ಹಬ್ಬವಂತೆ ಊರಿಗೆಲ್ಲ ಗಬ್ಬವಂತೆ ಮುಡುಡಿದ ಮೌನಿ ಮನಸುಗಳೆಲ್ಲ
ಆದರೆ ಚಂದ್ರನಿಗಾಗಿ ಮಾತ್ರ ಅರಸುವ ಎಲ್ಲರ ಬಾನಲ್ಲಿ
ಈ ದಿನ ರವಿ ಮಾತ್ರ ಮೂಡಲೆ ಇಲ್ಲ,
ಶೋಕಕ್ಕೆ ಸ್ಮಶಾನ ಮಾತ್ರ ಮಿತಿ
ಅಂತರಂಗದ ನೋವಿಗೆ ತನ್ನೊಡಲ ಕಿರು ಸಾಂತ್ವಾನ ಮಾತ್ರವೆ ಗತಿ....
ನಿತ್ಯ ಆಗುತ್ತಿರೋದು ಮೊನ್ನೆ ಕೊಲೆಯಾಗಿ ಸತ್ತವನದಲ್ಲ
ಬದ್ಧತೆಯ ಚೌಕಟ್ಟಿನಲ್ಲಿ ಬದುಕುತ್ತಿರುವ ಪ್ರತಿ ಸಜ್ಜನರ ತಿಥಿ/
ಮತ್ತೆ ಮೇಲೆತ್ತಿ ಕೊಲ್ಲಬೇಡಿ ಒಮ್ಮೆ ಹೂಳಿದ ಆ ಕಾಯಕ ನಿಷ್ಠನ ಹೆಣವನ್ನ
ಕೆಸರೆರೆಚಿ ಮಸಿ ಹಚ್ಚಿ ವಿಕಾರವಾಗಿಸಬೇಡಿ ಅಳಿಸಲಾಗದ ಅವನ ಸಾತ್ವಿಕ ಗುಣವನ್ನ,
ಇನ್ನು ಅವನಿಲ್ಲ ಇನ್ಯಾರಿಗೂ ಆ ಧೈರ್ಯವೂ ಇರೋಲ್ಲ
ಚಿಂತೆ ಇನ್ನಿಲ್ಲ ಮುಕ್ಕಿ ಎರಡೂ ಕೈಗಳಿಂದ ಗೋರಿ ಗೋರಿ ಸಿಗುವ ಹಡಬೆ ಹಣವನ್ನ//
ಜಡ ಗಟ್ಟಿದ ವ್ಯವಸ್ಥೆಯಲ್ಲಿ ನೈಜವಾದ
ನಸು ಕಾಳಜಿ ಹೊಂದಿದವನೆ ಕಡುಪಾಪಿ....
ಮುಖವೆ ಕಾಣದ ಮುಸಿಯಗಳ ನಾಡಿನಲ್ಲಿ
ಸ್ವಚ್ಛ ಮನದ ಸುಂದರ ಮನುಷ್ಯನೆ ಪರಮ ಕುರೂಪಿ,
ಬಟಾ ಬಯಲಲ್ಲಿ ಎಲ್ಲಾ ಬಿಚ್ಚಿ ಹಾಕಿ ಬರಿ ಬತ್ತಲು ತಿರುಗುವ
ತಲೆ ತಿರುಕರ ಪ್ರಕಾರ ಅಂಗಿ ಚೊಣ್ಣ ಧರಿಸಿರೋವವನೆ ಮಾನಗೆಟ್ಟವ...
ಮರ್ಯಾದೆಯ ಪರಿಧಿಯಲ್ಲಿ ಬಾಳಲು ಹವಣಿಸುವವನೆ
ಎಲ್ಲರಿಂದ ಅನ್ನಿಸಿಕೊಳ್ಳುತ್ತಾನೆ ಇಲ್ಲಿ ಮೂರೂ ಬಿಟ್ಟವ/
ಸಂಪನ್ನರಿದ್ದಾರೆ ಎಚ್ಚರಿಕೆ ನೀವು ಖದೀಮರಾದೀರ!
ಕಾಸಿನ ಮುಂದೆ ಕೂಸಿನ ಮನಸಿದ್ದವರೂ ಕಂಗಾಲಾಗಲೆಬೇಕು
'ಹಣವ ಕಂಡರೆ ಹೆಣವೂ ಬಾಯಿ ಬಿಡುತ್ತದೆ' ಎನ್ನುವ ಗಾದೆ ಇಲ್ಲಿ ಅಜರಾಮರ,
ವಾಸ್ತವಕ್ಕೆ ತೋರಿಸಲು ಸ್ವಂತದ್ದೊಂದು ಮುಖ ಇಲ್ಲದವರೆ ಹೆಚ್ಚು
ಮುಖ ಪುಸ್ತಕದ ಮಾರಿ ಮನೆಮನೆ ಹೊಕ್ಕಿರುವ ಈ ಹೊತ್ತು
ಅಧಮ ಮಾನಸಿಕ ಭ್ರಷ್ಟ ವ್ಯಭಿಚಾರಿಚಾರಿಗಳೆ ಪರಮ ಗೌರವಾನ್ವಿತರು ಇಲ್ಲಿ ಯಾವತ್ತೂ//
ಭಾರವಾದ ಮನಸ್ಸಿನಿಂದ ಬೀಳ್ಕೊಟ್ಟೆ ನಾನು
ನೆನ್ನೆಯ ಕೆಲವು ಈಡೇರದ ಕನಸುಗಳನ್ನ...
ಅವಕ್ಕೂ ಸುಮ್ಮನೆ ಕಸಿವಿಸಿ ನನಗೂ ವೇದನೆ ಇನ್ನೆಷ್ಟು ಕಾಲ ಅಂತ ಕಾಯಲಿ?
ಸಾಕಾರವಾಗದೆ ಸದಾ ಕೊಳೆಯುತ್ತಿರುವ ಅವುಗಳ ಹೆಣ,
ಪುನರ್ಜನ್ಮದ ಬಗ್ಗೆ ನನಗೇಕೋ ವಿಪರೀತ ಮೋಹ ಹಾಗೂ ನಂಬಿಕೆ
ಆಗಲಾದರೂ ನನ್ನವಾದಾವವೆಲ್ಲ ಇದ್ದರೆ ಒಂದೊಮ್ಮೆ ಋಣ...
ಅಂತೆಯೆ ನಾಲ್ಕು ಹನಿ ಕಂಬನಿ ಅದರ ಅಂಗೈ ಮೇಲೆ ಉರುಳಿಸುತ್ತಾ
ದುಃಖ ತಪ್ತ ಧ್ವನಿಯಲ್ಲಿ ಇಂತುಸುರಿದೆ
ವಿಧಿ ಬಯಸಿದರೆ ಆಗ ಮತ್ತೆ ಪುನಃ ಭೇಟಿಯಾಗೋಣ/
ಇಂದು ಬಾಳುವ ನನಗೆ ನೆನ್ನೆಯ ನೆರಳೂ ಬೇಕು
ಜೊತೆಗೊಂದಿಷ್ಟು ನಾಳಿನ ನೆರವೂ ಸಹ ಇದ್ದಿರಬೇಕು...
ಮನ ಕಲ್ಲಾದಷ್ಟೂ ಮೌನ ಗಟ್ಟಿಯಾಗಿ ಅಲ್ಲಿಂದ ಮರಳಿ ಮಾರ್ದನಿಸುತ್ತದೆ
ನನಗೂ ಕಳೆದು ಹೋದ ಆ ಸಾಂಗತ್ಯ ಮತ್ತೆ ಮತ್ತೆ ಬೇಕೆನಿಸುತ್ತದೆ,
ಅದೇನೆ ಇದ್ದರೂ ಕೊನೆಗೆ ನಾನೂ ಒಬ್ಬ ಮಾನವ
ಹಂಚಿಕೊಳ್ಳಲು ಕಷ್ಟ ಸುಖ ಬೇಕನಿಸುತ್ತದೆ ಇರಲೊಂದು ಜೊತೆಗೆ ಜೀವ//
No comments:
Post a Comment