ನೀನು ನೀನಾಗಿರಲಿಲ್ಲ..
ಸಂತೆಯಲ್ಲಿ ಅಮ್ಮನ ತೋಳೊಳಗಿಂದಲೆ ನಕ್ಕ ಮಗುವಿನ ಮಂದಹಾಸದಂತೆ,
ತುಂಬಿದ ಬಸ್ಸಲಿ ಬೆವರು ತೊಯ್ದ ಕಂಕುಳ ಕುಬುಸಗಳ ನಾತದ ನಡುವೆಯೂ ....
ಕಂಪ ಸೂಸುವ ಮಲ್ಲಿಗೆದಂಡೆಯ ಸುಹಾಸದಂತೆ/
ಇನ್ನು ಸಿಗಲಾರದೆಂದು ನಿರಾಶರಾದಾಗ ಅಪರಿಚಿತ ಊರಲಿ ....
ಫಕ್ಕನೆ ಸಿಕ್ಕು ಖುಷಿಯುಕ್ಕಿಸುವ ವಿಳಾಸದಂತೆ//
ನೀನು ನೀನಾಗಿರಲಿಲ್ಲ...
ಹೆಕ್ಕಿ ತಂದ ಅಕ್ಕಿಯ ಮೇಲೆ ಅಕ್ಕರೆಯನು ಕೊರೆದು ತುತ್ತಿಡುವ ತಾಯಿ ಹಕ್ಕಿಯಂತೆ...
ಹನಿಬಿಡದೆ ಹಿಂಡಾಗಿದ್ದರೂ ಕರು ಬಂದಾಗ ಮೊಲೆಯುಣ್ಣಿಸಿ ನೋವಲೂ ನೆಮ್ಮದಿ ಕಾಣುವ ಕೊಟ್ಟಿಗೆಯ ದನದಂತೆ/
ಕಡಿದ ಕೊಡಲಿಗೂ ಪರಿಮಳವನ್ನೆ ದಾಟಿಸುವ ಶ್ರೀಗಂಧದಂತೆ,
ನಾಗರಕಟ್ಟೆಯ ಅರಳಿಯಿಂದಿಳಿದ ಬಿಳಲುಗಳು ನೆಲದೊಂದಿಗೆ ಬಿಗಿವ ಬಂಧದಂತೆ...
ಬಚ್ಚಲ ಇದ್ದಿಲ ಮಸಿಯಿಂದ ಮನೆಯ ಬಿಳಿ ನಾಯಿಮರಿಗೆ ನಾನಿಟ್ಟಿದ್ದ ದೃಷ್ಟಿಬೊಟ್ಟಿನ ಚಂದದಂತೆ//
ನೀನು ನೀನಾಗಿರಲಿಲ್ಲ...
ಬಾಲ್ಯದಲಿ ಅಪರೂಪಕ್ಕೆ ನಮ್ಮೂರ ಬಾನಲೂ ಬಂದು
ಬೆರಗು ಹುಟ್ಟಿಸುತ್ತಿದ್ದ ಲೋಹದ ಹಕ್ಕಿಯ ನಿಶ್ವಾಸದಂತೆ,
ಮರೆತರೂ ಮರೆತಂತಿರದ ಹಳೆಯ ಹಾಡೊಂದು ರೇಡಿಯೋದಲಿ
ಸುಳಿವಿರದೆ ಬಂದು ಮುದಗೊಳಿಸುವ ಚಿದ್ವಿಲಾಸದಂತೆ/
ಮುಂಜಾನೆ ಮನೆಯಂಗಳದ ತುಂಬಾ ಹೂವ ಹಾಸಿಗೆ ಹಾಸುತ್ತಿದ್ದ ಮರ ಪಾರಿಜಾತದಂತೆ,
ಬಿರುಬೇಸಗೆಗೆ ಬಳಲಿ ಬೆವೆತು ಬಾಯಾರಿದ ಭೂಮಿಗೆ ಮೊದಲ ಮಳೆಹನಿ...
ಜಾರಿಸೋ ಹೊಸ ಘಮದ ಸುಗಮದಂತೆ,
ಹರಿವ ತುಂಗೆಯಲಿ ಕಾಲಾಡ ಬಿಟ್ಟು ದಂಡೆಯ ಮರಳಲಿ...
ತಾರೆಗಳೆ ತುಂಬಿರುವ ಬಾನನೆ ನೋಡುತ ಕಳೆದ ಇರುಳ ಮೌನದಲ
ಕಿರುಕ್ಷಣದ ಮರು ಭಾಸದಂತೆ//
ನೀನು ನೀನಾಗಿರಲಿಲ್ಲ/
ನನಗೆಲ್ಲವೂ ಆಗಿರುವ
ನೀನಿಲ್ಲದೆ
ನಾನು ನಾನಾಗಿರಲಿಲ್ಲ//
No comments:
Post a Comment