ಮಾನ್ಯ ಸಂಪಾದಕರೆ...
ಇಂದಿನ ಪ್ರಜಾವಾಣಿಯ ಸಂಚಿಕೆಯಲ್ಲಿ (೨೮ ದಶಂಬರ ೨೦೧೦) " ಇಂಡಿಯಾ ಎನ್ನುವುದೆ ದಾಸ್ಯ"ಎಂಬ ಶಿರೋನಾಮೆಯಲ್ಲಿದ್ದ ವರದಿ ಪ್ರಕಟವಾಗಿದೆ.ಹಿರಿಯರೂ ಪ್ರಾಜ್ಞರೂ ಆದ ಡಾ ಚಿದಾನಂದಮೂರ್ತಿಗಳು ಮ್ಯಾನ್ಮಾರ್,ಶ್ರೀಲಂಕಗಳ ಮೇಲ್ಪಂಕ್ತಿ ಅನುಸರಿಸಿ ನಾವು ಅಂದರೆ ಭಾರತೀಯರೂ ವಸಾಹತುಶಾಹಿ ಕುರುಹಾದ 'ಇಂಡಿಯಾ'ವೆಂಬ ಹೆಸರಿನ ಕುರೂಪವನ್ನು ಹೋಗಲಾಡಿಸಿ 'ಭಾರತ'ವೆಂದು ದೇಶದ ಮರು ನಾಮಕರಣ ಮಾಡಿ ಸುರೂಪಗೊಳಿಸ ಬೇಕೆಂಬ ಆಶಯ ಮಂಡಿಸುತ್ತಾರೆ.ಅವರ ಈ ಆಗ್ರಹ ಅಪೇಕ್ಷಣೀಯವೆ ಆದರೂ ಈಗ ಅದರ ತುರ್ತು ಅಗತ್ಯ ಎಷ್ಟಿದೆ ಎಂಬುದು ಅವರೂ ಸೇರಿ ಎಲ್ಲರೂ ಯೋಚಿಸಬೇಕಾದ ಸಂಗತಿ.ಬಹುಸಂಖ್ಯಾತ ಉತ್ತರ ಭಾರತೀಯರು 'ಹಿಂದುಸ್ತಾನ್ 'ಎಂದು ಕರೆಯುವ ಈ ದೇಶ ಬಹಳ ಕಡಿಮೆ ಸಂಖ್ಯೆಯಲ್ಲಿರುವ ದಕ್ಷಿಣ ಭಾರತೀಯರಿಗಷ್ಟೇ "ಭಾರತ"ವಾಗುಳಿದಿದೆ ಎನ್ನುವುದು ಇಂದಿನ ವಾಸ್ತವ.ಜಾಯಮಾನ ಬದಲಾಗದೆ ಬರಿ ನಾಮವನ್ನಷ್ಟೆ ಬದಲು ಮಾಡುವ ತುರ್ತು ಸದ್ಯಕ್ಕಂತೂ ಇದೆ ಎಂದೆನಿಸುತ್ತಿಲ್ಲ.ಆದರೂ ಈ ಸಂಗತಿಯತ್ತ ಗಮನ ಸೆಳೆದ ಡಾ ಚಿದಾನಂದಮೂರ್ತಿಗಳ ಕಳಕಳಿ ಗಿಟ್ಟಿಸುವ ಮೆಚ್ಚುಗೆ ಮುಂದೆ ಅವರೇ ಆಡಿದ ಧರ್ಮಾಂಧ ಹೇಳಿಕೆಯಿಂದ ಮೌಲ್ಯ ಕಳೆದು ಕೊಂಡು ಗಟಾರ ಸೇರಿ ಹೋಗಿದೆ!
"ಅಲ್ಪ ಸಂಖಾಯತರ ಸಮುದಾಯದ ಹಬ್ಬಗಳನ್ನು ರಾಷ್ಟ್ರೀಯ ಹಬ್ಬ ಎಂಬಂತೆ ಆಚರಣೆ ಮಾಡುವುದು ಸರಿಯಲ್ಲ.ಭಾನುವಾರವೆ ವಾರದರಜೆ ನೀಡಬೇಕೆಂಬ ನಿಯಮ ಕೂಡ ಬದಲಾಗಬೇಕು" ಎಂದು ಅವರು ಮಾತು ಮುಂದುವರಿಸಿದರು ಎಂದು ವರದಿಯಾಗಿದೆ.ಜಾತ್ಯತೀತ ನಿಲುವಿನ ನಮ್ಮ ರಾಷ್ಟ್ರೀಯ ನೀತಿಯ ಮೆರಗು ಹೆಚ್ಚಿಸುವ ಅಲ್ಪಸಂಖ್ಯಾತ ಸಮುದಾಯಗಳ ಹಬ್ಬಗಳ ರಾಷ್ಟ್ರೀಯ ಆಚರಣೆ ಚಿದಾನಂದಮೂರ್ತಿಗಳ ಕಣ್ಣಿಗೆ ದುರಾಚಾರದಂತೆ ಕಾಣಲು ಅದೇನು ಪಾಪ ಮಾಡಿತ್ತು? ಅಲ್ಲದೆ ಸಿಖ್,ಬೌದ್ಧ ಧಮ್ಮ,ಜೈನ ಧರ್ಮಗಳಂತಹ ವೈದಿಕತೆಯ ಉಪಕವಲುಗಳಿಗಿಂತ ಇಸ್ಲಾಂ ಹಾಗು ಕ್ರೈಸ್ತ ರೂಪಿ ಪಶ್ಚಿಮದ ಧರ್ಮಗಳೆ ಅವರ ಮನಶಾಂತಿಗೆ ಕೊಳ್ಳಿಯಿಟ್ಟಿರುವುದು ಅವರ ಈ ಅಸಹನೆಪೂರಿತ ಹೇಳಿಕೆ ಮುಖಕ್ಕೆ ರಾಚಿದಂತೆ ಸ್ಪಷ್ಟಪಡಿಸಿದೆ.ಈ ಬಗೆಯ ಅಕಾರಣ ದ್ವೇಷದ ನಿಲುವು ಅವರ ವಯಸ್ಸಿಗೆ ಹಾಗು ಘನತೆಗೆ ಶೋಭಿಸುವುದಿಲ್ಲ.ಇನ್ನಾದರೂ ವಸ್ತುಸ್ಥಿತಿಯ ಉದಾತ್ತತೆ ಒಪ್ಪಿಕೊಂಡು ಇರಲಾಗದಿದ್ದಲ್ಲಿ ಕನಿಷ್ಠ ತಮ್ಮ ಹರಕು ಬಾಯಿಗೆ ಬೀಗ ಜಡಿದುಕೊಂಡಾದರೂ ಅವರು ಮಾನ ಉಳಿಸಿಕೊಳ್ಳುವುದು ಲೇಸು,ತುಂಬಿದ ಕೊಡ ಯಾವಾಗಲೂ ತುಳುಕ ಬಾರದು!
ಇನ್ನು ಭಾನುವಾರ ವಾರದ ರಜೆಯಾಗಿರುವ ಕುರಿತು.ಶುಕ್ರವಾರದಂದೆ ಜುಮ್ಮಾದ ಹೆಸರಿನಲ್ಲಿ ವಾರದ ರಜೆ ಕಡ್ಡಾಯಗೊಳಿಸಿರುವ ಕಟ್ಟರ್ ಇಸ್ಲಾಮಿ ರಾಷ್ಟ್ರಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ರಾಷ್ಟ್ರಗಳಲ್ಲೂ ಭಾನುವಾರದ ರಜಾ ಪದ್ದತಿಯೆ ಚಾಲ್ತಿಯಲ್ಲಿದೆ.ಇದು ಕ್ರೈಸ್ತ ನಂಬಿಕೆಗಳ ಅನುಸಾರ ರೂಪಿತವಾಗಿರುವ ಬಗ್ಗೆ ಏನೂ ಸಂಶಯವಿಲ್ಲವಾದರೂ ಈ ಬಗೆಗಿನ ಚರ್ಚೆಯೆ ಇದೀಗ ಅಪ್ರಸ್ತುತ.ಅಲ್ಲದೆ ಈ ವಾರಾಂತ್ಯದ ರಜಾ ಪದ್ದತಿಯಲ್ಲಿ ಹುಳುಕೇನೂ ಇಲ್ಲ.ಕೇವಲ ಗೊಡ್ಡು ಧಾರ್ಮಿಕತೆಯ ಚುಂಗು ಹಿಡಿದು ಹುಣ್ಣಿಮೆ,ಅಮಾವಾಸ್ಯೆ,ಏಕಾದಶಿಗಳಂದು ಸಾರ್ವತ್ರಿಕ ರಜೆ ಸಾರುವುದು ಎಷ್ಟು ಕಾರ್ಯಸಾಧುವಲ್ಲವೋ,ಅಷ್ಟೆ ಹಾಸ್ಯಾಸ್ಪದವೂ ಹೌದು.ಇಂತಹ ಚಿಲ್ಲರೆ ಸಲಹೆ ಸೂಚನೆ ಕೊಡುವುದನ್ನು ಬಿಟ್ಟು ಡಾ ಚಿದಾನಂದಮೂರ್ತಿಗಳು ನಿಜವಾದ 'ನಾಡೋಜ'ರಾಗೋದು ಯಾವಾಗ?
No comments:
Post a Comment