Monday, September 30, 2013

ಕೊನೆಗುಳಿಯುವುದು ಮೂಕ ಮೌನ ಮಾತ್ರ......




ಕಡೆಯ ಕೊರಗೊಂದು ನನ್ನ ಇಂದಿಗೂ ಕಾಡುತ್ತಲೇ ಇದೆ
ಹೋಗುವ ಮೊದಲು ನೀನೊಮ್ಮೆ ತಿರುಗಿ ನೋಡಬೇಕಿತ್ತು,
ನನ್ನ ಕಣ್ಣ ಹನಿ ಹನಿಗಳಲ್ಲಾಗ ನಿನಗೆ
ನಿನ್ನ ಮುಖವೆ ಪ್ರತಿಫಲಿಸಿ ಕಾಣುತ್ತಿತ್ತು.......
ಅದೇನೆ ಇರಲಿ, ವಿಶಾಲ ದಾರಿಯಲ್ಲಿ ಒಂಟಿಯಾಗಿ ಸಾಗುವ
ಅನಿವಾರ್ಯ ಕರ್ಮಕ್ಕೆ,
ನನ್ನ ಮೌನ ಸಮ್ಮತಿಯ - ನಿನ್ನ ರೂಕ್ಷ ನಿರಾಕರಣೆಯ
ಸಾಂಗತ್ಯವಂತೂ ಇದ್ದೇ ಇದೆ/
ಕರೆದಾಗ ಬಾರದ
ಕರೆಯನ್ನ ಬೇಕಂತಲೆ ಕಿವುಡಾಗಿ ಕೇಳದ ಕಲ್ಲು ಮನವೆ,
ನಿನಗೆ ಮುಟ್ಟೀತೆ ನನ್ನ
ನಿತ್ಯದ ಆರ್ತ ಮನದ ಮನವಿ.....
ಸ್ವಯಂ ಶರಣಾಗತಿ ನಿಶ್ಪಾಪಿ ಮೌನದ್ದು
ಮಾತಿನ ಗದ್ದಲದ ಹಾಗೆ ತಲೆತಪ್ಪಿಸಿಕೊಳ್ಳುವ
ಅನಿವಾರ್ಯತೆ ಅದಕ್ಕಿಲ್ಲ.//



ರಚ್ಚೆ ಹಿಡಿವ ಮನ ಮಗುವನ್ನ ಸಂತೈಸಲಿಕ್ಕೆ
ನನ್ನಲ್ಲಿ ಯಾವುದೇ ಖಚಿತ ಪದಗಳಿಲ್ಲ
ಆದರೂ ನಿತ್ಯ ಮನದ ಖಾಲಿತನವನ್ನೆ ಬರಗೆಟ್ಟವನಂತೆ ಹುಡುಕಿ....
ಅವಸರಕ್ಕೊಂದು ಸಾಲನ್ನ ಹೆಣೆದು
ಹೊಸ ಹೊಸ ಲಾಲಿ ಹಾಡಿ ಸುಮ್ಮನಾಗಿಸಲು ಪರದಾಡುತ್ತೇನೆ,
ಪಕ್ಕಾ ಹುಚ್ಚ ನಾನು
ಹಾರೈಸುವೆನು - ಕೊರಗಿ ಕಣ್ಣೀರ ಕೋರೈಸುವೆನು....
ಗೊತ್ತು ಅವೆರಡಕ್ಕೂ ನಿನ್ನ ಕಣ್ಣಲ್ಲಿ
ಕನಿಷ್ಠ ಧೂಳಿನ ಬೆಲೆಯೂ ಇಲ್ಲಾ ಅಂತ/
ಗರೀಬ ಮನದ ಗಹನ ಪ್ರಯತ್ನಗಳ ಗುರಿಗಳೆಲ್ಲ
ಗೋರಿಯಲ್ಲಿಯೇ ಕೊನೆಯಾಗುವುದು ಹೌದಾದರೂ ಸಹ.....
ಅಲ್ಲಿಯವರೆಗೆ ನಡೆದು ಹೋದ ಸವೆದ ಬೆತ್ತಲೆ ಪಾದದ ಗಟ್ಟಿ ಗುರುತುಗಳು
ಬೆನ್ನ ಹಿಂದೆ ಹಿಂದೆ ಬೇಡದಿದ್ದರೂ ಉಳಿದೇ ಹೋಗಿರುತ್ತವೆ,
ಹೇಳಿ ಹೋದರೂನು ಕಾರಣ ಅದು ನಿಜವಾದುದಲ್ಲ
ಅಪದ್ಧ ಎನ್ನುವುದು ನಿನಗೂ ಗೊತ್ತು....
ಪ್ರಾಮಾಣಿಕವಾಗಿ ಹೇಳಬೇಕೆಂದರೆ
ನನಗಂದೇ ಅದು ಗೊತ್ತಿತ್ತು.//



ಘಳಿಗೆಗೊಂದು ತಲ್ಲಣವ ಹೊತ್ತು
ಕದಡಿ ಹೋಗುವ ಚಂಚಲ ಚಿತ್ತ....
ಅದ್ಯಾರೋ ಅಜ್ಞಾತ ಕುಸುರಿ ಕಲಾವಿದ
ತಾಳ್ಮೆಯಿಂದ ಬಿಡಿಸಿ ಅನಂತರ ಕೆಡೆಸಿದ ಅಪೂರ್ಣ ಚಿತ್ರ,
ವಿಷವಾದ ಅಮೃತವೋ?
ಅಥವಾ ಅಮೃತವಾದ ಮಧುರ ವಿಷವೋ?
ಹೌದು, ಏನು ನೀ ನನ್ನ ಪಾಲಿಗೆ?/
ಆಗಷ್ಟೆ ಸಾರಿಸಿದ ಮನೆ ಆಗಿತ್ತಲ್ಲ ಮನ ಆಗ
ಹೀಗಾಗಿ ನಿನ್ನ ಹಸಿ ಹೆಜ್ಜೆಗಳು ಅದರೆದೆಯ ಮೇಲೆ
ಹಾಗೆಯೆ ಅಚ್ಚಳಿಯದೆ ಉಳಿದೇ ಹೋಗಿದೆ.....
ಎಲ್ಲಾ ಸಂಕಟಗಳನ್ನ ಕ್ಷಣವಾದರೂ ಮರೆತು
ಅನಂತಶಯನನ ಹಾಗೆ ನಿಶ್ಚಿಂತನಾಗಿ ಮಲಗುವ ಆಸೆ
ಮನದಲ್ಲಿರೋದು ಫಲಿಸಿ ನಿಜವಾಗಲಿಕ್ಕೆ,
ಉಸಿರು ನಿಲ್ಲಲೇ ಬೇಕು ಎನ್ನುವ ನಿರ್ಬಂಧ
ಖಡ್ಡಾಯವಾಗಿಯೆ ಅನ್ವಯವಿದೆಯೇನೋ!//



ಪಾತ್ರಗಳು, ಪತ್ರಗಳು, ಸಣ್ಣ ಗೊಂಬೆ,
ಒಂದು ಮೃದು ಸ್ಪರ್ಶ, ಸಫಲವಾಗದೊಂದು ಕೊನೆಯ ವ್ಯರ್ಥ ಪ್ರಯತ್ನ......
ಕಣ್ಣೀರಾಗುವ ಮೌನಕ್ಕೆ ನೂರಾರು ಕವಲುಗಳ ದಾರಿ ತೆರೆದು ಕೊಂಡು
ಮನಸಿಗೆ ಗೊಂದಲದ ಗೂಡಾಗುವ ಹಾಗಾಗುತ್ತದೆ,
ಹೇಗೆ ನಿಭಾಯಿಸಲಿ ಹೇಳು?
ತುಟಿ ಬಿಚ್ಚದೆ ಗೌಪ್ಯವಾಗಿ ಬರಿ ನಿನ್ನ ನೆನಪುಗಳಷ್ಟೆ ತುಂಬಿರುವ ಇಂದು......
ಇನ್ನೂ ಬರಲಿಕ್ಕಿವೆ ಅಂತಹ ನೂರು ನಾಳೆಗಳೆ
ಸಾಗರದ ಬೆನ್ನು ಬಿಡದ ಅಲೆಗಳ ಸರಣಿಯಂತೆ ನನ್ನ ಮುಂದು/
ಕನಸನ್ನ ಎಂದೂ ಅರ್ಧಕ್ಕೆ ಕಂಡು ನಿಲ್ಲಿಸಬಾರದು
ಬಾಳಿನುದ್ದ ಅದು ನಿರಂತರ ದುಃಸ್ವಪ್ನವಾಗಿ ಕಾಡುತ್ತಿರುತ್ತದೆ....
ಸಾಗರದ ನೀಲದಲ್ಲಿ ಕರಗಿದ ಕಡುಕಪ್ಪು ದೋಣಿಯ ಕಣ್ಣುಗಳಲ್ಲೂ
ತೀರ ಸೇರಿಯೇ ತೀರುವ ತೀರದ ನಿರೀಕ್ಷೆ ಜೀವಂತವಾಗಿ ಹೊಳೆಯುತ್ತಿರುತ್ತದೆ,
ಸರಳ ಬಾಳಿನ ಕ್ಲಿಷ್ಟ ಲೆಕ್ಖಾಚಾರಗಳಿಗೆಲ್ಲ
ಪೂರ್ಣ ಗುಣಕದ ಜೊತೆ ಭಾಗವಾಗಿಯೂ....
ಸಹ ನೆನಪಿನ ಶೇಷ ಉಳಿಸುವ ಕೆಟ್ಟ ಚಾಳಿಯಿದೆ.//

No comments:

Post a Comment