Saturday, December 15, 2012
ನೋವಿನ ಮಾ ನಿಷಾದದಲ್ಲಿಯೆ......
ವಿರಹ ಯಾನಕ್ಕೆ ಸಿಕ್ಕವ ಸುಮ್ಮನೆ ಇದ್ದ ನಾ ಕವಿಯಾದೆ
ನೆನಪಿನ ಬುತ್ತಿ ಬಿಚ್ಚುತ ಕೂತ ನನ್ನ ಕಹಿ ಉಣಿಸಿನ ನಡುವೆ......
ನೀ ಕೊಂಚ ಮಾತ್ರ ಅನಿರೀಕ್ಷಿತವಾಗಿ ಸಿಗುವ ಸವಿಯಾದೆ,
ಇನ್ನೇನಿದ್ದೀತು ಹೇಳು ನನ್ನ ತಪ್ತ ಮನದ ಇರಾದೆ?
ನಾವಿಬ್ಬರೂ ಇಬ್ಬರೆಂದು ಕೊಂಡಿರಲಿಲ್ಲ ನಿನ್ನೊಂದಿಗೆ ನಾ ಸೇರಿ ಹೋಗಿದ್ದ ಮೇಲೆ.....
ನನ್ನ ಮನಸೊಂತರ ನಿನ್ನ ಕನಸ ಕೃಷ್ಣನಲ್ಲಿ ಐಕ್ಯವಾದ ರಾಧೆ/
ಆತ್ಮ ವಿಮರ್ಶೆಯ ಧಶರಥನಾಗಿದೆ ಮನಸು
ಬಹಿರಂಗ ಒಡ್ಡೋಲಗಗಳಲ್ಲಿ ನಿರ್ಭೀತವಾಗಿ ಮನದ ಕನ್ನಡಿಯಲ್ಲಿ....
ಮುಖದ ಕನ್ನಡಿಯನ್ನ ನೋಡಲಿದು ಕಲಿತಿದೆ
ತಪ್ಪುಗಳನ್ನ ಕಂಡು ಕೊಳ್ಳುವ ಪರಿಯಲ್ಲಿದು ಬಲಿತಿದೆ,
ಮನ ಕೈಕೇಯಿ
ಅದರ ಕಿವಿ ಕಚ್ಚುವ ಆಕ್ಷಾಂಶೆಯ ಸ್ವಪ್ನಗಳೆ ಮಂಥರೆ.....
ಲೋಕಕ್ಕೇನು ನಷ್ಟ ಹೇಳು
ನಾನು ನಿನ್ನ ನೆನಪ ನಿಲ್ದಾಣದಲ್ಲಿಯೆ ಶಾಶ್ವತವಾಗಿ ನಿಂತರೆ?//
ಮಂದ್ರ ಮಾರುತದ ಜೊತೆಯಲ್ಲಿ ಮೆಲುಮಾತನ್ನಾಡುವ
ಮರದ ಎಲೆಗಳ ಎದೆಯಲ್ಲೆಲ್ಲ ಸುಪ್ತ ಸ್ವಪ್ನಗಳದ್ದೆ ಕನವರಿಕೆ......
ಚಳಿಯ ನಡುಕದ ನಡುವೆ
ಮನದ ಬನದಲ್ಲಿ ನಿನ್ನ ನೆನಪಿನ ಸುಮ ಅರಳಿದ್ದು,
ನನ್ನೆದೆಯೊಳಗೆಲ್ಲ ಪರಿಮಳವನ್ನೇಳಿಸುತ್ತಿದೆ/
ಇಬ್ಬನಿಯ ಹನಿಯೊಳಗೆ ಅಡಗಿರುವ ಇನಿದನಿಗೆ
ಮೌನ ಸಮ್ಮತಿಯಿತ್ತ ಇಳೆ.....
ಸುಮ್ಮನೆ ಮಾತು ಮರೆತು ಇಂದು ನಸುಕದರಲ್ಲಿ ಮಿಂದಳೆ?,
ಬಾನ ಒಲವಲ್ಲಿ ತನ್ಮಯ ಲೀನಳಾಗಿ
ಅದರ ತಂಪಲ್ಲಿ ತೋಯ್ದು ನಿಂದಳೆ?
ನೋಡಿ ಅವಳ ಮುಖದಲ್ಲದೇನು ಸಂತೃಪ್ತಿಯ ಕಳೆ!//
ಮನಸು ಚಂಚಲಗೊಳ್ಳುವ ಕ್ಷಣಗಳಲ್ಲೆಲ್ಲ
ಹಿಡಿತ ಮೀರಿ ಕಣ್ಣು ತೇವಗೊಳ್ಳುವ ಪರಿಗೆ......
ನನ್ನೊಳಗೇನೆ ನನಗೆ ಪ್ರಶ್ನೆಗಳೇಳುತ್ತಿವೆ,
ಸಂಕಟಗಳನ್ನೆಲ್ಲ ನುಂಗಿ ಸಂಭ್ರಮದ ಹಾದಿ
ಹುಡುಕುವ ಕ್ಷಣದಲ್ಲಿಯೆ ಕನಸಿನ ಪುಗ್ಗೆಯೊಡೆದು ಚೂರಾಗಿ ಹೋದರೂ...
ನಿರೀಕ್ಷೆಗಳ ಸೆಲೆ ನನ್ನೆದೆಯಂಗಳದಲ್ಲಿ ಬತ್ತಿ ಹೋಗದೆ ಹಾಗೆಯೆ ಉಳಿದಿದೆ/
ಸಂಕಟಗಳನ್ನೆಲ್ಲ ನುಂಗಿ ಸಂಭ್ರಮದ ಹಾದಿ ಹುಡುಕುವ ಕ್ಷಣದಲ್ಲಿಯೆ
ಕನಸಿನ ಪುಗ್ಗೆಯೊಡೆದು ಚೂರಾಗಿ ಹೋದರೂ....
ನಿರೀಕ್ಷೆಗಳ ಸೆಲೆ ನನ್ನೆದೆಯಂಗಳದಲ್ಲಿ
ಬತ್ತಿ ಹೋಗದೆ ಹಾಗೆಯೆ ಉಳಿದಿದೆ,
ಮನಸು ಚಂಚಲಗೊಳ್ಳುವ ಕ್ಷಣಗಳಲ್ಲೆಲ್ಲ ಹಿಡಿತ ಮೀರಿ
ಕಣ್ಣು ತೇವಗೊಳ್ಳುವ ಪರಿಗೆ......
ನನ್ನೊಳಗೇನೆ ನನಗೆ ಪ್ರಶ್ನೆಗಳೇಳುತ್ತಿವೆ//
ಮರೆತು ಹೋಗದ ನೆನಪು ನೀನು
ಇನ್ನೆಲ್ಲರತ್ತ ನಿರ್ಲಕ್ಷಿತನಾಗಿರುವ ನನಗೆ.....
ನಿನ್ನ ನನ್ನೊಳಗಿಂದ ತೊಳೆದು ಹಾಕಲು
ಯಾವುದೆ ಭಾವ ಮಾರ್ಜಕಗಳು ಬಳಿಯಿಲ್ಲವಲ್ಲ!,
ಕಥೆ ಬಗೆ ಹರಿದರೂನು ಕೊನೆಯಾದದ್ದು ವಿಷಾದದಲ್ಲಿಯೆ
ಮನಸೊಳಗೆ ನಿರಾಸೆಯ
ನೋವಿನ ಮಾ ನಿಷಾದದಲ್ಲಿಯೆ/
ಮನಸ ಖಾಲಿ ಹಾಳೆಯ ಮೇಲೆ ಬರೆದೇನು
ಕನಸ ಹೃದಯದ ಭಿತ್ತಿಯ ಮೇಲೆ
ಕಣ್ಣ ಮೊನೆಯಿಂದಲೆ ಕೊರೆದೇನು....
ಆದರೆ ಅದನ್ನ ಓದಿ ಸಂಭ್ರಮಿಸ ಬೇಕಿದ್ದ ನೀನೆ
ನನ್ನ ಪರಿಧಿಯಿಂದ ನಾಪತ್ತೆಯಾದ ಮೇಲೆ ನನಗಿನ್ನೇನಿದ್ದರೇನು?,
ನಿನ್ನೆದೆಯಲ್ಲಿ ಕಾಲಡಿಯ ಕಸವಾಗಿರುವ
ನನ್ನ ಕನಸು.....
ನನ್ನೆದೆಯ ಒಳಮನೆಯಲ್ಲಿ ಮಾತ್ರ
ಅಮೂಲ್ಯ ಕಸವರ//
Subscribe to:
Post Comments (Atom)
No comments:
Post a Comment