Sunday, December 21, 2025

ಮುಗಿಯದ ಕಥೆಯೊಂದರ ಆರಂಭ - ೨.( ದಡ ಕಾಣದ ದೋಣಿಯ ಕೊನೆಯಿರದ ಕುರುಡು ಪಯಣ.)


ಈಶ್ವರಯ್ಯನ ಪರಿಸ್ಥಿತಿ ಕಳೆದ ಆರು ದಶಕಗಳಳಿಂದೀಚೆ ಬಹಳಷ್ಟು ಏರುಪೇರುಗಳ ಸಹಿತ ಒಂದು ನಿರೀಕ್ಷಿತ ಮಟ್ಟವನ್ನೀಗ ಬಂದು ಮುಟ್ಟಿ ನಿಂತಿದೆ. ವಾಸ್ತವದಲ್ಲಿˌ ಅವರದ್ದು ಒಂಥರಾ ಅಯೋಮಯವಾದ ಬದುಕು. ಅವರಿಗೆ ಅರಿವು ಮೂಡುವ ಮೊದಲೆ ಹಳ್ಳಿಯಲ್ಲಿದ್ದ ಪಿತ್ರಾರ್ಜಿತ ಜಮೀನನ್ನ ಹೊಟೆಲ್ ಮಾಡುವ ಹುಚ್ಚಿನ ಅಪ್ಪ ಕೆನರಾ ಬ್ಯಾಂಕಿನಲ್ಲಿ ಪಡೆದ ಸಾಲಕ್ಕೆ ಅಡವಿಟ್ಟುˌ ಅವರ ವ್ಯವಹಾರ ಗಿಟ್ಟದೆ ನಷ್ಟವಾಗಿ ಜಮೀನು ಏಲಂ ಆಗಿರದಿದ್ಡರೆˌ ಈಶ್ವರಯ್ಯ ಬಹಳ ಹಿಂದೆಯೆ "ಮಣ್ಣಿನ ಮಗ"ನಾಗಿ ಕಲಿತ ಕಾಲೇಜು ವಿದ್ಯೆಗೆ ಶರಣು ಹೊಡೆದು ಮರಳಿ ಮಣ್ಣಿಗೆ ಸೇರಿ ಹೋಗುತ್ತಿದ್ದರು.

ಇತ್ತ ಸ್ವಂತದ ಜಾಗವೂ ಇಲ್ಲದ - ಅತ್ತ ಸೂಕ್ತ ಬಂಡವಾಳದ ಮೂಲಧನವೂ ಇಲ್ಲದ ಈಶ್ವರಯ್ಯನೊಳಗಿದ್ದದ್ದಾಗ ಕೇವಲ ಆರಂಭಿಕ ಉತ್ಸಾಹದ ಆವೇಶ ಮಾತ್ರ. ಯಾವುದೆ ಒಂದು ಕನಸಿನ ಯೋಜನೆಯನ್ನ ಸಾಕಾರ ಮಾಡಿಕೊಳ್ಳಬೇಕೆಂದಿದ್ದರೆ ಒಂದಾ ಮನೆಯ ಹಿರಿಯರು ಒತ್ತಾಸೆ ಕೊಟ್ಟು ಬಂಡವಾಳಕ್ಕೆ ವ್ಯವಸ್ಥೆ ಮಾಡಬೇಕು. ಅದರ ಮೂಲವಿಲ್ಲದಿದ್ದಾಗˌ ತಾನೆ ದುಡಿದು ಕೂಡಿಟ್ಟು ಬಂಡವಾಳ ಹೊಂದಿಸಿಕೊಳ್ಳಬೇಕು. ಅದೂ ಇಲ್ಲದಿದ್ದರೆˌ ಇಲ್ಲಾ ಎಲ್ಲಿಂದಾದರೂ ಸಾಲ ಮಾಡಿಯಾದರೂ ವ್ಯವಹಾರ ಶುರು ಮಾಡಬೇಕು. ಅಪ್ಪ ಸಂಪಾದಿಸಿಟ್ಟ ಬಂಡವಾಳದ ಬೆಂಬಲವಿಲ್ಲದ ಈಶ್ವರಯ್ಯ ಇದರಲ್ಲಿ ಎರಡನೆ ಆಯ್ಕೆಗೆ ಮೊರೆ ಹೋಗುವವರಿದ್ದರು. ಆದರೆ ತಾನೊಂದು ಬಗೆದರೆ ವಿಧಿ ಇನ್ನೇನನ್ನೋ ಹೇರಿತು ಎಂಬಂತೆ ಆ ನಡುವೆ ಏನೇನೋ ನಡೆದು ಹೋಗಿ ಸ್ಥಿರತೆ ಕಾಣುವ ಸಮಯದಲ್ಲಿ ಸಮಾಧಿ ಕಟ್ಟಲು ತನ್ನ ಕೈಯಿಂದಲೆ ಹೊಂಡ ತೋಡಿ ತಾನೆ ಹೋಗಿ ಅದರೊಳಗೆ ಹಾರಿದಂತೆ ಆಗಿ ಹೋಯ್ತು ಅವರ ಬದುಕಲ್ಲಿ.

ಸ್ವಂತ ದುಡಿಮೆಯಲ್ಲಿ ಅಂತದ್ದೊಂದನ್ನ ಮಾಡಲು ಲೆಕ್ಖಾಚಾರ ಹಾಕಿ ವ್ಯವಹಾರಕ್ಕೆ ಕೈ ಹಾಕುವ ಹೊತ್ತಿಗೆˌ ಬಂಡವಾಳಕ್ಕಾಗಿ ಸೇರಿಸಿಟ್ಟಿದ್ದ ಹಣವನ್ನ ಇನ್ಯಾರದೋ ಅಗತ್ಯಕ್ಕಂತ ಮನ ಕರಗಿ ತತ್ಕಾಲಿಕವಾಗಿ ಸಾಲ ಕೊಟ್ಟರೆˌ ಅದೂ ಮರು ವಸೂಲಾಗದೆ ಕೆಂಗೆಟ್ಟು ಕೂತರು. ಪಡೆದವ ಹಣವನ್ನೂ ಕೊಡದೆ ಸಂಬಂಧಗಳನ್ನೂ ಉಪೇಕ್ಷಿಸಿ ಕೂತ. ಆದರೂ ಹಿಡಿದ ಕೆಲಸ ಅರ್ಧದಲ್ಲಿ ಬಿಡಲೊಲ್ಲದೆˌ ಭಂಡ ಧೈರ್ಯ ಮಾಡಿ ಖಾಸಗಿಯವರಲ್ಲಿ ದುಡಿಯುತ್ತಿದ್ದ ಸಂಸ್ಥೆಯ ಸಂಬಳ ನಂಬಿ ಬೃಹತ್ ಸಾಲ ಮಾಡಿ ಭೋಗ್ಯಕ್ಕೆ ಪಡೆದ ಜಮೀನೊಂದರಲ್ಲಿ ಅದೆ ಕನಸ ಕೃಷಿ ಕೈಗೊಳ್ಳಲು ಉದ್ದೇಶಿಸಿದರೂ. ಬಂಡವಾಳ ಸಾಲದೆ ಹೋಗಿ ಹಾಕಿದ ದುಡ್ಡೂ ಗಿಟ್ಟದೆ ಮೋಸವಾಯ್ತು. ಹೀಗೆ ವ್ಯವಹಾರದಲ್ಲಿ ಕೈ ಸುಟ್ಟುಕೊಂಡ ಈಶ್ವರಯ್ಯನಿಗೆˌ ತಾನಾಗಿ ಬಂದು ಕೇಳಿದವರಿಗೆ ಧಾರಾಳವಾಗಿ ಕೊಡುವ ಶಕ್ತಿ ಬಂದಷ್ಟೆ ವೇಗದಲ್ಲಿ ಕಳೆದು ಹೋಗಿˌ ಅವರೆ ಅವರಿವರ ಮುಂದೆ ಕೈಯೊಡ್ಡುವ ದೈನೇಸಿ ಸ್ಥಿತಿಗೆ ಪರಿಸ್ಥಿತಿ ತಂದೊಡ್ಡಿತು. ಅದೊಂದು ಅವಮಾನದ ಕೆಟ್ಟ ಕಾಲ. ತೀರ ಸಣ್ಣ ಮೊತ್ತಗಳ ಸಾಲವಾಗಿದ್ದರೂ - ಅವರ ಹದಗೆಟ್ಟ ಆರ್ಥಿಕ ಪರಿಸ್ಥಿತಿಯ ಅಂದಾಜಿದ್ದರೂˌ ಸಹಜವಾಗಿ ಅಪನಂಬಿಕೆಯಲ್ಲಿ ಸಾಲ ಕೊಟ್ಟವರು ತೀರಿಕೆಯ ಅವಧಿ ಮೀರಿ ಹೋದದ್ದಕ್ಕೆˌ ಅವರವರದೆ ಧಾಟಿಯಲ್ಲಿ ಏರಿ ಬರುವಾಗ ಹೇಗೆ ಪ್ರತಿಕ್ರಿಯಿಸಬೇಕು ಅನ್ನುವ ಗೊಂದಲ ಕ್ಲೇಶಗೊಂಡ ಮನಸಿನಲ್ಲಿ ಕಾಡುತ್ತಿದ್ದರೂˌ ಸಂಯಮ ವಹಿಸಿಯೆ ಬಂದದ್ದನ್ನೆಲ್ಲ ಎದುರಿಸಿ ನಿಂತರು. ನಗರದ ಸಂಸ್ಥೆಯೊಂದರ ಜೀತ ಅನ್ನುವಂತಿದ್ದ ನಿಶ್ಚಿತ ಸಂಬಳದ ಕೆಲಸವನ್ನ ಬಿಡುವಂತಿರಲಿಲ್ಲ. ನಿಗದಿತ ಅವಧಿಗೆ ಕೆಲಸ ಬಿಡದ ಮುಚ್ಚಳಿಕೆ ಬರೆದುಕೊಟ್ಟ ಆ ಉದ್ಯೋಗದ ತಿಂಗಳ ಸಂಬಳದ ಬಹುಪಾಲು ಮಾಡಿರುವ ಖಾಸಗಿ ಸಂಸ್ಥೆಯ ಸಾಲ ತೀರಿಕೆಗೆ ಸರಿಯಾಗುತ್ತಿತ್ತು.

ಯಾರ ಬದುಕಲ್ಲಿ ಏನೆ ಏರುಪೇರಾಗಲಿ. ಕಾಲದ ಓಡುವ ಬಂಡಿಯೇನೂ ಎಂದೂ-ಎಲ್ಲೂ ನಿಲ್ಲದಲ್ಲ? ಆ ಅಜ್ಞಾತ ವಾಸದ ಮುಕ್ಕಾಲು ದಶಕ ಬಹುತೇಕ ಕಳೆವ ಹೊತ್ತಿಗೆˌ ಮಾಡಿದ್ದ ಬೃಹತ್ ಸಾಲ ಬಡ್ಡಿ ಸಹಿತ ತೀರಿಕೆಯಾಗಿˌ ಅದರ ನಡುನಡುವೆ ಬಂಧು ಮಿತ್ರರ ಹತ್ತಿರ ಮಾಡಿದ್ದ ಕಿರು ಸಾಲಗಳೆಲ್ಲ ಸಂಪೂರ್ಣ ತೀರುವ ಹೊತ್ತಿಗೆ ಅವರ ದೇಹಕ್ಕೆ ನಲವತ್ತೆರಡಾಗಿ ನಲವತ್ತ ಮೂರು ಕಾಲಿಟ್ಟಿತ್ತು. ಬಹುತೇಕ ಭ್ರಮನಿರಸನಗೊಂಡ ಸ್ಥಿತಿಯಲ್ಲಿದ್ದ ಈಶ್ವರಯ್ಯ ತಮ್ಮ ಖಾಸಗಿ ಇಷ್ಟ-ನಷ್ಟಗಳ ಬಗ್ಗೆ ಚಿಂತಿಸಿ ವ್ಯಥಿಸಲಾಗದ ಹಂತಕ್ಕೆ ಬಂದಿದ್ದರು. ತಾನೊಬ್ಬನೆ ಒಂಟಿಯಾಗಿ ಬಾಳುವ ಬಾಳಿನ ದುರ್ಭರತೆ ಅವರನ್ನ ಕಾಡಿದರೂ ಸಹˌ ಮದುವೆಯಾಗಿ ಜೊತೆಯೊಂದನ್ನ ಹೊಂದುವ ಉಮೇದು ಅವರಲ್ಲಿ ಉಳಿದಿರಲಿಲ್ಲ.

ಆದರೆˌ ಅವರೊಳಗಿದ್ದ ಪಿತೃತ್ವದ ಮಮತೆ ತನ್ನದು ಎಂದು ಎದೆಗಪ್ಪಿಕೊಳ್ಳಬಹುದಾದ ಜೀವವೊಂದಿದ್ದರೆ? ಎಂದು ಮಿಡುಕಾಡಲಾರಂಭಿಸಿತು. ತನ್ನ ಸಮಪ್ರಾಯದವರು ಒತ್ತಟ್ಟಿಗಿರಲಿ - ತನಗಿಂತ ವಯಸ್ಸಿನಲ್ಲಿ ಕಿರಿಯರೆ ಈ ವಿಚಾರದಲ್ಲಿ ತನ್ನನ್ನ ಮೀರಿ ಒಂದೆರಡು ಹೆಜ್ಜೆ ಮುಂದೆ ಹೋಗಿರೋದು ಕಾಣುವಾಗಲೆಲ್ಲˌ ಒಳಗೊಳಗೆ ಅವರ ಮನ ಒಂಥರಾ ತಪ್ಪಿತಸ್ಥ ಭಾವನೆಯಿಂದ ಮುದುಡಿ ಹೋಗುತ್ತಿತ್ತು. ನಾಯಿ ಸಾಕಿ ನೋಡಿದರು. ಬೆಕ್ಕನ್ನೂ ಜೊತೆಗಿರಿಸಿಕೊಂಡು ಜತನ ಮಾಡಿದರು. ಒಂದೆರಡು ಪಾರಿವಾಳಗಳನ್ನ - ಸಾಲದ್ದಕ್ಕೆ ಬಹುಮಹಡಿಯ ಈ ಕಟ್ಟಡದಲ್ಲೆ ಬಾತುಕೋಳಿ - ಮೊಲಗಳನ್ನೂ ಸಹ ಸಾಕಿ ಈ ಒಂಟಿತನದಿಂದ ಕೆಂಗೆಟ್ಟಿದ್ದ ಮನಸನ್ನ ಸಂತೈಸಿಕೊಳ್ಳುವ ಜೊತೆ ಕಂಡುಕೊಳ್ಳುವ ವಿಫಲ ಪ್ರಯತ್ನ ಮಾಡಿ ದಾರುಣವಾಗಿ ಸೋತ ಈಶ್ವರಯ್ಯನಿಗೆˌ ತನ್ನದೆಂದು ಹೇಳಿಕೊಳ್ಳುವ ಮಗುವನ್ನ ಮಾಡಿಕೊಳ್ಳೋದೊಂದೆ ತನ್ನ ಮಾನಸಿಕ ಕ್ಲೇಶದ ಪರಿಹಾರಕ್ಕಿರುವ ಏಕೈಕ ಶಾಶ್ವತ ಪರಿಹಾರವನ್ನೋದು ಖಚಿತವಾಯ್ತು.

ಕಾಲವಿನ್ನೂ ಮಿಂಚಿ ಹೋಗಿರಲಿಲ್ಲˌ ಮದುವೆಗೆ ಧೈರ್ಯ ಮಾಡದ ಈಶ್ವರಯ್ಯನ ಮನಸ್ಸು ಮಗುವನ್ನಾಗಿಸಿಕೊಳ್ಳಲು ಸರ್ವ ಸನ್ನದ್ಧವಾಯಿತು. ಒಂದು ಸಾರಿ ಆರ್ಥಿಕ ಸ್ಥಿರತೆ ಬದುಕನ್ನ ಸ್ವಸ್ಥವಾಗಿಸಿದ ಹಾಗೆˌ ಈಶ್ವರಯ್ಯ ಈ ನಿಟ್ಟಿನಲ್ಲಿ ಗಂಭೀರವಾದ ಹೆಜ್ಜೆಯನ್ನಿಟ್ಟರು. ಆದರೆ ವಾಸ್ತವ ಜಗತ್ತಿನ ಪರಿಸ್ಥಿತಿ ಅವರಿಗೆ - ಅವರ ಕನಸುಗಳಿಗೆ ಪೂರಕವಾಗಿರಲಿಲ್ಲ. ದೇಶದ ಪೋಷಕತ್ವದ ಕಾನೂನುಗಳನುಸಾರ ಮದುವೆಯಾದವನಾಗಿರಲಿ ಅಥವ ಅವಿವಾಹಿತನೆ ಆಗಿರಲಿ ಒಂಟಿ ಪುರುಷನನ್ನ "ಸಿಂಗಲ್ ಪೇರೆಂಟ್" ಆಗಿಸುವಂತಿರಲಿಲ್ಲ. ಕಾನೂನಿನ ನಿಯಮಾವಳಿಗನುಸಾರ ಅಂತಹ ಒಂಟಿ ಗಂಡು ಅದೆಷ್ಟೇ ಮನಸ್ಸಿದ್ದರೂ - ಆರ್ಥಿಕ ಬಲವಿದ್ದರೂ ತನ್ನದೆ ಜೈವಿಕ ಶಿಶುಗಳನ್ನ ಯಾವುದೆ ಬಗೆಯಲ್ಲಿ ಹೊಂದುವುದನ್ನಾಗಲಿ ಅಥವಾ ಅಸಹಾಯಕ ಅನಾಥ ಮಕ್ಕಳನ್ನ ಸರಕಾರಿ ದತ್ತು ಪ್ರಕ್ರಿಯೆಗಳನ್ನ ಅನುಸರಿಸಿಯೆ ದತ್ತು ಪಡೆಯುದನ್ನಾಗಲಿ ಸ್ಪಷ್ಟವಾಗಿ ನಿರ್ಬಂಧಿಸುತ್ತಿತ್ತು.

ತಮಾಷೆಯ ಸಂಗತಿಯೇನೆಂದರೆˌ ಈ ವಿಷಯದಲ್ಲಿ ಇದೆ ಎಡಬಿಡಂಗಿ ಕಾನೂನುಗಳು  "ಒಂಟಿ ಪೋಷಕ"ಳಾಗಲು ಮದುವೆಯಾಗದ/ಮಕ್ಕಳಿಲ್ಲದ/ವಿಧವೆಯಾದ ಹೆಣ್ಣು ಜೀವಗಳಿಗೆ ಪೂರಕವಾಗಿದ್ದವಷ್ಟೆ ಅಲ್ಲˌ ಅವರಿಗೆ ಇಷ್ಟ ಪಟ್ಟಾಗ ಮಕ್ಕಳನ್ನ ಯಾವುದೆ ನೈಸರ್ಗಿಕ/ಕೃತಕ/ದತ್ತು ಮೂಲಕ ಪಡೆದುಕೊಳ್ಳಲು ಪ್ರೋತ್ಸಾಹಿಸುವಂತಿದ್ದವು! ಹಾಗಂತˌ ಪುಸ್ತಕದಲ್ಲಿ ಬರೆದಿಟ್ಟುವ ಕಾನೂನನ್ನ ದೇಶದ ಪ್ರಜೆಗಳೆಲ್ಲ ಶಿರಬಾಗಿ ಒಪ್ಪಿಕೊಂಡು ಅನುಸರಿಸಿ ಮುನ್ನಡೆಯುತ್ತಿದ್ದರೆಂದು ಇದರರ್ಥವಲ್ಲ! ಹಣ ಹಾಗೂ ಪ್ರಭಾವ ಇದ್ದವರು ಯಾವ ಹಿಂಜರಿಕೆಯೂ ಇಲ್ಲದೆ ಇದನ್ನ ಸ್ಪಷ್ಟವಾಗಿ ಉಲ್ಲಂಘಿಸಿ ತಮಗೆ ಬೇಕಾದಂತೆ ಮಕ್ಕಳನ್ನ ಮಾಡಿಕೊಂಡ ಅಸಂಖ್ಯ ಉದಾಹರಣೆಗಳು ಈಶ್ವರಯ್ಯನ ಕಣ್ಣ ಮುಂದೆಯೆ ಧಾರಾಳವಾಗಿದ್ದವು. ಹೀಗಾಗಿ ಈಶ್ವರಯ್ಯ ಸಹ ಹೀಗೆಯೆ ತನ್ನ ವಯಕ್ತಿಕ ಬದುಕಿನ ಮೇಲೆ ಒತ್ತಾಯದ ಸವಾರಿ ಮಾಡುವ "ಕಾನೂನು ಭಂಗ" ಚಳುವಳಿಯನ್ನ ವಯಕ್ತಿಕ ಸ್ತರದಲ್ಲಿ ಮಾಡಲು ಗಟ್ಚಿ ಮನಸ್ಸು ಮಾಡಿ ಈ ವಿಷಯಕ್ಕೆ ಶ್ರೀಕಾರ ಹಾಕಿದರು. ಕಾನೂನು ಅನ್ನೋದೊಂದು ಕತ್ತೆ! ಅಸಹಾಯಕರಿಗೆ ಒದೆಯುವುದರ ಹೊರತು ಮತ್ತೀನೇನನ್ನೂ ಅದು ಮಾಡಲಾರದು ಅನ್ನುವ ಸ್ಪಷ್ಟತೆ ಅವರಿಗಿತ್ತು. ಅನೈತಿಕ ಸಂಬಂಧಗಳಿಂದ - ಕಾಮದ ವ್ಯಾಪಾರದಿಂದ ದಿನ ನಿತ್ಯ ಹುಟ್ಟುವ ದಿಕ್ಕು-ದೆಸೆಯಿಲ್ಲದ ಲಕ್ಷಾಂತರ ಮಕ್ಕಳಿಗೆ ಈ ಗೊಡ್ಡು ಕಾನೂನನ್ನ ನಂಬಿಕೊಂಡೇನೂ ಬದುಕನ್ನ ನಮ್ಮ ನಿಸರ್ಗ ಕಟ್ಟಿ ಕೊಡುತ್ತಿಲ್ಲ. ಹಾಗೆ ಕಾನೂನನ್ನೆ ನಂಬಿಕೊಂಡಿದ್ದರೆˌ ಕೊಳಕು ಕೊಳಚೆಯ ರಾಶಿಗಳಲ್ಲೆಲ್ಲ ಹಸಿಗೂಸುಗಳನ್ನ ಪ್ಯಾಸ್ಟಿಕ್ ಚೀಲಗಳಲ್ಲಿ ಕಸದಂತೆ ಯಾರೂ ಎಸೆದು ಹೋಗುತ್ತಿರಲಿಲ್ಲ. ಅನಾಥ ಮಕ್ಕಳೆನ್ನುವ ನತದೃಷ್ಟರ ಪೀಳಿಗೆಯೆ ಈ ನೆಲದ ಮೇಲೆ ಹುಟ್ಟುತ್ತಿರಲಿಲ್ಲ ಎಂದವರಿಗೆ ಮನವರಿಕೆಯಾಗಿತ್ತು. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಹಳಸಲು ಹರಳೆಣ್ಣೆ ಅನ್ನುವಂತಿದ್ದ ಈ ಕಣ್ಣಿಗೆ ರಾಚುವ ಲಿಂಗ ತಾರತಮ್ಯದ ಕಬೋದಿ ಕಾನೂನು ಈಶ್ವರಯ್ಯನಂತವರೊಳಗೆ ರೇಜಿಗೆ ಎಬ್ಬಿಸುತ್ತಿತ್ತು. ಅದ್ಯಾವ ವಿತಂಡವಾದದ ಕುತರ್ಕವನ್ನಾಧರಿಸಿ ಈ ಅರುಳು ಮರುಳಿನ ನಿಯಮಾವಳಿ ರೂಪಿಸಲಾಗಿದೆ ಅನ್ನೋದು ಅವರಿಗಿನ್ನೂ ಸ್ಪಷ್ಟವಾಗಿರಲಿಲ್ಲ. "ಕುಪಿತ್ರೋ ಭವತಿ" ಅಂತ ಕುಟುಕಿ ಹೇಳುತ್ತಿದ್ದ ಈ ಕಾನೂನಿನ ಕಗ್ಗˌ ಅದೆ "ಅತಃ ಕುಮಾತ್ರೋ ಅಸ್ತಿ" ಅನ್ನೋದನ್ನ ಮಾತ್ರ ಒಪ್ಪಿಕೊಳ್ಳಲು ಸುತರಾಂ ತಯ್ಯಾರಿರಲಿಲ್ಲ.

******

ಸಾಮಾನ್ಯವಾಗಿ ಕೈಫೋನಿನಲ್ಲಿ ಬೇಡಿಕೆಯಿಟ್ಟ ಹತ್ತು ಹದಿನೈದು ನಿಮಿಷಗಳ ಒಳಗೆಲ್ಲೆ ನಿಗದಿ ಪಡಿಸಿಟ್ಟ ಸ್ಥಳದ ಕೋ-ಆರ್ಡಿನೇಶನ್ ಕೊಟ್ಟ ಕಡೆˌ ನೀಟಾಗಿ ಪೊಟ್ಟಣ ಕಟ್ಟಿದ ಸಾಮಾನುಗಳ ಚೀಲವನ್ನ ಹೊತ್ತ "ಡ್ರೋಣ್"ಆಚಾರ್ಯರು ಬಂದು ಬಾನಲ್ಲೆ ಸ್ಥಿರವಾಗಿ ನಿಂತು ತಮ್ಮ ಆಗಮನದ ಸೂಚನೆಯನ್ನ ಕೈಫೋನಿನ ಮೂಲಕ ಕೊಡುತ್ತಿದ್ದರು. ಟರೇಸಿನ ಮೇಲಿರುವ ತನ್ನ ಕೈತೋಟದ ವಿಳಾಸ ಸಾಮಾನ್ಯವಾಗಿ ಸ್ಥಳದ ಗುರುತಾಗಿ ಈಶ್ವರಯ್ಯ ಕೊಡುತ್ತಿದ್ದದು. ಹೊರಗಡೆ ಚಳಿ ಚೂರು ಹೆಚ್ಚೆ ಕೊರೆಯುತಿದ್ದುದ್ದರಿಂದ ಉಟ್ಟ ಪಂಚೆಯ ಮೇಲೆ ಒಂದು ಟೀ ಶರ್ಟನ್ನ ಹಾಕಿಕೊಂಡು ಅದರ ಮೇಲೊಂದು ಕಾಶ್ಮೀರಿ ಉಣ್ಣೆಯ ಸ್ವೆಟ್ಟರ್ ಧರಿಸಿದ್ದ ಈಶ್ವರಯ್ಯ ಅದರ ಮೇಲೆ ಮತ್ತೊಂದು ಚರ್ಮದ ಜರ್ಕಿನ್ ಏರಿಸಿಕೊಂಡು ಚಹಾದ ಬಟ್ಟಲನ್ನ ಸಿಂಕಿನಲ್ಲಿರಿಸಿˌ ಮುಂಬಾಗಿಲನ್ನ ಮುಚ್ಟುವಂತೆ ಬಲವಾಗಿ ಎಳೆದುಕೊಂಡು ಮೆಟ್ಟಿಲುಗಳನ್ನೇರುತ್ತಾ ಮೇಲಿನ ಮಹಡಿಯತ್ತ ಸಾಗ ತೊಡಗಿದರು.

ಸಾಮಾನ್ಯವಾಗಿˌ ಮೇಲಿಂದ ಕೆಳಗಿಳಿಯುವಾಗಲಾಗಲಿ ಅಥವಾ ತಾನಿರುವ ಮಹಡಿಯಿಂದ ಮುಂದಿನ ಅಂತಸ್ತಿನಲ್ಲಿದ್ದ ಟರೇಸಿಗೆ ಏರುವಾಗಲಾಗಲಿ ಈಶ್ವರಯ್ಯ ಲಭ್ಯವಿದ್ದರೂ ಸಹˌ ಎಂದೂ ಲಿಫ್ಟನ್ನ ಬಳಸುವ ಅಭ್ಯಾಸವನ್ನಿಟ್ಟು ಕೊಂಡಿರಲಿಲ್ಲ. ತೀರ ಇತ್ತೀಚೆಗೆ ವಯೋಸಹಜವಾಗಿ ಸವೆಯುತ್ತಿರುವ ಮಂಡಿಚಿಪ್ಪಿನ ಮೇಲೆ ಹೀಗೆ ಏರಿಳಿಯುವಾಗಲಷ್ಟು ಅಧಿಕ ಒತ್ತಡ ಬಿದ್ದು ಚೂರೆ ಚೂರು ನೋವಿನ ಚಳುಕು ಏಳುತ್ತಿದ್ದುದು ನಿಜವಾದರೂˌ ತಾನೆ ಮೆಟ್ಟಿಲ ಬದಿಗೆ ಮುದ್ದಾಂ ಹೇಳಿ ಅಳವಡಿಸಿದ್ದ ಕೈಯಾಸರೆಯ ರೇಲಿಂಗ್ ಹಿಡಿದು ತುಸು ನಿಧಾನವಾಗಿಯಾದರೂ ಸರಿ ಸುಖದ ಯಂತ್ರಕ್ಕೆ ಶರಣಾಗದೆˌ ಸಶ್ರಮದಿಂದಲೆ ಮೇಲೇರಿ ಇಳಿಯುವ ಅಭ್ಯಾಸಕ್ಕವರು ಪಕ್ಕಾಗಿದ್ದರು. ಈಗ ವಾಸವಿರುವ ಏಳು ಮಹಡಿಗಳ ಕಟ್ಟಡದಲ್ಲಿನ ಪ್ರತಿ ಅಂತಸ್ತಿನಲ್ಲೂ ಎದುರು ಬದುರಾಗಿರುವ ತಲಾ ಸಾವಿರದಿನ್ನೂರು ಚದರಡಿಗಳ ಎರಡೆರಡು ಮಲಗುವ ಮನೆಗಳ ಎಂಟೆಂಟು ಮನೆಗಳಿವೆ. ತನ್ನ ದುಡಿಮೆಯ ಬಂಡಿ ಹಳಿಯೇರಿ ಕೈ ತುಂಬಾ ಸಂಪಾದನೆಯಾಗಲಾರಂಭಿಸಿದ ಮೇಲೆˌ ಸೀಮಿತ ಖರ್ಚು - ಒಂದಷ್ಟು ದಾನ-ಧರ್ಮ ಮಾಡಿದ ನಂತರದˌ ಉಳಿತಾಯದತ್ತ ಚಿತ್ತ ಹರಿಸಿದ್ದ ಈಶ್ವರಯ್ಯ ತನ್ನ ಬಹುತೇಕ ಲಾಭಾಂಶಗಳನ್ನ ಭೂಮಿ-ಬಂಗಾರ ಹಾಗೂ ಇಂತಹ ಆಸ್ತಿಗಳ ಮೇಲೆ ಮಾತ್ರ ವಿಕ್ರಯಿಸಿ ಸೊತ್ತು ಸಂಗ್ರಹಿಸಲಾರಂಭಿಸಿದ್ದರು.

ಈ ವ್ಯಾಪಾರಿ ಪ್ರಕ್ರಿಯೆಯಲ್ಲಿ ಈ ಕಟ್ಟಡವೊಂದರಲ್ಲೆ ಮೂವತ್ತನಾಲ್ಕು ಮನೆಗಳನ್ನ ಕಳೆದ ಮೂರು ದಶಕಗಳ ಅವಧಿಯಲ್ಲಿ ಅದರಲ್ಲಿ ವಾಸವಿದ್ದವರು ನಾನಾ ಕಾರಣಗಳಿಂದ ಮಾರಿ ಹೊರಡುವಾಗ ಕೊಂಡಿಟ್ಟುಕೊಂಡಿದ್ದರು. ಅವುಗಳಲ್ಲಿ ತನ್ನ ಮನೆಯೊಳಗಿನ ಕೃಷಿ ಚಟುವಟಿಕೆಗೆ ಎರಡು ಮನೆಗಳನ್ನ ಉಪಯೋಗಿಸಿ ಕೊಳ್ಳುತ್ತಿದ್ದರೆˌ ಇನ್ನೊಂದನ್ನ ಯಾರಾದರೂ ಆಪ್ತೇಷ್ಟರು ಬಯಸಿ ಬಂದರೆ ಅವರಿಗೆ ಇಷ್ಟವಿದ್ದಷ್ಟು ಕಾಲ ತಂಗಿ ವಾಸ ಮಾಡಲು ಸುಸಜ್ಜಿತ ಅತಿಥಿಗೃಹದಂತೆ ಉಳಿಸಿಕೊಂಡರು. ಇನ್ನೆರಡು ಅಂತಹ ಚಿಕ್ಕ ಮನೆಗಳ ನಡುವಿನ ಗೋಡೆ ಒಡೆದು ಅದನ್ನ ಒಂದಾಗಿಸಿಕೊಂಡ ವಿಶಾಲವಾದ ಮನೆಯಲ್ಲಿ ಸ್ವತಃ ವಾಸವಿದ್ದರು. ಉಳಿದಂತೆ ತನ್ನ ಹೆಸರಿನಲ್ಲಿದ್ದ ಅಷ್ಟೂ ಮೂವತ್ತು ಮನೆಗಳನ್ನ ಬಾಡಿಗೆಗೆ ಬಿಟ್ಟಿದ್ದರು. ಇದೊಂದು ಬಾಬ್ತಿನಿಂದಲೆ ದೊಡ್ಡ ಮೊತ್ತದ ಹಣವೊಂದು ನಿಗದಿತ ಠೇವಣಿ ಮೇಲಿನ ಬಡ್ಡಿಯಂತೆ ಪ್ರತಿ ತಿಂಗಳು ಸಹ ಇವರ ಖಾತೆ ಸೇರುತ್ತಿತ್ತು. ಇಡಿ ಕಟ್ಟಡದಲ್ಲಿ ಕೇವಲ ಇಪ್ಪತ್ತೆರಡು ಮನೆಗಳಷ್ಟೆ ಇನ್ನಿತರರ ಮಾಲಕತ್ವದಲ್ಲಿದ್ದ ಕಾರಣ ಒಂಥರಾ ಅನಧಿಕೃತವಾಗಿ ಇಡಿ ಕಟ್ಟಡವೆ ಇವರ ಏಕಾಧಿಪತ್ಯದ ಯಜಮಾನಿಕೆಗೆ ಒಳಪಟ್ಟಂತಿತ್ತು. ಇದೆ ಕಾರಣದಿಂದˌ ಸಹಜವಾಗಿಯೇನೋ ಅನ್ನುವಂತೆ ಅಲ್ಲಿನ ನಿವಾಸಿ ಸಂಘದ ಅಜೀವ ಅಧ್ಯಕ್ಷರಾಗಿಯೂ ಈಶ್ವರಯ್ಯ ಬಹುಕಾಲದಿಂದ ವಿರಾಜಮಾನರಾಗಿದ್ದರು.

ದಿನಸಿ ಹೊತ್ತು ತಂದಿದ್ದ "ಡ್ರೋಣಾ"ಚಾರ್ಯರು ಕೈ ತೋಟದ ಮುಚ್ಚಿಗೆಯಿಂದ ಚೂರು ಮೇಲಕ್ಕೆ ಸ್ಥಿರವಾಗಿ ಗಾಳಿಯಲ್ಲೆ ನಿಂತು ಇವರ ಆಗಮನವನ್ನ ನಿರೀಕ್ಷಿಸುತ್ತಿದ್ದರು. ಹೋಗಿˌ ಕೈಫೋನಿನ ಪರದೆಯ ಮೇಲೆ ಬೇಡಿಕೆಯಿಟ್ಟು ಪಾವತಿ ಮಾಡಿದ್ದಾಗ ಬಂದಿದ್ದ ಓಟಿಪಿ ನಮೂದಿಸಿದ ತಕ್ಷಣ ಕೆಳಗಿಳಿದು ಬಂದು ದಿನಸಿಯ ಚೀಲಕ್ಕೆ ಬೀಗದಂತೆ ಬಿಗಿದಿದ್ದ ತನ್ನ ಕಪಿಮುಷ್ಠಿಯ ಹಿಡಿತ ಸಡಿಲಿಸಿ "ಥ್ಯಾಂಕ್ಯೂ ಸಾರ್ˌ ಮೇ ಐ ಟೇಕ್ ಲೀವ್ ನೌ" ಎಂದು ಯಾಂತ್ರಿಕವಾಗಿ ಅಭಿವಂದಿಸಿ ತನ್ನ ಮರುದಾರಿ ಹಿಡಿದು ಹೊಂಜಿನ ಪರದೆಯ ನಡುವೆ ಎಂದಿನಂತೆ ಮರೆಯಾಗಿ ಹೋದರು.

ಈಗೀಗ ಸಾಮಾಜಿಕವಾಗಿ ಮನುಷ್ಯನ ಸಹಾಯಕ್ಕೆ ಮನುಷ್ಯರೆ ಬರಬೇಕೆಂಬ ನಿಯಮಾವಳಿಗಳಾಗಲಿ - ನಡಾವಳಿಗಳಾಗಲಿ ಇದ್ದಿರಲಿಲ್ಲ. ಬದುಕಿನ ದೈನಂದಿನ ಚಟುವಟಿಕೆಗಳಲ್ಲೆಲ್ಲ ನಿಖರವಾದ ನಿರ್ದೇಶನಗಳನ್ನ ಪಡೆದ ವಿವಿಧ ಬಗೆಯ ಯಂತ್ರೋಪಕರಣಗಳೆ ಮಾಡಿ ಮುಗಿಸುತ್ತಿದ್ದವು. ಸೇವಾ ವಲಯವಂತೂ ವಿಪರೀತವಾಗಿ ಯಂತ್ರೋಪಕರಣಗಳ ಮೇಲೆ ಅವಲಂಬನೆಯನ್ನ ಹೆಚ್ಚಿಸಿಕೊಂಡಿದ್ದವು. ಮನೆಗೆಲಸಗಳನ್ನ ಸಮರ್ಪಕವಾಗಿ ಮಾಡಿ ಮುಗಿಸಲು ಸಹ ಯಂತ್ರಮಾನವರು ತಮ್ಮ ಕಾರ್ಯಕ್ಷಮತೆ ಹಾಗೂ ಸಾಮರ್ಥ್ಯದನುಸಾರ ವಿವಿಧ ಶ್ರೇಣಿಯ ಬೆಲೆಯಲ್ಲಿ ಸ್ವಂತಕ್ಕೆ ಅಥವಾ ಬಾಡಿಗೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತಿದ್ದರು. ಆನ್ಲೈನಿನಲ್ಲಿ ಖರೀದಿಸುವ ಮನುಷ್ಯ ಪ್ರತಿರೂಪಿ ಯಂತ್ರಮಾನವ/ಮಾನವಿಯರು ಎಸೆಂಬಲ್ ಆದ ನಂತರ ನೇರ ಕಾರ್ಖಾನೆಯಿಂದ ಸಾರ್ವಜನಿಕ ಪಾಡ್ ಅಥವಾ ಮೆಟ್ರೋ ಹಿಡಿದು ತನ್ನನ್ನ ಖರೀದಿಸಿದ ಮಾಲಿಕರ ಮನೆ ಬಾಗಿಲಿಗೆ ತಾವಾಗಿಯೆ ನಡೆದು ಬಂದು ಅಲ್ಲಾಉದ್ದೀನನ ಮಾಯಾದೀಪದ ಅದ್ಭುತ ಭೂತದಂತೆ "ಜೀ ಹಜೂ಼ರ್" ಭಂಗಿಯಲ್ಲಿ ತಮ್ಮ ಕೈಯಾರ ಕರೆಘಂಟೆ ಒತ್ತಿ ವಿಧೇಯರಾಗಿ ನಿಲ್ಲುತ್ತಿದ್ದರು! ಒಂದು ಸಲ ಪ್ರೀ ಪ್ರೋಗ್ರಾಂಮಿಂಗ್ ಮಾಡಿ ಅದರ ನಿಯಂತ್ರಣವನ್ನ ಕೈ ಫೋನಿನಲ್ಲಿ ತಂತ್ರಾಂಶವೊಂದರ ಮೂಲಕ ಸಮನ್ವಯ ಸಾಧಿಸಿ ಇಟ್ಟುಕೊಂಡರೆ ಸಾಕು. ಮುಂದಿನದೆಲ್ಲ ಬೆರಳ ಇಷಾರೆಯಲ್ಲೆ ಸಾಕಾರವಾಗುವಷ್ಟು ಬದುಕು ಏಕಕಾಲದಲ್ಲಿ ನಿಸ್ಸಾರವೂ - ಸರಳವೂ ಆಗಿತ್ತು. ಇದರಿಂದ ಬರಿ ಅನುಕೂಲಗಳಷ್ಟೆ ಆಗುತ್ತಿದ್ದವು ಅಂತೇನೂ ಇದರರ್ಥವಲ್ಲ. ಊಹಿಸಲು ಸಹ ಆಗದ ಅನಾನುಕೂಲತೆಗಳೂ ಕೂಡ ಆಗಾಗ ಧುತ್ತನೆ ಎದುರಾಗಿ ಅವನ್ನ ಸಹಾಯಕ್ಕಂತ ಇಟ್ಟುಕೊಂಡವರನ್ನ ಕೆಂಗೆಡಿಸುವುದಿತ್ತು.

*********

ಬದಲಾದ ಕಾಲಮಾನದಲ್ಲಿ ತಂತ್ರಜ್ಞಾನದ ಮಧ್ಯಸ್ಥಿಕೆಯಿಲ್ಲದೆ ದೈನಂದಿನ ವ್ಯವಹಾರಗಳು ಒಂದಿಂಚು ಸಹ ಮುಂದೆ ಸರಿಯಲಾರದಷ್ಟು ಮನುಷ್ಯನ ಜೀವನ ಶೈಲಿ ಬದಲಾಗಿದೆ. ಈ ಶತಮಾನದ ಆರಂಭದ ಐದು ವರ್ಷಗಳು ವಿಪರೀತ ವೇಗವಾಗಿ ನಾಗರೀಕತೆಯ ನಡೆಯ ಬದಲಾವಣೆಗೆ ಮುನ್ನುಡಿ ಬರೆದಿತ್ತು. ಅದರ ನಂತರದ ಒಂದೂವರೆ ದಶಕ ಅದೆ ಬದಲಾವಣೆಯ ಮೋಡಿಗೆ ಒಳಗಾಗಿ ಓಲಾಡುತ್ತಲೆ ಕಳೆದಿತ್ತು. ಜನ ಮರುಳೋ - ಜಾತ್ರೆ ಮರುಳೋ ಎನ್ನುವಂತೆ ಸಾಮಾಜಿಕ ಮಾಧ್ಯಮಗಳ ಹಲ್ಲಂಡೆ "ಆರಂಭದಲ್ಲಿ ಅಗಸ ಆಗಸದೆತ್ತರ ಎತ್ತಿ ಎತ್ತಿ ಒಗೆಯುತ್ತಿದ್ದಂತೆ." ಬಹಳ ಅಬ್ಬರದಲ್ಲಿತ್ತು. ಯಾವುದೆ ಅಭಿವೃದ್ಧಿಯ ಗಡಿರೇಖೆ ಮಹಾನಗರ-ನಗರ-ಪಟ್ಟಣದ ಮಾರ್ಗವಾಗಿ ಗ್ರಾಮದತ್ತ ಹೊರಳುವಂತೆ ಈ "ಸೋ ಕಾಲ್ಡ್ ಕ್ರಿಂಜ಼್" ಸಾಮಾಜಿಕ ಮಾಧ್ಯಮಗಳ "ಹೈಪ್ಡ್ ಕ್ರೇಜ಼್" ಸಹ ಅದೆ ಅನುಕ್ರಮಣಿಕೆಯಲ್ಲಿ ಕಾಲನುಕಾಲಕ್ಕೆ ಒಂದೊಂದು ಸಾಮಾಜಿಕತೆಗಳಲ್ಲಿ ತನ್ನ ಪ್ರಭಾವ ಹಾಗೂ ಬಳಕೆಯ ತೀವೃತೆಯನ್ನ ಪ್ರಖರವಾಗಿ ತೋರುತ್ತಾˌ ಕಡೆಗೊಮ್ಮೆ ಹೊಸ ಆಟಿಕೆ ಸಿಕ್ಕ ಮಗುವಂತೆ ಬಳಸಲಷ್ಟು ಡೇಟಾ ಇದ್ದ ಕೈಫೋನೊಂದಿದ್ದಿದ್ದರೆ ಸಾಕೆ ಸಾಕಾಗಿದ್ದˌ ಸಕಲರೂ ಉಪಯೋಗಿಸಿ ಸಾಕಾಗಿ ಸದ್ಯ ಮೂಲೆ ಸೇರಿ ಹೋಗಿತ್ತು. ಈಗಿನ ಸಾಮಾಜಿಕ ಮಾಧ್ಯಮಗಳ ಪ್ರಭಾವ ಮೊದಲಿನಷ್ಟಿಲ್ಲ. ಕಾಲಾತೀತವಾಗಿ ಜನ ಅದರ ಬಳಕೆಯನ್ನ ಸೀಮಿತಗೊಳಿಸಿಕೊಂಡಿರೋದು ಸ್ಪಷ್ಟ.

ಸರಿಸುಮಾರು ಆರು ದಶಕಗಳ ಹಿಂದೆ ಮಹಾಮಾರಿಯಾಗಿ ಒಕ್ಕರಿಸಿ ಇಡಿ ಮಾನವ ಕುಲವನ್ನೆ ಎರಡೆರಡು ಸಲ ಕೊಂಚ ಹೆದರಿಸಿ ಕಾಡಿದ್ದ ಜಾಗತಿಕ ಕಾಯಿಲೆಯೊಂದರ ಹೊರತುˌ ಅಂತಹ ಹೇಳಿಕೊಳ್ಳುವಂತಹ ನಾಟಕೀಯ ಪಲ್ಲಟಗಳೇನೂ ಈ ಅರ್ಧ ಶತಮಾನದವಧಿಯಲ್ಲಿ ಘಟಿಸಿಲ್ಲ. ನಿರೀಕ್ಷೆಯಂತೆ ಉಳ್ಳವರ ದೇಶಗಳ ಮೂರನೆ ಜಾಗತಿಕ ಸಮರ ಅಭಿವೃದ್ಧಿಗೆ ತಹತಹಿಸುತ್ತಿದ್ದ ಬಡನಾಡುಗಳ ನೆಲದಲ್ಲಿ ನಡೆದದ್ದು ಬಿಟ್ಟರೆ. ಈ ಪ್ರಕ್ರಿಯೆಯಲ್ಲಿ ಪ್ರಪಂಚದ ನಕ್ಷೆಯಲ್ಲಿ ರಾಜಕೀಯ ಗಡಿಗಳು ಸ್ಥೂಲವಾಗಿ ಬದಲಾಗಿವೆ - ಹೊಸತಾದ ಒಂದಷ್ಟು ಸ್ವತಂತ್ರ ರಾಷ್ಟ್ರಗಳು ಉದ್ಭವಿಸಿವೆ ಹಾಗೂ ವಿಶ್ವ ನಾಯಕತ್ವದ ದಿಕ್ಕು-ದೆಸೆ ಬದಲಾಗಿದೆ. ಮೊದಲಿದ್ದವರಿಗಿಂತ ಕಡಿಮೆ ದುರಾಸೆಯ - ಒಡೆದಾಳುವ ಕುತಂತ್ರದ ಕೈಂಕರ್ಯವನ್ನ ಬಹುತೇಕ ಕೈಬಿಟ್ಟಿರುವ ಹೊಸ ತಳಿ ಜಗತ್ತಿನ ಪ್ರತಿಯೊಂದು ನಾಡಿನ ಚುಕ್ಕಾಣಿ ಹಿಡಿದು ಕೂತಿರೋದೊಂದು ಆಶಾದಾಯಕ ಬೆಳವಣಿಗೆ. ಅಪರಾ ತಪರಾ ಅಭಿವೃದ್ಧಿಯ ಗಡಿರೇಖೆ ಮೊದಲಿನಂತೆ ಮಹಾನಗರದ ಸ್ತರದಿಂದ ಆರಂಭವಾಗುವ ಕ್ರಮ ಶಾಶ್ವತವಾಗಿ ಕೊನೆಯಾಗಿˌ ಪ್ರತಿಯೊಂದು ಜಾಗತಿಕ ಪಲ್ಲಟಗಳೂ ಸಹ ಒಂದೆ ಸಮಯಕ್ಕೆ ಪ್ರಪಂಚದ ಮೂಲೆ ಮೂಲೆಗೂ ತಲುಪುವ ಹಾಗಿನ ಸ್ಥಿತಿ ಏರ್ಪಟ್ಟಿದೆ.

ಜಗತ್ತಿನ ಒಟ್ಟು ಜನಸಂಖ್ಯೆಯ ಮೂರನೆ ಒಂದು ಭಾಗ ಈಗಲೂ ಏಷಿಯಾದ ಚೀನಾ ಹಾಗೂ ಭಾರತದಲ್ಲೆ ಸಾಂದ್ರವಾಗಿದ್ದರೂ ಸಹˌ ಜಾಗತಿಕ ಜನಸಂಖ್ಯೆಯಲ್ಲಿನ ತೀವೃ ಕುಸಿತದ ಬಿಸಿ ಈ ಎರಡು ದೇಶಗಳಿಗೂ ಮುಟ್ಟಿದೆ. ಭಾರತವೀಗ ಒಂದಲ್ಲ ಎರಡು. ಉತ್ತರ ಹಾಗೂ ದಕ್ಷಿಣ ಭಾರತಗಳು ಪ್ರತ್ಯೇಕ ರಾಜಕೀಯ ಅಸ್ತಿತ್ವದ ಒಂದೆ ಗಣರಾಜ್ಯದ ಎರಡು ಭಾಗಗಳಾಗಿ ವಿಭಜಿತವಾಗಿದೆ. ಐದು ದಶಕಗಳಿಗೂ ಹಿಂದಿನ ಮಹಾರಾಷ್ಟ್ರ- ಒರಿಸ್ಸಾ - ಆಂಧ್ರಪ್ರದೇಶ - ಕರ್ಣಾಟಕ - ತಮಿಳುನಾಡು - ಗೋವಾ - ಕೇರಳಗಳು ಪ್ರತ್ಯೇಕವಾಗಿ ಸ್ಥಾಪಿಸಿಕೊಂಡಿರುವ ಸ್ವತಂತ್ರ ದಕ್ಷಿಣ ಭಾರತಕ್ಕೆ ಜಾಗತಿಕ ತಾಪಮಾನದ ಏರಿಕೆಯಿಂದ ತನ್ನ ತೀರಪ್ರದೇಶಗಳನ್ನೆಲ್ಲ ಸಾಗರಕ್ಕೆ ಈಗಾಗಲೆ ಆಹುತಿ ಕೊಟ್ಟಿರುವ ಶ್ರೀಲಂಕಾ ಹಾಗೂ ಅಲ್ಲೊಂದು ಇಲ್ಲೊಂದು ದ್ವೀಪ ಸಮುಚ್ಛಯಗಳ ಪಳಯುಳಕೆಗಳ ಹೊರತು ತನ್ನ ಅಸ್ತಿತ್ವವನ್ನೆ ಬಹುಪಾಲು ಕಳೆದುಕೊಂಡಿರುವ ಮಾಲ್ಡೀವ್ಸ್ ಸಹ ರಾಜ್ಯಗಳ ಸ್ವರೂಪದಲ್ಲಿ ಶಾಮೀಲಾಗಿ ಒಂದು ಘಟಕವಾಗಿದ್ದರೆˌ ರಕ್ತಸಿಕ್ತ ಹೋರಾಟ ನಡೆಸಿ ಬೇರೆಯಾಗಿದ್ದ ಹಿಂದಿನ ಪಾಕಿಸ್ತಾನದ ಭಾಗವಾಗಿದ್ದ ಸಿಂಧ್ ಪ್ರಾಂತ್ಯ ಹಾಗೂ ನಿರಂತರ ಪ್ರವಾಹ - ಭೂಕಂಪಗಳಿಂದ ಕೆಂಗೆಟ್ಟು ಪಾಪರ್ ಆಗಿದ್ದ ನೇಪಾಳವನ್ನ ಒಳಗೊಂಡಂತೆ ಉತ್ತರ ಭಾರತದ ಘಟಕ ಅಸ್ತಿತ್ವಕ್ಕೆ ಬಂದಿದೆ. ವಾಣಿಜ್ಯ ವ್ಯವಹಾರಗಳಲ್ಲಿ ಪರಸ್ಪರ ಸಮನ್ವಯತೆ ಸಾಧಿಸುವ ದೃಷ್ಟಿಯಿಂದ ಈ ಎರಡೂ ಘಟಕಗಳು ಜಾಗತಿಕವಾಗಿ ಒಂದೆ ಗಣರಾಜ್ಯವಾಗಿ ಗುರುತಿಸಿಕೊಂಡಿದ್ದರೂˌ ಅವುಗಳ ಅಭಿವೃದ್ಧಿಯ ನಡುಗೆಯ ಪಥ ಮಾತ್ರ ವಿಭಿನ್ನವಾಗಿವೆ. ಎರಡೂ ಘಟಕಗಳಿಗೆ ಹೋಗಿ ಕಿರು ಅವಧಿಗೆ ಉದ್ಯೋಗದ ಅಥವಾ ವಯಕ್ತಿಕ ಕಾರಣಗಳಿಂದ ಹೋಗಿದ್ದು ಬರಲು ಪರಸ್ಪರ ಘಟಕಗಳ ನಾಗರೀಕರಿಗೆ ಯಾವುದೆ ಪಾಸ್ಪೋರ್ಟ್ ಹಾಗೂ ವೀಸಾದ ಅಗತ್ಯವಿಲ್ಲವಾದರೂˌ ವ್ಯವಹಾರ ವಿಸ್ತರಣೆ ಅಥವಾ ಸ್ಥಳಾಂತರದಂತಹ ಉದ್ದೇಶವಿರುವವರಿಗೆ ಇನ್ನರ್ ಲೈನ್ ಪರ್ಮಿಟ್ ಹೊಂದಿದ್ದ "ಲೋಕಲ್ ರೆಸಿಡೆಂಟ್ ವೀಸಾ" ಪಾಲಿಸಿ ಅನ್ನುವ ಸ್ಥಳಿಯಾಡಳಿತಗಳು ಕೊಡುವ ವಾಸದ ಪರ್ಮಿಟ್ಟಿನಂತಹ ರೀಜನಲ್ ವೀಸಾವನ್ನ ಕಡ್ಡಾಯ ಮಾಡಲಾಗಿದೆ. ಈ ವೀಸಾ ನಿಯಮಾವಳಿಯಲ್ಲಿನ ಗಮನೀಯ ಅಂಶವೆಂದರೆ ಇದರಲ್ಲಿ ಒಂದು ಘಟಕದ ನಾಗರೀಕರು ಇನ್ನೊಂದು ಘಟಕದ ನಾಗರೀಕತೆಯನ್ನ ಪಡೆಯಲು ಅವಕಾಶವಿಲ್ಲ. ಏಕೈಕ ಪೌರತ್ವದ ಹಿಂದಿನ ಕಾನೂನು ಇನ್ನೂ ಕಡ್ಡಾಯವಾಗಿ ಪಾಲನೆಯಾಗುತ್ತಿತ್ತು. ಒಂದಾ ವೀಸಾ ವಿಸ್ತರಣೆ ಮಾಡಿಕೊಂಡು ಮತ್ತೊಂದು ನಿಗದಿತ ಅವಧಿಗೆ ಮತ್ತೊಂದು ಭಾರತದಲ್ಲಿ ಮುಂದುವರೆಯಬಹುದು ಅಥವಾ ನಿಗದಿತ ಅವಧಿ ಮುಗಿದ ನಂತರ ತಮ್ಮ ನಾಡಿಗೆ ಹಿಂದಿರುಗಬಹುದು ಅನ್ನುವ ಆಯ್ಕೆ ಅವನ್ನ ಹೊಂದಿದವರಿಗಿರುತ್ತದೆ. ಹಿಂದೆಂದೋ ಆಗಲೆ ಬೇಕಿದ್ದ ಈ ಬದಲಾವಣೆ ಸದ್ಯಕ್ಕೆ ಈ ತಲೆಮಾರಿನಲ್ಲಾದರೂ ಸಾಧ್ಯವಾಗಿದ್ದಕ್ಕೆ ಈಶ್ವರಯ್ಯರಿಗೆ ತೃಪ್ತಿಯಿತ್ತು.

ಏರುತ್ತಿದ್ದ ಜನಸಂಖ್ಯೆಯ ಗುಮ್ಮವನ್ನ ತೋರಿಸಿ ಈ ದೇಶವನ್ನ ಆದಷ್ಟು ದೋಚಲು ಆಗಿನ ಆಳುವ ಮಂದಿ ಮಾಡಿ ಬಿಸಾಕಿದ್ದ ಅಭಿವೃದ್ಧಿ ನೆಪದ ಅನೇಕ ಬದಲಾವಣೆಗಳು ಇಂದು ತೀವೃವಾಗಿ ಕುಸಿಯುತ್ತಿರೋ ಜನಸಂಖ್ಯೆಯಿಂದಾಗಿ ನಿರುಪಯುಕ್ತವಾಗಿದ್ದುˌ ಒಂದು ಬಗೆಯಲ್ಲಿ ಸಾಮಾಜಿಕ ಹೊರೆಯಾಗಿ ಪರಿಣಮಿಸಿತ್ತು. ಐವತ್ತು ವರ್ಷಗಳ ಹಿಂದೆ ಸುಮಾರು ನೂರೈವತ್ತು ಕೋಟಿಯವರೆಗೂ ಏರಿದ್ದ ಭಾರತೀಯರ ಜನಸಂಖ್ಯೆ ತನ್ನ ಉತ್ತುಂಗ ಮುಟ್ಟಿˌ ಅನಂತರ ನಾನಾ ಕಾರಣಗಳಿಂದ ಅರ್ಧಕ್ಕೂ ಹೆಚ್ಚು ಕುಸಿತ ಕಂಡು ಸರಿಸುಮಾರು ಎಪ್ಪತ್ತು ಕೋಟಿಗೆ ಇದೀಗ ಸ್ಥಿರವಾಗಿದ್ದರೂˌ ಈಗಲೂ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ಪಟ್ಟದಲ್ಲೆ ಎರಡೂ ಭಾರತಗಳು ಮುಂದುವರೆದಿದ್ದವು. ವಾಡಿಕೆಯಂತೆ ಗಣರಾಜ್ಯದ ಉತ್ತರ ಭಾರತದ ಘಟಕದ್ದೆ ಈ ವಿಷಯದಲ್ಲಿ ಪಾರಮ್ಯ ಸಹಜವಾಗಿ ಇತ್ತು. ಕುಸಿದಿರೋ ಜನಸಂಖ್ಯೆ ಮತ್ತೆ ಅದರಿಂದಾಚೆ ಮೇಲೇರುವ ಯಾವ ಸೂಚನೆಯೂ ಇರಲಿಲ್ಲ.

ಇತ್ತ ಭಾರತದ ವಾಸ್ತವ ಇದಾಗಿದ್ದರೆ. ಅತ್ತ ಚೀನಾದ ಜನಸಂಖ್ಯೆ ಸಹ ವಿಪರೀತವಾಗಿ ಕುಸಿದು ಕೇವಲ ಮೂವತ್ತು ಕೋಟಿಗೆ ಕೊನೆಗೂ ನಿಂತು ಏದುಸಿರು ಬಿಡುತ್ತಿತ್ತು. ಟಿಬೆಟ್ ಹಾಗೂ ಕ್ಸಿನ್ಕ್ಸಿಯಾಂಗ್ ಈಗ ಪ್ರತ್ಯೇಕ ದೇಶಗಳಾಗಿದ್ದವು. ಭೂತಾನ್ ಟಿಬೆಟ್ ಒಕ್ಕೂಟದ ಸದಸ್ಯನಾಗಿತ್ತು. ಜಾಗತಿಕವಾಗಿ ಅಮೇರಿಕಾದ ದಾದಾಗಿರಿ ಅದು ಐದು ಭಾಗಗಳಾಗಿ ವಿಭಜನೆಯಾಗಿರುವ ಕಾರಣ ಬಹುತೇಕ ಕೊನೆಗೊಂಡಿತ್ತು. ಹಿಂದೆ ಒಂದಾಗಿದ್ದಾಗ ಸುಮಾರು ನಲವತ್ತು ಕೋಟಿಯ ಆಸುಪಾಸಿನಲ್ಲಿದ್ದ ಈ ಐದೂ ಹೊಸ ದೇಶಗಳ ಜನಸಂಖ್ಯೆ ಈಗ ಒಟ್ಟಾರೆ ಲೆಕ್ಖ ಹಾಕಿದರೆ ಐದು ಕೋಟಿಯನ್ನ ಕೂಡ ಮೀರುತ್ತಿರಲಿಲ್ಲ. ಒಟ್ಟಿನಲ್ಲಿ ಜಗತ್ತಿನ ಯಾವ ಮೂಲೆಯಲ್ಲಾದರೂ ಸರಿ ಆಗಿರುವ ಅಪರಾ-ತಪರಾ ಅಭಿವೃದ್ಧಿಯ ಅಸ್ಥಿಪಂಜರಗಳನ್ನ ಮೂಸಿ ನೋಡುವವರಿಲ್ಲದೆ ಅವುಗಳಲ್ಲಿ ಬಹುಪಾಲು ಪಾಳು ಬೀಳುತ್ತಿದ್ದರೆˌ ಇನ್ನುಳಿದವುಗಳ ನಿರ್ವಹಣಾ ವೆಚ್ಚವೆ ಅವುಗಳಿಂದ ಹುಟ್ಟುವ ಆದಾಯಗಳಿಂದ ಹತ್ತಾರು ಪಟ್ಟು ಹೆಚ್ಚಾಗಿ ಜಾಗತಿಕ ಆರ್ಥಿಕತೆಗೆ ಅವು ಬಿಳಿಯಾನೆಗಳಂತೆ ಹೊರೆಯಾಗಿ ಪರಿಣಮಿಸಲಾರಂಭಿಸಿದ್ದವು.

ಐದು ದಶಕಗಳ ಹಿಂದಿನ ಪ್ರಾಕೃತಿಕ ಮಾನದಂಡವನ್ನ ಅನುಸರಿಸಿ ಹೇಳೋದಾದರೆˌ ಈ ಭೂಮಿ ಇಂತಹ ವೈರುಧ್ಯಗಳಿಂದ ಮತ್ತೆ ನಳನಳಿಸಿ ಚಿಗುರಿ ಮುಗುಳ್ನಗಬೇಕಿತ್ತು. ಆದರೆ ದುರಾಸೆಯ ಮನುಷ್ಯರು ನಾಲ್ಕು ದಶಕದ ಹಿಂದೆ ಎಸಗಿದ ಒಂದೆ ಒಂದು ದುಷ್ಟ ನಡೆಯ ದೆಸೆಯಿಂದ ಜಾಗತಿಕ ವಾತಾವರಣ ಮೊದಲಿಗಿಂತ ಕೆಟ್ಟು ಕೆರ ಹಿಡಿದ್ದದ್ದಷ್ಟೆ ಅಲ್ಲˌ ಇನ್ನೂ ಭಯಾನಕತೆಯ ಕೂಪದತ್ತ ನಿಧಾನವಾಗಿ ತೆವಳಲಾರಂಭಿಸಿತ್ತು. ಎಲ್ಲರೂ ಊಹಿಸಿದ್ದಂತೆ ಜಾಗತಿಕ ಪುಂಡ ದೇಶ ಪಾಕಿಸ್ತಾನದ ಆಡಳಿತದ ಚುಕ್ಕಾಣಿ ಧಾರ್ಮಿಕ ಮತಾಂಧರ ಕೈಸೇರಿˌ ಅವಸರಗೇಡಿತನ ತೋರಿದ ಅವರ ಮಡೆಯ ಧರ್ಮಾಂಧ ನಾಯಕ ಶಿಖಾಮಣಿಯೊಬ್ಬ ಎಲ್ಲರೂ ಊಹಿಸಿದ್ದಂತೆ ಅವರ ಊಹಾತ್ಮಕ ಅಜನ್ಮ ವೈರಿ ಭಾರತದ ಮೇಲೆ ಏರಿ ಬರುವ ಮುನ್ನವೆ ತನ್ನಲ್ಲಿದ್ದ ಬಲವಾದ ಕ್ಷಿಪಣಿಯನ್ನ ಬಳಸಿ ಪ್ರಬಲ ಅಮೇರಿಕಾದ ಪೂರ್ವ ತೀರದ ನ್ಯೂಯಾರ್ಕ್ ನಗರದತ್ತ ಗುರಿಯಿಟ್ಟು ಅಣುಬಾಂಬ್ ಉದುರಿಸಿ ಬಿಟ್ಟ. ತಕ್ಷಣಕ್ಕೆ ಹೌಹಾರಿದ ಅಮೇರಿಕನ್ನರು ಪ್ರತಿರೋಧ ತೋರಲು ಆರಂಭಿಸುವ ಮುನ್ನವೆˌ ಅವರ ಅಸಹಾಯಕತೆಯ ದುರ್ಲಾಭ ಪಡೆಯಲು ಹೊಂಚು ಹಾಕುತ್ತಿದ್ದ ಉತ್ತರ ಕೊರಿಯಾದ ತಲೆಕೆಟ್ಟ ಸರ್ವಾಧಿಕಾರಿ ಒಂದರ ಹಿಂದೊಂದರಂತೆ ಪಶ್ಚಿಮ ಕರಾವಳಿಯ ಲಾಸ್ ಎಂಜಲೀಸ್ ಹಾಗೂ ಒಳನಾಡಿನ ಟೆಕ್ಸಸ್ ಮೇಲೆ ತನ್ನ ಪ್ರಬಲ ಕ್ಷಿಪಣಿಯ ತಲೆಗೆ ಕಟ್ಟಿದ್ದ ಅಣುಬಾಂಬುಗಳನ್ನ ಉದುರಿಸಿ ಜಗತ್ತಿನ ಸರ್ವನಾಶಕ್ಕೆ ತಿದಿಯೊತ್ತಿದ.

ಏಕಕಾಲದಲ್ಲಿ ಎರಡೆರಡು ದಿಕ್ಕಿನಿಂದ ಬಂದೆರಗಿದ ವಿನಾಶದ ನಡುವೆಯೂ ಸಾವರಿಸಿಕೊಂಡ ಅಮೇರಿಕನ್ನರು ಅದೆ ತೀವೃತೆಯಲ್ಲಿ ಅಣುಬಾಂಬಿನಿಂದಲೆ ಮಾರುತ್ತರಿಸುವ ಗೋಜಿಗೆ ಹೋಗದೆˌ ತಮ್ಮಲ್ಲಿ ತಯಾರಾಗಿದ್ದ ಅದಕ್ಕಿಂತ ಪ್ರಬಲವಾಗಿದ್ದ ಸರ್ವನಾಶಕ ಶಸ್ತ್ರಾತ್ತ್ರಗಳನ್ನ ಮೊದಲ ಬಾರಿಗೆ ಪ್ರಯೋಗಾತ್ಮಕವಾಗಿಯೇನೋ ಅನ್ನುವಂತೆ ಇವೆರಡೆ ದೇಶಗಳ ಮೇಲೆ ನಿರ್ದಯೆಯಿಂದ ಪ್ರಯೋಗಿಸಿ ಆ ಎರಡೂ ದೇಶಗಳನ್ನ ತಹಬಂಧಿಗೆ ತಂದರು. ಭಾರತವೂ ಸೇರಿ ಜಗತ್ತಿನ ಉಳಿದೆಲ್ಲಾ ದೇಶಗಳು ಈ ನಿಟ್ಟಿನಲ್ಲಿ ಕೈ ಜೋಡಿಸಿ ಇಷ್ಟವಿಲ್ಲದಿದ್ದರೂ ಅಮೇರಿಕಾದ ಪರವಾಗಿ ಯುದ್ಧಾಂಗಣಕ್ಕೆ ಅಮೇರಿಕಾದ ಪರವಾಗಿ ಎರಗಲೆ ಬೇಕಾಯ್ತು. ಜಗತ್ತಿನ ಪುಟಗಳಿಂದ ಪಾಕಿಸ್ತಾನ ಹಾಗೂ ಉತ್ತರ ಕೊರಿಯಾಗಳೆಂಬ ದೇಶಗಳ ಅಸ್ತಿತ್ವವೆ ಒರೆಸಿ ಹೋಗಿ - ಯುದ್ಧೋತ್ತರ ಅಮೇರಿಕಾ ಐದು ಭಾಗಗಳಾಗಿ ವಿಭಜಿತವಾಗಿ ಜಗತ್ತಿನ ನಕ್ಷೆಯ ಜೊತೆಗೆ ಜಾಗತಿಕ ಶಕ್ತಿಕೇಂದ್ರಗಳ ವ್ಯಾಖ್ಯೆ ಸಹ ಈ ಮೂಲಕ ಬದಲಾಯಿತು. ಪಾಕಿಸ್ತಾನ ಹಾಗೂ ಉತ್ತರ ಕೊರಿಯವನ್ನ ಜಾಗತಿಕ ಭೂಪಟದಿಂದ ಅಳಿಸಿ ಹಾಕಿದ ಅಮೇರಿಕಾˌ ಇಂದಿಗೂ ಈ ಅಣುದಾಳಿಯ ತೀವೃತೆಯಿಂದ ಚೇತರಿಸಿಕೊಳ್ಳುತ್ತಾ ಸಿರಿವಂತ ದೇಶಗಳ ಪಟ್ಟಿಯಿಂದ ಏಕಾಏಕಿ ಕುಸಿದು ಈಗ ಭಾರತಕ್ಕಿಂತಲೂ ಹಿಂದುಳಿದು ಆಫ್ರಿಕಾದ ಸೋಮಾಲಿಯಾ ಹಾಗೂ ಲಿಬಿಯಾದಂತಹ ದೇಶಗಳ ಸಾಲಿಗೆ ಸೇರಿ ಹೋಯ್ತು. ನೇರವಾಗಿ ತಾನು ಧಾಳಿ ಮಾಡಿರದಿದ್ದರೂˌ ಉತ್ತರ ಕೊರಿಯಾ ಹಾಗೂ ಪಾಕಿಸ್ತಾನಗಳಂತಹ ಪ್ರಾಕ್ಸಿಗಳನ್ನ ಸಾಕಿ ಛೂ ಬಿಟ್ಟ ಸಂಚಿಗೆ  ಹೊಣೆ ಮಾಡಿ ಚೀನಾವನ್ನೂ ಸಹ ಆಕ್ರಮಿಸಿದ ಪಾಶ್ಚಿಮಾತ್ಯ ಸೈನಿಕ ಶಕ್ತಿಗಳು ಅದನ್ನ ನಾಲ್ಕು ಭಾಗಗಳನ್ನಾಗಿ ಒಡೆದ ನಂತರವೆ ಈ ಯುದ್ಧ ಅಧಿಕೃತವಾಗಿ ಇಂದಿಗೆ ಎರಡು ದಶಕಗಳ ನಂತರ ನಿಂತದ್ದು. ಪಾಕಿಸ್ತಾನದಲ್ಲಿದ್ದ ಹಿಂದಿನ ಪಂಜಾಬ್ ಪ್ರಾಂತ್ಯವನ್ನಾಗಲಿ - ಉತ್ತರ ಕೊರಿಯವನ್ನಾಗಲಿ ಇನ್ನು ಹತ್ತಿಪ್ಪತ್ತು ಸಾವಿರ ವರ್ಷ ವಿಕಿರಣ ಸಹಿತವಾದ ನಾನಾ ಕಾರಣಗಳಿಂದ ಮನುಷ್ಯನಿರಲಿ ಯಾವುದೆ ಜೈವಿಕ ಕ್ರಿಯೆಗಳ ವಿಕಸನಕ್ಕಾಗಲಿ - ವಾಸಕ್ಕಾಗಲಿ ಅಯೋಗ್ಯವೆಂದು ವಿಶ್ವಸಂಸ್ಥೆ ಘೋಷಿಸಿಯೆ ಮೂರು ದಶಕದ ಮೇಲಾಯಿತು.


******

ಈ ಎಲ್ಲಾ ಅನಾಹುತಗಳಿಗೆ ಮೂಕ ಸಾಕ್ಷಿಯಾಗಿ ಉಳಿದುಕೊಂಡಿದ್ದ ಕೆಲವೆ ಕೆಲವು ಹಿರಿತಲೆಗಳಲ್ಲಿ ಈಗ ಈಶ್ವರಯ್ಯ ಸಹ ಒಬ್ಬರು. ಅಣುಬಾಂಬು ಬಿದ್ದಿದ್ದು ಸಾವಿರಾರು ಕಿಲೋಮೀಟರ್ ದೂರದ ಅಮೇರಿಕಾದ ನೆಲದ ಮೇಲಾಗಿದ್ದರೂˌ ಸರ್ವನಾಶಕ ಬಾಂಬುಗಳನ್ನ ಅಮೇರಿಕಾ ಉದುರಿಸಿದ್ದು ಭಾರತದ ಎರಡೂ ಪಕ್ಕದ ದೇಶಗಳ ಮೇಲೆನೆ ಅಂತಿದ್ದರೂˌ ಅದರ ಪಶ್ಚಾತ್ ಪರಿಣಾಮದ ಅಪಾಯಗಳು ಬೀಸುವ ಗಾಳಿ - ಹರಿಯುವ ನೀರಿನ ಮೂಲಕ ಸರ್ವವ್ಯಾಪಿಯಾಗಿದ್ದವು. ತಿನ್ನಲು ತತ್ವಾರವಾಗುವಂತೆ ಮುಂದಿನ ದಿನಮಾನಗಳಲ್ಲಿ ಎಲ್ಲೆಲ್ಲೂ ಬಿದ್ದ ಬರ ಹಾಗೂ ಹೊತ್ತು-ಗೊತ್ತು ಇಲ್ಲದಂತೆ ವಿಷದ ಮೋಡ ಬಾನಲ್ಲಿ ಕಟ್ಟಿ ದಢೀರನೆ ಸುರಿದು ಹೋಗುತ್ತಿದ್ದ ಕುಂಭದ್ರೋಣ ಆಸಿಡ್ ಮಳೆಯ ದೆಸೆಯಿಂದ ಕೃಷಿ ಯೋಗ್ಯ ಭೂಮಿಯ ಕೊರತೆ ಹೆಚ್ಚುತ್ತಲೆ ಹೋಯ್ತು. ಅಲ್ಪ-ಸ್ವಲ್ಪ ಕೃಷಿ ಭೂಮಿ ಹೊಂದಿದ್ದು ಅದರಲ್ಲಿ ಆಹಾರದ ಬೆಳೆ - ಧಾನ್ಯ ಬೆಳೆವ ರೈತರ ನಸೀಬೆ ಈ ಹಂತದಲ್ಲಿ ಬದಲಾಯಿಸಿ ಹೋಯ್ತು. ಅನ್ನದ ಬೆಲೆ ಚಿನ್ನದ ಬೆಲೆಗೆ ಪೈಪೋಟಿ ಕೊಡುವಂತೆ ಏರ ತೊಡಗಿತು. ಕಾಳಸಂತೆಯಲ್ಲಿ ಹೊಟ್ಟೆ ತುಂಬಿಸಲು ಅಗತ್ಯವಾದ ವಿಷಮುಕ್ತ ಆಹಾರ ಪದಾರ್ಥಗಳನ್ನ ಮಾರುತ್ತಿದ್ದವರಿಗಂತೂ ಈ ವಿಪರೀತ ಕಾಲ ಸುಗ್ಗಿಯಾಗಿ ಪರಿಣಮಿಸಿತು.

ಆದರೆ ಇದಕ್ಕಿದ್ದ ಒಂದೆ ಒಂದು ನಿರ್ಬಂಧವೆಂದರೆˌ ಯಾವುದೆ ಬೆಳೆಯನ್ನಾಗಲಿ ಸ್ವಸ್ಥ ಆರೋಗ್ಯದ ದೃಷ್ಟಿಯಿಂದ ಸೇವಿಸಬೇಕಿದ್ದರೆ ಆದಷ್ಟು ಅದನ್ನ ಮುಚ್ಚಿಗೆಯಿರುವ ಹಸಿರು ಮನೆಗಳೊಳಗೆ ಬೆಳೆಸಬೇಕಿತ್ತು. ಹೊರಗಿನ ಕಲುಷಿತ ಗಾಳಿ - ಕ್ರಮೇಣ ವಿಶ್ವದಾದ್ಯಂತ ಹರಡಿದ ಭೀಕರ ಅಣುದಾಳಿಯ ಹೊಂಜು ದಾಟಿ ಬರುತ್ತಲೆ ವಿಕಿರಣವನ್ನ ಹೊತ್ತು ತಂದು ಸುರಿಯುತ್ತಿದ್ದ ನೇರ ಸೂರ್ಯನ ಬಿಸಿಲು ಹಾಗೂ ಸುಳಿವನ್ನೆ ಕೊಡದೆ ಮೋಡ ಕಟ್ಟಿ ಕಪ್ಪಾಗಿ ವಿಕಿರಣದ ವಿಷ ಹೊತ್ತು ಸುರಿಯುತ್ತಿದ್ದ ಆಸಿಡ್ ಮಳೆಯ ನೇರ ಸಂಪರ್ಕ ಕಡಿಮೆಯಾದಷ್ಟೂ ಬೆಳೆಗಳಾಗಲಿ - ಸಾಕಿ ತಿನ್ನುವ ಪ್ರಾಣಿಗಳಾಗಲಿ - ಮೀನುಗಳಾಗಲಿ ಆರೋಗ್ಯಕ್ಕೆ ಪೂರಕವಾಗುತ್ತಿದ್ದವು. ಉಳಿದಂತೆ ತೆರೆದ ಜಾಗದಲ್ಲಿ ಬೆಳೆದ ಬೆಳೆಯನ್ನಾಗಲಿ - ಮಾಂಸವನ್ನಾಗಲಿ ತಿಂದು ರೋಗಗ್ರಸ್ಥವಾಗಿ ಕ್ರಮೇಣ ನರಳಿ ನರಳಿ ಇಂಚಿಂಚಾಗಿ ಸಾಯುವುದಕ್ಕಿಂತˌ ಏನನ್ನೂ ತಿನ್ನದೆ ಉಪವಾಸವಿದ್ದು ಜೀವ ತ್ಯಜಿಸುವುದೆ ಹೆಚ್ಚು ಸುಖಕರ ಅನ್ನುವ ಪರಿಸ್ಥಿತಿ ಉದ್ಭವಿಸಿತ್ತು. ಹೊರಗಡೆ ಸುತ್ತಾಡುವಾಗ ಬಂದೆರಗುವ ವಿವಿಧ ಬಗೆಯ ವಿಕಿರಣದ ಧಾಳಿಯಿಂದ ಪಾರಾಗಲು ಬಳಸಬೇಕಿದ್ದ ಮುಚ್ಚಿಗೆಯ ವಸ್ತ್ರಗಳ ಮಾರಾಟವೂ ವೃದ್ಧಿಸಿತ್ತು.

ಇದೆಲ್ಲ ಆಗುವ ಮೊದಲೆ ತನ್ನ ದುಡಿಮೆಯನ್ನ ನೆಲದ ಮೇಲೆ ಸುರಿದುˌ ಪೇಟೆಯಲ್ಲಿ ಮನೆಗಳನ್ನ ಖರೀದಿಸುವ ಮುನ್ನವೆ ಗ್ರಾಮೀಣ ಭಾಗಗಳಲ್ಲಿ ಆದಷ್ಟು ನಿಲುಕುವಷ್ಟು ದರದ ಕೃಷಿಭೂಮಿ ಖರೀದಿಸಿಟ್ಟುˌ ಅಲ್ಲಿ ಅದೆಷ್ಟೆ ಕಷ್ಟವಾದರೂ ಗೊಬ್ಬರವಾಗಿಯಾಗಲಿˌ ಕೀಟನಾಶಕವಾಗಿಯಾಗಲಿ ಅಥವಾ ಸಂರಕ್ಷಕವಾಗಿಯಾಗಲಿ ಯಾವುದೆ ರಾಸಾಯನಿಕಗಳನ್ನ ಬಳಸಲೆ ಬಾರದು ಎಂದು ದೃಢ ನಿರ್ಧಾರ ಮಾಡಿˌ ಕೃಷಿ-ಹೈನುತ್ಪಾದನೆ-ಮಾಂಸೋತ್ಪಾದನೆ ಆರಂಭಿಸಿದ್ದ ಈಶ್ವರಯ್ಯನವರ ರೊಟ್ಟಿ ತುಪ್ಪದ ಬಾಂಢದಲ್ಲಿ ಬಿದ್ದದ್ದಷ್ಟೆ ಅಲ್ಲˌ ಇಂತಹ ಲೋಕಕಂಟಕದ ಹೊತ್ತಲ್ಲಿ ಮುಳುಮುಳುಗೇಳತೊಡಗಿತು.

( ಇನ್ನೂ ಇದೆ.)

Wednesday, December 17, 2025

"ವಂದೆ ಮಾತರಂ" ಅನ್ನುವ ನಾಟಕದ ದಗಲುಬಾಜಿ.....

"ವಂದೆ ಮಾತರಂ" ಅನ್ನುವ ನಾಟಕದ ದಗಲುಬಾಜಿ.....


ಖೂಳರ ಕಾರಸ್ಥಾನವಾಗುತ್ತಿದೆ ದಿನ ನಿತ್ಯದ ಬಾಳು,
ಯಾರು ತಾನೆ ಕೇಳಿಯಾರು ಹೇಳಿ?
ಪ್ರತಿದಿನ ಸತ್ತು ಸುಣ್ಣವಾಗುವವರ ಗೋಳು!


ಧರ್ಮದ ಹೆಸರಿನಲ್ಲಿ ಉದ್ದಿಮೆ ನಡೆಸುವ
ಕಾಣಿಕೆಯ ಕೋಟಿ ರೂಪಾಯಿಗಳ ಕಾಸಿನಲ್ಲೆ
ಸಾಮ್ರಾಜ್ಯ ಕಟ್ಟಿ ಮೆರೆಯುವ 
ತನ್ನನ್ನ ತಾನೆ ಧರ್ಮಕ್ಕೆ ಅಧಿಕಾರಿಯಾಗಿ
ಸ್ವಘೋಷಿತ ಪ್ರವಾದಿಯಂತೆ ಉದ್ಭವಿಸಿರುವ ನೀಚ
ಕಾಮಾಂಧರ ಪಡೆಯ ಕಮಾಂಡರನಾಗಿದ್ದರೂ
ಖಾವಂದನೆಂದು ಪೊಡಮಡುವ ಮೂಢರು.


ಧರ್ಮವನ್ನೆ ತನ್ನ ಅಸ್ತಿತ್ವಕ್ಕೆ ನೆಲೆಯಾಗಿಸಿಕೊಂಡು
ಯಾರೂ ಒಪ್ಪಿಸಿರದಿದ್ದರೂ ತನಗೆ ತಾನೆ
ಅದರ ಗುತ್ತಿಗೆ ಪಡೆದುಕೊಂಡುˌ
ದೇಶ ಮುನ್ನಡೆಸುವ ಬದಲು
ದೇಶವಾಸಿಗಳ ನಡುವೆಯೆ
ತಂದಿಟ್ಟು ಅವರರವರೆ ಹೊಡೆದಾಡಿಕೊಂಡು
ಸಾಯಲು ಪುಸಲಾಯಿಸುವ ತಿದಿಯೊತ್ತಿ.
ಹಾಗೆ ಸತ್ತವರ ಚಿತೆಯ ಉರಿಯಲ್ಲಿ 
ತನ್ನ ಮೋಟು ಬೀಡಿ ಹೊತ್ತಿಸಿಕೊಳ್ಳುವ
ನಿಷ್ಕೃಷ್ಟನ "ಭಾರತ ಭಾಗ್ಯ ವಿಧಾತ"
ಎಂದೆ ನಂಬಿ ಆ ಅಧಮನ
ಮಹಿಮೆಯ ಕೂತಲ್ಲಿ-ನಿಂತಲ್ಲಿ ಕೊಂಡಾಡುವರು.



ರಾಜಕೀಯವೆಂಬುದು ಕಾಸು ಕೊಳ್ಳೆ ಹೊಡೆವ ಉದ್ಯಮ
ವ್ಯಥೆಯ ಧ್ವನಿಯಲ್ಲಿ "ಅದು ಹಾಗಲ್ಲಣ್ಣ" ಅನ್ನುವವರೆ 
ಈಗಿಲ್ಲಿ ಇಂತವರ ನಡುವಿನ ಅಧಮˌ
ಹಸಿದು ಹೊಟ್ಟೆ ಪಾಡಿಗೆ ಕೈಯೊಡ್ಡುವವನ
ಹಂಗಿಸಿ ಬೆರೆಸಾಡುವ ಮಂದಿ.
ಅದೆˌ ಸರಕಾರಿ ಖಜಾನೆಗೆ ಕನ್ನ ಕೊರೆದು ಕೊಬ್ಬುವವನ
ಧರ್ಮದ ಮಂಕುಬೂದಿ ಎರಚಿ
ಮೈ ಬಗ್ಗಿಸಿ ದುಡಿಯಲೊಲ್ಲದೆ ಕೂತಲ್ಲೆ 
ಪರಪುಟ್ಟನಾಗಿ ತನ್ನ ತಿಕದ ಛರ್ಬಿ ಹೆಚ್ಚಿಸಿಕೊಳ್ಳುವವನ ಉಧೋ ಉಧೋ ಎಂದು ಬಹುಪರಾಕು ಊಳಿಡುವ
ಮತಿಸತ್ತವರ ನೇರ ಮೆದುಳಿಗೇನೆ ಲಕ್ವಾ ಹೊಡೆದಿರುವ
ಮಾನಸಿಕ ಪಾರ್ಶ್ವವಾಯು ಪೀಡಿತರ ಮಂದೆ.



ಕೇವಲ ಬೆವರಲ್ಲ ರಕ್ತ ಸುರಿಸಿ 
ಗೇಯ್ದು ಪೈಸೆ ಪೈಸೆ ತೆರಿಗೆ ಕಟ್ಟುವ ಶ್ರಮಜೀವಿಯ
ಕಡು ಕಷ್ಟದ ದುಡಿಮೆಯ ದುಡ್ಡಲ್ಲಿ 
ಸಂಸತ್ತಿನಲ್ಲಿ ತಿರುಪೆ ಶೋಕಿ ಮಾಡಿಕೊಂಡು
ಪ್ರಭುಗಳು ಮತ್ತವರ ಪಟಾಲಂ 
"ವಂದೆ ಮಾತರಂ" ಗೀತೆಯ ಮೇಲೆ
ದಿನಗಟ್ಟಲೆ ಹಣ-ಸಮಯ 
ವ್ಯರ್ಥಗೊಳಿಸಿ ಅನಗತ್ಯ ಒಣಚರ್ಚೆ ಅಲ್ಲ ಕಣ್ರಪ್ಪ
ನಡೆಸ ಬೇಕಿರೋದು ಈ ಹೊತ್ತಿಗೆ,
ಅತ್ತ ಹಸಿದು ಸಾಯದಂತೆ
ಇತ್ತ ಅದನ್ನೊಂದನ್ನೆ ನಂಬಿ 
ಬದುಕಲೂ ಆಗದಂತೆ
ಕುಟುಂಬಕ್ಕೆ ಐದು ಕಿಲೋ ಸೊಸೈಟಿ ಅಕ್ಕಿಯ
ಭಿಕ್ಷೆ ಎಸೆದು ಅಂಟದಂತೆ ತಡೆಯಲಾಗಿದೆ
ಬಡವರ ಬೆನ್ನು ಹೊಟ್ಟೆಗೆ.



ಪ್ರಜೆಗಳೆಂಬ ಜೀವಂತ ನಡೆದಾಡುವ ಶವಗಳˌ
ಜ್ವಲಂತ ಸಮಸ್ಯೆಗಳ ನೈಜ ಬದುಕು
ನೀನು-ನಾನೆನ್ನದೆ ನಮ್ಮೆಲ್ಲರನ್ನೂ
ಹಿಂಡಿ ಹಿಪ್ಪೆ ಮಾಡಿ ಹೈರಾಣಾಗಿಸಿರೋವಾಗ
ಒಂದಾಗಿ ಭ್ರಾತೃತ್ವ ಬೆಳೆಸಿ ಕೊಂಡು
ನಮ್ಮ-ನಿಮ್ಮ ಹಿರಿಯರಂದು ಕಟ್ಟಿ ಕೊಟ್ಟಿರುವ
ಈ ದೇಶವನ್ನ ಉಳಿಸಿ-ಬೆಳೆಸಿಕೊಂಡು
ಹೋಗುವುದು ಇಂದಿನ ತುರ್ತು ಅಗತ್ಯ.
"ದ್ವೇಷ"ಪ್ರೇಮವಲ್ಲ ಕಾಣಿರೋ
ದೇಶಪ್ರೇಮವಷ್ಟೆ ಅಂತಿಮ ಸತ್ಯ.


ಖೂಳರ ಕಾರಸ್ಥಾನವಾಗುತ್ತಿದೆ ದಿನ ನಿತ್ಯದ ಬಾಳು,
ಯಾರು ತಾನೆ ಕೇಳಿಯಾರು ಹೇಳಿ?
ಪ್ರತಿದಿನ ಸತ್ತು ಸುಣ್ಣವಾಗುವವರ ಗೋಳು!


- 🙂

ಮುಗಿಯದ ಕಥೆಯೊಂದರ ಆರಂಭ - ೧.( ದಡ ಕಾಣದ ದೋಣಿಯ ಕೊನೆಯಿರದ ಕುರುಡು ಪಯಣ.)

ನೀಳ್ಗತೆ.


ಮುಗಿಯದ ಕಥೆಯೊಂದರ ಆರಂಭ - ೧.

( ದಡ ಕಾಣದ ದೋಣಿಯ ಕೊನೆಯಿರದ ಕುರುಡು ಪಯಣ.)

ಈಶ್ವರಯ್ಯನಿಗೀಗ ಈ ನೆಲದ ಸಹವಾಸ ತೊರೆದು ಹೊರಡಲು ಸಜ್ಜಾಗಿರುವ ತುಂಬು ತೊಂಭತ್ತಾರರ ಪ್ರಾಯ. ಇನ್ನೂ ನಾಲ್ಕು ತೀರಿದರೆ ಏನನ್ನೂ ಕಟ್ಟಿ ಕಡಿದು ಹಾಕದೆಲೆ ಪುಗಸಟ್ಟೆಯಾಗಿ "ಶತಾಯುಷಿ"ಯ ಪಟ್ಟ ಸಿಗುತ್ತದಾದರೂ ಅವರಿಗೆ ಈಗ ಅದರಲ್ಲಿ ಯಾವ ಆಸಕ್ತಿಯೂ ಇಲ್ಲ. ಶತಾಯುಷಿಯಾಗಿ ಸಾಧಿಸಬೇಕಾದದ್ದು ಏನೂ ಇಲ್ಲ. ಈಗಾಗಲೆ ನಾನು ಅವಧಿ ಮೀರಿದ ಔಷಧಿಯಂತಾಗಿದ್ದಾಗಿದೆ. ಸ್ವತಃ ತಾನೆ ಬಾಗಿಲು ತಟ್ಟಿ ತಯ್ಯಾರಾಗಿ ನಿಲ್ಲಲು ಸಿದ್ಧನಾಗಿದ್ದರೂ ಸಹˌ ಕಾಲನ ಕರೆ ಬಾರದಿರೋದು ಅವರಿಗೆ ಅಯೊಮಯವೆನಿಸಿದೆ.


ಏಕೆಂದರೆˌ ಅವರು ಕಂಡುಂಡು ಬಾಳಿ "ಬದುಕಿದ್ದ" ಪ್ರಪಂಚದ ಭಾಗವಾಗಿದ್ದ ಬಹುತೇಕರು ಇಂದು ದಿವಂಗತರಾಗಿ ಈ ಭೂಮಿಯ ಮೇಲಿರೋದೆ ಅವರಿಗೆ ಅಸಹನೀಯವೆನಿಸ ತೊಡಗಿದೆ. ಈಶನಾಗಿದ್ದವ ಈಶ್ವರನೆನ್ನಿಸಿಕೊಂಡು ಸದ್ಯ ಈಶ್ವರಯ್ಯನಾಗಿರುವ ತನ್ನನ್ನ ಅಕ್ಕರೆಯಿಂದ ಈಶನೆಂದೆ ಕರೆಯುವ ಕೊರಳುಗಳ್ಯಾವುವೂ ಇಂದುಳಿದಿಲ್ಲ. ಆತ್ಮೀಯತೆಯಿಂದ ಈಶ್ವರನೆನ್ನುವವರು ಅಲ್ಲೊಬ್ಬ ಇಲ್ಲೊಬ್ಬ ತನ್ನಂತೆಯೆ ಬಿಡುಗಡೆಗೆ ತಹಹತಹಿಸುತ್ತಾ ಬದುಕಿದ್ದಾರಾದರೂ ವಯೋಸಹಜವಾದ ಜರ್ಜರಿತ ಮನಸನ್ನು ಹೊತ್ತ ದುರ್ಬಲ ದೇಹದಲ್ಲಿ ಬಂಧಿಯಾಗಿರುವ ಅವರ್ಯಾರಿಗೂ ತನ್ನ ನೆನಪಿರೋದು ಕಷ್ಟಸಾಧ್ಯ ಅನ್ನುವ ಅರಿವು ಈಶ್ವರಯ್ಯರಿಗೆ ಇದೆ. ಈ ಪ್ರಪಂಚದಲ್ಲಿ ಅವರ ಮನದ ಕೊಳಕ್ಕೆ ಕಲ್ಲೆಸೆದು ಅದರಿಂದೇಳುವ ಅಲೆಗಳ ಆವರ್ತನೆಗೆ ಬೆರಗಾಗುವವರ್ಯಾರೂ ಇರದೆ ಇಂದು ಅಕ್ಷರಶಃ ಒಬ್ಬಂಟಿಯಾಗಿರುವ ಈಶ್ವರಯ್ಯರ ಮೌನದಾಭರಣ ಧರಿಸಿ ಬಹಳ ಕಾಲವಾಗಿ ಹೋಗಿದೆ. ಕಳೆದೇಳೆಂಟು ವರ್ಷಗಳ ಅವಧಿಯಲ್ಲಿ ಅವರ ನಾಲಗೆ ಲೆಕ್ಖ ಹಾಕಿ ಹೆಚ್ಚೆಂದರೆ ಒಂದು ನೂರು ಪದಗಳನ್ನಷ್ಟೆ ಉಚ್ಛರಿಸಿರಬಹುದೇನೋ. ತೀರಾ ನಡೆಸಲೆ ಬೇಕಿರುವ ದೈನಂದಿನ ಅಗತ್ಯಗಳಿಗೆ ಸಂಪೂರ್ಣ ಯಾಂತ್ರೀಕೃತವಾಗಿರುವ ಕೃತಕ ಬುದ್ಧಿಮತ್ತೆಯ ರಾಜ್ಯಭಾರ ಆರಂಭವಾಗಿರುವ ಈ ಯಕಶ್ಚಿತ್ ಮಾನವ ಲೋಕದಲ್ಲಿ ಅವರ ಕೈ ಬೆರಳ ಇಷಾರೆ ಹಾಗೂ ಅಗತ್ಯ ಬಿದ್ದಲ್ಲಿ ಅದು ಬೆರಳಚ್ಚಿಸುವ ಪದಗಳೆ ಧಾರಾಳವಾಗಿ ಸಾಕಾಗುತ್ತಿರುವಾಗ ಬಾಯಿ ತೆರೆದು ಪ್ರಯತ್ನಪೂರ್ವಕವಾಗಿ ಅವರು ಭಾಷಾ ಪ್ರಯೋಗದ ಮೂಲಕ ಯಾರೊಂದಿಗೂ ಸಂವಹಿಸುವ ಅವಶ್ಯಕತೆಯೆ ಉದ್ಭವಿಸಿರಲಿಲ್ಲ. 



ಸಾಹಿತ್ಯ ಹಾಗೂ ಸಂಗೀತ ಪ್ರಿಯರಾಗಿರುವ ಈಶ್ವರಯ್ಯನವರ ಜೀವದ್ರವ್ಯ ಅವೆರಡೆ ಸದ್ಯಕ್ಕೆ. ಆದರೆˌ ಅವನ್ನೂ ಸಹ ಅವರು ಸ್ವಗತದ ಮಾತುಗಳಲ್ಲಿ ಮೆಲುಕಾಡಿಕೊಂಡು - ತನ್ನಷ್ಟಕ್ಕೆ ತಾನೆ ಗುನುಗಾಡಿಕೊಂಡು ಬಹುಕಾಲವಾಗಿ ಹೋಗಿದೆ. ಇನ್ನೂ ಸುಸ್ಪಷ್ಟವಾಗಿರುವ ಕಣ್ಣ ದೃಷ್ಟಿ ಕನ್ನಡಕದ ಹಂಗಿಲ್ಲದೆಯೆ ಓದಲು ಸಾಕಾಗುವಷ್ಟಿದ್ದರೆˌ ಚೂರೂ ಸಹ ಮಂದವಾಗಿರದ ಶ್ರವಣ ಶಕ್ತಿಯ ಕೃಪೆಯಿಂದ ಆದಷ್ಟು ಸುನಾದಗಳನ್ನಷ್ಟೆ ಕಿವಿ ತುಂಬಿಸಿಕೊಳ್ಳುತ್ತಾ ಜೀವ ಸವೆಸುವ ಈಶ್ವರಯ್ಯ ಹಾಗೆ ನೋಡಿದರೆ ತೀರಾ ಒಬ್ಬಂಟಿ ಮೂಕನಂತಾಗಿ ಹೋಗಿದ್ದಾರೆ. ಇದೊಂತರ ಅವರಿಗೆ ಅವರೆ ವಿಧಿಸಿಕೊಂಡಿರುವ ಅಜೀವಾವಧಿ ಶಿಕ್ಷೆ.


ಇದೀಗ ನಡೆಯುತ್ತಿರೋ ೨೦೭೮ರ ವಿದ್ಯಾಮಾನಗಳಿಂದೆಲ್ಲ ಈಶ್ವರಯ್ಯ ಬಹುತೇಕ ವಿಮುಖರಾಗಿದ್ದಾರೆ. ಅವರದ್ದೆ ಆಗಿರುವ ಸಕಲ ದೈನಂದಿನ ನಾಗರೀಕ ಸೌಲಭ್ಯಗಳೂ ಲಭ್ಯವಿರುವ ಅಪಾರ್ಟ್ಮೆಂಟ್ ಒಂದರ ಕೊಟ್ಟಕೊನೆಯ ಏಳನೆ ಮಹಡಿಯ ವಿಶಾಲವಾದ ಮೂರು ಬೆಡ್ ರೂಂಗಳ ವಿಶಾಲವಾದ ಫ್ಲಾಟಿನಲ್ಲಿ ಯಾವ ಮನುಷ್ಯ ಸಂಪರ್ಕವೂ ಇಲ್ಲದ ಅವರ ವಾಸ ಸಾಗಿದೆ. ಊರಲ್ಲಿದ್ದಾಗ ಬಹುತೇಕ ಮನೆಯೊಳಗೆ ಬಹುತೇಕ ಬಂಧಿಯಾಗಿರಲು ಬಯಸುವ ಅವರು ಹಳೆಯ ನೆನಪುಗಳು ತೀವೃವಾಗಿ ಕಾಡುವಾಗ ಮಾತ್ರ ಒಂಬ್ಬಂಟಿಯಾಗಿಯೆ ತನ್ನ ಬಾಲ್ಯದಿಂದ ಯವ್ವನದವರೆಗೂ ತನ್ನನ್ನ ತಾನಾಗಿಸಿರುವ ತಾವುಗಳಿಗೆಲ್ಲ ತಾವೊಬ್ಬರೆ ಹೋಗಿ ಬರೋದಿದೆ. ಚಾಲಕನ ಅಗತ್ಯವೂ ಇದ್ದಿಲ್ಲದ - ಇಂಧನದ ಅನಿವಾರ್ಯತೆಯನ್ನೆ ಹೊಂದಿರದ ಸೌರಶಕ್ತಿ ಆಧರಿತ ಅತ್ಯಾಧುನಿಕವಾಗಿರುವ ತಂತ್ರಜ್ಞಾನದಿಂದಷ್ಟೆ ಕಾರ್ಯ ನಿರ್ವಹಿಸುವ ಅವರ ಕಾರಿಗೆ ಹೋಗಿ ಕೂತು ಕೊಡುವ ನಿರ್ದೇಶನಗಳನ್ನ ಪಾಲಿಸುವ ಅದುˌ ಆ ನಿಗದಿತ ಗಮ್ಯಗಳಿಗೆ ಕೊಂಡೊಯ್ದು ಅವರನ್ನಿಳಿಸಿˌ ಮರಳಿ ಅವರು ತನ್ನನ್ನ ಏರುವವರೆಗೆ ತಾನೆ ಹೋಗಿ ಲಭ್ಯವಿರುವ ವಿರಾಮ ತಾಣಗಳಲ್ಲಿ ಸ್ವಯಂ ಪಾರ್ಕಿಂಗ್ ಮಾಡಿಕೊಂಡು ವಿಶ್ರಮಿಸುತ್ತಿರುತ್ತದೆ.


ತನ್ನ ಬದುಕಿನ ಸುವರ್ಣ ಯುಗದಲ್ಲಿ ಅಡ್ಡಾಡಿದ್ದ ಬೀದಿಗಳಲ್ಲಿ ಅಲೆದಾಡುತ್ತಾ ಹಳೆಯ ನೆನಪುಗನ್ನ ತಡವಿ ಸಾಗುತ್ತಾ ಕೆಲ ಹೊತ್ತಾದರೂ ಈಶ್ವರಯ್ಯ ಹಳೆಯ ಈಶ - ಈಶ್ವರನಾಗಿ ಅಲ್ಲಿ ಜೀವಿಸುತ್ತಾರೆ. ತನ್ನ ಆತ್ಮೀಯ ಜೀವಗಳು ತನ್ನನ್ನ ಕೂಗಿ ಕರೆದಂತೆ ಭ್ರಮಿಸಿ ಸುಖಿಸುತ್ತಾರೆ. ಹಳೆಯ ರುಚಿ ಉಳಿದಿಲ್ಲದ ಕೇವಲ ಬೋರ್ಡುಗಳಿಗಷ್ಟೆ ಸೀಮಿತವಾಗಿರುವ ಹಳೆಯ ಹೊಟೇಲುಗಳನ್ನ ಹೊಕ್ಕು ಇಷ್ಟದ ತಿಂಡಿಗಳನ್ನ ತರಿಸಿಕೊಂಡು ಚೂರು ಪಾರು ಮೆದ್ದು ಮೇಲೇಳುತ್ತಾರೆ. ಹಲ್ಲುಗಳು ಗಟ್ಟಿಯಾಗಿದ್ದರೂ ಜೀರ್ಣಶಕ್ತಿ ಕುಂದಿರೋದರಿಂದ ಹೆಚ್ಚು ತಿಂದು ಗಿಟ್ಟಿಸಿಕೊಳ್ಳುವ ಸ್ಥಿತಿಯಲ್ಲಿ ಅವರಿಂದಿಲ್ಲ. ಅವೆ ಹಳೆಯ ಪುಸ್ತಕದಂಗಡಿಗಳ ರ್ಯಾಕುಗಳ ಮಧ್ಯೆ ಅಡ್ಡಾಡಿˌ ಒಂದೆರಡು ಹಳೆಯ ಪುಸ್ತಕಗಳನ್ನಾಚೆ ಎಳೆದು ಅದರ ಪುಟಗಳ ಸುವಾಸನೆಯನ್ನ ಅಘ್ರಾಣಿಸಿ ಸುಖಿಸುತ್ತಾರೆ. ನೆಪ ಮಾತ್ರಕ್ಕೆ ಒಂದೆರಡು ಪುಸ್ತಕಗಳನ್ನ ಖರೀದಿಸಿ ತಾನು ಓದಿದ್ದ ಕಾಲೇಜುಗಳತ್ತ ನಿಧಾನವಾಗಿ ಕಾಲೆಳೆದುಕೊಂಡು ನಡೆಯುತ್ತಾರೆ. 



ನವ ಯವ್ವನದ ದಿನಮಾನಗಳಲ್ಲಿ ಅಲ್ಲಿ ಕಳೆದ ಅಪ್ರಬುದ್ಧತೆಯ ಕೀಟಲೆಯ ಕ್ಷಣಗಳನ್ನ ನೆನಪಿಸಿಕೊಂಡು ಭಾವುಕರಾಗುತ್ತಾರೆ. ಹಳೆಯ ಸ್ನೇಹ - ಕಳೆದು ಹೋದ ಪ್ರೀತಿ - ಮೆಚ್ಚಿನ ಮಾಸ್ತರುಗಳು - ಕೋಪಿಷ್ಠ ಲೇಡಿ ಲೆಕ್ಚರುಗಳು ಎಲ್ಲರೂ ನೆನಪಿನ ನಾವೆಯೇರಿ ಬಂದು ದರ್ಶನ ದಯಪಾಲಿಸಿ ಹೋಗುತ್ತಾರೆ. ಕಾಲೇಜಿನಿಂದಾಚೆ ತಮ್ಮ ತಂಡದ ಗೆಳೆಯ-ಗೆಳತಿಯರೊಂದಿಗೆ ಹಾಡು ಹರಟೆ ಹೊಡೆಯುತ್ತಿದ್ದ ಪಾರ್ಕಿನ ಕಲ್ಲುಬಂಡೆಗಳ ಹತ್ತಿರ ಕ್ಷಣ ಕಾಲ ಮೌನಾಶ್ರು ಸುರಿಸುತ್ತಾರೆ. ನವ ಪೀಳಿಗೆಯ ಆಸಕ್ತಿಗಳೆ ಬದಲಾಗಿರುವ ಕಾರ ಅನಾಥವಾಗಿರುವ ಆಟದ ಬಯಲನ್ನ ಆಕ್ರಮಿಸುವವರಿಲ್ಲದೆ ಸ್ಮಶಾನ ಮೌನ ಆವರಿಸಿರುವ ಕಾಲೇಜಿನ ಕ್ರೀಡಾಂಗಣದಲ್ಲಿ ಒಬ್ಬಂಟಿಯಾಗಿ ಒಂದು ಸುತ್ತು ಹಾಕುತ್ತಾ ತಾವಲ್ಲಿ ಸಹಪಾಠಿಗಳೊಂದಿಗೆ ಕಳೆದಿದ್ದ ಮಧುರ ಕ್ಷಣಗಳನ್ನ ಮೆಲುಕು ಹಾಕುತ್ತಾರೆ. ಹೊರಗಿನ ಪರಿಸರದ ಪ್ರತಿಯೊಂದೂ ಸ್ಥಿತ್ಯಂತರವಾಗಿರುವ ಈ ಕಾಲಾನುಕ್ರಮಣಿಕೆ ಅವರಿಗೆ ಅಪಥ್ಯವಾಗಿದ್ದರೂˌ ಅವರ ಹಿಡಿತದಲ್ಲಿ ತಾನೆ ಏನಿದೆ? ಸ್ವಂತದ ಬಾಳ್ವೆಯ ಆಯ್ಕೆಗಳ ಹೊರತು.


*********


ಕಾಲ ಅದೆಷ್ಟು ಬೇಗ ಸರಿದು ಹೋಗುತ್ತಿತ್ತು ಅಂತಂದು ಕೊಳ್ಳುವ ಒಂದು ಸಮಯವೂ ಈಶ್ವರಯ್ಯನವರ ಬದುಕಿನಲ್ಲಿತ್ತು. ಆದರದು ಕಿರು ಅವಧಿಯದ್ದಾಗಿದ್ದು ಮಾತ್ರ ಆಶ್ಟರ್ಯಕರವೇನಲ್ಲ. ಏಕೆಂದರೆˌ ಮೊದಲಿನಿಂದಲೂ ಈಶ್ವರಯ್ಯ ಆರಾಮಪ್ರಿಯ ನಿಧಾನಿ. ಬಾಳಿನ ಬಾಲ್ಯದ ಮೊದಲ ದಶಕದಲ್ಲಿ ಕಾಲದ ಬೆಲೆ ಇನ್ನೆಲ್ಲರಂತೆ ಸಹಜವಾಗಿ ಅವರಿಗೂ ಅರಿವಿರಲಿಲ್ಲ. ಆದರೆ ದುಡಿಮೆಗೆ ಸಿದ್ಧವಾಗುವ ಹದಿಹರೆಯದ ಪ್ರಾಯದಲ್ಲಿ ತನ್ನಷ್ಟು ಹಾಗೂ ತನಗಿಂತ ಹೆಚ್ಚು ಪ್ರತಿಭಾವಂತರಾಗಿದ್ದ ಸಮಪ್ರಾಯದವರೊಂದಿಗೆ ಆಟ-ಪಾಠ-ಊಟಯಾವದರಲ್ಲಾಗಲಿ ಸ್ಪರ್ಧಿಸಿಯೆ ಮುಂದುವರೆಯದೆ ಗತ್ಯಂತರವಿಲ್ಲದ ಒತ್ತಡ ಬಿದ್ದಿತ್ತು. ಮುಂದಿನ ದುಡಿಮೆಗೆ ಇಂದಿನ ತಳಪಾಯ ಹಾಕಲು ಶ್ರಮ ಪಟ್ಟು ಓದಿನಲ್ಲಿ ಅಗ್ರ ಸ್ಥಾನ ಕಾಪಾಡಿಕೊಳ್ಳಲು ಹೆಣಗಾಡುತ್ತಲೆ ಅವರ ಬಹುಪಾಲು ವಿದ್ಯಾರ್ಥಿ ಜೀವನದ ಜಂಜಾಟ ಮುಗಿದು ಹೋಗಿತ್ತು.

ಹಾಗಂತˌ ವಿಶೇಷ ಅಸ್ಥೆ ವಹಿಸಿಕೊಂಡೇನೂ ಬಾಳಿನ ಭವಿಷ್ಯದ ಚಿಂತೆ ಮಾಡಿ ಅವರು ಓದಿನವಧಿಯಲ್ಲೆ ವೈದ್ಯರಾಗುವ ಗುರಿ ಸಾಧಿಸಿ ಹೊರಟಿರಲಿಲ್ಲ. ಹಾಗೆ ನೋಡಿದರೆˌ ಆ ತಲೆಮಾರಿನಲ್ಲಿ ಪದವಿ ಪಡೆವ ಹುಡುಗರಿಗಿರುತ್ತಿದ್ದ ಮಹತ್ವಾಕ್ಷಾಂಶೆಯ ಗುರಿ ಬಹುತೇಕ ಕೊನೆಯಾಗುತ್ತಿದ್ದುದೆ ತಂತ್ರಜ್ಞಾನ ಕ್ಷೇತ್ರ ಅಥವಾ ವೈದ್ಯಕೀಯದಲ್ಲಿ. ಓದಿನಲ್ಲಿ ಜಾಣರಾಗಿದ್ದರೂ ಸಹ ಜೀವಶಾಸ್ತ್ರವನ್ನ ಅರಗಿಸಿಕೊಳ್ಳಲಾಗದೆ ಪರದಾಡುವವರು ಇಂಜಿನಿಯರುಗಳಾಗಿಯೂˌ ಗಣಿತವೆಂದರೆ ರೇಜಿಗೆ ಪಟ್ಟುಕೊಳ್ಳುವವರು ವೈದ್ಯರಾಗಿಯೂ ಹೊರ ಹೊಮ್ಮುತ್ತಿದ್ದ ಈ ಶತಮಾನದ ಆರಂಭದ ದಿನಗಳವು. ಗಣಿತವೆಂದರೆ ಸಾಕು ಮಾರು ದೂರ ಹಾರುತ್ತಿದ್ದ ಲೆಕ್ಖಾಚಾರವನ್ನ ಬದುಕಿನ ಯಾವ ಹಂತದಲ್ಲೂ ಅಳವಡಿಸಿಕೊಳ್ಳಲರಿಯದಿದ್ದ ಈಶ್ವರಯ್ಯ ಸಹಜವಾಗಿ ವೈದ್ಯಕೀಯ ಕ್ಷೇತ್ರದತ್ತ ಚಿತ್ತ ಹರಿಸಿದ್ದರು. ಹೆಸರಿನ ಮುಂದೆ ಡಾ ಎಂದು ಕೆತ್ತಿಸಿಕೊಳ್ಳುವ ಆರಂಭಿಕ ತೆವಲುಗಳೆಲ್ಲ ಆದಷ್ಟು ಬೇಗ ತಣಿದು "ಮೊದಲು ಮನುಷ್ಯ"ರಾದ ಕೂಡಲೆˌ ತಾನು ಕಲಿತಿದ್ದ ವಿದ್ಯೆಗಿಂತ ತನಗಂಟಿದ್ದ ಸಾಹಿತ್ಯ ಹಾಗೂ ಸಂಗೀತದ ಗೀಳನ್ನೆ ಬಹುತೇಕ ಬದುಕಾಗಿಸಿಕೊಂಡರು.

ಆಗೆಲ್ಲ ಬದುಕು ಅದೆಷ್ಟು ಅರ್ಥಪೂರ್ಣವಾಗಿತ್ತು. ನೋವು ನಲಿವುಗಳನ್ನ ಹಂಚಿಕೊಳ್ಳಲು ಗೆಳೆಯ-ಗೆಳತಿಯರಿದ್ದರು. ಅಷ್ಟೇನೂ ಸರಳವಾಗಿರದಿದ್ದರೂ ಬದುಕನ್ನೋ ಓಟ ಈಗಿನಷ್ಟು ಕ್ಲಿಷ್ಟವಂತೂ ಆಗಿರಲಿಲ್ಲ. ಮನುಷ್ಯ ಸಂಬಂಧಗಳಿಗೆ - ಮಾನವೀಯ ಸ್ಪರ್ಷಗಳಿಗೆಲ್ಲ ಜೀವಂತಿಕೆಯಿದ್ದ ದಿನಮಾನಗಳವು. ಮನಸಿನ ಆಪ್ತ ವಲಯದಲ್ಲಿ ಮೂಡಿ ಬಂದಿದ್ದ ಸ್ನೇಹದ ಮೊಗ್ಗುಗಳೆದೆಷ್ಟೋ. ಎರಡೆರಡು ಸಲ ಪ್ರೇಮದ ಜಾಲದಲ್ಲೂ ಸೆರೆಯಾಗಿದ್ದಾಗಿತ್ತು. ಆದರೆ ಬಾಳಿನುದ್ದ "ಅಧಿಕೃತ"ವಾಗಿ ಮದುವೆಯಾಗದೆಯೆ ಉಳಿವ ನಿರ್ಧಾರಕ್ಕೆ ಬದ್ಧರಾಗುವ ವೇಳೆ ಬದುಕಿನ ಮೊದಲ ನಾಲ್ಕೂವರೆ ದಶಕ ಸರಿದೆ ಹೋಗಿತ್ತು. ಆ ಹಂತದಲ್ಲಿ ಮತ್ತೆ ಹೊಸಬಳೊಂದಿಗೆ ಹೊಂದಾಣಿಕೆಯ ಜೀವನ ಮಾಡುವ ಉಮೇದು ಅವರಲ್ಲಿ ಉಳಿದಿರಲಿಲ್ಲ. ತಮಗೆ ಅನುಕೂಲವಾಗುವಂತೆ ರೂಪಿಸಿಕೊಂಡ ದಿನಚರಿಯಲ್ಲಿ ಬದುಕುತ್ತಾ ದಿನ ಕಳೆಯುತ್ತಿದ್ದವರಿಗೆˌ ಬೇರೆಯವರ ಅಗತ್ಯಗಳನುಸಾರ ಅದರಲ್ಲಿ ಹೊಸತಾಗಿ ಬದಲಾವಣೆ ಮಾಡಿಕೊಳ್ಳೋದು ಇಷ್ಟವಿರಲಿಲ್ಲ.

ಹಾಗಂತˌ ಒಂಟಿಯಾಗಿಯೆ ಇರುವ ನಿರ್ಧಾರವನ್ನೇನೂ ಮಾಡಿರಲಿಲ್ಲ ಈಶ್ವರಯ್ಯ. ಒಂದು ಮಟ್ಟಿಗೆ ನೆಮ್ಮದಿಯ ಬಾಳ್ವೆ ಮಾಡುವಷ್ಟು ಸಂಪಾದನೆ ಆಗುತ್ತಿತ್ತು. ದುಡ್ಡಿದ್ದರೆ ಸಕಲ ಸೌಲಭ್ಯಗಳೂ ಕೈಗೆಟಕುವ ಹೊಸ ಕಾಲಮಾನ ಆಗಷ್ಟೆ ಕಣ್ತೆರೆದಿತ್ತು. ಅಂತರ್ಜಾಲದ ಮಾಯಾಜಾಲ ತೀರಾ ಶೈಶವದ ಆರಂಭದ ಹಂತದಲ್ಲಿದ್ದ ಕಾಲಮಾನವದುˌ ಆ ಅಂತರ್ಜಾಲದ ಕೊಳಕು ಕೆಸರಿನ ಹೊಂಡಕ್ಕೆ ಬಿದ್ದಷ್ಟೆ ಬೇಗ ಮೇಲೆದ್ದು ಬಂದು ದಡದಂಚಿನಲ್ಲಿ ಮೈ-ಮನಸಿಗಂಟಿದ್ದ ಅಲ್ಲಿನ ಹೇಸಿಗೆಯ ಕೊಳೆಗಳನ್ನ ಕಿತ್ತು ಒರೆಸಿ ಹಾಕುತ್ತಾ ಕೂತಿದ್ದಾಗ ಅದೆ ಕೆಸರ ಕೂಪದಲ್ಲಿ ಆಗಷ್ಟೆ ಬಿದ್ದವಳಾಗಿˌ ಪುನಃ ಪುನಃ ಮುಳುಗೇಳುತ್ತಾ ಕಣ್ಣಿಗೆ ಬಿದ್ದವಳು ಪ್ರಕೃತಿ. ಹುಡುಗಿಯರ ಆಸಕ್ತಿಗಳಿಂದ ಹೊರತಾದ ಗಂಡುಬೀರಿ ವ್ಯಕ್ತಿತ್ವದ ಪ್ರಕೃತಿ ತ್ಯಾಗಿಯಾಗಿ ಪರಿಚಯವಾದವಳುˌ ಕ್ರಮೇಣ ಕೇವಲ ಪ್ರಕೃತಿಯೆನ್ನುವ ಸಲುಗೆ ದಯಪಾಲಿಸಿ ಮತ್ತಷ್ಟು ಆಪ್ತಳಾದಳು.

ಪ್ರೇಮಿಸಲೇನೋ ಇಷ್ಟ - ಆದರೆ ಹೇಳಿಕೊಳ್ಳಲು ಕಷ್ಟ ಅನ್ನುವಷ್ಟು ಪ್ರಾಯದ ಅಂತರ ಇಬ್ಬರ ನಡುವೆ ಇದ್ದುದ್ದರಿಂದ ಈಶ್ವರಯ್ಯ ಆ ಬಗ್ಗೆ ಚಕಾರವೆತ್ತದೆ ಸ್ನೇಹ ಮಾತ್ರ ಬೆಸೆದುಕೊಂಡರು. ತನಗಿಂತ ಹದಿನಾರು ವರ್ಷ ಹಿರಿಯರಾಗಿದ್ದರೂ ಸಮಾನವಯಸ್ಕರಂತೆಯೆ ಅವರೊಂದಿಗೆ ವರ್ತಿಸುತ್ತಿದ್ದ ಪ್ರಕೃತಿಯ ಅಸಡಾ ಬಸಡಾ ವ್ಯಕ್ತಿತ್ವಕ್ಕೆ ಅದೊಂದು ಸಮಸ್ಯೆ ಎನ್ನಿಸಿಯೆ ಇರಲಿಲ್ಲವೇನೋ ಎನ್ನುವಂತಿತ್ತು ಅವಳ ನಡುವಳಿಕೆ. ತಾನು ಬೆಂಗಳೂರಿನಲ್ಲಿದ್ದರೂ ದೂರದ ಹಿಸ್ಸಾರಿನಲ್ಲಿದ್ದ ಪ್ರಕೃತಿಯ ಜೊತೆಗಿನ ವರ್ಚುವಲ್ ಸಂಬಂಧ ಒಂಥರಾ ತೀರಾ ಒಂಟಿಯಾಗಿ ಬೇಸತ್ತಿದ್ದ ಈಶ್ವರಯ್ಯನ ಅನುಕ್ಷಣದ ಗೀಳಾಗಿ ಹೋಯ್ತು. ಇಂತಹ ಒಂದು ಹಂತದಲ್ಲಿಯೆ ಅವರಿಗೆ ಅವಳ ಮೇಲ್ನೋಟದ ತೋರಿಕೆಯ ಡೌಲಿನ ಹಿಂದಿದ್ದ ಅಸಹಾಯಕತೆಯ ಪರಿಚಯವೂ ಅವರಿಗಾಯ್ತು.

ಹದಿನಾರರ ಪ್ರಾಯದಲ್ಲೆ ಬಾಲ್ಯ ವಿವಾಹವಾಗಿ ಹದಿನೇಳರಲ್ಲೆ ಪ್ರಕೃತಿಯನ್ನ ಹುಟ್ಟಿಸಿದ್ದˌ ಪ್ರಕೃತಿಯ ಅಪ್ಪˌ ಅದರ ಮರು ವರ್ಷವೆ ಮತ್ತೊಂದು ಹೆರಿಗೆಯ ಹೊತ್ತಿಗೆ ದೇಹಾರೋಗ್ಯ ವಿಷಮಿಸಿದ ಹೆಂಡತಿಯನ್ನ ಕಳೆದುಕೊಂಡು ವಿಧುರನಾದ. ಹರಿಯಾಣದ ಜಮೀನ್ದಾರಿಕೆಯ ಕುಟುಂಬದ ಸಂಪ್ರದಾಯದಂತೆ ಪ್ರಕೃತಿಗೆ ವರ್ಷ ತುಂಬಿ ಎರಡು ತಿಂಗಳಾಗುವ ಮೊದಲೆ ಮರು ಮದುವೆ ಮಾಡಿಕೊಂಡು ಪುನಃ ಸಂಸಾರಿಯೂ ಆದ. ಮಗುವಾಗಿದ್ದ ಪ್ರಕೃತಿಯ ಮನೆಗೆ ಮಲತಾಯಿ ಬಂದಳುˌ ಅವಳಿಗೂ ಮೂರು ಮಕ್ಕಳಾದವು. ಮನೆಯ ಯಜಮಾನಿಕೆ ಮಲತಾಯಿಯದ್ದಾದ ಮೇಲೆ ಉಟ್ಟುಂಡಿರಲು ಯಾವ ತೊಂದರೆ ಎದುರಾಗದಿದ್ದರೂ ಸಹˌ ಪ್ರೀತಿ-ಮಮತೆ-ಲಾಲನೆ-ಪಾಲನೆಯ ವಿಷಯಗಳಲ್ಲಿ ಸ್ಪಷ್ಟ ತಾರತಮ್ಯ ಕಣ್ಣಿಗೆ ರಾಚುವಂತಿದ್ದುˌ ಅವಳ ಎಳೆಯ ಮನಸು ಮುದುಡಿಕೊಂಡೆ ಬೆಳೆಯಿತು. ತನ್ನದೆ ಮನೆಯಲ್ಲಿ ಪರಕೀಯ ಭಾವನೆಯ ಕೀಳರಿಮೆ ಹೊತ್ತು ಬದುಕುವ ಅನಿವಾರ್ಯತೆ ಪ್ರಕೃತಿಯದ್ದಾಯ್ತು.

ಬೆಳವಣಿಗೆಯ ಹಂತದಲ್ಲಿ ಗಂಡು ಮಕ್ಕಳಿಗೆ ಅಪ್ಪನ ಹಾಗೂ ಹೆಣ್ಣು ಮಕ್ಕಳಿಗೆ ಅಮ್ಮನ ಆರೈಕೆ ಹಾಗೂ ನಿಗಾ ಅತ್ಯಗತ್ಯ. ಅದಿಲ್ಲದಾಗ ಬಾಲ್ಯ ಸೊರಗುತ್ತದೆ. ಸೂಕ್ತ ಪ್ರಾಯದಲ್ಲಿ ಹೆಂಗರುಳ ಪೋಷಣೆ ದೊರೆಯದೆ ಬೆಳೆದ ಪ್ರಕೃತಿಯ ಪ್ರಪಂಚದಲ್ಲಿ ಹೆಣ್ತನಕ್ಕಿಂತ ಗಂಡುಬೀರಿ ನಡುವಳಿಕೆಯೆ ಢಾಳಾಗಿ ಬೆಳೆದುˌ ತನಗೆ ಹೇಗೆ ಬೇಕೋ ಹಾಗೆ ಒರಟೊರಟಾಗಿ ಹುಡುಗಿ ಬೆಳೆದು ಬಲಿತಳು. ಊರ ಉಸಾಬರಿಯ ಪಟೇಲಿಕೆಯ ರಾಜಕೀಯದಲ್ಲೆ ದಿನದ ಬಹು ಸಮಯ ವ್ಯಸ್ಥನಾಗಿರುತ್ತಿದ್ದ ಅವಳಪ್ಪನಿಗೆ ಇದೆಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಹ ಪುರುಸೊತ್ತು ಇದ್ದಂತಿರಲಿಲ್ಲ. 


ಮನೆಗಾತ ನಿತ್ಯ ಬರುತ್ತಿದ್ದುದೆ ಹೆಂಡತಿ ಬೇಯಿಸಿ ಹಾಕುತ್ತಿದ್ದುದ್ದನ್ನ ಮೇಯಲು ಹಾಗೂ ಹೆಂಡತಿ ಜೊತೆಗೆ ಮಲಗೇಳಲು ಅನ್ನುವಂತಿತ್ತು. ಈ ಎರಡು ಸಂಗತಿಗಳಲ್ಲಿ ಅವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಬೀಜದ ಕೋಣಕ್ಕೂ ಪ್ರಕೃತಿಯ ಅಪ್ಪನಿಗೂ ಎಳ್ಳಷ್ಟೂ ವ್ಯತ್ಯಾಸವಿರಲಿಲ್ಲ. ಹೀಗಾಗಿ ಸಹಜವಾಗಿ ಮನೆಯ ಸರ್ವಾಧಿಕಾರವೂ ಪ್ರಕೃತಿಯ ಅಜ್ಜಿಯ ನಂತರ ಅವಳ ಮಲತಾಯಿಯದ್ದೆ ಆಗಿ ಹೋಗಿˌ ತನ್ನ ಮನೆಯಲ್ಲೆ ತಾನು ಅನಾಥಳಂತೆ ಬೆಳೆಯಬೇಕಾಯಿತು.

******

ಕೈ ಫೋನಿನ ಪರದೆಯ ಮೇಲೆ ಇನ್ನೆರಡು ಮೂರು ದಿನಗಳಿಗೆ ಸಾಕಾಗುವಷ್ಟು ಹಾಲು-ಮೊಟ್ಟೆ-ಮೀನು-ಅಕ್ಕಿ-ಹಿಟ್ಟು-ತರಕಾರಿ ಹೀಗೆ ಅಗತ್ಯವಿರುವ ದಿನಸಿಗಳಿಗೆ ಆರ್ಡರ್ ಕೊಟ್ಟು ಆನ್ಲೈನ್ ಪೇಮೆಂಟ್ ಮಾಡಿˌ ಬೆಳಗಿನ ಕಾಫಿ ಹೀರುತ್ತಾ ಹೊಂಜು ತುಂಬಿದ್ದ ಆಗಸವನ್ನೆ ದಿಟ್ಟಿಸುತ್ತಾ ಹೊರಗಿನ ಗಾಳಿ ಅಪ್ಪಿತಪ್ಪಿ ಕೂಡಾ ಒಳ ನುಸುಳಲಾರದಂತೆ ಸೀಲ್ ಮಾಡಲಾಗಿದ್ದ ಗಾಜಿನ ಪರದೆ ಅಳವಡಿಸಿದ್ದ ಬಿಸಿಲುಮಚ್ಚೆಯಲ್ಲಿ ಕೂತು ಬೆಂಗಳೂರಿನ ಚಳಿಯ ಮುಂಜಾವನ್ನ ನೆನೆಯುತ್ತಿದ್ದರು ಈಶ್ವರಯ್ಯ. ಈಗೆಲ್ಲ ಮೊದಲಿನಂತೆ ತಿಂಗಳಿಗಾಗುವ ದೀನಸಿಯನ್ನ ತಂದು ಕೂಡಿಟ್ಟು ಕೊಳ್ಳುವ ಪದ್ಧತಿಯನ್ನ ಅವರು ಕೈ ಬಿಟ್ಟಿದ್ದರು. ದೀರ್ಘ ಕಾಲ ಕಾಪಿಡುವ ಆಹಾರ ಪದಾರ್ಥಗಳಿಗೆಲ್ಲ ಬೆಳವಣಿಗೆಯ ಹಂತದಿಂದಲೆ ಸುರಿಯುವ ರಾಸಾಯನಿಕಗಳು ಅವುಗಳ ಸಂಸ್ಕರಣೆಯ ಹಂತದಲ್ಲಿ ಅಪಾಯಕಾರಿ ಮಟ್ಟ ಮುಟ್ಟಿ ಹಸಿವಿನಿಂದ ಸಾಯುವವರಿಗಿಂತ ತಿಂದು ಕಾಯಿಲೆ-ಕಸಾಲೆಗಳಾಗಿ ಸಾಯುವ ಸಾಧ್ಯತೆಯನ್ನೆ ಹೆಚ್ಚಿಸಿತ್ತು. ಹೀಗಾಗಿˌ ದುಬಾರಿಯಾದರೂ ಸಹ ಹೆಚ್ಚು ಕಾಲ ಸಂರಕ್ಷಿಸಿಡಲಾರದ "ಸಾವಯವ" ಎನ್ನುವ ಹಣೆಪಟ್ಟಿ ಹೊತ್ತ ಆಹಾರ ಪದಾರ್ಥಗಳನ್ನ ಸೀಮಿತ ಪ್ರಮಾಣದಲ್ಲಷ್ಟೆ ತರಿಸಿ ಎರಡು ಮೂರು ದಿನಗಳಲ್ಲೆ ಅವುಗಳ ವಿಲೆವಾರಿ ಮಾಡುವ ಅಭ್ಯಾಸ ಅವರಿಗೆ ರೂಢಿಯಾಗಿತ್ತು.

ಅಲ್ಲಾˌ ಹೇಗಿದ್ದ ಬೆಂಗಳೂರು? ನೋಡ ನೋಡುತ್ತಿದ್ದಂತೆ ಹೇಗಾಗಿ ಹೋಯಿತು! ಮುದ ನೀಡುತ್ತಿದ್ದ ಇಲ್ಲಿನ ಚಳಿಗಾಲ ಈಗ ಅಪ್ಪಟ ಶಿಕ್ಷೆ. ಉಳ್ಳವರು ಅದು ಹೇಗೋ ಒಂದಷ್ಟು ದುಡ್ಡು ಖರ್ಚು ಮಾಡಿ ಇದರಿಂದ ಪಾರಾಗುವ ಮಾರ್ಗ ಕಂಡುಕೊಳ್ಳುತ್ತಾರೆ. ಆದರೆ ಆರ್ಥಿಕ ಸಾಮರ್ಥ್ಯ ಅಷ್ಟಿಲ್ಲದಿರುವ ಕೆಳವರ್ಗದ ಜನತೆಯದ್ದು ಮಾತ್ರ ಹೊಗೆ ತುಂಬಿದ ವಾತಾವರಣದ ಇಬ್ಬನಿ ಸುರಿವ ಮಂಜಿನ ಚಳಿಗಾಲದ ಬೆಂಗಳೂರಿನ ವಿಷಮಯ ವಾತಾವರಣದಲ್ಲಿ ಅಕ್ಷರಶಃ ನಾಯಿಪಾಡು. ಕೇವಲ ಅರ್ಧ ಶತಕದಲ್ಲಿ ಸಹನೀಯವಾಗಿದ್ದ ನಗರದ ವಾತಾವರಣˌ ಮನುಷ್ಯನ ದುರಾಸೆಯ ಫಲದಿಂದ ಈಗ ಅಸಹನೆಗೆ ಅಸಹನೆ ಹುಟ್ಟಿಸುವ ಮಟ್ಟಿಗೆ ಮಾರ್ಪಾಡಾಗಿ ಹೋಗಿದೆ. ಇದನ್ನೆಲ್ಲ ಬಿಸಿ ಕಾಫಿ ಬಟ್ಟಲನ್ನ ತುಟಿಗಾನಿಸಿ ಸೊರ ಸೊರ ಹೀರುತ್ತಾ ಕೂತಿದ್ದ ಕುರ್ಚಿಯಲ್ಲೆ ಮರುಗುತ್ತಾ ಯೋಚಿಸಿದರು ಈಶ್ವರಯ್ಯ.


ಕೈಫೋನಿನ ಪರದೆ ದಿಟ್ಟಿಸಿದರೆˌ ಇಂದಿನ ನಗರದ ಏಕ್ಯೂಐ ಎರಡು ಸಾವಿರದ ಹತ್ತಿರ ಹತ್ತಿರ ಇದೆಯಂತೆ. ಹೊಂಜು ದಾಟದಂತೆ ರೂಪಿಸಲಾಗಿರುವ ಮುಖ ಕವಚ ಧರಿಸದೆ ಯಾರೂ ಸಾರ್ವಜನಿಕವಾಗಿ ಓಡಾಡುತ್ತಿಲ್ಲ. ಗಾಳಿ ಶುದ್ಧೀಕರಣದ ಯಂತ್ರ ಮನೆ ಮನೆಗೂ ತಲುಪಿದೆ. ಈಗದು ಐಶಾರಾಮದ ಲಕ್ಷಣವಾಗುಳಿಯದೆ ಅತ್ಯಗತ್ಯದ ವಸ್ತುವಾಗಿ ಪರಿಣಮಿಸಿದೆ. ಒಂದೆ ಒಂದು ಸಮಾಧಾನದ ಅಂಶವೇನೆಂದರೆˌ ಹತ್ತು ವರ್ಷಗಳ ಹಿಂದೆ ಗಾಳಿಯ ಗುಣಮಟ್ಟ ತೀವೃವಾಗಿ ಕುಸಿದು ಐದು ಸಾವಿರದ ಆಸುಪಾಸು ಮುಟ್ಟಿದ್ದಾಗ ಜೀವವಾಯುವಿನ ಪುಟ್ಟ ಪುಟ್ಟ ಸಿಲೆಂಡರುಗಳನ್ನ ಬೆನ್ನಿಗೆ ಕಟ್ಟಿಕೊಂಡು ಹೋಗುತ್ತಿದ್ದ ಅನಿವಾರ್ಯತೆ ಈಗಿಲ್ಲದಿರೋದು.


ನಗರದಲ್ಲಿದ್ದ ಉದ್ಯಾನವನಗಳಲ್ಲಿ ಮಾತ್ರ ಅಷ್ಟಿಷ್ಟು ಹಸಿರ ಪಸೆ ಉಳಿದಿದ್ದುˌ ದಿನ ಬೆಳಗಾದರೆ ಕನಿಷ್ಠ ಅಲ್ಲಾದರೂ ಮಾಸ್ಕೇರಿಸದೆ ಮುಖ ತೆರೆದುಕೊಂಡಿರಬಹುದು ಎನ್ನುವ ಏಕೈಕ ಕಾರಣದಿಂದ ವಾಯು ವಿಹಾರಕ್ಕೆ ಬರುವ ಜನಸಂದಣಿಯೆ ಕಿಕ್ಕಿರಿದು ತುಂಬಿರುತ್ತದೆ. ನಡು ಹಗಲಿನಲ್ಲಿ ಒಂಚೂರು ಈ ಜನಪ್ರವಾಹ ತಗ್ಗಿರುತ್ತದಾದರೂˌ ಆ ಪಾರ್ಕುಗಳ ಸಾಮರ್ಥ್ಯ ಮೀರುವಷ್ಟು ಜನರು ಸದಾಕಾಲವೂ ಅಲ್ಲಿದ್ದೆ ಇರುತ್ತಾರೆ. ಹೀಗಾಗಿˌ ಈಶ್ವರಯ್ಯ ಮೊದಲಿನಂತೆ ವಾಯುವಿಹಾರಕ್ಕೆ ಪಾರ್ಕಿನತ್ತ ಬಿಜಯಂಗೈಯುವುದನ್ನ ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಬದಲಿಗೆ ಮನೆಯಲ್ಲಿನ ಟ್ರೆಡ್ ಮಿಷನ್ ಮೇಲೆಯೆ ಅವರ ದಿನದ ಲೆಕ್ಖಾಚಾರದ ಹತ್ತು - ಹದಿನೈದು ಕಿಲೋಮೀಟರುಗಳ ನಡುಗೆ ಸಾಗುತ್ತದೆ. ಅದೆ ಅಪಾರ್ಟ್ಮೆಂಟ್ ಸಂಕೀರ್ಣದ ಮತ್ತೊಂದು ಅಂತಸ್ತಿನಲ್ಲಿ ಒಂದು ಎರಡು ಮಲಗುವ ಮನೆಗಳ ಫ್ಲಾಟ್ ಖರೀದಿಸಿˌ ಅದರಲ್ಲಿ ನಿಯಂತ್ರಿತ ವಾತಾವರಣದಲ್ಲಿ ಹೈಡ್ರೋಫೋನಿಕ್ ತಂತ್ರಜ್ಞಾನ ಬಳಸಿ ವಾಣಿಜ್ಯ ಪರಿಮಾಣದಲ್ಲಿ ಸ್ಟೀವಿಯಾ-ಕೇಸರಿ-ಲ್ಯಾವೆಂಡರ್ ಬೆಳೆಗಳ ಸೀಮಿತ ನಗರ ಕೃಷಿಯನ್ನ ಕಳೆದ ಐದು ದಶಕಗಳಿಂದ ರೂಪಿಸಿಕೊಂಡಿದ್ದಾರೆ. ಸಾಲದ್ದಕ್ಕೆˌ ಖಾಲಿ ಬಿದ್ದು ಬಿಸಿಲಿಗೆ ಒಣಗುತ್ತಿದ್ದ ಕಟ್ಟಡದ ಮೇಲ್ಛಾವಣಿಯ ದೊಡ್ಡ ಭಾಗವನ್ನೂ ಸಹ ಸ್ವಂತಕ್ಕೆ ಖರೀದಿಸಿ ಅಲ್ಲಿ ಸಂಪೂರ್ಣ ನಿಯಂತ್ರಿತ ವಾತಾವರಣದ ಮುಚ್ಚಿಗೆಯಿರುವ ಅದರಡಿ ಖಾಸಗಿ ಉದ್ಯಾನವನ ರೂಪಿಸಿಕೊಂಡು - ಸಾಧ್ಯವಿರುವ ಸಸ್ಯಗಳನ್ನೆಲ್ಲ ಬೆಳೆಸಿಕೊಂಡು ವಿವಿಧ ಪ್ರಾಯದಲ್ಲಿ ಚಿಗುರಿ ಬೆಳೆದು ನಿಂತಿರುವ ಅವುಗಳ ನಡುವಿನ ಪುಟ್ಟಪಥದಲ್ಲಿ ಅಡ್ಡಾಡಿ ಅಲ್ಪತೃಪ್ತಿ ಪಡುತ್ತಾರೆ. ಹೀಗಾಗಿˌ ಪಾರ್ಕಿನ ಅನಿವಾರ್ಯತೆಯಿಂದ ಈಶ್ವರಯ್ಯ ಮುಕ್ತ. ಅವರಿಗೆ ಬೇಕಾದ ಆಹ್ಲಾದಮಯವಾದ ಪ್ರಾಣವಾಯು ಇಲ್ಲೆ ಸಿಗುತ್ತದೆ. ಮೊದಲೆ ಹೇಳಿದಂತೆ ಇದೆಲ್ಲ ಉಳ್ಳವರ ವ್ಯವಹಾರ. ಕೈಯಲ್ಲಿ ಕಾಸು ಓಡಾಡುತ್ತಿರೋದರಿಂದˌ ಈಶ್ವರಯ್ಯ ಇದನ್ನೆಲ್ಲ ಖರ್ಚು ಮಾಡಿಯಾದರೂ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಗಳಿಸಿಕೊಂಡಿದ್ದಾರೆ ಅಷ್ಟೆ.

( ಇನ್ನೂ ಇದೆ.)

Wednesday, December 10, 2025

"ನ-ಮೋ ಸ್ತುತಿ."😎

"ನ-ಮೋ ಸ್ತುತಿ."😎


ಈ ತನಕ ವಾಟ್ಸಪ್ಪನ ಫಾರ್ವರ್ಡುಗಳಲ್ಲಿ ಮಾತ್ರ
ಗೋಬರ ಲೀಡರನಾಗಿ ನಾತ ಹೊಡೆಯುತ್ತಿದ್ದˌ
ವಿಶ್ವ"ಕುರು"ವಾಗಿ 
ಮೈ-ಮನಸಿನ ತುಂಬಾ
ದ್ವೇಷದ ಕೀವು ಕಟ್ಟಿಕೊಂಡು
ಕೊಳೆಯುತ್ತಾ ನಾರುತ್ತಿದ್ದ.
ಈಗ ಸಗಣೀಂದ್ರ ಧೂರ್ತನ಼಼
ನವನವೀನ ಭಾರತ ಭಾಗ್ಯ ವಿಧಾತನಾಗಿರುವ
ಭಕ್ತರ ನಾನ್ಬಯಾ"ಲಾಜಿಕಲ್" ಕಬೋದಿಯ
ಮಹಿಮೆಯನ್ನ ಏನೆಂದು ಬಣ್ಣಿಸಲಿ?


ಮಾರಿಕೊಂಡ "ಮಧ್ಯಮ"ಗಳಿಗೆ
ಚೀಪಲಷ್ಟು ಮೂಳೆಗಳನ್ನ
ಕಾಲಕಾಲಕ್ಕೆ ಕಾಲಡಿಗೆ ಎಸೆದೆಸೆದು
ಅ-ನಿಗಳೆಂಬ ದೇಶಕ್ಕಂಟಿರೋ ಅವಳಿ ಶನಿಗಳು
ಸುಣ್ಣಾ ಹರಾಜೆಯೊಬ್ಬನನ್ನ ಛೂ ಬಿಟ್ಟು
ಸಿಂಗಳೀಕನೊಬ್ಬನನ್ನ ಸಿಂಹವಾಗಿಸಿ
ಕಟ್ಟಿರುವ ಜೀಯವರ ಮಹಿಮೆಗಳನ್ನ
ನಾನೇನೆಂದು ವಿವರಿಸಲಿ?


ಕೂಗುಮಾರಿ ಚೂಲುಬಲೆಯಿಂದ ಹಿಡಿದು
ಸಂಘಕಟುಕರ ವಿದ್ವಾಂಸದ್ವಯರಾಗಿರೋ
ಬೋಳೂರು ಕುದರ್ಶನ - ರೋಗಿತಾ ಚಕ್ಕಧೂರ್ತ
ಬಲು ಬಣ್ಣಿಸಿ ವಿವರಿಸುವ
ಐವತ್ತಾರಿಂಚಿನ ಡೊಳ್ಳು ಹೊಟ್ಟೆಯ
ನರಿ ಮುಖದ ಮೋರಿಯ 
ಸಹಸ್ರನಾಮಾವಳಿಯ 
ಅದು ಹೇಗೆ ತಾನೆ ಹಾಡಿ ನಲಿಯಲಿ?


ಇದ್ದಿರದ ರೈಲು ನಿಲ್ದಾಣದಲ್ಲಿ 
ಮಾಡಿರದ ಚಹಾವನ್ನ 
ನಿಂತೆ ಇರದ ರೈಲಿನ ಯಾತ್ರಿಕರಿಗೆ
ನಿಂತ ನಿಂತಲ್ಲೆ ತೊಲ ಚಿನ್ನಕ್ಕೆ 
ಮೂರು ರೂಪಾಯಿ ಇದ್ದ 
"ಬುರೆ ದಿನ"ಗಳಲ್ಲೆ ಕಪ್ಪಿಗೆರಡು ರೂಪಾಯಿ
ದರದಲ್ಲಿ ಮಾರಿದ ಸೋಜಿಗಕ್ಕೆ ಬೆರಗಾಗಲೆ?


ಇನ್ನೂ ತಯಾರಾಗಿರದ ಡಿಜಿಕ್ಯಾಮರಾದಲ್ಲಿ
ಮೂರು ವರ್ಷ ಮೊದಲೆ ತೆಗೆದ ಚಿತ್ರವˌ
ಚಾಲ್ತಿಗೆ ಬಂದಿರದ ಅಂತರ್ಜಾಲದಲ್ಲಿ
ಹತ್ತು ವರ್ಷಗಳ ಹಿಂದೆಯೆ ಕ್ಷಣಾರ್ಧದಲ್ಲಿ
ಸಂಪರ್ಕ ಜಾಲವೆ ಇದ್ದಿರದ ಹಳ್ಳಿಯಿಂದ ದೆಲ್ಲಿಗೆ ಕಳಿಸಿˌ
ಮರುದಿನವೆˌ ಆಗಿನ್ನೂ ಕಪ್ಪು ಬಿಳುಪಿನ ಓಬಿ ರಾಯನ ಕಾಲದಲ್ಲಿದ್ದ
ರಾಜಧಾನಿಯ ಮುಖ್ಯದಿನಪತ್ರಿಕೆಗಳ ಮುಖಪುಟದಲ್ಲಿ
ಬಹುವರ್ಣದಲ್ಲಿ ಅದೆ ಚಿತ್ರವನ್ನ ಅಚ್ಚುಹಾಕಿಸಿದ್ದ
ಪವಾಡವನ್ನ ನೆನೆದು ಪಾವನವಾಗಲೆ?


ನೆಟ್ಟಗೆ ಶಾಲೆಗೆ ಒಂದೆ ಒಂದು ದಿನ ಹೋಗದಿದ್ದರೂ
ಎದೆ ಬಗೆದರೆ ನಾಲ್ಕಕ್ಷರದ ಜ್ಞಾನವಿಲ್ಲದಿದ್ದರೂ
ಸಕಲ ಸಂಗತಿಗಳಲ್ಲೂ ಸರ್ವಜ್ಞನಾಗಿರುವ
ಕಲೆಗಾರಿಕೆಗೆ ಬೆರಗಾಗಲೆ?
ಈಜಲು ತಿಳಿದಿರದಿದ್ದರೂ
ಕೆರೆಗೆ ಹಾರಿ ಮೊಸಳೆ ಮರಿ 
ಹಿಡಿದು ತಂದು ಸಾಕಿದ ಸಾಹಸಕ್ಕೆ ಸೈ ಎನ್ನಲೆ?
ಮೋಡದ ಮರೆಯಲ್ಲಿ ರಾಡರ್ ಕಣ್ಣು ತಪ್ಪಿಸುವ
ಮಹಾನ್ ಸಲಹೆಗೆ ಪೊಡಮೊಡಲೆ?
ಗಠಾರಿನಿಂದ ಗ್ಯಾಸ್ ತೆಗೆದ ತಂತ್ರಜ್ಞಾನಕ್ಕೆ
ತಲೆಬಾಗಲೆ?



ಕ್ಯಾಮರಾಗಳಿಲ್ಲದೆ ಹೆತ್ತ ತಾಯನ್ನೂ ಕಾಣಲು ಹೋಗದ
ಮಾತೃಪ್ರೇಮಕ್ಕೆ ಕರಗಲೆ?
ಛಾಯಾಗ್ರಾಹಕರು ಬಾರದೆ
ಕೇದಾರದ ಗುಹೆಯೊಳಗೆ ಹೂತೋ
ಇಲ್ಲಾ ಕನ್ಯಾಕುಮಾರಿಯ ಬಂಡೆಯ ಮೇಲೆ ಕೂತೋ
ಧ್ಯಾನ ಮಾಡುವ ಪವಾಡಕ್ಕೆ ಮಾರು ಹೋಗಲೆ?
ಬಾಳಿಸಲಾಗದ ತನ್ನ ಷಂಡತನ ಮುಚ್ಚಿಕೊಳ್ಳಲು
ಕಟ್ಟಿಕೊಂಡ ಹೆಂಡತಿಯಿಂದ ದೂರ
ಮನೆ ಬಿಟ್ಟು ಓಡಿ ಬಂದಿದ್ದರೂˌ
ಮದುವೆಯೆ ಆಗಿಲ್ಲ ಇನ್ನೂ ಅಂದಿದ್ದ
ಇಪ್ಪತ್ನಾಕ್ಕು ಕ್ಯಾರೆಟ್ ಸುಳ್ಳಿಗೆ ಮನ ಸೋಲಲೆ?


ಬಡತನ ಇದ್ದ ಕುಟುಂಬದಲ್ಲಿ ಹುಟ್ಟಿ
ಬಾಲ್ಯದಲ್ಲಿ ಈಡೇರಿಸಿಕೊಳ್ಳಲಾಗದ
ಮನದಾಸೆಗಳನ್ನೆಲ್ಲ
ಈಗ ಅಧಿಕಾರ ಪುಗಸಟ್ಟೆ ದಕ್ಕಿರೋವಾಗ
ಕಂಡವರ ಕಾಸಿನ ಖರ್ಚಿನಲ್ಲಿˌ
ದಿನಕ್ಕೊಂದು ಛದ್ಮವೇಷ
ಕ್ಷಣಕ್ಕೊಮ್ಮೆ ಮೇಕಪ್ಪು ಮಾಡಿಕೊಂಡು 
ಆತ್ಮರತಿಯ ಬಹಿರಂಗ ಪ್ರದರ್ಶನವನ್ನ 
ಮಾನಗೆಟ್ಟು ಮಾಡಿ ನಲಿಯುವ 
ತಿರುಪೆ ಶೋಕಿಗೆ ಭೇಷ್ ಅನ್ನಲೆ?



ದಿನ ಬೆಳಗಾದರೆ
ನೆಹರೂ ನಾಮಜಪ ಮಾಡುತ್ತಾˌ
ತನ್ನ ವೈಫಲ್ಯಗಳನ್ನೆಲ್ಲ ಆ ಧೀಮಂತನ
ಬಾಯಿಗೊರಸಿˌ
ಕೇವಲ ಐಟಿ"ಸುಳ್ಳ"ನ್ನೆ ನಂಬಿ
ವಾಟ್ಸಪ್ಪಿನ ಆಸರೆಯಲ್ಲೆ ಉಳಿದು 
ಜೀವಿತಾವಧಿಯ ಕಾಲ ಹಾಕುತ್ತಿರುವˌ
ಅದೆ ನೆಹರು ಕಟ್ಟಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಓದಿ
ಅದೆ ನೆಹರು ಸ್ಥಾಪಿಸಿದ್ಢ ಕಾರ್ಖಾನೆ 
ಸಂಸ್ಥೆ ಬ್ಯಾಂಕುಗಳಲ್ಲಿ ದುಡಿದು
ಅದೆ ನೆಹರು ರೂಪಿಸಿದ್ದ ಪಿಂಚಣಿಯಲ್ಲಿ ಈಗ 
ಕಾಲ ಹಾಕುತ್ತಾˌ
ಮತ್ತದೆ ನೆಹರೂವನ್ನ ವಾಚಾಮಗೋಚರ ಬೈದು
ಉಗಿದು ಉಪ್ಪಿನಕಾಯಿ ಹಾಕುವ ಹುಟ್ಟಾ ಕೃತಘ್ನ
ನಿವೃತ್ತ ತಲೆಮಾಸಿದ ಅಯೋಗ್ಯರ ತಲೆಯೊಳಗಿನ
ಮಾನಸಿಕ ವಿಕೃತಿ ಪ್ರದರ್ಶಿಸುವ ಧೈರ್ಯಕ್ಕೆ
ತಿದಿಯೊತ್ತಿ ತಾನವರ ಹೃದಯದಲ್ಲಿ
ದಿನಕ್ಕೊಂದು ವೇಷ ಹಾಕಿಕೊಂಡು
ಕ್ಷಣಕ್ಕೊಂದು ಮೋಸ ಮಾಡಿಕೊಂಡು
ಮೆರೆಯುವ ಚಾಕಚಾಕ್ಯತೆಗೆ ಮೂಗಿನ ಮೇಲೆ ಬೆರಳಿಡಲೆ?


ನಾನೂ ಪೊಡಮೊಟ್ಟು ಟೆಲಿಪ್ರಾಂಪ್ಟರಿನ
ಪ್ರಾಂಟ್ ಇಲ್ಲದೆ ನೆಹರೂ ಹೊರತು
ಬೇರೊಂದು ಪದ ಉಚ್ಛರಿಸಲರಿಯದ
ಅಸಾಧ್ಯ ಪಾಂಡಿತ್ಯಕ್ಕೆ ಶರಣಾಗಲೆ?
ನಾನೂ "ನ-ಮೋ ನ--ಮೋ ಪ್ರಭು
ವಾಕ್ಯಮನಾತೀತ" ಎಂದು ಎದ್ದಲ್ಲಿ ಬಿದ್ದಲ್ಲಿ
ಸ್ತುತಿಸಿಕೊಂಡಿರುವ ಜೋ಼ಂಬಿಯಾಗಲೆ?
ಆಗಲೆ? ಆಗಲೆ? ಆಗಲೆ?
ಬಾಳಲ್ಲಿ ಅಡ್ಡದಾರಿ ಹಿಡಿದಾದರೂ ಸರಿ
ಭಕ್ತರ ಆರಾಧ್ಯ ದೆವ್ವ ಕಬೋದಿಯಂತೆ ಮುಂದೆ ಸಾಗಲೆ?


Thursday, March 6, 2025

"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ"

"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ"


ಚಿಕ್ಕಂದಿನಿಂದಲೂ ಅಪರೂಪಕ್ಕೆ ಅಲ್ಲಿಲ್ಲಿ ಸರಕಾರಿ ಅಂಬಾಸಡರ್ ಕಾರಿನಲ್ಲಿ ಓಡಾಡುವ ಜಿಲ್ಲಾಧಿಕಾರಿಗಳನ್ನ ಕಾಣುವಾಗ ನನ್ನೊಳಗೆ ಒಂಥರಾ ಆಕರ್ಷಣೆ ಹುಟ್ಟುತ್ತಿತ್ತು. ಕನಿಷ್ಠ ಬಾಗಿಲುಗಳಿಗೂ ಗತಿಯಿಲ್ಲದ ಹಸಿರು ರಂಗಿನ ಟಾರ್ಪಾಲ್ ಟಾಪಿನ ಒರಟು ಜೀಪಿನಲ್ಲಿ ಅವರೆದುರು ವಿನೀತರಾಗಿ ಹೋಗಿ ನಿಲ್ಲುವ ತಹಶಿಲ್ದಾರರಾಗಲಿ - ಅಂತಹದ್ದೆ ಜೀಪಾಗಿದ್ದರೂ ಬಿಳಿಯ ಗಟ್ಟಿಮುಟ್ಟು ಲೋಹದ ಟಾಪು ಹಾಗೂ ಬಾಗಿಲುಗಳಿದ್ದ ಜೀಪಿನಲ್ಲೆ ಬರುತ್ತಿದ್ದ ಉಪ ವಿಭಾಗಧಿಕಾರಿಗಳಾಗಲಿ ಅಂತಹ ಯಾವೊಂದು ಕುತೂಹಲವನ್ನೂ ಕೆರಳಿಸುತ್ತಿರಲಿಲ್ಲ. 


ಆಗೆಲ್ಲ ನನ್ನದು ಶಾಲೆ ಬಿಟ್ಟು ನಿತ್ಯ ಸಾಯಂಕಾಲ ಸಂಜೆ ಪತ್ರಿಕೆಗಳನ್ನ ಜಿಲ್ಲಾಧಿಕಾರಿ ಕಛೇರಿಯಿಂದ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿˌ ಜಿಲ್ಲಾ ನ್ಯಾಯಾಲಯˌ ಜಿಲ್ಲಾ ಅಭಿವೃದ್ಧಿ ಸಹಕಾರಿ ಬ್ಯಾಂಕು ಹೀಗೆ ಸಾಲಾಗಿ ಎಲ್ಲಾ ಕಡೆಯೂ ದೊಗಳೆ ಖಾಕಿ ಚಡ್ಡಿ ಹಾಕಿಕೊಂಡು ಲಡಕಾಸಿ ಸೈಕಲ್ ತುಳಿದುಕೊಂಡು ತೇಲಾಡುತ್ತಾ ಹೋಗಿ ಹಾಕುವ ಕಾಯಕ. ಅಂತಹ ಸನ್ನಿವೇಶದಲ್ಲಿ ಆಗಷ್ಟೆ ತೊಳೆದಿಟ್ಟಂತಿರುತ್ತಿದ್ದ ಕೊಕ್ಕರೆ ಬಿಳಿ ಅಂಬಾಸಡರಣಿಯಲ್ಲಿ ಕಿಟಕಿಯ ಗಾಜುಗಳಿಗೂ ತೆಳು ನೈಲಾನಿನ ಪರದೆ ಇಟ್ಟುಕೊಂಡಿರುತ್ತಿದ್ದ - ಕಾರೊಳಗೆ ಒಂದಲ್ಲ ಅಂತ ಮೂರ್ಮೂರು ಪುಟ್ಟ ನೀಲಿ ಸೀಲಿಂಗ್ ಫ್ಯಾನುಗಳನ್ನ ಸಿಕ್ಕಿಸಿಕೊಂಡಿರುತ್ತಿದ್ದ ಕರ್ಕಶ ಜೀಪಿನ ಸದ್ದಿನ ಮಧ್ಯೆ ನಯ ನಾಜೂಕಿನಲ್ಲಿ ಹೌದೋ ಅಲ್ಲವೋ ಅನ್ನುವಷ್ಟು ಶಬ್ದ ಹೊರಡಿಸುತ್ತಾ ಬರುವ ಅಂಬಾಸಡರಿನ ಒಡಲಿನಿಂದ ಆಸನಗಳ ಬಿಳಿ ತಲೆ ಒರಗುಗಳಿಂದೀಚೆ ಕಛೇರಿಯ ಪೇದೆ ಇಳಿದು ಬಂದು ತೆಗೆಯುತ್ತಿದ್ದ ಹಾಗೆˌ ಬಾಗಿಲಿನಿಂದೀಚೆ ಠಾಕು ಠೀಕಾಗಿ ಇಳಿದು ಟಕ್ ಟಿಕ್ ಷೂ ಸದ್ದೇಳಿಸುತ್ತಾ ಸಾಗುತ್ತಿದ್ದ ಜಿಲ್ಲಾಧಿಕಾರಿಗಳನ್ನ ಕಾಣುವಾಗˌ ನಾನೂ ಹೀಗಾಗಬೇಕು ಅನ್ನಿಸುತ್ತಿದ್ದುದು ಅದೆಷ್ಟು ಸಲವೋ!



ಶಿವಮೊಗ್ಗದ ಹಳೆ ಸೇತುವೆ ಕೆಳಗಿನ ತುಂಗೆ ಹರಿದು ಹೋದಷ್ಟೆ ವೇಗವಾಗಿ ಕಾಲವೂ ಸರಿದು ಹೋಗಿˌ ಓದಿನ ನಿರಂತರತೆಗೆ ಒದಗಿ ಬಂದ ನಾನಾ ವಿಧಗಳ ಅಡೆತಡೆಗಳನ್ನೆಲ್ಲ ದಾಟಿ ಏಗಿ ಕೊಂಡು ಲೋಕದ ಕಣ್ಣಿಗೊಂದು ವೈದ್ಯಕೀಯ ಪದವಿ ರಾಚಿದರೂˌ ನನ್ನೊಳಗಿನ "ಜಿಲ್ಲಾಧಿಕಾರಿ"ಯಾಗುವ ದಾಹ ಕಿಂಚಿತ್ತೂ ಇಳಿದಿರಲಿಲ್ಲ. ಆದರೆ ಜಿಲ್ಲಾಧಿಕಾರಿಯಷ್ಟೆ ಅಲ್ಲ ಅದಕ್ಕಿಂತ ಆಕರ್ಷಕವಾದ ಸರಕಾರಿ ಹುದ್ದೆಗಳು ಇನ್ನೂ ಅನೇಕ ಇವೆ ಅನ್ನುವ ಜ್ಞಾನೋದಯ ಶಿವಮೊಗ್ಗವೆಂಬ ಬಾವಿಯ ಕಪ್ಪೆಯಾಗಿದ್ದವನಿಗೆ ಬೆಂಗಳೂರೆಂಬ ಸಮುದ್ರ ಕಂಡ ಮೇಲಾಗಿತ್ತು.


ಪರಿಶ್ರಮದ ಫಲವಾಗಿ ಕಡೆಗೂ ಭಾರತ ಆಡಳಿತ ಸೇವೆಯನ್ನ ಸೇರಲು ಮತ್ನಾಲ್ಕು ವರ್ಷಗಳು ಹಿಡಿದವು. ಪ್ರಾಯ ಚಿಕ್ಕದಾದರೂ ಸಹˌ ಜವಬ್ದಾರಿ ದೊಡ್ಡದಾಗಿತ್ತು. ಸಿಗುತ್ತಿದ್ದ ಸಾರ್ವಜನಿಕ ಗೌರವ ವ್ಯಕ್ತಿಯಾದ ನನಗಲ್ಲ - ಅದು ಆ ಹುದ್ದೆಯಿಂದ ಆದ ಕೃಪೆ ಅಂತ ಬಹುಬೇಗ ಅರಿತುಕೊಂಡೆ. ಮೌಖಿಕ ಸಂದರ್ಶನದಲ್ಲೂ ಉತ್ತೀರ್ಣನಾದ ಮೇಲೆ ಕೇರಳ-ಮೇಘಾಲಯ-ಪಶ್ಚಿಮ ಬಂಗಾಳ-ಗುಜರಾತ್ ರಾಜ್ಯಗಳ ಸೇವೆಯ ಆಯ್ಕೆ ಇತ್ತು. ಅದ್ಯಾಕೋ ನಿರ್ದಿಷ್ಟ ಕಾರಣಗಳಿಲ್ಲದೆ ಮೇಘಾಲಯದ ಕೇಡರ್ ಆಯ್ದುಕೊಂಡು ಮಸ್ಸೂರಿಯ ತರಬೇತಿ ಅವಧಿಯ ನಂತರ ಅಧಿಕಾರ ಹಂಚಿಕೆಗಾಗಿ ನೇರ ಶಿಲ್ಲಾಂಗಿನ ಹಾದಿ ಹಿಡಿದೆ. 


ಪೂರ್ವ ಖಾಸಿ ಜಿಲ್ಲೆಯ ಉಪ ವಿಭಾಗಧಿಕಾರಿಯಾಗಿ ಮೊದಲ ಹುದ್ದೆ ದೊರಕಿತ್ತು. ಅರಿಯದೂರು - ಅರ್ಥವಾಗದ ಭಾಷೆ - ಅಪರಿಚಿತ ಮುಖಚರ್ಯೆಯ ಮಂದಿಯ ಮಧ್ಯೆ ಅಧಿಕಾರಿಯಾಗಿ ವೃತ್ತಿ ಬದುಕಿನ ಶುರುವಾದ ತಿಂಗಳು ಅಲ್ಲಿ ಜ಼ಡಿಮಳೆಯ ಮಾನ್ಸೂನಿನ ಅಗೋಸ್ತಿನ ಆರಂಭದ ದಿನಗಳು. ಮೇಘಾಲಯದಷ್ಟೆ ಮಳೆ ಕಾಣುವ ಮಲೆನಾಡಿನವನಾಗಿದ್ದವನಿಗೆ ಅಲ್ಲಿನ ಮಳೆಯೇನೂ ರೇಜಿಗೆ ಹುಟ್ಟಿಸಲಿಲ್ಲ. ಹಂಚಿಕೆಯಾಗಿದ್ದ ಭೂತಬಂಗಲೆಯಷ್ಟು ವಿಶಾಲವಾದ ಸರಕಾರಿ ಬಂಗಲೆಯೂ ಅಂತಹ ವಿಶಾಲ ಕೋಣೆಗಳ ವಿದ್ಯಾರ್ಥಿ ನಿಲಯಗಳಲ್ಲೆ ಬಹುಪಾಲು ವಿದ್ಯಾರ್ಥಿ ಜೀವನ ಕಳೆದಿದ್ದವನಿಗೆ ಭಯವನ್ನೂ ಸಹ ಹುಟ್ಟಿಸಲಿಲ್ಲ. ಒಬ್ಬಂಟಿಯಾಗಿದ್ದವನ ಸೇವೆಗೆ ಅಡುಗೆಯವನೂ ಸೇರಿ ಮೂರು ಮಂದಿ ಸರಕಾರಿ ಆಳುಗಳು ಅಲ್ಲಿದ್ದರೂ ಭಾಷೆ ಬಾರದೆ ಪರಸ್ಪರ ಕೈ ಸನ್ನೆ ಬಾಯ್ಸನ್ನೆಯಲ್ಲೆ ಸಂವಹನ ನಡೆಸುವ ಅನಿವಾರ್ಯತೆ ಬೇರೆ ಇತ್ತು.


ಆದಷ್ಟು ಬೇಗ ಖರ್ಚಿಗೆ ಸಾಕಾಗುವಷ್ಟು ಖಾಸಿ ಹಾಗೂ ಗ್ಹಾರೋದಲ್ಲಿ ವ್ಯವಹರಿಸೋದನ್ನ ಕಲಿಯದೆ ವಿಧಿಯಿರಲಿಲ್ಲ. ಸ್ಥಳಿಯ ಶಿಕ್ಷಕರ್ಯಾರಾದರೂ ಈ ನಿಟ್ಟಿನಲ್ಲಿ ಮನೆಪಾಠ ಕೊಟ್ಟು ಸಹಕರಿಸಬಹುದೆ ಅಂತ ಕಛೇರಿಯಲ್ಲಿ ಆಪ್ತ ಕಾರ್ಯದರ್ಶಿಗೆ ಕೋರಿಕೊಂಡಿದ್ದೆ. ದೂರದ "ಮದ್ರಾಸಿ"ನಿಂದ ಬಂದ ಮದರಾಸಿ ಅಧಿಕಾರಿ ಸ್ಥಳಿಯ ಭಾಷೆ ಕಲಿಯಲು ಇಷ್ಟು ಉತ್ಸುಕನಾಗಿರೋದನ್ನ ಕಂಡು ಉತ್ತೇಜಿತನಾದ ಆತನೂ ಆದಷ್ಟು ಶೀಘ್ರವಾಗಿ ಅದಕ್ಕೊಂದು ವ್ಯವಸ್ಥೆ ಮಾಡುವುದಾಗಿ ಹೇಳಿ ಹರ್ಷವನ್ನ ಮುಚ್ಚಿಡಲಾಗದಂತೆ ತನ್ನ ಕಣ್ಣುಗಳೆರಡು ಅದೆಲ್ಲೋ ಆಳದಲ್ಲಿ ಮುಚ್ಚಿ ಹೋಗಿದ್ದಂತ ಮುಖದಲ್ಲಿ ವ್ಯಕ್ತಪಡಿಸಿದ್ದು ಕಂಡಿತು.

***********


ತರಬೇತಿಯ ಅವಧಿಯಲ್ಲಿ ಚೂರುಪಾರು ಖಾಸಿ ಕಲಿಸಿಕೊಟ್ಟದ್ದು ಹೌದಾದರೂ ಸ್ಥಳಿಯರ ಭಾಷಾ ಬಳಕೆಯ ಮುಂದೆ ಅಲ್ಲಿನ ಕಲಿಕೆ ಮೂರು ಕಾಸಿಗೂ ಉಪಯೋಗಕ್ಕೆ ಬರಲಿಲ್ಲ. ಕಛೇರಿಯಲ್ಲಾಗಲಿ ಮನೆಯಲ್ಲಾಗಲಿ ಸಿಬ್ಬಂದಿಗಳೊಡನೆ ಸಂವಹಿಸುವಾಗ ಕೆಲವೊಮ್ಮೆ ನರಳಿದಂತೆ ಅವರಾಡುತ್ತಿದ್ದ "ಬಟ್ಲರ್ ಇಂಗ್ಲೀಷ್"ಗೆ ಕಿರಿಕಿರಿ ಹುಟ್ಟಿ ಅಪ್ರಚೋದಿತವಾಗಿ ಕನ್ನಡದಲ್ಲೆ ಉತ್ತರಿಸಿ ಬಿಡುತ್ತಿದ್ದೆ. ನನ್ನ "ಮದ್ರಾಸಿ" ಭಾಷೆ ಅರ್ಥವಾಗದೆ ಮುಖದಲ್ಲಿ ಇದೆಯೋ ಇಲ್ಲವೋ ಅನ್ನುವಷ್ಟು ಸಣ್ಣದಾಗಿರುತ್ತಿದ್ದ ಅವರ ಕಣ್ಣುಗಳನ್ನ ಪಿಳಿಪಿಳಿ ಬಿಟ್ಟು ಕಕ್ಕಾಬಿಕ್ಕಿಯಾಗುವ ಸರದಿ ಆಗ ಅವರದ್ದಾಗಿರುತ್ತಿತ್ತು.


ಇಡಿ ಮೇಘಾಲಯವೆ ಗುಡ್ಡಗಾಡು ರಾಜ್ಯ. ಅಲ್ಲಿನ ಜನಸಂಖ್ಯೆಯ ನೂರಕ್ಕೆ ನೂರರಷ್ಟು ಮಂದಿ ಬುಡಕಟ್ಟು ಜನಾಂಗೀಯರು. ಇರೋ ನಾಲ್ಕೆ ನಾಲ್ಕು ಜಿಲ್ಲೆಗಳೂ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಳ್ಳುವ ಕಾರಣ ಗುಡ್ಡಗಾಡು ಆಡಳಿತದ ವಿಶೇಷಧಿಕಾರಗಳು ಅಧಿಕಾರಿಗಳಿಗೆ ಇವೆ. ಪೊಲೀಸ್ ಸೇವೆಯಲ್ಲಿ ಖಾಸಿ - ಗ್ಹಾರೋ ಬುಡಕಟ್ಟಿನವರಿಗೆ ಪ್ರಾತಿನಿಧ್ಯ ಅತಿಯಾಗಿ ನೀಡಿದ್ದ ಹೊತ್ತಿಗೆ ಆಡಳಿತ ಸೇವೆಯ ನಿರ್ಣಾಯಕ ಹುದ್ದೆಗಳಲ್ಲಿ ಸ್ಥಳಿಯರ ಪಾತ್ರ ಬಹುತೇಕ ಇಲ್ಲವೆ ಇಲ್ಲ ಅನ್ನುವಷ್ಟು ನಗಣ್ಯ. ಹೀಗಾಗಿ ಗುಂಪುಗಾರಿಕೆ - ಸ್ವ ಬುಡಕಟ್ಟಿನ ಪರ ವಿಶೇಷ ಕಾಳಜಿ ವಹಿಸುವ ಆರೋಪಗಳು ಏಳುವ ಅಪರಾಧ ಪ್ರಕರಣಗಳಲ್ಲಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರೋ ನಾಗರೀಕ ಸೇವಾ ಅಧಿಕಾರಿಗಳನ್ನೆ ತನಿಖಾಧಿಕಾರಿಗಳನ್ನಾಗಿ ತತ್ಕಾಲಿಕ ಹೆಚ್ಟುವರಿ ಜವಬ್ದಾರಿ ವಹಿಸೋದು ಅಲ್ಲಿನ ಕ್ರಮ. ಬೇರೆ ರಾಜ್ಯಗಳ ಹಿನ್ನೆಲೆಯ ಈ ಸ್ಥಳಿಯರಲ್ಲದ ಅಧಿಕಾರಿಗಳು ನಿರ್ಮಮವಾಗಿ ತಮ್ಮ ಕರ್ತವ್ಯ ನಿರ್ವಹಿಸಿಯಾರು ಅನ್ನೋ ಆಶಯದಿಂದ ಮಾಡುವ ಈ ವ್ಯವಸ್ಥೆಯೇನು ಅಂದುಕೊಂಡಷ್ಟು ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತದೆ ಅಂತೇನಲ್ಲ.


ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗುವಂತೆ ಗುರತರ ಅಪರಾಧ ಪ್ರಕರಣಗಳಲ್ಲಿ ಸ್ಥಳಿಯನಲ್ಲ ಅನ್ನುವ ಏಕೈಕ ವೈಶಿಷ್ಟ್ಯದ ಲಾಭ ಪಡೆದುಕೊಳ್ಳುವ ಹೊರಗಿನೂರ ಅಧಿಕಾರಿಗಳು ಇತ್ತಂಡಗಳನ್ನೂ ಸುಲಿದು ಬ್ರಹ್ಮಾಂಡ ಭ್ರಷ್ಟಾಚಾರವೆಸಗಿˌ ದೇಶದ ಆಂತರಿಕ ಭದ್ರತೆ - ಮಾದಕದ್ರವ್ಯ ಕಳ್ಳ ಸಾಗಣೆ - ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದಂತಹ ಪ್ರಕರಣಗಳ ವಿಚಾರಣಾ ಮೇಲುಸ್ತುವರಿಯಲ್ಲಿ ಸಾಕು ಸಾಕೆನ್ನುವಷ್ಟು ಹಣವನ್ನ ಕೊಳ್ಳೆ ಹೊಡೆಯುವುದೂ ಇದೆ. ವ್ಯವಸ್ಥೆಯ ಹುಳುಕು ಹೀಗಿದ್ದರೂ ಸಹ ಹೋಲಿಕೆಯಲ್ಲಿ ಅದು ಹೆಚ್ಚು ನಿಶ್ಪಕ್ಷಪಾತಿ ಅನ್ನುವ ಭ್ರಮೆಯಲ್ಲಿ ಇದೆ ಕ್ರಮವನ್ನ ಪ್ರತಿಯೊಬ್ಬರೂ ನಂಬಿ ಅನುಸರಿಸುತ್ತಿದ್ದರು.


ಪ್ರೊಬೆಷನರಿ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನನಗೂ ಹೀಗೊಂದು ಹೆಚ್ಚುವರಿ ವ್ಯಾಪ್ತಿ ಮೀರಿದ ಅಧಿಕಾರ ಚಲಾಯಿಸುವ ಅವಕಾಶ ಬಂದರೂ ಆಶ್ಚರ್ಯ ಪಡುವಂತಿರಲಿಲ್ಲ. ಮಲೆನಾಡಿನ ಮಲತಂಗಿಯಂತಿದ್ದ ಮೇಘಾಲಯದ ವಾತಾವರಣ ತೀರ್ಥಹಳ್ಳಿಯಂತಹ ಏರುತಗ್ಗಿನ ಭೂಲಕ್ಷಣದ ಊರಿಂದ ಬಂದ ನನಗೆ ಮೊದಲ ದಿನದಿಂದಲೆ ಪರಕೀಯ ಭಾವನೆ ಹುಟ್ಟಿಸಲಿಲ್ಲ. ನಮ್ಮೂರ ಕಾಡುಗಳಲ್ಲಿ ಕಾಡುಪ್ರಾಣಿಗಳೂ ಇದ್ದಾವೆˌ ಆದರೆ ಇಲ್ಲಿನ ಚೈನೀಸುಗಳ ಒಡಹುಟ್ಟಿದಂತಿರೋ ಸಣ್ಣ ಕಣ್ಗಳ ಚಿಂಗ್ ಚಾಂಗ್ ತಳಿಯ ಸ್ಥಳಿಯರು ಅಳಿಯದಿರೋ ಕಾಡಿನಲ್ಲಿ ಒಂದೆ ಒಂದು ವನ್ಯಜೀವಿಯನ್ನೂ ಉಳಿಸಿರದೆ ಕಬಳಿಸಿ ತಿಂದು ತೇಗಿಯಾಗಿದೆ ಅನ್ನುವ ಒಂದೆ ಒಂದು ಪ್ರಮುಖ ವ್ಯತ್ಯಾಸದ ಹೊರತುˌ ಬಾಕಿ ಉಳಿದಂತೆ ಇದು ಮಲೆನಾಡಿನ ಪಡಿಯಚ್ಚಿನಂತೆಯೆ ಭಾಸವಾಯಿತು.


ರಾಜ್ಯದ ರಾಜಧಾನಿಯಲ್ಲೆ ಕರ್ತವ್ಯ ನಿರ್ವಹಿಸಲು ಆರಂಭಿಸಿದ್ದ ಕಾರಣದಿಂದ ಸಹಜವಾಗಿ ಅಲ್ಲಿನ ಸಾಮಾಜಿಕ ವೈವಿಧ್ಯತೆಯ ಕುರಿತು ನಾನು ಆರಂಭಿಕ ಅಜ್ಞಾನಿಯಾಗಿದ್ದೆ. ಆದರದನ್ನ ತೋರಿಸಿಕೊಳ್ಳದೆ ಎದುರಿರುವ ಸ್ಥಳಿಯ ಕೈ ಕೆಳಗಿನ ಅಧಿಕಾರಿಗಳಿಗಳ ಕೈಗೆ ನನ್ನ ಜುಟ್ಟು ಸಿಗದಂತೆ ನನ್ನ ಹುದ್ದೆಯ ಘನತೆಯನ್ನ ಕಾಪಾಡಿಕೊಳ್ಳಲು ಹೆಣಗಾಡುತ್ತಲೆ ನನ್ನ ವೃತ್ತಿ ಬದುಕು ಕಣ್ತೆರೆದಿತ್ತು. ನನ್ನ ಮೇಲಾಧಿಕಾರಿ ಜಿಲ್ಲಾಧಿಕಾರಿಯಾಗಿದ್ದ ನಾಗೇಶ್ವರ ರಾವು ಕಡಪದಿಂದ ಅಲ್ಲಿಗೆ ಬಂದಿದ್ದ ತೆಲುಗು ಬಿಡ್ಡ. ಮೈತುಂಬಾ ಭ್ರಷ್ಟಾಚಾರದ ಬೆರಣಿ ತಟ್ಟಿಸಿಕೊಂಡಿದ್ದ ಆಸಾಮಿ ಹೆಸರಿಗೆ ತಕ್ಕಂತೆ ಹೆಡೆಯಾಡಿಸುವ ನಾಗೇಶ್ವರನೆ ಆಗಿದ್ದˌ ಆದರೆ ಎರಡು ತಲೆಯ ನಾಗ.


ಎದುರಾಗೋವಾಗ ಯಾವತ್ತೂ ಸ್ಥಳಿಯ ರಾಜಕಾರಣಿಗಳ ಹಾಗೂ ಕಛೇರಿಯ ಕೆಳ ವರ್ಗಗಳ ಸಿಬ್ಬಂದಿಗಳ ಜೊತೆಗೆ ನಗುಮೊಗದಿಂದಲೆ ವ್ಯವಹರಿಸುತ್ತಿದ್ದ ರಾವು ಒಳಗೊಳಗೆ ಭಯಂಕರ ಜನಾಂಗೀಯ ದ್ವೇಷಿಯಾಗಿದ್ದ. ಮೇಘಾಲಯದ ಬುಡಕಟ್ಟಿನವರನ್ನ ಚೀನಾದವರೆಂದೆ ಪರಿಭಾವಿಸಿಕೊಂಡಿದ್ದ ನಾಗೇಶ್ವರನ ಸೀಳು ನಾಲಗೆ ಖಾಸಗಿಯಾಗಿ ನಮ್ಮಂತಹ ಹೊರಗಿನˌ ಅದರಲ್ಲೂ ದಕ್ಷಿಣ ಭಾರತೀಯರ ಜೊತೆಗಿನ ಸಂವಾದದಲ್ಲಿ ಸ್ಥಳಿಯರ ಬಗ್ಗೆ ಧಾರಾಳವಾಗಿ ವಿಷ ಕಕ್ಕುತ್ತಿತ್ತು. "ಚೂಡಂಡಿ ಬಾಬು ಆಕಳಿಸ್ತೆ ಕುಕ್ಕಲನು ತಿನೆ ಈ ಕುಕ್ಕಲನು ಇರುವೈ ಸಂವತ್ಸರನನಿಂಚಿ ದಗ್ಗರಗಾ ಚೂಸ್ತುನ್ನˌ ಇಂಕ ಮುರಿಕಿ ವಾಳ್ಳಪೈ ಮೀಕು ತೆಲಯನಿ ಸಂಗತಿಲು ಚಾಲ ಉನ್ನಾಯಿ. ಏಮೈನ ಜಾಗ್ರತಗ ಉಂಡಂಡಿ" ಅಂತ ಪುಗಸಟ್ಟೆ ಜ್ಞಾನವನ್ನ ಅವಕಾಶ ಸಿಕ್ಕಾಗಲೆಲ್ಲಾ ದಯಪಾಲಿಸುತ್ತಿತ್ತು ಪ್ರಾಣಿ.



ನಾಗೇಶ್ವರ ರಾವಿಗೆ ಈ ಪರಿ ಈಶಾನ್ಯ ಭಾರತೀಯರೊಂದಿಗೆ ಅಸಮಧಾನ ಏರ್ಪಡಲು ಮೂಲ ಕಾರಣ ಏನಿರಬಹುದು ಅನ್ನೋ ಪ್ರಶ್ನೆ ಕಡೆಗೂ ಬಗೆಹರಿಯದ ಒಗಟಾಗಿಯೆ ಉಳಿಯಿತು. ಡೆಪ್ಯುಟೇಷನ್ ಮೇಲೆ ಕೇಂದ್ರ ಸೇವೆಯ ನೆಪದಲ್ಲಿ ಡೆಲ್ಲಿಗೆ ವರ್ಗಾವಣೆ ಪಡೆದು ಶಾಶ್ವತವಾಗಿ ಶಿಲ್ಲಾಂಗ್ ಬಿಟ್ಟು ಹೋಗುವವರೆಗೂ ಅವನ ಅಸಹನೆಯ ಮಟ್ಟವಂತೂ ಚೂರೂ ಇಳಿದಿರೋದು ಕಾಣ ಸಿಗಲಿಲ್ಲ. ನನ್ನ ವೃತ್ತಿ ಬದುಕಿನಲ್ಲಂತೂ ಆ ಪರಿ ರೇಜಿಗೆಗೊಳ್ಳಲು ಅವರು ಅರ್ಹರು ಅಂತ ನನಗಂತೂ ಯಾವತ್ತೂ ಅನಿಸಲಿಲ್ಲ. ಸರಳವಾಗಿ ಹೇಳಬೇಕೆಂದರೆ ಇಲ್ಲಿ ಜನಾಂಗೀಯ ದ್ವೇಷಿಯೂ - ಹುಟ್ಟೂರಲ್ಲಿ ಜಾತಿ ತಾರತಮ್ಯಕೋರನೂ ಆಗಿದ್ದ ನಾಗೇಶ್ವರ ರಾವು ಮಾನಸಿಕವಾಗಿ ಒಳಗೊಳಗೆ ಕೊಳೆತಿದ್ದ ಅಷ್ಟೆ.


*********ˌ


ಭಾರತದ ಈಶಾನ್ಯ ರಾಜ್ಯಗಳಲ್ಲಿ ನಾಯಿ ಮಾಂಸದ ಭಕ್ಷಣೆಯ ಚಪಲ ಚಿತ್ತ ಬುಡಕಟ್ಟುಗಳು ಇರೋದು ನಿಜವಾದರೂ ಮೇಘಾಲಯ ಹಾಗೂ ತ್ರಿಪುರ ಸಂಪೂರ್ಣವಾಗಿ ಇದಕ್ಕೆ ಹೊರತು. ಅವಿಭಜಿತ ಬಂಗಾಳದ ವಿಸ್ತರಿತ ಭಾಗವಾಗಿದ್ದ ತ್ರಿಪುರದ ಪಾಳೆಪಟ್ಟಿನಲ್ಲಿ ಅದೆ ಕಾರಣಕ್ಕೆ ಇಂದೂ ಉಳಿದು ಬಂದಿರುವ ಬಂಗಾಳಿ ಸಂಸ್ಕೃತಿಯ ಕಾರಣ ಅದು ನಿಶಿದ್ಧವಾಗಿದ್ದರೆˌ ಮೇಘಾಲಯದ ಬುಡಕಟ್ಟಿನವರೆಂದೂ ನಾಯಿ ಮಾಂಸ ಭಕ್ಷಣೆಯನ್ನ ರೂಢಿಸಿಕೊಳ್ಳುವ ಗೋಜಿಗೆ ಹೋಗಲೆ ಇಲ್ಲ. ಬ್ರಿಟಿಷರ ಕಾಲದ ಈಶಾನ್ಯ ಪ್ರದೇಶದ ರಾಜಧಾನಿ ಇದೆ ಶಿಲ್ಲಾಂಗ್ ಆಗಿತ್ತು. ಇದು ಆ ಪ್ರದೇಶದ ನೈಋತ್ಯ ಭಾಗ. ಪೂರ್ವ ಹಾಗೂ ಆಗ್ನೇಯ ದಿಕ್ಕಿನವರ ಆಚಾರ - ವಿಚಾರˌ ಆಹಾರ ಪದ್ಧತಿಗಳಿಂದ ಇವರದ್ದು ಸಂಪೂರ್ಣವಾಗಿ ವಿಭಿನ್ನ. ಪ್ರದೇಶವಾರು ವಿಭಜನೆಯಾದ ಅಸ್ಸಾಂ ನೂತನವಾಗಿ ಏಳು ವಿಭಿನ್ನ ರಾಜ್ಯಗಳಾಗಿ ಎಪ್ಪತ್ತರ ದಶಕದಲ್ಲಿ ಮೇಲ್ದರ್ಜೆಗೇರಿದಾಗ ಅದರ ಪಾರಂಪಾರಿಕ ರಾಜಧಾನಿಯಾಗಿದ್ದ ಶಿಲ್ಲಾಂಗ್ ನಾಲ್ಕು ಜಿಲ್ಲೆಗಳ ರಾಜ್ಯ ಮೇಘಾಲಯದ ಪಾಲಾಗಿತ್ತು.



ಕನಿಷ್ಠ ಈ ಸರಳ ಸಂಗತಿಯನ್ನೂ ಅರಿಯದ ನಾಗೇಶ್ವರ ರಾವುಗಳಂತಹ ಜಂತುಗಳು ಇಪ್ಪತ್ತಲ್ಲ ಇನ್ನೂರು ವರ್ಷ ಒಂದೆ ಸ್ಥಳದಲ್ಲಿ ಝ಼ಂಡಾ ಊರಿಕೊಂಡಿದ್ದರೂ "ಮಾನವ"ರಾಗೋದು ದೂರದ ಮಾತು. ಸಮಯ ದೊರೆತಾಗಲೆಲ್ಲ ಸ್ಥಳಿಯರನ್ನ ಮನಸ್ಪೂರ್ತಿಯಾಗಿ ಹೀಯ್ಯಾಳಿಸುವ ಚಾಳಿಯಿದ್ದ ಆ ಮೇಲಧಿಕಾರಿಯೆಂಬ ಪ್ರಾಣಿ "ಈ ಕುಕ್ಕಲನು ತಿನೆ...." ಮಂತ್ರವನ್ನ ತಪ್ಪದೆ ಪಠಿಸುವಾಗ "ಅಟ್ಲ ಲೇದಂಡಿ ರಾವುಗಾರುˌ ಈ ಈಶಾನ್ಯಮುಲ ಪ್ರಜಲಂತ ಒಕೆ ಮಾದರಿ ಸಂಸ್ಕಾರವಂತುಲು ಕಾದು. ಅನ್ನಂ ತಪ್ಪ ವಾಟಿ ಮಧ್ಯಲೋ ತಿನೆ ಆಹಾರಂಲೋ ಚಾಲ ತೇಡಲುನ್ನಾಯಿ. ಇಕ್ಕಡ ಈ ಮನಿಷುಲು ಅವು ಮರಿ ಪಂದಿ ಮಾಂಸಲನು ಬಾಗ ಇಷ್ಟಪಡಿ ತಿನ್ತಾರು ತಪ್ಪˌ ಕುಕ್ಕಲನು ಎಪ್ಪಡಕಿ ಕಾನಿ ತಿನಲೇರಂಡಿ." ಅಂತ ತಿದ್ದಬೇಕೆಂದು ಅನಿಸುತ್ತಿದ್ದರೂ. ಎಲ್ಲಿ ನನ್ನ ಈ ತಿದ್ದುಪಡಿಯನ್ನ ವಯಕ್ತಿಕ ಅವಮಾನವನ್ನಾಗಿ ಪರಿಗಣಿಸುವ ಈ ಇತ್ತಲೆ ನಾಗ ಅವಕಾಶ ನೋಡಿಕೊಂಡು ನನ್ನನ್ನೆ ಎಲ್ಲಿ ಕಚ್ಚಿಯಾನೋ ಎಂಬ ವಾಸ್ತವದರಿವಿರುವ ಕಾರಣ ಕಷ್ಟಪಟ್ಟು ಬಾಯಿ ಮುಚ್ಚಿಕೊಂಡು ಸುಮ್ಮನಾಗುತ್ತಿದ್ದೆ.



ಮೇಘಾಲಯದ ಒಟ್ಟು ಜನಸಂಖ್ಯೆಯಲ್ಲಿ ಸರಿಸುಮಾರು ತೊಂಬತ್ತರಷ್ಟು ಮಂದಿ ಖಾಸಿ ಹಾಗೂ ಗ್ಹಾರೋ ಬುಡಕಟ್ಟಿನವರೆ ಆಗಿದ್ದರೂˌ ಹಜೋ಼ಂಗ್-ಕೋಛ್-ರಬಾ಼ದಂತಹ ಅಲ್ಪಸಂಖ್ಯಾಂತರ ಬುಡಕಟ್ಟುಗಳೂ ಸಹ ಅಲ್ಲಿವೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇಖಡಾ ಐವತ್ತರಷ್ಟು ಮಂದಿ ಖಾಸಿಗಳೆ. ಅವರಿಗಿಂತ ಚೂರು ಕಡಿಮೆ ಸಂಖ್ಯೆಯಲ್ಲಿ ಗ್ಹಾರೋಗಳಿದ್ದಾರೆ. ಬ್ರಿಟಿಷರ ಕಾಲದಲ್ಲಿ ಕ್ರೈಸ್ತ ಮಿಷನರಿಗಳಿಗೆ ಮುಕ್ತ ಅವಕಾಶಗಳನ್ನ ಒದಗಿಸಿದ್ದ ಕಾರಣ ಧಾರ್ಮಿಕ ಮತಾಂತರ ನಿರಾತಂಕವಾಗಿ ನಡೆದು ರಾಜ್ಯದ ಮುಕ್ಕಾಲುವಾಸಿ ಮಂದಿ ಕ್ರೈಸ್ತರಾಗಿ ಮತಾಂತರಿತವಾಗಿದ್ದಾರೆ. ಇನ್ನುಳಿದವರಲ್ಲಿ ಅರ್ಧದಷ್ಟು ಮಂದಿ ಬಂಗಾಳಿ ಸಂಸ್ಕೃತಿ ಪ್ರಭಾವದಿಂದ ಕಾಳಿಯನ್ನ ಆರಾಧಿಸೋ ಹಿಂದೂಗಳು. ಅಳಿದುಳಿಯುವ ಹನ್ನೆರಡು ಶೇಖಡಾ ಮಂದಿಯಲ್ಲಿ ವಿಭಜನೆಯ ಕಾಲಕ್ಕೆ ಬಾಂಗ್ಲಾದಿಂದ ಇತ್ತ ವಲಸೆ ಬಂದ ಸಾಬರು ಹಾಗೂ ಹಳೆಯ ಬುಡಕಟ್ಟು ಸಂಸ್ಕಾರಗಳಿಗೆ ಮಾತ್ರ ಬದ್ಧವಾಗಿರುವವರು ಇದ್ದಾರೆ.


ಬುಡಕಟ್ಟು ಯಾವುದಾದರೂನು ಕ್ರೈಸ್ತರಾಗಿ ಮತಾಂತರಿತರಾದ ನಂತರವೂ ಸಹ ಹಳೆಯ ಬುಡಕಟ್ಟು ಆಚರಣೆಗಳನ್ನ ಬಿಟ್ಟುಕೊಡದೆˌ ಅವುಗಳ ಸಂಪ್ರದಾಯಗಳನ್ನೂ ಸಹ ಪಾಲಿಸಿಕೊಂಡು ಬಾಳುವ ವಿಚಿತ್ರ ಧಾರ್ಮಿಕ ಸಂಸ್ಕಾರ ಇಲ್ಲಿನವರದ್ದು. ಪಾರಿವಾಳದ ಮಾಂಸˌ ಬಾತುಕೋಳಿ ಮಾಂಸˌ ಕೋಳಿ ಮಾಂಸ ಹಾಗೂ ಹಂದಿ ಮಾಂಸದ ಖಾದ್ಯಗಳು ಸಾಂಕ್ರಾಮಿಕವಾಗಿರುವ ಇವರ ಅಡುಗೆಮನೆಯಲ್ಲಿ ದನದ ಹೋಲಿಕೆಯ ಮಿಥುನ್ ಮಾಂಸದ ಬಳಕೆಯೂ ಅಷ್ಟೆ ಪ್ರಚಲಿತದಲ್ಲಿದೆ. ಇನ್ನುಳಿದ ಈಶಾನ್ಯ ರಾಜ್ಯಗಳ ಜನರಂತೆ ಸಸ್ಯಾಹಾರಕ್ಕಿಂತ ಜಾಸ್ತಿ ಮಾಂಸಾಹಾರ ತಿನ್ನುವ ಇಲ್ಲಿನ ಸ್ಥಳಿಯ ಜನಾಂಗೀಯರು ನಾಗಾಲ್ಯಾಂಡ್-ಮಣಿಪುರ-ಮಿಜೋರಾಂಗಳ ಬುಡಕಟ್ಟುಗಳು ಇಷ್ಟ ಪಟ್ಟು ಸೇವಿಸುವ ನಾಯಿ ಮಾಂಸವನ್ನ ಇನ್ನುಳಿದ ಭಾರತೀಯರು ಅಸಹ್ಯಿಸುವಂತೆಯೆ ತಿರಸ್ಕಾರದ ದೃಷ್ಟಿಯಿಂದ ನೋಡುತ್ತಾರೆ. ಅವರ ಪ್ರಕಾರ ನೆಚ್ಚಿನ ಸಾಕುಪ್ರಾಣಿ ನಾಯಿಮಾಂಸವನ್ನ ಮೆಲ್ಲೋದು ಮನುಷ್ಯನ ಹೆಣ ತಿನ್ನೋದಕ್ಕಿಂತಲೂ ಹೀನಾಯ. ಇದನ್ನ ಹೊರತುಪಡಿಸಿˌ ಮಾಂಸಹಾರಿ ಅನ್ನುವ ಕಾರಣಕ್ಕೋ ಏನೋˌ ರಾಜ್ಯದ ಘೋಷಿತ ನಾಡ ಪ್ರಾಣಿ ಚುಕ್ಕಿ ಚಿರತೆಯೊಂದನ್ನ ಬಿಟ್ಟು ಬಾಕಿಯುಳಿದ ಮೊಲ-ಚಿಗರೆ-ನರಿ-ಅಳಿಲು-ಕಾನುಕುರಿ-ಕಾಡುಹಂದಿ-ಮುಂಗುಸಿ-ಮೀನು-ಮೊಸಳೆ-ಆಮೆ-ಹಾವು-ಉಡ ಎನ್ನುವ ಯಾವೊಂದು ಬೇಧಭಾವಗಳನ್ನೂ ತೋರದೆ ಎಲ್ಲವನ್ನೂ ಒಂದು ಹಂತಕ್ಕೆ ನುಣ್ಣಗೆ ಕೊಂದು ತಿಂದು ಅವುಗಳ ಕುಲಕ್ಕೆ ಎರವಾಗಿದ್ದರು. ಅವರ ಜಿಹ್ವಾ ಚಾಪಲ್ಯಕ್ಕೆ ಬಲಿಯಾಗದೆ ಹಾಗೂ ಹೀಗೂ ಪ್ರಾಣ ಉಳಿಸಿಕೊಂಡಿರುತ್ತಿದ್ದ ಅಳಿದುಳಿದ ಈ ಪ್ರಭೇದದ ಜೀವಿಗಳುˌ ನಾಳೆ ಹೇಗೋ? ಏನೋ! ಅನ್ನುವ ಅಸ್ಥಿರತೆಯ ಚಿಂತೆಯಲ್ಲೆ ಹೇಗೋ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಭಾವದಲ್ಲಿ ಕಾಲ ಹಾಕುತ್ತಿದ್ದವು.



ಇದ್ಯಾವುದರ ಕನಿಷ್ಠ ಅರಿವೂ ಕೂಡ ಇರದ ನಾಗೇಶ್ವರ ರಾವುಗಳಂತಹ ಸಂಕುಚಿತ ಮನಸ್ಸಿನ ಅಧಿಕಾರಿಯೊಬ್ಬ ರಾಜ್ಯದ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯ ಹಂತದವರೆಗೂ ಭಡ್ತಿಯಾಗಿ ಅಲ್ಲಿ ಎರಡು ದಶಕಗಳ ಕಾಲ ಸಂಸಾರವಂದಿಗನಾಗಿ ಬಾಳಿದ್ದೆ ಆಶ್ಚರ್ಯ. ಅವನ ಈ ಮಾನಸಿಕ ವಿಕೃತಿ ಆಡಳಿತದ ನಿರ್ಧಾರಗಳಲ್ಲಿ ಅದೆಷ್ಟು ಬಾರಿ ಪಕ್ಷಪಾತಿ ತೀರ್ಮಾನಗಳಿಗೆ ಕಾರಣವಾಗಿರಬಹುದು ಅನ್ನೋದನ್ನ ನೆನೆದರೇನೆ ಹೆದರಿಕೆ ಹುಟ್ಟುತ್ತಿತ್ತು. 


ಭಯಂಕರ ಜಾತಿವಾದಿಯಾಗಿದ್ದ ಅವನ ಗುಣಲಕ್ಷಣಗಳನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಅವನಿಗಿಂತ ಮೇಲ್ಜಾತಿಯವನಾಗಿದ್ದ ಕಾರಣ ಅವನನ್ನ ಸರ್ ಎನ್ನದೆ "ರಾವುಗಾರು" ಎನ್ನುವಷ್ಟು ಸಲುಗೆಯನ್ನ ನನಗವನು ಪರಿಚಯವಾದ ಆರಂಭದಲ್ಲೆ ದಯಪಾಲಿಸಿದ್ದ. "ಕನ್ನಡವಾಳ್ಳು ಉಂಡೊಚ್ಚುಗಾನಿˌ ಅದೆಟ್ಲಾಂಡಿ ಇಂತ ಬಾಗ ಮಾ ತೆಲುಗುಲೋ ಮಾಟ್ಲಾಡ್ತಾರು ಮೀರು!" ಅಂತ ನನ್ನ ಭಾಷಾ ಶೀಘ್ರ ಗ್ರಹಿಕೆಯ ಗುಣವನ್ನ ಹಾಡಿ ಹೊಗಳುತ್ತಿದ್ದ. ಆರಂಭದಲ್ಲಿ ಅವರ ಮನೆಗೆ ಆಹ್ವಾನದ ಮೇರೆಗೆ ಒಂದೆರಡು ರಾತ್ರಿಯೂಟಕ್ಕೆ ಅತಿಥಿಯಾಗಿ ಅವನ ಸರಕಾರಿ ನಿವಾಸಕ್ಕೆ ಹೋಗಿದ್ದೆನಾದರೂˌ ಅವನ ದಢೂತಿ ಹೆಂಡತಿˌ ಚೆಲ್ಲು ಚೆಲ್ಲಾಗಿ ವರ್ತಿಸುವ ಇಬ್ಬರು ಹೆಣ್ಣು ಮಕ್ಕಳ ಸಾಂಗತ್ಯ ಏಕೋ ಹಿತವೆನಿಸುತ್ತಿರಲಿಲ್ಲವಾದ ಕಾರಣ ಅನಂತರದ ಆಹ್ವಾನಗಳನ್ನ ಬೇರೆ ಕೆಲಸದ ನೆಪ ಒಡ್ಡಿ ತಪ್ಪಿಸಿಕೊಳ್ಳಲಾರಂಭಿಸಿದೆ. 


ಆಹ್ವಾನ ಮನ್ನಿಸಿ ಹೋಗಿದ್ದ ಆರಂಭದಲ್ಲೊಂದು ಬಾರಿ ಊಟಕ್ಕೂ ಮೊದಲು ಲಾನಿನಲ್ಲಿ ಆರಾಮವಾಗಿ ಕೂತು ಶಿವಾಸ್ ರೀಗಲ್ ಬಾಟಲು ತೆರೆದುˌ ಕುಡಿತದ ಅಭ್ಯಾಸವಿಲ್ಲದ ನನ್ನನ್ನಷ್ಟು ಕಿಚಾಯಿಸಿ - ಒತ್ತಾಯದಿಂದ ಬದುಕಲ್ಲೆ ಮೊದಲ ಬಾಟಲಿ ಬಿಯರ್ ಕುಡಿಯುವಂತೆ ಮಾಡಿ ತನ್ನ ಪ್ರವರ ಪುರಾಣವನ್ನ ತೆಗೆದು ತಲೆ ಚಿಟ್ಟು ಹಿಡಿಸುವಂತೆ ಮಾಡಿದ್ದ. ಅವನ ಬಡತನದ ಬಾಲ್ಯˌ ಕಡಪ ಜಿಲ್ಲೆಯಲ್ಲಿನ ಕುಗ್ರಾಮವೊಂದರಲ್ಲಿ ಕಳೆದಿದ್ದ ಕಳಪೆ ದರ್ಜೆಯ ಜೀವನದ ದಿನಗಳು ಇವೆಲ್ಲವನ್ನೂ ಭಾವುಕವಾಗಿ ಹೇಳಿಕೊಂಡುˌ ಅದೆಷ್ಟೋ ದಿನಗಳ ಕಾಲ ಯಾರೊಂದಿಗೂ ಹೇಳಲಾಗದೆ ಎದೆಯೊಳಗೆ ಉಳಿಸಿಕೊಂಡಿದ್ದ ಸಂಕಟದ ಹೊರೆಯನ್ನ ಕೆಳಗಿರಿಸಿ ನಿಸೂರಾಗಿದ್ದ. ತಕ್ಕಮಟ್ಟಿಗೆ ಬೆಂಗಳೂರಲ್ಲಿ ಕಲಿತಿದ್ದ ತೆಲುಗನ್ನ ಬಳಸಲು ಸಮರ್ಥನಾಗಿದ್ದ ಕಾರಣ ನನ್ನ ಮೇಲವನಿಗೆ ವಿಶೇಷ ವಿಶ್ವಾಸ ಮೂಡಿತ್ತು. ಮೇಲಧಿಕಾರಿ ಅನ್ನುವ ಮುಲಾಜಿಗೆ ಒಳಪಟ್ಟ ನನಗೂ ಅವನ ಬಡಿವಾರಗಳನ್ನ ಸಹಿಸಿಕೊಳ್ಳದೆ ವಿಧಿಯಿರಲಿಲ್ಲ.


**********


ಪ್ರೊಬೆಷನರಿ ಅವಧಿಯ ಕಿರಿಯ ಅಧಿಕಾರಿಯಾಗಿದ್ದರೂ ಸಹ ಹಂಚಿಕೆಯಾಗಿದ್ದ ನನ್ನ ಸರಕಾರಿ ನಿವಾಸ ದಕ್ಷಿಣ ಭಾರತದ ಯಾವೊಬ್ಬ ಹಿರಿಯ ಆಡಳಿತ ಸೇವೆಯ ಅಧಿಕಾರಿಯ ವಸತಿಗೆ ಕಡಿಮೆ ಇಲ್ಲದಷ್ಟು ವಿಶಾಲ ಹಾಗೂ ಭವ್ಯವಾಗಿತ್ತು. ಬ್ರಿಟಿಷರ ಕಾಲದ ಬಂಗಲೆ. ಶಿಲ್ಲಾಂಗ್ ಪ್ರದೇಶದ ರಾಜಧಾನಿಯಾಗಿದ್ದ ಕಾಲದಲ್ಲಿ ತಮ್ಮ ಐಶಾರಾಮಕ್ಕೆ ಕೊರತೆಯಾಗದಂತೆ ವೈಭವೋಪೇತ ಬಂಗಲೆಗಳನ್ನಷ್ಟು ಕಟ್ಟಿಸಿದ್ದ ಬ್ರಿಟಿಷರುˌ ಒಂದೊಮ್ಮೆ ಹೋಗುವಾಗ ಹೊತ್ತೊಯ್ಯಲು ಸಾಧ್ಯವಿದ್ದಿದ್ದರೆ ಖಂಡಿತವಾಗಿ ಇವೆಲ್ಲವನ್ನೂ ಮರೆಯದೆ ಬುಡ ಸಹಿತ ಕಿತ್ತಾದರೂ ಸರಿ ಹಡಗಿನಲ್ಲಿ ಹೇರಿಕೊಂಡೆ ದೇಶ ಬಿಡುತ್ತಿದ್ದರೇನೊ! ತಾವಿಲ್ಲಿ ಸೂರ್ಯ-ಚಂದ್ರರಿರುವ ತನಕ ಅಜರಾಮರ ಅಂತಂದುಕೊಂಡೆ ಕಟ್ಟಿಸಿದ್ದ ಹಾಗಿವೆ ಅವೆಲ್ಲ. ಮುಖ್ಯ ಕಟ್ಟಡದಾಚೆಯ ಕೆಲಸಗಾರರ ವಸತಿಗಳೆ ಮಹಾನಗರಗಳ ಮಾನದಂಡದಲ್ಲಿ ಕಿರುಗಾತ್ರದ ಬಂಗಲೆಗಳಂತಿವೆ ಅಂದರೆ ಊಹಿಸಿ. ಬಂಗಲೆ ಅಂದರೆ ಸಾಕುˌ ಎದುರಿಗೊಂದು ವಿಶಾಲ ಪೋರ್ಟಿಕೋ-ಕಣ್ಣು ಹಾಯಿಸಿದಷ್ಟು ದೂರದ ಹಸಿರಿನ ಲಾನಂಗಳ-ಅದರ ಅಂಚಿನಲ್ಲೊಂದು ನೀಲ ನೀರ ಈಜುಕೊಳ ಇವೆಲ್ಲ ಆ ಬಂಗಲೆಯ ಅಂಕಣದೊಳಗಿವೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ.


ಇಂತಿಪ್ಪ ಬಂಗಲೆಯೊಂದರಲ್ಲಿ ನನ್ನ ಠಿಕಾಣಿ. ಪಶ್ಚಿಮ ಮೂಲೆಯಲ್ಲಿದ್ದ ಇತ್ತೀಚಿನ ದಿನಗಳಲ್ಲಿ ಅದಕ್ಕೆ ಹೊಂದಿಕೊಂಡಂತೆ ಮೊಸಾಯಕ್ ಹಾಕಿಸಿದ್ದ ಶವರ್-ಬಾತ್ ಟಬ್-ಅತ್ಯಾಧುನಿಕ ಕಾಮೋಡ್ ಅಂಟಿಕೊಂಡಿದ್ದ ರೆಡ್ ಆಕ್ಸೈಡಿನ ನೆಲದ ಮೇಲೆ ಬರ್ಮಾ ಟೀಕಿನ ಹಲಗೆಗನ್ನ ಜೋಡಿಸಿ ಅದರ ಮೇಲೆ ಹಾಸುಗಂಬಳಿಯನ್ನ ಠಾಕು ಹೊಡೆದಿದ್ದ ಆ ವಿಶಾಲ ಕೋಣೆ ಯಲ್ಲಿ ನಾನು ನನ್ನ ಹಡಪ ಬಿಚ್ಚಿ ಅದನ್ನೆ ನನ್ನ ಮೊಕ್ಕಾಂ ಆಗಿಸಿಕೊಂಡೆ. ಬ್ರಿಟಿಷರ ಕಾಲದ ಮಾಸ್ಟರ್ ಬೆಡ್ರೂಮೋ ಇಲ್ಲಾ ಮಿನಿ ಬಾಲ್ರೂಮೋ ಆಗಿದ್ದಿರಬಹುದಾದ ಆ ಹಾಲಿಗಿಂತ ವಿಶಾಲವಾಗಿದ್ದ ಕೋಣೆಯ ಹೊರಗೋಡೆಗೆ ಅಂಟಿಕೊಂಡಂತೆ ಮೂವರು ದಢೂತಿಗಳು ಅಗಲಿಸಿ ಹೊರಳಾಡುವಷ್ಟು ದೊಡ್ಡ ಬರ್ಮಾ ತೇಗದ ಮಂಚವಿತ್ತು. ಅದರೆದುರಿಗೊಂದು ದೊಡ್ಡ ಹಳೆಯ ಕಾಲದ ಮೇಜು ಹಾಗೂ ಅದಕ್ಕೆರಡು ದೊಡ್ಡ ಕುರ್ಚಿಗಳಿದ್ದವು. ಮಂಚದ ಎರಡೂ ಪಕ್ಕಗಳಲ್ಲಿ ಕೈಗೆಟುಕುವಂತೆ ರಾತ್ರಿಯ ಮಂದ ದೀಪಗಳು-ಕೋಣೆಯ ನಡು ಮಧ್ಯಕ್ಕೆ ತೂಗು ಬಿಟ್ಟಿದ್ದ ದೀಪದ ಗೊಂಚಲು-ನಾಲ್ಕು ಗೋಡೆಗಳಾಗೂ ನಾಲ್ಕು ಮಂದ್ರ ದೀಪಗಳು ಇದ್ದ ಆ ಕೋಣೆಯನ್ನ ಹಿಂದೆ ಈ ಮನೆಯಲ್ಲಿ ವಾಸವಿದ್ದ ದೆಹಲಿಯ ದೊರೆ ಮಗನಂತಹ ಆಹಾರ ಕಾರ್ಯದರ್ಶಿ ಒಂದಲ್ಲ ಅಂತ ಎರಡೆರಡು ಹವಾನಿಯಂತ್ರಕಗಳನ್ನ ಅಳವಡಿಸಿ ವಾತಾನುಕೂಲಿಯಾಗಿಸಿದ್ದ. 



ಹೀಗಾಗಿ ಹಳೆಯ ಕಾಲದ ಬಾಗಿಲುಗಳಷ್ಟೆ ಎತ್ತರವಾಗಿದ್ದ ತೇಗದ ಫ್ರೇಮಿನ ಕಿಟಕಿಗಳನ್ನ ಬಾಗಿಲು ತೆಗೆಯಲಾಗದಂತೆ ಸೀಲ್ ಮಾಡಿಸಿದ್ದ. ಶುದ್ಧ ನೈಸರ್ಗಿಕ ಗಾಳಿಯ ಉಸಿರೆಳೆದುಕೊಳ್ಳಬೇಕಂತಿದ್ದರೆ ಒಂದಾ ಕೋಣೆಯ ಎರಡೂ ಹೊರ ಅಂಚಿಗೆ ಚಾಚಿಕೊಂಡಿದ್ದ ಬಿಸಿಲು ಮಚ್ಚೆಗೆ ಹೋಗಿ ಅಲ್ಲಿದ್ದ ಕುರ್ಚಿಯ ಮೇಲೆ ಕುಕ್ಕರಿಸಬೇಕಿದೆ. ಅಥವಾˌ ಕೋಣೆಯ ಹೊರಗಿನ ಹಜಾರಕ್ಕೆ ಮರಳಬೇಕು. ಒಟ್ಟಿನಲ್ಲಿ ಅಲ್ಲಿರುವ ಅವಧಿಯಲ್ಲಿ ಹಿರಿ-ಕಿರಿ-ಮರಿಗಳನ್ನುವ ಯಾವುದೆ ಬೇಧಭಾವವಿಲ್ಲದೆ ಸಕಲ ಇಲಾಖೆಗಳ ಸರಕಾರಿ ಬಿಳಿಯಾನೆಗಳೂ ಜನರ ದೋಚಿದ ತೆರಿಗೆಯ ಸುಲಿಗೆಯ ಬಲದಲ್ಲಿ ಸಕುಟುಂಬಿಕರಾಗಿ ಭರ್ಜರಿ ಮೋಜು ಉಡಾಯಿಸಿಕೊಂಡು ಕಾಲ ಹಾಕುವುದರಲ್ಲಿ ನಿಸ್ಸೀಮರಾಗಿದ್ದರು. 



ಆದರಿನ್ನೂ ಬ್ರಹ್ಮಚರ್ಯ ಪರ್ವದಲ್ಲಿದ್ದ ನನಗೆ ಆ ಬಂಗಲೆಯ ವಿಪರೀತ ವೈಶಾಲ್ಯವೆ ಉಸಿರುಗಟ್ಟಿಸುವಂತಿದ್ದುˌ ಇದ್ದುದರಲ್ಲಿ "ಸಣ್ಣದಾಗಿದ್ದ" ಕೋಣೆಯನ್ನ ನನ್ನದಾಗಿಸಿಕೊಂಡು ಉಳಿದಂತೆ ಬಂಗಲೆಯ ಬೇರೆ ಭಾಗಗಳನ್ನ ಬೀಗ ತೆರಿಸಿಯೂ ನೋಡದೆ ನಿರ್ಲ್ಯಕ್ಷಿಸಿ ವಸತಿ ಹೂಡಿದೆ. ಗ್ಹಾರೋ ಬುಡಕಟ್ಟಿನ ಲಾಂಪಾರ್ಗ್ ಹಾಗೂ ಮಾರ್ಟೀನಾ ದಂಪತಿಗಳು ನನ್ನ ಬಾಣಸಿಗರಾಗಿದ್ದರೆˌ ಖಾಸಿಗಳಾಗಿದ್ದ ಶೆಲ್ಡನ್ ಹಾಗೂ ಲಿಂಡಾ ಸ್ವಚ್ಛತೆಯ ಸಿಬ್ಬಂದಿಗಳಾಗಿದ್ದರು. ಹಿಂದೂಗಳಾಗಿದ್ದ ಪೂರ್ಣಿಮಾ ಮತ್ತವಳ ತಂಗಿ ಕ್ರಿಸ್ಟಿನಾ ತೋಟದ ಮಾಲಿಗಳಾಗಿದ್ದರು. ಹೊರಗಿನ ತರಕಾರಿ-ದಿನಸಿ ಸಾಮಾನು ಸರಂಜಾಮು ತಂದುಕೊಡಲು ಅಸ್ಸಾಮಿ ಕೃಷ್ಣದಾಸ್ ಇದ್ದ.



ಬೆಳಗ್ಯೆ ಹಾಸಿಗೆ ಬಿಟ್ಟೆದ್ದಲ್ಲಿಂದ ಜಾಗಿಂಗ್-ವಾಕಿಂಗ್-ತಿಂಡಿ-ಊಟ-ಕಛೇರಿ ಕೆಲಸ-ಕ್ಷೇತ್ರಕಾರ್ಯ ಅಂತ ಬೆಳಗ್ಗಿನಿಂದ ರಾತ್ರಿಯವರೆಗೂ ಹೊರಗಡೆಯೆ ಇರುತ್ತಿದ್ದ ನಾನುˌ ಲಘು ವ್ಯಾಯಾಮ-ಸ್ನಾನ-ರಾತ್ರಿ ನಿದ್ರೆಯ ಹೊರತು ಆ ಬಂಗಲೆಯೊಳಗೆ ಉಳಿಯುತ್ತಿದ್ದುದೆ ಅಪರೂಪ. ಸರಕಾರಿ ರಜೆಯ ದಿನಗಳಲ್ಲೂ ಸಹ ಒಂದಿಲ್ಲೊಂದು ತುರ್ತು ಕರೆಗಳಿಗೆ ಓಡಬೇಕಿದ್ದ ಕಿರಿಯ ದರ್ಜೆಯ ಹಿರಿಯ ಹುದ್ದೆಯ ಅಧಿಕಾರಿಯಾಗಿದ್ದ ಕಾರಣ ಆ ಮನೆಯ ಐಶಾರಾಮಗಳೆಲ್ಲಾ ಸದಾ ಅಲ್ಲಿಯೆ ಇರುವ ಬಹುತೇಕ ಆ ನೌಕರ-ಚಾಕರ ವರ್ಗಗಳಿಗೆ ಮೀಸಲಿಟ್ಟಂತಿತ್ತು. ಅವರ ಸುಖ ಸಮೃದ್ಧತೆಯನ್ನ ಕಂಡಾಗˌ ಎಲಾ ಇವರ! ಇಲ್ಲಿ ನಾನು ಯಜಮಾನಿಕೆ ಮಾಡ್ತಿದ್ದೆನ? ಇಲ್ಲಾ ನನ್ನ ಹೆಸರಲ್ಲಿ ಇವರೆಲ್ಲರ ಯಜಮಾನಿಕೆ ನಡೆಯುತ್ತಿದೆಯ ಅಂತ ನನಗೆ ನಾನೆ ಹೇಳಿಕೊಳ್ತಿದ್ದೆ.


ನನ್ನ ಊಟ ತಿಂಡಿಯ ವಯಕ್ತಿಕ ಖರ್ಚಿನ ಹೊರತು ಬಾಕಿ ಎಲ್ಲವನ್ನೂ ಸರಕಾರ ನೋಡಿಕೊಳ್ತಿತ್ತು. ಅದರಂತೆ ಖರ್ಚುವೆಚ್ಚದ ಓಚರಿಗೆ ನನ್ನ ಸಹಿ ಬಿದ್ದರೆ ಸಾಕಿತ್ತು ಅಷ್ಟೆ.  ನಾನಿಲ್ಲಿಗೆ ಬರುವ ಮೊದಲೂ ಹೀಗೆಯೆ ಇದ್ದ ಈ ವ್ಯವಸ್ಥೆ ನಾನಿಲ್ಲಿಂದ ಹೊರಟ ನಂತರವೂ ಹೀಗೆಯೆ ಮುಂದುವರೆಯಲಿಕ್ಕಿತ್ತು. ಈ ಐಎಎಸ್ ತಳಿಗಳಲ್ಲಿ ಎರಡು ಬಗೆ. ಮೊದಲನೆಯವರದ್ದು ನೇರವಾಗಿ ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಿ ನೇರವಾಗಿ ಉನ್ನತಾಧಿಕಾರಿಗಳಾಗುತ್ತಿರುವವರದ್ದು - ಎರಡನೆಯದಾಗಿ ಸ್ಥಳಿಯ ರಾಜ್ಯಗಳ ಸೇವಾಧಿಕಾರದಲ್ಲೆ ಇದ್ದು ನಾಲ್ಕಾರು ಮುಂಭಡ್ತಿಗಳಾದ ನಂತರ ಐಎಎಸ್ ದರ್ಜೆಗೆ ರಾಜ್ಯಾಡಳಿತದ ಶಿಫಾರಸ್ಸಿನಂತೆ ಉನ್ನತೀಕರಿಸಲ್ಪಟ್ಟವರು. ಈ ಎರಡನೆ ವರ್ಗದವರ ಬಗ್ಗೆ "ದ್ವಿತಿಯ ದರ್ಜೆ"ಯ ಪ್ರಜೆಗಳು ಅನ್ನೋ ತಾತ್ಸಾರದ ಭಾವನೆ ಮೊದಲನೆ ವರ್ಗದ ಆಡಳಿತ ಸೇವೆಯ ಅಧಿಕಾರಿಗಳಲ್ಲಿ ಜನ್ಮಜಾತವಾಗಿವೆ. ಸಾಲದ್ದಕ್ಕೆ ಐಪಿಎಸ್ - ಐಎಫ್ಎಸ್ - ಐಆರ್ಎಸ್ ಅಧಿಕಾರಿ ವರ್ಗದ ಬಗ್ಗೆಯೂ ಈ ಬಗೆಯ ವರ್ಗ ತಾರತಮ್ಯದ ಅಸಡ್ಡೆ ಐಎಎಸ್ಸಿನವರ ವಲಯದಲ್ಲಿ ಧಾರಾಳವಾಗಿವೆ. ತಾವು ಮಾತ್ರ ನೇರ ಸ್ವರ್ಗದಿಂದಿಳಿದು ಬಂದಿರುವ ಅಮೃತ ಸ್ತನ ಪಾನ ಮಾಡಿದವರು! ಉಳಿದವರೆಲ್ಲ ತಮಗಿಂತ ಹೀನ ಕನಿಷ್ಠ ಕ್ರಿಮಿಗಳು ಅನ್ನೋ ಈ ಆಳವಾದ ಮಾನಸಿಕ ವ್ಯಾಧಿಯ ಬಗ್ಗೆ ಹೇಳಿ ಪ್ರಯೋಜನವಿಲ್ಲ.


ಈ ಲಾಂಪಾರ್ಗ್ ಹೈದರಾಬಾದಿನ ಯಾವುದೋ ಸಾಬರ ರೆಸ್ಟೋರೆಂಟಿನಲ್ಲಿ ಅದ್ಯಾವ್ದೋ ಓಬಿರಾಯನ ಕಾಲದಲ್ಲಿ ಬಾಣಸಿಗನಾಗಿದ್ದನಂತೆ. ಹೀಗಾಗಿ ಅಷ್ಟಿಷ್ಟು ದಕ್ಷಿಣ ಭಾರತೀಯ ಖಾದ್ಯಗಳ ಹೆಸರುಗಳನ್ನ ಬಾಯಿಪಾಠ ಮಾಡಿಕೊಂಡಿದ್ದ. ಸಾಬರ ಹೊಟೆಲ್ಲಿನ ಅಡುಗೆಯವನೆ ಆಗಿದ್ದನೋ ಇಲ್ಲಾ ಟೇಬಲ್ ಒರೆಸುವ ಕ್ಲೀನರ್ರೆ ಆಗಿದ್ದನೋ! ಅಂತೂ ಉಪ್ಮಾ-ರೈಸ್ ಬಾತ್-ಇಡ್ಲಿ-ದೋಶೆ-ಪೆಸರಿಟ್ಟು ಅಂತ ಮಾರ್ಟೀನಾ ಮಾಡಿ ಕೊಡುತ್ತಿದ್ದ ದಿನಕ್ಕೊಂದು ಖಾದ್ಯ ವೈವಿಧ್ಯಗಳಿಗೆ ಕೆಲವೊಮ್ಮೆ ತಿನ್ನಲು ಕೂತಾದ ಮೇಲೆ ಅವುಗಳ ಯೋಗ್ಯತಾನುಸಾರ ಗುಣಮಟ್ಟ ಪರೀಕ್ಷಿಸಿ ನಾನೆ ಹೆಸರಿಡಬೇಕಾದ ಪರಿಸ್ಥಿತಿ ಅಲ್ಲಿತ್ತು.


ಅಂತಹˌ ದೋಷಗಳೆ ತುಂಬಿದ್ದ ದೋಸೆ ಚಟ್ನಿಯೆಂದು ಹೆಸರಿಡಲಾಗಿದ್ದ ಅದೆನನ್ನೋ ತಿಂದು "ಕೈಶಾ ಹೈಂ ಶಾಬ್" ಅನ್ನೋ ಅವನ ಹಲ್ಕಿರಿತದ ಪ್ರಶಂಸಾ ಅಪೇಕ್ಷಿತ ಪ್ರಶ್ನೆಗೆˌ ಅವನಿಗರ್ಥವಾಗದ ಕನ್ನಡದಲ್ಲಿ ಅವನಷ್ಟಲ್ಲದಿದ್ದರೂ ಚೂರು ಹಲ್ಕಿರಿದುಕೊಂಡು ಭಾವಕ್ಕೂ ಭಾಷೆಗೂ ಸಂಬಂಧವೆ ಇಲ್ಲದಂತೆ ಕಸ್ತೂರಿ ಕನ್ನಡದಲ್ಲಿ "ಅದಿನ್ನೆಂತೆಂತಾ ಕರ್ಮಾಂತರ ಮಾಡಿ ತಿನ್ನೀಸ್ತೀಯಯ್ಯೋ! ನಿನ್ ಮನೆ ಕಾಯ್ಹೋಗ." ಅಂತ ಮುಖಸ್ತುತಿ ಮಾಡಿ ಆ "ದೋಷ"ದ ದೋಷಾರೋಪಣ ಪಟ್ಟಿಯನ್ನ ಅವನ ಮುಂದೆಯೆ ಒದರಿ ಅಂದು ಕಛೇರಿಗೆ ಬಂದು ಕುರ್ಚಿಯಲ್ಲಿ ಅಂಡೂರಿ ಕೂತು ಸುಧಾರಿಸಿಕೊಳ್ತಿದ್ದೆನಷ್ಟೆˌ ಸೆಕ್ರೆಟರಿಯೇಟಿನಿಂದ ರಾವು ಬಂದು ಕಾಣಲು ಕರೆ ಕಳಿಸಿದ್ದನ್ನ ಪೇದೆ ಹೇಳಿದ. ಆಗಲೆ ಎರಡು ಸಾರಿ ಕರೆ ಮಾಡಿದ್ದನಂತೆ. ಏನೋ ಮುಖ್ಯ ವಿಷಯವೆ ಇರಬೇಕೆಂದರಿತು ಓಡೋಡಿ ಕಣ್ಣಳತೆ ದೂರದಲ್ಲಿದ್ದ ಅವನ ಕಛೇರಿಗೆ ಅಡಿಯಿಟ್ಟೆ. ಆಪ್ತಸಹಾಯಕ ಹೋಗಿ ಉಸುರಿದ್ದೆ ಒಳಗಿನ ಛೇಂಬರಿನಿಂದ ಬುಲಾವು ಬಂತು. "ಚೂಡಂಡಿ ಬಾಬು ರೇಪು ಆ ಜೋನಂಗಿ ಜಾಗಿಲವಾಡು ಮುಂಬೈನಿಂಚಿ ವಸ್ತುಂದಂಟˌ ಎಳ್ಳುಂಡಿ ಆ ಮುಸಲವಾಡು ಕ್ಯಾಬಿನೆಟ್ ಮೀಟಿಂಗ್ ಪೆಟ್ಟಿಂದಿ. ಮೀರು ಕೂಡ ರಾಂಡಿ. ಕೊನ್ನಿ ಪನಿಲುನ್ನಾಯಿ. ಪಾಟು ನಾ ಪಿ ಎಸ್ ಚೆಪ್ಪಿನಟ್ಟು ಫೈಲ್ಸ್ ಕಲಿಗಿ ರಾವಾಲಿ ಗುರ್ತು ಪಟ್ಕೋಂಡಿ" ಅಂದು ಎಂದಿನಂತೆ ಉಭಯಕುಶಲೋಪರಿ ಸಾಂಪ್ರತದ ಸರಸವಾಡದೆ ವಿಪರೀತ ಒತ್ತಡದಲ್ಲಿರುವವನಂತೆ ಮತ್ತೆ ಕಡತವೊಂದರೊಳಗೆ ತಲೆ ತೂರಿಸಿದ.


ಅದು ಸರಿ ಯಾರದು "ಜೋನಂಗಿ ಕುಕ್ಕ"ವಾಡು! ಅದ್ಯಾವುದೋ ಲೋಕಲ್ ಬ್ರೀಡ್ ನಾಯಿ ನಾಳೆ ಬರೋದಕ್ಕೂ - ಅದ್ಯಾವನೋ "ಮುಸಲ"ವಾಡು ನಾಳಿದ್ದು ಕ್ಯಾಬಿನೆಟ್ ಮೀಟಿಂಗ್ ಕರೆಯೋದಕ್ಕೂ ಏನು ಸಂಬಂಧ ಅಂತ ಕ್ಷಣಕಾಲ ಅರಿವಾಗದೆ ತಲೆ ಕೆರೆದುಕೊಂಡೆ. ಆದರೆ ಕ್ಯಾಬಿನ್ನಿನ ಹೊರಗೆ ಬಂದಾಗ "ಸರ್ ಪ್ಲೀಸ್ ಮೇಕ್ ಶ್ಯೂರ್ ಯು ಪುಟ್ ಅಪ್ ದೀಸ್ ಫೈಲ್ಸ್ ಬಿಫೋರ್ ಸಿಎಂ ಆನ್ ಕ್ಯಾಬಿನೆಟ್ ಮೀಟಿಂಗ್ ಡೇ ಆಫ್ಟರ್ ಟುಮಾರೋ!" ಅಂತ ನಾಗೇಶ್ವರನ ಸ್ಥಳಿಯ ಪಿಎಸ್ ತರಬೇಕಿದ್ದ ಕಡತಗಳ ಪಟ್ಟಿ ಕೊಟ್ಟಾಗ ನನ್ನ ಮಂಡೆಯೊಳಗಿನ ಟ್ಯೂಬ್ ಲೈಟ್ ಫಕ್ಕನೆ ಹೊತ್ತಿಕೊಂಡಿತು. ಅಯ್ಯೋ ಈ ನಾಗೇಶ್ವರನ ಮೆದುಳಲ್ಲಿರೋ ವೃಷಭಾವತಿ ತೀರ್ಥವನ್ನ ಮರೆತೆ ಬಿಟ್ಟಿದ್ದೆನಲ್ಲ! ಅಂತ ನನ್ನ ಅಜ್ಞಾನಕ್ಕೆ ನಾನೆ ಹಳಹಳಿಸಿ ಮರುಗಿದೆ.


( ಸಶೇಷ.)

Tuesday, August 6, 2024

ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚಃ.

"ಅದ್ವೈತ* ಸಿದ್ಧಾಂತ ಜಗತ್ತಿನ ಪ್ರಾಚೀನತಮ ಅದ್ವಯ ( non-dualistic ) ಸಿದ್ಧಾಂತಗಳಲ್ಲಿ ಪ್ರಮುಖವಾದದ್ದು. 'ಅದ್ವೈತ' ಎಂದೊಡನೆ ಶ್ರೀ ಆದಿ ಶಂಕರಾಚಾರ್ಯರ ಹೆಸರು ಪ್ರಸ್ತಾಪಿಸಲ್ಪಡುತ್ತದೆ. ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ತ್ವಿಕ ನೆಲೆಗಟ್ಟನ್ನು ಒದಗಿಸಿ ಕೊಟ್ಟು, ಅದನ್ನು ದರ್ಶನದ ಮಟ್ಟಕ್ಕೆ ಕೊಂಡಯ್ದು ಪ್ರಚುರ ಪಡಿಸಿದವರು ಆದಿ ಶಂಕರರು. ಹಾಗೆಂದು ಶಂಕರರ ಮೊದಲು ಅದ್ವೈತ ಸಿದ್ಧಾಂತವಿರಲಿಲ್ಲವೆಂದಲ್ಲ. ಶಂಕರರು ಗೌಡಪಾದರ ಪರಂಪರೆಗೆ ಸೇರಿದ ಗೋವಿಂದ ಭಗವತ್ಪಾದರ ಶಿಷ್ಯರು. ಹಾಗಾಗಿ ಶಂಕರರಿಗಿಂತಲೂ ಮೊದಲು ಅದ್ವೈತ ಸಿದ್ಧಾಂತವು ಉದಯಿಸಿತ್ತೆಂದೂ, ಈ ಪರಂಪರೆಯಲ್ಲಿ ಅನೇಕ ಆಚಾರ್ಯರುಗಳು ಆಗಿಹೋಗಿದ್ದರೆಂದೂ ಹೇಳಬಹುದಾಗಿದೆ. 'ಅದ್ವೈತ'ವೆಂದರೆ ಎರಡಿಲ್ಲದ್ದು. ಅಂದರೆ 'ಒಂದೆ' ಆಗಿರುವುದು. ಜೀವಿಯಲ್ಲಿರುವ ಆತ್ಮನೂ, ಪರಮ ಸತ್ಯವಾದ ಬ್ರಹ್ಮ ಚೈತನ್ಯವೂ ಒಂದೆ ಆಗಿರುವುದೆಂದು ಅದರ ಸಾರ. ಈ ರೀತಿಯ ಭೇದವನ್ನು ತಿರಸ್ಕರಿಸಿರುವ ಕಾರಣ ಈ ಸಿದ್ಧಾಂತವನ್ನು ಅಭೇದ ಸಿದ್ಧಾಂತವೆಂದೂ ಕರೆಯಲಾಗುತ್ತದೆ.



ಅದ್ವೈತ ದರ್ಶನ ಇತಿಹಾಸ
ಪೀಠಿಕೆ :-
ಅದ್ವೈತ ದರ್ಶನ ೧ ( ಚರ್ಚೆ )

ಅದ್ವೈತ ಸಿದ್ಧಾಂತವು, ಪ್ರಸಿದ್ಧಿ ಮತ್ತು ಜನಪ್ರಿಯತೆ ಪಡೆದ ದರ್ಶನ. ಅದ್ವೈತವೆಂದರೆ ಎರಡಿಲ್ಲದ್ದು - ಒಂದದೆ ಎಂದು ಅರ್ಥ. ಸುಮಾರು ಕ್ರಿ.ಪೂ. ೮೦೦ -೩೦೦ ವರ್ಷಗಳ ಹಿಂದಿನ ಉಪನಿತ್ತುಗಳಲ್ಲಿ ಅದ್ವೈತ ಪರ ವಾಕ್ಯಗಳು ಸಾಕಷ್ಟಿವೆ. ಉದಾಹರಣೆಗೆ: "ಸರ್ವಂ ಖಲ್ವಿದಂ ಬ್ರಹ್ಮ" ; "ಆತ್ಮೈವೇದ ಸರ್ವಂ" ; "ಅಯಮಾತ್ಮಾಬ್ರಹ್ಮ;" ; "ಬ್ರಹ್ಮ"ವೇದ ಬ್ರಹ್ಮೈವ ಭವತಿ" ; ಇತ್ಯಾದಿ. ಇವುಗಳ ಆಧಾರದಿಂದ, ಒಂದು ವ್ಯವಸ್ಥಿತವಾದ ದರ್ಶನವನ್ನು ರೂಪಿಸುವ ಕೆಲಸ ಆಗಿರಲಿಲ್ಲ. ಸುಮಾರು ಕ್ರಿ. ಶ. ೫೦೦ ರ ರಲ್ಲಿ ಬದುಕಿರಬಹುದಾದ , ಗೌಡಪಾದ ಮುನಿಗಳು, ಮಾಂಡೂಕ್ಯ ಕಾರಿಕೆಯ ಮೂಲಕ ಮೊಟ್ಟ ಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಮತ್ತು ದೃಢವಾಗಿ ಪ್ರತಿಪಾದಿಸಿದರು. ಗೌಡಪಾದರ ಶಿಷ್ಯರು ಗುರು ಗೋವಿಂದ ಭಗವತ್ಪಾದರು. ಅವರ ಶಿಷ್ಯರು ಶ್ರೀ ಶಂಕರರು. ಗೋವಿಂದ ಭಗವತ್ಪಾದರು "ರಸತಂತ್ರ"ವೆಂಬ ರಸಾಯನ ಶಾಸ್ತ್ರದ ಗ್ರಂಥವನ್ನು ಮಾತ್ರ ರಚಿಸಿದ್ದಾಗಿ ತಿಳಿದು ಬರುತ್ತದೆ.


ಶ್ರೀಶಂಕರಾಚಾರ್ಯರು ( ಕ್ರಿಶ.೭೮೮ - ೮೨೦. ) ಒಬ್ಬ ಅದ್ಭುತ ವ್ಯಕ್ತಿ . ಕೇರಳದ ಕಾಲಡಿಯಲ್ಲಿ ಜನಿಸಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತವನ್ನು ಸುತ್ತಿ ತಮ್ಮ ತರ್ಕ ಶಕ್ತಿಯಿಂದ ಪ್ರತಿವಾದಿಗಳನ್ನು ಸೋಲಿಸಿ, ಅದ್ವೈತದ ಧ್ವಜವನ್ನು ಎತ್ತಿ ಹಿಡಿದವರು. ಅವರು ಬದುಕಿದ್ದು ಕೇವಲ ೩೨ ವರ್ಷಗಳ ಕಾಲ ಮಾತ್ರವಾದರೂ, ಪ್ರತಿಯೊಂದು ಕ್ಷಣವನ್ನೂ, ಸಾರ್ಥಕ ಪಡಿಸಿಕೊಂಡವರು.


ಅವರ ಬಗೆಗೆ ಜನಶ್ರುತಿ ಹೀಗಿದೆ :

ಅಷ್ಟವರ್ಷೇ ಚತುರ್ವೇದೀ 
ದ್ವಾದಶೇ ಸರ್ವಶಾಸ್ತ್ರ ವಿತ್ |
ಷೋಡಶೇ ಕೃತವಾನ್ ಭಾಷ್ಯಂ 
ದ್ವಾತ್ರಿಂಶೇ ಮುನಿರಭ್ಯಗಾತ್ ||


ಅಂದರೆ:-
ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, 
ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, 
ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು 
ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- 
ಎಂದರೆ ಹೊರಟು ಹೋದರು.


ಅವರ ಅತ್ಯಂತ ಪ್ರಸಿದ್ಧವಾದ ಕೃತಿ ಬ್ರಹ್ಮ ಸೂತ್ರ ಭಾಷ್ಯ. ತಾರ್ಕಿಕ ಸಮಂಜಸತೆ, ಉಜ್ವಲ ದಾರ್ಶನಿಕ ಪ್ರತಿಭೆ, ಮನೋಹರ ಶೈಲಿಗಳ ಸಂಗಮ ಅದು. ಅದೊಂದು ಅಮೋಘ ಕೃತಿ. ಹಾಗೆಯೆ ಉಪನಿಷತ್ತು ಮತ್ತು ಭಗವದ್ಗೀತೆಗಳ ಮೇಲಿನ ಅವರ ಭಾಷ್ಯಗಳೂ ಅದರ ಸರಳ ನಿರೂಪಣೆ, ಅಸಾಧಾರಣ ತರ್ಕಕ್ಕೆ ಪ್ರಸಿದ್ಧಿ ಮತ್ತು ಜನಪ್ರಿಯತೆ ಪಡೆದಿದೆ. ಈ ಮೇಲಿನ ಮೂರು ವಿಷಯಕ್ಕೆ ಪ್ರಸ್ಥಾನತ್ರಯವೆಂದು ಹೆಸರು. ಅವರು ಪ್ರಸ್ಥಾನತ್ರಯದ ಮೊದಲ ಭಾಷ್ಯಕಾರರೆಂದು ಹೆಸರು ಪಡೆದಿದ್ದಾರೆ. ಅಲ್ಲದೆ ಅವರು "ಆತ್ಮ ಬೋಧೆ," ಮೊದಲಾದ ಅನೇಕ ಗ್ರಂಥಗಳನ್ನೂ ಸ್ತೋತ್ರಗಳನ್ನೂ ರಚಿಸಿದ್ದಾರೆ. ಅವರ ಶಿಷ್ಯರಾದ ಮಂಡನ ಮಿಶ್ರರು ಅವರ ಸಮಕಾಲೀನರಾದ ಮತ್ತೊಬ್ಬ ಅದ್ವೈತಿ. ಅವರು ಸುರೇಶ್ವರಾಚಾರ್ಯರೆಂದೂ - ವಾರ್ತಿಕಕಾರರೆಂದೂ ಪ್ರಸಿದ್ಧಿ. ಶಂಕರ ಭಾಷ್ಯಕ್ಕೆ ಟೀಕೆ - ವಾರ್ತಿಕವನ್ನು ಬರೆದಿದ್ದಾರೆ. 


ಶಂಕರರ ಇನ್ನೊಬ್ಬ ಶಿಷ್ಯರಾದ ಪದ್ಮಪಾದರು ಬ್ರಹ್ಮಸೂತ್ರ ಭಾಷ್ಯದ ಮೇಲೆ ಪಂಚಪಾದಿಕಾ ಎಂಬ ವ್ಯಾಖ್ಯಾನವನ್ನು ರಚಿಸಿದˌ ಶಂಕರ ಪೂರ್ವ ಯುಗ ಸಂಪಾದಿಸಿ ನಂತರ ಬಂದ ವಿದ್ಯಾರಣ್ಯರ "ಪಂಚದರ್ಶಿ" ಅತ್ಯಂತ ಜನಪ್ರಿಯ ಕೃತಿ. ಅದ್ವೈತ ದರ್ಶನವನ್ನು ಶಂಕರ ಪೂರ್ವ ಯುಗ ; ಶಂಕರ ಯುಗ ; ಶಂಕರೋತ್ತರ ಯುಗವೆಂದು ವಿಂಗಡಿಸುತ್ತಾರೆ. ಗೌಡಪಾದ ಮುನಿಗಳು ಮತ್ತು ಗೋವಿಂದಪಾದ ಭಗವತ್ಪಾದರು ಬುನಾದಿ ಹಾಕಿದ ದರ್ಶನವನ್ನು ಶಂಕರರು ಉತ್ತುಂಗ ಸ್ಥಿತಿಗೆ ತಲುಪಿಸಿ ಸ್ಪಷ್ಟರೂಪ ಕೊಟ್ಟರು. ನಂತರದ ಯುಗದಲ್ಲಿ ಶಂಕರರ ಅಭಿಪ್ರಾಯದ ಬಗೆಗೆ ವಾದ ವಿವಾದ ಭಿನ್ನಾಭಿಪಾಯಗಳ ಕೃತಿಗಳು ಉದಯಿಸಿದವು.



ಗೌಡಪಾದರು - ಗೌಡಪಾದ ಕಾರಿಕೆಯ ಸಾರಾಂಶ :


ಗೌಡಪಾದರ ಮಾಂಡೂಕ್ಯ ಕಾರಿಕೆ ಅದ್ವೈತ ದರ್ಶನದ ಗ್ರಂಥ; ೧೧೨ ಶ್ಲೋಕಗಳ ಪುಟ್ಟ ಗ್ರಂಥ. ಮಾಂಡೂಕ್ಯೋಪನಿಷತ್ತಿನ ಹನ್ನೆರಡು ( ೧೨ ) ವಾಕ್ಯಗಳ ವ್ಯಾಖ್ಯಾನ ಎನ್ನಬಹುದು. 


ಈ ಗ್ರಂಥದಲ್ಲಿ ನಾಲ್ಕು ಅಧ್ಯಾಯಗಳಿವೆ ಅವು : 

೧)ಆಗಮ ಪ್ರಕರಣ 
೨) ವೈತಥ್ಯ ಪ್ರಕರಣ 
೩) ಅದ್ವೈತ ಪ್ರಕರಣ 
೪ ) ಅಲಾತ ಶಾಂತಿ ಪ್ರಕರಣ.

ಈ ಪ್ರಕರಣಗಳಲ್ಲಿ ಮುಖ್ಯವಾಗಿ ಈ ಕೆಳಗಿನ ವಿಚಾರಗಳನ್ನು ಮಂಡಿಸಲಾಗಿದೆ:


ಅವಸ್ಥಾತ್ರಯ ವಿಚಾರ :-
ಜಾಗ್ರತ್ (ಎಚ್ಚರ), ಸ್ವಪ್ನ (ಕನಸು), ಸುಷುಪ್ತಿ (ಗಾಢ ನಿದ್ದೆ) ಇವು ಮೂರು ಅವಸ್ಥಾತ್ರಯಗಳು.  ಎಚ್ಚರದ, ಕನಸಿನ, ಪೂರ್ಣನಿದ್ರೆಯ ಸ್ಥಿತಿಗಳು. ಕನಸಿನಲ್ಲಿರುವಾಗ - ಕನಸು - ಅನುಭವ ಸತ್ಯವಾಗಿರುತ್ತದೆ. ಆಗ ಎಚ್ಚರ ಸುಳ್ಳು ; ಎಚ್ಚರವಾಗಿದ್ದಾಗ ಕನಸು ಸುಳ್ಳು ; ಇವೆರಡೂ ನಿದ್ದೆಯಲ್ಲಿ ಇಲ್ಲವೆ ಇಲ್ಲ. ಸತ್ಯಕ್ಕೆ ಅನುಭವವೆ ಆಧಾರವಾದ್ದರಿಂದ, ಕನಸಿನಲ್ಲಿ ಕಂಡದ್ದು ಮತ್ತು ಎಚ್ಚರದಲ್ಲಿ ಕಂಡದ್ದು ಸಮನಾಗಿದೆ ( ಮಿಥ್ಯೆ - ಸುಳ್ಳು. ). ಸತ್ಯವು ತ್ರಿಕಾಲಾಭಾದಿತವಾಗಿರಬೇಕು ( ಈ ಮೂರು ಕಾಲಗಳಲ್ಲಿ ಆಭಾದಿತ -ಭಾದಿತವಾಗಬಾರದು - ಮಿಥ್ಯೆಯಾಗಬಾರದು. )ˌ ಆತ್ಮನಿಗಿಂತ ಭಿನ್ನವಾದುದು ( ಬೇರೆಯಾದುದು. ) ಯಾವುದೂ ಇಲ್ಲ. ಆತ್ಮನಿಗಿಂತ ಬೇರೆಯಾಗಿರುವುದೇನಿದ್ದರೂ ಅದು ಮಿಥ್ಯೆ ( ಏನೊಂದು ಅತ್ಮನಿಗಿಂತ ಬೇರೆಯಾಗಿರಲು ಸಾಧ್ಯವಿಲ್ಲ, ಭಗವದ್ಗೀತೆಯ ಸಾರ. ). ಆದ್ದರಿಂದ ಮಿಥ್ಯೆಯು ನಮ್ಮ ಅಂತಃಕರಣದ ಜಗತ್ತಿಗೆ ಹೊರತು ಎಚ್ಚರದ ಕಾಣಿಸುವ ಜಗತ್ತಿಗೆ ಅಲ್ಲ.



ಅಜಾತಿ ವಾದ:-

ಗೌಡಪಾದರ ಇನ್ನೊಂದು ಪ್ರಸಿದ್ಧ ಸಿದ್ಧಾಂತವೆಂದರೆ, ಅಜಾತಿವಾದ. ಅಜಾತಿ ಎಂದರೆ ಅನುತ್ಪತ್ತಿ . ಹುಟ್ಟದೆ ಇರುವುದು; ಅಸ್ತಿತ್ವವು ( ಇದೆ ಎಂಬುದು. ) ಆತ್ಮಕ್ಕೆ ಮಾತ್ರ ಇರೋ ಗುಣ. ಹಾಗಾಗಿ ಯಾವುದೂ - ಯಾವ ಭಾವವೂ ಹುಟ್ಟಿಲ್ಲ. ಯಾವ ಜೀವವೂ ಹುಟ್ಟುವುದಿಲ್ಲ. ಇವನ ಜನ್ಮಕ್ಕೆ ಕಾರಣವೆ ಇಲ್ಲ. ಯಾವದೂ ಹುಟ್ಟುವುದೆ ಇಲ್ಲ. ಬ್ರಹ್ಮಕ್ಕೆ ಜನ್ಮ - ಮರಣ ಮೊದಲಾದ ಯಾವ ಬದಲಾವಣೆಗಳೂ ಇಲ್ಲ.


ಸೃಷ್ಟಿಗೆ ನಾನಾ ಕಾರಣಗಳನ್ನು ಹೇಳುತ್ತಾರೆ. ಆದರೆ ಈಶ್ವರನಿಗೆ ಸೃಷ್ಟಿಸುವ ಇಚ್ಛೆಯಾದರೂ ಎಲ್ಲಿಂದ ಬಂತು?  ಸತ್ಕಾರ್ಯವಾದಂತೆ ಕಾರ್ಯವು ಕಾರಣದಲ್ಲಿ ಇರುತ್ತದೆ. ಆದ್ದರಿಂದ ಹುಟ್ಟಿರುವುದು ಮತ್ತೆ ಹುಟ್ಟಲು ಸಾಧ್ಯವಿಲ್ಲ. ಇಲ್ಲದಿರುವುದು ( ಅಂತಃಕರಣದ ಜಗತ್ತು.) ಹುಟ್ಟುವುದಾದರೂ ಹೇಗೆ? ( ನಾಸತೋ ವಿದ್ಯತೇ ಭಾವೋ ನಾಭಾವೋವಿದ್ಯತೇ ಸತಃ : ಗೀತೆ). ಬೌದ್ಧರು ಹೇಳುವಂತೆ ಇದು ಶೂನ್ಯವೂ ಅಲ್ಲ. ಇಲ್ಲದಿರುವುದು ಹುಟ್ಟುವುದಿಲ್ಲ. ಆದರೆ ಮಾಂಡೂಕೋಪನಿಷತ್ತಿನಲ್ಲಿ ಹೇಳಿದ ನಾಲ್ಕು ಪಾದಗಳನ್ನು ಗೌಡಪಾದರು ಒಪ್ಪುತ್ತಾರೆ. ಅವು - ವಿಶ್ವ, ತೈಜಸ, ಪ್ರಾಜ್ಞ ಹಾಗೂ ತುರೀಯ.


ಹೊರ ಜಗತ್ತಿ ಜ್ಞಾನವುಳ್ಳವನು ವಿಶ್ವ.
ನೋಡುವವನುˌ ಅಂತರ್ವಿಷಯ ಜ್ಞಾನವುಳ್ಳವನು - ತೈಜಸ ( ಅರಿಯುವವನು ).
ಜ್ಞಾನ ಘನನು ಪ್ರಾಜ್ಞ, 
ಹೃದಯ ಸಾಕ್ಷಿ ಅಂದರೆ ಆತ್ಮಸಾಕ್ಷಿಗನುಗುಣವಾಗಿರುವ ನಡೆಯ ಇವರು ಕ್ರಮವಾಗಿ ಸ್ಥೂಲ, ಸೂಕ್ಷ್ಮ ಆನಂದಗಳನ್ನು ಸಹ ಅನುಭವಿಸುತ್ತಾರೆ.
ಈ ಮೂರೂ ಸ್ಥಿತಿಗೆ ಮೀರಿದ್ದು ತುರೀಯ ಅವಸ್ಥೆ; ಅದು ಆತ್ಮನ ಶುದ್ಧ ರೂಪ. ಅದ್ವೈತವು ಅಲ್ಲಿ ತಾನೆ ತಾನಾಗಿರುತ್ತದೆ.



ಸಾಧನೆ:-

ಬ್ರಹ್ಮವನ್ನು ಸಾಧಿಸಲು, ಪ್ರಣವ ಅಥವಾ ಓಂ ಕಾರ ಉಪಾಸನೆಯು ಪರಮ ಸಾಧನ; ಇದು ಸಾಮಾನ್ಯರಿಗೆ ( ಸಾಧನೆಗೆ. ) ಅಗತ್ಯ. ಓಂ ಕಾರವು ಪರಾಪರ ಬ್ರಹ್ಮ ರೂಪಿಯಾಗಿದೆ. ಓಂ ಕಾರ ಅ-ಉ-ಮˌಗಳಿಂದ ಆಗಿದೆ ; ಅವು ಕ್ರಮವಾಗಿ, ವಿಶ್ವ - ತೈಜಸ - ಪ್ರಾಜ್ಞರನ್ನು ತುರೀಯಕ್ಕೆ ಒಯ್ಯುತ್ತದೆ. ಅ ಕಾರದಿಂದ ವೈಶ್ವಾನರನಾಗುತ್ತಾರೆ. ; ಈ ಜಗತ್ತನ್ನು ನೋಡುವವನು - ಅನುಭವಿಸುವವನು ( ಇದು ಎಚ್ಚರ. ) ಉ ಕಾರದಿಂದ ತೈಜಸ ನಾಗುತ್ತಾರೆ. - ಅವರೆ ಮುಂದೆ ಹಿರಣ್ಯಗರ್ಭನಾಗುವರು ; ( ಆಂತರಿಕ ದೈವ ) ಸೂಕ್ಷ್ಮ ಜಗತ್ತು ; ( ಸ್ವಪ್ನ.). ಮ ಕಾರದಿಂದ ಈಶ್ವರನಾಗುತ್ತಾರೆ ; ಪ್ರಾಜ್ಞ ; ಆತ್ಮ ಸ್ವರೂಪ ; ( ಸುಷುಪ್ತಿಯಲ್ಲಿ.). ಓಂ ಕಾರದ ಅ ಮಾತ್ರೆ ( ಅಕ್ಷರವಿಲ್ಲದ ಕೊನೆಯ ಉಚ್ಛಾರ.). ತುರೀಯ ಅವಸ್ಥೆ.



ಅಸ್ಪರ್ಶ ಯೋಗ:-

ಅಸ್ಪರ್ಶಯೋಗವೆಂದರೆ - ಜ್ಞಾನಯೋಗ.
ಇಂದ್ರಿಯಗಳಿಗೂ, ವಿಷಯಗಳಿಗೂ ( ಮಾತ್ರವೆ ಸ್ಪರ್ಶ) ಆಗುವ ಸಂಯೋಗ ಅಥವಾ ಸಂಪರ್ಕ. ಅದರಿಂದಲೆ ಸುಖ - ದುಃಖ ಅನುಭವವಾಗುವುದು. ಅದನ್ನು ದೂರಮಾಡುವುದು ಇಲ್ಲಿನ ಯೋಗ. ಆಗ ಪರಮಾತ್ಮ ತತ್ವವೇ ಅಸ್ಪರ್ಶ ಎನಿಸಿಕೊಳ್ಳುವುದು.


ಮನಸೆ ದ್ವೈತಕ್ಕೆಲ್ಲಾ ಕಾರಣ ; ( ನಾನಾ ವಸ್ತುಗಳು - ಬೇಧಗಳು). ವಿವೇಕ, ಅಭ್ಯಾಸ ವೈರಾಗ್ಯಗಳಿಂದ ಮನೋರಾಹಿತ್ಯ ಹೊಂದಿದರೆ, ನಾನಾತ್ವವೆಲ್ಲ ನಶಿಸಿ ಹೋಗಿ ; ಪರಮಾತ್ವ ತತ್ವದಲ್ಲಿ ನೆಲೆ ನಿಲ್ಲುತ್ತದೆ. ಆದರೆ ಇದರಲ್ಲಿ ಅಡಚಣೆಗಳು. : ಅವೆ ಲಯ, ವಿಕ್ಷೇಪ, ಕಷಾಯ, ರಸಾಸ್ವಾದ.


ನಿದ್ರೆಗೆ ಒಳಗಾಗುವುದೆಂದರೆ ಲಯ.
ಸುಖಲೋಲುಪ ವಿಷಯಗಳತ್ತ ಮನಸ್ಸು ಓಡುವುದು - ವಿಕ್ಷೇಪ.
ಆಸೆಯು ( ಕಾಮವಾಸನೆˌ ಮೋಹ ಇತ್ಯಾದಿ. ) ಬೀಜ ರೂಪದಲ್ಲಿರುವುದು - - ಕಷಾಯ.
ಸಮಾಧಿಯ ಸುಖ ಅನುಭವಿಸುವುದು: ರಸಾಸ್ವಾದ.
ಇವನ್ನು ನಿವಾರಿಸಿಕೊಂಡು ದೃಢತೆಯಿಂದ ಮುಂದುವರಿದರೆ ಅದೆ: ತುರೀಯ. ಅದರಲ್ಲೆ ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೆ ಪರಮ ಮೋಕ್ಷ.
ಅದು ಆತ್ಮನ ಸಹಜ ಸ್ಥಿತಿ. ಅದಕ್ಕೆ ಮರಣವಾಗಬೇಕಿಲ್ಲ. ಜೀವಂತ ಇರುವಾಗಲೆ ಮುಕ್ತಿ ಸಾಧ್ಯ. ಇದು ಗೌಡಪಾದರ ಪ್ರತಿಪಾದನೆ.



ಬೌದ್ಧರ ಪ್ರಭಾವ : ಕೆಲವರು ಗೌಡಪಾದರ ಮೇಲೆ ಬೌದ್ಧರ ಪ್ರಭಾವವಾಗಿದೆ ಎಂದು ಹೇಳುತ್ತಾರೆ. ಅವರ ( ಬೌದ್ಧರ. ) ವಿಜ್ಞಾನವಾದ ಶೂನ್ಯವಾದದ ಪ್ರಭಾವವಿದೆಯೆಂದು ಅಥವಾ ಬೌದ್ಧರದ್ದೆ ಅಗಿದ್ದಿರಬಹುದೆ? ಎಂದು ಹೇಳವವರಿದ್ದಾರೆ. ಆದರೆ ಬೌದ್ಧ ದರ್ಶನವೂ ಉಪನಿಷತ್ತಿನಿಂದ ಪ್ರಭಾವಿತವಾಗಿದೆ ಎಂಬುದದರಲ್ಲಿ ಸಂಶಯವಿಲ್ಲ, ಹಾಗಾಗಿ ಉಪನಿಷತ್ತುಗಳಿಗೆ ವಿರೋಧವಿಲ್ಲದ, ಬೌದ್ಧ ದರ್ಶನ ತತ್ವಗಳು ಅದ್ವೈತ ದರ್ಶನದಲ್ಲಿ ಬರುವ ಸಾಧ್ಯತೆ ಇದೆ. ಪಾರಭಾಷಿಕ ಪದಗಳು ಒಂದೆ ಆದುದರಿಂದ ಸಾಮ್ಯತೆ ಸಹಜ. ಅಲ್ಲದೆ ಉಪನಿಷತ್ತುಗಳಿಗೆ ವಿರೋಧವಲ್ಲದ ಬೌದ್ಧ ಮತದತತ್ವಗಳನ್ನು ಒಪ್ಪಿಕೊಳ್ಳುವುದರಲ್ಲಿ, ಅವರ ವಿಶಾಲ ಮನೋಭಾವ - ಔದಾರ್ಯತೆ ಕಾಣುವುದು; ( ಅದು ಇತರರಲ್ಲಿ ಕಾಣಲಾರದು.).



"ಶ್ರೀಶಂಕರರ ಯುಗ"

ಅದ್ವೈತದ ವಿಕಾಸ : ಗೌಡಪಾದರ "ಮಾಂಡೂಕ್ಯಕಾರಿಕೆ"ಯಲ್ಲಿನ ಅದ್ವೈತದ ಸಿದ್ಧಾಂತದ, ರೂಪರೇಷೆಗಳನ್ನು  ವಿಕಸಿತಗೊಳಿಸಿದವರು ಶ್ರೀ ಶಂಕರರು. ಉಪನಿಷತ್ತು, ಬ್ರಹ್ಮ ಸೂತ್ರ, ಭಗವದ್ಗೀತೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವುಗಳಿಗೆ ಸಮ್ಮತವಾದುದು ಅದ್ವೈತ ಸಿದ್ಧಾಂತವೆಂದು ಅತ್ಯಂತ ಕೌಶಲದಿಂದ ನಿರೂಪಿಸಿದರು. ಅವು ಪ್ರಸ್ಥಾನತ್ರಯವೆಂದು ಪ್ರಸಿದ್ಧವಾಗಿದೆ.


ಬೌದ್ಧ ಮತ್ತು ಇತರ ವೈದಿಕ ದರ್ಶನಗಳಲ್ಲಿರುವ ದೋಷಗಳನ್ನ ಎತ್ತಿ ತೋರಿಸಿ, ವೇದಾಂತವೆ ಪರಿಪೂರ್ಣ ದರ್ಶನವೆಂದು ಸಾಧಿಸಿದರು. ಸ್ವಮತ ಸ್ಥಾಪನೆ, ಪರಮತ ಖಂಡನೆಗಳಲ್ಲಿ ಅವರಂಥ ನಿಪುಣರನ್ನು ಕಾಣುವುದು ಕಷ್ಟ. ಯಾರೆ ಆಗಲಿ ಅವರ ಧೀಮಂತ ವ್ಯಕ್ತಿತ್ವಕ್ಕೆ ತಲೆಬಾಗುವುದು ಸಹಜ. ಅವರ ವೇದಾಂತವನ್ನೆಲ್ಲಾ ಒಂದು ವಾಕ್ಯದಲ್ಲಿ ಸಂಗ್ರಹಿಸಬಹುದು. ( ವ+ಓ = ವೋ- ವಓ. ) ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋಬ್ರಹೈವನಾಪರಃ : ( ಈ ವಾಕ್ಯವು ಆದಿಶಂಕರರು ಹೇಳಿದ್ದಲ್ಲ - ಅವರ ಅನುಯಾಯಿಗಳು ಹೇಳಿದ್ದು ಅನ್ನುವ ವಾದವೂ ಇದೆ.) ಬ್ರಹ್ಮವು ಸತ್ಯ ಜಗತ್ತು ಮಿಥ್ಯ; ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ ಎಂಬುದೆ ಆ ಪ್ರಸಿದ್ಧ ಉಕ್ತಿಯ ಮೂಲಸಾರ. ಸತ್,ಚಿತ್,ಆನಂದ ಸ್ವರೂಪಿಯಾದುದು ಬ್ರಹ್ಮ. ನಮ್ಮ ಕಣ್ಣಿಗೆ ಕಾಣುವ ಅನುಭವಕ್ಕೆ ಎಟುಕುವ, ಈ ಪ್ರಪಂಚವೆಲ್ಲಾ ಮಿಥ್ಯೆ. ಅಂದರೆ ಅದು ಬ್ರಹ್ಮದ ತೋರಿಕೆ. ನೀರ ಮೇಲಿನ ಗುಳ್ಳೆಗೆ ನೀರನ್ನು ಬಿಟ್ಟು ಬೇರೆ ಅಸ್ತಿತ್ವವಿಲ್ಲದಂತೆ ಈ ಪ್ರಪಂಚಕ್ಕೆ ಪ್ರತ್ಯೇಕವಾದ ಸ್ವತಂತ್ರವಾದ ಅಸ್ತಿತ್ವವಿಲ್ಲ ( ಬ್ರಹ್ಮವನ್ನು ಬಿಟ್ಟು. ). ಅರಿವಿನ ಕಣ್ಣಿನಿಂದ ನೋಡಿದರೆ ಇರುವುದೆಲ್ಲಾ ಬ್ರಹ್ಮವೆಂದು ತಿಳಿಯುತ್ತದೆ. ಜಗತ್ತು ಕೇವಲ ಮಾಯಾ ಕಲ್ಪಿತ ( ಅಂತಹಕರಣದ ಜಗತ್ತು - ಬುದ್ದಿ ಮನಸ್ಸು ಮತ್ತು ಅಹಂಕಾರದಿಂದ ತಿಳಿಯುವ ನಮ್ಮ ಜಗತ್ತು.). ಜೀವಿಗಳೂ ಅಷ್ಟೆ, ಅವು ಅನಾದಿಯಿಂದ ಅಜ್ಞಾನದ ಮುಸುಕಿನಲ್ಲಿರುತ್ತವೆ. ಜೀವಿಗಳ ಹಾಗೂ ಜೀವ ಜಗತ್ತುಗಳ ನಡುವಿನ ಬೇಧಕ್ಕೆˌ ಜೀವ - ಜಗತ್ತು - ಬ್ರಹ್ಮಗಳ ಬೇಧಕ್ಕೆ ಮಾನಸಿಕ ಅಜ್ಞಾನವೆ ಮೂಲ ಕಾರಣ.



ಈ ಅಜ್ಞಾನದ ಆವರಣವನ್ನು ಕಿತ್ತೆಸೆದರೆ ಸಾಕು, ಬೇಧವೆಲ್ಲಾ ಅಳಿದುಹೋಗಿ, ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೆ ಮೋಕ್ಷ; ಅದೆ ಪರಮ ಪುರುಷಾರ್ಥ. ಇದು ಶಾಂಕರ ಸಿದ್ಧಾಂತದ ಸಾರಾಂಶ. ತ್ರಿವಿಧ ಸತ್ತೆಗಳು ಜೀವ, ಜಗತ್ತುˌ ಬ್ರಹ್ಮಗಳನ್ನರಿಯಲು ಸತ್ಯವನ್ನು ಅರಿಯುವ ಮಾರ್ಗವಾಗಿದೆ ಮತ್ತು ಕೈವಲ್ಯವೆನ್ನುವ ಅನುಭವದ ಸಂಗತಿಯಲ್ಲಿ ಮೂರು ಬಗೆ. 


ಮೀಮಾಂಸಕರೆ ಸ್ವತಃ ಕೊಡುವ ಪ್ರಮಾಣೀಕೃತ ವಾದವನ್ನು ಇವರು ಒಪ್ಪುತ್ತಾರೆ. ಅಂದರೆ ನಮ್ಮ ಅನುಭವಕ್ಕೆ ಬಂದ ಜ್ಞಾನವನ್ನು ಯತಾರ್ಥವೆಂದೆ ತಿಳಿಯಬೇಕು. 

ಆದರೆ ಈ ಸತ್ಯ ಮೂರು ಬಗೆ, 
೧. ಪಾರಮಾರ್ಥಿಕ ಸತ್ಯ
೨. ವ್ಯಾವಹಾರಿಕ ಸತ್ಯ 
೩.ಪ್ರಾತಿಭಾಸಿಕ ಸತ್ಯ.
ಪಾರಮಾರ್ಥಿಕ ಸತ್ಯ. 

*ಪಾರಮಾರ್ಥಿಕ ಸತ್ಯ*

ತ್ರಿಕಾಲಾಬಾದ್ಯಂ ಸತ್ಯಂ; ಮೂರೂ ಕಾಲಗಳಲ್ಲಿˌ ಅಂದರೆ ಭೂತ, ವರ್ತಮಾನ, ಭವಿಷ್ಯತ್ - ಈ ಮೂರೂ ಕಾಲಗಳಲ್ಲಿ ಬಾಧಿತವಾಗದಿರುವುದು ಅಥವಾ ಯಾವುದೆ ಬದಲಾವಣೆಯಾಗದಿರುವುದು ಪಾರಮಾಥಿಕ ಸತ್ಯ. ಯದ್ ರೂಪೇಣ ಯನ್ನಿಶ್ಚಿತಂ ತದ್ರೂಪಂ ನವ್ಯಭಿಚರತಿ ತತ್ಸತ್ಯಂ. ( ತೈತ್ತರೀಯ ೨-೧ ಶಾಂಕರ ಭಾಷ್ಯ. ) ಅಂದರೆ ವಸ್ತುವು ಯಾವ ರೂಪದಲ್ಲಿರುವುದೆಂದು ನಿಶ್ಚತವಾಗಿದೆಯೊ, ಆ ರೂಪದಲ್ಲಿ ಬದಲಾವಣೆಯಾಗುವುದಿಲ್ಲ. ಅದು ಸತ್ಯ. ಆ ಸತ್ಯವನ್ನು ಅಲ್ಲಗಳೆಯಲು ಬರುವುದಿಲ್ಲ. ಇದಕ್ಕೆ ಪಾರಮಾರ್ಥಿಕ ಸತ್ಯವೆಂದು ಹೆಸರು. ಅದಕ್ಕೆ ಅರ್ಹವಾದುದು ಬ್ರಹ್ಮವೊಂದೇ ( ಪರಬ್ರಹ್ಮ. ) ಎಂದರೆ ಸತ್ಯವು ಯಾವಾಗಲೂ ಒಂದೆ ಬಗೆಯಲ್ಲಿ ಇರುತ್ತದೆ. ಇದು ತಾತ್ವಿಕ.


ವ್ಯವಹಾರಿಕ ಸತ್ಯ.
ಸ್ವಲ್ಪ ಕಾಲ ಇದ್ದು ನಂತರ ಬದಲಾಗುವುದು ಈ ಪ್ರಪಂಚ ಮತ್ತು ಈ ಪ್ರಾಪಂಚಿಕ ಪದಾರ್ಥಗಳು ಆ ಬಗೆಯವು. ಇದು ಐದು ಅಂಶಗಳನ್ನು ಹೊಂದಿದೆ.
ಅಸ್ತಿ ( ಇರುತ್ತದೆ. ) ;
ಭಾತಿ ( ಬೆಳಗುತ್ತದೆ - ಕಾಣುತ್ತದೆ.) ;
ಪ್ರಿಯಂ ( ಆನಂದದಾಯಕ. ) ;
ನಾಮ ( ಹೆಸರಿದೆ.) ;
ರೂಪ ( ಆಕಾರವಿದೆ.) ;
ಇವುಗಳಲ್ಲಿ ಅಸ್ತಿ , ಭಾತಿ, ಪ್ರಿಯಂಗಳೆಂಬವು, ಬ್ರಹ್ಮಕ್ಕೆ ಸೇರಿದವು, ನಾಮ - ರೂಪಗಳು ತೋರಿಕೆಯವು. ಅವು ತ್ರಿಕಾಲಾಬಾಧಿತವಾಗಿರುವುದಿಲ್ಲ. (®ತ್ರಿಕಾಲದಲ್ಲೂ ಇರುವುವೂ ಸಹ ಅಲ್ಲ.). ಹುಟ್ಟು ಸಾವುಗಳುಂಟು.


ಪ್ರಾತಿಭಾಸಿಕ ಸತ್ಯ


ಇನ್ನೂ ಕೆಳಗಿನ ಹಂತದ ಸತ್ಯ. ನಂಬಿರುವವರೆಗೆ ಮಾತ್ರ ಸತ್ಯವಾಗಿ ಗೋಚರಿಸುತ್ತದೆ. ಒಂದು ಕ್ಷಣವಾದರೂ ಇದೆಯೆಂದು ಗೋಚರಿಸಿದರೆ, ಅದು ಅನುಭವಕ್ಕೆ ಬಂದರೆ, ಅದನ್ನು ಇಲ್ಲವೆನ್ನುವಂತಿಲ್ಲ. ಉದಾ : ಹಗ್ಗವನ್ನು ಹಾವೆಂದು ತಿಳಿಯುವುದು,; ಕನಸು ಕೂಡಾ ಈ ವರ್ಗಕ್ಕೆ ಸೇರಿದ್ದು.


ಅಸತ್ಯ

ಪಾರಮಾರ್ಥಿಕ, ವ್ಯವಹಾರಿಕ, ಪ್ರಾಪಂಚಿಕ ಇವು ಮೂರೂ ಸತ್ಯಗಳಾದರೆ, ಅಸತ್ಯವೆಂದರೆ ಇಲ್ಲದಿರುವುದು , ಅಸಂಭವನೀಯ ; ಉದಾ : ಬಂಜೆಯ ಮಗ ; ಬಾನಿನ ಹೂ ; ಇತ್ಯಾದಿ. ಒಂದೆ ಒಂದು ಕ್ಷಣವಾದರೂ, ನಮಗೆ ಇದರ ಅನುಭವ ಆಗುವುದಿಲ್ಲ. ಅಸತ್ಯವೆಂದರೆ ಇರಲಾರದ್ದು. ತ್ರಿಕಾಲದಲ್ಲೂ ಇರಲಾರದ್ದು ಇವನ್ನು ತುಚ್ಛ - ಅಲೀಕ ಎನ್ನಲಾಗಿದೆ.

ಮಿಥ್ಯೆ 


ಜಗತ್ತು ಮಿಥ್ಯೆ ಎಂದರೆ ಮೇಲಿನ ಬಗೆಯ ಅಸತ್ಯವಲ್ಲ . ಜಗತ್ತು ತ್ರಿಕಾಲದಲ್ಲೂ ಒಂದೆ ರೀತಿಯಾಗಿ ಇರುವುದಿಲ್ಲ . ಮತ್ತು ಪಾರಮಾಥಿಕ ಸತ್ಯಕ್ಕೆ ಹೋಲಿಸಿದಾಗ ಮಿಥ್ಯೆ ; ಜಗತ್ತು ಇಂದ್ರಿಯ ಮನಸ್ಸುಗಳಿಗೆ ಸತ್ಯವೆಂದು ಅನುಭವಕ್ಕೆ ಬರುತ್ತೆ - ವಿಚಾರದಿಂದ ಅದು ಮಿಥ್ಯೆಯೆಂದು ತಿಳಿದು ಬರುತ್ತೆ ; ಇದನ್ನು ಶಾಂಕರ ವೇದಾಂತದಲ್ಲಿ ಅನಿರ್ವಚನೀಯ ವಿವರಿಸಲುಬಾರದ್ದು - ಮಿಥ್ಯೆ , ಎಂಬುದಾಗಿ ಹೇಳುತ್ತಾರೆ ; ಹೀಗೆ ಮಿಥ್ಯೆಯು ಅನಿರ್ವಚನೀಯವಾಗಿದ್ದು - ಅಸತ್ಯವು ಅಸಂಭವನೀಯವಾಗಿರುವುದು. ಎರಡು ಬಗೆಯಲ್ಲಿ ಎನ್ನಬಹುದು.


*ಆತ್ಮ - ಬ್ರಹ್ಮ*


ಆತ್ಮದ ಅಸ್ತಿತ್ವವು ( ಇದೆ ಎನ್ನುವುದು ) ಸ್ವಯಂ ಸಿದ್ಧ ಎನ್ನುವುದು ಅದ್ವೈತದ ಅಭಿಪ್ರಾಯ. ಇದೆಯೋ - ಇಲ್ಲವೋ ಎಂಬ ಪ್ರಶ್ನೆಗೆ ಇಲ್ಲಿ ಅವಕಾಶವೆ ಇಲ್ಲ. ಏಕೆಂದರೆ "ನಾನು ಇದ್ದೇನೆ" ಎಂದು ಪ್ರತಿಯೊಬ್ಬರೂ ತಿಳಿಯುತ್ತಾರೆ. ಇದು ಆತ್ಮದ ಅಸ್ತಿತ್ವಕ್ಕೆ ಸಾಕ್ಷಿ . ( 'ನಾನು ಇಲ್ಲ' ಎಂಬುದು ಸಾಧ್ಯವಿಲ್ಲ. ) ಅದು ( "ನಾನು ಇದ್ದೇನೆ" ಎಂಬುದು. ) ನಮ್ಮ ತಿಳಿವಿಗೆಲ್ಲಾ ಆಧಾರಭೂತವಾದುದು.



ಚರ್ಚೆಗೆ ಮೊದಲು ಆತ್ಮವು ಇದೆಯೋ ಇಲ್ಲವೋ ಅದು ಸಿದ್ಧವಾಗಬೇಕು ( ರುಜುವಾತಾಗಬೇಕು.). ಆದರೆ ಅದ್ವೈತದಲ್ಲಿ ಅದಕ್ಕೆ ಅವಕಾಶವಿಲ್ಲ. - ಏಕೆಂದರೆ ನಾನು ಇಲ್ಲ - ಆತ್ಮವು ಇಲ್ಲ ಎಂದು ನಿರಾಕರಿಸಲು ಸಾಧ್ಯವೆ ಇಲ್ಲ.
ಆಗಂತುಕ ( ಹೊರಗಿನಿಂದ ಬಂದಂತ. ) ವಸ್ತುವನ್ನು ನಿರಾಕರಿಸಬಹುದು. ಆದರೆ ಅದರ ಸ್ವರೂಪವನ್ನು ನಿರಾಕರಿಸಲು ಆಗುವುದಿಲ್ಲ. ಉದಾ : ಬೆಂಕಿಯನ್ನು ನಿರಾಕರಿಸಬಹುದು ( ಭ್ರಮೆ ಎಂದು.) ; ಆದರೆ ಅದರ ಉಷ್ಣತೆಯನ್ನು ನಿರಾಕರಿಸಲು ಬರುವುದಿಲ್ಲ. ಆದ್ದರಿಂದ ನಾನು ಇದ್ದೇನೆ ಎಂಬ ಅನುಭವವನ್ನು ನಿರಾಕರಿಸಲು ಬಾರದು. ಆ ಕಾರಣ ಆತ್ಮವು ಸ್ವಯಂ ಸಿದ್ಧವಾದುದು.



ಆದ್ದರಿಂದ ಚರ್ಚಿಸ ಬೇಕಾದದ್ದು ಆತ್ಮದ ಅಸ್ತಿತ್ವದ ಬಗೆಗಲ್ಲ - ಅದರ ಸ್ವರೂಪದ ಬಗೆಗೆ. ಚಾರ್ವಾಕರು ಮುಂತಾದವರು ಇಂದ್ರಿಯ, ಮನಸ್ಸುಗಳನ್ನೆ ಆತ್ಮ ಎಂದು ಭಾವಿಸಿದರೂ, ಆತ್ಮ ಅವುಗಳಿಗಿಂತ ಭಿನ್ನವಾದುದು. ಅದನ್ನು ಜಡವೆಂದಾಗಲಿ ( ಇಂದ್ರಿಯಗಳಂತೆ ) ಅವುಗಳಿಂದ ಹುಟ್ಟಿದ್ದೆಂದಾಗಲಿ ತಿಳಿಯುವುದು ಸರಿಯಲ್ಲ. ಅದು ( ಆತ್ಮ.) ಚೈತನ್ಯ ಸ್ವರೂಪಿ. ಜಾಗ್ರತ್, ಸ್ವಪ್ನˌ ಸುಷುಪ್ತಿಗಳೆಂಬ ಮೂರು ಅವಸ್ಥೆಗೂ ಇರುವುದು. ಈ ಅವಸ್ಥೆಗಳನ್ನು ಪರಿಶೀಲಿಸಿದರೆ, "ನಾನು ಇದ್ದೇನೆ" ಎಂಬ ಅನುಭವ, ಈ ಮೂರೂ ಅವಸ್ಥೆಗೂ ಇರುವುದು.



ಜ್ಞಾನ ಸ್ವರೂಪಿ


ಆತ್ಮವು ಜ್ಞಾನ ಸ್ವರೂಪಿ. ಜ್ಞಾನವು ಎರಡು ಬಗೆ. ನಿತ್ಯ, ಅನಿತ್ಯ ಎಂದು ; ಯಾವುದೆ ವಿಷಯಕ್ಕೆ ( ಪಂಚೇಂದ್ರಿಯಗಳಿಗೆ ) ಸಂಬಂಧಿಸಿದ ಜ್ಞಾನವು ಅನಿತ್ಯವಾದುದು. ಜ್ಞಾನಕ್ಕೆ ವಿಷಯಗಳಿರುವಾಗ ( ಗುಣ ) ಮಾತ್ರ ಆ ಜ್ಞಾನ ಇರುತ್ತದೆ - ಇಲ್ಲವಾದರೆ ಇಲ್ಲ. ಮೂಗಿಗೆ ಗ್ರಹಣ ಶಕ್ತಿ ಇದ್ದರೆ ಪರಿಮಳ ಇರುತ್ತದೆ - ಇಲ್ಲದಿದ್ದರೆ ಪರಿಮಳವಿಲ್ಲ. ಆದರೆ ಶುದ್ಧ ಜ್ಞಾನವು ಯಾವಾಗಲೂ ಇರುತ್ತದೆ.



*ಅಖಂಡ ಆನಂದ ರೂಪಿ*


ಆತ್ಮವು ಆನಂದ ರೂಪಿಯಾದುದು, ಅಲ್ಲಿ ದುಃಖದ ಸೋಂಕು ಇಲ್ಲ. ವಿಷಯ ( ಇಂದ್ರಿಯ. ) ಸಂಪರ್ಕದಿಂದ ಸುಖ - ದುಃಖ ಉಂಟಾಗುತ್ತದೆ. ಶುದ್ಧ ಚೈತನ್ಯಕ್ಕೆ ವಿಷಯ ಸಂಪರ್ಕವಿಲ್ಲದಿರುವಾಗ, ಸುಖ ದುಃಖಗಳಿಗೆ ಮೀರಿದ ಸ್ಥಿತಿ ಇರುತ್ತದೆ. ಇದು ಆನಂದ. ಆತ್ಮವು ಕರ್ತೃವಾಗಲಿ ಭೋಕ್ತೃವಾಗಲಿ ಆಗಲಾರದ್ದು. ಏಕೆಂದರೆ ಅದು ಕ್ರಿಯೆಗೆ ಆಶ್ರಯವಾಗಿದೆ. ಕಾರಣ ಅದರಲ್ಲಿ ಬದಲಾವಣೆ ಇಲ್ಲ. ಬದಲಾವಣೆ ಇದ್ದರೆ ಅನಿತ್ಯವಾಗುವುದು. ಆತ್ಮವೆಂಬ ಈ ಚೈತನ್ಯವು ಸಮಸ್ತ ಪ್ರಪಂಚವನ್ನೂ ವ್ಯಾಪಿಸಿದೆ. ಅದು  ಅಖಂಡ - ಅದ್ವಯ ; ಇದು ಬಿಟ್ಟರೆ ಮತ್ತಾವದೂ ಪಾರಮಾರ್ಥಿಕ ಸತ್ಯವಲ್ಲ.



ಆತ್ಮ - ಬ್ರಹ್ಮ


ಆತ್ಮದ ಅಸ್ತಿತ್ವವು ಸಿದ್ಧವಾದ ಮೇಲೆ. ಬ್ರಹ್ಮ ತತ್ವದ ಸಿದ್ಧಿಯೂ ಆಯಿತು. ಏಕೆಂದರೆ ಆತ್ಮವೆ ಬ್ರಹ್ಮ. ( ಸರ್ವಸ್ಯ, ಆತ್ಮತ್ವಾಚ್ಚ , ಬ್ರಹ್ಮಾಸ್ತಿತ್ವ ಪ್ರಸಿದ್ಧಿಃ : ಶಂಕರ ಭಾಷ್ಯ-೧.೧.೧. )


*ಬ್ರಹ್ಮ ಮತ್ತು ಈಶ್ವರ*


*ನಿರ್ಗುಣ ಬ್ರಹ್ಮ :* ಉಪನಿಷತ್ತುಗಳಲ್ಲಿ ಬ್ರಹ್ಮದ ತತ್ವವನ್ನು ಎರಡು ರೀತಿಯಲ್ಲಿ ಮಾಡಿದೆ. ಕೆಲವೆಡೆ ಬ್ರಹ್ಮವನ್ನು - 'ನೇತಿ', 'ನೇತಿ' ,ಎಂದು ; ( ಹೀಗಲ್ಲ , ಇದಲ್ಲ, ಎಂದು. ) ಭಾಷೆಯೆಲ್ಲಾ ದ್ವೈತಮಯವಾದ್ದರಿಂದ, ಅವು ಬ್ರಹ್ಮ ತತ್ವವನ್ನು ವಿವರಿಸಲಾರವು. ಗುರೋಸ್ತು ಮೌನಂ ವ್ಯಾಖಾನಂ, ಎಂಬಂತೆ ಮೌನದಿಂದಲೆ ಬ್ರಹ್ಮವನ್ನು ತಿಳಿಸಬೇಕಾಗುತ್ತದೆ. ಇದು "ಹೌದು", ಎನ್ನುವುದಕ್ಕಿಂತ "ಇದಲ್ಲ ", ಎಂಬುದೆ ಸರಿ ಎಂಬುದು. ಕೆಲವೆಡೆ ಬ್ರಹ್ಮವನ್ನು ಸಚ್ಚಿದಾನಂದ ರೂಪ ಎನ್ನಲಾಗಿದೆ. ಮತ್ತೆ ಕೆಲವೆಡೆ ಇದು ಎಲ್ಲವನ್ನೂ ಮೀರಿದ್ದು - ನಿರ್ಗುಣ ಬ್ರಹ್ಮವೆಂದು ಕರೆಯಲಾಗಿದೆ. 

ಇನ್ನೊಂದು ಸಗುಣ ಬ್ರಹ್ಮ.

ಸಗುಣ ಬ್ರಹ್ಮ

ಇನ್ನೊಂದು ಸಗುಣ ಬ್ರಹ್ಮದ ಸ್ವರೂಪವರ್ಣನೆ. ಬ್ರಹ್ಮಸೂತ್ರದ ಜನ್ಮಾದ್ಯಸ್ಯ ಯತಃ ( ೧.೧.೨ ) ಜಗತ್ತಿನ ಸೃಷ್ಟಿ , ಸ್ಥಿತಿˌ ಲಯಗಳಿಗೆ ಕಾರಣವಾದ ಬ್ರಹ್ಮ. ಈ ಸಗುಣ ಬ್ರಹ್ಮವನ್ನೆ ಈಶ್ವರನೆಂದು ಕರೆಯುವರು. ಬ್ರಹ್ಮವು ಸಗುಣವೂ ನಿರ್ಗುಣವೂ ಆಗಿದೆಯೆ ಎಂಬ ಪ್ರಶ್ನೆ ಏಳುತ್ತದೆ. ಅದ್ವೈತ ವೇದಾಂತವು ಬ್ರಹ್ಮವು ನಿರ್ಗುಣವೆಂದೆ ಹೇಳುತ್ತದೆ.


ನಿರ್ಗುಣ ಬ್ರಹ್ಮವನ್ನು "ಪರಬ್ರಹ್ಮ"ವೆಂದೂ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದ ಬ್ರಹ್ಮವನ್ನು "ಅಪರಬ್ರಹ್ಮ"ವೆಂದೂ ಕರೆಯಲಾಗಿದೆ. ಅದು ನಾಮ, ರೂಪ, ಬೇಧಗಳಿಂದ ಕೂಡಿದ ಈಶ್ವರ. "ಪರಬ್ರಹ್ಮ"ವು ಉಪಾದಿಗಳಿಂದ ( ನಾಮ, ರೂಪ - ಇತ್ಯಾದಿ. ) ದೂರವಾದದ್ದು. ಹಾಗಾಗಿ, ಸೋಪಾಧಿಕ ಬ್ರಹ್ಮ, ನಿರುಪಾಧಿಕ ಬ್ರಹ್ಮವೆಂದು ಕರೆದಿದೆ. 'ಆದರೆ ಇವುಗಳಲ್ಲಿ ಬೇಧವಿಲ್ಲ' ;. ಅದೆ ಇದಾಗಿ ತೋರುವುದು. ನಿರ್ಗುಣಮಪಿಸದ್ ಬ್ರಹ್ಮ, ನಾಮ, ರೂಪ ಗತೈಃ ಗುಣೈಃ ಸಗುಣಂ, ಉಪಾಸನಾರ್ಥಂ ತತ್ರ ತತ್ರ ಉಪದಿಶ್ಯತೇ ( ಶಂ.ಭಾ.೧.೨.೧೪.), ಈಶ್ವರನ ಉಪಾಸನೆಯಿಂದ ಚಿತ್ತ ಶುದ್ಧಿಯಾಗಿ ಜ್ಞಾನ ಮಾರ್ಗ ಅನುಸರಿಸಲು ಮತ್ತು ಕೊನೆಯ ಮೆಟ್ಟಿಲಾದ ಪರಬ್ರಹ್ಮವನ್ನು ಪಡೆಯಬಹುದು. ಕರ್ಮಫಲವನ್ನು ವಿವರಿಸಲು, ಈಶ್ವರನನ್ನು ಒಪ್ಪಬೇಕಾಗುವುದು. - ಎಂದು ಶ್ರೀಶಂಕರರು ವಾದಿಸುತ್ತಾರೆ.


*ಈಶ್ವರ ( ಸೃಷ್ಟಿಕರ್ತ)*


ಕಾರ್ಯಕಾರಣ ವಾದದ ಬಲದಿಂದ ಜಗತ್ತಿಗೆ ಕಾರಣವೊಂದಿದೆ ಎಂದು ಸಿದ್ಧಪಡಿಸಬಹುದು. ಆದರೆ ಈಶ್ವರನೆ ಕಾರಣವೆಂಬುದನ್ನು ಸಿದ್ಧಪಡಿಸಲಾಗದು. ( ಬ್ರ.ಸೂ. ಜನ್ಮಾದ್ಯಸ್ಯ ಯತಃ ಕ್ಕೆ ಭಾಷ್ಯ. ) ಈಶ್ವರನೆ ಸೃಷ್ಟಿಕರ್ತನೆಂಬುದಕ್ಕೆ ಶ್ರುತಿಯೆ ಆಧಾರ. ಅದರಂತೆ ಈಶ್ವರನು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣ ; ಕರ್ಮಫಲದಾತ ; ಶಿಷ್ಟ ರಕ್ಷಕ ದುಷ್ಟ ಶಿಕ್ಷಕ ; ಭಕ್ತಿ ಪ್ರೀತ ವರದಾತ ; ವೇದ ರಕ್ಷಕ ( ಪುನರುಜ್ಜೀವಕಾರಕ. ) ; ಆದರೆ ಕರ್ಮದ ಸೋಂಕಿಲ್ಲ. ಮಾಯೆ ಅವನ ಶಕ್ತಿ. ಆದರೆ ಮಾಯಾತೀತ ; ಜಗತ್ತಿನ ಸೃಷ್ಟಿ ಅವನ ಲೀಲೆ, ಮಾಯೆ. ( ಕಾರಣ ಜಗತ್ತನ್ನು ಏಕೆ ಸೃಷ್ಟಿಸಿದ? ಅನ್ನುವುದಕ್ಕೆ ಉತ್ತರವಿಲ್ಲ. ) ಅಥವಾ ಮಾಯೆ; ಜೀವಿಯು ಬ್ರಹ್ಮವನ್ನು ಜಗತ್ತನಿಂದಲೆ ತಿಳಿಯಬೇಕು, ಹೇಗೆಂದರೆ, ಮಡಿಕೆಯನ್ನು ಬಿಟ್ಟು ಮಣ್ಣಿನ ಸ್ವರೂಪ ಜೀವನಿಗೆ ಗೊತ್ತಿಲ್ಲವಾದ್ದರಿಂದ ಮಡಿಕೆಯಿಂದಲೆ ಮಣ್ಣನ್ನು ಅರಿಯಲು ಸಾಧ್ಯ. ( ಆದರಿದು ಶಂಕರರ ಅಭಿಪ್ರಾಯವಲ್ಲ. ); ಅವನು ಅದರ ಸೂತ್ರಧಾರಿ - ಪಾತ್ರಧಾರಿ - ಪ್ರೇಕ್ಷಕ. : ನಂತರದಲ್ಲಿ ಅದ್ವೈತದ ಈ ಈಶ್ವರನ ಅಸ್ತಿತ್ವವಾದದಿಂದ ಬೇರೆ ಬೇರೆ ವಾದಗಳು ಪಂಥಗಳು ಹೊರಟವು / ಹುಟ್ಟಿದವು. ಅವಿದ್ಯೆ ( ಮಾಯೆ ) ,
ಈಶ್ವರ, - ನಿರ್ಗುಣ ಬ್ರಹ್ಮದಿಂದ, ಜೀವ, ಜಗತ್ತು ತರ್ಕಕ್ಕೆ ನಿಲುಕದ ಪ್ರಶ್ನೆಯಾಗಿಯೆ ಉಳಿದಿದೆ. ಅವಿದ್ಯೆ ದೂರವಾದ ನಂತರ ಸಾಕ್ಷಾತ್ಕಾರ. ನಂತರ ಈ ಪ್ರಶ್ನೆಗಳಿಗೆ ಅರ್ಥವಿಲ್ಲ. ಆದ್ದರಿಂದ ಜಗತ್ತಿನ ಮಾಯೆ ಅನಿರ್ವಚನೀಯ.


ಮಾಯಾವಾದ

ಮಾಯಾವಾದವು ಅದ್ವೈತದ ಪ್ರಮುಖ ಸಿದ್ಧಾಂತಗಳಲ್ಲೊಂದು. ಅದ್ವೈತದ ಅಡಿಗಲ್ಲೆಂದರೆ ತಪ್ಪಲ್ಲ . ಜಗನ್ಮಿಥ್ಯಾ ತತ್ವವು ಮಾಯಾವಾದವನ್ನು ಆಧರಿಸಿದೆ. ಅದ್ವೈತದಲ್ಲಿ , ಬ್ರಹ್ಮ - ಈಶ್ವರ, ಬ್ರಹ್ಮ - ಜಗತ್ತು , ಬ್ರಹ್ಮ - ಜೀವ, ಈ ಸಂಬಂಧಗಳನ್ನು ವಿವರಿಸುವಲ್ಲಿ ಮಾಯೆಯ ಕಲ್ಪನೆ ಅಗತ್ಯ. ಹಾಗಾಗಿ ಅದ್ವೈತಿಗಳನ್ನು ಮಾಯಾವಾದಿಗಳೆಂದು ಕರೆಯುತ್ತಾರೆ. ಮಾಯಾ ಶಬ್ದವು ವೇದ ಉಪನಿಷತ್ತುಗಳಲ್ಲಿಯೂ ಉಪಯೋಗಿಸಲ್ಪಟ್ಟಿದೆ. ಅದನ್ನು ಪ್ರಪಂಚದ ವಿವರಣೆಯ ಪ್ರಮುಖ ಸಿದ್ಧಾಂತವಾಗಿ ಅದ್ವೈತ ನಿರೂಪಿಸಿದೆ.

*ಅದ್ವೈತ ವೇದಾಂತದಲ್ಲಿ ಮಾಯೆ*


ಅವಿದ್ಯೆ, ಅಜ್ಞಾನˌ ಅಧ್ಯಾಸˌ ಅದ್ಯಾರೋಪˌ ಅನಿರ್ವಚನೀಯˌ  ವಿವರ್ತˌ ಭ್ರಾಂತಿ, ಭ್ರಮೆˌ ನಾಮ ರೂಪ, ಅವ್ಯಕ್ತ, ಅಕ್ಷರˌ ಬೀಜ ಶಕ್ತಿˌ ಮೂಲ ಪ್ರಕೃತಿ ಇತ್ಯಾದಿ ಪದಗಳನ್ನು ಹೆಚ್ಚಾಗಿ ಪರಕೀಯ ( ಒಂದೇ ಅರ್ಥದ.) ಪದಗಳಂತೆ ಬಳಸುತ್ತಾರೆ.

*ಮಾಯೆ : ಶಂಕರ ಮತ*

೧. ಸಾಂಖ್ಯರ ಪ್ರಕೃತಿಯಂತೆ ಜಡ ; ಸಾಂಖ್ಯರು ಪುರುಷ ( ಜೀವ )ನನ್ನು ಚೈತನ್ಯವೆಂದರೆ - ಇಲ್ಲಿ ಬ್ರಹ್ಮ ಚೈತನ್ಯ. ಸಾಂಖ್ಯರಲ್ಲಿ ಪ್ರಕೃತಿ ಸ್ವತಂತ್ರ ಅಸ್ತಿತ್ವ ಉಳ್ಳದ್ದು. ಆದರೆ ಇಲ್ಲಿ ಮಾಯೆ ಪ್ರಪಂಚಕ್ಕೆ ಕಾರಣವಾದರೂ, ಸ್ವತಂತ್ರವಲ್ಲ. ಅದ್ವೈತದಲ್ಲಿ ಸಾಂಖ್ಯರಂತೆ ಅಂತಿಮ ಸತ್ಯತೆಯೂ ಅದಕ್ಕಿಲ್ಲ.


೨. ಮಾಯೆಯು ಬ್ರಹ್ಮನ ಶಕ್ತಿ. ಅದು ಬ್ರಹ್ಮದಿಂದ ಬೇರೆಯಲ್ಲ ( ಅನನ್ಯ. ) ; ಬೆಂಕಿಯ ಸುಡುವ ಸ್ವಭಾವವಿದ್ದಂತೆ. ಇದು ಬ್ರಹ್ಮ ಸ್ವರೂಪವೂ ಅಲ್ಲ.


೩. ಮಾಯೆಯು ಅನಾದಿಯಾಗಿದೆ ( ಆದಿ ಇಲ್ಲದ್ದು ಅದರ ಆರಂಭ ಯಾವಾಗ ಹೇಗೆ ಆಯಿತು ಎಂದು ಹೇಳಲು ಸಾದ್ಯವಿಲ್ಲ. )

೪ . ಮಾಯೆಯು ಪಾರಮಾರ್ಥಿಕ ಸತ್ಯವಲ್ಲ. ಭಾವ ರೂಪವಾದುದು. ಅದಕ್ಕೆ ಎರಡು ಶಕ್ತಿ ಇದೆ. ಆವರಣ ಮತ್ತು ವಿಕ್ಷೇಪ. ಆವರಣವು ಬ್ರಹ್ಮವನ್ನು ಮರೆಮಾಡುತ್ತದೆ. ವಿಕ್ಷೇಪವು ಬ್ರಹ್ಮವು ಜೀವನಾಗಿ ಕಾಣುವಂತೆ ಮಾಡುತ್ತದೆ. ಇಲ್ಲದ್ದನ್ನು ಇದೆ ಎಂದು ತೋರಿಸುವುದು. ( ಉದಾ : ಹಗ್ಗವನ್ನು ಹಾವಾಗಿ ಕಾಣುವಂತೆ ಮಾಡುವುದು. ) ಶೋಕ ಮೋಹ ಇತ್ಯಾದಿ.


೫ . ಮಾಯೆಯು ಅನಿರ್ವಚನೀಯವಾದುದು. - ವಿವರಿಸಲು ಬಾರದ್ದು. ಎರಡು ರೂಪದ್ದು ಅಲ್ಲ. ಇದು ಪಾರಮಾರ್ಥಿಕ ಸತ್ಯವಲ್ಲ. ಆದುದರಿಂದ ಇದೆ ಎನ್ನುವಂತಿಲ್ಲ. ಇದು ಪ್ರಪಂಚವನ್ನು ತೋರಿಸುತ್ತಿರುವ ಕಾರಣ ಇಲ್ಲವೆಂದು ಹೇಳುವ ಹಾಗಿಲ್ಲ. ಜ್ಞಾನವಾದ ನಂತರ ಕಾಣದಿರುವುದರಿಂದ ನಿಜವಲ್ಲ.


೬ . ಮಾಯೆಯು ವ್ಯವಹಾರಿಕ ಸತ್ಯವಾಗಿದೆ. ಅಧ್ಯಾಸ ರೂಪವಾಗಿರುವುದರಿಂದ, 'ವಿವರ್ತ' ( ತೋರಿಕೆ. ) ವಾಗಿದೆ. ಹಗ್ಗದಲ್ಲಿ ಹಾವು ತೋರಿದಂತೆ. ಭ್ರಾಂತಿರೂಪವಾಗಿದೆ.


೭ . ಬ್ರಹ್ಮ ಜ್ಞಾನವಾದ ಕೂಡಲೆ ಇದು ನಿವಾರಣೆಯಾಗುತ್ತದೆ. ಬೆಳಕಿನಿಂದ ಕತ್ತಲೆ ಹೋದಂತೆ.


೮ . ಇದಕ್ಕೆ ಬ್ರಹ್ಮವು ಆಶ್ರಯವೂ ಹೌದು ವಿಷಯವೂ ಹೌದು. ಇಂದ್ರಜಾಲ ಮಾಡುವವನು ತನ್ನ ಇಂದ್ರ ಜಾಲಕ್ಕೆ ವಶನಾಗದಿರುವಂತೆ.


ವಿವರ್ತ ವಾದ.


ಇದು ಅದ್ವೈತ ವೇದಾಂತಕ್ಕೆ ಸಮ್ಮತವಾದ ಕಾರ್ಯಕಾರಣ ವಾದ. ಕಾರ್ಯವು ಕಾರಣದಿಂದ ಬೇರೆಯಲ್ಲ. ಉದಾ : ಕಾರ್ಯವಾದ ಮಡಕೆಯಲ್ಲಿ ಕಾರಣವಾದ ಮಣ್ಣು ಇದೆ. ಮಣ್ಣೆ ಮಡಿಕೆಯಾಗಿದೆ. ಆದರೆ ವಿವರ್ತದಲ್ಲಿ ತೋರಿಕೆಯ ಬದಲಾವಣೆಯಾಗುವುದು. ಉದಾ : ನೀರು ಗುಳ್ಳೆಯಾಗುವುದು. ಕಪ್ಪೆ ಚಿಪ್ಪು ಬೆಳ್ಳಿಯಾಗಿ ತೋರುವುದು - ವಿವರ್ತ. ಕಾರಣವು ನಿಜವಾಗಿ ಬದಲಾವಣೆಯಾಗದೆ ತೋರಿಕೆಯ ಬದಲಾವಣೆಯಗುವುದು ( ಕಾರ್ಯ ). ದೇವದತ್ತನು ಮಲಗಿದ್ದರೂ, ಕುಳಿತಿದ್ದರೂ ದೆವದತ್ತನೆ ಯಜ್ಞದತ್ತನಾಗುವುದಿಲ್ಲ. ಹಾಗೆˌ
ಆದ್ದರಿಂದ, ಹಾಗೆಯೆ ಪ್ರಪಂಚವಾಗಿ ಕಾಣುವುದೂ ಬ್ರಹ್ಮವೆ ಹೊರತು ಬೇರೆಯಲ್ಲ ಎಂಬುದು ಅದ್ವೈತ ದರ್ಶನ.


ಜಗತ್ತು

ಜಗತ್ತು ಪಾರಮಾರ್ಥಿಕ ದೃಷ್ಟಿಯಿಂದ ಬಾಧಿತವಾಗಿ ಅಸತ್ಯ ( ಮಿಥ್ಯೆ. ) ಎಂಬುದು ತೀರ್ಮಾನವಾಗಿದ್ದರೂ, ವ್ಯವಹಾರಿಕ ಸತ್ಯವನ್ನು ( ಸತ್ಯವೆಂದು. ) ಹೊಂದಿರುವುದರಿಂದ, ವಾಸ್ತವವಾದುದು. ಅದು ( ಜಗತ್ತು. ) ಬ್ರಹ್ಮದ ನೆಲೆಯಿಂದ ತೋರಿಕೆಯಾದರೂ ಜೀವದ ( ಜೀವ-ನ ನೆಲೆಯಿಂದ. ) ಸತ್ಯ.
ಜಗತ್ತಿಗೆ ಬ್ರಹ್ಮವೆ ಕಾರಣ. ಇದು ಶ್ರುತಿ ( ವೇದ. ) ಸಮ್ಮತ. ಕೆಲವರು ( ನ್ಯಾಯ.) ಈಶ್ವರ ನಿಮಿತ್ತ ಕಾರಣ ಮಾತ್ರ ಎನ್ನುತ್ತಾರೆ ( ಮಡಕೆಗೆ ಕುಂಬಾರನಿದ್ದಂತೆ.).
ಆದರೆ ವೇದಾಂತವುˌ ಈಶ್ವರನು ನಿಮಿತ್ತ ಕಾರಣವೂ ಹೌದು ; ಉಪಾದಾನ ಕಾರಣವೂ ಹೌದು ಎನ್ನುತ್ತದೆ ( ಮಡಕೆಗೆ ಮಣ್ಣು ಇದ್ದಂತೆ.). ಈಶ್ವರನು ಜಗತ್ತನ್ನು ಉಂಟುಮಾಡುವುದು ತನ್ನಿಂದಲೆ. ಮಾಯೆ ಎಂಬ ಉಪಾದಿಯಿಂದಲೆ ಈಶ್ವರನು ಜಗತ್ತನ್ನು ಉಂಟುಮಾಡುತ್ತಾನೆ. ಅವನು ಚೇತನನೂ ಹೌದು ; ಅವನು ತನ್ನ ಇಚ್ಛೆಯಿಂದಲೆ - ಅವನೆ ಮಾಯೆಯ ಉಪಾದಿಯಿಂದ ಜಗತ್ತಾಗಿ ತೋರುತ್ತಾನೆ. ಚೈತನ್ಯದಿಂದ ಜಡವಾದ ಚೇತನ ಹೇಗೆ ಉಂಟಾಗುವುದೆಂದರೆ, ಅದು ತಪ್ಪಲ್ಲ, ಪುರುಷನಲ್ಲಿ ಉಗುರು ಇದ್ದಂತೆ - ಒಟ್ಟಿನಲ್ಲಿ ಅನಿರ್ವಚನೀಯ.


ಸೃಷ್ಟಿ

ಜಗತ್ತಿನ ಸೃಷ್ಟಿ ಹೇಗೆ? ತಮೋಗುಣವು ಪ್ರಧಾನವಾದ ವಿಕ್ಷೇಪ ಶಕ್ತಿಯಿಂದ ( ಮಾಯೆಯಿಂದ ) ಕೂಡಿದ ಚೈತನ್ಯದಿಂದ, ಆಕಾಶವು ಮೊದಲು ಹುಟ್ಟಿತು; ಆಕಾಶದಿಂದ ವಾಯು; ವಾಯುವಿನಿಂದ ಅಗ್ನಿ; ಅಗ್ನಿಯಿಂದ ಜಲ ; ಜಲದಿಂದ ಪೃಥ್ವಿ. ; - ಅದರಿಂದ ತನ್ಮಾತ್ರೆಗಳು ; ಈ ಸೂಕ್ಕ್ಮವಾದ ತನ್ಮಾತ್ರೆಗಳಿಂದ ಸೂಕ್ಷ್ಮ ಶರೀರ ; ಸ್ಥೂಲ ಭೂತಗಳು ಹುಟ್ಟುತ್ತವೆ - ( ಪಂಚೀಕರಣ ವಿಧಾನ. )


*ಜೀವ - ಈಶ್ವರ*


ಜೀವನಿಗೆ ಸ್ಥೂಲˌ ಸೂಕ್ಷ್ಮ , ಕಾರಣಗಳೆಂಬ ಮೂರು ಶರೀರಗಳು. ಜಾಗ್ರತ್ , ಸ್ವಪ್ನ , ಸುಷುಪ್ತಿಗಳೆಂಬ ಮೂರು ಅವಸ್ಥೆಗಳು ; ಅನ್ನಮಯˌ ಪ್ರಾಣಮಯˌ ಮನೋಮಯˌ ವಿಜ್ಞಾನಮಯ, ಆನಂದಮಯ ; ಎಂಬ ಐದು ಕೋಶಗಳು. ( ಒಂದರಿಂದ ಇನ್ನೊಂದು ಉನ್ನತ ಸ್ಥಿತಿ,) ; ವಿಶ್ವ, ತೈಜಸ, ಪ್ರಾಜ್ಞ ಎಂಬ ದೇವತೆಗಳ ಹೆಸರುಗಳು ಜೀವನಿಗೆ - ಜಾಗ್ರತ್, ಸ್ವಪ್ನ, ಸುಷುಪ್ತಿಯನ್ನು ಆಧರಿಸಿ ಈ ಹೆಸರುಗಳು ಇವೆ. ಅದೆ ರೀತಿಯಲ್ಲಿ ಈಶ್ವರನಿಗೂ ವೈಶ್ವಾನರ ( ಕಾಣುವ ಜಗತ್ತು. ), ಸೂತ್ರಾತ್ಮ ( ಸ್ವಪ್ನದ ಈಶ್ವರ - ದೇವತೆ.) ; ಹಿರಣ್ಯ ಗರ್ಭ ( ಸುಷುಪ್ತಿಯ ಈಶ್ವರ ಅಥವಾ ಸಮಾಧಿಯ ಈಶ್ವರ.) ಎಂಬ ಹೆಸರುಗಳಿವೆ.


ಅಂತಃಕರಣ ಮತ್ತು ಸಾಕ್ಷಿ


ಅಂತಃಕರಣವು ಜಡವಾಗಿದೆ ( ಸ್ವತಃ ಚೈತನ್ಯವಲ್ಲ.). ತೇಜಸ್ಸಿನ ಅಂಶವು ಪ್ರಧಾನವಾಗಿದೆ. ಇದು ಚಂಚಲವೂ ಕ್ರಿಯಾಶೀಲವೂ ಆಗಿದೆ. ಇದರ ಕ್ರಿಯೆಗಳೆ ವೃತ್ತಿಗಳು. ಗಾಢ ನಿದ್ದೆ, ಮೂರ್ಛೆಗಳನ್ನು ಬಿಟ್ಟರೆ, ಅದು ಸದಾ ವೃತ್ತಿಯುಳ್ಳದ್ದೆ ಆಗಿರುತ್ತದೆ. ಇದನ್ನೆ ನಾವು ಜ್ಞಾನವೆಂದು ಕರೆಯುವುದು ಇವೆ ವೃತ್ತಿಗಳನ್ನು.


ಸಾಕ್ಷಿ : ಅಂತಃಕರಣ ಜಡವಾದುದರಿಂದ ವೃತ್ತಿಗಳು ಹುಟ್ಟಲು ಚೈತನ್ಯಬೇಕು. ಜೀವನಲ್ಲಿರುವ ಚೈತನ್ಯಾಂಶವೆ, ಸಾಕ್ಷಿ ಎನಿಸಿಕೊಳ್ಳುತ್ತದೆ. ಕಾರಣ ಇದು ಅಂತಃಕರಣದಲ್ಲಿ ( ಮನಸ್ಸು , ಬುದ್ಧಿ , ಅಹಂಕಾರ , ಚಿತ್ತ . ಇವು ಒಟ್ಟು ಅಂತಃಕರಣ ಎನ್ನಿಸಿಕೊಳ್ಳುತ್ತದೆ. ) ನೇರವಾಗಿ ಭಾಗಿಯಾಗುವುದಿಲ್ಲ. ನಾಟಕ ರಂಗದಲ್ಲಿರುವ ದೀಪದಂತೆ ( ಸಾಕ್ಷಿ. ) ಇರುತ್ತದೆ.


ವ್ಯವಹಾರದಲ್ಲಿ ನಾನು ಎಂಬ ತಿಳಿವುˌ ಅಹಂಕಾರ ( ಇದು ಜಂಬವಲ್ಲ - ನಾನು ಎಂಬ ತತ್ವ. ) ವೆಂಬ ಅಂತಃಕರಣ ತತ್ವ. ಅದು ಸಚೇತನವಾಗಿ ತೋರುವುದು - ಸಾಕ್ಷಿ ಚೇತನದಿಂದ, ಈ ಸಾಕ್ಷಿಯೆ ಆತ್ಮ. ಬೆಂಕಿಯ ಕಾರಣದಿಂದ ಕಬ್ಬಿಣವು ಕೆಂಪಾಗಿ ಕಾಣುವಂತೆ ಅಂತಃಕರಣ ಚೇತನವಾಗಿ ತೋರುವುದು.


 *ಜೀವಾತ್ಮ*

ಜೀವಾತ್ಮನು ಅಜರನೂˌ ಅಮರನೂ, ಸರ್ವವ್ಯಾಪಿಯೂ, ಬ್ರಹ್ಮ ಸ್ವರೂಪಿಯೂ ಆಗಿದ್ದಾನೆ. ಅವನಿಗೆ ಪಾರಮಾರ್ಥಿಕವಾಗಿ ಬಂಧ - ಮೋಕ್ಷಗಳಿಲ್ಲ. ಅವನಿಗೆ ಸ್ವರ್ಗ- ನರಕಗಳಿಲ್ಲ. ಅವನು ಅವನಲ್ಲಿ ( ತನ್ನಲ್ಲಿ. ) ಇಲ್ಲದ ಗುಣಧರ್ಮಗಳನ್ನು ತನ್ನಲ್ಲಿ ಆರೋಪಿಸಿಕೊಂಡು ( ಅವಿದ್ಯೆ - ಅಜ್ಞಾನ. ), ವ್ಯವಹರಿಸಲು ಅಧ್ಯಾಸವೆ ( ಅಜ್ಞಾನ-ಮಾಯೆ. ) ಕಾರಣ. ಆಕಾಶವು ಮಡಕೆ ಕುಡಿಕೆಗಳಲ್ಲಿ ಬೇರೆ ಬೇರೆ ಕಾಣುವಂತೆ, ಒಂದೆ ಚೈತನ್ಯವು ( ಬ್ರಹ್ಮವು. ) ಉಪಾದಿಗಳ ಕಾರಣದಿಂದ ಬೇರೆ ಬೇರೆಯಾಗಿತೋರುವುದು. ಹಾಗಾಗಿ ಬೇಧವು ಪಾರಮಾರ್ಥಿಕ ಸತ್ಯವಲ್ಲ. ತತ್ವಮಸಿ - ತತ್- ತ್ವಂ- ಅಸಿ ಎಂಬ ಶ್ರತಿ ವಾಕ್ಯಗಳು ( ಅದು= ಬ್ರಹ್ಮವು, ತ್ವಂ = ನೀನು, ಅಸಿ-ಆಗಿದ್ದೀಯೆ.) ಅಬೇಧವನ್ನು ಸಾರುತ್ತವೆ.



*ಬಂಧ - ಮೋಕ್ಷ*

ಪಾಮಾರ್ಥಿಕವಾಗಿ ( ತಾತ್ವಿಕವಾಗಿ - ಮೂಲತಃ.) ಜೀವ ಬ್ರಹ್ಮರಿಗೆ ಬೇಧವಿಲ್ಲ. ಆದರೆˌ ವ್ಯಾವಹಾರಿಕವಾಗಿ ಬೇಧವಿದೆ. ಸುಖ - ದುಃಖ ; ಹುಟ್ಟು - ಸಾವು ; ಕರ್ಮ - ಪುನರ್ಜನ್ಮ ; ಸ್ವರ್ಗ- ನರಕಗಳಿವೆ ; ಇವಕ್ಕೆಲ್ಲಾ ಅವಿದ್ಯೆಯೂ ಕಾರಣ ನಿತ್ಯ-ಶುದ್ಧ-ಬುದ್ಧ-ಮುಕ್ತ ಸ್ವಭಾವದ ಚೈತನ್ಯವು, ಅವಿದ್ಯೆಯ ಪರಿಣಾಮವಾಗಿ ಸಂಸಾರದಲ್ಲಿ ಸಿಲುಕಿಕೊಳ್ಳುವುದೆ ಬಂಧವೆನಿಸಿಕೊಳ್ಳುತ್ತದೆ. ಇದು ಅನಾದಿಯಾದುದು. ಯಾವಾಗ ಪ್ರಾರಂಭವಾಯಿತು? ಯಾಕೆ ಪ್ರಾರಂಭವಾಯಿತು? ಎನ್ನುವುದು ಬಗೆಹರಿಯದ ಸಮಸ್ಯೆ. ಇದು ಭಗವಂತನ ಲೀಲೆ ಎಂಬುದಾಗಿ ತಿಳಿಯಬಹುದು.


ಪಾಮಾರ್ಥಿಕವಾಗಿ ಜೀವ ಬ್ರಹ್ಮರಿಗೆ ಬೇಧವಿಲ್ಲ . ವ್ಯಾವಹಾರಿಕವಾಗಿ ಉಂಟು ; ಮೋಕ್ಷವೂ ಉಂಟು. ಜೀವನಿಗೆ ತಾನು ಬ್ರಹ್ಮವೆಂದು ಅರಿವಾಗುವುದೆ ಮೋಕ್ಷ . "ಬ್ರಹ್ಮಾವಗತಿ"ಯೆ ಮೋಕ್ಷ . "ಅವಗತಿ", ಎಂದರೆ ಸಾಕ್ಷಾನುಭವ. :ಉದಾ : ಬೇಡರ ನಡುವೆ ಬೆಳೆದ ರಾಜಕುಮಾರ. ತಾನು ಬೇಡನಲ್ಲ - ರಾಜಕುಮಾರ ಎಂದು ತಿಳಿದಂತೆ.


ಬೇರೆಯವರಿಂದ ಕೇಳಿ ತಿಳಿದರೆ ಅದು ಪರೋಕ್ಷ ಜ್ಞಾನ ; ತಾನೆ ಅನುಭವಿಸಿದರೆ ಅದು ಅಪರೋಕ್ಷಾನುಭೂತಿ ; ಸಾಕ್ಷಾತ್ಕಾರ ; ಅದೆ ಮೋಕ್ಷ .


ಮೋಕ್ಷವನ್ನು ಗಳಿಸಿಕೊಳ್ಳಲು ಎಲ್ಲಿಗೂ ಹೋಗಬೇಕಾಗಿಲ್ಲ. ಅದು ಎಲ್ಲೆಲ್ಲಿಯೂ ಇದೆ. ಆಕಾಶದಂತೆ. ಬಂಧಕ್ಕೆ ಕಾರಣವಾದ ಅಜ್ಞಾನ ನಿವಾರಣೆಯಾದರೆ ಸಾಕು. ಹಾಗಾಗಿ ಜ್ಞಾನದಿಂದಲೆ ಮೋಕ್ಷ. ಇಲ್ಲಿ ಜ್ಞಾನವು ಮೋಕ್ಷವನ್ನು ಹುಟ್ಟಿಸಲಾರದು ಅಜ್ಞಾನವನ್ನು ಕಳೆಯುತ್ತದೆ ಅಷ್ಟೆ. ಬೆಳಕಿಗೆ ಅಡ್ಡಲಾದ ಪರದೆಯನ್ನು ಸರಿಸಿದಂತೆ. ಬ್ರಹ್ಮವನ್ನು ಅರಿತರೆ ಸಾಕು ಅವನೆ ಬ್ರಹ್ಮವಾಗುತ್ತಾನೆ. ( ಬ್ರಹ್ಮವಿದ್ ಬ್ರಹ್ಮೈವ ಭವತಿ.)


*ಕರ್ಮ-ಉಪಾಸನೆ-ಭಕ್ತಿ ಸಂಪಾದಿಸಿ*


ಅದ್ವೈತವು ಜ್ಞಾನದಿಂದಲೆ ಮೋಕ್ಷವೆಂದು ಒತ್ತಿ ಹೇಳುತ್ತದೆ. ಕರ್ಮದಿಂದ ಮೋಕ್ಷವಿಲ್ಲವೆಂದು ಸಾರುತ್ತದೆ. ಅದು ಕರ್ಮ ವಿರೋಧಿಯೆ?

ಕರ್ಮಕ್ಕೆ ಫಲವಿರುವುದರಿಂದ ಅದು ಕರ್ಮಕ್ಕೆ ವಿರೋಧಿಯಾಗಿದೆ. ಕರ್ಮವು ನಿತ್ಯ - ನೈಮಿತ್ತಿಕ - ಕಾಮ್ಯ - ನಿಷಿದ್ಧ ಎಂದು ನಾಲ್ಕು ಬಗೆ. ಈ ಕರ್ಮಗಳಿಗೆಲ್ಲಾ ಫಲವಿದೆ. ಆದ್ದರಿಂದ ಪುನರ್ಜನ್ಮವಿದೆ. ಕರ್ಮಫಲಗಳು ಅನಿತ್ಯವಾಗಿವೆ. ( ಸ್ವಲ್ಪ ಕಾಲವಿದ್ದು ಹೋಗುವವು. ). ಆದ್ದರಿಂದ ಮೋಕ್ಷವು ಕರ್ಮಫಲವಲ್ಲ. ಮೋಕ್ಷವು ಕರ್ಮಫಲವಾದರೆ ಅದು ಅನಿತ್ಯವಾಗುವುದು.


ಕರ್ಮಯೋಗ


ಕರ್ಮವು ಮೋಕ್ಷಕ್ಕೆ ಸಹಕಾರಿಯಾಗಿದೆ. ಕರ್ಮವು ಬಂಧನಕಾರಿ. ಕರ್ಮಗಳನ್ನು ( ಕೆಲಸಗಳನ್ನು ಸೇರಿ. ) ಮಾಡದೆ ಇರುವುದು ಸಾಧ್ಯವಿಲ್ಲ. ಆದ್ದರಿಂದ ಕರ್ಮ ಬಂಧನದಿಂದ ಬಿಡಿಸಿಕೊಳ್ಳಲು, ಅವನ್ನು ಈಶ್ವರಾರ್ಪಣ ಮಾಡುವುದೊಂದೇ ದಾರಿ/ಮಾರ್ಗ. ಅದೆ ಕರ್ಮಯೋಗ. ಈ ರೀತಿ ಮಾಡುವುದರಿಂದ ಚಿತ್ತ ಶುದ್ಧಿಯಾಗಿ ಜ್ಞಾನೋದಯಕ್ಕೆ ಕಾರಣವಾಗುತ್ತದೆ. ಬ್ರಹ್ಮ ಜ್ಞಾನವಾಗುವವರೆಗೂ ಕರ್ಮವು ಅವಶ್ಯವಾಗಿದೆ.


*ಉಪಾಸನೆ*


ಉಪಾಸನೆ ಎಂದರೆ ಉಪಾಸ್ಯ ( ಧ್ಯಾನ ಮಾಡುವ. ) ವಸ್ತುವಿನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸುವುದು. ಇದಕ್ಕೆ ' ವಿದ್ಯಾ "ಎಂದು ಹೆಸರು. ಉಪಾಸನೆಯು ಜ್ಞಾನದ ಅಪೇಕ್ಷೆಯ ಕರ್ಮ. ಉಪಾಸನೆ ಎಂದರೆ ಉಪಾಸ್ಯ ( ಧ್ಯಾನ ಮಾಡುವ.) ವಸ್ತುವಿನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸುವುದು . ಇದಕ್ಕೆ ವಿದ್ಯಾ ಎಂದು ಹೆಸರು . ಜ್ಞಾನದ ಅಪೇಕ್ಷೆಯ ಕರ್ಮ. ಇದರಿಂದಲೂ ಕೊನೆಗೆ ಜ್ಞಾನವಾಗಿ ಮೋಕ್ಷವಾಗುವುದು ಇಲ್ಲದಿದ್ದರೆ ( ಜ್ಞಾನವಾಗದಿದ್ದರೆ. ) ಹಿರಣ್ಯಗರ್ಭಲೋಕ.


*ಭಕ್ತಿ*


ಭಕ್ತಿಯು ದ್ವೈತವನ್ನು ಆಧರಿಸಿದ್ದು ; ಭಗವಂತನೆ ಬೇರೆˌ ತಾನೆ ಬೇರೆ ಎಂಬ ಭಾವದಿಂದ ದಾಸ್ಯ ; ಸಖ್ಯ ; ವಾತ್ಸಲ್ಯ ; ಮೊದಲಾದ ಭಾವದಿಂದ ಭಗವಂತನ ಭಜನೆ, ಸೇವೆ ಇರಬೇಕು. ಅದ್ವೈತದಲ್ಲಿ ಭಕ್ತಿಗೆ ಸ್ಥಾನವಿಲ್ಲವೆಂಬ ತಪ್ಪು ತಿಳಿವಳಿಯಿದೆ. ಭಕ್ತಿಯಲ್ಲಿ - ನಾನು ಅವನವನು ; ಅವನು ನನ್ನವನು ; ನಾನೆ ಅವನು ; ಎಂಬ ಮೂರು ವಿಧದ ಭಕ್ತಿಗೂ ಅವಕಾಶವಿದೆ. ( ಗೀ..ಭಾ.೧೦-೧೦ ). ಹೀಗೆ ಭಕ್ತಿಯು ಅಂತಿಮವಾಗಿ ಜ್ಞಾನದಲ್ಲಿ ಪರಿಣಮಿಸುವುದರಿಂದ ಭಕ್ತಿಯನ್ನ ಒಪ್ಪಲಾಗಿದೆ. ಆದರೂ ಅಲ್ಲಿ ಅತಿರೇಕ - ಉದ್ರೇಕಗಳಿಗೆ ಅವಕಾಶವಿಲ್ಲ. ಆದರೆ ಭಕ್ತಿಯ ಮಹತ್ವವನ್ನು ಅವಶ್ಯಕತೆಯನ್ನು ಶಂಕರರು ಎತ್ತಿ ಹೇಳಿದ್ದಾರೆ.


*ಜೀವನ್ಮುಕ್ತಿ*

ಅದ್ವೈತವು ಜೀವನ್ಮುಕ್ತಿಯನ್ನು ಪ್ರತಿಪಾದಿಸುತ್ತದೆ. ಮುಕ್ತಿಯು ಜ್ಞಾನದಿಂದ ಪ್ರಾಪ್ತವಾಗುವುದರಿಂದ ಜೀವಂತವಿರುವಾಗಲೆ ಮುಕ್ತಿಯನ್ನು ಪಡೆಯುವುದು ಸಾಧ್ಯ. ಮರಣಾನಂತರವೆ ಮುಕ್ತಿಯೆಂದಿಲ್ಲ. ಶರೀರವೆ ತಾನೆಂಬ ಭಾವನೆಯನ್ನು ಕಳೆದುಕೊಂಡರೆ ಸಾಕು. ಜ್ಞಾನವಾದರೆ ಅಥವಾ ಮುಕ್ತಿಯಾದರೆ ಶರೀರವು ಬಿದ್ದುಹೋಗುವುದಿಲ್ಲ. ಕರ್ಮ ( ಹಿಂದಿನ. ) ಸವೆಯುವವರೆಗೂ ಇರುತ್ತದೆ. ಜೀವನ್ಮುಕ್ತನು ಸಮಾಧಿಯಲ್ಲಿ ಬ್ರಹ್ಮದೊಂದಿಗೆ ಒಂದಾಗುತ್ತಾನೆ. ಉಳಿದ ಸಮಯದಲ್ಲಿ ಇತರರಂತೆಯೆ ಇರುತ್ತಾನೆ. ಆದರೆ ಅವನಿಗೆ ಧರ್ಮ-ಕರ್ಮಗಳ ಬಾಧೆ ಇಲ್ಲ. ಒಳ್ಳೆಯತನ ಸ್ವಾಭಾವಿಕ.


ಅವನಿಗೆ. ಅವನಿಗೆ ಸರ್ವವೂ ಬ್ರಹ್ಮಮಯ ; ಅಲ್ಲಿ ಸ್ವಾರ್ಥ, ದ್ವೇಷ , ಆಸೆಗಳಿಲ್ಲ. ; ಸಮಸ್ತ ಜಗತ್ತು ಒಂದೆ ಕುಟುಂಬ - ಎನ್ನುವುದಕ್ಕಿಂತ ಮೇಲಿನ ಹಂತ ಅವನದು.
ಅವನು ದೇಹಪಾತವಾದ ಮೇಲೆˌ ಬ್ರಹ್ಮದಲ್ಲಿ ಲೀನವಗುತ್ತಾನೆ. ಇದು ವಿದೇಹ ಮುಕ್ತಿ ; ಆನಂದ ಸ್ವರೂಪನಾಗುತ್ತಾನೆ. ಪುನರ್ಜನ್ಮವಿಲ್ಲ . ಅದಕ್ಕಿಂತ ಹೆಚ್ಚಿನ ಸ್ಥಿತಿ ಇಲ್ಲ. ಅದೇ ಜೀವನದ ಪರಮ ಗುರಿ.

ಹೀಗೆ ಅದ್ವೈತವು ಸಕಲ ಜೀವಿಗಳೂ ಸಮಾನರು ಎಂಬ ತತ್ವವನ್ನು ಬೋಧಿಸಿದೆ.