Tuesday, August 31, 2010

ನೀ ನಕ್ಕರೆ ಮಳೆ...

ಎಲ್ಲರೊಳಗೊಂದಾಗದೆ ಗುಂಪಲ್ಲಿ ನಿಂತಿದ್ದರೂ ಏಕಾಂಗಿಯಾಗಿದ್ದೆ,
ಆ ಒಂಟಿತನ ಕಳೆದದ್ದು ನಿರೀಕ್ಷಿಸದೆ ಬಾಳಲ್ಲಿ ಪ್ರತ್ಯಕ್ಷವಾದ ನೀನು/
ಸುಮ್ಮನೆ ಕಾರಣವೆ ಇಲ್ಲದೆ...
ಅರಿಯದ ಭಾವವೊಂದಕ್ಕೆ ಕಾತರಿಸಿ ಪರಿತಪಿಸುತ್ತಿದ್ದೆ,
ಅದಕ್ಕೆ ಅರ್ಥ ಕೊಟ್ಟಿದ್ದು ನಿನ್ನ ನಗು ತುಂಬಿದ ಸಮ್ಮತಿ....
ಅದರ ಜೊತೆಜೊತೆಗೆ ಮಳೆ ಹನಿಸಿದ ಬಾನು//

ನಿನ್ನ ಕೈಬರಹ....

ನೆನಪುಗಳ ಭಾರಕ್ಕೆ ಹೃದಯ ಒಡೆದು ಹೋಗುತಿದೆ,
ಒಲವ ಆಳದ ಬಾವಿಗೆ ಶರಣಾದ ಭಾವಗಳು ಆತ್ಮಹತ್ಯೆ ಮಾಡಿಕೊಳ್ಳುತಿವೆ/
ಈಗಂತೂ ಹೀಗೆಯೆ ಬದುಕುವ ಅಭ್ಯಾಸ ರೂಢಿಯಾಗಿದೆ,
ನೀ ದೂರಾದರು...ಚೂರಾದರು ನಿನ್ನ ನೆನಪು ನನ್ನೋಳಗಿನ್ನೂ ಬಾಕಿಯಿದೆ//


ಒಲವಿನ ಕಾಡಿಗೆಯಿಂದ....ನಾಳೆಗಳ ಕಾಗದದ ಮೇಲೆ,
ನಿನ್ನ ಕೈಯಿಂದಲೇ ನನ್ನ ಹಣೆಬರಹ ಬರೆದು ಬಿಡು/
ಅಳಿಸಲಾಗದ ಶಾಯಿ ಎಲ್ಲಾದರೂ ಸಿಕ್ಕೀತು.....ಹುಡುಕಿ ತರುತೀನಿ ಸ್ವಲ್ಪ ಕಾಯಿ,
ಅಕ್ಕರೆಯ ನಾಲ್ಕು ಸಾಲುಗಳನ್ನೂ ಸೇರಿಸಿದ ಪದಗಳಿಂದಲೆ.....
ಅದೃಷ್ಟದ ಕವನ ಹರಿಸಿಬಿಡು//

Monday, August 30, 2010

ಮತ್ತೆ ಮಲೆನಾಡು...

ನೆಟ್ಟಗೆ ರಸ್ತೆಗಳೇ ಇದ್ದಿರದಿದ್ದ ಮಲೆನಾಡಿನ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಮೊತ್ತ ಮೊದಲಿಗೆ ಆರುಚಕ್ರದ ಬಸ್ ಗಳನ್ನ ಓಡಿಸಿದ ಹಿರಿಮೆ ಕೊಪ್ಪದ 'ಶಂಕರ್ ಮೋಟರ್ ಸರ್ವಿಸ್' ಕಂಪನಿಯದು.ಓಂ ಪುರಿಯ ಕೆನ್ನೆಗೆ ಸವಾಲೊಡ್ಡುವಂತಿದ್ದ,ಟಾರ್ ಎಂಬ ಅತ್ಯಮೂಲ್ಯ ವಸ್ತುವಿನ ಬಗ್ಗೆ ಕೇಳಿಯೂ ಅರಿತಿರದ ಹಳ್ಳಿಯ ರಸ್ತೆಗಳಲ್ಲಿ ಈಗಿನಷ್ಟು ಖಾಸಗಿ ವಾಹನಗಳಿಲ್ಲದ ಒಂದು ಕಾಲದಲ್ಲಿ ದರ್ಬಾರು ನಡೆಸಿದ್ದ ಬಸ್ಸುಗಳದ್ದೆ ಒಂದು ರೋಚಕ ಇತಿಹಾಸ.
ಟಾರು ಎಂಬ ಆಧುನಿಕ ಕ್ರಾಂತಿ ಮಲೆನಾಡನ್ನು ಮುಟ್ಟಿದ್ದು ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ,ಅದಕ್ಕೂ ಮೊದಲು ತಾಲೂಕು ಕೇಂದ್ರಗಳ ಮುಖ್ಯರಸ್ತೆಗಳಿಗಷ್ಟೇ ಟಾರು ಕಾಣುವ ಭಾಗ್ಯವಿರುತ್ತಿತ್ತು,ಕೊಪ್ಪದಲ್ಲಿ ಲೋಕಸೇವಾನಿರತ ದ್ಯಾವೇಗೌಡರು ಅರವತ್ತರ ದಶಕದಲ್ಲೆ ಮಜಭೂತು ಕಾಂಕ್ರೀಟ್ ಮಾರ್ಗ ಮಾಡಿಸಿದ್ದರು,ಇಂದಿಗೂ ಕೊಪ್ಪದಲ್ಲಿ ಅದು ಗಟ್ಟಿಮುಟ್ಟಾಗಿರುವುದನ್ನು ಕಾಣಬಹುದು.ಉಳಿದಂತೆ ಮಣ್ಣು ಮಾರ್ಗಗಳೇ ಎಲ್ಲೆಲ್ಲೂ ಆವರಿಸಿದ್ದವು.ವರ್ಷದ ಎಂಟು ತಿಂಗಳು ಎಡೆಬಿಡದೆ ಸುರಿಯುತ್ತಿದ್ದ ಜಡಿ ಮಳೆಗೆ ಇಲ್ಲಿ ಕೆಸರಿನ ಸಿಂಚನವಾಗುತ್ತಿತ್ತು.ಇನ್ನುಳಿದ ನಾಲ್ಕು ತಿಂಗಳು ಹಿಟ್ಟಿನಂತೆ ಏಳುತ್ತಿದ್ದ ಧೂಳಿನಲ್ಲಿ ರಸ್ತೆಯ ಇಕ್ಕೆಲದ ಮರಗಳ ಜೊತೆ ತಾವೂ ಮಿಂದು ಪವಿತ್ರರಾಗುವ ಅವಕಾಶ ಬಸ್ ಪ್ರಯಾಣಿಕರದ್ದು.ಬಸ್ ಹೊರಟಲ್ಲಿಂದ ಹತ್ತಿ ಬಂದು ಮುಟ್ಟುವ ಊರಿನಲ್ಲಿ ಇಳಿಯುವಾಗ ಥೇಟ್ ಕಂಚಿನ ಪ್ರತಿಮೆಗಳಂತೆ ಎಲ್ಲರೂ ಕಂಗೊಳಿಸುತ್ತಿದ್ದರು.ಒಂದು ಕಾಲದಲ್ಲಿ ಸ್ವಚ್ಚವೆ ಆಗಿದ್ದಿರಬಹುದಾದ ಅವರ ವಸ್ತ್ರಗಳು ಬಿಳಿ ಬಣ್ಣದವು ಎಂದು ಆಣೆ-ಪ್ರಮಾಣ ಮಾಡಿ ಹೇಳಿದರೂ ನಂಬಲಾರದ ಮಟ್ಟಿಗೆ ಅವುಗಳ ಮೂಲ ಬಣ್ಣ ಮರೆಯಾಗಿರುತ್ತಿತ್ತು.

ಶಿವಮೊಗ್ಗದಿಂದ ತೀರ್ಥಹಳ್ಳಿ ನಡುವಿನ ೬೦ ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ ಎರಡೂವರೆಯಿಂದ ಮೂರು ಘಂಟೆಗಳ ಪ್ರಯಾಣವಧಿ ತಗಲುತ್ತಿತ್ತು.ಇನ್ನು ಅದೇ ಮಾರ್ಗವಾಗಿ ಮಂಗಳೂರಿಗೆ ತಲುಪುವ ಕಾರ್ಯವಂತೂ ವಿಪರೀತ ಸಾಹಸದ್ದು.ಎಪ್ಪತ್ತರ ದಶಕದ ಕೊನೆಯವರೆಗೂ 'ದೇವಂಗಿ ಮೋಟರ್ ಸರ್ವಿಸ್' ಅಥವಾ 'ಮೇಗರವಳ್ಳಿ ಮೋಟರ್ ಸರ್ವಿಸ್'ಬಸ್ಸುಗಳ ಮೂಲಕ ಆಗುಂಬೆ ಸೇರಿ ಅಲ್ಲಿಂದ ಸುಮಾರು ಕಾದ ನಂತರ ಉಬ್ಬು ಮೂತಿಯ ಟ್ಯಾಕ್ಸಿಗಳಲ್ಲಿ ಕೂತು ಸೋಮೇಶ್ವರ ಮುಟ್ಟಿ ಮತ್ತೆ ಅಲ್ಲಿ ಹೆಣಕಾದಂತೆ ಕಾದು ಸಿಪಿಸಿ ಬಸ್ಸಿನಲ್ಲಿ ಮಂಗಳೂರಿಗೆ ಹೋಗಬೇಕಾಗುತ್ತಿತ್ತು.ಸಮಯದ ಖಾತ್ರಿ ಯಾರಿಗೂ ಇರುತ್ತಲೇ ಇರಲಿಲ್ಲ! ಇನ್ನು ದಿನಕ್ಕೆ ಒಂದೇ ಬಾರಿ ಆಗುಂಬೆಗೆ ಬಂದು ಹೋಗುವ ಈ ಎರಡೂ ಬಸ್ಗಳು ಮಾರ್ಗ ಮಧ್ಯೆ ಕೆಟ್ಟು-ಪಂಚರ್ ಆಗಿ ನಿಂತರಂತೂ ಪ್ರಯಾಣಿಕರು ಕಣ್ ಕಣ್ ಬಿಡುವುದನ್ನು ಬಿಟ್ಟು ಇನ್ನೇನನ್ನೂ ಮಾಡಲಾಗುತ್ತಿರಲಿಲ್ಲ.ಎಪ್ಪತ್ತರ ದಶಕಾಂತ್ಯದಲ್ಲಿ ನಟ ಸುದೀಪರ ತಂದೆ ಸಂಜೀವ್ ಮಾಲಕತ್ವದ 'ಸ್ವಸ್ತಿಕ್' ಮಿನಿ ಬಸ್ಸಿನ ಶಿವಮೊಗ್ಗ-ಮಂಗಳೂರು ನಡುವಿನ ನೇರ ಪ್ರಯಾಣ ಆರಂಭ ಗೊಂಡಾಗಲೆ ಈ ತಲೆನೋವು ಸ್ವಲ್ಪ ತಗ್ಗಿದ್ದು.ಇದಕ್ಕೂ ಮೊದಲು ನೇರ ಪ್ರಯಾಣದ ಸುಖ ಬಯಸುವವರು ಹರಿಹರದಿಂದ ತೀರ್ಥಹಳ್ಳಿ ಕುಂದಾಪುರ ಮಾರ್ಗವಾಗಿ ಹೋಗುತ್ತಿದ್ದ 'ಜಗದೀಶ್ವರ'ದಲ್ಲಿ ಹೋಗ ಬೇಕಾಗುತ್ತಿತ್ತು.ತುಂಬಾ ಸುತ್ತು ಬಳಸಿನ ಹಾದಿ ಅದಾಗಿದ್ದರಿಂದ ಬಹುತೇಕ ಯಾರೂ ಅದರತ್ತ ಆಸಕ್ತಿ ವಹಿಸುತ್ತಿರಲಿಲ್ಲ.


ಮಲೆನಾಡು ಮೊದಲ ಬಸ್ ಭಾಗ್ಯ ಕಂಡಿದ್ದೆ ಐವತ್ತರ ದಶಕದಲ್ಲಿ.ಆರಂಭದಲ್ಲಿ ಇದ್ದವು ಕಲ್ಲಿದ್ದಲು ಇಂಧನದ ಉಗಿಚಾಲಿತ ಬಸ್ ಗಳು.ಬಸ್ ಹಿಂಭಾಗದ ಹೊರ ಮೈಯಲ್ಲಿ ನೀರಿನ ಬಾಯ್ಲರ್ ಹಾಗು ಕಲ್ಲಿದ್ದಲಿನ ಒಲೆ ಹಾಗು ಚಕ್ರಾಕಾರದ ತಿದಿ ಇರುತ್ತಿದ್ದ ಹನುಮಂತನ ಮುಸುಡಿಯಂತೆ ಉಬ್ಬಿದ ಮುಂಭಾಗಕ್ಕಷ್ಟೇ ಬಣ್ಣ ಮೆತ್ತಿರುತ್ತಿದ್ದ ನಿರಾಭರಣ ಸುಂದರಿಯಂತಹ ಬಸ್ ನ್ನ ಕಲ್ಪಿಸಿಕೊಳ್ಳಿ.ಎರಡೂ ಪಕ್ಕ ತೆರೆದ ಕಿಟಕಿಗಳಿದ್ದು ಅದರ ಮೇಲ್ಭಾಗ ಮಳೆ ಬಂದರೆ ಇರಲಿ ಎಂಬಂತೆ ಉದ್ದನುದ್ದ ಟರ್ಪಾಲ್ ಬಿಗಿದಿರುತ್ತಿದ್ದರು.ಮುಂಭಾಗದ ತಲೆ ಮೇಲೆ ಕಿರೀಟದಂತೆ ಬಸ್ ಪ್ರವರ ಬರೆದ ಫಲಕ-ಡ್ರೈವರ್ ಬಾಗಿಲಿನ ಮೇಲೆ ದೊಡ್ಡ ಒತ್ತು ಹಾರನ್ ಇವಿಷ್ಟು ಬಿಟ್ಟರೆ ಇನ್ನೇನೂ ವಿಶೇಷ ಅಲಂಕಾರ ಇರುತ್ತಿರಲಿಲ್ಲ.ಹಿಂಬದಿಯ ಬಾಯ್ಲರ್ ನಲ್ಲಿ ಸಾಕಷ್ಟು ನೀರಿರುವುದನ್ನು ಖಚಿತ ಪಡಿಸಿಕೊಂಡ ಕ್ಲೀನರ್ ಬೇಕಾದಷ್ಟು ಕಲ್ಲಿದ್ದಲು ಸುರಿದು ತಿದಿ ಒತ್ತಿದನೆಂದರೆ ಬಸ್ ಎರಡೂ ಬದಿಗಳೊಳಗೆ ಅಂತರ್ಗತವಾಗಿರುತ್ತಿದ್ದ ಸಿಲೆಂಡರ್ ಗಳಲ್ಲಿ ಉಗಿ ತುಂಬಿಕೊಂಡು ಪ್ರಯಾಣಕ್ಕೆ ಬಸ್ ಸಿದ್ಧವಾದಂತೆ.ಗಾತ್ರ ಹಾಗು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಅನುಸರಿಸಿ ಎರಡು ಅಥವಾ ಮೂರು ಸಿಲೆಂಡರ್ ಬಸ್ಸುಗಳು ಚಾಲ್ತಿಯಲ್ಲಿದ್ದವು.ಅರ್ಧ ದಾರಿಯಲ್ಲೋ,ಉಬ್ಬು ರಸ್ತೆಯಲ್ಲೋ ಉಗಿಯ ಒತ್ತಡ ಸಾಲದೆ ಬಸ್ ನಿಂತರೆ ಚಾಲಕನೂ,ಇಲ್ಲವೆ ಕ್ಲೀನರೋ ಕೆಳಗಿಳಿದು ಮತ್ತೆ ಕಲ್ಲಿದ್ದಲು ಸುರಿದು ತಿದಿ ಒತ್ತಿ ಉಗಿ ಹೆಚ್ಚಿಸಿದಾಗಲೆ ಬಸ್ಸಿಗೆ ಮರಳಿ ಜೀವ ಬರುತ್ತಿದ್ದುದು.ಅಲ್ಲಿಯವರೆಗಿನ ವಿರಾಮದಲ್ಲಿ ನಡೆಯುತ್ತಿದ್ದ ಈ ಪ್ರಹಸನದ ಬಗ್ಗೆ ಚೂರೂ ತಲೆ ಕೆಡಿಸಿ ಕೊಳ್ಳದ ಪ್ರಯಾಣಿಕ ಮಹಾಶಯರು ಆರಾಮವಾಗಿ ಕೆಳಗಿಳಿದು ಕೆಮ್ಮಿ ಕ್ಯಾಕರಿಸಿ-ಉಚ್ಚೆ ಹೊಯ್ದು,ಎಲೆ-ಅಡಿಕೆ ಹಾಕಿ,ಮೋಟು ಬೀಡಿ-ನಶ್ಯ ಸೇದಿ,ಊರ ರಾಜಕೀಯ-ಮನೆಯ ಕಷ್ಟ ಸುಖ ಮಾತಾಡಿ ಮುಂದಿನ ಪ್ರಯಾಣಕ್ಕೆ ಸಿದ್ಧರಾಗುತ್ತಿದ್ದರು.ಹಳೆ ಸಿನೆಮಾಗಳ ಸ್ಲೋಮೊಶನ್ ದೃಶ್ಯಾವಳಿಗಳಂತಹ ಈ ಪ್ರಹಸನಗಳು ಆಗಾಗ ಮಲೆನಾಡಿನ ಉದ್ದಗಲಕ್ಕೂ ಕಾಣಲು ಸಿಗುತ್ತಿದ್ದವು.

********
ಇಂತಹ ಸಂಧಿಕಾಲದಲ್ಲಿಯೇ ನಾರಾಯಣ ಡ್ರೈವಿಂಗ್ ಕಲಿತದ್ದು.ಸಾಬಿ ಗುರುಗಳ ನಮ್ರ ಶಿಷ್ಯನಾಗಿದ್ದು ಚಾಲನ ವಿದ್ಯೆ ಕಲಿತ ನಾರಾಯಣ ಮೊದಲಿಗೆ ಟರ್ಪಾಲ್ ಹೊದೆಸಿದ ಫೋರ್ಡ್ ಕಾರಿನ ಚಾಲಕನಾಗಿದ್ದ.ಮುಂದೆ ಐತಾಳರು ಆ ಕಾಲದ ಅತ್ಯಾಧುನಿಕ ಅಂಬಾಸಿಡರ್ ಕೊಂಡಾಗ ಅದನ್ನು ತರಲು ಕಲ್ಕತ್ತಕ್ಕೂ ಹೋಗಿ ಬಂದ (ಆಗೆಲ್ಲ ಅಂಬಾಸಿಡರ್ ಕಲ್ಕತ್ತದಲ್ಲೇ ತಯಾರಾಗಿ ಬಿಕರಿಯಾಗುತ್ತಿತ್ತು).ಅಷ್ಟರಲ್ಲಿ ಕೊಪ್ಪದಲ್ಲಿ 'ಶಂಕರ್ ಕಂಪೆನಿ' ಯಶಸ್ವಿಯಾಗಿತ್ತು ( ದಕ್ಷಿಣ ಕನ್ನಡದಲ್ಲಿ ಅದರದ್ದೇ ಅಂಗ ಸಂಸ್ಥೆ 'ಶಂಕರ್ ವಿಟ್ಠಲ' ಅದೂವರೆಗೂ ಏಕಸಾಮ್ಯ ಮೆರೆಯುತ್ತಿದ್ದ ಸಿಪಿಸಿಯ ಮಗ್ಗುಲು ಮುರಿಯುತ್ತಿತ್ತು).ಈ ಯಶಸ್ಸಿನಿಂದ ಪ್ರೇರಿತರಾದ ಶಿವಮೊಗ್ಗದ ಸಿರಿವಂತರು ಹುಟ್ಟು ಹಾಕಿದ್ದೆ 'ನ್ಯೂ ಕಂಮೆಂಡ್ ಬುಕ್ಕಿಂಗ್ ಏಜನ್ಸಿ'.

Sunday, August 29, 2010

ನಗು ಅರಳಲೆ ಇಲ್ಲ...

ದಿನ ಮುಳುಗಿದೆಯಾದರೂ ಇನ್ನೂ ರಾತ್ರಿ ಬರುತ್ತಿಲ್ಲ,
ನೀ ಬರಲಾರೆಯಾದರೂ ನಿನ್ನ ನೆನಪು ಬೆನ್ನು ಬಿಡುತ್ತಿಲ್ಲ/
ಮತ್ತೆ ತುಂಬು ಚಂದಿರ ಮೂಡಿದನಾದರೂ ನೀ ಮಾತ್ರ ಬರಲೇ ಇಲ್ಲ,
ಹೊಸತೊಂದು ಮುಂಜಾವಿನ ಮೊಗ್ಗು ಮೂಡಿದರೂ....ನಿನ್ನ ನಗು ಅದರಲಿ ಅರಳಲೆ ಇಲ್ಲ//


ನೀನಿತ್ತಿದ್ದ ಒಲವನ್ನು ಬಡ್ಡಿ ಸಹಿತ ಹಿಂದಿರುಗಿಸುತ್ತಿದ್ದೇನೆ,
ಆದರೆ ನೀನಿತ್ತ ನೆನಪುಗಳನ್ನಲ್ಲ/
ಚೂರು ಸುಳಿವನ್ನೂ ಕೊಡದೆ ಕ್ಷಣದಲ್ಲಿ ಕೈ ಕೊಡವಿ ಹೋದೆಯಲ್ಲ....ಆಗಿಂದಲೆ ಆಘಾತಗೊಂಡಿದ್ದೇನೆ,
ಆದರೆ ನಿನ್ನಷ್ಟು ಹತಾಶನಾಗಿಲ್ಲ//

Saturday, August 28, 2010

ಘಟ್ಟದ ಋಣ...

{ ೨೩/ ಆಗಷ್ಟ್ ೨೦೦೮ ರಿಂದ ಮುಂದುವರಿಕೆ}



ನಡೆದಿರುವ ಘಟನೆಗಳೆಲ್ಲ ನನ್ನ ಬಾಳಿನ ಅಂಗಗಳೇ ಆದರೂ ಆದಷ್ಟು ನಿರ್ಲಿಪ್ತನಾಗಿ ವಸ್ತು ಸ್ಥಿತಿಯನ್ನಷ್ಟೆ ಇಲ್ಲಿ ಬಿಡಿಸಿಡಲು ಯತ್ನಿಸಿದ್ದೇನೆ.ಬಹಳಷ್ಟು ಸಂಗತಿಗಳಲ್ಲಿ ನಾನು ಪಾತ್ರಧಾರಿಯಲ್ಲ.ಅವುಗಳನ್ನೆಲ್ಲ ಒಂದೋ ಮನೆಯ ಹಿರಿಯರಿಂದ-ಇಲ್ಲವೆ ಬಲ್ಲ ಆತ್ಮೀಯರಿಂದ ಕೇಳಿ ತಿಳಿದು ಕೊಂಡದ್ದು.ಅಂತಹ ಸನ್ನಿವೇಶಗಳಲ್ಲಿ ಪ್ರತ್ಯಕ್ಷ ಪಾತ್ರವಾಗಿದ್ದವರು ಬದುಕಿದ್ದ ಪಕ್ಷದಲ್ಲಿ ಅವರನ್ನು ಪತ್ರ ಮುಖೇನ ಇಲ್ಲವೆ ದೂರವಾಣಿ ಮುಖೇನ ಸಂಪರ್ಕಿಸಿ ಸನ್ನಿವೇಶ ಗಳ ಸತ್ಯಾಸತ್ಯತೆ ಗಳನ್ನು ಖಚಿತ ಪಡಿಸಿ ಕೊಂಡೆ ಮುಂದು ವರೆದಿದ್ದೇನೆ.ಹೀಗಾಗಿ ಇಲ್ಲಿ ನಾನು ನಿರ್ಮಮ ಲಿಪಿಕಾರ ಮಾತ್ರ.ಬರವಣಿಗೆ ಕೇವಲ ನಡೆದ ಘಟನೆಗಳ ಕೈಗನ್ನಡಿ ಯಾಗಿರಬೇಕು,ಯಾವುದೇ ಅತಿರಂಜಿತ ಸಂಯೋಜನೆಯಲ್ಲಿ ಸತ್ಯಕ್ಕೆ ಅಪಚಾರವಾಗ ಬಾರದು ಎಂಬ ಕಳಕಳಿ ಇದಕ್ಕೆ ಕಾರಣ.




ಖುದ್ದು ನಾನೇ ಪಾತ್ರವಾಗಿರುವ ಸಂಗತಿಗಳನ್ನೂ ಥಿಯೇಟರ್ ನಲ್ಲಿ ಕೂತು ಇನ್ಯಾರದೋ ಸಿನೆಮ ನೋಡುವ ಮೂಡಿನಲ್ಲಿ ವಿವರಿಸಿದ್ದೇನೆ.ನನ್ನ ಪಾತ್ರದ ಮೇಲೆ ವಿಶೇಷ ಮಮಕಾರ ನನ್ನಲ್ಲಿ ಹುಟ್ಟದ ಕಾರಣ ನಾನು ಈ ಲಹರಿಯ 'ನಾಯಕ'ನೂ ಅಲ್ಲ.ಒಬ್ಬ ಪುಟ್ಟ ಹುಡುಗನಾಗಿ ನಾ ಕಂಡು ಕೇಳಿದ ಸಂಗತಿಗಳನ್ನು ನಯವಾಗಿ ಹರವಿಡುವ ಪ್ರಯತ್ನ ಮಾತ್ರ ನನ್ನದು.ವಯಕ್ತಿಕವಾಗಿ ನನಗೆ ಘಾಸಿಯನ್ನುಂಟು ಮಾಡಿದ ಘಟನೆ-ನೋವನ್ನು ಉಂಟುಮಾಡಿದ ವ್ಯಕ್ತಿಗಳ ಕುರಿತು ಬರೆಯುವಾಗಲೂ ಆದಷ್ಟು ಸಂಯಮವನ್ನ ಬರವಣಿಗೆಯಲ್ಲಿ ಸಾಧಿಸಲು ಪ್ರಯತ್ನಿಸಿದ್ದೇನೆ.ಮೊದಮೊದಲು ಇದು ಸ್ವಲ್ಪ ಕಷ್ಟ ಎಂದೆನಿಸಿದರೂ ಕ್ರಮೇಣ ಇದೆ ರೂಢಿಯಾಗ ತೊಡಗಿದೆ.ಈ ನನ್ನ ಮುಂಬರುವ ಯಾವುದೆ ಲೇಖನಗಳು ನನ್ನ ರಕ್ತ ಸಂಬಂಧಿಗಳಿಗೂ,ಸ್ನೇಹಿತರಿಗೊ,ಕುಲ ಬಾಂಧವರಿಗೂ ಜೀರ್ಣವಾಗದಿದ್ದರೆ ಅದವರ ಖಾಸಗಿ ಸಮಸ್ಯೆಯೆ ಹೊರತು ಪ್ರತಿಯೊಬ್ಬರಿಗೂ ಜಾಪಾಳ ಮಾತ್ರೆ ನುಂಗಿಸುವ ಕೆಲಸ ನನ್ನದಲ್ಲ.ಒಟ್ಟಿನಲ್ಲಿ ನಿರೀಕ್ಷಣಾ ಜಾಮೀನಿನಂತೆ ಹೇಳ ಬಯಸೋದು ಇಷ್ಟೆ ಕೇವಲ ಒಂದೆ ಕೈಯಲ್ಲಿ ಎಣಿಸಬಹುದಾದಷ್ಟು ಮಂದಿ ಮಾತ್ರ ನನ್ನ ಸ್ವಂತ ಭಾವಲೋಕದ ಬಂಧುಗಳು.ಅವರನ್ನು ಬಿಟ್ಟು ಇನ್ಯಾರ ಮೇಲೂ ನನಗೆ ರಾಗ-ದ್ವೇಷಗಳಿಲ್ಲ.ಈ ಹತ್ತಿರದವರ ಬಿಂಬಗಳೂ ಮುಸುಕಾಗದಂತೆ ಇಲ್ಲವರ ಚಿತ್ರಣ ಬರುತ್ತದೆ.ಮನಸಿನ ಮೇಲಿದ್ದ ನೆನಪಿನ ಭಾರವನ್ನು ಅಕ್ಷರಗಳಲ್ಲಿ ಕೆಳಗಿರಿಸಿ 'ಉಸ್ಸಪ್ಪ'ಎಂದು ಸುಧಾರಿಸಿಕೊಳ್ಳುವ ಧಾವಂತ ಹೊಸತೆ ಒಂದು ರೀತಿಯ ನೆಮ್ಮದಿಯನ್ನ ನನಗೆ ದಯಪಾಲಿಸಿದೆ ಅನ್ನೂದು ಮಾತ್ರ ಹದಿನಾರಾಣೆ ಸತ್ಯ,





*********************

ನನ್ನಜ್ಜನ ಕಾಲಕ್ಕೆ ದಕ್ಷಿಣ ಕನ್ನಡ ( ಈಗಿನ ಉದುಪಿ) ಜಿಲ್ಲೆಯಿಂದ ಘಟ್ಟಕ್ಕೆ ವಲಸೆ ಬಂದ ಕುಟುಂಬ ನಮ್ಮದು.ನನ್ನಜ್ಜ ನಾರಾಯಣ ಹೆಗಡೆಯದು ಒಂಚೂರು ಪುಕ್ಕಲು ಸ್ವಭಾವ.ನಾಲ್ಕುಜನ ಒಡಹುಟ್ಟಿದವರಲ್ಲಿ ಮೂರನೆಯವರಾದ ಅವರ ಹುಟ್ಟೂರು ಕಾರ್ಕಳ ತಾಲೂಕಿನ ಮುನಿಯಾಲು ಬಳಿಯಿರುವ ಗುಡ್ಡೆಮನೆ.ಮನೆಯ ಯಜಮಾನನಾಗಿದ್ದ ಹಿರಿಯಣ್ಣ ಹಾವು ಕಚ್ಚಿ ಸತ್ತ ನಂತರ ಮನೆಯ ಆಡಳಿತ ಅಕ್ಕ ಚನ್ನಕ್ಕನ ಪಾಲಾಯಿತು.ಅವರ ದಬ್ಬಾಳಿಕೆಯ ಹಾಗು ನಯವಿಲ್ಲದ ಒರಟು ನಡವಳಿಕೆಯನ್ನ ಮುಲಾಜಿಲ್ಲದೆ ಧಿಕ್ಕರಿಸಿ ಅಜ್ಜನ ತಮ್ಮ ನಾಗಪ್ಪ ಹೆಗಡೆ ತನ್ನ ವಯಸ್ಸಿನ್ನೂ ಎರಡಂಕಿ ಮೀರುವ ಮೊದಲೆ ಘಟ್ಟ ಹತ್ತಿ ಕೊಪ್ಪಕ್ಕೆ ಬಂದು ಸೇರಿದರು.ಆ ಕಾಲದಲ್ಲಿ ಜನಪ್ರಿಯರಾಗಿದ್ದ ಕೊಪ್ಪದ ದ್ಯಾವೆಗೌಡರ ಮನೆಯಲ್ಲಿ ದೀಪದ ಗಾಜು ಒರೆಸುವ (ಆಗ ವಿದ್ಯುತ್ ಸಂಪರ್ಕ ಕೊಪ್ಪದಲ್ಲಿ ಇರಲಿಲ್ಲ,ಹೀಗಾಗಿ ಬಡವರಿಂದ ಸಿರಿವಂತರವರೆಗೂ ದೀಪವೆ ಬೆಳಕಿಗೆ ಮೂಲವಾಗಿತ್ತು) ಕಾಯಕದೊಂದಿಗೆ ಅಲ್ಲಿ ಅವರ ದುಡಿಮೆ ಆರಂಭ ವಾಯ್ತು.ಹೀಗೆ ಧೈರ್ಯವಾಗಿ ಮನೆಬಿಟ್ಟು ಹೋಗಿದ್ದ ತಮ್ಮನ ಮೇಲ್ಪಂಕ್ತಿ ಅನುಸರಿಸಿ ನನ್ನಜ್ಜನೂ ಎರಡು ವರ್ಷಗಳ ನಂತರ ಘಟ್ಟ ಹಟ್ಟಿ ತೀರ್ತಹಳ್ಳಿಯಲ್ಲಿ ನೆಲೆಕಂಡರು.


ತೀರ್ಥಹಳ್ಳಿಯ ಕೊಪ್ಪ ರಸ್ತೆಯಲ್ಲಿರುವ ತಿಪ್ಪ ಜೋಯಿಸರ ಮನೆಯ ಅಡುಗೆ ಆಳಾಗಿ ಅವರ ಸ್ವಾತಂತ್ರ್ಯ ದುಡಿಮೆ ಶುರುವಾಯ್ತು.ಆಗಿನ ಮೊದಲ ಸಂಬಳ ನಲವತ್ತು ರೂಪಾಯಿಗಳು.ಕ್ರಮೇಣ ಮನೆಯವರ ನಂಬಿಕೆ ಗಿಟ್ಟಿಸಿ ಕೆಲಸ ಗಟ್ಟಿಯಾದ ಮೇಲೆ ಮನೆಯ ಅಡುಗೆಯವನಾಗಿ ಬಡ್ತಿಯೂ ಸಿಕ್ಕಿತು.ಅದೆ ವೇಳೆ ತಿಪ್ಪ ಜೋಯಿಸರ ಸಂಬಂಧಿಯಾದ ಶೀರ್ನಾಳಿಯ ಐತಾಳರು ತಾಲೂಕಿಗೆ ಮೊದಲ ಕಾರು ಕೊಂಡರು.ಟರ್ಪಾಲ್ ಹೊದೆಸಿದ ಹಡಗಿನಂತ ಫೋರ್ಡ್ ಕಾರಿನ ಜೊತೆ ಅದನ್ನು ನಡೆಸಲೊಬ್ಬ ಗಡ್ಡದ ಸಾಬಿ ಬೇರೆ! ಕೆಲ ಕಾಲ ಅಲ್ಲಿದ್ದು ಡ್ರೈವಿಂಗ್ ಎಂಬ ಆ ಕಾಲದ ವಿಶೇಷ ವಿದ್ಯೆಯನ್ನು ಸ್ಥಳೀಯರೊಬ್ಬರಿಗೆ ಕಲಿಸಿ ಆತ ಅಲ್ಲಿಂದ ಹೊರಡುವ ಕರಾರಾಗಿತ್ತು.ಸೂಕ್ತ ಅಭ್ಯರ್ಥಿಯ ತಲಾಶಿನಲ್ಲಿದ್ದ ಐತಾಳರ ಕಣ್ಣಿಗೆ ಜೋಯಿಸರ ಮನೆಯಲ್ಲಿದ್ದ ನಾರಾಯಣ ಬಿದ್ದ.ಅದೂವರೆಗೂ ಸವಟು ಹಿಡಿದಿದ್ದ ಕೈಗೆ ಹೀಗೆ ಚಕ್ರ ಬಂತು ಹಾಗು ಅದೆ ಮುಂದೆ ಖಾಯಂ ಕೂಡ ಆಯ್ತು.

{ನಾಳೆಗೆ ಮತ್ತೆ ಮುಂದುವರೆಸುವೆ}

Friday, August 27, 2010

ವಿಕ್ಷಿಪ್ತ...

ಅದುಮಿಡಲಾಗದ ಸುಪ್ತ ಆಸೆ ಕಣ್ಣ ಬಟ್ಟಲಲ್ಲಿದೆ,
ಆದರೂ ಅದೇಕೋ ಮನದಂಗಳ ಇನ್ನೂ ಕತ್ತಲಲ್ಲಿದೆ/
ಮೋಡವೆ ಇಲ್ಲದೆ ಸುರಿದ ಮಳೆಯನ್ನು ಕಂಡು ಬಿಸಿಲು ನಕ್ಕ ಹಾಗೆ,
ಕೊನರದ ಭಾವಗಳೆಲ್ಲ ಕೊರಡಾಗಿದ್ದರೂ ಎದೆ ಸುಡುತಿದೆ ವಿರಹದ ಬೇಗೆ//


ನೀನೊಮ್ಮೆ ಹೇಳಿದರೆ ಬಾಳಿನುದ್ದಕ್ಕೂ ಕವಿತೆಗಳನ್ನು ಗೀಚುತ್ತಲೇ ಸವೆಯುತ್ತೇನೆ,
ಗಂಟಲ ನರ ಹರಿದು ಹೋಗುವವರೆಗೂ ವಿರಹದ ಗೀತೆಗಳನ್ನ ಚೀರುತ್ತಾ ನವೆಯುತ್ತೇನೆ/
ಕಣ್ ಸೋಲುವವರೆಗೂ ನಿನ್ನ ಹಾದಿ ನೋಡುತ್ತಾ ಇರುತ್ತೇನೆ,
ನೀ ಕರೆದ ಕ್ಷಣ ಸಂಭ್ರಮದಿಂದ ತೆವಳಿಕೊಂಡಾದರೂ ನೀ ಕರೆದಲ್ಲಿಗೆ ಬರುತ್ತೇನೆ//

ಹೆಜ್ಜೆ ಸಾಲು...

ನೀನಿಟ್ಟ ಪ್ರತಿ ಹೆಜ್ಜೆ ಗುರುತು ಮನದ ಒಂದೊಂದು ಮೆಟ್ಟಲಲ್ಲಿದೆ,
ನಿನ್ನ ಕೈ ತೂಗಿದ ಒಲವಿನ ಕೂಸು ಬೆಚ್ಚಗೆ ಎದೆಯ ತೊಟ್ಟಿಲಲ್ಲಿದೆ/
ಮಾಸಿಲ್ಲ ನಿನ್ನ ಹೆಸರ ಹಚ್ಚೆ ನನ್ನೆದೆ ಮೇಲೆ ಕೊರೆಸಿದ್ದು,
ಮುಸುಕಾಗಿಲ್ಲ ನಿನ್ನ ಚಿತ್ರ ನನ್ನ ಹೃದಯದಲ್ಲಿ ಬರೆಸಿದ್ದು//



ಒಲವ ಸುಂದರ ಕನಸುಗಳನ್ನ ಹೆಣೆಯುತ್ತೇನೆ,
ಯಾವಾಗಲೂ ಏಕಾಂತದಲ್ಲಿ ಕಣ್ತುಂಬಿ ಅಳುತ್ತೇನೆ....
ಒಂಟಿತನ ಒಮ್ಮೊಮ್ಮೆ ಕಾಡುತ್ತದೆ...
ಮತ್ತೊಮ್ಮೆ ಯಾರದೊ ನೆನಪು/
ಎಲ್ಲೋ ಸಿಡಿಲು ಬಡಿಯುತ್ತದೆ..
ಇಲ್ಲಿ ನನ್ನದೆಯ ಭಾವಗಳೆಲ್ಲ ಭಸ್ಮವಾಗುತ್ತವೆ,
ಎಲ್ಲೂ ನಿರೀಕ್ಷೆಯ ಹೂವರಳುತ್ತದೆ...
ಇಲ್ಲಿ ನನ್ನ ಕಾತರದ ಪರಿಮಳ ಹೊಮ್ಮುತ್ತದೆ//

ಗೊಂದಲದ ದಾಸ್ಯಕ್ಕೂ ಒಂದು ಮಿತಿಯಿದೆ/
ಆದರೆ ನನ್ನ ಅನುಭವ ಇದನ್ನು ಸುಳ್ಳೆನ್ನುತಿದೆ//

Thursday, August 26, 2010

ನೀ ಮರಳಿ ಬರುತ್ತೀಯಲ್ಲ?

ಪ್ರಪಂಚದ ಎಲ್ಲ ತಪ್ಪುಗಳಿಗೂ,
ನಾವಿಬ್ಬರೇ ಪರಸ್ಪರ ಕ್ಷಮೆ ವಿನಿಮಯ ಮಾಡಿಕೊಳ್ಳೋಣ/
ನಿನ್ನ ಹೊರತು ಇನ್ಯಾರಿಗೂ ನೆನಪಿರದ ನನ್ನ ಜನ್ಮದಿನದಂದು,
ಮರೆಯದೆ ನನ್ನೆದೆಯೊಳಗೆ ಮರಳಿ ಬರುತ್ತೀಯಲ್ಲ?//



ಎಂದೂ ಸಿಗದ ನೆನ್ನೆಗಳ ಹಪಹಪಿ ಸಾಕಿನ್ನು...
ಕಣ್ಣ ಹಣತೆಯಲ್ಲಿ ಕಂಬನಿಯ ಎಣ್ಣೆ ತೀರಿ ನಿರೀಕ್ಷೆಯ ದೀಪ ಆರುವ ಮೊದಲು ಮರಳಿ ಬರುತ್ತೀಯಲ್ಲ?/
ಕಾದೂ ಕಾದೂ ಕನಸು ಕೂಡ ಕಂಗಾಲಾಗಿದೆ...ಕಾತರದ ಅರಗಿಗೆ ವಾಸ್ತವ ಕಡ್ಡಿ ಗೀರಿ
ಕೊನೆಯದೊಂದು ಅಸೆ ಉರಿದು ಬೂದಿಯಾಗುವ ಮೊದಲು,
ನೀ ಮರಳಿ ಬರುತ್ತೀಯಲ್ಲ? ವಿರಹ ಕದಡಿದ ಬಾಳ ಕೊಳದಲ್ಲಿ ಪ್ರತಿಬಿಂಬಿಸಿ ಮುಗುಳ್ನಗುತ್ತೀಯಲ್ಲ?//

Wednesday, August 25, 2010

ವಾಸ್ತವ...

ಅರಳುವ ಮೊದಲೆ ಮುದುಡಿವೆ ಅನೇಕ ಮೊಗ್ಗುಗಳು,
ಕರಟಿದ ಕನಸುಗಳು ಮುರುಟಿ ಹಾಕಿವೆ ಹಲವಾರು ನನ್ನಿರುಳು/
ಬಾನು ಬಿಕ್ಕಳಿಸಿ ಅತ್ತಾಗಲೂ ನನ್ನ ನೋವಿಗೆ ಸರಿಗಟ್ಟಲಾಗಲಿಲ್ಲ,
ಸುರಿವ ಮಳೆಯ ಯಾವ ಹನಿಗೂ ನನ್ನೊಲವ ಆರ್ದ್ರತೆ ಕಿಂಚಿತ್ತೂ ಅರಿವಿಲ್ಲ//


ಭೋರಿಟ್ಟು ಬಿಕ್ಕಿ ಬಿಕ್ಕಿ ಅಳುವ ಕರಿ ಮೋಡದ ಕಣ್ಣ ಮಳೆ ಹನಿಗಳಿಗೆ,
ನೆನಪುಗಳ ಸೋಕಿ ಮನಸ ನಯನ ತೇವಗೊಳಿಸೊ ಮುಂಜಾನೆಯ ಇಬ್ಬನಿ ಮಣಿಗಳ ತಂಪಿಗೆ/
ಹಾಗೂ ಖುದ್ದು ನಿನಗೆ ತಿಳಿದಿರುವಷ್ಟು,
ನನ್ನ ಒಲವ ಬತ್ತದ ತೊರೆಯ ಆಳ ಇನ್ಯಾರಿಗೂ ಗೊತ್ತಿಲ್ಲ//


ಒಂಟಿ ಹೃದಯದ ಒಂಟಿ ಪಯಣದಲೂ,
ಕಣ್ಣು ಹಾಯುವಲೆಲ್ಲ ಅದಕ್ಕೆ ನಿನ್ನನೆ ಹುಡುಕುವ ಚಪಲ/
ಸಂಜೆ ಮಬ್ಬುಗತ್ತಲಲ್ಲಿ ಹೊರಹೊಮ್ಮುವ ಹೊಗೆ ಪರದೆಯಿಂದ....
ನೀ ಹೊರ ಹೊಮ್ಮಲು ಬದುಕೇನು ಕೆಟ್ಟು ಕೆರ ಹಿಡಿದ ಸಿನೆಮಾ ಅಲ್ಲ,
ಆದರೂ ನಿನ್ನನ್ನು ಕಂಡೆ ಕಾಣುವ ಛಲ...
ಅದೆ ನನ್ನುಸಿರಿಗೆ ಇನ್ನೂ ಬಲ//

Monday, August 23, 2010

ಕಳೆದು ಹೋದೆ....

ನನ್ನೊಳಗಿನ ಮಹಾನಗರ ನೀನು,
ನಿನ್ನೊಲವ ಜಂಗುಳಿಯಲ್ಲಿ ಹುಡುಕಲಾಗದಂತೆ ಕಳೆದು ಹೋಗಿದ್ದೇನೆ/
ಎಲ್ಲರ ತಿರಸ್ಕಾರದ ಜಾತ್ರೆಯಲ್ಲಿ....ತಪ್ಪಿಸಿ ಕೊಂಡ ಮಗು ನನ್ನ ಮನಸು,
ನೀ ಚಾಚಿದ ಕೈಯ ಕಿರುಬೆರಳನೆ ಭದ್ರವಾಗಿ ಹಿಡಿದು....
ಹೆಣೆಯಿತಿದೆ ಹೊಸತು ನೂರು ಕನಸು//

ಶಾಲೆಯ ದಿನಗಳು...

{ಮೊನ್ನೆಯಿಂದ ಮುಂದುವರಿಕೆ}



ಸ್ಟ್ಯಾಂಡಿಗೆ ಬಂದ ಕೂಡಲೆ ಬಸ್ ಬಾಗಿಲಲ್ಲಿ ತುಂಬಿ ತುಳುಕುವ ಪ್ರಯಾಣಿಕರ ಧಾವಂತ.ನಮ್ಮ ಕಡೆ ಡ್ರೈವರ್ ಬಾಗಿಲಿನಲ್ಲಿ ನುಗ್ಗೋದು-ಟಾಪ್ ಮೇಲೆ ಕೂತು ಪ್ರಯಾಣಿಸೋದು ಆಗಲೂ ಇರಲಿಲ್ಲ,ಈಗಲೂ ಇಲ್ಲ.ಇದರ ನಡುವೆ ಹರಸಾಹಸ ಮಾಡೋದು ನನ್ನಂತ ಲಗೇಜಿನ ಹಂಗಿಲ್ಲದಿದ್ದ ಎಳೆಯರಿಗೆ ಚಿಟಿಕೆ ಹೊಡೆದಷ್ಟು ಸುಲಭ.ಹೀಗಾಗಿ ನನ್ನ ಸೀಟು ಹಿಡಿಯುವ ಆಸೆಗೆ ಎಂದೂ ಕಲ್ಲು ಬಿದ್ದಿರಲಿಲ್ಲ.ಸಾಗರದ ದಿಕ್ಕಿನಿಂದ ಹೊರಟು ತೀರ್ಥಹಳ್ಳಿಯ ಮೇಲ್ ಬಸ್ ಸ್ಟ್ಯಾಂಡಿಗೆ ಬರುತ್ತಿದ್ದ ಬಸ್ ಒಂದು ಕಿಲೋಮೀಟರ್ ದೂರದ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗಿ ಬಂದ ಶಾಸ್ತ್ರ ಮಾಡಿ ಪುನಃ ಮಂಗಳೂರಿನತ್ತ ಮುಖ ಮಾಡುತ್ತ ಮೇಲಿನ ಸ್ಟ್ಯಾಂಡಿಗೆ ಬರಬೇಕಲ್ಲ?
ಸಾಗರದಿಂದ ಬಸ್ ಬಂದದ್ದೆ ಇಳಿಯುವವರಿಗೂ ಬಿಡದೆ ಮೊದಲೆ ತೂರಿಕೊಂಡು ಖಾಲಿಯಾದ ಸೀಟೊಂದನ್ನು,ಅದರಲ್ಲೂ ಕಿಟಕಿ ಪಕ್ಕದ ಸೀಟನ್ನೇ ಕಬಳಿಸಿ ಕೂತುಬಿಡುತ್ತಿದ್ದೆ.ಅಮ್ಮ ಕೆಳಗಡೆಯೆ ನಿಂತು ಕಾಯುತ್ತಿರುವಾಗ ಬಸ್ ಊರ ಸವಾರಿಗೆ ಹೊರಟು ಮರಳಿ ಬಂದಲ್ಲಿಗೆ ಮುಟ್ಟುತ್ತಿತ್ತು.ಈ ಹೊತ್ತಿಗೆ ಮಾಡಿರುತ್ತಿದ್ದ ಎರಡು ಕಿಲೋಮೀಟರ್ ಬಿಟ್ಟಿ ಪ್ರಯಾಣ ನನ್ನೊಳಗಿನ ಬಸ್ ಸವಾರಿಯ ತೆವಲನ್ನು ಬಹುಪಾಲು ತೀರಿಸಿರುತ್ತಿತ್ತು.



ಕಾಯುತ್ತಿದ್ದ ಅಮ್ಮನಿಗೆ ಅವರ ಸೀಟ್ ಬಿಟ್ಟು ಕೊಟ್ಟು ಒಲ್ಲದ ಮನಸ್ಸಿನಿಂದ ಕೆಳಗಿಳಿಯುತ್ತಿದ್ದೆ.ಬಸ್ ಹೊರತು ನನ್ನ ದೃಷ್ಟಿಯಿಂದ ಪೂರ್ತಿ ಮರೆಯಾಗುವವರೆಗೂ ಅಲ್ಲಿಯೇ ನಿಂತಿದ್ದು ಅನಂತರವಷ್ಟೇ ಭಾರವಾದ ಹೆಜ್ಜೆ ಎಳೆಯುತ್ತ ಮನೆಯತ್ತ ಹೊರಡುತ್ತಿದ್ದೆ.ನನಗೆ ಅರಿವಿಲ್ಲದೆ ಕಣ್ಣುಗಳೆರಡೂ ತುಂಬಿ ಬಂದು ಮುಂದಿನ ಮಾರ್ಗವೆಲ್ಲ ಮಂಜುಮಂಜಾಗುತ್ತಿದ್ದವು.ಈ ಕಣ್ಣೀರು ಅಮ್ಮ ನನ್ನನ್ನು ಜೊತೆಗೆ ಕರೆದೊಯ್ಯದಿದ್ದುದಕ್ಕೋ? ಇಲ್ಲವೆ ಅವರನ್ನಗಲಿ ಮುಂದಿನ ನಾಲ್ಕಾರು ದಿನ ಇರಬೇಕಿದ್ದುದಕ್ಕೋ ಗೊತ್ತಿರುತ್ತಿರಲಿಲ್ಲ.ಅವರಿಗೂ ಆ ಹೊತ್ತಿನಲ್ಲಿ ಕಣ್ತುಂಬಿ ಬಂದಿರಬಹುದು ಎಂದುಕೊಳ್ಳುತ್ತಿದ್ದೆನಾದರೂ,ತವರಿಗೆ ಹೋಗುವಾಗ ಸಹಜವಾಗಿ ಉಲ್ಲಾಸದಿಂದ ಇರಬಹುದಾಗಿದ್ದ ಅವರ ದೃಷ್ಟಿ ಕೋನದಿಂದ ಯಾವಾಗಲೂ ಯೋಚಿಸಿರಲೇ ಇಲ್ಲ.



ಬಾಳಿನಲ್ಲಿ ಅನೇಕ ಬಾರಿ ತಪ್ಪು ಹೆಜ್ಜೆಗಳನ್ನು ಇಟ್ಟಿದ್ದೇನೆ ಅನ್ನಿಸುತ್ತೆ.ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗಲೆಲ್ಲ ಸೆಟೆದು ನಿಂತಿದ್ದೇನೆ.ಆದರೆ ಘಟನೆಯೊಂದರಲ್ಲಿ ನನ್ನಿಂದಲೆ ಅಚಾತುರ್ಯ ಘಟಿಸಿದ್ದಾಗ ಭಿಡೆಯಿಲ್ಲದೆ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದೇನೆ.ನನ್ನ ಸಹಜ ಸಿದ್ಧ ಸ್ವಭಾವವನ್ನ ನಾನು ಆತ್ಮಾಭಿಮಾನ ಅಂತೇನೆ,ಉಳಿದವರು ದುರಹಂಕಾರ ಅಂತಾರೆ ಇಷ್ಟೇ ವ್ಯತ್ಯಾಸ! ಒಟ್ಟಿನಲ್ಲಿ ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಾ ನೇರವಾಗಿ ನಡೆಯೋದರಿಂದ ಅನೇಕರ ನಿಷ್ಠೂರ ಕಟ್ಟಿ ಕೊಳ್ಳಬೇಕು ಅನ್ನುವ ಸಂಗತಿ ಮಾತ್ರ ಖಚಿತವಾಗಿದೆ.ನಾನಾ ರೀತಿಯ ಅಯೋಗ್ಯರೆಲ್ಲ ಎತ್ತರದ ಸ್ಥಾನಗಳಿಗೆ ಲಗ್ಗೆ ಹಾಕುವಾಗ ಅಂತಲ್ಲಿಗೆ ತಲುಪುವ ಸಕಲ ಅರ್ಹತೆ ಇದ್ದೂ ನಾನಲ್ಲಿಗೆ ತಲುಪುವಲ್ಲಿ ಎಡವುತಿರೋದು ವಿಷಾದವೆನಿಸಿದರೂ ಜಿಗುಪ್ಸೆಯನ್ನಂತೂ ಹುಟ್ಟಿಸಿಲ್ಲ.ನನ್ನೊಳಗೆ ನಾ ಪ್ರಾಮಾಣಿಕನಾಗಿರುವ ಭರವಸೆ ಕೈ ಬಿಡದ ತನಕ ಅಯೋಗ್ಯರ socalled ಉನ್ನತಿ ನನ್ನನ್ನು ಹತಾಶನನ್ನಾಗಿಸಿಲ್ಲ thank god i didn't become cinic!

ಸಂಬಂಧಗಳ ವಿಚಾರಗಳಲ್ಲೂ ನನ್ನ ಧೋರಣೆ ನೇರ.ಹಾಗೆ ನೋಡಿದರೆ ತೀರ್ಥಹಳ್ಳಿಯ ದಿನಗಳಿಂದಲೂ ನಾನು ಬಹುಪಾಲು ಒಬ್ಬಂಟಿ.ಶಾಲೆಯಲ್ಲೂ ನನಗೆ ಹೆಚ್ಚು ಗೆಳೆಯರಿರಲಿಲ್ಲ.ಆಗೆಲ್ಲ ಕೀಳರಿಮೆಯ ಕೂಪದಲ್ಲಿದ್ದುದೆ ಅದಕ್ಕೆ ಕಾರಣ.ನನ್ನ ಸಹಪಾಟಿಗಳೆಲ್ಲ ತಕ್ಕ ಮಟ್ಟಿನ ಸ್ಥಿತಿವಂತರೆ,ನನ್ನದೋ ಕುಚೇಲನಿಗೆ ಹತ್ತಿರದ ನೆಂಟಸ್ತನ.ಇತ್ತ ನನ್ನ ಹೆತ್ತಮ್ಮನದೊಂದು ದ್ವಿಮುಖ ವ್ಯಕ್ತಿತ್ವ.ತನ್ನ ನಿರೀಕ್ಷೆ-ಅಗಾಧವಾಗಿದ್ದ ಬಾಳಿನ ಕನಸುಗಳನ್ನೆಲ್ಲ ಮಣ್ಣು ಪಾಲಾಗಿಸಿದ್ದ ನಾನು ಕೂತಲ್ಲಿ ನಿಂತಲ್ಲಿ ತಪ್ಪು ಕಂಡು ಹಿಡಿದು ಭೀಕರವಾಗಿ ಶಿಕ್ಷಿಸುತ್ತಿದ್ದಳು.ಬಿಸಿ ಇಸ್ತ್ರಿ ಪೆಟ್ಟಿಗೆಯಿಂದ ಸುಡುವುದು,ವಿದ್ಯುತ್ ಸ್ಟವ್ ಬಿಸಿ ಮಾಡಿ ಬಲವಂತವಾಗಿ ಕೈಯಿಂದ ಮುಟ್ಟಿಸುವುದು,ಬ್ಯಾಡಗಿ ಮೆಣಸಿನ ಹೊಗೆ ಹಾಕುವುದು,ದನ ಕಟ್ಟುವ ಹಗ್ಗದಲ್ಲಿ ಕೈ ಹಿಂದೆ ಬಿಗಿದು-ಕಾಲು ಕಟ್ಟಿ ಕೋಣೆಯಲ್ಲಿ ಕೂಡಿ ಹಾಕೊದು ಇಂತಹ ಪೈಶಾಚಿಕ ಶಿಕ್ಷೆಗಳನ್ನೆಲ್ಲ ಇನ್ನೂ ವಯಸ್ಸು ಆರು ಮುಟ್ಟುವ ಮೊದಲೆ ಅನುಭವಿಸಿದ್ದೆ.ಕೈಗೆ ಸಿಕ್ಕ ಮಣೆ-ಕೋಲು-ಹಗ್ಗಗಳಲ್ಲಿ ಹೊಡೆಸಿ ಕೊಂಡದ್ದು ಇವುಗಳ ಮುಂದೆ ಏನೇನೂ ಅಲ್ಲ.ಅದು ಅವರ ಒಂದು ಮುಖವಾದರೆ ಸಾಮಾಜಿಕವಾಗಿ ಹೊರಗಡೆ ನಾನು ಅತಿ ಕಟ್ಟುನಿಟ್ಟಿನಿಂದ ಬೆಳೆದ ಶಿಸ್ತಿನ ಹುಡುಗ ಎಂದು ಬಿಂಬಿಸುವ ತೆವಲು! ಓದಿನಲ್ಲೂ ಪ್ರತಿಷ್ಠಿತ ಶಾಲೆಯಲ್ಲೇ ಓದಿಸಬೇಕೆಂಬ ಹುಚ್ಚು ಹಂಬಲ.ಆಗ ತೀರ್ಥಹಳ್ಳಿಯ ಮಟ್ಟಿಗೆ ಇದ್ದುದು ಎರಡೆ ಎರಡು ಖಾಸಗಿ ಶಾಲೆಗಳು.ಪರೀಕ್ಷೆಯ ಫಲಿತಾಂಶದಿಂದ ಹಿಡಿದು ಕ್ರೀಡಾಕೂಟ ಇನ್ನಿತರ ಚಟುವಟಿಕೆ ಹಾಗು ನವೊದಯಕ್ಕೆ ಆಯ್ಕೆಗಳಂತಹ ಸಣ್ಣ ಸಣ್ಣ ವಿಷಯಗಳಲ್ಲೂ ರಾಷ್ಟ್ರೋತ್ಥಾನ ಪರಿಷತ್ ನ ಅಂಗಸಂಸ್ಥೆ 'ಸೇವಾ ಭಾರತಿ" ಹಾಗು ಕ್ಯಾಥೊಲಿಕ್ ಮಹಾಸಭಾದ ಅಂಗಸಂಸ್ಥೆ 'ಸೆಯಿಂಟ್ ಮೇರಿಸ್' ಶಾಲೆಗಳ ನಡುವೆ ಭಾರೀ ಪೈಪೋಟಿ.ನನ್ನನ್ನು ಸೇವಾಭಾರತಿಯ ಶಿಶು ಮಂದಿರ 'ಭಾರತಿ ಶಿಶುವಿಹಾರಕ್ಕೆ ಸೇರಿಸಲಾಗಿತ್ತು.ಅದಾಗಲೇ ನಾನು ಮನೆಯ ಹತ್ತಿರವೇ ಪುರಸಭೆಯವರು ನಡೆಸುತ್ತಿದ್ದ ರೋಟರಿ ಶಿಶುವಿಹಾರದಲ್ಲಿ ತಕ್ಕ ಮಟ್ಟಿಗೆ ಆಡಲು ಹಾಡಲು ಕಲಿತಿದ್ದೆ.


{ನಾಳೆಗೆ ಮುಂದುವರಿಸುತ್ತೇನೆ}

Sunday, August 22, 2010

ನೆನಪಲ್ಲಿ ನಿಸ್ಸಹಾಯಕ...

ಸದ್ದೇ ಇರದ ಊರಿನಲ್ಲಿ ಕಿವುಡನಾದಂತೆ,
ಬೆಳಕು ಇದ್ದಿರದ ಜಾಗದಲ್ಲೂ ಕುರುಡನಾದಂತೆ/
ನೆಲವೇ ಸಿಗದಷ್ಟು ಆಳಕ್ಕೆ ಜಾರಿ ಬೀಳುವಾಗಲೂ ಕುಂಟನಾನು,
ಬಿದ್ದ ನೋವಲೂ ಮತ್ತೆ ಆ ಕತ್ತಲ ಕೂಪದಲಿ ನಿನ್ನ ನೆನಪಿನತ್ತಲೆ ತೆವಳುವೆನು//

Saturday, August 21, 2010

ಮಾತು ಮರೆತೆ...

ಮಾತಿನ ಮನೆಗೆ ಹಾಕಿ ಮೌನದ ಬೇಲಿ,
ಜೊತೆಜೊತೆಯಾಗಿಯೆ ನಾವಿಬ್ಬರೂ ಕಂಡಿದ್ದ ಕನಸುಗಳನ್ನೆಲ್ಲ ಮಾಡುವಂತೆ ಗೇಲಿ/
ಹೇಳು,ನೀ ಹೀಗೆ ಥಟ್ಟನೆ ಮುನಿದು ಹೋಗಬೇಕಿತ್ತೆನು?,
ನಾನೋಲ್ಲದಿದ್ದರೂ ನೀನೆ ಬಿಗಿಯುತ್ತಿದ್ದ ಒಲವ ಪಾಶದ್ದು ಅಸಲು ಇದೆ ಹಕೀಕತ್ತೇನು?//

ಕನಸೊಡೆದ ಚೂರು...

ನೆನ್ನೆಯ ಕನಸು ಇಂದು ನನಸಾಗುವುದು,
ಇಂದಿನ ಕನಸು ನಾಳೆ ನನಸಾಗುವುದು ಕೇವಲ ಕಥೆ-ಕಾದಂಬರಿಗಳಲ್ಲಿ ಮಾತ್ರ/
ನಿನ್ನ ಜೊತೆಯಲ್ಲಿ ಸದಾ ಇರುವ ನನ್ನ ಕನಸು ಒಡೆದು ಚೂರಾದಾಗಲೇ,
ನನಗಿದು ಖಾತ್ರಿಯಾಯ್ತು//

{ಮೊನ್ನೆಯಿಂದ ಮುಂದುವರಿಕೆ} ಕರಾವಳಿಯ ಕರೆ...

ಬೇಸಿಗೆ ಹಾಗು ದಸರೆಯ ಶಾಲಾರಜೆಗಳನ್ನು ನಾನು ಜಾತಕಪಕ್ಷಿಯಂತೆ ಕಾಯುತ್ತಿದ್ದೆ.ಈ ಮೊದಲೆ ಹೇಳಿದಂತೆ ನನ್ನ ರಜಾದಿನಗಳನ್ನು ಕಳೆಯಲು ನನಗಿದ್ದದ್ದು ಕೇವಲ ಸೀಮಿತವಕಾಶ.ಒಂದೋ ಅಮ್ಮನ ತವರು ಸಾಗಿನಬೆಟ್ಟಿಗೆ ಅವರೊಂದಿಗೆ ಹೋಗಬೇಕು,ಇಲ್ಲವೆ ಕೊಪ್ಪದಲ್ಲಿದ್ದ ಚಿಕ್ಕಪ್ಪ (ಅಜ್ಜನ ತಮ್ಮ) ನ ಮನೆಗೆ ಹೋಗಬೇಕು,ಅದೂ ಇಲ್ಲದಿದ್ದರೆ ದಬ್ಬಣ gaddeyallidda ಪ್ರಭಾಕರನ್ನನ ಮನೆಗೆ ಹೋಗಬೇಕು ( ಅವ್ರ ಬಗ್ಗೆ ಮುಂದೆ ಹೇಳುತ್ತೇನೆ). ಇವಿಷ್ಟರಲ್ಲಿ ನನ್ನ ಪ್ರಾಥಮಿಕ ಆದ್ಯತೆ ಇರುತ್ತಿದ್ದುದು ಅಮ್ಮನ ಜೊತೆಗೆ ಸಾಗಿನ ಬೆಟ್ಟಿಗೆ ಹೋಗುವುದು.

ಹಳ್ಳಿಯ ವಾತಾವರಣದ ಹಿನ್ನೆಲೆ,ಗದ್ದೆ-ತೋಟಗಳಲ್ಲಿ ಸ್ವಚ್ಛಂದವಾಗಿ ಅಲೆಯುವ ಮುಕ್ತ ಅವಕಾಶ,ನೇಜಿ ನೆಡುವವರ 'ಓ ಬೇಲೆ' ಕೇಳುತ್ತ ಇತ್ತ ಕೋಣಕಟ್ಟಿ ಹೂಡುವವರ 'ಊ ಹು ಊ ಹು ಊ'ರಾಗವನ್ನ ಕೇಳ್ತಾ ಇರುವ ಹಂಬಲ,ಮನೆಯ ಜಾಗದೊಳಗೆ ಬಳುಕುತ್ತ ಹರಿಯುವ 'ಫಲ್ಗುಣಿ'ಯ ನೀರಲ್ಲಿ ಆಡುವ ತವಕ, ಹಟ್ಟಿಯಲ್ಲಿದ್ದ ಹೂಡುವ ಕೋಣಗಳನ್ನು ತೋಡಲ್ಲಿ ಮೀಯಿಸುವಾಗ ತೆಂಗಿನ ಚೊಪ್ಪಿನಲ್ಲಿ ಅವುಗಳ ಮೈ ತಿಕ್ಕುವ ರೋಮಾಂಚನ (ತಿಕ್ಕೋದು ಕಡಿಮೆಯಾಗಿ ನೀರಲ್ಲಿ ಬಿದ್ದು ಹೊಡಕೋದೆ ಜಾಸ್ತಿಯಾಗಿರುತ್ತಿತ್ತು).ಮನೆಗೆ ಅಂಟಿಕೊಂಡಿದ್ದ ಕೆರೆಯಲ್ಲಿ ಅಮ್ಮನ ಅಣ್ಣ ಸುಂದರಮಾವ ಈಜುವಾಗ ನಾನೂ ಕೋಮಣ ಕಟ್ಟಿಕೊಂಡು ಅವರ ಈಜಿನ ಕೊನೆಯಲ್ಲಿ ಕೇವಲ ಐದೇ ಐದು ನಿಮಿಷವಾದರೂ ಅವರಿಂದ ಈಜು ಕಲಿಯುವ ಹಠ ಇವೆಲ್ಲ ಊರಿನತ್ತ ಇರುತ್ತಿದ್ದ ಪ್ರಮುಖ ಆಕರ್ಷಣೆಗಳು.

ಜೊತೆಗೆ ಮನೆಯಲ್ಲಿ ಮಾಡುತ್ತಿದ್ದ ಮೂಡೆ,ಕೊಟ್ಟೆ ಕಡುಬು,ನೀರ್ ತೆಲ್ಲಾವು,ಪುಂಡಿ,ಅರಿ ಸೇಮಿಗೆ-ಕೈ ಪೇರ್,ಉದ್ದು ದೋಸೆ,ಕೆಂಡದಡ್ದಯೇ,ಕಡಲೆಬೇಳೆ ಪಾಯಸಗಳಂತಹ ತುಳು ತಿಂಡಿಗಳು ಮೋಡಿ ಹಾಕುತ್ತಿದ್ದವು.ಅಲ್ಲದೆ ಈ ತಿಂಡಿಗಳೊಡನೆ ಹೇರಳವಾಗಿ ಮೇಯಲು ಸಿಗುತ್ತಿದ್ದ ಮಾವು,ಪೇರಳ-ಸಾಂತಿ-ಕೇಪಳ-ಹಲಸು-ನೇರಳೆ-ಬಿಂಬುಳಿ-ನಲ್ಲಿ ಮುಂತಾದ ಹಣ್ಣುಗಳ ರುಚಿ ಅತ್ತಲೆ ಹೋಗುವಂತೆ ಪ್ರೇರೇಪಿಸುತ್ತಿದ್ದವು ಅನ್ನಿಸುತ್ತದೆ.ಇವೆಲ್ಲದರ ಬಾಲ ಹಿಡಿದು ಅಮ್ಮನೊಟ್ಟಿಗೆ ಊರಿಗೆ ಹೋಗಲು ಸದಾಒಂತಿ ಕಾಲಲ್ಲಿ ನಿಂತಿರುತ್ತಿದ್ದೆ.ಅಲ್ಲಿಂದ ತೀರ್ಥಹಳ್ಳಿಗೆ ಮರಳಿ ಬರುವಾಗ ಕಾರ್ಕಳದ ಕಾಬೇತ್ತಿನಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಒಂದು ದಿನ,ಹಾಗು ಮುನಿಯಾಲಿನ ಬಳಿಯ ಗುದ್ದೆಮನೆಯಲ್ಲಿದ್ದ ಅಜ್ಜನ ಮನೆಯಲ್ಲಿ ಒಂದು ದಿನ ಕಳೆಯಲು ಸಿಗುತ್ತಿದ್ದ ಸಂತಸದ ವೇಳೆ ಸಾಗಿನ ಬೆಟ್ಟಿಗೆ ಹೋಗಲು ಇದ್ದ ಪ್ರಮುಖ ಆಕರ್ಷಣೆ.


ಹಾಗಂತ ಊರಿಗೆ ಹೋಗುವಾಗಲೆಲ್ಲ ಅಮ್ಮ ನನ್ನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು ಎಂದೇನಲ್ಲ.ಹಲವಾರು ಬಾರಿ ನನ್ನ ಶಾಲಾ ದಿನಗಳಲ್ಲೇ ಅವರು ಊರಿಗೆ ಹೊರಡುತ್ತಿದ್ದುದೂ ಉಂಟು,ಆಗೆಲ್ಲ ನಾನು ಅದೆಷ್ಟೇ ಅತ್ತು-ಕರೆದು ರಂಪ ಮಾಡುತ್ತಿದ್ದರೂ ಫಲ ಮಾತ್ರ ನಾಸ್ತಿ.ಅಂತಹ ಸಂದರ್ಭಗಳಲ್ಲಿ ಅಡುಗೆ ಮನೆಯ ಮೂಲೆಯಲ್ಲಿರುತ್ತಿದ್ದ ನಾಗರಬೆತ್ತಕ್ಕೆ ನನ್ನ ಮೇಲೆ ಸವಾರಿ ಮಾಡಲು ಮುಫತ್ ಅವಕಾಶ ಬೇರೆ ಸಿಗುತ್ತಿತ್ತು!.ಬರುಬರುತ್ತಾ ಈ ಪೆಟ್ಟಿನ ಹೆದರಿಕೆಯಿಂದ ನಾನು ಹಟ ಕಡಿಮೆ ಮಾಡಿದೆನಾದರೂ ಪೂರ್ತಿ ರಾಜಿ ಯಾಗಲಿಲ್ಲ.ಆದ ರಾಜಿಸೂತ್ರದ ಪ್ರಕಾರ ಅಮ್ಮ ನನ್ನನ್ನು ಊರಿಗೆ ಕರೆದೊಯ್ಯದ ಸಂದರ್ಭಗಳಲ್ಲಿ ಅವರಿಗಾಗಿ ಬಸ್ಸಿನಲ್ಲಿ ಸೀಟು ಹಿಡಿಯುವುದಕ್ಕಷ್ಟೇ ನನ್ನ ಹಾರಾಟದ ಕಾರ್ಯವ್ಯಾಪ್ತಿ ಸೀಮಿತವಾಯ್ತು.


ಈ ಸೀಟು ಹಿಡಿಯುವುದು ನನಗಾಗ ಒಂದು ಮೋಜಿನ ಆಟ.ತೀರ್ಥಹಳ್ಳಿ ಪಟ್ಟಣದ ಚಹರೆಪಟ್ಟಿಯ ಅರಿವು ನಿಮಗಿದ್ದಲ್ಲಿ ಮುಂದೆ ನಾನು ಕೊಡುವ ವಿವರಣೆ ಸರಳವಾಗಿ ನಿಮಗೆ ಅರ್ಥವಾದೀತು.ಶಿವಮೊಗ್ಗದಿಂದ ಸುಮಾರು ೬೦ ಕಿಲೋಮೀಟರ್ ದೂರದಲ್ಲಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯಹೆದ್ದಾರಿಯಲ್ಲಿ ನಮ್ಮೂರಿದೆ ( ಈಗ ಅದು ರಾಷ್ಟ್ರೀಯಹೆದ್ದಾರಿಯ ದರ್ಜೆಗೇರಿದೆ).ಹೀಗಾಗಿ ಮಂಗಳೂರು,ಸಾಗರ,ಹೊಸನಗರ,ಕುಂದಾಪುರಗಳತ್ತ ಸಾಗುವ ಬಸ್ಸುಗಳದ್ದೊಂದು ದಿಕ್ಕಾದರೆ,ಶಿವಮೊಗ್ಗ,ಬೆಂಗಳೂರಿಗೆ ಸಾಗುವ ಬಸ್ಸುಗಳದ್ದು ಇನ್ನೊಂದು.ಇನ್ನು ಕೊಪ್ಪ-ಶೃಂಗೇರಿಗಳ ಕಡೇ ಸಾಗುವವದ್ದು ಮೆಲಿನೆರಡರ ನಡುವಿನ ದಾರಿ.ಹೀಗಾಗಿ ಈ ಗೊಂದಲಾಪುರದಲ್ಲಿ ಮೂರ್ಮೂರು ಬಸ್ ನಿಲ್ದಾಣಗಳಿವೆ.ಮುಖ್ಯಬಸ್ ನಿಲ್ದಾಣ ಕೆಳಗಿನಸ್ಟ್ಯಾಂಡ್ ಎಂದು ಕರೆಯಿಸಿ ಕೊಂಡರೆ,ಉಳಿದೆರಡು ಮೇಲ್ ಸ್ಟ್ಯಾಂಡ್ ಹಾಗು ಕೊಪ್ಪಸ್ಟ್ಯಾಂಡ್ ಎನ್ನಲಾಗುತ್ತದೆ.ಈ ಮೂರೂ ದಿಕ್ಕಿನಿಂದ ಬರುವ ಬಸ್ಸುಗಳು ಮುಖ್ಯ ಬಸ್ ನಿಲ್ದಾಣಕ್ಕೆ ಬರುವುದು ಖಡ್ಡಾಯವಾದರೂ ಉಳಿದಂತೆ ತಮ್ಮತಮ್ಮ ದಿಕ್ಕಿನ ಕಡೆಗಿನ ನಿಲ್ದಾಣಗಳಲ್ಲೇ ಹೆಚ್ಚು ಸಮಯ ನಿಲ್ಲುತ್ತವೆ.ಈ ಮೂರೂ ನಿಲ್ದಾಣಗಳ ನಡುವೆ ಒಂದೊಂದು ಕಿಲೋಮೀಟರ್ ಅಂತರವಿದೆ.
ಈಗಲೂ ಅಲ್ಲಿ ಇದೆ ಪರಿಸ್ಥಿತಿಯಿದೆ,



ಶಿವಮೊಗ್ಗದಿಂದ ಮಂಗಳೂರಿನತ್ತ ಸಾಗುವ ಬಹುತೇಕ ಬಸ್ಸುಗಳೆಲ್ಲ ಹೆಬ್ರಿ-ಉಡುಪಿ ಮಾರ್ಗವಾಗಿಯೆ ಹೋಗುತ್ತಿದ್ದರಿಂದ ಕಾರ್ಕಳ-ಮೂಡಬಿದ್ರಿಗಳ ಕಡೆಗೆ ಸಾಗುವ ಬಸ್ಸುಗಳು ಕಡಿಮೆಯಿದ್ದವು.ಈ ಮಾರ್ಗವಾಗಿ ಸಾಗಿದರೂ ಉಡುಪಿ ಮೇಲೆ ಸಾಗಿದಷ್ಟೇ ಮಂಗಳೂರಿಗೆ ಅಂತರ ಇದ್ದರೂ ರಸ್ತೆ ಹೋಲಿಕೆಯಲ್ಲಿ ಅಷ್ಟು ಚೆನ್ನಾಗಿರದ ಕಾರಣ ( ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಚೆನ್ನಾಗಿದೆ) ಹಾಗು ಮಣಿಪಾಲದತ್ತ
ಚಿಕಿತ್ಸೆಗಾಗಿ ಸಾಗುವ ರೋಗಿ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾದುದರಿಂದ ಆರ್ಥಿಕ ಹಿತದೃಷ್ಟಿಯಿಂದ ಮಂಗಳೂರಿಗೆ ಹೋಗುವ ಬಸ್ಸುಗಳೆಲ್ಲ ಅದೆ ಮಾರ್ಗವಾಗಿ ಸಂಚರಿಸುತ್ತಿದ್ದವು.ಹೀಗಾಗಿ ಮೂಡುಬಿದ್ರಿ-ಕಾರ್ಕಳದ ದಿಕ್ಕಿಗೆ ಧಾರಾಳ ಬಸ್ಸಿನ ಕೊರತೆಯಿತ್ತು.ಒಂದೋ ಮಂಗಳೂರಿನ ಬಸ್ಸಿನಲ್ಲಿ ಹೆಬ್ರಿ ಮುಟ್ಟಿ ಅಲ್ಲಿ ಇನ್ನೊಂದು ದಿಕ್ಕಿನ ಬಸ್ ಬದಲಿಸಬೇಕಿತ್ತು,ಇಲ್ಲವೋ ಇದು ಹೆಚ್ಚು ತ್ರಾಸ ಎಂದೆನಿಸಿದರೆ ಸಾಗರದಿಂದ ಗುರುವಾಯನಕೆರೆಗೆ ಹೋಗುತ್ತಿದ್ದ 'ಪುಷ್ಪದಂತ' ಹಾಗು 'ನವಶಕ್ತಿ' ಎನ್ನುವ ಎರಡು ಬಸ್ಸುಗಳಿದ್ದವು,ಸಾಮಾನ್ಯವಾಗಿ ಧರ್ಮಸ್ಥಳಕ್ಕೆ ಹೋಗುವ ಭಕ್ತಕೋಟಿಯಿಂದ ತುಂಬಿ ತುಳುಕಾಡುತ್ತಿದ್ದ ಅವನ್ನೇ ಕಾದು ಒಂಟಿಕಾಲಲ್ಲಿ ನಿಂತಾದರೂ ಊರು ಸೇರ ಬೇಕಿತ್ತು.ತೀರ್ಥಹಲ್ಲಿಗೂ ಮೂಡಬಿದ್ರಿಗೂ ಸರಿ ಸುಮಾರು ನೂರು ಕಿಲೋಮೀಟರ್ ಅಂತರ ಹಾಗು ಎರಡೂ ಎರಡೂವರೆ ಗಂಟೆಗಳ ದೀರ್ಘ ಪ್ರಯಾಣ ಹೀಗಾಗಿ ನಿಂತು ಸಾಗೋದು ಕಷ್ಟ.ಸಾಲದ್ದಕ್ಕೆ ಆಗುಂಬೆ ಘಾಟಿಯ ಕಡಿದಾದ ತಿರುವುಗಳಲ್ಲಿ ಪದೇ ಪದೇ ಒತ್ತಿಸಿಕೊಳ್ಳುವ ಬಸ್ಸಿನ ಬ್ರೇಕಿಗೆ ಹಚ್ಚಿರುವ ಕೀಲೆಣ್ಣೆ ಡೀಸಲ್ ಘಮದೊಂದಿಗೆ ಹೊರಹೊಮ್ಮಿಸುವ ದರಿದ್ರ ವಾಸನೆ .ಈ ವಾಸನೆಗೆ ತಲೆ ತಿರುಗಿದಂತಾಗಿ ಹೊಟ್ಟೆ ತೊಳಿಸಿ ಪ್ರಯಾಣದುದ್ದಕ್ಕೂ ಬಕ ಬಕ ವಾಂತಿ ಮಾಡಿಕೊಳ್ಳುತ್ತ ತಿಂದದ್ದನೆಲ್ಲ ಕಾರಿಕೊಳ್ಳುವ ಮಂಜುನಾಥನ ಭಕ್ತಕೋಟಿ!ಒಂದಾ? ಎರಡ? ಈ ಎಲ್ಲ ವಿವಿಧ ವಿನೋದಾವಳಿಗಳನ್ನು ನೋಡಿಯೇ ಸವಿಯಬೇಕು.ಒಟ್ಟಿನಲ್ಲಿ ಇದೊಂಥರಾ ಕಾಲಾಪಾನಿ ಶಿಕ್ಷೆ.ಈ ಎಲ್ಲ ರಗಳೆಗಳಿಂದ ಮುಕ್ತರಾಗ ಬೇಕಿದ್ದಲ್ಲಿ ಸೀಟು ಹಿಡಿದು ಕೂತು ಪ್ರಯಾಣಿಸಬೇಕು.

{ನಾಳೆಗೆ ಮುಂದುವರೆಸುವೆ}

Thursday, August 19, 2010

ಮೋಕ್ಷವಿಲ್ಲ...

ನೀನಿಲ್ಲದೆ ನರಳುತಿವೆ,
ಕರಗುತಿವೆ ಕನಸುಗಳು ನೀನಿಲ್ಲದೆ/
ನಿದ್ದೆಗೆ ಶಾಶ್ವತ ರಜೆ,
ನೀನೆ ಇಲ್ಲದ ಮೇಲೆ ಇನ್ನೆಲ್ಲಿ ನನಗೆ ನಿದ್ದೆ,//

ಮುದುಡುತಿವೆ ನನ್ನ ಅರಳು ಕಣ್ಣುಗಳು,
ಕಣ್ಣಲೆ ಇಂಗುತಿವೆ ನೋವಿನ ಹನಿಗಳು/
ಮುದುಡಿದ್ದು ಮನಸು ಮಾತ್ರವಲ್ಲ,
ನಾನೂ ಬಾಡಿ ಮುದುಡಿದ್ದೇನೆ//

ಮೂಕ ನಾನು...

ವರ್ಷಗಳೆ ಹಿಡಿದವು ಭಯಬಿಟ್ಟು ನಿನ್ನಲ್ಲಿ ಉಸುರಲು,
ಕೇವಲ ಎರಡಕ್ಷರವಿತ್ತು...ಅದು ಒಂದೆ ಒಂದು ಮಾತಾಗಿತ್ತು/
ಮನದ ಮಾತಿಗೆ ರಂಗು ಹಚ್ಚುವ...
ಮುಂಬರುವ ಇರುಳನ್ನೆಲ್ಲ ಬೆಳಕಾಗಿಸುವ,
ಮೌನದಲೇ ಮಾತನೆಲ್ಲ ತಾಕುತ....
ಬಯಕೆಗಳ ಉಯ್ಯಾಲೆ ಜೀಕುವ//


ನಿನ್ನಿರುಳುಗಳೂ ಬಹುಶಃ ನನ್ನ ಪ್ರತಿ ಇರುಳುಗಳಂತೆಯೆ
ಸತ್ತು ಮತ್ತೆ ಹುತ್ತುತ್ತಿದ್ದವೇನೊ?/
ಮಾತೊಂದನೂ ಆಡದೆ ನೀ ನಿಭಾಯಿಸಿದ್ದಿ.
ನನ್ನ ಚೂರೇ ಚೂರು ದ್ರೋಹವನ್ನ//

ಬಚ್ಚೆಗೌಡರ ಪೌರುಷ ಪುರಾಣ part-3

"ಬಚ್ಚೆಗೌಡರು ತುಂಬಾ ಸಾತ್ವಿಕ ಮನುಷ್ಯರು.ಅವರು ಇಂತಹ ಅಪರಾಧ ಎಸಗೋದು ಅಸಾಧ್ಯ!?" ಹೀಗಂತ ಪುಕ್ಕಟೆ ಹೇಳಿಕೆ ನೀಡಿರುವವರು ಕರ್ನಾಟಕ ರಾಜ್ಯ ಸರಕಾರದ ಅಬಕಾರಿ ಸಚಿವ ರೇಣುಕಾಚಾರ್ಯ.ಈ ರೇಣುಕಾಚಾರ್ಯ ಎಂದರೆ ಯಾರು ಎಂಬ ಗೊಂದಲದಲ್ಲಿ ಬೀಳುವವರಿಗೆ ನರ್ಸ್ ರೇಣು,ರಸಿಕ ರೇಣು,ಕಿಸ್ಸರ್ ಕಿಂಗ್ ರೇಣು ಮುಂತಾದ ಸಮಾನಾರ್ಥಕ ಪದಗಳನ್ನು ಹೇಳಿದರೆ ಅವರ ಗೊಂದಲ ನಿವಾರಣೆಯಾಗಬಹುದು.ಮಾಜಿ ಮುಜುರಾಯಿ ಸಚಿವ ಮಾಲೂರು ಕೃಷ್ಣಯ್ಯ ಶಟ್ಟಿಯಿಂದ ತೆರವಾಗಿರುವ ರಾಜ್ಯ ಸಚಿವ ಸಂಪುಟದ ಆಸ್ಥಾನ ವಿದೂಷಕನ ಸ್ಥಾನದಲ್ಲಿ ಸದ್ಯ ವಿರಾಜಮಾನರಾಗಿರುವ ಈ ರೇಣು ಎಂಬ ಹೊನ್ನಾಳಿ ಬೀಜದ ಹೋರಿ ತುಂಬಾ ಕಾಳಜಿಯಿಂದ 'ಕಳ್ಳ ದೇವರಿಗೆ ಸುಳ್ಳ ಪುಜಾರಿ'ಯಂತೆ ಶ್ರೀಮಾನ್ ಬಚ್ಚೆಗೌಡರ ಬಗ್ಗೆ ಯಾರೇನು ಕೇಳದಿದ್ದರೂ ತಮ್ಮ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ.


ಇತ್ತ ಬಚ್ಚೆಗೌಡರಿಗೆ ಕಾಮಾಲೆ ಕಾಯಿಲೆಯಾಗಿರುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿವೆ.'ಸಿಎಂ ಹೇಳಿಕೆಗೆ ತಲೆಬಾಗಿ ವಿವಾದಕ್ಕೆ ಅಂತ್ಯ' ಹಾಡುವ ಮಾತನಾಡುತ್ತಲೆ 'ನಾನು ವಕೀಲ ದೇವದಾಸ್ ಜೂನಿಯರ್ ಆಗಿದ್ದೆ ಕಣ್ರೀ ;ಇಷ್ಟಕ್ಕೆ ಎಲ್ಲ ಮುಗೀತು ಅನ್ಕಾಬೇಡಿ...ಇದು ಅಂತ್ಯವಲ್ಲ ಆರಂಭ!' ಎಂಬ ವಿರೋಧಾಭಾಸದ ನುಡಿಮುತ್ತುಗಳನ್ನು ಥೇಟ್ ವಜ್ರಮುನಿ ಸ್ಟೈಲ್ ನಲ್ಲಿ ಗುಟುರು ಹಾಕುತ್ತಿರುವ ಈ ಮಾಜಿ ಅಡ್ವೋಕೇಟ್ ಸಚಿವರಿಗೆ ತಮ್ಮ ವಿರುದ್ಧ ಸುದ್ಧಿ ಪ್ರಕಟಿಸಿದ "ವಿಜಯ ಕರ್ನಾಟಕ" ಪೀತ ಪತ್ರಿಕೆಯಾಗಿ ಕಂಡಿದೆ.ಉಳಿದೆಲ್ಲರಿಗೂ ಬಿಳಿ ಹಾಳೆಯ ಮೇಲೆ ಕಪ್ಪು ಮುದ್ರಣವಷ್ಟೇ ಕಾಣುತ್ತಿರುವಾಗ ಬಚ್ಚೆಗೌಡರಿಗೆ ಅದು ಅರಿಶಿನವಾಗಿ ಕಾಣಿಸುತ್ತಿದೆ ಎಂದಾದರೆ ಸಮಾಜದ ಹಿತ ದೃಷ್ಟಿಯಿಂದ ತುರ್ತಾಗಿ ಅವರಿಗೆ ಚಿಕತ್ಸೆಯೊಂದು ಬೇಕೆಬೇಕು ಅನ್ನಿಸುತ್ತೆ.ಸಾಲದ್ದಕ್ಕೆ ಅವರ ಮಾನ ಬೇರೆ ನಷ್ಟ ಆಗಿದೆಯಂತೆ,ಈ ಸಂಬಂಧ ಅವರು 'ವಿ ಕ' ದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತಾರಂತೆ! 'ಕಳೆದು ಕೊಳ್ಳುವಷ್ಟು ಮಾನ ಬಚ್ಚೆಗೌಡರ ಬಳಿ ಇದೆಯಾ?' ಎಂದು ಪತ್ರಕರ್ತ "ಅಗ್ನಿ" ಶ್ರೀಧರ್ ಪ್ರಶ್ನಿಸಿರುವುದು ಮಾರ್ಮಿಕವಾಗಿದೆ.



"ಹುಟ್ಟು ಗುಣ ಸುಟ್ಟರೂ ಹೋಗದು" ಎಂಬಂತೆ ತಮ್ಮ ಪಾಳೇಗಾರಿಕೆಯ ಗತ್ತಿಗೆ ಅಮಾಯಕರನ್ನು ಬಲಿಕೊಡುವ ಬಚ್ಚೆಗೌಡರು ತಮ್ಮನ್ನು ಹೊರತು ಪಡಿಸಿ ಉಳಿದ ಆರು ಕೋಟಿ ಕನ್ನಡಿಗರನ್ನು ಕೇವಲ ಬಚ್ಚಾಗಳು ಅಂದುಕೊಂಡಂತಿದೆ.ಜೊತೆಗೆ 'ಊಸರವಳ್ಳಿಗೆ ಬೇಲಿ ಸಾಕ್ಷಿ' ಎಂಬಂತೆ ಇತ್ತ ಸಹೋದ್ಯೋಗಿ ರಸಿಕ ಕುಲತಿಲಕ ರೇಣುಕಾಚಾರ್ಯನ ಶಿಫಾರಸ್ಸು ಬೇರೆ.ಮಾನ್ಯ ಮುಖ್ಯಮಂತ್ರಿಗಳಾದ ಬೂಸಿಯ ಮಾತ್ರ ಸಿಕ್ಕಾಪಟ್ಟೆ ನಿಶಕ್ತಿ ಹಾಗು ನರದೌರ್ಬಲ್ಯದಿಂದ ನರಳುತ್ತಿರುವಂತೆ ಕಾಣುತ್ತಿದ್ದು ತೀರ ತಮ್ಮ ಸಂಪುಟ ಸಹೋದ್ಯೋಗಿಗಳನ್ನೂ ಆಳಲಾರದಷ್ಟು ಅಸಹಾಯಕ ಪರಿಸ್ಥಿತಿಯಲ್ಲಿ ಇರುವಂತಿದೆ.ಇಂತಹ ತಾನು ತನ್ನ ಕುರ್ಚಿ ಭದ್ರ ಮಾಡಿಕೊಳ್ಳುವುದನ್ನು ಬಿಟ್ಟು ಧೀಮಂತವಾಗಿ ಈ ರಾಜ್ಯವನ್ನು ಆಳುತ್ತೇನೆ ಎಂದು ನಂಬಲು ಸ್ವತಹ ಅವರೇ ಸಿದ್ಧರಿದ್ದಂತಿಲ್ಲ! ಯಾರಾದರು ರಹಸ್ಯರೋಗಗಳ ರಣವೈದ್ಯರು ಇವರ ಈ ಅಸಹಾಯಕತಾ ಪೂರ್ವಕ ನಿಮಿರು ದೌರ್ಬಲ್ಯಕ್ಕೆ ಖಚಿತ ಕಾರಣ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಬೇಕಿದೆ.ಮಾನ್ಯ ಮುಖ್ಯಮಂತ್ರಿಗಳು ಇನ್ನು ಮುಂದೆ ಅವರ ಆಸ್ಥಾನ ವಿದೂಷಕ ಪಟ್ಟವನ್ನು ಓವರ್ ಟೇಕ್ ವೀರ ಬಚ್ಚೆಗೌಡರಿಗೆ ಕಿಸ್ಸಿಂಗ್ ಶೂರ ರೇಣುಕಾಚಾರ್ಯರೊಂದಿಗೆ ಹಂಚಿ ಕೊಡಲು ಅಡ್ಡಿಯಿಲ್ಲ.

Wednesday, August 18, 2010

ಬಚ್ಚೆಗೌಡ ಪುರಾಣಮು...part-2

ಸಚಿವ ಬಚ್ಚೆ ಗೌಡರ ಕೊಚ್ಚೆ ಬಾಯಿ ಮತ್ತೊಮ್ಮೆ ಬಿಟ್ಟಿದೆ.ಈ ಬಾರಿ ಪರಮ ಸಾತ್ವಿಕನ ಗೆಟಪ್ಪಿನಲ್ಲಿ ಅನ್ನೋದಷ್ಟೇ ಚಿಕ್ಕ ಬದಲಾವಣೆ.ಕಳೆದ ಮೂರು ದಿನಗಳಿಂದ ಅವರ ವಿರುದ್ಧ ನಡೆಯುತ್ತಿರುವುದು ವ್ಯವಸ್ತಿತ ಪಿತೂರಿಯಂತೆ! ಭಾರಿ ಷಡ್ಯಂತ್ರವಂತೆ!! ಸದ್ಯ,ಇದರ ಹಿಂದೆ ವಿದೇಶಿ ಕೈವಾಡ ಇದೆ ಎಂದು ಅವರು ಹೇಳಲಿಲ್ಲ,ಅವಸರದಲ್ಲಿ ಮರೆತು ಬಿಟ್ಟರೆನೋ?!


ಮೊನ್ನೆ ಅಂದರೆ ಆಗಷ್ಟ್ ೧೫ರನ್ದು ಸಂಜೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದದ್ದಿಷ್ಟು.ಮಾನ್ಯ ಸಚಿವ ಬಚ್ಚೆ ಗೌಡರ ಸವಾರಿ ಹಾಸನದಿಂದ ಬೆಂದಕಾಳೂರಿಗೆ ಚಿತ್ತೈಸುತ್ತಿತ್ತು.ಆವಾಗ ಭರತ್ನೆಂಬ ದುರುಳ ಅವರ ಸರಕಾರಿ ವಾಹನವನ್ನು ಓವರ್ ಟೇಕ್ ಮಾಡುವ ದುಸ್ಸಾಹಸಕ್ಕೆ ಇಳಿದಿದ್ದಾನೆ.ಸದರಿ ಸಂದರ್ಭದಲ್ಲಿ ಆತ ಸಫಾರಿ ವಾಹನದಲ್ಲಿದ್ದುದು ಮೊದಲನೇ ತಪ್ಪು ( ಸಚಿವರಿಗಿಂತ ದುಬಾರಿ ವಾಹನದಲ್ಲಿ ಅವರೆದುರಿಗೆ ಮೆರೆಯುವುದು ಎಂದರೇನು?),ಸಾಲದ್ದಕ್ಕೆ ಒಳಗಿನ ಲೇನ್ ನಲ್ಲಿದ್ದ ಅವನ ವಾಹನ ಘನ ಸಚಿವರ ಎರಡನೇ ಲೇನ್ ನಲ್ಲಿದ್ದ ಸರಕಾರಿ ಸಾರೋಟನ್ನ ಹಿಂದಿಕ್ಕುವ ಉದ್ಧಟತನ ತೋರಿದ್ದು ಎರಡನೇ ತಪ್ಪು.ಇಂತಹ ಪಾಪಿಗೆ...ನೀಚನಿಗೆ ಸ್ಥಳದಲ್ಲಿಯೆ ತಮ್ಮ ನಿತ್ಯದ ಶೈಲಿಯ ಅಮ್ಮ ..ಅಕ್ಕ... ಮಂತ್ರಪುಷ್ಪವನ್ನು ಧಾರಾಳವಾಗಿ ಉದುರಿಸುತ್ತ ಸನ್ಮಾನ್ಯ ಸಚಿವರು ಅರ್ಚನೆ ಆರಂಭಿಸಿದ್ದಾರೆ.ನಡುವೆ ತಮ್ಮ ಕಾಲಿಗೆರಗಿ ಕೃಪಾಶಿರ್ವಾದಕ್ಕಾಗಿ ಅಂಗಲಾಚಿದ ಭರತ್ ತಂದೆ ಲೋಕಪ್ಪಗೌಡರಿಗೆ ತಮ್ಮ ಬೂಟುಗಾಲಿನಿಂದ ಸರಿಯಾಗಿ ಪೂಜೆಯನ್ನೂ ಮಾಡಿದ್ದಾರೆ.ಇವರೊಂದಿಗೆ ಬಚ್ಚೆಗೌಡರ ಗಣ ಗಳಾದ ಡ್ರೈವರ್ ದೇವದಾಸ್ ಹಾಗು ಗನ್ ಮ್ಯಾನ್ ರಾಜಶೇಖರ್ ಇತ್ತ ಭರತ್ ನನ್ನ ಸರಿಯಾಗಿ ವಿಚಾರಿಸಿಕೊಂಡು ತಮ್ಮ ಆದಿದೈವದ ಪೂಜೆ ಸಾಂಗವಾಗಿ ನೆರವೇರಲು ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ.



ಮಾನ್ಯ ಕಾರ್ಮಿಕ ಸಚಿವರು ಯಾವುದಾದರು ರಾಜಮಾರ್ಗಗಳಲ್ಲಿ ಕೇವಲ ಹತ್ತೆ ಕಿಲೋಮೀಟರ್ ವೇಗದಲ್ಲಿ ತಮ್ಮ ಸರಕಾರಿ ಗೂಟದ ಐರಾವತವನ್ನೇರಿ ಲೋಕ ಸಂಚಾರಕ್ಕಾಗಿ ಹೊರಟರೆ ಉಳಿದ ಎಲ್ಲಾ ಪಾಮರರು ಸಚಿವರ ಗೌರವಾರ್ಥವಾಗಿ ಕೇವಲ ಐದೇ ಕಿಲೋಮೀಟರ್ ವೇಗದಲ್ಲಿ ಸಾಹೇಬರ ಅಂಬಾರಿಯ ಹಿಂದೆ ತೆವಳುತ್ತ ಡೊಗ್ಗು ಸಲಾಮು ಹಾಕದೆ ತಿಮಿರು ತೋರಿದಲ್ಲಿ ಭರತ್ ಎಂಬ ಈ ದುರುಳನಿಗಾದ ಗತಿಯೆ ಅವರಿಗೂ ಆಗುತ್ತದೆ ಹಾಗು ಆಗಲೇಬೇಕು.ಎಷ್ಟೆಂದರೂ ಅವರು ಆಳುವ ಪ್ರಭುಗಳು ಹಾಗು ನಾವು ನೀವೆಲ್ಲ ಅವರ ಸೇವೆಗೆ ಟೊಂಕ ಕಟ್ಟಿ ನಿಲ್ಲಬೇಕಾದ ಪ್ರಜೆಗಳು.ಅಲ್ಲಲ್ಲಿ-ಆಗಾಗ ದುಷ್ಟರ ಹಾವಳಿ ಹೆಚ್ಚಿದಾಗ ಬಿಜೆಪಿ ಸರಕಾರದ ಮಂತ್ರಿ ಮಹೋದಯರು ದುಷ್ಟ ಶಿಕ್ಷೆಗೂ...ಶಿಷ್ಟ (ಅಂದರೆ ಸದರಿ ಮಂತ್ರಿಗಳು ಅಂತ ಓದಿಕೊಳ್ಳಬೇಕಾಗಿ ವಿನಂತಿ) ರಕ್ಷಣೆಗೂ ಮುಂದಾಗುತ್ತಾರೆ ಎನ್ನುವುದಷ್ಟೇ ಈ ಪುಣ್ಯ ಕಥೆಯ ಸಾರ..enjoy...

ನನ್ನೊಲವಿನ ಪಾರಿಜಾತ...

{ಮೊನ್ನೆಯಿಂದ ಮುಂದುವರೆದುದು}





ರತ್ನಗಂಧಿ,ಅಬ್ಬಲಿಗೆ,ಕಾಕಡ-ಮಂಗಳೂರು-ಕಸ್ತೂರಿ ಮಲ್ಲಿಗೆಗಳು,ಚಂಡು ಹೂ,ನಂದಬಟ್ಟಲು,ಕೆಂಪು-ಕೆನೆ ಬಣ್ಣದ ಗುಲಾಬಿ,ಸೇವಂತಿಗೆ,ಸೂರ್ಯಕಾಂತಿ,ಅರಿಶಿನದ ಹೂ ( ಹೆಸರು ಮಾತ್ರ ಅರಿಶಿನ ;ಹೂ ಬಿಳಿಯದೆ),ಕಬಾಳೆ ಹೂ,ಕೆಂಪು-ಗುಲಾಲಿ ತುಂಬೆ ಹೂ,ನೆಲ ಗುಲಾಬಿ,ಕೆಂಪು-ಹಳದಿ-ಬಿಳಿ-ಕೆನೆವರ್ಣದ ದಾಸವಾಳದ ಹೂ,ಹೀಗೆ ಅಸಂಖ್ಯ ಹೂ ಗಿಡಗಳು ಮೈತುಂಬ ಹೂ ಹೊಮ್ಮಿಸಿ ಕಣ್ಣಿಗೆ ಹಿತವಾಗುತ್ತಿದ್ದರೂ ಅದೆಲ್ಲಕ್ಕಿಂತ ಎತ್ತರದಲ್ಲಿ ಮರದಲ್ಲರಳಿ ನೆಲ ಮುಟ್ಟುತ್ತಿದ್ದ ಪಾರಿಜಾತದಷ್ಟು ಇನ್ಯಾವುದೇ ಹೂವು ನನಗೆ ಮೋಡಿ ಮಾಡಿರಲಿಲ್ಲ.ಪಾರಿಜಾತದ್ದು ಅಲ್ಪಾಯುಷ್ಯ.

ಸಂಜೆ ಹೊತ್ತು ಕಂತುವಾಗ ಮುತ್ತು ಪೋಣಿಸಿದಂತೆ ಕಾಣುವ ದುಂಡು ಮೊಗ್ಗುಗಳು ನಸು ಮುಂಜಾನೆಯಲ್ಲಿ ಅಂದವಾಗಿ ಅರಳಿ ಏಳೆಂಟು ಗಂಟೆಯ ಹೊತ್ತಿಗೆಲ್ಲ ಉದುರಿ ನೆಲಮುಟ್ಟುತ್ತಿದ್ದವು.ಇತ್ತ ಸಂಸ್ಕೃತ ವಾರ್ತೆಯ ಕೊನೆಯ ಸಾಲು "...ಇತಿ ವಾರ್ತಾಹ" ಕೇಳಿಬರುತ್ತಿದ್ದ ಹಾಗೆ ಓಡಿಹೋದರೆ ಹೂವುಂಟು,ಇಲ್ಲದಿದ್ದರೆ ಅರ್ಧ ಅಂಗಳದಲ್ಲಿ-ಇನ್ನರ್ಧ ರಸ್ತೆಯಲ್ಲಿ ಬೀಳುತ್ತಿದ್ದ ಅವು ಒಂದೊ ಓಡಾಡುವವರ ಕಾಲ್ತುಳಿತಕ್ಕೆ ಸಿಕ್ಕು ಇಲ್ಲವೆ ಮೇಲೇರುವ ಸೂರ್ಯನ ಧಗೆಗೋ ಮುರುಟಿ ಮಣ್ಣು ಪಾಲಾಗುತ್ತಿದ್ದವು.ಬೆಳಗಾತ ಎದ್ದ ಕೂಡಲೇ ಮನೆಯ ಅಂಗಳ ಗುಡಿಸಿ ಸಾರಿಸಿ ನಮ್ಮ ಕಲ್ಲು ದಣಪೆಯ ಮುಂದೆ ಅಂದವಾಗಿ ಅಮ್ಮನೋ-ಚಿಕ್ಕಂಮಂದಿರೋ ಇಟ್ಟಿರುತ್ತಿದ್ದ ರಂಗೋಲಿಯ ಅಂಕುಡೊಂಕು ಸಾಲುಗಳ ಮೇಲೆ ಉದುರಿದ ಪಾರಿಜಾತಗಳನ್ನೆಲ್ಲ ಆರಿಸಿ ತಂದು ತಲೆ ಕೆಳಗಾಗಿ ತೊಟ್ಟು ಮೇಲಾಗಿ ಜೋಡಿಸಿಟ್ಟು ಅಂದ ನೋಡುವುದು ನನ್ನ ಅತ್ಯಂತ ಪ್ರಿಯವಾದ ಹವ್ಯಾಸ.ಬಿಳಿ ಪಕಳೆಗಳ ಹಿಂದಿನ ಕೇಸರಿ ತೊಟ್ಟು ಪಾರಿಜಾತಕ್ಕೆ ವಿಶೇಷ ವರ್ಣವೈಭವವನ್ನ ಕೊಟ್ಟಂತೆ ಅನ್ನಿಸುತ್ತಿತ್ತು.ಈ ಹೂವನ್ನು ದಾರದಲ್ಲಿ ಕಟ್ಟಲಾಗದಷ್ಟು ಸೂಕ್ಷ್ಮವಾಗಿ ಅದಿರುತ್ತಿದ್ದರಿಂದ ಸೂಜಿಗೆ ದಾರ ಪೋಣಿಸಿ ಅದನ್ನು ಹೆಣೆದು ದೇವರ ಪಟಕ್ಕೆ ಮಾಲೆಯಾಗಿ ಹಾಕುತ್ತಿದ್ದುದು ನೆನಪಾಗುತ್ತದೆ.


ಪಾರಿಜಾತದ ಶಾಪದ ಕಥೆ ಅಲ್ಲಿಗೆ ಮುಗಿಯಲಿಲ್ಲ.ಇತ್ತ ಗಿಡ ತಂದು ಸತ್ಯಭಾಮೆಗೆ ಕೊಟ್ಟ ಕೃಷ್ಣ ಅದನ್ನು ನೆಡುವಾಗ ಮತ್ತೆ ತನ್ನ ಕುತಂತ್ರ ಮೆರೆದ.ನೆಟ್ಟದ್ದು ಭಾಮೆಯ ಅಂಗಳದಲ್ಲಾದರೂ ಅದು ಬೆಳೆದು ಬಾಗಿದ್ದು ರುಕ್ಮಿಣಿಯ ಅಂಗಳದತ್ತ! ಹೂವೆಲ್ಲ ಅಲ್ಲಿಯೇ ಉದುರುತ್ತಿತ್ತು.ಅಲ್ಲಿಗೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಆ ಕರಿಯ.ನಿತ್ಯ ಹೂ ಸಿಕ್ಕು ರುಕ್ಮಿಣಿಯೂ ಸುಖಿ! ತನ್ನಂಗಳದಲ್ಲೇ ಪೂರ ಮರ ಹೊಂದಿ ಮತ್ಸರ ಸಾಧಿಸಿಕೊಂಡ ಭಾಮೆ ಪರಮಸುಖಿ!!


ಒಮ್ಮೆ ನವರಾತ್ರಿಯ ಸಮಯ ಶಾಲೆಯಲ್ಲಿ ಸರಸ್ವತಿ ಪೂಜೆಗಾಗಿ ಎಲ್ಲ ಮಕ್ಕಳಿಗೂ ಹೂ ತರಲು ಹೇಳಿದ್ದರು.ನನ್ನ ಸಹಪಾಟಿಗಳೆಲ್ಲ ತಮ್ಮ ಮನೆಯಲ್ಲಿ ಅರಳಿದ್ದೋ-ಇಲ್ಲ ಉಳ್ಳವರ ಅಪ್ಪಂದಿರು ಹೂವಂಗಡಿಯಲ್ಲಿ ಕೊಡಿಸಿದ್ದೋ ಅಂತೂ ಭಾರಿ ಚಂದದ ಹೂಗಳನ್ನೆ ಕೊಂಡೊಯ್ದು ಹೊಗಳಿಸಿಕೊಂಡಿದ್ದರೆ,ಅಷ್ಟೇ ಅಸ್ಥೆಯಿಂದ ನಾನೂ ಆರಿಸಿ ಕೊಂಡೊಯ್ದಿದ್ದ ಪಾರಿಜಾತದ ಹೂ ಶಾಲೆ ತಲುಪುವಾಗಲೆ ಅರೆ ಬಾಡಿದ್ದು ನಾನು ಎಲ್ಲರಿಂದ ಅಪ ಹಾಸ್ಯಕ್ಕೀಡಾಗಿದ್ದೆ.ಆಗಷ್ಟೇ ನಾನು ಹೊಸ ಹೊಸತಾಗಿ ಒಲವಲ್ಲಿ ಪರಿಚಯದ ಹುಡುಗಿಯೊಬ್ಬಳ ಒಲವಲ್ಲಿ ಬಿದ್ದಿದ್ದೆ ( ಒಲವಾಗಿದ್ದು ಒಂದೇ ಸಾರಿ,ಇಂದಿಗೂ ಅವಳನ್ನೇ ಪ್ರೀತಿಸುತ್ತಿದ್ದೇನೆ ಅವಳೀಗ ಸಾನ್ ಫ್ರಾನ್ಸಿಸ್ಕೊದಲ್ಲಿದ್ದಾಳೆ). ಒಂಬತ್ತನೇ ತರಗತಿಯ ಕೊನೆಯ ಪರೀಕ್ಷೆಯ ದಿನಗಳವು.ಪರೀಕ್ಷೆಯ ಹಾಲಿನಲ್ಲಿ ಬೆಂಚಿಗೆ ಇಬ್ಬರಂತೆ ಒಬ್ಬ ಒಂಬತ್ತನೆಯ ತರಗತಿಯ ಹಾಗು ಇನ್ನೊಬ್ಬ ಎಂಟನೆಯ ತರಗತಿಯವರನ್ನ ಕ್ರಮವಾಗಿ ಕೂರಿಸುತ್ತಿದ್ದರು.ನನ್ನ ಅದೃಷ್ಟಕ್ಕೆ ಎಂಟನೆ ತರಗತಿಯಲ್ಲಿನ ಅವಳ ಕ್ರಮಸಂಖ್ಯೆಯೂ ಒಂಬತ್ತರಲ್ಲಿದ್ದ ನನ್ನ ಕ್ರಮಸಂಖ್ಯೆಯೂ ಒಂದೇ ಬೆಂಚಿನಲ್ಲಿ ಬಿದ್ದಿತ್ತು! ಕನಿಷ್ಠ ಆರು ದಿನಗಳ ಮಟ್ಟಿಗಾದರೂ ನನಗೆ ಲಾಟರಿ ಹೊಡೆದಿತ್ತು!! ಆ ಖುಷಿಗೆ ತೀರ ಬಾಲಿಶವಾಗಿ ವರ್ತಿಸಿ ಬೇಕೂಫನೂ ಆಗಿದ್ದೆ.ಪರೀಕ್ಷೆಯ ಕೊನೆಯ ದಿನದ ಹಿಂದಿನ ಸಂಜೆ ಅವಳಿಗಾಗಿ ವಿಶೇಷವಾಗಿ ಪಾರಿಜಾತದ ದುಂಡು ಮೊಗ್ಗುಗಳನ್ನೆಲ್ಲ ಜೋಪಾನವಾಗಿ ಬಿಡಿಸಿ ನನ್ನ ಕರ್ಚಿಫ್ನಲ್ಲಿ ಕಟ್ಟಿ ಮನೆಯ ಮಾಡಿನ ಮೇಲೆ ಇಬ್ಬನಿಗೆ ಇಟ್ಟಿದ್ದೆ.ಅರಳಿದ ಮೇಲೆ ಅದು ಬಾಡಿ ಹೋದೀತು ಎಂಬ ಅರಿವಿದ್ದುದರಿಂದ ವಹಿಸಿದ್ದು ಈ ಮುತುವರ್ಜಿ.ಇಷ್ಟೆಲ್ಲಾ ಮುಂಜಾಗರೂಕತೆ ವಹಿಸಿದ್ದರೂ ಶಾಲೆಗೆ ಹೋಗುವಾಗ ( ಅಂದು ಮಧ್ಯಾಹ್ನ ಪರೀಕ್ಷೆ ಇತ್ತು) ಯಥಾಪ್ರಕಾರ ಮೊಗ್ಗು ಕೂಡ ಬಾಡಿ ಹೋಗಿ ಕೊಡಲು ಕೀಳರಿಮೆ ಕಾಡಿ ಮನಸ್ಸಾಗಲೇ ಇಲ್ಲ.ಅಷ್ಟು ಆಸೆಯಿಂದ ಕೊಡುವ ಅಂದು ಕೊಂಡಿದ್ದ ನನ್ನ ಮನಸೂ ಕೂಡ ಆ ದಿನ ಥೇಟ್ ಪಾರಿಜಾತದಂತೆ ಮುದುಡಿ ಮುರುಟಿ ಹೋಗಿತ್ತು.ಹೂ ಕೊಡಲಾಗಲಿಲ್ಲ ಎಂಬ ಸಂಕಟ ಇಂದಿಗೂ ನನ್ನ ಭಾದಿಸುತ್ತಿದೆ.


{ನಾಳೆಗೆ ಮುಂದುವರಿಸುವೆ}

Tuesday, August 17, 2010

ಅಬ್ಬರಿಸಿ ಬೋಬ್ಬಿರಿದರೆ ಇಲ್ಯಾರಿಗೂ ಭಯವಿಲ್ಲ...

ದಿನ ಕಳೆದಂತೆ ಕರ್ನಾಟಕದ ರಾಜಕಾರಣಿಗಳ ವರ್ತನೆ ಹೇಸಿಗೆ-ರೇಜಿಗೆ ಎರಡನ್ನೂ ಏಕಕಾಲದಲ್ಲಿ ಹುಟ್ಟಿಸುತ್ತಿದೆ.ಸಚಿವ ಬಚ್ಚೇಗೌಡರ ಆಟಾಟೋಪದ ಪ್ರಕರಣ ಹೇಸಿಗೆ ಹೆಚ್ಚಿಸಿದ ಅಂತಹದ್ದೊಂದು ಪ್ರಕರಣಗಳ ಸಾಲಿಗೆ ಹೊಸ ಸೇರ್ಪಡೆ.ಬಿಹಾರ-ಉತ್ತರ ಪ್ರದೇಶಗಳಲ್ಲಿ ಆಗುತ್ತದೆ ಎಂದಷ್ಟೇ ಕೇಳಿಗೊತ್ತಿದ್ದ ಅಂಧಾದರ್ಬಾರಿಗೆ ಈ ಮೂಲಕ ಕನ್ನಡದ ಜನರೂ ಸಾಕ್ಷಿಯಾಗಿದ್ದಾರೆ.ನಾಚಿಕೆಗೇಡಿನ ಸಂಗತಿಯೆಂದರೆ ಜನರ ಸೇವೆ ಮಾಡಬೇಕಾದ (ಅದಕ್ಕೆ ಅವರಿಗೆ ಆ ಸ್ಥಾನಮಾನ ಸಿಕ್ಕಿರೋದು) ಸಚಿವನೋಬ್ಬನ ಪುಂಡಾಟದ ಈ ವರ್ತನೆಗೆ ಎಲ್ಲರೂ ಮೂಕಸಾಕ್ಷಿಗಳಾಗಿದ್ದರೆ ಅಷ್ಟೇ. ಇಂತಹ ದುರಹಂಕಾರಿಗೆ ಮುಲಾಜಿಲ್ಲದೆ ತಾಗಿಸ ಬೇಕಾದ ಜನಶಕ್ತಿಯ ಅಸಹನೆಯ ಬಿಸಿ ಪರಿಣಾಮಕಾರಿಯಾಗಿ ಮುಟ್ಟುತ್ತಿಲ್ಲ."ವಿಜಯ ಕರ್ನಾಟಕ"ವೂ ಸೇರಿ ಕೇವಲ ಒಂದೆರಡು ಕನ್ನಡ ದಿನಪತ್ರಿಕೆಗಳು ಮುಖಪುಟದಲ್ಲೇ ಸುದ್ದಿಗೆ ಪ್ರಾಮುಖ್ಯತೆ ನೀಡಿ ಜನರ ಆಶೋತ್ತರಗಳಿಗೆ ಧ್ವನಿಯಾದರೆ,ಅಂಗ್ಲಪತ್ರಿಕೆಗಳಲ್ಲೂ ಎರಡೇ ಪತ್ರಿಕೆಗಳು ಈ ಬಗ್ಗೆ ಧ್ವನಿ ಎತ್ತಿವೆ.ಉಳಿದ ಪತ್ರಿಕೆಗಳ ಹಣೆಬರಹಕ್ಕೆ ಒಳಪುಟದಲ್ಲಿ ಪ್ರಕಟ ಸದರಿ ಸುದ್ದಿ ಪ್ರಕಟವಾಗಿದ್ದರೆ ಒಂದೆರಡು ಪತ್ರಿಕೆಗಳ ಪಾಲಿಗೆ ಅದೊಂದು ಸುದ್ದಿಯೇ ಅಲ್ಲ! .ಬಚ್ಚೇಗೌಡರಂತಹ ಯಕಶ್ಚಿತ್ ಸಚಿವನಿಗಿರುವ ಪೊಗರು ಇಡೀ ಸರ್ಕಾರದ ಧೋರಣೆಯ ಪ್ರತಿಬಿಂಬವೆ ಹೊರತು ಕೇವಲ ವಯಕ್ತಿಕ ನೆಲೆಯಲ್ಲಿ ಕಂಡು ಮರೆತು ಬಿಡುವ ಸರಳ ವಿಚಾರ ಅಲ್ಲ ಎಂಬುದು ನಮಗೆಲ್ಲ ನೆನಪಿರಬೇಕು.ಪರಿಸ್ಥಿತಿಯ ವ್ಯಂಗ್ಯವೆಂಬಂತೆ ಸ್ವಾತಂತ್ರ್ಯ ದಿನಾಚರಣೆಯ ದಿನವೇ ನಡೆದ ನಾಚಿಗೆಗೇಡಿನ ಈ ಪ್ರಕರಣ ಶ್ರೀಸಾಮಾನ್ಯನೊಬ್ಬನಿಗೆ,ಸಾಧಾರಣ ಮತದಾರ ಪ್ರಭುವಿಗೆ ( ಈ ಪ್ರಭುವಿನ ಪಟ್ಟ ಚುನಾವಣೆಯ ಹೊತ್ತಿಗಷ್ಟೇ ಸೀಮಿತ!) ಈ ರಾಜ್ಯದಲ್ಲಿ ಇರುವ ವ್ಯಕ್ತಿ ಸ್ವಾತಂತ್ರ್ಯಕ್ಕೆ ನಿದರ್ಶನ ಅನ್ನಿಸುತ್ತದೆ.


ಹಾಸನಜಿಲ್ಲಾ ಉಸ್ತುವರಿಯಷ್ಟೇ ಬಚ್ಚೆಗೌಡರಿಗಿರುವುದು ಹೊರತು ಅಲ್ಲಿನ ಪಾಳೆಗಾರಿಕೆಯಲ್ಲ.ಅಲ್ಲದೆ ಎಲ್ಲಾದರೂ ಕರ್ನಾಟಕದ ಜನತೆಯ ಹಣೆಬರಹ ಕೆಟ್ಟು "ಬಚ್ಚಾಸ್ಥಾನ್" ಒಂದು ಮುಂದೆಂದಾದರೂ ರೂಪುಗೊಂಡಾಗ ಮಾತ್ರ ಅವರ ಕಾಡಿನ ಕಾನೂನು ಅಲ್ಲಿ ಜಾರಿಗೆ ಬಂದರೂ ಬರಬಹುದು.ಆದರೆ ಮಾನ್ಯಸಚಿವರ ದುರದೃಷ್ಟಕ್ಕೆ ಇದು ಕರ್ನಾಟಕ ಹಾಗು ಅವರು ಇಲ್ಲಿನ ಆರುಕೋಟಿ ಜನರ ಪ್ರಾತಿನಿಧಿಕ ಸರ್ಕಾರದ ಒಬ್ಬ ಕನಿಷ್ಠ ಸಚಿವ,ನೇರ ಮಾತಿನಲ್ಲಿ ಹೇಳಬೇಕೆಂದರೆ ಜನರ ಹಿತಕಾಯ ಬೇಕಾದ ವಾಚಮೆನ್ ಅಷ್ಟೇ.ಅಷ್ಟಕ್ಕೇ ಈ ಪರಿ ಹಾರಾಡುವ ಇವರ ಉದ್ದವಾಗಿರೋ ನಾಲಗೆ ಹಾಗು ಬಾಲವನ್ನ ಕತ್ತರಿಸಬೇಕಾದ ಶಿಸ್ತಿನ ಕಮಲಪಕ್ಷದ ವರಿಷ್ಠರು ಬಾಯಿಮುಚ್ಚಿ ಕೊಂಡಿರೋದ್ಯಾಕೋ? ಇನ್ನು ಮಾನ್ಯ ಮುಖ್ಯಮಂತ್ರಿಗಳು ನೊಂದ ಕುಟುಂಬದ ಮಂದಿಯನ್ನು ಕರೆದು ಮಾತನಾಡಿಸುತಾರಂತೆ! ಏನಂತ? ಪ್ರತಿ ದೂರು ಕೊಡದಂತೆ ತಾಕೀತು ಮಾಡೋದಕ್ಕ ಕರೆಸೋದು? ಇಲ್ಲ ಈ ಸಚಿವ ಭೂಪ ಅಲ್ಲಿ ಕ್ಷಮೆ ಕೇಳ್ತಾರ? ಬೀದೀಲಿ ಕಳೆದ ಮಾನಕ್ಕೆ ಮುಚ್ಚುಗೆಯಲ್ಲಿ ಕ್ಷಮೆಯ ನಾಟಕವ? ಇಷ್ಟೊಂದು ಧ್ರಾಷ್ಟ್ಯದಿಂದ ಹದ್ದುಮೀರಿ ವರ್ತಿಸಿದ,ತಮ್ಮ ತಪ್ಪಿಗೆ ಯಾವ ಪಶ್ಚಾತಾಪದ ಎಳೆಯೂ ಇಲ್ಲದ ತಮ್ಮ ಸಂಪುಟ ಸಹೋದ್ಯೋಗಿಯನ್ನ ಅಲುಗಾಡಿಸಲೂ ಆಗದ ನಿಶಕ್ತ ಮುಖ್ಯಮಂತ್ರಿ ಇನ್ನೂ ಹೆಚ್ಚಿಗೆ ಹೇಸಿಗೆ ಹುಟ್ಟಿಸುತ್ತಾರೆ.


ನಾವೆಲ್ಲರೂ ಒಂದು ನಾಗರೀಕ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಎಂಬ ಅರಿವು ಸಚಿವ ಮಹಾಶಯರಿಗೆ ಇದ್ದಂತಿಲ್ಲ.ಲಿಂಗ-ಜಾತಿ-ಮತ-ಅಂತಸ್ತು-ಪ್ರಾದೇಶಿಕತೆಗಳಿಗೆ ಮೀರಿದ ಏಕೈಕ ಕಾನೂನಷ್ಟೇ ಈ ನೆಲದಲ್ಲಿರುವುದು.ಅಥವಾ ಸಚಿವರಿಗೊಂದು-ಶ್ರೀಸಾಮಾನ್ಯನಿಗೊಂದು ಎಂಬ ಎರಡು ಸೆಟ್ ಕಾನೂನು ಕಟ್ಟಳೆಗಳೇನಾದರೂ ಜಾರಿಯಲ್ಲಿವೆಯೆ? ಅಷ್ಟಕ್ಕೂ ನಡು ಹೆದ್ದಾರಿಯಲ್ಲಿ ಬೀದಿ ಪುಂಡನಂತೆ ಸಾಮಾನ್ಯನೊಬ್ಬನ ಮೇಲೆ ತೋಳೇರಿಸಿ ಕೊಂಡು ಹೋಗುವ ಮುಕ್ತ ಅವಕಾಶವನ್ನೇನಾದರೂ ವಿಶೇಷ ಕಾಯ್ದೆಯಡಿ ಮಾನ್ಯ ಬಚ್ಚೆಗೌಡರಿಗೆ ಈ ಮೂರ್ಕಾಸಿನ ಮಂತ್ರಿಗಿರಿ ತಂದು ಕೊಟ್ಟಿದೆಯೇ? ಸದ್ಯ ಜಾರಿಯಲ್ಲಿರುವ ರಾಷ್ಟ್ರೀಯ ಮೋಟಾರು ವಾಹನ ಕಾಯ್ದೆಯಡಿ ಇಲ್ಲದ ವಿಶೇಷ ಮಾನ್ಯತೆಯನ್ನು ಹೊಸತಾಗಿ ನಮ್ಮ ಸಂವಿಧಾನದಲ್ಲೇನಾದರೂ ಕಲ್ಪಿಸಿ ಕೊಡಲಾಗಿದೆಯೇ? ತನ್ನನ್ನು ತಾನು ಅಡ್ವೋಕೇಟ್ ಎಂದೂ; ಕಾನೂನಿನ ವಿಷಯಗಳಲ್ಲಿ ಸರ್ವಜ್ಞನೆಂದೂ ಫೋಸು ಕೊಡುವ ಬಚ್ಚೆಗೌಡರಿಗೆ ಈ ಕಾನೂನು ಸೂಕ್ಷ್ಮದ ಅರಿವೇನಾದರೂ ಇದೆಯೆ?



ಇಷ್ಟೇ ಸಾಲದು ಎಂಬಂತೆ ಸಚಿವರ ಕಾಮಾಲೆ ಕಣ್ಣಿಗೆ ಈ ಅಮಾಯಕ ಭಯೋತ್ಪಾದಕನಂತೆ ಬೇರೆ ಕಾಣಿಸಿದ್ದಾನೆ! ಭಯೋತ್ಪಾದಕರನ್ನು ಗುರುತಿಸುವ ವಿಶೇಷ ಪರಿಣತ ಸೂತ್ರಗಳೇನಾದರೂ ಇದ್ದರೆ ದಯವಿಟ್ಟು ಶ್ರೀಮಾನ್ ಬಚ್ಚೆಗೌಡರು ಕರ್ನಾಟಕದ ಜನತೆಗೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಬೇಕು.."ಅವನು ಕುಡಿದು ಚಾಲನೆ ಮಾಡ್ತಿದ್ದ: ಪದೇ ಪದೇ ನನ್ನ ವಾಹನಕ್ಕೆ ಗುದ್ದಲು ಪ್ರಯತ್ನಿಸಿದ ,ಆಗ ನಾನು ಕೆಳಗಿಳಿದು 'ನೀನು ಮುಸಲ್ಮಾನನೋ? ಇಲ್ಲ ಮಲೆಯಾಳಿಯೋ (!?) ' ಎಂದು ನಯವಾಗಿ ಕೇಳಿದೆ!" ಎಂದಿರುವ ಸಚಿವರು ತಮ್ಮದೇ ಇನ್ನೊಂದು ಹೇಳಿಕೆಯಲ್ಲಿ "ನಾನು ಕಾರಿಂದ ಇಳಿದಿರಲೆ ಇಲ್ಲ , ಹಾಸನದಲ್ಲಿ ಹತ್ತಿದವ ಬೆಂಗಳೂರಲ್ಲೇ ಇಳಿದಿದ್ದು : ದಾರಿ ಮಧ್ಯದಲ್ಲಿ ನನ್ನ ಸಹಾಯಕ ರಾಜಶೇಖರ್ ಹಾಗು ಚಾಲಕ ದೇವದಾಸ್ ಮತ್ತೊಂದು ವಾಹನದ ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದರು,ಆದರೆ ನಾನೇ ಮಧ್ಯ ಪ್ರವೇಶಿಸಿ ಬುದ್ಧಿ ಹೇಳಿ(!) ಕಲಿಸಿದೆ" ಎಂದು ವಿರೋಧಾಭಾಸದ ಹೇಳಿಕೆ ನೀಡುವ ಮೂಲಕ ಕೇಳುವವರ ಕಿವಿಮೇಲೆ ಹೂವಿಟ್ಟಿದ್ದಾರೆ.ಸಚಿವರ ಪ್ರಕಾರ ಆ ಸಮಯದಲ್ಲಿ ಅಲ್ಲಿ ನೆರೆದ ಗುಂಪು ಅವರ ಅಪಾರ ಬೆಂಬಲಿಗರದಂತೆ,ಭೇಷ್! ಬಚ್ಚೆಗೌಡರೆ ನಿಮ್ಮ ಈ ವಿಶ್ವ ಪ್ರಸಿದ್ಧಿಯ ಅರಿವು ಇಲ್ಲಿಯವರೆಗೂ ನಮಗ್ಯಾರಿಗೂ ಇರಲೇ ಇಲ್ಲ.ತಮ್ಮ ಗನ್ ಮ್ಯಾನ್ ಭರತ್ ಅಂಗಿಯ ಕೊರಳು ಪಟ್ಟಿ ಹಿಡಿದು,ನಿಮ್ಮ ಡ್ರೈವರ್ ಹಳೆ ಸಿನೆಮಾದ ತಲೆ ಮಾಸಿದ ಖಳನಟನ ಅಟ್ಟಹಾಸದಲ್ಲಿ ಬಾಕ್ಸರ್ರ್ನಂತೆ ಮುಷ್ಠಿ ಕಟ್ಟಿ ಕೊಂಡು ಭರತರ ಹಲ್ಲುದುರುವಂತೆ ಹೊಡೆದದ್ದು ಕೇವಲ ಚಕಮಕಿಯ? ಭಪ್ಪರೆ,ಇನ್ನು ಥೇಟ್ ಭಬ್ರುವಾಹನನ ಅಪರಾವತಾರದಂತೆ ಅಂಗಲಾಚಿ ಕೊಂಡು ತನ್ನ ಮಗನ ರಕ್ಷಣೆಗೆ ಮೊರೆಯಿಡುತ್ತ ನಿಮ್ಮ ಕಾಲು ಹಿಡಿದ ಲೋಕಪ್ಪ ಗೌಡರನ್ನ ಜಾಡಿಸಿ ಒದ್ದದ್ದು ಕೇವಲ ಪಾದಾಶಿರ್ವಾದವೇ? 'ನೀನು ಮುಸ್ಲೀಮನೋ? ಇಲ್ಲ ಮಲೆಯಾಳಿಯೋ ಟೆರರಿಸ್ಟ್ ತರ ಕಾಣ್ತೀಯ ಎಂದು ನಯವಾಗಿ ತಾವು ಭರತರನ್ನು ಗದರಿದಿರಂತೆ,ಪಾಪ! ಯಾಕೆ ಸ್ವಾಮೀ ತಮ್ಮ ರಾಜ್ಯಭಾರದಲ್ಲಿ ಮುಸ್ಲೀಮರಿಗೂ-ಮಲೆಯಾಳಿಗಳಿಗೂ ಟೆರರಿಸ್ಟ್ ಪಟ್ಟ ಕಟ್ಟಲಾಗಿದೆಯೇ? ಸ್ವಾತಂತ್ರ್ಯ ಭಾರತದ ಅಂಗವಾಗಿರುವ ಕರ್ನಾಟಕದಲ್ಲಿ 'ಸಮೃದ್ಧ' ಆಡಳಿತ ನೀಡುತ್ತಿರುವ ನಿಮ್ಮ 'ಪ್ರಗತಿಪರ' ಸರ್ಕಾರ ಈ ಎರಡು ವರ್ಗಗಳ ಮೇಲೆ ವಿಶೇಷ ನಿರ್ಬಂಧವನ್ನೇನಾದರೂ ಹೇರಿದ್ದರೆಯೇ?


ಹಾಸನದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ನಾಲ್ಕುಪಥದ ರಸ್ತೆಯಲ್ಲಿ ಸದರಿ ಪ್ರಕರಣ ನಡೆದದ್ದು.ಈ ಗೂಂಡ ಸಚಿವರಿಗೆ ಲೇನ್ ಶಿಸ್ತಿನ ಬಗ್ಗೆ ಪ್ರಾಥಮಿಕ ಅರಿವೇನಾದರೂ ಇದೆಯೇನು? ಒಳ ಲೇನಿನಲ್ಲಿ ಗಂಟೆಗೆ ೧೦೦ ಕಿ ಮಿ ಗೆ ಕಡಿಮೆ ಇಲ್ಲದಂತೆ,ಮೂರನೇ ಲೇನಿನಲ್ಲಿ ಗಂಟೆಗೆ ೮೦ ಕಿ ಮಿ ಗೆ ಕಡಿಮೆ ಇಲ್ಲದಂತೆ,ಎರಡನೇ ಲೇನಿನಲ್ಲಿ ೬೦ ಕಿ ಮಿ ಗೆ ಕಡಿಮೆ ಇಲ್ಲದಂತೆ ಹಾಗು ಕಡೆಯ ಲೇನಿನಲ್ಲಿ ಗಂಟೆಗೆ ೪೦ ಕಿ ಮಿ ಮೀರದಂತೆ ವಾಹನದ ವೇಗ ಮಿತಿಯಿರುವುದು ಆ ರಸ್ತೆಯಲ್ಲಿ ಖಡ್ಡಾಯವೆ ಆಗಿರುವಾಗ ಬಚ್ಚೆಗೌಡರ ಗ್ರಧೃ ದೃಷ್ಟಿಗೆ ಅದು ಹೇಗೆ ತಪ್ಪಾಗಿ ಕಂಡಿತು? ಬಹುಷಃ ಅಡ್ವೋಕೇಟ್ ಆಗಿರುವ ಅವರು ಓದಿರುವ ಕಾನೂನಿನ ಪುಸ್ತಕಗಳಲ್ಲಿ ಅದು ಅಪರಾಧದ ಕಲಾಂನೊಳಗೆ ಬರುತ್ತದೋ ಏನೋ? ತಿಳಿದವರಾದ ಅವರು ಅಲ್ಪಜ್ನ್ಯರಾದ ನಮಗೆಲ್ಲ ತಿಳಿಸಿ ಪುಣ್ಯ ಕಟ್ಟಿ ಕೊಳ್ಳಬೇಕಿದೆ.



ಕಟ್ಟಾ ಕಡೆಯದಾಗಿ ಭರತ್ ಕುಡಿದು ಚಾಲನೆ ಮಾಡಿದ್ದರೆ ಎನ್ನುವುದು ಸಚಿವರ ಆರೋಪ..ಹಾಗಿದ್ದಲ್ಲಿ ನೆಲಮಂಗಲ ಪೊಲೀಸ್ ಥಾನೆಯಲ್ಲಿ ಭರತ್ ವಿರ್ರುದ್ಧ ದೂರು ನೀಡಿದಾಗ ವೈದ್ಯಕೀಯ ಪರೀಕ್ಷೆಗೆ ಅವರನ್ಯಾಕೆ ಒಳಪದಿಸಲಿಲ್ಲ ( ಸ್ವತಹ ಮಧುಮೇಹಿ ಯಾಗಿರುವ ಭರತ್ ಗೆ ಆ ಕ್ಷಣ ನಿಜವಾಗಿ ವೈಧ್ಯಕೀಯ ನೆರವು ಬೇಕಿತ್ತು!).ಅಲ್ಲದೆ ಥಾನೆಯಲ್ಲಿ ಅತಿವೇಗದ ಚಾಲನೆಯ ದೂರಷ್ಟೇ ದಾಖಲಾಗಿದೆ ಪಾಪ ವಾಸನೆ ಕಂಡು ಹಿಡಿದ ಸಚಿವರ ಮೂಗಿಗೆ ಬೆಲೆಯೇ ಇಲ್ಲ! (ಸದರಿ ಘಟನೆ ನಡೆದ ಸ್ಥಳ ಬಿಡದಿ ಗ್ರಾಮಾಂತರ ವೃತ್ತ ವ್ಯಾಪ್ತಿಗೆ ಬರುವುದರಿಂದ ಪ್ರಕರಣ ಹಾಗು ದೂರನ್ನು ಕೂದೂರು ಠಾಣೆಗೆ ವರ್ಗಾಯಿಸಲಾಗಿದೆ).ಇತ್ತ ಥಾನೆಯಲ್ಲಿ ಇನ್ನೊಂದು ಸುತ್ತಿನ ಬೆದರಿಕೆ ಎದುರಿಸಿದ ಭರತ್ ರಿಂದ ಅವರು ಮಾಡದ ತಪ್ಪಿಗಾಗಿ ದಂಡವಾಗಿ ರೂ ೩೦೦ ಸುಲಿಯಲಾಗಿದೆ.



ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬದ ಮೇಲೆ ಆಗಾಗ ನೆಪ ಹುಡುಕಿ ಕೊಂಡು ಎರಗಿಸಲು ತಮ್ಮ ಬತ್ತಳಿಕೆಯಲ್ಲಿ ಈ 'ಬಚ್ಚಾಸ್ತ್ರ'ವನ್ನು ಸದಾ ಸನ್ನದ್ಧವಾಗಿ ಇಟ್ಟುಕೊಂಡಿರುವ ಮಾನ್ಯ ಮುಖ್ಯಮಂತ್ರಿ ಬೂಸಿಯರವರ ರಾಜಿನಾಮೆ ಕೇಳುವ ಶತಮಾನದ ಸವಕಲು ಜೋಕ್ ಮಾಡುವ ಉಮೇದು ಇಲ್ಲವಾದರೂ.ಕನಿಷ್ಠಪಕ್ಷ ನೈತಿಕತೆಯ ಆಧಾರದ ಮೇಲೆ ಬಚ್ಚೆಗೌಡರ ರಾಜಿನಾಮೆಯನ್ನೇಕೆ ಪಡೆಯಬಾರದು? ಅಥವಾ ಅಷ್ಟು ಅಧಿಕಾರ ವ್ಯಾಪ್ತಿ ಕುರ್ಚಿಗೆ ಅಂಟಿಕೊಂಡ ಮುಖ್ಯಮಂತ್ರಿಗಳಿಗೆ ಇಲ್ಲವೋ? ಇಂತಹ ಭಂಡರ ನಡುವೆ ಬೆಂಡಾಗಿರುವವ ಮಾತ್ರ ಬಡ ಬೋರೆಗೌಡ.ಓಟು ಕೊಟ್ಟು ಅಯೋಗ್ಯರನ್ನ ಅಧಿಕಾರಕ್ಕೆ ತಂದ ತಪ್ಪಿಗೆ ಇಂತಹ ಕಿರುಕುಳ ಗಳನ್ನೆಲ್ಲ ಅನುಭವಿಸಲೇ ಬೇಕಲ್ಲ.

Monday, August 16, 2010

ಪ್ರತಿಬಿಂಬ

ವಸಂತ ಬರುವ ಮೊದಲು ನೀ ಬಾ,
ಮುಂಜಾನೆಯ ಮೊದಲ ಬೆಳಕು ಮೂಡುವ ಮೊದಲು ನೀನಿಲ್ಲಿ ಬಂದು ಬಿಡು/
ಮತ್ತೆಂದೋ ಬರುವುದು ಈ ಮಾರ್ದವ ಋತು,
ನಿರೀಕ್ಷೆಯ ಆಷಾಢ ಮತ್ತೆ ಕಾಡುವುದರೊಳಗಾಗಿ ದಯಮಾಡಿ ಮರಳಿ ಬಂದುಬಿಡು//

ಮೂಡುತೇನೆ...

ನಿನ್ನನೇ ಕನವರಿಸುವ ನನ್ನೊಡನೆಯೇ ಇರುವೆ ನೀನು,
ಎಂದೆಂದೂ ಮುಗಿಸಲಾಗದ ಮಾತಿನಂತೆ ನನ್ನೊಳಗೆ ನೀನು/
ಮನಸೊಳಗೆ ದುಃಖದ ನೆರೆ ತುಂಬಿ ಬಂದರೂನು, ಕೊಚ್ಚಿ ಹೋಗದೆ...
ಪ್ರವಾಹದ ನಡುವೆ ನಿಂತ ಗಟ್ಟಿ ದ್ವೀಪ ನೀನು//


ಸತ್ತರೂ ನಾ ನಿನ್ನ ನೆನಪಲ್ಲಿ ಕಾಡುತೇನೆ,
ನಿನ್ನ ಸಂತಸದ ಕಣ್ಣೀರಲಿ ಪ್ರತಿಬಿಂಬವಾಗಿ ಮೂಡುತೇನೆ/
ನಿನ್ನುಸಿರುಗಳ ನಡುವಿನ ಅಂತರದಲಿ,
ಅಳಿಸಲಾಗದ ಚಿರವಿರಹದ ಹೆಜ್ಜೆಗುರುತಾಗಿ ಉಳಿಯುತೇನೆ//

ಹೂ ಕಥೆ...

ಇನ್ನೇನು ಹತ್ತು ದಿನದಲ್ಲಿ ನನಗೆ ಇಪ್ಪತೆಂಟು ಸಂವತ್ಸರ ಭರ್ತಿಯಾಗುತ್ತದೆ.೧೯೮೨ರ ಆಗಷ್ಟ್ ೨೬ರಿಂದ ಇಲ್ಲಿಯವರೆಗೆ ಕಳೆದಿರುವ ಹತ್ತು ಸಾವಿರದ ಇನ್ನೂರ ಹತ್ತು ದಿನಗಳಲ್ಲಿ ಅತಿಹೆಚ್ಚು ದಿನಗಳನ್ನು ನಾನು ಬೆಂಗಳೂರಿನಲ್ಲೇ ಕೆಳೆದಿದ್ದೇನೆ.೧೯೯೯ರ ಈ ಊರಿಗೆ ಸೇರಿ ಹೋಗಿದ್ದು,ಬರಿಗೈಯಲ್ಲಿ ಏನೇನೂ ಇಲ್ಲದೆ ಅನ್ನ -ವಿದ್ಯೆ ಅರಸಿ ಇಲ್ಲಿಗೆ ಬಂದ ನನ್ನ ಬಗ್ಗೆ ನಿರೀಕ್ಷೆಗೂ ಮೀರಿ ಈ ಊರು ಉದಾರವಾಗಿದೆ.ಇದೀಗ ನನ್ನೂರು,ನಾನೀಗ ಹದಿನಾರಾಣೆ ಬೆಂಗಳೂರಿಗ ಎನ್ನುವ ಹೆಮ್ಮೆ ನನಗಿದೆ.ಬಹುಷಃ ನನ್ನ ಕೊನೆಯುಸಿರಿರುವವರೆಗೂ ನಾನಿಲ್ಲಿಯೇ ಇದ್ದೇನು."ಬೆಂಗಳೂರು ನನ್ನ ಮೊದಲ ಮನೆ: ಕೊಲಂಬೊ ಎರಡನೆಯದು" ಎಂದು ನಾನು ಆಗಾಗ ಹೇಳುವುದಿದೆ.ಬೆಂಗಳೂರಿನಷ್ಟೇ ನನ್ನ ಬೆಳವಣಿಗೆಗಳಿಗೆ ಪೋಷಕವಾಗಿ ನೀರೆರೆದ ಕೊಲೊಂಬೋ ಕೂಡ ನನ್ನ ಮನಸಿಗೆ ಆಪ್ತ.



ನನ್ನ ಬದುಕಿನ ಆರಂಭದ ಹತ್ತು ವರ್ಷಗಳನ್ನ ತೀರ್ಥಹಳ್ಳಿಯಲ್ಲಿ ಕಳೆದಿದ್ದೆ.ಸೊಪ್ಪುಗುಡ್ಡೆಯ ನಾಲ್ಕನೇ ತಿರುವಿನಲ್ಲಿದ್ದ ೪೦*೬೦ರ ಜಾಗದೊಳಗೆ ಇಷ್ಟು ಸುದೀರ್ಘ ಸಮಯ ಕಳೆಯುವ ಅನಿವಾರ್ಯತೆಯೂ ನನಗಿತ್ತು.ನನ್ನ ಹೆತ್ತಮ್ಮನ ತವರಾದ ಅಲ್ಲಿಯೇ ನಾನು ಹುಟ್ಟಿದ್ದು.೧೯೮೦ರಲ್ಲಿ ನನ್ನ ಹೆತ್ತವರ ಮದುವೆ ತೀರ್ಥಹಳ್ಳಿಯ ಸರಕಾರಿ ನೌಕರರಭವನದಲ್ಲಿ ಆಯಿತು.ನೋಡಲು ಸದೃಢ ಕಾಯನೂ ಸುರಸುಂದರಾಂಗನೂ ಆಗಿದ್ದ ನಮ್ಮಪ್ಪನಿಗೆ ವಿದ್ಯೆ ನಾಸ್ತಿ.ಅವರ ಅಪ್ಪ ಅವರಿನ್ನೂ ಚಿಕ್ಕವರಾಗಿರುವಾಗಲೇ ಹಾವು ಕಚ್ಚಿ ಸತ್ತು ಹೋಗಿದ್ದು ನನ್ನಪ್ಪನೂ ಸೇರಿದಂತೆ ಮೂರು ಗಂಡು ಮಕ್ಕಳು ಹಾಗು ಕಡೆಯದೊಂದು ಹೆಣ್ಣು ಅಮ್ಮ ಸಂಜೀವಮ್ಮನ ಪೋಷಣೆಯಲ್ಲಿ ಬೆಳೆದವು.ಆದರೆ ಗಂಡು ದಿಕ್ಕಿಲ್ಲದ ಮನೆಯಲ್ಲಿ ಅರಸನ ಅಂಕೆಯಿಲ್ಲದೆ ಬೆಳೆದ ಮನೆಯ ಹಿರಿಮಗ ನಮ್ಮಪ್ಪ ನಾಲ್ಕನೇ ಕ್ಲಾಸಿಗೂ ಸರಿಯಾಗಿ ಮಣ್ಣು ಹೊರದೆ ಪೋಲಿ ಅಲೆದುಕೊಂಡು ಇನ್ನೂ ಹನ್ನೆರಡು ವರ್ಷ ಮೀರುವ ಮೊದಲೇ ಬೀಡಿಯ ಚಟಕ್ಕೆ ಬಿದ್ದು,ಹದಿನೈದಾಗುವಾಗ ಕುಡಿತವನ್ನೂ ಕಲಿತು ಕೆಲಸ ಅರಸಿ ಮಾಯಾನಗರಿ ಬೊಂಬಾಯಿಗೆ ಹೋಗಿದ್ದರು.ಮದುವೆಗೆ ಐದು ವರ್ಷ ಮೊದಲೇ ಬೊಂಬಾಯಿ ಸೇರಿದ್ದ ಅವರು ತಮ್ಮ ಪುಷ್ಟಕಾಯದ ದೆಸೆಯಿಂದ ಮೊದಲು ನೈಟ್ ಕ್ಲಬ್ ಒಂದರಲ್ಲಿ ಬೌನ್ಸರ್ ಆಗಿದ್ದರು.ಆದರೆ ಆ ಕೆಲಸ ಮನಸಿಗೆ ಹಿಡಿಸದೆ ಹೋಟೆಲೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿ ಒಳ್ಳೆಯ ಪಾಕಪ್ರವೀಣರಾದರು.ಅವರಿಗೆ ಸಂಪೂರ್ಣ ಒಲಿದಿದ್ದ ಕಲೆ-ವಿದ್ಯೆ ಎಂದರೆ ಬಹುಷಃ ಅದೊಂದೆ.ಇತ್ತ ನನ್ನ ಹೆತ್ತಮ್ಮನೂ ಆಗತಾನೆ ಎಸ್ ಎಸ್ ಎಲ್ ಸಿ ಯಲ್ಲಿ ಡುಮ್ಕಿ ಹೊಡೆದು ತ್ರಿವೇಣಿ,ಎಂ ಕೆ ಇಂದಿರಾ,ಸಾಯಿಸುತೆ,ಹೆಚ್ ಜಿ ರಾಧಾದೇವಿ ಮುಂತಾದವರ ವಿಶ್ವವಿದ್ಯಾಲಯಕ್ಕೆ ತಾಜಾ ಅರ್ಜಿ ಹಾಕಿಕೊಂಡು ಕಾದಂಬರಿ ಗೀಳಿಗೆ ಬಿದ್ದಿದ್ದರು.ಮನೆಗೆ ಹಿರಿ ಮಗಳು ಬೇರೆ ;ವಿಪರೀತ ಹಟಮಾರಿ ಸ್ವಭಾವ.ಹೀಗಿದ್ದರೂ ನನ್ನಜ್ಜನ ಪ್ರೀತಿಯ ಮಗಳು.ಇಂತಿದ್ದ ಅಹಲ್ಯ ಎಂಬ ಕನ್ಯೆಯನ್ನು ಮುಂಬೈ ಸೇರಿದ್ದಾನೆ ಎಂಬ ಏಕೈಕ ಅರ್ಹತೆಯ ಮನ್ಮಥರೂಪಿ ವರಮಹಾಶಯ ಮಂಜುನಾಥ ಪಾಣಿಗ್ರಹಣ ಮಾಡಿಕೊಂಡ.ಮದುವೆ ಮಾಡಿಕೊಂಡಷ್ಟೇ ಬೇಗ ಹೆಂಡತಿಯನ್ನು ತವರಲ್ಲೇ ಬಿಟ್ಟು ಬೊಂಬಾಯಿ ಸೇರಿಯೂ ಕೊಂಡ.ಆದರೆ ಅಮ್ಮನ ( ಅಜ್ಜಿಯನ್ನು ನಾನು ಅಮ್ಮ ಎನ್ನುತ್ತೇನೆ) ಮುತುವರ್ಜಿಯಿಂದ ಮಗಳು ಗಂಡನ ಬಳಿ ಬೊಂಬಾಯಿ ತಲುಪಿಕೊಂಡಳು.ಇವಳಿಗೂ ಬೊಂಬಾಯಿಯಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಯೋಜನೆಗಳಿದ್ದವೇನೋ : ಆದರೆ ದುರಾದೃಷ್ಟವಶಾತ್ 'ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು' ಎನ್ನುವಂತೆ ಮೈ ಮರೆತ ಕ್ಷಣವೊಂದರಲ್ಲಿ ಅವರ ಮುಂದಿನ ಎಲ್ಲ ಬೊಂಬಾಯಿ ಕೇಂದ್ರಿತ ಕನಸುಗಳಿಗೆ ಸರಾಗವಾಗಿ ಕೊಳ್ಳಿಯಿಡುವಂತೆ ನಾನು ಮೂಡಿದೆ! ಸರಕಾರೀ ಸಂತಾನ ನಿಯಂತ್ರಣ ಯೋಜನೆಗಳ ಬಗ್ಗೆ ಅವರಿಬ್ಬರಿಗೂ ( ವಿಶೇಷವಾಗಿ ನನ್ನ ಹೆತ್ತಮ್ಮನಿಗೆ!) ಮಾಹಿತಿಯ ಕೊರತೆ ಇತ್ತೇನೋ,ಇಲ್ಲದಿದ್ದಲ್ಲಿ ಖಂಡಿತ ನನ್ನಂತ ಅನಪೇಕ್ಷಿತ ತಪ್ಪು ಘಟಿಸುವ ಸಾಧ್ಯತೆ ಇರುತ್ತಿರಲಿಲ್ಲ.ಪ್ರಪಂಚದಲ್ಲಿ ಇನ್ನೊಬ್ಬ idiot ಕಡಿಮೆಯಾಗಿರುತ್ತಿದ್ದ ಅನ್ನಿಸುತ್ತೆ.


ಬಸುರಿ ಹೆಂಡತಿಯನ್ನು ಹೆರಿಗೆಗಾಗಿ ತವರಿಗೆ ಸಾಗ ಹಾಕಿದ ಮಹಾಶಯ ಮಗುವಿನ ಮುಖನೋಡಲು ಅವಸರಾವಸರವಾಗಿ ಓಡೋಡಿ ಬಂದ ಪಾಪ,ಕೇವಲ ಐದೂವರೆ ವರ್ಷದಷ್ಟು ತಡವಾಗಿ! ಅಲ್ಲಿಯವರೆಗೂ ನನ್ನ ಪುಟ್ಟ ಪ್ರಪಂಚದಲ್ಲಿ ಅಪ್ಪನೆಂಬ ಪ್ರಾಣಿಯ ಕಲ್ಪನೆಯೂ ಇರಲಿಲ್ಲ.ಶಿಶುವಿಹಾರದಲ್ಲಿ ಸಹಪಾಟಿಗಳ ಅಪ್ಪಂದಿರನ್ನ ಕಾಣುತ್ತಿದ್ದೆನಾದರೂ ಈ 'ಅಪ್ಪ' ಎಂಬ ವ್ಯಕ್ತಿ ಕೇವಲ optionel ಎಂಬ ಅಭಿಪ್ರಾಯ ನನ್ನದಾಗಿದ್ದ ದಿನಗಳವು.ಅಲ್ಲದೆ ನನ್ನ ಹೆತ್ತಮ್ಮನೂ ಸೇರಿದಂತೆ ಚಿಕ್ಕಮಂದಿರು-ಮಾವಂದಿರು ಎಲ್ಲ ಅಜ್ಜನನ್ನು ಅಪ್ಪ ಎಂದು ಕರೆಯುವಾಗ ಕೂಡು ಕುಟುಂಬದ ಮಗು ಸುಲಭವಾಗಿ ಹಿರಿಯರನ್ನು ಕಂಡು ಅನುಕರಿಸುವುದನ್ನು ಕಲಿಯುವ ಹಾಗೆ ನಾನೂ ಅಜ್ಜನನ್ನೇ ಅಪ್ಪ ಎಂದು ಕರೆಯುತ್ತಿದ್ದೆ.ಆದರೆ ೨೫ಕ್ಕೆ ಸರಿ ಸುಮಾರು ೨೪ರ ಸಮೀಪವೇ ಎಲ್ಲ ವಿಷಯಗಳಲ್ಲೂ ಗಳಿಸಿರುತ್ತಿದ್ದ ನನ್ನ ಮಾರ್ಕ್ಸ್ ಕಾರ್ಡಿನಲ್ಲಿ (ನಾನು ಓದಿದ್ದು ಒಂದು ಸ್ವದೇಶಿ ಖಾಸಗಿಶಾಲೆಯಲ್ಲಿ, ಇಲ್ಲಿ ಶಿಶುವಿಹಾರಕ್ಕೂ ಪರೀಕ್ಷೆಗಳಿರುತ್ತಿದ್ದವು!) ತಂದೆಯ ಹೆಸರಿರುವ ಕಡೆ ನಾರಾಯಣ ಹೆಗಡೆ (ನನ್ನಜ್ಜ) ಎಂದಿರುವ ಬದಲು ಮಂಜುನಾಥ ಹೆಗಡೆ ( ನನ್ನಪ್ಪ) ಎಂಬ ಹೆಸರಿರುವುದನ್ನು ಕಂಡು ಗೊಂದಲವಾಗುತ್ತಿತ್ತು.


ಹೀಗೆ ತನ್ನ ಕನಸಿನ ವೈವಾಹಿಕ ಬದುಕು ಹಳಿತಪ್ಪಿದ ಸಿಟ್ಟಿಗೆ ನನ್ನ ತಪ್ಪಲ್ಲದ ಸಣ್ಣತಪ್ಪುಗಳಿಗೂ ಕ್ರೂರವಾಗಿ ಶಿಕ್ಷೆ ಕೊಡುತ್ತಿದ್ದ ನನ್ನ ಹೆತ್ತಮ್ಮನಿಂದ ಬಹುತೇಕ ದೂರವಿರೋದೆ ನನಗಿಷ್ಟವಾಗುತ್ತಿತ್ತು.ಹೀಗಾಗಿ ಅಮ್ಮನಿಗೆ ಹೆಚ್ಚು ಅಂಟಿ ಬೆಳೆದೆ.ಉಳಿದಂತೆ ನಾನು ಅಂತರ್ಮುಖಿಯಾಗಿಯೇ ಬೆಳೆದೆ ;ಆ ವಯಸ್ಸಿಗೆ ಮೀರಿದ ಏಕಾಂತಪ್ರಿಯತೆಯನ್ನು ರೂಢಿಸಿಕೊಂಡೆ.ಪಟ್ಟು ಬಿದ್ದಷ್ಟೂ ಹೆಚ್ಚು ಹಟಮಾರಿಯಾದೆ.ಆಗೆಲ್ಲ ನನ್ನ ಆತ್ಮ ಸಂಗಾತಿಗಳಾಗಿದ್ದು ಕೊಟ್ಟಿಗೆಯಲ್ಲಿದ್ದ ಕರುಗಳು ಹಾಗು ಮನೆಯ ಆವರಣದಲ್ಲಿದ್ದ ನಾಲ್ಕು ಮರಗಳು!

ಮನೆಯೆದುರು ಅಂಗಳದಲ್ಲಿ ಒಂದು ಮೂಲೆಯಲ್ಲಿ ಪಾರಿಜಾತ,ಇನ್ನೊಂದು ಮೂಲೆಯಲ್ಲಿ ರತ್ನಗಂಧಿ ಮರಗಳಿದ್ದವು.ಹಿಂದಿನ ಆವರಣದಲ್ಲಿ ಒಂದು ಪಪ್ಪಾಯಿ ಮರ ಇನ್ನೊಂದು ತೆಂಗಿನ ಮರಗಳಿದ್ದವು.ಈ ತೆಂಗಿನಮರದ ಬಗ್ಗೆ ನನಗೆ ವಿಶೇಷ ಮಮತೆ.ನಾನು ಹುಟ್ಟಿದ ಖುಷಿಗಾಗಿ ನನ್ನಜ್ಜ ಅದೇ ದಿನ ತಂದು ನೆಟ್ಟ ಸಸಿಯಂತೆ ಅದು,ಅವರು ಹಾಗೆ ಹೇಳುವಾಗ ನನಗದು ಹುಟ್ಟಿದವನನ್ನು ಕಂಡಂತೆ ಅನ್ನಿಸುತ್ತಿತ್ತು.ನನ್ನಷ್ಟೇ ವಯಸ್ಸಾಗಿದೆ ಅದಕ್ಕೆ.ಆದರೆ ಹದಿನೈದು ವರ್ಷ ತುಂಬುವ ತನಕವೂ ಕಾಯಿ ಬಿಡದೆ ನನ್ನ ಹೊರತು ಉಳಿದೆಲ್ಲರಿಂದಲೂ ಛಿ ಥೂ ಎಂದು ಉಗಿಸಿಕೊಂಡು ;ಒಂದು ಹಂತದಲ್ಲಿ ಬರಡು ಮರ ಎಂಬ ಆರೋಪ ಹೊತ್ತು,ನನ್ನ ವಿರೋಧವನ್ನೂ ಲೆಕ್ಖಿಸದೆ ಕೊಡಲಿಗೆ ಆಹುತಿಯಾಗಲಿದ್ದುದು ಅವಾಗಷ್ಟೆ ಹಿಂಗಾರ ಕುಡಿಯೊಡೆದು ಕಡೆ ಕ್ಷಣದಲ್ಲಿ ಜೀವ ಉಳಿಸಿಕೊಂಡಿತ್ತದು.ಈಗ ಭರಪೂರ ಫಲ ನೀಡುತ್ತಿದ್ದು ಅಂದು ತೆಗಳುತ್ತಿದ್ದ ಸ್ವಾರ್ಥಿಗಳಿಂದಲೇ; ಇಂದು ಮೆಚ್ಚುಗೆ ಗಿಟ್ಟಿಸುತ್ತ ಅವರ ಜೇಬನ್ನೂ ತುಂಬುತ್ತಿದೆ! ಅದನ್ನು ಬಿಟ್ಟರೆ ನನಗೆ ತೀರ ಇಷ್ಟವಾಗುತ್ತಿದ್ದುದು ಪಾರಿಜಾತದ ಮರ.ಇವತ್ತಿಗೂ ಅಷ್ಟೊಂದು ಸೊಗಸಾದ ಹೂವನ್ನ ನಾನು ಕಂಡಿಲ್ಲ.ನನಗಿಷ್ಟವಾದ ಹೂವ್ಯಾವುದು ಎಂಬ ಪ್ರಶ್ನೆಗೆ ಗುಮಾನಿಯೆ ಇಲ್ಲದೆ ಪಾರಿಜಾತ ಅನ್ನುತ್ತೇನೆ.ಅದರ ಪರಿಮಳದಲ್ಲೊಂದು ಮೋಹಕತೆಯಿದೆ.


ಈ ಪಾರಿಜಾತ ಭೂಮಿಗೆ ಹೇಗೆ ಬಂತು ಎನ್ನುವ ಬಗ್ಗೆ ಒಂದು ಸ್ವಾರಸ್ಯಕರವಾದ ಪೌರಾಣಿಕ ಕಥೆಯಿದೆ.ಆದರೆ ಭಾಗವತದಲ್ಲೂ ಇಲ್ಲವೇ ಮಹಾಭಾರತದಲ್ಲೂ ಕೃಷ್ಣ ತನ್ನ ಜೀವಮಾನದಲ್ಲಿ ಸ್ವರ್ಗಕ್ಕೆ ಹೋದ ಪ್ರಸ್ತಾಪ ಎಲ್ಲೂ ಬಾರದ ಕಾರಣ ಇದೊಂದು ದಂತ ಕಥೆಯಿರಬೇಕು ಅನ್ನಿಸುತ್ತೆ.ಶ್ರೀಕೃಷ್ಣನೊಮ್ಮೆ ಇಂದ್ರನ ಅಮರಾವತಿಗೆ ಹೋಗಿ ದೇವತೆಗಳ ಆದರಾತಿಥ್ಯವನ್ನು ಪಡೆದಿದ್ದನಂತೆ.ದೇವಲೋಕದ ಕಾಮಧೇನು (ದನ), ಕಲ್ಪವೃಕ್ಷ (ತೆಂಗಿನ ಮರ), ಐರಾವತ (ಬಿಳಿಯಾನೆ) ಯಂತೆ ಪಾರಿಜಾತವೂ ದೇವಪುಷ್ಪವಾಗಿತ್ತಂತೆ (ಅಂದರೆ ಇಂದ್ರನ ರಾಣಿ ಶಚಿಗೂ...ಅವನ ಸೂಳೆಯರಾದ ರಂಭೆ,ಮೇನಕೆ,ತಿಲೋತ್ತಮೆ,ಊರ್ವಶಿ,ಘ್ರತಾಚಿ ಮುಂತಾದವರಿಗಷ್ಟೇ ಸೀಮಿತವಾಗಿದ್ದ ಹೂವದು) ಅದೊಮ್ಮೆ ಅರಳಿದರೆ ಬಾಡುವ ಮಾತೆ ಇರಲಿಲ್ಲವಂತೆ.ಶ್ರೀಕೃಷ್ಣ ಮರಳಿ ಮನೆಗೆ ಹೊರಡುವಾಗ ಪತ್ನಿ ರುಕ್ಮಿಣಿ ಆಸೆಯಿಂದ ಹೇಳಿ ಕಳಿಸಿದ್ದನ್ನು ನೆನಪಿಸಿಕೊಂಡು ಅವಳಿಗಾಗಿ ಇಂದ್ರನಿಂದ ಕೇಳಿ ಪಡೆದ ನಾಲ್ಕಾರು ಪಾರಿಜಾತದ ಹೂಗಳನ್ನು ತನ್ನ ಉತ್ತರೀಯದ ಅಂಚಿಗೆ ಕಟ್ಟಿಕೊಂಡು ಮರಳಿ ಬಂದನಂತೆ.ಬಂದವ ರುಕ್ಮಿಣಿಗೆ ಹೂವು ಮುಟ್ಟಿಸಿ ಸತ್ಯಭಾಮೆಯ ಬಿಡಾರಕ್ಕೆ ಬಂದ.ಅಲ್ಲಿ ಅವನ ಉತ್ತರೀಯಕ್ಕೆ ಅಂಟಿದ್ದ ಪಾರಿಜಾತದ ಸೌಗಂಧಕ್ಕೆ ಮರುಳಾದ ಅವಳು ಅವಳಿಗಾಗಿಯೇ ಇವನು ತಂದಿದ್ದ ಸೌಗಂಧಿಕ ಪುಷ್ಪ,ಕಾಮಧೇನುವಿನ ಹಾಲು ಇವನ್ನೆಲ್ಲ ಎಡಗೈಯಲ್ಲೂ ಮುಟ್ಟದೆ ಏನೋ ವಿಶೇಷವಾದದ್ದನ್ನ ನನಗೆ ತಾರದೆ ವಂಚಿಸಿದ್ದಿ ಎಂದು ಸವತಿ ಮಾತ್ಸರ್ಯದಿಂದ ರಂಪ ಮಾಡಿದಳಂತೆ! ಅಷ್ಟೇ ಅಲ್ಲದೆ ಅದೊಂದು ಹೂವೆಂದು ತಿಳಿದೊಡನೆ ನನಗದರ ಮರವೇ ಬೇಕೆಂದು ಹಠಮಾಡಿದಳಂತೆ?! ಇದರಿಂದ ರೋಸತ್ತ ಶ್ರೀಕೃಷ್ಣ ಪರಮಾತ್ಮ ಮರಳಿ ಸ್ವರ್ಗಕ್ಕೆ ಹೋಗಿ,ಇಂದ್ರನಿಗೆ ವಿಷಯ ಅರುಹಿ ಹೂವಿನ ಗಿಡ ತಂದು ಭಾಮೆಗೆ ಕೊಟ್ಟ ನಂತರವೇ ಅವಳ ಕೋಪ ಶಮನ ಆಯಿತಂತೆ.ಇಷ್ಟೆಲ್ಲಾ ರಣರಂಪಕ್ಕೆ ಕಾರಣವಾದ ಪಾರಿಜಾತಕ್ಕೆ ಇನ್ನು ಮೇಲೆ ಅರಳಿದಷ್ಟೇ ವೇಗವಾಗಿ ಬಾಡಿಯೂ ಹೋಗು, ನಿನ್ನ ಮೈ ಮೇಲೆ ಧಾರಾಳವಾಗಿ ಹುಳು-ಹುಪ್ಪಡಿಗಳು ಮನೆ ಮಾಡಲಿ ಎಂಬ ಘೋರ ಶಾಪ ಕೊಟ್ಟನಂತೆ ಕೃಷ್ಣ (ಇದ್ಯಾವ ಸೀಮೆ ನ್ಯಾಯ ಸ್ವಾಮಿ? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ! ಅಲ್ಲ ಸತ್ಯಭಾಮೆಯ ಮುಂದೆ ಕುನ್ನಿಯಂತೆ ಬಾಲಮುದುರಿ ಕೊಂಡಿದ್ದ ಹೆಂಡತಿ ಗುಲಾಮ ಕೃಷ್ಣ [ಇವ ಜಗತ್ ರಕ್ಷಕ ಬೇರೆಯಂತೆ,ಥೂ ಅದ್ಬೇರೆ ಕೇಡು ಆ ಕರಿ ಮುಖಕ್ಕೆ] ಏನೂ ತಪ್ಪರಿಯದ ಪಾಪದ ಪಾರಿಜಾತಕ್ಕೆ ಭೀಕರ ಶಾಪ ಕೊಟ್ಟ) ಹೀಗೆ ನೆಲ ಸೇರಿದ ಶಾಪಗ್ರಸ್ತ ಪಾರಿಜಾತಕ್ಕೆ ಮರಳಿ ದೇವಲೋಖದ ಪ್ರವೇಶ ಸಿಗಲಿಲ್ಲವಂತೆ.ಇಂದೂ ಕೂಡ ಅದಿರುವ ಮನೆಯಲ್ಲಿ ಗಂಡ-ಹೆಂಡಿರಲ್ಲಿ ಜಗಳವಾಗಿಯೇ ತೀರುತ್ತದೆ ಎನ್ನುವುದು ಪ್ರತೀತಿ.
{ನಾಳೆಗೆ ಮುಂದುವರೆಸುವೆ}

Sunday, August 15, 2010

ರೇಡಿಯೊ ಪುರಾಣ..

ನಮ್ಮ ಮನೆಯಲ್ಲಿದ್ದದ್ದು ದೈತ್ಯ ಗಾತ್ರದ ಬುಶ್ ನಿರ್ಮಿತವಾಗಿದ್ದ ರೇಡಿಯೊ.ಆಗಿನ ಕಾಲದಲ್ಲಿ ರೇಡಿಯೊ ಒಂದು ಐಶಾರಾಮದ ಸಲಕರಣೆಯಾಗಿತ್ತು ಹಾಗು ಮನೆಯಲ್ಲಿ ಅದನ್ನಿರಿಸಿ ಕೊಳ್ಳುವುದು ಒಂದು ಪ್ರತಿಷ್ಠೆಯ ಸಂಗತಿಯಾಗಿತ್ತು.ಸಾಲದ್ದಕ್ಕೆ ರೇಡಿಯೊ ಇರಿಸಿಕೊಳ್ಳ ಬಯಸುವವರು ಸ್ಥಳಿಯಾಡಳಿತಗಳಾದ ಗ್ರಾಮಪಂಚಾಯತ್,ಪುರಸಭೆ,ನಗರಸಭೆ ಯಾವುದಾದರೊಂದರಿಂದ ಪರವಾನಗಿ ಪಡೆಯುವುದು ಖಡ್ಡಾಯವಾಗಿತ್ತು ಅದಕ್ಕಾಗಿ ಪ್ರತಿ ವರ್ಷವೂ ನಿಗದಿತ ಶುಲ್ಕ ಕಟ್ಟಿ ಪರವಾನಗಿಯನ್ನ ನವೀಕರಣ ಮಾಡಿಸಿ ಕೊಳ್ಳಬೇಕಿತ್ತು.( ಅಂತಹದ್ದೊಂದು ಲೈಸನ್ಸ್ ಪ್ರತಿಯನ್ನ ಅಜ್ಜನ ಹಳೆ ಕಡತಗಳಲ್ಲಿ ಕಂಡಿದ್ದೇನೆ).ಆಗೆಲ್ಲ ಬುಶ್,ಮರ್ಫಿ,ಫಿಲಿಪ್ಸ್,ಸೋನಿಗಳದ್ದೆ ರಾಜ್ಯಭಾರ.ದುಬಾರಿಯಾದ ಸೋನಿ-ಫಿಲಿಪ್ ಸುಲಭವಾಗಿ ಸಿಗದ ಕಾರಣ :ರಿಪೇರಿಗೆ ಅಗತ್ಯವಾದ ಬಿಡಿ ಭಾಗಗಳು ಸುಲಭವಾಗಿ ಸಿಗುತ್ತಿದ್ದರಿಂದ ಬುಶ್ ಹಾಗು ಮರ್ಫಿ ಅತಿ ಹೆಚ್ಚು ಜನಪ್ರಿಯವಾಗಿದ್ದವು



.ಈ ರೇಡಿಯೊ ನಮ್ಮ ಮನೆಗೆ ಬಂದ ಹಿನ್ನೆಲೆ ಹೀಗಿದೆ.ವಿಧುರನಾಗಿದ್ದ ನನ್ನಜ್ಜ ಆಗಷ್ಟೇ ನನ್ನಜ್ಜಿಯನ್ನ ಮರು ಮದುವೆಯಾಗಿದ್ದರು.ದಕ್ಷಿಣಕನ್ನಡದ ಮೂಡುಬಿದಿರೆ ಸಮೀಪದ ಸಾಗಿನಬೆಟ್ಟು ನನ್ನಜ್ಜಿಯ ಮನೆ.ಅಲ್ಲಿ ಕೂಡು ಕುಟುಂಬದಲ್ಲಿ ಆಡಿ ಬೆಳೆದಿದ್ದ ಅವರಿಗೆ ಇಲ್ಲಿ ದೂರದ ತೀರ್ಥಹಳ್ಳಿಯಲ್ಲಿ ಹೊಸತಾಗಿ ಸಂಸಾರ ಶುರು ಮಾಡಿದಾಗ ಇನ್ನೂ ಹದಿನೇಳರ ಹರೆಯ.ಇಲ್ಲಿ ವಿಪರೀತ ಒಂಟಿತನ ಕಾಡಿರಬೇಕು.ಅಜ್ಜನಿಗೂ ಡ್ರೈವರ್ ಕೆಲಸದ ಮೇಲೆ ಆಗಾಗ ಹೊರ ಹೋಗಬೇಕಿರುತ್ತಿದ್ದರಿಂದ ಹೊಸ ಹೆಂಡತಿಯ ಒಂಟಿತನ ಕಳೆಯಲು ಅವರು ತಂದುಕೊಟ್ಟದ್ದೆ ಈ ರೇಡಿಯೊ.ಅವರ ಮೊತ್ತ ಮೊದಲ ಪ್ರೇಮದ ಕಾಣಿಕೆಯದು! ಆ ಕಾಲಕ್ಕೆ ದುಬಾರಿಯೂ-ದುಂದುವೆಚ್ಚವೂ ಅನ್ನಿಸಬಹುದಾಗಿದ್ದ ನೂರೈವತ್ತು ರುಪಾಯಿ ಮರುಯೋಚಿಸದೆ ಖರ್ಚು ಮಾಡಿ ಅಜ್ಜ ಆ ರೇಡಿಯೊವನ್ನ ನಮ್ಮ ಮನೆ ತುಂಬಿಸಿದ್ದರು.ಹೀಗೆ ೧೯೬೧ರ ಆಗಷ್ಟ್ ತಿಂಗಳಲ್ಲಿ ನಲವತ್ತೊಂಭತ್ತು ವರ್ಷಗಳ ಹಿಂದೆ ಒಬ್ಬ ಸದಸ್ಯನಾಗಿ ರೇಡಿಯೊ ನಮ್ಮ ಮನೆಯೊಳಗೆ ಅದಕ್ಕಾಗಿಯೇ ಮಾಡಿರಿಸಿದ್ದ ಗೂಡು ಸೇರಿತು.


ಈ ರೇಡಿಯೋಗೊಂದು ಬಾಲಂಗೋಚಿಯಾಗಿ ಜೊತೆಗೊಂದು ಆಂಟೆನ ಕೂಡ ಬಂದಿತ್ತು.ನೋಡಲು ಬಲೆಬಲೆಯ ಎರಡು ಮೀಟರ್ ಉದ್ದದ ಕೊಳವೆಯಂತದ್ದು ಅದು.ಮನೆ ಪಕ್ಕದ ಓಣಿಯಲ್ಲಿ ಬಟ್ಟೆ ಹರವಲು ಕಟ್ಟಿದ್ದ ತಂತಿಗಳಿಂದ ಸ್ವಲ್ಪವೇ ಮೇಲೆ ಅದನ್ನು ಎರಡು ಪಕ್ಕಾಸುಗಳ ನಡುವೆ ಬಿಗಿದು ಕಟ್ಟಲಾಗಿತ್ತು.ಅದರ ಒಂದು ಮೂಲೆಯಿಂದ ಒಂದು ವಯರ್ ಮನೆಯೊಳಗೆ ಸಾಗಿ ರೇಡಿಯೊ ಒಳಗೆಲ್ಲೋ ಅಂತರ್ಧನಾಗುತ್ತಿತ್ತು.ಅದಿಲ್ಲದೆ ರೇಡಿಯೊಗೆ ಸ್ಪಷ್ಟ ಸಿಗ್ನಲ್ ಸಿಗುತ್ತಲೇ ಇರಲಿಲ್ಲ.


ಇನ್ನು ರೇಡಿಯೊದ ದೇಖಾರೇಕಿಯೋ...ವಿಶ್ವಸುಂದರಿಯಷ್ಟೇ ಮುತುವರ್ಜಿ ವಹಿಸಬೇಕು.ಆದರಡಿಗೊಂದು ಮೆತ್ತನೆ ಹಾಸು,ತಲೆ ಮೇಲೆ ಬೆನಜಿರ್ ಭುಟ್ಟೋನಂತೆ ಶಾಲು ಸುತ್ತಿ ಸದಾ ಧೂಳು ಕೂರದಂತೆ ಒರೆಸಿಡಲಾಗುತ್ತಿತ್ತು.ದೊಡ್ಡ ಮರದ ಫ್ರೇಮಿನ ಅದರ ಕೆಳಗಣ ಭಾಗದ ಎರಡೂ ಪಕ್ಕಗಳಲ್ಲಿ ಎರಡು ತಿರುಗಣೆ ಸ್ವಿಚ್ಚುಗಳು,ಅನಂತ್ ಕುಮಾರ್ ತನ್ನ ಉಬ್ಬುಹಲ್ಲು ಕಿರಿದಂತೆ ಅವೆರಡರ ನಡುವೆ ಹಲವಾರು ಅಂಕಿ ಸಂಖ್ಯೆ ಹೊತ್ತ ವಿವಿಧ ಬ್ಯಾಂಡ್ ಸೂಚಿ,ಎಲ್ಲಕ್ಕೂ ಮೇಲೆ ವಿಸ್ತಾರವಾಗಿ ಕಾಣುವ ಸ್ಪೀಕರ್...ಹೀಗೆ ಮೇಲ್ನೋಟಕ್ಕೆ ಇದು ಯಾರೋ ಮೂಲೆಯಲ್ಲಿ ಹಲ್ಲು ಬಿಟ್ಟುಕೊಂಡು ಕೂತಂತೆ ಕಾಣುತ್ತಿತ್ತು..ಇಂತಿದ್ದ ರೇಡಿಯೊ ಮಹಾಶಯನನ್ನ ನಿತ್ಯ ತಟ್ಟಿ ಎಬ್ಬಿಸುವುದು ಒಂದು ಸಾಧನೆಯಂತಿರುತ್ತಿತ್ತು.ಸ್ವಿಚ್ ಅದುಮಿ ಐದು ನಿಮಿಷದ ನಂತರ ಬೇಕೊ ಬೇಡವೋ ಎಂಬ ಸೋಮಾರಿ ಮೈ ಮರೆತು ಏಳುವಂತೆ :ಏನೋ ನಮ್ಮ ಮೇಲೆ ಕೃಪೆ ತೋರುವ ಫೋಜು ಕೊಡುತ್ತಾ ದಿನಚರಿಗೆ ಅದು ತಯಾರಾಗುತ್ತಿತ್ತು.ಮೊತ್ತ ಮೊದಲಿಗೆ ಅದರೊಳಗಿದ್ದ ಬಲ್ಬ್ ಹೊತ್ತಿಕೊಂಡು ಬೆಚ್ಚಗಾಗಬೇಕು.ಅನಂತರವಷ್ಟೇ ಕೊಂಚ ಗೊರಗೊರ ಸದ್ದಿನೊಂದಿಗೆ ಕೆಮ್ಮಿ ಕ್ಯಾಕರಿಸಿ ತನ್ನ ಗಂಟಲನ್ನು ಸರಿಪಡಿಸಿಕೊಂಡು ತುಣುಕು ತುಣುಕಾಗಿ ದೂರದೆಲ್ಲಿಂದಲೋ ಬರುವ ಧ್ವನಿಯನ್ನು ಕೇಳಿಸುತ್ತಿತ್ತು.ಹೀಗೆ ಚೂರು ಸದ್ದು ಕೇಳಿ ಬಂದಾಗ ಭಾರಿ ದಂಡು ಕಡಿದು ಬಂದವರಂತೆ ಬೀಗುತ್ತಿದ್ದೆವು.ಒಮ್ಮೆ ಹೀಗೆ ತಯಾರಾಯ್ತೆಂದರೆ ನಂತರ ಮನೆಯ ದೀಪ ಆರುವ ತನಕವೋ ಇಲ್ಲವೇ ಕರೆಂಟು ಹೊತ್ತಲ್ಲದ ಹೊತ್ತಿನಲ್ಲಿ ಕೈ ಕೊಡುವ ತನಕವೋ ಅದಕ್ಕೆ ಬಿಡುವಿಲ್ಲದ ಕೆಲಸ.ಆರಂಭದ ಅದರ ಬಿಂಕ-ಬಿನ್ನಾಣಗಳಿಗೆಲ್ಲ ಅದರ ಕಿವಿಹಿಂಡಿ ಸರಿಯಾಗಿ ಸೇಡು ತೀರಿಸಿಕೊಳ್ಳುತ್ತಿದ್ದೆವು.


ಆಗಾಗ ಸೂಕ್ಷ್ಮ ಪ್ರಕೃತಿಯ ಈ ರೇಡಿಯೊ ಮಹಾಶಯನ ಆರೋಗ್ಯ ಹದಗೆಡುವುದೂಇತ್ತು.ತೀರ ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ಮನೆಮದ್ದೇ ನಡಿಯುತ್ತಿತ್ತು.ಅತಿ ಮಳೆ ಬಂದರೆ-ಚಳಿ ಸ್ವಲ್ಪ ಹೆಚ್ಚಾದರೆ ಅದಕ್ಕೂ ಜ್ವರ,ನೆಗಡಿ ಬಂದು ಅಂತಹ ವಿಪರೀತ ಸಂದರ್ಭಗಳಲ್ಲಿ ಜಪ್ಪಯ್ಯ ಎಂದರೂ ಗೊರಲು ರೋಗದವರಂತೆ ಗೊರಗೊರ ಸದ್ದಿನ ಹೊರತು ಇನ್ಯಾವ ಧ್ವನಿಯೂ ಹೊರ ಬರುತ್ತಿರಲಿಲ್ಲ.ಆಗ ಅದನ್ನು ವಿಶೇಷ ಮುತುವರ್ಜಿಯಿಂದ ಇನ್ನೆರಡು ಮಂದರಿ ಸೇರಿಸಿ ಸುತ್ತಿಟ್ಟು ಬೆಚ್ಚಗೆಗಿರಿಸಿ ಉಪಚಾರ ಮಾಡಲಾಗುತ್ತಿತ್ತು.ನಮ್ಮಿಂದ ಕಿವಿ ಹಿಂಡಿಸಿ ಕೊಂಡ ಕೋಪಕ್ಕೆ ಹೀಗೆ ರಚ್ಚೆ ಹಿಡಿದು ಪ್ರತಿಕಾರ ತೀರಿಸಿಕೊಳ್ಳುತ್ತಿತ್ತದು ಎಂಬ ಗುಮಾನಿ ಆಗೆಲ್ಲ ನನಗಿತ್ತು.ಜೀರಿಗೆ ಕಾಳುಮೆಣಸು ಕಷಾಯವನ್ನೂ ಮಾಡಿ ಕುಡಿಸಿ-ಪಥ್ಯದ ಊಟವನ್ನೂ ಕೆಟ್ಟ ರೇಡಿಯೊಗೆ ಮಾಡಿಸುತ್ತಾರೆ ಅಂತ ಚಿಕ್ಕವನಾಗಿದ್ದಾಗ ಬಲವಾಗಿ ನಂಬಿದ್ದೆ.ಏಕೆಂದರೆ ನನಗೂ ಜ್ವರ-ಶೀತ ಆಗಿದ್ದಾಗ ಹಾಗೆ ಮಾಡಲಾಗುತ್ತಿತ್ತು.
{ನಾಳೆಗೆ ಮುಂದುವರೆಸುವೆ}

Saturday, August 14, 2010

ಹಣೆಬರಹ....

ಕನಸಿನಲ್ಲೂ ನಿನ್ನ ಜಾಗದಲ್ಲಿ ಬೇರೆಯದೊಂದು ಬಿಂಬ....
ಕಲ್ಪಿಸಿಕೊಳ್ಳಲು ಹೆಣಗಿ ಸೋತಿದ್ದೇನೆ,
ನನಸಿನಲ್ಲೂ ಕಣ್ಣೋಟ ಹಾಯಿಸಿದಲ್ಲೆಲ್ಲ ನಿನ್ನದೇ ಪ್ರತಿಬಿಂಬ ಕಂಡು ಬೆರಗಾಗಿದ್ದೇನೆ/
ನೀನೇನೆ ಹೇಳು ಜನ್ಮಪೂರ್ತಿ ನಿನ್ನದೇ ನೆನಪಲ್ಲಿ ನರಳೋದೇ.
ನನ್ನ ಹಣೆಬರಹ//

ಏಯಂ ಆಕಾಶವಾಣಿ..

ರಾತ್ರೆ ಮನೆಯ ಒಳಗೆ ಅಡುಗೆಮನೆಯ ಕಡೆಯುವ ಕಲ್ಲಿನ ಹತ್ತಿರವೋ ಇಲ್ಲವೇ ಮೆಟ್ಟಿಲ ಹತ್ತಿರವೋ ಬೆಚ್ಚಗೆ ಗೋಣಿ ಹಾಸಿ ಅದರ ಮೇಲೆ ಮಲಗಿಸಲಾಗುತ್ತಿದ್ದ ಕರುಗಳೆಂದರೆ ನನಗೆ ಬಹಳ ಅಕ್ಕರೆ.ಸುಮಾರು ದನಗಳು ನಮ್ಮ ಹಟ್ಟಿಯಲ್ಲಿದ್ದು ವರ್ಷಪೂರ್ತಿ ಒಂದಲ್ಲ ಒಂದು ದನಗಳು ಗಬ್ಬವಾಗಿ ಕರು ಹಾಕುತ್ತಲೇ ಇದ್ದುದರಿಂದ ಮುನ್ನೂರೈವತ್ತು ದಿನವೂ ಈ ರೀತಿ ಕರುಗಳನ್ನು ಮನೆಯೊಳಗೆ ಮಲಗಿಸಿಕೊಳ್ಳುವುದನ್ನು ಕಾಣಬಹುದಾಗಿತ್ತು.ಚಳಿ-ಮಳೆ ವಿಪರೀತವಾಗಿದ್ದ ನಮ್ಮೂರಿನಲ್ಲಿ ಈ ಎಳೆ ಬೊಮ್ಮಟೆಗಳನ್ನು ಒಂದಷ್ಟು ದಿನ ಹೀಗೆ ಮನೆಯೊಳಗೇ ಮಲಗಿಸಿಕೊಳ್ಳಲೆ ಬೇಕಾಗುತ್ತಿತ್ತು..ಆ ಎಳೆ ಬೊಮ್ಮಟೆಗಳಿಗೆ ಥಂಡಿಗೆ ನ್ಯುಮೋನಿಯ ಆಗದಂತೆ ಕಾಪಾಡಲು ಹೀಗೆ ಮಾಡದೆ ವಿಧಿಯೇ ಇರುತ್ತಿರಲಿಲ್ಲ.ನನಗೋ ಅವುಗಳೆಂದರೆ ಭ್ರಾತೃ ವಾತ್ಸಲ್ಯ.ತಮ್ಮ ನುಣುಪು ಕಂದು-ಬಿಳಿ ಮೈಯಿಂದ ಸಿನುಗು ವಾಸನೆ ಹೊರಹೊಮ್ಮಿಸುತ್ತ ಇಷ್ಟಗಲ ಕಣ್ಣು ಬಿಟ್ಟು ಕೊಂಚ ಬೆದರಿದಂತೆ ಅಚ್ಚರಿಯಿಂದ ನನ್ನತ್ತ ಅವು ದಿಟ್ಟಿಸಿ ನೋಡುತ್ತಿದ್ದಾಗ ಅವುಗಳಷ್ಟೇ ಪುಟ್ಟ ಮಗುವಾಗಿದ್ದ ನನ್ನೊಳಗೆ ವಾತ್ಸಲ್ಯ ಉಕ್ಕಿಬಂದು ತಬ್ಬಿಕೊಂಡು ಆ ಮುದ್ದಾದ ಕಣ್ಣುಗಳಿಗೆ ಮುತ್ತಿಡುವ ಎಂದೆನಿಸುತ್ತಿತ್ತು.ಎಷ್ಟೋ ರಾತ್ರಿಗಳು ಅತ್ತು ಕೂಗಿ ರಂಪಾಟ ಮಾಡಿ ಹಟತೊಟ್ಟು ಅವುಗಳನ್ನು ತಬ್ಬಿ ಕೊಂಡು ಅವುಗಳೊಂದಿಗೆ ಅವುಗಳ ಗೋಣಿ ಹಾಸಿಗೆಯಲ್ಲೇ (ಉಚ್ಚೆ ಮಾಡಿ-ಸಣ್ಣ ಮಕ್ಕಳಂತೆ ಕಕ್ಕ ಮಾಡಿ ಎಷ್ಟೋ ಸಾರಿ ಆ ಗೋಣಿ ತಾಟುಗಳು ನಾತ ಹೊಡೆಯುತ್ತಿದ್ದರೂ ಸಹ,ಎಳೆಗರುಗಳು ಸಗಣಿ ಹಾಕದೆ ಸಣ್ಣ ಮಕ್ಕಳಂತೆ ಮಲ ಹಾಕುತ್ತವೆ) ನಾನೂ ಒಬ್ಬನಾಗಿ ನಿದ್ದೆ ಹೋಗುತ್ತಿದ್ದೆ.



"ಎಯಂ ಆಕಾಶವಾಣಿ ಸಂಪ್ರತಿ ವಾರ್ತಾಹ ಶೂಯನ್ತಾಂ...ಪ್ರವಾಚಕಹ ಬಲದೇವ ಸಾಗರಹ" (ಕೆಲವೊಮ್ಮೆ ದೇವೇಂದ್ರ ಮಿಶ್ರಹ} ಹೀಗೊಂದು ಅಶರೀರವಾಣಿ ಕಿವಿಮೇಲೆ ಬೀಳುತ್ತಿದ್ದಾಗ ಮೆಲ್ಲಗೆ ನನಗೆ ಎಚ್ಚರವಾಗುತ್ತಿತ್ತು.ಚುಮುಚುಮು ಚಳಿಯಲ್ಲಿ ನಿಧಾನವಾಗಿ ಪಿಳಿಪಿಳಿ ಕಣ್ಣು ಬಿಟ್ಟು ಅತ್ತಿತ್ತ ನೋಡುತ್ತಿರೋವಾಗ ಏನಾಶ್ಚರ್ಯ! ನಾನು ಅಮ್ಮನ ( ಅಜ್ಜಿಯನ್ನ ನಾನು ಅಮ್ಮ ಎನ್ನುತ್ತೇನೆ) ಹಾಸಿಗೆಯಲ್ಲಿ ಅವರ ಮಂದರಿಯೊಳಗೆ ಹುದುಗಿರುತ್ತಿದ್ದೆ!! ಮೆಲ್ಲಗೆ ಕಡೆಯುವ ಕಲ್ಲಿನ ಕರು ಕಟ್ಟಿದೆಡೆಗೆ ಕಣ್ಣು ಹಾಯಿಸಿದರೆ ಅದೂ ಮಾಯ!!! ತನ್ನಮ್ಮನ ಬಳಿ ಮೈ ನೆಕ್ಕಿಸಿ ಕೊಳ್ಳುತ್ತಾ ಮೊಲೆ ಚೀಪಲು ಓಡಿರುತ್ತಿತ್ತು.ಸೋಮಾರಿ ಸಿದ್ಧನಾಗಿ ಮೈ ಮುರಿದು ಏಳುವ ಸಮಯಕ್ಕೆಲ್ಲ ಪ್ರದೇಶ ಸಮಾಚಾರದ ಗಡಸು ಕನ್ನಡದ ಧ್ವನಿ ಕಿವಿ ಮೇಲೆ ಬೀಳಲಾರಂಭವಾಗಿರುತ್ತಿತ್ತು.ಸಾಮಾನ್ಯವಾಗಿ ಬೆಳಗಿನ ಹೊತ್ತುಗಳಲ್ಲಿ ನಮ್ಮ ಮನೆಯಲ್ಲಿ ಉಲಿಯುತ್ತಿದ್ದುದು ಒಂದೋ ಆಕಾಶವಾಣಿಯ ಭದ್ರಾವತಿ ಕೇಂದ್ರದ ಕಾರ್ಯಕ್ರಮಗಳು ಇಲ್ಲವೇ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳು.



ಚಿಂತನ,ನಗರದಲ್ಲಿ ಇಂದು,ಸಂಸ್ಕೃತದಲ್ಲಿ ವಾರ್ತೆಗಳು (ಅದೂ ದೆಹಲಿ ಕೇಂದ್ರದ ಸಹ ಪ್ರಸಾರದೊಂದಿಗೆ!),ಪ್ರದೇಶ ಸಮಾಚಾರ,ಪ್ರಚಲಿತ,ರಸವಾರ್ತೆ,ಕನ್ನಡದಲ್ಲಿ ವಾರ್ತೆಗಳು,ಚಿತ್ರಗೀತೆಗಳು,ಪುನಃ ದೆಹಲಿಯಿಂದ ಹಿಂದಿ ಹಾಗು ಇಂಗ್ಲಿಶ್ ವಾರ್ತೆಗಳು ಇವೆಲ್ಲ ನನ್ನ ಬಾಲ್ಯದ ಬೆಳಗಿಗೆ ರಂಗು ತುಂಬುತ್ತಿದ್ದವು.ಎದ್ದು ಹಲ್ಲುಜ್ಜಿ,ಚಾ ಸವಿದು,ವರ್ತನೆ ಮನೆಗಳಿಗೆ ಹಾಲು ಕೊಟ್ಟು ಮತ್ತೆ ಬಂದವ ಕೊಂಚ ಹೊತ್ತು ಪುಸ್ತಕ ಓಡುವ ಪ್ರಹಸನ ನಡೆಸಿ,ನಡು ನಡುವೆ ಹಲವಾರು ಕಾರಣ ಗಳಿಗಾಗಿ ಹಿರಿಯರಿಂದ ಬಯ್ಯಿಸಿ ಕೊಂಡು,ಕರೆದಾಗ ಹೋಗಿ ಸ್ನಾನ ಮಾಡಿಸಿಕೊಂಡು (ಈ ಸ್ನಾನ ಮಾಡೋದು ನನ್ನಿಡೀ ಬಾಲ್ಯದಲ್ಲಿ ನನಗೊಂದು ಘನ ಘೋರ ಶಿಕ್ಷೆಯಂತೆಯೇ ಭಾಸವಾಗುತ್ತಿತ್ತು.ದನಗಳ ಹಿಂಡೇ ನಮ್ಮ ಬಚ್ಚಲ ಪಕ್ಕದ ಹಟ್ಟಿಯಲ್ಲಿ ಇರುತ್ತಿದ್ದಿದ್ದರಿಂದ ಪ್ರತಿ ಐದು ನಿಮಿಷಕ್ಕೊಮ್ಮೆ ಯಾವುದಾದರೊಂದು ದನ ಬಾಲ ಎತ್ತುತ್ತಿತ್ತು.ಕೂಡಲೇ ಕೀ ಕೊಟ್ಟ ಬೊಂಬೆಯಂತೆ ನನ್ನ ಪ್ರತಿರೋಧವನ್ನೂ ಲೆಕ್ಖಿಸದೆ ನಮ್ಮಮ್ಮ ಬಲವಂತವಾಗಿ ದರದರನೆ ಎಳೆದು ದನದ ಮೂತ್ರಾಭಿಷೇಕ ಮಾಡಿಸುತ್ತಿದ್ದರು.ಸಾಲದ್ದಕ್ಕೆ ಅಲ್ಲೇ ಯಾವಾಗಲೂ ತಯಾರಿರುತ್ತಿದ್ದ ಚೊಂಬೊಂದರಲ್ಲಿ ಭರ್ತಿ ಗೋಮೂತ್ರ ಹಿಡಿದು ನನ್ನ ವಿರೋಧವನ್ನು ಚೂರೂ ಪರಿಗಣಿಸದೆ ಕುಡಿಸಿಯೇ ಕುಡಿಸಿರುತ್ತಿದ್ದರು.ಯಮಗಾತ್ರದ ಸಿಂಧಿ ದನಗಳ ಚೊಂಬು ಭರ್ತಿ ಮೂತ್ರಪಾನದ ಸುಖವನ್ನು ಕಲ್ಪಿಸಿಕೊಳ್ಳಿ! ಹಾಗೆ ನೋಡಿದರೆ ಇಲ್ಲಿಯವರೆಗೆ ನಾನು ದನದ ಹಾಲಿಗಿಂತ ಹೆಚ್ಚು ಉಚ್ಚೆ ಕುಡಿದಿದ್ದೇನೆ.ದನದ ಉಚ್ಚೆ ನಿತ್ಯ ಕುಡಿದವನು ಬುದ್ಧಿವಂತನಾಗುತ್ತಾನಂತೆ!! ಹಾಗೆ ಅವರ ಕಿವಿಚುಚ್ಚಿದ ಪುಣ್ಯಾತ್ಮ ನನ್ನ ಇನ್ನೂ ಹುಡುಕುತ್ತಿದ್ದೇನೆ...ಕೈಗೊಮ್ಮೆ ಸಿಗಲಿ ಇದೆ ಅವನಿಗೆ!?) .ಅನಂತರ ಸೂಜಿಯಂತಹ ಹಣಿಗೆಯಲ್ಲಿ ತಲೆ ಬಾಚಿಸಿ ಕೊಂಡು ದೇವರಿಗೆ ಅಡ್ಡ ಬಿದ್ದು,ಪ್ರದಕ್ಷಿಣೆ ಹಾಕಿ ಹಣೆಗೆ ಕುಂಕುಮದ ಬೊಟ್ಟಿಡಿಸಿಕೊಳ್ಳುತ್ತಾ ಸಮವಸ್ತ್ರ ತೊಟ್ಟು ಕೊಂಡರೆ ಒಂದು ಹಂತಕ್ಕೆ ಸಿದ್ಧನಾದಂತೆ.


ಕೊಟ್ಟ ತಿಂಡಿ ತಿಂದು ಅಂಗಡಿಗೆ ಹೋಗಿ ಏನಾದರೂ ಚಿಲ್ಲರೆ ಸಾಮಾನು ತರೋದೋ ಇಲ್ಲ ಹೂ ಕುಯಿದು ಕೊಡೋದೋ ಮುಂತಾದ ಚಿಲ್ಲರೆ ಕೆಲಸ ಮುಗಿಸುವ ಹೊತ್ತಿಗೆ ನಮ್ಮ ರೇಡಿಯೋ ಹಲವಾರು ಬಾರಿ ಕಿವಿ ಹಿಂಡಿಸಿಕೊಂಡು ಭದ್ರಾವತಿಯಿಂದ ಧಾರವಾದಕ್ಕೂ,ಅಲ್ಲಿಂದ ಗುಲ್ಬರ್ಗಾಕ್ಕೂ,ಅಲ್ಲಿಂದ ಮಂಗಳೂರಿಗೂ ಅಥವಾ ಕೆಲವೊಮ್ಮೆ ಬೆಂಗಳೂರಿಗೂ ಕೂತಲ್ಲೇ ವಿಶ್ವ ಪರ್ಯಟನೆ ಹೋಗಿ ಬಂದಿರುತ್ತಿತ್ತು.ಅಸಾಧ್ಯ ಗದ್ದಲದ ನಡುವೆ ತುಣುಕು ತುಣುಕಾಗಿ ಯಾವುದಾದರೊಂದು ಚಿತ್ರಗೀತೆಯನ್ನ ಹಾಡುತ್ತಲೇ ಇರುತ್ತಿತ್ತು.ಎಸ್ ಪಿ ಬಾಲಸುಬ್ರಮಣ್ಯಮ್,ಪಿ ಲೀಲಾ,ಪಿ ಸುಶೀಲ,ವಾಣಿ ಜಯರಾಂ,ಪಿ ಬಿ ಶ್ರೀನಿವಾಸ್,ಬೆಂಗಳೂರು ಲತಾ,ಎಸ್ ಪಿ ಶೈಲಜಾ,ಬಿ ಕೆ ಸುಮಿತ್ರ,ಎಲ್ ಅರ್ ಈಶ್ವರಿ,ಕಸ್ತೂರಿ ಶಂಕರ್,ಕೆ ಎಸ್ ಸೌಂದರ್ ರಾಜನ್,ಘಂಟಸಾಲ ಮುಂತಾದವರಿಗೆ ಪಾಪ ದಿನ ನಿತ್ಯ ಬೆಳಗಾಗೆದ್ದು ನಮ್ಮನೆ ರೇಡಿಯೋದಲ್ಲಿ ಹಾಡೋದೊಂದೇ ಕೆಲಸ!.ಇಷ್ಟೆಲ್ಲಾ ಗಂಟಲು ಹರಕೊಂಡು ಹಾಡಿದರೂ ಒಂದೇ ಒಂದು ದಿನವೂ ತಮ್ಮ ಕತ್ತೆ ದುಡಿಮೆಗೆ ಬೇಸರಿಸಿ ಕೊಳ್ಳದೆ ಇವತ್ತಿಗೂ ಹಾಡುತ್ತಲೇ ಇದ್ದಾರೆ. ಹೀಗಾಗಿ ಮೊದಲ ಬಾರಿಗೆ ಜಾನಕಿಯಮ್ಮ,ಬಾಲು ಸರ್,ವಾಣಿ ಮೇಡಂ ( ಇವರೆಲ್ಲರೂ ಈಗ ನನ್ನ ಪರಮಾಪ್ತರು) ರನ್ನ ಪ್ರತ್ಯಕ್ಷ ಕಂಡು ಅವರೊಂದಿಗೆ ಕಾಫಿ ಕುಡಿಯುತ್ತ ಮಾತನಾಡಿದಾಗ ಅವರು ನಮ್ಮನೆಯವರಲ್ಲದೆ ಬೇರೆಯವರು ಅಂತ ಅನ್ನಿಸಲೇ ಇಲ್ಲ!.
{ನಾಳೆ ಮುಂದುವರೆಸುವೆ}

Friday, August 13, 2010

".....ಕಪಿತ್ತ ಜಂಬೋ ಫಲಸಾರ ಭಕ್ಷಿತಂ"

ಮೂರು ಸಂಜೆ ಅಂತನ್ನುವ ಆ ಹೊತ್ತಿನಲ್ಲಿ ದೇವರ ಮನೆಯಲ್ಲಿ ಶೃಂಗೇರಿ ಶಾರದೆ,ಕಟೀಲು ದುರ್ಗಾಪರಮೇಶ್ವರಿ,ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸಹಿತ ಅಷ್ಟೂ ದೇವರುಗಳು,ಕೊಲ್ಲೂರು ಮೂಕಾಂಬಿಕೆ,ಹೊರನಾಡ ಅನ್ನಪೂರ್ಣೆ,ಉಡುಪಿ ಕೃಷ್ಣ,ಕಾಶಿ ವಿಶ್ವನಾಥನ ಕಟ್ಟು ಹಾಕಿಸಿದ ಪಟಗಳ ಜೊತೆಗೆ ಬೀಡಿ-ಸೋಪು-ಬ್ಲೇಡ್-ಪೇಯಿಂಟ್ಗಳ ಪ್ರಚಾರ ಕ್ಯಾಲೆಂಡರ್ಗಳಲ್ಲಿ ಕಾರಣವೆ ಇಲ್ಲದೆ ಸೆರೆಸಿಕ್ಕವರಂತೆ ಮುದ್ರಿತರಾಗಿ,ಈಗ ನನ್ನಜ್ಜನ ಒತ್ತಡಕ್ಕೆ ಅನಿವಾರ್ಯವಾಗಿ ಮಣಿದು (ಬೇರೆದಾರಿಯಾದರೂ ಅವರೆಲ್ಲರಿಗೆ ಏನಿತ್ತು ಪಾಪ!) ಕಪ್ಪು ಅಂಚಿನ ಫ್ರೇಮ್ ಸೇರಿ ಸದ್ಯಕ್ಕೆ ಈ ಕ್ಷುಲ್ಲಕ ಜಗತ್ತಿನ ಗೋಳುಗಳಿಂದ ಸೇಫಾಗಿದ್ದ ಖಾದರ್ಸಾಬರ ಮೂರುಮಾರ್ಕ್ "ಬೀಡಿ" ಲಕ್ಷ್ಮಿ (ಜೂಲಿ ಲಕ್ಷ್ಮಿ ತರಹ),ಭಾರತ್ ಬೀಡಿ ಸರಸ್ವತಿ,ಸಂತೂರ್ ಸೋಪಿನ ಶಿವಪಾರ್ವತಿ,ಮಹಾಲಸ ಜುವೆಲ್ಲರ್ಸ್ ಗಣಪತಿ,ಏಷ್ಯನ್ ಪೇಯಿಂಟ್ ಸುಬ್ರಮಣ್ಯ,ಲಿಂಗೇಶ್ವರ ಕಟ್ಟಿಂಗ್ ಶಾಪ್,ಸವಳಂಗ ರಸ್ತೆ,ಶಿವಮೊಗ್ಗ ಇವರ ಅಕ್ಕಮಹಾದೇವಿ.,ಮಹಾವೀರ ಕ್ಲಾತ್ ಸೆಂಟರ್ನ ಗೊಮ್ಮಟೇಶ್ವರ ಹೀಗೆ ಆ ಉದ್ಯಮಗಳಿಗೆ ಚೂರೂ ಸಂಬಂಧಿಸದ ಮೂರೂ ಮುಕ್ಕಾಲು ದೇವತೆಗಳ (ಕೆಲವು ದೇವಾನುದೇವತೆಗಳ ಅಸಹಜ ಗಾತ್ರದ ಚಿತ್ರಗಳು ಫ್ರೇಮ್ ಗಾತ್ರಕ್ಕೆ ಅನುಗುಣವಾಗಿ ದೇಹದ "ಕೆಳಗಿನ" ಅವಯವಗಳನ್ನು ಕಳೆದು ಕೊಂಡು ಅಂಗವಿಕಲರಾಗಿರುತ್ತಿದ್ದುದೂ ಉಂಟು!) ಸಾಲಿಗೆ ದೀಪ ಹಚ್ಚಿ,ಅದರಲ್ಲೊಂದು ಹಣತೆ ದೀಪವನ್ನಿರಿಸಿ ಕಡೆಗೆ ಮನೆ ಮುಂದಿನ ತುಳಸಿ ಕಟ್ಟೆಗೆ ಕೊಂಡೊಯ್ದು ಇಟ್ಟು ಕೈ ಮುಗಿಯ ಬೇಕಿತ್ತು.


ಇಷ್ಟಾದ ಮೇಲೆ ಯಾವ ರಾಗದ ಖಚಿತ ಹಂಗೂ ಇಲ್ಲದ ನಮ್ಮದೇ ಧಾಟಿಯಲ್ಲಿ ನಾಲ್ಕಾರು ಭಜನೆಗಳನ್ನೂ ಮನೆಯ ಮಕ್ಕಳೆಲ್ಲ ಸಾಮೂಹಿಕವಾಗಿ ಅರಚುತ್ತಿದ್ದೆವು.ಈ ಅಪಶ್ರುತಿಯ ಪ್ರಲಾಪವನ್ನು ಕೇಳಿ ಕೇಳಿ ದೇವರುಗಳಿಗೆಲ್ಲ ಸುಸ್ತಾಗಿಯೋ...ಇಲ್ಲ...ತಾಳ ಕುಟ್ಟುತ್ತಾ ಕೂಗಿ ಕೂಗಿ ಕಡೆಗೆ ನಮಗೆ ಸುಸ್ತಾಗಿಯೋ ಅಂತೂ ಮಂಗಳಕ್ಕೆ ಬಂದು ಮುಟ್ಟುತ್ತಿದ್ದೆವು.ಈ ಮಂಗಳದೊಂದಿಗೆ ಮಂಗಳಾರತಿ ಮುಗಿದರೂ ಬಾಯಿಪಾಠ ಮಾಡಿಕೊಂಡಿರುತ್ತಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಸಂಸ್ಕೃತ ಶ್ಲೋಕಗಳನ್ನು ಕೇಳಿದವರಿಗೆ ಶೋಕ ಒತ್ತರಿಸಿಕೊಂಡು ಬರುವಂತೆ ಅಪಭ್ರಂಶದಲ್ಲಿ ದೇವರನ್ನೇ ಹೆದರಿಸುವಂತೆ ಘರ್ಜಿಸದ ಹೊರತು ನಮ್ಮ ಪ್ರಾಥನೆಯ ಕಲಾಪ ಮುಗಿಯುತ್ತಿರಲ್ಲಿಲ್ಲ.ನಮ್ಮ ಈ ಎಲ್ಲ ಕಿರುಕುಳಗಳನ್ನು ಸಹಿಸಲು ಆ ಎಲ್ಲ ದೇವಗಣಗಳಿಗೆ ಆಗುತ್ತಿತ್ತಲ್ಲ ಎಂದು ಇಂದಿಗೂ ಸೋಜಿಗ ಪಡುತ್ತೇನೆ.ಇಷ್ಟಾಗಿ ಇಲ್ಲಿ ಭಜನೆ ಮುಗಿಸಿ ಎದುರು ಮನೆ ಬಪಮನ ಗಣಪತಿ ಕಡ್ಲೆಗಾಗಿ ಅವರ ಮನೆಯತ್ತ ಓದುತ್ತಿದ್ದೆ.ಅವರ ಮನೆ ಗಣಪತಿಯ ನೈವೇದ್ಯವಾಗಿ ಅವರು ನೆನೆಸಿದುತ್ತಿದ್ದ ಹಸಿ ಕಡಲೆಯ ಪಾಲಿಗಾಗಿ ಇನ್ನೂ ಅನೇಕ ಪ್ರತಿ ಸ್ಪರ್ಧಿಗಳು ಸುಟ್ಟ ಮುತ್ತಲ ಮನೆಗಳಿಂದ ದೊವ್ದಾಯಿಸುವ ಅಪಾಯ ಕಟ್ಟಿಟ್ಟ ಬುತ್ತಿ ಯಾಗಿರುತ್ತಿದ್ದರಿಂದ ಹೀಗೊಂದು ಅಕಾಲದ ರನ್ನಿಗ್ ರೇಸ್ ನನ್ನ ಬಾಲ್ಯದುದ್ದಕ್ಕೋ ಇದ್ದ ತುರ್ತು ಅಗತ್ಯಗಳಲ್ಲಿ ಒಂದಾಗಿತ್ತು.





ಬಪಮ ಕಡ್ಲೆ ಕೊಡುವಾಗ ಅವರ ಸೊಸೆ ಗೀತಮ್ಮ ತುಳಸಿಕಟ್ಟೆಗೆ ಸುತ್ತು ಹಾಕುತ್ತ ಮೂಗಿನಲ್ಲೇ ದೇವರ ನಾಮ ಹಾಡಿಕೊಳ್ಳುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ( ನೆನ್ನೆ ಅವರ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿಗೆ ಹೋಗಿದ್ದೆ!) ಅವರ ಮೂಗುರಾಗಕ್ಕೆ ನಮ್ಮದೂ ಶ್ರುತಿ ಅನಪೇಕ್ಷಿತವಾಗಿ"....ಕಪಿತ್ತ ಜಂಬೋ ಫಲಸಾರ ಭಕ್ಷಿತಂ" ಎಂದು ಸೇರುತ್ತಿತ್ತು.ಸರಿ ಸುಮಾರು ಹೀಗೆಯೇ ಇರುತ್ತಿದ್ದ ನನ್ನ ಬಹುಪಾಲು ಸಂಜೆಗಳು ಈಗ ಕೈಜಾರಿ ಹೋಗಿ ಯಾವುದೋ ಕಾದಿಟ್ಟ ನಿಧಿ ಕಳೆದು ಕೊಂಡ ಅರ್ಜೆಂಟ್ ನಿರ್ಗತಿಕನ ಫೋಸ್ ಕೊಟ್ಟುಕೊಳ್ಳುತ್ತಾ ನನ್ನನ್ನು ನಾನೇ ಸಂತೈಸಿಕೊಳ್ಳುತ್ತಿರುತ್ತೇನೆ.ಇವತ್ತಿಗೂ ಮುಕ್ತಿಯಿಲ್ಲದೆ ಅವವೇ ಫ್ರೇಮ್ ಗಳಲ್ಲಿ ಸಿಲುಕಿ ಒರಲೆಗಳಿಂದ ಕಚ್ಚಿಸಿಕೊಂಡು ಒದ್ದಾಡುತ್ತಿರುವ ದೇವಾನು ದೇವತೆಗಳಿಗೂ ಇಂತಹದ್ದೊಂದು ಶೂನ್ಯ ಕಾಡುತ್ತಿರಬಹುದು ಎಂಬ ಗುಮಾನಿ ನನಗಿದೆ.



ಇಷ್ಟೆಲ್ಲಾ ಆಗಿ ಮುಗಿಯುವಾಗ ಶಾಲೆಯ ಚೀಲ-ಅದರೊಳಗೆ ಬಿಲದೊಳಗಣ ಇಲಿಯಂತೆ ಹುದುಗಿರುತ್ತಿದ್ದ ಮನೆಕೆಲಸದ ಪುಸ್ತಕಗಳನ್ನು ಇಷ್ಟವಿಲ್ಲದಿದ್ದರೂ ಹೊರಗೆ ತೆಗೆಯಲೇ ಬೇಕಾಗಿದ್ದ ದಿನದ ಅತಿ ಕೆಟ್ಟ ಘಳಿಗೆಗಳು ಬಂದೆ ಬಿಟ್ಟಿರುತ್ತಿದ್ದವು. ಇಷ್ಟವಿಲ್ಲದಿದ್ದರೂನು ಈ ಪ್ರಾರಬ್ಧ ಕರ್ಮದಿಂದ ಪಾರಾಗಲು ಬೇರೆ ದಾರಿ ಇರುತ್ತಿರಲಿಲ್ಲವಾಗಿ ಅನಿವಾರ್ಯವಾಗಿ ಹೋಂ ವರ್ಕ್ ಮಾಡಲು ಸನ್ನದ್ಧನಾಗುತ್ತಿದ್ದೆ.ವಾಸ್ತವವಾಗಿ ನಾನು ಓದಿನಲ್ಲಿ ಸಾಕಷ್ಟು ಜಾಣನಾಗಿದ್ದೆ.ಕಾಪಿ ಬರೆಯುವುದೂ ಸೇರಿದಂತೆ ಶಾಲೆಯಲ್ಲಿ ಕೊಡುತ್ತಿದ್ದ-ನನ್ನ ಪಾಲಿಗೆ ತೀರಾ ಚಿಲ್ಲರೆ ಅನ್ನಿಸುತ್ತಿದ್ದ ಮನೆಕೆಲಸಗಳಿಗೆ ಇನ್ನೂ ಕಡೆಯ ಘಂಟೆ ಹೊಡೆಯುವ ಮೊದಲು ಅಲ್ಲೇ ಮೋಕ್ಷ ಕಲ್ಪಿಸಿರುತ್ತಿದ್ದೆ.ಆದರೀಗ ಇಲ್ಲದ ಮನೆಗೆಲಸವನ್ನು ಈ ಟ್ಯೂಬ್ ಲೈಟ್ ಅಡಿ ಕೂತು ಮಾಡೋದಾದರೂ ಎಲ್ಲಿಂದ? ಹೀಗಾಗಿ ಓದುವ ನಾಟಕ ನಿರಂತರವಾಗಿ ಮಾಡುತ್ತಿದ್ದೆ.ನಡುವೆ ನಿದ್ದೆಯ ಸೆಳೆತ ವಿಪರೀತವಾದಾಗ ತಲೆಯನ್ನು ಹಿಡಿತ ಮೀರಿ ತೂಗದಂತೆ ನಿಗಾವಹಿಸುವ ಕೆಲಸಕ್ಕೆ ಯಾರ ಅಪ್ಪಣೆ ಇಲ್ಲದಿದ್ದರೂ ಸದಾ ಸಿದ್ದ ವಾಗಿರುತ್ತಿದ್ದ ನನ್ನ ಕಡೆಯ ಚಿಕ್ಕಮ್ಮ ಟಪ್ ಎಂದು ಜೋರಾಗಿ ತಲೆಯ ಮೇಲೊಂದು ಏಟು ಹಾಕುತ್ತಿದ್ದಳು.ಅವಳು ತನ್ನ ಹೋಮ್ವರ್ಕ್ ಮಾಡಲು ಕೂತಿದಾಳೋ ಇಲ್ಲ ನನಗೆ ತಲೆ ಮೊಟಕಲೋ ಎಂಬ ಸಂಶಯ ನನಗಿವತ್ತಿಗೂ ಇದೆ.ಈ ಪ್ರಹಸನ ಕಷ್ಟದಲ್ಲಿ ಮುಗಿಯುವಾಗ ಕಡೆಗೂ ಊಟದ ಸಮಯ ಆಗಿರುತ್ತಿತ್ತು.



ಮತ್ತೆ ಅಗೋಳಿ ಮಂಜಣನ ಸಾಕ್ಷಾತ್ಕಾರವಾಗುವ ಹೊತ್ತದು.ಊಟಕ್ಕೆ ಕಳ್ಳತನ ಮಾಡುತ್ತಿದ್ದ ನನಗೆ "ಬೇಗ ಉಂಡವರು ಗಿಳಿಯಂತೆ; ನಿಧಾನವಾಗಿ ಉಣ್ಣುವವರು ಕಾಗೆಯಂತೆ!!" ( ಗಿಳಿಯಾಗಿ ಬರುವ ಭಾಗ್ಯವೇನು? ಕಾಗೆಯಾದರೆ ನಷ್ಟವೇನು ಎಂಬ ಪ್ರಶ್ನೆಗೆ ಇನ್ನೂ ಅರ್ಥ ಹುಡುಕುತ್ತಿದ್ದೇನೆ!) ಎನ್ನುವ ಪುಸಲಾವಣೆ ಮಾವ ಹಾಗು ಚಿಕ್ಕಮ್ಮಂದಿರದು.ಗಿಳಿಯಾಗಲು ನನ್ನ ಅಳತೆ ಮೀರುತ್ತಿರುವ ಸಂಪೂರ್ಣ ಅರಿವಿದ್ದರೂ ಒತ್ತಾಯದಲ್ಲಿ ತುರುಕಿಕೊಂಡು ಕಾದರೆ ಗಿಳಿಯಾಗುವ ಮೊದಲೇ ಅಗೋಳಿ ಮಂಜಣನೆಂಬ ಬಿರುದು ಉಚಿತವಾಗಿ ಸಿಕ್ಕಿರುತ್ತಿತ್ತು! ನನ್ನ ಊಟ ಮಾಡುವುದರಲ್ಲಿದ್ದ ನಿರಾಸಕ್ತಿಗೆ ಅವರು ಅರಿಯುತ್ತಿದ್ದ ಇಂತಹ ಭೀಕರ ಮದ್ದುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೊ? ತಿಳಿಯದೆ ಗಲಿಬಿಲಿಯಾಗುತ್ತಿತ್ತು. ಅಸಹಾಯಕತೆಯೆ ಮಡುಗಟ್ಟಿರುತ್ತಿದ್ದ ಜಲಪಾತ ಇನ್ನೇನು ನನ್ನ ಬೋಳೆ ಕಣ್ಣುಗಳಿಂದ ಉದುರೋಕೆ ಸರ್ವ ಸನ್ನದ್ಧವಾಗಿರುತ್ತಿದ್ದವು.ಆದರೆ ಊಟದ ಬಗ್ಗೆ ನನಗಿದ್ದ ನಿರಾಸಕ್ತಿಯ ಅಸಲು ಕಾರಣ ಅವರ್ಯಾರಿಗೂ ಗೊತ್ತಿರಲೇ ಇಲ್ಲ!.
{ನಾಳೆಗೆ ಮುಂದುವರಿಸುವೆ}

Thursday, August 12, 2010

ಸಂಜೆ ಸೂರ್ಯನೇ..

ಮನೆಯಿಂದ ಸುಮಾರು ಒಂದೂವರೆ ಫಾರ್ಲಂಗ್ ದೂರದಲ್ಲಿದ್ದ ನಮ್ಮ ಶಾಲೆ ಬಿಟ್ಟ ತಕ್ಷಣ ಮನೆಯತ್ತ ಓಟ ಹೂಡುವ ನನಗೆ ಮರಳಿ ಮನೆ ಸೇರೋಕೆ ಹೆಚ್ಚೆಂದರೆ ಹತ್ತು ನಿಮಿಷ ಸಾಕಾಗುತ್ತಿತ್ತು.ತೀರಾ ಸಂಪ್ರದಾಯ ಬದ್ಧತೆಯೂ-ಅದೇ ವೇಳೆಗೆ ವಿಶಾಲ ಮನೋಭಾವವೂ ಸಮಾಸಮ ವಾಗಿದ್ದ ಕುಟುಂಬದ ಹಿನ್ನೆಲೆ ನನ್ನದು.ಶಾಲೆ ಮುಗಿಸಿ ಮನೆಗೆ ಬಂದವನಿಗೆ ಮೊದಲು ಮನೆಯ ಸುತ್ತಲೂ ಬೆಳಸಿದ್ದ ಗಿಡಗಳಿಗೆ ನೀರು ಹಾಕುವ ಕೆಲಸವಿರುತ್ತಿತ್ತು.ಬರಿ ಚಡ್ಡಿಯಲ್ಲಿ ಭರಪೂರ ನೀರಾಡುವ ಸುವರ್ಣಾವಕಾಶವಿದು,ಬಿಟ್ಟರೆ ಕೆಟ್ಟಂತೆ! (ಇನ್ನುಳಿದ ದಿನದ ವೇಳೆಯಲ್ಲಿ ಅಪ್ಪಿತಪ್ಪಿ ಸುಮ್ಮನೆ ನೀರಿನಲ್ಲಿ ಕೈ ಬಿಟ್ಟರೂ ಬೆನ್ನ ಮೇಲೆ ಉಚಿತ ಹಾಗು ಖಚಿತವಾದ ಗುದ್ದುಗಳು ತಪ್ಪದೆ ಸಿಗುತ್ತಿದ್ದವು) ನೀರಾಟವಾಡಿದ ನಂತರ ಮನೆಯ ಹಟ್ಟಿಯಲ್ಲಿದ್ದ ಅಸಂಖ್ಯ ದನಗಳ ಹಿಂಡಿನಿಂದ ಅಮ್ಮ ಕರೆದಿಟ್ಟು ಅನಂತರ ಸಮ ಪ್ರಮಾಣದಲ್ಲಿ ನೀರು ಬೆರಿಸಿ ಕೊಟ್ಟ ಹಾಲನ್ನು ಪಾವು,ಕುಡ್ತೆ,ಲೋಟಗಳ ಲೆಕ್ಖದಲ್ಲಿ ವರ್ತನೆ ಮನೆಗಳಿಗೆ ಕೊಟ್ಟು ಬರಬೇಕಿತ್ತು.ಇದೊಂಥರಾ ಕಿರಿಕಿರಿಯ ಬಾಬತ್ತು.ಓಡೋಡುತ್ತ ಈ ಕೆಲಸ ಮಾಡುವಂತಿಲ್ಲ,ಕೊಂಚ ಅಲುಗಾಡಿದರೂ ವಯರಿನ ಚೀಲದಲ್ಲಿ ಜಾಗರೂಕತೆಯಿಂದ ಜೋಡಿಸಿಟ್ಟ ಹಾಲು ಚೆಲ್ಲಿ ಅವಾಂತರ.ಹಾಗೂ ಹೀಗೂ ಈ ಕೆಲಸವನ್ನು ಮುಗಿಸಿ-ಸಂಜೆಯ ಚಹದೊಟ್ಟಿಗೆ ಸಿಗುತ್ತಿದ್ದ ತಿಂಡಿಗೆ ಗತಿ ಕಾಣಿಸಿ ನೋಡುವಾಗ ಸುಮಾರಾಗಿ ಹೊತ್ತು ಕಂತಿರುತ್ತಿತ್ತು.ಆದರೂ ಛಲ ಬಿಡದ ತ್ರಿವಿಕ್ರಮನಂತೆ ನನ್ನ ಸಮ ವಯಸ್ಕರು ಆಡುವ ಮನೆ ಹತ್ತಿರದ ಬಯಲಿಗೆ ಓಡಿದರೂ ಅವರೆಲ್ಲರ ಆಟ ಮುಗಿಯುವ ಕೊನೆಯ ಕೆಲವು ಕ್ಷಣಗಳಷ್ಟೇ ಉಳಿದಿರುತ್ತಿದ್ದವು.ತಥ್ ತೆರಿಕಿ! ಯಾವಾಗಲೂ ನನ್ನದು ಇದೇ ಹಣೆಬರಹ.



ಅಂತೂ ಆಟದ ಶಾಸ್ತ್ರ ಮುಗಿಸಿ ಮನೆಗೆ ಬರುವಾಗ ನಿಚ್ಚಳ ಕತ್ತಲು ಕವಿದಿರುತ್ತಿತ್ತು.ಮನೆಗೆ ಬಂಡವ ಆಗಷ್ಟೇ ನನ್ನ ಚಿಕ್ಕಮ್ಮಂದಿರು ಗುಡಿಸಿ ಒರೆಸಿಟ್ಟಿರುತ್ತಿದ್ದ ನೆಲದ ಮೇಲೆ ಅಪ್ಪಿತಪ್ಪಿ ಕಾಲಿಟ್ಟೆನೋ ಕೆಟ್ಟೆ! ಆಕಾಶ ಭೂಮಿ ಒಂದಾಗಲು ಅಂತಹ ಸಂದರ್ಭದಲ್ಲಿ ಹೆಚ್ಚು ಸಮಯ ಬೇಕಾಗುತ್ತಿರಲಿಲ್ಲ.ತೀರಾ ಸೊಕ್ಕು ಹೆಚ್ಚಿದಾಗ ಇದ್ಯಾವದಕ್ಕೂ ಕೇರ್ ಮಾಡದೆ ಬಿಡುಬೀಸಾಗಿ ಒರೆಸಿದ ನೆಲದ ಮೇಲೆ ಬೇಕಂತಲೆ ಮಣ್ಣು-ಕೆಸರಾದ ಕಾಲುಗಳ ಚಿತ್ತಾರ ಮೂಡಿಸುತ್ತ ಮನೆ ಹೊಕ್ಕುತ್ತಿದ್ದೆ.ತೀರಾ ಕುನ್ನಿಯಂತೆ ನಯವಂಚಕ ನರಿ ಮಾದರಿಯಲ್ಲಿ ಬಾಲ ಮಡಚಿಕೊಂಡು ಮನೆ ಪಕ್ಕದ ಓಣಿಯಿಂದ ಹಿತ್ತಲು ಹೊಕ್ಕು :ಮುಟ್ಟಾದವರಂತೆ ಮೈ-ಕೈ ಕಾಲನ್ನೆಲ್ಲ ಅಗತ್ಯಕ್ಕಿಂತ ಜಾಸ್ತಿ ತಿಕ್ಕೀ ತಿಕ್ಕೀ ತೊಳೆದುಕೊಂಡು ಅತಿ ಮಡಿಯಿಂದ ಒಂದುವೇಳೆ ಹಿಂಬಾಗಿಲ ಪ್ರವೇಶ ಮಾಡುತ್ತಿದ್ದೇನೆಂದರೆ ಅವತ್ತು ನನ್ನಿಂದ ಎಲ್ಲೋ ಏನೋ ಘನಘೋರ ಅಪರಾಧವಾಗಿರೋದು ಖಚಿತ! ಇದರ ಮುಂದಿನ ಭೀಕರ ಪರಿಣಾಮಗಳು,ಮನೆಯ ಹಿರಿಯರ ಕಿವಿಗೆ ನನ್ನ ಪ್ರತಾಪ ಬಿದ್ದು ಬೀಳಬಹುದಾದ ಪೆಟ್ಟುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದು ಈ ಅತಿವಿನಯದ ನಡವಳಿಕೆಯನ್ನು ನೇರವಾಗಿ ಅವಲಂಬಿಸುತ್ತಿದ್ದುದು ಮಾತ್ರ ಸುಳ್ಳಲ್ಲ.
{ನಾಳೆಗೆ ಮುಂದುವರಿಸುವೆ}

Tuesday, August 10, 2010

ನನಗೊಂದು ಕಥೆಬೇಕು...

ನನಗೆ ಬುದ್ದಿ ತಿಳಿದಲ್ಲಿಂದಲೂ ನಾನು ಸುತ್ತಾಟದ ಶೂರ.ಚಿಕ್ಕಂದಿನಲ್ಲಿ ಅಷ್ಟೇನೂ ವಿಶೇಷ ಪ್ರವಾಸಗಳಿಗೆ ಅವಕಾಶವಿರಲಿಲ್ಲ ಅದರಲ್ಲೂ ನಮ್ಮ ಮನೆಯ ಮಟ್ಟಿಗೆ ಪ್ರವಾಸದ ವ್ಯಾಖ್ಯೆ ಧರ್ಮಸ್ಥಳ,ಕಟೀಲು ಸುಬ್ರಮಣ್ಯ,ಉಡುಪಿ,ಮಂದಾರ್ತಿ,ಶೃಂಗೇರಿ,ಹೊರನಾಡುಗಳಿಗಷ್ಟೇ ಸೀಮಿತವಾಗಿರುತ್ತಿದ್ದವು.ಇಂತಹ ಪ್ರವಾಸಗಳು ಅಷ್ಟು ಇಷ್ಟ ಆಗದಿದ್ದರೂ ಅದನ್ನೂ ಬಿಟ್ಟರೆ ಬೇರೆ ಗತಿರ್ನಾಸ್ತಿ ಆಗಿದ್ದರಿಂದ ಅನಿವಾರ್ಯವಾಗಿ ಕರೆದರೆ ಸಾಕು ಬರಗೆಟ್ಟವನಂತೆ ಹೊರಟುಬಿಡುತ್ತಿದ್ದೆ.ಆದರೆ ಮುಂದೆ ಅಂತಹ ತಿರುಗಾಟಗಳಲ್ಲಿ ಯಾವ ಸ್ವಾರಸ್ಯವೂ ಉಳಿಯಲಿಲ್ಲ.ವಾಸ್ತವವಾಗಿ ಅಧ್ಯಯನ ಪ್ರವಾಸ ನನ್ನ ಆಸಕ್ತಿಯ ವಿಷಯ.ಯಾವುದಾದರೂ ಒಂದು ಸ್ಥಳದ ಹಿನ್ನೆಲೆ ಈ ದೃಷ್ಟಿಯಿಂದ ಪ್ರಚೋದನಕಾರಿಯಾಗಿದ್ದರೆ ನಾನು ಸುಲಭವಾಗಿ ಅದಕ್ಕೆ ಬಲಿ ಬೀಳುತ್ತೀನಿ.ಹೀಗೆ ಅನೇಕ ಸ್ಥಳಗಳನ್ನ ಸುತ್ತಿದ್ದೇನೆ.ಪ್ರಾಚೀನ ದಂತಕಥೆಗಳನ್ನ-ಐತಿಹಾಸಿಕ ಸಂಗತಿಗಳನ್ನ ತಮ್ಮೊಳಗೆ ಗಂಟು ಹಾಕಿಕೊಂಡ ಜಾಗಗಳು ಅದೆಷ್ಟೇ ಹಿಂದುಳಿದ ದರಿದ್ರ ಸ್ಥಿಯಲ್ಲಿದ್ದರೂ ನನ್ನ ಗಮನ ಸೆಳೆಯುತ್ತವೆ.ಐಶಾರಾಮ-ಸುಖಲೋಲುಪತೆ ನನ್ನ ಪ್ರವಾಸಾಸಕ್ತಿಗೆ ಚುಂಬಕವಲ್ಲ.ಹೀಗಾಗಿಯೇ ವಿದೇಶಿ ಪ್ರವಾಸದ ವಿಷಯಕ್ಕೆ ಬಂದರೆ ಅಮೆರಿಕೆ ಸೇರಿದಂತೆ ಅನೇಕ ಐರೋಪ್ಯ ದೇಶಗಳು ನನ್ನ ಆಯ್ಕೆ ಪಟ್ಟಿಯಲ್ಲಿಲ್ಲ.ಅತಿ ಸಿರಿವಂತಿಕೆಯ ಬಿಟ್ಟಿ ಪ್ರದರ್ಶನದ ಮಾದರಿಯನ್ನು ಸಿಂಗಾಪುರದಲ್ಲಿ ಕಂಡು ಹೇಸಿಗೆ ಪಟ್ಟುಕೊಂಡಿದ್ದೆ.ಅದೇ ಆಫ್ರಿಕೆಯ ದೇಶಗಳು,ಶ್ರೀಲಂಕ,ಬ್ರಜಿಲ್,ಪಾಕಿಸ್ತಾನ,ಈಜಿಪ್ತ,ನೇಪಾಳ,ಕಾಂಬೋಡಿಯ,ಬರ್ಮಾ,ಮೆಕ್ಸಿಕೋ ನನ್ನಾಯ್ಕೆಯ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿ ರಾರಾಜಿಸುತ್ತವೆ.ಅವ್ಯಕ್ತವಾಗಿ ಈ ದೇಶಗಳಲ್ಲಿ ಇರುವ ಸೆಳೆತ socalled ಸುಖಿ ಕಲ್ಪನೆಯ ರಾಷ್ಟ್ರಗಳಲ್ಲಿ ಇರದೆ ಇರುವುದಕ್ಕೆ ಯಾವುದೇ ಐತಿಹಾಸಿಕ ಕಥಾ ಹಿನ್ನೆಲೆಯ ಬಲ ಅವುಗಳಲ್ಲಿ ಇಲ್ಲದಿರೋದೆ ಕಾರಣವೇನೋ ಅನ್ನಿಸುತ್ತೆ ಕೆಲವೊಮ್ಮೆ.



ಅನುಕ್ಷಣ ಹೋರಾಟದ ಜೀವಂತ ಘಳಿಗೆಗಳು ಬದುಕಿನಲ್ಲಿ ಉಪ್ಪಿನಕಾಯಿಯ ಹಾಗಿದ್ದರೆ ವಿಷಯ ಬೇರೆ:ಆದರೆ ಮನಸ್ಸೇ ಇಲ್ಲದಿದ್ದರೂ ಬದುಕುವ ಸವಾಲಿನ ಭೀತಿಯ ಮುಂದೆ ವಾಸ್ತವಗಳ ಗೋಡೆಗೆ ಅನಿವಾರ್ಯವಾಗಿ ತಲೆಚಚ್ಚಿಕೊಳ್ಳುವುದೇ ಅಭ್ಯಾಸವಾಗುತಿರುವಾಗ ಈ ಸುಖಲೋಲುಪತೆಗಳು ಆಕರ್ಷಕ ಅನ್ನಿಸದೆ ಹೋದವೇನೋ! ಹೀಗಾಗಿ ತಮ್ಮ ಕನಿಷ್ಠ ಅಗತ್ಯಗಳಿಗಿಂತ ಹೆಚ್ಚಿನ ಐಭೋಗದ ಮೇಲೆ ಹಕ್ಕು ಸಾಧಿಸೋದು ಇನ್ನೊಬ್ಬ ಅರ್ಹನ ಅನ್ನಕ್ಕೆ ಕನ್ನ ಹಾಕಿದಂತೆ ಎನ್ನುವ ಭಾವನೆ ದಟ್ಟವಾಗಿ ನನ್ನೊಳಗೆ ಬೇರು ಬಿಟ್ಟಿದೆ.

ಯಾವುದೇ ಜಾಗ ನನ್ನ ಆಸಕ್ತಿ ಕೆರಳಿಸಲು ಅದರೊಳಗೊಂದು ಕಥೆ ಹುದುಗಿರಬೇಕು ಅನ್ನಿಸುತ್ತೆ,ಬಾಲ್ಯದಲ್ಲಿ ಬಾಲವಾಡಿ-ಶಿಶುವಿಹಾರದಲ್ಲಿ ಕೇಳಿದ್ದ ಕಥೆಗಳು,ಎದುರು ಮನೆ ಬಪಮನಿಂದ ( ಕೊಂಕಣಿಯಲ್ಲಿ ಬಪಮ ಎಂದರೆ ಅಪ್ಪನ ಅಮ್ಮ ,ಅಜ್ಜಿ) ಬಾಯಿಂದ ಕೇಳಿ ಕಲ್ಪಿಸಿಕೊಳ್ಳುತ್ತಿದ್ದ ಪಿಳಿಪ-ಪಿತರನ ಕಥೆಗಳು,ಆಗುಂಬೆ ಘಾಟಿಯ ಭಯಾನಕ ಡಕಾಯಿತರ ಕಥೆಗಳು,ನನ್ನಜ್ಜನ ಬಾಯಿಂದ ಕೇಳುತ್ತಿದ್ದ ಹಳೆ ತೀರ್ಥಹಳ್ಳಿಯ ಆಗುಹೋಗಿನ ಕಥೆಗಳು,ಅಮ್ಮನೊಟ್ಟಿಗೆ (ಅಜ್ಜಿಗೆ ನಾನು ಅಮ್ಮ ಎನ್ನುತ್ತೇನೆ) ಅವರ ತವರು ಸಾಗಿನಬೆಟ್ಟಿಗೆ ಶಾಲಾರಜೆಯಲ್ಲಿ ಹೋಗಿದ್ದಾಗ ಕೇಳಲು ಸಿಗುತ್ತಿದ್ದ ಹೇರಳ ಕಥೆಗಳು,ಅಲ್ಲಿನ ಚಾವಡಿ ದೈವಗಳ ಕೋಲ-ತಂಬಿಲಗಳ ಪ್ರತ್ಯಕ್ಷ ದರ್ಶನ,ನಾಗಮಂಡಲಗಳ ಪ್ರಾತ್ಯಕ್ಷಿಕೆ,ಸತ್ಯದೈವಗಳಾದ ಭೂತಗಳ ಹಿನ್ನೆಲೆ ವಿವರಿಸುತ್ತಿದ್ದ ಕಥೆಗಳು,ಕಲ್ಕುಡ-ಕಲ್ಲುರ್ಟಿ..ಕೋಟಿ-ಚೆನ್ನಯ...ಆಗೋಳಿ ಮಂಜಣನ ಬೆರಗು ಹುಟ್ಟಿಸುವ ಕಥೆಗಳು,ರಾಂಪಣ್ಣನ ಹಾಸ್ಯ ಕಥೆಗಳು,ಇನ್ನು ಗದ್ದೆ ಕಾಯುವವರ ಸಾಹಸದ ಕಥೆಗಳು,ಒಂಚೂರು ಅಕ್ಷರ ಓದಲು ಬಂದಾಗ ಎದುರು ಮನೆ ರಾಘಣ್ಣನವರ ಮನೆಯಿಂದ ಕಡ ತಂದು ಓದಿ ಮರಳಿಸಲು ಮನಸ್ಸಾಗದಿದ್ದ "ಚಂದಾಮಾಮ"ನ ವಿಕ್ರಮ-ಬೇತಾಳ,ಭೋಧಿಸತ್ವನ ಜಾತಕಕಥೆಗಳು,ರಾಮಾಯಣ,ಶ್ರೀಮಧ್ಭಾಗವತದ ಕಥೆಗಳು,"ಬಾಲಮಿತ್ರ"ದ ಮಂಡೂಕ ದ್ವೀಪದಲ್ಲಿ ರಾಜಕುಮಾರಿ,ಮಿನಿ ಕಾದಂಬರಿ,ಮೇಲ್ಮವತ್ತೂರಿನ ಆದಿಪರಾಶಕ್ತಿಯ ಕಥೆಗಳು,"ಬೊಂಬೆಮನೆ"ಯ ವಿಕ್ರಮಶೀಲ,ನಳ-ದಮಯಂತಿ,ಆಡುಗೂಲಜ್ಜಿ,ದುಷ್ಯಂತ-ಶಾಕುಂತಳೆಯರ ಕಥೆಗಳು ಹೀಗೆ ಬಾಲ್ಯವೆಲ್ಲ ಬಣ್ಣಿಸಲಸದಳ ಕಥೆಗಳ ಜಡಿಮಳೆಯಲ್ಲಿ ಅಕ್ಷರಶಃ ಕೊಚ್ಚಿಕೊಂಡೆ ಹೋಗಿತ್ತು.ಹೀಗಿದ್ದೂ ಈ ಕಥಾಸರಿತ್ಸಾಗರದ ದಾಹ ತೀರಿರಲಿಲ್ಲ.ಆಸೆ-ಅತಿಯಾಸೆಯ ಮಟ್ಟ ದಾಟಿ ದುರಾಸೆಯ ಆಜುಬಾಜುಗಳಲ್ಲಿ ಓಡಾಡುತ್ತಿತ್ತು.



ಅಗೋಳಿ ಮಂಜಣ ಈಗಲೂ ನನ್ನ ಆಸಕ್ತಿ ಕೆರಳಿಸುವ ಕಥಾಪುರುಷ.ಅಗೋಳಿ ಎಂದರೆ ತುಳುವಿನಲ್ಲಿ ಊಟದ ಹರಿವಾಣ ಅಥವಾ ಅಗಲವಾದ ಊಟದ ತಟ್ಟೆ ಎಂದರ್ಥ.ತುಳುನಾಡಿನಲ್ಲಿ ಅವನು ತನ್ನ ಹುಂಬ ಸಾಹಸಗಳಿಗಾಗಿ-ಬಕಾಸುರ ಭೋಜನಕ್ಕಾಗಿ ಪ್ರಸಿದ್ದ.ಪಂಜೆ ಮಂಗೇಶರಾಯರು ಮಕ್ಕಳಿಗಾಗಿ ಬರೆದಿದ್ದ ಅವನ ಕಥೆ ಸಹಿತ ಪದ್ಯ ಓದಿ ನಾನೂ ಅವನನ್ನು ತಪ್ಪಾಗಿ ಅರ್ಥೈಸಿದ್ದೆ.ಆದರೆ ಸಂಶೋಧಕಿ ಇಂದಿರಾ ಹೆಗ್ಗಡೆ ಯವರು ಬರೆದ "ಚೇಳಾರುಗುತ್ತು ಮಂಜನ್ನಯ್ಗೆರ್" ಕೃತಿ ಓದಿ ತಪ್ಪು ತಿಳುವಳಿಕೆಯನ್ನು ತಿದ್ದಿಕೊಂಡಿದ್ದೇನೆ. ( ಅಂದಹಾಗೆ ಈ ಚೇಳಾರುಗುತ್ತು ಮಂಗಳೂರಿನ ಬಳಿ ಇದೆ ಹಾಗು ಇದು ಸ್ವತಹ ಲೇಖಕಿಯ ಗಂಡನ ಮನೆ) ಅವನ ಕುರಿತು ನನ್ನ ಆಸಕ್ತಿ ಕೆರಳಿಸಿದ್ದ ಪಂಜೆಯವರ ಕವನ ಹೀಗಿತ್ತು.ಮಂಜಣ ಹೇಳ್ತಾನೆ ನೋಡಿ


"ಕಾರ್ಲದ ಬಾಕ್ಯಾರ್ ಕನ್ಜನ ಆವೋಡು,
ಕೊಡನ್ಜದಕಲ್ ಉದಾರ್ಗೆ ಆವೋಡು,
ಗುಜ್ಜೆರೆ ಕೆದು ಪೆರಾವೋಡು,
ಎನ್ನಪ್ಯೇ ದುಗ್ಗು ಬಳಸೋಡು,
ಯಾನ್ ಮಗೆ ಮಂಜಣೆ ಕುಲ್ಲುದು ಉಣೋಡು!"
(ಕಾರ್ಕಳದ ಬಾಕಿಮಾರು ಗದ್ದೆ ತಟ್ಟೆಯಾಗಬೇಕು,
ಕೊಣಾಜೆಯ ಅವಳಿ ಕೊಡುಗಲ್ಲುಗಳು ಉದಾರ್ಗೆ ಅಂದರೆ ಕಡುಬಾಗಬೇಕು,
ಗುಜ್ಜೆರೆ ಕೆರೆಯ ನೀರೆಲ್ಲ ಹಾಲಾಗಬೇಕು,
ನನ್ನಮ್ಮ ದುಗ್ಗು ಬಡಿಸಬೇಕು,
ಮಗ ನಾನು ಮಂಜಣ್ಣ ಕೂತುನ್ನಬೇಕು!)

ಮಾರಾಯ ಅಬ್ಬ! ಕಾರ್ಕಳದ ಕಾಬೆಟ್ಟಿನ ಏಲ್ನಾಡುಗುತ್ತಿನ ೧೨೦ ಎಕರೆ ಬಾಕಿಮರು ಗದ್ದೆಯಷ್ಟು ದೊಡ್ಡತಟ್ಟೆ ಇದ್ದರೇನೆ ಕೊಣಾಜೆ ಕಲ್ಲಿನಷ್ಟು ಗಾತ್ರದ ಕಡುಬು ಹಿಡಿಸಲು ಸಾಧ್ಯ,ಇನ್ನು ಅದಕ್ಕೆ ನಂಚಿಕೊಳ್ಳಲು ಗುಜ್ಜೆರೆ ಕೆರೆಯ ನೀರಿನಷ್ಟು ಹಾಲು ಬೇಕೇಬೇಕು! ಅಷ್ಟನ್ನು ಅದೊಡ್ಡ ಇಕ್ಕುಗೈಯ ಅವನಮ್ಮ ಬಡಿಸಬೇಕಂತೆ! ಇವ ಮಗ ಮಂಜಣ ಕೂತು ಉಣ್ಣಬೇಕಂತೆ!!! ನೀವೇ ಹೇಳಿ ಇಂತಹ ಉತ್ಪ್ರೇಕ್ಷಿತ ಕಥಾ ನಾಯಕ ಬಾಲ್ಯದಲ್ಲಿ ಬೆರಗು ಹುಟ್ಟಿಸಲಾರನೆ?
{ನಾಳೆಗೆ ಮುಂದುವರೆಸುವೆ}

ಸುಳ್ಳಲ್ಲ...

ಮೋಹದ ಕಿಡಿ ಭಾವದ ಅರಗಿಗೆ ತಾಕಿ ಹೊತ್ತಿ ಉರಿದಾಗಲೂ ನನಗೆ ಅರ್ಥವಾಗಿರಲಿಲ್ಲ,
ನಿನ್ನದೇ ನೆನಪು ಮೂರು ಹೊತ್ತು ಕಾಡಲಾರಂಭಿಸಿದಾಗಲೂ...ಮನಸ ಆಸೆ ಉಸುರೋದು ಶರ್ತವಾಗಿರಲಿಲ್ಲ/
ಆದರೆ ನೀನೊಮ್ಮೆ ಬಾಳಲಿ ಬಂದ ಮೇಲೆ... ನಿನ್ನೊಲವ ಸಾಕ್ಷಾತ್ಕಾರದಲಿ ನಾನು ಪರಿಶುದ್ಧನಾದೆ,
ನಿನ್ನೆದೆ ಬೋಧಿ ಮರದಡಿ ಕೂತು ಬುದ್ಧನಾದೆ//


ಆಸೆಯೇ ಇಲ್ಲದೆ ಬರಿಬತ್ತಲಾಗಿಸಿದ್ದೆ ಮನಸನೆಲ್ಲ,
ನೀ ಬಂದೆ ನೋಡು...ಕನಸ ನೀ ತಂದೆ ನೋಡು/
ನಿನ್ನೊಲವ ಜಾಲದಲಿ ಜೀವದ ಹಂಗು ಬಿಟ್ಟು ಕಾದುವ ಕಲಿಯಾದೆ,
ಜಗದ ಮೋಹವನೆಲ್ಲ ನಿನಗಾಗಿ ಬಿಟ್ಟ ಬಾಹುಬಲಿಯಾದೆ//

Monday, August 9, 2010

ಮಳೆಯ ಹಾದಿಯಲ್ಲಿ...

ಮತ್ತಿನಲಿ..ಗಮ್ಮತ್ತಿನಲಿ,
ಬಿಗಿದ ಮುಖ ಸಡಿಲಿಸಿ ಕರಿಮೋಡ ನಕ್ಕಾಗ/
ಸುರಿದದ್ದು ಮುತ್ತಿನ ಮಳೆಹನಿ,
ನೆಲಕೂ ಸೌಂದರ್ಯದ ಸೋಂಕು ತಾಗಿಸಿದ ಶೃಂಗಾರದ ಖನಿ!//


ನಳನಳಿಸುವ ಬಾನಿಗೆ ನೀಲಿ ಹಚ್ಚಿಸಿದವರ್ಯಾರು?,
ಮೋಡದ ಎದೆಯೊಳಗೆ ನೆಲದೆಡೆಗಿನ ಪ್ರೀತಿ ಹೆಚ್ಚಿಸಿದವರ್ಯಾರು?/
ಬೀಸುವ ಗಾಳಿಯ ಕಿವಿಯಲ್ಲಿ ಗುಟ್ಟನೊಂದನು ಉಸುರಿ,
ಭೂಮಿಯ ಕಣ್ಣಲಿ ಕಾತರದ ಉನ್ಮಾದ ಹುಚ್ಚೆಬ್ಬಿಸಿದವರ್ಯಾರು?//

Sunday, August 8, 2010

ಆ ಕ್ಷಣಗಳಿಗೆ ಚಿರಋಣಿ...

ಆ ರಾತ್ರಿ ಅಷ್ಟು ಮಧುರವಾಗಿರುತ್ತಿತ್ತೆ?
ನನ್ನೊಳಗೆ ನರಳುತ್ತಿದ್ದ ಒಂಟಿತನ ಹಂಚಿಕೊಳ್ಳಲು...
ಜೊತೆಗೆ ನೀನಿಲ್ಲದಿದ್ದರೆ/
ನಡುಗಿಸುತ್ತಲೆ ಕಾಡುತ್ತಿದ್ದ ಛಳಿಯ ಮುಂಬೆಳಗು ಇನ್ನಷ್ಟು ಆಪ್ತವಾಗುತ್ತಿತ್ತೆ?
ಹಬೆಯಾಡುವ ಚಹದ ಬಟ್ಟಲೊಂದಿಗೆ....
ನೀನಿತ್ತ ಬೆಚ್ಚನೆಯ ಸ್ಪರ್ಶ ಜೊತೆಗೂಡದಿದ್ದರೆ?//

ಹೇಗೆ ಹೇಳಲಿ ಇನ್ನು?

ಕಣ್ಣೀರು ಹರಿಯಲಿಬಿಡು ಮಳೆನೀರಿಗಿಂತ ಕಡೆಯಾಗಿ,
ಮನಸಿನ ತೂಬಿಗೆ ನಿನ್ನೊಂದಿಗೆ ಕಳೆದ ಜೇನು ನೆನಪುಗಳು ನಿಲ್ಲದಿರಲಿ ತಡೆಯಾಗಿ/
ನೀನಿಲ್ಲಿಲ್ಲ,ಮರಳಿ ಬರುವುದೂ ಇಲ್ಲ ಎನ್ನುವುದು ಸತ್ಯ,
ಭಾವ ಸಂಕಟಕೆ ಬಾಯಾರಿದರೂ...ಅಳುವಲ್ಲೇ ಅರ್ಥ ಹುಡುಕಬೇಕಿದೆ ನಾ ನಿತ್ಯ//

ನಿನ್ನ ಚುಂಬನ...

ಸುಮ್ಮನೆ ತಬ್ಬಿಕೊಂಡರೆ ಸಾಕು ಮುತ್ತು ಬಲು ದುಬಾರಿ,
ನಿನ್ನೆದೆ ಮೂಲೆಯಲ್ಲೊಂದು ತಾವು ಸಾಕು/
ಕಣ್ಣ ಚುಂಬಿಸು ಎಂಬ ಬೇಡಿಕೆಯಿಲ್ಲ,
ಆದರೂ ದೂರದೊಂದು ಆಸೆ,,,,ತುಟಿಗೆ ತುಟಿ ಒತ್ತಲಾರೆಯ ನನ್ನೆಲ್ಲ ನಿರೀಕ್ಷೆ ಮೀರಿ?//


ಸುರಿವ ಮಳೆಹನಿಯ ಕನಸಲಿ ಕಚಗುಳಿ,
ನುಲಿವ ಭೂಮಿಯ ಸೋಕಲಿ ತುಸು ಚಳಿ/
ಮಾತು ಮರೆತ ಮೌನ ಹಿತವಾಗಲಿ ಹೀಗೆ,
ಬಯಸಿ ಬಯಸಿ ಸೋತ ಗೆಲುವಿನ ಕಣ್ಣು ನಸು ಮಿಂಚುವ ಹಾಗೆ//


ಅದರುವ ಅಧರದ ಒಪ್ಪಿಗೆ ಮುದ್ರೆ ಕೆನ್ನೆಯ ಒತ್ತುವ ಘಳಿಗೆ/
ರೋಮಾಂಚನ...ನಿನ್ನ ಚುಂಬನ//

ಕಾರಣವೆ ಇಲ್ಲದೆ ಕವಿಯಾದೆ!

ಅರಿಯಲಾಗದೊಂದು ಕಾರಣಕೆ ಮನಸು ಅರಳುತಿದೆ.
ಹೇಳಲಾಗದೊಂದು ಭಾವ ಮನದೊಳಗೆ ಕೆರಳುತಿದೆ/
ಸುಮ್ಮನೆ ಬೀಸಿ ಮೈಯನ್ನೆಲ್ಲ ಚುಂಬಿಸಿದ ಗಾಳಿ ಕಿವಿಯಲಿ ಹೇಳಿದ್ದಾದರೂ ಏನು?.
ಈ ಗುಟ್ಟನು ಕೇಳಿ ಪುಳಕಗೊಳ್ಳೋಕೆ ಜೋತೆಗಿರಬಾರದಿತ್ತೆ ನೀನು!//


ಬಾನಿಗೆ ಭಾರವಾದ ಮೋಡ ಇಳೆಗೆ ಆಪ್ತ,
ಯಾರಿಗೂ ಬೇಡವಾದ ನಾನು ನಿನ್ನೊಲವ ಎಳೆಯೊಳಗೆ ಸುಪ್ತ/
ಬಿಸಿಲಿಗೆ ಬೆದರಿದ ಒಂಟಿ ಮಳೆಹನಿ ನಾನು,
ಎದೆಯ ಚಿಪ್ಪೊಳಗೆ ಬೆಚ್ಚಗೆ ಬಚ್ಚಿಡಲಾರೆಯ ನೀನು?//

Thursday, August 5, 2010

ನೆನಪಲೆ ನಾನು ಸುಖಿ..

ಮಧುರ ಸವಿಯಾದ...ನಾವಿಬ್ಬರೂ ಜೊತೆಯಾಗಿ ಕಳೆದ ಕ್ಷಣಗಳ ಚಿತ್ರ ಹಾಗೆ ಇರಲಿ ಬಿಡು,
ನೀ ಮರಳಿ ಬಂದು ಅದನು ಕೆಡಿಸಬೇಡ/
ನೆನಪಲೆ ನೀನವಿತಿರುವ....ಮನದ ಭಿತ್ತಿಗೆ ತೂಗು ಹಾಕಿದ ತೈಲವರ್ಣಚಿತ್ರ ಚೆನ್ನಾಗಿಯೇ ಇದೆ,
ಮತ್ತೆ ನನ್ನ ಬಾಳಲಿ ಹಾಜರಾಗಿ ಹೊಸ ಬಣ್ಣ ಬೆರೆಸಬೇಡ//

ಕಂಬನಿ ಹೊಸತೇನಲ್ಲ,
ವೇದನೆಯೂ ಆಪ್ತವಾಗಿದೆ ಈಗ/
ನೀ ಜೊತೆಯಿದ್ದಾಗ ಇದ್ದ ಒಲವಿಗಿಂತಲೂ,
ಹೆಚ್ಚಿದೆ ನಿನ್ನೆಡೆಗಿನ ಪ್ರೀತಿಯ ಸೆಳೆತದ ಆವೇಗ//

ಏಕಮುಖ ನಿಲುವುಗಳು ಅಪಾಯವಲ್ಲವೇ?

ಸಿಬಿಐ ಟ್ರಿಗರ್ ಹಿಡಿದವರ್ಯಾರು? ಗುರಿಯಾರತ್ತ? ಎಂಬ ಡಾ ಹಿಲ್ಡಾ ರಾಜರ ಲೇಖನ ೩ ಆಗಷ್ಟ್ ೨೦೧೦ರ ವಿಜಯ ಕರ್ನಾಟಕದ ಮುಖಾಮುಖಿ ಪುಟದಲ್ಲಿ ಪ್ರಕಟವಾಗಿದೆ.ಈ ಲೇಖನದಲ್ಲಿ ಲೇಖಕಿ ಗಂಭೀರವಾದ ಆಕ್ಷೇಪಗಳನ್ನು ಸಾರ್ವತ್ರಿಕವಾಗಿ ಎತ್ತಬಹುದಾಗಿತ್ತದರೂ ತೀರ ವಯಕ್ತಿಕ ಮಟ್ಟದಲ್ಲಿ ಎತ್ತಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಅದೆಷ್ಟೇ ಕೆಳಕ್ಕಿಳಿದಾದರೂ ಸಮರ್ಥಿಸಿಕೊಳ್ಳುವ ಹಟಕ್ಕೆ ಬಿದ್ದಿದ್ದರೆ ಅನ್ನಿಸುತ್ತಿದೆ,ಹೀಗಾಗಿ ಈ ಲೇಖನ.



ಮೊದಲಿಗೆ ವಾದ ಮಂಡಿಸುವ ಹುಮ್ಮಸ್ಸಿನಲ್ಲಿ ಮೋದಿ ಒಬ್ಬ ಅಪ್ಪಟ ರಾಜಕಾರಣಿ ಅನ್ನೋದನ್ನ ಮರೆಯದಿರೋಣ,ಪ್ರಜಾಪ್ರಭುತ್ವದ ಆಶಯದ ಪ್ರಕಾರ ಅಧಿಕಾರಶಾಹಿ ಕಾರ್ಯಾಂಗ ಪ್ರಜೆಗಳ ಹಣ ಹಾಗು ಸ್ವತ್ತನ್ನ ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಲು ಜನರಿಂದ ನೇರವಾಗಿ ಆಯ್ಕೆಯಾದ ಪ್ರತಿನಿಧಿ ನಿಗಾ ವಹಿಸಬೇಕು.ಆದರೆ ವಾಸ್ತವದಲ್ಲಿ ಆಗುತ್ತಿರೋದಾದರೂ ಏನು? ಇಲ್ಲಿ ಅಧಿಕಾರಶಾಹಿಯ ಗುಮ್ಮವನ್ನು ತೋರಿಸುತ್ತ ಪ್ರಜಾಪ್ರತಿನಿಧಿಗಳು ಗೆಬರುವ ಸಂಪತ್ತಿಗೆ ಅಧಿಕಾರಶಾಹಿಗಳೇ ಮೂಕ ಸಾಕ್ಷಿಯಾಗಬೇಕಾದ ಹೀನಾಯ ಪರಿಸ್ಥಿತಿಯಿದೆ.ತಮ್ಮ ಐದೋ-ಹತ್ತೋ ವರ್ಷಗಳ ಆಡಳಿತಾವಧಿಗಳಲ್ಲಿ ರಾಜಕಾರಣಿಗಳು ಮಾಡುವ ಬೃಂಹಾಂಡ ಭ್ರಷ್ಟಾಚಾರಕ್ಕೆ ,ಕೊಲೆ ಸುಲಿಗೆಯಂತಹ ಅನಾಚಾರಗಳಿಗೆ ಕೊನೆಗೆ ತಲೆಕೊಡಬೇಕಾದವರು ಅಧಿಕಾರಶಾಹಿಗಳೇ.ರಾಜಕಾರಣಿಗಳ ಪಾಪದ ಫಲವನ್ನು ತಾನೂ ಚೂರು ಉಂಡ ತಪ್ಪಿಗೆ ಸೇವಾ ನಿವೃತ್ತಿಯ ನಂತರವೂ ಸಿಕ್ಕಿಬಿದ್ದರೆ ಕಂಬಿ ಎನಿಸುವ ಕರ್ಮ ಈ ವರ್ಗದ್ದು.ಇದು ಮೋದಿ ಪ್ರಕರಣದಲ್ಲೂ ಸಾಬೀತಾಗಿದೆ.ಡಾ ಹಿಲ್ಡಾ ರಾಜರ ವಾದದಂತೆ ಮೋದಿ ಮುಗ್ಧರು.ಅದರಂತೆ ಅವರ ಸುತ್ತಲಿನವರ ಪಾಪಕ್ಕೆ ಅವರನ್ನು ಹೊಣೆ ಮಾಡುವುದು ಎಷ್ಟು ಸರಿ ಎನ್ನುವುದನ್ನು ಕೊಂಚ ಗಮನಿಸೋಣ.ಅಲ್ಲ,ಒಬ್ಬ ಮುಖ್ಯಮಂತ್ರಿಯ ಗಮನಕ್ಕೆ ಬಾರದೆ-ಅವರ ಅಣತಿಯಿಲ್ಲದೆ ಸಾಮೂಹಿಕ ಹತ್ಯೆಗಳು,ಬೇಕಾಬಿಟ್ಟಿ ಹುಸಿ ಎನ್ಕೌಂಟರ್ಗಳು ನಡೆಯುತ್ತವೆ ಎಂದು ನಂಬಿಸಲು ಹೊರಟಿರುವ ಲೇಖಕಿ ಯಾರ ಕಿವಿಯ ಮೇಲೆ ಹೂವಿಡಲು ಹೊರಟಿದ್ದಾರೆ? ಅವರೂ ಕೂಡ ಅವರದ್ದೇ ಆದ ಈ ವಾದವನ್ನು ನಂಬುವಷ್ಟು ಮುಗ್ಧರಿರಲಾರರು.



ತನ್ನ ಆಡಳಿತ ವ್ಯಾಪ್ತಿಯಲ್ಲಿ ನಡೆದ ಅನಾಚಾರಗಳಿಗೆ ಮುಖ್ಯಮಂತ್ರಿಯೊಬ್ಬ ಅನಿವಾರ್ಯವಾಗಿ ಹೊಣೆಹೊರಲೇಬೇಕು.ಪ್ರಜಾಪ್ರಭುತ್ವದ ಅಣಕದಂತೆ ಕಾರ್ಯಾಂಗ ಹಾಗು ಶಾಸಕಾಂಗದ ಅನೈತಿಕ ಮೈತ್ರಿಯಿಂದ ಕಾನೂನಿಗೆ ಸೂಕ್ತ ಮನ್ನಣೆ ಸಿಗದಿದ್ದಾಗ ಇದೆ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಭ ಮಾಧ್ಯಮ ಕಾವಲು ನಾಯಿಯ ಪಾತ್ರ ವಹಿಸಲೇಬೇಕು.ಸದ್ಯದ ಶೋಚನೀಯ ಪರಿಸ್ಥಿತಿಯಲ್ಲಿ ಮಾಧ್ಯಮ ಹಾಗು ನ್ಯಾಯಾಂಗವಷ್ಟೇ ನನ್ನಂತಹ ಶ್ರೀಸಾಮಾನ್ಯರಿಗೆ ತೋಚುವ ಆಶಾಕಿರಣಗಳು.ಲೇಖಕಿ ಅಂದಂತೆ ನಾನಾ ಟೀವಿ ಚಾನೆಲ್ಗಳು ಮುಗಿಬಿದ್ದಂತೆ ಮೋದಿಯನ್ನ ಗುರಿಯಾಗಿಸಿಕೊಂಡರೆ (ಅವುಗಳ ಟಿಅರ್ಪಿ ಚಪಲವನ್ನ ಕ್ಷಣ ಕಾಲ ಮರೆಯೋಣ) ತಪ್ಪೇನು? ಭೂತಕಾಲದ ಗೋರಿಯಲ್ಲಿ ಮೋದಿ ಹೂತುಹಾಕಿದ ಅನೇಕ ವಾಸ್ತವಗಳ ಆಸರೆಯಲ್ಲಿಯೇ ಅವರಿಂದು ಯಶಸ್ವಿ ರಾಜಕಾರಣಿಯಾಗಿದ್ದಾರೆ ಎಂಬ ನಿತ್ಯಸತ್ಯವನ್ನು ಕುಟುಕು ಕಾರ್ಯಾಚರಣೆಗಳ ಮೂಲಕ ಅನಾವರಣಗೊಳಿಸೋದು ಅಪರಾಧವೇ? ಅಭಿವೃದ್ಧಿಶೀಲ ನಿಲುವುಗಳಿಂದ ಜನಪ್ರಿಯ ಮುಖ್ಯಮಂತ್ರಿಗಳಾದ ಮೋದಿಯವರ ಈ ಜನಪ್ರಿಯತೆಯ ಬಹುಪಾಲು ಅವರೊಳಗಿನ ಯಶಸ್ವಿ ರಾಜಕಾರಣಿಗೂ ಸಲ್ಲಬೇಕಲ್ಲವೇ? ತಾನು ಮಾಡಿದ ಅನಾಚಾರಕ್ಕೆ ತಾನೇ ಬಲಿಯಾಗುವ ಮುನ್ನ ಹಿರಿಯ ಪೊಲೀಸ್ ಅಧಿಕಾರಿ ಡಿ ಜಿ ವಂಜಾರ,ರಾಜ್ ಕುಮಾರ್ ಪಾಂಡಿಯನ್,ಎಂ ಎನ್ ದಿನೇಶರನ್ನು ಮೋದಿ ಹರಕೆಯಕುರಿ ಮಾಡಿದ್ದು ಸುಳ್ಳೇ?



ಇದೇ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಶುದ್ಧಹಸ್ತರಾದ ಮೋದಿ ವಿಶೇಷ ಆಸಕ್ತಿ ವಹಿಸುತ್ತಾರೆ ತಾವು ನಿಷ್ಪಕ್ಷಪಾತಿ ಎನ್ನುವ ಘೋಷಣೆಯೊಂದಿಗೆ ಪ್ರಕರಣದ ತನಿಖೆಗೆ ವಿಶೇಷ ತನಿಖಾದಳವನ್ನು ನಿಯುಕ್ತಗೊಳಿಸುತ್ತಾರೆ.ಹಿರಿಯ ಪೊಲೀಸ್ ಅಧಿಕಾರಿಗಳಾದ ಅಭಯ್ ಚೂಡಾಸಮಾ ಹಾಗು ಎನ್ ಕೆ ಅಮೀನ್ ರಿಗೆ ಜಂಟಿಯಾಗಿ ಅದರ ಉಸ್ತುವಾರಿ ವಹಿಸಲಾಗುತ್ತದೆ.ಸದರಿ ನೇಮಕ ಆದೇಶ ನೇರವಾಗಿ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಹೊರಬಿದ್ದಿರುತ್ತದೆ.ಅಮಿತ್ ಶಾ ಗುಜರಾತಿನ ಸಹಾಯಕ ಗೃಹ ಸಚಿವರಾಗಿರುವುದರಿಂದ ಹಾಗು ಗೃಹಖಾತೆಯು ನೇರವಾಗಿ ಅಲ್ಲಿನ ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿರುವುದರಿಂದ ಇದನ್ನು ಒಂದು ಸಹಜ ನಡೆ ಎಂಬಂತೆ ಬಿಂಬಿಸಲಾಗುತ್ತದೆ.ಕುಚೋದ್ಯದ ಸಂಗತಿಯೆಂದರೆ ಈ ನಡುವೆ ಅಲ್ಲಿನ ಸಿಒಡಿ ತನ್ನ ಹೊಣೆಗಾರಿಕೆಯಂತೆ ತನಿಖೆ ನಡೆಸಿ ಸರಕಾರಕ್ಕೆ ಸಲ್ಲಿಸುವ ವರದಿ ಅಮೀನ್ ಹಾಗು ಚೂಡಾಸಮಾರನ್ನು ಸದರಿ ಪ್ರಕರಣದಲ್ಲಿ ಅಪರಾಧಿಗಳನ್ನಾಗಿ ಗುರುತಿಸುತ್ತದೆ.ಪ್ರಕರಣದಲ್ಲಿ ಇವರಿಬ್ಬರ ಪಾತ್ರವಿರುವುದನ್ನು ೧೦೦೦ ಪುಟಗಳ ಈ ವರದಿ ಬೊಟ್ಟು ಮಾಡಿ ತೋರಿಸುತ್ತಾದೆ.ಹೀಗಿದ್ಧೂ ಅವರ ಕೂದಲು ಸಹ ಕೊಂಕುವುದಿಲ್ಲ,ಏಕೆಂದರೆ ಪ್ರಕರಣದ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳು ಹಳ್ಳ ಹಿಡಿಸುವ ತಯಾರಿಯಲ್ಲಿರುತ್ತಾರೆ.ಹೀಗಿರುವಾಗ ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ವರದಿಗೆ ಸಿಬಿಐ ಜೀವ ತುಂಬುತ್ತದೆ.ನೆನಪಿಡಿ ;ಇಲ್ಲಿ ಮುತುವರ್ಜಿ ವಹಿಸಿದ್ದು ಸರ್ವೋಚ್ಛ ನ್ಯಾಯಾಲಯವೇ ಹೊರತು ನಂ ೧೦,ಜನಪಥ ರಸ್ತೆಯಲ್ಲ!




ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ತಮ್ಮ ಬಲಗೈ ಭಂಟರಾದ ಚೂಡಾಸಮಾ ಹಾಗು ಅಮೀನ್ ಕಾನೂನಿನ ಕುಣಿಕೆಗೆ ಸಿಕ್ಕಿ ಬಿದ್ದಾಗ ವಿಶೇಷ ತನಿಖಾದಳದ ಉಸ್ತುವಾರಿಯನ್ನು ಮುಖ್ಯಮಂತ್ರಿಗಳು ದಕ್ಷ ಪೊಲೀಸ್ ಅಧಿಕಾರಿಯಾದ ಗೀತ ಜೋಹ್ರಿಗೆ ವಹಿಸಿ ಇಡಿ ದಳವನ್ನೇ ಪುನರ್ರಚಿಸುತ್ತಾರೆ.ಇದು ಅನಿವಾರ್ಯ ನಡೆ ಅನ್ನುವುದು ಗಮನಾರ್ಹ,ಆದರೆ ಇಲ್ಲೂ ತಮ್ಮ ಶಾಣ್ಯಾ ತನ ಮೆರೆಯುವ ಮುಖ್ಯಮಂತ್ರಿಗಳು ಶ್ರೀಮತಿ ಗೀತ ಜೋಹ್ರಿಯ ಪತಿ ಭಾರತೀಯ ಅರಣ್ಯ ಸೇವೆಯ ಗುಜರಾತ್ ಕೇಡರ್ ನ ಅಧಿಕಾರಿ ಜೋಹ್ರಿಯ ಕತ್ತಿಗೆ ವಿಶೇಷ ಗುಪ್ತ ಕಾಯಿದೆಯಡಿ ಭ್ರಷ್ಟಾಚಾರದ ದೊಡ್ಡ ಕೇಸನ್ನು ಸದ್ದಿಲ್ಲದೇ ತಗಲಿಸುತ್ತಾರೆ.ಒಂದು ವೇಳೆ ಹೆಂಡತಿ ಸರಿಯಾಗಿ ಕೆಲಸ ನಿರ್ವಹಿಸಿದರೆ ಗಂಡ ಕಂಬಿ ಎಣಿಸುವ ಮುಸುಕಿನ ಬೆದರಿಕೆ! ಅಂದರೆ ಶ್ರೀಮತಿ ಗೀತ ಜೋಹ್ರಿಗೆ ವಿಶೇಷ ತನಿಖಾದಳದ ಉಸ್ತುವಾರಿ ವಹಿಸಿ ಕೊಡುವ ಉದ್ದೇಶವೇ ಸೊಹ್ರಾಬುದ್ದೀನ್ ಪ್ರಕರಣದ ಹಳಿತಪ್ಪಿಸುವುದು. ಪ್ರಕರಣದ ತನಿಖೆಯನ್ನು ಗುರಿ ತಪ್ಪಿಸಿ ಸಿಬಿಐ ಬೇಟೆನಾಯಿಗಳನ್ನು ಹಾದಿ ತಪ್ಪಿಸುವ ಪವಿತ್ರ ಕಾರ್ಯ ಮಾನ್ಯ ಮುಖ್ಯಮಂತ್ರಿಗಳ ಕಛೇರಿಯಿಂದಲೇ ಶ್ರೀಮತಿ ಗೀತ ಜೋಹ್ರಿಯವರಿಗೆ ನಿರ್ದೇಶಿತವಾಗಿರುತ್ತದೆ.


ಇನ್ನು ಸಿಬಿಐಯ ದುರುಪಯೋಗದ ವಿಷಯಕ್ಕೆ ಬರೋಣ.ಕಾಲಕಾಲಕ್ಕೆ ಕೇಂದ್ರೀಯ ಆಂತರಿಕ ತನಿಖಾ ಸಂಸ್ಥೆ ಎಲ್ಲಾ ಆಡಳಿತಾರೂಢ ಸರಕಾರಗಳಿಂದ ಸಖತ್ತಗಿಯೇ ದುರುಪಯೋಗವಾಗುತ್ತ ಬಂದಿದೆ.ಬರೋಡಾ ಹುಸಿ ಡೈನಮೇಟ್ ಪ್ರಕರಣದಲ್ಲಿ ಜಾರ್ಜ್ ಫೆರ್ನಾಂಡಿಸ್ ರನ್ನು ಹಣಿಯಲು ಪ್ರಯತ್ನಿಸಿದ ಇಂದಿರಾ ಸರಕಾರ,"ಕಿಸ್ಸಾ ಕುರ್ಸೀಕ" ಮುಂದೊಡ್ಡಿ ಸಂಜಯಗಾಂಧಿಯ ಮಗ್ಗುಲು ಮುರಿಯೋಕೆ ಹೊರಟ ಮೊರಾರ್ಜಿಭಾಯಿ ಸರಕಾರ,ಇಂದಿರೆಯ ಮಗ ರಾಜೀವ್ ಸೃಷ್ಟಿಸಿ ವಿ ಪಿ ಸಿಂಗರನ್ನು ಸಿಲುಕಿಸಲು ಹವಣಿಸಿದ ಫೇರ್ಪಾಕ್ಸ್ ಹಗರಣ,ಅದೇ ವಿ ಪಿ ಸಿಂಗ್ ರಾಜೀವರಿಗೆ ಮುಯ್ಯಿ ತೀರಿಸಲು ಬಳಸಿದ ಬೋಫೋರ್ಸ್ ಪ್ರಕರಣ,ಅಸಾಧ್ಯ ಮುದುಕ ಪಿ ವಿ ನರಸಿಂಹ ರಾವ್ ಸರಕಾರ ಸ್ವಪಕ್ಷೀಯರನ್ನೇ ತಹಬಂದಿಗೆ ತರಲು ಬಳಸಿದ ಜೈನ್ ಹವಾಲ ಡೈರಿ ಪ್ರಕರಣ,ಆದಾಯಕ್ಕೆ ಮೀರಿದ ಗಳಿಕೆಗೆ ಕೊಕ್ಕೆ ಹಾಕಲು ಹೋಗಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿಯಿಂದ ಒದೆಸಿಕೊಂಡ ಹೆಚ್ ಡಿ ದೇವೇಗೌಡರ ಸರಕಾರ,ತಮ್ಮ ಪಕ್ಷದ ಅಧ್ಯಕ್ಷರನ್ನ ಹಣದ ಸಮೇತ ಹಿಡಿದು ಮುಖಭಂಗ ಮಾಡಿದ ಸೇಡಿಗೆ ತೆಹೆಲ್ಕ ಮೇಲೆ ಮುಗಿಬಿದ್ದ ಎನ್ಡಿಏ ಸರಕಾರ ಇವೆಲ್ಲ ಅಸಲಿಗೆ ಮಾಡಿದ್ದಾದರೂ ಏನು? ಇಲ್ಲಿ ಪಕ್ಷಭೇದ ಕಾಣಿಸಿದರೆ ಅದು ನೋಡುವವರ ದೃಷ್ಟಿ ದೋಷವಷ್ಟೇ.ಅಲ್ಲದೆ ಸಿಬಿಐ ಇಲ್ಲಿಯವರೆಗೆ ತನಿಖೆ ನಡೆಸಿದ ಒಟ್ಟಾರೆ ಪ್ರಕರಣಗಳಲ್ಲಿ ಕೆಟ್ಟ ಹೆಸರು ಪಡೆದಿದ್ದು ರಾಜಕಾರಣಿಗಳಿಗೆ ಸಂಬಂಧಿಸಿದ ಕೇಸುಗಳಲ್ಲಿ ಮಾತ್ರ.ಇಲ್ಲಿ ಅದರ ಯಶಸ್ಸಿನ ದರ ಶೇ;೨೩,ಆದರೆ ಇನ್ನುಳಿದಂತೆ ನ್ಯಾಯಾಂಗದ ನಿರ್ದೇಶನದಂತೆ ನಡೆಸಿದ ಸ್ವತಂತ್ರ ತನಿಖೆಗಳಲ್ಲಿ ದರ ಶೇ;೭೮ನ್ನು ಮುಟ್ಟುತ್ತದೆ.ಉಳಿದ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ.ಅಂದ ಹಾಗೆ ಅಮಿತ್ ಶಾ ಅರ್ಥಾತ್ ಮೋದಿ ಪ್ರಕರಣ ಅಂತಹದ್ದೊಂದು ಸ್ವತಂತ್ರ ತನಿಖಾ ಪ್ರಕರಣ.



ಇನ್ನು ರಾಜಭವನದ ವಿಷಯಕ್ಕೆ ಬಂದರೆ ಅದು ಕೇಂದ್ರ ಸರಕಾರಗಳು ತಮ್ಮ ಸ್ವಕಾರ್ಯ ಸಾಧನೆಗೆ ಮಾಡಿಕೊಂಡ ಸುರಕ್ಷಿತ ವ್ಯವಸ್ಥೆಯಂತೆಯೂ,ವೃದ್ದ ರಾಜಕಾರಣಿಗಳ ಗಂಜಿಕೆಂದ್ರದಂತೆಯೂ ಏಕಕಾಲದಲ್ಲಿ ಅದು ಗೋಚರವಾಗುತ್ತದೆ.ತಮ್ಮ ನಿಲುವಿಗೆ ಸೆಡ್ಡು ಹೊಡೆದು ವಿರುದ್ಧವಾಗಿ ನಡೆಯುವ ರಾಜ್ಯ ಸರಕಾರಗಳಿಗೆ ಮೂಗುದಾರ ಹಾಕಲು ಎಲ್ಲ ಕೇಂದ್ರ ಸರಕಾರಗಳೂ ಸುಲಭವಾಗಿ ಉಪಯೋಗಿಸಿಕೊಳ್ಳುವ ರಾಜ್ಯಪಾಲರನ್ನು ಏಕಾಗಿಯಾದರೂ ದೂರಬೇಕು? ತಮ್ಮನ್ನು ನೇಮಿಸಿದ ಸ್ವಾಮಿಗಳ ಕಾಲು ನೆಕ್ಕಲು,ಅವರ ಹಿತ ಕಾಯಲು ಸದಾ ಸಿದ್ಧರಾಗಿರುವ ಅವರ ನಡೆನುಡಿಗಳನ್ನು ಗಂಭೀರವಾಗಿ ಪರಿಗಣಿಸುವುದೇ ಹಾಸ್ಯಾಸ್ಪದ.ಇತ್ತೀಚಿಗಿನ ಉದಾಹಾರಣೆಯನ್ನೇ ತೆಗೆದುಕೊಂಡರೆ ಈ ಭಾರಧ್ವಾಜ್ ರಂತೆಯೇ ಕರ್ನಾಟಕದಲ್ಲಿ ಟಿ ಎನ್ ಚತುರ್ವೆದಿಗಳೂ,ವಿ ಎಸ್ ರಮಾದೇವಿಯವರೂ.ಪಕ್ಕದ ತಮಿಳುನಾಡಿನಲ್ಲಿ ನ್ಯಾ ಫಾತಿಮಾಬೀವಿಯವರೂ ವರ್ತಿಸಿ ನಗೆಪಾಟಲಿಗೆ ಈಡಾಗಿದ್ದರು.ಉತ್ತರ ಪ್ರದೇಶದಲ್ಲಂತೂ ರೋಮೇಶ್ ಭಂಡಾರಿ ಎಂಬ ಜೋಕರ್ ಭರಪೂರ ಬಿಟ್ಟಿ ಮನರಂಜನೆ ಕೊಟ್ಟ.ಸದ್ಯ ಸೈಯ್ಯದ್ ಸಿಬ್ತೆ ರಿಜಿ ಅದೇ ಹಾದಿಯಲ್ಲಿದ್ದಾರೆ.ಇನ್ಯಾರೋ ಯಾಕೆ? ನಮ್ಮವರೇ ನ್ಯಾ ರಾಮಾ ಜೋಯಿಸ್ರವರು ಬಿಹಾರ್ ಹಾಗು ಜಾರ್ಖಂಡ್ಗಳಲ್ಲಿ ಮಾಡಿದ್ದಾದರೂ ಏನು? ಈ ಸರ್ವಕಾಲಿಕ -ಸಾರ್ವತ್ರಿಕ ಚಮಚಾಗಿರಿಗೆ ವಿಶೇಷ ಮಹತ್ವ ಕೊಡಬೇಕ?


ಭೋಪಾಲ್ ಅನಿಲ ದುರಂತ,ಜಗದೀಶ್ ಟೈಟ್ಲರ್-ಸಜ್ಜನ್ ಕುಮಾರ್ ಸಾರಥ್ಯದ ಸಿಕ್ಖ್ ಹತ್ಯಾಕಾಂಡವನ್ನು ಲೇಖಕಿ ಪ್ರಸ್ತಾವಿಸಿರುವುದರಲ್ಲಿ ತಥ್ಯವಿದೆ.ಹೌದು,ರಾಜೀವ್ ಗಾಂಧಿಯಿಂದ ಹಿಡಿದು ಬೋಫೋರ್ಸ್ ಪ್ರಕರಣದ ಪ್ರಮುಖ ಆರೋಪಿ ಒಟ್ಟಾವಿಯೋ ಕ್ವಟ್ರೋಕಿ ಭಾರತದಿಂದ ಸುಲಭವಾಗಿ ಪಲಾಯನ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಸೋನಿಯಾ ಗಾಂಧಿಯವರೆಗೆ ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳೇ.ಆದರೆ ಕುಣಿಕೆಯ ಅಂಕುಶ ಅವರದ್ದೇ ಕೈಯಲ್ಲಿ ಇರುವತನಕ,ಕೇಂದ್ರೀಯ ಆಂತರಿಕ ತನಿಖಾ ದಳ ಸಂಪೂರ್ಣ ಸ್ವಾಯುತ್ತವಾಗುವ ತನಕ ನ್ಯಾಯಯುತವಾದ ತೀರ್ಮಾನ ಕೇವಲ ಕುದುರೆ ಮೊಟ್ಟೆ ಅನ್ನಿಸುತ್ತದೆ.


ಮೋದಿಯವರು ಒಂದು ವೇಳೆ ಸ್ವಚ್ಛ ಚಾರಿತ್ರ್ಯ ಹೊಂದಿದ್ದ ಪಕ್ಷದಲ್ಲಿ ಅವರ ಮೇಲೆ ಕೆಸರೆರಚುವ ಹುಂಬರ ಪ್ರಯತ್ನ ಕೇವಲ ಗಾಳಿಯೊಂದಿಗಿನ ಗುದ್ದಾಟವಷ್ಟೇ ಆಗುತ್ತದೆ.ಆದರೆ ಹೇಸಿಗೆಯಲ್ಲೇ ಬಿದ್ದು ಹೊರಳಾಡುವ ಹಂದಿ ಗಂಧ ಪೂಸಿ ಕೊಂಡವರತ್ತ ಗುಟುರು ಹಾಕಿದರೆ ಎಲ್ಲಿಂದ ನಗುವುದು ಹೇಳಿ? ಇದನ್ನು ಮೋದಿ ಹಾಗು ಅಂಧ ಅಭಿಮಾನದಿಂದ ಅವರ ಪರ ಭೋಪರಾಕ್ ಹೇಳುವ ಅವರ ಎಲ್ಲ ಅಭಿಮಾನಿಗಳೂ ಅರಿತರೆ ಒಳ್ಳೆಯದಿತ್ತು.

Wednesday, August 4, 2010

ಕರ್ಪೂರದ ಕನಸು...

ಕೊಳಲಾಗುತೀನಿ ನೀ ನನ್ನ ನುಡಿಸು,
ವೀಣೆಯಾಗುತೀನಿ ನನ್ನದೆಯ ಮಿಡಿಸು/
ಮೃದಂಗವಾಗುತೀನಿ ನಿನ್ನದೆ ಲಯವ ನನ್ನಲಿ ಉಳಿಸು,
ಶ್ರುತಿಯಾಗುತೀನಿ ನಿನ್ನೆದೆ ತಾಳವ ಅದರಲಿ ಬೆರೆಸು//

Tuesday, August 3, 2010

ಮೋಹಕ ನಶೆ ನಿನ್ನದು...

ನಿನ್ನ ನೋಡೋದು ನಾನು ಸ್ಪರ್ಶದಿಂದ,
ಮನದ ಒಳಗಣ್ಣಿಂದ/
ನೀನು ನನ್ನ ಆವರಿಸೋದು ನೀ ಬರುವ ಮುನ್ಸೂಚನೆ ಕೊಡುವ ನಿನ್ನ ಸ್ವೇದಗಂಧದಿಂದ,
ನನ್ನುಸಿರ ತುಂಬೋ ನಿನ್ನ ಸುಗಂಧದಿಂದ//


ಮರುಳ ನಾನು,
ಕೊಂಚ ಕುರುಡನೂ ಹೌದು ನೀನಂದಂತೆ/
ನಿನ್ನ ಪ್ರೀತೀಯಲಿ ಮಹಾ ಮರುಳ,
ನಿನ್ನ ಮೋಹದಲಿ ಕಡು ಕುರುಡ//


ಅಂಗಳದಲ್ಲಿ ಹಾಸಿದೆ ಪಾರಿಜಾತ ಹೂಗಂಬಳಿ,
ನಗುವ ದಾಸವಾಳಕೂ ಬೇಕಿದೆ ನಿನ್ನ ಮೈಗಂಧದ ಉಂಬಳಿ/
ರತ್ನಗಂಧಿಗೋ ನಿನ್ನ ಆಹ್ಲಾದ ಕಂಡು ಮತ್ಸರ,
ಮುಳ್ಳ ಚುಚ್ಚಿ ಸೇಡು ತೀರಿಸೀತು ಸುಳಿಯ ಬೇಡ ...ಅದೆಷ್ಟೇ ಕರೆದರೂ ಅರಳಿರೋ ಗುಲಾಬಿಯ ಹತ್ತಿರ//

ಮೌನದ ಸನಿಹ...

ಒಳಗೆಲ್ಲ ನಿನ್ನೆದೆಯ ಬಿಸಿ ಕಂಪು,
ಮನದೊಳಗೆ ನೀನುಲಿವ ದನಿ ಇಂಪು/
ಪ್ರತಿ ಮಾತಿನಲೂ..ಪ್ರತಿ ಮೌನದಲೂ,
ನನ್ನೆದೆ ಕಂಪನ ನೀನೆ...//



ಕನಸಿನ ಬಣ್ಣ ಅಳಿಸುವ ಮುನ್ನ,
ಒಮ್ಮೆ ತಿರುಗಿ ನೋಡೆಯ ನನ್ನ?
ಚೂರು ದಯೆ ತೋರಿಸೆಯ?/
ಮನಸಿನ ಕಣ್ಣ ಅರಳಿಸಿ ನಿನ್ನ
ಬಾಡದ ಹೂನಗುವ ಬೀರೆಯ?,ನನ್ನ
ಉಸಿರ ಉಳಿಸಲಾರೆಯ?//

Monday, August 2, 2010

ನಿರೀಕ್ಷೆಯ ಗರಿ...

ಸೋರುವ ಮನಸಿನ ಮಾಳಿಗೆಯ ಕೆಳಗೆ,
ನಿನ್ನಾಸರೆಯ ಸೂರಿನ ನಿರಂತರ ನಿರೀಕ್ಷೆ/
ಬತ್ತಿದ ಪ್ರೀತಿಯ ಹೊಳೆ ದಂಡೆಯಲಿ,
ನಿನ್ನದೇ ತೀರದ ಒಲವಿನ ಪರೀಕ್ಷೆ//

ಬಂದಾಗ ನೀನು...

ಬಂದಾಗ ನೀನು ಬಾಗಿಲ ತಟ್ಟ ಬೇಕಿಲ್ಲ,
ನನ್ನ ಮನೆಗೆ ಬಾಗಿಲನ್ನೇ ನಾನಿಡಿಸಿಲ್ಲ/
ಸ್ವರ ತೆಗೆದು ನನ್ನ ಕೂಗ ಬೇಕಿಲ್ಲ,
ಅವೇಳೆಯಾದರೂ ಸರಿ ನಿನ್ನ ನಿರೀಕ್ಷೆಯಲೇ ಮನಸಿರುವುದಲ್ಲ//

ನೀ ಬಂದರೆ ಅಷ್ಟೇ ಸಾಕು...ಕರೆದು ಸದ್ದೆಬ್ಬಿಸಬೇಡ,
ಇಲ್ಲಿ ನನ್ನ ಕಣ್ರೆಪ್ಪೆಯಲ್ಲಿ ನಿನ್ನ ಕನಸು ಕನವರಿಸುತಿದೆ/
ಕೂಗಿ ಬೆಚ್ಚಿಬೀಳಿಸಬೇಡ,
ನಿದ್ದೆಯಲೇ ನೀನಿರೋ ಸುಂದರ ಕನಸ ತುಟಿ ಅದೇಕೋ ಮುಗುಳ್ನಗುತಿದೆ//

ನಿನ್ನ ಸುವಾಸನೆ ಹೊತ್ತುತರುವ ಗಾಳಿ ಹೇಳುವ ಚಾಡಿಯೇ ಸಾಕು/
ನಿನ್ನೆದೆ ಮಿಡಿತ ನನ್ನ ಕಿವಿಯಲಿ ಉಲಿಯುವ ಇಶಾರೆಯ ಮೋಡಿಯೇ ಸಾಕು//

Sunday, August 1, 2010

ಗಝಲ್ ಗುಂಗಿನಲ್ಲಿ...

ಒಪ್ಪಿದೆ ನಿನ್ನ ಕಣ್ಣಲಿ ನನ್ನೆಡೆಗೆ ಪ್ರೀತಿಯಿಲ್ಲ,
ನಿನ್ನ ದೃಷ್ಟಿಯಲ್ಲಿ ನಾನಿರೋದು ಆ ರೀತಿಯಲ್ಲ/
ಆದರೂ ಹೇಗೆ ಮುಚ್ಚಿಡಲಿ ಈ ವ್ಯಸನ?....ಆಗಿರೋವಾಗ ನಿನ್ನೋಲವಲ್ಲಿ ತಲ್ಲೀನ,
ಚಿಂತೆಯಿಲ್ಲ...ಯಾರು ನನ್ನನಂದರೇನು ಮತಿಹೀನ!//


ಈ ಇರುಳು ಜಾರುವ ಮೊದಲು ಬಾ...ಕ್ಷಣ ಕಾಲ ನನ್ನನಪ್ಪು,
ಯಾರಿಗೆ ಗೊತ್ತು ಹೇಳು? ಇನ್ನೆಂದೋ ನಮ್ಮ ಭೇಟಿ/
ನೋವ ಮಡುವಿನ ಸುಳಿಗೆ ಸಿಲುಕಿ ಬಾಳುವ ಹಾಳು ಹಣೆಬರಹ,
ಅದೊಂದು ಬೆಚ್ಚನ್ನೇ ಆಲಿಂಗನದ ಆಸರೆ ಸಾಕು ಸಹಿಸೋಕೆ ಇನ್ನೆಲ್ಲ ವಿಷಾದದೀಟಿ//


ನೀ ಜೊತೆಗಿದ್ದರೆ ಗುರಿಗಳಿಗೆಲ್ಲಿ ಬರ?,
ಹುಮ್ಮಸ್ಸಿನ ಗಣಿಗೆ ನಾನೊಡೆಯ ಬೀಳುತಿರೆ ಕಿವಿಮೇಲೆ ನಿನ್ನ ಸ್ವರ/
ನಿನ್ನುಸಿರು ನನ್ನೆದೆಯ ಸೋಕುತಿರೊ ತನಕ ನೋವೆ ನನಗಿಲ್ಲ,
ನಿನ್ನೊಂದು ಮೆಚ್ಚುಗೆ ನಗುವಿಗಾಗಿ ತಹತಹಿಸಲು ತಯಾರ್ ನಾನು ಬಾಳೆಲ್ಲ//