ಭಾವಗಡಲ ಅಲೆಗಳೆಲ್ಲ ಎದೆ ತೀರಕ್ಕೆ ಹಿತವಾಗಿ ಸೋಕಿ
ನಿರೀಕ್ಷೆ ಅಡ್ಡ ಮಳೆಯ ಹನಿಗಳ ತುಂತುರು
ಎದೆ ಕಿಟಕಿಯ ಗಾಜನ್ನ ಒಂದೊಂದಾಗಿ ತಾಕಿ,
ಅದುವರೆಗೆ ಹಸಿದು ಬರಡಾಗಿದ್ದ
ಮನದ ಒಣ ನೆಲದಲ್ಲಿ ಅನಿರೀಕ್ಷಿತವಾಗಿ
ಅನೇಕ ಆಸೆಯ ಅಣಬೆಗಳು ತುಸುವೂ ಸುಳಿವುಕೊಡದೆ ಅರಳಿದ್ದವು/
ಕಾಲಚಕ್ರ ಅತಿವೇಗವಾಗಿ ತಿರುಗಿ
ಸ್ವಪ್ನದಿಳೆ ತಡೆಯಲಾಗದ ವಿರಹದ ಚಳಿಗೆ ತಾನು ಮುದುಡಿ....
ಅಲ್ಲಿ ಬಿದ್ದ ನಿರಾಕರಣೆಯ ಇಬ್ಬನಿಯ ಹನಿಗಳೆಲ್ಲ ಮೂಡಿ
ತುಸುವೂ ಹೊತ್ತಾಗಿರದಿದ್ದ ಆಕಾಂಕ್ಷೆಯ ಮೊಗ್ಗುಗಳನ್ನೆಲ್ಲ
ಅವು ನಗುವ ಮೊದಲೆ ಮುದುಡಿಸಿದವು,
ಆಗಷ್ಟೆ ತಿಳಿಯಾಗಿದ್ದ ಪ್ರಕ್ಷುಬ್ಧ ಮನ ಸರೋವರವನ್ನ
ಮತ್ತೆ ಮೊದಲಿಗಿಂತ ಹೆಚ್ಚಾಗಿ ಕದಡಿಸಿದವು//
ಹೋದ ನಿನ್ನ ಬಗ್ಗೆ ದೂರುಗಳಿಲ್ಲ
ಹೋಗಲು ನೀ ಕೊಟ್ಟ ಕಾರಣಗಳನ್ನೂ ಸಹ ನಾ ನಂಬುವುದಿಲ್ಲ,
ನಿಜವನ್ನೆ ನುಡಿದು ನೀ ನನ್ನ ತೊರೆಯಬಹುದಿತ್ತು...
ನನಗಂತೂ ಅದು ಅಸಾಧ್ಯ ಆದರೂ ನೀ ನನ್ನ ಈಗಿನದ್ದಕ್ಕಿಂತ
ವೇಗವಾಗಿ ಮರೆಯಬಹುದಿತ್ತು/
ಇನ್ಯಾರಿಗಾದರೂ ಅಪ್ಪಿತಪ್ಪಿ ನಾವಂಚಿಸಿಯೇನು
ಆದರೆ ನಿನ್ನ ಮುಂದೆ ತನುವಷ್ಟೆ ಅಲ್ಲ ನನ್ನ ಮನ ಸಹ ಬರಿ ಬೆತ್ತಲೆ,
ಬೆಳಕನ್ನ ನಿನ್ನಿಂದ ಕೇಳಿ ಮಾತ್ರ ಗೊತ್ತಿದ್ದ ಕುರುಡ ನಾನು
ಈಗ ನಿನ್ನ ಸಾಂಗತ್ಯವೂ ಇಲ್ಲದೆ...
ಬಾಳೆಲ್ಲ ನನಗೆ ಮೊದಲಿಂದ ಜೊತೆಯಾಗಿರುವ ಬರಿ ಕತ್ತಲೆ//
ಮುಗ್ಢವಾಗಿ ನಗುವ ಮಕ್ಕಳ ಅಭೋದ ಕಣ್ಣುಗಳಲ್ಲಿ
ನಾನಿನ್ನ ಅಡಿಗಡಿಗೆ ಕಾಣುತ್ತೇನೆ.....
ನಿನ್ನಲ್ಲೂ ಅಂತಹ ಕುತೂಹಲಕ್ಕೆ ಅರಳುವ ಮುಗ್ಧ ಮನಸೊಂದಿತ್ತಲ್ಲ
ಅನ್ನೊದನ್ನ ಬಾಳಿನ ಅನುಕ್ಷಣ ಮನಗಾಣುತ್ತೇನೆ,
ನಾನೇನೂ ತ್ಯಾಗಿಯಲ್ಲ ನಿನ್ನನ್ನಷ್ಟೆ ಪ್ರೀತಿಸಿದ ಪರಮ ಸ್ವಾರ್ಥಿ
ಇನ್ಯಾರಿಗೂ ತುಸುವೂ ಎಡೆ ಕೊಡದ ಹಾಗೆ
ಆವರಿಸಿಕೊಂಡಿದ್ದೀಯ ನೀನೆ ನನ್ನ ಕಿರು ಬಾಳ ಭರ್ತಿ/
ನಿನ್ನ ನಾಮದ ಹಣೆ ಪಟ್ಟಿ ಹಚ್ಚಿಕೊಳ್ಳುವ ಉಮೇದು ನನಗೂ ಇಲ್ಲ
ನನ್ನ ಹೆಸರ ಠಸ್ಸೆಯ ನಿನ್ನ ಖಾಸಗಿ ಬಾಳಲ್ಲಿ ಒತ್ತುವ
ಹಪಾಹಪಿಯೂ ಈಗ ಉಳಿದಿಲ್ಲ,
ಬಾಳು ಅಂದುಕೊಂಡದ್ದಕ್ಕಿಂತ ಕಿರಿದು ಅನ್ನುವ ಸತ್ಯ ನನಗೂ ಅರಿವಿದೆ
ನಾ ವಾಸ್ತವವಾದಿ....
ಹೆಚ್ಚೆಂದರೆ ಸಾವನ್ನ ದಯಪಾಲಿಸಬಹುದೆ ವಿನಃ
ಇನ್ನೇನೂ ಕಿತ್ತುಕೊಳ್ಳಲಾರದು ನನ್ನಿಂದ
ಈಗಾಗಲೆ ನಿನ್ನ ಅಗಲಿಸಿರುವ ಕರುಣೆಯಿಲ್ಲದ ಕ್ರೂರ ವಿಧಿ//
No comments:
Post a Comment