Saturday, October 15, 2011

ಮರಳುಗಾಡಿನ ಮರ್ಮರ...(ಭಾಗ -4)

ಇಸ್ಮಾಯಿಲ್'ನ ವಂಶಸ್ಥರಲ್ಲಿ ಅವರ್ ಬಿನ್ ಲುಹಾಯಿ ಪ್ರಸಿದ್ಧನಾಗಿದ್ದ.ಬಲು ಧರ್ಮಿಷ್ಠನಾಗಿದ್ದ ಆತ ತನ್ನ ಉದಾರ ದಾನ-ಧರ್ಮಗಳ ಕಾರಣದಿಂದ ಜನಾನುರಾಗಿಯಾಗಿದ್ದ.ಈ ಜನಪ್ರಿಯತೆಗೆ ಮಾರುಹೋದ ಅಲ್ಲಿನ ಬುಡಕಟ್ಟಿನವರು ಅವನನ್ನೆ ತಮ್ಮ ರಾಜನನ್ನಾಗಿ ಘೋಷಿಸಿಕೊಂಡರು.ಮೆಕ್ಕಾ ಹಾಗು ಅಲ್ಲಿನ ಕಾಬಾ ಅವನ ಆಳ್ವಿಕೆಗೆ ಒಳಪಟ್ಟಿತ್ತು.ಮಧ್ಯಪ್ರಾಚ್ಯದ ದೇಶಗಳಾದ ಸಿರಿಯಾ,ಲೆಬೆನಾನ್ ಹಾಗೂ ಪ್ಯಾಲಸ್ತೈನ್'ಗಳನ್ನು ಸಂದರ್ಶಿಸಿದ ಆತ ಅಲ್ಲಿನ ವಿಗ್ರಹಾರಾಧನೆಗಳಿಂದ ಅತ್ಯಂತ ಪ್ರಭಾವಿತನಾಗಿ ಅಲ್ಲಿಂದ ಮರಳುವಾಗ ತನ್ನ ಜೊತೆಯಲ್ಲಿಯೆ ಮೆಕ್ಕಾಗೆ ಒಂದು ವಿಗ್ರಹ ತಂದ.'ಹುಬಾಬ್' ಎಂದು ಆತ ಅದನ್ನು ಕರೆದು ಕಾಬಾದಲ್ಲಿ ಅದನ್ನ ಪ್ರತಿಷ್ಠಾಪಿಸಿದ.ತನ್ನ ಜನರಿಗೆ ಅದನ್ನ ಆರಾಧಿಸಲು ಆತ ಕರೆನೀಡಿದ.ತಮ್ಮ ರಾಜನ ಆಗ್ರಹಕ್ಕೆ ಮಣಿದ ಬುಡಕಟ್ಟಿನ ಮಂದಿ ಮತ್ತೆ ಹಳೆಯ ವಿಗ್ರಹಾರಾಧನೆಗೆ ಮರಳಿದರು.

ಇಸ್ಲಾಮಿಕ್ ನಂಬಿಕೆಗಳ ಪ್ರಕಾರ ಅಬ್ರಾಹಂ ಹಾಗೂ ಇಸ್ಮಾಯಿಲ್ ಕಾಬಾವನ್ನು ನಿರ್ಮಿಸಿದ ಬಳಿಕ ಅದರ ಒಡೆತನವನ್ನು "ಜೋರ್'ಹೂಮ್" ಬುಡಕಟ್ಟಿನವರು ತಮ್ಮ ವಶಕ್ಕೆ ತೆಗೆದುಕೊಂಡರು.ಆದರೆ ಅವರ ದುಂಡಾವರ್ತಿ ನಡೆ ಹೆಚ್ಚಿದ್ದರಿಂದ ಮೆಕ್ಕಾದ ಖುರೈಷಿ ಪಂಗಡದವರು ಅವರನ್ನು ಅಲ್ಲಿಂದ ಹೊಡೆದೋಡಿಸಬೇಕಾಯಿತು.ಖುರೈಷಿಗಳಲ್ಲಿ ಹುಲುಲ್ ಹಾಗೂ ಅರಾಮ್ ಎಂಬ ಎರಡು ಪಂಗಡಗಳಿದ್ದವು.ಅಲ್ಲದೆ 'ಬಾನ್ ಕಿನಾನಾಹ್' ಎನ್ನುವಲ್ಲಿಂದ ವಲಸೆ ಬಂದಿದ್ದ ಅನೇಕ ಕುಟುಂಬಗಳೂ ಮೆಕ್ಕಾದಲ್ಲಿ ವಾಸವಿದ್ದವು.ಖುರೈಷಿಗಳ 'ಕಹುಜಾಹ್ನ್' ಎಂಬಾತ ಕಾಬಾದ ಪಾರುಪತ್ಯ ವಹಿಸಿಕೊಂಡ.ಅನಂತರದ ಪಾರುಪತ್ಯದ ಜವಾಬ್ದಾರಿ ಅವನ ಸಂತತಿಯವರಿಗೆ ಸಂದಿತು.ಅವರು ಮುಂದೆ ಹಲೀಲ್ ಬಿನ್ ಹುಬೈಷಾ ಎಂಬಾತನಿಗೆ ಅದನ್ನ ವಹಿಸಿಕೊಟ್ಟರು.ಈ ಹಲೀಲ್'ನ ಮಗಳನ್ನು ಕುಸೈ ಬಿನ್ ಕಿಲಾಬ್ ಎಂಬಾತ ಲಗ್ನವಾಗಿ ಹಲೀಲ್ ಮರಣ ಹೊಂದಿದ ಬಳಿಕ ಬುಡಕಟ್ಟಿನ ಇತರ ಆಕ್ಷಾಂಶಿಗಳೊಂದಿಗೆ ಕಾದಾಡಿ ಕಾಬಾದ ಪಾರುಪತ್ಯಕ್ಕೆ ಪ್ರಯತ್ನಿಸಿದ.ಅಂತಿಮವಾಗಿ ಒಪ್ಪಂದವೊಂದು ಜರುಗಿ ಖುರೈಶಿಗಳಿಗೆ ಅಲ್ಲಿ ಹೆಚ್ಚಿನ ಅಧಿಕಾರ ಇರುವುದಾಗಿ ತೀರ್ಮಾನ ಹೊರಬಿದ್ದು ಅವನಿಗೆ ಕಾಬಾದ ಪಾರುಪತ್ಯವನ್ನ ಅವರ ಸಮ್ಮತಿ ಪಡೆದು ವಹಿಸಲಾಯ್ತು.ಅವನು ಕ್ರಮೇಣ ತನ್ನವರನ್ನಲ್ಲಿಗೆ ಬರಮಾಡಿಕೊಂಡು ಮುಂದೆ ತಾನೆ ಅಲ್ಲಿನ ರಾಜ ಎಂದು ಕರೆದುಕೊಂಡ!

ಕುಸೈನ ಆಡಳಿತದಲ್ಲಿ ಕಾಬಾಕ್ಕೆ ಬರುವ ಯಾತ್ರಿಕರಿಗೆ ನೀರು ನೀಡುವ ಪವಿತ್ರ ಕಾರ್ಯ ,'ಎನ್-ನದ್ವಾ' ಸಭಾಂಗಣದ ಯಜಮಾನಿಕೆ,ಯುದ್ಧ ದ್ವಜದ ಸ್ವಾಧೀನತೆ ಅವನ ಬಳಿಯೆ ಇತ್ತು.ಅವನ ನಂತರ ಅವನ ನಾಲ್ವರು ಮಕ್ಕಳು ಸೌಹಾರ್ದತೆಯಿಂದ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡದಂತೆ ತಂದೆ ಹಾಕಿಕೊಟ್ಟಿದ್ದ ದಾರಿಯಲ್ಲೆ ಆಡಳಿತದ ಯಜಮಾನಿಕೆ ನಡೆಸಿದರು.ಆನಂತರ ಅವನ ಸಹೋದರರ ಮಕ್ಕಳ ಕೈಮೇಲಾಗಿ ಖುರೈಶಿಯರ ಅಬ್ಬೆ ಮುನಾಫನ ಮಗ ಅಲ್-ಮುತ್ತಲಿಬ್ ಪ್ರಮುಖನಾಗಿ ಹೊಮ್ಮಿದ.ಅವನ ನಂತರ ಮೆಕ್ಕಾ ಅವನ ತಮ್ಮ ಹಾಶೀಮನ ಕೈಸೇರಿತು.ಆದರೆ ಉಮಯ್ಯ ಎಂಬಾತ ಚಿಕ್ಕಪ್ಪನ ಮೇಲೆ ಹಕ್ಕಿಗಾಗಿ ವಾಜ್ಯ ಹೂಡಿದ.ಇದು ಪ್ರಕೋಪಕ್ಕೆ ತಿರುಗಿ ಹೋರಾಟ ನಡೆದರೂ ಹಾಶೀಮನದೆ ಮೇಲುಗೈಯಾಯಿತು.ಕ್ರಿಸ್ತಶಕ 510ರಲ್ಲಿ ಹಾಶೀಮ್ ಸತ್ತ ನಂತರ ಅವನ ಮಗ ಅಬ್ದುಲ್ ಮುತ್ತಾಲಿಬ್ ಬೆಳಕಿಗೆ ಬಂದ.ಇವನಿಗೆ ಒಟ್ಟು ಹನ್ನೆರಡು ಗಂಡು ಹಾಗು ಆರು ಹೆಣ್ಣು ಮಕ್ಕಳಿದ್ದರು.ಮುಂದೆ ಪ್ರವಾದಿ ಎಂದೆನಿಸಿದ ಮಹಮದ್ದನ ತಂದೆ ಅಬ್ದುಲ್ಲಾ ಇವರಲ್ಲೊಬ್ಬ.ಆತ ನಂತರ 'ಖುರಾಯಿಶ್' ಬುಡಕಟ್ಟಿನ 'ಸುಹ್ರಾ' ಮನೆತನದ ಅಮೀನಾ ಎನ್ನುವ ಕನ್ಯೆಯನ್ನ ವಿವಾಹ ಮಾಡಿಕೊಂಡ,ಇವರ ಒಬ್ಬನೆ ಮಗ ಮಹಮದ್.ದಾಖಲೆಗಳ ಪ್ರಕಾರ ಮಹಮದ್ ಜನಿಸಿದ್ದು ಕ್ರಿಸ್ತಶಕ 571ರಲ್ಲಿ.ಈ ಕಾಲಘಟ್ಟದಲ್ಲಿ ಮೆಕ್ಕಾದ ಮೇಲಿನ ಹಕ್ಕಿಗಾಗಿ ಆಗಾಗ ಹಾಶಿಮ್ ಹಾಗು ಉಮಯ್ಯಾನ ಸಂತತಿಯವರು ಕಾದಾಡುತ್ತಲೆ ಇದ್ದರು.ಅಲ್ಲಿನ ಶೇಖ್ ಪದವಿ ಗಳಿಸಿದ ಹಶೀಂ ಕುಲದವರು ಉಮೈದರನ್ನು ಅವಕಾಶ ಸಿಕ್ಕಾಗಲೆಲ್ಲ ಹೀಯಾಳಿಸಿ-ಕೆಣಕಿ ಈರ್ಷ್ಯೆಯಿಂದ ಅವರ ಸ್ಥಾನಮಾನಗಳಿಗೆ ಧಕ್ಕೆ ತರುತ್ತಲೆಯಿದ್ದರು.ಜೋರ್'ಹೂಮ್' ಬುಡಕಟ್ಟಿನವರು ಕಾದಾಟದಲ್ಲಿ ಸೋತ ನಂತರ ಮೆಕ್ಕಾದ ಒಡೆತನ ಖುಜಾಹ ಬುಡಕಟ್ಟಿಗೆ ಸರಿದಾಗ ಅವರು ಅಲ್ಲಿನ ಪವಿತ್ರ ಕಪ್ಪುಶಿಲೆ 'ಮುಕಾಂ ಇಬ್ರಾಹಿಮ್'ನ್ನು ಹಾಗೂ ಜುಮ್ ಜುಮ್ ಬಾವಿಯನ್ನೂ ಯಾರಿಗೂ ಸಿಗದಂತೆ ಹುಗಿದು ಮೆಕ್ಕಾವನ್ನು ತ್ಯಜಿಸಿ ಹೋದರು.ಕ್ರಮೇಣ ಕುಸೈ ಬಿನ್ ಕಿಲಾಬನ ಕಾಲಕ್ಕೆ ಮತ್ತೆ ಮೆಕ್ಕಾ ಮೆರಗು ಪಡೆಯಿತು.ಖುರೈಷಿಗಳು ಬಂದು ಅಲ್ಲಿ ನೆಲೆಯೂರಿದರು.ಆದರೆ ಅಬ್ದುಲ್ ಮುತ್ತಾಲಿಬನ ಕಾಲದವರೆಗೂ ಜುಮ್ ಜುಮ್ ಬಾವಿ ಪತ್ತೆಯೆ ಆಗಿರಲಿಲ್ಲ.ಮಹಮದ್'ನ ಅಜ್ಜ ಅಬ್ದುಲ್ ಮುತ್ತಲಿಬ್'ನಿಗೆ ಒಂದು ರಾತ್ರೆ ಬಿದ್ದ ಕನಸು ಅದರ ಕುರುಹನ್ನು ತೋರಿಸಿತು .ಆಪ್ರಕಾರವೆ ನೆಲ ಅಗೆದ ಅವನಿಗೆ ಬಾವಿ ಗೋಚರಿಸಿತು.ಇನ್ನೂ ನೆಲ ಅಗೆದಾಗ ಅಪಾರ ಶಸ್ತ್ರಾಸ್ತ್ರ ಹಾಗೂ ಚಿನ್ನಾಭರಣಗಳೂ ಅಲ್ಲಿ ದೊರೆತವು.ಇದರ ವಾಸನೆ ಹಿಡಿದ ಖುರೈಷಿಗಳು ಸಂಪತ್ತಿನ ಹಂಚಿಕೆಗೆ ಕೋರಿದರು,ಆದರೆ ಅಬ್ದುಲ್ ಮುತ್ತಾಲಿಬ್ ನಿರಾಕರಿಸಿದ.ಆದರೆ ಆತ ಸಮಸ್ಯೆಯ ಪರಿಹಾರಕ್ಕೆ ಮಧ್ಯವರ್ತಿಯೋಬ್ಬನ ನೇಮಕಕ್ಕೆ ಒಪ್ಪಿಕೊಂಡ! ಅದೆ ಸಮಯಕ್ಕೆ ಒಂದು ವಿಚಿತ್ರವಾದ ಹರಕೆಯನ್ನೂ ಹೊತ್ತ.

ಅದೇನೆಂದರೆ ದೇವರು ತನಗೆ ಹತ್ತು ಮಕ್ಕಳನ್ನು ಕರುಣಿಸಿದರೆ ಅವರಲ್ಲಿ ಒಬ್ಬನನ್ನು ಆತ ವಯಸ್ಸಿಗೆ ಬಂದ ಕೂಡಲೆ ಕಾಬಾದ ಗುಡಿಗೆ ಬಲಿನೀಡುವೆ! ಎಂಬುದಾಗಿತ್ತು.ಅದೆ ಪ್ರಕಾರ ಅವನಿಗೆ ಸಾಲಾಗಿ ಹತ್ತು ಮಕ್ಕಳಾದವು.ಅವರಲ್ಲಿ ಅಬ್ದುಲ್ಲ ಎಂಬಾತನಿದ್ದ,ಅವನೆ ಮುಂದೆ ಮಹಮದ್'ನ ತಂದೆಯಾದದ್ದು.ಮಕ್ಕಳಿಗೆ ಈ ವಿಷಯ ಅರುಹಿದ ಮುತ್ತಲಿಬ್,ಅವರು ತಂದೆಯ ಹರಕೆ ಪೂರೈಸಲು ಸಿದ್ಧರಾದರು.ಆದರೆ ಯಾರನ್ನ ಬಲಿ ನೀಡೋದು ಎಂಬ ಪ್ರಶ್ನೆ ಉದ್ಭವಿಸಿತು.

ಅದಕ್ಕೆ ಪರಿಹಾರವಾಗಿ ಕಾಬಾದ 'ಹುಬುಲ್' ವಿಗ್ರಹದ ಮುಂದೆ ಹತ್ತೂ ಜನರ ಹೆಸರು ಬರೆದ ಪ್ರತ್ಯೇಕ ಬಾಣಗಳನ್ನಿಟ್ಟು ಅಲ್ಲಿನ ಪೂಜಾರಿಯಿಂದ ಒಂದನ್ನು ಎತ್ತಿಸಲಾಯಿತು.ಸಂಪ್ರದಾಯದ ಪ್ರಕಾರ ಅದನ್ನ ಬಿಲ್ಲಿಗೆ ಹೂಡಿ ಹೊಡೆದಾದ ನಂತರ ನೋಡಿದಾಗ ಅದು ಅಬ್ದುಲ್ಲಾನ ಹೆಸರಿನದಾಗಿತ್ತು! ಅವನ ಬಗ್ಗೆ ಕನಿಕರಗೊಂಡ ಖುರೈಷಿಗಳು ಮುತ್ತಲಿಬ್ ಬಲಿ ನೀಡಲು ಒರೆಯಿಂದ ಕತ್ತಿ ತೆಗೆದಾಗಲೆ ಅವನನ್ನ ತಡೆದರು.ಹೀಗಾದರೆ ಹರಕೆ ಪೂರೈಕೆ ಹೇಗೆಂದು ಆತ ಕೇಳಿದಾಗ,ಅಬ್ದುಲ್ಲಾನ ಬದಲು ಹತ್ತು ಒಂಟೆ ಬಲಿನೀಡಲು ಸೂಚಿಸಲಾಯಿತು.ಅವರ ಸೂಚನೆಯಂತೆ ಒಂಟೆಗಳನ್ನು ಪ್ರತಿನಿಧಿಸುವ ಹೆಸರುಗಳ ಒಟ್ಟಿಗೆ ಅಬ್ದುಲ್ಲಾನ ಹೆಸರಿನ ಚೀಟಿ ಇಟ್ಟು ಎತ್ತಿದಾಗ ಅಬ್ದುಲ್ಲನ ಚೀಟಿಯೆ ಬಂತು! ಹೀಗೆ ಹತ್ತರ ಸಂಖ್ಯೆಗಳಲ್ಲಿ ಒಂಟೆಗಳ ಸಂಖ್ಯೆ ಹೆಚ್ಚಿಸುತ್ತಾ ಹೋದಾಗಲೂ ದುರಾದೃಷ್ಟವಶಾತ್ ಅಬ್ದುಲ್ಲಾನ ಹೆಸರೆ ಮತ್ತೆ ಮತ್ತೆ ಬಂತು! ಕಡೆಗೆ ಅವನ ಹೆಸರು ತಪ್ಪಿದ ಚೀಟಿ ಮೇಲೇಳುವಾಗ ಒಂಟೆಗಳ ಸಂಖ್ಯೆ ನೂರು ಮುಟ್ಟಿತ್ತು.ಹೀಗಾಗಿ ಆ ನೂರೂ ಒಂಟೆಗಳನ್ನ ಬಲಿನೀಡಿ ಮುತ್ತಲಿಬ್ ತನ್ನ ಹರಕೆ ಮುಟ್ಟಿಸಿದ.ಹೀಗಾಗಿ ಮುಂದೆ ಮಹಮದ್ ತಾನು 'ಎರಡು ಬಲಿದಾನಗೈದವರ ಮಗ" ಎಂದು ಹೇಳಿಕೊಳ್ಳಲು ಇದೆ ಕಾರಣ.

ಮೆಕ್ಕವನ್ನ ಯಾವ ಅಧಿಕೃತ ಸರಕಾರಗಳೂ ಎಂದೂ ಆಳಿರಲಿಲ್ಲ.ಅದು ಆಗಾಗ ಬುಡಕಟ್ಟುಗಳ ಅಧೀನದಲ್ಲಷ್ಟೆ ಇತ್ತು.ಅವಕ್ಕೂ ಅವುಗಳದ್ದೆ ಆದ ರೀತಿನೀತಿ,ನಡೆನುಡಿಗಳಿದ್ದವು.ಕ್ಷುಲ್ಲಕ ಕಾರಣಕ್ಕೂ ರಕ್ತಚಲ್ಲಿ ಕಾದಾಡುವ ಹಾಗೂ ಪ್ರತಿಕಾರಕ್ಕಾಗಿ ಹಾತೊರೆಯುವ ಅರಬ್ಬರ ಗುಣ ಇಂದಿಗೂ ಅಷ್ಟೆ ಪ್ರಖರವಾಗಿರುವುದನ್ನು ಕಾಣಬಹುದಾಗಿದೆ.

ಒಂದು ಬಾರಿ ಒಬ್ಬನ ರಕ್ತ ಚಲ್ಲಿದಾಗ ಆ ವ್ಯಕ್ತಿಯ ಕುಟುಂಬ,ಬುಡಕಟ್ಟು,ಪಂಗಡ,ಜನಾಂಗದ ಉಳಿದವರು ಅವನನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಅಥವಾ ಅವನ ಬುಡಕಟ್ಟನ್ನು ಪ್ರತಿಕಾರದ ಸಲುವಾಗಿ ಬೇಟೆಯಾಡುವುದು ಅಂದೂ ಸಾಮಾನ್ಯವಾಗಿತ್ತು,ಇಂದೂ ಸಾಮಾನ್ಯವಾಗಿಯೆ ಉಳಿದುಬಂದಿದೆ! ಹಾಗೊಂದುವೇಳೆ ಎದುರಾಳಿಗಳು ಬಲಿಷ್ಠರಾಗಿದ್ದಾಗ ಕೆಲಕಾಲ ಹಿಂದಡಿ ಇಡಲಾಗುತ್ತಿತ್ತಾದರೂ ಒಂದೊಮ್ಮೆ ಅವಕಾಶ ಸಿಕ್ಕರೆ ಪ್ರತಿಕಾರ ತೀರಿಸಿಕೊಳ್ಳುವುದು ತಮ್ಮ ಜನ್ಮಸಿದ್ಧ ಹಕ್ಕೆಂದೆ ಅಲ್ಲಿ ಬಗೆಯಲಾಗುತ್ತಿತ್ತು.ಅದಕ್ಕೆ ಅಗತ್ಯವಾಗಿ ಇನ್ನೊಬ್ಬ ಬಲವಂತನ ನೆರವನ್ನು ಪಡೆಯಲಾಗುತ್ತಿತ್ತು.ಅಂತಹ ಒಬ್ಬ ಬಲವಂತನೆ ಪ್ರವಾದಿ ಮಹಮದ್ ಪೂರ್ವಜ ಕೂಸೈ.ಕ್ರಿಸ್ತಶಕ 400ರ ಕಾಲಕ್ಕೆ ಈತ ಪ್ರಶ್ನಾತೀತನಾಗಿರಲು ಜನಬೆಂಬಲಿತ ಈತನ ಬಾಹುಬಲವೆ ಕಾರಣ ಎಂದರೂ ತಪ್ಪಿಲ್ಲ.

(ನಿರೂಪಣೆ ಇಲ್ಲಿಗೆ ಮುಗಿಯಿತು...ಇನ್ನು ಪ್ರವಾದಿಯ ಕಥೆ ಶುರು...)

No comments:

Post a Comment