Friday, April 22, 2011

ಮಳೆ ಹಾಡು...

ಮಳೆಯಿಂದ ಮನವೂ ಪ್ರಫುಲ್ಲ,
ಆದರೆ ಕೊರತೆ ಇಷ್ಟೆ...
ಉಕ್ಕುತ್ತಿರುವ ಈ ಸಂತಸದ ಹೊನಲಲ್ಲಿ ಮೀಯಲು ಜೊತೆಗೆ ನೀನಿಲ್ಲಿಲ್ಲ/
ಖಾಲಿ ಪುಟಗಳ ತುಂಬಾ ನೀನೆರಚಿದ್ದ ಒಲವಿನ ಹಲವು ರಂಗು,
ಮನದ ಪುಸ್ತಕದ ತುಂಬಾ ಚಿತ್ತಾರಗಳ ಮೂಡಿಸಿವೆ...
ಗಾಳಿ ಗೀಚಿದ ಸಾಲಿಗೆ,ಮೋಡ ಹೊಸೆದ ರಾಗಕೆ.....
ಇಳೆಯ ಇನಿದನಿ ಬೆರೆತು ,ಮಳೆಯ ಹಾಡಾಯ್ತು//


ಹನಿಹನಿಯಲ್ಲೂ ಒಲವ ಸಿಂಚನ,ಭೂಮಿ ಮೇಲೆ ಬಾನಿಗೆಷ್ಟು ಪ್ರೀತಿ....
ಎಷ್ಟು ಸೊಗಸಾಗಿರುತ್ತಿತ್ತು ಬಾಳು,
ನಾನೂ ನನ್ನೆದೆಯ ಮೋಹವನ್ನೆಲ್ಲ ನಿನ್ನೆದೆಗೆ ದಾಟಿಸುವಂತಿದ್ದರೆ....
ಅದೇ ರೀತಿ/
ಮೋಡ ಕವಿದ ಆಗಸದ ಆಚೆ ಕಡೆ ಅಡಗಿ ಕಣ್ಣಾಮುಚ್ಚಾಲೆಯಾಡುವ ಚಂದಿರನಿಗೂ,
ಭೂಮಿಯ ಒಲವನ್ನು ಗೆಲ್ಲುವ ಒಳಆಸೆಯಿದೆ...
ಗಾಳಿ ಸೋಕಿದ ಮೋಡಗಳು ಇಳೆಯ ಅಂದದ ಕಥೆ ಕೇಳಿ ರೋಮಾಂಚಿತವಾಗಿ,
ಅವಳೊಡನೆ ಸೇರಲು ಕಾತರದಿಂದ ಧರೆಗಿಳಿದು ಬಂದವು//


ತೆಂಕಣ ಸುಳಿಗಾಳಿಗೆ ಕಡಲು ಬರಸೆಳೆದು ಮುತ್ತನಿತ್ತಾಗ,
ನಮ್ಮೂರಲ್ಲಿ ಬಾನು ಬಿರಿದು ಭುವಿಗೆ ಮಳೆ ಮಲ್ಲಿಗೆ ಸುರಿಯುತ್ತಿತ್ತು....
ನಿಮ್ಮೂರಲ್ಲೂ ಹಾಗೇನ?,
ಮುಗಿಲು ಮುತ್ತಿಟ್ಟ ಭೂಮಿಯೆದೆಯಂಗಳದಿಂದ ಹೊರಹೊಮ್ಮಿದ ಪರಿಮಳ,
ನಿನ್ನ ಮೈಗಂಧದಂತೆ ಹಿತವಾಗಿತ್ತು/
ಮನಸನ್ನರಳಿಸಿದ ಮಳೆ ಹನಿಗಳಲ್ಲಿ ಅಡಗಿದ ತಂಪು,
ನನಗೆ ನಿನ್ನೊಲವನ್ನ ಗಾಢವಾಗಿ ನೆನಪಿಸಿ ರೋಮಾಂಚಿತನನ್ನಾಗಿಸಿತು..
ಮೋಡ ಗೀಚಿದ ಮಳೆ ಹಾಡಿದ ಹನಿಗಳ ಹಾಡಿನಲ್ಲಿ,
ನಿನ್ನ ಗುಂಗಲೆ ಸದಾ ಮಗ್ನ ನನ್ನ ಮನಸಿಗೆ......
ಕೇಳಿ ಬಂದದ್ದು - ನನ್ನವೆರಡು ಕಿವಿ ತುಂಬಿಸಿದ್ದು ಕೇವಲ ನಿನ್ನೆದೆಯ ಸುನಾದ//

No comments:

Post a Comment