Saturday, June 7, 2014

ಶತಾಯುಷಿಯ ಸ್ವಪ್ನವೊಂದು ಕಡೆಗೂ ಸಾಕಾರವಾಗುವುದಿಲ್ಲ......







ಕವಿ ಕಯ್ಯಾರ ಕಿಂಞಣ್ಣ ರೈಗಳು ನನ್ನ ಪಾಲಿಗೆ ಕೇವಲ ಪಠ್ಯ ಪುಸ್ತಕದ ಕೊನೆಯ ಪದ್ಯವಾಗಿದ್ದವರು. ಎರಡನೆ ತರಗತಿಯ ವಿದ್ಯಾರ್ಥಿ ನಾನಾಗಿದ್ದಾಗ ನಮ್ಮ ಶೈಕ್ಷಣಿಕ ವರ್ಷಕ್ಕೆ ಪಠ್ಯ ಪುಸ್ತಕಗಳು ಬದಲಾಗಿದ್ದವು. ಹಿಂದಿನ ವರ್ಷ ಒಂದನೆ ತರಗತಿಯಲ್ಲಿ ಗೋವಿನ ಹಾಡಿನಂತಹ ಲಯಬದ್ಧ ಸರಳ ರಾಗಗಳಲ್ಲಿ ಹಾಡ ಬಹುದಾಗಿದ್ದ ಪದ್ಯಗಳನ್ನಷ್ಟೆ ಕಲಿತು ಗೊತ್ತಿದ್ದ ನನಗೆ ಯಾವ ರಾಗಕ್ಕೂ ನಿಲುಕದ ಕಯ್ಯಾರರ "ಐಕ್ಯಗಾನ" ಎನ್ನುವ ಪದ್ಯ ಪರಮ ಗೊಂದಲ ಹುಟ್ಟಿಸಿತ್ತು! ಇಂತಹ ಕಯ್ಯಾರರಿಗೆ ಇಂದಿಗೆ ಭರ್ತಿ ನೂರು ವರ್ಷ ಪ್ರಾಯವಾಗಿದೆ, ಅಂತೆಯೆ ಅವರ ಮತ್ತೆ ಕನ್ನಡ ನಾಡಿನಲ್ಲಿ ತಮ್ಮ ನೆಲವನ್ನ ಮರಳಿ ಐಕ್ಯ ಮಾಡುವ ಕನಸಿಗೂ ಆರು ದಶಕಗಳು ತುಂಬಲು ಇನ್ನೆರಡೇ ವರ್ಷ ಬಾಕಿ ಉಳಿದಿದೆ!


ಆದರೆ ಅವರ ಕನಸು ನನಸಾಗುವ ಯಾವುದೇ ಕ್ಷೀಣ ಸಾಧ್ಯತೆಗಳೂ ಅತಿದೂರಕ್ಕೂ ಗೋಚರಿಸುತ್ತಿಲ್ಲ. ಅದನ್ನ ಆಗ ಮಾಡಿಸಲು ಕಾನೂನಿನ ಹೋರಾಟ, ರಾಜಕೀಯ ಒತ್ತಡ ಮುಂತಾದ ಪ್ರಯತ್ನ ನಡೆಸಬೇಕಾದ ಆಳುವ ಕರುನಾಡ ಸರಕಾರ ಮಾತ್ರ ಜೋಭದ್ರನಂತೆ ವರ್ತಿಸುತ್ತಲೇ ಕಾಲ ಹಾಕುತ್ತಿದೆ. ಈಗ ಅದೆ ಅಪ್ರಾಮಾಣಿಕ ಸರಕಾರ ತೋರಿಕೆಯ ಅಸ್ಥೆ ಪ್ರದರ್ಶಿಸಲಿಕ್ಕೆ ಸದ್ಯ ಕೇರಳದ ತೆಕ್ಕೆ ಸೇರಿರುವ ಅವರ ಬದಿಯಡ್ಕದ ಮನೆ "ಕವಿತಾ ಕುಟೀರ"ಕ್ಕೆ "ಪಂಪ ಪ್ರಶಸ್ತಿ" ಪ್ರದಾನ ಮಾಡಲು ಹೊರಟಿದೆ. "ಬೆಂಕಿ ಬಿದ್ದಿದೆ ಮನೆಗೆ ಓಡಿ ಬನ್ನಿ...." ಎಂದು ಆರ್ತವಾಗಿ ಅವರೆ ಮೊರೆಯಿಟ್ಟಿದ್ದಾಗ, ತುಳುನಾಡ ಭೂ ಭಾಗವೆ ಆಗಿದ್ದ - ಈಗಲೂ ಸಾಂಸ್ಕೃತಿಕವಾಗಿ ತುಳುನಾಡಿನ ಅವಿಭಾಜ್ಯ ಅಂಗವಾಗಿಯೇ ಇರುವ ಕಾಸರಗೋಡು ತಾಲ್ಲೂಕನ್ನ ಅನ್ಯಾಯದ ಮಾರ್ಗ ಅನುಸರಿಸಿ ಕೇರಳವೆಂಬ ಖದೀಮ ಕಬಳಿಸಿದಾಗ ಕಿವುಡನಂತೆ ನಟಿಸಿ ಮುಖ ಮರೆಸಿಕೊಂಡಿದ್ದ ರಾಜಕಾರಣಿಗಳಿಗೆ ನಾಚಿಕೆ ಎನ್ನುವುದು ಚೂರಾದರೂ ಇದ್ದರೆ ಇಂತಹ ನಾಟಕಗಳನ್ನ ಮಾಡುವ ಬದಲು ಕಯ್ಯಾರರಂತಹ ಅನೇಕರ ಅಳಲನ್ನ ಇನ್ನಾದರೂ ಪ್ರಾಮಾಣಿಕವಾಗಿ ಆಲಿಸಬೇಕು. ಅವರಂತಹ ನೊಂದವರ ಕನಸನ್ನ ನನಸಾಗ ಮಾಡಲು ಹಾತೊರೆದು ಸರಿಯಾದ ಕಾನೂನಿನ ಮಾರ್ಗಗಳನ್ನ ಅನುಸರಿಸಿ ಹೋರಾಡಿ ನಮ್ಮ ಹಕ್ಕನ್ನ ಸಾಧಿಸಬೇಕು.


  ಎಲ್ಲಾ ಪೌರಾತ್ಯ ದೇಶಗಳಲ್ಲಿನ ರೂಢಿಯಂತೆ ನಮ್ಮ ನಾಡಿನಲ್ಲಿಯೂ ಗಡಿಯನ್ನ ನಿರ್ಧರಿಸಿ ಎರಡು ರಾಜ್ಯಗಳನ್ನ ವಿಭಜಿಸುತ್ತಿದ್ದದ್ದು ನಿಸರ್ಗ ಸಹಜವಾದ ನದಿ, ಬೆಟ್ಟ, ಜಲಪಾತ ಹಾಗೂ ಕಾಡುಗಳು. ಹೀಗೆಯೆ ಅಂದಿನ ಮೈಸೂರು ರಾಜ್ಯದಿಂದ ಅಂದಿನ ಮದರಾಸು ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟಿದ್ದ ತುಳುನಾಡನ್ನ ಪಶ್ಚಿಮ ಘಟ್ಟಗಳು ( ನಕ್ಷೆ ಗಮನಿಸಿ.) ಬೇರ್ಪಡಿಸಿದರೆ, ಮೈಸೂರನ್ನ ಕೊಡಗು ರಾಜ್ಯದಿಂದ ನಾಗರಹೊಳೆ ಕಾಡು ಹಾಗೂ ಕಾವೇರಿ ನದಿ ವಿಭಜಿಸುತ್ತಿದ್ದಳು. ಉತ್ತರದಲ್ಲಿ ಮೈಸೂರು ರಾಜ್ಯವನ್ನ ಬೊಂಬಾಯಿ ಪ್ರಾಂತ್ಯದಿಂದ ತುಂಗಭದ್ರೆಯರು ಹಾಗೂ ಜೋಗ ಜಲಪಾತ ಪ್ರತ್ಯೇಕವಾಗಿಸುತ್ತಿತ್ತು.


ಇದೆ ಮಾನದಂಡದಲ್ಲಿ ಸುಳ್ಯದಿಂದ ಸಾಗಿ ಕಾಸರಗೋಡಿನ ಮಾರ್ಗವಾಗಿ ಅರಬ್ಬಿ ಕಡಲಿನ ಒಡಲನ್ನ ಸೇರುವ ಪಯಸ್ವಿನಿ ಅಥವಾ ಚಂದ್ರಗಿರಿ ಹೊಳೆಯೆ ತುಳುನಾಡು ಹಾಗೂ ಕೇರಳದ ನಡುವಿನ ಸಹಜ ಗಡಿ. ಇಲ್ಲಿ ನೀಡಿರುವ ಆ ಕಾಲದ ರಾಜಕೀಯ ಗಡಿ ನಕ್ಷೆಯೂ ಇದನ್ನೆ ಖಚಿತ ಪಡಿಸುತ್ತದೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾಚೆಗೆ ಕಲ್ಲಿಕೋಟೆ ಜಿಲ್ಲೆಯನ್ನ ಸ್ಪಷ್ಟವಾಗಿ ಕಾಣಿಸಿದೆಯೆ ಹೊರತು ಕಾಸರಗೋಡು ಎನ್ನುವ ಅಸಹಜ ಜಿಲ್ಲೆಯೊಂದನ್ನಲ್ಲ. ಇದನ್ನ ಬ್ರಿಟಿಷ್ ಭಾರತದ ಸರ್ವೆಯ ದಸ್ತಾವೇಜುಗಳೂ ದೃಢಪಡಿಸುತ್ತವೆ. ನಮ್ಮ ತುಳುನಾಡಿನ ಭೂತಗಳೂ ತಮ್ಮ ಪಾಡ್ದನದಲ್ಲಿ ಚಂದ್ರಗಿರಿ ಹೊಳೆಯಾಚಿನ ನೆಲವನ್ನಷ್ಟೆ ಕೇರಳವೆಂದು ತಲೆತಲಾಂತರಗಳಿಂದ ಗುರುತಿಸುತ್ತಿವೆ. ಆದರೆ ನಮ್ಮವರಿಗೆ ಮಾತ್ರ ಅದೊಂದೂ ಮುಖ್ಯವಲ್ಲ.


ವಾಸ್ತವವಾಗಿ ಚಂದ್ರಗಿರಿ ಹೊಳೆಯಾಚೆಗೂ ದಕ್ಷಿಣದ ತಂಬುರದವರೆಗೆ ಸುಮಾರು ಅರವತ್ತು ಕಿಲೋಮೀಟರ್ ನೆಲದಲ್ಲಿ ತುಳು ಮಿಶ್ರಿತ ಕನ್ನಡ ವ್ಯಾಪಿಸಿದೆ. ಆದರೆ ಹೊಳೆಯಾಚೆ ಅದರ ವ್ಯಾಪ್ತಿ ತೆಳುವಾಗುತ್ತಾ ಹೋಗಿ ಮುಂದೆ ಸಂಪೂರ್ಣ ಮಲಯಾಳದ ಅಧಿಪತ್ಯ ಆರಂಭವಾಗುತ್ತದೆ. ಅನೇಕ ಸ್ಥಳಿಯ ಪಾರಿಭಾಷಿಕ ಪದಗಳಲ್ಲಿ ಮಲಯಾಳಿಯ ನೆರಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ತುಳುನಾಡಿನಲ್ಲಿ ಕುಟುಂಬದ ಮೂಲ ಮನೆಯನ್ನು ಗುತ್ತು ಅಥವಾ ಬೀಡು ಎಂದರೆ ಈ ಪ್ರಾಂತ್ಯದಲ್ಲಿ ಅದನ್ನ ಮಲಯಾಳಿಗಳಂತೆ ತರವಾಡು ಎನ್ನಲಾಗುತ್ತದೆ. ಅಸಲು ಸಂಗತಿ ಇದಾಗಿದ್ದರೂ ಸಹ ಭಾಷಾವಾರು ಪ್ರಾಂತ್ಯದ ರಚನೆಯ ಸಂದರ್ಭದಲ್ಲಿ ಫಜಲ್ ಅಲಿ ಆಯೋಗ ಹಾಗೂ ಮಹಾಜನ್ ಆಯೋಗದ ಶಿಫಾರಸ್ಸುಗಳನ್ನೆಲ್ಲ ಕಸದ ಬುಟ್ಟಿಗೆ ಎಸೆದು ನೆಹರು ಛೇಲ ಫಣಿಕ್ಕರ್ ಎಂಬ ಅಧಿಕಾರ ವಲಯದ ಪ್ರಭಾವಿ ಮಲಯಾಳಿ ಇಡಿ ಕಾಸರಗೋಡು ತಾಲ್ಲೂಕನ್ನ ಕೇರಳದ ನಕ್ಷೆಯೊಳಗೆ ಸೇರಿಸಿ ಕನ್ನಡಿಗರನ್ನ ತಮ್ಮ ಮನೆಯಲ್ಲಿಯೇ ನಿರಾಶ್ರಿತರನ್ನಾಗಿ ಮಾಡಿದ!


ಆಗೆಲ್ಲಾ ಸಂಕಟದಿಂದ ಬೊಬ್ಬೆ ಇಟ್ಟ ಕಯ್ಯಾರರ ಮೊರೆ ಕೇಳದೆ ಕಡೆಗಣಿಸಿದ ಮಂದಿ ಇಂದು ಅವರನ್ನ ಸನ್ಮಾನಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ದುರಾಸೆಯಲ್ಲಿ ನಮ್ಮದಲ್ಲದಾಗಿರುವ ನಮ್ಮ ಮನೆ ಕಾಸರಗೋಡಿಗೆ ದಾಂಗುಡಿ ಇಡುತ್ತಿದ್ದಾರೆ. ನಾಚಿಕೆ ಆಗಬೇಕು ಇವರಿಗೆಲ್ಲ. ಇಂದು ಆಳುವ ಕೇರಳ ಸರಕಾರ ಕಾಸರಗೋಡನ್ನ ಜಿಲ್ಲೆಯ ದರ್ಜೆಗೇರಿಸುವ ಮೂಲಕ, ಅಲ್ಲಿ ತಿರುವಾಂಕೂರಿನ ಆಚೆಯ ಮಲಯಾಳಿಗಳನ್ನ ವಲಸೆ ಬರುವಂತೆ ಪ್ರೋತ್ಸಾಹಿಸುವುದರ ಮೂಲಕ, ಮಲಯಾಳಿ ಮಾಧ್ಯಮದ ಶಾಲೆಗಳನ್ನ ಅಲ್ಲಿ ಖಡ್ಡಾಯಗೊಳಿಸುವುದರ ಮೂಲಕ ವ್ಯವಸ್ಥಿತವಾಗಿ ಕಾಸರಗೋಡಿನ ತುಳುವ - ಕನ್ನಡಿಗ ಛಾಯೆಯನ್ನ ಇಲ್ಲವಾಗಿಸುವ ಕಾರ್ಯದಲ್ಲಿ ಬಲವಾಗಿ ತೊಡಗಿದೆ. ಇದನ್ನೆಲ್ಲ ನೋಡಿ ನೊಂದು ಹೋಗಿರುವ ಕಯ್ಯಾರರಿಗೆ ದೇಹ ಮಾಗಿದೆಯಾದರೂ ಮನಸ್ಸಿನ್ನ ಕೆಚ್ಚು ಇನ್ನೂ ಮಾಸಿಲ್ಲ. ಅವರಿಗೆ ಜನ್ಮದಿನ ಶುಭ ತರಲಿ.

No comments:

Post a Comment