Friday, October 30, 2015

ವಲಿ - ೧೯





ತಮ್ಮೆಡೆಗೆ ಖುರೈಷಿಗಳ ಪಡೆ ಸಾಗಿ ಬರುತ್ತಿದ್ದಂತೆ ಇತ್ತ ಮಹಮದ್ ತನ್ನ ಪ್ರಾರ್ಥನಾ ವಿಧಿಗಳನ್ನ ಪೂರೈಸಿ ತಾನೂ ಸಮರ ಸನ್ನದ್ಧನಾದ. ಅರಬ್ ಬುಡಕಟ್ಟಿನ ಯುದ್ಧ ನೀತಿ ಹಾಗೂ ಸಂಪ್ರದಾಯಕ್ಕೆ ಅನುಗುಣವಾಗಿ ದ್ವಂದ್ವ ಯುದ್ಧ ಪರಸ್ಪರ ಇಬ್ಬಿಬ್ಬರ ನಡುವೆ ಆರಂಭಗೊಂಡಿತು. ಖುರೈಷಿಗಳ ಸೇನಾನಾಯಕನಾದ ಥಲ್ಲಾ ಮೊದಲು ಪಡೆಯ ಮುಂದೆ ಸಾರಿ ಜೋರಾಗಿ ರಣ ಕಹಳೆಯನ್ನು ಊದಿದ. ಇದು ಯುದ್ಧಾರಂಭದ ಮುನ್ಸೂಚನೆಯಾಗಿತ್ತು. ಅವನ ರಣಕಹಳೆಯ ಧ್ವನಿ ಇನ್ನೂ ಅಡಗಿರಲಿಲ್ಲ ಒಮ್ಮೆಗೆ ಮುನ್ನುಗ್ಗಿದ ಅಲಿ ಅವನ ಹುಟ್ಟನ್ನೆ ಕತ್ತು ಕಡಿದು ಒಮ್ಮೆಗೆ ಅಡಗಿಸಿ ಬಿಟ್ಟ.


ಆಗ ಖುರೈಷಿಗಳ ಪಡೆಯಿಂದ ಇನ್ನೊಬ್ಬ ಯುವಕ ಒತ್ತೆಮನ್ ಮುಂದೆ ಕಣದತ್ತ ಧುಮುಕಿದ. ಅವನನ್ನ ಎದುರಿಸುವ ಆವೇಶ ಹಂಝಾನಲ್ಲಿ ಉಕ್ಕಿ ಬಂತು. ಹಂಝಾನ ವೀರಾವೇಶದೆದುರು ಒತ್ತೆಮನ್ನನ ಯಾವುದೆ ಆಟ ನಡೆಯಲಿಲ್ಲ. ನೋಡು ನೋಡುತ್ತಿದ್ದಂತೆ ಒತ್ತೆಮನ್, ಥಲ್ಲಾ, ಥಲ್ಲಾನ ಇಬ್ಬರು ಸಹೋದರರು ಹಾಗೂ ಮೂವರು ಮಕ್ಕಳು ಈ ದ್ವಂದ್ವ ಹೋರಾಟದಲ್ಲಿ ನೆಲ ಕಚ್ಚಿದರಷ್ಟೇ ಅಲ್ಲ ಕೊನೆಯುಸಿರನ್ನೂ ಸಹ ಎಳೆದರು.


ಇದನ್ನ ನೋಡುತ್ತಲೆ ಸಾಂಪ್ರದಾಯಿಕವಾದ ಕ್ರಮಕ್ಕೆ ಜೋತು ಬಿದ್ದು ಹೀಗೆ ಸೈನ್ಯದ ವೀರರನ್ನೆಲ್ಲಾ ಕಳೆದುಕೊಳ್ಳುವುದಕ್ಕಿಂತಾ ಒಮ್ಮೆಗೆ ಪಡೆಗೆ ಪಡೆಯೆ ಮುನ್ನುಗ್ಗಿ ವೈರಿ ಸೈನ್ಯವನ್ನು ಹೊಸಕಿ ಹಾಕಬಹುದಲ್ಲ! ಎನ್ನುವ ವಿವೇಕದ ಅರಿವು ಖುರೈಷಿ ಪಾಳಯಕ್ಕೆ ಮೂಡಿತು. ಅದರಂತೆಯೆ ಯುದ್ಧ ನೀತಿಯನ್ನ ಬದಲಿಸಿ ಕಾದಾಟ ಆರಂಭಿಸಲಾಯಿತು. ಪೂರ್ಣ ಪ್ರಮಾಣದ ಸಮರ ಕಳೆಗಟ್ಟಿತು. ಖುರೈಷಿಗಳ ನಾಯಕನಾಗಿದ್ದ ಖಾಲಿದ್ ಅತ್ಯಂತ ತ್ವರಿತವಾಗಿ ತಾಳ್ಮ ಹಾಗೂ ಅತಿ ಜಾಣ್ಮೆಯಿಂದ ಮಹಮದನ ನೇತೃತ್ವದ ದಳವನ್ನು ಸುತ್ತುವರೆದು ಮಹಮದನ ಹಿಂಭಾಗದಿಂದ ಘೇರಾಯಿಸಿದ. ಈ ಅನಿರೀಕ್ಷಿತವಾದ ತಮ್ಮವರಿದ್ದ ದಿಕ್ಕಿನಿಂದಲೆ ಎರಗಿಬಂದ ಮಾರಾಣಾಂತಿಕ ಹೊಡೆತವನ್ನ ತಾಳಲಾರದೆ ಮಹಮದನ ಮೆಚ್ಚಿನ ಬಂಟ ಮಸೂದ್ ಅಸುನೀಗಿದ.



ಅಬು ಸಫ್ಯಾನನ ಮಡದಿ ಪ್ರತಿಕಾರ ತಪ್ತೆ ಹಿಂದ್ ನೇಮಿಸಿದ್ದ ಯೋಧ ವಹೀಶ್ ತನ್ನ ಉದ್ದದ್ದ ಭಲ್ಲೆಯಿಂದ ಬೀಸಿ ಹೊಡೆದು ಹಂಝಾನನ್ನು ಕುದುರೆಯಿಂದ ಕೆಳಗೆ ಕೆಡವಿದ. ಅವನು ತನಗೆ ಹಿಂದ್ ಹಣ ಪಾವತಿಸಿ ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದ. ಅವಳ ಪ್ರತಿಕಾರ ಈಗ ಬಹುಮಟ್ಟಿಗೆ ತೀರುವ ಹಂತಕ್ಕೆ ಬಂದಿತ್ತು. ಎಲ್ಲೆಲ್ಲೂ ವಿರೋಧವನ್ನೆದುರಿಸಿದ ಮಹಮದನ ಪಡೆ ಶತ್ರುಗಳ ಹೊಡೆತದ ಭೀಕರತೆ ಸಹಿಸಲಾರದೆ ಸಹಜವಾಗಿ ಹಿಮ್ಮೆಟ್ಟಿತು. ಸಿಕ್ಕ ಸಿಕ್ಕ ಹಾದಿಬೀದಿ ಹಿಡಿದು ಮುಸಲ್ಮಾನ ಯೋಧರು ಬೆಟ್ಟ ಕಣಿವೆ ಕಳ್ಳು ಬಿದ್ದು ಓಡ ತೊಡಗಿದರು. ಒಂದು ಎತ್ತರದ ಸ್ಥಳದಲ್ಲಿ ಹತಾಶನಾಗಿ ನಿಂತು ಇದನ್ನೆಲ್ಲ ವೀಕ್ಷಿಸುತ್ತಿದ್ದ ಸೇನಾನಾಯಕ ಮಹಮದ್ ಅತಿ ಚಾಣಾಕ್ಷತನದಿಂದ ಹಾಗೂ ಸಮಯಾವಧಾನದಿಂದ ಖಾಲಿದ್ ತನ್ನೆಡೆಗೆ ಮಾಡಿದ ಆಕ್ರಮಣದಿಂದ ಕೂದಲೆಳೆಯ ಅಂತರದಿಂದ ಪಾರಾದ.


ಅದರ ಅರಿವಿಲ್ಲದ ಖಾಲಿದ್ ಮರಳಿ ಅಲ್ಲೆ ಅವನ ಸುತ್ತಲೆ ಕೊಂಚ ಸಮಯ ಅಲೆದಾಡಿದರೂ ಬೋರಲು ಬಿದ್ದಂತೆ ನಟಿಸುತ್ತಿದ್ದ ಮಹಮದನ ಮುಖ ಕಾಣದೆ ಅಲ್ಲಿಂದ ಕಾಲ್ತೆಗೆದ ಕಾರಣ ಈತ ಜೀವ ಉಳಿಸಿಕೊಂಡ. ಖಾಲಿದ್ ಅತ್ತ ಸಾಗುತ್ತಲೆ ಎದ್ದ ಮಹಮದ್ ಹಿಮ್ಮೆಟ್ಟಿ ಕಂಗಾಲಾಗಿ ಓಡುತ್ತಿದ್ದ ಮುಸಲ್ಮಾನ ಯೋಧರನ್ನ ಕೂಗಿ ಕೂಗಿ ಕರೆಯುತ್ತಾ "ಎಲ್ಲಿಗೆ ಹೋಗುತ್ತೀರಿ! ಎಲ್ಲಿಗೆ ಹೋಗುತ್ತೀರಿ! ಓಡದಿರಿ ವಾಪಾಸ್ಸು ಬನ್ನಿ!! ನಾನು ದೇವರ ಪ್ರವಾದಿ!!!" ಎಂದು ಹುರಿದುಂಬಿಸುವಂತೆ ಚೀರಾಡತೊಡಗಿದ. ಆದರೆ ಪ್ರವಾದಿಯ ಕರೆಗೆ ಹೆದರಿ ಓಡುತ್ತಿದ್ದ ಯಾರೂ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡಲಿಲ್ಲ! ಸದ್ಯಕ್ಕೆ ಅವರೆಲ್ಲರಿಗೆ ತಮ್ಮ ಪ್ರಾಣ ಉಳಿಸಿಕೊಳ್ಳುವುದಷ್ಟೇ ಮುಖ್ಯವಾಗಿತ್ತು. ಹೀಗಾಗಿ ಉಸಿರು ಬಿಟ್ಟು ಅಲ್ಲಿಂದ ಎಲ್ಲರೂ ನಿಟ್ಟೋಟ ಹೂಡಿದರು.


ಇತ್ತ ಈ ಪ್ರಹಸನ ನಡೆಯುತ್ತಿದ್ದಂತೆ ಖುರೈಷಿಗಳ ಒಂದು ಪಡೆ ಮಹಮದನತ್ತ ನುಗ್ಗಿ ಬಂತು. ಆತನ ಸುರಕ್ಷತೆಗೆ ಸುತ್ತುವರೆದಿದ್ದ ಕೆಲವು ಮುಸಲ್ಮಾನ ಯೋಧರ ಮೇಲೆ ಬಾಣಗಳ ಸುರಿಮಳೆಗೈಯಲಾಯಿತು. ಖುರೈಷಿ ಯೋಧನಾದ ಇಬ್ನ್ ಕಮಿಯಾ ಮುನ್ನುಗ್ಗಿ ಬಂದು ಮಹಮದನೂ ಸೇರಿದಂತೆ ಅವರೆಲ್ಲರಿಗೂ ತನ್ನ ಖಡ್ಗದ ಹೊಡೆತದ ರುಚಿ ತೋರಿಸಿದ. ಮಹಮದನಿಗೂ ಹಣೆ ಹಾಗೂ ಕೆನ್ನೆಯ ಮೇಲೆ ಮಾರಾಣಾಂತಿಕ ಹೊಡೆತಗಳು ಬಿದ್ದವು. ಆತ ತನ್ನ ಕುದುರೆಯಿಂದ ಕೆಳಗುರುಳಿದ.


ಆತ ಹಾಗೆ ಕೆಳಗೆ ಬಿದ್ದರೂ ಸಹ ಮಿಸುಗಾಡದಿರುವುದನ್ನ ಕಂಡ ಇಬ್ನ್ ಕಮಿಯಾ ಸಂತೋಷದಿಂದ ಮಹಮದ್ ಸತ್ತನೆಂದು ದೊಡ್ಡ ಧ್ವನಿಯಲ್ಲಿ ಘೋಷಿಸಿದ. ತನ್ನ ಸಂಬಂಧಿಕರಿಗೆಲ್ಲಾ ಕೂಗುತ್ತಾ ಈ ಸುದ್ದಿ ಸಾರಿದ. ಖುರೈಷಿಗಳ ಉದ್ದೇಶ ಸಫಲವಾದಂತಾಗಿತ್ತು. ಹೀಗಾಗಿ ಯುದ್ಧದ ರಂಗು ಸಹಜವಾಗಿ ಬದಲಾಯಿತು. ಮಹಮದನೆ ಸತ್ತ ಮೇಲೆ ಮದೀನಾದತ್ತ ನುಗ್ಗಿ ಅದನ್ನ ದೋಚುವತ್ತ ಅವರಿಗ್ಯಾರಿಗೂ ಆಸಕ್ತಿ ಉಳಿಯಲಿಲ್ಲ. ಹೀಗಾಗಿ ಅವರು ಮದೀನಾವನ್ನು ಸೂರೆ ಹೊಡೆಯಲಿಲ್ಲ. ಇತ್ತ ಗಾಯಗೊಂಡ ಮಹಮದನನ್ನು ಎತ್ತಿಕೊಂಡ ಅವನ ಬೆಂಬಲಿಗರು ಯುದ್ಧರಂಗದಿಂದ ಕಾಲ್ಕಿತ್ತರು.


ಮಹಮದನ ಸಂಗಡಿರರು ಆತನನ್ನ ಇತರ ಗಾಯಾಳು ಸೈನಿಕರನ್ನೂ ಸಹ ಉಪಚರಿಸುತ್ತಿದ್ದ ಬೆಟ್ಟದ ಇನ್ನೊಂದು ಭಾಗಕ್ಕೆ ಕೊಂಡೊಯ್ದರು. ಅಲ್ಲಿ ಶುದ್ಧ ನೀರಿನಲ್ಲಿ ಅವನ ಕೆನ್ನೆ ಹಾಗೂ ಹಣೆಗಾಗಿದ್ದ ರಕ್ತ ಗಾಯವನ್ನು ತೊಳೆದು ತೆಗೆಯಲಾಯಿತು. ಆತ ವಿಪರೀತ ನಿತ್ರಾಣನೂ ಹತಾಶನೂ ಆಗಿದ್ದ. ಈ ಉಪಚಾರ ನಡೆಯುತ್ತಿರುವಾಗಲೆ "ದೇವರ ಪ್ರವಾದಿಯನ್ನು ಹೀಗೆ ನಡೆಸಿಕೊಂಡ ಅಧರ್ಮಿಗಳು ಅದು ಹೇಗೆ ತಾನೆ ಉದ್ಧಾರವಾದಾರು? ಪ್ರವಾದಿಯ ಮುಖವನ್ನು ಅವನ ರಕ್ತದಿಂದ ತೋಯ್ದ ಆ ಕೈಗಳು ನರಕದ ಬೆಂಕಿಯಲ್ಲಿ ಸುಡಲಿ, ಅವರ ಪಾಪಾತ್ಮಗಳನ್ನ ದೇವರ ಕ್ರೋಧಾಗ್ನಿ ದಹಿಸಲಿ!" ಎಂದು ಶಪಿಸಿದ ಎನ್ನುತ್ತಾರೆ ತಮ್ಮ 'ದ ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಇನ್ನೂರಾ ಅರವತ್ತೆರಡರಲ್ಲಿ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್.



ಇತ್ತ ಯುದ್ಧ ಭೂಮಿಯಲ್ಲಿ ಮಹಮದನ ಶವಕ್ಕಾಗಿ ಖುರೈಷಿಗಳು ಜಾಲಾಡುತ್ತಿದ್ದರು. ಅದವರಿಗೆ ದೊರಕದೆ ಹೋದಾಗ ಸಹಜವಾಗಿ ಅವನ ಇನ್ನಿಲ್ಲವಾಗುವಿಕೆ ಸಂಶಯವಾಗಿ ಉಳಿಯಿತವರಿಗೆ. ಈ ಸಿಟ್ಟಿನಲ್ಲಿಯೆ ಸತ್ತವರ ಶವಗಳನ್ನ ಬರ್ಬರವಾಗಿ ಛಿದ್ರಗೊಳಿಸುತ್ತಾ ಸಾಗಿದರವರು. ಹಿಂದ್ ಪೂರ್ತ ಸ್ವಯ ಕಳೆದುಕೊಂಡಂತಾಗಿದ್ದಳು. ಹಂಝಾನ ಶವವನ್ನ ಹಿತ್ತು ಎಳೆದಾಡಿ ಚಿಂದಿ ಮಾಡಿ ಸುಖಿಸಿದಳು. ಸಾಲದ್ದಕ್ಕೆ ಆತನ ಯಕೃತ್ತನ್ನ ಹಸಿ ಹಸಿಯಾಗಿಯೆ ಕಿತ್ತು ಚೀಪಿ ತನ್ನ ಘನ ಘೋರ ಪ್ರತಿಜ್ಞೆಯನ್ನು ಪೂರೈಸಿಕೊಂಡಳು! ಶವದ ಬೆರಳು ಹಾಗೂ ಚರ್ಮಗಳನ್ನ ಕಿತ್ತು ತನ್ನ ತೋಳಬಂಧಿಯಂತೆ ಕಟ್ಟಿಕೊಂಡಳು. ಆ ಕ್ಷಣದಲ್ಲಿ ಅವಳ ವಿವೇಕ ಪೂರ್ತಿ ಇನ್ನಿಲ್ಲವಾಗಿತ್ತು.



ಖುರೈಷಿ ನಾಯಕ ಅಬು ಸಫ್ಯಾನ್ ಹಾಗೂ ಓಹಾದ್ ಬೆಟ್ಟದ ಬುಡದಲ್ಲಿ ನಿಂತು ಮಹಮದ್, ಅಬು ಬಕರ್ ಹಾಗೂ ಓಮರ್'ನ ಹೆಸರನ್ನ ಕೂಗಿ ಕರೆದರೂ ಕೇವಲ ತಮ್ಮದೆ ಕಂಠ ಪ್ರತಿಧ್ವನಿಸಿತಲ್ಲದೆ ಅವರ್ಯಾರಿಂದಲೂ ಯಾವುದೆ ಪ್ರತಿಕ್ರಿಯೆ ಕೇಳಿ ಬರಲಿಲ್ಲ. ಯಾವ ಮಾರುತ್ತರವನ್ನೂ ಕಾಣದೆ ಅವರೆಲ್ಲಾ ಸತ್ತರೆಂದು ಅಬು ಸಫ್ಯಾನ್ ತನ್ನ ಪಡೆಗಳಿಗೆ ಸಾರಿದ. ಆದರೆ ಆದ ಈ ಅವಮಾನವನ್ನ ತಾಳಿಕೊಳ್ಳುವ ತಾಳ್ಮೆ ಇಲ್ಲದ ಓಮರ್ ಇನ್ನೊಂದು ದಿಕ್ಕಿನಿಂದ "ನಾವ್ಯಾರೂ ಸತ್ತಿಲ್ಲ!, ನಮ್ಮನ್ನು ಕೊಲ್ಲಲು ನಿಮ್ಮಿಂದ ಸಾಧ್ಯವೂ ಇಲ್ಲ!" ಎಂದು ಮಾರುತ್ತರಿಸಿದ. ಆಗ ಅಬು ಸಫ್ಯಾನ್ ಹೌಹಾರಿ "ಹೌದಾ! ಸರಿ ಅದನ್ನ ಇದೆ ಯುದ್ಧ ಕಣದಲ್ಲಿ ಇದೆ ದಿನ ಮುಂದಿನ ವರ್ಷ ಸಂಧಿಸಿ ನಿರ್ಧರಿಸೋಣ?!" ಎಂದು ಪ್ರತಿಕ್ರಿಯಿಸಿದ. ಗೆದ್ದ ಖುರೈಷಿ ಸೈನ್ಯ ಯುದ್ಧವನ್ನ ಅಲ್ಲಿಗೆ ಮೊಟಕುಗೊಳಿಸಿ ಮೆಕ್ಕಾದತ್ತ ಪ್ರಯಾಣ ಆರಂಭಿಸಿದರು.



ಅವರ ನಿರ್ಗಮನವನ್ನು ಖಚಿತ ಪಡಿಸಿಕೊಂಡ ನಂತರ ಮಹಮದ್ ಹಾಗೂ ಸಂಗಡಿಗರು ಬೆಟ್ಟವನ್ನ ಇಳಿದು ಕೆಳಗೆ ಬಂದರು. ಅವರ ಸೋತ ಪಡೆ ಮದೀನಾಕ್ಕೆ ಮರಳಿತು. ಆದರೆ ಈ ಹೊತ್ತಿಗೆ ಖುರೈಷಿಗಳ ಗೆಲುವಿನ ಸುದ್ದಿ ಮದೀನಾ ಮುಟ್ಟಿ ಮೆಕ್ಕಾದ ಈ ವಿಜಯಿ ಪಡೆ ಒಂದು ವೇಳೆ ನಮ್ಮ ನಗರದ ಮೇಲೆ ಧಾಳಿಯಿಟ್ಟರೆ ಗತಿಯೇನು? ಎಂದು ಮದೀನಾ ನಿವಾಸಿಗಳೆಲ್ಲಾ ಆತಂಕಿತರಾಗಿದ್ದರು. ಮೆಕ್ಕಾದ ಸೇನೆ ಮರಳಿದ ಸುದ್ದಿ ಕೇಳಿದ ಅವರಿಗೆ ಅದರ ಬಗ್ಗೆ ಸಂಶಯ ಉಳಿದಿತ್ತಾದರೂ ಆತಂಕದ ನಡುವೆಯೂ ಅವರು ತುಸು ನೆಮ್ಮದಿ ಪಟ್ಟರು.


ಇಡಿ ರಾತ್ರಿ ಮಸೀದಿಯ ಬಳಿ ಹೆಂಗಸರ ರೋಧನೆ ನಡೆದಿತ್ತು. ಅದರ ಅನುರಣದ ಹಿನ್ನೆಲೆಯಲ್ಲಿ ಇರುಳಿಡಿ ಮಹಮದನೂ ಮಲಗಲಾರದೆ ಒದ್ದಾಡಿದ. ಬೆಳಗ್ಯೆ ಮಸೀದಿ ಪ್ರವೇಶಿಸುವಾಗ, ಅದ್ಯಾರು ರಾತ್ರಿ ಹಾಗೆ ರೋಧಿಸುತ್ತಿದ್ದುದು? ಎಂದು ವಿಚಾರಿಸಿದಾಗ ಹಂಝಾನ ಸಾವಿನ ಹಿನ್ನೆಲೆಯಲ್ಲಿ ಹೆಂಗೆಳೆಯರು ಹೀಗೆ ರೋಧಿಸಿದ್ದರು ಎಂದು ತಿಳಿದು ಬಂತು. ಅವರನ್ನು ಸಂತೈಸಿದ ಮಹಮದ್ ಮನೆಗೆ ಸಾಗ ಹಾಕಿದ. ಅಂದಿನಿಂದ ಮುಸಲ್ಮಾನ ಪ್ರಪಂಚದ ಸಂಪ್ರದಾಯಗಳಿಗೆ ಇದೊಂದು ಹೊಸ ಸೇರ್ಪಡೆಯಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಕ್ರಮೇಣ ಯಾವ ಮುಸಲ್ಮಾನ ಸತ್ತರೂ ಸಹ ಮೊತ್ತಮೊದಲಿಗೆ ಹಂಝಾನ ಸ್ಮರಣಾರ್ಥ ರೋಧಿಸಿ ಅನಂತರ ಸತ್ತವರ ಸಂತಾಪ ಸೂಚಕವಾಗಿ ಅಳುವ ಕ್ರಮ ಜಾರಿಯಲ್ಲಿದೆ.



ಮದೀನಾದಲ್ಲಿ ಆವರಿಸಿದ್ದ ಆತಂಕ ಹಾಗೂ ತನ್ನೊಳಗೆ ಮಡುಗಟ್ಟಿದ್ದ ಪ್ರತಿಕಾರದ ಬೆಂಕಿಯನ್ನ ತಣಿಸುವ ಸಲುವಾಗಿ ಮಹಮದ್ ಮೆಕ್ಕಾದ ಖುರೈಷಿಗಳನ್ನ ಬೆನ್ನಟ್ಟುವ ನಿರ್ಧಾರಕ್ಕೆ ಬಂದ. ಇದಕ್ಕಾಗಿ ಆತ ಕೇವಲ ತನ್ನವರಲ್ಲದೆ ಇನ್ನಿತರ ಮದೀನಾ ವಾಸಿಗಳ ಸಹಾಯವನ್ನೂ ಸಹ ಅಪೇಕ್ಷಿಸಿದ. ಗಾಯಗೊಂಡು ಘಾಸಿಯಾಗಿದ್ದರೂ ಸಹ ಆತನೆ ಮುಂದಾಳತ್ವ ವಹಿಸಿಕೊಂಡು ಕುದುರೆಯೇರಿದ. ತನ್ನ ಸಂಗಡಿಗರೊಂದಿಗೆ ಆತ ಹೋಗುವಾಗ ದಾರಿಯಲ್ಲಿ ಹಮ್ರಾ ಅಲ್ ಅಸದ್ ಎನ್ನುವ ಸ್ಥಳದಲ್ಲಿ ಎರಡು ಮೃತ ದೇಹಗಳು ಕಾಣಸಿಕ್ಕವು. ಅವರಿಬ್ಬರೂ ಖುರೈಷಿಗಳ ಚಲನ ವಲನದ ಮೇಲೆ ಕಣ್ಣಿಡಲು ಕಳುಹಿಸಲಾಗಿದ್ದ ಮಹಮದನ ಗೂಢಚರರಾಗಿದ್ದರು. ಅವರ ಬಗ್ಗೆ ಸಂಶಯಗೊಂಡ ಖುರೈಷಿಗಳು ಅವರಿಬ್ಬರನ್ನೂ ಸೆರೆ ಹಿಡಿದು ಬರ್ಬರವಾಗಿ ಕೊಂದೆಸೆದು ಹೋಗಿದ್ದರು. ಸೈನ್ಯ ಆ ಸ್ಥಳದಲ್ಲಿ ಭರ್ಜರಿ ಖರ್ಜೂರದ ತೋಟಗಳನ್ನ ಕಂಡರು. ಸುಸ್ತಾಗಿದ್ದ ಅವರಿಗೆಲ್ಲಾ ಅದರ ಸೇವನೆ ತೃಪ್ತಿ ತಂದಿತು. ಎರಡು ಮೂರು ದಿನಗಳವರೆಗೆ ಅಲ್ಲಿಯೇ ಬೀಡು ಬಿಟ್ಟ ಮಹಮದನ ಸೇನೆ ತನ್ನ ಆರಂಭ ಶೂರತ್ವವನ್ನ ಅಲ್ಲಿಯೆ ಕೈಬಿಟ್ಟು ಮದೀನದತ್ತ ಮರಳಿತು.


ಹಮ್ರಾ ಅಲ್ ಅಸದ್'ನಲ್ಲಿ ಮಹ್ಮದನಿಗೂ ಒಬ್ಬ ವೈರಿ ಸೆರೆ ಸಿಕ್ಕಿದ. ಅಬು ಅಝಾ ಎನ್ನುವ ಆತ ಒಬ್ಬ ಉತ್ತಮ ಕವಿಯಾಗಿದ್ದ. ಬದರ್ ಯುದ್ಧದಲ್ಲಿ ಸೆರೆಯಾಗಿದ್ದರೂ ಅವನನ್ನ ಮಹಮದ್ ಕ್ಷಮಿಸಿ ಬಿಡುಗಡೆ ಮಾಡಿದ್ದ. ತನಗೆ ಐವರು ಪುತ್ರಿಯರಿದ್ದಾರೆಂದು ಅಂಗಲಾಚಿದ್ದಾಗ ಇನ್ನು ಮುಂದೆ ತನ್ನ ವಿರುದ್ಧ ಸೆಣೆಸ ಕೂಡದು ಎನ್ನುವ ಶರತ್ತನ್ನ ವಿಧಿಸಿ ಮಹಮದ್ ಕವಿ ಅಝಾನನ್ನು ಬಿಟ್ಟು ಕಳಿಸಿದ್ದ. ಆದರೆ ಈ ಬಾರಿ ಆತನ ನಸೀಬು ಸಂಪೂರ್ಣ ಕೆಟ್ಟಿತ್ತು. ಆತನ ಯಾವುದೆ ಆರ್ತ ಮನವಿಗೂ ಮನ್ನಣೆ ನೀಡದ ಮಹಮದ್ ಆತನ ತಲೆ ಕಡಿಯಲು ಆಜ್ಞಾಪಿಸಿದ.


ಅದೇ ಬಗೆಯಲ್ಲಿ ದುರ್ದೆಸೆ ತಂದುಕೊಂಡವ ಮತ್ತೊಬ್ಬ ಖುರೈಷಿ ಯೋಧ ಮುಆವಿಯಾ ಎಂಬಾತ. ಆತ ಮೆಕ್ಕಾಗೆ ಮರಳುವ ಹಾದಿಯಲ್ಲಿ ದಿಕ್ಕು ತಪ್ಪಿ ಮದೀನಾ ಬಂದು ತಲುಪಿದ್ದ! ಆತ ಮೂರು ದಿನಗಳ ಕಾಲ ಮಹಮದನ ಅಳಿಯ ಒತ್ತಮನ್ ಮನೆಯಲ್ಲಿ ಆಶ್ರಯ ಪಡೆದಿದ್ದ. ನಾಲ್ಕನೆ ದಿನ ಮರಳಿ ಮೆಕ್ಕಾದ ಹಾದಿ ಹಿಡಿಯುವಾಗ ಮಹಮದ ಕೈಗೆ ಸಿಕ್ಕಿ ಬಿದ್ದ. ಆತನ ಈ ವಿಸ್ತರಿಸಿದ ಮದೀನಾ ವಾಸದ ಕಥೆ ಕೇಳಿ ಕ್ರೋಧಿತನಾದ ಮಹಮದ್ ಆತನ ತಲೆ ಕಡಿಯಲು ಆಜ್ಞಾಪಿಸಿದ.


ಓಹೋದ್ ರಣರಂಗದಲ್ಲಿ ಮಡಿದ ಮುಸಲ್ಮಾನರ ಬಗ್ಗೆ ಮಹಮದ್ ಉದಾತ್ತವಾಗಿ ನುಡಿದು ಅವರೆಲ್ಲರ ಗುಣಗಾನ ಮಾಡಿದ. ಅವರೆಲ್ಲರೂ ಹುತಾತ್ಮರಾಗಿ ಸವ್ರಗ ಸೇರಿದ್ದು ಅಲ್ಲಿ ದೇವರ ಪ್ರೀತಿಯ ಕಟಾಕ್ಷಕ್ಕೆ ಪಾತ್ರರಾಗಿದ್ದಾರೆ ಎಂದು ಮಹಮದ್ ಸಾರಿದ. ಖುರ್ಹಾನಿನ ಸುರಾಗಳ ಮೂಲಕ ಓಹೋದ್ ಯುದ್ಧ ನಂತರದ ದೈವ ಸಂದೇಶಗಳನ್ನವನು ಸಾರಿದ. ಸುರಾ ೩/೧೪೪೪, ೩/೧೨೧-೧೮೦ರಲ್ಲಿ ನಾವಿದನ್ನ ಕಾಣಬಹುದು.



( ಇನ್ನೂ ಇದೆ.)




No comments:

Post a Comment