Thursday, October 4, 2012

ವಲಿ.... ( ಭಾಗ-8 )


ಮುಂದೆ ಕ್ರಿಸ್ತಶಕ ನಾಲ್ಕನೆ ಶತಮಾನದಲ್ಲಿ ಅರೇಬಿಯಾದ ದಕ್ಷಿಣ ಪ್ರಾಂತ್ಯದ ಎಮನ್'ನಿಂದ ಅರಬ್ಬಿ ಮೂಲದವರು ವಲಸೆ ಹೋಗಿ ಸಿರಿಯಾ ಹಾಗೂ ದಾರಿಯಲ್ಲಿ ಸಿಗುವ ಮದೀನಾದ ಸುತ್ತಲೂ ಬೇರೂರಿದರು. ಹೀಗೆ ವಲಸೆ ಹೋದವರಲ್ಲಿ 'ಅವ್ಸ್' ಹಾಗೂ 'ಖಸ್'ರಾಜ್' ಬುಡಕಟ್ಟಿನ ಮಂದಿ ಪ್ರಮುಖರು. ಈ ಅರಬ್ಬಿ ವಲಸೆಗಾರರು ಅದಾಗಲೆ ಮೂರು ಶತಮಾನದ ಹಿಂದೆಯೆ ಅಲ್ಲಿಗೆ ವಲಸೆ ಬಂದು ನೆಲೆಸಿದ್ದ ಯಹೂದಿಗಳೊಂದಿಗೆ ಅವರ ವಾಸದ ಜಾಗವನ್ನು ಆಕ್ರಮಿಸುವ ಉದ್ದೇಶದಿಂದ ಸಮರ ಹೂಡಿದರು. ಆದರೆ ವಾಸ್ತವದಲ್ಲಿ ಬಲು ಹಿಂದಿನಿಂದಲೂ ಇವೆರಡು ಅರಬ್ಬಿ ಬುಡಕಟ್ಟಿನವರ ಮಧ್ಯೆಯೆ ದ್ವೇಷ ಹೊಗೆಯಾಡುತ್ತಿತ್ತು. ಈಗ ಹೂಡಿದ್ದ ಸಮರದಲ್ಲಿ ಅವರ ಪ್ರಯತ್ನ ಯಶಸ್ವಿಯಾಗಿ ಎರಡೂ ಗುಂಪಿನವರ ಒತ್ತಡ ತಾಳಲಾರದೆ ಯಹೂದಿಗಳು ಅಲ್ಲಿಂದ ಕಾಲು ಕಿತ್ತರೂ, ಇವೆರಡು ಬುಡಕಟ್ಟಿನವರ ನಡುವೆಯೆ ಮತ್ತೆ ಆರಂಭವಾದ ಕಿತ್ತಾಟ ಬಿಡುವಿಲ್ಲದೆ ಮುಂದುವರೆಯಿತು. ಈ ಆಂತರಿಕ ಕಲಹದಲ್ಲಿ ಅಂತಿಮವಾಗಿ 'ಖಸ್'ರಾಜ್' ಬುಡಕಟ್ಟಿನವರು ಜಯ ಸಾಧಿಸಿದರೂ ದ್ವೇಷದ ಮಟ್ಟ ಮಾತ್ರ ಇನಿತೂ ಕಡಿಮೆಯಾಗಲಿಲ್ಲ. 'ಖಸ್'ರಾಜ್' ಗುಂಪಿನ ನಾಯಕರಲ್ಲೊಬ್ಬನಾದ ಅಸಾದ್ ಎನ್ನುವವನು ಮುಂದೆ ಮದೀನಾದ ಪುರಪ್ರಮುಖನಾಗಿ ಮೆರೆದ. ಅವನ ಮನಸ್ಸಿನಲ್ಲಿ ಅವರ ವೈರಿಗಳು ಅಷ್ಟೊಂದು ತೀವ್ರತರವಾಗಿ ತಮ್ಮವರ ವಿರುದ್ಧ ಕಾದಾಡಲು ಅವರಿಗೆ ಯಹೂದಿಗಳ ಕುಮ್ಮಕ್ಕು ಸಿಕ್ಕಿದ್ದೆ ಕಾರಣ ಎನ್ನುವ ಬಲವಾದ ಭಾವನೆ ಮನೆಮಾಡಿತ್ತು. ಹೀಗಾಗಿ ವಿನಾಕಾರಣ ಅವನು ಯಹೂದಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದ. ಆದರೆ ಕ್ರಮೇಣ ಇತ್ತಂಡಗಳಿಗೂ ಶಾಂತಿಯ ಅವಶ್ಯಕತೆ ಕಂಡು ಬಂತು. ಅದಾಗಲೆ ಅವರಿಬ್ಬರ ಬಳಗಗಳಿಗೂ ಮಹಮದನ ಪರಿಚಯವಾಗಿ ಭೋದನೆಯೂ ಆಗಿತ್ತು. ಮದೀನದ ಸುತ್ತಮುತ್ತಲೂ ನೆಲೆಯೂರಿದ್ದ ಯಹೂದಿಗಳ ಧರ್ಮದ ಮರ್ಮ, ಅದರ ಆಚರಣೆಯ ಗುಟ್ಟುಗಳು, ಧರ್ಮಾಚರಣೆ ಪರಿಪಾಲನೆಯ ಪರಿಚಯ ಮಹಮದನಿಗೂ ಆಗಿದ್ದರಿಂದ ದೇವರ ವಿವರಣೆ, ಪ್ರವಾದಿ ಮೋಸಸ್ ಮತ್ತು ಇತರ ದೇವದೂತರ ದೈವವಾಣಿಗಳು ಹಾಗೂ ಯಹೂದಿ ಪುರಾಣ ಪುಣ್ಯ ಕಥೆಗಳ ವಿವರಣೆ ಅವನ ಪ್ರವಚನಗಳಲ್ಲೂ ನಿಯಮಿತವಾಗಿ ಕಾಣಿಸಿಕೊಂಡು ಮದೀನಾದ ಯಹೂದಿಯೇತರ ಅರಬರಿಗೂ ಅಲ್ಪಸ್ವಲ್ಪ ಅವುಗಳ ಪರಿಚಯವಾಗಿದ್ದಿತು. ಯಹೂದಿಗಳು ನಂಬಿದ್ದಂತೆ ದೇವರ ಪುನರುತ್ತಾನ ಹಾಗೂ ಅದಕ್ಕೆ ಮುನ್ನ ಆಗುವ ದೇವದೂತ ಹಾಗೂ ಪ್ರವಾದಿಯ ಪುನರಾಗಮನದ ನಂಬಿಕೆಯ ಅನುಸಾರ ತಾನೆ ಆ ಕೊನೆಯ ಪ್ರವಾದಿಯೆಂದು, ತನ್ನ ಮೂಲಕವೆ ದೇವರು ಧರ್ಮದ ಪುನರ್ ಸಂಸ್ಥಾಪನೆಗೆ ಆಗಮಿಸಲಿದ್ದಾನೆ ಎಂದು ಮಹಮದ ಪ್ರಚಾರ ಆರಂಭಿಸಿದ. ಆಗ ಹೊರಹೊಮ್ಮಿದ ಸುರಾ 2;89=90ರಮೂಲಕ ಈ ಹಿಂದೆ ದೇವರು ಭೂಮಿಗೆ ಕಳುಹಿಸಿದ್ದ ಪವಿತ್ರ ಗ್ರಂಥಗನ್ನು ಹಾಗೂ ಪ್ರವಾದಿಗಳಾದ ಏಸು ಮತ್ತು ತನ್ನನ್ನು ನಂಬದಿರುವುದರಿಂದಲೆ ದೇವರ ಶಾಪ ಯಹೂದಿಗಳಿಗೆ ತಟ್ಟಿದೆ ಎಂದು ನಿರೂಪಿಸಿದ. ಮರುವರ್ಷ ಅಂದರೆ ಕ್ರಿಸ್ತಶಕ 621ರಲ್ಲಿ ಮೆಕ್ಕಾದ ಪವಿತ್ರ ಯಾತ್ರೆಯ ದಿನಗಳಲ್ಲಿ ಮದೀನಾದಿಂದ ಭಕ್ತರು ಯಾತ್ರಾರ್ಥಿಗಳಾಗಿ ಬಂದಾಗ ಮಹಮದ್ ಅವರನ್ನು ಖುದ್ದಾಗಿ ಸಂಪರ್ಕಿಸಿದ. ಅವನ ಪ್ರಭಾವಕ್ಕೆ ಒಳಗಾದ ಖಾಸ್'ರಾಜ್ ಬುಡಕಟ್ಟಿನ ಹತ್ತು ಮಂದಿ ಹಾಗೂ ಅವಸ್ ಬುಡಕಟ್ಟಿನ ಇಬ್ಬರು ಆ ಸಂದರ್ಭದಲ್ಲಿ ಇಸ್ಲಾಮಿಗೆ ಮತಾಂತರಗೊಂಡರು. ತಾವು ಇಸ್ಲಾಮನ್ನು ಒಪ್ಪಿಕೊಂಡಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿ ಅವರು 'ನಾವಿನ್ನು ಏಕದೇವನನ್ನಲ್ಲದೆ ಇತರ ದೇವರನ್ನು ಆರಾಧಿಸುವುದಿಲ್ಲ, ವ್ಯಭಿಚಾರಗೈಯ್ಯುವುದಿಲ್ಲ, ನಮ್ಮ ಮಕ್ಕಳನ್ನು ಹತ್ಯೆಗೈಯುವುದಿಲ್ಲ, ಯಾರ ಮೇಲೂ ಯಾವುದೆ ರೀತಿಯ ಮಿಥ್ಯಾರೋಪ ಮಾಡುವುದಿಲ್ಲ ಹಾಗೂ ಪ್ರವಾದಿ ವಿಧಿಸಿರುವ ಯಾವುದೆ ಒಳ್ಳೆಯದಕ್ಕೆ ಅವಿಧೇಯ ಪೂರ್ಣರಾಗಿರುವುದಿಲ್ಲ' ಎಂದು ಕಾಬಾದ ಎದುರೆ ಪ್ರತಿಜ್ಞೆ ಕೈಗೊಂಡರು. ಇದೆ ಮುಂದೆ ಇಸ್ಲಾಂ ಇತಿಹಾಸದ ಪುಟಗಳಲ್ಲಿ ಮೊತ್ತಮೊದಲ ಅಕಾಬಾದ ಪ್ರತಿಜ್ಞೆ ಎಂದು ಪ್ರಸಿದ್ಧಿ ಪಡೆಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ತಮೀಮಿ. ಹೀಗೆ ಮತಾಂತರಿತವಾದ ಹನ್ನೆರಡು ಮಂದಿ ಮದೀನಕ್ಕೆ ಮರಳಿದ ನಂತರ ಮಹಮದನ ಮತದ ಪ್ರಚಾರ ಕೈಗೊಂಡ ಪ್ರಮುಖ ಶಿಷ್ಯಂದಿರಾದರು. ಮದೀನಾದ ಮನೆಮನೆಗಳಿಗೂ ತೆರಳಿ ಬಿರುಸಿನಿಂದ ಅವರೆಲ್ಲರೂ ಕೈಗೊಂಡ ಮತಪ್ರಚಾರದ ಫಲವಾಗಿ ಅನೇಕರನ್ನು ಇಸ್ಲಾಮಿನತ್ತ ಸೆಳೆದು ಮತಾಂತರಿಸಲು ಅವರಿಗೆ ಸಾಧ್ಯವಾಯಿತು. ಇದೆ ಸಮಯದಲ್ಲಿ ಬೆಜಂಟೈನ್ ಗ್ರೀಕರ ಹಾಗೂ ಪರ್ಷಿಯನ್ ಸಾಮ್ರಾಜ್ಯಶಾಹಿಗಳ ನಡುವೆ ಕದನ ಜರುಗಿ ಅದರಲ್ಲಿ ಪರ್ಶಿಯನ್ನರ ಕೈ ಮೇಲಾಗಿ ಅವರು ಬಹುತೇಕ ಕಾನ್'ಸ್ಟಾಂಟಿನೋಪೋಲಿನ ಬಾಗಿಲವರೆಗೂ ತಲುಪಿಯಾಗಿತ್ತು, ಆದರೆ ತಡವಾಗಿಯಾದರೂ ಬೆಜಂಟೈನರ ರೋಮನ್ ಸಾಮ್ರಾಟ ಹಿರಾಕ್ಲಿಯಸ್ ಮೈ ಕೊಡವಿಕೊಂಡು ಎದ್ದಾಗ ಪರ್ಷಿಯನ್ನರು ಸೋತು ಹಿಮ್ಮೆಟ್ಟಲೆ ಬೇಕಾಯಿತು. ಈ ಘಟನಾವಳಿ ಕ್ರಿಸ್ತಶಕ 621ರಲ್ಲಿಯೆ ಜರುಗಿತ್ತು ಎನ್ನುವ ಕುರುಹು ಅಲ್ ತಮೀಮಿಯ ಐತಿಹಾಸಿಕ ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಈ ಚಾರಿತ್ರಿಕ ಘಟನೆ ಮಹಮದನ ಅರಿವಿಗೆ ಬಂದಿರುವುದು ಖುರಾನಿನ ಸುರಾ 30/1/6ರ ಮೂಲಕ ಸ್ಪಷ್ಟವಾಗುತ್ತದೆ. ಅದೆ ಸುರಾದಲ್ಲಿ ಮ್ಸಹಮದ್ ಗ್ರೀಕರ ವಿಜಯದ ಕುರಿತು ಭವಿಷ್ಯ ನುಡಿದಂತೆ ಮೇಲ್ನೋಟಕ್ಕೆ ಕಂಡುಬಂದರೂ ಆ ಸುರಾಕ್ಕಿಂತಲೂ ಮೊದಲೆ ಈ ಸಂಗತಿ ಜರುಗಿ ಮುಗಿದೆ ಹೋಗಿತ್ತು!. ಈ ನಡುವೆ ಮೆಕ್ಕಾದಲ್ಲಿ ಶಾಂತಿ ನೆಲೆಸಿತ್ತು. ಮದೀನದಲ್ಲಿ ಸಫಲಗೊಂಡಿದ್ದ ಮಹಮದನ ಮತಪ್ರಚಾರದ ಬಿಸಿ ಮೆಕ್ಕಾದ ಮಟ್ಟಿಗೆ ಮಾತ್ರ ತಣ್ಣಗಾಗಿತ್ತು. ಹೀಗಾಗಿ ವಯಕ್ತಿಕವಾಗಿ ಶಾಂತ ಜೀವನ ಸವೆಸಿದರೂ ಆ ಸಮಯದಲ್ಲಿ ಮಹಮದನ ಆರ್ಥಿಕ ಸ್ಥಿತಿ ಅಷ್ಟೇನೂ ಹಿತಕರವಾಗಿರಲಿಲ್ಲ. ಈ ಬಡತನದ ಹೊತ್ತಿನಲ್ಲಿಯೆ ಮೆಕ್ಕಾದಲ್ಲಿ ತನ್ನ ಮತ ಪ್ರಚಾರ ಮಾಡುತ್ತಿರುವಾಗಲೆ ಇಸ್ಲಾಂ ಜಗತ್ತಿನಲ್ಲಿ ಇಂದಿಗೂ ಪ್ರಚಲಿತದಲ್ಲಿರುವ ಮಹಮದನ ಪ್ರಸಿದ್ಧ ಜೆರೂಸಲಂ ಯಾತ್ರೆ ಜರುಗಿತು ಎಂಬ ನಂಬಿಕೆಯ ಜನನವೂ ಆಯಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದ ಜೆರೂಸಲಮ್ಮಿಗೆ ಮಹಮದ್ ಆಕಾಶಯಾನ ಮಾಡಿದ್ದ ಕಪೋಲ ಕಲ್ಪಿತ ಸಂಗತಿಯಿದು. ಪುರಾತನ ಕಾಲದಿಂದಲೂ ಅತ್ಯಂತ ಪವಿತ್ರ ಯಾತ್ರಾಸ್ಥಳವಾಗಿ ಜೆರೂಸಲಂ ಮೆರೆದಿದೆ. ಮಹಮದ್ ಕೂಡ ಮಾನಸಿಕವಾಗಿ ಅಲ್ಲಿನ ಯಹೂದಿ ಹಾಗೂ ಕ್ರೈಸ್ತ ಗುಡಿ- ಗೋಪುರಗಳನ್ನು ಆರಾಧಿಸುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಮದೀನಕ್ಕೆ ವಲಸೆ ಬಂದ ನಂತರ ಪ್ರಾರ್ಥನೆ ಮಾಡುವಾಗ ಅದರ ವಿಧಿಗಳನ್ನು ಜೆರೂಸಲಮ್ಮಿನ ದಿಕ್ಕಿಗೆ ಮುಖಮಾಡಿ ಸಲ್ಲಿಸಬೇಕೆಂಬ ಕಟ್ಟಳೆಯನ್ನೂ ಆತ ಮಾಡಿದ್ದ. ಅದು ಆ ನಗರದ ಪಾವಿತ್ರ್ಯತೆಯ ಬಗ್ಗೆ ಅವನಿಗಿದ್ದ ಶ್ರದ್ಧೆಗೊಂದು ದ್ಯೋತಕವಾಗಿತ್ತು. ವಸ್ತುಸ್ಥಿತಿ ಹೀಗಿರುವಾಗಲೆ ಯಕ್ಷ ಗೇಬ್ರಿಯಲ್ ತನ್ನನ್ನು ರೆಕ್ಕೆಗಳಿಂದ ಕೂಡಿದ್ದ ಅಶ್ವಾರೂಢನನ್ನಾಗಿಸಿ ಅಲ್ಲಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ನೆರೆದಿದ್ದ ಪ್ರಾಚೀನ ಪ್ರವಾದಿಗಳಿಂದ ತನಗೆ ಸ್ವಾಗತ ಹಾರ್ದಿಕವಾಗಿ ಸಿಕ್ಕಿದ್ದು, ಅಲ್ಲಿಂದ ಅದೆ ಅಶ್ವದ ಮೇಲೆ ಕುಳಿತೆ ಒಂದೊಂದೆ ಮೆಟ್ಟಲೇರಿ ಅಂತಿಮವಾಗಿ ತಾನು ಏಳನೆ ಸ್ವರ್ಗದ ಮುಂಬಾಗಿಲು ದಾಟಿದಾಗ ತನಗಲ್ಲಿ ಸಾಕ್ಷಾತ್ ದೈವದರ್ಶನವಾಗಿದ್ದು, ದೇವರು ಅವನ ನೂತನ ಮತಾನುಯಾಯಿಗಳು ನಿತ್ಯ ಐದುಬಾರಿ ಪ್ರಾರ್ಥನೆ ಸಲ್ಲಿಸಲು ಕಟ್ಟಪ್ಪಣೆ ಮಾಡಿ ಅಂತರ್ಧನವಾಗಿದ್ದು ಇವೆಲ್ಲವನ್ನೂ ಪರಿಭಾವಿಸುತ್ತಿದ್ದಾಗ ಸೊಗಸಾದ ನಿದ್ದೆ ಒಡೆದು ಅದೂವರೆಗೂ ಕಾಣುತ್ತಿದ್ದ ಸುಂದರ ಕನಸಿನಿಂದ ಮಹಮದ್ ಹೊರಬಂದ ! ಎಚ್ಚರಗೊಂಡ ಬೆಳಗ್ಯೆ ಕೂಡಲೆ ಅಬು ತಾಲೀಬನ ಮನೆಗೆ ಆವೇಶಪೂರಿತನಾಗಿ ಧಾವಿಸಿ ಅಲ್ಲಿದ್ದ ಅವನ ಮಗಳಿಗೆ ಮಹಮದ್ ಈ ವಿಷಯವನ್ನು ಹೇಳಿದಾಗ ಅವಳು ಅದಕ್ಕೆ ಸೊಪ್ಪು ಹಾಕಲಿಲ್ಲ. ಆದರೆ ಅವಳ ವಿವೇಕದ ಮಾತುಗಳಿಗೆ ಇನಿತೂ ಕಿವಿಗೊಡದೆ ಮಹಮದ್ ತನಗೆ ಜೆರೂಸಲಂನಲ್ಲಿ ದೇವರದರ್ಶನವಾದ ಸಂಗತಿಯನ್ನು ಪ್ರಕಟಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಕ್ಲೇರ್.ಅವನ ಈ ಕನಸಿನ ಸಾಕಾರ ಸ್ವರೂಪವನ್ನು ಖುರಾನಿನ ಸುರಾ 17/1 ರಲ್ಲಿ ಗಮನಿಸಬಹುದು. ಆದರೆ ಈ ಯಾತ್ರೆಯನ್ನು ಭಾವುಕವಾಗಿ ಸ್ವೀಕರಿಸಿ ನಿಜವೆಂದೆ ನಂಬಿದ ಮಹಮದನ ಹಿಂಬಾಲಕರು ಜೆರೂಸಲಮ್ಮಿನ ಓಮರ್ ಮಸೀದಿಯಲ್ಲಿ ಮಹಮದ್ ಸ್ವರ್ಗದಿಂದ ಕೆಳಗಿಳಿದ ಸ್ಥಳದಲ್ಲಿ ಆತನದೆಂದು ನಂಬಿಸಲಾಗುವ ಪಾದದ ಬಿಂಬಗಳನ್ನು ಇಂದಿಗೂ ಪವಿತ್ರವೆಂದು ಪೂಜಿಸಿ ಧನ್ಯತೆ ಅನುಭವಿಸುತ್ತಾರೆ!. ಮಹಮದ್ ಅಲ್ ತೈಫ್'ನಿಂದ ಮೆಕ್ಕಾನಗರಕ್ಕೆ ಮರಳಿದ ಮೇಲೆ ತನ್ನ ದೈವವಾಣಿಯ ಮೂಲಕ ಕ್ರಿಸ್ತಧರ್ಮದ ಬಗ್ಗೆ, ಮೇರಿ ಮಾತೆಯ ಬಗ್ಗೆ, ಕ್ರಿಸ್ತನ ಜನನದ ಬಗ್ಗೆ, ಆತನ ಜೀವನ ಹಾಗೂ ಸಾವಿನ ಕುರಿತು ಸ್ವಲ್ಪ ಮಟ್ಟಿಗೆ ತನ್ನ ಸುರಾ 19/5, 43/57-62, 4/171ಗಳಲ್ಲಿ ತನಗೆ ಲಭ್ಯವಾದ ಮಾಹಿತಿ ಹೊರಗೆಡವಿದ್ದಾನೆ ಎನ್ನುತ್ತಾರೆ ಇತಿಹಾಸಕಾರರಾದ ಇಶಾಕ್, ಕ್ಲೇರ್ ಹಾಗೂ ಮ್ಯೂರ್ ಒಕ್ಕೊರಲಿನಿಂದ. ಈ ಬಗ್ಗೆ ಅವರಲ್ಲಿ ಭಿನ್ನಭಿಪ್ರಾಯಗಳಿಲ್ಲ. ಯಹೂದಿ ಹಾಗೂ ಕ್ರಿಸ್ತ ಮತದ ಬಗ್ಗೆ ಅದಾಗಲೆ ಅರಿತಿದ್ದ ಮಂದಿ ಇದರಿಂದ ಮಹಮದನ ಭೋದನೆಯಲ್ಲಿ ಹೊಸತೇನನ್ನೂ ಕಾಣದೆ ಅವನ ಖುರಾನ್ ಈ ಹಿಂದೆ ಹೊರಬಂದ 'ಟೋರಾ' ಹಾಗೂ 'ಬೈಬಲ್'ನ ನಕಲಿಯಾಗಿದೆ ಹಾಗೂ ಕೇವಲ ಕಟ್ಟುಕಥೆಗಳ ಕಂತೆಯಾಗಿದೆ ಎಂದು ಆರೋಪಿಸಿದರು. ಆ ಎಲ್ಲಾ ಟೀಕೆಗಳಿಗೆ ಮಹಮದ್ ಸುರಾ 46.47ಗಳಲ್ಲಿ ಸಮಜಾಯಷಿ ನೀಡಲು ಯತ್ನಿಸಿದ್ದಾನೆ. ಮಹಮದ್ ಯಹೂದಿಗಳ ಪವಿತ್ರಗ್ರಂಥವಾದ 'ತಾಲ್'ಮಡ್'ನಲ್ಲಿ ಬರುವ ಹಲವಾರು ದಂತಕಥೆಗಳನ್ನು ಖುರಾನಿನಲ್ಲೂ ಮಕ್ಕಿ-ಕಾ-ಮಕ್ಕಿ ಕಾಪಿ ಹೊಡೆದು ಬಳಸಿಕೊಂಡಿರುವ ಉದಾಹಾರಣೆಗಳನ್ನು ಇತಿಹಾಸಕಾರ ಕ್ಲೇರ್ ಸಾಧಾರವಾಗಿ ನೀಡುತ್ತಾನೆ. ಮಹಮದ್ ಯಹೂದಿ ಹಾಗೂ ಕ್ರಿಸ್ತಮತಾವಲಂಭಿಗಳಿಗೆ ತಮ್ಮತಮ್ಮ ಧರ್ಮಗ್ರಂಥಗಳನ್ನೆ ಆಧರಿಸಿ ಅವುಗಳ ಸಂದೇಶಗಳನ್ನು ಪಾಲಿಸಬೇಕೆಂದು ಆರಂಭದಲ್ಲಿ ಕರೆಯಿತ್ತಿದ್ದ. ಸುರಾ 5/72 ಹಾಗೂ 5/47ರಲ್ಲಿ ಇದನ್ನು ಕಾಣಬಹುದು. ಈ ಉದಾರ ನೀತಿಯನ್ನ ಯಹೂದಿ ಹಾಗು ಕ್ರೈಸ್ತರಿಗೆ ನೀಡುತ್ತ ಸುರಾ 42/3-53,ಹಾಗೂ 42/115ರಲ್ಲಿ 'ನಿಮ್ಮ ದೇವ ನಮ್ಮ ಹಾಗೂ ನಿಮ್ಮ ಪ್ರಭುವೂ ಆಗಿರುತ್ತಾನೆ!' ಎನ್ನುವ ಮೂಲಕ ನೀಡಿದ್ದಾನೆ. ಆದರೆ ಕ್ರಮೇಣ ಇಸ್ಲಾಂ ಪ್ರಬಲಗೊಳ್ಳುತ್ತಿದ್ದಂತೆ ತನ್ನ ಈ ಉದಾರ ನೀತಿಯನ್ನು ಮಹಮದ್ ಮುಲಾಜಿಲ್ಲದೆ ಬದಲಿಸಿದ!. ಎಲ್ಲಿಯೂ ಕ್ರೈಸ್ತ ಅಥವಾ ಯಹೂದಿ ಧರ್ಮಗ್ರಂಥಗಳ ಹೆಸರನ್ನು ಉಲ್ಲೇಖಿಸದೆ ( ತಾನೇ ಭೋದಿಸಿದ ಖುರಾನಿನ ಹೊರತು ಅನಕ್ಷರಸ್ತನಾದ ಆತನಿಗೆ ಕೇಳಿ ಅರಿವಿದ್ದ ಇತರ ಧರ್ಮಗ್ರಂಥಗಳು ಅವೆರಡು ಮಾತ್ರ ಎನ್ನುವುದು ಇತಿಹಾಸಕಾರ ಅಲ್ ತಮೀಮಿಯ ಅಂಬೋಣ. ) ಖುರಾನ್ ಮೂಲಕ ದೇವರು ಈ ಹಿಂದೆ ಉಪದೇಶಿತವಾದ ಎಲ್ಲಾ ಧರ್ಮಗ್ರಂಥಗಳನ್ನು ರದ್ದುಪಡಿಸಿದ್ದಾನೆ! ಎಂದು ಸಾರಿದ. ಇಷ್ಟಕ್ಕೆ ನಿಲ್ಲಿಸದೆ ಖುರಾನ್ ಅಂತಿಮ ದೈವ ಸಂದೇಶವಾಗಿದ್ದು ತಾನು ಅಂತಿಮ ಪ್ರವಾದಿ ಎಂದೂ ಘೋಷಿಸಿಕೊಂಡ!!. ಇದಕ್ಕೆ ಪೂರಕವಾಗಿ ತನ್ನ ಅಂತಿಮ ಮೆಕ್ಕಾಯಾತ್ರೆಯ ಸಮಯದಲ್ಲಿ ಕಾಬಾದ ಬಳಿ ಯಹೂದಿ ಮತ್ತು ಕ್ರೈಸ್ತರು ಇನ್ನೆಂದೂ ಸುಳಿಯಬಾರದು ಎಂದು ಪ್ರತಿಬಂಧಿಸಿದ್ದನ್ನು ಅಲ್ ಮುಬಾರಕಿ ಎತ್ತಿ ತೋರಿಸುತ್ತಾನೆ. ( ಇನ್ನೂ ಇದೆ...)

No comments:

Post a Comment