Saturday, December 15, 2012
ಮೌನ ಮುರಿದ ಮಾತಿನ ಹರಿವಿನ ನಡುವೆ......
ಜ್ಞಾಪಕದ ಗೋಳವನ್ನು ಕೈಯಲ್ಲಿ ಹಿಡಿದು
ನಿನ್ನ ನೆಲೆಯನ್ನ ಅದರಲ್ಲಿ ಹುಡುಕುತ್ತಿರುವ.....
ನನ್ನ ಕಳವಳದ ಕೊನೆಗೆ ಇರುವುದು
ಕೇವಲ ನಿರಾಸೆಯ ಕುರುಹು,
ಮತ್ತೆ ಮತ್ತೆ ಮರುಕಳಿಸಿ ಮನವ ಕಾಡುವ
ಮೌನದ ಮಾತ ಹನಿಗಳೆಲ್ಲ....
ಮನಸಿನ ಮೋಡದೊಳಗೆ ಮಡುಗಟ್ಟಿವೆ/
ಇಬ್ಬನಿಯ ತೆರೆ ಕರಗಿ ಹನಿ ನೆಲ ಮುಟ್ಟುವ ಹೊತ್ತಿಗೆ
ಕನಸೊಡೆದ ಮನಸಿಗೆ ನಿನ್ನ ನೆನಪಾಯ್ತು....
ಕಡಿವಾಣವಿಲ್ಲದ ಕನಸಿನ ಕುದುರೆ ಅನುಮಾನವಿಲ್ಲದೆ
ನಿನ್ನೆದೆಯ ಗುರಿಯತ್ತಲೆ ದೌಡಾಯಿಸುತ್ತಿದೆ,
ಕನಸ ಕಡಲು ಅಗಾಧವಾಗಿದ್ದರೂ ನನಗೆ
ನಿರೀಕ್ಷೆ ಹಾಯಿದೋಣಿಯೇರಿ....
ಕೇವಲ ಕೈ ಹುಟ್ಟಿನ ಆಸರೆಯಿಂದಲೆ
ಅದನ್ನ ದಾಟುವ ಕಷ್ಟಸಾಧ್ಯ ಹಂಬಲ//
ಕನಸಿಗೆ ದುಗ್ಗಾಣಿಯ ಖರ್ಚಿಲ್ಲ
ಅದಕ್ಕೇನೆ ಈ ಜುಗ್ಗ ಮನಸು ಹಗಲಲ್ಲೂ....
ಬಿಟ್ಟಿ ಸಿಗುವ ಸ್ವಪ್ನಗಳ ಸೂರೆ ಹೊಡೆಯುವ
ಅವಕಾಶ ತಪ್ಪಿಸಿಕೊಳ್ಳಲ್ಲ!,
ಮನಸಿನ ತುಮುಲಗಳ ಜೊತೆಗೆ
ಜೂಟಾಟವಾಡುತ್ತಿರುವ ಭಾವ ತೀವೃತೆಗಳಲ್ಲೆಲ್ಲ.....
ಗೊಂದಲದ ಹಾಯಿದೋಣಿಗಳು ಓಲಾಡುತ್ತಿವೆ/
ಕಳವಳಗೊಂಡ ಮನಕ್ಕೆ
ನಿನ್ನ ಬಿಂಬ ಕನಸಿನಲ್ಲಿ ಕಾಣುವ ಕ್ಷಣವಷ್ಟೆ.....
ತಂಪಿನ ಅನುಭವವಾಗುತ್ತದೆ,
ಎಲ್ಲ ಚೌಕಟ್ಟುಗಳ ಮೀರಿ
ಕಟ್ಟುಪಾಡುಗಳೆಲ್ಲವನ್ನೂ ನೀಲಾಗಸಕ್ಕೆ ತೂರಿ....
ಕೇವಲ ನಿನ್ನ ನೆರಳಿನ ಗುರುತು ಹಿಡಿದು ನಡೆಯುತ್ತಿದ್ದವನಿಗೆ
ನಡುನೆತ್ತಿ ಮೇಲೆ ಸೂರ್ಯ ಬಂದ ಹೊತ್ತು.....
ನೆರಳಿನ ಜಾಡು ಕಾಣಿಸದೆ ಕಂಗಾಲಾದಂತೆ ನೆನ್ನಿನಿರುಳು ಕನಸಾಗಿತ್ತು//
ನಿರಾಳತೆಯೂ ಸುಖನಿದ್ರೆಯನ್ನ ತಂದು ಕೊಡಬಹುದು
ಎನ್ನುವ ಸತ್ಯ....
ಕೆಸುವಿನೆಲೆಯ ಮೇಲಿನ ನೀರ ಹನಿಯಾಗಲು ನಿರ್ಧರಿಸಿದ
ನೆನ್ನಿನಿರುಳ ಸುಖನಿದ್ರೆಯಲ್ಲಿ ಸಾಬೀತಾಯ್ತು,
ಸರಳವಲ್ಲದ ಬಾಳ ಹಾದಿಯಲ್ಲಿ ಸಿಗುವ
ಮುಳ್ಳುಗಳ ನಡು ನಡುವೆ......
ನಿನ್ನ ನಗುವ ಹೂಗಳನ್ನ ಹುಡುಕುವ
ನನ್ನ ಮನ ಮರುಳು/
ಇನ್ನೊಬ್ಬರ ಕನಸುಗಳ ಸಾಕಾರದಲ್ಲಿ
ಮೂಕ ಪ್ರೇಕ್ಷಕನಾಗುವಾಗ....
ನನ್ನಲಿರುವ ಕೊರತೆ ಕಾಡುವುದು
ನನ್ನೆದೆಯ ದೌರ್ಬಲ್ಯ,
ನಿರೀಕ್ಷೆ ಮನಸಿನ ಜೊತೆ ಬಿಡದ ತನಕ
ನಾಳಿನ ಕನಸಿನ ಆಸರೆ ಕೈತಪ್ಪಿ ಹೋಗದ ತನಕ.....
ನನ್ನ ಮನ ಸದಾ ನಿನ್ನ ನೆನಪಲ್ಲೆ ಭಾವುಕ//
ಕಾವಿಳಿದ ಬಾನು ಸುರಿವ ತಂಪಿನ ನಿಲ ವರ್ಷದಲ್ಲಿ
ತೋಯ್ದ ಭೂಮಿಯೆದೆಯೊಳಗಡೆ....
ಬೆಚ್ಚನೆ ನೆನಪುಗಳ ಸಂಚಿತ
ಸಂಗ್ರಹದ ದಾಸ್ತಾನಿದೆ,
ಬೆಳೆದು ಬಲವಾಗಿರುವ ಒಲವ ಹೆಮ್ಮರದ ತುದಿಯಲ್ಲಿ
ನಿರೀಕ್ಷೆಯ ಸ್ವಚ್ಛ ಗಾಳಿಗಾಗಿ ಕಾತರಿಸುವ....
ಕೊಂಬೆ ನಿನ್ನೆದುರು ಮಾತ್ರ ಸಮ್ಮತಿಯಿಂದ
ಕಷ್ಟಪಟ್ಟಾದರೂ ಬಾಗಲಿದೆ/
ಮೌನ ಮುರಿದ ಮಾತಿನ ಹರಿವಿನ ನಡುವೆ
ತೇಲುತ್ತಿರುವ ನೆನಪಿನ ಕಾಗದದ ದೋಣಿ....
ಕೈಲಾದಷ್ಟು ದೂರ
ಮುಳುಗುವ ಮುನ್ನ ಸಾಗಲಿದೆ,
ಸಂಶಯಕ್ಕೆ ಎಡೆಗೊಡದೆ ವರ್ತಿಸುತ್ತಿದ್ದ ಕನಸುಗಳೆಲ್ಲ
ಸಂಕಟದಲ್ಲಿ ಮುಳುಗಿ ಉಸಿರು ಕಟ್ಟಿ ನರಳಲಿಕ್ಕೆ....
ನನ್ನ ಕುರುಡು ನಂಬಿಕೆಗಳೆ
ನೇರ ಕಾರಣ//
Subscribe to:
Post Comments (Atom)
No comments:
Post a Comment