ರಾಮನ ಪಕ್ಷದ ಹರಾಮರು ನಡೆಸುತ್ತಿರುವ ನಿತ್ಯ ಕರು"ನಾಟಕ"ದ ಹೊಚ್ಚ ಹೊಸಾ ಸೀನರಿಗಳನ್ನ ನೋಡುತ್ತಾ "ಕುರಿತೋದದಯುಂ ಪರಿಣತಮತಿ"ಗಳಾದ ಕನ್ನಡಿಗರು ತಮ್ಮ ಇನ್ನಿತರ ಭಾರತೀಯ ಸಹೋದರರ ಮುಂದೆ ತಲೆ ತಗ್ಗಿಸುವ ಅನಿವಾರ್ಯತೆ ಬಂದಿದೆ. ಎಬಡರ ಮುಂದೆ ಎಡವಿ ಬಿದ್ದಂತ ಪರಿಸ್ಥಿತಿ ಬಡ ಕನ್ನಡಿಗರದ್ದು. ಮೊನ್ನೆ ಮೊನ್ನೆ ನಡೆದ "ಓಡಿಹೋದ ಸ್ಪೀಕರ್" ಪ್ರಕರಣವಂತೂ ಇವೆಲ್ಲ ಅಧ್ವಾನಗಳಿಗೆ ಕಳಶವಿಟ್ಟಂತಿತ್ತು.
ತೀರ ಬಸ್ಟಾಂಡ್ ಕಿಸೆಕಳ್ಳನ ತರ ತಲೆ ಮರೆಸಿಕೊಂಡು ಅದೆಲ್ಲೋ ಅಜ್ಞಾತ ಸ್ಥಳದಲ್ಲಿ ಹೋಗಿ ಕೂತು ಗುಂಡು ಹಾಕುತ್ತಿದ್ದ ಬೋಪ ಅದ್ಯಾತಕ್ಕೆ ಅರ್ಜೆಂಟಾಗಿ ಸರಗಳ್ಳನ ಗೆಟಪ್ಪಿನಲ್ಲಿ ಮಂಗಳೂರಿಗೆ ಕದ್ದುಮುಚ್ಚಿ ಹಾರಿ ಬಂದನೋ ಆ ಶ್ರೀರಾಮನೆ ಬಲ್ಲ. ಬೂಸಿಯ ಬಳಗದ ಹದಿಮೂರು ಕಪಿಗಳು ಕಡೆಗೂ ಬಂಡೆದ್ದು ಜಗದೀಶನಾಳುವ ಸರಕಾರದ ಬೆಂಡೆತ್ತಲು ತಮ್ಮತಮ್ಮ ರಾಜಿನಾಮೆಯ ಸಹಿತ ನಾಳೆ ತಮ್ಮ ಕಛೇರಿಗೆ ಧಾವಿಸಿ ಬರಲಿದ್ದರೆ ಎನ್ನುವ ಮಾಹಿತಿ ಖಚಿತವಾಗುತ್ತಿದ್ದಂತೆ ಹಿಂದಿನ ದಿನ ರಾತ್ರಿಯೆ ಗಂಟು-ಮೂಟೆ ಕಟ್ಟಿಕೊಂಡು ಗೃಹ ಸಚಿವರ ಖಾಸಗಿ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಪೇರಿಕಿತ್ತ ಬೋಪ ದೇಶಾಂತರ ಓಡಿ ಹೋಗಿ ಕರುನಾಡ ಮಾನ ಕಳೆದ. ಕನಿಷ್ಠ ಪಕ್ಷ ಒಂದು ದೂರವಾಣಿ ಕರೆಗೂ ಸಿಗಲಾರದಂತೆ ಮೂರ್ನಾಲ್ಕು ದಿನ ಅದ್ಯಾವ ಕಗ್ಗಾಡಿಗೆ ಕಟ್ಟಿಗೆ ಒಟ್ಟಲು ಹೋಗಿದ್ದನೋ ಆ ಬೋಪನೆ ಹೇಳಬೇಕು.
ಇನ್ನು ಇಲ್ಲಿ ಪರಿಸ್ಥಿತಿ ವಿಪರೀತಕ್ಕೆ ಹೋಗಿ ರಾಜ್ಯಪಾಲರು ಶೆಟ್ಟರನ್ನು "ಸಮಾ" ವಿಚಾರಿಸಿಕೊಂಡ ಮೇಲೆ ಅನಿವಾರ್ಯವಾಗಿ ಉಟ್ಟ ಬಟ್ಟೆಯಲ್ಲಿಯೆ ಮುಂಬೈ ವಿಮಾನ ನಿಲ್ದಾಣಕ್ಕೆ ಓಡಿ ಬಂದಿದ್ದ ಈ ಬೋಪ ಹೆದ್ದಾರಿ ದರೋಡೆಗೆ ಹೊಂಚು ಹಾಕಲು ಹೊರಟ ಹುದ್ದರಿಯಂತೆ ಮುಂಬೈಯ ಸುಡು ಬಿಸಿಲಿನಲ್ಲಿಯೂ ಮಂಕಿ ಕ್ಯಾಪ್ ಹಾಗೂ ಕಿವಿ ಮುಚ್ಚುವ ಕೋಟು ಧರಿಸಿ ಕಳ್ಳನಂತೆ ವಿಐಪಿ ಲಾಂಜಿಗೂ ಹೋಗದೆ ಮುಖಮುಚ್ಚಿಕೊಂಡು ಅನುಮಾನಾಸ್ಪದವಾಗಿ ಅಡ್ಡಾಡುತಿದ್ದಾಗ ದಕ್ಷಿಣ ಕನ್ನಡದ ಹೊರೆಹೊತ್ತ ಪಕ್ಷದ ಕಾರ್ಯದರ್ಶಿಯ ಕಣ್ಣಿಗೆ ರೆಡ್'ಹ್ಯಾಂಡಾಗಿ ಸಿಕ್ಕು ಹಾಕಿಕೊಂಡು ಇಂಗು ತಿಂದ ಮಂಗನಂತೆ ವಿಮಾನ ಇಳಿವ ಕಡೆಕ್ಷಣದಲ್ಲಿ ವೇಷ ಮರೆಸಿಕೊಳ್ಳಲು ರೆಡ್ಡು ಸ್ವೆಟ್ಟರ್ ಧರಿಸಿ ಮಂಗಳೂರಿನ ನಿಗಿನಿಗಿ ಸೆಖೆಯಲ್ಲೂ ಬೆವರೊರಿಸಿಕೊಳ್ಳುತ್ತಾ ಹಾಸ್ಯಾಸ್ಪದನಾಗಿ ಕಂಗೊಳಿಸುತ್ತಿದ್ದ. ಮುಂಬೈ ಟು ಮಂಗಲೂರು ಪ್ರಯಾಣದ ಪರ್ಯಂತ ಬೋನಿನಲ್ಲಿ ಸಿಕ್ಕಿದ ಹೆಗ್ಗಣದಂತೆ ಚಡಪಡಿಸಿತ್ತಿದ್ದ ಬೋಪನ ದುರಾದೃಷ್ಟಕ್ಕೆ ಮಂಗಳೂರು ವಿಮನ ನಿಲ್ದಾಣದಲ್ಲಿ ವಿಐಪಿ ಲಾಂಜ್ ಹಾಗೂ ಹೊರ ಹೋಗುವ ಮಾರ್ಗ ಇರಲೆ ಇಲ್ಲ!
ಈತನ ಖದೀಮ ಅವತಾರವನ್ನ ಸಿ ಸಿ ಟಿವಿಯಲ್ಲಿ ಕಂಡು ಅನುಮಾನಗೊಂಡ ಮುಂಬೈ ಏರ್'ಪೋರ್ಟ್ ಭದ್ರತಾ ಸಿಬ್ಬಂದಿ ಅನುಮಾನಾಸ್ಪದವಾಗಿ ದರೋಡೆಗೆ ಹೊಂಚುಹಾಕುತ್ತಿರುವ ಖದೀಮನಂತೆ ಕಾಣುತ್ತಿದ್ದ ಬೋಪನನ್ನ ಬಂಧಿಸಿ ವಿಚಾರಿಸಿರದಿರುವುದು ಸಮಸ್ತ ಕನ್ನಡಿಗರ ಅಜ್ಜಿ ಪುಣ್ಯ ಅಷ್ಟೆ! ಹೇಳಿಕೇಳಿ ಇದು ಭಯೋತ್ಪಾದಕರು ವಿಮಾನಗಳನ್ನೆ ಅಪಹರಿಸುತ್ತಿರುವ ವಿಪರೀತ ಕಾಲ. ವೇಷ- ಭೂಷಣ ಹಾಗೂ ನಡುವಳಿಕೆಯಲ್ಲಿ ಬೋಪ ಯಾವುದೆ ಮೂರುಕಾಸಿನ ಭಯೋತ್ಪಾದಕನಿಗಿಂತಲೂ ಭಿನ್ನವಾಗೇನೂ ಅಂದು ಗೋಚರಿಸುತ್ತಿರಲಿಲ್ಲ.
ಮಂಗಳೂರಿನ ಅರ್ಧ ವಿಮಾನ ನಿಲ್ದಾಣವಿರುವುದು ರಾಜ್ಯ ವಿಧಾನಸಭೆಯ ಉಪ-ಸಭಾಪತಿ ಯೋಗೀಶ್ ಭಟ್ಟರ ಮತಕ್ಷೇತ್ರದಲ್ಲಿ ಅವರಿಗೇನೆ ಈ ಬೋಪಾಗಮನದ ಸುದ್ದಿ ಗೊತ್ತಿರಲಿಲ್ಲವಂತೆ! ಶಿಷ್ಟಾಚಾರದ ಪ್ರಕಾರ ಸ್ಥಳಿಯ ಪೊಲೀಸ್ ಕಮೀಷನರ್'ರಿಗೂ ಭದ್ರತೆಯ ಕಾರಣಕ್ಕೆ ಈ ಸಂಗತಿ ತಿಳಿದಿರಲೆಬೇಕು. ಆದರೆ ಈ ಅಪಾಪೋಲಿಯಂತೆ ಮಂಗಳೂರಿಗೆ ನುಸುಳಿ ಅಲ್ಪಸ್ವಲ್ಪ ಮರ್ಯಾದೆಯನ್ನೂ ಕಳೆದುಕೊಂಡ ಬೋಪ ಓಡಿ ಬರುವ ಸುದ್ದಿ ಅವರ್ಯಾರಿಗೂ ಅವರ ತಾಯಾಣೆಗೂ ಗೊತ್ತಿರಲಿಲ್ಲವಂತೆ! ಕಮಲ ಪಕ್ಷದ ಸ್ಥಳಿಯ ಕಪಿಗಳೂ ಈ ವಿಷಯದ್ಸಲ್ಲಿ ಅಜ್ಞರಾಗಿದ್ದರು. ಇನ್ನು ವಿಮಾನ ನಿಲ್ದಾಣದಿಂದ ತರಾತುರಿಯಲ್ಲಿ ಓಡಿ ಬಂದ ಬೋಪ ಪುತ್ತೂರಿನ ಬಳಿ ಮಾಧ್ಯಮದವರ ಕಣ್ಣು ತಪ್ಪಿಸಲು ಇನ್ನೊಂದು ಖಾಸಗಿ ಕಾರೇರಿ ಮಡಿಕೇರಿಗೆ ಊರುಕೇರಿ ಎದ್ದುಬಿದ್ದು ಥೇಟ್ ಬೀದಿ ಕಳ್ಳನಂತೆ ಓಡಿ ಹೋದ.
ಹಿಂದೊಮ್ಮೆ ಕಿಷ್ಕಿಂದೆಯ "ರಾಮು"ನನ್ನೆ "ಮುಲು"ಕುವ ರೇಪಿಷ್ಟ್ ಗೆಟಪ್ಪಿನ ಕಪಿಯೊಂದರ ರಾಜಿನಾಮೆ ಪ್ರಹಸನದಲ್ಲಿ "ಒಲ್ಲೆ ಒಲ್ಲೆ" ಅಂತ ಬೋಪ ಬೆಂಗಳೂರು ಬಿಟ್ಟು ಓಡಿ ಹೋಗಿದ್ದು. ಆಗ ಅದೇ ಕಪಿ ಅಟ್ಟಾಡಿಸಿಕೊಂಡು ಹೋಗಿ ಬೋಪನನ್ನ ಹುಡುಕಿ ಹಿಡಿದು ರಾಜಿನಾಮೆ ಕೊಟ್ಟು ನಿಟ್ಟುಸಿರು ಬಿಟ್ಟದ್ದು ಎಲ್ಲಾ ನೆನಪಿನಲ್ಲೆ ಇರುವಾಗ: ಆ ಕಣ್ಣಾಮುಚ್ಚಾಲೆ ಆಟವನ್ನ ನೆನಪಿಸಿಕೊಂಡು ಕನ್ನಡಿಗರು ತಮ್ಮ ಮನೆಯೊಳಗೇನೋ ಇದನ್ನ ಕ್ಯಾಕರಿಸಿ ನಗಲು ಒಂದು ಕಾರಣ ಹುಡುಕಿಕೊಳ್ಳಬಹುದು, ಆದರೆ ದೇಶದಾದ್ಯಂತ ಈ ಪ್ರಕರಣದಿಂದ ರಾಜ್ಯದ ಮಾನ ಪಂಛೇರಿಗೆ ಪಂಚರ್ ಆಗಿ ಆದ ಸಾರ್ವತ್ರಿಕ ನಗೆಪಾಟಲಿಗೆ ನಾಚಿ ತಲೆ ತಗ್ಗಿಸಿಕೊಳ್ಳುವುದರ ಹೊರತು ಇನ್ಯಾವುದೇ ಮಾರ್ಗೋಪಾಯ ಕನ್ನಡಿಗರಿಗೆ ತೋಚುತ್ತಿಲ್ಲ.
No comments:
Post a Comment