Sunday, October 24, 2010

ಮತ್ತದೆ ಕಥೇನ!?

ಇತ್ತೀಚೆಗಷ್ಟೆ ವೆಂಕಟೇಶ್ವರ ಟಾಕೀಸಿನಲ್ಲಿ ನೋಡಿರುತ್ತಿದ್ದ ಭೂತದ ಸಿನೆಮಾದ ಗುಂಗಿನಲ್ಲೆ :ಎಲ್ಲಿ ಬೇಗ ಉಂಡು ಮುಗಿಸಿದರೆ ಒಬ್ಬನೆ ಕೈ ತೊಳೆಯಲು ಹಿತ್ತಲಿಗೆ ಹೋಗಬೇಕಾಗುತ್ತದಲ್ಲ! ಎಂದು ವಿನಾಕಾರಣ ಅನ್ನವನ್ನು ನುರಿಸುತ್ತ ಸಾಧ್ಯವಾದಷ್ಟು ಊಟದ ಅವಧಿಯನ್ನ ವಿಸ್ತರಿಸುತ್ತಿದ್ದೆ.ಆದರೆ ದರಿದ್ರದ್ದು ನಮ್ಮ ಮನೆಗೆ ಕೇವಲ ಕೂಗಳತೆಯ ದೂರದಲ್ಲಿದ್ದ ಗುಡ್ಡದ ಮೇಲಿನ ವಿಶಾಲ ಮೈದಾನದಲ್ಲಿ ಅದಾಗಲೆ ಚಂಡೆ ಬಾರಿಸಿ ಭಾಗವತರು ಗಂಟಲು ಸರಿಪಡಿಸಿಕೊಳ್ಳಲು ಆರಂಭಿಸಿಯಾಗಿರುತ್ತಿತ್ತು. 'ಅಕ್ಕಿ ಮೇಲೆ ಆಸೆ...ನೆಂಟರ ಮೇಲೆ ಪ್ರೀತಿ' ಎಂಬಂತಹ ಉಭಯ ಸಂಕಟದ ಸ್ಥಿತಿ.ಯಾವುದೆ ಮೇಳಗಳು ನಮ್ಮೂರಿನಲ್ಲಿ ಆತ ಇಟ್ಟುಕೊಳ್ಳಲು ಬಯಸಿದರೆ ಇಲ್ಲಿಯೆ ಎಂಬಂತೆ ಸ್ಥಳ ನಿಗದಿಯಾಗಿತ್ತು.ಯಕ್ಷಗಾನದ ಉಗ್ರಾಭಿಮಾನಿಯಾಗಿದ್ದ ನನ್ನಜ್ಜನ ಬಾಲವಾಗಿ 'ಆಟ' ನೋಡಲು ಹೋಗೋದು ನನಗೆ ಬಲು ಪ್ರಿಯವಾಗಿದ್ದ ಹವ್ಯಾಸವಾಗಿತ್ತು,ಹಾಗೆಯೆ ಅಲ್ಲಿಗೆ ಬಂದಿರುತ್ತಿದ್ದ ಅಂಗಡಿಗಳಿಂದ ಚುರುಮುರಿ ಗೋಳಿಬಜೆ ಕೊಡಿಸುತ್ತಾರಲ್ಲ ಎನ್ನುವ ಮೇಲಾಕರ್ಷಣೆ ಬೇರೆ.ರಾತ್ರಿ ಒಂಬತ್ತೂವರೆ ಹತ್ತರ ಸುಮಾರಿಗೆ ಭಾಗವತರ ಗಟ್ಟಿ ಕಂಠದಲ್ಲಿ "ಗಜವದನ ಬೇಡುವೆ"ಯಿಂದ ಆರಂಭವಾಗುತ್ತಿದ್ದ ಪ್ರಸಂಗಗಳು ದುಷ್ಟ ಸಂಹಾರವಾಗಿ ಮುಗಿಯುವಾಗ ಚುಮು ಚುಮು ಛಳಿಯ ಮುಂಜಾನೆ ಮೂಡಣದಲ್ಲಿ ಕಣ್ಣಿನ ಪಿಸರು ಜಾರಿಸುತ್ತಾ ಸೂರ್ಯ ಆಕಳಿಸುತ್ತಾ ಬರುವ ಹೊತ್ತಗಿರುತ್ತಿತ್ತು.ಇಡೀ ರಾತ್ರಿಯ ಪ್ರಸಂಗಗಳಲ್ಲಿ ಹಾಸ್ಯ ಪಾತ್ರಗಳ ಅಭಿನಯದ ಹೊರತು ಇನ್ನೆಲ್ಲ ಪಾತ್ರಗಳ ನಟನೆಗೆ ನಿದ್ರೆಯ ಕಾಂಪ್ಲಿಮೆಂಟ್ ಕೊಡುತ್ತ,ರಕ್ಕಸ ಪಾತ್ರಗಳು ಬಂದಾಗ ಬೆಚ್ಚಿ ಸುತ್ತಿಕೊಂಡಿರುತ್ತಿದ್ದ ಶಾಲಿನಲ್ಲೆ ಇನ್ನಷ್ಟು ಮುದುಡುತ್ತ-ನಡುನಡುವೆ ಅಜ್ಜ ಕೊಡಿಸುವ ತಿಂಡಿಗಳಿಗೆ ಎಮ್ಮೆಯಂತೆ ಮೆಲುಕು ಹಾಕುತ್ತ ನಾನೂ ಯಕ್ಷಗಾನ ನೋಡುತ್ತಿದ್ದೆ!


ಪೆರ್ಡೂರು ಮೇಳ,ಧರ್ಮಸ್ಥಳ ಮೇಳ,ಸುರತ್ಕಲ್ ಮೇಳ,ಕಟೀಲು ಮೇಳ,ಮಂದಾರ್ತಿ ಮೇಳ ಹೀಗೆ ಶ್ರಾವಣದ ನಂತರ ಒಂದಾದರೊಂದರಂತೆ ಎಲ್ಲ ಮೇಳಗಳೂ ನಮ್ಮೂರಿಗೆ ಲಗ್ಗೆಯಿಡುತ್ತಿದ್ದವು.ನಮ್ಮೂರಿಗೆ ಯಕ್ಷಗಾನ ಮೇಳ ಬಂದಿರುವ ಬಾತ್ಮಿ ಮೊದಲು ತಿಳಿಯುತ್ತಿದ್ದುದು ನಮ್ಮಂತ ಕಿರಿಯರಿಗೆ.ತುಳು ಕನ್ನಡ ಎರಡೂ ಭಾಷೆಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಯಕ್ಷಗಾನಗಳಿಗೆ ಆಗೆಲ್ಲ ವಿಪರೀತ ಅಭಿಮಾನಿಗಳಿದ್ದರು.ನಮ್ಮದು ತಾಲೂಕು ಕೇಂದ್ರವಾಗಿದ್ದರಿಂದ ಹೋಲಿಕೆಯಲ್ಲಿ ಸುತ್ತಮುತ್ತಲ ಹಳ್ಳಿಗರಿಗಿಂತ ನಾವುಗಳು ಕೊಂಚ ಆಧುನಿಕರಾಗಿದ್ದೆವು,ಆ ಬಗ್ಗೆ ನಮ್ಮೊಳಗೊಳಗೆ ಕೊಂಚ ಧಿಮಾಕೂ ಇತ್ತೆನ್ನಿ,ಆದರೆ ಯಕ್ಷಗಾನದ ಕಲಾರಸಿಕತೆಯ ವಿಚಾರದಲ್ಲಿ ನಮ್ಮಿಬ್ಬರಲ್ಲೂ ಯಾವುದೆ ವ್ಯತ್ಯಾಸ ಇರಲೆ ಇಲ್ಲ.

ಸಂಜೆ ಬಯಲಿಗೆ ಆಡಲು ಹೋಗುತ್ತಿದ್ದ ನಾವು ಮಕ್ಕಳಿಗೆ ನಾಳೆ ನಮ್ಮೂರಿಗೆ ಯಕ್ಷಗಾನ ಮೇಳವೊಂದು ಬರುವ ಪುರಾವೆಗಳು ಸಿಗುತ್ತಿದ್ದವು.ಸದಾ ಹುಡಿಧೂಳಿನಿಂದ ಆವೃತ್ತವಾಗಿರುತ್ತಿದ್ದ ಮೈದಾನಕ್ಕೆಲ್ಲ ಒಂದು ಸುತ್ತು ನೀರು ಹೊಡೆದು ನಾಳೆ ಟರ್ಪಾಲ್ ಟೆಂಟು ಕಟ್ಟಲು ಅನುಕೂಲವಾಗುವಂತೆ ಮೈದಾನದ ಸುತ್ತಲೂ ಸರಳಿನಂತ ಗೂಟಗಳನ್ನ ಹೊಡೆಯಲು ಆರಂಭಿಸಿರುತ್ತಿದ್ದರು.

No comments:

Post a Comment