯೆ ಇಲ್ಲ ಎನ್ನುವ ನಿರ್ಧಾರಕ್ಕವನನ್ನ ತಂದು ಮುಟ್ಟಿಸಿದ್ದವು.

ಹೊರಡುವ ಹಿಂದಿನ ದಿನವಂತೂ ಅವನ ಮನಸ್ಸು ಪೂರ್ತಿ ಮುರಿದೆ ಹೋಗಿತ್ತು. ಆದಿನ ಆತ ಯಾರೋ ಮೇಸ್ತ್ರಿಯೊಬ್ಬನ ಜೊತೆ ಮುರಿದ ಹಳೆ ಮನೆಯ ಕೊಟ್ಟಿಗೆಯೊಂದರ ಪುಡಿ ಗಾರೆ ಕೆಲಸಕ್ಕೆ ಕೈಯಾಳಾಗಿ ಹೋಗಿದ್ದ. ಆ ಮನೆಯವರು ಕೊಟ್ಟ ತಣ್ಣಗಾಗಿದ್ದ ನೀರು ದೋಸೆಯನ್ನ ಹಟ್ಟಿಯ ಅಂಚಿನಲ್ಲಿ ಕೂತು ನೀರು ನೀರಾಗಿದ್ದ ಕಾಯಿ ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವಾಗ ವಿಪರೀತ ಕುಬ್ಜನಾಗಿ ಹೋದಂತೆ ಅನ್ನಿಸಿ ಕಣ್ಣಿಂದ ಉಕ್ಕಿ ಬಂದ ನೀರೆಲ್ಲ ಚಟ್ನಿಯ ಮೇಲೆ ಸುರಿದು ಅದು ಇನ್ನಷ್ಟು ನೀರಾಗಿತ್ತು. ಅವ ಹಿಂದಿನ ದಿನ ಸರಿಯಾಗಿ ಹೊಟ್ಟೆಗೆ ಏನೂ ತಿಂದಿರಲೇ ಇಲ್ಲ. ಆದರೆ ವಿನಾಕಾರಣ ಮೈತುಂಬ ಪೆಟ್ಟನ್ನ ಮಾತ್ರ ಅಪ್ಪನಿಂದ ತಿಂದು ಬಳಲಿ ಹೋಗಿದ್ದ.

ಅದಕ್ಕೂ ಹಿಂದಿನ ಸಂಜೆ ಅವನನ್ನ ಮಗುವಾಗಿದ್ದಲ್ಲಿಂದ ಎತ್ತಿ ಆಡಿಸಿದ್ದ ಮನೆಯೆದುರಿನ ಅಜ್ಜಿ ಇವನ ಅರೆಹೊಟ್ಟೆಯ ಅಸಹಾಯಕತೆ ನೋಡಲಿಕ್ಕಾಗದೆ ಕರಗಿ ತನ್ನ ಮಗ ಸೊಸೆ ಪೇಟೆಗೆ ಹೋದ ಸಮಯ ಸಾಧಿಸಿ ಮಧ್ಯಾಹ್ನದ ಉಳಿದಿದ್ದ ಅನ್ನಕ್ಕೆ ಬಸಳೆ ಸೊಪ್ಪಿನ ಸಾರು ಸುರಿದು ಕೊಟ್ಟು, ಪಾತ್ರೆಯಿಂದಲೆ ಇವ ಅದನ್ನ ಬಕಬಕ ಮುಕ್ಕುವಾಗ ಪ್ರೀತಿಯಿಂದ ತಲೆ ಸವರಿತ್ತು. ಇವನ ಹೀನ ಬಾಳಿಗೆ ಮರುಗುತ್ತಿದ್ದ ಜೀವ ಬಹುಷಃ ಅದೊಂದೆ. ಹೀಗೆ ಕದ್ದು ಮುಚ್ಚಿ ಅವಸರವಸರವಾಗಿ ನುಂಗುವ ದೊಂಬರಾಟದಲ್ಲಿ ನೆತ್ತಿಗೆ ಅನ್ನ ಹತ್ತಿ ಆತನ ಕಣ್ಣು ಮೇಲಾಗುವಂತೆ ಆದಾಗ ನೀರು ಕುಡಿಸಿ 'ಮೆಲ್ಲ ಮಗ, ಮೆಲ್ಲ ಉಣ್ಣು' ಅಂತ ಅಜ್ಜಿ ಅದೆ ಮೊದಲಿನ ಅಕ್ಕರೆಯಿಂದ ತಲೆ ತಟ್ಟಿ ಸಂತೈಸಿತ್ತು. ಉಕ್ಕಿ ಬಂದ ಅಳುವಿನಲ್ಲಿ ಆಗ ಅಜ್ಜಿಯ ಎದೆಗೆ ಒರಗಿ ಕಣ್ಣೀರಾಗಿದ್ದ ಆತ ಕಂಬನಿಯನ್ನ ತನ್ನ ಸೀರೆ ಸೆರಗಿನಿಂದಲೆ ಒರೆಸಿ ಅಜ್ಜಿ ಸಾಂತ್ವಾನದ ಮಾತುಗಳನ್ನಾಡಿತ್ತು. ಅದಕ್ಕಿಂತ ಹೆಚ್ಚಿನ ಸಹಾಯ ಮಾಡುವ ಸ್ಥಿತಿಯಲ್ಲಿ ಅಜ್ಜಿಯೂ ಇದ್ದಿರಲಿಲ್ಲ. ಹೆಚ್ಚೆಂದರೆ ಹೀಗೆ ಮನೆಯವರ ಕಣ್ಣು ತಪ್ಪಿಸಿ ಹಿಡಿ ಅನ್ನ ಹಾಕಬಹುದಿತ್ತು, ಅಕ್ಕರೆಯಿಂದ ನಾಲ್ಕು ಸಾಂತ್ವಾನದ ನುಡಿಗಳನ್ನ ಆಡಬಹುದಿತ್ತು ಅಷ್ಟೆ. ಈಗ ಇವತ್ತು ಮತ್ತೆ ಹಿಡಿ ಅನ್ನಕ್ಕಾಗಿ  ಅಯ್ಯೋ ಯಾರದೋ ಮನೆಯ ಹಿತ್ತಲಿನ ಕಡುಮಾಡಿನಡಿ ಕಾಯಬೇಕಾಗಿ ಬಂತಲ್ಲ. ಥೂ, ಇದೂ ಒಂದು ದರಿದ್ರ ಬಾಳಾ? ಎಂದಾತ ತನ್ನೊಳಗೆ ಮುಮ್ಮಲ ಮರುಗಿದ.

ಹೆತ್ತವರೆ ತನ್ನನ್ನ ಹಗೆಯನ್ನಾಗಿ ಏಕೆ ನೋಡುತ್ತಾರೆ ಅಂತ ಬಾಲ್ಯದಲ್ಲಿ ಮೊದಮೊದಲಿಗೆ ಅವನಿಗೆ ಅರ್ಥವೆ ಆಗುತ್ತಿರಲಿಲ್ಲ. ಅದನ್ನೆಲ್ಲ ಅರ್ಥ ಮಾಡಿಕೊಳ್ಳುವ ವಯಸ್ಸೂ ಸಹ ಅವನಿಗಾಗಿರಲಿಲ್ಲ. ಅಮ್ಮ ಎನ್ನುವವ ಹೆಂಗಸು ಬಾಲ್ಯದುದ್ದ ಕೂತರೆ ತಪ್ಪು ಅಂತ ಹೊಡೆದು, ನಿಂತರೆ ತಪ್ಪು ಹುಡುಕಿ ಬಡಿದು ಹಿಂಸಿಸಿ ಭಯೋತ್ಪಾದಕಿಯಾಗಿಯೆ ಕಾಡಿದಳು. ಎಳೆ ಪ್ರಾಯದ ಮಗು ಹಾಗೂ ಹೆಂಡತಿಯನ್ನ ತವರು ಮನೆಗೆ ಸಾಗ ಹಾಕಿ ಅದ್ಯಾವುದೋ ಮಾಯಾನಗರಿಯಲ್ಲಿ ಕೆಲಸ ಮಾಡಲು ಹೋಗಿದ್ದ ಅಪ್ಪನೆಂಬ ಭೂಪ ಒಂದು ರಾತ್ರೋ ರಾತ್ರಿ ಅನಿರೀಕ್ಷಿತವಾಗಿ ಇವನ ಮುಂದೆ ಅವತರಿಸಿದಾಗ ಇವನಿಗೆ ಆಗಲೆ ಐದರ ಹರೆಯ! ಬಾಲವಾಡಿಯ ಶಾಲೆಯಲ್ಲಿ, ಸುತ್ತಮುತ್ತಲ ಮನೆಯಲ್ಲಿ ಇನ್ನಿತರ ಸಹಪಾಠಿಗಳ ಅಪ್ಪಂದಿರನ್ನ ಆಗೀಗ ಕಾಣುತ್ತಿದ್ದನಾದರೂ ಈ 'ಅಪ್ಪ' ಎನ್ನುವ ಪ್ರಾಣಿಯ ಉಪಸ್ಥಿತಿ ಬಾಳಿಗೆ ಖಡ್ಡಾಯವೇನಲ್ಲ. ಅದು ಕೇವಲ ಒಂದು ಆಯ್ಕೆ ಮಾತ್ರ ಎಂದೆ ಆತನ ಮಗು ಮನಸು ಬಗೆದಿತ್ತು.


ಹಾಗೆ ಮರಳಿ ಬಂದ ಅಪ್ಪ ಮತ್ತೆ ಮರಳಿ ಮಹಾನಗರಕ್ಕೆ ಹೋಗಲೆ ಇಲ್ಲ. ಈ ಅಪ್ಪ ಅಮ್ಮನದು ಗಲಭೆಗ್ರಸ್ತ ಸಂಬಂಧದ ಸಂಸಾರ. ಅವರು ಅನ್ಯೋನ್ಯತೆಯಿಂದ ಇದ್ದದ್ದನ್ನ ಆತ ಕಂಡದ್ದೆ ಅತಿ ವಿರಳ. ಯಾವಾಗಲೂ ಅವರಿಬ್ಬರೂ ಶರಂಪರ ಕಿತ್ತಾಡುತ್ತಾ ಕೈಗೆ ಸಿಕ್ಕಿದ್ದರಲೆಲ್ಲ ಹೊಡೆದಾಡಿಕೊಂಡು ಕುಸ್ತಿಯಾಡುತ್ತಿದ್ದರೆ, ಈತ ಬಾಲ್ಯದುದ್ದ ಮೂಕ ಪ್ರೇಕ್ಷಕನಾಗಿ ಅದನ್ನ ಸಹಿಸಿಕೊಂಡಿರಬೇಕಾಗುತ್ತಿತ್ತು. ನಡು ನಡುವೆ ಖಚಿತವಾಗಿ ಇಂತಹದ್ದೆ ಕಾರಣ ಅಂತ ಗೊತ್ತಿಲ್ಲದೆಯೆ ಇವ ಧ್ವನಿ ತೆಗೆದು ಅತ್ತರೆ ಇವನಿಗೂ ಅವರಿಬ್ಬರು ತಮ್ಮಿಬ್ಬರ ಕದನದ ನಡುವೆ ಕೊಂಚ ಬಿಡುವು ಮಾಡಿಕೊಂಡು ಖರ್ಚಿಗೆರೆರಡು ಕೆನ್ನೆ ಹಾಗೂ ಬೆನ್ನಿನ ಮೇಲೆ ಕೊಟ್ಟು ತಮ್ಮ ಕಾಳಗದಲ್ಲಿ ಮರು ಮಗ್ನರಾಗುತ್ತಿದ್ದರು. ಒಟ್ಟಿನಲ್ಲಿ ಇಬ್ಬರಿಗೂ ಆತನನ್ನ ಲಾಲಿಸಿ ಪಾಲಿಸುವುದಕ್ಕಿಂತ ತಮ್ಮ ನಿತ್ಯದ ಯುದ್ಧವನ್ನ ಬಿಟ್ಟಲಿಂದ ಮುಂದುವರಿಸಿವುದರ ಬಗ್ಗೆಯೆ ಹೆಚ್ಚು ಕಾಳಜಿ ಇದ್ದಂತಿತ್ತು.


ಇದೆಲ್ಲದರ ನಡುವೆ ಅವನ ಬಾಲ್ಯ ಕಳೆದು ನಡುವೆ ಓದಿಸುವ ನೆಪದಲ್ಲಿ ಕರೆದೊಯ್ದವರ ಜೊತೆ ಆ ಊರು ಈ ಊರು ಸುತ್ತಿ ಕಡೆಗೆ ಆತ ತನ್ನ ಹುಟ್ಟೂರಿಗೆ ಮರಳುವುದಕ್ಕೂ, ಅಪ್ಪ ಅಮ್ಮನ ಎಣ್ಣೆ ಸೀಗೆಕಾಯಿ ಸಂಬಂಧದ ಅದೆಷ್ಟನೆಯದೋ ಮರು ಹೊಂದಾಣಿಕೆಯ ಪರ್ವ ಆರಂಭವಾಗುವುದಕ್ಕೂ ಸರಿ ಹೋಗಿತ್ತು. ಮೊದಲು ಅವರ ದೈಹಿಕ ಹಿಂಸೆಗೆ ಹೆದರಿ ಮುದುಡುತ್ತಿದ್ದವ ಈಗ ಅದು ಸಹನೆ ಮೀರುತ್ತಿದೆ ಅನ್ನಿಸುವಾಗ ತಿರುಗಿ ಬೀಳ ತೊಡಗಿದ. ಮೊದಲಿನ ವಿಧೇಯತೆಯ ಜಾಗದಲ್ಲಿ ಹೆಚ್ಚು ಹೆಚ್ಚು ಮೊಂಡನಾಗುವುದನ್ನ ಕಲಿತುಕೊಂಡ. ಈ ನಡುವೆ ಅಪ್ಪ ಅಮ್ಮನ ಈ ಮತ್ತೊಂದೆರಡು ಸುತ್ತಿನ 'ಅನ್ಯೋನ್ಯತೆ'ಗೆ ಇನ್ನೊಂದು ಮಗು ಬೇರೆ ಹುಟ್ಟಿ ಬಿಟ್ಟಿತ್ತು. 'ನಿತ್ಯ ನಾಯಿ ನರಿಯಂತೆ ಆಡುತ್ತಿದ್ದ ಜಗಳದ ಮಧ್ಯೆ ಅವರಿಬ್ಬರಿಗೂ 'ರೋಮಾನ್ಸ್'ಗೆ ಯಾವಾಗ ಕಾಲ ಸಿಕ್ಕಿತಪ್ಪ!' ಅಂತ ಈಗಲೂ ಆತ ವಿಸ್ಮಯ ಪಡುತ್ತಾನೆ. ಒಟ್ಟಿನಲ್ಲಿ ಪರಮ ಅನಾಗರೀಕವಾಗಿದ್ದ ಹೆಚ್ಚು ಕಡಿಮೆ ಪಶು ಮಟ್ಟದ ಸಂಬಂಧದ ಕುಣಿಕೆಯಿಂದ ಬಂಧಿತವಾದಂತೆ ಆ ಗಂಡ ಹೆಂಡಿರಿಬ್ಬರೂ ದಾಂಪತ್ಯ ನಡೆಸುತ್ತಾ ಇವನ ಬಾಲ್ಯವನ್ನೆ ನರಕವಾಗಿಸಿ ಇವನ ಮಗು ಮನಸ್ಸನ್ನ ಆಗಾಗ ಗೊತ್ತಿಲ್ಲದೆಯೆ ಮುರಿದು ಒಟ್ಟಿನಲ್ಲಿ ಬದುಕನ್ನೆ ಮೂರಾಬಟ್ಟೆಯಾಗಿಸಿದ್ದರು.


ಇಂತಹ ಹೊತ್ತಲಿ ಅವ ಊರು ಬಿಡುವ ನಿರ್ಧಾರಕ್ಕೆ ಕಡೆಗೂ ಬಂದು ಮುಟ್ಟಿದ್ದ. ಅವ ಹೊರಟಿದ್ದ ಗುರಿ ಬೆಂಗಳೂರು. ಅವ ಅಲ್ಲಿಗೆ ಹೊರಡಲಿಕ್ಕೆ ಇನ್ನೂ ಒಂದು ಪ್ರಮುಖ ಕಾರಣವೂ ಇದ್ದೇ ಇತ್ತು. ಹೌದು, ಅವಳಲ್ಲಿದ್ದಳು. ಅವನ ಮನಸನ್ನ ಕದ್ದಿದ್ದವಳು. ಅವನನ್ನ ವಿಷಾದ ಪರ್ವದ ನಡುವೆ ಆವರಿಸಿಕೊಂಡಿದ್ದವಳು ಅವಳಲ್ಲಿದ್ದಳು.

( ಮುಂದಿದೆ....)

No comments:

Post a Comment