ಹೊರಗೆ ಹನಿ ಹನಿ ತುಂತುರು ಮಳೆ,ಆಳುವ ಮಂದಿಯ ಕೃಪೆಯಿಂದ ಊರೆಲ್ಲ ಇಳಿಸಂಜೆಯಲ್ಲಿ ನನ್ನಂತೆಯೆ ವಿಷಾದಕ್ಕೆ ಜಾರಿದ ಹಾಗೆ ಕತ್ತಲಲ್ಲಿ ಮುದುಡಿ ಮುಳುಗಿದೆ...ನಿನ್ನ ನೆನಪಿನ ತುಂತುರಲ್ಲಿ ಒಳಗೂ-ಹೊರಗೂ ನೆನೆಯುತ್ತ ಈ ಕತ್ತಲ ಹಾದಿಯನ್ನ ಸವೆಸುತಿದ್ದೇನೆ.ನಿನ್ನನ್ನೆ ಕ್ಷಣಕ್ಷಣಕ್ಕೂ ಮೌನದಲ್ಲೇ ಜಪಿಸುತ್ತಿದ್ದೇನೆ.ಎಷ್ತೋದು ಒಂಟಿಯಾದೆನಲ್ಲ ನಾನು,ಹೋಗಹೋಗ್ತಾ, ನೀನು ಹಾಗೆಯೆ ಹೋಗಲಿಲ್ಲ ;ನನ್ನ ನೆಮ್ಮದಿ,ಖುಷಿ,ಗೆಲುವನ್ನೆಲ್ಲ ಜೊತೆಗೆ ಗಂಟು ಕಟ್ಟಿಕೊಂಡು ದೂರ ಸರಿದೆ.ಮತ್ತೆ ನನ್ನ ಬಾಳಿನ ಬುಟ್ಟಿಯ ತುಂಬಾ ಸಂಕಟದ ಮುಳ್ಳುಗಳನ್ನೆ ಸುರಿದೆ.
ಹುಟ್ಟಿನಿಂದಲೂ ನನಗೇನೆ ದೊಡ್ಡ ಪ್ರಶ್ನೆಯಾಗಿದ್ದ ನನ್ನೊಳಗಿನ ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ನನಗೂ ಬಾಳಿನ ಸಂಭ್ರಮದ ಅಸಲು ಪರಿಚಯ ಆದದ್ದು ನಿನ್ನಿಂದ.ಕಾರಣವೆ ಇಲ್ಲದ ನಮ್ಮ ಸುತ್ತಾಟಗಳು-ಜಂಟಿ ಪ್ರವಾಸಗಳು-ಕಲಾಕ್ಹೇತ್ರದ ತೀರ್ಥಯಾತ್ರೆಗಳು-ಟೌನ್'ಹಾಲಿನ ಉದ್ದನುದ್ದ ಮೆಟ್ಟಲುಗಳ ಮೇಲೆ ಕೂತು ನಾವು ಹೆಣೆದಿದ್ದ ಕನಸುಗಳ ಜಾತ್ರೆಗಳು-ಇಂಡೋ ಜರ್ಮನ್ ಸಿನಿಮಾ,ಬೆಂಗಳೂರು ಹಬ್ಬ ಅಂತೆಲ್ಲ ನಡೆಸಿದ್ದ ಹುಚ್ಚುಹುಚ್ಚು ಓಡಾಟಗಳು,ಗಾಂಧಿನಗರದ ಸಂದುಗೊಂದುಗಳ ಶ್ರದ್ಧಾಪೂರ್ವಕ ಅನ್ವೇಷಣೆಗಳು...ಓಹ್, ಬಾಳು ಎಷ್ಟೊಂದು ಸೋಗಸಾಗಿತ್ತಲ್ಲ ಆಗೆಲ್ಲ!
ಹೀಗೆ ಅರಿವಿಲ್ಲದೆ ಹೊಸತೊಂದು ಸಂತಸದ ಹಾಡನ್ನ ನಾನು ಹೆಚ್ಚುಹೆಚ್ಚು ಗುನುಗೋಕೆ ಕಾರಣವಾಗಿದ್ದುದು ಕೇವಲ ನೀನು.ನಿನ್ನ ಒಡನಾಟ.ನನ್ನ ಪಾಲಿಗೆ ಆತ್ಮದ ಬಂಧುವೆ ಆಗಿರುವ ನಿನ್ನೊಟ್ಟಿಗೆ ಹಂಚಿಕೊಂಡಿದ್ದ ಬಂಧಕ್ಕೆ ಯಾವುದೊ ಸಂಬಂಧದ ಚೌಕಟ್ಟನ್ನ ತೊಡಿಸಿ 'ಇದಿಷ್ಟೇ' ಅಂತ ವಿವರಿಸೋಕೆ ನನಗಂತೂ ಸಾಧ್ಯವೇ ಇಲ್ಲ.ಬರಡಾಗಿದ್ದ ನನ್ನ ಬಾಳಿನ ಅಂಗಳದಲ್ಲೂ ಸುಗಂಧದ ಹೂಗಳನ್ನರಳಿಸಿದ್ದ ನೀನು ನನ್ನ ಪಾಲಿಗೆ ಆಗಲು ಸಾಧ್ಯವಾದ ಎಲ್ಲವೂ ಆಗಿದ್ದೆ.
ಮೊದಲಿನಿಂದಲೂ ಒಂಟಿತನದಿಂದ ಒಳಗೊಳಗೆ ಮುದುಡಿದ್ದ ನನ್ನ ಮನಸನ್ನೂ ನೀ ಹೊರಜಗತ್ತಿಗೆ ತೆರೆದೆ ನೋಡು.ಎಲ್ಲವೂ ಹೊಸತಾಗಿಯೆ ಕಾನಿಸಿದಂತಾಗಿ.ಅನವಶ್ಯಕವೆಂದೆನಿಸುವ ಮಟ್ಟಿಗಿನ ನಿನ್ನೊಂದಿಗಿನ ಹರಟೆಗಳೂ ಇಷ್ಟವಾಗೊದಕ್ಕೆ ಶುರುವಾಯ್ತು.ಅದಕ್ಕೆ ತಕ್ಕಂತೆ ನನ್ನಷ್ಟೆ ತಿಕ್ಕಲುತಿಕ್ಕಲಾಗಿ ಹೊತ್ತುಗೊತ್ತಿಲ್ಲದೆ ನಾ ಕರೆದಲ್ಲಿಗೆ ನೀನೂ ಸಹ ದೂಸರ ಮಾತಿಲ್ಲದೆ ಹೊರಡುತ್ತಿದ್ದೆ.ಯಾರೂ ಇಲ್ಲ ನನಗಾಗಿ ಅನ್ನುವ ಕತ್ತಲಲ್ಲಿ ನಾನಿದ್ದೀನಿ ಅನ್ನೋ ಬೆಳಕಾಗಿ ನೀ ಗೋಚರಿಸಿದ ಮೇಲೆ ಇನ್ನೇನಿತ್ತು ಹೇಳು? ಆವರೆಗೂ ಶಾಪಗೃಸ್ಥ ಅಶ್ವತ್ಥಾಮನಂತೆ ಮನಸ್ಸು ಪೂರ್ತಿ ತೊನ್ನು ಹಿಡಿಸಿಕೊಂಡ ಅತೃಪ್ತ ಆತ್ಮವಾಗಿ ದಿಕ್ಕುದೆಸೆಯಿಲ್ಲದೆ ಅಲಿಯುತ್ತಿದ್ದ ನಾನು ಅಷ್ಟೂ ವರ್ಷಗಳ ಅಸಲು-ಬಡ್ಡಿ ಸಮೇತ ಮರೀಚಿಕೆಯಾಗಿದ್ದ ಸಣ್ಣಸಣ್ಣ ಖುಷಿಗಳನ್ನೆಲ್ಲ ಬಿಂದಾಸ್ ಲೂಟಿ ಹೊಡೆಯುವ ಉಮೇದಿಗೆ ಏರಿದ್ದೆ.ನನ್ನದೆ ಆದ ಅಹಂಕಾರಗಳು-ನಿನ್ನ ಪುಟ್ಟಪುಟ್ಟ ಈಗೋಗಳು ಇಬ್ಬರಲ್ಲೂ ಸಾವಿರವಿದ್ದರೂ ಅವೆಂದೂ ನಮ್ಮ ಸಾಮಿಪ್ಯಕ್ಕೆ ಅಡ್ಡಿಯಾಗಲಿಲ್ಲ.ಆದರೆ ಒಮ್ಮೆಲೆ ಅದೇನಾಯಿತೊ ನನಗಂತೂ ಒಗಟು .ನಿನ್ನ ಆದ್ಯತೆಗಳು ಬದಲಾದವು ಡಾಲರ್ ಮೋಹವೂ ನಿನ್ನನ್ನ ಅಕಾಲದಲ್ಲಿ ಆವರಿಸಿ ನೀನು ವಿಭಿನ್ನವಾಗಿ ನನಗೆ ಗೋಚರಿಸತೊಡಗಿದ ಮೇಲೆ ಮತ್ತೆ ಮೊದಲಿನ ನಲಿವೆಲ್ಲ ನಿಧಾನವಾಗಿ ಮರೆಸೆರಿದವು.ನೀನು ಅದೆಲ್ಲೊ ಅಮೇರಿಕಾದ ಗಲ್ಲಿಗಳಲ್ಲಿ ಡಾಲರ್'ಹೊಳಪನ್ನ ಕಣ್ಣಲ್ಲಿ ತುಂಬಿಸಿಕೊಳ್ಳುತ್ತಾ ಅದರಲ್ಲೆ ಸಂತಸವ ಹುಡುಕುತ್ತಿದ್ದೀಯ.ನಾನಿನ್ನೂ ನಿನ್ನ ಧಡೀರ್ ಪರಿವರ್ತನೆಯಿಂದ ಇನ್ನೂ ಚೇತರಿಸಿಕೊಳ್ಳಲಾಗದೆ ಇಲ್ಲಿ ನಿನ್ನ ಬಿಂಬವನ್ನೆ ನನ್ನ ಕಂಗಳ ಸ್ಕ್ರೀನ್'ಸೇವರ್ ಮಾಡಿಕೊಂಡು ಅಬ್ಬೇಪಾರಿಯಂತೆ ಅಲಿಯುತ್ತಿದ್ದೇನೆ.ನೀನಗೀಗ ನನ್ನ ಮೇಲೆ ಇರಬೇಕಾದಷ್ಟು ಪ್ರೀತಿ ಇಲ್ಲದಿದ್ದರೂ ಇರಬಾರದಷ್ಟು ಕೋಪ ಮಾತ್ರ ತುಂಬಿದೆ.
ಅದೆಲ್ಲೊ ಅಡಗಿದ್ದ ಮನಸ್ಸಿನ ತೊನ್ನು ಮತ್ತೆ ಮೇಲೆದ್ದು ಬಂದಿವೆ,ಅತೃಪ್ತತೆ ತುಂಬಿ ತುಳುಕಾಡುತ್ತಿದೆ.ಹೊರಪ್ರಪಂಚದ ಮಂದಿಗೆ ಹೊರನೋಟಕ್ಕೆ ವಿಭಿನ್ನವಾಗಿ ಗೋಚರಿಸುವ ನಾನು ಒಳಗೊಳಗೆ ಪ್ರತಿ ನಿಮಿಷವೂ ಸೋಲುತ್ತಿರೋದು ಯಾರಿಗೂ ಗೊತ್ತಾಗದಂತೆ ಇರುತ್ತದೆ ನನ್ನ ಬಾಹ್ಯ ವರ್ತನೆ.ಹೋಲಿಸಿ ನೋಡಿದರೆ ಮೇಲೆ ಕಾಣುವ ನನಗೂ-ಕಳವಳದಲ್ಲಿ ತೇಲುವ ನನ್ನೊಳಗಿನ ನನಗೂ ಚೂರೂ ತಾಳೆಯಾಗದೆ ನನ್ನೊಳಗಿನ ಈ ತಾಕಲಾಟ ಕಂಡವರು 'ಖಂಡಿತ ಇವನಿಗೆ ಹನ್ನೆರಡಾಣೆ ಕಮ್ಮಿಯಾಗಿದೆ' ಎಂದುಕೊಳ್ಳುವುದರಲ್ಲಿಯೂ ಸಂಶಯ ನನಗಿಲ್ಲ.ಆದರೊಂದು ನಿಜ ಹೇಳಲಾ.ನಿನ್ನ ಹೊರತು ನಾನು ಜೀವಂತ ಓಡಾಡಿಕೊಂಡಿರುವ ಹೆಣ ಮಾತ್ರ.ಉಸಿರಾಡುತ್ತಾ ಓಡಾಡುವ ಅದಾಗಲೆ ಸತ್ತ ನನಗೆ ನಿನ್ನ ಹೆಗಲಿನಾಸರೆಯಲ್ಲಷ್ಟೆ ಮುಕ್ತಿ ಪ್ರಾಪ್ತಿಯಾದೀತು.ಈ ಬದುಕೆಂಬ ಕೃತಕ ವೆಂಟಿಲೇಶನ್'ನ ನರಕದಿಂದ ನಾನು ಪಾರಾಗುವ ಮೊದಲಾದರು ನಿನ್ನ ಬೆಚ್ಚಗಿನ ಅಂಗೈಯಲ್ಲಿ ಮತ್ತೆ ನನ್ನ ಕೈ ಸೇರಿಸುವುದೊಂದೆ ನನಗಿರುವ ಆಸೆ.ಆದರೆ ಈ ಆಸೆಯೂ ಇನ್ನುಳಿದ ಎಲ್ಲಾ ಅಸೆಗಳಂತೆ ಬರಿಯ ಆಸೆಯಾಗಿಯೆ ಈಡೇರದೆ ಉಳಿದು ಬಿಡುವ ಖಚಿತತೆ ಇದ್ದರೂ ನಾನು ಕನಸಿಸೋದನ್ನ ಬಿಡಲಾರೆ...ನಿತ್ಯ ನಿನ್ನ ನೆನೆಯೋದನ್ನ ಬಯಸಿದರೂ ನನಗೆ ಬಿಡಲಾಗದಂತೆ ಇದೂನು ಜನ್ಮಕ್ಕಂಟಿದ ಗೀಳಾಗಿಯೆ ಉಳಿದಿರುತ್ತದೆ.ಹಿಂದಿನಂತೆ ನನ್ನೆದೆಯ ಕದತಟ್ಟಿ ಅದನ್ನ ಕೇಳಿಸಿಕೊಳ್ಳೋಕೆ ನೀನಲ್ಲಿರೋಲ್ಲ ಅಷ್ಟೆ.
ಖಾಸಗಿ ಕನವರಿಕೆಗಳನ್ನ ಹೀಗೆ ಜಾಹೀರು ಮಾಡುವಲ್ಲಿಯೂ ನನ್ನದೊಂದು ದೂರದ ಆಸೆಯಿದೆ.ನನ್ನ ಯಾವ ಮಾತಿಗೂ ನಿನ್ನ ಪ್ರತಿಕ್ರಿಯೆಯ ನಿರೀಕ್ಷೆಯಿಲ್ಲ,ಆದರೂ ಮರಳಿ ಬಾರದಂತೆ ನೀನು ನನ್ನ ಪರಿಧಿಯಿಂದ ದೂರ ಸರಿದಿದ್ದರೂ ಕೂಡ ಎಲ್ಲೋ ಒಂದೆಡೆ ಈ ನನ್ನ ಹಪಾಹಪಿ ನಿನ್ನ ಗಮನಕ್ಕೆ ಬರಲಿ.ನಿನ್ನ ಹೊರತು ನಾನು ಪಡುತ್ತಿರುವ ಯಾತನೆ.
No comments:
Post a Comment