ಬಾಲ್ಯದ 'ಮಾಲ್ಗುಡಿ ಡೇಸ್'ನ ಚಿತ್ರಗಳಾಗಿ ಪರಿಚಯವಾಗಿ ವಿದೇಶಿ ಅಕ್ಷರ ಕಲಿತು ಬಾಲ ಭಾಷೆಯಲ್ಲಿ ಅಕ್ಷರ ಕೂಡಿಸಿ ಕೂಡಿಸಿ ಆಂಗ್ಲ ಪತ್ರಿಕೆ ಓದುವ ಆರಂಭದಲ್ಲಿ 'ಟೈಮ್ಸ್ ಆಫ್ ಇಂಡಿಯಾ'ದ ಶ್ರೀಸಾಮಾನ್ಯನಾಗಿ ನಿಧಾನವಾಗಿ ನನಗೆ ಅರ್ಥವಾದ ನಮ್ಮದೆ ಮೈಸೂರಿನ ಆರ್ ಕೆ ಲಕ್ಷ್ಮಣ್ ಪುಣೆಯಲ್ಲಿ ಎಲ್ಲವನ್ನ ಬಿಟ್ಟು ಹೊರಟಿದ್ದಾರೆ. ಕನ್ನಡದ ಹಾಸ್ಯ ಮಾಸಿಕ 'ಕೊರವಂಜಿ'ಯಿಂದ ತನ್ನ ವ್ಯಂಗ್ಯಚಿತ್ರಕಾರನ ವೃತ್ತಿ ಬದುಕನ್ನ ಆರಂಭಿಸಿದ ಲಕ್ಷ್ಮಣ್ ಬಾಲ್ಯದ ಸವಿ ನೆನಪು 'ಮಾಲ್ಗುಡಿ ಡೇಸ್'ನ ವ್ಯಂಗ್ಯ ಚಿತ್ರಗಳಾಗಿ ಚಿರ ನೆನಪಿನಲ್ಲಿ ಉಳಿದಿರುತ್ತಾರೆ.
ಇನ್ನು ನನ್ನ ಹುಟ್ಟೂರು ತೀರ್ಥಹಳ್ಳಿಯ ತುಂಗೆ ಮಡಿಲಿನ ಮಹಿಷಿಯಿಂದ ನೆರೆಯ ಕಾರಣಕ್ಕೆ ದೂರದ ಧಾರವಾಡಕ್ಕೆ ಗುಳೆ ಹೋಗಿದ್ದ ಅಗ್ರಹಾರವೊಂದರ ಕುಡಿ ಅನಂತರ ನಾನಾ ಕಾರಣಕ್ಕೆ ಖ್ಯಾತರಾಗಿ, ಸಂಸತ್ತಿನ ಎರಡೂ ಮನೆಗಳಲ್ಲಿ ಒಟ್ಟು ಆರು ಬಾರಿ ಸದಸ್ಯರಾಗಿ ಕೇಂದ್ರದಲ್ಲಿ ಪ್ರಬಲ ಖಾತೆಗಳ ಸಚಿವರೂ ಆಗಿದ್ದು ಕರ್ನಾಟಕದೊಳಗೆ ಕನ್ನಡಿಗರಿಗೇನೆ ಉದ್ಯೋಗದಲ್ಲಿ ಆದ್ಯತೆಯನ್ನ ಆಗ್ರಹಿಸುವ ವರದಿಯನ್ನ ಸರಕಾರಕ್ಕೆ ಕೊಟ್ಟ ದಿಟ್ಟೆ ಸರೋಜಿನಿ ಮಹಿಷಿ ಸಹ ದೂರದ ಘಾಝಿಯಾಬಾದಿನಲ್ಲಿ ನಮ್ಮನ್ನಗಲಿ ಮತ್ತೆ ಬಾರದೆಡೆಗೆ ಹೆಜ್ಜೆ ಹಾಕಿದ್ದಾರೆ. ಅವರಿಬ್ಬರಿಗೂ ಅವರಿದ್ದಲ್ಲಿಯೆ ನಮ್ಮೆಲ್ಲರ ಸ್ಮರಣೆಗಳು ಮುಟ್ಟಲಿ.