Saturday, March 21, 2015

ಬತ್ತದ ನಿರೀಕ್ಷೆಯ ನಾಳೆಗಳ ಕನವರಿಕೆಯಲ್ಲಿ.....




ಹಬ್ಬವಂತೆ ಊರಿಗೆಲ್ಲ ಗಬ್ಬವಂತೆ ಮುಡುಡಿದ ಮೌನಿ ಮನಸುಗಳೆಲ್ಲ
ಆದರೆ ಚಂದ್ರನಿಗಾಗಿ ಮಾತ್ರ ಅರಸುವ ಎಲ್ಲರ ಬಾನಲ್ಲಿ
ಈ ದಿನ ರವಿ ಮಾತ್ರ ಮೂಡಲೆ ಇಲ್ಲ,
ಶೋಕಕ್ಕೆ ಸ್ಮಶಾನ ಮಾತ್ರ ಮಿತಿ
ಅಂತರಂಗದ ನೋವಿಗೆ ತನ್ನೊಡಲ ಕಿರು ಸಾಂತ್ವಾನ ಮಾತ್ರವೆ ಗತಿ....
ನಿತ್ಯ ಆಗುತ್ತಿರೋದು ಮೊನ್ನೆ ಕೊಲೆಯಾಗಿ ಸತ್ತವನದಲ್ಲ
ಬದ್ಧತೆಯ ಚೌಕಟ್ಟಿನಲ್ಲಿ ಬದುಕುತ್ತಿರುವ ಪ್ರತಿ ಸಜ್ಜನರ ತಿಥಿ/
ಮತ್ತೆ ಮೇಲೆತ್ತಿ ಕೊಲ್ಲಬೇಡಿ ಒಮ್ಮೆ ಹೂಳಿದ ಆ ಕಾಯಕ ನಿಷ್ಠನ ಹೆಣವನ್ನ
ಕೆಸರೆರೆಚಿ ಮಸಿ ಹಚ್ಚಿ ವಿಕಾರವಾಗಿಸಬೇಡಿ ಅಳಿಸಲಾಗದ ಅವನ ಸಾತ್ವಿಕ ಗುಣವನ್ನ,
ಇನ್ನು ಅವನಿಲ್ಲ ಇನ್ಯಾರಿಗೂ ಆ ಧೈರ್ಯವೂ ಇರೋಲ್ಲ
ಚಿಂತೆ ಇನ್ನಿಲ್ಲ ಮುಕ್ಕಿ ಎರಡೂ ಕೈಗಳಿಂದ ಗೋರಿ ಗೋರಿ ಸಿಗುವ ಹಡಬೆ ಹಣವನ್ನ//



ಜಡ ಗಟ್ಟಿದ ವ್ಯವಸ್ಥೆಯಲ್ಲಿ ನೈಜವಾದ
ನಸು ಕಾಳಜಿ ಹೊಂದಿದವನೆ ಕಡುಪಾಪಿ....
ಮುಖವೆ ಕಾಣದ ಮುಸಿಯಗಳ ನಾಡಿನಲ್ಲಿ
ಸ್ವಚ್ಛ ಮನದ ಸುಂದರ ಮನುಷ್ಯನೆ ಪರಮ ಕುರೂಪಿ,
ಬಟಾ ಬಯಲಲ್ಲಿ ಎಲ್ಲಾ ಬಿಚ್ಚಿ ಹಾಕಿ ಬರಿ ಬತ್ತಲು ತಿರುಗುವ
ತಲೆ ತಿರುಕರ ಪ್ರಕಾರ ಅಂಗಿ ಚೊಣ್ಣ ಧರಿಸಿರೋವವನೆ ಮಾನಗೆಟ್ಟವ...
ಮರ್ಯಾದೆಯ ಪರಿಧಿಯಲ್ಲಿ ಬಾಳಲು ಹವಣಿಸುವವನೆ
ಎಲ್ಲರಿಂದ ಅನ್ನಿಸಿಕೊಳ್ಳುತ್ತಾನೆ ಇಲ್ಲಿ ಮೂರೂ ಬಿಟ್ಟವ/
ಸಂಪನ್ನರಿದ್ದಾರೆ ಎಚ್ಚರಿಕೆ ನೀವು ಖದೀಮರಾದೀರ!
ಕಾಸಿನ ಮುಂದೆ ಕೂಸಿನ ಮನಸಿದ್ದವರೂ ಕಂಗಾಲಾಗಲೆಬೇಕು
'ಹಣವ ಕಂಡರೆ ಹೆಣವೂ ಬಾಯಿ ಬಿಡುತ್ತದೆ' ಎನ್ನುವ ಗಾದೆ ಇಲ್ಲಿ ಅಜರಾಮರ,
ವಾಸ್ತವಕ್ಕೆ ತೋರಿಸಲು ಸ್ವಂತದ್ದೊಂದು ಮುಖ ಇಲ್ಲದವರೆ ಹೆಚ್ಚು
ಮುಖ ಪುಸ್ತಕದ ಮಾರಿ ಮನೆಮನೆ ಹೊಕ್ಕಿರುವ ಈ ಹೊತ್ತು
ಅಧಮ ಮಾನಸಿಕ ಭ್ರಷ್ಟ ವ್ಯಭಿಚಾರಿಚಾರಿಗಳೆ ಪರಮ ಗೌರವಾನ್ವಿತರು ಇಲ್ಲಿ ಯಾವತ್ತೂ//



ಭಾರವಾದ ಮನಸ್ಸಿನಿಂದ ಬೀಳ್ಕೊಟ್ಟೆ ನಾನು
ನೆನ್ನೆಯ ಕೆಲವು ಈಡೇರದ ಕನಸುಗಳನ್ನ...
ಅವಕ್ಕೂ ಸುಮ್ಮನೆ ಕಸಿವಿಸಿ ನನಗೂ ವೇದನೆ ಇನ್ನೆಷ್ಟು ಕಾಲ ಅಂತ ಕಾಯಲಿ?
ಸಾಕಾರವಾಗದೆ ಸದಾ ಕೊಳೆಯುತ್ತಿರುವ ಅವುಗಳ ಹೆಣ,
ಪುನರ್ಜನ್ಮದ ಬಗ್ಗೆ ನನಗೇಕೋ ವಿಪರೀತ ಮೋಹ ಹಾಗೂ ನಂಬಿಕೆ
ಆಗಲಾದರೂ ನನ್ನವಾದಾವವೆಲ್ಲ ಇದ್ದರೆ ಒಂದೊಮ್ಮೆ ಋಣ...
ಅಂತೆಯೆ ನಾಲ್ಕು ಹನಿ ಕಂಬನಿ ಅದರ ಅಂಗೈ ಮೇಲೆ ಉರುಳಿಸುತ್ತಾ
ದುಃಖ ತಪ್ತ ಧ್ವನಿಯಲ್ಲಿ ಇಂತುಸುರಿದೆ
ವಿಧಿ ಬಯಸಿದರೆ ಆಗ ಮತ್ತೆ ಪುನಃ ಭೇಟಿಯಾಗೋಣ/
ಇಂದು ಬಾಳುವ ನನಗೆ ನೆನ್ನೆಯ ನೆರಳೂ ಬೇಕು
ಜೊತೆಗೊಂದಿಷ್ಟು ನಾಳಿನ ನೆರವೂ ಸಹ ಇದ್ದಿರಬೇಕು...
ಮನ ಕಲ್ಲಾದಷ್ಟೂ ಮೌನ ಗಟ್ಟಿಯಾಗಿ ಅಲ್ಲಿಂದ ಮರಳಿ ಮಾರ್ದನಿಸುತ್ತದೆ
ನನಗೂ ಕಳೆದು ಹೋದ ಆ ಸಾಂಗತ್ಯ ಮತ್ತೆ ಮತ್ತೆ ಬೇಕೆನಿಸುತ್ತದೆ,
ಅದೇನೆ ಇದ್ದರೂ ಕೊನೆಗೆ ನಾನೂ ಒಬ್ಬ ಮಾನವ
ಹಂಚಿಕೊಳ್ಳಲು ಕಷ್ಟ ಸುಖ ಬೇಕನಿಸುತ್ತದೆ ಇರಲೊಂದು ಜೊತೆಗೆ ಜೀವ//

Monday, January 26, 2015

ನಾನು ತುಂಬ ಇಷ್ಟ ಪಡುತ್ತಿದ್ದ ಇಬ್ಬರು ಎರಡು ದಿನದ ಅಂತರದಲ್ಲಿ ಇನ್ನಿಲ್ಲವಾಗಿದ್ದಾರೆ.






ಬಾಲ್ಯದ 'ಮಾಲ್ಗುಡಿ ಡೇಸ್'ನ ಚಿತ್ರಗಳಾಗಿ ಪರಿಚಯವಾಗಿ ವಿದೇಶಿ ಅಕ್ಷರ ಕಲಿತು ಬಾಲ ಭಾಷೆಯಲ್ಲಿ ಅಕ್ಷರ ಕೂಡಿಸಿ ಕೂಡಿಸಿ ಆಂಗ್ಲ ಪತ್ರಿಕೆ ಓದುವ ಆರಂಭದಲ್ಲಿ  'ಟೈಮ್ಸ್ ಆಫ್ ಇಂಡಿಯಾ'ದ ಶ್ರೀಸಾಮಾನ್ಯನಾಗಿ ನಿಧಾನವಾಗಿ ನನಗೆ ಅರ್ಥವಾದ ನಮ್ಮದೆ ಮೈಸೂರಿನ ಆರ್ ಕೆ ಲಕ್ಷ್ಮಣ್ ಪುಣೆಯಲ್ಲಿ ಎಲ್ಲವನ್ನ ಬಿಟ್ಟು ಹೊರಟಿದ್ದಾರೆ. ಕನ್ನಡದ ಹಾಸ್ಯ ಮಾಸಿಕ 'ಕೊರವಂಜಿ'ಯಿಂದ ತನ್ನ ವ್ಯಂಗ್ಯಚಿತ್ರಕಾರನ ವೃತ್ತಿ ಬದುಕನ್ನ ಆರಂಭಿಸಿದ ಲಕ್ಷ್ಮಣ್ ಬಾಲ್ಯದ ಸವಿ ನೆನಪು 'ಮಾಲ್ಗುಡಿ ಡೇಸ್'ನ ವ್ಯಂಗ್ಯ ಚಿತ್ರಗಳಾಗಿ ಚಿರ ನೆನಪಿನಲ್ಲಿ ಉಳಿದಿರುತ್ತಾರೆ.


ಇನ್ನು ನನ್ನ ಹುಟ್ಟೂರು ತೀರ್ಥಹಳ್ಳಿಯ ತುಂಗೆ ಮಡಿಲಿನ ಮಹಿಷಿಯಿಂದ ನೆರೆಯ ಕಾರಣಕ್ಕೆ ದೂರದ ಧಾರವಾಡಕ್ಕೆ ಗುಳೆ ಹೋಗಿದ್ದ ಅಗ್ರಹಾರವೊಂದರ ಕುಡಿ ಅನಂತರ ನಾನಾ ಕಾರಣಕ್ಕೆ ಖ್ಯಾತರಾಗಿ, ಸಂಸತ್ತಿನ ಎರಡೂ ಮನೆಗಳಲ್ಲಿ ಒಟ್ಟು ಆರು ಬಾರಿ ಸದಸ್ಯರಾಗಿ ಕೇಂದ್ರದಲ್ಲಿ ಪ್ರಬಲ ಖಾತೆಗಳ ಸಚಿವರೂ ಆಗಿದ್ದು ಕರ್ನಾಟಕದೊಳಗೆ ಕನ್ನಡಿಗರಿಗೇನೆ ಉದ್ಯೋಗದಲ್ಲಿ ಆದ್ಯತೆಯನ್ನ ಆಗ್ರಹಿಸುವ ವರದಿಯನ್ನ ಸರಕಾರಕ್ಕೆ ಕೊಟ್ಟ ದಿಟ್ಟೆ ಸರೋಜಿನಿ ಮಹಿಷಿ ಸಹ ದೂರದ ಘಾಝಿಯಾಬಾದಿನಲ್ಲಿ ನಮ್ಮನ್ನಗಲಿ ಮತ್ತೆ ಬಾರದೆಡೆಗೆ ಹೆಜ್ಜೆ ಹಾಕಿದ್ದಾರೆ. ಅವರಿಬ್ಬರಿಗೂ ಅವರಿದ್ದಲ್ಲಿಯೆ ನಮ್ಮೆಲ್ಲರ ಸ್ಮರಣೆಗಳು ಮುಟ್ಟಲಿ.

ಬಡ ಭಾರತೀಯರ ಕಾಸು, ಬಂದ ಭಿಕ್ಷುಕ ಅಮೇರಿcunningರೆ ಅದರ ಬಾಸು.....





ಅಣು ಒಪ್ಪಂದದ ಹೆಸರಿನಲ್ಲಿ ಕಾಸು ಕೊಟ್ಟು ಮಣ್ಣು ಕೊಂಡೆವು. ತನ್ನ ಸ್ವಂತ ನೆಲದಲ್ಲಿ ಸ್ವತಃ ಅಮೇರಿಕಾ ಅಣು ಸ್ಥಾವರಗಳ ಸ್ಥಾಪನೆಗೆ ನಿಷೇಧ ಹೇರಿಕೊಂಡು ಒಂದೂವರೆ ದಶಕ ಕಳೆದಿದೆ ನೆನಪಿರಲಿ. ಅವರಿಗೆ ವಿಷವಾಗುವ ಅದು ನಮಗೆ ಅಮೃತವಾಗುವುದು ಹೇಗೆ?


ಹಾಗೊಂದು ವೇಳೆ ಇಲ್ಲಿ ಅಮೇರಿಕಾ ಸ್ಥಾಪಿಸಿ ಅವರೆ ನಿರ್ವಹಿಸುವ ಅಣು ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗಿ ಒಂದೊಮ್ಮೆ ದುರಂತ ಘಟಿಸಿದರೆ ಅದಕ್ಕೆ ಅವರು ಹೊಣೆಯಲ್ಲವಂತೆ! ಸ್ಥಾಪನೆಯ ಜೊತೆ ನಿರ್ವಹಣೆಯ ಹಕ್ಕು ಮಂಡಿಸುವ ಹಾಳು ಅಮೇರಿCunningರು ಸಂಕಟದ ಸ್ಥಿತಿ ಬಂದಾಗ ಮಾತ್ರ ಯಾವುದೇ ಬಾಧ್ಯತೆಯ ಹೊಣೆಗೆ ಹೆಗಲು ಕೊಡದೆ ನುಣ್ಣಗೆ ನುಣುಚಿಕೊಳ್ಳಲು ಮೈಯೆಲ್ಲ ಎಣ್ಣೆ ಹಚ್ಚಿಕೊಂಡು ತುದಿಗಾಲಲ್ಲಿ ತಯಾರಾಗಿರುತ್ತಾರೆ ಅಂತಾಯಿತು.


ವಾಸ್ತವವಾಗಿ ಈ ಅಣು ತಂತ್ರಜ್ಞಾನ ಅಮೇರಿಕನ್ ಕೋಡಂಗಿಗಳ ಪಾಲಿಗೆ ಈಗಾಗಲೆ out dated ಆಗಿರೋವಂತದ್ದು ಹಾಗೂ ಅವರ ಗುಜುರಿಯನ್ನ ಹೊಸತರ ಬೆಲೆಗೆ ಕೊಳ್ಳುವ ಈರಭದ್ರರು ನಾವಾಗುತ್ತಿದ್ದೇವೆ ಅಷ್ಟೆ, ಅಲ್ಲದೆ ಇಲ್ಲಿ ಅಮೇರಿಕನ್ನರು ತಮ್ಮ ಯಾವುದೆ ತಂತ್ರ"ಜ್ಞಾನ"ವನ್ನ ನಮಗೆ ಮಾರುತ್ತಿಲ್ಲ ಅನ್ನೋದು ನಿಮ್ಮ ಗಮನಕ್ಕೆ. ಅದರ ಗುಟ್ಟನ್ನ ತಮ್ಮಲ್ಲಿಯೆ ಇರಿಸಿಕೊಂಡು ಉಸ್ತುವಾರಿಗೂ ಅಲ್ಲಿಂದಲೆ ತಮ್ಮ ತಂತ್ರಜ್ಞರನ್ನೆ ಕಳಿಸಿಕೊಡುತ್ತಾರೆ. ಸ್ಥಳಿಯರೇನಿದ್ದರೂ ಸ್ಥಾವರ ಸ್ಥಾಪನೆಗೆ ಜಮೀನು ಕಳೆದುಕೊಳ್ಳುವುದಕ್ಕೆ, ಅಲ್ಲಿ ಕಸ ಹೊಡೆಯುವ ನೆಲ ಒರೆಸುವ ಚಪ್ರಾಸಿಯ ಕೆಲಸಕ್ಕೆ ಹಾಗೂ ಅನಂತರ ಅದರ ಸೋರಿಕೆ ಆದಲ್ಲಿ ರೋಗ ರುಜಿನಗಳಿಂದ ನರಳೊಕ್ಕೆ ಮಾತ್ರ ಸೀಮಿತ. ಮತ್ತೊಂದು ಭೋಪಾಲ್ ದುರಂತ ಹಾಗೂ ರಾಜಮರ್ಯಾದೆ ಸಹಿತ ಓಡಿ ಹೋದ ಆಂಡರ್ಸನ್ ಪ್ರಕರಣದ ಎರಡನೆ ಕಂತಿನ ಮರುಕಳಿಕೆಯನ್ನ ಸದ್ಯದಲ್ಲಿಯೆ ನಿರೀಕ್ಷಿಸಿ.


ಇದೆ ಕಾರಣಕ್ಕೆ ಇದೆ ಮಾತಿನ ಮೋಡಿಗಾರನ ಪಕ್ಷ ಮನಮೋಹನನ ಕಾಲಕ್ಕೆ ಈ ಒಪ್ಪಂದವನ್ನ ಪ್ರಬಲವಾಗಿ ವಿರೋಧಿಸಿ ಲೋಕಸಭೆಯಲ್ಲಿ ಅದರ ಕರಡನ್ನ ಅಂಗೀಕಾರಗೊಳ್ಳದಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆಗ ಗುಜರಾತಿನ ಚುಕ್ಕಾಣಿ ಹಿಡಿದಿದ್ದ ಇದೆ ಮಾತಿನ ಮೋಡಿಯವನೂ ಸಹ ಅದನ್ನ ಕಟು ಶಬ್ದಗಳಲ್ಲಿ ವಿರೋಧಿಸಿದ್ದ. ತುಸು ಅಧಿಕ ವೆಚ್ಚದ್ದಾದರೂ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಸೌರ ಫಲಕಗಳ ಸರಳ ದೇಶೀಯ ತಂತ್ರಜ್ಞಾನವನ್ನ ತನ್ನ ರಾಜ್ಯದ ಎಲ್ಲಾ ನದಿ ಕಾಲುವೆಗಳಲ್ಲಿ ಹಾಗೂ ಕಚ್ಛಿನ ರಣಭೂಮಿಯಲ್ಲಿ ಹಾಕಿಸಿ ಶಬ್ಭಾಸ್ ಅನ್ನಿಸಿಕೊಂಡಿದ್ದ. ದೀರ್ಘಕಾಲೀನ ಉತ್ಪಾದನೆಯ ಹಾಗೂ ಸ್ಥಳಿಯ ವಿತರಣೆಯ ದೃಷ್ಟಿಯಿಂದ ಇದು ಅಭಿನಂದನೀಯವೆ ಆಗಿತ್ತು. ಆದರೆ ಈಗ ಏಕಾಏಕಿ ಆತನಿಗೆ ದೇಶದ ವಿದ್ಯುತ್ ಬೇಡಿಕೆ ವಿಪರೀತ ಅನ್ನಿಸಿ ಬಿಟ್ಟಿದೆ! ಸಿಗುವ ಎಂಜಲು ಕಾಸಿನ ಕಮೀಷನ್ನಿನ ರುಚಿ ಹೆಚ್ಚು ಅಂತ ಕೇಳಿ ಮಾತ್ರ ಗೊತ್ತಿದ್ದ ಭಾರತೀಯ ಎ'ಬಡ' ಪ್ರಜೆಗಳಾದ ಹುಲು ಮಾನವರಿಗೆ ಈಗ ಅದನ್ನು ಕಣ್ಣಾರೆ ನೋಡುವ ಭಾಗ್ಯವೂ ಸಿಕ್ಕಿ ಮತ್ತೊಂದು ಮಗದೊಂದು 'ಅಚ್ಚೆ ದಿನ್' ಕಂಡು ಅವರೆಲ್ಲ ಧನ್ಯರಾದರು!


ಹೌದು, ನಮಗೆ ವಿದುತ್ ಅತ್ಯವಶ್ಯಕ ನಿಜ. ಹಾಗಂತ ಅಣು ವಿದ್ಯುದಾಗಾರಗಳೆ ಅದಕ್ಕೆ ಕೊನೆಯ ಪರಿಹಾರ ಅನ್ನೋದೆಲ್ಲ ಕಾಗಕ್ಕ ಗೂಬಕ್ಕನ ಕಥೆಗಳಷ್ಟೆ. ಇಲ್ಲಿ ಉತ್ಪಾದನ ವೆಚ್ಚವೂ ಅಧಿಕ ಮಾತ್ರವಲ್ಲ ಪರಿಸರಕ್ಕೆ ಇದರಿಂದ ಆಗುವ ಹಾನಿಯಂತೂ ಸಿಗುವ ಒಟ್ಟು ಮೊತ್ತದ ವಿದ್ಯುತ್ತಿಗೆ ಅದರಿಂದಾಗುವ ಒಟ್ಟಾರೆ ಲಾಭಕ್ಕೆ ಹೋಲಿಸಿ ನೋಡಿದರೆ ಅತ್ಯಂತ ನಷ್ಟದ ಬಾಬ್ತು ಅನ್ನೋದು ಸಹ ಸರಳ ಲೆಕ್ಕಾಚಾರ ಬಲ್ಲವರಿಗೆ ಅರ್ಥವಾಗುತ್ತದೆ. ಸಮುದ್ರಮುಖಿಯಾಗಿರುವ ದೇಶದ ಪ್ರತಿಯೊಂದು ನದಿಯನ್ನೂ ಸಾಗರ ಸಂಗಮಕ್ಕೂ ಕನಿಷ್ಠ ಐವತ್ತು ಕಿಲೋಮೀಟರ್ ಅಂತರದಲ್ಲಿ ಸಣ್ಣ ಮಟ್ಟಿಗೆ ತಡೆದು ನಿಲ್ಲಿಸಿ ವಿದ್ಯುತ್ ಉತ್ಪಾದಿಸಿದ್ದೇ ಆದರೆ ನಮ್ಮ ಮುಕ್ಕಾಲು ವಾಸಿ ಬೇಡಿಕೆಯನ್ನ ಪೂರೈಸಿಕೊಳ್ಳಬಹುದು ಹಾಗೂ ಅಸಂಪ್ರದಾಯಿಕ ಸೌರ ವಿದ್ಯುತ್ ಉತ್ಪಾದನೆಯನ್ನ ಆಳುವ ಸರಕಾರಗಳ ಜೊತೆಜೊತೆಗೆ ಖಾಸಗಿಯಾಗಿ ಜನರೂ ತಮ್ಮತಮ್ಮ ಮನೆಗಳಲ್ಲಿಯೆ ಉತ್ಪಾದಿಸಿಕೊಂಡು ಹೆಚ್ಚುವರಿಯನ್ನ ಸಾರ್ವಜನಿಕ ಗ್ರಿಡ್ ಮೂಲಕ ಮಾರುವ ಯೋಜನೆಯನ್ನ ಪ್ರೋತ್ಸಾಹಿಸಿದ್ದರೆ ಯಾವ ಹಾನಿಯೂ ಇಲ್ಲದೆ ನಾಡು - ದೇಶ ವಿದ್ಯುತ್ ಕೊರತೆಯನ್ನ ನೀಗಿಸಿಕೊಳ್ಳುತ್ತಿತ್ತು ಅನ್ನೋದು ಅರಿವಿರದಷ್ಟು ನಮ್ಮ ಪ್ರಧಾನಿಗಳು ಮೂರ್ಖರಾಗಿರಲಿಕ್ಕಿಲ್ಲ.


ಕಂಡವರ ನಡೆಯನ್ನ ಕೂತಲ್ಲಿ ನಿಂತಲ್ಲಿ ಯೂ ಟರ್ನ್ ಅಂತ ಎಲುಬಿಲ್ಲದ ನಾಲಗೆಯಲ್ಲಿ ಟೀಕಿಸಿ 'ಕ್ರೇಜಿ'ಪ್ರಾಣಿಗಳಂತೆ ಆಡುವ ಮೋಡಿಗಾರನ ಬಾಲಬುಡುಕರು ಈ ಸಂಪೂರ್ಣ ಓ ಟರ್ನ್ ಬಗ್ಗೆ ಮಾತ್ರ ತುಟಿ ಎರಡು ಮಾಡಲೊಲ್ಲರು! ಎಷ್ಟೆಂದರೂ ಇವರು ನಿ'ರಾಧಾರ'ವನ್ನ ವಿರೋಧಿಸಿಕೊಂಡೆ ಅಧಿಕಾರ ಕದ್ದು ಈಗ ಅದನ್ನೆ ಜಾರಿಗೊಳಿಸಿ ನಮ್ಮ ಖಾಸಗಿ ಮಾಹಿತಿಯನ್ನ ಅಮೇರಿಕೆಗೆ ಮಾರಿಕೊಂಡ, 'ಧನ'ವೆ ಇಲ್ಲದ ಖಾತೆಯನ್ನ ಸಿಕ್ಕಸಿಕ್ಕವರಿಗೆಲ್ಲ ಮಾಡಿಕೊಟ್ಟು ದೇಶದ ಜನರನ್ನೂ ದನ ಮಾಡಿದ ಅತಿಜಾಣರ ತಿಜೋರಿಯಲ್ಲಿ ಸ್ವಂತ್ದ ಮೆದುಳನ್ನ ಅಡವಿಟ್ಟವರ ಅಡ್ಡ ಸಂತಾನದವರಲ್ಲವೆ? ಇದಕ್ಕಿಂತ ಹೆಚ್ಚಿನದೇನನ್ನ ಇಂತಹ ಹಡಬೆಗಳಿಂದ ನಿರೀಕ್ಷಿಸಲು ಸಾಧ್ಯ?.


ಇನ್ನು ಇಂದು ಪಥ ಸಂಚಲನದಲ್ಲಿ ಪ್ರದರ್ಶಿತವಾದ ರಷ್ಯನ್ ನಿರ್ಮಿತ ಆಯುಧಗಳ ಜಾಗಕ್ಕೆ ಅಮೇರಿಕನ್ ಉತ್ಪಾದನೆಗಳು ಲಗ್ಗೆ ಹಾಕಲಿವೆ. ಜೀವರಕ್ಷಕ ಔಷಧಿಗಳ ನಿಯಂತ್ರಿತ ಬೆಲೆಯನ್ನ ನಮ್ಮ ಆಳುವ ಮಂದಿ ಕಿತ್ತು ಹಾಕಿ ಅಮೇರಿಕನ್ ಔಷಧ ಉತ್ಪಾದಕರ ಜೋಳಿಗೆಯನ್ನ ತುಂಬಿಸಲಿದ್ದಾರೆ. ಒಟ್ಟೊಟ್ಟಿಗೆ ಕೂತು ಅರ್ಧರ್ಧ ಚಾ ಕುಡಿದ ಮಾತ್ರಕ್ಕೆ ಭೋಪರಾಕ್ ಹಾಕುವವರ ಹಾಗೂ ಮಾಧ್ಯಮಗಳೆಂಬ ಭಟ್ಟಂಗಿಗಳ ಕೃಪೆಯಿಂದ ಭಾರತೀಯ ಬರಿ ಕೈ ನೆಕ್ಕಿ ಕೊಂಡು ನಮ್ಮ ಮೋಡಿಗಾರ ಆ ಓಬಮ್ಮನ ಆಪ್ತಮಿತ್ರನಾದ ಎನ್ನುವ ಹುಸಿ ಹೆಮ್ಮೆಯಲ್ಲಿ ತೇಲುತ್ತಾನೆ, ನಿಜದಲ್ಲಿ ಎಲ್ಲಾ ಜೇನನ್ನೂ ಗೂಡಿನ ಸಮೇತ ಅಪಹರಿಸಿ ಅಮೇರಿಕನ್ನರು ಮತ್ತೊಂದು ಸುತ್ತು ನುಣ್ಣಗೆ ನಮ್ಮ ಚೌರ ಮಾಡಿರುತ್ತಾರೆ.


ಅಮೇರಿಕ ಈ ಆಹ್ವಾನದ ಕಾರಣಕ್ಕೆ ನಮ್ಮನ್ನು ಅತಿಯಾಗಿ ಆದರಿಸಿ ಇನ್ನು ನಮ್ಮ ರಾಗಕ್ಕೆ ತಮ್ಮ ರಾಗವನ್ನೂ ಸೇರಿಸುತ್ತಾರೆ ಅನ್ನೋದು ಕಡು ಮೂರ್ಖತನ. ಲಾಭವಿಲ್ಲದ ಕಡೆಗೆ ಅವರ ಎಡಗಾಲಿನ ಚಪ್ಪಲಿಯೂ ಸಹ ಹೋಗುವುದಿಲ್ಲ. ಮೊನ್ನೆ ಇಲ್ಲಿಗೆ ಬಂದು ನಮ್ಮ ಬೆನ್ನು ತಡವಿ ಹೋಗಿದ್ದ ಜಾನ್ ಕೆರ್ರಿ ಮರುದಿನವೆ ರಾವಳಪಿಂಡಿಗೆ ಹೋಗಿ ಅಲ್ಲಿ ರಾಹಿಲ್ ಶರೀಫನ ಬೆನ್ನನ್ನೂ ಹಿತವಾಗಿ ಕೆರೆದೆ ವಾಷಿಂಗ್'ಟನ್ನಿಗೆ ಮರಳಿದ್ದ ಅನ್ನುವ ತಾಜಾ ಉದಾಹರಣೆಯೊಂದಾದರೂ ನಮಗೆ ನೆನಪಿದ್ದರೆ ಸಾಕು. ಒಟ್ಟಿನಲ್ಲಿ ಹಣ ನಮ್ಮದು, ಈ ಬಿಟ್ಟಿ ಸಿಗುವ ಸಾಲದ ಹಣದಲ್ಲಿ ಮೋಜು ಮಾಡುವವರು ಮಾತ್ರ ಅಮೇರಿಕನ್ನರು. ಅಲ್ಲಿಗೆ ಜಯ ಜಯ ಜಯ ಹೇಏಏಏಏಏಏಏಏಏಏ.

Monday, January 5, 2015

ವಾಸ್ತವ ಇರೋದೆ ಬೇರೆ, ಆದರ್ಶ ಅದೇ ಬೇರೆ.......



ಬೇರು ಮರೆತ ಹೂವು ಬಾಡೋದು ಖಚಿತ
ಋಣ ಹರಿದ ಮನಸಿಗೆ ನೋವು ಮಾತ್ರ ಉಚಿತ,
ಕಾಲ ಯಾರಿಗೂ ಕ್ಷಣ ಮಾತ್ರವೂ ಕಾಯುವುದಿಲ್ಲ
ನಾಳೆ ಇಂದಿಗೆ ಹತ್ತಿರದ ನೆಂಟ ಹಾಗಂತ ನೆನ್ನೆಯಾಗದೆ
ಅದು ನಿಂತಲ್ಲಿಯೆ ಸುಮ್ಮನೆ ಕಾಯುತ್ತಾ ಉಳಿಯುವುದಿಲ್ಲ/
ಹಳಬರಾಗುವುದು ಕೇವಲ ನಾವು ಮಾತ್ರ
ಕಾಲಮಾನ ಯಾವತ್ತೂ ಹೊಚ್ಚ ಹೊಸದು,
ನಮ್ಮದಿಲ್ಲೇನಿದ್ದರೂ ಕೇವಲ ನಾಟಕದ ಪಾತ್ರ
ವಿಧಿ ನಿರ್ಧರಿಸಿದಾಗ ನಾವು ನಿರ್ಗಮಿಸಬಹುದು//


ಕೆಲವೊಮ್ಮೆ ಮನದ ಮರುಳ ಕಂಡು
ಕನಸು ಇರುಳ ನಿದ್ದೆಯಲ್ಲಿ ಅದನ್ನ ಅಣಗಿಸುತ್ತದೆ,
ಸಾಕಾರವಾಗದ ಅದರ ಆಸೆಗಳನ್ನ ತನ್ನ ನೆರಳ ಛಾವಣಿಯೊಳಗೆ ಎಳೆದುಕೊಳ್ಳದೆ
ಬರ್ಬರ ನಿರೀಕ್ಷೆಯ ಬಿಸಿಲಿನಲ್ಲಿಯೇ ನಿರ್ದಯವಾಗಿ ಒಣಗಿಸುತ್ತದೆ/
ಪ್ರಾಮಾಣಿಕತೆಗೆ ಇಲ್ಲಿ ಸಿಗದು ಕಿಂಚಿತ್ತೂ ಕರುಣೆ
ಶುಭ್ರ ಮನಸಿನ ಯಾಚನೆಗೆ ಯಾವತ್ತೂ
ಮುಲಾಜಿಲ್ಲದೆ ಹೆಗಲು ಜಾರಿಸುತ್ತದೆ ಜಗತ್ತು ಹೊರಲೊಪ್ಪದೆ ಹೊಣೆ,
ಇನ್ನೊಬ್ಬರ ವಂಚಿಸ ಹೊರಟವರಿಗೆ ಇಲ್ಲಿ
ಯಾವತ್ತೂ ಸಿಗುತ್ತಲೇ ಇರುತ್ತದೆ ರಾಜ ಮನ್ನಣೆ...
ಬರೆದದ್ದನ್ನ ಬೇಡವೆಂದಾಗ ಬರಿಗೈಯಲ್ಲಿ ಒರೆಸುವಂತಿಲ್ಲವಲ್ಲ
ಇದು ವಿಧಿಯ ಕಪ್ಪುಹಲಗೆಯಾಗಿರುವ ಕರ್ಮದ ಹಣೆ//


ಅಕಾಶ ಅತಿ ಚಿಕ್ಕದು ಇಲ್ಲಿ ಅನಿರೀಕ್ಷಿತವಾಗಿ ಸಿಗುವ ಅವಕಾಶದ ಮುಂದೆ
ಅಯೋಗ್ಯರ ಕರಗ ಹೊತ್ತು ತಿರುಗುವ ತಲೆತಿರುಕರ ಜಗತ್ತಿದು
ಜನ ಇಲ್ಲಿ ಬಿಕರಿಗೆ ಮೆದುಳಡವಿಟ್ಟ ಬರಿ ಕುರಿ ಮಂದೆ,
ಗೊತ್ತು ಗುರಿಯಿಲ್ಲದಿದ್ದರೂ ಕಾಂಚಣದ ಝಣಝಣ ಕಿವಿ ತುಂಬಿದರೆ ಸಾಕು
ಹಾಕುತಾರೆ ಮತಿಗೆಟ್ಟವರಂತೆ ಹೆಜ್ಜೆ ಹೊರಟ ಜಾತ್ರೆಯ ಗುಂಪಿನ ಹಿಂದೆ/
ಪ್ರತಿಭೆ ಇಲ್ಲಿ ಯಾವತ್ತೂ ಕಾಡ ಸುಮದ
ಕಾಣದೆ ಅರಳಿ ಬಾಡುವ ಸುಗಂಧದ ಮೊಗ್ಗು,
ಸುರೂಪವದೆಷ್ಟೆ ಇದ್ದರೂ ಬಡವನ ಕೂಸನ್ನ ಯಾರೂ ಎತ್ತಿ ಮುದ್ದಿಸರು
ಅವಕಾಶವಾದಿ ಜಗತ್ತಿನ ಕಣ್ಣಿಗೆ ಯಾವತ್ತೂ....
ಹಣವಂತರು ಹೆತ್ತದ್ದೆ ವಿಶ್ವದ ಅತಿಸುಂದರ ಮಗು//


ನೆನಪುಗಳ ನದಿದಂಡೆಯ ಮೇಲೆ........


ಭಾವಗಡಲ ಅಲೆಗಳೆಲ್ಲ ಎದೆ ತೀರಕ್ಕೆ ಹಿತವಾಗಿ ಸೋಕಿ
ನಿರೀಕ್ಷೆ ಅಡ್ಡ ಮಳೆಯ ಹನಿಗಳ ತುಂತುರು
ಎದೆ ಕಿಟಕಿಯ ಗಾಜನ್ನ ಒಂದೊಂದಾಗಿ ತಾಕಿ,
ಅದುವರೆಗೆ ಹಸಿದು ಬರಡಾಗಿದ್ದ
ಮನದ ಒಣ ನೆಲದಲ್ಲಿ ಅನಿರೀಕ್ಷಿತವಾಗಿ
ಅನೇಕ ಆಸೆಯ ಅಣಬೆಗಳು ತುಸುವೂ ಸುಳಿವುಕೊಡದೆ ಅರಳಿದ್ದವು/
ಕಾಲಚಕ್ರ ಅತಿವೇಗವಾಗಿ ತಿರುಗಿ
ಸ್ವಪ್ನದಿಳೆ ತಡೆಯಲಾಗದ ವಿರಹದ ಚಳಿಗೆ ತಾನು ಮುದುಡಿ....
ಅಲ್ಲಿ ಬಿದ್ದ ನಿರಾಕರಣೆಯ ಇಬ್ಬನಿಯ ಹನಿಗಳೆಲ್ಲ ಮೂಡಿ
ತುಸುವೂ ಹೊತ್ತಾಗಿರದಿದ್ದ ಆಕಾಂಕ್ಷೆಯ ಮೊಗ್ಗುಗಳನ್ನೆಲ್ಲ
ಅವು ನಗುವ ಮೊದಲೆ ಮುದುಡಿಸಿದವು,
ಆಗಷ್ಟೆ ತಿಳಿಯಾಗಿದ್ದ ಪ್ರಕ್ಷುಬ್ಧ ಮನ ಸರೋವರವನ್ನ
ಮತ್ತೆ ಮೊದಲಿಗಿಂತ ಹೆಚ್ಚಾಗಿ ಕದಡಿಸಿದವು//



ಹೋದ ನಿನ್ನ ಬಗ್ಗೆ ದೂರುಗಳಿಲ್ಲ
ಹೋಗಲು ನೀ ಕೊಟ್ಟ ಕಾರಣಗಳನ್ನೂ ಸಹ ನಾ ನಂಬುವುದಿಲ್ಲ,
ನಿಜವನ್ನೆ ನುಡಿದು ನೀ ನನ್ನ ತೊರೆಯಬಹುದಿತ್ತು...
ನನಗಂತೂ ಅದು ಅಸಾಧ್ಯ ಆದರೂ ನೀ ನನ್ನ ಈಗಿನದ್ದಕ್ಕಿಂತ
ವೇಗವಾಗಿ ಮರೆಯಬಹುದಿತ್ತು/
ಇನ್ಯಾರಿಗಾದರೂ ಅಪ್ಪಿತಪ್ಪಿ ನಾವಂಚಿಸಿಯೇನು
ಆದರೆ ನಿನ್ನ ಮುಂದೆ ತನುವಷ್ಟೆ ಅಲ್ಲ ನನ್ನ ಮನ ಸಹ ಬರಿ ಬೆತ್ತಲೆ,
ಬೆಳಕನ್ನ ನಿನ್ನಿಂದ ಕೇಳಿ ಮಾತ್ರ ಗೊತ್ತಿದ್ದ ಕುರುಡ ನಾನು
ಈಗ ನಿನ್ನ ಸಾಂಗತ್ಯವೂ ಇಲ್ಲದೆ...
ಬಾಳೆಲ್ಲ ನನಗೆ ಮೊದಲಿಂದ ಜೊತೆಯಾಗಿರುವ ಬರಿ ಕತ್ತಲೆ//



ಮುಗ್ಢವಾಗಿ ನಗುವ ಮಕ್ಕಳ ಅಭೋದ ಕಣ್ಣುಗಳಲ್ಲಿ
ನಾನಿನ್ನ ಅಡಿಗಡಿಗೆ ಕಾಣುತ್ತೇನೆ.....
ನಿನ್ನಲ್ಲೂ ಅಂತಹ ಕುತೂಹಲಕ್ಕೆ ಅರಳುವ ಮುಗ್ಧ ಮನಸೊಂದಿತ್ತಲ್ಲ
ಅನ್ನೊದನ್ನ ಬಾಳಿನ ಅನುಕ್ಷಣ ಮನಗಾಣುತ್ತೇನೆ,
ನಾನೇನೂ ತ್ಯಾಗಿಯಲ್ಲ ನಿನ್ನನ್ನಷ್ಟೆ ಪ್ರೀತಿಸಿದ ಪರಮ ಸ್ವಾರ್ಥಿ
ಇನ್ಯಾರಿಗೂ ತುಸುವೂ ಎಡೆ ಕೊಡದ ಹಾಗೆ
ಆವರಿಸಿಕೊಂಡಿದ್ದೀಯ ನೀನೆ ನನ್ನ ಕಿರು ಬಾಳ ಭರ್ತಿ/
ನಿನ್ನ ನಾಮದ ಹಣೆ ಪಟ್ಟಿ ಹಚ್ಚಿಕೊಳ್ಳುವ ಉಮೇದು ನನಗೂ ಇಲ್ಲ
ನನ್ನ ಹೆಸರ ಠಸ್ಸೆಯ ನಿನ್ನ ಖಾಸಗಿ ಬಾಳಲ್ಲಿ  ಒತ್ತುವ
ಹಪಾಹಪಿಯೂ ಈಗ ಉಳಿದಿಲ್ಲ,
ಬಾಳು ಅಂದುಕೊಂಡದ್ದಕ್ಕಿಂತ ಕಿರಿದು ಅನ್ನುವ ಸತ್ಯ ನನಗೂ ಅರಿವಿದೆ
ನಾ ವಾಸ್ತವವಾದಿ....
ಹೆಚ್ಚೆಂದರೆ ಸಾವನ್ನ ದಯಪಾಲಿಸಬಹುದೆ ವಿನಃ
ಇನ್ನೇನೂ ಕಿತ್ತುಕೊಳ್ಳಲಾರದು ನನ್ನಿಂದ
ಈಗಾಗಲೆ ನಿನ್ನ ಅಗಲಿಸಿರುವ ಕರುಣೆಯಿಲ್ಲದ ಕ್ರೂರ ವಿಧಿ//

Monday, December 22, 2014

ಭರವಸೆಯೊಂದೆ ಬದುಕು.......




ಕನಸುಗಳ ತೋಟದ ಮಾಲಿ ನಾನು,
ಅರಳಿದ ಹೂಗಳನ್ನ ಕೀಳುವ ಅಧಿಕಾರವಿಲ್ಲ....
ಇನ್ಯಾರ ಕಣ್ಣೂ ಅದರ ಮೇಲೆ ನಾನಿರುವಾಗ ಬೀಳುವಂತಿಲ್ಲ,
ನನಸಿನ ಲೋಕದ ಹಮಾಲಿಯೂ ಆಗಿಲ್ಲವೇನು?/
ಸಂಕಷ್ಟಗಳ ಮೂಟೆಯನ್ನ ನಿತ್ಯ ಹೊತ್ತೇ ಇದ್ದರೂ
ಬಾಗಿದ ಬೆನ್ನಿನಡಿಯಲ್ಲಿಯೆ ಕಿರು ನಗುವುದು ರೂಢಿಯಾಗಿದೆ
ಎಲ್ಲರ ಬದುಕಿನ ನೀತಿಯೂ ಇಷ್ಟೆ.....
ಇದಕ್ಕೆ ಹೊರತಲ್ಲ ನಾನೂನು//


ಈ ಭರವಸೆ ನಾಳಿನ ನಿರೀಕ್ಷೆಗಳಿವೆಲ್ಲ
ನಮಗೆ ನಾವೆ ನಿತ್ಯ ಕೊಟ್ಟುಕೊಳ್ಳುವ ನಿರಂತರ ಜಾಮೀನು,
ಕಹಿ ಮಾತ್ರೆ ಹೌದು ಜೀವನ
ಅದಕ್ಕೆ ತುಸುವಾದರೂ ಸರಿ೮ ಸೇರಿಸಿಕೊಳ್ಳಲೇಬೇಕು ಸಂತಸದ ಹನಿ ಜೇನು/
ಹೋಗಲೇ ಬೇಕು ಪ್ರತಿಯೊಬ್ಬರೂ
ಈ ಜಗವ ಶಾಶ್ವತವಾಗಿ ಒಂದು ದಿನ ತೊರೆದು
ಇದರಲ್ಲಿ ರಿಯಾಯತಿ ಯಾರಿಗಾದರೂ ಇದೆಯೇನು?,
ಇಂದು ಅವನು ನಾಳೆ ನೀನು
ಹಿಂದೆಯೆ ಒಂದಿನ ನಾನು//


ಅಂಗೈ ರೇಖೆಗಳ ನೋಡಿ ಒಬ್ಬರ ಅದೃಷ್ಟ ಅಳಿಯಲಾಗುವುದಿಲ್ಲ
ಕೈಯಿಲ್ಲದ ಹೆಳವರಿಗೂ ಒಳ್ಳೆಯ ಕಾಲ ಒಂದಿದ್ದೇ ಇರುತ್ತದೆ,
ಹಣೆಬರಹವ ನಂಬಿ ಎಂದೂ ವಿಧಿ ಮಣೆ ಹಾಕುವುದಿಲ್ಲ.....
ನೊಂದು ತಲೆಯ ಮೇಲೆ ಕೈಯಿಟ್ಟು ಕೂತವನಿಗೂ
ಸಂತಸದ ಕಾಲವೊಂದನ್ನ ತಪ್ಪದೆ ಹೊತ್ತು ತರುತ್ತದೆ/
ಕೆಲವು ಯೋಜನೆಗಳು ಮನದೊಳಗೆ ಖಚಿತವಿದ್ದರೆ ಸಾಕು
ಸೋತು ಸುಮ್ಮನೆ ಕೂರದೆ ಸಾಧನೆಯ
ಕಿರು ಹಾದಿಯೆಡೆ ಕೆಲವು ಹೆಜ್ಜೆ ಹಾಕಲೇಬೇಕು,
ಅದೃಷ್ಟ ಆಗ ತಗ್ಗಿಬಗ್ಗಿ
ನಮ್ಮ ವಿಳಾಸವನ್ನ ಮರೆಯದೆ ಹುಡುಕಿಕೊಂಡೆ ಬರುತ್ತದೆ//

Sunday, December 21, 2014

ಇದು ನಮಗೂ ಆಗಲೇಬೇಕಿತ್ತು........!




ಮಾತು ಮರೆತ ಮೇಲೆ ಮೌನವನ್ನಾದರೂ
ಗಟ್ಟಿಯಾಗಿ ಅಪ್ಪಿಕೊಳ್ಲಲೇ ಬೇಕಲ್ಲ?
ವರ್ಷಾನುಗಟ್ಟಲೆ ಜೊತೆಯಿದ್ದು ಅಂತರಂಗವನ್ನ
ಅರಿತ ಮೇಲೂ,
ತುಸುವಾದರೂ ನನ್ನ ಮೇಲೆ ನಂಬಿಕೆ ಅದೇಕೆ ಇಲ್ಲ?/
ಸೋತ ಕಾಲುಗಳ ಕಾಲದ ಕುದುರೆಯ
ಬೆತ್ತಲೆ ಬೆನ್ನೇರಿ,
ಮರೀಚಿಕೆಯಂತಹ ಕನಸುಗಳ ಹಾದಿಯದ್ದ
ಕಿರಿದುಗೊಳಿಸಿದ ದೃಷ್ಟಿಯ ಕಣ್ಣೂರಿ....
ಗುರಿ ತಪ್ಪಿ ಹಾಕುತ್ತಿರುವ ಪ್ರತಿ ಹೆಜ್ಜೆಗಳ ಹಿನ್ನೆಲೆಯಲ್ಲೂ
ನಿನ್ನ ನೆನಪುಗಳ ಗುಂಗಿದೆ//



ಗುರುತು ಬೇಡವೆಂದು ದೂರ ಓಡಿದಷ್ಟೂ
ಸಲ್ಲದ ಚಿನ್ಹೆಗಳನ್ನ ತಂದು ಒತ್ತುತ್ತಾರೆ,
ಎಲ್ಲಾ ನಿಶಾನಿಗಳನ್ನ ಎತ್ತಿ ಒಗೆದಿದ್ದರೂ ಸಹ
ಬಲ್ಲಿದರಂತೆ ಜಾತಿಯೊಂದರ ಮೊಹರನ್ನ ಬಂದು ಇತ್ತಿದ್ದಾರೆ....
ಅದೇನೋ ಅಂದರಪ್ಪ ಇದನು ಕಾನೇಶುಮಾರಿ!
ಜಾತಿ ಭೂತವ ಅದೆಂದೋ ಶಾಶ್ವತವಾಗಿ ಊರ ಗಡಿದಾಟಿಸಿ ಬಂದಿದ್ದರೂ ಮತ್ತೆ
ಈ ರೂಪದಲ್ಲಿ ಮನೆಗೆ ಬಂದು ಮರಳಿ ವಕ್ಕರಿಸಿತಲ್ಲ ಮತ್ತದೇ ಮಾರಿ!/
ವಿಶ್ವಮಾನವರಾಗುವುದೆಲ್ಲ ಬರಿ ಚಂದದ ಬೊಗಳೆ
ಬೆಳಗ್ಯೆ ಎದ್ದಲ್ಲಿಂದ ಸಂಜೆ ಬೀಳುವಲ್ಲಿಯವರೆಗೂ......
ಯಾವುದಾದರೊಂದು ಕರಾಳ ರೂಪದಲ್ಲಿ
ನಮ್ಮೆಲ್ಲರ ಕಾಡುತ್ತಲೆ ಇರುತ್ತದೆ ಈ ಜಾತಿಯ ರಗಳೆ,
ನಾಮ ಜುಟ್ಟು ಜನಿವಾರಗಳನ್ನ ಹೊತ್ತಿರಲೇಬೇಕಿಲ್ಲ
ಮನದ ತುಟಿಯಂಚಲ್ಲಿ ಅಲ್ಲಾ ಇಲ್ಲಾ ಏಸುವಿನ ಜಪದ ಮತ್ತಿರಲೇಬೇಕಿಲ್ಲ.....
ಸೈತಾನರು ಕಾಯುತ್ತಲೇ ಇರುತ್ತಾರೆ ಕೊನೆವರೆಗೆ
ತಪ್ಪಿಸಿ ಕೊಳ್ಳೋದು ಕಡು ಕಷ್ಟ ಈ ಜಾತಿಯತೆಯ ಅಂಗಿ ಬಲು ದೊಗಳೆ//




ಮನದ ಕಿಟಕಿಯ ಸದಾ
ತೆರೆದಿದ್ದರೆ ಸಾಕು,
ಇಲ್ಲಸಲ್ಲದ ಆದರ್ಶದ ನುಡಿಗಳ ದೇಶಾವರಿಯ ಧಾಟಿಯಲ್ಲಿ
ಅದ್ಯಾಕೆ ಆಡಿಕೊಂಡಿರಬೇಕು?/
ತೋರಿಕೆಯ ನಿತ್ಯ ಸ್ವತಂತ್ರ್ಯರ ಹಾವಳಿಯೆ ಜಗದಲ್ಲಿ ಬಹಳ
ಮೆಲ್ಲನೆ ನಿಮ್ಮ ಕುಲದ ನೆಲೆಯನರಿವತ್ತ
ಪರಿಚಯವಾಗುತ್ತಲೇ ಇಳಿಬಿಡುತ್ತಾರೆ ಮನಸೊಳಗೊಂದು ಗಾಳ,
ಹಾಗೆ ಕೇಳಿದ ಮಾತ್ರಕ್ಕೆ ತಪ್ಪು ಅವರದ್ದೂ ಅಲ್ಲ
ಹೆಡ್ಡರಂತೆ ಹೆತ್ತವರು ಅಂಟಿಸಿದ ಪಂಗಡ ನಾಮದ ಕಿರೀಟವನ್ನ.....
ಇನ್ನೂ ಹುಸಿ ಹೆಮ್ಮೆಯಿಂದ ಹೊತ್ತೇ ನಾವು ತಿರುಗುತ್ತಿದ್ದೀವಲ್ಲ?!//