Saturday, August 14, 2010

ಏಯಂ ಆಕಾಶವಾಣಿ..

ರಾತ್ರೆ ಮನೆಯ ಒಳಗೆ ಅಡುಗೆಮನೆಯ ಕಡೆಯುವ ಕಲ್ಲಿನ ಹತ್ತಿರವೋ ಇಲ್ಲವೇ ಮೆಟ್ಟಿಲ ಹತ್ತಿರವೋ ಬೆಚ್ಚಗೆ ಗೋಣಿ ಹಾಸಿ ಅದರ ಮೇಲೆ ಮಲಗಿಸಲಾಗುತ್ತಿದ್ದ ಕರುಗಳೆಂದರೆ ನನಗೆ ಬಹಳ ಅಕ್ಕರೆ.ಸುಮಾರು ದನಗಳು ನಮ್ಮ ಹಟ್ಟಿಯಲ್ಲಿದ್ದು ವರ್ಷಪೂರ್ತಿ ಒಂದಲ್ಲ ಒಂದು ದನಗಳು ಗಬ್ಬವಾಗಿ ಕರು ಹಾಕುತ್ತಲೇ ಇದ್ದುದರಿಂದ ಮುನ್ನೂರೈವತ್ತು ದಿನವೂ ಈ ರೀತಿ ಕರುಗಳನ್ನು ಮನೆಯೊಳಗೆ ಮಲಗಿಸಿಕೊಳ್ಳುವುದನ್ನು ಕಾಣಬಹುದಾಗಿತ್ತು.ಚಳಿ-ಮಳೆ ವಿಪರೀತವಾಗಿದ್ದ ನಮ್ಮೂರಿನಲ್ಲಿ ಈ ಎಳೆ ಬೊಮ್ಮಟೆಗಳನ್ನು ಒಂದಷ್ಟು ದಿನ ಹೀಗೆ ಮನೆಯೊಳಗೇ ಮಲಗಿಸಿಕೊಳ್ಳಲೆ ಬೇಕಾಗುತ್ತಿತ್ತು..ಆ ಎಳೆ ಬೊಮ್ಮಟೆಗಳಿಗೆ ಥಂಡಿಗೆ ನ್ಯುಮೋನಿಯ ಆಗದಂತೆ ಕಾಪಾಡಲು ಹೀಗೆ ಮಾಡದೆ ವಿಧಿಯೇ ಇರುತ್ತಿರಲಿಲ್ಲ.ನನಗೋ ಅವುಗಳೆಂದರೆ ಭ್ರಾತೃ ವಾತ್ಸಲ್ಯ.ತಮ್ಮ ನುಣುಪು ಕಂದು-ಬಿಳಿ ಮೈಯಿಂದ ಸಿನುಗು ವಾಸನೆ ಹೊರಹೊಮ್ಮಿಸುತ್ತ ಇಷ್ಟಗಲ ಕಣ್ಣು ಬಿಟ್ಟು ಕೊಂಚ ಬೆದರಿದಂತೆ ಅಚ್ಚರಿಯಿಂದ ನನ್ನತ್ತ ಅವು ದಿಟ್ಟಿಸಿ ನೋಡುತ್ತಿದ್ದಾಗ ಅವುಗಳಷ್ಟೇ ಪುಟ್ಟ ಮಗುವಾಗಿದ್ದ ನನ್ನೊಳಗೆ ವಾತ್ಸಲ್ಯ ಉಕ್ಕಿಬಂದು ತಬ್ಬಿಕೊಂಡು ಆ ಮುದ್ದಾದ ಕಣ್ಣುಗಳಿಗೆ ಮುತ್ತಿಡುವ ಎಂದೆನಿಸುತ್ತಿತ್ತು.ಎಷ್ಟೋ ರಾತ್ರಿಗಳು ಅತ್ತು ಕೂಗಿ ರಂಪಾಟ ಮಾಡಿ ಹಟತೊಟ್ಟು ಅವುಗಳನ್ನು ತಬ್ಬಿ ಕೊಂಡು ಅವುಗಳೊಂದಿಗೆ ಅವುಗಳ ಗೋಣಿ ಹಾಸಿಗೆಯಲ್ಲೇ (ಉಚ್ಚೆ ಮಾಡಿ-ಸಣ್ಣ ಮಕ್ಕಳಂತೆ ಕಕ್ಕ ಮಾಡಿ ಎಷ್ಟೋ ಸಾರಿ ಆ ಗೋಣಿ ತಾಟುಗಳು ನಾತ ಹೊಡೆಯುತ್ತಿದ್ದರೂ ಸಹ,ಎಳೆಗರುಗಳು ಸಗಣಿ ಹಾಕದೆ ಸಣ್ಣ ಮಕ್ಕಳಂತೆ ಮಲ ಹಾಕುತ್ತವೆ) ನಾನೂ ಒಬ್ಬನಾಗಿ ನಿದ್ದೆ ಹೋಗುತ್ತಿದ್ದೆ.



"ಎಯಂ ಆಕಾಶವಾಣಿ ಸಂಪ್ರತಿ ವಾರ್ತಾಹ ಶೂಯನ್ತಾಂ...ಪ್ರವಾಚಕಹ ಬಲದೇವ ಸಾಗರಹ" (ಕೆಲವೊಮ್ಮೆ ದೇವೇಂದ್ರ ಮಿಶ್ರಹ} ಹೀಗೊಂದು ಅಶರೀರವಾಣಿ ಕಿವಿಮೇಲೆ ಬೀಳುತ್ತಿದ್ದಾಗ ಮೆಲ್ಲಗೆ ನನಗೆ ಎಚ್ಚರವಾಗುತ್ತಿತ್ತು.ಚುಮುಚುಮು ಚಳಿಯಲ್ಲಿ ನಿಧಾನವಾಗಿ ಪಿಳಿಪಿಳಿ ಕಣ್ಣು ಬಿಟ್ಟು ಅತ್ತಿತ್ತ ನೋಡುತ್ತಿರೋವಾಗ ಏನಾಶ್ಚರ್ಯ! ನಾನು ಅಮ್ಮನ ( ಅಜ್ಜಿಯನ್ನ ನಾನು ಅಮ್ಮ ಎನ್ನುತ್ತೇನೆ) ಹಾಸಿಗೆಯಲ್ಲಿ ಅವರ ಮಂದರಿಯೊಳಗೆ ಹುದುಗಿರುತ್ತಿದ್ದೆ!! ಮೆಲ್ಲಗೆ ಕಡೆಯುವ ಕಲ್ಲಿನ ಕರು ಕಟ್ಟಿದೆಡೆಗೆ ಕಣ್ಣು ಹಾಯಿಸಿದರೆ ಅದೂ ಮಾಯ!!! ತನ್ನಮ್ಮನ ಬಳಿ ಮೈ ನೆಕ್ಕಿಸಿ ಕೊಳ್ಳುತ್ತಾ ಮೊಲೆ ಚೀಪಲು ಓಡಿರುತ್ತಿತ್ತು.ಸೋಮಾರಿ ಸಿದ್ಧನಾಗಿ ಮೈ ಮುರಿದು ಏಳುವ ಸಮಯಕ್ಕೆಲ್ಲ ಪ್ರದೇಶ ಸಮಾಚಾರದ ಗಡಸು ಕನ್ನಡದ ಧ್ವನಿ ಕಿವಿ ಮೇಲೆ ಬೀಳಲಾರಂಭವಾಗಿರುತ್ತಿತ್ತು.ಸಾಮಾನ್ಯವಾಗಿ ಬೆಳಗಿನ ಹೊತ್ತುಗಳಲ್ಲಿ ನಮ್ಮ ಮನೆಯಲ್ಲಿ ಉಲಿಯುತ್ತಿದ್ದುದು ಒಂದೋ ಆಕಾಶವಾಣಿಯ ಭದ್ರಾವತಿ ಕೇಂದ್ರದ ಕಾರ್ಯಕ್ರಮಗಳು ಇಲ್ಲವೇ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳು.



ಚಿಂತನ,ನಗರದಲ್ಲಿ ಇಂದು,ಸಂಸ್ಕೃತದಲ್ಲಿ ವಾರ್ತೆಗಳು (ಅದೂ ದೆಹಲಿ ಕೇಂದ್ರದ ಸಹ ಪ್ರಸಾರದೊಂದಿಗೆ!),ಪ್ರದೇಶ ಸಮಾಚಾರ,ಪ್ರಚಲಿತ,ರಸವಾರ್ತೆ,ಕನ್ನಡದಲ್ಲಿ ವಾರ್ತೆಗಳು,ಚಿತ್ರಗೀತೆಗಳು,ಪುನಃ ದೆಹಲಿಯಿಂದ ಹಿಂದಿ ಹಾಗು ಇಂಗ್ಲಿಶ್ ವಾರ್ತೆಗಳು ಇವೆಲ್ಲ ನನ್ನ ಬಾಲ್ಯದ ಬೆಳಗಿಗೆ ರಂಗು ತುಂಬುತ್ತಿದ್ದವು.ಎದ್ದು ಹಲ್ಲುಜ್ಜಿ,ಚಾ ಸವಿದು,ವರ್ತನೆ ಮನೆಗಳಿಗೆ ಹಾಲು ಕೊಟ್ಟು ಮತ್ತೆ ಬಂದವ ಕೊಂಚ ಹೊತ್ತು ಪುಸ್ತಕ ಓಡುವ ಪ್ರಹಸನ ನಡೆಸಿ,ನಡು ನಡುವೆ ಹಲವಾರು ಕಾರಣ ಗಳಿಗಾಗಿ ಹಿರಿಯರಿಂದ ಬಯ್ಯಿಸಿ ಕೊಂಡು,ಕರೆದಾಗ ಹೋಗಿ ಸ್ನಾನ ಮಾಡಿಸಿಕೊಂಡು (ಈ ಸ್ನಾನ ಮಾಡೋದು ನನ್ನಿಡೀ ಬಾಲ್ಯದಲ್ಲಿ ನನಗೊಂದು ಘನ ಘೋರ ಶಿಕ್ಷೆಯಂತೆಯೇ ಭಾಸವಾಗುತ್ತಿತ್ತು.ದನಗಳ ಹಿಂಡೇ ನಮ್ಮ ಬಚ್ಚಲ ಪಕ್ಕದ ಹಟ್ಟಿಯಲ್ಲಿ ಇರುತ್ತಿದ್ದಿದ್ದರಿಂದ ಪ್ರತಿ ಐದು ನಿಮಿಷಕ್ಕೊಮ್ಮೆ ಯಾವುದಾದರೊಂದು ದನ ಬಾಲ ಎತ್ತುತ್ತಿತ್ತು.ಕೂಡಲೇ ಕೀ ಕೊಟ್ಟ ಬೊಂಬೆಯಂತೆ ನನ್ನ ಪ್ರತಿರೋಧವನ್ನೂ ಲೆಕ್ಖಿಸದೆ ನಮ್ಮಮ್ಮ ಬಲವಂತವಾಗಿ ದರದರನೆ ಎಳೆದು ದನದ ಮೂತ್ರಾಭಿಷೇಕ ಮಾಡಿಸುತ್ತಿದ್ದರು.ಸಾಲದ್ದಕ್ಕೆ ಅಲ್ಲೇ ಯಾವಾಗಲೂ ತಯಾರಿರುತ್ತಿದ್ದ ಚೊಂಬೊಂದರಲ್ಲಿ ಭರ್ತಿ ಗೋಮೂತ್ರ ಹಿಡಿದು ನನ್ನ ವಿರೋಧವನ್ನು ಚೂರೂ ಪರಿಗಣಿಸದೆ ಕುಡಿಸಿಯೇ ಕುಡಿಸಿರುತ್ತಿದ್ದರು.ಯಮಗಾತ್ರದ ಸಿಂಧಿ ದನಗಳ ಚೊಂಬು ಭರ್ತಿ ಮೂತ್ರಪಾನದ ಸುಖವನ್ನು ಕಲ್ಪಿಸಿಕೊಳ್ಳಿ! ಹಾಗೆ ನೋಡಿದರೆ ಇಲ್ಲಿಯವರೆಗೆ ನಾನು ದನದ ಹಾಲಿಗಿಂತ ಹೆಚ್ಚು ಉಚ್ಚೆ ಕುಡಿದಿದ್ದೇನೆ.ದನದ ಉಚ್ಚೆ ನಿತ್ಯ ಕುಡಿದವನು ಬುದ್ಧಿವಂತನಾಗುತ್ತಾನಂತೆ!! ಹಾಗೆ ಅವರ ಕಿವಿಚುಚ್ಚಿದ ಪುಣ್ಯಾತ್ಮ ನನ್ನ ಇನ್ನೂ ಹುಡುಕುತ್ತಿದ್ದೇನೆ...ಕೈಗೊಮ್ಮೆ ಸಿಗಲಿ ಇದೆ ಅವನಿಗೆ!?) .ಅನಂತರ ಸೂಜಿಯಂತಹ ಹಣಿಗೆಯಲ್ಲಿ ತಲೆ ಬಾಚಿಸಿ ಕೊಂಡು ದೇವರಿಗೆ ಅಡ್ಡ ಬಿದ್ದು,ಪ್ರದಕ್ಷಿಣೆ ಹಾಕಿ ಹಣೆಗೆ ಕುಂಕುಮದ ಬೊಟ್ಟಿಡಿಸಿಕೊಳ್ಳುತ್ತಾ ಸಮವಸ್ತ್ರ ತೊಟ್ಟು ಕೊಂಡರೆ ಒಂದು ಹಂತಕ್ಕೆ ಸಿದ್ಧನಾದಂತೆ.


ಕೊಟ್ಟ ತಿಂಡಿ ತಿಂದು ಅಂಗಡಿಗೆ ಹೋಗಿ ಏನಾದರೂ ಚಿಲ್ಲರೆ ಸಾಮಾನು ತರೋದೋ ಇಲ್ಲ ಹೂ ಕುಯಿದು ಕೊಡೋದೋ ಮುಂತಾದ ಚಿಲ್ಲರೆ ಕೆಲಸ ಮುಗಿಸುವ ಹೊತ್ತಿಗೆ ನಮ್ಮ ರೇಡಿಯೋ ಹಲವಾರು ಬಾರಿ ಕಿವಿ ಹಿಂಡಿಸಿಕೊಂಡು ಭದ್ರಾವತಿಯಿಂದ ಧಾರವಾದಕ್ಕೂ,ಅಲ್ಲಿಂದ ಗುಲ್ಬರ್ಗಾಕ್ಕೂ,ಅಲ್ಲಿಂದ ಮಂಗಳೂರಿಗೂ ಅಥವಾ ಕೆಲವೊಮ್ಮೆ ಬೆಂಗಳೂರಿಗೂ ಕೂತಲ್ಲೇ ವಿಶ್ವ ಪರ್ಯಟನೆ ಹೋಗಿ ಬಂದಿರುತ್ತಿತ್ತು.ಅಸಾಧ್ಯ ಗದ್ದಲದ ನಡುವೆ ತುಣುಕು ತುಣುಕಾಗಿ ಯಾವುದಾದರೊಂದು ಚಿತ್ರಗೀತೆಯನ್ನ ಹಾಡುತ್ತಲೇ ಇರುತ್ತಿತ್ತು.ಎಸ್ ಪಿ ಬಾಲಸುಬ್ರಮಣ್ಯಮ್,ಪಿ ಲೀಲಾ,ಪಿ ಸುಶೀಲ,ವಾಣಿ ಜಯರಾಂ,ಪಿ ಬಿ ಶ್ರೀನಿವಾಸ್,ಬೆಂಗಳೂರು ಲತಾ,ಎಸ್ ಪಿ ಶೈಲಜಾ,ಬಿ ಕೆ ಸುಮಿತ್ರ,ಎಲ್ ಅರ್ ಈಶ್ವರಿ,ಕಸ್ತೂರಿ ಶಂಕರ್,ಕೆ ಎಸ್ ಸೌಂದರ್ ರಾಜನ್,ಘಂಟಸಾಲ ಮುಂತಾದವರಿಗೆ ಪಾಪ ದಿನ ನಿತ್ಯ ಬೆಳಗಾಗೆದ್ದು ನಮ್ಮನೆ ರೇಡಿಯೋದಲ್ಲಿ ಹಾಡೋದೊಂದೇ ಕೆಲಸ!.ಇಷ್ಟೆಲ್ಲಾ ಗಂಟಲು ಹರಕೊಂಡು ಹಾಡಿದರೂ ಒಂದೇ ಒಂದು ದಿನವೂ ತಮ್ಮ ಕತ್ತೆ ದುಡಿಮೆಗೆ ಬೇಸರಿಸಿ ಕೊಳ್ಳದೆ ಇವತ್ತಿಗೂ ಹಾಡುತ್ತಲೇ ಇದ್ದಾರೆ. ಹೀಗಾಗಿ ಮೊದಲ ಬಾರಿಗೆ ಜಾನಕಿಯಮ್ಮ,ಬಾಲು ಸರ್,ವಾಣಿ ಮೇಡಂ ( ಇವರೆಲ್ಲರೂ ಈಗ ನನ್ನ ಪರಮಾಪ್ತರು) ರನ್ನ ಪ್ರತ್ಯಕ್ಷ ಕಂಡು ಅವರೊಂದಿಗೆ ಕಾಫಿ ಕುಡಿಯುತ್ತ ಮಾತನಾಡಿದಾಗ ಅವರು ನಮ್ಮನೆಯವರಲ್ಲದೆ ಬೇರೆಯವರು ಅಂತ ಅನ್ನಿಸಲೇ ಇಲ್ಲ!.
{ನಾಳೆ ಮುಂದುವರೆಸುವೆ}

No comments:

Post a Comment