ಇನ್ನೇನಿಲ್ಲದಿದ್ದರೂ ನೆನಪಿನ ಒಂದು ಹನಿಯಿದೆ
ಅದರ ಆಳದಿಂದ ಹುಟ್ಟಿದ ಆರ್ತನಾದದ ಒಂದು ಆಪ್ತ ಧ್ವನಿಯಿದೆ.....
ಒಂಟಿ ಅಲ್ಲ ನಾನು,
ಒಂದೊಮ್ಮೆ ಮೋಡ ತನ್ನ ತಬ್ಬಿ ಮುದ್ದಿಟ್ಟರೂ
ವಿಶಾಲ ನೀಲಿಯಾಳದಲ್ಲಿ ಮೇಘದರಳೆಯ ಕೊನೆಯ ಚೂರೊಂದೇ ತೇಲುತ್ತಿದ್ದುಬಿಟ್ಟರೂ.....
ಅನಾಥನಾದೆನೆಂದು ಮರುಗೀತೇನು ಎಂದಾದರೂ ನಿರ್ಲಿಪ್ತ ಬಾನು?/
ಸರಿ ಕಂಡ ದಾರಿಯಲ್ಲಿ ಅದೇನೆ ಮುಳ್ಳಿನ ಹಾಸು ಹರವಿದ್ದರೂ
ನೆತ್ತರು ಸುರಿಸಿಕೊಂಡಾದರೂ ಸರಿ,
ಬರಿಬೆತ್ತಲೆ ಪಾದಗಳನ್ನ ಆದಷ್ಟು ಆಳಕ್ಕೆ ಊರಿ
ನಡೆದೆ ಕೊನೆ ಮುಟ್ಟುವ ಹಟ ನನ್ನೊಳಗೂ ಮೂಡಿ ಆಗಿದೆ.//
ಹಳಸಲು ಕನಸಿನ ತುಂಬ
ಮಾಸಲು ಮನಸಿನ ಬಿಂಬ...
ಬರಿ ನೆನಪುಗಳು ಕೆಲವು ನನ್ನವು
ಕೆಲವು ನಿನ್ನವು ಹಲವು ನಮ್ಮಿಬ್ಬರವು,
ಅತಿ ಅಲ್ಲದ ಪ್ರತಿ ಸಣ್ಣ ಆಸೆಗೂ
ಗತಿಗೇಡಿನ ಫಲ ಸಿಗುವ ಕಠೋರ ಜಗದಲ್ಲಿ
ವಿಶಾಲ ಹೃದಯ ಒಂದು ಅತಿರಮ್ಯ ಕಲ್ಪನೆ....
ಮತ್ತೆ ಆಸೆ ಹುಟ್ಟಿಸಿದ ಮಳೆಯ ಹಳೆಯ ಮೋಸದ ಮೋಹವನ್ನ
ಅತಿಯಾಗಿ ನಂಬಿರುವ ಅಮಾಯಕ ಭೂಮಿ
ಇನ್ನೂ ಬಿರಿದು ಹನಿ ಪ್ರೀತಿಗಾಗಿ ಬಾಯ್ತೆರೆದುಕೊಂಡು ಕಾದಿದೆ/
ವಿಪರೀತವಾಗಿರುವಾಗ ಮಾಹಿತಿ ಸೋರಿಕೆಯ ಅನಂತ ಭೀತಿ
ಅದಕ್ಕೆ ನಿನ್ನ ವಿಷಯದಲ್ಲಿ ಮೌನದಾಭರಣ ತೊಟ್ಟುಕೊಂಡೆ
ಕಾಲ ಹಾಕುವುದೆ ನನ್ನ ಚಿರ ನೀತಿ.....
ಇರುಳಲ್ಲಿ ಕಣ್ಣು ಬಾಡದೆ
ಕಿರು ನಿದಿರೆಗಳ ಮೊರೆ ಹೋಗಿರುವ ನನಗೆ,
ಅಲ್ಲಿಯೂ ಕನಸಾಗಿ ನನಗಿಂತ ಮೊದಲು ನೀ ಬಂದು ನನಗಾಗಿ
ಕಾದಿರಲಿ ಎನ್ನುವ ಸಲ್ಲದ ದುರಾಸೆ.//
ಕಾಮನೆಗಳ ಬಿಸಿಲುಗುದುರೆ ಏರಿ ಹೊರಟು
ಜಗವನ್ನೆಲ್ಲಾ ಸುತ್ತಿ ಬಳಲಿ ಬೆಂಡಾಗಿ ಬಂದರೂ....
ಎಲ್ಲೂ ಮನದ ಅಪೇಕ್ಷೆಯ ಸುಮ ಅರಳುವ ತಾಣ
ಕಡೆಗೂ ಕಾಣಸಿಗಲೇ ಇಲ್ಲ,
ಮತ್ತೆ ಮುಖ ಕಾಣದಿರಲು ಹುಟ್ಟಿಸಿ ಹೇಳಿದ ನೆಪಗಳೆಲ್ಲ
ಕೇವಲ ಪೇಲವ ಕಾರಣಗಳಾಗಿ
ಮನವ ಮೋಸಗೊಳಿಸಿದ ಮಾತುಗಳೆಲ್ಲ ಪ್ರಾಮಾಣಿಕ ಭಾವಗಳ ಇರಿದು ಹೋಗಿ....
ಹನಿ ನೆತ್ತರು ಕಾಣದೆ ಹೋಗಿದ್ದರೂ ಎಲ್ಲಾ
ನವ ನಾಳೆಗಳ ಕೊಲೆಯಾಗಿಹೋಗಿದೆ./
ಹಳೆಯದೊಂದು ಹುಂಬ ಕಸರತ್ತು
ತುಟಿಯಂಚಿನಲ್ಲಿ ಕಿರುನಗುವ ಹೊಮ್ಮಿಸುವ ಹಾಗೆ....
ನೀ ನೆನಪಾದಾಗ ನಾನು ಮುದಗೊಂಡು
ಮತ್ತೆ ಸ್ವಸ್ಥ ಚೇತರಿಸಿಕೊಳ್ಳುತ್ತೇನೆ ಅದೆಂತಹದ್ದೇ ಆತಂಕವಿದ್ದರೂ,
ಸಮಯಸಾಧಕ ಕೋಗಿಲೆಗೆ
ತುತ್ತುಣಿಸಿದ ಕಡುಗಪ್ಪು ಕಾಗೆಯಾಗುಳಿದಿದ್ದರೂ ಸರಿ....
ಒಲವು ಮತ್ತು ಆನಂದದಿಂದ ಉಬ್ಬೇರುತ್ತದೆ ಮನ
ತನ್ನ ಆಸರೆಯಲ್ಲಿದ್ದ ಕೋಕಿಲ ಮುಂದೆಲ್ಲೋ ಮರೆಯಲ್ಲಿ
ಉಲಿಯುವಾಗ ಕೇವಲ ಮಧುರ ಗಾನ ಸಿರಿ.//
ಇಂದಿನ ತನಕದ ಗಳಿಕೆಯೆಲ್ಲ ಹಾಗೇ ಖರ್ಚಾಗದೆ ಉಳಿದಿದ್ದರೆ
ನಾನಿಂದು ಎಲ್ಲರಿಗಿಂತ ಹೆಚ್ಚು ಮಾನ್ಯ....
ಸಂಬಂಧಗಳೆಲ್ಲ ಸಡಿಲಾಗದೆ ಮೊದಲ ಹಾಗೆ ಬಿಗಿಯುಳಿದಿದ್ದರೆ
ನಾನೂ ಆಗಿರುತ್ತಿದ್ದೆ ಹುಸಿ ನಾಟಕದ ಲೋಕದಲ್ಲೊಬ್ಬ ಅಗ್ರಗಣ್ಯ,
ಕರಗಿ ಹೋದ ಹಗಲಿಗೆ
ನಿತ್ಯದಂತೆ ವಿದಾಯ ಹೇಳಿದ ಕಾಲದ ಕೂಸು
ಮರಳಿ ಏರಿ ಕೂತಿತು ಇರುಳ ಕತ್ತಲ ಹೆಗಲಿಗೆ./
ಮರಳಿ ಗೂಡು ಸೇರಿದ ಹಕ್ಕಿಯ ಭಾವಗಳ ಮೇಲೆ
ಹಕ್ಕು ಸಾಧಿಸುವವರ್ಯಾರೂ ಕೊನೆಯವರೆಗೂ
ಕಾದು ಕೂತಿರೋದಿಲ್ಲ ಅನ್ನೋದು ಅದಕ್ಕೂ ಅರಿವಿದೆ.....
ಮಾಸದ ನೆನಪಿನ ಛಾಯೆಯ ಧಾರೆಯಡಿಯಲ್ಲಿ
ನಿತ್ಯ ನೆನೆವ ಮನ ತಪ್ತ
ಅಲ್ಲಲ್ಲಿ ಹನಿಯೊಡೆಯಲು ಕಾದ ಭಾವದ ಮೋಡಗಳೆಲ್ಲ ಇನ್ನೂ ಸುಪ್ತ,
ನೂತ ನೆನಪಿನ ನಾಲ್ಕು ದಾರಗಳನ್ನೆ ಬಳಸಿ
ನೇಯ್ದ ನವನವೀನ ಕುಲಾವಿಯೊಂದು
ನನ್ನನ್ನೆ ಪೂರ್ತಿ ಆವರಿಸಿ ನೀನಾಗಿಸಿ ಬಿಟ್ಟಿದೆ....
ಸುಳ್ಳನ್ನ ಸತ್ಯವನ್ನಾಗಿ ಸಾಧಿಸಲಿಕ್ಕೆ
ಮನಸು ಕಳ್ಳನಾಗಬೇಕಾಗುತ್ತದೆ
ತನು ಮಳ್ಳನಾಗಿಯೂ ನಟಿಸುತ್ತಿರಬೇಕಿರುತ್ತದೆ.//
No comments:
Post a Comment