"ನಿರ್ಭಯಾ" ಅತ್ಯಾಚಾರಿಗಳಿಗೆ ಕೊಲೆಯ ಕಾರಣಕ್ಕೆ ವಿಧಿಸಿದ ಮರಣದಂಡನೆ ಪ್ರಕಟವಾಗಿದೆ. ನಿಧಾನ ಗತಿಗೆ ಕುಖ್ಯಾತವಾದ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ತ್ವರಿತ ಗತಿಯಲ್ಲಿ ಗತಿ ಕಂಡ ಖ್ಯಾತ ಪ್ರಕರಣ. ಆದರೆ ಕೇವಲ ಮರಣದಂಡನೆ ಇದಕ್ಕೆ ಚಿಕಿತ್ಸೆಯ?. ಸೊಂಕಿನ ಮೂಲವನ್ನ ಹಾಗೆಯೆ ಬಿಟ್ಟು ಹೀಗೆ ಅನಂತರದ ಚಿಕಿತ್ಸೆಯ, ಆರೈಕೆಯ ಚರ್ಚೆ ಮಾಡುವುದೆ ಮೂರ್ಖತನ.
ಸುಮ್ನೆ XXX ಅಂತ ಟೈಪಿಸಿದರೂ ಸಾಕು, ಬಿಳಿ ತೊಗಲಿನ ಸಾವಿರಾರು ಕಾಮ ವಿಕಾರದ ಸೈಟುಗಳು ಕ್ಷಣದಲ್ಲಿ ಪರದೆಯ ಮೇಲೆ ಪ್ರತ್ಯಕ್ಷವಾಗುವ ದಿನಗಳಿವು. ಇಲ್ಲಿ ಪ್ರದೇಶವಾರು ಕಲಾವಿದ(?)ರ ಆಯ್ಕೆಯೂ ಇದೆ! ವೈವಿಧ್ಯಮಯ ಕಾಮದಾಟದ ಕ್ರೀಡಾಪಟುಗಳು(?!) ಲಿಂಗ-ಭಾಷೆ-ವಯಸ್ಸಿನ ಬೇಧ ತೋರದೆ ಇಲ್ಲಿ ನಿರಂತರ ಪ್ರಣಯದಾಟದ ಕಂಡು ಕೇಳರಿಯದ ದೊಂಬರಾಟ ಆಡುವುದನ್ನ ಬೆಚ್ಚಗೆ ಬೆಡ್'ರೂಮಿನಲ್ಲಿಯೆ ಕೂತು ಕಾಮಾತುರರಾಗಿ ಕಾಣುವ ಸುವರ್ಣಾವಕಾಶವನ್ನ ನಮ್ಮ ಸರಕಾರಿ ನೀತಿಗಳೆ ನಮಗೆ ಒದಗಿಸಿಕೊಟ್ಟಿವೆ. ಇಷ್ಟೆಲ್ಲಾ ಅನುಕೂಲ ಇರುವಾಗ ಯುವ ಮನಸ್ಸೊಂದು ಆರಾಮಾಗಿ ವಿಕೃತ ಉಮೇಶ್ ರೆಡ್ಡಿಯಂತಾಗದೆ ವಿವೇಕಾನಂದರ ಅಪರಾವತಾರ ಆಗಲಿಕ್ಕೆ ಸಾಧ್ಯವ?
ಮೃಗೀಯ ಕಾಮದ ಎಲ್ಲಾ ಸಾಧ್ಯತೆಗಳನ್ನ ಕೇವಲ ಬೆರಳ ತುದಿಯಷ್ಟು ದೂರದಲ್ಲಿಟ್ಟುಕೊಂಡು "ಅವಳ ಗುಪ್ತಾಂಗಕ್ಕೆ ಅಯ್ಯಯ್ಯೋ ರಾಡ್ ಹಾಕಿ ತಿರುಗಿಸಿದ ಪಶು!" ಅಂತ ಲೊಚಗುಟ್ಟುವ ನಮ್ಮದು ಆಶಾಡಭೂತಿ ನಡುವಳಿಕೆ. ರಾಡ್ ಒಂದೆ ಅಲ್ಲ ಇನ್ನೂ ಊಹೆಗೂ ನಿಲುಕದ ಏನೆನನ್ನೋ ಹಾಕಿ ವಿಕೃತ ಕಾಮ ಪಾಠವನ್ನ ಕಲಿಸುವ ಇಂತಹ ಸೈಟುಗಳಲ್ಲಿ ಕದ್ದು "ನೋಡಿ ಕಲಿ"ತವರು ಅವಕಾಶ ಸಿಕ್ಕಾಗ ಅದನ್ನೆ ಪ್ರಯೋಗಾತ್ಮಕ(!)ವಾಗಿ "ಮಾಡಿ ನಲಿ"ವ ಸಾಹಸಕ್ಕಿಳಿದಾಗ ಮಾತ್ರ ನಮ್ಮಲ್ಲಿರುವ ಮಡಿವಂತ ಮಾನವ ಇದ್ದಕ್ಕಿದ್ದಂತೆ ಜೀವಂತನಾಗುತ್ತಾನೆ!
No comments:
Post a Comment