Wednesday, September 22, 2010

ಕ್ಷುದ್ರನಾಗಿಯೆ ಉಳಿದು ಹೋದೆ....

ಹೇಳೋದು ಬಹಳಷ್ಟಿತ್ತು/
ತೋರಿಸೋದು ಇನ್ನೂ ಇಷ್ಟು ಬಾಕಿಯಿತ್ತು//


ಬತ್ತಲೆ ಕಾಲ್ಗಳಲ್ಲಿ ಬರುತ್ತಿದ್ದ ನಿನ್ನ...
ಭಾವಗಳ ಮೆತ್ತೆಯ ಹಾಸಿ ನಡೆಸಬೇಕಿತ್ತು,
ಕತ್ತಲೆ ಕಾಲವೆ ತುಂಬಿದ್ದ ನನ್ನ ಬಾಳಲಿ
ನಿನ್ನ ಕಣ್ ಬೆಳಕ ಕಂದೀಲು ಹಿಡಿದು ತಡವರಿಸದೆ ನಡೆಯಬೇಕಿತ್ತು//



ಬಾನ ಅಂಚಿಗೆ ಒರಗಿಸಿಟ್ಟ ನಿಚ್ಚಣಿಕೆಯಲಿ ಮೋಡದ ತುದಿಗೆ ನಿಚ್ಚಳ ಬೆಳಕಲಿ ನಿನ್ನ ಏರಿಸಬೇಕಿತ್ತು,
ಕ್ಷುದ್ರ ಪ್ರಪಂಚದ ಸಣ್ಣತನವನ್ನೆಲ್ಲ ಅಲ್ಲಿಂದಲೆ ನಿನಗೆ ಬೊಟ್ಟು ಮಾಡಿ ತೋರಿಸಬೇಕಿತ್ತು...
ಕಡೆಗಾದರೂ ಅಲ್ಲಿಂದ ಬಚಾವಾಗಿ ಬಂದ ಸಂತಸ ನಿನ್ನಲ್ಲಿ ಮೂಡಿಸಿ ನಿನ್ನ ಖುಷಿಯ ಎಲ್ಲೆ ಮೀರಿಸಬೇಕಿತ್ತು/
ಧನವಿಲ್ಲದ ನನ್ನಂತವರೆಲ್ಲ ಕೇವಲ ದನಕ್ಕೆ ಸಮಾನೆಂದು ಕಟಕಿಯಾಡುವ ಕುಹಕಿಗಳಿಗೆಲ್ಲ
'ನೋಡಿ ನನ್ನ ಸಂಪತ್ತು!' ಎಂದು ನಿನ್ನನೆ ತೋರಿಸಿ ಅವರೆಲ್ಲ ಕುರುಬುವುದನ್ನು ಕಂಡು ಗಹಗಹಿಸಬೇಕಿತ್ತು//



ಕಾವ್ಯಕಥೆಗಳಲ್ಲಿ ಮಾತ್ರ ಕೇಳಿ ಗೊತ್ತಿರುವ ಆ ಸುರಲೋಕವನ್ನೂ ನಿನ್ನ ಕಾಲಡಿ ತರಬೇಕಿತ್ತು,
ಅವರ ಅಮೃತದ ಮತ್ತು...ಅಲ್ಲಿನ ಅತ್ತರಿನ ಗತ್ತು ನಿನ್ನ ಮುಂದೆ ಸಾಟಿಯೇ? ಎಂಬ ಸವಾಲನ್ನು ಕಣ್ಣಲೆ ಮಿಂಚಿಸಿ....
ಅಲ್ಲಿದ್ದವರನ್ನೆಲ್ಲ ನಾಚಿಸ ಬೇಕಿತ್ತು/
ನಿನ್ನ ಮುಂದೆ ಅಲ್ಲಿರುವ ಸುರಸುಂದರ ಸುಂದರಿಯರೆಲ್ಲ ಎಷ್ಟು ಕುರೂಪಿಗಳು ಎಂಬ ವಾಸ್ತವದ ದೀಪ ಹಚ್ಚಬೇಕಿತ್ತು,
ದೇವರನ್ನೇ ನಂಬದ ನನ್ನ ಮನದಗೂಡಿನಲ್ಲಿ ತೂಗು ಹಾಕಿದ್ದ ನಿನ್ನ ಬಿಂಬವ ಅಲ್ಲಿನವರಿಗೆಲ್ಲ ತೋರಬೇಕಿತ್ತು...
ನೀನೆ ನನ್ನ ದೈವ ಎಂದು ಸಾರಿ ಸಾರಿ ಹೇಳಬೇಕಿತ್ತು//


ನಾವಾಗಲೆ ಬಿಟ್ಟು ಬಂದಿದ್ದ ನೆಲದ ಸಣ್ಣತನಗಳ ಧೂಳಲ್ಲಿ...
ಕೊಳೆಯಾಗಿದ್ದ ಮಿಥ್ಯೆಯ ಅಂಗಿ ಕಳಚಬೇಕಿತ್ತು,
ನನ್ನೆಲ್ಲ ಅಹಂನ ಆವರಣ ಕಳಚಿ....
ನಿನ್ನೆದುರು ಸಂಪೂರ್ಣ ಬೆತ್ತಲಾಗಬೇಕಿತ್ತು/
ನಿನ್ನ ಕಾಂತಿಯ ಮುಂದೆ ತಾವೆಷ್ಟು ಮಂಕು ಎಂಬುದನ್ನು...
ತಾರೆ ಚುಕ್ಕಿಗಳಿಗೆ ಮನವರಿಕೆ ಮಾಡಿಸಬೇಕಿತ್ತು
ಸ್ವಚ್ಛಂದ ಹಾರುವ ಸುಖವೇನು? ಎನ್ನುವುದ ಬಾನ ವಿಶಾಲತೆಗೆ ಮನಸೋತ....
ನಿನ್ನ ಕನವರಿಕೆಯಾಗಿಸಬೇಕಿತ್ತು/
ಬಲಿಯನ್ನು ಬಲಿ ಹಾಕಿದ ವಾಮನನಂತೆ ಮೂಜಗವನ್ನೂ...
ಖಾಲಿ ಕಾಲಲ್ಲೆ ಅಳೆದು ಆಳಬೇಕಿತ್ತು,
ನೀನಿತ್ತಿರುತ್ತಿದ್ದ ಒಲವಿಗೆ ಖಂಡಿತ ಆ ಬಲವಿರುತ್ತಿತ್ತು//



ಆದರೆ ನೀನೂ ಅಪ್ಪ ಅಮ್ಮ ಗೆಳೆಯ ಗೆಳತಿಯರು ನಿನ್ನೂರು ನಿನ್ನ ಕನಸುಗಳ...
ಸೀಮಿತ ಜಾತ್ರೆಯಲ್ಲಿ ಕಳೆದುಹೋದೆ,
ನಿನ್ನ ನಿರೀಕ್ಷೆಯಲ್ಲೆ ಅದಾಗಲೆ ಬಾನನೌಕೆ ಏರಿ ಕುಳಿತಿದ್ದ ನಾನೊ.....
ಇತ್ತ ಇಲ್ಲೂ ಉಳಿಯದೆ ಅತ್ತ ಅಲ್ಲೂ ಸಲ್ಲದೆ ತ್ರಿಶಂಕುವಾಗಿ ಕುಗ್ಗಿ ಇಳಿದು ಹೋದೆ/
ಕಮರಿದ ಕಂಗಳಲ್ಲಿ ಹತಾಶೆಯ ಎಣ್ಣೆ ತೀರಿದ ಹಣತೆಯಾಗಿ...
ಉಸಿರಾಡುತ್ತಿದ್ದರೂ ನಡೆದಾಡುವ ಹೆಣವಾಗಿ,
ಕಡೆಗೂ ನಾನು ಈ ನೆಲದ ಕ್ಷುದ್ರನಾಗಿಯೆ ಉಳಿದು ಹೋದೆ//


ಹೇಳೋದು ಬಹಳಷ್ಟಿತ್ತು/
ತೋರಿಸೋದು ಇನ್ನೂ ಇಷ್ಟು ಬಾಕಿಯಿತ್ತು//

Friday, September 17, 2010

ನೀನಿಲ್ಲವಲ್ಲ....

ಇದಕ್ಕೂ ಮೊದಲೂ ಹೀಗೆಯೆ ಅಬ್ಬರಿಸಿತ್ತು ಮೋಡ,
ಈ ಹಿಂದೆಯೂ ಹೀಗೆ ಹನಿದಿದ್ದ ಮಳೆ ತುಂಬಿತ್ತು ನನ್ನೆದೆಯ ಕೊಡ/
ಕನಸುಗಳ ಚಾದರ ಹೆಣೆದ ಕೈಬೆರಳುಗಳಿಗೆ ಹಿಂದೆಂದೂ ಈ ಪರಿ ಒಂಟಿತನ ಕಾಡಿರಲಿಲ್ಲ,
ಏಕೆಂದರೆ ಆಗೆಲ್ಲ ಅವುಗಳ ಸಂಗಡ ನಿನ್ನ ಕೈ ಹಣಿದಿತ್ತಲ್ಲ//


ಮುಸುಕು ಸಂಜೆಯ ಮಬ್ಬು ಬೆಳೆಕಿಗೂ ನನ್ನ ವೇದನೆಯ ಅರಿವಿಲ್ಲ,
ಮುಳುಗಿ ಮರೆಯಾದ ನೇಸರ ಕೆಂಪಿಗೂ ನನ್ನೊಳಗಿನ ಸಂಕಟ ತಿಳಿದಿಲ್ಲ/
ಕತ್ತಲೆಂದರೆ ಈಗೀಗ ಯಾಕೋ ವಿಪರೀತ ಭಯ,
ಜೊತೆಗಿದ್ದು ತಬ್ಬಿ ಸಂತೈಸಲು ಮೊದಲಿನಂತೆ ಇಲ್ಲೀಗ ನೀನಿಲ್ಲವಲ್ಲ//

Wednesday, September 15, 2010

ಗಝಲ್...

ಈ ಕ್ಷಣಗಳ ಮಡಿಲಿನಲ್ಲಿ ಪರಿಶುದ್ಧವಾದ ಸಂಬಂಧಗಳಿವೆ,
ಒಲವಿನ ಯಾವುದೊ ಕವನ ಗುನುನುನಿಸೊ ದೇವತೆಗಳ ಮೃದು ಆಲಾಪಗಳಿವೆ/
ರಾಗಗಳೆ ತುಂಬಿವೆ ಮಲಗಿರುವ ಎದ್ದಿರುವ ಎಲ್ಲದರಲ್ಲೂ,
ಮೋಹಕ ಸುಗಂಧವೆ ಹಬ್ಬಿವೆ ಸುತ್ತಲೂ ಅರಳಿರುವ ಭಾವಗಳಲ್ಲೂ//

( 'ಜೋಧಾ-ಅಕ್ಬರ್' ಚಿತ್ರಕ್ಕಾಗಿ ಕವಿ ಜಾವೇದ್ ಅಖ್ತರ್ ಲೇಖನಿ ಹನಿಸಿದ ಚಂದದ ಸಾಲುಗಳಿವು)

Monday, September 13, 2010

ನಿನ್ನ ಕಂಗಳ ಕಾಂತಿ....

ನೀ ಬರುವ ಹೆಜ್ಜೆ ಸಪ್ಪಳ ಕೇಳಿ....ಬೆನ್ನ ಹಿಂದೆ ಮರೆಯಾಗಿಸಿದ ಶೀಷೆಯಲಿ ತುಂಬಿದ್ದ ಕೇವಲ ನೀರು,
ನಿನ್ನ ಮಾದಕ ನೋಟ ಬಿದ್ದದ್ದೇ ನಶೆಯೇರಿಸುವ ಸುರೆಯಾಯಿತು/
ನಿರ್ಭಾವುಕವಾಗಿದ್ದ ಮೋಡ ಮುಸುಕಿದ ಆ ರಾತ್ರಿಯೂ,
ನಿನ್ನ ಕಂಗಳ ಕಾಂತಿ ತುಂಬಿಕೊಂಡು ಹೊಳೆಯುವ ಹುಣ್ಣಿಮೆಯಾಯಿತು//

ಮದಿರೆಯ ದಾಸನಲ್ಲದ ನನಗೂ ಏರಿಸಿದೆ ನಶೆ,
ಮತ್ತಿನ ಅನೂಹ್ಯ ಲೋಕಕ್ಕೆ ಕೈಹಿಡಿದು ಕರೆದೊಯ್ದೆಯಲ್ಲ...ಹೇಳು ನೀನ್ಯಾರು?/
ನೀ ಕರೆದಲ್ಲಿಗೆ ತಕರಾರಿಲ್ಲದೆ ಬರುವ ಹುಂಬತನ ಹುಟ್ಟಿಸಿರುವೆ ನನ್ನಲ್ಲಿ,
ಮರುಳುಗೂ ಮರುಳು ಹೆಚ್ಚಿಸುವಂತೆ ಆಗಿರುವೆ ನಾನು...ಹೇಳು ನಿನಗೆ ನಾನ್ಯಾರು?//

ಕೇವಲ ನಿನ್ನ ಜೊತೆ ಮಾತ್ರ.....

ಮೆಲ್ಲಗೆ ಬಂದು ನನ್ನ ತೋಳನು ತಾಕು,
ಕಣ್ಣಲ್ಲೆ ಮಾತನು ಹೊಮ್ಮಿಸುತ್ತ ...ನಾನು ಗೊತ್ತಾಯ್ತ? ಎಂದಷ್ಟೇ ಕೇಳು ಸಾಕು/
ಮೆತ್ತನೆ ಅಂಗೈಯಿಂದ ನನ್ನ ಹಸ್ತವನ್ನು ಅಮುಕಿ ಸುಮ್ಮನೆ ಜೊತೆ ಕುಳಿತುಕೊ,
ನಾ ಹೊದ್ದ ಮೌನದ ಚಾದರವನ್ನ ನಿನಗೂ ಹೊದೆಸುತ್ತೇನೆ...
ಅದರ ಒಳಗೆ ಹುದುಗಿರುವ ಭಾವನೆಗಳ ಆಳದಲ್ಲಿ ಇಬ್ಬರೂ ಕಳೆದು ಹೋಗೋಣ//

ಮರಳಿ ಹಳೆಯ ಕನಸಲ್ಲಿ ಕರಗುವಂತಿದ್ದರೆ,
ಮತ್ತೆ ಕಳೆದ ದಿನಗಳ ತಿಳಿಗೊಳದಲಿ ಈಜುವಂತಿದ್ದರೆ/
ಭಾವನೆಗಳ ಬಾನಲ್ಲಿ ಸ್ವಚ್ಛಂದ ಹಾರುವಂತಿದ್ದರೆ,
ಮನಸು ಬೇಡುತ್ತಿದ್ದುದು......ಕೇವಲ ನಿನ್ನ ಜೊತೆ ಮಾತ್ರ//

Saturday, September 11, 2010

ಮರೆತ ಮೇಲೆ...

ಕಣ್ಣೀರ ಮಳೆ ಹರಿಸುವುದರಿಂದ ಅದೃಷ್ಟ ಬದಲಾಗುವಂತಿದ್ದರೆ,
ಈ ಪ್ರಪಂಚದಲ್ಲಿ ಸ್ಮಶಾನಗಳೇ ಇರುತ್ತಿರಲಿಲ್ಲ...
ಅಲ್ಲಿ ಯಾವುದೆ ಕನಸುಗಳು ಸಮಾಧಿಗಿಳಿಯುತ್ತಿರಲಿಲ್ಲ/
ಈ ಎರಡು ಕೈಗಳಷ್ಟೇ ನನ್ನವು...
ಅದರ ಮೇಲೆ ಮೂಡಿರುವ ರೇಖೆಗಳಲ್ಲಿ ದುರಾದೃಷ್ಟವ ಕೊರೆದಿರೊ ವಿಧಿ,
ನೀನು...ನಿನ್ನ ನೆನಪು//


ಕಳೆದು ಹೋದ ಒಲವನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುವಾಗ,
ಒಂದೊ ಮದಿರೆಯಿಂದ ಗಂಟಲು ಹಸಿಯಾಗಿರಬೇಕು....
ಇಲ್ಲವೆ ನಿದಿರೆ ಮರೆತ ಕಣ್ಣುಗಳು ಪಸೆಯಾಗಿರಬೇಕು/
ಮೊದಲನೆಯದರಲ್ಲಿ ನನಗೆ ಆಸಕ್ತಿಯಿಲ್ಲ,
ಎರಡನೆಯದರಿಂದ ನನಗೆ ಮುಕ್ತಿಯೆ ಇಲ್ಲ//

ಕಾಮನೆಯ ಬಿಲ್ಲು...

ಸರಳ ಪದಗಳಲಿ ನನ್ನ ಪ್ರಣಯ ನಿವೇದಿಸಿಕೊಳ್ಳಲಾಗದ ಮೇಲೆ,
ನಾನು ಕವಿಯಾಗಿ ಏನು ಸುಖ?
ಕೇವಲ ಅದು ನನ್ನ ಭ್ರಮೆಯಿರಬಹುದೆ?/
ಮನದ ಮಾತುಗಳನು ಲೇಖನಿಯ ಮೊನೆಗೆ ದಾಟಿಸಿ...
ನಿನ್ನೆದೆಯಲಿ ಕಾಮನೆಯ ಬಿಲ್ಲು ಅರಳಿಸಲಾಗದ ಮೇಲೆ,
ನೀನು ನನ್ನ ಒಲವನ್ನ ಕಡೆಗಣ್ಣಲೂ ನೋಡದೆ ಕಡೆಗಣಿಸುತ್ತಿರೋದು....
ವಾಸ್ತವವಾಗಿ ನಿಜವಿರಬಹುದೆ?!//

Friday, September 10, 2010

ಒಂದು ಚರ್ಚೆ...

ಸಿನೆಮಾ ಒಂದು ಶೋ ಬಿಸನೆಸ್ ಆಗಿರುವುದರಿಂದ ಇಲ್ಲಿ ಅರ್ಥ-ಅನರ್ಥಗಳಿಗಿಂತ ಲಾಭ-ನಷ್ಟದ ಲೆಕ್ಖಾಚಾರಗಳೆ ಯಾವಾಗಲೂ ಮುಖ್ಯವಾಗುತ್ತವೆ.ಹೀಗಾಗಿಯೆ 'ಮುಂಗಾರು ಮಳೆಯೆ' 'ರತ್ತೋ ರತ್ತೋ ರಾಯನ ಮಗಳೆ' 'ನನ್ನ ಎದೆಯಲಿ ಇಟ್ಟ ನಾಲ್ಕು' 'ಒಂದೇ ಸಮನೆ ನಿಟ್ಟುಸಿರು' 'ಓ ಕನಸ ಜೋಕಾಲಿ' 'ಒಂದೊಂದೇ ಬಚ್ಚಿಟ್ಟ ಮಾತು' 'ಯಾರೋ ಯಾರೋ ಗೀಚಿದ' 'ದೂರ ಸ್ವಲ್ಪ ದೂರ'ಗಳಂತಹ ಸದಭಿರುಚಿಯ ಸಾಲು ಗೀಚಿದ ಯೋಗರಾಜಭಟ್ಟರ ಲೇಖನಿಯೇ 'ಹಳೆ ಪಾತ್ರೆ ಹಳೆ ಕಬ್ಣ' 'ಸ್ವಲ್ಪ ಸೌಂಡು ಜಾಸ್ತಿ ಮಾಡು' 'ಹೊಸ ಗಾನ ಬಜಾನ' 'ಲೈಫು ಇಷ್ಟೇನೆ' 'ಎಕ್ಕ ರಾಜ ರಾಣಿ' 'ಇಡ್ಲಿ ವಡೆ ತಿನ್ನೋದಕ್ಕೆ' 'ಪಂಚರಂಗಿ ಹಾಡುಗಳು' ತರಹದ ತಲೆಕೆಟ್ಟ ಸಾಲುಗಳನ್ನೂ ತಡೆ ಇಲ್ಲದೆ ಸುರಿಸುತ್ತವೆ.ಇಂತಹ ಅನರ್ಥಕಾರಿ ಹಾಡುಗಳು ಅಲ್ಪಾಯುಶಿ ಅನ್ನೋದು ಬೇರೆ ಮಾತು.


ಇಲ್ಲಿ ಅವರು ಹೀಗೂ ಬರಿತಾರೆ! ಎಂಬ ಅಚ್ಚರಿಯೇ ಅನಗತ್ಯ.ಹೀಗೆ ಬರೆದದ್ದು ಹಣ ಹುಟ್ಟುವ ಮೂಲವಾಗಿರುವುದರಿಂದಲೇ ಅವರು ಹೇಗೆ ಬೇಕಾದರೂ ಬರೀತಾರೆ ಅನ್ನುವ ಕಾಮನ್ ಸೆನ್ಸ್ ನಮಗಿರಬೇಕಷ್ಟೆ.ಇನ್ನು ಚರ್ಚೆಯ ವಿಚಾರ ಕೆಲಸಕ್ಕೆ ಬಾರದ ಕಾಡುಹರಟೆಗೆ ಚರ್ಚೆಯ ದರ್ಜೆ ಕೊಟ್ಟು ಚೂರು ಹೆಚ್ಚೇ ಗೌರವ ತೋರಿಸಿದ್ದು ನನ್ನದೆ ತಪ್ಪು.ಅದು ಹಾಗೇನೆ, "ಇಷ್ಟವಾದ್ದು ಚರ್ಚೆ, ಇಷ್ಟವಿಲ್ಲವಾದ್ದು ಅನವಶ್ಯಕ ಹರಟೆ, ಗಾಂಪರ ಗುಂಪಿನ ಮೂರ್ಖತನಗಳು:)" ಎಂಬ ಸಿನಿಕರ ಜಾತ್ರೆಯಲ್ಲಿ ಸರಿಯಾಗಿ ಮರ್ಮಕ್ಕೆ ಮುಟ್ಟುವಂತೆ ಮಾತನಾಡಿದವ ತಾನು ಹೇಳಲು ಹೊರಟಾಗ ಚರ್ಚೆಯನ್ನಗಿಸುತ್ತಲೂ,ತನಗೆ ಬೇಡವಾದಾಗ ಮೂರ್ಖರ ಪ್ರಲಾಪ ಅನ್ನುತ್ತ ಇರೋವಂತೆ ಕಾಣೋದು ಅವರವರ ಯೋಚನೆಯ ಮಿತಿಯೆ ಹೊರತು.ಹೇಳುವ ಬಡಪಾಯಿ ಎಷ್ಟು ಜನರ ಬಾಯಿ ತಾನೇ ಮುಚ್ಚಿಸಿಯಾನು!.

ಉಳಿದಂತೆ ಭಟ್ಟರ ಅಭಿರುಚಿಯ ವಿಷಯಕ್ಕೆ ಬಂದರೆ ಅದು ಕೆಟ್ಟಿದೆ ಎನ್ನುವ ವಾದ ನನಗೆ ಸಮ್ಮತವಲ್ಲ.ಏನೂ ಇಲ್ಲ ಅನ್ನುವ ಸಂಗತಿಗಳನ್ನೂ ಸೊಂಟದ ಕೆಳಗಿಳಿಸದೆ ತಮ್ಮ ಚಿತ್ರಗಳಲ್ಲಿ ಹೇಳುವ ಅವರ ಶೈಲಿ ಖಂಡಿತ ಸ್ಕೀಕಾರಾರ್ಹ."ಕಥೆಯಿಲ್ಲದ ಸಿನೆಮಾವನ್ನು ಅದ್ಧೂರಿಯಾಗಿಸೋದು ಹೆಣಕ್ಕೆ ಮಾಡುವ ಶೃಂಗಾರ" ಎನ್ನುವ ಪ್ರಕಾಶ್ ತರಹದ ತರುಣ ನಿರ್ದೇಶಕರೂ ಇದೇ ಕಾಲದಲ್ಲಿ ಚಾಲ್ತಿಯಲ್ಲಿರೋದೂ ಅಷ್ಟೇ ನಿಜ.ಇತ್ತೀಚಿಗೆ ಭಟ್ಟರ ಮನೆಯಾಕೆ ರೇಣುಕ ತಮ್ಮ ಮಗುವಿಗೆ 'ಪುನರ್ವಸು' ಎಂದು ಹೆಸರಿಟ್ಟಿರೋದಾಗಿ ಹೇಳಿದರು.ಅದೊಂದೇ ಸಾಕು ಭಟ್ಟರ ಸದಭಿರುಚಿಗೆ ಮೊಹರು ಹಾಕಲು.ನಾವೆಲ್ಲಾ ಮರೆತೆ ಬಿಟ್ಟಿರುವ ಮಳೆ ನಕ್ಷತ್ರ ಅವರ ಬಾಳಲ್ಲಿ ಮತ್ತೆ ಮೂಡಿ ಬಂದಿದೆ.ಅದು ಅವರ ಸಂಭ್ರಮ ಅನುಗಾಲ ಹೆಚ್ಚಿಸಲಿ.


ಇನ್ನೊಂದು ಸಂಗತಿಯನ್ನ ಇಲ್ಲಿ ನೆನಪಿಸಿಕೊಳ್ಳೋದು ಉಚಿತ ಅನ್ನಿಸುತ್ತೆ.ಅದು ಭಟ್ಟರ ಅಂದು ಕೊಂಡದ್ದನ್ನು ಸಾಧಿಸುವ ಸ್ವಭಾವ.'ಮುಂಗಾರು ಮಳೆ' ತೆರೆಕಂಡು ಹೆಸರು ಮಾಡುತ್ತಿದ್ದ ಹೊತ್ತದು.'ಹೊಸ ದಿಗಂತ'ದ ಯುಗಾದಿ ವಿಶೇಷಾಂಕಕ್ಕಾಗಿ ನಮ್ಮ ಮನೆ ಸಮೀಪದ 'ಹೋಟೆಲ್ ಇಂದ್ರಪ್ರಸ್ಥ'ದಲ್ಲಿ ಭಟ್ಟರನ್ನ ಸಂದರ್ಶಿಸುವಾಗ ದಿಗಂತನನ್ನು ಹಾಲಿ'ವುಡ್' ನಟನೆಂದು ಛೇಡಿಸಿದ್ದೆ.ಆದರೆ ಭಟ್ಟರು ಅದನ್ನೇ ಸವಾಲಾಗಿ ತೆಗೆದು ಕೊಂಡರಷ್ಟೇ ಅಲ್ಲ ತಮ್ಮ ಮುಂದಿನ ಎರಡು ಸಿನೆಮಾಗಳಿಗೆ ಆತನೇ ನಾಯಕ ಎಂದು ಅಲ್ಲಿಯೆ ಘೋಷಿಸಿಬಿಟ್ಟರು! ದಿಗಂತ ಇನ್ನೂ ಚಡ್ಡಿ ಹಾಕಲು ಬಾರದ ವಯಸ್ಸಿನಿಂದಲೆ ನನಗೆ ಪರಿಚಿತ,ಅವನ ಅಣ್ಣ ಆಕಾಶ್ ಶಾಲೆಯಲ್ಲಿ ನನಗಿಂತ ಒಂದು ತರಗತಿ ಮುಂದಿದ್ದ ಇವನು ನನಗಿಂತ ವರ್ಷಕ್ಕೆ ಜೂನಿಯರ್.ಯಾವಾಗಲೂ ಬೇಬಿಫುಡ್ ನ ಮಾಡಲ್ ನಂತೆ ನನ್ನ ಕಣ್ಣಿಗೆ ಕಾಣಿಸುವ ದಿಗಂತ ನನ್ನ ಪ್ರಕಾರ ಉತ್ತಮ ನಟನಲ್ಲ,ರೂಪದರ್ಶಿಯಾಗಲು ಹೇಳಿ ಮಾಡಿಸಿದಂತಿದ್ದಾನೆ.ಹೀಗಿದ್ದರೂ ನಟನಾಗಿ ಅವನ ವೃತ್ತಿ ಬದುಕಿನ ಮೊದಲ ಸಂದರ್ಶನ ತೆಗೆದುಕೊಂಡಿದ್ದು ನಾನೆ; 'ಕರ್ಮವೀರ'ದಲ್ಲಿ ನಾನು ಬರೆಯುತ್ತಿದ್ದ ಸಿನೆಮಾ ಅಂಕಣದಲ್ಲಿ ಅದು ಪ್ರಕಟವಾಗಿತ್ತು.ಇನ್ನು ಒಂದು ಪ್ರಕರಣ 'ಗಾಳಿಪಟ'ತೆರೆ ಕಂಡ ಹೊಸತರಲ್ಲಿ ನಡೆದಿದ್ದು.'ವಿಜಯ ಕರ್ನಾಟಕ'ದ ಸಾಪ್ತಾಹಿಕ ಪುರಾವಣೆಗೆ ನಾನು ಹಾಗು ರುದ್ರಪ್ರಸಾದ್ ಒಟ್ಟಾಗಿ ಸೂರಿ ಜೊತೆಗೆ ಭಟ್ಟರನ್ನು ಸಂದರ್ಶಿಸಿದ್ದೆವು (ಸದರಿ ಸಂದರ್ಶನದಲ್ಲಿ ನಾನು ಕೇವಲ ಛಾಯಾಗ್ರಾಹಕ ಮಾತ್ರ ,ಅಸಲು ಸಂದರ್ಶಕ ರುದ್ರಪ್ರಸಾದ್ ಶಿರಂಗಾಲ.ಇದೇ ಸಂದರ್ಶನದ ಲೇಖನ ರೂಪಾಂತರ ನಂತರ "ವಿಕ್ರಾಂತ ಕರ್ನಾಟಕ'ದಲ್ಲೂ ಪ್ರಕಟವಾಗಿತ್ತು).ಆಗಲೂ ನಾನು ದಿಗಂತನ ನಟನೆಯನ್ನು ಟೀಕಿಸಿದ್ದೆ.ಪುನೀತ್ ಜೊತೆ 'ಲಗೋರಿ'ಆಡುವ ಭಟ್ಟರ ಕನಸು ಕೆಟ್ಟಿದ್ದ ದಿನಗಳವು.ಆಗಲೂ ಭಟ್ಟರು ಮುಂದಿನ 'ಮನಸಾರೆ'ಗೂ ಅವನನ್ನೇ ಆಯ್ದುಕೊಂಡರು.ಅನಂತರ 'ಮಂಗಳ'ದ ದೀಪಾವಳಿ ವಿಶೇಷಾಂಕಕ್ಕಾಗಿಯೂ ಅವರನ್ನು ಮಾತನಾಡಿಸಿದ್ದೆ ಯಥಾಪ್ರಕಾರ ಅವರ ಸಿನೆಮಾ ನಾಯಕನ ಕೃತಕ ನಟನೆಯ ಬಗ್ಗೆ ನನ್ನ ಲೇವಡಿಇತ್ತು.ಆದರೆ 'ಪಂಚರಂಗಿ'ಯಲ್ಲೂ ಮರಳಿ ದಿಗಂತನೆ ನಾಯಕ ಪಾತ್ರಕ್ಕೆ ಅವರ ಆಯ್ಕೆಯಾಗಿದ್ದ.ಈ ನಾಲ್ಕೂ ಚಿತ್ರಗಳಲ್ಲಿ ಗಮನಿಸುತ್ತ ಬಂದಿದ್ದೇನೆ ಒಬ್ಬ ನಟನಾಗಿ ದಿಗಂತ ಸುಧಾರಣೆಯ ಹಾದಿಯಲ್ಲಿದ್ದಾನೆ (ಹಿಂದೊಮ್ಮೆ ಏಕ್ತಾ ಕಪೂರ್ ತಮ್ಮ ಧಾರಾವಾಹಿಗಳ ಸರಣಿ ನಟನಾಗಿ ದಿನಕ್ಕೊಂದು ಲಕ್ಷದ ಸಂಭಾವನೆಯ ಮೇಲೆ ನಟಿಸಲು ಕೇಳಿದಾಗ ; ಹಿಂದಿ ಬಾರದು ಎಂದು ಹೆದರಿ ಹಿಂಜರಿದ ಪೆಕರ ಇವನೇನ? ಅನ್ನಿಸುವಷ್ಟು ಮಟ್ಟಿಗೆ!)' ಇದ್ದಕ್ಕೆಲ್ಲ ಅವನು ಭಟ್ಟರಿಗೆ ಋಣಿಯಾಗಿರಬೇಕು.ಇದು ಭಟ್ಟರು ಹಿಡಿದ ಕೆಲಸ ಬಿಡದೆ ಸಾಧಿಸುವ ಅವರ ಛಲದ ಕುರಿತಿರುವ ಪುರಾವೆ.


ಇದುವರೆಗೂ ಯೋಗರಾಜ ಭಟ್ಟರು ಗೀಚಿದ ಕವಿತೆಗಳಲ್ಲಿ ನನಗೆ ಅತ್ಯಂತ ಆಪ್ತವಾದ ಕವನದ ಹೆಸರು 'ಕನ್ನಡಿಯಂಗಡಿಯಲ್ಲಿ...'.ಎರಡುವರ್ಷದ ಹಿಂದೆ 'ಕನ್ನಡ ಪ್ರಭ'ದ ದೀಪಾವಳಿ ವಿಶೇಷಾಂಕದಲ್ಲಿ ಅದು ಪ್ರಕಟವಾಗಿತ್ತು ( ಅದೇ ಸಂಚಿಕೆಯಲ್ಲಿ ನಟ ರಮೇಶ್ ಬರೆದ ಒಂದು ಕಥೆಯೂ ಇತ್ತು).ತುಂಟತನದಿಂದ ಕೂಡಿದ್ದ,ಕನ್ನಡಿಗಳಿಗೂ ಒಂದು ವ್ಯಕ್ತಿತ್ವ ಆರೋಪಿಸಿ ಬರೆದಿದ್ದ ಕವಿತೆ ಅದು.ಸಿನೆಮಾ ಭಾಷೆಯಲ್ಲಿ ಹೇಳಬೇಕಾದರೆ 'ಮೀಟರ್'ನ ಹಂಗಿಲ್ಲದ ಸರಾಗ ಕವನ ಎನ್ನುವ ಕಾರಣಕ್ಕಾಗಿ ಬಹುಷಃ ಆ ಕವನದ ಹರಿವು ಕೇವಲ ಪದಗಳ ಚಮತ್ಕಾರಕ್ಕಷ್ಟೆ ಸೀಮಿತವಾಗಿರಲಿಲ್ಲ.ಹೀಗೆ ಕವಿಯಾಗಿ ಪರಿಚಿತರಾದ ಭಟ್ಟರು 'ಘಾ'ಯಕರಾಗಲು ಹೊರಟಾಗ ಕೇಳುಗರಿಗೆ ಅಂಗಿ ಹರಕೊಳ್ಳುವಂತಾಗೋದೂ ಅಷ್ಟೇ ನಿಜ.'ಮಿಸ್ಸಿಸಿಪ್ಪಿ ಮಸಾಲ'ದಿಂದ ಕಥೆಯೊಂದಿಗೆ ಹಿನ್ನೆಲೆ ಬಂಬೋ ಸಂಗೀತವನ್ನೂ ಎಗರಿಸಿ,ಸಾಲದ್ದಕ್ಕೆ ಮೂಗಿನಲ್ಲಿ ಹಾಡಿ ಅವರು ಕೊಡುವ ಹಿಂಸೆಗೆ ಕ್ಷಮೆಯಿಲ್ಲ!

ಒಂದು ಯಕಶ್ಚಿತ್ ಹರಟೆಗೆ ಇಷ್ಟೆಲ್ಲಾ ದೀರ್ಘ ವಿವರಣಾತ್ಮಕ ಉತ್ತರ ಕೊಡುವುದು ಸಾಧುವೂ ಅಲ್ಲ.ಅಷ್ಟು ಸಮಯ-ತಾಳ್ಮೆ ನನ್ನಲ್ಲೂ ಇಲ್ಲ ಎನ್ನುವುದು ನಿಜವಾದರೂ.ನನ್ನ ದೃಷ್ಟಿ ಕೋನದ ಬಗ್ಗೆ ಅಪಾರ ಅರ್ಥಮಾಡಿಕೊಂಡಿರುವ ಮೇಧಾವಿಗಳಿಗೆ ನನ್ನ ಅಸಲು ಬಿನ್ನಹದ ಅರಿಕೆ ಮಾಡುವ ಉದ್ದೇಶದಿಂದಷ್ಟೇ ಇದನ್ನು ವಿವರಿಸಿದ್ದು.ಇದನ್ನು ಅತಿಮರ್ಯಾದೆಯನ್ನಾಗಿ ಅಪಾರ್ಥ ಮಾಡಿಕೊಂಡರೆ.once again ಅದು ನನ್ನ ತಪ್ಪಲ್ಲ.

Thursday, September 9, 2010

ನೀನಿಲ್ಲ.

ನಿನ್ನ ತಟ್ಟದ ನನ್ನ ಕವನಗಳು ಬರಿ ಬರಡು,
ನಿನ್ನ ತಲುಪದ ನನ್ನ ಕನಸುಗಳು ನಿಚ್ಚಳ ಕುರುಡು/
ಭಾವನೆಗಳ ಜಡಿಮಳೆ ನನ್ನೊಳಗೆ ಸುರಿದರೇನು ಸುಖ...
...ಅದರಲ್ಲಿ ನೀ ತೋಯದ ಮೇಲೆ,
ಮಾತುಗಳ ಮಂಟಪ ಅದೆಷ್ಟೇ ಚಂದವಾದರೂ ಏನು ಹಿತ....
ನೀನದರಲ್ಲಿ ಬಂದು ಕೂರದ ಮೇಲೆ//

ಬಾನಿನ ನೀಲಿಯೆಲ್ಲ ಕರಗಿದರೂನು,
ನಡು ಸಾಗರದ ಹಸಿರು ಹೇಳ ಹೆಸರಿಲ್ಲದಾದರೂನು/
ಬೆಳ್ಳಿ ಮೋಡಗಳೆಲ್ಲ ಮುನಿದು ಕಡು ಕಪ್ಪಾದರೂನು,
ಎದೆಯ ತುಂಬಿದ ಭಾವದ ಅಣೆಕಟ್ಟೆ ಇನ್ನೂ ಒಡೆದಿಲ್ಲ....
ನಿರೀಕ್ಷೆ ಬಾವಿಯ ಸೆಳೆಯ ಕಣ್ಣು ಇನ್ನೂ ಬತ್ತಿಲ್ಲ//

ಪಂಚರ್ ಟೈರಿನ ರಿಸ್ಕೀ ಪಯಣ...

ಉತ್ತಮ ಚಿತ್ರವೊಂದಕ್ಕೆ ಬೇಕಾದುದು ಬಿಗಿಯಾದ ಚಿತ್ರಕಥೆಯೆ ಹೊರತು ಕಥೆಯಲ್ಲ! ಎಂಬ ವಾದವೊಂದಿದೆ.ಹೊಸ ಹುಮ್ಮಸ್ಸಿನ,socalled ಫಾರ್ಮುಲಗಳಿಗೆ ಜೋತು ಬೀಳದ ಚಿತ್ರಗಳದ್ದೆಲ್ಲ ಅದೆ ಮೂಲ ಮಂತ್ರ.'ಪಂಚರಂಗಿ'ಯ ಮೂಲಕ ಯೋಗರಾಜ ಭಟ್ಟರು ಪಠಿಸುತ್ತಿರೋದೂ ಕೂಡ ಅದನ್ನೆ.ಇಲ್ಲಿ ಕಥೆಯ ಹಂಗಿಲ್ಲ,ಎಲ್ಲವನ್ನೂ-ಎಲ್ಲರನ್ನೂ ಲೇವಡಿ ಮಾಡುವ ಮಾತಿನ ದಭದಭೆಯಿದೆ.ಚಿತ್ರ ಕಥೆ ಸಶಕ್ತವಾಗಿದೆ.ಸಿರಿಲ್ಯಾಕ್ ಮಾಡಲ್ ದಿಗಂತ-ತುಂಡುಚಡ್ಡಿ ತೊಟ್ಟ ನಿಧಿ ಸುಬ್ಬಯ್ಯ ಭಟ್ಟರ ತಾಳಕ್ಕೆ ತಕ್ಕ ಹೆಜ್ಜೆ ಹಾಕಿದ್ದರೆ,ಅವರ ಲೇಖನಿಯ ವ್ಯಂಗ್ಯದ ಮೊನಚಿಗೆ ರಾಜು ತಾಳಿಕೋಟೆ-ಸುಧಾಕರರ ನಾಲಗೆ ಸಾಣೆ ಹಿಡಿದಿದೆ.ಪಡ್ಡೆಗಳ ಪರ್ಫೆಕ್ಟ್ ಸ್ಲಾಂಗ್ ಆಗಲು ಲಾಯಕ್ಕಾಗಿರುವ ವಿಚಿತ್ರ ಹಾಡು'ಗಳು' ಇವೆಲ್ಲವನ್ನೂ ಸೇರಿಸಿ ತುಂಬಾ ಸರಳವಾಗಿ ಯೋಗರಾಜ ಭಟ್ಟರು ಪ್ರೇಕ್ಷಕರನ್ನು ಯಾಮಾರಿಸಿದ್ದಾರೆ.ಒಟ್ಟಿನಲ್ಲಿ ಅವರ ಪ್ರಕಾರ ಲೈಫು ಇಷ್ಟೇನೆ!

ಆಸಕ್ತಿಕರ ಸಂಗತಿಯೇನೆಂದರೆ ಲೈಫು ಇಷ್ಟೆ ಅಲ್ಲದೆ ಇನ್ನೂ ಇರೋದರತ್ತ ಭಟ್ಟರ ಜಾಣ ಮರೆವು.ಕನ್ನಡದ ನಿರ್ದೇಶಕರಾದ ಭಟ್ಟರು ಹಾಲಿವುಡ್ ತಳಿಯ ಹಿಂಗ್ಲಿಶ್ ನಿರ್ದೇಶಕಿ ಮೀರಾ ನಾಯರ್ ಚಿತ್ರಗಳನ್ನ ನೋಡೋದು ತಪ್ಪೇನಲ್ಲ.ಆದರೆ ಇಂಪೋರ್ಟೆಡ್ ಮಾಲಿನ ಮೇಲೆ ತನ್ನ ಹೆಸರನ್ನು ಬೆರೆದು ಲೋಕಲ್ ಮಾರುಕಟ್ಟೆಗೆ ಸ್ಮಗ್ಲಿಂಗ್ ಮಾಡೋದು ಮಾತ್ರ ಹಾಸ್ಯಾಸ್ಪದ.ಯೋಗರಾಜ ಭಟ್ಟರಿಗೆ ಇಂದು ಬಿದ್ದ ಕನಸು ಮೀರಾ ನಾಯರ್ ರಿಗೆ ಹತ್ತಿಪ್ಪತು ವರ್ಷಗಳ ಹಿಂದೆಯೆ ಬಿದ್ದಿರೋದು ಬಹುಷಃ ಕಾಕತಾಳೀಯವಾಗಿರಲಾರದು! ಹತ್ತು ವರ್ಷದ ಹಿಂದಿನ 'ಮಾನ್ಸೂನ್ ವೆಡ್ಡಿಂಗ್'ಗೆ ಇಪ್ಪತ್ತೆರಡು ವರ್ಷ ಹಳತಾದ (ಆದರೆ ಇನ್ನೂ ಹಳಸಿರದ) 'ಮಿಸ್ಸಿಸಿಪ್ಪಿ ಮಸಾಲ' ಬೆರೆಸಿ ಭಟ್ಟರು ತೆರೆಗೆ ತಂದಿರುವ ಮಿಸಳಭಾಜಿಗೆ 'ಮುಂಗಾರಿನ ಮದುವೆ' ಎಂಬ ಪದಾನುವಾದದ ಶೀರ್ಷಿಕೆ ಸೂಕ್ತವಾಗಿ ಹೊಂದುತ್ತಿತ್ತು! ಆದರೆ ಭಟ್ಟರಿಗೆ 'ಪಂಚರಂಗಿ'ಯಾಗುವ ತವಕ.

ಉಗಾಂಡದ ಕಂಪಾಲದಲ್ಲಿ ಹುಟ್ಟಿ ಅಮೆರಿಕೆಯ ಬೋಸ್ಟನ್ ನಲ್ಲಿ ಬೆಳೆಯುವ 'ಮಿಸ್ಸಿಸಿಪ್ಪಿ ಮಸಾಲ'ದ ವಿಚಿತ್ರ ಹುಡುಗಿ ಇಲ್ಲಿ ನಾಯಕ ದಿಗಂತನಾಗಿ ಲಿಂಗಾಂತರವಾಗಿದ್ದಾರೆ,ಎಲ್ಲಿದ್ದರೂ ಅಚ್ಚ ಭಾರತೀಯ ಆಲದಮರಕ್ಕೆ ಜೋತುಬೀಳುವ ಗುಜರಾತಿ ಅಪ್ಪ ಅಮ್ಮ ಇಲ್ಲಿ ಕನ್ನಡದ ಅಪ್ಪ-ಅಮ್ಮನಾಗಿ ಪುನರಾವರ್ತನೆಯಾಗಿದ್ದರೆ. ಮದುವೆ ಅಲ್ಲಿಯೂ ಮುಖ್ಯ ಸಂಗತಿ,ಇಲ್ಲಿಯೂ ಕೂಡ.ಇನ್ನು ಪೋಷಕರ ಮಾತಿಗೆ ಎದುರಾಡುವ ಧೈರ್ಯವಿಲ್ಲದ ; ಅವರ ಇಚ್ಛೆಯಂತೆ ಬದುಕುವ ಅಲ್ಲಿನ ನಾಯಕಿಯ ದೊಡ್ಡಪ್ಪನ ಮಗ ಇಲ್ಲಿ ನಾಯಕನ ಖಾಸಾ ಅಣ್ಣ.ಮದುವೆ ಬಸ್ಸಿನ ಡ್ರೈವರ್ ಮನೆ ಕೆಲಸದವಳನ್ನ ಮೆಚ್ಚಿ ಮದುವೆಯಾಗೋದು ಸಹ ಕಳೆದ 'ಮಾನ್ಸೂನ್...'ನಲ್ಲೆ ಬಂದು ಹೋಗಿದೆ.ಅಲ್ಲಿ ನಗರದಿಂದ ಹೊರ ಹೋಗುವ ಕುಟುಂಬವನ್ನ ಇಲ್ಲಿ ಕರ್ನಾಟಕದ ಕರಾವಳಿಗೆ ತಂದು ಮುಟ್ಟಿಸಲಾಗಿದೆ.ಕಿಲಾಡಿ ಭಟ್ಟರು ಕಡಿಮೆ ಬಜೆಟ್ಟಿನಲ್ಲಿ ನಾಲ್ಕಾರು ಹಾಡುಗಳನ್ನ ತುರುಕಿಸಿ,ಅನಂತನಾಗ್-ಜಯಂತ್ ಕಾಯ್ಕಿಣಿ ಜೋಡಿಯನ್ನ ಪಾರ್ಟ್ ಟೈಮ್ ನಟರನ್ನಾಗಿಸಿ ಎರಡೂವರೆ ಘಂಟೆ ಬಿಟ್ಟೂ ಬಿಡದೆ ಕೆರೆದರೂ ಅವರ ಮಾತಿನ ಬಂಡಿ ಅದ್ಯಾಕೋ 'ಪಂಚರ್' ಆಗೋದರಿಂದ ತಪ್ಪಿಸಿಕೊಳ್ಳೋದರಲ್ಲಿ ವಿಫಲವಾಗಿದೆ.ಇಷ್ಟು ಶೀಘ್ರ ಅವರ ಬತ್ತಳಿಕೆ ಬರಿದಾದುದು ಅಚ್ಚರಿ ಹುಟ್ಟಿಸಿದರೆ ಅದಕ್ಕೆ ಚಿತ್ರ ಪ್ರೇಮಿ ಅವರ ಮೇಲಿಟ್ಟಿರುವ ಅತಿ ನಿರೀಕ್ಷೆಯೆ ಕಾರಣ.


ಪಾಲಿಗೆ ಬಂದದ್ದನ್ನೇ ಪಂಚಾಮೃತವೆನ್ನುವ ತಲೆಮಾರು ಈಗ ಇಲ್ಲದಿರುವುದನ್ನು ಅಪ್ಡೇಟ್ ಭಟ್ಟರು ಮರೆತಿರೋದು ದುರಂತ.ಹಾಗಂತ ಚಿತ್ರ ಪೂರ್ತಿ ಬರ್ನಾಸ್ ಏನೂ ಅಲ್ಲ.ಛಾಯಾಗ್ರಹಣ ಚನ್ನಾಗಿದೆ.ಮನೋಮೂರ್ತಿ ಮತ್ತೆ ತಮ್ಮ ಎಂದಿನ ಗುಂಗಿಗೆ ಮರಳಿದ್ದಾರೆ.ಒಂದು ಹಾಡಿನ ಹೊರತು ಕನ್ನಡದ ಧ್ವನಿಗಳು ಕಿವಿಗಳ ಮೇಲೆ ಹಿತವಾಗಿ ಬೀಳುತ್ತವೆ.ಮುಖ್ಯಪಾತ್ರಗಳೆ ನಗಿಸುವ ನೊಗ ಹೊತ್ತಿರುವುದರಿಂದ ಪ್ರತ್ಯೇಕ ಹಾಸ್ಯದ ಕಪಟ ನಾಟಕ ದುಃಸ್ವಪ್ನದಂತೆ ಕಾಡುವುದಿಲ್ಲ.ವಾಸ್ತವವಾಗಿ ಘಟಿಸುವ ಮೊದಲೆ ಚಿತ್ರೀಕರಿಸಿದ್ದರೂ ಭಟ್ಟರ ಕಾಮಿಸ್ವಾಮಿ ಮೀಮಾಂಸೆ ಸಮಕಾಲಿನತೆಗೆ ಹೆಚ್ಚು ಹತ್ತಿರವಾಗಿದೆ.ಒಟ್ಟಿನಲ್ಲಿ ಭಟ್ಟರ ಈ ಜಾಣ ಕನ್ನವನ್ನ 'ರಿಮೇಕ್' ಅನ್ನಬೇಕೋ ಇಲ್ಲ 'ರಿಮಿಕ್ಸ್' ಅನ್ನಬೇಕೊ? ಅನ್ನುವ ಗೊಂದಲ ಮಾತ್ರ ಚಿರಾಯು.

ಇದು ಅದಲ್ಲ....

ಸುತ್ತಲೂ ಬೆಟ್ಟಗಳಿಂದ ಆವೃತ್ತವಾಗಿದ್ದು ಸ್ವತಹ ತಾನೇ ನಡುವಿನ ಗುಡ್ಡ ಸಮುಚ್ಚಯದ ಮೇಲೆ ಹರಡಿ ಕೊಂಡಿರುವ ತೀರ್ಥಹಳ್ಳಿ ಪಟ್ಟಣದ ಚಿತ್ರಕ್ಕೆ ಕಟ್ಟು ಹಾಕಿಸಿದಂತಹ ನೋಟ ಕಾಣಬೇಕೆಂದಿದ್ದರೆ ಸುತ್ತಮುತ್ತಲಿನ ಯಾವುದಾದರೂ ಗುಡ್ಡ ಹತ್ತಿನಿಂತರಾಯಿತು.ಅಮಾಯಕ ಮಗುವಿಗೆ ಬೆಳ್ಳಿಯ ಉಡಿದಾರ ಕಟ್ಟಿದಂತೆ ಕಾಣುವ ತುಂಗೆಯ ಮಂದ ಹರಿವು,ಅದರ ನಡುವಿನ ಕಮಾನು ಸೇತುವೆ,ಇನ್ನೂ ಕಣ್ಣು ಕಿರಿದುಗೊಳಿಸಿ ನೋಡಿದರೆ ಹೊಳೆವ ಹೊಳೆ ಮಧ್ಯದ ರಾಮಮಂಟಪವೂ ನಿಮ್ಮ ಕಣ್ಣಿಗೆ ಬಿದ್ದೀತು.ಭಾರತದ ಎಲ್ಲ ಊರುಗಳ ಜನ್ಮಕ್ಕೆ ಪೌರಾಣಿಕ ಕಥೆಯೊಂದು ಲಂಗೋಟಿಯಂತೆ ಅಂಟಿಕೊಂಡಿರುವ ಹಾಗೆಯೆ ನಮ್ಮೂರಿಗೂ ಒಂದು ಸ್ಥಳಪುರಾಣ ತಗಲಿ ಹಾಕಿಕೊಂಡಿದೆ.ತಂದೆ ಜಮದಗ್ನಿಯ ಆಜ್ಞೆಯಂತೆ ಹೆತ್ತಬ್ಬೆ ರೇಣುಕೆಯ ಕುತ್ತಿಗೆಯನ್ನ ತನ್ನ ಪರಶುವಿನಿಂದ ಕಡಿದ ರಾಮ,ಅನಂತರ ಸಂತುಷ್ಟ ತಂದೆಯಿಂದ ವರದ ರೂಪದಲ್ಲಿ ತಾನೇ ಕಡಿದಿದ್ದ ತಾಯನ್ನೂ-ಕೋಪದ ಉರಿಗಣ್ಣಲ್ಲಿ ತಂದೆ ಸುಟ್ಟಿದ್ದ ಅಣ್ಣಂದಿರನ್ನೂ ಮರಳಿ ಪಡೆದನಂತೆ.ಆದರೆ ಕೊಡಲಿಗೆ ಅಂಟಿದ್ದ ರಕ್ತದೊಂದಿಗೆ ತಲೆಗೆ ಮಾತೃ ಹತ್ಯಾದೋಷವೂ ಅಂಟಿತ್ತಲ್ಲ? ಅದನ್ನು ಕಳೆದು ಕೊಳ್ಳಲು ಪುಣ್ಯಕ್ಷೇತ್ರ ಯಾತ್ರೆಗೆ ಹೊರಟನಂತೆ.ನೀರು ಕಂಡಲ್ಲೆಲ್ಲ ಅದೆಷ್ಟೇ ತಿಕ್ಕೀ ತಿಕ್ಕೀ ತೊಳೆದರೂ ಕೊಡಲಿಯ ಅಂಚಿಗೆ ಮೆತ್ತಿದ್ದ ಇನ್ನೊಂಚೂರು ನೆತ್ತರು ಹೋಗಲೇ ಇಲ್ಲವಂತೆ.ದಾರಿಯಲ್ಲಿ ದಣಿದವ ತುಂಗೆಯ ಕಲ್ಲುಸಾರದ ಮೇಲಿನ ಬಂಡೆಯೊಂದರ ಮೇಲೆ ಮೈ ಚಾಚಿ ಮಲಗಿದನಂತೆ.ಆಗ ಅವನ ಹಿಡಿತ ಮೀರಿ ಪರಶು ಬಂಡೆಗಳ ಮೇಲೆ ಉರುಳಿ ಬಿದ್ದು ಗಟ್ಟಿ ಬಂಡೆ ಬಿರುಕು ಬಿಟ್ಟಿತು! ( ದಯವಿಟ್ಟು ನೀವಿದನ್ನು ನಂಬಲೇ ಬೇಕು?!).ಹೀಗೆ ಅಲ್ಲಿ ಉಂಟಾದ ಹೊಂಡದೊಳಗೆ ಹರಿವ ತುಂಗೆ ಮಡುಗಟ್ಟಿ ನಿಂತಳಂತೆ.ರಾಮ ತನ್ನ ಕೊಡಲಿ ಮೇಲೆತ್ತಿ ನೋಡುತ್ತಾನೆ,ಎನ್ ಆಶ್ಚರ್ಯ! ತುಂಗೆಯ ನೀರು ಸೋಕಿ ಕೊಡಲಿ ಮೇಲೆ ಉಳಿದಿದ್ದ ರಕ್ತದ ಕಲೆ ಮಂಗಮಾಯ!!! ಇದರಿಂದ ಚಕಿತನಾದ ಪರಶುರಾಮ ಆ ಸ್ಥಳಕ್ಕೆ ತಾನೇ'ಪರಶುರಾಮ ಕೊಂಡ'ಎಂದು ಹೆಸರಿಟ್ಟನಂತೆ.ಸಾಲದ್ದಕ್ಕೆ ನದಿ ದಡದಲ್ಲೊಂದು ಶ್ರೀರಾಮೇಶ್ವರ ಲಿಂಗ ಪ್ರತಿಷ್ಠಾಪಿಸಿ ಆರಾಧಿಸಿದನಂತೆ.ಇಂದಿಗೂ ರಾಮೇಶ್ವರ ದೇವಸ್ಥಾನ ಇಲ್ಲಿದ್ದು ಪ್ರತಿ ವರ್ಷ ಜಾತ್ರೆಯ ದಿನ ಇಲ್ಲಿನ ತುಂಗಾಸ್ನಾನ,ಅದರಲ್ಲೂ ರಾಮ ಕೊಂಡದಲ್ಲಿ ಮುಳುಗು ಹಾಕಲು ರಾಮೇಶ್ವರನ ಭಕ್ತಕೋಟಿ ಮುಗಿಬೀಳುತ್ತದೆ.






ಮಳೆಯ ಭೀಕರ ಹೊಡೆತದೊಂದಿಗೆ ತುಂಗೆಯ ರುದ್ರ ನರ್ತನವನ್ನು ಬಾಲ್ಯದುದ್ದಕ್ಕೂ ಕಂಡಿದ್ದೆ.೧೯೮೨ರ ಶ್ರಾವಣ ಮಾಸದಲ್ಲಿ ನಾನು ಹುಟ್ಟಿದ್ದ ಹೊತ್ತಿನಲ್ಲಿ ವಿಪರೀತ ಮಳೆಯಿಂದ ಪ್ರವಾಹ ಉಕ್ಕೇರಿ ತೀರ್ಥಹಳ್ಳಿ ತತ್ತರಿಸಿ ಹೋಗಿತ್ತಂತೆ.ಹತ್ತಿರದ ಭೀಕರ ಪ್ರವಾಹದ ದಾಖಲೆ ಆ ಊರಲ್ಲಿ ಅದೇನೆ.ಹೊಳೆ ಮಧ್ಯದ ರಾಮಮಂಟಪದ ಮೇಲೆ ಎರಡಾಳು ನೀರು ನಿಂತದ್ದು ಆ ವರ್ಷವೆ ಅಂತೆ.ಅಂದು ನಿಂತಿದ್ದ ನೀರಿನ ಗುರುತನ್ನು ಗುರುತಿಟ್ಟಿಸಿರೋದನ್ನ ಅಲ್ಲಿನ ಪುತ್ತಿಗೆ ಮಠದ ಗೋಡೆಯ ಮೇಲೆ ನೋಡಬಹುದು.ಬದುಕಿರುವ ಯಾವುದನ್ನೂ ಗಂಗೆ ಮುಳುಗಿಸಲಾರಳು ಎಂಬುದು ಪ್ರಸಿದ್ಧ ನಂಬಿಕೆ,ಆದರೆ ತುಂಗೆಗೆ ಅಂತಹ ಯಾವುದೇ ಮಡಿವಂತಿಕೆ ಇದ್ದಂತಿಲ್ಲ.ನಾ ಹುಟ್ಟಿದ ಸಮಯದಷ್ಟಲ್ಲದಿದ್ದರೂ ಅನಂತರವೂ ಮಳೆಗಾಲದಲ್ಲಿ ಅತಿ ಹೆಚ್ಚಿದ್ದ ಪ್ರವಾಹಗಳನ್ನು ಕಂಡಿದ್ದೆ.ತನ್ನ ನಿಲುಕಿಗೆ ಸಿಕ್ಕಿದ್ದನ್ನೆಲ್ಲ ದೋಚುವ ದುರಾಸೆಯ ಹೆಣ್ಣಂತೆ ಮೈತುಂಬಿಕೊಂಡು ಕೆಂಪಗೆ ಹರಿಯುತ್ತಾ ಸಿಕ್ಕ ಸಿಕ್ಕವರನ್ನೆಲ್ಲ ತನ್ನ ಒಡಲೊಳಗೆ ಸೆಳೆದು ಆಕೆ ಹರಿಯುವುದನ್ನು ಬೆರಗುಗಣ್ಣುಗಳಿಂದ ದಿಟ್ಟಿಸಿದ್ದೇನೆ.ಮಳೆಯಿರದ ಉಳಿದ ಕಾಲದಲ್ಲೂ ಆಕೆ ಸಾಚ ಏನಲ್ಲ! ಆಕೆಯ ದುರಹಂಕಾರದ ಸೊಕ್ಕಿನ ಸುಳಿಗಳಿಗೆ ಸಿಕ್ಕಿಸಿ,ಅವಳೆದೆಯ ಮೇಲೆ ಈಜಲು ಹೋದವರನ್ನ ಶಾಶ್ವತವಾಗಿ ಅಪ್ಪಿ ಕೊಳ್ಳುವುದರಲ್ಲಿ ನಿಸ್ಸೀಮೆ ಆಕೆ.ಅದಕ್ಕೆ ಇತ್ತೀಚಿನ ಪ್ರಸಿದ್ಧ ಉದಾಹಾರಣೆಯೆಂದರೆ ಉದಯೊನ್ಮುಖ ಗಾಯಕ ಜಿ ವಿ ಅತ್ರಿಯವರ ಕೌಟುಂಬಿಕ ದುರ್ಮರಣ.




ನಮ್ಮ ಮನೆಯ ಹಿತ್ತಲಿನಿಂದ ದಿಟ್ಟಿಸಿದರೆ ಮಂಟಪದ ಟೊಪ್ಪಿ ತೊಟ್ಟ ಆನಂದಗಿರಿಯೂ ಅದಕ್ಕೆ ಸರತೊಡಿಸಿದಂತೆ ಕಾಣುತ್ತಿದ್ದ ತುಂಗಾಕಾಲೇಜೂ ಕಾಣುತ್ತಿತ್ತು.ಅದರ ಬಲ ಮಗ್ಗುಲಿನಲ್ಲಿ ತುಸುವೆ ದೂರ ಗೊಂಬೆಗಳಂತೆ ಕಾಣುತ್ತಿದ್ದ ಒಂದು ಪುಟ್ಟ ಹಳ್ಳಿಯೂ ಕಾಣಬಹುದಿತ್ತು,ಬಹುಷಃ ಅದು ಇಂದಾವರ ಇರಬೇಕು.ಆಗಿನ್ನೂ ನಾನು ಎರಡನೆ ತರಗತಿಯಲ್ಲಿದ್ದೆ.ಕನ್ನಡ ಪುಸ್ತಕದ ಮೊದಲನೆ ಪಾಠವೇ 'ನಮ್ಮೂರು'ಎಂದಿತ್ತು.ಅದರ ಸಕಲ ವಿವರಗಳೂ ಚಿತ್ರ ಬಿಡಿಸಿದಂತೆ ಇಂದಾವರದಲ್ಲಿ ಕಾಣುತ್ತಿತ್ತು! ಸಿಕ್ಕ ಸಿಕ್ಕದ್ದನೆಲ್ಲ ಓದಿ ಬಾಯಿಪಾಠ ಮಾಡಿಕೊಳ್ಳುವ ವಿಶಿಷ್ಟವೂ-ವಿಪರೀತವೂ ಆದ ಚಟ ನನಗಿದ್ದ ದಿನಗಳವು.ನಿತ್ಯ ಚಡ್ಡಿ ಜಾರಿಸಿ ನಿಂತು ಮನೆ ಹಿಂದಿನ ಚರಂಡಿಯಲ್ಲಿ ಮೈ ನೀರನ್ನು ಧಾರೆ ಧಾರೆಯಾಗಿ ಜಲಪಾತದಂತೆ ಹೊರತಳ್ಳುತ್ತ ಕಣ್ಣಿಗೆ ಬೀಳುತ್ತಿದ್ದ 'ಆ ನಮ್ಮೂರಿನ' ಮಿನಿಯೇಚರನ್ನು ಕಣ್ತುಂಬಿಕೊಳ್ಳುತ್ತಾ ರಾಗವಾಗಿ 'ನಮ್ಮೂರು'ಪಾಠವನ್ನ ದೊಡ್ಡ ದನಿಯಲ್ಲಿ ಅರಚುತ್ತ ದೊಡ್ಡವರಿಂದ ಉಗಿಸಿಕೊಳ್ಳುತ್ತಿದ್ದೆ.




ನಾನು ಶಾಶ್ವತವಾಗಿ ಊರು ಬಿಟ್ಟೆ ಹನ್ನೆರಡು ವರ್ಷಗಳಾಗುತ್ತ ಬಂತು.ಪುಟ್ಟಹುಡುಗನಾಗಿ ಆಗ ನಾನು ಕಂಡಿದ್ದ ಊರಿಗೂ-ಈಗಿನ ತೀರ್ಥಹಳ್ಳಿಗೂ ವಿಪರೀತ ವ್ಯತ್ಯಾಸವಿದೆ.ಕಮಾನು ಬಸ್ ನಿಲ್ದಾಣವಿದ್ದ,ಸೋಮವಾರದ ಸಂತೆಗೆ ವಿಪರೀತ ಜನಸೇರುತ್ತಿದ್ದ,ಗಾಂಧೀ ಚೌಕದಲ್ಲಿ ಮೂರು ಮಾರ್ಕಿನ ಬೀಡಿ ವ್ಯಾನಿನ ಮೇಲೆ ದಿಲೀಪ ಮಾಡುತ್ತಿದ್ದ ಮಾದಕ ನೃತ್ಯವನ್ನು ಬಾಯಿ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ,ಸಿನೆಮ ಬಿಡುವ ಸಮಯದಲ್ಲಿ ಪ್ರವಾಹದಂತೆ ಟಾಕೀಸಿನಿಂದ ಜನ ಹೊರ ಬರುತ್ತಿದ್ದ,ಆ ತೀರ್ಥಹಳ್ಳಿ ಅದೆಲ್ಲೋ ಕಳೆದೆ ಹೋಗಿದೆ.ತೇಜಸ್ವಿ ಕಥೆಗಳ ಮುಡಿಗೆರೆಯಂತೆ ಆಗ ಊರಿನ ಏಕೈಕ ಬಹುಮಹಡಿ ಕಟ್ಟಡವಾಗಿದ್ದ 'ಅಲಂಕಾರ್ ಪ್ಲಾಜ'ದ ಟರೆಸಿನ ಮೇಲೆ ನಿಂತು ಕೆಳಹಣಕಿದರೆ ಟೆಲಿಫೋನ್,ಕೇಬಲ್,ಕರೆಂಟಿನ ವಯರುಗಳ ಕಿಷ್ಕಿಂದೆಯಲ್ಲಿ ಬಲವಾಗಿ ಬಿಗಿಸಿಕೊಂಡು ನರಳುತ್ತಿದ್ದ ಪ್ರಾಣಿಯಂತೆ ಇಡೀ ಊರು ಕಾಣುತ್ತಿತ್ತು.ತೇಜಸ್ವಿಯವರೇ ಹೇಳುತ್ತಿದ್ದಂತೆ ಕಟ್ಟಿಂಗ್ ಪ್ಲೇಯರ್ ಒಂದು ಕೈಯಲ್ಲಿ-ವಯರುಗಳ ಕಂತೆ ಇನ್ನೊಂದು ತೋಳಲ್ಲಿ ತೂಗುಹಾಕಿಕೊಂಡು; ಅಣ್ಣಾತೆಗಳಂತೆ ಕಾಣುತ್ತಿದ್ದ,ನೆಲ ನೋಡದೆ ಆಕಾಶದ ಉದ್ದಗಲಕ್ಕೂ ಹರಡಿರುತ್ತಿದ್ದ ತಮ್ಮ ವಯರುಗಳ ಯೋಗಕ್ಷೇಮದ ಕುರಿತೆ ಚಿಂತಿತರಾಗಿ ಅವನ್ನೆ ದಿಟ್ಟಿಸುತ್ತ ಸಾಗುವ ಮೇಲಿನ ಮೂರೂ ವರ್ಗಗಳ ಮೆಂಟಲ್ ಗಳಂತಹ ಮೆಕ್ಯಾನಿಕ್ ಗಳನ್ನ ಅಡಿಗಡಿಗೂ ಊರ ತುಂಬಾ ಕಾಣಬಹುದಾಗಿತ್ತು.




ಬಸ್ಟ್ಯಾಂಡ್ ಮಯೂರ ಹೋಟೆಲಿನ ಮಸಾಲೆ ದೋಸೆ,ಮಸೀದಿ ರಸ್ತೆಯ ಅಂಚಿನಲ್ಲಿ ಸಂಜೆ ಕೆಪ್ಪ ಶೆಣೈಯ ರುಚಿ ರುಚಿಯಾಗಿರುತ್ತಿದ್ದ ಬೋಂಡ,ಗಾಯತ್ರಿಭವನದ ನೊರೆನೊರೆ ಕಾಫಿ,ವಸಂತ ವಿಹಾರದ ಬನ್ಸ್-ಕಡಲೆ ಗಸಿ ಇವೆಲ್ಲ ಇಂದು ಹಾಗೆಯೆ ಉಳಿದುಕೊಂಡಿಲ್ಲ.ನಾಲ್ಕಾಣೆಗೆ ಸಿಗುತ್ತಿದ್ದ ನೀರ್ ಐಸು,ಎಂಟಾಣೆಗೆ ಸಿಗುತ್ತಿದ್ದ ಹಾಲ್ ಐಸುಗಳ ಅಭಿಮಾನಿಗಳು ಇಲ್ಲಿನ ಆಟದ ಮೈದಾನಗಳಿಂದ ಮರೆಯಾಗಿ ಕುಲ್ಫಿ-ಕೋನ್ ಐಸುಗಳ ಹೊಸ ತಲೆಮಾರು ಕಾಣಿಸಿಕೊಳ್ಳುತಿವೆ.ಸ್ವಾತಂತ್ರ್ಯದಿನ ಹಾಗು ಗಣರಾಜ್ಯೋತ್ಸವಗಳಂದು ಊರಲ್ಲಿನ ಮೂರು ಟಾಕೀಸುಗಳಲ್ಲಿ ಅಸಂಬದ್ಧವಾಗಿ ತೋರಿಸುತ್ತಿದ್ದ ತಲೆಬುಡವಿಲ್ಲದ ಮೂರೇಮೂರು ರೀಲನ್ನು ನೋಡಲುಕಾತರಿಸಿ ಓಡುತ್ತಿದ್ದ ಶಾಲಾಮಕ್ಕಳ ಜಾಗ ಆ ಎರಡು ದಿನಗಳೂ ಕೇವಲ ಶಾಸ್ತ್ರಕ್ಕೆ ಶಾಲೆಗೆ ಹೋಗಿ ಮರಳಿ ಮನೆ ಸೇರಿ ವಿಡಿಯೋಗೇಂ ಆಡಲು ಹಂಬಲಿಸುವ ಮಕ್ಕಳು ಭರ್ತಿಮಾಡುತ್ತಿದ್ದಾರೆ.ಮೂರು ದಿನಗಳ ಜಾತ್ರೆಯಲ್ಲೂ ಮೊದಲಿನ ರಂಗಿಲ್ಲ,ಈಗ ಬೀಡಿವ್ಯಾನ್ ಮೇಲೆ ದಿಲೀಪ ಹೆಣ್ಣುವೇಷಧರಿಸಿ ಕುಣಿಯುವುದಿಲ್ಲ,ಕವಿತಾ ಹೋಟೆಲಿನ ಗೋಡೆಯ ಮೇಲೆ ಯಾರೂ ನಸೀಮ ಬೀಡಿ ಸೇದುತ್ತ ಸುರುಳಿ ಸುರುಳಿ ಹೊಗೆ ಬಿಡುವ ಫೋಸ್ ಕೊಡುವ ತೆಳುಮೀಸೆಯ ರಾಜ್ ಕುಮಾರ್,ಕಮಲ ಹಾಸನ್,ಜಿತೇಂದ್ರ,ರಜನಿಕಾಂತ್ ರ ಜಾಹಿರಾತನ್ನು ಚಿತ್ರಿಸುವುದಿಲ್ಲ,ಮೊಬೈಲ್ ಸಿಗ್ನಲ್ ಗಳ ನಡುವೆ ಸಂಬಂಧಗಳು ಸದಿಲಾಗುತ್ತಿವೆ,'ನೇರ-ದಿಟ್ಟ-ನಿರಂತರ' ಹಾಗು 'ಉತ್ತಮ ಸಮಾಜಕ್ಕಾಗಿ'ನಾಯಿ ಉಚ್ಚೆ ಹೊಯ್ದರೂ ಸುದ್ದಿ ಮಾಡುವವರ ನಡುವೆ ಇಲ್ಲಿನವರ ಏಕೈಕ ಟೈಮ್ ಪಾಸ್ ಆಗಿದ್ದ ಗಾಸಿಪ್ ಪ್ರಸರಣೆಗೆ ಕೊಕ್ಕೆಬಿದ್ದಿದೆ,ಒಬ್ಬರಿಗೊಬ್ಬರು ಪರಿಚಿತರೆ ಆಗಿರುತ್ತಿದ್ದ ಸಣ್ಣ ಊರಲ್ಲಿ ಆಧುನಿಕತೆಯ ಹವೆ ವಿಪರೀತ ಬೀಸಿ ಎಲ್ಲರೂ ಪರಸ್ಪರ ಅಪರಿಚಿತರಾಗುತ್ತಿದ್ದರೆ .ಒಟ್ಟಿನಲ್ಲಿ ಚಂದದ ಊರೊಂದು ನಿಧಾನವಾಗಿ ಸಾಯುತ್ತಿದೆ.

Wednesday, September 8, 2010

ಸುಂದರ ತಾಣಗಳ ಆಗರ...

ಅಭಿಮಾನದ ಭರದಲ್ಲಿ ನೆನ್ನೆ ತೀರ್ಹಹಳ್ಳಿಯನ್ನ ವಿಪರೀತ ಹೊಗಳಿ ಬಿಟ್ಟೆನೇನೋ.ಇತ್ತೀಚಿಗೆ 'ನೆನಪಿರಲಿ' ಕನ್ನಡ ಚಿತ್ರಕ್ಕಾಗಿ ಹಂಸಲೇಖರವರು ಬರೆದ ಹಾಡೊಂದರಲ್ಲಿ'....ತೀರ್ಥಹಳ್ಳಿಲಿಕುವೆಂಪು ಹುಟ್ಟಿದ್ರು' ಎಂಬ ಸಾಲಿದೆ,ಅವರು ಸಿಕ್ಕಾಗ 'ಕುವೆಂಪು ಅಷ್ಟೇ ಅಲ್ಲ ಸಾರ್ ನಮ್ಮಂತ ಬಡಪಾಯಿಗಳೂ ಹುಟ್ಟಿದ್ದೇವೆ' ಅಂತ ತಮಾಷೆ ಮಾಡ್ತಿರ್ತೀನಿ.ಸಿನೆಮ ಅಂದ ಕೂಡಲೆ ಹೇಳಲೇ ಬೇಕಾದ ಮುಖ್ಯ ಸಂಗತಿಯೊಂದಿದೆ.ಇತ್ತೀಚಿಗೆ ಕನ್ನಡ ಚಿತ್ರರಂಗದ ಪಾಲಿಗೆ ತೀರ್ಥಹಳ್ಳಿ ಮಾವನ ಮನೆಯಂತಾಗಿದೆ.ಪ್ರತಿ ನಾಲ್ಕನೇ ಚಿತ್ರದ ಚಿತ್ರೀಕರಣಕ್ಕಾಗಿ ಗಾಂಧಿನಗರದ ಮಂದಿ ಇಲ್ಲಿಗೆ ಕ್ಯಾಮರಾದೊಂದಿಗೆ ದೌಡಾಯಿಸುತ್ತಾರೆ.ಆಗುಂಬೆ,ಕವಲೇದುರ್ಗ,ಭೀಮನಕಟ್ಟೆ,ಹುಂಚ,ಕುಂದಾದ್ರಿ ಬೆಟ್ಟ,ಬರ್ಕಣ,ಒನಕೆ ಅಬ್ಬಿ,ಗಾಜನೂರಿನ ಹಿನ್ನೀರು,ಚಕ್ರಾ-ಯಡೂರಿನ ವಾರಾಹಿ ಹಿನ್ನೀರು,ಮಂಡಗದ್ದೆ ಪಕ್ಷಿಧಾಮ,ಸಕ್ರೆಬೈಲಿನ ಹಿನ್ನೀರ ಬಳಿಯಿರುವ ಆನೆ ಬಿಡಾರ ,ಸಿಬ್ಬಲಗುಡ್ಡೆ,ಕುಪ್ಪಳಿ,ತೀರ್ಥಹಳ್ಳಿ ಪೇಟೆಯೊಳಗಿನ ಗ್ರಾಮೀಣ ಸೊಗಡು ಹೀಗೆ ಸುಂದರ ಹಿನ್ನೆಲೆಗೆ ಕೊರತೆ ಇಲ್ಲದಿರುವುದರಿಂದ ಸಿಕ್ಕ ಸಿಕ್ಕ ಸಿನೆಮಾಗಳ ಪತ್ರಿಕಾಗೋಷ್ಠಿಗಳಲ್ಲಿ ಕೊಡುವ ಪ್ರೆಸ್ನೋಟ್ ಗಳು ಖಡ್ಡಾಯ ಎಂಬಂತೆ ಹೊರಾಂಗಣಗಳ ಪಟ್ಟಿಯಲ್ಲಿ ತೀರ್ಥಹಳ್ಳಿಯನ್ನೂ ಒಳಗೊಂಡಿರುತ್ತವೆ.


ನನಗೆ ನೆನಪಿರುವಂತೆ ಆಕಸ್ಮಿಕ,ಕಾದಂಬರಿ,ಫಣಿಯಮ್ಮ,ನಿಲುಕದ ನಕ್ಷತ್ರ,ಮುಂಗಾರಿನ ಮಿಂಚು,ಉಲ್ಟಾಪಲ್ಟ,ಮಸಣದ ಮಕ್ಕಳು,ಸಂಭ್ರಮ,ಪ್ರೇಮ-ಪ್ರೇಮ-ಪ್ರೇಮ,ಸಂಸ್ಕಾರ,ಘಟಶ್ರಾದ್ಧ,ನಿನದೆ ನೆನಪು,ಕಾನೂರು ಹೆಗ್ಗಡತಿ,ಮೌನಿ,ಕಲ್ಯಾಣ ಮಂಟಪ,ಮೈ ಆಟೋಗ್ರಾಫ್,ಮಿಸ್ ಕ್ಯಾಲಿಫೋರ್ನಿಯ,ಚಿಲಿಪಿಲಿ ಹಕ್ಕಿಗಳು,ಕರಾವಳಿ ಹುಡುಗಿ,ಮಠ,ಮತದಾನ,ಮತ್ತೆ ಮುಂಗಾರು,ಗಾಳಿಪಟ,ಮಾತಾಡ್ ಮಾತಾಡ್ ಮಲ್ಲಿಗೆ,ಹೊಂಗನಸು,ನಮ್ ಏರಿಯಾಲ್ ಒಂದಿನ,ಲಿಫ್ಟ್ ಕೊಡ್ಲ?,ಶ್ರೀರಾಮದಾಸು (ತೆಲುಗು) ಹೀಗೆ ಅನೇಕ ಚಿತ್ರಗಳಿಗೆ ಇಲ್ಲಿ ರೀಲು ಸುತ್ತಲಾಗಿದೆ.

ಈ ಊರಿನ ಚಹರೆಪಟ್ಟಿ ವಿವರಿಸೋದು ಸುಲಭ,ನಿಮ್ಮ ಅಂಗಯ್ಯನ್ನೊಮ್ಮೆ ನೋಡಿ ಕೊಂಡರಾಯಿತು! ಥೇಟ್ ಅದರ ಪಡಿಯಚ್ಚೆ ನಮ್ಮ ತೀರ್ಥಹಳ್ಳಿ.ದಕ್ಷಿಣಕ್ಕೆ ಒಂದೆಡೆ ಊರನ್ನೂ,ಇನ್ನೊಂದೆಡೆ ಕುರುವಳ್ಳಿಯ ಕಲ್ಲು ಕ್ವಾರಿಗಳನ್ನೂ ಬಳಸಿಕೊಂಡು ತುಂಗೆ ಹರಿಯುತ್ತಾಳೆ,ಕೊಪ್ಪದ ಕಡೆಯಿಂದ ಬರುವವರಿಗೆ ಕಮಾನುಸೇತುವೆಯಿದೆ (ಹಿಂದೆ ಇಲ್ಲಿ ಕಲ್ಲುಸಾರ ಮಾತ್ರವಿತ್ತು,ಹೊಳೆದಾಟುವವರು ದೋಣಿಯನ್ನೇ ಆಶ್ರಯಿಸಬೇಕಿತ್ತು,ಕುವೆಂಪು-ಎಂ ಕೆ ಇಂದಿರಾ ಕಾದಂಬರಿಗಳಲ್ಲಿ ಇದರ ಚಿತ್ರಣ ನೀವು ಓದಿರಬಹುದು. ಸಾರ=ಕಾಲಲ್ಲಿ ಮಾತ್ರ ಸಾಗಬಹುದಾದ ಕಿರುಸೇತುವೆ).ಊರ ಮಧ್ಯ ಇರುವ ಮುಖ್ಯರಸ್ತೆ ಮೌಲಾನ ಅಬ್ದುಲ್ ಕಲಾಂ ಆಜಾದ್ ಎಂಬ ಮೈಲುದ್ದದ ಹೆಸರಿನದಾಗಿದ್ದರೂ ಜನ ಅದನ್ನು ಕರಿಯೋದು ಆಜಾದ್ ರಸ್ತೆ ಎಂದೇ.ಪೂರ್ವಕ್ಕೆ ಆನಂದಗಿರಿಯಿದೆ ಇದನ್ನ ಬಳಸಿಕೊಂಡು ಶಿವಮೊಗ್ಗ ರಸ್ತೆ ಊರನ್ನ ಕೂಡುತ್ತದೆ.ಪಶ್ಚಿಮಕ್ಕೆ ಯಡೇಹಳ್ಳಿ ಕೆರೆ ಇಲ್ಲಿಂದ ಸಾಗರ ರಸ್ತೆ ಸೀಬಿನಕೆರೆ ಹಾಗು ಕೋಳಿಕಾಲುಗುಡ್ಡ ಬಳಸಿ ಊರನ್ನು ಮುಟ್ಟುತ್ತದೆ.ವಾಯುವ್ಯಕ್ಕೆ ಸಿದ್ದೇಶ್ವರಗುಡ್ಡ ಇದರ ಪಕ್ಕದ ಹೆದ್ದಾರಿ ಮಂಗಳೂರಿಗೆ ಊರಿನ ಕೊಂಡಿ.ಎಡವಿದರೊಂದು ದೇವಸ್ಥಾನ ಸಿಗುವ ರಥಬೀದಿ,ಹಿಂದೊಮ್ಮೆ ಛತ್ರಗಳಿದ್ದಿರಬಹುದಾದ ಛತ್ರಕೆರಿ,ಊರಿಗೊಬ್ಬಳೇ ಪದ್ಮಾವತಿಯಂತಿದ್ದ ಏಕೈಕ ಬಡಾವಣೆ ಸೊಪ್ಪು ಗುಡ್ಡೆ ಅಲ್ಲಿನ ಸಂತೆ ಮೈದಾನ ಪಕ್ಕದ ಸಾಬರ ಕೇರಿ,ಮಸೀದಿ ರಸ್ತೆಯ ಅಂಚಿಗೆ ಸೆಯಿಂಟ್ ಮೇರಿಸ್ ಇಗರ್ಜಿ,ಹೊಸತಾಗಿ ವಿಸ್ತಾರವಾದ ಬೆಟ್ಟಮಕ್ಕಿ,ಊರ ಆರಂಭದ ಕುಶಾವತಿ (ಪಕ್ಕದಲ್ಲೇ ನಾಡ್ತಿ ಹಾಗು ಕುಶಾವತಿ ಸೆಲೆಯಿದೆ),ಬಾಳೆಬೈಲಿನ ಹೊರವಿಸ್ತಾರ ಇವಿಷ್ಟು ಸೇರಿ ತೀರ್ಥಹಳ್ಳಿ ರೂಪುಗೊಂಡಿದೆ.


ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಗಡಿಯಾಗಿದ್ದ (ಘಟ್ಟದ ಕೆಳಗಿನ ದಕ್ಷಿಣ ಕನ್ನಡ ಆಗ ಮದರಾಸು ಪ್ರಾಂತ್ಯದ ಭಾಗವಾಗಿತ್ತು) ತೀರ್ಥಹಳ್ಳಿಗೆ ಒಡೆಯರ ಕೃಪಾದೃಷ್ಟಿ ಆಗಲೆ ಹರಿದಿತ್ತು.ಸರ್ ಎಂ ವಿಶ್ವೇಶ್ವರಯ್ಯನವರ ಮುತುವರ್ಜಿಯಿಂದ ಆ ಕಾಲದಲ್ಲಿಯೇ ತುಂಗೆಗೆ ಅಡ್ಡಲಾಗಿ ಕಮಾನು ಸೇತುವೆ ಕಟ್ಟಲಾಯಿತು,ಏಳು ದಶಕದ ಹಿಂದೆ ಕಟ್ಟಲಾಗಿರುವ ಆ ಸೇತುವೆ ಇವತ್ತಿಗೂ ಗಟ್ಟಿಮುಟ್ಟಾಗಿದೆ.ಮೂರೆದಿನಕ್ಕೆ ಬೀಳುವ ಇಂದಿನ ಸರಕಾರಿ ಸೇತುವೆಗಳ 'ಸಾಧನೆ'ಗಳನ್ನು ಇದು ಇಂದಿಗೂ ನಾಚಿಸುತ್ತಿದೆ.ಈಗಿನ ಕಾಲದಲ್ಲಾದರೆ ನಿಶ್ಚಿತ ಮೊತ್ತಕ್ಕಿಂತ ಹೆಚ್ಚುವರಿ ಅನುದಾನಕ್ಕಾಗಿ ಬಾಯಿ ಬಿಡುತ್ತಿದ್ದರೇನೋ? ಆದರೆ ಆಗಿನ ವಿಶ್ವೇಶ್ವರಯ್ಯನವರ ಕಾಮಗಾರಿಯಲ್ಲಿ ಸೇತುವೆ ಕಟ್ಟಿಯೂಕಚ್ಚಾ ಸಾಮಗ್ರಿ ಮಿಕ್ಕಿತು! ಉಳಿದಿದ್ದನ್ನು ಒಂದು ನೆಲೆ ಮುಟ್ಟಿಸಲು ಅವರು ಕಂಡುಕೊಂಡದ್ದೆ ಬೆಟ್ಟಕ್ಕೆ ಕಲ್ಲು ಹೊರುವ ಉಪಾಯ! ಅಂದು ಅವರು ಬೆಟ್ಟಕ್ಕೆ ಕಲ್ಲು ಹೊತ್ತದ್ದು ಖಂಡಿತ ನಿರುಪಯೋಗವಾಗಲಿಲ್ಲ.ಇಂದಿಗೂ ತೀರ್ಥಹಳ್ಳಿಯ ಯಾವುದೆ ಭಾಗದಿಂದಲಾದರೂ ಅನಂದಗಿರಿಯತ್ತ ಕಣ್ಣು ಹಾಯಿಸಿದರೆ ಅದರ ತುತ್ತತುದಿಯಲ್ಲಿ ಟೋಪಿಯಂತೆ ಕಾಣುವ ಸುಂದರ ಮಂಟಪವೊಂದನ್ನು ನೀವು ಕಾಣಬಹುದು.ಅದರ ತಪ್ಪಲಿನಲ್ಲಿರುವ ತುಂಗಾ ಕಾಲೇಜಿನ ದೂರದ ನೋಟವೂ ಸೇರಿ ಅದು ಮನೋಹರವಾಗಿ ಕಾಣುತ್ತೆ.ಸ್ಥಳಿಯರ ಬಾಯಲ್ಲಿ 'ವಿಶ್ವೇಶ್ವರ ಮಂಟಪ'ಎಂದೇ ಕರೆಸಿ ಕೊಳ್ಳುವ ಈ ಮಂಟಪಕ್ಕೆ ಎಲ್ಲಾದರೂ ಬಾಯಿದ್ದಿದ್ದರೆ ತನ್ನ ಆಸುಪಾಸಿನಲ್ಲಿ ಈ ತನಕ ನಡೆದಿರುವ ಪ್ರೇಮ ಕಲಾಪ-ಪ್ರಣಯ ಪ್ರಕರಣಗಳನ್ನು ಅದು ಇದ್ದ ಬದ್ದವರಿಗೆಲ್ಲ ಹೇಳಿ ಅನೇಕರ ಮನೆ ಹಾಳು ಮಾಡುತ್ತಿತ್ತು! ತಾಲೂಕಿನ ಕೇಂದ್ರದಲ್ಲಿರುವ ಸರಕಾರಿ ಆಸ್ಪತ್ರೆಯೂ ಮೈಸೂರಿನ ಒಡೆಯರ ಕೊಡುಗೆಯೆ,ಇದನ್ನು ಇಲ್ಲಿಯ ಜನ ಬಾಯ್ತುಂಬ 'ಜಯಚಾಮ ರಾಜೇಂದ್ರ ಆಸ್ಪತ್ರೆ' ಅನ್ನುತ್ತರೆಯೇ ಹೊರತು ಸರಕಾರಿ ಆಸ್ಪತ್ರೆ ಎನ್ನರು.

Tuesday, September 7, 2010

ತೀರ್ಥಹಳ್ಳಿ ಎಂದರೆ...

ಮಲೆನಾಡಿನ ಒಳಗೆ ಹುದುಗಿರುವ ತೀರ್ಥಹಳ್ಳಿ ಸುಮಾರು ಹದಿನೈದು ಸಾವಿರ ಜನಸಂಖ್ಯೆಯೂ ಇರದ ಪುಟ್ಟ ಪಟ್ಟಣ. ಅತ್ತ ತೀರ ಹಳ್ಳಿಯೂ ಅಲ್ಲದೆ,ಇತ್ತ ಅರೆಬೆಂದ ಪಟ್ಟಣದ ಲಕ್ಷಣಗಳನ್ನ ರೂಢಿಸಿಕೊಳ್ಳುತ್ತಾ ತನ್ನ ಹೆಸರಿಗೆ ನ್ಯಾಯ ಸಲ್ಲಿಸುತ್ತಾ ಇದೆ.ನಾಲ್ಕೂ ಸುತ್ತಿನಲ್ಲಿರುವ ಗುಡ್ಡಗಳ ನಡುವೆ ತಟ್ಟೆಯಾಕಾರದಲ್ಲಿ ಊರು ಹಬ್ಬಿದ್ದು ಯಾವುದೆ ದಿಕ್ಕಿನಿಂದ ಊರು ಹೊಕ್ಕರೂ ನಿಮ್ಮ ಕಣ್ಣಿಗೆ ಅಡಿಕೆ ತೋಟಗಳು ಕಾಣುತ್ತವೆ.ಕಳೆದ ಅರ್ಧ ಶತಮಾನದಲ್ಲಿ ಆಗಿದ್ದ ಪ್ರಗತಿಯ ವೇಗವನ್ನ ಕಳೆದ ಐದೇ ವರ್ಷದಲ್ಲಿ ಸಾಧಿಸಿ ಅಡ್ಡಾದಿಡ್ಡಿ ಓಡುತ್ತಿರುವ ಕುಡುಕನಂತೆ ನನ್ನ ಕಣ್ಣಿಗೆ ಈ ನಡುವೆ ತೀರ್ಥಹಳ್ಳಿ ಕಾಣುತ್ತಿದೆ.


ಮೂಲತಃ ಕೆಳದಿ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದ ಇಲ್ಲಿಗೆ ನವ ನಾಗರೀಕತೆ ಕಾಲಿಟ್ಟದ್ದು ಬಹುಷಃ ಎಪ್ಪತ್ತು ವರ್ಷಗಳ ಹಿಂದೆ ಮೈಸೂರಿನ ಒಡೆಯರು ತುಂಗಾನದಿಗೆ ಅಡ್ಡಲಾಗಿ ಕಟ್ಟಿಸಿದ ಕಮಾನು ಸೇತುವೆಯ ಮೂಲಕ.ಬಿದನೂರು,ಕೆಳದಿ,ನಗರ ಹಾಗು ಇಕ್ಕೇರಿ ಗಳಲ್ಲಿ ನಾಲ್ನಾಲಕ್ಕು ರಾಜಧಾನಿ ಇದ್ದಿದ್ದರೂ ಕೆಳದಿ ನಾಯಕರ ವಾಣಿಜ್ಯದ ಕೇಂದ್ರವಾಗಿತ್ತು ಇದು.

ಅವರ ಗುರು ಮಠ ಇದ್ದುದು ಇಲ್ಲಿನ ಕವಲೆದುರ್ಗದಲ್ಲಿರುವ ಕೋಟೆಯಲ್ಲಿ.ಇಂದಿಗೂ ಈ ಲಿಂಗಾಯತ ಮಠ ಅಸ್ತಿತ್ವದಲ್ಲಿದೆ.ಸಾಂಸ್ಕ್ರತಿಕವಾಗಿ ಆ ಕಾಲದಿಂದಲೂ ತೀರ್ಥಹಳ್ಳಿ ಸಮೃದ್ಧ.ಸುತ್ತಮುತ್ತಲಿನ ಹೊಸನಗರ,ಕೊಪ್ಪ,ಶೃಂಗೇರಿ,ನರಸಿಂಹರಾಜಪುರ,ಕುಂದಾಪುರ,ಕಾರ್ಕಳ, ಶಿವಮೊಗ್ಗ ತಾಲೂಕುಗಳು ಹೋಲಿಕೆಯಲ್ಲಿ ಸಾಂಸ್ಕೃತಿಕವಾಗಿ ಇನ್ನೂ ತೂಕಡಿಸುತ್ತಿದ್ದರೆ ಇತ್ತ ತೀರ್ಥಹಳ್ಳಿಯಲ್ಲಿ ಅಕ್ಷರಶಃ ಪ್ರತಿಭಾ ಸ್ಪೋಟವಾಗುತ್ತಿದೆ.


ಕರ್ನಾಟಕ ಸಂಗೀತದ ಪಿತಾಮಹ ಪುರಂದರ ದಾಸರು ಇಲ್ಲಿನ ಆರಗದವರು.ಕನ್ನಡದ ಮೊದಲ ಜ್ಞಾನಪೀಠ ಪಡೆದ ಕುವೆಂಪು ಇಲ್ಲಿಯ ಕುಪ್ಪಳಿಯವರು.ಆರನೇ ಜ್ಞಾನಪೀಠವೂ ಇಲ್ಲಿನ ಭಾರತೀಪುರದ ಅನಂತಮೂರ್ತಿಯವರಿಗೆ ಸಂದಿದೆ.ಐದು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ನಿರ್ದೇಶಕ ಗಿರೀಶ್ ಇಲ್ಲಿನ ಕಾಸರವಳ್ಳಿಯವರು.ಕರ್ನಾಟಕದಲ್ಲಿ ಗೇಣಿ ಪದ್ಧತಿ ಜಾರಿಗೆ ತಂದ ನಾಡಿನ ಎರಡನೇ ಮುಖ್ಯಮಂತ್ರಿ ಮಂಜಪ್ಪ ಇಲ್ಲಿನ ಕಡಿದಾಳಿನವರು (ಅಂದಹಾಗೆ ವಿಧಾನಸೌಧದ ಉದ್ಘಾಟಕರು ಇವರೇ). ಈ ನಾಡು ಕಂಡ ವಿಶಿಷ್ಟ ರಾಜಕಾರಣಿ ಗೋಪಾಲಗೌಡರು ಇಲ್ಲಿನ ಶಾಂತಾವೆರಿಯವರು.ಇಂದಿನ ಯುವಕರ ಒಂದು ತಲೆಮಾರಿನ ಕಣ್ತೆರೆಸಿದ ಪೂರ್ಣಚಂದ್ರತೇಜಸ್ವಿ ಹುಟ್ಟಿದ-ಪ್ರಕೃತಿಯಲ್ಲಿ ಕಡೆಗೆ ಲೀನವಾದ ಊರಿದು.ಕನ್ನಡದ ವಿಶಿಷ್ಟ ಕವಿ ಎಸ್ ವಿ ಪರಮೇಶ್ವರ ಭಟ್ಟರು ಇಲ್ಲಿನ ಮಾಳೂರಿನವರು.ಅಂಕಣ ಬರಹ ಪಿತಾಮಹ ಮಾನಪ್ಪ ನಾಯಕರು ಇಲ್ಲಿನ ಹಾರೋಗುಳಿಗೆಯವರು.ರಾಜ್ಯದಲ್ಲಿ ರೈತ ಚಳುವಳಿ ಕಟ್ಟಿ ಬೆಳೆಸಿದ ದಿವಂಗತ ಸುಂದರೇಶ್,ಶಾಮಣ್ಣ ಇಲ್ಲಿನ ಕಡಿದಾಳಿನವರು.ಶರತ್ ಕಲ್ಕೋದ್,ಸತ್ಯಮೂರ್ತಿ ಆನಂದೂರು,ರಮೇಶ್ ಶಟ್ಟಿ,ವಿಕಾಸ ನೇಗಿಲೋಣಿ,ಶ್ರೀಕಾಂತ್ ಭಟ್ ಇವರೆಲ್ಲ ಸಧ್ಯ ಪತ್ರಿಕೋದ್ಯಮದಲ್ಲಿ ಬ್ಯುಸಿ.ಇಲ್ಲಿನ ಎಂ ಕೆ ಇಂದಿರಾ,ಶಾರದ ಉಳುವೆಯವರನ್ನ ಓದಿರದ ಕಾದಂಬರಿ ಪ್ರಿಯರು ಇದ್ದಿರಲಿಕ್ಕಿಲ್ಲ.ಆಕಾಲದ ಸುಂದರಾಂಗ ಮಾನು,ಈ ಕಾಲದ ಚಲುವ ದಿಗಂತ ಇಲ್ಲಿಂದ ಹೋಗಿ ಬೆಳ್ಳಿತೆರೆಯಲ್ಲಿ ಮಿನುಗುತ್ತಿದ್ದರೆ.ಕೋಡ್ಲು ರಾಮಕೃಷ್ಣ ಇಲ್ಲಿನವರೇ ಆದ ಚಿತ್ರ ನಿರ್ದೇಶಕ.

Monday, September 6, 2010

ನೆನಪ ಕೆರಯಲ್ಲಿ ಮುಳುಗೆದ್ದು...

ಪ್ರಣಯದ ಗಾಳಿ ಒಲವ ಕಣ್ತೆರೆಸಿ,
ಮತ್ತೆ ಕವಿದ ಮೋಡ ಎದೆಚಿಪ್ಪಲಿ ಹನಿಗಳ ಮುತ್ತಸುರಿಸಿ/
ಮನದ ಪ್ರತಿ ಮಿಡಿತಕ್ಕೂ ಕಾತರದ ನವಿರು ಹುಚ್ಚ ಹಿಡಿಸಿ,
ಗುಟ್ಟಾಗಿ ಸಂಚು ಹೂಡಿದ್ದು ಕೇವಲ ನಿನ್ನೊಂದು ಕಿರು ನಗೆಗಾಗಿ//

ಒಂಟಿಯಾಗಿ ಉಸಿರಾಡೋದೂ ವಿಪರೀತ ಕಷ್ಟವಿತ್ತು ಒಂದೊಮ್ಮೆ,
ನೀ ಸಿಗದಿದ್ದರೆ ಅನ್ನೋದು ನಿಜ...ಹೌದು/
ನಿರ್ಭರ ರಾತ್ರಿಗಳು...ದುರ್ಭರ ಕನಸುಗಳು,
ನನ್ನನು ಕಾಡದಂತೆ ಕಾಪಾಡಿದ್ದು....ನೀನಿತ್ತ ಜೊತೆ ಮಾತ್ರ//

Thursday, September 2, 2010

ಮರೆಯಲಾರೆ...

ನಿನಗೇ ನೀನು ಮರೆತು ಹೋಗುವಷ್ಟು ನಿನ್ನ ಪ್ರೀತಿಸುತ್ತೇನೆ,
ನನ್ನೊಲವ ಆಳದಲ್ಲಿ ಮನದಣಿಯುವವರೆಗೂ ಈಜಾಡಿಸುತ್ತೇನೆ/
ನನ್ನ ತುಟಿಯಂಚಿಂದ ಉದುರುವ ಪದಗಳಲೆಲ್ಲ ನಿನ್ನದೆ ಪಿಸುದನಿ,
ಎದೆಯ ಒಳಗೆಲ್ಲ ತುಂತುರು...ನಿನ್ನ ನೆನಪಿನದೆ ಮಳೆಹನಿ//

Wednesday, September 1, 2010

ಒಲುಮೆಯ ಭಿಕ್ಷೆ ನಿರೀಕ್ಷೆ...

ಬರಡಾದ ಭಾವದ ಬಯಲಲ್ಲಿ ಮತ್ತೆ ಪ್ರೇಮದ ಹಸಿರು ಚಿಗುರಲಾರದು,
ಬತ್ತಿದ ಮನದ ಬಾವಿಯಲ್ಲಿ ಒಲವ ಒರತೆ ಪುನಃ ಸೆಲೆ ಒಡೆಯಲಾರದು/
ನೀನೆ ಮರಳಿ ಕಾಡಿದರೂ ಒಡೆದ ಮನಸ ಕನ್ನಡಿ ಮತ್ತೆ ಕೂಡಲಾರದು,
ಇನ್ನೇನಿದ್ದರೂ ಎದೆಯೊಳಗೆ ನೆನಪಿನ ಜಾತ್ರೆ...
ಅದರ ಮೆರವಣಿಗೆಯಲ್ಲಿ ಒಲವ ತಿರುಕ ನಾನು ಹಿಡಿದು ಸಾಗುವೆನು ಭಿಕ್ಷಾಪಾತ್ರೆ//