Monday, November 16, 2015

ವಲಿ - ೩೧







ಹಿಂದಿನ ವರ್ಷ ಅಲ್ ಹೊದೈಬಿಯಾದಲ್ಲಿ ಖುರೈಷಿಗಳೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದದ ಪ್ರಮುಖ ಅಂಶವಾದ ಹಝ್ಝ್ ಯಾತ್ರೆ ಮಾಡುವ ಈ ಸಾಲಿನ ಹಂಗಾಮಿನ ದಿನಗಳು ಓಡೋಡುತ್ತ ಬಂದಿದ್ದವು. ದಿಗ್ವಿಜಯ ಯಾತ್ರೆಗಳಲ್ಲಿ ಮಗ್ನನಾಗಿದ್ದ ಮಹಮದ್ ಅದನ್ನ ಮಾಡದಿರಲು ಕಾರಣಗಳೆ ಇರಲಿಲ್ಲ. ಈ ಬಾರಿ ಉಮ್ರಾ ಅಂದರೆ ಚಿಕ್ಕ ಯಾತ್ರೆಯನ್ನು ಮಾತ್ರ ಮಾಡಲು ನಿರ್ಧರಿಸಿದ ಮಹಮದ್ ತನ್ನ ಎರಡು ಸಾವಿರ ಅನುಯಾಯಿಗಳೊಂದಿಗೆ ಮೆಕ್ಕಾದತ್ತ ಸಾಗಿದ. ಶಾಂತಿ ಒಪ್ಪಂದದ ಶಿಸ್ತಿನ ನಿಯಮಗಳ ಪ್ರಕಾರ ಯಾತ್ರಿಕರು ತಮ್ಮ ಆತ್ಮ ರಕ್ಷಣೆಗಾಗಿ ಕೇವಲ ಒಂದೊಂದು ಆಯುಧಗಳನ್ನ ಮಾತ್ರ ಜೊತೆಗೆ ಇಟ್ಟುಕೊಳ್ಳಬಹುದಿತ್ತು. ಆದರೆ ಮಹಮದ್ ತನ್ನ ಬದಲಾಗಿದ್ದ ಅಂತಸ್ತಿಗೆ ತಕ್ಕಂತೆ ಪ್ರತ್ಯೇಕ ಅಂಗರಕ್ಷಕ ಪಡೆಯನ್ನೆ ಸುಸಜ್ಜಿತವಾದ ಆಯುಧಪಾಣಿಗಳೊಂದಿಗೆ ಜೊತೆಗಿರಿಸಿಕೊಂಡಿದ್ದ. ಈ ಬೆಂಗಾವಲು ಪಡೆ ಪ್ರತ್ಯೇಕವಾಗಿ ಬಲಿ ಕೊಡುವ ಉದ್ದೇಶದಿಂದ ಅರವತ್ತು ಒಂಟೆಗಳನ್ನೂ ಸಹ ತಮ್ಮ ಬೆನ್ನಿಗೆ ಕಟ್ಟಿಕೊಂಡು ಹೊರಟಿದ್ದವು.


ಹೆಚ್ಚು ಗೊಂದಲಕ್ಕೆ ಅವಕಾಶ ನೀಡಲಾಗದಂತೆ ಖುರೈಷಿಗಳು ಮಹಮದನ ಯಾತ್ರೆಗೆ ಅವಕಾಶ ಮಾಡಿಕೊಟ್ಟರು. ಆತ ಮೆಕ್ಕಾದಲ್ಲಿ ಯಾತ್ರಿಸುವ ಸಂದರ್ಭದಲ್ಲಿ ತಾವು ತಮ್ಮ ಪಾಡಿಗೆ ಮೆಕ್ಕಾ ತೊರೆದು ಸಮೀಪದ ಬೆಟ್ಟ ಪ್ರದೇಶದಲ್ಲಿ ತತ್ಕಾಲಿಕ ವಸತಿಯನ್ನ ಹೂಡುವಷ್ಟು ಔದಾರ್ಯದಿಂದಲೂ ಅವರು ನಡೆದುಕೊಂಡರು. ಬರೊಬ್ಬರಿ ಏಳು ವರ್ಷಗಳ ನಂತರ ಮಹಮದ್ ಮೆಕ್ಕಾವನ್ನು ಪ್ರವೇಶಿಸುವ ಭಾಗ್ಯವನ್ನ ಮರಳಿ ಪಡೆದಿದ್ದ. ತನ್ನ ಎರಡು ಸಾವಿರ ಸಹ ಯಾತ್ರಿಕರೊಂದಿಗೆ ಭಾವುಕನಾಗಿಯೆ ಆತ ಪಟ್ಟಣವನ್ನು ಪ್ರವೇಶಿಸಿದ.


ಏಳು ವರ್ಷಗಳ ನಂತರ ಕಾಬಾ ಗುಡಿಯ ದರ್ಶನವನ್ನು ಮಹಮದ್ ಮಾಡಲಿದ್ದ. ಯಾತ್ರಿಕರ ಉಡುಪಾದ ಪಂಚೆ ಹಾಗೂ ಶಾಲನ್ನ ಧರಿಸಿದ್ದ ಮಹಮದ್ ಉತ್ಸಾಹದಿಂದಲೆ ಒಂಟೆಯೇರಿ ಕಾತರನಾಗಿ ಕಾಬಾದ ಎದುರು ಬಂದನು. ಆತ ಗುಡಿಯನ್ನ ಪ್ರವೇಶಿಸಲಿಲ್ಲ. ಒಂಟೆಯಿಂದ ಆತ ಕೆಳಗಿಳಿಯಲಿಲ್ಲ. ಅದರ ಮೇಲೆ ಕುಳಿತೆ ತನ್ನ ಕೈಕೋಲಿನಿಂದ ಗುಡಿಯ ಮೂಲೆಯಲ್ಲಿದ್ದ ಕರಿಕಲ್ಲನ್ನ ಭಕ್ತಿ ಪೂರ್ವಕವಾಗಿ ಆತ ಸ್ಪರ್ಶಿಸಿದ. ನಿಯಮಾನುಸಾರ ನಡೆಸಬೇಕಾದ ಏಳು ಪ್ರದಕ್ಷಿಣೆಗಳನ್ನ ಒಂಟೆಯ ಮೇಲೆ ಕುಳಿತಿದ್ದೆ ಆತ ನಡೆಸಿದ. ಮಹಮದನ ಒಂಟೆಯನ್ನ ಮುನ್ನಡೆಸುತ್ತಿದ್ದ ಅಬ್ದುಲ್ಲಾ ವೀರೋಚಿತವಾದ, ಯುದ್ಧ ಪ್ರೇರಕ ಹಾಡಿನ ಸಾಲುಗಳನ್ನ ದೊಡ್ದ ಧ್ವನಿಯಲ್ಲಿ ಮೊಳಗಿಸುತ್ತಾ ಸಾಗುತ್ತಿದ್ದ. ಇದರಿಂದ ಕುಪಿತನಾದ ಮಹಮದ್ ಅವನನ್ನ ತಡೆದು 'ಅವನಿಲ್ಲದೆ ಇನ್ಯಾರೂ ಇಲ್ಲ! ಬೇರೆ ಇನ್ಯಾರೂ ಅಲ್ಲ, ತನ್ನ ಸೇವಕರನ್ನು ಕಾಪಾಡಿ ಉದ್ಧರಿಸುವವನು ಬೇರೆ ಇನ್ಯಾರೂ ಅಲ್ಲ! ಅವನಲ್ಲದೆ ಇನ್ಯಾರು ಮೋಸ ಕೂಟವನ್ನು ಹಿಮ್ಮೆಟ್ಟಿಸಿದವನು?' ಎಂದು ಧ್ವನಿ ಎತ್ತರಿಸಿ ಘರ್ಜಿಸಿದನು. ನೆರೆದ ಬೆಂಬಲಿಗರು ಇದಕ್ಕೆ ಉತ್ಸಾಹದ ಧ್ವನಿಗೂಡಿಸಿದರು. ಅವರೆಲ್ಲರ ಈ ಸಂತಸದ ಕೂಗು ಸುತ್ತಲ ಬೆಟ್ಟಗುಡ್ಡಗಳಲ್ಲಿ ಮಾರ್ದನಿಸಿತು.



ಪ್ರದಕ್ಷಿಣೆ ಮುಗಿದ ನಂತರ ಮಹಮದ್ ಊರ ಪಕ್ಕದ ಶಿಖರಗಳಾದ ಮರ್ವಾ ಹಾಗೂ ಸಫಾದ ನಡುವೆಯೂ ಸಹ ಒಂಟೆಯನ್ನೇರಿದ್ದಂತೆಯೆ ಏಳೇಳು ಬಾರಿ ಹೋಗಿ ಬಂದ. ಅದೊಂದು ಯಹೂದಿ ಕುಲದ ಪ್ರಾಚೀನ ಆಚರಣ ಪದ್ಧತಿಯಾಗಿತ್ತು. ಮರ್ವಾದ ಶಿಖರದ ಮೇಲೆ ಜೊತೆಗೆ ತಂದಿದ್ದ ಎಲ್ಲಾ ಒಂಟೆಗಳ ಬಲಿಯನ್ನ ಕೊಡಲಾಯಿತು. 'ಇದು ಬಲಿ ಕೊಡಲು ಪ್ರಶಸ್ತ ಸ್ಥಳ ಹಾಗೂ ಇದಷ್ಟೇ ಅಲ್ಲದೆ ಮೆಕ್ಕಾದ ಪ್ರತಿಯೊಂದಿಂಚು ನೆಲವೂ ಸಹ ಬಲಿಗೆ ಹೇಳಿ ಮಾಡಿಸಿದ್ದೇ ಆಗಿದೆ' ಎಂದು ಮಹಮದ್ ಘೋಷಿಸಿದ. ವಾಡಿಕೆಯಂತೆ ತನ್ನ ಮುಡಿ ಕೊಟ್ಟು ತಲೆ ಬೋಳಿಸಿಕೊಂಡ. ಅಲ್ಲಿಗೆ ಆತನ ಚಿಕ್ಕ ಯಾತ್ರೆಯ ವಿಧಿಗಳೆಲ್ಲಾ ಶಾಸ್ತ್ರೋಕ್ತವಾಗಿ ನೆರವೇರಿದವು. ಗಮನಿಸಿ, ಆತ ತನ್ನ ಯಾತ್ರಾ ನಿಯಮಗಳನ್ನೇನೂ ಪ್ರಕಟಿಸದೆ ಆವರೆಗೂ ಜಾರಿಯಲ್ಲಿದ್ದ ಇಸ್ಲಾಂ ಪೂರ್ವದ ಪ್ರಾಚೀನ ಪದ್ಧತಿಯ ಅನುಸಾರವೆ ತನ್ನ ಯಾತ್ರೆಯನ್ನ ನಡೆಸಿದ್ದ. ಆತನ ಇಸ್ಲಾಮ್ ಕೂಡಾ ಮುಂದೆ ಅದೆ ಪದ್ಧತಿಗಳಿಗೆ ಜೋತು ಬಿತ್ತು.


ಮಾರನೆಯ ದಿನ ಮುಂಜಾವಿನಲ್ಲಿ ಮಹಮದ್ ಕಾಬಾ ಗುಡಿಯ ಒಳಾಂಗಣಕ್ಕೆ ಬಂದ. ಗುಡಿಯ ಮೇಲ್ಛಾವಣಿ ಏರಿದ ಅತ ತಾನೆ ಸ್ವತಃ ಮುಂದಾಗಿ ಪ್ರಾರ್ಥನೆಯ ಕರೆಯಾದ ಆಝಾನನ್ನ ನೀಡಿದ. ಮದೀನಾದ ತನ್ನ ಸ್ವಂತ ಮಸೀದಿಯಲ್ಲಿ ನಡೆಸಿ ಕೊಡುತ್ತಿದ್ದ ಕ್ರಮದಲ್ಲಿಯೇ ಇಲ್ಲಿಯೂ ಆತ ಪ್ರಾರ್ಥನೆಗಳನ್ನ ನಡೆಸಿಕೊಟ್ಟ. ಪ್ರಾಚೀನ ಕಾಲದ ಎಲ್ಲಾ ವಿಧಿಯಾಚರಣೆಗಳನ್ನೂ ಸಹ ಚಾಚೂ ತಪ್ಪದೆ ನಡೆಸಿ 'ದೇವರೊಬ್ಬನೆ! ನಾನವನ ಪ್ರವಾದಿ?!' ಎಂದು ದೊಡ್ಡ ಗಂಟಲಿನಲ್ಲಿ ಘೋಷಿಸಿದ. ಕಾಬಾದ ಗುಡಿಯೊಳಗೆ ಅಲ್ಲಾಹನದೂ ಸೇರಿ ಇದ್ದ ಒಟ್ಟು ಮುನ್ನೂರಾ ಅರವತ್ತು ನಾನಾ ದೇವರ ಮೂರ್ತಿಗಳು ಈ ಘೋಷಣೆಗೆ ಮೂಕ ಸಾಕ್ಷಿಗಳಾಗಿ ನಿಂತಿದ್ದವು! ಹಲವಾರು ವಿಗ್ರಹಗಳ ಮುಂದೆ ಮೂರ್ತಿ ಪೂಜನೆಯನ್ನೆ ವಿರೋಧಿಸುತ್ತಿದ್ದ ಮಹಮದ್ ಈ ಪ್ರಾರ್ಥನೆಗಳನ್ನ ಶ್ರದ್ಧಾ ಪೂರ್ವಕವಾಗಿ ನಡೆಸಿಕೊಟ್ಟದ್ದು ಒಂದು ಚರಿತ್ರಾರ್ಹ ಘಟನೆಯಾಗಿತ್ತು ಎನ್ನುತ್ತಾರೆ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಎಂಬತ್ತೆಂಟರಲ್ಲಿ.



ಮೆಕ್ಕಾದ ಮಾರುಕಟ್ಟೆ ಪ್ರದೇಶದಲ್ಲಿ ಒಂಟೆ ಚರ್ಮದಿಂದ ರಚಿಸಲಾಗಿದ್ದ ಗುಡಾರದಲ್ಲಿ ಮಹಮದ್ ಆ ಅವಧಿಯುದ್ದ ತಂಗಿದ್ದ. ಆತ ಯಾವುದೆ ಸಂಬಂಧಿಕರ ಮನೆಗೆ ಹೋಗಲೂ ಇಲ್ಲ, ಹೋಗುವ ಇಚ್ಛೆಯನ್ನೂ ಸಹ ವ್ಯಕ್ತ ಪಡಿಸಲಿಲ್ಲ. ಆದರೆ ತನ್ನನ್ನ ಕಾಣಲು ಅವರಾಗಿಯೆ ಹುಡುಕಿಕೊಂಡು ಬಂದ ರಕ್ತ ಸಂಬಂಧಿ ಖುರೈಷಿಗಳೊಂದಿಗೆ ಕುಶಲ ಸಂಭಾಷಣೆಗಳನ್ನು ಸಹಜವಾಗಿಯೆ ನಡೆಸಿ ಸತ್ಕರಿಸಿ ಬೀಳ್ಕೊಟ್ಟ. ಇದೆ ಅವಧಿಯಲ್ಲಿ ಮತ್ತೊಮ್ಮೆ ಆತನಿಗೆ 'ಶಾದಿ ಭಾಗ್ಯ'(?) ಒದಗಿ ಬಂತು! ತನ್ನ ಚಿಕ್ಕಪ್ಪ ಅಲ್ ಅಬ್ಬಾಸನ ಹೆಂಡತಿಯ ತಂಗಿಯಾಗಿದ್ದ ಇಪ್ಪತ್ತಾರು ವರ್ಷಗಳ ವಿಧವೆ ಮೈಮುನ್ನೀಸಳೊಂದೆಇಗೆ ಆತ ವಿವಾಹ ಸಮಾಗಮವನ್ನು ಕುದುರಿಸಿದ. ಮೂರು ದಿವಸದ ಈ ಅವಧಿಯಲ್ಲಿ ಆತ ಮತ್ತೊಮ್ಮೆ ಹಸೆಮಣೆ ಏರಲು ತಯ್ಯಾರಾದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿಯಾದ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ಏಳುನೂರಾ ಐವತ್ತಾರರಲ್ಲಿ.


ಈ ಮೂರು ದಿನಗಳಿಗೆ ಮಾತ್ರ ಆತ ಅಲ್ಲಿ ತಂಗಲು ಅನುಮತಿ ಇದ್ದು ಅದನ್ನ ವಿಸ್ತರಿಸುವಂತೆ ಕೇಳಿಕೊಂಡರೂ ಯಾವುದೆ ಪ್ರಯೋಜನವಾಗಲಿಲ್ಲ. ಕೂಡಲೆ ಮೆಕ್ಕಾ ತ್ಯಜಿಸಿ ಮದೀನಾದತ್ತ ಹೊರಡುವಂತೆ ಖುರೈಷಿಗಳಿಂದ ಅವನಿಗೆ ಆಜ್ಞೆ ಬಂತು. ಕನಿಷ್ಠ ನಿಶ್ಚಯವಾಗಿರುವ ಮೈಮುನ್ನಿಸಾಳೊಂದಿಗಿನ ಮದುವೆಯನ್ನ ಮುಗಿಸಿಕೊಂಡಾದರೂ ಹೊರಡಲು ಅನುಮತಿಸಿ ಎಂದು ಮನವಿ ಮಾಡಿಕೊಂಡರೂ ಅದಕ್ಕೂ ಯಾವುದೆ ಪುರಸ್ಕಾರ ಸಿಗಲಿಲ್ಲ. ಬೇರೆ ದಾರಿ ಕಾಣದೆ ಅಸಹಾಯಕನಾದ ಮಹಮದ ತನ್ನ ಗುಡಾರ ಕಿತ್ತು ಮೆಕ್ಕಾದ ಗಡಿ ದಾಟಿ ಹೊರ ನಡೆದ. ಅಲ್ಲಿಂದ ಹತ್ತು ಮೈಲಿ ದೂರವಿದ್ದ ಸರೀಫ್ ಎನ್ನುವ ಜಾಗದಲ್ಲಿ ತತ್ಕಾಲಿಕ ವಸತಿ ಏರ್ಪಡಿಸಿಕೊಳ್ಳಲಾಯಿತು. ಮಹಮದ್ ಹಾಗೂ ಮೈಮುನ್ನಿಸಾಳ ಮದುವೆ ಅಲ್ಲಿಯೆ ಜರುಗಿತು.



ಮಾರನೆಯ ದಿನ ಆತನ ಪರಿವಾರ ನವ ವಧುವಿನೊಂದಿಗೆ ಮದೀನಾಕ್ಕೆ ಹಿಂದಿರುಗಿ ಬಂತು. ಈ ಮೈಮುನ್ನಿಸ ಮಹಮದನ ಮರಣದ ನಂತರವೂ ಐವತ್ತು ವರ್ಷ ಬಾಳಿ ಬದುಕಿದ್ದಳು. ಆಕೆಯ ಕೊನೆಯ ಆಸೆಯ ಪ್ರಕಾರ ಆಕೆಯನ್ನ ಆಕೆ ಹಾಗೂ ಮಹಮದ್ ವಿವಾಹವಾಗಿದ್ದ ಸರೀಫ್'ನಲ್ಲಿಯೆ ಹೂತು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎನ್ನುತ್ತಾರೆ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ದ ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ಮುನ್ನೂರಾ ಎಂಬತ್ತೊಂಬತ್ತರಲ್ಲಿ.


ಮೈಮುನ್ನೀಸಾ ಮಹಮದನ ಅಂತಃಪುರ ಸೇರುವಾಗ ಮಹಮದನ ಹೆಂಡತಿಯರ ಸಂಖ್ಯೆ ಝೈನಬ್'ಳ ಸಾವಿನೊಂದಿಗೆ ಎಂಟಕ್ಕೆ ಕುಸಿದಿತ್ತು. ಹೀಗಾಗಿ ಅಧಿಕೃತ ಪತ್ನಿಯರ ಸಂಖ್ಯೆ ಒಂಬತ್ತಕ್ಕೆ ಸ್ಥಿರವಾಯಿತು. ಸೂಳೆಯರೂ ಸಹ ರೆಹಾನಾ ಹಾಗೂ ಮೇರಿ ಇಬ್ಬರೆ ಆಗಿದ್ದರು. ಮೈಮುನ್ನೀಸಾಳ ಜೊತೆಗೆ ಅವಳ ತಂಗಿಯರಾದ ಉಮ್ರಾಹ್ ಹಾಗೂ ಸಲ್ಮಾ ಸಹ ಇಸ್ಲಾಮ್ ಸ್ವೀಕರಿಸಿ ಮದೀನಾ ವಾಸಿಗಳಾಗಳು ಹೊರಟಿದ್ದರು. ಅಲಿ, ಜಾಫರ್ ಹಾಗೂ ಝೈದ್ ನಡುವೆ ಅವರನ್ನ ಮನದನ್ನೆಯರನ್ನಾಗಿ ಮಾಡಿಕೊಳ್ಳುವ ಹಂಬಲ ಮೂಡಿದ್ದನ್ನ ಗಮನಿಸಿದ ಮಹಮದ್ ಪೈಪೋಟಿ ಏರ್ಪಟ್ಟು ಅದು ಪರಸ್ಪರ ಕಚ್ಚಾಟಕ್ಕೆ ತಿರುಗುವ ಮುನ್ನವೆ ಉಪಾಯವಾಗಿ ಅವರಿಬ್ಬರನ್ನೂ ಸಹ ಜಾಫರನಿಗೆ ಮದುವೆ ಮಾಡಿಸಿಕೊಟ್ಟ. ಅಬಿಸೀನಿಯಾದ ನೂತನ ವಲಸಿಗನಿಗೆ ಕೊಟ್ಟ ಅತ್ಯುತ್ತಮ ಕೊಡುಗೆಗಳು ಅದಾಗಿದ್ದವು.



ಮೆಕ್ಕಾ ಯಾತ್ರೆಯಿಂದ ಮರಳಿ ಬಂದಾದ ನಂತರ ಮೆಕ್ಕಾದ ಸಾಮಾಜಿಕ ವಲಯದಲ್ಲಿಯೂ ಸಹ ಮಹಮದನ ಪ್ರಭಾವ ಸಹಜವಾಗಿ ಹೆಚ್ಚಾಗಿತ್ತು. ಆಂತರಿಕ ಕಚ್ಚಾಟ, ಒಳಜಗಳ, ಅಶಾಂತಿ ಹಾಗೂ ಹಣಕಾಸಿನ ಕಾರಣಕ್ಕೆ ಹುಟ್ಟಿಕೊಳ್ಳುತ್ತಿದ್ದ ಕ್ಷೋಭೆಗಳಿಂದ ರೋಸಿ ಹೋಗಿದ್ದ ಅಲ್ಲಿನ ಅನೇಕ ಪ್ರತಿಷ್ಠಿತರಿಗೆ ಸಹ ಇಸ್ಲಾಮಿನ ಸೆಳೆತ ಹುಟ್ಟಿಕೊಳ್ಳಲು ಶುರುವಾಯಿತು. ಮಹಮದ್ ಹೇಳುವ ಪ್ರಕಾರ ಅದು ಶಾಂತಿ ಸಾರುವ ಧರ್ಮವೆ ಆಗಿದ್ದರೆ ಅದನ್ನ ಅನುಸರಿಸಿ ಶಾಂತ ಚಿತ್ತ ಸಮಾಜವನ್ನ ರೂಪಿಸಿಕೊಳ್ಳುವುದರಲ್ಲಿ ಏನು ತಪ್ಪು? ಎಂದವರಲ್ಲಿ ಕೆಲವರು ವಿಚಾರ ಮಂಥಿಸ ಹತ್ತಿದರು. ಮಹಮದ್ ಹೇಳುವ ಶಾಂತ ಸಹಬಾಳ್ವೆ, ಸಾರುತ್ತಿದ್ದ ಧಾರ್ಮಿಕ ತತ್ವಗಳು, ಅವನು ಅಲ್ಪ ಕಾಲದಲ್ಲಿ ಹೆಚ್ಚು ಶ್ರಮವಿಲ್ಲದೆ ಗಳಿಸಿದ ಹಣ ಬಲ, ವೃದ್ಧಿಸುತ್ತಿದ್ದ ಅವನ ಇಸ್ಲಾಮಿನ ಸಂಖ್ಯಾ ಬಲ ಹಾಗೂ ಅರೇಬಿಯಾದ ಪ್ರಸ್ಥಭೂಮಿಯಾದ್ಯಂತ ಹರಡುತ್ತಿದ್ದ ಅವನ ಪ್ರತಿಷ್ಠೆ ಇವೆಲ್ಲಾ ಸೇರಿ ಅವರ ಮನಸ್ಸು ಸಹ ಅವನತ್ತ ವಾಲುವಂತಾಗಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ.


ಮೆಕ್ಕಾ ಯಾತ್ರೆ ಮುಗಿಸಿ ಮದೀನಾಕ್ಕೆ ಮರಳಿದ ಮಹಮದ ಅದೆ ವರ್ಷ ಅಂದರೆ ಕ್ರಿಸ್ತಶಕ ಅರುನೂರಾ ಇಪ್ಪತ್ತೇಳರ ಏಪ್ರಿಲ್ ತಿಂಗಳಿನಲ್ಲಿ ಬೆನ್ ಸುಲೈಮ್ ಬುಡಕಟ್ಟಿನವರ ಮೇಲೆ ದಂಡೆತ್ತಿಕೊಂಡು ಹೋದ. ಆದರೆ ಅದು ಅಷ್ಟೊಂದು ಪರಿಣಾಮಕಾರಿ ಸಾಫಲ್ಯವನ್ನೇನೂ ಗಿಟ್ಟಿಸಲಿಲ್ಲ. ಇದಾದ ಒಂದು ತಿಂಗಳೊಳಗೆ ಬೆನ್ ಲಾತ್ ಹಾಗೂ ಬೆನ್ ಮುರ್ಯಾ ಬುಡಕಟ್ಟಿನವರ ಮೇಲೆಯೂ ಆತನ ದಿಗ್ವಿಜಯ ಯಾತ್ರೆ ಸಾಗಿತು. ಆ ಯುದ್ಧ ಅತ್ಯಂತ ಯಶಸ್ವಿಯಾಗಿ ಅವರ ಅಸ್ತಿಪಾಸ್ತಿ, ಜನ, ಜಾನುವಾರು ಹಾಗೂ ಭೂಮಿ ಹೀಗೆ ಲಾಭದ ಹೊಳೆಯೆ ಕೊಳ್ಳೆಯ ರೂಪದಲ್ಲಿ ಹರಿದು ಬಂತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೭೫೭ರಲ್ಲಿ.


ಮುಂದೆ ಧಾಳಿ ಸಿರಿಯಾದ ಗಡಿ ಪ್ರದೇಶವಾದ ಧಾತ್ ಆಟ್ಲಾಹ್ ಮೇಲೂ ಮುಂದುವರೆಯಿತು. ಆದರೆ ಅಲ್ಲಿ ಮಹಮದನ ನಿರಂತರ ವಿಜಯಿ ಪಡೆ ಮುಖಭಂಗವನ್ನು ಅನುಭವಿಸಬೇಕಾಯಿತು. ಪರಾಭವವನ್ನು ಹೊತ್ತು ಮದೀನಕ್ಕೆ ಹಿಂದಿರುಗುವುದು ಅನಿವಾರ್ಯವಾಯಿತು. ಧಾಳಿ ಇಟ್ಟ ಪಡೆಗೆ ಪಡೆಯೆ ಹತವಾಗಿ ಯೋಧರಲ್ಲಿ ಒಬ್ಬೆ ಒಬ್ಬ ಜೀವ ಉಳಿಸಿಕೊಂಡು ಪಾರಾಗಿ ಓಡಿ ಬಂದ. ಈ ಸೋಲು ವಿಜಯದ ಅಲೆಯಲ್ಲಿ ತೇಲುತ್ತಲಿದ್ದ ಮಹಮದನಿಗೆ ಸಖೇದಾಶ್ಚರ್ಯವನ್ನು ತಂದಿತು. ಇದೆ ಸಂದರ್ಭದಲ್ಲಿ ರೋಮನ್ ಸಾಮ್ರಾಜ್ಯದ ಭಾಗವಾಗಿದ್ದ ಬಸ್ರಾ ರಾಜ್ಯದ ರಾಜಕುಮಾರನಿಗೆ ದೌತ್ಯ ಕಳುಹಿಸಿದ್ದ ರಾಯಭಾರಿಯನ್ನು ಮೂಠಾ ಎಂಬಲ್ಲಿನ ದಾರಿ ಮಧ್ಯದಲ್ಲಿ ಸ್ಥಳಿಯ ಮುಖಂಡ ದೋಚಿ ಹತ್ಯೆ ಮಾಡಿದ ಸುದ್ದಿಯೂ ಬಂದು ಮಹಮದ್ ಕ್ರೋಧಗೊಂಡ. ಈ ಹತ್ಯೆಯ ಸೇಡನ್ನ ತೀರಿಸಿಕೊಳ್ಳಲು ಕ್ಷಿಪ್ರವಾಗಿ ಮೂರು ಸಾವಿರ ಯೋಧರ ಪಡೆಯೊಂದನ್ನ ಆತ ಸಿದ್ಧ ಪಡಿಸಿದ. ಅದಕ್ಕೆ ತನ್ನ ತನ್ನ ಸಾಕು ಮಗ ಝೈದ್'ನನ್ನೆ ಸೇನಾನಿಯಾಗಿ ನೇಮಿಸಿದ.


ಒಂದೊಮ್ಮೆ ಆತ ಯುದ್ಧಭೂಮಿಯಲ್ಲಿಯೆ ಸತ್ತರೆ ಆತನ ಜಾಗಕ್ಕೆ ಜಾಫರನನ್ನು ನೇಮಿಸಲಾಯಿತು. ಒಂದು ವೇಳೆ ಅವನೂ ಹೋರಾಡುವಾಗಲೆ ಸತ್ತರೆ ಅವನ ಜಾಗಕ್ಕೆ ಅಬ್ದುಲ್ಲಾ ಇಬ್ನ್ ರೆವಾಹನನ್ನು ನೇಮಿಸಲಾಯಿತು. ಹೀಗೆ ನೇಮಕದ ಮೇಲೆ ನೇಮಕಗಳಾದ ಶಸ್ತ್ರಸಜ್ಜಿತ ಮುಸಲ್ಮಾನರ ಅಪಾರ ಸೈನ್ಯ ಸಿರಿಯಾದ ಗಡಿಯತ್ತ ತಿರುಗಿತು. ಯೋಧರ ಆತ್ಮಸ್ತೈರ್ಯವನ್ನು ಹೆಚ್ಚಿಸುವ ಸಲುವಾಗಿ ಆರಂಭದಲ್ಲಿ ಸೈನ್ಯದ ಚುಕ್ಕಾಣಿಯನ್ನ ತಾನೆ ವಹಿಸಿಕೊಂಡ ಮಹಮದ್ ಮದೀನಾದಿಂದ ಕೆಲವು ಮೈಲಿಗಳ ದೂರದವರೆಗೆ ತಾನೆ ಅವರನ್ನೆಲ್ಲಾ ಮುನ್ನಡೆಸಿ ಶುಭ ಹಾರೈಸಿ ದಾರಿ ಮಧ್ಯದಿಂದಲೆ ಮರಳಿ ಸುರಕ್ಷಿತವಾಗಿ ಮನೆ ಸೇರಿಕೊಂಡ!



ಇತ್ತ ಶುರಾಬಿಲ್ ಈ ಪ್ರತಿಕಾರಕ್ಕಾಗಿ ಮುಸಲ್ಮಾನರ ಸೈನ್ಯ ತಮ್ಮತ್ತ ತಿರುಗಿರುವ ಸುದ್ದಿಯನ್ನು ತಿಳಿದು ಧೃತಿಗೆಡಲಿಲ್ಲ. ತಮ್ಮ ಬುಡಕಟ್ಟಿನ ಎಲ್ಲಾ ಯೋಧರೂ ಭೀಕರ ಕಾಳಗಕ್ಕೆ ಅಣಿಯಾಗುವಂತೆ ಸೂಚನೆಯನ್ನಾತ ಕೊಟ್ಟ. ಅವರೂ ಸಹ ಮುಸಲ್ಮಾನ ಸೇನೆಗೆ ಸರಿಸಮವಾಗಿಯೆ ಜಮಾಯಿಸಿ ಬರುವ ಶತ್ರುಗಳಿಗಾಗಿ ಕಾದು ಕೂತರು. ಮುಸಲ್ಮಾನರ ಸೈನ್ಯ ಗಡಿಭಾಗವನ್ನ ಮುಟ್ಟುವ ಹಂತದಲ್ಲಿದ್ದಾಗ ಸೇನಾನಿ ಝೈದ್ ಈ ವಿಷಯವನ್ನ ಅರಿತು ಒಳಗೊಳಗೆ ಅಂಜಿ ಗಾಬರಿಗೊಳಗಾದ. ಗೆಲುವಿನ ಸಾಧ್ಯತೆಯ ಬಗ್ಗೆ ಅವನ ಮನದಲ್ಲಿ ಶಂಕೆ ಮೂಡತೊಡಗಿತು.



ಶೂರಾಬಿಲ್'ನ ನೆಲೆ ವಾಸ್ತವದಲ್ಲಿ ರೋಮನ್ ಸಾಮ್ರಾಜ್ಯದ ಒಂದು ಭಾಗವೆ ಆಗಿತ್ತು. ಅವರ ಯುದ್ಧ ಸನ್ನದ ಸ್ಥಿತಿಯನ್ನ ಕಣ್ಣಾರೆ ಕಂಡ ಝೈದ್ ಕೆಂಗೆಟ್ಟ. ಅವರಿಗೇನೋ ಅದು ಮನೆಯ ಅಂಗಳವಾಗಿತ್ತು, ಆದರೆ ಇವರು ಬಹುದೂರ ಮರಳುಗಾಡಿನ ಹಾದಿ ಸವೆಸಿ ಸುಸ್ತಾಗಿ ಹೋಗಿದ್ದರು. ಆತ ತನ್ನ ಆಪ್ತೇಷ್ಟರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿ, ಮಹಮದನಿಗೆ ಈ ಬಗ್ಗೆ ಹಾಗೂ ಸದ್ಯದ ಪರಿಸ್ಥಿಯ ಬಗ್ಗೆ ಒಂದು ಸಂದೇಶ ಕಳುಹಿಸಿ ಅವನ ಸಲಹೆ ಪಡೆದು ಮುಂದುವರೆದರೆ ಒಳ್ಳೆಯದಲ್ಲವೆ? ಎನ್ನುವ ಪ್ರಸ್ತಾಪವನ್ನ ಆತ ಮುಂದಿಟ್ಟ. ಆತನ ಅಂಜುಬುರುಕತನವನ್ನ ಅಬ್ದುಲ್ಲಾ ಇಬ್ನ್ ರವಾಹ್ ತೀವೃವಾಗಿ ಖಂಡಿಸಿ, ಬಂದಿರುವುದೆ ಅವನ ಆಜ್ಞೆಯ ಮೇಲೆ ಎಂದಾಗಿರುವಾಗ ಈ ಕೊನೆ ಕ್ಷಣದ ಕೊಸರಾಟವಾದರೂ ಏಕೆ? ಹೋರಾಟದ ಕಣಕ್ಕೆ ಧುಮುಕುವುದೆ ಸೂಕ್ತ ಎಂದಾತ ಸಮರೋತ್ಸಾಹವನ್ನ ಪ್ರಕಟಿಸಿದ. ಅದಕ್ಕೆ ಎಲ್ಲರ ಸಹಸಮ್ಮತಿ ದೊರೆತ ಕಾರಣ ಝೈದ್'ಗೆ ಹೋರಾಡದೆ ವಿಧಿಯೆ ಉಳಿಯಲಿಲ್ಲ.



ಮೃತ ಸಮುದ್ರ ಅಥವಾ ಡೆಡ್ ಸೀ ತಟದಲ್ಲಿ ಇಂದಿರುವ ಇಸ್ರೇಲ್ ಹಾಗೂ ಜೋರ್ಡಾನ್ ಗಡಿ ಭಾಗದಲ್ಲಿ ಎರಡೂ ಸೈನ್ಯಗಳು ಮುಖಾಮುಖಿ ಸಂಧಿಸಿದವು. ರೋಮನ್ ಪಡೆಗಳ ಸಹಕಾರದಿಂದ ಶುರಾಬಿಲ ಮುಸಲ್ಮಾನ ಪಡೆಯನ್ನ ಹಿಮ್ಮೆಟ್ಟಿಸುತ್ತ ಬಂದ. ಸೋಲಿನ ರುಚಿ ಕಾಣ ತೊಡಗಿದ ಪಡೆ ಮೂಠಾದ ಬಳಿ ಲಂಗರು ಹಾಕಿತು. ಅಲ್ಲಿಗೂ ಅಟ್ಟಿಸಿಕೊಂಡು ಬಂದು ಕಂಡವರನ್ನ ಶುರಾಬಿಲ್ ಪಡೆ ಕೊಚ್ಚುತ್ತಾ ಬಂತು. ಝೈದ್ ಶುರಾಬಿಲ್ ಕತ್ತಿಗೆ ಸಿಕ್ಕಿ ಹತನಾದ. ಅವನ ಸ್ಥಾನಕ್ಕೆ ಏರಿದ ಜಾಫರ್ ಸಹ ಹೋರಾಟದ ಹಾದಿಯಲ್ಲಿ ಸತ್ತು ಹೋದ. ಅವನ ನಂತರದ ನಾಯಕ ಅಬ್ದುಲ್ಲಾ ಇಬ್ನ್ ರವಾಹ್ ಪಡೆಯ ನೇತೃತ್ವ ವಹಿಸಿಕೊಂಡು ಶತ್ರು ಪಡೆಗಳ ಮೇಲೆ ಮುಗಿ ಬಿದ್ದನಾದರೂ ಅವನ ಆಟವೂ ಹೆಚ್ಚು ಹೊತ್ತು ಸಾಗದೆ ಆತನೂ ಸತ್ತು ನೆಲಕ್ಕೆ ಒರಗಿದ. ಮಹಮದನ ಮುಸಲ್ಮಾನ ಸೈನ್ಯದ ಪಾಳ್ಯವನ್ನು ಶುರಾಬಿಲ್ ಪಡೆ ನುಚ್ಚುನೂರು ಮಾಡಿ ಬಿಸಾಕಿತು. ಈ ಸೋಲಿನ ಸಾಧ್ಯತೆಯನ್ನ ಊಹಿಸಿಯೆ ಮಹಮದ್ ಉಪಾಯವಾಗಿ ಬಲಿ ಪ್ರಾಣಿಗಳನ್ನಾಗಿ ಅವರನ್ನೆಲ್ಲಾ ಹೋರಾಡಲು ಕಳುಹಿಸಿ, ತಾನು ಮಾತ್ರ ಸುರಕ್ಷಿತವಾಗಿ ಮದೀನದಲ್ಲಿಯೆ ಉಳಿದಿದ್ದ ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ದ ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ತೊಂಬತ್ತಾರರಲ್ಲಿ.


ಅಳಿದುಳಿದ ಬೆರಳೆಣಿಕೆಯಷ್ಟು ಮುಸಲ್ಮಾನ ಯೋಧರೊಂದಿಗೆ ಬದುಕಿ ಉಳಿದಿದ್ದ ಅನಂತರದ ಹಂತದ ನಾಯಕ ಖಲೀದ್ ತಲೆ ತಪ್ಪಿಸಿಕೊಂಡು ಮದೀನಕ್ಕೆ ಓಡಿ ಬಂದು ಮುಟ್ಟಿದ. ಸೋತು ಸುಣ್ನವಾಗಿ ಮರಳಿಬಂದ ತನ್ನ ಸೈನ್ಯವನ್ನು ಮಹಮದ್ ಸಂತೈಕೆಯ ಧ್ವನಿಯಲ್ಲಿ ಉತ್ತೇಜಿಸುತ್ತಲೆ ನಗರಕ್ಕೆ ಬರ ಮಾಡಿಕೊಂಡ. ತನ್ನ ಕುಲ ಬಾಂಧವರಾದ ಜಾಫರ್, ಝೈದ್ ಹಾಗೂ ಅಬ್ದುಲ್ಲಾನ ದಾರುಣ ಸಾವಿನ ಸುದ್ದಿ ಮಾನಸಿಕವಾಗಿ ಆತನನ್ನು ಘಾಸಿಗೊಳಿತು. ತನ್ನ ಗಂಡನಿಗಾಗಿ ಕಾದು ಕುಳಿತಿದ್ದ ಆಸ್ಮಾಳಿಗೆ ಸುದ್ದಿ ತಿಳಿಸಲು ಸ್ವತಃ ತೆರಳಿದ ಮಹಮದ್ ಅಲ್ಲಿ ಗಂಟಲುಬ್ಬಿ ಬಂದು ಮಾತನಾಡಲಾಗದೆ ಅವಳ ಎಳೆ ಮಕ್ಕಳನ್ನ ತಬ್ಬಿಕೊಂಡು ರೋಧಿಸಿದ. ಹೀಗೆ ಸಾವಿನ ಸಂಗತಿ ಅಲ್ಲಿ ಬಿತ್ತರಗೊಂಡಿತು. ಅಲ್ಲಿಂದ ಮಹಮದನ ಸವಾರಿ ಝೈದ್ ಬಿಡಾರದತ್ತ ಹೊರಟಿತು. ಅದಾಗಲೆ ಸುದ್ದಿ ಅರಿತಿದ್ದ ಝೈದ್'ನ ಪುಟ್ತ ಮಗಳು ಮಹಮದನನ್ನು ಕಾಣುತ್ತಲೆ ಆತನ ತೆಕ್ಕೆಗೆ ಬಿದ್ದು ಬಿಕ್ಕಿಬಿಕ್ಕಿ ಅಳ ತೊಡಗಿದಳು. ಅವಳೊಂದಿಗೆ ಸೇರಿ ತಾನೂ ತನ್ನ ಆತ್ಮೀಯ ಮಿತ್ರನ ಸಾವಿನ ಶೋಕದಲ್ಲಿ ಮಹಮದ್ ಕಣ್ಣೀರಿನಲ್ಲಿ ಮಿಂದೆದ್ದ.



ಜಾಫರನ ವಿಧವೆ ಆಸ್ಮಾ ಮಹಮದನ ಮಾವ ಅಬು ಬಕರ್'ನನ್ನು ಮದುವೆಯಾದಳು. ಅವನೂ ಸತ್ತ ನಂತರ ಮಹಮದನ ಅಳಿಯ ಅಲಿಯ ಮನೆಯನ್ನು ಮಡದಿಯಾಗಿ ತುಂಬಿದಳು. ಅವಳಿಗೆ ಅವರಿಬ್ಬರಿಂದಲೂ ಒಟ್ಟು ಐದು ಮಕ್ಕಳಾದವು. ಮೂಠಾ ಯುದ್ಧದ ಘೋರ ಪರಾಭವ ಏರುತ್ತಿದ್ದ ಮಹಮದನ ಪ್ರತಿಷ್ಠೆಗೆ ತೀವೃ ಹಿನ್ನೆಡೆಯನ್ನು ಉಂಟು ಮಾಡಿತ್ತು. ಈ ಪರಿಸ್ಥಿತಿಯ ಲಾಭ ಪಡೆಯಲು ಹಲವರು ಹವಣೆಸಿದರು. ಬೆದಾವಿನರು ಅದರಲ್ಲಿ ಪ್ರಮುಖರಾಗಿದ್ದರು. ಕಬ್ಬಿಣ ಕಾದಾಗಲೆ ಬಡಿಯಬೇಕು ಎನ್ನುವುದನ್ನ ಅರಿತಿದ್ದ ಅವರು ಏಕಾಏಕಿ ಮದೀನಾದ ಮೇಲೆ ಧಾಳಿ ಎಸಗಲು ಸಿದ್ಧರಾಗುತ್ತಿರುವ ಸಂಗತಿ ಗೂಢಚರರ ಮೂಲಕ ಮಹಮದನಿಗೆ ಬಂದು ಮುಟ್ತಿತು. ಇದರಿಂದ ರೊಚ್ಚಿಗೆದ್ದ ಆತ ಅದಕ್ಕೂ ಮೊದಲೆ ಅವರನ್ನ ಹಣೆದು ಬಿಸಾಡಲು ಪಡೆಯೊಂದನ್ನ ಸಿದ್ಧ ಪಡಿಸಿ ಅಮ್ರ್ ಎಂಬಾತನ ನೇತೃತ್ವದಲ್ಲಿ ಅದನ್ನ ಬೆದಾವಿನರ ವಿರುದ್ಧ ಛೂ ಬಿಟ್ಟ. ಆತ ಸಿರಿಯಾದ ಗಡಿಯವರೆಗೆ ಪ್ರಯಾಣಿಸಿದನಾದರೂ ಅದು ತನ್ನ ಕೈಲಿರುವ ಪಡೆಯಿಂದ ಮಾತ್ರ ಸಾಧ್ಯವಾಗುವ ಸಂಗತಿ ಅಲ್ಲ ಅನ್ನುವ ವಿವೇಕ ಅವನಿಗೆ ಶೀಘ್ರದಲ್ಲಿಯೆ ಮೂಡಿತು. ಇನ್ನಷ್ಟು ಯೋಧರನ್ನ ಕಳಿಸಿರೆಂದು ಆತ ಮೊರೆ ಇಟ್ತ. ಮಹಮದ್ ಕೂಡಲೆ ಬಂದ ಸಹಾಯದ ಸಂದೇಶಸ ಬೆನ್ನಿಗೆ ಅಬು ಒಬೈದ್ ನೇತೃತ್ವದಲ್ಲಿ ಒಂದು ಪಡೆಯನ್ನ ರವಾನಿಸಿದ.



ಸಮರಾಂಗಣದಲ್ಲಿ ಯಾರು ಸೇನೆಯನ್ನ ಮುನ್ನಡೆಸಬೇಕು? ಅನ್ನುವ ವಿಷಯದಲ್ಲಿ ಅಮ್ರ್ ಹಾಗೂ ಅಬು ಒಬೈದ್ ನಡುವೆ ತಿಕ್ಕಾಟ ನಡೆಯಿತಾದರೂ,ಕಡೆಗೆ ಒಬೈದ್ ನಾಯಕನಾಗುವಲ್ಲಿ ಸಫಲನಾದ. ಆತನ ಮುಖಂಡತ್ವದಲ್ಲಿ ಬೆದಾವಿನರ ಸೊಕ್ಕನ್ನ ಯಶಸ್ವಿಯಾಗಿ ಅಡಗಿಸಲಾಯಿತು. ಸಿರಿಯಾದ ಈ ಗಡಿಭಾಗ ಈಗ ಅಧಿಕೃತವಾಗಿ ಮಹಮದನ ಅಧಿಪತ್ಯಕ್ಕೆ ಒಳ ಪಟ್ಟಿತು. ಮಹಮದನ ಶ್ರಮ, ಆತನ ಹಿಂಬಾಲಕರ ಬಲಿದಾನ, ಅವರೆಲ್ಲರೂ ಇಸ್ಲಾಮಿನ ಮೇಲಿಟ್ಟಿದ್ದ ನಿಷ್ಠೆ ಹಾಗೂ ಅವರೆಲ್ಲರ ಒಟ್ಟಾರೆ ಸಾಹಸಗಳೆಲ್ಲವೂ ಸೇರಿ ಅರೇಬಿಯಾ ಪ್ರಸ್ಥಭೂಮಿಯ ಉದ್ದಗಲಕ್ಕೂ ಈಗ ಇಸ್ಲಾಮ್ ಸಾಮ್ರಾಜ್ಯ ಹರಡಿತ್ತು. ಸಿರಿಯಾ ಅದರ ಗಡಿ ಭಾಗವಾಗಿ ಮಾನ್ಯವಾಯ್ತು.


ಅಲ್ ಮುಕ್'ದಾದ್ ಬಿನ್ ಅಮ್ರ್.
ಅಬ್ದುಲ್ಲಾ ಬಿನ್ ಮಸೂದ್.
ಹಂಝಾ ಬಿನ್ ಅಬ್ದುಲ್ ಮುಖ್ತಾಲಿಬ್.
ಅಬುದಾರ್ ಅಲ್ ಘಿಫಾರಿ.
ಅಮ್ಮಾರ್ ಬಿನ್ ಯಾಸಿರ್.
ಅಲಿ ಬಿನ್ ಅಬು ತಾಲಿಬ್.
ಹುದೈಫ್ ಬಿನ್ ಅಲ್ ಎಮಾನ್.
ಜಾಫರ್ ಬಿನ್ ಅಬು ತಾಲಿಬ್.
ಬಿಲಾಲ್ ಬಿನ್ ರವಾಹ್ ಹಾಗೂ
ಉಮರ್ ಬಿನ್ ಅಲ್ ಖತ್ತಾಬ್ ಈ ಕೀರ್ತಿ ಪತಾಕೆಯನ್ನ ಅಲ್ಲೆಲ್ಲಾ ಹಬ್ಬಿಸಿದ ಖ್ಯಾತಿಗೆ ಅಸಲು ಹಕ್ಕುದಾದರಾಗಿರುತ್ತಾರೆ ಅನ್ನುತ್ತಾರೆ ಇತಿಹಾಸಕಾರ ಅಬ್ ಶಾನವಲ್ ತಮ್ಮ ಕೃತಿ 'ದ ಮಿನಿಸ್ಟರ್ಸ್ ಅರೌಂಡ್ ದ ಪ್ರಾಪೆಟ್' ಕೃತಿಯ ಪುಟ ಸಂಖ್ಯೆ ಐದರಿಂದ ಏಳರ ನಡುವೆ.


( ಇನ್ನೂ ಇದೆ.)

Sunday, November 15, 2015

ವಲಿ - ೩೦








ಖೈಬರ್ ಕಣಿವೆ ಮದೀನಾದಿಂದ ಸಿರಿಯಾಕ್ಕೆ ಹೋಗುವ ಹಾದಿಯಲ್ಲಿ ನಗರದಿಂದ ಬಹುತೇಕ ನೂರು ಮೈಲಿ ದೂರದಲ್ಲಿ ಇದೆ. ಸುತ್ತಲೂ ಬೆಟ್ಟಗುಡ್ದ ಹಾಗೂ ಕಣಿವೆಯಿಂದ ಅವೃತ್ತವಾದ ಈ ಪ್ರದೇಶದಲ್ಲಿ ಬಹುತೇಕ ಯಹೂದಿಗಳ ಪ್ರಾಬಲ್ಯವಿತ್ತು. ಅರೇಬಿಯಾದ ಇನ್ನಿತರ ಎಡೆಗಳಲ್ಲಿ ನೆಲೆ ಕಳೆದುಕೊಂಡು ನಿರಾಶ್ರಿತರಾದ ಯಹೂದಿ ಬುಡಕಟ್ಟುಗಳ ಹಾಗೂ ಉಪ ಪಂಗಡಗಳ ಮಂದಿಯೂ ಸಹ ಆಶ್ರಯವನ್ನು ಅರಸಿಕೊಂಡು ಅಲ್ಲಿಗೆ ಬಂದಿದ್ದರು. ಹೀಗೆ ವಲಸೆ ಬಂದವರು ಹಾಗೂ ಅಲ್ಲಿನ ಮೂಲ ನಿವಾಸಿಗಳು ಪ್ರತ್ಯೇಕವಾಗಿ ಬೆಟ್ಟಗಳ ಮೇಲೆ ತಮ್ಮ ರಕ್ಷಣಾ ಕೋಟೆಗಳನ್ನ ನಿರ್ಮಿಸಿಕೊಂಡು ಸುರಕ್ಷತೆಯ ದೃಷ್ಟಿಯಿಂದ ಅಂತಹ ಕೋಟೆಗಳೊಳಗೆಯೆ ವಸತಿಯನ್ನ ಹೂಡಿದ್ದರು.


ರಾಜಕೀತವಾಗಿ ಪ್ರಬಲನೂ ಹಾಗೂ ಮಾನ್ಯನೂ ಆಗುತ್ತಿದ್ದಂತೆ ಮಹಮದನ ಗ್ರಧೃ ದೃಷ್ಟಿ ಈಗ ಖೈಬರ್ ಮೇಲೆ ಬಿದ್ದಿತು. ಯಹೂದಿಗಳ ವಿಚಾರದಲ್ಲಿ ಒಂದು ಬಗೆಯ ಪೂರ್ವಗ್ರಹ ಮನಸ್ಥಿತಿಯಿದ್ದ ಮಹಮದ್ ಇನ್ನಿತರರಂತೆ ಅವರಿಗೆ ಯಾವುದೇ ದೌತ್ಯ ಕಳಿಸಲು ಆಸಕ್ತನೆ ಆಗಿರಲಿಲ್ಲ. ಅವರನ್ನ ಬೆದರಿಸಿ ವಶಕ್ಕೆ ತೆಗೆದುಕೊಳ್ಳಬಲ್ಲೆ ಅನ್ನುವ ಆತ್ಮವಿಶ್ವಾಸ ಅವನಿಗಿದ್ದದ್ದೂ ಬಹುಶಃ ಅವರನ್ನ ಉಡಾಫೆಯಿಂದ ನಡೆಸಿಕೊಳ್ಳುವಂತೆ ಮಾಡಿದ್ದವು ಅನ್ನಬಹುದು. ಯಹೂದಿಗಳೊಂದಿಗೆ ಹಿಂದೆಯೂ ಕ್ರೌರ್ಯ ಮೆರೆದ ಆತನ ಹಿನ್ನೆಲೆಯೂ ಯಹೂದಿಗಳೊಂದಿಗಿನ ಆತನ ಈ ದಾಢಸಿ ನಡುವಳಿಕೆಗೆ ಮಾನಸಿಕ ಒತ್ತಾಸೆ ನೀಡಿತ್ತು. 



ಯಾವುದೆ ಪೂರ್ವ ಸೂಚನೆಯನ್ನೂ ಕೊಡದೆ ಶಸ್ತ್ರಸಜ್ಜಿತರಾದ ಸುಮಾರು ಐದುನೂರು ಯೋಧರೊಂದಿಗೆ ಮಹಮದ್ ಖೈಬರ್ ಮೇಲೆ ದಂಡೆತ್ತಿ ಹೊರಟ. ಜೊತೆ ಹೆಂಡತಿ ಉಮ್ ಸಲ್ಮಾ ಸಹ ಇದ್ದಳು. ಅತ್ಯಂತ ಕರಾರುವಾಕ್ಕಾಗಿ ಚುರುಕಿನಿಂದ ಅಡೆತಡೆಯಿಲ್ಲದೆ ನುಗ್ಗಿಬಂದ ಮುಸಲ್ಮಾನರ ಸೈನ್ಯ ಯಹೂದಿಗಳನ್ನ ಬೆದರಿತಷ್ಟೆ ಅಲ್ಲಾ ಬುಡದಿಂದಲೆ ಅಲ್ಲಾಡಿಸಿ ಹಾಕಿಬಿಟ್ಟಿತು. ಅವರಿಗೆ ಶರಣಾಗಿ ಮತಾಂತರವಾಗುವುದರ ಹೊರತು ಯಾವುದೆ ಆಯ್ಕೆ ಉಳಿದಿರಲಿಲ್ಲ. ಈ ಏಕಪಕ್ಷೀಯವಾದ ಕಿರಾತಕ ನಡೆಯ ಯುದ್ಧಪಿಪಾಸುಗಳ ಸಮ್ಮುಖದಲ್ಲಿ ಜೀವ ಉಳಿಸಿಕೊಳ್ಳಲು ಬೆಚ್ಚಿ ಬಿದ್ದ ಯಹೂದಿಗಳಿಗೆ ಇನ್ಯಾವ ಆಯ್ಕೆಯೂ ಉಳಿದಿರಲಿಲ್ಲ. ಹೆದರಿ ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಓಡಿಹೋದವರ ಆಸ್ತಿಗಳೆಲ್ಲ ಲೂಟಿಗೆ ತುತ್ತಾದವು. ಒಂದೊಂದೆ ಕೋಟೆಯನ್ನೂ ಸುಲಭವಾಗಿ ಸೂರೆ ಹೊಡೆಯುತ್ತಾ ಮುನ್ನುಗ್ಗಿದ ಮಹಮದ್ ಯಹೂದಿ ಕೋಟೆಗಳಲ್ಲೆ ಅತ್ಯಂತ ಬಲಿಹ್ಠವಾಗಿದ್ದ ಅಲ್ ಕಮಾಸ್ ಹೆಬ್ಬಾಗಿಲನ್ನ ಬಂದು ಮುಟ್ಟಿದ. 


ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ದ ಪುಟ ಸಂಖ್ಯೆ ೭೨೪ ಹಾಗೂ ೧೨೫ರಲ್ಲಿ ಇತಿಹಾಸಕಾರ ಅಲ್ ಮುಬಾರಖಿ ಹೇಳುವಂತೆ ಮುಸಲ್ಮಾನರ ಮುತ್ತಿಗೆ ವಾರದ ತನಕ ಅಲ್ಲಿ ವಿಸ್ತರಿಸಿತು. ಹಿಂದೆ ಮಹಮದನ ಸುಪಾರಿ ಕೊಲೆಗಡುಕ ಪಡೆಯಿಂದ ಸಾವನ್ನಪ್ಪಿದ್ದ ಅಬು ರಫಿಯ ಮೊಮ್ಮಗ ಕಿನಾನ್ ಈಗ ಕೋಟೆ ರಕ್ಷಣೆಯ ಹೊಣೆ ಹೊತ್ತು ಶರಣಾಗತಿಯನ್ನ ಪ್ರಕಟಿಸದೆ ಜೀವದ ಹಂಗು ತೊರೆದು ಆಕ್ರಮಣಕಾರಿ ಮುಸಲ್ಮಾನ ಪಡೆಯ ವಿರುದ್ಧ ವೀರೋಚಿತ ಹೋರಾಟ ನಡೆಸಿದ. ಆತನ ಹೋರಾಟದ ಹುಮ್ಮಸ್ಸು ಹೆಚ್ಚಿದಷ್ಟೂ ಮಹಮದನ ಹಟವೂ ಉಕ್ಕ ತೊಡಗಿ ಆತ ತನ್ನ ಸರ್ವಶಕ್ತಿಯನ್ನೂ ಪ್ರಯೋಗಿಸಿ ಮುತ್ತಿಗೆಯನ್ನ ಮುಂದುವರೆಸಿದ. ಮುಸಲ್ಮಾನರ ಪಡೆಯ ಅಗಾಧತೆಯ ಮುಂದೆ ಕೆಲವೆ ಮಂದಿಯಿದ್ದ ಆಯುಧಗಳ ಕೊರತೆಯೂ ಧಾರಾಳವಾಗಿದ್ದ ಯಹೂದಿಗಳ ಹೋರಾಟ ಬಹಳ ಕಾಲ ಮುಂದುವರೆಸಲಾಗಲಿಲ್ಲ. ನಿಸ್ಸಹಾಯಕರಾದ ಅವರು ಕೋಟೆ ಬಾಗಿಲು ತೆರೆದು ತಮ್ಮ ಶರಣಾಗತಿಯನ್ನ ಸೂಚಿಸುವ ಹೊತ್ತಿಗೆ ಅವರ ಪಡೆಯ ತೊಂಬತ್ತಮೂರು ಯೋಧರು ಸತ್ತಿದ್ದರೆ, ಎದುರಾಳಿ ಮುಸಲ್ಮಾನರ ಪಡೆಯಲ್ಲಿ ಹತ್ತೊಂಬತ್ತು ಮಂದಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. 


ಶರಣಾದ ಯಾರೊಬ್ಬರೂ ಸಹ ಮತಾಂತರಕ್ಕೆ ಸಮ್ಮತಿಸದೆ ತಮ್ಮ ಸರ್ವಸ್ವವನ್ನೂ ತ್ಯಜಿಸಿ ಊರು ಬಿಡುತ್ತೇವೆ ಅಂದರು. ಅವರ ಗಡಿಪಾರಿಗೆ ಮಹಮದ್ ಸಹ ಸಮ್ಮತಿಸಿದ. ಅದಕ್ಕೂ ಮೊದಲು ವಿಚಾರಣೆಯ ಒಂದು ಪ್ರಹಸನವನ್ನ ನಡೆಸಲಾಯಿತು. ಮೂಲತಃ ವ್ಯಾಪಾರಿಗಳಾಗಿದ್ದ ಆ ಯಹೂದಿ ಪಂಗಡದ ಮುಖ್ಯಸ್ಥ ಕಿನಾನ್ ಹಾಗೂ ಅವನ ಹೆಂಡತಿ ಸಫೀಯಾಳನ್ನ ಹೆಡೆಮುರಿ ಕಟ್ಟಿ ಮಹಮದನ ಮುಂದೆ ಎಳೆದು ತರಲಾಯಿತು. ಮೆಕ್ಕಾದ ಮಂದಿಗೆ ಸಾಲವಾಗಿ ಕೊಡುತ್ತಿದ್ದ ಚಿನ್ನದ ಬಟ್ಟಲುಗಳನ್ನ ಅದೆಲ್ಲಿಟ್ಟಿರುವೆ? ಎಂದು ಮಹಮದ್ ಕಿನಾನ್'ನನ್ನು ಪ್ರಶ್ನಿಸಿದ. ಆದರೆ ಆತ ತನಗೆ ಗೊತ್ತಿಲ್ಲ ಎಂದು ಮಾರುತ್ತರಿಸಿದ. 



ಜಪ್ತಿಯ ವೇಳೆಯಲ್ಲಿ ಚಿನ್ನದ ಬಟ್ಟಲುಗಳು ಕಿನಾನ್ ನಿವಾಸದ ಹಗೇವಿನಲ್ಲಿ ಪತ್ತೆಯಾದವು. ಇದನ್ನೆ ನೆಪ ಮಾಡಿದ ಮಹಮದ್ ಕಿನಾನ್'ನನ್ನು ಸುಳ್ಳು ಹೇಳಿದ ಅಪರಾಧಕ್ಕಾಗಿ ಅತ್ಯಂತ ಕ್ರೂರವಾಗಿ ಸಾರ್ವಜನಿಕ ಸ್ಥಳದಲ್ಲಿ ಮರಣದಂಡನೆಗೆ ಒಳಪಡಿಸಿದ. ಮೊದಲಿಗೆ ಅವನ ಕಣ್ಣು ಹಾಗೂ ನಾಲಗೆಯನ್ನ ಕೀಳಲಾಯಿತು. ಅನಂತರ ನೆಲದ ಮೇಲೆ ಮಲಗಿಸಿ ಬೆಂಕಿಯ ಉಂಡೆಗಳನ್ನ ತರಿಸಿ ಜೀವಂತವಿರುವಾಗಲೆ ಎದೆಯ ಮೇಲೆ ಸುರಿಯಲಾಯಿತು. ಕಿನಾನ್ ಜೀವಂತ ಸುಟ್ಟು ಕರಕಲಾದ. ಇಷ್ಟಾದರೂ ಮಹಮದನ ವಿಕೃತಿ ನಿಂತಿರಲಿಲ್ಲ. ಅರೆಬೆಂದ ಕಿನಾನ್ ದೇಹವನ್ನ ರುಂಡ ಹಾಗೂ ಮುಂಡ ಕಡಿದು ಪ್ರತ್ಯೇಕವಾಗಿಸಲು ಆತ ಆಜ್ಞಾಪಿಸಿದ ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಎಪ್ಪತ್ತೇಳರಲ್ಲಿ.



ಅನಂತರ ಮಹಮದ್ ತನ್ನ ನೀಗ್ರೋ ಬಂಟ ಬಿಲಾಲನನ್ನು ಕರೆದು ಕಿನಾನ್ ಎಳೆಯ ಹೆಂಡತಿಯನ್ನ ಎಳೆದು ತರಲು ಸೂಚನೆಯಿತ್ತ. ಹದಿನೇಳು ವರ್ಷದ ಸಫಿಯಾಳನ್ನು ಹಾಗೂ ಅವಳ ದಾಸಿಯನ್ನ ವಿಛಿದ್ರವಾಗಿ ಭಯಾನಕ ಸ್ವರೂಪದಲ್ಲಿದ್ದ ಕಿನಾನ ಸುಟ್ಟ ದೇಹವನ್ನ ತೋರಿಸುತ್ತಲೆ ಬಿಲಾಲ್ ಎಳೆದುಕೊಂಡು ಬಂದ. ಆಕೆಯ ದಾಸಿ ಈ ಬೀಭತ್ಸ ದೃಶ್ಯವನ್ನು ಕಂಡು ಹುಚ್ಚಳಂತೆ ಬೊಬ್ಬಿಡ ತೊಡಗಿದಳು. ಅವಳಿಗೆ ತೀವೃವಾಗಿ ಮಾನಸಿಕ ಅಘಾತವಾಗಿತ್ತು. ಹುಚ್ಚು ಕೆದರಿದಂತೆ ಭೋರಿಟ್ಟು ಅಳುತ್ತಿದ್ದ ಅವಳನ್ನ ದೂರ ಸಾಗಿಸಲು ಮಹಮದ್ ಸೂಚನೆ ಕೊಟ್ಟ. ಅವರನ್ನು ಹೆಣದ ಮುಂದಿನಿಂದ ಕರೆದುಕೊಂಡು ಬಂದ ಬಿಲಾಲನಿಗೆ ಛೀಮಾರಿ ಬಿತ್ತು. 



ಸಫಿಯಾ ಬಂದು ಎದುರು ನಿಲ್ಲುತ್ತಿದ್ದಂತೆ ಸಂತುಷ್ಟನಾದ ಮಹಮದ್ ಅವಳನ್ನು ಸಂತೈಸುತ್ತಾ ಹತ್ತಿರ ಬಂದ. ಅವಳ ಮೈಮೇಲೆ ತನ್ನ ಮೇಲು ಹೊದಿಕೆಯನ್ನ ಹೊದೆಸಿ ಸೂಚ್ಯವಾಗಿ ಅವಳಿನ್ನು ತನ್ನವಳು ಎನ್ನುವುದನ್ನ ಎಲ್ಲರಿಗೂ ಸ್ಪಷ್ಟ ಪಡಿಸಿದ. ಹದಿನೇಳು ವರ್ಷದ ಎಳೆ ಚಲುವೆ ಬಲವಂತವಾಗಿ ಅರವತ್ತರ ಮುದುಕ ಮಹಮದನನ್ನು ತನ್ನ ಗಂಡ ಕಿನಾನನ ದೇಹ ಇನ್ನೂ ಸಂಪೂರ್ಣ ಬೂದಿಯಾಗುವ ಮೊದಲೆ ಮದುವೆಯಾಗಿ ತನ್ನ ಲೈಂಗಿಕ ನಿಷ್ಠೆಯನ್ನು ಬದಲಿಸ ಬೇಕಾಯಿತು! ವಿವಾಹವನ್ನ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ಮಹಮದ್ ಮಾಡಿಕೊಂಡನೆಂದೂ, ನೆರೆದ ಎಲ್ಲರಿಗೂ ಔತಣಕೂಟವನ್ನು ಏರ್ಪಡಿಸಲಾಗಿತ್ತಂದೂ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ಇನ್ನೂರಾ ನಲವತ್ತೊಂದರಲ್ಲಿ ವಿವರಿಸುತ್ತಾನೆ. 



ಈ ಒತ್ತಾಯದ ಮದುವೆಗೆ ಮೊದಲು ಸಮ್ಮತಿ ಇಲ್ಲದಿದ್ದರೂ, ಸಫಿಯಾ ಅನಿವಾರ್ಯವಾಗಿ ತನ್ನ ವಿಧಿಯನ್ನ ಒಪ್ಪಿಕೊಂಡು ಆದಷ್ಟು ಉತ್ಸಾಹದಿಂದಲೆ ವಿವಾಹದ ವಿಧಿಗಳಲ್ಲಿ ಪಾಲ್ಗೊಂಡಳು. ಆದರೆ ಆಕೆಯ ಯಾವೊಬ್ಬ ಇಷ್ಟ ಮಿತ್ರರೂ ಸಹ ಅವಸರದ ಕೂಡಿಕೆಯಂತಹ ಈ ಹಾದರ ಸಮಾನ ಮದುವೆಗೆ ಅಭಿಮಾನ ಅಥವಾ ಗೌರವವನ್ನು ತೋರಿಸಲಿಲ್ಲ ಎನ್ನುತ್ತಾರೆ ಅವರು.



ಮದುವೆಯ ನಂತರ ಆತ ಕೆಲಕಾಲ ಅಲ್ಲಿಯೆ ಮಧುಚಂದ್ರ ಮಾಡಿಕೊಂಡು ಉಳಿದ. ಸ್ಥಳಿಯಯರು ಆತನಿಗೆ ಹೆದರಿ ಆಜ್ಞಾನುವರ್ತಿಗಳಾಗಿದ್ದರೆ ವಿನಃ ಅವರಲ್ಲಿ ಆತನ ಬಗ್ಗೆ ಅಂತಹ ಗೌರವಾದರಗಳೊಂದೂ ಇದ್ದಿರಲಿಲ್ಲ. ಅಂತಹ ಸಮಯದಲ್ಲಿ ಸಫಿಯಾಳ ನಡತೆಗೆ ತದ್ವಿರುದ್ಧವಾದ ಝೈನಬ್ ಎಂಬ ಸೋತ ಯಹೂದಿ ಪಡೆಯ ಇನ್ನೊಬ್ಬ ಮಹಿಳೆಯ ಪ್ರಕರಣವನ್ನು ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ಘಮದ್'ನ ಪುಟ ಸಂಖ್ಯೆ ಮುನ್ನೂರಾ ಎಪ್ಪಂತ್ತೆಂಟರಲ್ಲಿ ವಿವರಿಸುತ್ತಾರೆ. 



ಝೈನಬ್ ಈ ಯುದ್ಧದಲ್ಲಿ ಯೋಧರಾಗಿದ್ದ ತನ್ನ ಗಂಡ, ಅಪ್ಪ ಹಾಗೂ ಒಡ ಹುಟ್ಟಿದ ಮೂವರು ಸಹೋದರರನ್ನು ಕಳೆದುಕೊಂಡು ದುಃಖಿತಳಾಗಿದ್ದಳು. ಅವಳೊಳಗೆ ಅತೀವ ವೇದನೆ ಹಾಗೂ ಪ್ರತಿಕಾರ ಭಾವ ಹೊಗೆಯಾಡುತ್ತಿದ್ದರೂ ಸಹ ಮೇಲ್ನೋಟಕ್ಕೆ ಸರ್ವೇ ಸಾಧಾರಣವಾಗಿ ಎಲ್ಲರಂತೆಯೆ ಇದ್ದಳು. ಆಕೆ ಮಹಮದ್ ಹಾಗೂ ಅವನ ಪರಿವಾರಕ್ಕೆ ಒಂದು ರಾತ್ರಿ ಔತಣಕೂಟವನ್ನ ಏರ್ಪಡಿಸಿ ಆಹ್ವಾನಿಸಿದಳು. ಅದಕ್ಕಾಗಿ ಕುರಿಯೊಂದನ್ನ ಕಡಿದು ಊಟದ ವ್ಯವಸ್ಥೆ ಮಾಡಲಾಗಿತ್ತು. ಮಹಮದ್ ತನ್ನ ಅನುಯಾಯಿಗಳೊಂದಿಗೆ ಸಂತೋಷದಿಂದಲೆ ಆ ಭೋಜನಕೂಟಕ್ಕೆ ಹಾಜರಾದ. ಝೈನಬ್ ತಾನೆ ಖುದ್ದಾಗಿ ಅಡುಗೆ ಮಾಡಿದ್ದು ಉಪ್ಪು, ಖಾರದ ಜೊತೆ ಸ್ವಲ್ಪ ಕಟು ವಿಷವನ್ನೂ ಸಹ ಸೇರಿಸಿ ಮಾಂಸವನ್ನ ಬೇಯಿಸಿದ್ದಳು! ಹೀಗಾದರೂ ತನ್ನ ಸೇಡನ್ನ ತೀರಿಸಿಕೊಳ್ಳಲು ಆಕೆ ನಿರ್ಧರಿಸಿಬಿಟ್ಟಿದ್ದಳು. 




ಆದರೆ ಊಟದ ಮೊದಲಿಗೆ ಬಟ್ಟಲಿನಿಂದ ಒಂದು ತುಂಡು ಮಾಂಸ ತೆಗೆದು ಜಗಿದಾಗ ಅದರ ರುಚಿ ವ್ಯತ್ಯಾಸದಿಂದಲೆ ಮಹಮದನಿಗೆ ಅನುಮಾನ ಬಂದಿತು. ಆತ ಅದನ್ನ ಉಗಿದನಷ್ಟೆ ಅಲ್ಲ 'ತಾಳಿ' ಎಂದು ಊಟಕ್ಕೆ ಅಣಿಯಾಗಿದ್ದ ಎಲ್ಲರನ್ನೂ ಕೂಗಿ ಎಚ್ಚರಿಸಿದನು. ಆತ ವಿಷದ ಸಂಗತಿಯನ್ನ ಹೇಳುವ ಹೊತ್ತಿಗಾಗಲೆ ಸ್ವಲ್ಪ ಮಾಂಸ ತಿಂದಾಗಿದ್ದ ಬಿಷರ್ ಎಂಬಾತ ವಿಷದ ನಂಜೇರಿ ಸತ್ತು ಬಿದ್ದ. ಆದರೆ ಝೈನಬ್ ಈ ಬಗ್ಗೆ ಯಾವುದೆ ಪಶ್ಚಾತಾಪವನ್ನ ವ್ಯಕ್ತ ಪಡಿಸಲಿಲ್ಲ. "ನೀನು ನಿಜವಾಗಿಯೂ ದೇವ ಪ್ರವಾದಿಯೇ ಆಗಿದ್ದಿದ್ದರೆ, ಊಟಕ್ಕೂ ಮೊದಲೆ ವಿಷ ಬೆರೆಸಿದ ಸಂಗತಿಯನ್ನ ದಿವ್ಯ ದೃಷ್ಟಿಯಿಂದ ಅರಿತು ತನ್ನವರ ಜೀವ ಉಳಿಸುತ್ತಿದ್ದೆ. ನಿನ್ನದು ಬರಿ ಢೋಂಗಿ" ಎಂದು ಬಹಿರಂಗವಾಗಿ ಆಕೆ ಆತನನ್ನ ಜರೆದು ತನ್ನ ಸೇಡಿನ ಕಾರ್ಯವನ್ನ ಸಮರ್ಥಿಸಿಕೊಂಡಳು. ಸಾಲದ್ದಕ್ಕೆ, ಬಿಷರ್ ಬದಲು ನಿನ್ನಂತಹ ಪಾಪಿಗಳು ಸತ್ತಿದ್ದರೆ ಸುಖವಿತ್ತು. ಆಗ ನಾವು ಯಹೂದಿಗಳು ನೆಮ್ಮದಿಯಿಂದ ನಾಲ್ಕು ಕಾಲ ಬಾಳುತ್ತಿದ್ದೆವು ಎಂದು ಹೇಳಿ ಆತನನ್ನ ಕೆರಳಿಸಿದಳು. ಆಕೆಯನ್ನ ಕೂಡಲೆ ಬಂಧಿಸಿ ಕತ್ತು ಕಡಿದು ಹತ್ಯೆ ಮಾಡಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್' ಕೃತಿಯ ಪುಟ ಸಂಖ್ಯೆ ಏಳುನೂರಾ ನಲವತ್ತೆರಡರಲ್ಲಿ.


ಈ ಘಟನೆಯ ನಂತರ ಅಲ್ ಕಮಾಸ್'ನಿಂದ ಮದೀನಾಕ್ಕೆ ಮರಳಲು ಮಹಮದ್ ನಿರ್ಧರಿಸಿದ. ಹಿಂದಿರುಗುವಾಗ ತುಸು ಬಳಸು ಹಾದಿ ಹಿಡಿದು ಅಲ್ ವಠಾತ್ ಹಾಗೂ ಸುಲಲಿಮ್ ಎನ್ನುವ ಇನ್ನೆರಡು ಯಹೂದಿ ನೆಲೆಗಳನ್ನೂ ಸಹ ದೋಚಲಾಯಿತು. ಅಲ್ಲಿನ ನಿವಾಸಿಗಳನ್ನ ಸೆದೆ ಬಡಿದು ಅವರ ಚಿರಾಚರ ಆಸ್ತಿಗಳನ್ನ ಲೂಟಿ ಮಾಡಲಾಯಿತು. ಆದರೆ ಹತ್ಯೆ ಮಾಡುವ ಗೋಜಿಗೆ ಮಾತ್ರ ಹೋಗದೆ ಕಪ್ಪಕಾಣಿಕೆ ಪಡೆದು ಅವರನ್ನೆಲ್ಲ ಜೀವ ಸಹಿತ ಬಿಡಲಾಯಿತು. ದಾರಿಯಲ್ಲಿ ಸಿಕ್ಕ ಇನ್ನೂ ಎಂಟು ಸಣ್ಣಪುಟ್ಟ ಯಹೂದಿ ವಸತಿಗಳು ಮುಸಲ್ಮಾನರ ಪುಂಡಾಟಿಕೆಯಿಂದ ಹೀಗೆ ಕಿರುಕುಳಕ್ಕೆ ತುತ್ತಾದವು. ಒಟ್ಟಿನಲ್ಲಿ ಮದೀನಾದ ಉತ್ತರಕ್ಕಿದ್ದ ಎಲ್ಲ ಯಹೂದಿ ನೆಲೆಗಳ ಮೇಲೂ ತನ್ನ ಅಧಿಕಾರವನ್ನ ಸ್ಥಾಪಿಸಿಯೆ ಮಹಮದ್ ಮದೀನಾಕೆ ಹಿಂದಿರುಗಿದ್ದ. 



ಖೈಬರ್ ಮೇಲಿನ ದೆಂಡಯಾತ್ರೆಯ ನಂತರ ಮಹಮದನ ಆರ್ಥಿಕ ಪರಿಸ್ಥಿತಿಯಲ್ಲಿ ವಿಪರೀತ ಸುಧಾರಣೆ ಕಂಡು ಬಂತು. ವಾಡಿಕೆಯಂತೆ ಹೊಡೆಯಲಾಗಿದ್ದ ಒಟ್ಟು ಕೊಳ್ಳೆಯಲ್ಲಿ ಐದನೆ ಒಂದು ಭಾಗವನ್ನ ಪ್ರವಾದಿಯ ಪಾಲೆನ್ನುವ ನೆಲೆಯಲ್ಲಿ ಆತನಿಗೆ ಒಪ್ಪಿಸಲಾಗಿತ್ತು. ಯಹೂದಿಗಳ ಜಮೀನು ಜಾನುವಾರುಗಳೂ ಸಹ ಆತನ ವಶಕ್ಕೆ ಪ್ರತ್ಯೇಕವಾಗಿ ಬಂದಿದ್ದವು. ಅದನ್ನ ಗೇಣಿಗೆ ಕೊಟ್ಟು ಅದರ ಆದಾಯದ ಸರಿ ಅರ್ಧ ಭಾಗವನ್ನ ತನಗೆ ತಂದೊಪ್ಪಿಸುವಂತೆ ಸ್ಥಳಿಯರೊಂದಿಗೆ ಮಹಮದ್ ಕರಾರು ಮಾಡಿಕೊಂಡ. ಇದು ಆತನ ನಿತ್ಯದ ಆಡಳಿತ ಖರ್ಚಿನ ಜೊತೆಗೆ ಹಿಂಡುಗಟ್ಟಲೆ ಹೆಂಡಿರ ನಿರ್ವಹಣೆಗೂ ಸಹ ಧಾರಾಳವಾಗಿ ಸಾಕಾಗುವಷ್ಟಾಗಿತ್ತು. 



ಖೈಬರ್'ನ ಯಹೂದಿಗಳನ್ನ ಅವರ ಜಮೀನಿಗೆ ಗೇಣಿ ಒಕ್ಕಲುಗಳನ್ನಾಗಿ ನೇಮಿಸಲಾಯಿತು! ಅದರ ಆದಾಯದ ಅರ್ಧ ಪಾಲನ್ನ ಅವರು ಮಹಮದನ ಪದತಲಕ್ಕೆ ತಂದು ಅರ್ಪಿಸಲು ವ್ಯವಸ್ಥೆ ಮಾಡಲಾಯಿತು. ಅವರನ್ನ 'ಜಿಮ್ಮಿ' ಅಂದರೆ ಇಸ್ಲಾಮಿ ಪ್ರದೇಶದಲ್ಲಿ ಆಶ್ರಯ ಪಡೆದ ಕಾಫಿರ ಕುಲದವರೆಂದು ಘೋಷಿಸಲಾಯಿತು. ಅವರೆಲ್ಲರ ರಕ್ಷಣೆಯ ಭಾರವನ್ನು ಮಹಮದನ ಮುಸಲ್ಮಾನ ಪಡೆಯೆ ವಹಿಸಿಕೊಂಡಿತು. ಗೇಣಿಯ ಜೊತೆಗೆ ಪ್ರತ್ಯೇಕವಾಗಿ ಅವರು ತಮ್ಮ ರಕ್ಷಣಾ ಕರವಾದ ಝಜಿಯಾವನ್ನು ಬೇರೆ ಇನ್ನು ಮುಂದೆ ತೆರುವಂತಾಯಿತು ಎನ್ನುತ್ತಾರೆ ಇರಿಹಾಸಕಾರ ಡೋಝಿ ತಮ್ಮ ಕೃತಿ "ವೈಡ್ ಫೂಟ್'ನೋಟ್"ನ ಪುಟ ಸಂಖ್ಯೆ ನೂರಾ ಇಪ್ಪತ್ತಮೂರರಲ್ಲಿ. ಹೀಗೆ ಇಸ್ಲಾಮಿ ಇತಿಹಾಸದ ಪ್ರಥಮ 'ದಾರ್ ಉಲ್ ಇಸ್ಲಾಂ' ಪ್ರದೇಶವಾಗಿ ಖೈಬರ್ ಅಸ್ತಿತ್ವಕ್ಕೆ ಬಂದರೆ ಅಲ್ಲಿನ ಯಹೂದಿಗಳು ಅದರ ಪ್ರಾಥಮಿಕ 'ಜಿಮ್ಮಿ'ಗಳಾಗಿ ಗುರುತಿಸಲ್ಪಟ್ಟರು. ಅವರ ಪೂರ್ವಜರ ಸ್ವಂತ ನೆಲದಲ್ಲಿ ಅವರೆ ಪರತಂತ್ರದಲ್ಲಿ ಬಾಳುವ ದುಸ್ಥಿತಿ ಈ ಮೂಲಕ ಅವರಿಗೆ ಒದಗಿ ಬಂದಿತ್ತು. 



ಒಂದು ವೇಳೆ ಇಂತಹ ಜಿಮ್ಮಿಗಳು ಇಸ್ಲಾಮನ್ನ ಒಪ್ಪಿಕೊಂಡು ಮತಾಂತರವಾದರೆ ಅವರು ಯಾವುದೆ ತಲೆಗಂದಾಯ ಕೊಡದೆ ನಿರಾಳರಾಗಿ ಬಾಳಬಹುದಾಗಿತ್ತು. ಆದರೆ ಮಾತೃಧರ್ಮದ ಅಭಿಮಾನವಿದ್ದವರು ಮಾತ್ರ ಸಾಲಸೋಲ ಮಾಡಿಯಾದರೂ ತಲೆಗಂದಾಯ ಕೊಟ್ಟರೆ ಮಾತ್ರ ಅವರಿಗೆ ಆ ಪ್ರದೇಶದಲ್ಲಿ ನೆಲೆಸಲು ಅವಕಾಶ ಮುಕ್ತವಾಗಿರುತ್ತಿತ್ತು. ಈ ಹೊಸ ವ್ಯವಸ್ಥೆಯಿಂದ ಒಂದೆ ಕಲ್ಲಿಗೆ ಮೂರು ಮೂರು ಹಕ್ಕಿಗಳನ್ನ ಹೊಡೆದಂತಾಯಿತು. ಮೊದಲನೆಯದಾಗಿ ಗೆದ್ದ ಪ್ರದೇಶಗಳಲ್ಲಿ ಅನಗತ್ಯ ಪ್ರಾಣಹಾನಿ ಎಸಗುವುದು ತಪ್ಪಿತು ಹಾಗೂ ಅವರ ಭೂಮಿಯಲ್ಲಿ ಅವರನ್ನೆ ಜೀತಕ್ಕೋ, ಗೇಣಿಗೋ ನೇಮಿಸಿಕೊಳ್ಳಬಹುದಾಗಿತ್ತು, ಎರಡನೆಯದಾಗಿ ಅದರಿಂದ ಒಂದು ತಕ್ಕಮಟ್ಟಿನ ಆದಾಯ ತಲೆಗಂದಾಯ 'ಝಜಿಯಾ'ದ ರೂಪದಲ್ಲಿ ಕಾಲಕಾಲಕ್ಕೆ ಮಹಮದನ ಖಜಾನೆಗೆ ಬಂದು ಬೀಳುತ್ತಿತ್ತು ಹಾಗೂ ಕಡೆಯದಾಗಿ ಅವರು ಒಂದೊಮ್ಮೆ ಬೇಸತ್ತು ಮತಾಂತರಕ್ಕೆ ಒಪ್ಪಿಕೊಂಡರೆ ಸಹಜವಾಗಿ ಮುಸಲ್ಮಾನರ ಸಂಖ್ಯಾ ಬಲ ಹೆಚ್ಚುತ್ತಿತ್ತು! ಹೀಗಾಗಿ ಯಾವ ದೃಷ್ಟಿಕೋನದಿಂದ ನೋಡಿದರೂ ಇದು ಮಹಮದನಿಗೆ ಲಾಭದ ಬಾಬತ್ತೆ ಆಗಿತ್ತು.



ಈ ಲೂಟಿಯ ಸಂಪತ್ತಿನಲ್ಲಿ ಆತ ಖೈಬರ್ ಯುದ್ಧದಲ್ಲಿ ಪಾಲ್ಗೊಳ್ಳದ ತನ್ನ ಬಂಧು ಹಾಗೂ ಅಬಿಸೀನಿಯಾದಿಂದ ಮದೀನಾಕ್ಕೆ ವಲಸೆ ಬಂದು ಅಲ್ಲಿ ನವ ಮುಸಲ್ಮಾನನಾಗಿದ್ದ ಜಾಫರ್ ಎನ್ನುವವನಿಗೂ ಒಂದು ಪಾಲನ್ನ ನೀಡಿದ. ಉಮ್ ಹಲೀಮ್ ಹಾಗೂ ಸುಂದರಿ ಸಫಿಯಾಳನ್ನು ಮದುವೆಯಾದ ನಂತರ ಮಹಮದನ ಅಂತಃಪುರ ಒಂಬತ್ತು ಹೆಂಡಿರು ಹಾಗೂ ಇಬ್ಬರು ಸೂಳೆಯರಿಂದ ಕಿಕ್ಕರಿದು ತುಂಬಿತ್ತು. ಆ ಪ್ರತಿ ಹೆಂಡತಿಗೂ ಸಹಾಯಕಳಾಗಿ ನೇಮಿಸಲಾಗಿದ್ದ ಸ್ತ್ರೀ ಗುಲಾಮರ ಮೇಲಿನ ಲೈಂಗಿಕ ಹಕ್ಕು ಸಹ ಅವನಿಗೆ ಸೇರಿತ್ತು. ಈ ಎಲ್ಲಾ ಮಹಮದನ ಮೆರೆದಾಟ ಮದೀನಾದ ಕೆಲವು ಮೂಲನಿವಾಸಿಗಳಲ್ಲಿ ಅಸಹನೆ ಹುಟ್ಟಿಸಿತು. 



ವಾಸ್ತವದಲ್ಲಿ ಅವರು ಎಲ್ಲರಿಗೂ ಮೊದಲೆ ಇಸ್ಲಾಮನ್ನ ಒಪ್ಪಿಕೊಂಡಿದ್ದರಷ್ಟೆ ಅಲ್ಲ, ಆತನಿಗೆ ನಿರಾಶ್ರಿತನಾಗಿದ್ದಾಗ ಆಶ್ರಯಕೊಟ್ಟು ಬದುಕನ್ನು ಕಟ್ಟಿಕೊಳ್ಳಲು ನೆಲೆ ಬೆಲೆ ನೀಡಿ ಆದರಿಸಿದ್ದರು. ಆದರೆ ತನ್ನ ಬಂಧು ಬಾಂಧವರು ಅಬಿಸೀನಿಯಾದಿಂದ ಅಲ್ಲಿಗೆ ಮರುವಲಸೆ ಬಂದ ನಂತರ ಆತನ ಚರ್ಯೆಯಲ್ಲಿ ಆದ ವಿಪರೀತವಾದ ಬದಲಾವಣೆ ಅವರಲ್ಲಿ ಅಸಹನೆಯನ್ನ ಹುಟ್ಟು ಹಾಕಿತ್ತು. ಆತನ ಎದ್ದು ಕಾಣುವ ತಾರತಮ್ಯದ ನಡುವಳಿಕೆಗಳ ಬಗ್ಗೆ ಅವರೆಲ್ಲಾ ಕುಪಿತರಾಗಿದ್ದರು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಎಂಬತ್ತ ನಾಲ್ಕರಲ್ಲಿ.


ಅತನಿಗೆ ತಕ್ಕ ಪಾಠ ಕಲಿಸಲು ಅವರೆಲ್ಲಾ ಗುಪ್ತವಾಗಿ ಲಬಿಡ್ ಎನ್ನುವ ಮಂತ್ರವಾದಿಯ ಮೊರೆ ಹೋದರು. ಆತ ಮಹಮದನ ಕೆಲವು ಕೂದಲ ಎಳೆಗಳನ್ನ ಸಂಪಾದಿಸಿ ಅದನ್ನ ಖರ್ಜೂರದ ಮರದ ಒಂದು ರೆಂಬೆಗೆ ಹನ್ನೊಂದು ಗಂಟುಗಳೊಂದಿಗೆ ಬಿಗಿದು ಬಾವಿಯೊಂದರಲ್ಲಿ ಮುಚ್ಚಿ ಅದರ ಮೇಲೆ ಕಲ್ಲನ್ನ ಹೇರಿದ. ಆತನ ಮಾಂತ್ರಿಕತೆಯ ಮಾಟ ಪ್ರಭಾವ ಬೀರಿತು. ಮಹಮದ್ ಅಕಾಲಿಕವಾಗಿ ವಿಪರೀತ ನಿತ್ರಾಣನಾಗಿ ಅರಿಯಲಾಗದ ಖಾಯಿಲೆಯಿಂದ ಬಹಳಷ್ಟು ನರಳಿದ. ಹಸಿವು ನೀರಾಡಿಕೆಗಳೆ ನಿಂತು ಹೋದಂತಾಗಿದ್ದ ಆತನಲ್ಲಿ ವಿಪರೀತವಾಗಿದ್ದ ಲೈಂಗಿಕ ವಾಂಛೆಗಳು ಸಹ ಆಶ್ಚರ್ಯಕರವಾಗಿ ಬತ್ತಿ ಹೋದವು! ಆತ ತನ್ನ ಹೆಂಡತಿಯನ್ನ ದೂರವಿಡಲು ಹೆಣಗಾಡಿದ, ಅವರನ್ನ ಬೇಕಂತಲೆ ಕಡೆಗಣಿಸ ತೊಡಗಿದ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಆತನ ಸಹಾಯಕ್ಕೆ ಬಂದವ ಯಕ್ಷ ಗ್ರಾಬ್ರಿಯಲ್. ಆತ ಈ ಮಾಟದ ಮೂಲವನ್ನ ಹುಡುಕಿ ಹೇಳುತ್ತಲೆ ಆ ಬಾವಿಯನ್ನ ಹುಡುಕಿಸಿ ಕೂದಲು ಗಂಟು ಹಾಕಿದ್ದ ಖರ್ಜೂರದ ರೆಂಬೆಯನ್ನ ಮೇಲೆ ತೆಗಯಲಾಯಿತು. ಗಂಟುಗಳೆಲ್ಲವನ್ನೂ ಬಿಡಿಸುತ್ತಲೆ ಆಶ್ಚರ್ಯಕರವಾಗಿ ಆತನ ದೈಹಿಕ ಆರೋಗ್ಯ ಸುಧಾರಿಸ ಹತ್ತಿತು. ಹೀಗೆ ಆ ಲಬಿಡ್'ನ ಮಾಟದಿಂದ ಪಾರಾದ ಎನ್ನುತ್ತದೆ ಖುರ್ಹಾನಿನ ಸುರಾ ಸಂಖ್ಯೆ ೧೩೩ ಹಾಗೂ ೧೪೪.


ಲಬಿಡ್'ನನ್ನು ಕೊಲ್ಲಲಾಯಿತೋ? ಇಲ್ಲವೆ ಹಾಗೆ ಬಿಟ್ಟು ಗಡಿಪಾರು ಮಾಡಿ ಓಡಿಸಲಾಯಿತೋ? ಎನ್ನುವುದರ ಬಗ್ಗೆ ಸೂಕ್ತ ಧಾಖಲೆಗಳು ಲಭ್ಯವಿಲ್ಲ. ಖೈಬರ್ ಪ್ರಾಂತ್ಯದ ಲೂಟಿ ಮುಸಲ್ಮಾನರಿಗೆ ಅದೆಷ್ಟು ಲಾಭಕಾರಿಯಾಗಿತ್ತೆಂದರೆ ಏಕಾಏಕಿ ಅವರ ಬಡತನವೆಲ್ಲ ತೊಲಗಿ ಹೋಗಿ ದಾರಿದ್ರ್ಯದ ಜಾಗದಲ್ಲಿ ಸಿರಿ ಸಂಪತ್ತು ಕುಣಿದಾಡ ತೊಡಗಿತು. ಇತಿಹಾಸಕಾರ ಅಲ್ ಬುಖಾರಿ ಆಯೇಷಾಳ ಉದ್ಘಾರವೊಂದನ್ನ ಹೇಳುವ ಮೂಲಕ ಈ ಲಾಭದಾಯಿತ್ವವನ್ನ ಹೀಗೆ ವಿವರಿಸಿದ್ದಾನೆ. ಎಳೆಯ ಹುಡುಗಿ ಆಯೇಷಾ ತನ್ನ ವಯೋ ಸಹಜವಾದ ಆಸೆಬುರುಕ ಧ್ವನಿಯಲ್ಲಿ ಹೇಳುವಂತೆ "ಇನ್ನು ಮುಂದೆ ನಾವು ಬೇಕಾದಷ್ಟು ಖರ್ಜೂರದ ಹಣ್ಣುಗಳನ್ನ ನಿಯಂತ್ರಣವಿಲ್ಲದೆ ಮನ ಬಂದಷ್ಟು ತಿನ್ನಬಹುದು!". ಈ ಯುದ್ಧದ ನಂತರ ಇನ್ನೂ ಸುಮಾರು ಒಂದು ಡಝನಿನಷ್ಟು ಯಹೂದಿ ನೆಲೆಗಳನ್ನ ಮಹಮದ್ ಅಲ್ಪಾವಧಿಯಲ್ಲಿ ಲೂಟಿ ಹೊಡೆದ. ಅದರಲ್ಲಿ ಸಮೀಪದ ಫಡಕ್ ಎನ್ನುವ ಸ್ಥಳವೂ ಸೇರಿತ್ತು. ಫಲವಂತಿಕೆಯಿಂದ ಕೂಡಿದ್ದ ಅಲ್ಲಿನ ಜಮೀನನ್ನ ಇನ್ಯಾರಿಗೂ ಹಂಚದೆ ಕೇವಲ ತನ್ನ ಉಪಯೋಗಕ್ಕೆ ಮಾತ್ರ ಮಹಮದ್ ಮೀಸಲಿರಿಸಿಕೊಂಡ ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಇನ್ನೂರಾ ನಲವತ್ತೆರಡರಲ್ಲಿ.



ಈ ಹಂತದಲ್ಲಿ ಆತನಿಗೆ ಪ್ರಬಲ ಪ್ರತಿರೋಧ ಎದುರಾದ್ದದ್ದು ವಾಡ್ ಅಲ್ ಖುರಾಕ್ ಎನ್ನುವ ಯಹೂದಿ ವಸತಿಯಲ್ಲಿ ಮಾತ್ರ. ಅವರು ಶರಣಾಗತಿ, ಗಡಿಪಾರು, ಮತಾಂತರ ಯಾವುದಕ್ಕೂ ರಾಜಿಯಾಗದೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಧೀಮಂತವಾಗಿ ಹೋರಾಡಿದರು. ಅನ್ಯ ಮಾರ್ಗವಿಲ್ಲದೆ ಸೋತು ಸೆರೆಯಾದ ನಂತರ ಬೆನ್ ಕೊರೈಝ್'ರಂತೆಯೆ ಅವರೆಲ್ಲರ ಹತ್ಯೆಯನ್ನೂ ಸಹ ಜರುಗಿಸಿ ಅವರ ಸಕಲ ಆಸ್ತಿ ಪಾಸ್ತಿಗಳನ್ನೂ ಜಪ್ತು ಮಾಡಿಕೊಂಡು ಮದೀನಾದ ತನ್ನ ಖಜಾನೆಯ ಸಿರಿಯನ್ನ ಮಹಮದ್ ಹೆಚ್ಚಿಸಿಕೊಂದ.


( ಇನ್ನೂ ಇದೆ.)

Saturday, November 14, 2015

ವಲಿ - ೨೯








ಸ್ವತಂತ್ರ್ಯ ಅಸ್ತಿತ್ವದ ಈ ಪ್ರಾಥಮಿಕವಾದ ಕಿರು ಮನ್ನಣೆಯನ್ನು ಮಹಮದ್ ದೇವರು ತನಗೆ ನೀಡಿದ ವಿಜಯವೆಂದು ಸಾರಿ ಬಡಾಯಿ ಕೊಚ್ಚಿಕೊಂಡ. ಖುರ್ಹಾನಿನ ಸುರಾ ೪೮/೧-೨, ೪-೫ ಈ ಮಾತುಗಳನ್ನ ಪುಷ್ಠೀಕರಿಸುತ್ತವೆ. ಅಕೇಶಿಯಾ ಮರದ ಬುಡದಲ್ಲಿ ಅಲ್ - ಹೊಬೈದಿಯಾದಲ್ಲಿ ತನ್ನ ಅನುಯಾಯಿಗಳು ನೀಡಿದ ಮಾತು ಹಾಗೂ ಇತ್ತ ಭಾಷೆಯನ್ನು ಆ ದೇವರು ಮೆಚ್ಚಿದ್ದಾನೆ. ಹೀಗಾಗಿ ಈ ಶಾಂತಿ ಒಪ್ಪಂದ ಸಾಧ್ಯವಾಗಿದೆ. ಈ ಭರವಸೆಯ ನಡೆಗಾಗಿ ಮುಂದಿನ ದಿನಗಳಲ್ಲಿ ಅದ್ಭುತವಾದ ಕೊಳ್ಳೆ ಹಾಗೂ ಲೂಟಿಗಳ ಪ್ರತಿಫಲವನ್ನು ಆ ಪರಮಾತ್ಮ ಈ ನಂಬಿಕಸ್ಥ ಬಂಟರಿಗೆಲ್ಲಾ ತಂದುಕೊಡುವುದರಲ್ಲಿ ಸಂಶಯವಿಲ್ಲ ಎಂದು ಖುರ್ಹಾನಿನ ಸುರಾ ಸಂಖ್ಯೆ ೪೮/೧೮-೨೦ರಲ್ಲಿ ಭರವಸೆಗಳ ಮಳೆಯನ್ನೆ ಆತ ಸುರಿಸಿ ಅವರೆಲ್ಲರ ಮನಗೆದ್ದ.


ಖುರೈಷಿಗಳೊಡನೆ ಶಾಂತಿ ಒಪ್ಪಂದ ಜಾರಿಗೆ ಬಂದ ನಂತರ ಉಂಟಾದ ಒಂದು ಗೊಂದಲದ ಘಟನೆ ಆ ಒಪ್ಪಂದವನ್ನೆ ನಿರುಪಯುಕ್ತ ಗೊಳಿಸಿಬಿಟ್ಟಿತು. ಆದು ನಡೆದದ್ದು ಹೀಗೆ. ಅಬ್ದುಲ್ ಬಶೀರ್ ಎಂಬ ಮೆಕ್ಕಾದ ನಿವಾಸಿಯೊಬ್ಬ ಮುಸಲ್ಮಾನನಾಗಿ ಮತ ಪರಿವರ್ತಿತನಾಗಿದ್ದ. ಈ ಪರಿವರ್ತನೆ ಆತನ ಸ್ವಂತ ಇಚ್ಛೆಯಿಂದಲೆ ಆಗಿತ್ತು. ಆದರೆ ಆತ ಊರು ಬಿಡುವ ಹಾಗಿರಲಿಲ್ಲ. ಶಾಂತಿ ಒಪ್ಪಂದದ ನಿಯಮಗಳನುಸಾರ ಯಾರೊಬ್ಬರೂ ತಮ್ಮ ಪೋಷಕರ ಒಪ್ಪಿಗೆಗೆ ವಿರುದ್ಧವಾಗಿ ಮತ ಪರಿವರ್ತಿತರಾದರೂ ಸಹ ಮದೀನಾಕ್ಕೆ ಹೋಗಿ ನೆಲೆಸುವಂತಿರಲಿಲ್ಲ. ಬೇಕಿದ್ದರೆ ಮೆಕ್ಕಾದಲ್ಲಿಯೆ ಮುಸಲ್ಮಾನಾಗಿ ಉಳಿಯಬಹುದಿತ್ತು. ಬಶೀರ್ ಈ ನಿಯಮವನ್ನು ಉಲ್ಲಂಘಿಸಿ ಪಾಲಕರ ಹಿಡಿತ ತಪ್ಪಿಸಿಕೊಂಡು ಮೆಕ್ಕಾದಿಂದ ಮದೀನಕ್ಕೆ ಕದ್ದು ಓಡಿ ಹೋದ. ಹಳೆಯ ಮತಾಚರಣೆಗಳ ನಡುವೆ ಬಾಳುವುದು ಅವನಿಗೆ ಅಸಹನೀಯವಾಗಿದ್ದರಿಂದ ಆತ ಈ ಪಲಾಯನವನ್ನ ಮಾಡಿದ್ದ. ಆದರೆ ಆತನ ಪಾಲಕರು ಇದನ್ನ ಪ್ರತಿಭಟಿಸಿ ನಿಂತರು. ಅವನನ್ನ ಮರಳಿ ಮನೆಗೆ ಕಳುಹಿಸಲು ಆಗ್ರಹಿಸಿ ಇಬ್ಬರು ಸೇವಕರನ್ನ ಮದೀನಕ್ಕೆ ಮಹಮದನ ಬಳಿ ಕಳುಹಿಸಿದರು.



ಇದು ಮಹಮದನ ಅರಿವಿಗೆ ಬರುತ್ತಲೆ ಆತ ಯಾವುದೆ ತಕರಾರನ್ನ ವ್ಯಕ್ತ ಪಡಿಸದೆ ಹಾಗೂ ಬಶೀರನನ್ನು ಯಾವುದೆ ರಿಯಯತಿ ತೋರದೆ ಶಾಂತಿ ಒಪ್ಪಂದದ ಅನುಸಾರವೆ ಮರಳಿ ಅವರೊಂದಿಗೆ ಮೆಕ್ಕಾಕ್ಕೆ ಕಳುಹಿಸಿಕೊಟ್ಟ. ವಾಸ್ತವವಾಗಿ ಬಶೀರ್ ಅನುಮತಿ ಇಲ್ಲದೆ ಓಡಿ ಬಂದಿರುವ ವಾಸ್ತವ ಸಂಗತಿ ಆತನಿಗೆ ಅರಿವಿರಲಿಲ್ಲ. ಆದರೆ ಕುಪಿತನಾಗಿದ್ದ ಬಶೀರ್ ಅವಮಾನವನ್ನ ಸಹಿಸಲಿಲ್ಲ. ಹಿಂದಿರುಗುವ ದಾರಿ ಮಧ್ಯದಲ್ಲಿ ಆತ ನೌಕರನೊಬ್ಬನ ಕತ್ತಿಯನ್ನ ಕಸಿದುಕೊಂಡು ಆತನ ಹತ್ಯೆಗೈದ. ಇನ್ನೊಬ್ಬ ಆತನ ಏಟುಗಳಿಂದ ಪಾರಾಗಿ ಮರಳಿ ಮದೀನಕ್ಕೆ ಓಡಿ ಬಂದು ಮಹಮದನಿಗೆ ಈ ಅಘಾತಕಾರಿ ಘಟನೆಯ ಮಾಹಿತಿ ಇತ್ತು ಬಶೀರನ ವಿರುದ್ಧ ದೂರು ಕೊಟ್ಟ. ಅವನ ಹಿಂದಿಯೆ ರಕ್ಸಸಿಕ್ತ ಕತ್ತಿ ಹಿಡಿದ ಬಶೀರ್ ಸಹ ಪ್ರತ್ಯಕ್ಷವಾದ. ಈಗ ತಾನು ಸ್ವತಂತ್ರ್ಯ ವ್ಯಕ್ತಿಯಾಗಿದ್ದು ಯಾರೊಬ್ಬರೂ ತನ್ನ ಮೇಲೆ ಅಭಿಪ್ರಾಯಗಳನ್ನು ಹೇರುವಂತಿಲ್ಲ. ಅದು ನನ್ನ ಪಾಲಕರಿಗೂ ಅನ್ವಯ ಎಂದಾತ ಚೀರಿ ಸಾರಿದ. ಇದೆಲ್ಲವನ್ನೂ ಮಹಮದ್ ಮೌನವಾಗಿ ನೋಡುತ್ತಾ ನಿಂತನೆ ಹೊರತು ತುಟಿ ಎರಡು ಮಾಡಲಿಲ್ಲ. ಬಶೀರನ ಉದ್ವೇಗ ಕೊಂಚ ಇಳಿದ ನಂತರ ಮೊಳಗಿತು "ಕದನದ ಕಿಚ್ಚನ್ನ ಹಚ್ಚುವ ಈತನಿಗೆ ಸರಿಯಾದ ಬೆಂಬಲಿಗರ ಪಡೆಯೊಂದು ದೊರಕಿದರೆ! ಆಹಾ ಅದೆಷ್ಟು ಸೊಗಸು?!" ಎನ್ನುವ ಮಹಮದನ ಮೆಚ್ಚುಗೆಯ ವಾಣಿ.


ಆದರೆ ಒಪ್ಪಂದ ಅಂತ ಒಂದಿದ್ದು ಅದನ್ನ ಯಾವುದೆ ಕಾರಣಕ್ಕೂ ಮುರಿಯುವ ಸ್ಥಿತಿಯಲ್ಲಿ ಮಹಮದ್ ಇರಲಿಲ್ಲ. ಹೀಗಾಗಿ ಒತ್ತಾಯಪೂರ್ವಕವಾಗಿಯಾದರೂ ಬಶೀರ್ ಮೆಕ್ಕಾಕ್ಕೆ ಮರಳಲೆಬೇಕಾಯಿತು ಅಲ್ಲಿ ಆತ ಮಹಮದನ ಮೆಚ್ಚುಗೆಯ ನುಡಿಯನ್ನ ಮರೆಯದೆ ತನ್ನದೆ ಆದ ಐದು ಕಟ್ಟುಮಸ್ತಾದ ಯುವಕರ ತಂಡವೊಂದನ್ನ ಕಟ್ಟಿಕೊಂಡ. ಸಿರಿಯಾದತ್ತ ಸಾಗುವ ಮೆಕ್ಕಾದ ಸಮುದ್ರ ತಟದ ಹೆದ್ದಾರಿಯಲ್ಲಿ ತನ್ನದೊಂದು ಠಾಣ್ಯವನ್ನ ಸ್ಥಾಪಿಸಿಕೊಂಡು ಆ ಮಾರ್ಗವಾಗಿ ಸಾಗುವ ಪಯಣಿಗರನ್ನ ಹಾಗೂ ಕ್ಯಾರವಾನನ್ನ ದೋಚುತ್ತಾ ಹಾವಳಿಯಿಡಲಾರಂಭಿಸಿದ. ಈ ನಾಯಕತ್ವಕ್ಕೆ ಮನಸೋತ ಹಾದಿ ತಪ್ಪಿದ ಅನೇಕ ಯುವಕರು ಅವನ ಪಡೆಯತ್ತ ಆಕರ್ಷಿತರಾದರು. ಅಲ್ಪ ಕಾಲದಲ್ಲಿಯೆ ಅವರ ಸಂಖ್ಯೆ ಎಪ್ಪತ್ತನ್ನ ಮೀರಿತು! ಲೂಟಿ, ಸುಲಿಗೆ ಹಾಗೂ ಹತ್ಯೆಗಳಲ್ಲಿ ನಿಷ್ಣಾತರಾಗಿ ತೊಡಗಿಕೊಂಡ ಅವರನ್ನ ತಡೆಯಲಾರದೆ ಕಂಗಾಲಾದ ಖುರೈಷಿಗಳು ಅವರ ಅರಾಜಕತೆಯ ವಿರುದ್ಧ ಅವರ ಧರ್ಮಾಧಿಕಾರಿ ಮಹಮದನಿಗೆ ದೂರನ್ನ ಒಯ್ದರು.



ಶಾಂತಿ ಒಪ್ಪಂದಕ್ಕೆ ಬೆಲೆ ಕೊಟ್ಟು ಆ ಕೂಡಲೆ ಈ ದುಂಡಾವತಿಯನ್ನ ನಿಲ್ಲಿಸಬೇಕೆಂದು ಅವನನ್ನು ಆಗ್ರಹಿಸಿದರು. ಮಹಮದ್ ಬಶೀರನಿಗೆ ತನ್ನ ಈ ಅಕೃತ್ಯವನ್ನು ನಿಲ್ಲಿಸಲು ಆಜ್ಞೆ ಕಳುಹಿಸಿದ. ಆ ಬಾತ್ಮಿ ಬಶೀರನಿಗೆ ತಲುಪುವ ಹೊತ್ತಿಗಾಗಲೆ ಆತ ಕ್ಷುಲ್ಲಕ ಮಾರಾಮಾರಿಯೊಂದರಲ್ಲಿ ತೀವೃವಾಗಿ ಗಾಯಗೊಂಡು ಸಾವಿನಂಚಿನಲ್ಲಿದ್ದ. ಆತನಿಗೆ ಈ ಸುದ್ದಿ ಮುಟ್ಟಿಸುವ ಮೊದಲೆ ಆತ ಅಸು ನೀಗಿದ. ಆತನ ಹಿಂಬಾಲಕರೆಲ್ಲಾ ಮೆಕ್ಕಾಕ್ಕೆ ಮರಳುವ ಸ್ಥಿತಿಯಲ್ಲಿ ಇರಲಿಲ್ಲವಾಗಿ ಅವರೆಲ್ಲಾ ಇಸ್ಲಾಮನ್ನ ಒಪ್ಪಿಕೊಂಡು ಮದೀನಾಕ್ಕೆ ಬಂದು ವಾಸಿಸಲಾರಂಭಿಸಿದರು. ಬಶೀರ್ ಎಂಬ ದರೋಡೆಕೋರನಾದ ಹಾದಿ ತಪ್ಪಿದ ಯುವಕನ ಕ್ರೂರ ಅಂತ್ಯ ಹೀಗಾಯಿತು. ತಪ್ಪು ಮಾಡಿದಾಗ ನಾಲ್ಕು ತಟ್ಟಿ ತಿದ್ದದೆ ಇನ್ನಷ್ಟು ಹೊಗಳಿಕೆಯ ಕುಮ್ಮಕ್ಕು ಕೊಟ್ಟು ದುರ್ಬೋಧನೆಯ ಮೂಲಕ ಆತನನ್ನ ಹಾದಿ ತಪ್ಪಿಸಿದ ಖ್ಯಾತಿ ಆತನ ಪ್ರವಾದಿಗೆ ಸಲ್ಲುತ್ತದೆ ಅನ್ನುವುದು ನಿಸ್ಸಂಶಯ.



ಈ ಪಾಲಕರ ಒಪ್ಪಿಗೆಯಿಲ್ಲದೆ ಮತಾಂತರಿತರು ಮದೀನಕ್ಕೆ ವಲಸೆ ಬರದಿರುವಂತಿಲ್ಲ ಎನ್ನುವ ನಿಯಮ ಪುರುಷರಂತೆ ಸ್ತ್ರೀಯರಿಗೂ ಸಹ ಸಮಾನವಾಗಿ ಅನ್ವಯವಾಗುತ್ತಿತ್ತು. ಯಾವ ಹೆಂಗಸೂ ಸಹ ಶಾಂತಿ ಒಪ್ಪಂದದ ಈ ನಿಯಮವನ್ನ ಮೀರಿ ಹೆಜ್ಜೆ ಇಡುವಂತಿರಲಿಲ್ಲ. ಹಾಗೆಯೆ ಒಬ್ಬ ಮತಾಂತರಿತ ಹೆಂಗಸು ಬಶೀರನ ಪ್ರಕರಣದಂತೆ ಮೆಕ್ಕಾದಿಂದ ಮದೀನಕ್ಕೆ ಓಡಿ ಬಂದಿದ್ದಳು. ಅವಳ ಬೆನ್ನು ಹತ್ತಿ ಖುರೈಷಿಗಳಾಗಿದ್ದ ಅವಳ ಅಣ್ಣಂದಿರು ಬಂದರು. ಆದರೆ ಈ ಬಾರಿ ಮಹಮದ್ ಅವಳನ್ನು ಮರಳಿಸಲು ನಿಧಾನಿಸಿದನಷ್ಟೇ ಅಲ್ಲ ತಕರಾರನ್ನೂ ಸಹ ಎಬ್ಬಿಸಿದ.



ಆತ ತನ್ನ ಎಂದಿನ ಚಾಳಿಯಂತೆ ಈ ಬಗ್ಗೆ ದೈವವಾಣಿಯ ಮೊರೆ ಹೋದ ಹಾಗೂ ದೈವ ನಿರೀಕ್ಷೆಯಂತೆ ಅವನ ಅಭಿಪ್ರಾಯದ ಪರವಾಗಿಯೆ ಸುರಾವನ್ನ ದಯಪಾಲಿಸಿತು! ಮೆಕ್ಕಾದಿಂದ ಸ್ವ ಇಚ್ಛೆಯಿಂದ ಯಾರಾದರೂ ಹೆಂಗಸು ಓಡಿ ಬಂದಿದ್ದರೆ ಅವಳನ್ನ  ಮೊದಲು ನ್ಯಾಯಕ್ಕೆ ಒಪ್ಪಿಸಬೇಕು. ಅನಂತರ ಆಕೆಗೆ ರಕ್ಷಣೆ ಒದಗಿಸಬೇಕಲ್ಲದೆ ಹಿಂದಿರುಗಿ ಹೋಗಲು ಬಿಡಬಾರದು ಎನ್ನುವ ಹೊಸ ನಿಯಮವನ್ನು ಆತ ಅಂದು ಸಾರಿದ. ಇದು ಆಲ್ಲಾಹನ ವಾಣಿಯಾಗಿದ್ದರಿಂದ ಮೀರಲು ಸಾಧ್ಯವಿಲ್ಲವೆಂದ. ಹಾಗೆ ಬಂದ ಸ್ತ್ರೀ ಮೊದಲೆ ವಿವಾಹಿತಳಾಗಿದ್ದರೆ ಆಕೆಯ ಪೂರ್ವ ಧರ್ಮದ ಮದುವೆಗೆ ಹೊಸ ನಿಯಮಾನುಸಾರ ಯಾವುದೆ ಮಾನ್ಯತೆ ಉಳಿಯುತ್ತಿರಲಿಲ್ಲ. ಸಾಲದ್ದಕ್ಕೆ ಆಕೆ ಪಡೆದಿದ್ದ ವಧು ದಕ್ಷಿಣೆಯನ್ನೂ ಸಹ ಅಗತ್ಯ ಬಿದ್ದರೆ ಮಾತ್ರ ಅಂದರೆ ಬಹುತೇಕ ಹಿಂದಿರುಗಿಸಬೇಕಾಗಿಲ್ಲ ಎನ್ನುವ ನಿರ್ಧಾರಕ್ಕೆ ಬರಲಾಯಿತು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಅರವತ್ತೈದರಲ್ಲಿ. ಖುರ್ಹಾನಿನ ಸುರಾ ಸಂಖ್ಯೆ ೬೦/೧೦-೧೨ರಲ್ಲಿ ಇದನ್ನ ಸ್ಪಷ್ಟವಾಗಿ ಹೇಳಲಾಗಿದೆ.


ಅಲ್ ಹುಬೈದಿಯಾದಲ್ಲಿ ಮೊಟಕುಗೊಂಡಿದ್ದ ಕಳೆದ ವರ್ಷದ ಹಝ್ಝ್ ಯಾತ್ರೆಯ ನಂತರ ಮಹಮದನ ಪ್ರಭಾವ ಹೊರಗಿನ ಎಲ್ಲಾ ಬುಡಕಟ್ಟಿನವರಲ್ಲಿ ಆದಂತೆಯೆ, ಆತನದೆ ಆಗಿದ್ದ ಸ್ವಂತ ಬುಡಕಟ್ಟು ಮೆಕ್ಕಾದ ಖುರೈಷಿಗಳಲ್ಲೂ ಸಹ ನಿಧಾನವಾಗಿ ಹಬ್ಬ ತೊಡಗಿತ್ತು. ತಮ್ಮವನೆ ಆದ ಒಬ್ಬ ಸಾಮಾನ್ಯ ವ್ಯಕ್ತಿ ಅದೂ ತಮ್ಮಿಂದ ಹೊರಗೆ ತಳ್ಳಿಸಿಕೊಂಡು ಅದೆಲ್ಲೋ ನಿರಾಶ್ರಿತನಾಗಿ ಬಾಳುವ ದುರ್ಗತಿಗೆ ಒಳಗಾದರೂ ಸಹ ಈಗ ದರ್ಪ, ದೌಲತ್ತು ಹಾಗೂ ಅಂತಸ್ತನ್ನ ಗಳಿಸಿಕೊಂಡು ಅರೇಬಿಯಾದ ಪ್ರಮುಖ ವ್ಯಕ್ತಿಳಲ್ಲೊಬ್ಬನಾಗಿ ಬದಲಾದ ಬಗ್ಗೆ ಒಳಗೊಳಗೆ ಅವರಲ್ಲಿ ಬಹುತೇಕರು ಹೆಮ್ಮೆ ಪಟ್ಟುಕೊಂಡು ಮಾತನಾಡಿಕೊಳ್ಳಲಾರಂಭಿಸಿದ್ದರು. ಯಾರ್ಯಾರೋ ಗೌರವಿಸುವ ಆತನನ್ನ ನಾವೂ ಗೌರವಿಸುವುದು ತಪ್ಪೇನಿಲ್ಲ ಎಂದು ಯುವಕರು ವಾದಿಸ ಹತ್ತಿದರು. ಇದು ಪುರುಷ ವರ್ಗದ ಆಲೋಚನಾ ಲಹರಿಯಾಗಿದ್ದರೆ, ಯವ್ವನಾವಸ್ಥೆಯ ಮಹಿಳೆಯರ ಆಲೋಚನೆಯೂ ಹೆಚ್ಚು ಕಡಿಮೆ ಇದೆ ಮಾರ್ಗದಲ್ಲಿ ಸಾಗತೊಡಗಿತು. ಮಹಮದ್ ಅವರ ಪಾಲಿನ ಕನಸಿನ ರಾಜನಂತೆ ಕಂಗೊಳಿಸತೊಡಗಿದ. ಆತನ ಬಗ್ಗೆ ಮಾತನಾಡುವಾಗ ಗೌರವ ಹಾಗೂ ಲಜ್ಜೆಯನ್ನ ತುಳುಕಿಸುವ ಒಂದು ಸ್ತ್ರೀಯರ ಹೊಸ ನಡತೆಯೆ ಹುಟ್ಟಿಕೊಂಡಿತು.




ಇದಕ್ಕೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ಸ್ವಾರಸ್ಯಕರವಾದ ಕೆಲವು ನಿದರ್ಶನಗಳನ್ನು ನೀಡುತ್ತಾರೆ. ಸ್ತ್ರೀಯರು ಮದುವೆಯ ಹೊತ್ತಿನಲ್ಲಿ ಪಡೆಯುವ ವಧುದಕ್ಷಿಣೆ ಹಾಗೂ ಉಡುಗೊರೆಯನ್ನ ಪಡೆಯುತ್ತಾರೆ. ಅದಕ್ಕೆ ಅರೇಬಿಯಾದಲ್ಲಿ ಸಾಮಾಜಿಕ ಸಮ್ಮತಿ ಇದ್ದೇ ಇತ್ತು. ಹಾಗೊಂದು ವೇಳೆ ಇಸ್ಲಾಮಿನತ್ತ ಆಕರ್ಷಿತಳಾದ ಹೆಂಗಸು ಮದುವೆ ಮುರಿದುಕೊಳ್ಳಲು ಈ ಉಡುಗೊರೆಗಳನ್ನ ಹಿಂದಿರುಗಿಸಿದರೆ ಅದನ್ನ ತಪ್ಪಾಗಿ ಭಾವಿಸುತ್ತಿರಲಿಲ್ಲ. ಅನಂತರ ಅವರು ಮದೀನಕ್ಕೆ ಓಡಿ ಬಂದು ಹೊಸ ಸಂಬಂಧಗಳನ್ನು ಏರ್ಪಡಿಸಿಕೊಳ್ಳಲು ಆಸಕ್ತರಾಗುತ್ತಿದ್ದರು. ಆಗ ಅವರ ನವ ಧರ್ಮ ನಿಷ್ಠೆಯನ್ನ ನಿಖರವಾಗಿ ಪರೀಕ್ಷಿಸಿ ಅನಂತರ ಮಾತ್ರ ಅಲ್ಲಿನ ಮುಸಲ್ಮಾನರು ಲಗ್ನವಾಗಿ ತಮ್ಮ ಜನಾನಕ್ಕೆ ಸೇರಿಸಿಕೊಳ್ಳುತ್ತಿದ್ದರು. ಅನೇಕ ಹೆಂಗಸರನ್ನ ಮೊದಲು ಮಹಮದನಿಗೆ ಅರ್ಪಿಸಲು ಅವಳ ಪೋಷಕರೆ ಆಸಕ್ತಿ ತೋರಿಸಲಾರಂಭಿಸಿದ್ದರು. ಯಾರಾದರೂ ಗಂಡ ಸತ್ತು ಮುಂಡೆಯಾದರೆ ಮಹಮದನಿಗೆ ಮೊದಲು ಮರು ವಿವಾಹದ ಮನವಿ ಮಾಡಿಕೊಳ್ಳಲಾಗುತ್ತಿತ್ತು. ಆತ ಒಂದೊಮ್ಮೆ ನಿರಾಕರಿಸಿದರೆ ಬೇರೆ ಆಯ್ಕೆಗಳನ್ನ ಪರಿಗಣಿಸಲಾರಂಭವಾಯಿತು. ಇದನ್ನ ಘನತೆಯ ಕಾರ್ಯವೆಂದೆ ಅರೇಬಿಯಾದ ಸಾಮಾಜಿಕ ವಲಯ ಮಾನ್ಯ ಮಾಡಲಾರಂಭಿಸಿತು.



ಅರೇಬಿಯಾ ಪ್ರಸ್ಥಭೂಮಿಯ ಅನೇಕ ಕಡೆ ತನ್ನ ಪ್ರಭಾವದ ವಲಯವನ್ನು ವಿಸ್ತರಿಸಿದ ನಂತರ ಮಹಮದ್ ತನ್ನ ಹಿಡಿತ ಹಾಗೂ ಆಡಳಿತವನ್ನು ಅಲ್ಲಿ ನೆಲೆಗೊಳಿಸಿಕೊಂಡ. ಈಗ ಭೌಗೋಳಿಕವಾಗಿ ತನಗೆ ತುಸು ದೂರದ ಪಶ್ಚಿಮದ ಪ್ರದೇಶಗಳಿಗೂ ತನ್ನ ಪ್ರಭಾವವನ್ನ ವಿಸ್ತರಿಸುವ ಕನಸುಕಾಣ ತೊಡಗಿದ. ಅದೃಷ್ಟಕ್ಕೆ ಆಗ ರೋಮನ್ ಸಾಮ್ರಾಜ್ಯ ಕ್ರಮೇಣ ಶಿಥಿಲವಾಗುತ್ತಾ ಅವನತಿಯ ಹಾದಿಯನ್ನ ಹಿಡಿದಿತ್ತು. ಇದನ್ನ ಬಳಸಿಕೊಳ್ಳಲು ಆತ ನಿರ್ಧರಿಸಿದ. ಕ್ರೈಸ್ತ ಇಗರ್ಜಿಗಳು ಪರಸ್ಪರ ಒಳ ಜಗಳ, ತಾತ್ವಿಕ ಭಿನ್ನಾಭಿಪ್ರಾಯ ಹಾಗೂ ಅಂತರಿಕ ಕಚ್ಚಾಟದ ಪರಿಣಾಮ ಅರೇಬಿಯಾದ ಕ್ರೈಸ್ತರು ಧಾರ್ಮಿಕವಾಗಿ ಬಹುತೇಕ ಅತಂತ್ರರಾಗಿದ್ದರು. ಇವೆಲ್ಲಾ ಮಹಮದನಿಗೆ ಹೇಳಿ ಮಾಡಿಸಿದ ವಾತಾವರಣದಂತೆ ಪೂರಕವಾದವು.



ಹೀಗಾಗಿ ಬಲಶಾಲಿಯಾಗಿರುವ ತಾನು ಸುತ್ತಲ ಸಿರಿಯಾ, ಈಜಿಪ್ಟ್ ಹಾಗೂ ರೋಮನ್ ಸಾಮ್ರಾಜ್ಯಗಳಿಗೆ ರಾಯಭಾರಿಗಳನ್ನ ನೇಮಿಸುವುದರಲ್ಲಿ ತಪ್ಪೇನೂ ಇಲ್ಲ ಎನ್ನುವ ನಿರ್ಧಾರಕ್ಕೆ ಆತ ಬಂದ. ಅವರೆಲ್ಲರಿಗೂ ತನ್ನ ವಿಜ್ಞಾಪನೆಯನ್ನ ಒಳಗೊಂಡ ಸಂಧಾನ ಪತ್ರಗಳನ್ನು ರವಾನಿಸಿಲು ನಿಶ್ಚಯಿಸಿದ. ಇದಕ್ಕಾಗಿ ತನ್ನದೆ ಆದ ರಾಜಮುದ್ರೆಯನ್ನ ಟಂಕಿಸಲು ಮನಸ್ಸು ಮಾಡಿದ. ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ದ ಪುಟ ಸಂಖ್ಯೆ ಆರುನೂರಾ ತೊಂಬತ್ತಮೂರರಲ್ಲಿ ಹೇಳುವಂತೆ ಆತ ಇದಕ್ಕಾಗಿಯೆ ಹೊಸತಾಗಿ ಬೆಳ್ಳಿಯ ಮುದ್ರೆಯುಂಗುರಗಳನ್ನ ತಯ್ಯಾರಿಸಿಸಿ ಅದರಲ್ಲಿ "ಮಹಮದ್, ದೇವರ ಪ್ರವಾದಿ!" ಎಂದು ಕೆತ್ತಿಸಿಕೊಂಡ.



ಕ್ರಿಸ್ತಶಕ ಆರುನೂರಾ ಇಪ್ಪತೆಂಟರಲ್ಲಿ ರೋಮನ್ ಚಕ್ರವರ್ತಿ ಹರಾಕ್ಲಿಯಾಸ್'ನಿಗೆ ಇಂತಹ ಒಂದು ರಾಯಭಾರವನ್ನ ಮಹಮದ್ ಕಳಿಸಿದ್ದ ಎನ್ನುತ್ತಾರೆ ಸರ್ ವಿಲಿಯಂ ಮ್ಯೂರ್. ಇದೆ ಸಮಯದಲ್ಲಿ ಪರ್ಷಿಯಾದ ರಾಜನಿಗೂ ತನ್ನ ಮುದ್ರೆಯುಂಗರವನ್ನು ಸಂದೇಶ ಸಹಿತ ಕಳುಹಿಸಲಾಯಿತು. ಎಮನ್ನಿನ್ನ ಪರ್ಷಿಯನ್ ರಾಜ್ಯಪಾಲ ಹಾಗೂ ಅರೇಬಿಯಾದಲ್ಲಿ ಪ್ರತಿಷ್ಠಿತನಾಗಿದ್ದ ಬಾದನ್'ನ ಆಸ್ಥಾನಕ್ಕೂ ಇಂತಹ ರಾಯಭಾರಿಯೊಬ್ಬನನ್ನು ಮುದ್ರೆಯುಂಗುರ ಸಹಿತ ಕಳುಹಿಸಲಾಯಿತು. ಆತ ಮಹಮದನ ಪ್ರಭಾವವನ್ನ ಅದಾಗಲೆ ಕೇಳಿ ಅರಿತಿದ್ದು ತನ್ನ ಪ್ರದೇಶದ ಹಿತದೃಷ್ಟಿಯಿಂದ ಆತನ ಮತವನ್ನ ಅಪ್ಪಿಕೊಳ್ಳುವುದೆ ಸೂಕ್ತ ಎಂದು ಮನಗಂಡು ಪರ್ಷಿಯಾದಿಂದ ನಿಷ್ಠೆ ಬದಲಿಸಿ ಮತಾಂತರಿತನಾಗಿ ಮಹಮದನನ್ನು ಹಿಂಬಾಲಿಸಿದ.


ಈಜಿಫ್ಟಿನ ರೋಮನ್ ರಾಜ್ಯಪಾಲ ಮೂಕಸಿಸ್ ಸಹ ಮಹಮದನ ರಾಯಭಾರಿಗಳನ್ನ ರಾಜ ಮರ್ಯಾದೆಯಿಂದಲೆ ಎದುರುಗೊಂಡ. ಆತನಿಗೆ ಕಳುಹಿಸಿದ್ದ ದೌತ್ಯದಲ್ಲಿ ತಾನು ಯಹೂದಿಗಳ ತೌರಾತಿನಲ್ಲಿ ಸಾರಿದಂತೆ ದೇವರ ಪ್ರವಾದಿಯೆಂದೂ, ತನ್ನನ್ನು ಹಿಂಬಾಲಿಸಿ ದೇವರ ಕೃಪೆಗೆ ಪಾತ್ರರಾಗುವಂತೆಯೂ ವಿನಂತಿಸಲಾಗಿತ್ತು. ಆದರೆ ಯಹೂದಿಗಳ ನಂಬಿಕೆಯ ಪ್ರಕಾರ ಅಂತಹ ಪ್ರವಾದಿ ಸಿರಿಯಾದಲ್ಲಿ ಹುಟ್ಟಬೇಕಲ್ಲದೆ ಅರೇಬಿಯಾದಲ್ಲಿ ಅಲ್ಲ ಎಂದು ಮೂಕಸಿಸ್ ಸರಾಸಗಟಾಗಿ ಈ ಆಗ್ರಹವನ್ನು ನಿರಾಕರಿಸಿದ. ಆದರೆ ಮಹಮದನ ದೂತರನ್ನ ಸಕಲ ರಾಜ ಮರ್ಯಾದೆಯಿಂದಲೆ ಸನ್ಮಾನಿಸಿ ನೋಡಿಕೊಳ್ಳಲಾಯಿತು. ಹಿಂದಿರುಗಲು ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಸಹ ಮಾಡಲಾಯಿತು. ಮಹಮದನಿಗೆ ಈಜಿಪ್ಟಿನ ನೆನಪಿನ ಕಾಣಿಕೆಯಾಗಿ ಇಬ್ಬರು ಕಾಪ್ಟ್ ಸುಂದರಿಯರನ್ನ ಸಹ ಅವರೊಂದಿಗೆ ಕಳಿಸಲಾಯಿತು.



ಇವರಲ್ಲಿ ಮೇರಿ ಎಂಬ ಅತಿ ಸುಂದರಿಯನ್ನ ತನ್ನ ಅಂತಃಪುರಕ್ಕೆ ಸೇರಿಸಿಕೊಂಡ ಮಹಮದ್ ಇನ್ನೊಬ್ಬಳನ್ನು ಅಯೇಷಾಳ ಮೇಲೆ ಅತಿ ಸುಂದರ ಕವಿತೆ ಕಟ್ಟಿ ಹೊಗಳಿದ ಖ್ಯಾತಿ ಹೊತ್ತಿದ್ದ ಕವಿ ಹಸ್ಸನ್'ನಿಗೆ ಕೊಡುಗೆಯಾಗಿ ಕೊಟ್ಟ. ಮೇರಿ ಮತಾಂತರವಾಗದೆ ಕಡೆಯವರೆಗೂ ಕ್ರೈಸ್ತಳಾಗಿಯೆ ಉಳಿದಳು. ಹೀಗಾಗಿ ಆಕೆಯನ್ನ ಮಹಮದ್ ಲಗ್ನವಾಗದೆ ತನ್ನ ಸೂಳೆಯಾಗಿ ಮಾತ್ರ ಇರಿಸಿಕೊಂಡ. ಹೆಸರಿಗೆ ಸೂಳೆಯಾದರೂ ಸಹ ಅವಳಿಗೆ ಸಿಕ್ಕ ಸೌಲಭ್ಯಗಳೆಲ್ಲ ಅಧಿಕೃತ ಪತ್ನಿಗೆ ಸಿಗುವಷ್ಟೆ ಸರಿಸಮ ಹಾಗೂ ಗುಣಮಟ್ಟದ್ದಾಗಿದ್ದವು.


ಇದೆ ಪ್ರಕಾರ ದೂರದ ಅಬಿಸೀನಿಯಾದ ರಾಜನಿಗೂ ಸಹ ಮಹಮದನ ಸಂದೇಶ ಹೋಗಿ ಮುಟ್ಟಿತು. ಅಲ್ಲಿನ ರಾಜ ಆದಕ್ಕೂ ಮೊದಲಿನಿಂದಲೆ ವ್ಯಾಪಾರಿ ಉದ್ದೇಶದಿಂದ ಅರೇಬಿಯಾ ಹಾಗೂ ಮದೀನಾದ ಮಹಮದನೊಂದಿಗೆ ಸ್ನೇಹಪೂರ್ಣ ಸಂಬಂಧವನ್ನೆ ಇರಿಸಿಕೊಂಡಿದ್ದ. ಮೆಕ್ಕಾದಿಂದ ಖುರೈಷಿಗಳ ಕಾಟ ತಾಳಲಾರದೆ ಓಡಿ ಹೋಗಿದ್ದ ಮೊದಲ ತಂಡದ ಮುಸಲ್ಮಾನರಿಗೆ ಆಸರೆ ನೀಡಿದ್ದ ಮೊತ್ತಮೊದಲ ರಾಜಯ ಅಬಿಸೀನಿಯ ಆಗಿತ್ತು. ಅಲ್ಲಿ ಆಶ್ರಯ ಪಡೆದವರಲ್ಲಿ ಅನೇಕರು ಕಾಲಾಂತರದಲ್ಲಿ ಕ್ರೈಸ್ತರಾಗಿಯೂ ಪರಿವರ್ತಿತರಾಗಿದ್ದರು. ಹೀಗೆ ಓಡಿ ಬಂದವರನ್ನೆಲ್ಲ ಮದೀನಕ್ಕೆ ಕಳಿಸಿಕೊಡಬೇಕೆಂದು ದೌತ್ಯದಲ್ಲಿ ಕೇಳಿಕೊಳ್ಳಲಾಗಿತ್ತು. ಹಾಗೆ ವಲಸೆ ಹೋದವರಲ್ಲಿ ಖುರೈಷಿ ಮುಖಂಡ ಅಬು ಸಫ್ಯಾನನ ಮಗಳಾದ ಉಮ್ ಹಲೀಮ್ ಸಹ ಒಬ್ಬಳಾಗಿದ್ದಳು.



ಅವಳ ಗಂಡ ಅಲ್ಲಿ ಹೋದ ನಂತರ ಕ್ರೈಸ್ತನಾಗಿ ಬದಲಾಗಿದ್ದ. ಬದಲಾದ ವಾತವರಣದಲ್ಲಿ ಹೊಂದಿಕೊಳ್ಳಲಾಗದೆ ತೀವೃ ಖಾಯಿಲೆ ಬಿದ್ದು ಆತ ಸತ್ತು ಸಹ ಹೋಗಿದ್ದ. ಆಕೆಯನ್ನ ತಾನೆ ಮದುವೆಯಾಗಲು ಮಹಮದ್ ನಿರ್ಧರಿಸಿ ಅದನ್ನೂ ಸಹ ತನ್ನ ಮನೋಭಿಲಾಶೆಯಾಗಿ ದೌತ್ಯದಲ್ಲಿ ಬರೆದು ಕಳಿಸಿದ್ದ. ಅಲ್ಲಿನ ರಾಜ ಅದನ್ನ ಸಮ್ಮತಿಸಿ ಕ್ಷೇಮದಿಂದ ಅವಳನ್ನೂ ಸೇರಿಸಿ ವಲಸೆಗಾರರನ್ನು ಸುರಕ್ಷಿತವಾಗಿ ಮದೀನಾಕ್ಕೆ ಕಳುಹಿಸಿದ. ಮೂವತ್ತೈದು ವರ್ಷದ ಉಮ್ ಹಲೀಮ್ ಹೀಗೆ ಈಗ ಮಹಮದನ ಮಡದಿಯಾದಳು. ಅಲ್ಲಿಗೆ ಅಬು ಸಫ್ಯಾನ್ ಈಗ ಮಹಮದನ ಮಾವನಾಗಿ ಬದಲಾದ. ಆದರೆ ಈ ವಿವಾಹದ ಉದ್ದೇಶ ಹಾಗೂ ಬಾತ್ಮಿ ಸ್ವತಃ ಅಬು ಸಫ್ಯಾನಿಗೆ ಗೊತ್ತಿರಲಿಲ್ಲ!



ಈ ವ್ಯಾಪ್ತಿ ವಿಸ್ತಾರಗಳಿಂದ ಉತ್ತೇಜಿತನಾದ ಮಹಮದ್ ತನ್ನ ಇನ್ನೊಬ್ಬ ದೂತನನ್ನು ಬೆನ್ ಹನೀಫ್ ಬುಡಕಟ್ಟಿಗೆ ಸೇರಿದ್ದ ಹೌಧಾ ಎನ್ನುವ ಸರದಾರನೊಬ್ಬನ ಬಳಿ ಸಹ ಕಳುಹಿಸಿದ. ಯಥಾಪ್ರಕಾರ ಆತನಿಗೂ ಇಸ್ಲಾಮಿಗೆ ಬರಲು ಆಹ್ವಾನವನ್ನು ಕೊಡಲಾಗಿತ್ತು. ಆದರೆ ತನ್ನದೊಂದು ಉತ್ತರವನ್ನು ಜಬರ್ದಸ್ತಾಗಿ ಬರೆಸಿದ ಹೌಧಾ ಮಹಮದನ ದೂತನನ್ನು ಯಥೋಚಿತವಾಗಿ ಸತ್ಕರಿಸಿ ಉಡುಗೊರೆಗಳೊಂದಿಗೆ ಮದೀನಕ್ಕೆ ಮರಳಿ ಕಳುಹಿಸಿಕೊಟ್ಟ.


ಆತ ಬರೆದ ಉತ್ತರ ಹೀಗಿತ್ತು. "ಹೌದು, ಇಸ್ಲಾಮ್ ಅತ್ಯಂತ ಸುಂದರವಾಗಿದೆ. ಮಹಮದನಿಗೆ ಒದಗಿ ಬಂದ ದೈವವಾಣಿ ಸರ್ವೋತ್ತಮವೂ ಆಗಿದೆ. ತಾನು ತನ್ನ ಬುಡಕಟ್ಟಿನ ಉತ್ತಮ ಕವಿಯಾಗಿದ್ದೇನೆ. ವಾಗ್ಮಿ ಎನ್ನುವ ಕಾರಣಕ್ಕೆ ನನಗೆ ಅರೇಬಿಯಾದ ಇನ್ನಿತರ ಮುಖಂಡರೂ ಸಹ ಅಪಾರವಾಗಿ ಗೌರವಿಸುತ್ತಾರೆ. ಹೀಗಾಗಿ ಮಹಮದ್ ತನ್ನ ಸಾಮ್ರಾಜ್ಯದಲ್ಲಿ ಒಂದು ಭಾಗವನ್ನ ನೀಡಿ ಸರಿಸಮನೆಂದು ತನಗೆ ಮನ್ನಣೆ ನೀಡಿದರೆ ಇಸ್ಲಾಮಿಗೆ ಬರಲು ತನಗೇನೂ ಅಭ್ಯಂತರವಿಲ್ಲ!." ಈ ಉತ್ತರವನ್ನು ದೂತ ಒಡೆದು ಓದುತ್ತಿದ್ದಂತೆಯೆ ಮಹಮದ್ ಕೆಂಡಾಮಂಡಲನಾದ. ಕೆರಳಿದ ಧ್ವನಿಯಲ್ಲಿ ರಾಜ್ಯವಲ್ಲ ಒಂದು ಕಚ್ಚಾ ಖರ್ಜೂರ ಬೇಡಿದ್ದರೂ ನಾನವನಿಗೆ ಖಂಡಿತವಾಗಿ ಕೊಡುತ್ತಿರಲಿಲ್ಲ. ಅವನ ಒಣ ಜಂಭ ಸುಡಲಿ!" ಎಂದು ಶಾಪವಿತ್ತ. ಕಾಕತಾಳೀಯವೆಂಬಂತೆ ಅದರ ಮಾರನೆ ವರ್ಷವೆ ಹೌಧಾ ಖಾಯಿಲೆಯಿಂದ ನರಳಿ ಸತ್ತ!.


( ಇನ್ನೂ ಇದೆ.)

Friday, November 13, 2015

ವಲಿ - ೨೮








ಇದೀಗ ಮಹಮದ್ ಹಾಗೂ ಆತನ ನೂತನ ಮತ ಇಸ್ಲಾಮಿನ ಅನುಯಾಯಿಗಳಾದ ನವ ಮತಾಂತರಿತರು ಮದೀನಾಕ್ಕೆ ನಿರಾಶ್ರಿತರಾಗಿ ಓಡಿ ಬಂದು ಅಲ್ಲಿ ಬೇರು ಬಿಟ್ಟು ಪೊಗದಸ್ತಾಗಿ ಸಾಮಾಜಿಕವಾಗಿ ಬೆಳೆದು ಆರು ವರ್ಷಗಳೆ ಕಳೆದಿದ್ದವು. ಅದೇನೆ ಯಶಸ್ಸು ಹಾಗೂ ಸಾಧನೆಯನ್ನ ತಾನು ಗಳಿಸಿದ್ದರೂ ಸಹ ವಾರ್ಷಿಕವಾಗಿ ನಡೆಯುತ್ತಿದ್ದ ಮೆಕ್ಕಾದ ಪವಿತ್ರ ತೀರ್ಥಯಾತ್ರೆಯನ್ನ ಈ ಅವಧಿಯಲ್ಲಿ ಒಮ್ಮೆಯೂ ಮಾಡಲಾಗದೆ ಮಹಮದ್ ಪರಿತಪಿಸುತ್ತಿದ್ದ. ಯಾತ್ರೆ ಮಾಡುವುದು ಅತ್ತಲಾಗಿರಲಿ ಕಾಬಾ ಗುಡಿಯ ಹತ್ತಿರವೂ ಸಹ ಆತನಿಗಲ್ಲ ಆತನ ನೆರಳಿಗೂ ಈ ಆರು ವರ್ಷಗಳಲ್ಲಿ ಸುಳಿಯಲು ಆಗಿರಲಿಲ್ಲ. ತನ್ನ ಸಾಮಾಜಿಕ ಹಾಗೂ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಕಾಬಾ ದರ್ಶನವನ್ನ ತಾನು ಮಾಡಲಾಗುತ್ತಿಲ್ಲವೆಂಬ ನಿರಂತರ ಕೊರಗು ಆತನನ್ನ ಕಾಡುತ್ತಿತ್ತು.



ಮೆಕ್ಕಾದ ಕಾಬಾಕ್ಕೆ ಯಾತ್ರಿಸಿ ಅಲ್ಲಿ ಆರಾಧನೆ ನಡೆಸುವ ಮಹತ್ವಾಕಾಂಕ್ಷೆಯನ್ನ ಆತನ ಮನ ಹೊತ್ತಿತ್ತು. ಈ ಆರಾಧನೆಗೆ ಅಡ್ಡಿಯಾಗಿದ್ದ ಖುರೈಷಿಗಳನ್ನ ಆತ ಖುರಹಾನಿನ ಸುರಾಗಳ ಮೂಲಕ ಮನಸಾರೆ ಶಪಿಸಿದ. ಅವರ ಈ ನಡೆಯನ್ನ ಕಟು ನುಡಿಗಳಲ್ಲಿ ಖಂಡಿಸಿದ. ಸದ್ಯದ ಪರಿಸ್ಥಿತಿಯಲ್ಲಿ ಕೇವಲ ಬಾಯಿ ಮಾತಿನ ಮೂಲಕ ಮಾತ್ರ ಸಿಟ್ಟು ಹೊರಹಾಕುವ ಪರಿಸ್ಥಿತಿಯಲ್ಲಿ ಇದ್ದದ್ದೂ ಸಹ ಇದಕ್ಕೆ ಕಾರಣವಾಗಿದ್ದಿತು ಅನ್ನುತ್ತಾರೆ ಇತಿಹಾಸಕಾರ ಡಿ ಲೆಸ್ಸಿ ಒ ಲೆರ್ರಿ ತಮ್ಮ ಕೃತಿ 'ಇಸ್ಲಾಮಿಕ್ ಥಾಟ್ ಎಂಡ್ ಇಟ್ಸ್ ಪ್ಲೇಸ್ ಇನ್ ಹಿಸ್ಟರಿ'ಯ ಪುಟ ಸಂಖ್ಯೆ ಐವತ್ತೊಂಬತ್ತರಲ್ಲಿ.


ಈ ಮೆಕ್ಕಾ ಭೇಟಿಯ ಆರಾಧನೆಯ ಬಯಕೆ ಉತ್ಕಟವಾಗಿ ಆತನನ್ನು ಕಾಡತೊಡಗಿದ್ದಾಗ ಆತ ಕನಸು ಮನಸಿನಲ್ಲೂ ಅದನ್ನೆ ಧ್ಯಾನಿಸುತ್ತಿದ್ದ. ಹೀಗಿರುವಾಗ ಒಂದು ರಾತ್ರಿ ತಾನು ಮೆಕ್ಕಾದ ಯಾತ್ರೆ ಕೈಗೊಂಡು ಅಲ್ಲಿ ಕಾಬಾದ ಸುತ್ತ ವಿಧಿವತ್ತಾಗಿ ಏಳು ಬಾರಿ ಪ್ರದಕ್ಷಿಣೆ ನಡೆಸಿ ಪ್ರಾಣಿ ಬಲಿಯನ್ನೂ ಸಹ ನೀಡಿ ಹಿಂದಿರುಗಿದಂತೆ ಕನಸು ಕಂಡ. ಮಾರನೆ ಬೆಳಗ್ಯೆ ಈ ಬಗ್ಗೆ ತನ್ನ ಅನುಯಾಯಿಗಳೊಂದಿಗೆ ಈ ಕನಸಿನ ಬಗ್ಗೆ ವಿವರವಾಗಿ ಚರ್ಚಿಸಿದ. ತನ್ನ ಕನಸನ್ನು ನಿಜವಾಗಿಸಿಕೊಳ್ಳಬೇಕು ಹೀಗಾಗಿ ಮೆಕ್ಕಾದ ಯಾತ್ರೆ ಮಾಡಲೇಬೇಕು ಎಂದು ಅಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಅದು ಪವಿತ್ರ ಮಾಸವಾಗಿತ್ತು. ಹೀಗಾಗಿ ಅರೇಬಿಯಾದ ಜನರು ಆ ತಿಂಗಳಿನಲ್ಲಿ ಯಾವುದೆ ಹಿಂಸಾಚಾರದ ಕೃತ್ಯ ನಡೆಸುವಂತಿರಲಿಲ್ಲ.



ಈ ವಾರ್ಷಿಕ ತೀರ್ಥಯಾತ್ರೆಯನ್ನು ಯಾತ್ರೆಯನ್ನ ಚಿಕ್ಕಯಾತ್ರೆ ಹಾಗೂ ದೊಡ್ದ ಯಾತ್ರೆ ಎಂದು ಎರಡಾಗಿ ವಿಭಾಗಿಸಿ ಆಚರಣೆಗಳಲ್ಲಿಯೂ ಸಹ ಸಣ್ಣಪುಟ್ಟ ವ್ಯತ್ಯಾಸಗಳನ್ನು ಅದರಲ್ಲಿ ಅಡಕಗೊಳಿಸಿ ಭಕ್ತಾದಿಗಳ ಅನುಕೂಲಕ್ಕೆ ತಕ್ಕಂತೆ ಅದನ್ನ ಅನುಸರಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಕಾರಣದಿಂದ ಅದೆ ತಿಂಗಳಿನಲ್ಲಿ ಯಾತ್ರೆ ಕೈಗೊಳ್ಳಲು ಮಹಮದ್ ನಿರ್ಧರಿಸಿದ. ಆ ನಿರ್ಧಾರ ಕೇವಲ ಯಾತ್ರೆಗೆ ಸೀಮಿತವಾಗಿದ್ದರಿಂದ ಮೆಕ್ಕಾದ ಒಡೆಯರಾದ ಖುರೈಷಿಗಳೂ ಸಹ ಅದನ್ನ ವಿರೋಧಿಸಲಾರರು ಎಂದಾತ ಭಾವಿಸಿದ. ಗಮನಿಸಿ, ಮೆಕ್ಕಾದ ತೀರ್ಥಯಾತ್ರೆ ಹಝ್ ಇದು ಇಸ್ಲಾಮಿನ ಪದ್ಧತಿ ಅಲ್ಲ. ಇಸ್ಲಾಮ್ ಆರಂಭವಾಗುವ ಮೊದಲೆ ಹೀಗೆ ಯಾತ್ರೆ ಕೈಗೊಳ್ಳುವ ಹಾಗೂ ಏಳೇಳು ಬಾರಿ ಗುಡಿಯ ಸುತ್ತ ಸುತ್ತುವ, ಕರಿ ಶಿಲೆಗೆ ಮುತ್ತಿಕ್ಕುವ, ಕಾಳಿಯನ್ನ ಹೋಲುತ್ತಿದ್ದ ಅಲ್ ಲಾಟ್ ಎಂಬ ಹೆಣ್ಣು ದೇವತೆಗೆ ಪ್ರಾಣಿಬಲಿ ನೀಡುವ ಹಾಗೂ ಸೈತಾನ ಪ್ರತಿಮೆಗೆ ( ಸದ್ಯ ಕಂಭಕ್ಕೆ.) ಕಲ್ಲೆಸೆಯುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ಮುಸಲ್ಮಾನರಿಗೆ ಅದೆ ಪದ್ಧತಿಯನ್ನ ನಕಲು ಮಾಡಿ ಅನುಸರಿಸಲು ಮಹಮದ್ ಕರೆ ಕೊಟ್ಟಿದ್ದನೆ ಹೊರತು ಇದೇನೂ ಇಸ್ಲಾಮಿನ ಕಲ್ಪನೆ ಅಲ್ಲವೆ ಅಲ್ಲ. ಸದ್ಯ ಅದನ್ನೆ ಇಸ್ಲಾಮಿನ ಆಚರಣೆ ಎನ್ನುವ ಭ್ರಮೆಯಲ್ಲಿ ಕುರುಡಾಗಿ ಅನುಸರಿಸಲಾಗುತ್ತಿದೆ.



ತನ್ನ ಒಂದೂವರೆ ಸಾವಿರ ಅನುಯಾಯಿಗಳೊಂದಿಗೆ ಮಹಮದ್ ಈ ಮೆಕ್ಕಾ ಯಾತ್ರೆ ಕೈಗೊಳ್ಳಲು ನಿರ್ಧಾರ ತೆಗೆದುಕೊಂಡ. ತಾನೂ ಸಹ ಇನ್ನಿತರ ಯಾತ್ರಿಕರಂತೆ ಬಿಳಿ ಪಂಚೆ ಉಟ್ಟು, ಮೈ ಮೇಲೆ ಬಿಳಿ ಶಾಲು ಹೊದ್ದು ಸ್ವಂತದ ಒಂಟೆ ಏರಿ ಆತ ಹೊರಟ. ತನ್ನ ಹೆಂಡತಿಯರಲ್ಲಿ ಉಮ್ ಸಲ್ಮಾಳನ್ನು ಮಾತ್ರ ತನ್ನೊಂದಿಗೆ ಆತ ಕರೆದೊಯ್ದಿದ್ದ. ಯಾತ್ರಿಕರ ತಂಡ ಮೆಕ್ಕಾದೆಡೆಗೆ ಸಾಗಿತು. ಈ ಸುದ್ದಿ ಅರಿವಿಗೆ ಬಂದಾಗ ಮೊದಲಿಗೆ ಸಹಜವಾಗಿ ಖುರೈಷಿಗಳು ಆತಂಕಿತರಾದರು. ಅವರ ಮನಸ್ಸು ಆತನ ಯಾತ್ರೆಯ ಪ್ರಾಮಾಣಿಕತೆಯನ್ನು ಸಂಶಯಿಸಿತು. ಆತ ಅದೇನೆ ಶಾಂತಿ ಮಂತ್ರ ಪಠಿಸಿದ್ದರೂ ಅದನ್ನವರು ನಂಬಲು ತಯ್ಯಾರಿರಲಿಲ್ಲ. ಹೀಗಾಗಿ ಊರಿನ ಎಲ್ಲರೂ ಶಸ್ತ್ರಸಜ್ಜಿತರಾಗಿ ಅವನ ದಂಡನ್ನ ತಡೆಯಲು ತಯ್ಯಾರಾದರು.



ಅದೇನೇ ಆದರೂ ಪವಿತ್ರ ಮಾಸ ಎನ್ನುವುದನ್ನೂ ಸಹ ಮರೆತು ಹೋರಾಡಿ ರಕ್ತಪಾತ ಮಾಡಿಯಾದರೂ ಸರಿ ಮಹಮದ್ ಹಾಗೂ ಅವನ ಬಂಟರು ಮೆಕ್ಕಾ ಪ್ರವೇಶಿಸದಂತೆ ತಡೆಯಲೆಬೇಕೆಂದು ಅವರೆಲ್ಲಾ ಪಣ ತೊಟ್ಟರು. ಊರ ಹೊರಗೆ ಖುರೈಷಿ ಪಡೆ ಮಹಮದನನ್ನು ಎದುರುಗೊಳ್ಳಲು ಬಂದು ಜಮಾಯಿಸಿತು. ನಡು ದಾರಿಯಲ್ಲಿ ಓಸ್ಫಾನ್'ನಲ್ಲಿ ಬೀಡುಬಿಟ್ಟಿದ್ದ ಮಹಮದನಿಗೂ ಈ ಸಂಗತಿ ತನ್ನ ಗೂಢಚರರ ಮೂಲಕ ಅರಿವಾಗಿ ಸಾಂಪ್ರದಾಯಿಕವಾಗಿ ಮುಖ್ಯರಸ್ತೆಯಲ್ಲಿಯೆ ಸಾಗಿದರೆ ಏನಾದರೂ ಅನಾಹುತವಾದರೂ ಆಶ್ಚರ್ಯವಿಲ್ಲವೆಂದು ತರ್ಕಿಸಿದ ಆತ ಪರ್ಯಾಯ ಮಾರ್ಗವೊಂದನ್ನ ಹಿಡಿದು ಮೆಕ್ಕಾದ ದಿಕ್ಕಿನತ್ತ ಮುಂದುವರೆದ. ಇತ್ತ ಖುರೈಷಿಗಳು ಊರ ತಲೆ ಬಾಗಿಲಿನಲ್ಲಿ ಆತನ ನಿರೀಕ್ಷೆಯಲ್ಲಿ ಕಾಯುತ್ತಿದ್ದರೆ ಈತ ಊರಿನ ಇನ್ನೊಂದು ದಿಕ್ಕಿನ ದುರ್ಗಮ ಹಾದಿಯನ್ನ ಅನುಸರಿಸಿ ಊರ ಹತ್ತಿರವೆ ಸಾಗುತ್ತಿದ್ದ. ಅಲ್ ಹೊದೈಬಿಯಾ ಎನ್ನುವ ಇನ್ನೊಂದು ಬದಿಯ ಬಯಲು ಪ್ರದೇಶವನ್ನವನು ಬಂದು ಮುಟ್ಟಿದ. ಆತನ ಒಂಟೆ ಅಲ್ಲಿ ನಿಂತಿತು.



ಅದು ದೈಹಿಕ ಆಯಾಸದಿಂದ ನಿಂತದ್ದಲ್ಲ, ತನಗೆ ದೇವರ ಆಜ್ಞೆಯಾಗಿದೆ ಈ ಸ್ಥಳದಲ್ಲಿ ತಂಗಲು. ಹೀಗಾಗಿ ಒಂಟೆಯೂ ಅದನ್ನ ಅರಿತು ನಿಂತಿದೆ! ಹೀಗಾಗಿ ಇಲ್ಲಿಯೆ ತಂಗುವ ಎಂದಾತ ಅನುಯಾಯಿಗಳಿಗೆ ಘೋಷಿಸಿದ. ಜಲಮೂಲಗಳನ್ನ ಅರಸಲಾಯಿತು ಕೆಲವು ಬತ್ತಿದ ಬಾವಿಗಳು ಪತ್ತೆಯಾದವು. ಅವನ್ನ ಇನ್ನಷ್ಟು ಕೆದಕಿದಾಗ ನೀರಿನ ಸೆಲೆ ಉಕ್ಕಿತು. ಅವರೆಲ್ಲ ಸಂತುಷ್ಟರಾಗಿ ಅಲ್ಲಿಯೆ ಲಂಗರು ಹಾಕಿದರು. ತತ್ಕಾಲಿಕವಾಗಿ ಅಲ್ಲಿಯೆ ಗುಡಾರಗಳನ್ನ ಕಟ್ಟಿಕೊಳ್ಳಲಾಯಿತು. ಈ ಸಂಗತಿ ಖುರೈಷಿಗಳಿಗೆ ತಿಳಿದಾಗ ಅವರು ಮೊದಲಿಗೆ ಆಶ್ಚರ್ಯ ಚಕಿತರಾದರು. ಅವರ ಪಡೆ ಅಲ್ಲಿಗೂ ಧಾವಿಸಿಬಂತು. ಅನಿರೀಕ್ಷಿತ ರೀತಿಯಲ್ಲಿ ತಮಗಿಂತ ಮೊದಲು ಆತನ ಈ ಬಳಸುದಾರಿ ಹಿಡಿದು ಮೆಕ್ಕಾ ಮುಟ್ಟಿದ ತಂತ್ರದ ಮರ್ಮವನ್ನು ಅರಿಯಲು ತಮ್ಮೊಳಗೆ ಸಮಾಲೋಚಿಸಿ ನಿಯೋಗವೊಂದನ್ನ ಮಹಮದನ ಬಳಿ ಕಳುಹಿಸಲಾಯಿತು. ಬುದೈಲ್ ಎನ್ನುವ ಖುರೈಷಿ ಮುಖಂಡನ ನೇತೃತ್ವದಲ್ಲಿ ಬಂದ ಈ ನಿಯೋಗವನ್ನು ಎದುರುಗೊಂಡ ಮಹಮದ್ ತನ್ನ ಈ ಯಾತ್ರೆ ಕೇವಲ ಶಾಂತ ಉದ್ದೇಶದ್ದು ಎನ್ನುವುದನ್ನ ಸ್ಪಷ್ಟ ಪಡಿಸಿದ. ಹಾಗೊಂದು ವೇಳೆ ತನ್ನ ಭಕ್ತಿಯ ಅಭಿವ್ಯಕ್ತಿಗೆ ಯಾರಾದರೂ ತಡೆಯೊಡ್ದಿದರೆ ತಾನೂ ಸಹ ರಕ್ತಪಾತಕ್ಕೆ ಹೇಸುವುದಿಲ್ಲ ಎಂದಾತ ನಿರ್ಧಾರದ ಧ್ವನಿಯಲ್ಲಿ ಸ್ಪಷ್ಟ ಪಡಿಸಿದ.




ಬುದೈಲ್ ಹಿಂದಿರುಗಿ ಈ ಮಾತನ್ನ ಖುರೈಷಿಗಳಿಗೆ ದಾಟಿಸಿದ ನಂತರ ಅದರ ಸಾಧ್ಯಾಸಾಧ್ಯತೆಗಳನ್ನ ವಿವರವಾಗಿ ಚರ್ಚಿಸಿ ಖುರೈಷಿಗಳು ಓರ್ವಾ ಎನ್ನುವ ಇನ್ನೊಬ್ಬ ದೂತನನ್ನು ಅವನ ಬಳಿ ಕಳುಹಿಸಿದರು. ಆತ ಮೆಕ್ಕಾದ ಗಣ್ಯವಕ್ತಿಯಾಗಿದ್ದ ಹಾಗೂ ಮುಖಂಡ ಅಬು ಸಫ್ಯಾನನ ಅಳಿಯನೂ ಆಗಿದ್ದ. ಮಹಮದನ ಬಿಡಾರದಲ್ಲಿ ಅವನೊಡನೆ ಸಮಾಲೋಚಿಸುವಾಗ ಆತ ಸೂಕ್ಷ್ಮವಾಗಿ ಮಹಮದನ ಅನುಯಾಯಿಗಳ ಗುಣ ನಡತೆಯನ್ನೂ ಸಹ ಗಮನಿಸುತ್ತಿದ್ದ. ಅವರೆಲ್ಲಾ ವಿಪರೀತ ವಿನೀತರೂ ಆಜ್ಞಾನುವರ್ತಿಗಳು ಆಗಿದ್ದು ಆತನೊಂದಿಗೆ ವಿಪರೀತ ಪ್ರೀತಿ ಗೌರವ ಹಾಗೂ ಆದರಗಳೊಂದಿಗೆ ಅವನೊಂದಿಗೆ ವರ್ತಿಸುತ್ತಿದ್ದರು ಎನ್ನುವುದು ಆತನಿಗೆ ಅರಿವಾಯಿತು.



ಮಹಮದನ ಪ್ರವಾದಿತ್ವದ ಬಗ್ಗೆ ಅವರೆಲ್ಲಾ ಗಾಢ ನಂಬಿಕೆ ಇಟ್ಟಿರುವುದರಿಂದಲೆ ಈ ಪರಿ ಭಕ್ತಿಯಿಂದ ವರ್ತಿಸುತ್ತಾರೆ ಎನ್ನುವುದನ್ನ ಆತನ ಮನಸ್ಸು ಗ್ರಹಿಸಿತು. ಈ ಅಭಿಪ್ರಾಯವನ್ನೆ ಮರಳಿ ಬಂದ ಆತ ಖುರೈಷಿಗಳಿಗೂ ಅರುಹಿದ. ಆದರೆ ಅವರಲ್ಲಿ ಯಾರೊಬ್ಬರೂ ಈ ಮಾತಿನಿಂದ ವಿಚಲಿತರಾಗಲಿಲ್ಲ. ಯಾವುದೆ ಕಾರಣಕ್ಕೂ ಪೂರ್ವಾನುಮತಿ ಪಡೆಯದೆ ಆತ ಯಾತ್ರೆ ಕೈಗೊಳ್ಳುವಂತಿಲ್ಲ ಎನ್ನುವುದನ್ನ ಅವರು ಸ್ಪಷ್ಟ ಪಡಿಸಿದರು. ಬೇಕಿದ್ದರೆ ಬರುವ ವರ್ಷ ಆತ ಯಾತ್ರೆಗೆ ಬರಬಹುದಂತಲೂ ಅದಕ್ಕೆ ಸೂಕ್ತ ಶರತ್ತುಗಳನ್ನ ವಿಧಿಸಲಾಗುವುದೆಂದೂ ತಿಳಿಸಲಾಯಿತು. ಈ ವರ್ಷ ಮಾತ್ರ ಆತ ಮೆಕ್ಕಾ ಪ್ರವೇಶಿಸುವುದು ಅಸಾಧ್ಯ ಎನ್ನುವ ಸೂಚನೆಯನ್ನವನಿಗೆ ರವಾನಿಸಲಾಯಿತು. ಅವನು ಇನ್ನೂ ಇದಕ್ಕೆ ಒತ್ತಾಯಿಸಿದರೆ ಈ ವರ್ಷದ ಯಾತ್ರೆಯನ್ನೆ ಸಂಪೂರ್ಣವಾಗಿ ರದ್ದು ಪಡಿಸಲು ಖುರೈಷಿಗಳು ನಿರ್ಧರಿಸಿದರು.


ಈ ನಡುವೆ ಮೆಕ್ಕಾ ಅಸುಪಾಸಿನ ಬೆದಾವಿನ್ ಬುಡಕಟ್ಟಿನವರು ಸಹ ಈ ಬಾರಿ ಯಾತ್ರೆಗೆ ಸನ್ನದ್ಧರಾಗಿ ಬಂದಿದ್ದರು. ಅವರು ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ಸಿಡಿದೆದ್ದರು. ವಾಸ್ತವದಲ್ಲಿ ಖುರೈಷಿಗಳೊಂದಿಗೆ ಬೆದಾವಿನರು ಸ್ನೇಹ ಸಂಬಂಧ ಹೊಂದಿದ್ದರು. ಈಗ ಸಿದ್ಧರಾಗಿ ಬಂದ ನಂತರ ಯಾತ್ರೆ ಸಾಧ್ಯವಿಲ್ಲ ಎಂದರೆ ಏನರ್ಥ? ಮಹಮದ್ ಎನ್ನುವ ಒಬ್ಬ ವ್ಯಕ್ತಿಯ ದೆಸೆಯಿಂದ ನಾವೆಲ್ಲಾ ಏಕೆ ಸಂತ್ರಸ್ತರಾಗಬೇಕು? ಇದೆಂತಹ ಅರಾಜಕ ನಿರ್ಧಾರ? ಎಂದವರು ಆಕ್ಷೇಪಿಸಿದರು. ಆದರೆ ಅವರ ಈ ವಿರೋಧ ಮಾತ್ರ ಖುರೈಷಿಗಳನ್ನ ವಿಚಲಿತಗೊಳಿಸಿತು. ಒಂದೊಮ್ಮೆ ಅವರು ತಮ್ಮನ್ನ ಬಿಟ್ಟು ಹಿಂದಿರುಗಿ ಹೋದರೆ ಮಹಮದನಿಗೆ ತಮ್ಮ ಮೇಲೆ ಧಾಳಿ ನಡೆಸಲಿಕ್ಕೆ ಮುಕ್ತ ಆಹ್ವಾನವನ್ನ ನೀಡಿದಂತಾಗುತ್ತದೆ ಎಂದವರು ಹೆದರಿದರು.



ಹೀಗಾಗಿ ಬೆದಾವಿನ್ ಮುಖಂಡರಲ್ಲಿ ಸಮಾಧಾನದ ಮಾತನ್ನ ಆಡಿದ ಖುರೈಷಿಗಳು ಮರಳಿ ಅವರಲ್ಲಿ ಸಂಧಾನ ನಡೆಸಿ ಮಹಮದನನ್ನು ಮಣಿಸಲು ಪ್ರಯತ್ನಿಸುವುದಾಗಿ ಮಾತುಕೊಟ್ಟರು. ಹೀಗಾಗಿ ಯಾರಾದರೂ ಮಹಮದನ ದೂತರು ಸಂಧಾನಕ್ಕೆ ಮೆಕ್ಕಾಕ್ಕೆ ಬರಬಹುದು ಎಂದು ತಿಳಿಸಲಾಯಿತು. ಮಹಮದ್ ತನ್ನ ನೆಚ್ಚಿನ ಬಂಟ ಹಾಗೂ ಅಳಿಯನೂ ಆಗಿದ್ದ ಓಥ್ಮನ್'ನನ್ನು ಅಲ್ಲಿಗೆ ಕಳುಹಿಸಲು ನಿರ್ಧರಿಸಿದ. ಮೆಕ್ಕಾದಲ್ಲಿ ಓಥ್ಮನ್'ನನ್ನ ನೆಂಟರಿದ್ದು ಅವರು ಆತನ ಸುರಕ್ಷತೆಯ ಹೊಣೆ ಹೊತ್ತದ್ದರಿಂದ ಈ ನಿರ್ಧಾರಕ್ಕೆ ಬರಲಾಯಿತು. ಅಲ್ಲಿ ನಡೆದ ಸಂಧಾನ ಸಭೆಯಲ್ಲಿ ಅಬು ಸಫ್ಯಾನನಿಗೆ ಓಥ್ಮನ್ ತಮ್ಮದು ಕೇವಲ ಶಾಂತ ಚಿತ್ತ ಯಾತ್ರೆ ಮಾತ್ರ ಅನ್ನುವುದನ್ನ ಮನವರಿಕೆ ಮಾಡಿಕೊಟ್ಟ.


ಆದರೆ ಆತನ ಯಾವುದೆ ಓಲೈಕೆಯ ಮಾತುಗಳೂ ಸಹ ಪ್ರಯೋಜನಕ್ಕೆ ಬರಲಿಲ್ಲ. ಬೇಕಿದ್ದರೆ ಓಥ್ಮನ್ ಯಾತ್ರೆ ಕೈಗೊಳ್ಳಬಹುದೆಂದೂ ಆದರೆ ಮಹಮದ್ ಯಾವುದೆ ಕಾರಣಕ್ಕೂ ಈ ಸಾರಿ ಯಾತ್ರೆ ಮಾಡುವಂತಿಲ್ಲವೆಂದು ಕಟ್ಟುನಿಟ್ಟಾಗಿ ತಿಳಿಸಲಾಯಿತು. ಇತ್ತ ಮಹಮದನ ಬಿಡಾರದಲ್ಲಿ ಓಥ್ಮನ್ ಸಂರಕ್ಷಣೆಯ ಬಗ್ಗೆ ವಿಪರೀತ ಆತಂಕ ಮನೆಮಾಡಿತ್ತು. ಆತನ ಕೊಲೆಯಾಗಿರಬಹುದೆ? ಎನ್ನುವ ಊಹಾಪೋಹದಲ್ಲಿ ಅವರೆಲ್ಲಾ ಉದ್ವಿಗ್ನರಾಗಿ ಕಾಯುತ್ತಾ ಕೂತಿದ್ದರು. ಆತಂಕಿತನಾಗಿದ್ದ ಮಹಮದ್ ಅಲ್ಲಿನ ಅಕೇಶಿಯಾ ಮರದ ನೆರಳಿನಲ್ಲಿ ಗುಂಪುಗಟ್ಟಿ ಕೂತು ತನ್ನ ಎಲ್ಲಾ ಅನುಯಾಯಿಗಳಿಂದ ಕೈ ಮೇಲೆ ಕೈ ಹಾಕಿಸಿ ಭಾಷೆ ತೆಗೆದುಕೊಂಡ. ಹಾಗೊಂದು ವೇಳೆ ಓಥ್ಮನ್ ಕೊಲೆಯಾಗಿದ್ದರೆ ಪ್ರತಿಯೊಬ್ಬರೂ ಕದನ ಜರುಗಿಸಿ ಖುರೈಷಿಗಳ ಮೇಲೆ ಪ್ರತಿಕಾರ ಜರುಗಿಸಬೇಕೆಂದು ಆಣೆ ಹಾಕಿಸಿಕೊಳ್ಳಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ "ದ ಸೀಲ್ಡ್ ನೆಕ್ಟರ್" ಕೃತಿಯ ಪುಟ ಸಂಖ್ಯೆ ಆರುನೂರಾ ಎಪ್ಪತ್ತಾರರಲ್ಲಿ.



ಮಹಮದನ ಪರಿವಾರ ಹೀಗೆ ತಳಮಳಗೊಂಡು ಎಲ್ಲೆಲ್ಲೂ ರಣೋತ್ಸಾಹ ಯುದ್ಧ ಪಿಪಾಸುತನ ಹೆಡೆ ಎತ್ತಲು ಹವಣಿಸುತ್ತಿರುವಾಗ ವಿಠಲಾಚಾರಿ ಸಿನೆಮಾದ ಧಡೀರ್ ದೇವರಂತೆ ಓಥ್ಮನ್ ಅಲ್ಲಿ ಅವರ ಮುಂದೆ ಪ್ರತ್ಯಕ್ಷಗೊಂಡ! ಆತ ಕ್ಷೇಮವಾಗಿ ಮರಳಿ ಬಂದದ್ದನ್ನ ನೋಡಿ ಅವರೆಲ್ಲಾ ಹರ್ಷೋದ್ಗಾರ ಮಾಡಿ ಸಂಭ್ರಮಿಸಿದರು.




ಹೀಗೆ ಮಹಮದ್ ಹಾಗೂ ಖುರೈಷಿಗಳ ನಡುವಿನ ಸಂಧಾನ ಪ್ರಕ್ರಿಯೆ ಇನ್ನಷ್ಟು ಲಂಭಿಸಿತು. ಅನೇಕ ಬೈಠಕ್'ಗಳು ನಡೆದು ಮತ್ತಷ್ಟು ಚೌಕಾಸಿಯ ಮಾತುಕಥೆಗಳು ನಡೆದವು. ಸಂಧಾನದ ಫಲವಾಗಿ ಒಂದು ಶಾಂತಿ ಒಪ್ಪಂದ ಏರ್ಪಟ್ಟು ಅದಕ್ಕೆ ಇತ್ತಂಡಗಳೂ ಸಹ ಅವಕ್ಕೆ ಸಹಿ ಹಾಕಿದವು. ಅದರ ನಿಯಮಾವಳಿ ಅನುಸಾರ ಮುಂದಿನ ಹತ್ತು ವರ್ಷಗಳ ಕಾಲ ಯಥಾ ಪರಿಸ್ಥಿತಿಯನ್ನು ಕಾಯ್ದುಕೊಂಡು ಶಾಂತಿ ಕಾಪಾಡಿಕೊಳ್ಳಬೇಕಿತ್ತು. ಮಹಮದ್ ಯಾವುದೆ ಕಾರಣಕ್ಕೂ ಖುರೈಷಿಗಳ ಯಾವುದೆ ಕ್ಯಾರವಾನ್'ಗಳನ್ನ ಈ ಅವಧಿಯಲ್ಲಿ ಲೂಟಿ ಹೊಡೆಸುವಂತಿರಲಿಲ್ಲ. ಮೆಕ್ಕಾದ ಮುಸಲ್ಮಾನರಿಗೂ ಸಂಪೂರ್ಣ ಸ್ವಾತಂತ್ರ ನೀಡಿ ಅವರು ಬಯಸಿದಾಗ ಮದೀನಾಕ್ಕೂ ಹೋಗಿ ಬರಲು ಅವಕಾಶ ನೀಡಲಾಯಿತು. ಮಹಮದ್ ಮುಂದಿನ ವರ್ಷ ಮೂರು ದಿನಗಳ ಮಟ್ಟಿಗೆ ಮಾತ್ರ ಚಿಕ್ಕ ಯಾತ್ರೆಯಾಗಿ ಮೆಕ್ಕಾ ತೀರ್ಥಯಾತ್ರೆ ಮಾಡಬಹುದು ಎಂದು ತಿಳಿಸಲಾಯಿತು.


ಈ ಮಾತಿನಿಂದ ಮಹಮದ್ ಸಂತೃಪ್ತನಾದ, ತಾನು ತಂಗಿದ್ದ ಅಲ್ ಹೊಬೈದಿಯಾದಲ್ಲಿಯೆ ಆತ ಯಾತ್ರೆಯ ಎಲ್ಲಾ ವಿಧಿ ವಿಧಾನಗಳನ್ನೂ ಸಹ ಪೂರೈಸಿದ. ಒಂದು ರೀತಿಯಿಂದ ನೋಡಿದರೆ ಇದು ಮಹಮದನಿಗೆ ರಾಜತಾಂತ್ರಿಕವಾಗಿ ದಕ್ಕಿದ್ದ ಮೊತ್ತಮೊದಲ ಗೆಲುವಾಗಿತ್ತು. ಇಷ್ಟು ದೂರ ಪ್ರಯಾಸದ ಪ್ರಯಾಣ ಕೈಗೊಂಡು ಬಂದಿದ್ದರೂ ಸಹ ಯಶಸ್ವಿಯಾದ ಯಾತ್ರೆ ಮಾಡಲಾಗದ ಬಗ್ಗೆ ಆತನ ಹಿಂಬಾಲಕರಿಗೆ ಅತೀವ ಬೇಸರವಿದ್ದರೂ ಮಹಮದ್ ಮಾತ್ರ ತನ್ನ ಮಹತ್ವಪೂರ್ಣ ಗೆಲುವಿಗೆ ಒಳಗೊಳಗೆ ಸಂಭ್ರಮಿಸಿದ. ಕಾರಣ ಸರಳ. ಆತನನ್ನೂ ಸಹ ಒಬ್ಬ ಸ್ವತಂತ್ರ ರಾಜಕೀಯ ಶಕ್ತಿಯಾಗಿ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳುವುದರ ಮೂಲಕ ಖುರೈಷಿಗಳು ಮಾನ್ಯ ಮಾಡಿದ್ದರು.



( ಇನ್ನೂ ಇದೆ.)

Thursday, November 12, 2015

ವಲಿ - ೨೭








ಕ್ರಿಸ್ತಶಕ ೬೨೭ ಹಾಗೂ ೬೨೮ರಲ್ಲಿ ಮದೀನಾ ನಗರಕ್ಕೆ ನಿರಾಶ್ರಿತನಾಗಿ ಬಂದ ಅರ್ಧ ದಶಕಗಳ ನಂತರದ ಮಹಮದ್ ಹಾಗೂ ಅವನ ಅನುಯಾಯಿಗಳ ಬಾಳ್ವೆ ಹೆಚ್ಚು ಕಿರಿಕಿರಿಯಿಲ್ಲದೆ ಸುಖವಾಗಿ ಸಾಗಿತು. ಈಗಲೆ ಆರು ವರ್ಷಗಳ ನಿರಾಶ್ರಿತ ಬಾಳ್ವೆ ಕಳೆದು ಹೋಗಿತ್ತು. ಮದೀನಾದ ಪ್ರಜೆಗಳ ಜಾನುವಾರುಗಳನ್ನು ಕದಿಯಲು ಕೊಳ್ಳೆಯೆ ಕುಲ ಕಸುಬಾಗಿದ್ದ ಕೆಲವು ಅಲೆಮಾರು ಬುಡಕಟ್ಟುಗಳು ಕಾಲಕಾಲಕ್ಕೆ ಇಡುತ್ತಿದ್ದ ಧಾಳಿಗಳನ್ನ ಹಿಮ್ಮೆಟ್ಟಿಸಿದ್ದು ಬಿಟ್ಟರೆ ಇನ್ನಿತರ ಕಾಳಗಗಳನ್ನ ಜರಗಿಸುವ ಯಾವ ಅವಶ್ಯಕತೆಯೂ ಮಹಮದನಿಗೆ ಕಂಡು ಬರಲಿಲ್ಲ. ಆದರೆ ಮಧ್ಯೆ ಬೆನ್ ಲಿಹ್ಯಾನ್ ಎನ್ನುವ ಅಲೆಮಾರಿ ಬುಡಕಟ್ಟಿನವರು ಬರ್ಬರವಾಗಿ ಧಾಳಿ ಇಟ್ಟು ಜಾನವಾರುಗಳನ್ನು ಲಪಟಾಯಿಸಲು ಸಂಚು ರೂಪಿಸುತ್ತಿದ್ದ ಸುದ್ದಿ ಗೂಢಚರರ ಮೂಲಕ ಅರಿವಾದೊಡನೆ ಮಹಮದ್ ತಾನೆ ಅವರ ಸೊಕ್ಕಿಳಿಸಲು ಅಣಿಯಾದ. ಮುಸಲ್ಮಾನರ ಪಡೆ ಅವರಿಗಿಂತಲೂ ಮೊದಲೆ ಬೆನ್ ಲಿಹ್ಯಾನರ ವಸತಿಗಳ ಮೇಲೆ ಮುಗಿಬಿದ್ದು ಅವರನ್ನ ದೋಚಲು ಹೊರಟಿರುವ ಸುದ್ದಿ ಅವರಿಗೂ ತಲುಪಿಯಾಗಿತ್ತು. ಹೀಗಾಗಿ ಮೊದಲು ಸಿರಿಯಾದತ್ತ ಪಯಣಿಸಿ ಕಡಲ ತೀರವನ್ನ ಬಳಸಿ ಅವರ ಗಮ್ಯದತ್ತ ಮುಸಲ್ಮಾನರ ಪಡೆ ಮುಟ್ಟುವ ಮೊದಲೆ ಇನ್ನೂ ಯುದ್ಧ ತಯ್ಯಾರಿ ಮಾಡಿರದ ಬೆನ್ ಲಿಹ್ಯಾನರು ಬೆಟ್ಟ ಗುಡ್ಡಗಳಲ್ಲಿ ತಲೆ ಮರೆಸಿಕೊಂಡು ಪಾರಾದರು.




ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮಹಮದನ ಪಡೆ ಮರಳಿ ಮದೀನಾ ಮುಟ್ಟಬೇಕಾಯಿತು. ಈ ನಿರಾಸೆಯಿಂದ ಹೊರಬರುವ ಮುನ್ನವೆ ಆತ ಓಯೈನಾ ಎಂಬ ಅರಬ್ಬಿ ಮುಖಂಡನ ಆಕ್ರಮಣವನ್ನ ಎದುರಿಸಬೇಕಾಯಿತು. ಆತ ತನ್ನ ಸೈನ್ಯದೊಂದಿಗೆ ಮದೀನಾಕ್ಕೆ ಸನಿಹದಲ್ಲಿದ್ದ ಅಲ್ ಘಾಬಾ ಬಯಲು ಪ್ರದೇಶವೊಂದರಲ್ಲಿ ಮೇಯುತ್ತಿದ್ದ ಒಂಟೆಗಳ ಹಿಂಡನ್ನ ಕದ್ದುಕೊಂಡು ಓಡಿಸಿ ಹೋದ. ಸಾಲದ್ದಕ್ಕೆ ತಡೇಯಲು ಬಂದ ತುರುಗಾಯಿಯನ್ನ ಕೊಂದು ಅವನ ಹೆಂಡತಿಯನ್ನು ಸಹ ಕಿತ್ತುಕೊಂಡು ಹೋದ. ಸುದ್ದಿ ಬಂದ ಕೂಡಲೆ ಮಹಮದ್ ತನ್ನ ಪಡೆಗಳೊಂದಿಗೆ ಈ ಕಳ್ಳನ ಬೆನ್ನತ್ತಿ ಹೋದ. ಆದರೆ ಆತನನ್ನ ಸೆರೆ ಹಿಡಿಯಲಾಗಲಿಲ್ಲ. ಒಂಟೆಗಳಲ್ಲಿಯೂ ಪೂರ್ತಿ ಮರು ವಶವಾಗಲಿಲ್ಲ.



ತನಗೆ ದಕ್ಕಿದ ಒಂಟೆಗಳೊಂದಿಗೆ ಮಹಮದ್ ಮರಳಿ ಮದೀನಾದ ಹಾದಿ ಹಿಡಿದಾಗ ಓಯೈನ ಸೆರೆಯಿಂದ ತಪ್ಪಿಸಿಕೊಂಡ ತುರುಗಾಯಿಯ ಹೆಂಡತಿ ಕೂಡಾ ತಪ್ಪಿಸಿಕೊಂಡು ಬಂದು ಇವರ ಸಂಗಡ ಸೇರಿದಳು. ಆಕೆ ಒಂದು ಒಂಟೆಯನ್ನ ಏರಿ ಈ ಸಾಹಸ ಕೈಗೊಂಡಿದ್ದಳು. ತಾನು ಪಾರಾದ ಸಂತೋಷಕ್ಕೆ ಆಕೆ ತನ್ನನ್ನು ಪಾರು ಮಾಡಿದ ಆ ಒಂಟೆಯನ್ನೆ ಕಡಿದು ದೇವರಿಗೆ ಬಲಿ ಕೊಡುವ ಪ್ರತಿಜ್ಞೆ ಮಾಡಿದಳು. ಈ ಸುದ್ದಿ ಅರಿತ ಮಹಮದ್ ಆಕೆಗೆ ಸರಿಯಾಗಿ ಬೈದ. ತನ್ನ ಜೀವ ಕಾಪಾಡಿದ ಒಂಟೆಯನ್ನ ಕೊಂದು ಕೃತಘ್ನತೆ ತೋರುವುದು ತರವಲ್ಲ ಎಂದು ಆತ ಆಕೆಯನ್ನ ತರಾಟೆಗೆ ತೆಗೆದುಕೊಂಡ. ಅವಳನ್ನ ಮಾತ್ರ ಮನೆಗೆ ಮರಳಲು ಸಮ್ಮತಿಸಿ ಆ ನಿಶ್ಪಾಪಿ ಒಂಟೆಯ ಪ್ರಾಣ ಉಳಿಸಿದ.


ಆ ವರ್ಷ ನೈಝಡ್ ಪ್ರದೇಶದಲ್ಲಿ ಬರಗಾಲ ತಾಂಡವವಾಡಿ ನೀರಿಗೆ ತತ್ವಾರವಾಗಿದ್ದರೆ ಮದೀನಾದ ಸುತ್ತಮುತ್ತಲಿನಲ್ಲಿ ಮಾತ್ರ ತಕ್ಕಮಟ್ಟಿಗೆ ಮಳೆಯಾಗಿ ಜನ ಜಾನುವಾರುಗಳಿಗೆ ಬೇಕಾದ ನೀರು ತುಂಬಿತ್ತು ಹಾಗೂ ಹುಲ್ಲು ಸಮೃದ್ಧವಾಗಿ ಬೆಳೆದಿದ್ದವು. ಮೇವಿನ ಕೊರತೆ ಅಲ್ಲಿನ ಯಾವ ಜಾನುವಾರುಗಳಿಗೂ ಉಂಟಾಗಿರಲಿಲ್ಲ. ಹೀಗಾಗಿ ನೈಝಡ್ ಪ್ರದೇಶದ ಒಕ್ಕಲಾದ ಘಟ್'ಫಾನರು ತಮ್ಮ ಜಾನವಾರುಗಳ ಹಸಿವು ತಣಿಸಲು ಮದೀನಾದ ಹುಲ್ಲುಗಾವಲಿನ ಮೇಲೆ ಕಣ್ಣು ಹಾಕಿದರು. ಅವರು ಯಾವುದೆ ಸ್ಥಳಿಯ ಆಕ್ಷೇಪಕ್ಕೂ ಜಗ್ಗದೆ ಅಲ್ಲಿಗೆ ನುಗ್ಗಿದ ಘಟ್'ಫಾನರು ಅಲ್ಲಿ ಬಂದು ಬೀಡು ಬಿಟ್ಟರು. ಮುಸಲ್ಮಾನರ ದೂರು ಮಹಮದನನ್ನು ಮುಟ್ಟಲು ಹೆಚ್ಚು ಹೊತ್ತು ತಗುಲಲಿಲ್ಲ. ನಿಜ ಸಂಗತಿ ಅರಿಯಲು ಮಹಮದ್ ಮುಸ್ಲಮಾ ಎನ್ನುವ ದೂತನ ನೇತೃತ್ವದಲ್ಲಿ ಒಂದು ಕಿರು ಪಡೆಯನ್ನ ಅಲ್ಲಿಗೆ ಅಟ್ಟಿದ. ಅಗತ್ಯವಿದ್ದರೆ ಅವರನ್ನ ಹೆಡೆಮುರಿಗೆ ಕಟ್ಟುವ ಆಜ್ಞೆಯನ್ನೂ ಮುಸ್ಲಮಾನಿಗೆ ಕೊಡಲಾಗಿತ್ತು. ಆದರೆ ಅವರ ಹಣೆಬರಹ ನೆಟ್ಟಗಿರಲಿಲ್ಲ.



ರಾತ್ರಿ ವೇಳೆ ಹೊಂಚು ಹಾಕಿ ಕಾದು ನಿಂತ ಘಟ್'ಫಾನರು ಈ ಪಡೆಯ ಒಬ್ಬನೂ ಉಳಿಯದಂತೆ ಕೊಚ್ಚಿ ಹಾಕಿದರು. ಆದರಲ್ಲಿ ತೀವೃವಾಗಿ ಗಾಯಗೊಂಡಿದ್ದ ಮುಸ್ಲಮಾನನ್ನ ಆ ದಾರಿಯಾಗಿ ಸಾಗುತ್ತಿದ್ದ ಆತನ ಸ್ನೇಹಿತನೊಬ್ಬ ಕಂಡು ಪ್ರಾಣ ಉಳಿಸಿ ಮದೀನಾಕ್ಕೆ ಎತ್ತಿಕೊಂಡು ಬಂದ. ಇದರಿಂದ ಕುಪಿತನಾದ ಮಹಮದ್ ತನ್ನ ಬಂಟ ಓಬೈದನ ನೇತೃತ್ವದಲ್ಲಿ ನಲವತ್ತು ಕದನ ಕಲಿಗಳ ಪಡೆಯನ್ನ ಕಳಿಸಿದ. ಆದರೆ ಅವರು ಅಲ್ಲಿಗೆ ಹೋಗಿ ಸೇರುವ ಹೊತ್ತಿಗೆಲ್ಲಾ ಘಟ್'ಫಾನರು ಅಲ್ಲಿಂದ ತಪ್ಪಿಸಿಕೊಂಡು ಪೇರಿ ಕಿತ್ತಿದ್ದರು.


ಕ್ರಿಸ್ತಶಕ ೬೨೭ರ ಸೆಪ್ಟೆಂಬರ್ ತಿಂಗಳಿನಲ್ಲಿ ಜರುಗಿದ ಒಂದು ನೆನಪಿಡಬೇಕಾದ ಸಂಗತಿಯನ್ನ ಇತಿಹಾಸಕಾರರಾದ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ದ ಪುಟ ಸಂಖ್ಯೆ ಮುನ್ನೂರಾ ನಲವತ್ತ ನಾಲ್ಕರಲ್ಲಿ ಪ್ರಸ್ತಾವಿಸಿದ್ದಾರೆ. ಇದು ಮಹಮದನ ಅಳಿಯ ಅಬ್ದುಲ್ ಆಸ್ ಕುರಿತದ್ದಾಗಿದೆ. ಮಹಮದ್ ತನ್ನ ಮೊದಲ ಹೆಂಡತಿ ಖತೀಜಾಳ ಮಗಳಾದ ಝೈನಬ್'ಳನ್ನು ಮೆಕ್ಕಾದ ವಾಸಿ ವ್ಯಾಪಾರಿ ವೃತ್ತಿಯ ಅಬ್ದುಲ್ ಆಸ್'ನಿಗೆ ಮದುವೆ ಮಾಡಿ ಕೊಟ್ಟಿದ್ದ. ಆದರೆ ಇಸ್ಲಾಂ ಎನ್ನುವ ನೂತನ ಧರ್ಮ ಸ್ಥಾಪಿಸಿದ ನಂತರ ಮಹಮದ್ ಮದೀನಾಕ್ಕೆ ಸ್ಥಳಾಂತರಗೊಂಡರೂ ಸಹ ಆಸ್ ಮತಾಂತರವೂ ಆಗಲಿಲ್ಲ ಹಾಗೂ ತನ್ನ ಹೆಂಡತಿಯನ್ನೂ ಆ ಕಾರಣಕ್ಕಾಗಿ ತ್ಯಜಿಸಲಿಲ್ಲ. ಮಹಮದನ ವೈರಿಗಳಾಗಿ ಪರಿವರ್ತಿತರಾಗಿದ್ದ ಖುರೈಷಿಗಳು ಈ ಬಗ್ಗೆ ಸೂಚನೆ ಕೊಟ್ಟಿದ್ದರೂ ಆತ ಅದನ್ನ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಹೆಂಡತಿಯನ್ನ ತ್ಯಜಿಸದ ಅಳಿಯನ ಈ ದೃಢ ನಿರ್ಧಾರ ಮಹಮದನಿಗೆ ಖುಷಿ ತಂದಿತ್ತು.


ಇಂತಹ ಆಸ್ ಬದರ್ ಯುದ್ಧದಲ್ಲಿ ಖುರೈಷಿ ಪಡೆಯ ಪರವಾಗಿ ಹೋರಾಡುವಾಗ ಮುಸಲ್ಮಾನರಿಗೆ ಸೆರೆ ಸಿಕ್ಕಿದ್ದ. ಯುದ್ಧ ನಿಯಮದಂತೆ ಆತನನ್ನ ಒತ್ತೆ ಹಣ ಕೊಟ್ಟು ಸೆರೆಯಿಂದ ಬಿಡಿಸಿಕೊಳ್ಳಲು ಝೈನಬ್ ತೀರ್ಮಾನಿಸಿದಳು. ಪತಿಯನ್ನ ಯುದ್ಧ ಬಂಧನದಿಂದ ಮುಕ್ತ ಮಾಡಲು ಕೊಡಬೇಕಾದ ಒತ್ತೆ ಹಣವನ್ನ ಒಗ್ಗೂಡಿಸಲು ತನ್ನೆಲ್ಲಾ ಸ್ವಂತದ ಆಸ್ತಿಯನ್ನ ಮಾರಲು ಅವಳು ನಿರ್ಧರಿಸಿದಳು. ಹಾಗೆ ಅವಳು ನೀಡಿದ ಸೊತ್ತಿನಲ್ಲಿ ಆಕೆಗೆ ಖತೀಜಾ ಪ್ರೀತಿಯ ಕೊಡುಗೆಯಾಗಿ ನೀಡಿದ್ದ ಬಂಗಾರದ ಸರವೂ ಸೇರಿತ್ತು. ಅದನ್ನ ನೋಡುತ್ತಲೆ ಮಹಮದನಿಗೆ ಸತ್ತ ಹೆಂಡತಿಯ ನೆನಪು ಮನಸಲ್ಲಿ ಮೂಡಿ ಬಂದು ಅಪಾರ ವೇದನೆಯಾಯಿತು.



ಹೀಗಾಗಿ ಆತ ಕೂಡಲೆ ವಿಶೇಷ ವ್ಯವಸ್ಥೆಯೊಂದಿಗೆ ಅಳಿಯನನ್ನ ಬಂಧಮುಕ್ತ ಗೊಳಿಸಿ ಯಾವುದೆ ಒತ್ತೆಹಣ ಪಡೆಯದೆ ಕಳುಹಿಸಿಕೊಟ್ಟ. ಆದರೆ ಕಳಿಸುವ ಮೊದಲು ಮೆಕ್ಕಾ ಮುಟ್ಟುತ್ತಲೆ ತನ್ನ ಮಗಳನ್ನು ಮದೀನಕ್ಕೆ ಕಳುಹಿಸಿ ಕೊಡಬೇಕೆಂಬ ಶರತ್ತನ್ನ ವಿಧಿಸಿದ. ಆಸ್ ಅದಕ್ಕೆ ಒಪ್ಪಿ ಕೊಟ್ಟ ಮಾತಿಗೆ ಬದ್ಧನಾಗಿ ಮೆಕ್ಕಾ ಮುಟ್ಟಿದವನೆ ತನ್ನ ಕಿರಿ ತಮ್ಮ ಕಿನಾನ್ ಜೊತೆ ಮಾಡಿ ಝೈನಬ್'ಳನ್ನು ಮದೀನಕ್ಕೆ ಕಳುಹಿಸಿಕೊಟ್ಟ. ಆದರೆ ಈ ನೂತನ ಬಾಂಧವ್ಯದ ಮರು ಬೆಸೆಯನ್ನ ಸಹಿಸಲಾಗದ ಖುರೈಷಿಗಳು ದಾರಿ ಮಧ್ಯದಲ್ಲಿಯೆ ಝೈನಬ್ ಏರಿದ್ದ ಒಂಟೆಯನ್ನ ತಡೆದು ಅದನ್ನ ತೀವೃವಾಗಿ ಘಾಸಿಗೊಳಿಸಿದರು. ಆದರೆ ಆಯುಧಪಾಣಿಯಾಗಿದ್ದ ಕಿನಾನ್ ಅತ್ತಿಗೆಯ ರಕ್ಷಣೆಗೆ ಹೋರಾಡುವ ಹುಮ್ಮಸ್ಸನ್ನು ತೋರಿಸಿದ್ದೆ ತಡ ಪುಂಡಾಟಕ್ಕೆ ಇಳಿದ ಖುರೈಷಿಗಳು ಓಡಿ ಹೋದರು.



ಈ ಘಟನೆಯಿಂದ ಯಾರಿಗೂ ಪ್ರಾಣಹಾನಿಯಾಗದಿದ್ದರೂ ಬೆದರಿದ ಒಂಟೆಯಿಂದ ಜಾರಿ ಕೆಳಗೆ ಬಿದ್ದಿದ್ದ ಝೈನಬ್ ತೀವೃ ಅಘಾತಕ್ಕೆ ಒಳಗಾಗಿದ್ದಳು. ಬಿದ್ದ ಏಟಿಗೆ ಗರ್ಭಿಣಿಯಾಗಿದ್ದ ಅವಳ ಗರ್ಭಸ್ರಾವವಾಗಿ ಹೋಯಿತು. ಈ ಪ್ರಕರಣದ ಸಂಗತಿ ಅರಿವಾಗುತ್ತಲೆ ಹೌಹಾರಿದ ಮೆಕ್ಕಾದ ಮುಖಂಡ ಅಬು ಸಫ್ಯಾನ್ ಕಿನಾನ್ ಹೋಗುವ ದಾರಿಯಲ್ಲಿಯೆ ತಡೆದು ಆತನನ್ನ ಮರಳಿ ಮೆಕ್ಕಗೆ ತಿರುಗಲು ಮನವೊಲಿಸಿದ. ಈ ದುರಂತದ ಅರಿವೇನಾದರೂ ಮಹಮದನಿಗಾದರೆ ಆತ ಕೆರಳಿ ಇನ್ನೊಂದು ಕಾಳಗವಾಗುವುದು ಅಬು ಸಫ್ಯಾನನಿಗೆ ಆ ಹೊತ್ತಿನಲ್ಲಿ ಬೇಡವಾಗಿತ್ತು. ಸದ್ಯ ಮನೆಗೆ ಮರಳಿ ಅನಂತರ ಕೆಲದಿನ ಅವಳ ಆರೋಗ್ಯ ಸುಧಾರಿಸುವವರೆಗೂ ಕಾದು ಅನಂತರ ಅವಳನ್ನ ಗುಪ್ತವಾಗಿ ಮದೀನಾ ಮುಟ್ಟಿಸುವ ಸಫ್ಯಾನನ ಸಲಹೆಗೆ ಕಿನಾನ್ ಒಪ್ಪಿದ. ಝೈನಬ್'ಳನ್ನೂ ಸಹ ಸಂತೈಸಲಾಯಿತು. ಮುಂದೆ ಕಿನಾನ್ ಈ ಹಿತವಚನಕ್ಕೆ ಅನುಸಾರವಾಗಿಯೆ ನಡೆದುಕೊಂಡು ಝೈನಬ್'ಳನ್ನ ಅವಳ ಅಪ್ಪನ ಮನೆಗೆ ರಹಸ್ಯವಾಗಿ ಮುಟ್ಟಿಸಿದ.



ಹೀಗೆ ಮದೀನಾ ಪಾಲಾದ ಝೈನಬ್ ಮುಸಲ್ಮಾನಳಾಗಿ ಅಲ್ಲಿಯೆ ಉಳಿದಳು. ಇದಾಗಿ ನಾಲ್ಕು ವರ್ಷಗಳ ನಂತರ ಪುನಃ ಆಬ್ದುಲ್ ಆಸ್ ಯುದ್ಧ ಖೈದಿಯಾಗಿ ಮಹಮದನ ಸೆರೆ ಸೇರಿದ. ವಾಸ್ತವವಾಗಿ ಆತ ಕ್ಯಾರವಾನ್ ಒಂದರ ರಕ್ಷಣೆಯ ಹೊಣೆ ಹೊತ್ತು ಮೆಕ್ಕಾದಿಂದ ಸಿರಿಯಾದತ್ತ ಹೊರಟಿದ್ದ. ಅದನ್ನು ಕೊಳ್ಳೆ ಹೊಡೆದ ಮುಸಲ್ಮಾನರು ಅವನನ್ನೂ ಸಹ ಸೆರೆ ಹಿಡಿದು ಮದೀನಾದತ್ತ ನಡೆಸಿ ಅಲ್ಲಿ ಸೆರೆಯಲ್ಲಿಟ್ಟರು. ಆತ ಸೆರೆಯಲ್ಲಿಯೆ ಗುಪ್ತವಾಗಿ ಝೈನಬ್'ಳಿಗೆ ಸುದ್ದಿ ಕಳಿಸಿದ. ಪುಳಕಿತಳಾದ ಅವಳು ಗಂಡನನ್ನು ಇರುಳಿನಲ್ಲಿಯೆ ಭೇಟಿ ಮಾಡಿ ಆತನ ಪ್ರಾಣ ರಕ್ಷಣೆಯ ಅಭಯವನ್ನ ನೀಡಿದಳು. ಮುಂಜಾನೆಯ ಪ್ರಾರ್ಥನೆಯ ನಂತರ ತನ್ನ ಖಾಸಗಿ ಕೋಣೆಯಿಂದ ಹೊರ ಬಂದ ಝೈನಬ್ ಮಸೀದಿಯಲ್ಲಿ ಎಲ್ಲರೆದುರು ಗಟ್ಟಿ ಧ್ವನಿಯಲ್ಲಿ ತಾನು ತನ್ನ ಪತಿಗೆ ಅಭಯ ನೀಡಿರುವ ಸಂಗತಿಯನ್ನ ಜಗಜ್ಜಾಹೀರುಗೊಳಿಸಿದಳು. ತನ್ನ ಮಗಳ ಮಾತಿನ ಕಟಿ ಬದ್ಧತೆ ತನಗೂ ಇರುವುದರಿಂದ ತಾನೂ ಸಹ ಅದಕ್ಕೆ ಬದ್ಧನಿದ್ದೇನೆ ಎಂದು ಮಹಮದ್ ಒಪ್ಪಿಕೊಂಡ.




ಆದರೆ ಮುಸಲ್ಮಾನನಾಗಿರದ ಆ ಕಾಫಿರನ ಬಳಿ ಇಸ್ಲಾಮಿನ ಅನುಯಾಯಿಯಾದ ತನ್ನ ಮಗಳು ಅತಿಥಿಯಾಗಿ ಮಾತ್ರ ಹೋಗಬಹುದೆಂದೂ, ಅವರು ಗಂಡ ಹೆಂಡಿರಾಗಿ ವರ್ತಿಸುವಂತಿಲ್ಲ ಎನ್ನುವ ತಾಕೀತು ಸಹ ಮಾಡಿದ. ಅವನ ಮಾತಿಗೆ ಆಕೆ ಸಮ್ಮತಿಸಿದಾಗ ಆಸ್'ನನ್ನು ಬಿಡುಗಡೆ ಮಾಡಲಾಯಿತು. ಮಹಮದನ ಔದಾರ್ಯಕ್ಕೆ ಮನಸೋತ ಆಸ್ ಸ್ವ ಇಚ್ಛೆಯಿಂದಲೆ ಮತಾಂತರವಾಗಿ ಮತ್ತೆ ಝೈನಬ್'ಳೊಂದಿಗೆ ತನ್ನ ವೈವಾಹಿಕ ಜೀವನವನ್ನ ಮದೀನಾದಲ್ಲಿಯೆ ಮುಂದುವರೆಸಿದ. ಆದರೆ ಹಿಂದಾಗಿದ್ದ ಗರ್ಭಸ್ರಾವದಿಂದ ತೀವೃ ಅಸ್ವಸ್ಥತೆಗೆ ಒಳಗಾಗಿದ್ದ ಝೈನಬ್ ಅದರ ನೋವನ್ನ ಪದೆ ಪದೆ ಅನುಭವಿಸುತ್ತಾ ನರಳುತ್ತಿದ್ದಳು. ಮುಂದಿನ ಎರಡು ವರ್ಷಗಳಲ್ಲಿ ಅದೆ ನೋವು ಅವಳ ಪ್ರಾಣದ ಆಹುತಿಯನ್ನೂ ಸಹ ಪಡೆಯಿತು.


ಈ ನಡುವೆ ಮಹಮದ್ ಆ ಕಾಲದ ಪ್ರಖ್ಯಾತ ಹಗೂ ಅಳಿವಿನಂಚಿನಲ್ಲಿದ್ದ ರೋಮನ್ ಸಾಮ್ರಾಜ್ಯದೊಂದಿಗೆ ಪತ್ರ ವ್ಯವಹಾರ ನಡೆಸಿದ. ಈ ಸಂಪರ್ಕ ಕ್ರಿಸ್ತಶಕ ಆರುನೂರಾ ಇಪ್ಪತ್ತೇಳರ ಅಕ್ಟೋಬರ್ ತಿಂಗಳಿನಲ್ಲಿ ನಡೆಯಿತು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್. ಅದರ ಮರು ತಿಂಗಳಿನಲ್ಲಿಯೆ ದೂಮತ್ ಅಲ್ ಝಂಡಲ್ ಪ್ರದೇಶದ ಮೇಲೆ ಮಹಮದನ ಇನ್ನೊಂದು ದಂಡಯಾತ್ರೆ ಜರುಗಿತು. ಈ ಬಾರಿ ಧಾಳಿಯ ಉದ್ದೇಶ ಕೊಳ್ಳೆ ಆಗಿಲ್ಲದೆ ಕೇವಲ ಮತಾಂತರ ಮಾತ್ರ ಮಾಡುವುದಾಗಿತ್ತು. ಆ ಪ್ರದೇಶ ಬಹುಸಂಖ್ಯಾತ ಕ್ರೈಸ್ತರಿಂದ ತುಂಬಿತ್ತು. ಯಾವುದೆ ಠಕ್ಕು, ವಂಚನೆ ಹಾಗೂ ಮೋಸ ಎಸಗದಂತೆಯೂ, ಯಾವೊಬ್ಬ ಎಳೆಯ ಮಕ್ಕಳನ್ನ ಹಿಡಿದು ಹಿಂಸಿಸದಂತೆಯೂ ಮಹಮದ್ ತನ್ನ ಪಡೆಗೆ ಕಟ್ಟುನಿಟ್ಟಿನ ಸೂಚನೆ ಇತ್ತಿದ್ದ.



ಈ ಪ್ರಕಾರ ದೂಮತ್ ಅಲ್ ಝಂಡಲ್ ಪ್ರದೇಶ ಮುಟ್ಟಿದ ಮಹಮದನ ಸೈನ್ಯಾಧಿಕಾರಿ ಅಬ್ದುಲ್ ರೆಹ್ಯಾನ್ ಕೈಸ್ತ ಮುಖಂಡರನ್ನ ಕರೆಸಿ ಎಲ್ಲರೂ ಮರು ಮಾತಿಲ್ಲದೆ ಇಸ್ಲಾಮ್ ಸ್ವೀಕರಿಸುವಂತೆ ತಾಕೀತು ಮಾಡಿದ. ಅದಕ್ಕಾಗಿ ಮೂರು ದಿನಗಳ ವಾಯಿದೆಯನ್ನಾತ ಇತ್ತಿದ್ದ. ಅಬು ಅಸ್ಭಾಫ್ ಎನ್ನುವ ಕ್ರೈಸ್ತ ಮುಖಂಡ ಮೂರು ದಿನಗಳ ಒಳಗೆ ತನ್ನ ಸಮಾಜದಲ್ಲಿ ಚರ್ಚಿಸಿ ಮಹಮದನ ಶಕ್ತಿ ಹಾಗೂ ಮುಸಲ್ಮಾನರ ಬರ್ಬರತೆಗಳನ್ನ ವಿಮರ್ಶಿಸಿ ಇಸ್ಲಾಂ ಸ್ವೀಕರಿಸುವುದೆ ಕ್ಷೇಮ ಎನ್ನುವ ನಿರ್ಧಾರಕ್ಕೆ ಬಂದ. ರೆಹ್ಯಾನನಿಗೆ ಈ ಶರಣಾಗತಿಯ ಸುದ್ದಿಯನ್ನು ಮುಟ್ಟಿಸಲಾಯಿತು. ಆತನನ್ನ ಅನುಸರಿಸಿ ಅನೇಕ ಕ್ರೈಸ್ತರು ಮುಸಲ್ಮಾನರಾದರು. ಅಸ್ಭಾಫ್'ನ ಮಗಳನ್ನ ಅಬ್ದುಲ್ ರೆಹ್ಯಾನನಿಗೆ ಕೊಟ್ಟು ಮದುವೆ ಮಾಡಲಾಯಿತು. ಹೊಸ ಹೆಂಡತಿಯೊಂದಿಗೆ ರೆಹ್ಯಾನ್ ಪಡೆ ಹಿಂದಿರುಗಿಸಿ ಕೊಟ್ಟ ಕಾರ್ಯವನ್ನ ಯಶಸ್ವಿಯಾಗಿ ಪೂರೈಸಿ ಮದೀನಾ ಬಂದು ಮುಟ್ಟಿದ.


ಮತ್ತೆ ವ್ಯಾಪಾರದ ಪ್ರವೃತ್ತಿಗೂ ಮರಳಿದ್ದ ಮಹಮದ್ ಕ್ಯಾರವಾನ್'ಗಳನ್ನು ಕಟ್ಟಿ ದೂರ ದೇಶಗಳಿಗೆ ಅವನ್ನು ಕಳಿಸುವ ಹಾಗೂ ಅಲ್ಲಿ ವ್ಯಾಪಾರ ನಡೆಸುವ ಕ್ರಮವನ್ನೂ ಸಹ ರೂಢಿಸಿಕೊಂಡ. ಅದೆ ವರ್ಷದ ದಿಸೆಂಬರಿನಲ್ಲಿ ಮಹಮದನ ಸಾಕುಮಗ ಝೈದ್ ಸಿರಿಯಾಕ್ಕೆ ಹೋಗಲಿದ್ದ ಅಂತಹ ಕ್ಯಾರವಾನ್ ಒಂದರ ನೇತೃತ್ವ ವಹಿಸಿ ಹೋಗಿದ್ದ. ಆದರೆ ದಾರಿ ಮಧ್ಯೆ ಬೆನ್ ಫೆಝಾರ್ ಬುಡಕಟ್ಟಿನವರು ಈ ಕ್ಯಾರವಾನನ್ನು ದರೋಡೆ ಮಾಡಿದರು. ಆತನ ಸುಪರ್ದಿಯಲ್ಲಿದ್ದ ಕಟ್ಟ ಕಡೆಯ ವಸ್ತುವನ್ನೂ ಸಹ ಲೂಟಿ ಮಾಡಿದ ಅವರು ಅವನನ್ನು ಮಾತ್ರ ಘಾಸಿಗೊಳಿಸಿ ಜೀವಂತವಾಗಿ ಬಿಟ್ಟು ಬಿಟ್ಟರು. ಬದುಕಿದೆಯ ಬಡ ಜೀವವೆ ಎನ್ನುವಂತೆ ಮದೀನಾ ಸೇರಿಕೊಂಡ ಝೈದ್. ಆದ ಗಾಯಗಳಿಂದ ಚೇತರಿಸಿಕೊಂಡು ಸೇಡಿಗಾಗಿ ಹಾತೊರೆಯುತ್ತಾ ಕೂತ.



ಮಹಮದನ ಅಪ್ಪಣೆ ಪಡೆದು ಆ ಬೆನ್ ಫೆಜಾರ್ ಬುಡಕಟ್ಟಿನವರಿಗೆ ತಕ್ಕಪಾಠ ಕಲಿಸಲು ಹೊರಟ. ಕರಾರುವಾಕ್ಕಾಗಿ ಧಾಳಿಯನ್ನ ಸಂಘಟಿಸಿದ ಆತ ಈ ವಾರ್ತೆ ಎಲ್ಲಿಯೂ ಮೊದಲೆ ಸೋರಿಕೆ ಆಗದಂತೆ ಮುಂಜಾಗ್ರತೆ ವಹಿಸಿದ್ದ. ಆತನ ಅನಿರೀಕ್ಷಿತ ಧಾಳಿಯ ಮುಂದೆ ಬೆನ್ ಫೆಝಾರರು ನಿಸ್ಸಹಾಯಕಯಾಗಿ ಸೋತು ಶರಣಾದರು. ಈಗ ಪ್ರತಿಕಾರವಾಗಿ ಅವರ ಕೊಟ್ಟ ಕೊನೆಯ ಸೊತ್ತನ್ನೂ ಸಹ ವಶ ಪಡಿಸಿಕೊಳ್ಳಲಾಯಿತು. ಹೀಗೆ ಸೆರೆ ಹಿಡಿದ ಜನ ಹಾಗೂ ದನಗಳಲ್ಲಿ ಉಮ್ ಕಿರ್ಫಾ ಎನ್ನುವ ಕುಖ್ಯಾತ ಮಹಿಳೆಯೂ ಒಬ್ಬಳಾಗಿದ್ದಳು. ಅತ್ಯಂತ ಕ್ರೌರ್ಯಕ್ಕೆ ಹೆಸರುವಾಸಿಯಾದ ಹಿಂಸ್ರ ಪಶುವಿನಂತಹ ನಡುವಳಿಕೆಯ ಆಕೆ ಆ ದರೋಡೆಕೋರರ ಗುಂಪಿನ ಮುಖ್ಯಸ್ಥನ ಸೂಳೆಯಾಗಿದ್ದಳು.



ಅವಳಿಗೆ ಪ್ರಾಯ ಸಂದು ವಯೋ ವೃದ್ಧೆಯಾಗಿದ್ದರೂ ಕ್ರೌರ್ಯದಲ್ಲಿ ಮಾತ್ರ ಇನಿತೂ ಆಕೆಯ ವಿಕೃತಿ ತಗ್ಗಿರಲಿಲ್ಲ. ಆಕೆಯನ್ನ ಅಷ್ಟೆ ಕ್ರೂರವಾಗಿ ಝೈದ್ ನಡೆಸಿಕೊಂಡ. ಆಕೆಯನ್ನ ಬೋರಲಾಗಿ ಮಲಗಿಸಿ ಆಕೆಯ ಎರಡೂ ಕಾಲುಗಳನ್ನ ಎರಡು ಪ್ರತ್ಯೇಕ ಒಂಟೆಗಳ ಹಿಂಗಾಲುಗಳಿಗೆ ಕಟ್ಟಿದ! ಅವು ಎಳೆದೆಳೆದು ಮುಂದೆ ಸಾಗುತ್ತಿದ್ದಂತೆ ಅತ್ಯಂತ ದಾರುಣವಾಗಿ ಛಿದ್ರಗೊಂಡ ದೇಹದೊಂದಿಗೆ ಆಕೆ ಕೊನೆಯುಸಿರೆಳೆದಳು. ಆಕೆಯ ತಮ್ಮನನ್ನೂ ಸಹ ಕಣ್ಣು ಕೀಳಿಸಿ ಅದೆ ಸ್ಥಿತಿಗೆ ದೂಡಲಾಯಿತು. ಆದರೆ ಅವಳ ಮಗಳಿಗೆ ಮಾತ್ರ ಶಿಕ್ಷೆಯಿಂದ ವಿನಾಯತಿ ನೀಡಿ ಮುಂದೆ ಮಹಮದನ ಎಳೆಯ ಪತ್ನಿ ಆಯೆಷಾಳ ಆಪ್ತ ಸೇವೆಗೆ ಗುಲಾಮಳನ್ನಾಗಿ ನೇಮಿಸಲಾಯಿತು.


ಈಗ ಮಹಮದನ ದೃಷ್ಟಿ ಮತ್ತೆ ಯಹೂದಿಗಳತ್ತ ತಿರುಗಿತು. ಹಿಂದೆ ಬೆನ್ ಅನ್ ನದೀರ್ ಯಹೂದಿ ಬುಡಕಟ್ಟಿನವರನ್ನು ಆತ ಗಡಿಪಾರು ಮಾಡಿದ್ದನ್ನಷ್ಟೆ. ಅವರಲ್ಲಿ ಕೆಲವರು ಖೈಬರ್ ಪ್ರಾಂತ್ಯಕ್ಕೆ ತೆರಳಿ ಅಲ್ಲಿನ ತಮ್ಮ ಮತ ಬಾಂಧವರೊಂದಿಗೆ ವಾಸ್ತವ್ಯ ಹೂಡಿ ಅಲ್ಲಿಯೆ ನೆಲೆಗೊಂಡಿದ್ದರು. ಅಬು ರಫಿ ಎಂಬಾತ ಆ ಗುಂಪಿನ ಮುಖಂಡನಾಗಿದ್ದ. ಹಿಂದೆ ಖುರೈಷಿಗಳ ಪರವಾಗಿ ತನ್ನ ವಿರುದ್ಧ ಹೋರಾಡಿದ್ದವರು ಈಗ ಮತ್ತೆ ಪಿತೂರಿ ಮಾಡುತ್ತಿದ್ದಾರೆ ಎಂದೆ ರೊಳ್ಳೆ ತೆಗೆದ ಮಹಮದ್ ಅವರ ಮೇಲೆ ಹೊಸ ಆರೋಪ ಹೊರೆಸಿ ಧಾಳಿಗೆ ಮುಂದಾದ. ಅದಕ್ಕೆ ಪೂರ್ವಭಾವಿಯಾಗಿ ತನ್ನದೊಂದು ಕೊಲೆಗಡುಕರ ತಂಡವನ್ನು ಅಬು ರಫಿಯನ್ನ ಕೊಲ್ಲಲು ನೇಮಿಸಿದ. ನಿಷ್ಣಾತ ವೃತ್ತಿಪರ ಕೊಲೆಗಾರರೆ ತುಂಬಿದ್ದ ಆ ತಂಡದ ಮಂದಿ ನಟ್ಟ ನಡುರಾತ್ರಿ ಖೈಬರ್ ಸೇರಿಕೊಂಡರು.




ಆ ಕೊಲೆಗಾರರ ನೇತೃತ್ವ ವಹಿಸಿದ್ದವ ಯಹೂದಿ ನಡುವಳಿಕೆ ಹಾಗೂ ಮಾತಿನ ಧಾಟಿಯನ್ನ ಚೆನ್ನಾಗಿ ಅರಿತಿದ್ದ. ಆತ ರಫಿಯ ಮನೆ ಮುಂದೆ ನಿಂತು ವಿನಯ ನಟಿಸುತ್ತಾ ಬಾಗಿಲು ತೆಗೆಯುವಂತೆ ರಫಿಯ ಹೆಂಡತಿಯನ್ನು ವಿನಂತಿಸಿದ. ಏಮಾರಿದ ಆಕೆ ಅಮಾಯಕವಾಗಿ ಈ ಯಾಚನೆಯ ಧ್ವನಿಯನ್ನ ನಂಬಿ ಬಾಗಿಲು ತೆರೆದಳು. ತಕ್ಷಣ ಒಳ ನುಗ್ಗಿದ ಕೊಲೆಗಡುಕರು ಹರಿತವಾದ ಕತ್ತಿಯನ್ನ ತೋರಿಸಿ ಬೆದರಿಸಿ ಆಕೆಯನ್ನ ಸುಮ್ಮನಾಗಿಸುತ್ತಾ ಮಲಗಿದ್ದ ರಫಿಯ ಕತ್ತು ಕಡಿದು ತಲೆಯನ್ನು ಕಿತ್ತೊಗೆದು ಬಂದಂತೆಯೆ ಹಿಂದಿರುಗಿ ಹೋದರು! ಊರ ಸನಿಹದ ಬೆಟ್ಟದಲ್ಲಿ ಅಡಗಿ ರಾತ್ರಿ ಕಳೆದು ಬೆಳಗಾಗುವಾಗ ಮದೀನ ಮುಟ್ಟಿ ಮಹಮದನಿಗೆ ಈ ವರದಿಯನ್ನ ಒಪ್ಪಿಸಿದ್ದೆ ಆತ ಆನಂದ ತುಂದಿಲನಾದ.


ಆದರೆ ಕೇವಲ ಅಬು ರಫಿಯ ಕೊಲೆಯಿಂದ ಮಹಮದ್ ತೃಪ್ತನಾಗಲಿಲ್ಲ. ಬೆನ್ ಅನ್ ನದೀರ್ ಗುಂಪಿನ ಇನ್ನಿತರ ಮುಖಂಡರ ಜೊತೆ ಓಸೈರ್ ಮುಂತಾದವರು ಸಂಚು ಮಾಡುತ್ತಾ ಘಟ್'ಫಾನರ ಜೊತೆಗೂಡಿ ಮದೀನಾದ ಮೇಲೆ ಮುಗಿ ಬೀಳುವ ಬಾತ್ಮಿ ಅವನಿಗೆ ಬಂದು ಮುಟ್ಟಿದ್ದೆ ಇದಕ್ಕೆ ಕಾರಣ. ಆದರೆ ಅಬು ರಫಿಯ ಕೊಲೆಯಂತಹ ಮತ್ತೊಂದು ಯೋಜನೆ ಈಗ ಕಾರ್ಯ ಸಾಧುವಾಗುವುದಿಲ್ಲ ಅನ್ನುವುದು ಅವನಿಗೆ ಚೆನ್ನಾಗಿ ಮನವರಿಕೆಯಾಗಿತ್ತು. ಯಹೂದಿಗಳು ಆದ ಆ ಅನಾಹುತದ ನಂತರ ಎಚ್ಚರದಿಂದ ಇದ್ದರು. ಅಂತಹ ಭವಿಷ್ಯದ ದುರಂತಗಳನ್ನ ತಪ್ಪಿಸಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನೂ ಸಹ ತೆಗೆದುಕೊಂಡಿದ್ದರು. ಇದಕ್ಕಾಗಿ ಮಹಮದನ ಮೆದುಳು ಹೊಸತೊಂದು ಕುತಂತ್ರವನ್ನ ಹೆಣೆಯುವುದು ಅನಿವಾರ್ಯವಾಯಿತು. ಆ ಯೋಜನೆಯನುಸಾರ ತನ್ನ ಮೂವತ್ತು ಮುಸಲ್ಮಾನರ ನಿಯೋಗವೊಂದನ್ನ ಆತ ಅಬ್ದುಲ್ಲಾ ಇಬ್ನ್ ರವಾಹ್ ಎಂಬಾತನ ನೇತೃತ್ವದಲ್ಲಿ ಓಸೈರ್ ಬಳಿ ಕಳುಹಿಸಿದ. ಒಂದೊಮ್ಮೆ ಕಪ್ಪ ಕಾಣಿಕೆಗಳೊಂದಿಗೆ ಓಸೈರ್ ತನ್ನನ್ನ ಮದೀನದಲ್ಲಿ ಬಂದು ಕಂಡು ನಜರಾನಾ ಒಪ್ಪಿಸಿದರೆ ತಾನು ಖೈಬರ್ ಪ್ರಾಂತ್ಯಕ್ಕೆ ಅವನೆ ರಾಜನೆಂದು ಮಾನ್ಯ ಮಾಡುವುದಾಗಿ ಈ ನಿಯೋಗ ಸಂಧಾನ ನಡೆಸಿತು. ಅವನ ಜೀವದ ಅಭಯವನ್ನ ಆ ಮೂವತ್ತು ಮಂದಿಯ ಪಡೆ ಕೊಡುವುದಾಗಿಯೂ ಭರವಸೆ ನೀಡಲಾಯಿತು.


ಇದಕ್ಕೆ ಒಪ್ಪಿಗೆ ಸೂಚಿಸಿದ ಓಸೈರ್ ತನ್ನದೂ ಮೂವತ್ತು ಮಂದಿಯ ಪಡೆಯೊಂದನ್ನ ಕಟ್ಟಿಕೊಂಡು ಮದೀನಾಕ್ಕೆ ಹೊರಟ. ಪ್ರತಿಯೊಬ್ಬ ಯಹೂದಿಯನ್ನೂ ಒಬ್ಬೊಬ್ಬ ಮುಸಲ್ಮಾನನ ವಶ ನೀಡಿ ಅವರನ್ನ ಅಂತೆಯೆ ಒಂಟೆಯೆ ಮೇಲೆ ಜೊತೆಜೊತೆಯಾಗಿಯೆ ಕೂರಿಸಲಾಯಿತು. ಹೀಗೆ ಪ್ರಯಾಣ ಸಾಗುತ್ತಿದ್ದಾಗ ಧಾರಿ ಮಧ್ಯ ಓಸೈರ್ ತನ್ನ ಕತ್ತಿ ತೆಗೆಯಲು ಪ್ರಯತ್ನಿಸುತ್ತಿದ್ದಾನೆ ಎಂದು ದೊಡ್ದ ಧ್ವನಿಯಲ್ಲಿ ಆರೋಪಿಸುತ್ತಾ ಅಬ್ದುಲ್ಲಾ ತನ್ನ ಒಂಟೆಯಿಂದ ಏಕಾಏಕಿ ಕೆಳ ನೆಗೆದ. ವಾಸ್ತವದಲ್ಲಿ ಓಸೈರ್ ಕತ್ತಿ ತೆಗೆದೂ ಇರಲಿಲ್ಲ ಹಾಗೂ ಹಾಗೆ ಕತ್ತಿ ಹಿರಿಯಲು ಸಂಧಿಗಾಗಿ ಸಮ್ಮತಿಸಿ ಹೊರಟಿದ್ದ ಅವನಿಗೆ ಸಕಾರಣಗಳೆ ಇರಲಿಲ್ಲ!. ಆದರೆ ಈ ಕುಂಟು ನೆಪವನ್ನೆ ಮುಂದು ಮಾಡಿದ ಅಬ್ದುಲ್ಲಾ ಅತನನ್ನ ಕೆಡವಿ ಕಡಿದುರುಳಿಸಿದ. ಹುಡುಕಿದಾಗ ಅವನ ಬಳಿ ಯಾವುದೆ ಕತ್ತಿಯೂ ಪತ್ತೆಯಾಗಲಿಲ್ಲ! ಅಲ್ಲಿಗೆ ಇದು ಮುಸಲ್ಮಾನರ ಹಾಗೂ ಮಹಮದನ ಕುತಂತ್ರವೆನ್ನುವುದು ಸ್ಪಷ್ಟವಾಗಿ ಸಾಬೀತಾಯಿತು. ಆದರೆ ಸಾಯುವ ಮುನ್ನ ಓಸೈರ್ ಸಹಾ ತನ್ನ ಉದ್ದ ಒಂಟೆ ಓಡಿಸುವ ಕೋಲಿನಿಂದ ಅಬ್ದುಲ್ಲಾನ ಮಂಡೆಗೆ ಬೀಸಿ ಹೊಡೆದಿದ್ದ. ಇನ್ನುಳಿದ ಇಪ್ಪತ್ತೊಂಬತ್ತು ಮಂದಿ ಯಹೂದಿಗಳನ್ನೂ ಸಹ ಮುಸಲ್ಮಾನರು ಕತ್ತರಿಸಿ ಹಾಕಿದರು. ಸುದ್ದಿ ಮಹಮದನ ಕಿವಿಗೆ ಮುಟ್ಟಿದಾಗ ಆತ ಸಂಪ್ರೀತನಾದ.


ಇದೆ ಸಮಯದಲ್ಲಿ ಮರಳುಗಾಡಿನ ಇನ್ನೊಂದು ಅಲೆಮಾರಿ ಬುಡಕಟ್ಟು ಬೆದಾವಿನರಲ್ಲಿ ಎಂಟು ಮಂದಿ ಮಹಮದನ ಸಂಪರ್ಕ ಸಾಧಿಸಿ ಇಸ್ಲಾಮನ್ನು ಒಪ್ಪಿಕೊಂಡು ಮುಸಲ್ಮಾನರಾದರು. ಅವರು ಮದೀನಾದಲ್ಲಿ ಇರುವಾಗಲೆ ಖಾಯಲೆ ಬಿದ್ದರು. ಅವರನ್ನ ಉಪಚರಿಸುವಲ್ಲಿ ಯಾವುದೆ ಕೊರತೆಯಾಗದಂತೆ ಮಹಮದ್ ಎಚ್ಚರ ವಹಿಸಿದ. ತನ್ನ ಸುಪರ್ದಿಯಲ್ಲಿದ್ದ ಮದೀನಾ ಪಕ್ಕದ ಕೋಬಾದಲ್ಲಿ ಅವರನ್ನ ಚೇತರಿಸಿಕೊಳ್ಳಲು ಇರಿಸಲಾಯಿತು. ಅಲ್ಲಿ ಸೊಂಪಾಗಿ ಚಿಗುರಿದ್ದ ಹುಲ್ಲುಗಳನ್ನ ಮೇಯ್ದು ಪುಷ್ಠವಾಗಿದ್ದ ಒಂಟೆಗಳನ್ನ ಅವರ ವಶಕ್ಕೆ ನೀಡಲಾಯಿತು. ಅವುಗಳ ಸಮೃದ್ಧ ಹಾಲನ್ನ ಕುಡಿದು ಅವರು ಆರೋಗ್ಯ ಸುಧಾರಿಸಿಕೊಂಡರು. ಅವನ ಅಣತಿಯನ್ನು ಪಾಲಿಸಿದ ಬೆದಾವಿನರು ಮರಳಿ ಗಟ್ಟಿಮುಟ್ಟಾದರು. ಆದರೆ ಆರೋಗ್ಯ ಸುಧಾರಣೆಗೊಂಡ ನಂತರ ಮತ್ತೆ ಕೊಳ್ಳೆ ಹೊಡೆಯುವ ಅವರ ಮೂಲ ಪ್ರವೃತ್ತಿಗೆ ಅವರು ಮತ್ತೆ ಶರಣಾದರು.



ಅದರ ಅನುಸಾರ ಒಂಟೆಯನ್ನು ಕಾಯುತ್ತಿದ್ದ ತುರುಗಾಹಿಯನ್ನ ಕ್ರೂರವಾಗಿ ಕೊಡ ಅವರು ಒಂಟೆಗಳನ್ನ ಓಡಿಸಿಕೊಂಡು ಅಲ್ಲಿಂದ ಕಾಲ್ಕಿತ್ತರು. ಈ ಸುದ್ದಿ ತಿಳಿದ ಮಹಮದ್ ಅವರ ಕೃತಘ್ನತೆ ಕಂಡು ಕೆರಳಿ ಕೆಂಡವಾದ. ಅವರನ್ನ ಬೆನ್ನಟ್ಟಲು ಪಡೆಯೊಂದನ್ನ ಕಳುಹಿಸಲಾಯಿತು. ಹೆಚ್ಚು ಶ್ರಮವಿಲ್ಲದೆ ಅವರು ಸೆರೆಯಾದರು. ಅವರನ್ನ ತಂದು ಮಹಮದನ ಮುಂದೆ ಕೈ ಕಟ್ಟಿ ಮಂಡಿಯ ಮೇಲೆ ನಿಲ್ಲಿಸಲಾಯಿತು. ಅವರು ತುರುಗಾಹಿಯನ್ನ ಕೊಂದ ವಿಧಾನದಲ್ಲಿಯೆ ಅವರ ಕೈ ಕಾಲನ್ನ ಕಡಿಸಿ ಕಣ್ಣು ಕೀಳಿಸಿದ. ಶವಗಳನ್ನು ಅಲ್ ಘಾಬಾ ಪ್ರದೇಶದಲ್ಲಿ ಎಸೆಯಲಾಯಿತು. ಆದರೆ ಈ ಕ್ರೂರ ಶಿಕ್ಷೆಗಳನ್ನ ಮರಣದಂಡನೆಯಿಂದ ಮುಂದೆ ಹೊರಗಿಡಲಾಯಿತು. ಕೇವಲ ಕತ್ತು ಕಡಿಯುವುದಕ್ಕಷ್ಟೆ ಇದನ್ನ ಸೀಮಿತಗೊಳಿಸಿಕೊಳ್ಳಲಾಯಿತು. ಆದರೆ ದೈಹಿಕ ಹಲ್ಲೆಗೆ ಮಾತ್ರ ದೈಹಿಕವಾಗಿ ಅದೆ ಅಂಗವನ್ನ ಊನ ಮಾಡುವ ಕಠಿಣ ಪದ್ಧತಿಯನ್ನ ಇಸ್ಲಾಮಿನಲ್ಲಿ ಮಹಮದ್ ಅಳವಡಿಸಿದ.



ಕಳ್ಳತನದ ಅಪರಾಧಕ್ಕೆ ಕೈ ಕಾಲನ್ನು ಕತ್ತರಿಸಿ ಹಾಕುವ ಕಟ್ಟುನಿಟ್ಟಾದ ಶಿಕ್ಷೆಯನ್ನ ಇಸ್ಲಾಮ್ ಅನುಸರಿಸುವಂತೆ ಮಾಡಲಾಯಿತು. ದರೋಡೆಕೋರರು ಸ್ತ್ರೀಯರೆ ಇರಲಿ ಅಥವಾ ಪುರುಷರೆ ಇರಲಿ ಅವರಿಗೆ ಇದರಿಂದ ಯಾವುದೆ ವಿನಾಯತಿಯನ್ನು ನೀಡಲಾಗಿರಲಿಲ್ಲ. ಖುರ್ಹಾನಿನ ಸುರಾ ಸಂಖ್ಯೆ ಮೂವತ್ತೆಂಟು ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ಸುರಾ ೫/೩೮-೪೫ರಲ್ಲಿ ವಿಸ್ಕೃತವಾಗಿ ಇದನ್ನ ವಿವರಿಸಲಾಗಿದೆ. ಅದರಲ್ಲಿ ಹೇಳಿರುವಂತೆ "ಚೋರರು ಸ್ತ್ರೀಯರಾಗಿರಲಿ ಅಥವಾ ಪುರುಷರಾಗಿರಲಿ ಇಬ್ಬರ ಕೈಗಳನ್ನೂ ಸಹ ನಿರ್ದಾಕ್ಷಿಣ್ಯವಾಗಿ ಕಡಿದು ಬಿಡಿರಿ. ಅದು ಅವರ ಗಳಿಕೆಯ ಫಲ ಹಾಗೂ ಅಲ್ಲಾಹನು ಅಂತಹ ಅಧಮರಿಗೆ ವಿಧಿಸಿದ ಕಠಿಣ ಎಚ್ಚರಿಕೆ. ಅಲ್ಲಾಹನು ಮಹಾ ಪ್ರತಾಪಿಯೂ, ಯುಕ್ತಿಪೂರ್ಣನೂ ಆಗಿರುತ್ತಾನೆ. ಅಲ್ಲಾಹನ ಆಜ್ಞೆ ಬರೆದಿರುವಂತಹ 'ಶೌರತ್' ಅವರ ಬಳಿಯಲ್ಲಿದ್ದೂ ಸಹ ಅವರು ಅದನ್ನು ಮೀರಿ ಹೋಗುತ್ತಿರುವಾಗ ನಿಮ್ಮನ್ನ ಅದಕ್ಕೆ ಮಧ್ಯಸ್ಥರನ್ನಾಗಿ ಮಾಡುವುದಾದರೂ ಹೇಗೆ? ವಾಸ್ತವದಲ್ಲಿ ಅವರು ವಿಶ್ವಾಸಿಗಳೆ ಆಗಿರುವುದಿಲ್ಲ."


"ನಾವು 'ತೌರಾತ'ನ್ನು ಅವತ್ತೀರ್ಣಗೊಳಿಸಿದ್ದೆವು. ಅದರಲ್ಲಿ ಮಾರ್ಗದರ್ಶನ ಹಾಗೂ ಪ್ರಕಾಶವಿತ್ತು. ಮುಸಲ್ಮಾನರಾಗಿದ್ದು ಅಲ್ಲಾಹನ ಆಜ್ಞಾನುಸಾರಿಗಳಾಗಿದ್ದು ಬಂದ ಎಲ್ಲಾ ಪ್ರವಾದಿಗಳೂ ಸಹ ಯಹೂದಿಗಳ ವಾಜ್ಯಗಳನ್ನು ಇದರನುಸಾರವೆ ಇತ್ಯರ್ಥಗೊಳಿಸುತ್ತಿದ್ದರು. ಇದೆ ಕ್ರಮದಲ್ಲಿ ಅಬ್ದಾನಿಗೆ ಅಹ್'ಬಾರರೂ ಸಹ ತೀರ್ಪು ನೀಡುತ್ತಿದ್ದರು."


"ಏಕೆಂದರೆ ಅವರನ್ನು ದೇವಗ್ರಂಥದ ಸಂರಕ್ಷಕರನ್ನಾಗಿ ನೇಮಿಸಲಾಗಿತ್ತು. ಅದಕ್ಕೆ ಅವರು ಸಾಕ್ಷಿಯಾಗಿದ್ದರು. ಆದ್ದರಿಂದ ಯಹೂದಿಗಳೆ ನೀವು ಜನರನ್ನು ಭಯ ಪಡಿರಿ ಹಾಗೂ ನನ್ನ ಸೂಕ್ತಗಳನ್ನು ಅಲ್ಪ ಪ್ರತಿಫಲ ಪಡೆದು ಮಾರುವ ಪ್ರವೃತ್ತಿಯನ್ನು ನಿಲ್ಲಿಸಿರಿ. ಅಲ್ಲಾಹನು ಅವತ್ತೀರ್ಣಗೊಳಿಸಿದ ಕಾನೂನಿನ ಪ್ರಕಾರ ಶಿಕ್ಷೆಗಳನ್ನು ತೀರ್ಮಾನಿಸದವರೆ ಕಾಫಿರರು."


"ಜೀವಕ್ಕೆ ಬದಲು ಜೀವ, ಕಣ್ಣಿಗೆ ಬದಲು ಕಣ್ಣು, ಮೂಗಿಗೆ ಬದಲು ಮೂಗು, ಕಿವಿಗೆ ಬದಲು ಕಿವಿ, ಹಲ್ಲಿಗೆ ಬದಲು ಹಲ್ಲು, ಹಾಗೂ ಎಲ್ಲಾ ಗಾಯಗಳಿಗೆ ಪ್ರತಿಯಾಗಿ ಅದೆ ಗಾಯಗಳೆಂದು ಯಹೂದಿಗಳಿಗೆ ನಾವು 'ತೌರಾತ್'ನಲ್ಲಿ ಖಡ್ಡಾಯಗೊಳಿಸಿದ್ದೆವು. ಈ ಆಜ್ಞೆಯನ್ನು ಅನುಸರಿಸಲಿಚ್ಛಿಸದೆ ಯಾರಾದರೂ ಈ ಪ್ರತಿಕಾರವನ್ನು ದಾನ ಮಾಡಿದ್ಸರೆ ಅದು ಅವರ ಪಾಲಿನ ಪ್ರಾಯಶ್ಚಿತವಾಗುವುದು. ಅಲ್ಲಾಹನ ಮೂಲಕ ಅವತ್ತೀರ್ಣಗೊಂಡ ಕಾನೂನನ್ನ ಪಾಲಿಸದೆ ಮನಸ್ಸಿಗೆ ತೋಚಿದಂತೆ ಮುರಿಯುವವರೆ ಅಕ್ರಮಿಗಳು ಹಾಗೂ ಅವಿಶ್ವಾಸಿಗಳು."


ಇದೆ ವೇಳೆ ಮಹಮದನ ಕುಲ ವೈರಿ ಅಬು ಸಫ್ಯಾನನ ಕೊಲೆಗೂ ಸಹ ರಫಿಯಂತೆಯೆ ಪ್ರಯತ್ನಿಸಿ ವಿಫಲವಾದ ಪ್ರಕರಣವನ್ನು ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ದ ಪುಟ ಸಂಖ್ಯೆ ಮುನ್ನೂರಾ ಐವತ್ತೊಂದರಲ್ಲಿ ವಿವರವಾಗಿ ಸಾದರ ಪಡಿಸಿದ್ದಾರೆ. ಅದಕ್ಕಾಗಿ ಒಬ್ಬ ವೃತ್ತಿಪರ ಕೊಲೆಗಡುಕನನ್ನು ನೇಮಿಸಲಾಯಿತು. ಅಮ್ರ್ ಇಬ್ನ್ ಸಮಯ್ಯಾ ಎನ್ನುವ ಆತ ಮುಸಲ್ಮಾನನಾಗುವ ಮೊದಲೂ ಸಹ ಕೊಲೆಗಡುಕತನವನ್ನೆ ಬಾಳ್ವೆಯ ಜೀವನೋಪಾಯದ ವೃತ್ತಿಯನ್ನಾಗಿಸಿಕೊಂಡಿದ್ದ! ಮೆಕ್ಕಾದ ಕಾಬಾದ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಅವನನ್ನು ಅಲ್ಲಿನ ಮಂದಿ ತಕ್ಷಣ ಗುರುತಿಸಿ ಆತನ ನಡುವಳಿಕೆಯ ಮೇಲೆ ಅನುಮಾನಗೊಂಡರು. ಇದರ ಸುಳಿವು ಸಿಗುತ್ತಿದ್ದಂತೆ ಆತ ಅಲ್ಲಿಂದ ಓಡಿ ಪಾರಾಗಿ ಮದೀನಾಕ್ಕೆ ಓಡಿ ಬಂಡ. ಅವನ ಉದ್ದೇಶಿತ ಕಾರ್ಯ ಕೈಗೂಡದಿದ್ದರೂ ಸಹ ದಾರಿಯಲ್ಲಿ ಅವನಿಗೆ ಎದುರಾದ ಮೂವರು ಖುರೈಷಿಗಳಲ್ಲಿ ಇಬ್ಬರ ಕಥೆಯನ್ನ ಅಲ್ಲಿಯೆ ಮುಗಿಸಿ ಇನ್ನೊಬ್ಬನನ್ನ ಸೆರೆ ಹಿಡಿದು ಮದೀನಕ್ಕೆ ಆತ ಎಳೆದು ತಂದ. ಅದೃಷ್ಟವಶಾತ್ ಹೀಗೆ ಅಬು ಸಫ್ಯಾನ್ ಕೊಲೆಯ ಸಂಚಿನಿಂದ ಪಾರಾದ.



( ಇನ್ನೂ ಇದೆ.)

Wednesday, November 11, 2015

ವಲಿ - ೨೬








ಮೇಲ್ನೋಟಕ್ಕೆ ಯಹೂದಿಗಳನ್ನ ಮಹಮದ್ ಅವರ ಆಚರಣೆಗಳ, ಆಹಾರ ಪದ್ಧತಿಯ, ನಡುವಳಿಕೆಗಳ ಹಾಗೂ ಆಚಾರ ವಿಚಾರಗಳ ಕಾರಣಕ್ಕೆ ವಿರೋಧಿಸಿದಂತೆ ಕಾಣಿಸಿದರೂ ಸಹ. ಖುರ್ಹಾನಿನ ಮೂಲಕ ತಾನು ಪ್ರಸಾರ ಮಾಡಿದ ಹೊಸ ಸುರಾಗಳ ಮುಖಾಂತರ ಖಂಡಿಸಿದಂತೆ ತೋರಿ ಬಂದರೂ ವಾಸ್ತವದಲ್ಲಿ ಅವರ ಅನೇಕ ಆಚರಣೆಗಳನ್ನೆ ತನ್ನ ಇಸ್ಲಾಮಿಗೂ ಅಳವಡಿಸಿಕೊಂಡು ತನ್ನ ನೂತನ ಧರ್ಮಕ್ಕೊಂದು ಪ್ರಾಚೀನತೆಯ ಥಳುಕು ಹಾಕಲು ವಿಪರೀತ ಹೆಣಗಾಡಿದ. ಇಸ್ಲಾಮಿನ ಬಹುತೇಕ ಎಲ್ಲಾ ಆಚಾರ ವಿಚಾರಗಳೂ ಸಹ ಯಹೂದಿ ಧಾರ್ಮಿಕತೆಯ ಕೆಟ್ಟ ನಕಲೆ ಆಗಿವೆ ಆನ್ನೋದು ಕುಚೋದ್ಯದ ಸಂಗತಿ. 



ಉದಾಹರಣೆಗೆ ಅವುಗಳಲ್ಲಿ ಮುಖ್ಯವಾದುವು ಹೀಗಿವೆ. ಬಡ್ಡಿ ವ್ಯಾಪಾರಕ್ಕೆ ಯಹೂದಿ ಧರ್ಮದಂತೆ ಇಸ್ಲಾಮ್ ಕೂಡಾ ನಿಷೇಢ ಹೇರಿದೆ. ಪ್ರತಿಕಾರ ವಿಧಾನ ಯಹೂದಿಗಳಂತೆ ಮುಸಲ್ಮಾನರಿಗೂ ಖುರ್ಹಾನ್ ವಿಧಿಸಿದ ಜೀವನ ಪದ್ಧತಿಯಾಗಿದೆ. ಪ್ರಾರ್ಥನೆಗೆ ಮುಂದ ವಲು ಮಾಡುವುದು ಕೂಡಾ ಯಹೂದಿಗಳ ಅನುಕರಣೆ. ನೀರಿನಿಂದ ಕೈ - ಕಾಲು ಹಾಗೂ ಮುಖ ತೊಳೆದುಕೊಂಡೆ ಪ್ರಾರ್ಥನೆಗೆ ತೆರಳಬೇಕು. ಒಂದೊಮ್ಮೆ ನೀರು ಲಭ್ಯವಿಲ್ಲದಿದ್ದರೆ ನೀರಿನ ಬದಲು ಮರಳನ್ನ ಉಪಯೋಗಿಸಿ ಶುದ್ಧಿ ಕೈಗೊಳ್ಳಬಹುದು ಅನ್ನುವುದು ಕೂಡಾ ಯಹೂದಿಗಳ ನಂಬಿಕೆಯ ನಕಲು. ಗಂಡನ ನಡುವಳಿಕೆ ಅನೈತಿಕತೆಯಿಂದ ಕೂಡಿದ್ದಲ್ಲಿ ಹೆಂಡತಿ ಶಪಿಸಬಹುದು ಎನ್ನುತ್ತದೆ ಯಹೂದಿ ಧರ್ಮ ಇಸ್ಲಾಂ ಸಹ ಅದನ್ನ ಅನುಮೋದಿಸುತ್ತದೆ. ಸರ್ ವಿಲಿಯಂ ಮ್ಯೂರ್ ತಮ್ಮ "ಲೈಫ್ ಆಫ್ ಮಹಮದ್"ದ ಪುಟ ಸಂಖ್ಯೆ ೩೩೩ರಲ್ಲಿ ಹೇಳುವಂತೆ ಗಂಡು ಹೆಣ್ಣಿನ ವಯಕ್ತಿಕ ಸಂಬಂಧದ ವಿಚಾರದಲ್ಲಿ ಯಹೂದಿಗಳ ಆಚರಣೆಯ ಅನೇಕ ನಡುವಳಿಕೆಗಳ ಸಾಮ್ಯತೆಯನ್ನ ಮಹಮದ್ ತನ್ನ ಅನುಯಾಯಿಗಳ ಸಾಮಾಜಿಕ ಜೀವನದಲ್ಲೂ ಖಡ್ಡಾಯಗೊಳಿಸಿದ. ಇದೆ ಅವಧಿಯಲ್ಲಿ ಮದುವೆ ಹಾಗೂ ವಿಚ್ಛೇದನಗಳ ಕುರಿತೂ ಸಹ ನೀತಿ ನಿಯಮಾವಳಿಗಳನ್ನ ಮಹಮದ್ ತನ್ನ ನೂತನ ಧರ್ಮ ಇಸ್ಲಾಮಿಗಾಗಿ ರೂಪಿಸಿದ ಎನ್ನುತ್ತಾರೆ ಅವರು.


ಖುರ್ಹಾನ್ ವಿಧಿಸಿದ ವೈವಾಹಿಕ ಕಟ್ಟಳೆಯ ಅನುಸಾರ ಯಾರೊಬ್ಬರೂ ಏಕಕಾಲಕ್ಕೆ ನಾಲ್ಕಕ್ಕಿಂತ ಹೆಚ್ಚು ಹೆಂಡತಿಯರನ್ನ ಅಧಿಕೃತವಾಗಿ ಹೊಂದುವಂತಿಲ್ಲ. ವಿಚ್ಛೇದನವನ್ನ ಸರಳವಾಗಿ ಕೇವಲ ಮೂರು 'ತಲ್ಲಾಖ್' ಉಚ್ಛರಿಸುವುದರ ಮೂಲಕ ಮುಸಲ್ಮಾನನೊಬ್ಬ ನೀಡಬಹುದಾಗಿದೆ. ಆದರೆ ಈ 'ತಲ್ಲಾಖ್'ಗಳ ನಡುವೆ ತಲಾ ಮೂರು ಮೂರು ತಿಂಗಳ ಅಂತರವಿರಬೇಕು. ಒಮ್ಮೆ ವಿಚ್ಚೇದನ ನೀಡಿದ ಹೆಂಗಸನ್ನು ಮತ್ತೆ ಮಾಜಿ ಪತಿಯೆ ಮದುವೆ ಆಗುವಂತಿಲ್ಲ. ಹಾಗೊಮ್ಮೆ ಆಗುವ ಇಚ್ಛೆಯಿದ್ದರೆ ಅದಕ್ಕೂ ಮುನ್ನ ಇನ್ಯಾರಾದರೂ ಆಕೆಯನ್ನ ವಿವಾಹವಾಗಿ ಆಕೆಗೆ ತಲ್ಲಾಖ್ ಕೊಟ್ಟಿರಬೇಕು. ಈ ತಲ್ಲಾಖ್'ನ ಕೃಪೆಯಿಂದ ಮುಸಲ್ಮಾನ ಗಂಡು ಜೀವನದಲ್ಲಿ ಹಲವಾರು ಬಾರಿ ವರಿಸುವ ಅವಕಾಶವನ್ನು ಹೊಂದಿರುತ್ತಾನೆ. ಹೆಂಡತಿಯರ ಸಂಖ್ಯೆ ಏಕಕಾಲಕ್ಕೆ ನಾಲ್ಕಕ್ಕೆ ಮಾತ್ರ ಸೀಮಿತವಾಗಿದ್ದರೂ ಸಹ ಮಹಮದನ ಆಜ್ಞೆಯಲ್ಲಿ ಗುಲಾಮ ಹೆಂಗಸರ ವಿಷಯದಲ್ಲಿ ಇಂತಹ ಕಟ್ಟುಪಾಡುಗಳು ಕಂಡು ಬರುವುದಿಲ್ಲ. 



ಅಸಂಖ್ಯ ಸಂಖ್ಯೆಯ ಹೆಣ್ಣು ಗುಲಾಮರನ್ನ ಹೊಂದಬಹುದಿತ್ತು. ಇರುವಷ್ಟು ಕಾಲ ಚೆನ್ನಾಗಿಯೆ ನೋಡಿಕೊಂಡು ಅನಗತ್ಯ ಎಂದೆನಿಸಿದರೆ ಅವರನ್ನ ಇನ್ನಿತರರಿಗೆ ಮಾರಾಟ ಮಾಡುವ ಹಕ್ಕು ಯಜಮಾನನಿಗೆ ಮುಕ್ತವಾಗಿತ್ತು. ಆದರೆ ಈ ಮಾರಾಟದ ಹಕ್ಕು ತನ್ನ ಯಜಮಾನನಿಂದ ಆ ಸ್ತ್ರೀ ಒಂದೊಮ್ಮೆ ಬಸಿರಾದರೆ ಮಾತ್ರ ಈ ಹಕ್ಕು ಮೊಟಕಾಗುತ್ತಿತ್ತು. ಆಗ ಮಾರಾಟ ಸಾಧ್ಯವಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಆತನ ಸಾವು ಮಾತ್ರ ಆಕೆಗೆ ವಿಮೋಚನೆ ನೀಡಿ ಸ್ವತಂತ್ರ್ಯವನ್ನ ಸಹಜವಾಗಿ ನೀಡುತ್ತಿತ್ತು. ವಾರ್ಷಿಕವಾದ ಪವಿತ್ರ ಹಝ್ ಯಾತ್ರೆಗೆ ತೆರಳುವ ಮುನ್ನ ಪುಣ್ಯ ಗಳಿಕೆಗೆ ಗುಲಾಮರಿಗೆ ವಿಮೋಚನೆ ನೀಡಿ ಸ್ವಾತಂತ್ರ್ಯವನ್ನು ದಯಪಾಲಿಸುವ ಧರ್ಮದ ಕಾರ್ಯವನ್ನೂ ಸಹ ಆತ ಆಗಲೆ ಜಾರಿಗೆ ತಂದ. ಹೀಗೆ ಸ್ವತಂತ್ರ್ಯಳಾದ ಸ್ತ್ರೀ ಮರಳಿ ಮದುವೆ ಆಗಲೆಬೇಕು ಅನ್ನುವ ನಿರ್ಬಂಧವೇನೂ ಇರಲಿಲ್ಲ. ಬಲವಂತದ ಮದುವೆಗಳನ್ನ ನಿಗ್ರಹಿಸಿ ವಾಸ್ತವದಲ್ಲಿ ಇಸ್ಲಾಂ ಬೋಧನೆಗಳಲ್ಲಿ ಮಹಮದ್ ಸ್ತ್ರೀಯರಿಗೆ ಉಪಕಾರಗೈದಿದ್ದಾನೆ.



ವಿಚ್ಛೇದನಗಳ ವಿಷಯದಲ್ಲಿ ಪುರುಷರಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ್ದು ಹೌದಾದರೂ ಅಂತಹ ಸಂದರ್ಭಗಳಲ್ಲಿ ಖಡ್ಡಾಯವಾಗಿ ವಧುವಿನಿಂದ ಪಡೆದ ಯಾವುದೆ ಸ್ವತ್ತನ್ನು ಆಕೆಗೆ ಹಿಂದಿರುಗಿಸುವಂತೆ ಕಾನೂನು ರೂಪಿಸಿ ಮಹಿಳೆಯರಿಗೂ ಆರ್ಥಿಕ ಚೈತನ್ಯವನ್ನ ನೀಡಲು ಮಹಮದ್ ಪ್ರಯತ್ನಿಸಿದ್ದಾನೆ. ಆರ್ಥಿಕವಾಗಿ ಸ್ವಾವಲಂಬಿಯಾದ ಆಕೆಗೆ ಭವಿಷ್ಯದಲ್ಲಿ ಮರು ವಿವಾಹವಾಗುವ ಆಯ್ಕೆಯನ್ನೂ ಸಹ ಉದಾರವಾಗಿ ನೀಡಿ ಆಕೆಗೂ ಅಷ್ಟಿಷ್ಟು ಸಡಿಲಿಕೆಗಳನ್ನು ಆತ ನೀಡಿರುತ್ತಾನೆ. ಖುರ್ಹಾನಿನ ಸುರಾ ಸಂಖ್ಯೆ ೩೩/೪೯-೫೩ ಹಾಗೂ ೪/೩೪ರಲ್ಲಿ ಮೇಲಿನ ಮಾತುಗಳ ಸಮರ್ಥನೆಯನ್ನು ಆಸಕ್ತರು ಓದಿ ಅರಿತುಕೊಳ್ಳಬಹುದು. 



"ಪುರುಷ ಸ್ವಾಭಾವಿಕವಾಗಿ ಸ್ತ್ರೀಯರ ಮೇಲ್ವಿಚಾರಕರಾಗಿರುತ್ತಾರೆ. ಪುರುಷರು ಅವರಿಗಾಗಿ ತಮ್ಮ ಗಳಿಕೆಯನ್ನು ವೆಚ್ಚ ಮಾಡುವುದರಿಂದ ಹಾಗೂ ಅವರು ಮಹಿಳೆಯರಿಗಿಂತ ಶ್ರೇಷ್ಠವಾಗಿರುವುದರಿಂದ ಅಲ್ಲಾಹನು ಅವರಿಗೆ ಈ ವಿಶೇಷಾಧಿಕಾರ ನೀಡಿರುತ್ತಾನೆ. ಸುಶೀಲೆಯಾದ ಸ್ತ್ರೀ ಅನುಸರಿಸಿಕೊಂದು ಹೋಗುತ್ತಾಳೆ ಹಾಗೂ ಅಲ್ಲಾಹನ ರಕ್ಷಣೆಯಲ್ಲಿದ್ದುಕೊಂಡು ಪುರುಷರ ಅನುಪಸ್ಥಿತಿಯಲ್ಲಿಯೂ ಸಹ ತಮ್ಮ ರಕ್ಷಣೆ ಮಾಡಿಕೊಳ್ಳಲು ಸಮರ್ಥರಾಗಿರುತ್ತಾರೆ. ನಿಮ್ಮ ಸ್ತ್ರೀ ಹಾಗೊಂದು ವೇಳೆ ನಿಮ್ಮ ಆಜ್ಞೆಗಳನ್ನ ಪಾಲಿಸದೆ ಹೋಗುವ ಆತಂಕ ನಿಮಗಿದ್ದರೆ ಆಗ ಅವರಿಗೆ ಎಚ್ಚರಿಸಿ ನೈತಿಕತೆಯ ಉಪದೇಶಗಳನ್ನ ನೀಡಿರಿ!"


"ಅದಕ್ಕೂ ಅವರು ಮಣಿಯದಿದ್ದರೆ ಮಲಗುವ ಪಲ್ಲಂಗದಿಂದ ಅವರನ್ನ ದೂರವಿಡಿ ಹಾಗೂ ಹೊಡೆದು ಸರಿ ಮಾಡಲು ಯತ್ನಿಸಿ! ಅದಾದ ಮೇಲೆ ಅವರು ವಿಧೇಯತೆ ಪ್ರದರ್ಶಿಸಿದರೆ ಅಕಾರಣವಾಗಿ ಅವರನ್ನ ದಂಡಿಸಲು, ಪದೆ ಪದೆ ಕೈ ಎತ್ತಲು ಕುಂಟು ನೆಪಗಳನ್ನು ಹುಡುಕಬೇಡಿ. ನಿಶ್ಚಯವಾಗಿ ಅಲ್ಲಾಹನು ಅತ್ಯುನ್ನತನೂ ಹಾಗೂ ಮಹಿಮಾನ್ವಿತನೂ ಆಗಿರುತ್ತಾನೆ" ( ಸುರಾ ೪/೩೪.)


"ಸತ್ಯ ವಿಶ್ವಾಸಿಗಳೆ ನೀವು ಸತ್ಯ ವಿಶ್ವಾಸಿನಿಯರನ್ನ ವಿವಾಹವಾಗಿ ಅವರನ್ನ ಮುಟ್ಟುವುದಕ್ಕೆ ಮುಂಚೆಯೆ ತಲ್ಲಾಖ್ ಕೊಟ್ಟು ಬಿಟ್ಟರೆ ನಿಮ್ಮ ಕಡೆಯಿಂದ ಅವರ ಮೇಲೆ ಯಾವುದೆ ಇದ್ದತ್ ಪುರ್ಣಗೊಳ್ಳಬೇಕಾಗಿರುವುದಿಲ್ಲ. ಆದ್ದರಿಂದ ಏನಾದರೂ ಮೇಲು ಸಂಭಾವನೆ ಕೊಟ್ಟು ಅವರನ್ನ ಉತ್ತಮ ರೀತಿಯಿಂದಲೆ ಬೀಳ್ಕೊಡಿರಿ." ( ೪೯.)



"ಪೈಗಂಬರರೆ ನೀವು 'ವಿವಾಹ ಧನ'ವಾಗಿ ವಧು ದಕ್ಷಿಣೆ ಕೊಟ್ಟಿರುವಂತಹ ನಿಮ್ಮ ಪತ್ನಿಯರನ್ನು ಅಲ್ಲಾಹನಿಂದ ಪ್ರಧಾನವಾಗಿರುವ ದಾಸಿಯರ ಪೈಕಿ ನಿಮ್ಮ ಸ್ವಾಧೀನತೆಗೆ ಬಂದಿರುವವರನ್ನೂ,  ನಿಮ್ಮ ಜೊತೆಗೆ ವಲಸೆ ಬಂದಿರುವ ನಿಮ್ಮ ತಂದೆಯ ಸಹೋದರ - ಸಹೋದರಿಯರ ಮತ್ತು ತಾಯಿಯ ಸಹೋದರ - ಸಹೋದರಿಯರ ಪುತ್ರಿಯರನ್ನೂ ನಾವು ನಿಮಗೆ ಧರ್ಮ ಸಮ್ಮತಗೊಳಿಸಿರುತ್ತೇವೆ! ತನ್ನನ್ನು ತಾನೇ ಪ್ರವಾದಿಗೆ 'ಹಿಬಃ ರೂಪದಲ್ಲಿ' ಕೊಡುಗೆಯಾಗಿ ಕೊಟ್ಟಿದ್ದು ಪ್ರವಾದಿಯು ಅವಳನ್ನು ತನ್ನ ನಿಕಾಹ್'ದಲ್ಲಿ ಸ್ವೀಕರಿಸಲು ಒಪ್ಪಿಕೊಂಡರೆ ಅಂತಹ ಸತ್ಯವಿಶ್ವಾಸಿನಿಯರನ್ನೂ ನಾವು ನಿಮಗಾಗಿ ಧರ್ಮ ಸಮ್ಮತಿಗೊಳಿಸಿರುತ್ತೇವೆ" ( ೫೦ )


{ ಗಮನಿಸಿ ಇಲ್ಲಿ ಕಾಫಿರರನ್ನ ಕೂಡುವುದಕ್ಕೆ ಅನುಮತಿ ಕೊಡಲಾಗಿಲ್ಲ! ಆದರೂ ರೆಹಾನಳನ್ನ ಮಹಮದ್ ತನ್ನ ಖಾಸಗಿ ವೇಶ್ಯೆಯಾಗಿ ಇರಿಸಿಕೊಂಡ! ಹಾಗೂ ಅದು ಧರ್ಮ ಸಮ್ಮತವಲ್ಲ ಅಂತ ಅವನಿಗ್ಯಾವತ್ತೂ ಅನ್ನಿಸಲೆ ಇಲ್ಲ..}


"ಈ ಅನುಮತಿಯು ನಿಮಗಾಗಿ ಮಾತ್ರವಿದೆ ಹೊರತು ಬೇರೆ ಸತ್ಯವಿಶ್ವಾಸಿಗಳಿಗೆ ಕೊಡಲಾಗಿಲ್ಲ! ನಾವು ಸಾಮಾನ್ಯ ಸತ್ಯವಿಶ್ವಾಸಿಗಳ ಮೇಲೆ ಅವರ ಪತ್ನಿಯರ ಹಾಗೂ ದಾಸಿಯರ ವಿಚಾರದಲ್ಲಿ ಯಾವ ನಿರ್ಬಂಧವನ್ನು ಹೇರಿರುತ್ತೇವೆ ಅನ್ನುವುದು ನಮಗೆ ಗೊತ್ತಿದೆ. ನಿಮ್ಮ ಮೇಲೆ ಯಾವುದೆ ಜಟಿಲತೆಯೂ ಇರದಂತಾಗಲು ನಾವು ನಿಮ್ಮನ್ನು ಈ ಮಿತಿ ಮೇರೆಗಳಿಂದ ಮುಕ್ತಗೊಳಿಸಿದ್ದೇವೆ. ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ" ( ೫೦.)



"ನಿಮ್ಮ ಪತ್ನಿಯರ ಪೈಕಿ ನಿಮಗೆ ಇಷ್ಟವಿದ್ದವರನ್ನು ನಿಮ್ಮಿಂದ ದೂರವಿರಿಸಲಿಕ್ಕೆ, ನಿಮಗೆ ಇಷ್ಟ ಬಂದವರನ್ನು ಜೊತೆ ಇರಿಸಿಕೊಳ್ಳಲಿಕ್ಕೂ, ಒಮ್ಮೆ ದೂರವಾಗಿಸಿದ ಬಳಿಕ ನಿಮಗೆ ಮತ್ತೆ ಮನಸ್ಸಾದರೆ ಮರಳಿ ನಿಮ್ಮ ಬಳಿಗೆ ಕರೆಸಿಕೊಳ್ಳುವುದಕ್ಕೂ ನಿಮಗೆ ಅಧಿಕಾರ ಕೊಡಲಾಗುತ್ತದೆ. ಈ ವಿಷಯದಲ್ಲಿ ನಿಮಗೇನೂ ಆತಂಕವಿಲ್ಲ."



"ಇದರಿಂದ ಅವರ ಕಣ್ಣುಗಳು ತಣಿದಿರುವುದೆಂದೂ ಅವರು ಬೇಸರಿಸಲಾರರೆಂದೂ ನಿರೀಕ್ಷೆಯಿದೆ. ನೀವು ಅವರಿಗೆ ಕೊಟ್ಟಿದುದರಲ್ಲಿ ಅವರೆಲ್ಲರೂ ತೃಪ್ತಿ ಪಟ್ಟುಕೊಂಡಿರುವರು. ನಿಮ್ಮ ಹೃದಯದಲ್ಲಿ ಇರುವುದೆಲ್ಲವನ್ನೂ ಅಲ್ಲಾಹನು ಅರಿಯುತ್ತಾನೆ. ಅಲ್ಲಾಹನು ಸಹನಶೀಲನೂ ಹಾಗೂ ಸರ್ವಜ್ಞನೂ ಆಗಿರುತ್ತಾನೆ." ( ೫೧.) 



"ಇನ್ನು ಮುಂದೆ ನಿಮಗೆ ಇತರ ಸ್ತ್ರೀಯರು ಧರ್ಮಸಮ್ಮತವಾಗಿರುವುದಿಲ್ಲ. ಇತರರ ಪತ್ನಿಯರನ್ನು, ಅವರ ಸೌಂದರ್ಯ ನಿಮಗದೆಷ್ಟೆ ಮೆಚ್ಚುಗೆಯಾದರೂ ಇವರ ಸ್ಥಾನದಲ್ಲಿ ಅವರನ್ನ ತರುವ ಅನುಮತಿ ನಿಮಗಿಲ್ಲ. ಆದರೆ ದಾಸಿಯರನ್ನ ತರಬಹುದಾಗಿದೆ. ಅಲ್ಲಾಹನು ಸಕಲ ವಸ್ತುಗಳ ಮೇಲ್ವಿಚಾರಕನೂ ಆಗಿರುತ್ತಾನೆ." ( ೫೨.)


"ಕೇಳಿ ಸತ್ಯವಿಶ್ವಾಸಿಗಳೆ, ಪ್ರವಾದಿಯ ಮನೆಗೆ ಹೊತ್ತು ಗೊತ್ತಿಲ್ಲದೆ ಅವರ ಅನುಮತಿ ಇಲ್ಲದೆ ಪ್ರವೇಶಿಸಬೇಡಿರಿ. ಒಂದೊಮ್ಮೆ ಬಂದಿದ್ದರೆ ಊಟದ ಸಮಯವನ್ನು ಕಾದುಕೊಂಡು ಅಲ್ಲೆ ಉಳಿಯಬೇಡಿರಿ! ನಿಮ್ಮನ್ನು ಊಟಕ್ಕೆ ಕರೆದರೆ ಖಂಡಿತಾ ಹೋಗಿ ಆಹಾರ ಸ್ವೀಕರಿಸಿ ಆದರೆ ಊಟವಾದ ಕೂಡಲೆ ಅಲ್ಲಿಂದ ಹೊರಡಿ ಹಾಗೂ ಚದುರಿಬಿಡಿ. ವ್ಯಥಾ ಹರಟುತ್ತ ಅಲ್ಲಿಯೆ ಕೂರಕೂಡದು. ನಿಮ್ಮ ಈ ವರ್ತನೆಗಳು ಪ್ರವಾದಿಗೆ ಕಸಿವಿಸಿ ಹಾಗೂ ತೊಂದರೆಯನ್ನು ಉಂಟು ಮಾಡುತ್ತವೆ. ಅವರೇನೋ ಸಂಕೋಚದಿಂದ ಇದನ್ನೆಲ್ಲ ಹೇಳುವುದಿಲ್ಲ ಆದರೆ ಅಲ್ಲಾಹನಿಗೆ ಅಂತಹ ನಾಚಿಕೆ ಏನೂ ಇಲ್ಲ! ಪ್ರವಾದಿಯವರ ಪತ್ನಿಯರಿಂದ ನಿಮಗೇನಾದರೂ ವಸ್ತುಗಳನ್ನು ಪಡೆಯಬೇಕೆಂದಿದ್ದರೆ ಅದನ್ನ್ಹು ತೆರೆಯ ಹಿಂದಿನಿಂದ ಕೇಳಿ ಪಡೆದುಕೊಳ್ಳಿರಿ. ಇದು ನಿಮ್ಮ ಹಾಗೂ ಅವರ ಹೃದಯ ಶುದ್ಧಿಗೆ ಹೆಚ್ಚು ಸೂಕ್ತ ಹಾಗೂ ಪರಿಣಾಮಕಾರಿಯಾದ ನಡೆಯಾಗಿರುತ್ತದೆ. ಅಲ್ಲಾಹನ ಸಂದೇಶವಾಹಕರಿಗೆ ಕೀಟಲೆ ಮಾಡುವುದು ನಿಮಗೆ ಎಷ್ಟು ಮಾತ್ರಕ್ಕೂ ಶೋಭೆ ತರುವುದಿಲ್ಲ. ಅವರ ಕಾಲಾನಂತರ ಅವರ ಪತ್ನಿಯರನ್ನು ಇನ್ಯಾರಾದರೂ ವಿವಾಹವಾಗುವುದು ಸಹ ಸತ್ಯವಿಶ್ವಾಸಿಗಳಿಗೆ ಧರ್ಮ ಸಮ್ಮತವಲ್ಲ. ಇದನ್ನು ಅಲ್ಲಾಹ ಮಹಾಪಾಪ ಎಂದೆ ಪರಿಗಣಿಸುತ್ತಾನೆ!" ( ಸುರಾ ೩೩/ ೪೮ -೫೩.)


{ ಈ ಮೂಲಕ ಮಹಮದ್ ತನ್ನ ಹೆಂಡತಿಯರಿಗೆ ಅವರ ಸ್ವಾಭಾವಿಕ ಹಕ್ಕನ್ನು ನಿರಾಕರಿಸಿ ತನಗೊಂದು ಕಾನೂನು ಹಾಗೂ ಇನ್ನಿತರರಿಗೊಂದು ಕಾನೂನನ್ನು ಸಹ ಜಾರಿಗೆ ತಂದ.}


"ಆದರೆ ವಿವಾಹ ವಿಚ್ಚೇದನ ಮಾಡಿಕೊಂಡ ನಂತರ ಒಂದು ವೇಳೆ ಪತಿ ತನ್ನ ಹೆಂಡತಿಯನ್ನೆ ಮತ್ತೆ ಮದುವೆಯಾಗಲು ಬಯಸಿದರೆ, ಆ ಸ್ತ್ರೀ ಒಬ್ಬ ಪರ ಪುರುಷನೊಂದಿಗೆ ಮತ್ತೊಂದು ವಿವಾಹ ಮಾಡಿಕೊಂಡು ಅವನಿಂದಲೂ ವಿಚ್ಚೇದನ ಪಡೆದ ನಂತರವೆ ತನ್ನ ಮೊದಲ ಪತಿಗೆ ಮರಳಿ ಮಡದಿಯಾಗಬಹುದಾಗಿದೆ" ( ಸುರಾ ೨/೨೩೦.)


ಮುಸ್ಲೀಮ ವಿವಾಹದ ಕಾಯ್ದೆ ಕಾನೂನುಗಳಲ್ಲಿ ಅನೇಕ ಸುಧಾರಣೆಗಳನ್ನ ಈ ಮೂಲಕ ಮಹಮದ್ ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಾಗ ಯಾರೂ ಪಾನಮತ್ತರಾಗಿರುವುದನ್ನು ಖಡ್ಡಾಯವಾಗಿ ನಿಷೇಧಿಸಿದನು. ( ಸುರಾ ೨/೨೧೬, ೫/೯೩.)



ಮದೀನದಲ್ಲಿ ತನ್ನ ಅಧಿಕಾರವನ್ನ ಅಧಿಕೃತವಾಗಿ ಪ್ರತಿಷ್ಠಾಪಿಸಿ ಯಹೂದಿ ಆಚರಣೆಗಳ ಮಕ್ಕಿ-ಕಾ-ಮಕ್ಕಿ ಕಾನೂನು ಕಟ್ಟಳೆಗಳನ್ನ ತನ್ನ ನೂತನ ಧರ್ಮವಾದ ಇಸ್ಲಾಮಿನಲ್ಲಿ ಅಳವಡಿಸಿಕೊಂಡರೂ ಸಹ ಮಹಮದ್ ಯಹೂದಿಗಳ ಹಾಗೂ ಇನ್ನಿತರ ಅವಿಶ್ವಾಸಿಗಳ ವಿರುದ್ಧ ಆಂತರಿಕವಾಗಿ ಅಸಹನೆಯಿಂದ ಕುದಿಯುತ್ತಿದ್ದ. ಆತ ಅವರ ವಿರುದ್ಧ ಜಾರಿಗೆ ತಂದ ಕಾನೂನುಗಳು ಈ ಅಸಹನೆಯ ನಡುವಳಿಕೆಗೆ ಪುಷ್ಠಿ ನೀಡುತ್ತವೆ. ಅವರ ಮೇಲೆ ಆತ ಹೇರುವಂತೆ ರೂಪಿಸಿದ ನಿಯಮಾವಳಿಗಳು ಅತ್ಯಂತ ಕ್ರೂರವೂ - ಕಠಿಣವೂ ಆಗಿದ್ದವು. ಖುರ್ಹಾನಿನ ಅನೇಕ ಸುರಾಗಳಲ್ಲಿ ಅವುಗಳ ಛಾಯೆ ಸ್ಪಷ್ಟವಾಗಿವೆ. ಅಂದಿನ ಅರಬ್ಬಿ ಬುಡಕಟ್ಟುಗಳಲ್ಲಿ ಸರ್ವೆ ಸಾಮಾನ್ಯವಾಗಿದ್ದ ಕೊಳ್ಳೆ ಹೊಡೆಯುವ, ಲೂಟಿ ಮಾಡುವ ಹಾಗೂ ವಿನಃ ಕಾರಣ ಹಲ್ಲೆ ಮಾಡುವ ಪ್ರವೃತ್ತಿಯನ್ನು ಕೇವಲ ಮುಸ್ಲೀಮೇತರ ಅವಿಶ್ವಾಸಿಗಳ ಮೇಲೆ ಮಾತ್ರ ನಡೆಸಬಹುದು ಎನ್ನುವ ಹೊಸ ನೀತಿಯನ್ನಾತ ರೂಪಿಸಿದ.



ಖುರ್ಹಾನಿನ ಹಲವಾರು ಸುರಾಗಳಲ್ಲಿ ವಿಸ್ಕೃತವಾಗಿ ಆ ಕರೆಯ ವಿವರಣೆಗಳನ್ನ ಕಾಣಬಹುದಾಗಿದೆ. ದೇವರ ದಾರಿಯಲ್ಲಿ, ಅವನಿಗೋಸ್ಕರ, ಅವನಿಗಾಗಿ ಹೋರಾಟ, ಧರ್ಮಯುದ್ಧ ಅಂದರೆ ಜೆಹಾದ್ ಜರುಗಿಸಬೇಕೆಂದು ಮಹಮದ್ ದೈವವಾಣಿಯ ಮೊಹರೊತ್ತಿ ತನ್ನ ಅನುಯಾಯಿಗಳಿಗೆ ಕರೆ ನೀಡಿದ. ಸುರಾ ಸಂಖ್ಯೆ ೪೭/೪,೫,೬. ೨೨/೩೯, ೨/೧೯೦, ಹಾಗೂ ೬೧/೧೧ರಲ್ಲಿ ಇದನ್ನ ಆಸಕ್ತರು ಗಮನಿಸಬಹುದು.



ಹೋರಾಟದಲ್ಲಿ ಮುಸಲ್ಮಾನ ಯೋಧರು ಒಂದುವೇಳೆ ಸತ್ತರೆ ಅವರಿಗೆ ಸ್ವರ್ಗ ಕಟ್ಟಿಟ್ಟ ಬುತ್ತಿ ಎಂದು ನಂಬಿಸಿ ಹೋರಾಡಿ ಮಡಿಯಲು ಅವರಿಗೆ ಆತ ಉತ್ತೇಜನ ನೀಡಿದ. ಅರೆ ಮನಸ್ಸಿನಿಂದ ಕಾದಾಡಲು ಹಿಂದೆಮುಂದೆ ನೋಡುವವರು ನರಕದ ತಾಮ್ರವರ್ಣದ ಜ್ವಾಲೆಗೆ ಸಿಲುಕಿ ಕ್ರೂರವಾಗಿ ಸುಟ್ಟು ನಾಶವಾಗುವರು ಎಂದಾತ ದೈವವಾಣಿಯ ಮೂಲಕವೆ ಹೆದರಿಸಿದ. ಆತನ ಬುದ್ಧಿಗೇಡಿ ಅನುಯಾಯಿಗಳು ಇದನ್ನೆ ಮಡ್ಡರಂತೆ ನಂಬಿದರು. ನರಕ ಅವರಿಗೆ ಖಚಿತ ಅನ್ನುವ ಮೂಲಕ ಅವರ ಮನಸ್ಸಿನಲ್ಲಿ ಆತ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿದ. 




ತನ್ನ ಅನುಚರರಿಗೆ ಅವಿಶ್ವಾಸಿಗಳಾದ ವಿಗ್ರಹಾರಾಧಕರ ವಿರುದ್ಧ ಧಾರ್ಮಿಕ ಕಾರಣಕ್ಕಾಗಿ ಹೋರಾಡಲು ಆತ ಪ್ರೋತ್ಸಾಹಿಸಿದ. ಇಸ್ಲಾಮ್ ಈ ಜಗತ್ತಿನಲ್ಲಿ ಶಾಶ್ವತವಾಗಿ ನೆಲೆಸಬೇಕು ಅಂತಾದರೆ ಅವರು ನಿರಂತರ ಹೋರಾಡುತ್ತಲೆ ಇರಬೇಕು, ಅದಕ್ಕಾಗಿ ಶಾಂತಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಿರಂತರ ಸಮರ ಜರುಗಿಸುವುದೆ ಅವರಿಗೆ ಉಚಿತ ಎಂದಾತ ಕರೆ ನೀಡಿದ್ದಾನೆ. ಮೆಕ್ಕಾದ ಕಪಟಿ ಖುರೈಷಿಗಳು ಸ್ವತಃ ತನ್ನದೆ ಬುಡಕಟ್ಟಿನವರಾಗಿದ್ದರೂ ಸಹ ಅವರು ಹಿಂಜರಿದು ತಟಸ್ಥರಾಗದೆ ಹೋದರೆ ಅವರಿಗೆ ದೇವರ ಕೃಪಾಕಟಾಕ್ಷ ಖಂಡಿತಾ ದೊರೆಯಲಾರದು ಎಂದಾತ ಸಾರಿದ. ಉತ್ತಮ ಕವಿತ್ವದ ಶಕ್ತಿ ಇದ್ದ ಮಹಮದ್ ದೈವವಾಣಿಯ ಮೊಹರೊತ್ತುತ್ತಲೆ ತನ್ನೆಲ್ಲಾ ನಿಲುವುಗಳನ್ನ ಸಾಹಿತ್ಯಪೂರ್ಣವಾಗಿ ಸುರಾಗಳ ಮೂಲಕ ಖುರ್ಹಾನಿನಲ್ಲಿ ಸುರಾಗಳ ಮೂಲಕ ಕವಿತೆಯಂತೆ ಮೇಲಿನ ಮಾತುಗಳನ್ನ ಸಾರುತ್ತಾ ನೀಡಿದ್ದಾನೆ. ಆಸಕ್ತರು ಪ್ರಮುಖವಾಗಿ ಸುರಾ ೨/೪೪, ೧೬೬, ೫/೩೮, ೨/೮೩,೮೪ ಹಾಗೂ ೪/೪೮, ೫/೬೨,೬೭ಗಳಲ್ಲಿ ಇದನ್ನ ಓದಿದರೆ ಇದರ ಯಥಾವತ್ ಭಾವಾಂತರ ಕಾಣಸಿಗುತ್ತದೆ.


"ನಿಮ್ಮೊಡನೆ ಯುದ್ಧ ಮಾಡುವವರೊಡನೆ ನೀವೂ ಸಹ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿ. ಆದರೆ ಅತಿಕ್ರಮಿಸಬೇಡಿ. ಅತಿಕ್ರಮಿಗಳನ್ನ ಅಲ್ಲಾಹನು ಎಂದೂ ಮೆಚ್ಚುವುದಿಲ್ಲ."


"ಅವರೊಡನೆ ಹೋರಾಡುವ ಸಂದರ್ಭ ಬಂದಾಗ ಮುನ್ನುಗ್ಗಿ ಅವರೊಂದಿಗೆ ಹೋರಾಟ ನಡೆಸಿ. ಅವರು ನಿಮ್ಮನ್ನ ಹೊರಗಟ್ಟಿದ್ದಲ್ಲಿಂದ ನೀವೂ ಸಹ ಯಾವುದೆ ರಿಯಾಯತಿ ತೋರದೆ ಅವರನ್ನೂ ಸಹ ಹೊರಗಟ್ಟಿರಿ. ಏಕೆಂದರೆ ಹತ್ಯೆಯು ಅತ್ಯಂತ ಕೆಟ್ಟದ್ದಾಗಿದ್ದರೂ ಸಹ ಕ್ಷೋಭೆಯು ಅಂದರೆ ಫಿತ್ನ ಅದಕ್ಕಿಂತಲೂ ಕೆಟ್ಟದಾಗಿರುವಂತದ್ದು. ಅವರು 'ಮಸ್ಝಿದ್ ಉಲ್ ಹಾರಾಮ್' ಬಳಿ ನಿಮ್ಮೊಡನೆ ಹೋರಾಟ ನಡೆಸದಿದ್ದರೆ ನೀವೂ ಸಹ ಅವರೊಂದಿಗೆ ಹೋರಾಡಕೂಡದು. ಆದರೆ ಅವರು ನಿಮ್ಮ ಮೇಲೆ ಹೋರಾಡಲು ಹವಣಿಸಿದರೆ ನಿರ್ದಾಕ್ಷಿಣ್ಯವಾಗಿ ಅವರ ವಧೆ ಮಾಡಿರಿ! ಸತ್ಯ ನಿಷೇಧಿಗಳಿಗೆ ಇದೆ ತಕ್ಕ ಪ್ರತಿಫಲ."


"ಅನಂತರ ಅವರು ಹಿಂಜರಿದು ನಿಮಗೆ ಶರಣಾದರೆ. ಇಸ್ಲಾಮಿನ ಕಲಮಾ ಓದಿ ಮತಾಂತರವಾದರೆ ನಿಶ್ಚಯವಾಗಿ ಅಲ್ಲಾಹನು ಕ್ಷಮಾಶೀಲನು ಹಾಗೂ ಕರುಣಾನಿಧಿಯೂ ಆಗಿರುತ್ತಾನೆ ಎನ್ನುವುದನ್ನು ನೀವು ಅರಿತಿರಬೇಕು!."



"ಕ್ಷೋಭೆಯು ಸಂಪೂರ್ಣ ಅಳಿದು ಧರ್ಮವು ಪರಿಪೂರ್ಣವಾಗಿ ಸರ್ವಶಕ್ತ ಅಲ್ಲಾಹನ ಅಧೀನ ಶರಣಾಗುವವರೆಗೂ ಅವಿಶ್ವಾಸಿಗಳ ವಿರುದ್ಧ ಜೀವದ ಹಂಗು ತೊರೆದು ನೀವು ಹೋರಾಡಿರಿ. ಅನಂತರ ಅವರು ಹಿಮ್ಮೆಟ್ಟಿದರೆ ಸತ್ಯವಿಶ್ವಾಸಿಗಳಾಗದ ಆಕ್ರಮಿಗಳ ಹೊರತು ಇನ್ಯಾರ ಮೇಲೂ ನೀವು ಕೈ ಎತ್ತ ಕೂಡದು ಅನ್ನುವುದನ್ನ ನೆನಪಿಡಿ"



"ಸನ್ಮಾನಿತ ತಿಂಗಳ ಪರ್ಯಾಯವೂ ಸಹ ಸನ್ಮಾನಿತ ತಿಂಗಳೆ ಆಗಿರುತ್ತದೆ. ಎಲ್ಲಾ ಸನ್ಮಾನಿತಗಳನ್ನೂ ಸಹ ಸರಿಸಮವಾಗಿಯೇ ಗೌರವಿಸಲಾಗುವುದು. ಆದ್ದರಿಂದ ನಿಮ್ಮ ಮೇಲೆ ಕೈ ಮಾಡಿದವರ ವಿರುದ್ಧ ಅಸ್ಥೆಯಿಂದ ಹೋರಾಡಿರಿ" ಎಂದು ಖುರ್ಹಾನಿನ ಸುರಾ ಸಂಖ್ಯೆ ೨/೧೯೦ - ೧೪೪ರಲ್ಲಿ ಮಹಮದ್ ಉಪದೇಶಿಸಿದ್ದಾನೆ. ಆಸಕ್ತರು ಇತಿಹಾಸಕಾರ ಸೆಂಟ್ ಕ್ಲೇರರ 'ಸೋರ್ಸರ್ ಆಫ್ ಇಸ್ಲಾಮ್' ಕೃತಿಯ ಪುಟ ಸಂಖ್ಯೆ ತೊಂಬತ್ತೆಂಟರಲ್ಲಿ ಹಾಗೂ ಮಂಗಳೂರಿನ ಶಾಂತಿ ಪ್ರಕಾಶನ ಪ್ರಕಟಿಸಿರುವ ಖುರ್ಹಾನಿನ ಕನ್ನಡಾನುವಾದದಲ್ಲಿಯೂ ಈ ಮಾಹಿತಿಯನ್ನ ತಾಳೆ ನೋಡಿ ಖಚಿತ ಪಡಿಸಿಕೊಳ್ಳಬಹುದು.


( ಇನ್ನೂ ಇದೆ.)