ಎದೆಯನ್ನ ಇರಿದ ನೆನಪುಗಳ ಅಂಬುಗಳನ್ನೆಲ್ಲ
ಆಗಾಗ ಹೊರಗೆಳೆದು.....
ಹಳೆಯ ಸವೆದ ದಿನಗಳನ್ನ ಕ್ಷಣಕ್ಷಣವೂ
ನೋವಿನೊಂದಿಗೆ ಸ್ಮರಿಸೋದು ನನ್ನ ನಿತ್ಯದ ಕನವರಿಕೆ,
ನೀ ಕಾದಿರುವ ಸಾಗರ
ನಾನೋ ಬಾಯಾರಿ ಕಾತರಿಸುವ ತುಂಬು ನದಿ......
ನಿನ್ನೆಡೆಗೆ ಸಾಗುವ ನಿತ್ಯದ ನನ್ನಾತುರ
ನಿನ್ನೆದೆಯಲ್ಲೆ ಅಡಗಿದೆ ಅಡಗಿದೆ ನನ್ನ ನೆಮ್ಮದಿಯ ನಿಧಿ/
ಮಾತಿಲ್ಲದೆ ಮೌನದಲ್ಲಿ ಮತ್ತೆ ಮರಳಿ ಬೆಳಗಾಗಲಿ ಬಿಡು
ನಿನ್ನುಸಿರ ಲೆಕ್ಖ ಹಾಕುತ ಇರುಳೆಲ್ಲ....
ನಿನ್ನೆದೆಯ ಮೇಲೆ ಒರಗಿಯೆ ನಿರಾಳವಾಗಿ ಈ ನಿಶಾರಾತ್ರಿಯ ನಾ ಕೊಲ್ಲಲ?//
ಕನಸಲ್ಲ ನಾನು
ಆಗಾಗ ಬಂದು ಕಾಡುವ ನೋವಿನಿಂದ ನೆನೆದ ಆಘಾತದ ನನಸೂ ಅಲ್ಲ....
ಏಕಾಂತ ಹಿಂಸೆಯ ಆರ್ತನಾದದ ಧ್ವನಿ ಅಷ್ಟೆ
ಕೇವಲ ಸಂಕಟದೊಂದು ತುಣುಕಿನ ಪಸೆ ಮಾತ್ರ ನಾನು,
ಹೇಗಾದರೂ ಬರಿ
ನನ್ನ ನೀನ್ಯಾವುದಾದರೂ ಹೆಸರಿಂದ ಕರಿ....
ನಿನ್ನ ಮೇಲಿನ ಮೋಹದಿಂದ ಖಂಡಿತ ನಿನ್ನತ್ತ ತಿರುಗಿ ನೋಡುತೀನಿ,
ನೀ ಬರೆದ ಪದಪದವನ್ನೂ ಮನಸಿಟ್ಟು ಓದುತೀನಿ.....
ಏಕಾಂತದಲ್ಲಿ ತಪ್ತವಾಗಿರುವಾಗ ನಿನ್ನ ಮನಸು ಆಗಾಗ ಕನಸಲ್ಲಿ ಬಂದು ನಾ ನಿನ್ನ ಕಾಡುತೀನಿ/
ಕಣ್ಣಲಡಗಿದ ಮಚ್ಚೆಯ ಕಿರು ಕನಸಿನಂತೆ
ಬೆತ್ತಲೆ ಪಾದಗಳಲ್ಲಿ ಇಬ್ಬನಿ ಹೊದ್ದ ಗದ್ದೆ ಬದುವಲ್ಲಿ ಸಾಗುವಾಗ ಆದ ಹುಲ್ಲುಗಳ ಕಚಗುಳಿಯ ಸೊಗಸಿನಂತೆ....
ನನ್ನನು ಆಗಾಗ ನೇವರಿಸುವ
ನಿನ್ನ ನೆನಪುಗಳು ಮುದದಿಂದಿಟ್ಟಿವೆ ನನ್ನ//
ದಟ್ಟ ಕಾಡಿನ ನಡುವೆ ಸವೆದ ಬೈತಲೆ ಕಾಲುಹಾದಿಯಲ್ಲಿ
ನಿನಗಾಗಿ ನಿತ್ಯ ನನಸಿನಲ್ಲೆ ಕಾಯುತ್ತಿರುತ್ತೇನೆ....
ಉಸಿರು ನಿಲ್ಲುವ ಮೊದಲು ಕನಿಷ್ಠ ಕನಸಿನಲ್ಲಾದರೂ ಒಮ್ಮೆ ಬರುತ್ತೀಯಲ್ಲ,
ಸರಾಗ ಸರಿಗಮದಿಂದ ಮುನಿಸಿಕೊಂಡಿದೆ ಬದುಕು
ಮುರುಳಿ ಎಂದುಕೊಂಡು ಮೆಲುವಾಗಿ ಎತ್ತಿಕೊಂಡು ನಿನ್ನ ತುಟಿಗಳಿಗೆ ತಾಕಿಸು ಕೊಂಚ ಸಮಯ......
ನನ್ನೆದೆಯಲ್ಲಿ ಮತ್ತೆ ಮೆಲುರಾಗವೊಂದು ಮೂಡಿದರೂ ಅಚ್ಚರಿಯಿಲ್ಲ
ಹಾಗಾದರೂ ಮತ್ತೆ ಮರೆತ ನಿನ್ನ ಹಾಡನ್ನ ಹಾಡಿಯೇನು/
ಮೃತ್ಯು ಮುದ್ದಿಸುವಲ್ಲಿ, ಮರಣದ
ಮಡಿಲಲ್ಲಿ ತಲೆಯಿಟ್ಟು ಮಲಗಬೇಕೆನ್ನಿಸುತಿದೆ....
ನಿನ್ನ ಕಣಕಣದಲ್ಲೂ ಆತ್ಮವಾಗಿ ಬೆರೆತು
ಮರೆಯಾಗಬೇಕೆನ್ನಿಸುತ್ತಿದೆ ಶಾಶ್ವತವಾಗಿ,
ಒಂದೇ ಒಂದು ಪುನರವಕಾಶ ಮತ್ತೊಮ್ಮೆ ಸಿಗಬಹುದ?//
No comments:
Post a Comment