ಬಹಳ ಬೇಸರದಿಂದಲೆ ಬರೆಯುತ್ತಿದ್ದೇನೆ. ಎಸ್ ಜಾನಕಿಯಮ್ಮ ಪದ್ಮ ಪ್ರಶಸ್ತಿಯನ್ನ ತಿರಸ್ಕರಿಸಿ ಧೀಮಂತರಂತೆ ಗೋಚರಿಸುತ್ತಿರುವ ಸಂದರ್ಭದಲ್ಲಿ ಸ್ವಲ್ಪ ಹೆಮ್ಮೆ, ಸ್ವಲ್ಪ ವಿಷಾದದಿಂದ ಈ ಮಾತನ್ನ ಹೇಳಲೆ ಬೇಕು ಅಂತ ಅನ್ನಿಸುತ್ತಿದೆ. ಮಾತಿನಲ್ಲಿ ಪ್ರಕಟವಾಗದ ಅವ್ಯಕ್ತ ಅಭಿವ್ಯಕ್ತಿಯ ಎರಡನೆ ದರ್ಜೆಯ ಉಪಚಾರಕ್ಕೆ ಒಳಗಾದ ಸಮಸ್ತ ದಕ್ಷಿಣ ಭಾರತೀಯ ಮನಸ್ಸುಗಳ ಮೂಕಭಾವಗಳಿಗೆ ಜಾನಕಿಯಮ್ಮ ಧ್ವನಿಯಾದರಷ್ಟೆ. ಇಂತಹ ಕ್ಷೀಣ ಹತಾಶ ಬಂಡಾಯದ ಹೊರತು ಅದೆಷ್ಟು ಪ್ರತಿಭಾವಂತರು ತುಟಿಯೆರಡು ಮಾಡದೆ ಸುಮ್ಮನಿದ್ದಾರೆ ಎನ್ನುವುದನ್ನ ನೋಡುವಾಗ ಸಂಕಟವಾಗುತ್ತದೆ.
ಯಾವುದೆ ಕೋನದಿಂದ ನೋಡಿದರೂ ದ"ಕ್ಷೀಣ" ಭಾರತೀಯ ಪ್ರತಿಭೆಗಳು ಈ ದೊಡ್ಡ ದೇಶದ ಪ್ರಗತಿಗೆ, ಹೆಮ್ಮೆಗೆ ಸೇರಿಸಿದ ಗರಿ ಉತ್ತರದವರ ಹೋಲಿಕೆಯಲ್ಲಿ ಕಡಿಮೆಯಿಲ್ಲ. ಅವರಲ್ಲಿ ಲತಕ್ಕ ಇದ್ದರೆ, ನಮ್ಮಲ್ಲಿ ಸುಶೀಲಮ್ಮ ಇದಾರೆ. ಅವರಲ್ಲಿ ಆಶಕ್ಕ ಇದ್ದರೆ ನಮ್ಮೂರಲ್ಲೂ ಜಾನಕಿಯಮ್ಮ ಇದಾರೆ. ರಫಿ ಸಾಹೇಬರಿಗೆ ಪ್ರತಿವಾದಿ ಭಯಂಕರ ಶ್ರೀನಿವಾಸರು ಯಾವುದರಲ್ಲಿ ಕಡಿಮೆ? ಕಿಶೋರ್ ಕುಮಾರರ ಮಿಮಿಕ್ರಿ ಧ್ವನಿಗೆ ನಮ್ಮ ಬಾಲಸುಬ್ರಮಣ್ಯಂರ ಬಹು ಮಜಲಿನ ಧ್ವನಿ ಯಾವ ರೀತಿಯಲ್ಲಿ ತಾನೆ ಕಡಿಮೆ? ಅವರಿಗೆ ಉತ್ತರಾದಿಗೆ ನಾವೇ ಭೀಮಸೇನರನ್ನ ಕಡ ಕೊಟ್ಟರೂ, ನಮ್ಮ ತಿಜೋರಿಯಲ್ಲಿ ಇನ್ನೂ ಎಮ್ ಎಸ್ ಎನ್ನುವ ರತ್ನ ವಿದ್ದೇ ಇತ್ತು. ಅವರ ಒಬ್ಬ ಶೋಮ್ಯಾನ್ ರಾಜ್ ಕಪೂರ್ ಮುಂದೆ ನಾವು ಶಂಕರ್ ಮತ್ತು ಮಣಿ ಎನ್ನುವ ಎರಡೆರಡು "ರತ್ನ"ಗಳನ್ನ ನಿಲ್ಲಿಸ ಬಲ್ಲವು. ಭಾರತೀಯ ಮೊಜಾರ್ಟ್ ಮತ್ತು ಬಿತೋವನ್ ಇಬ್ಬರೂ ಮದರಾಸು ಈ ಭಾರತೀಯ "ಇಳೆ"ಗೆ ಇತ್ತಿರೋ "ರೆಹಮ್" ಅನ್ನೋದು ಎಲ್ಲರಿಗೂ ಗೊತ್ತು.
ಲಂಬೂ ನಟರೊಬ್ಬರು ಇತ್ತೀಚೆಗೆ ಮುಂಬೈನಲ್ಲಿ ಸವಾಲಿನ ಪಾತ್ರಕ್ಕೆ ಬಣ್ಣ ಹಚ್ಚಿ "ಪಾ" ಅಂತ ಒರಲಿ ಭೇಷ್ ಅನ್ನಿಸಿಕೊಂಡಿರಬಹುದು. ( ಅವರನ್ನ ಆ ಪಾತ್ರಕ್ಕೆ ಕಟೆದದ್ದು ಮದರಾಸಿನ ಬಾಲ್ಕಿ ಅನ್ನೋದು ವಿಚಿತ್ರವಾದರೂ ಸತ್ಯ.). ಆದರೆ ಆ ಕಾಲದಿಂದ ಸವಾಲನ್ನೇ ಬದುಕಾಗಿಸಿಕೊಂಡಿರುವ ನಮ್ಮ "ಕಮಲ"ನ ಕಮಾಲ್ ಮುಂದೆ ಅದ್ಯಾತರ ಛದ್ಮವೇಷ ಸ್ವಾಮಿ? ಕಾಕಾ ರಾಜೇಶ್ ಖನ್ನಾರಿಗೆ ಮರಣೋತ್ತರ ಪ್ರಶಸ್ತಿ ಸಲ್ಲ ಬಹುದಾಗಿದ್ದರೆ ನಮ್ಮ "ಸಾಹಸ ಸಿಂಹ" ವಿಷ್ಣು ಯಾಕೆ ಅಂತಲ್ಲಿ ಸಲ್ಲುವುದಿಲ್ಲ? ನಮ್ಮ ಎಂಜಿಆರ್, ಎನ್'ಟಿಆರ್, ರಾಜಣ್ಣ ಯಾವ ದಿಲೀಪ, ದೇವಾನಂದ, ಸುನೀಲದತ್ತರಿಗಿಂತ ಕಡಿಮೆ? ಇವತ್ತಿಗೂ ನಮ್ಮಿಂದ ಅವರು ಎರವಲು ಪಡೆದಿದ್ದ ಪಡುಕೋಣೆಯ ಗುರುದತ್ತರನ್ನ ಮೀರಿಸುವ ತಂತ್ರಜ್ಞರು ಅವರಲ್ಲಿನ್ನೊಬ್ಬರು ಇದ್ದರೆ ತೋರಿಸಿ ಕೊಡಲಿ ನೋಡೋಣ.
ವೈಜಯಂತಿಮಾಲ, ವಹೀದಾ ರೆಹಮಾನ್, ರೇಖಾ, ಹೇಮಾಮಾಲಿನಿ, ಶ್ರೀದೇವಿ, ಜಯಪ್ರದಾ ಇವರೆಲ್ಲ ಎಲ್ಲಿ ಉದ್ಭವವಾಗಿ ಅಲ್ಲಿಗೆ ವಲಸೆ ಹೋದವರು. ಒಬ್ಬ ದೇವೆ ಗೌಡ ಪ್ರಧಾನಿಯಾದರೆ ಸುಶುಪ್ತ ಹೊಟ್ಟೆಕಿಚ್ಚಿನಿಂದ ಅವರ ರೂಪ, ಬಣ್ನ, ಊಟವನ್ನೆಲ್ಲ ಸುಖಾಸುಮ್ಮನೆ ಎತ್ತಾಡಿ ಕೊಂಡ ಉತ್ತರದ ಮಾಧ್ಯಮಗಳು ಪಿ ವಿ ನರಸಿಂಹರಾಯರನ್ನೂ ಚಿತ್ರವಿಚಿತ್ರ ವ್ಯಂಗ್ಯಚಿತ್ರಗಳಲ್ಲಿ ಗೇಲಿ ಮಾಡುತ್ತಿದ್ದವು. ಅದೇ ಅವರ ಮನ"ಮೌನ"(ಗ್ರಾಮ)ಸಿಂಹ ಕಡೆದು ಕಟ್ಟೆ ಹಾಕಿದ್ದೇನು ಎನ್ನುವ ಬಗ್ಗೆ ನನಗಂತೂ ಮಾಹಿತಿಯ ಕೊರತೆಯಿದೆ. ನಿಮಗೇನಾದರೂ ತಿಳಿದಿದ್ದರೆ ದಯವಿಟ್ಟು ಯಾರದರೂ ತಿಳಿಸಿ ದಯವಿಟ್ಟು ಪುಣ್ಯ ಕಟ್ಟಿಕೊಳ್ಳಿ.
ವಿಕ್ರಂ ಸಾರಾಭಾಯಿಗಿಂತಲೂ ಕಲಾಮಣ್ನ ಮಾಡಿದ ಕಮಾಲ್ ಕಡಿಮೆಯಿಲ್ಲ. ನಮ್ಮ ರಾಜಾರಾಮಣ್ನರ ದಕ್ಷತೆಗೆ ಇನ್ನೊಬ್ಬ ಉತ್ತರದವ ಸರಿಸಾಟಿಯಿಲ್ಲ. ಸಂತಾನಂ, ಉ ಎನ್ ರಾವ್, ಕಸ್ತೂರಿ ರಂಗನ್ ನಂತಹವರು ನಮ್ಮಲ್ಲಿ ಹೆಚ್ಚೆ ಹೊರತು ಅವರಲ್ಲಲ್ಲ ಅನ್ನುವ ವಿವೇಕ ದೆಲ್ಲಿಯಲ್ಲಿ ಆಳುವ ಪುಡಿ ಪಾಳೆಗಾರರಿಗೆ ಮೂಡೋದು ಯಾವಾಗ? ನಮ್ಮದು ಒಂದು ದೇಶವಲ್ಲ "ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ" ಅಂತ ಕಹಿಯಾಗಿಯೆ ಇಂತವರಿಗೆ ಹೇಳ ಬೇಕಾಗಿದೆ. ನಮ್ಮ ಪ್ರತಿಭೆಗಳು ನಿಮಗೆ ಕಾಣದಷ್ಟು ಪೊರೆ ಬಂದಿದೆ ಅಂತಾದರೆ ದಯವಿಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳೋದು ಉತ್ತಮ.
ಜಾಗತಿಕ ಮಟ್ಟದಲ್ಲಿ ಆಂಗ್ಲದ ಮೋಹ ಮಾಡುತ್ತಿರುವ ಹಾನಿಗೆ ಸರಿಸಾಟಿಯಾಗಿ ದೇಶದೊಳಗೆ ಹಿಂದಿ ಹಾಗೂ ಬಿಳಿ ಚರ್ಮದ ಮೇಲಿನ ಅಂಧ ವ್ಯಾಮೋಹ ಎಲ್ಲಾ ಅನಾಹುತಗಳನ್ನೂ ಮಾಡುತ್ತಲಿದೆ ಅನ್ನೋದು ಕೇಳಲಿಕ್ಕೆ ಕಠೋರವಾದರೂ ಹದಿನಾರಾಣೆ ಸತ್ಯ. ಇಂತಹ ತಾರತಮ್ಯಕ್ಕೆ ಕಡೆಗೂ ಜಾನಕಿಯಮ್ಮನಾದರೂ ಧ್ವನಿಯಾದದ್ದಕ್ಕೆ ಸ್ವಲ್ಪ ಹೆಮ್ಮೆಯೂ, ಅವರಿಗೆ ಭಾರತ ರತ್ನ ಸಿಗದ್ದಕ್ಕೆ ಅಲ್ಪ ವಿಷಾದವೂ ಉಳಿದೇ ಇದೆ. ಇದು ಖಂಡಿತಾ ಅಸಹನೆಯ ಒಡಕಿನ ಧ್ವನಿಯಲ್ಲ, ತಾರತಮ್ಯಕ್ಕೆ ಸಟೆದು ನಿಂತ ಹತಾಶೆಯ ನೋವು ಅಷ್ಟೆ.