Thursday, March 21, 2013

ತುಳುಗಾದೆ-೫೦








"ಬಪ್ಪನಾಡುಗು ಪೋದು ಡೋಲು ಗುದ್ಯರೆ ಆವೋಲಿ ಈ"


{ ಸಾಮಾನ್ಯವಾಗಿ ವಿದ್ಯಾಭ್ಯಾಸದಲ್ಲಿ ಹಿಂದುಳಿದ ತುಳುನಾಡಿನ ಪುಟ್ಟ ಮಕ್ಕಳನ್ನ ಬೈಯುವಾಗ ಹಿರಿಯರು ಹೇರಳವಾಗಿ ಬಳಸುವ ಬೈಗುಳಗಳಲ್ಲಿ ಪ್ರಮುಖವಾದುದು ಇದು. ನಿರರ್ಥಕ, ನಿಶ್ಪ್ರಯೋಜಕ, ನಿರಂತರ ನಿಧಾನಿಯನ್ನ ಹೀಗೆ ಹೇಳಿ ಅವರಲ್ಲಿ ಅವಮಾನದ ಕಿಚ್ಚು ಹೊತ್ತಿಸುವಂತೆ ಮಾಡುವ ಹುನ್ನಾರ ಈ ಬೈಗುಳದ ಹಿನ್ನೆಲೆಯಲ್ಲಿ ಅವಿತಿದೆ. ಬಪ್ಪನಾಡು ಕೊಚ್ಚಿ-ಮುಂಬೈ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೧೭ರಲ್ಲಿ ಮಂಗಳೂರಿನಿಂದ ಉಡುಪಿಯತ್ತ ಸಾಗುವಾಗ ಸಿಗುತ್ತದೆ. ಮುಲ್ಕಿ ಪೇಟೆಯನ್ನ ದಾಟಿ ಕೆಲವೆ ಫರ್ಲಾಂಗುಗಳ ದೂರ ಕ್ರಮಿಸಿದಲ್ಲಿ ಎಡಕ್ಕೆ ಕಡಲಕೆರೆಯ ದಿಕ್ಕಿಗೆ ತುಳುನಾಡನ್ನ ಸಂದರ್ಶಿಸುವ ಆಸ್ತಿಕ ಭಕ್ತರ ಯಾತ್ರಾಸ್ಥಳಗಳಲ್ಲೊಂದಾದ ಬಪ್ಪನಾಡಿನ "ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ"ವಿದೆ. ಇದರ ಹಿನ್ನೆಲೆ ಕೊಂಚ ರೋಚಕ. ಈ ಗಾದೆ ನೇರವಾಗಿ ಈ ದೇವಸ್ಥಾನದಲ್ಲಿರುವ ಬೃಹದಾಕಾರದ ಡೋಲಿಗೆ ನೇರವಾಗಿ ಸಂಬಂಧಿಸಿದ್ದಾದರೂ ಸ್ವಲ್ಪ ಏಂಟು ಶತಮಾನಗಳಿಗೂ ಮೀರಿ ವಯಸ್ಸಾಗಿರುವ ಹತ್ತಿರ ಹತ್ತಿರ ಇಪ್ಪತ್ತು ತಲೆಮಾರುಗಳನ್ನ ಕಂಡಿರುವ ಈ ದೇವಸ್ಥಾನದ ಹಿನ್ನೆಲೆಯನ್ನ ಅರಿತು ಮುಂದಡಿಯಿಡೋಣ. ಇಲ್ಲಿ ನಿಮ್ನವರ್ಗದ ಮಂದಿಯನ್ನ ತುಚ್ಛೀಕರಿಸುವ ಎರಡು ಘಟನೆಗಳು ಸಂಭವಿಸುತ್ತವೆ.


ನಂದಿನಿ ಹಾಗೂ ಶಾಂಭವಿ ನದಿಗಳು ಜಂಟಿಯಾಗಿ ಕಡಲ ಕರೆಯಾಲಿಸಲು ಧಾವಿಸುವಲ್ಲಿ ನಡುಗುಡ್ಡೆಯಲ್ಲಿರುವ ಬಪ್ಪನಾಡು ಹಿಂದೊಮ್ಮೆ ತೆಂಗಿನ ತೋಟವಾಗಿತ್ತಂತೆ. ದಾರಿಗಾಸುರನೆಂಬ ರಾಕ್ಷಸನನ್ನ ವಧಿಸಿ ಕನ್ಯಾಕುಮಾರಿಯಿಂದ ಕಡಲ ತೀರವಾಗಿಯೆ ಉತ್ತರ ದಿಕ್ಕಿನತ್ತ ಹೊರಟಿದ ಸಪ್ತಮಾತೃಕೆಗಳು ಅಲ್ಲಿ ಮುಟ್ಟುವಾಗ ದಣಿವಾರಿಸಿಕೊಳ್ಳಲಿಕ್ಕೆ ತೋಟದವನಿಂದ ಎಳನೀರನ್ನ ಕೇಳಿದರಂತೆ, ಅವನು ಸಂತೋಷದಿಂದ ಕೆತ್ತಿ ಕೊಟ್ಟದ್ದ ಬೊಂಡದ ನೀರನ್ನ ಅವರಲ್ಲೊಬ್ಬಳಾದ ಭಗವತಿ ಹೀರುವಾಗ ಆತ ಶೂದ್ರನೆಂದು ಅರಿತು ಉಳಿದವರು ಅವ ಕೆತ್ತಿ ಕೊಡುವ ಎಳನೀರನ್ನ ಕುಡಿಯಲೊಪ್ಪದೆ ಮೈಲಿಗೆಯಾದ ಭಗವತಿಯನ್ನ ಅಲ್ಲಿಯೆ ಬಿಟ್ಟು ಮುಂದೆ ಸಾಗಿ ಹೋದರಂತೆ! ಭಗವತಿ ಅಲ್ಲಿಯೆ ಲಿಂಗ ಮತ್ತು ಯೋನಿಯ ರೂಪದಲ್ಲಿ ಸ್ಥಿತಳಾದಳಂತೆ. ಹೀಗಿದ್ದರೂ ಈಗಿರುವ ದೇವಸ್ಥಾನ ಕಟ್ಟಿಸಲ್ಪಟ್ಟದ್ದು ಎಂಟು ಶತಮಾನಗಳ ಹಿಂದೆ ಕೇರಳ ಮೂಲದ ಮುಸಲ್ಮಾನ ಮಾಪಿಳ್ಳೆ ವ್ಯಾಪಾರಿ ಬಪ್ಪ ಬ್ಯಾರಿಯಿಂದ. ಆತನೊಬ್ಬ ವ್ಯಾಪಾರಿಯಾಗಿದ್ದ. ತನ್ನ ವ್ಯಾಪಾರಕ್ಕಾಗಿ ತುಳುನಾಡಿಗೆ ಬಂದಿದ್ದ ಬಪ್ಪಬ್ಯಾರಿ ಅಲ್ಲಿ ತಾನು ಕೊಂಡ ಸಾಮಾನುಗಳನ್ನೆಲ್ಲ ಹಾಯಿ ನೌಕೆಯಲ್ಲಿ ಏರಿಸಿ ಶಾಂಭವಿ ನದಿಯ ಮೂಲಕ ಕಡಲಿಗೆ ಹೊಕ್ಕುವ ಸನ್ನಾಹದಲ್ಲಿದ್ದಾಗ ಆಶ್ಚರ್ಯಕರವಾಗಿ ಏಕಾಏಕಿ ನದಿಯ ನೀರು ರಕ್ತವರ್ಣಕ್ಕೆ ತಿರುಗಿ ಕೆಂಪಾಗಿ ಹರಿಯ ತೊಡಗಿತಂತೆ. ಅದನ್ನ ಕಂಡು ಹೆದರಿದ ಧರ್ಮಿಷ್ಠನಾದ ಬ್ಯಾರಿ ನಮಾಜು ಮಾಡಿ ದೇವರಿಗೆ ಮೊರೆಯಿಟ್ಟು ಅಲ್ಲಿಯೆ ನೌಕೆಯ ಲಂಗರು ಹಾಕಿ ಮರದ ನೆರಳಿನಲ್ಲಿ ನಿದ್ದೆ ಹೋದನಂತೆ. ಅವನ ಕನಸಿನಲ್ಲಿ ಬಂದದ್ದು ಮಾತ್ರ ನಮ್ಮ ಭಗವತಿ! "ನನ್ನ ನಂಬು, ಲೋಕಕ್ಕಿರುವುದು ಒಂದೆ ದೈವ, ಹೆಸರು ಹಲವಷ್ಟೆ! ನನಗೊಂದು ದೇವಸ್ಥಾನ ಕಟ್ಟಿಸಿ ನೆಲೆ ಮಾಡಿಡು. ನಿನ್ನ ರಕ್ಷಣೆಯ ಭಾರ ನನ್ನದು" ಎಂದು ಅಭಯ ನೀಡಿದಳಂತೆ. ಅದಕ್ಕೆ ಬದ್ಧನಾದ ಬ್ಯಾರಿ ಉತ್ತರಕ್ಕೆ ಹೋಗಿ ವ್ಯಾಪಾರ ಮುಗಿಸಿ ಬಂದವ ಮುಲ್ಕಿಯ ಆಳರಸ ದುಗ್ಗಣ್ಣ ಸಾಮಂತನಲ್ಲಿ ಸ್ವಪ್ನದ ವಿಚಾರ ಅರುಹಿ ಸಹಾಯ ಯಾಚಿಸಿದ. ಸಾಮಂತ ದಯಪಾಲಿಸಿದ ಜಾಗದಲ್ಲಿ ಅವನೆ ಕೊಟ್ಟ ಆಳುಗಳಿಂದ ತನ್ನ ಸ್ವಂತ ಖರ್ಚಿನಲ್ಲಿ ದೇವಿಗೊಂದು ಅಂದದ ದೇವಸ್ಥಾನವನ್ನ ಕಟ್ಟಿಸಿದ. ಅಂದಿನಿಂದ ದೇವಿಯ ಆರಾಧಕನಾದ ಆತ ಸನಿಹದಲ್ಲಿಯೆ ಮನೆ ಕಟ್ಟಿಕೊಂಡು ಶಾಶ್ವತವಾಗಿ ಅಲ್ಲಿಯೆ ನೆಲೆ ನಿಂತ. ೈಂದಿಗೂ ಆತನ ಮೂಲ ಮನೆ ಅಲ್ಲಿದ್ದು ಅವನ ವಂಶಜರು ಅಲ್ಲಿ ವಾಸವಾಗಿದ್ದಾರೆ. ದೇವಿಯ ಉತ್ಸವ ಜಾತ್ರೆಗಳ ಸಂದರ್ಭಗಳಲ್ಲಿ ಮೆರವಣಿಗೆ ಆ ಮನೆಯ ಮುಂದೆ ನಿಂತು ಬಪ್ಪ ಬ್ಯಾರಿಯ ವಂಶಜರಿಗೆ ಮೊದಲ ಆದ್ಯತೆಯ ಪ್ರಸಾದ ಬಟವಾಡೆಯಾದ ನಂತರವೆ ಉಳಿದೆಲ್ಲರಿಗೂ ಅದನ್ನ ಹಂಚಲಾಗುತ್ತದೆ! ಅವರೂ ಸಹ ಹೂವು, ಹಣ್ಣು-ಕಾಯಿಯನ್ನ ದೇವಿಗೆ ಅರ್ಪಿಸಿ ತಮ್ಮ ಶ್ರದ್ಧಾ ಭಕ್ತಿಯನ್ನ ಪ್ರಕಟಿಸುತ್ತಾರೆ.


ಈಗ ಗಾದೆಗೆ ಮರಳೋಣ. ಅಲ್ಲಿನ ಪ್ರಮುಖ ಆಕರ್ಷಣೆ ಅಲ್ಲಿರುವ ದೊಡ್ಡ ಗಾತ್ರದ ಡೋಲು ಮಾತ್ರವಲ್ಲದೆ ವರ್ಷಾವಧಿ ಜಾತ್ರೆಯಲ್ಲಿ ಅಲ್ಲಿ ಜಿಲ್ಲೆಯಾದ್ಯಂತದಿಂದ ಡೋಲು ಪರಿಣತ ಕೊರಗರ ಹಿಂಡು ನೆರೆದು ದೇವಿಗೆ ತಮ್ಮ ಡೋಲು ಸೇವೆ ಸಲ್ಲಿಸುತ್ತಿದ್ದುದು ಪದ್ಧತಿ. ತುಳುನಾಡಿನ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅತ್ಯಂತ ಕೀಳಾಗಿ ಪರಿಗಣಿಸಲ್ಪಡುವ ಕೊರಗರು ಇತ್ತೀಚೆಗೆ ಹಾಗೆ ಡೋಲು ಬಡಿಯಲು ಅಲ್ಲಿಗೆ ಧಾವಿಸುವುದು ತಮ್ಮ ಗೌರವಕ್ಕೆ ಕುಂದೆಂದು ಭಾವಿಸುವುದರಿಂದಲೂ, ಈಗೀಗ ಆಧುನಿಕ ಶಿಕ್ಷಣ ಪದ್ಧತಿ ಅವರಲ್ಲಿ ಮೂಡಿಸಿರುವ ಸಾಮಾಅಜಿಕ ಜಾಗ್ರತಿಯಿಂದಲು ಅವರು ಅಲ್ಲಿಗೆ ಬರುವುದು ಇತ್ತೀಚೆಗೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಲ್ಲಿನ ದೇವಸ್ಥಾನದ ಮುಂದಿರುವ ಸರಿ ಸುಮಾರು ಎರಡ್ಮೂರು ಟನ್ ತೂಕದ ಕೊಡಿಮರದ ದಂಬೆಗಲ್ಲು ಅರ್ಥಾತ್ ದೇವಸ್ಥಾನದ ಕಲ್ಲಿನ ದ್ವಜಸ್ಥಂಭವನ್ನ ತುಳುನಾಡಿನ ಎಳೆಯರ ಪಾಲಿನ "ಹೀಮ್ಯಾನ್" ಹೊಟ್ಟೆಬಾಕ "ಅಗೋಳಿ ಮಂಜಣ" ಒಬ್ಬನೆ ನೆರೆಯ ಗ್ರಾಮದಿಂದ ಹೊತ್ತು ತಂದು ಹಾಕಿದ್ದು ಎನ್ನುವ ಪ್ರತೀತಿಯಿದೆ. ಅಲ್ಲಿರುವ ಬೃಹತ್ ಡೋಲನ್ನ ಕಟ್ಟುಮಸ್ತಾದ ಒಬ್ಬರಿಂದ ಬಾರಿಸುವುದು ಅಸಾಧ್ಯ! ಆದರೂ ಏನಕ್ಕೂ ಪ್ರಯೋಜನಕ್ಕೆ ಬಾರದ ನಿರುಪಯೋಗಿಗಳಷ್ಟೆ ಆ ಕೆಲಸಕ್ಕೆ ಯೋಗ್ಯರು ಎನ್ನುವ ನಂಬಿಕೆ ತುಳುವರಲ್ಲಿ ಬೆಳೆದು ಬಂದಿದೆ. ಯಾವುದಕ್ಕೂ ಕೆಲಸಕ್ಕೆ ಬಾರದವನಿಗೆ ಕಟ್ಟಕಡೆಗೆ ಉಳಿಯುವ ಘನಕಾರ್ಯ ಬಪ್ಪನಾಡಿಗೆ ಹೋಗಿ ಡೋಲು ಗುದ್ದುವುದು ಎನ್ನುವುದು ಇದರ ಭಾವ. ಬಹುಷಃ ಆಳದಲ್ಲಿ ಅದನ್ನ ಬಾರಿಸುವವರು ಕೊರಗರಾಗಿರುವುದರಿಂದಲೂ, ಅವರ ದರ್ಜೆ ಅಲ್ಲಿನ ಮಟ್ಟಿಗೆ ನಿಶ್ಕೃಷ್ಟವಾಗಿರುವುದರಿಂದಲೂ ಜಾತಿಯತೆಯನ್ನ ಹೋಲಿಸಿ ಗೇಲಿ ಮಾಡುವ ಗುಣ ಆಳದಲ್ಲಿ ಈ ಗಾದೆ ಹುಟ್ಟಿನ ಹಿಂದಿದೆ ಅನ್ನಿಸುತ್ತದೆ. ಅದೇನೆ ಇದ್ದರೂ ಬಪ್ಪನಾಡಿನ ದೊಡ್ಡ ಡೋಲು ತುಳುವರ ಹೆಮ್ಮೆಯ ಆಸ್ತಿ.}



( ಬಪ್ಪನಾಡುಗು ಪೋದು ಡೋಲು ಗುದ್ಯರೆ ಆವೋಲಿ ಈ = ಬಪ್ಪನಾಡಿಗೆ ಹೋಗಿ ಡೋಲು ಗುದ್ದಲು ಆಗಬಹುದು ನೀನು!.)

ತುಳುಗಾದೆ-೪೯


"ಊರುಗೊರಿ ಪೆರ್ಗಡೆ, ಪುಂಡುಗೊಂಜಿ ದಿಡೆಂಬರ್"


{ ಊರಿನ ಪಟೇಲಿಕೆ ಹಾಗೂ ಶ್ಯಾನುಭೋಗಿಕೆಯ ದರ್ಬಾರು ಜಾರಿಯಲ್ಲಿದ್ದ ದಿನಗಳಲ್ಲಿ ಈ ಗಾದೆ ಚಾಲ್ತಿಗೆ ಬಂದಿರಬಹುದು. ಹಗಡೆಯೆಂದರೆ ಆತ ಊರಿನ ಅಧಿಕಾರಿ ಹಾಗೂ ಕಂದಾಯ ಪ್ರಮುಖನಾಗಿರುತ್ತಾನೆ. ಅವನ ಅಧಿಕಾರ ವ್ಯಾಪ್ತಿಯಲ್ಲಿ ಗ್ರಾಮ, ಮಾಗಣೆ, ಊರು ಇವು ಹಿಂದೆಲ್ಲ ತುಳುನಾಡಿನಲ್ಲಿ ಇರುತ್ತಿತ್ತು. ತುಳುನಾಡಷ್ಟೆ ಅಲ್ಲದೆ ನೆರೆಯ ಮಲೆನಾಡು ಹಾಗೂ ಕರುನಾಡ ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲೂ ಹೆಗ್ಗಡಿಕೆ ಪದ್ಧತಿ ಚಲಾವಣೆಯಲ್ಲಿತ್ತು. ಬ್ರಾಹ್ಮಣ, ಜೈನ, ಬಂಟ, ಗೌಡ, ಕ್ಷತ್ರಿಯ, ಕೊಂಕಣಿ, ನಾಮಧಾರಿ ಹಾಗೂ ಅಪರೂಪಕ್ಕಲ್ಲಲ್ಲಿ ಕ್ಯಾಥೋಲಿಕ್ ಕ್ರೈಸ್ತರಲ್ಲೂ ಶತಮಾನಗಳ ಹಿಂದೆ ಮತಪರಿವರ್ತಿತರಾಗಿದ್ದರೂ ತಮ್ಮ ಕುಲನಾಮವನ್ನ ಹಾಗೆಯೆ ಉಳಿಸಿಕೊಂಡ ಹೆಗ್ಡೆ, ಹೆಗ್ಗಡೆ, ಹೆಗಡೆ ಹೀಗೆ ಹತ್ತಿರ ಹತ್ತಿರ ಎಪ್ಪತೆರಡು ವಿಭಿನ್ನ ಬಗೆಯ ಹೆಗಡೆಗಳನ್ನ ತ್ರಿವಳಿ ಕರಾವಳಿ ಜಿಲ್ಲೆಗಳ ಸಹಿತ ನೆರೆಯನಾಲ್ಕು ಮಲೆನಾಡಿನ ಜಿಲ್ಲೆಗಳಲ್ಲೂ ಕಾಣಬಹುದು. ಹೆಗಡೆ ಆಯಾ ಊರಿನ ನ್ಯಾಯಾಧಿಕಾರಿಯಾಗಿಯೂ ಇರುತ್ತಿದ್ದ. ಊರಿನ ಹತ್ತು ಸಮಸ್ತರ ಜೊತೆ ಸಮಾಲೋಚಿಸಿ ತನ್ನ ಮನೆಯಂಗಳದಲ್ಲಿ ನೆರೆಯುತ್ತಿದ್ದ ಪಂಚಾಯ್ತಿಗಳಲ್ಲಿ ತನ್ನ ವ್ಯಾಪ್ತಿಯ ಜನರ ದೂರು ದುಮ್ಮಾನಗಳನ್ನ ಆಲಿಸಿ ನ್ಯಾಯ ನೀಡುವ ಕರ್ತವ್ಯ ಪಾಲಿಸುತ್ತಿದ್ದ.


ಪ್ರಗ್ ದ್ರಾವಿಡ ಮೂಲದ ತುಳು ಹಾಗೂ ಕನ್ನಡದಲ್ಲಿ ಪೆರ್ಗಡೆಯಾಗಿದ್ದ ಪದವಿಯ ತತ್ಸಮಾರ್ಥವೆ ಇಂದಿನ ಹೆಗ್ಗಡೆ. ಇಂದು ಪಾಳೆಪಟ್ಟುಗಳು ನಿರ್ನಾಮವಾಗಿ, ರಾಜಾಳ್ವಿಕೆ ಹೆಸರಿಲ್ಲದಂತೆ ಆಗಿದ್ದರೂ ಸಹ ಹೆಗಡೆರ ದರ್ಬಾರು ನಾಮಾವಷೇಶವಾಗಿದೆಯೆ ಹೊರತು ಅವರ ಜಮೀನ್ದಾರಿ ಗತ್ತು-ಗೈರತ್ತಲ್ಲ. ಸಾಮಾನ್ಯವಾಗಿ ಹೆಗಡೆಗಳಾದವರು ನಿರ್ಗತಿಕರಲ್ಲ. ಅವರಿಗೆ ಜಮೀನ್ದಾರಿಕೆಯ ಹಿನ್ನೆಲೆ ವಂಶಪಾರಂಪರ್ಯವಾಗಿ ಬಂದಿರುತ್ತದೆ. ಹೀಗಾಗಿ ಅದರ ಪಳೆಯುಳಿಕೆಯಾಗಿ ಇಂದಿಗೂ ಊರೊಟ್ಟಿನ ಕೆಲಸಗಳಲ್ಲಿ, ಕಂಬಳ-ಕೋಲ-ತಂಬಿಲ-ನೇಮ-ನಡಾವಳಿಗಳಲ್ಲಿ ಊರಿನ ಗ್ರಾಮಾಧಿಕಾರದ ಗುತ್ತುಗಳ ಹೆಗಡೆಯರಿಗೆ ಅಗ್ರಸ್ಥಾನ ಮೀಸಲಾಗಿರುತ್ತದೆ. ಉತ್ತರಕನ್ನಡ ಜಿಲ್ಲೆ ಹಾಗೂ ಮಲೆನಾಡಿನಲ್ಲಿ ಇಂದಿಗೆ ಸಾಂಸ್ಕೃತಿಕವಾಗಿ ಹೆಗಡೆಗಳ ಮಹತ್ವ ಗೌಣವಾಗುತ್ತಾ ಬಂದಿದ್ದರೂ ತುಳುನಾಡಿನಲ್ಲಿ ಮಾತ್ರ ಇಂದಿಗೂ ಅವರಿಗೆ ಪಟ್ಟದ ಹೊಣೆ ಹೊರಿಸುವ ಆಚರಣೆಯ ಪಳಯುಳಿಕೆಗಳಾದ "ಗಡಿ ಪತ್ತಾವುನು" ಅಂದರೆ ಗಡಿ ಹಿಡಿಸುವುದು ಅರ್ಥಾತ್ ಅಧಿಕಾರದ ಉಂಗುರ-ಕಪ್ಪ ತೊಡಿಸಿ, ಅದರ ದ್ಯೋತಕವಾದ ಓಂಟಿಯನ್ನ ಕಿವಿಗೆ ಹಾಕಿ ಪಟ್ಟದ ಕತ್ತಿಯನ್ನ ಕೈಗೆ ಕೊಟ್ಟು ಇಲ್ಲದ ಅಧಿಕಾರದ ನಾಮಕಾವಸ್ತೆ ವರ್ಗಾವಣೆ ಮಾಡುವ ಆಚರಣೆಗಳು ರೂಢಿಯಲ್ಲಿವೆ. ಹೀಗೆ ಗಡಿ ಹಿಡಿದ ಹೆಗಡೆ ಮುಂದೆ ನೇಮ-ನಿಷ್ಠನಾಗಿದ್ದು. ಬ್ರಾಹ್ಮಣನಲ್ಲದಿದ್ದ ಪಕ್ಷದಲ್ಲಿ ತನ್ನ ಬಾಯಿ ಚಪಲವನ್ನ ನಿಯಂತ್ರಿಸಿಕೊಂಡು ಮಾಂಸಾಹಾರವನ್ನ ಶಾಶ್ವತವಾಗಿ ವರ್ಜಿಸಿ ಗುತ್ತಿನ, ಮನೆಯ, ಊರಿನ ದೇವರ-ದೈವದ ಪ್ರಾತಿನಿಧಿತ್ವವನ್ನ ವಹಿಸಿಕೊಳ್ಲಬೇಕಾಗುತ್ತದೆ. ಊರಿನ ಸಾಂಸ್ಕೃತಿಕ ರಾಯಭಾರಿಯಾಗುವ ಆತ ತನ್ನ ಗಾಂಭೀರ್ಯವನ್ನ ಉಳಿಸಿಕೊಳ್ಲಲು ಸದಾ ಹೆಣಗಬೇಕಾಗುತ್ತದೆ. ಅವನನ್ನ ಆಗ ಜನ ದೇವರ ಪ್ರತಿನಿಧಿಯನ್ನಾಗಿ ಭಾವಿಸಿ ಅತಿ ಗೌರವದಿಂದ ನಡಿಸಿಕೊಳ್ಳುತ್ತಾರೆ ಹಾಗೂ ಆತನ ಮಾತಿಗೆ ಮೊದಲ ಮನ್ನಣೆ ನೀಡುತ್ತಾರೆ.


ಆದರೆ ಹಿಂದೆಲ್ಲ ಈ ಅಧಿಕಾರದ ಧಾರಾಳ ದುರುಪಯೋಗವೂ ಆಗಿದೆ. ಊರೆ ನನ್ನದು ಎಂದು ಕೊಂಡ ಕೆಲವು ಅಧಿಕಾರೋನ್ಮತ್ತ ಹೆಗಡೆಗಳು ಕಂಡಕಂಡವರ ಬೇಲಿ ಹಾರಿ ಅವರ ಹೆಂಗಸರನ್ನ ಕೆಡೆಸಿ ತಮ್ಮ ಮುಖಕ್ಕೆ ತಾವೆ ಮಸಿ ಬಳಿದುಕೊಂಡಿದ್ದಾರೆ. ಸಮಾಜದ ಅನೇಕ ಕೆಳವರ್ಗದ ಹಂಗಸರನ್ನ ಒತ್ತಯಪೂರ್ವಕವಾಗಿ ಉಪಪತ್ನಿಯರನ್ನಾಗಿ ಇಟ್ಟುಕೊಂಡು ಆ ಜಾತಿಯ ಜನರ ಒಡಲ ಸಂಕಟಕ್ಕೆ ಕಾರಣವಾಗಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಬಡವರ-ಗೇಣಿದಾರರ ಮೇಲೆ ಮನಸೋ ಇಚ್ಛೆ ದೌರ್ಜನ್ಯ ನಡೆಸಿ ಜಮೀನ್ದಾರಿಕೆಯ ಸೊಕ್ಕಿನಲ್ಲಿ ಮೆರೆದಾಡಿ ಮತ್ತೆ ಮೂಲೆ ಸೇರಿದ್ದಾರೆ. ಅಂತಹ ದುರುಳರನ್ನ ಎದುರಿಗೆ ಬೈದು ಆಕ್ರೋಶ ವ್ಯಕ್ತ ಪಡಿಸಲಾಗದ ಅನೇಕ ಸಂತ್ರಸ್ತ ಬಡವರು ತಮ್ಮ ನೋವನ್ನ ಅಸಹಾಯಕ ಸಿಟ್ಟನ್ನ ಈ ಗಾದೆಯ ಮೂಲಕ ಊರಿನ ದೇವರಿಗೆ ಹರಕೆಗೆ ಬಿಟ್ಟ ಕೋಣಕ್ಕೋ, ಹೋರಿಗೋ ಇಂತಹ ಪುಂಡ ಹೆಗಡೆಗಳನ್ನ ಹೋಲಿಸಿ ಗೇಲಿ ಮಾಡುತ್ತ ತಮ್ಮ ಸುಪ್ತ ಸಂಕಟವನ್ನ ಹೊರಹಾಕಿ ನಿರುಮ್ಮಳವಾಗಿದ್ದರೆ ಅನ್ನಿಸುತ್ತದೆ. ದೇವರಿಗೆ ಹರಕೆಗೆ ಬಿಟ್ಟ ಹೋರಿ ಕಂಡವರ ಬೇಲಿ ಹಾರಿ ಸಿಕ್ಕಸಿಕ್ಕಲೆಲ್ಲ ಭಿಢೆಯಿಲ್ಲದೆ ಮೇಯ್ದು ಕೊಬ್ಬಿರುತ್ತದೆ. ಸಾಮಾನ್ಯವಾಗಿ ದೇವರ ಸ್ವತ್ತದು ಎಂದು ಭಾವಿಸಿದ ಆಸ್ತಿಕರು ತಮಗೆ ಅದರ ಪುಂಡಾಟಿಕೆಯಿಂದ ಹಾನಿಯಾದರೂ, ಪದೆಪದೆ ಕಟ್ಟಿದ ಬೇಲಿ ಮುರಿದುಹೋಗಿ ತಾವು ತಮ್ಮ ಹಿತ್ತಲ ಕಷ್ಟಪಟ್ಟು ಬೆಳೆಸಿದ ಹಸಿರುವಾಣಿ ಹಾಳಾದರೂ ಅವಡುಗಚ್ಚಿ ಸಹಿಸಿಕೊಳ್ಳುತ್ತಾರೆಯೆ ಹೊರತು ಆ ಪುಂಡ ಹೋರಿಗೆ ಹೊಡೆದು ಬುದ್ಧಿ ಕಲಿಸುವ ಧೈರ್ಯ ಮಾಡುವುದಿಲ್ಲ. ಅದನ್ನೆ ಸೂಚ್ಯವಾಗಿ ಇಲ್ಲಿ ಹೆಗಡೆಯರಿಗೆ ಹೋಲಿಸಲಾಗಿದೆ. ಇದೇನೆ ಇದ್ದರೂ ಅಂತಹ ದುಷ್ಟರ ಸಂಖ್ಯೆ ತೀರ ವಿರಳ. ಸಾಮಾನ್ಯವಾಗಿ ಅಧಿಕಾರ ದಂಡ ಹಿಡಿದ ದಂಡಾಧಿಕಾರಿಯಾದ ಹೆಗಡೆಗಳು ನ್ಯಾಯನಿಷ್ಠುರರಾಗಿರುವುದೆ ಹೆಚ್ಚು. ಇವತ್ತಿನ ದಿನಮಾನದಲ್ಲಂತೂ ಯಾವುದೆ ಸರಕಾರಿ ಕೃಪಾಶಿರ್ವಾದವನ್ನು ಹೆಗಡೆಗಳು ಬಯಸರು, ಸರ್ವತಂತ್ರ ಸ್ವತಂತ್ರ ವ್ಯಕ್ತಿತ್ವದ ನಡುವಳಿಕೆಯಿರುವ ಇವರು ಸರಕಾರಿ ದರ್ಪಕ್ಕಂತೂ ಮೂರುಕಾಸಿನ ಬೆಲೆ ಕೊಡರು. ರಾಜಕೀಯ ಒತ್ತಡಕ್ಕಂತೂ ಎಂದೂ ಮಣಿಯರು. ದರ್ಪದ ನಡುವಳಿಕೆಗಳಿಗೆ ಯಾವತ್ತಿಗೂ ಇವರಿಂದ ಕವಡೆ ಕಾಸಿನ ಕಿಮ್ಮತ್ತು ದಕ್ಕದು. ಪ್ರಸಕ್ತ ಕಾಲಮಾನದ ಉದಾಹರಣೆಗಳನ್ನೆ ತೆಗೆದುಕೊಳ್ಳುವುದಾದರೆ ದೇಶದ ಮೊತ್ತ ಮೊದಲ ಕಾಂಗ್ರೆಸ್ಸೇತರ ಕೇಂದ್ರ ಸರಕಾರದ ಕಾಲದಲ್ಲಿ ಲೋಕಸಭೆಯ ಅಧ್ಯಕ್ಷರಾಗಿದ್ದ ಜಸ್ಟಿಸ್ ಕೆ ಸದಾನಂದ ಹೆಗ್ಡೆ, ಅದೆಂದೋ ಪದ್ಮವಿಭೂಷಣರಾಗ ಬಹುದಾಗಿದ್ದರೂ ಡೊಗ್ಗು ಸಲಾಮು ಹೊಡೆಯದ ಕಾರಣ ಇನ್ನೂ ಪದ್ಮಶ್ರಿಯಾಗಿಯೆ ಉಳಿದಿರುವ ಯಕ್ಷ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ, ದೂರು ನೂರಿದ್ದರೂ ಧರ್ಮಸ್ಥಳವನ್ನ ಶಿಕ್ಷಣ ಹಾಗೂ ಧಾರ್ಮಿಕ ಸಾಮ್ರಾಜ್ಯವಾಗಿ ಕಟ್ಟಿ ಬೆಳೆಸುತ್ತಿರುವ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ, ಸಾಕಷ್ಟು ಅಪಪ್ರಚಾರಕ್ಕೆ ಒಳಗಾದ ಕಾಬೆಟ್ಟು ಏಳಾಡುಗುತ್ತಿನ ದಾನಿ ಶಿವಪ್ಪ ಹೆಗಡೆ, ನರಿಬುದ್ಧಿಯ ರಾಜಕರಣಿಯೆಂದೆ ಹೆಸರಾದ ಆದರೆ ಕರ್ನಾಟಕ ಕಂಡ ದಕ್ಷ ಮುಖ್ಯಮಂತ್ರಿಯಾಗಿದ್ದ ಚತುರ ರಾಜಕಾರಣಿ ರಾಮಕೃಷ್ಣ ಹೆಗಡೆ,   ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ತಂದು ಕೊಟ್ಟರೂ ಪಟ್ಟ-ಪದವಿಗೆ ಯಾವತ್ತೂ ಲಾಬಿ ಮಾಡದೆ ಎಲೆಮರೆಯಲ್ಲೆ ಕಾಲ ಹಾಕುವ ನಾಗೇಶ ಹೆಗಡೆ, ಲೋಕಾಯುಕ್ತರಾಗಿ ಭ್ರಷ್ಟಾಚಾರಿ ಅಧಿಕಾರಸ್ಥರನ್ನ ಮುಲಾಜಿಲ್ಲದೆ ಬಲಿ ಹಾಕಿದ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಏಕಪಕ್ಷೀಯತೆಗೆ ಮಣಿಯದ ನಿಶ್ಪಕ್ಷಪಾತ ಸಂಶೋಧನೆಯಲ್ಲಿ ನಿರತರಾದ ಶ್ರೀಮತಿ ಇಂದಿರಾ ಹೆಗ್ಡೆ, ವೈಚಾರಿಕ ಭಿನ್ನಭಿಪ್ರಾಯಕ್ಕೆ ಎಡೆ ಕೊಟ್ಟು ಸರಕಾರಿ ಅವಕೃಪೆಗೆ ಪಾತ್ರರಾದರೂ ಜನಪರ ನಡುವಳಿಕೆಯಲ್ಲಿ ಸದಾ ಎತ್ತಿದ ಕೈಯಾದ ಕಲ್ಕುಳಿ ವಿಠಲ ಹೆಗ್ಡೆ, ಮಣಿಪಾಲದ ವಿಶ್ವವಿದ್ಯಾಲಯವನ್ನ ಆರಂಭಿಕ ಉಪಕುಲಪತಿಯಾಗಿ ಕಟ್ಟಿ ಬೆಳೆಸಿದ ಡಾ ಬಿ ಎಂ ಹೆಗ್ಡೆ ಮುಂತಾದ ಮಹನೀಯರನ್ನ ಇಲ್ಲಿ ಪಟ್ಟಿ ಮಾಡಬಹುದು. ಆದರೆ ದುರುಳರು ಇವರಲ್ಲೂ ಇದ್ದರು ಹಾಗೂ ಅವರು ಇಲ್ಲಿಯೂ ನೊಂದವರ ಮೇಲೆ ಅನ್ಯಾಯಗಳನ್ನ ಎಸಗಿದರು ಅನ್ನುವುದಕ್ಕೆ ಈ ಗಾದೆ ಕನ್ನಡಿ ಹಿಡಿಯುತ್ತದೆ.)


( ಊರುಗೊರಿ ಪೆರ್ಗಡೆ, ಪುಂಡುಗೊಂಜಿ ದಿಡೆಂಬರ್ = ಊರಿಗೊಬ್ಬ ಹೆಗ್ಗಡೆ, ಪುಂಡಾಟಿಕೆಗೊಂದು  ದೇವರ ಹೋರಿ.)





Wednesday, March 20, 2013

ತುಳುಗಾದೆ-೪೮








"ಕುಟ್ಟಿ ಕುಂದಾಪುರೊಗ್ ಪೋಯಿ ಲೆಕ್ಕೊಲಾ, ವೆಂಕು ಪಣಂಬೂರುಗ್ ಪೋಯಿ ಲೆಕ್ಖೊಲಾ ಆಂಡ್"



{ ಇದೊಂದು ಅವಸರಗೇಡಿಗಳನ್ನ ಕುಚೋದ್ಯ ಮಾಡುವ ಹಾಸ್ಯದ ಗಾದೆ. ಯುಕ್ತಾ ಯುಕ್ತಾ ವಿವೇಚಿಸದೆ ಕಣ್ಣು ಕಟ್ಟಿದ ಗಾಡಿಯೆತ್ತಿನಂತೆ ಸರಿಯಾಗಿ ಪೂರ್ತಿ ವಿಷಯವನ್ನ ಅರಿತುಕೊಳ್ಳದೆ ಕೆಲಸದ ಕಳಕ್ಕೆ ಧುಮುಕುವ ಉತ್ಸಾಹಿಗಳ ಕಾಲೆಳೆಯುವುದಕ್ಕಾಗಿ ಈ ಗಾದೆ ಸೃಷ್ಟಿಯಾದಂತಿದೆ. ಕ್ರಮಬದ್ಧವಾಗಿ ಯೋಜಿಸಿ ಮುಂದಡಿಯಿಡದ ಪಕ್ಷದಲ್ಲಿ ಯಾವುದೆ ಕೆಲಸ ನಿಷಿತ ಗುರಿ ಮುಟ್ಟದೆ ಅರ್ಧದಲ್ಲೆ ನಿಲ್ಲಬಹುದು. ಹಾಗೊಂದು ವೇಳೆ ಕೊನೆ ಮುಟ್ಟಿಸಿದರೂ ಸಹ ಅದರ ಫಲಶ್ರುತಿ ಮಾತ್ರ ಶೂನ್ಯವಾಗಬಹುದು. ಅದೆ ಯೋಜಿಸಿ- ಸರಿಯಾಗಿ ಮತ್ತೊಮ್ಮೆ ಯೋಚಿಸಿ ಇಡುವ ಪ್ರತಿ ಹೆಜ್ಜೆಯೂ ಕನಿಷ್ಠ ಅಂದು ಕೊಂಡಷ್ಟಲ್ಲದಿದ್ದರೂ ಅದರ ಅರೆವಾಸಿಯಾದರೂ ಸಫ್ಲತೆಯನ್ನು ಸಿದ್ಧಿಸಿ ಕೊಡುತ್ತದೆ ಅನ್ನುವುದು ಶತವಾಸಿ ಖಂಡಿತ.


ಈ ಗದೆಯ ಎರಡು ಆವೃತ್ತಿಗಳು ತುಳುನಾಡಿನಲ್ಲಿ ಚಾಲ್ತಿಯಲ್ಲಿದ್ದು ಇಲ್ಲಿ ಆ ಎರಡೂ ಆವೃತ್ತಿಗಳನ್ನ ತುಳುವಿನಲ್ಲಿ ನೀಡಿದ್ದೇನೆ. ಆದರೆ ವಾಸ್ತವದಲ್ಲಿ ಮೇಲೆ ಬರೆದ ಗಾದೆಯ ಮೊದಲಾರ್ಧ ಕನ್ನಡದಲ್ಲಿ "ಕುಟ್ಟಿ ಕುಂದಾಪುರಕ್ಕೆ ಹೋದ ಹಾಗೆ" ಎಂದು ಬಳಕೆಯಲ್ಲಿದ್ದರೆ ಉತ್ತರಾರ್ಧ ಮಾತ್ರ ಶುದ್ಧ ತುಳುವಿನಲ್ಲಿಯೆ "ವೆಂಕು ಪಣಂಬೂರುಗ್ ಪೋಯಿ ಲೆಕ್ಖಾಂಡ್" ಎಂದು ಇಂದಿಗೂ ಚಾಲ್ತಿಯಲ್ಲಿದೆ. ಹೌದು, ಈ ಕುಟ್ಟಿ ಕುಂದಾಪುರಕ್ಕೂ, ವೆಂಕು ಪಣಂಬೂರಿಗೂ ಹೋದದ್ದದರೂ ಏಕೆ? ಎಂದು ಬಾಲ್ಯದಲ್ಲಿ ನಾನು ಅದೇನೋ ಒಂದು ಜೀವನ್ಮರಣದ ಪ್ರಶ್ನೆಯೆಂಬಂತೆ ಯೋಚಿಸುವುದು ಇತ್ತು! ಇದರ ಹಿನ್ನೆಲೆ ಅರಿವಾದದ್ದು ಇತ್ತೀಚೆಗಷ್ಟೆ, ಇಲ್ಲದಿದ್ದರೆ ಅಂತರ್ ಪಿಶಾಚಿಯಾಗಿ ಉಳಿದು ಹೋಗುತ್ತಿದ್ದೆನೇನೋ!! ಇಂದಿನ ದಿನಗಳಲ್ಲಿ ತುಳುನಾಡಿನ ತುದಿ-ಮೊದಲನ್ನ ಕೆಲವೆ ತಾಸುಗಳಲ್ಲಿ ಸಂಪರ್ಕಿಸುವುದು ಸುಲಭ ಸಾಧ್ಯವಾಗಿದೆ. ಇಲ್ಲಿನ ರಾಜ್ಯ, ರಾಷ್ಟೀಯ, ರೈಲು ರಸ್ತೆಗಳು ಅಷ್ಟು  ಯೋಗ್ಯವಾಗಿದೆ. ಆದರೆ ಇಲ್ಲಿ ಹೆಜ್ಜೆಗೊಂದರಂತೆ ಎದುರಾಗುವ "ಪಶ್ಚಿಮಘಟ್ಟದ ಪುಂಡು ನದಿಗಳ"ನ್ನ ದಾಟಿ ಒಂದೂರಿಂದ ಇನ್ನೊಂದೂರಿಗೆ ಸಂಪರ್ಕ ಸಾಧಿಸುವುದು ಸಾಹಸವೆ ಆಗಿದ್ದ ಶತಮಾನದ ಹಿಂದಿನ ದಿನಗಳಲ್ಲಿ ಈ ಗಾದೆಗೆ ಅದರದ್ದೆ ಆದ ಮಹತ್ವವಿತ್ತು. ಆಗ ತುಳುನಾಡೀನ ಉತ್ತರದ ತುದಿ ಕುಂದಾಪುರದಿಂದ ಹೊರಟು ಬಸ್ಸು, ದೋಣಿ, ಉಕ್ಕಡ, ಜಟಕಾ, ಸಂಕ ಹೀಗೆ ಸಿಕ್ಕ ಸಿಕ್ಕ ಅನುಕೂಲತೆಗಳನ್ನ ಬಳಸಿಕೊಳ್ಳುತ್ತ ಕೊಟ್ಟಕೊನೆಯ ಸುಳ್ಯವನ್ನ ಬಂದು ಸೇರುವಾಗ ವಾರವೂ ಆಗ ಬಹುದಿತ್ತು. ಮಳೆ-ಗಾಳಿಗಳಂತಹ ಪ್ರಕೃತಿ ವಿಕೋಪಗಳು ಎದುರಾದಲ್ಲಿ ಅದು ತಿಂಗಳಿಗೂ ಎಳೆಯ ಬಹುದಷ್ಟು ಸುದೀರ್ಘವಾಗುವ ಸಾಧ್ಯತೆಗಳೂ ಇಲ್ಲದಿರಲಿಲ್ಲ! ಕ್ಷಣಾರ್ಧದಲ್ಲಿ ಪ್ರಪಂಚದ ಇನ್ನೊಂದು ತುದಿ ಮುಟ್ಟುವ ಇಂದಿನ ತಲೆಮಾರಿಗೆ ಇದು ಹಾಸ್ಯಾಸ್ಪದವಾಗಿ ಗೋಚರಿಸಬಹುದು. ಅದರೆ ಅದು ಹಾಗಿದ್ದುದು ವಾಸ್ತವ ಹಾಗೂ ಅಂದಿನ ತುಳುನಾಡಿಗರಿಗೆ ಅದು ಬಾಳಿನ ಅತಿ ಸಹಜ ಅವಿಭಾಜ್ಯ ಅಂಗವೆ ಆಗಿತ್ತು.


ಅಂತಹ ವಿಪರೀತ ಕಾಲದಲ್ಲಿ ಕುಟ್ಟಿ ಹಾಗೂ ವೆಂಕು ಎನ್ನುವ ಇಬ್ಬರು ಪ್ರಭೃತಿಗಳು ಇದ್ದರಂತೆ. ಅವರು ರಾತ್ರಿ ಮಲಗಿದ್ದಾಗ ಕುಟ್ಟಿಯ ಅಪ್ಪ-ಅಮ್ಮ "ನಾಳೆ ಕುಟ್ಟಿಯನ್ನ ಕುಂದಾಪುರಕ್ಕೆ ಕಳಿಸಬೇಕು" ಅಂತ ಮಾತಾಡಿಕೊಂಡರಂತೆ. ಅಂತೆಯೆ ವೆಂಕುವಿನ ಅಮ್ಮ-ಅಪ್ಪ "ನಾಳೆ ನಮ್ಮ ವೆಂಕುವನ್ನ ಪಣಂಬೂರಿಗೆ ಕಳಿಸಬೇಕು" ಎಂದು ಮಾತಾಡಿಕೊಂಡರಂತೆ. ಅದು ಮಲಗಿದ್ದ ಕುಟ್ಟಿ ಹಾಗೂ ವೆಂಕುವಿನ ಕಿವಿಗೆ ಬಿದ್ದಿದೆ. ಬೆಳಗ್ಯೆ ಹೆತ್ತವರು ಎದ್ದು ನೋಡಿದರೆ ಕುಟ್ಟಿ ಹಾಗೂ ವೆಂಕು ಇಬ್ಬರೂ ಮಂಗಮಾಯ! ಕಾಣೆಯಾದ ಇಬ್ಬರೂ ಮೂರ್ನಾಲ್ಕು ದಿನಗಳ ನಂತರ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದರಂತೆ! "ಎಲ್ಲಿಗೆ ಹೋಗಿದ್ದಿರೋ? ಊರೆಲ್ಲಾ ಹುಡುಕಿದೆವಲ್ಲ!" ಎಂದು ಕಂಗಾಲಾಗಿ ಕೇಳಿದರೆ "ನೀವೆ ಹೇಳಿದಿರಲ್ಲ ಅದಕ್ಕೆ ಕುಂದಾಪುರಕ್ಕೆ ಹೋಗಿ ಬಂದೆ ಎಂದು "ಕುಟ್ಟಿ"ಯೂ, ಪಣಂಬೂರಿಗೆ ಹೋಗಿ ಬಂದೆ ಎಂದು "ವೆಂಕು"ವೂ ಹೇಳಿದರಂತೆ! ಯಾಕೆ ತಾವಲ್ಲಿಗೆ ಹೋಗ ಬೇಕಿತ್ತು? ಹೋಗಿ ಅಲ್ಲಿ ಮಾಡಬೇಕಾದುದೇನಿತ್ತು? ಎನ್ನುವುದನ್ನ ಚೂರೂ ಲಕ್ಷಿಸದೆ ಈ ಮಡ್ದ ಸಾಂಬ್ರಾಣಿಗಳು ಸಾಕಷ್ಟು ಕಷ್ಟ-ನಷ್ಟವನ್ನ ಎದುರಿಸಿ ಅಲ್ಲಿಗೆ ಹೋಗಿ, ಹೋದಂತೆಯೆ ಮರಳಿ ಮನೆಗೆ ಬಂದು ಮುಟ್ಟಿದ್ದರು!. ಅವರನ್ನ, ಅವರಂತವರನ್ನ ಗೇಲಿ ಮಾಡಲು ಈ ಗಾದೆ ಹಾಗೆ ಹುಟ್ಟಿಕೊಂಡಿತಂತೆ.}


( ಕುಟ್ಟಿ ಕುಂದಾಪುರೊಗ್ ಪೋಯಿ ಲೆಕ್ಕೊಲಾ, ವೆಂಕು ಪಣಂಬೂರುಗ್ ಪೋಯಿ ಲೆಕ್ಖೊಲಾ ಆಂಡ್ = ಕುಟ್ಟೀ ಕುಂದಾಪುರಕ್ಕೆ ಹೋದ ಹಾಗೆಯೂ, ವೆಂಕು ಪಣಂಬೂರಿಗೆ ಹೋದ ಹಾಗೆಯೂ ಆಯ್ತು.)

Tuesday, March 19, 2013

ಹಳೆಯ ನೆನಪುಗಳ ಗುಂಗಿನಲ್ಲಿ.....




ಇತ್ತೀಚಿನ ಕೆಲವು ಸನ್ನಿವೇಶಗಳ ಆಧಾರದಲ್ಲಿ ಹೇಳೋದಾದರೆ ಈ ನಡುವೆ ವಿಪರೀತ ಭಾವುಕನಾಗಿ ವರ್ತಿಸಲಿಕ್ಕೆ ತೊಡಗಿದ್ದೇನೆ ಅಂತ ಅನ್ನಿಸಲಿಕ್ಕೆ ತೊಡಗಿದೆ. ಹಳೆಯ ಕೆಲವು ಹಿತವಾದ ನೆನಪುಗಳು ಮುದಗೊಳ್ಳುವಂತೆ ಮಾಡುತ್ತಲೆ ಅದನ್ನ ಯಾರಲ್ಲಾದರೂ ಹೇಳಿಕೊಳ್ಳುವಾಗ ಅಥವಾ ರಸ್ತೆಯಲ್ಲಿ ಬೈಕೋಡಿಸುವಾಗಲೋ, ಅಡುಗೆ ಮಾಡುವಾಗಲೋ, ಮನೆಯಂಗಳದ ಮಕ್ಕಳಂತ ಪುಟ್ಟಪುಟ್ಟ ಸಸಿಗಳ ದೇಖಾರೇಕಿ ಮಾಡ್ವಾಗಲೋ, ಒಬ್ಬನೆ ಕೂತು ಭಾವುಕ ಗೀತೆಗಳನ್ನ ಆಲಿಸುವಾಗಲೋ ನನ್ನೊಳಗೆ ನಾನು ಗತ ಬಾಳಿನ ಪುಟ ತಿರುಗಿಸಿ ನೊಡುವಾಗ ಕಣ್ಣು ತನ್ನಿಂದ ತಾನೆ ತುಂಬಿ ಬರುತ್ತದೆ. ಸಣ್ಣ ವಯಸ್ಸಿನ ಉತ್ಸಾಹದ ಚಿಲುಮೆಗಳಾದ ಜೀವಂತ ಗೊಂಬೆಗಳಂತಹ ಮಕ್ಕಳನ್ನ ಕಾಣುವಾಗ ಅದೇನೋ ಮಮತೆ ಉಕ್ಕಿ ಬಂದಂತಾಗಿ ಕಣ್ಣೀರು ಬರುವಷ್ಟು ಮನಸ್ಸು ಮಗುವಾಗುತ್ತದೆ. ನಾನು ಕನ್ನಡಕ್ಕೆ ಅನುವಾದಿಸುತ್ತಿರುವ ಪೆಜತ್ತಾಯರ "ವೋಯೇಜ್ ಆಫ್ ಪೇಪರ್ ಬೋಟ್"ನ ಅವರಮ್ಮನ ಬಗೆಗಿನ ಭಾಗವನ್ನ ಅನುವಾದಿಸುವಾಗ, ಅವರ ಮೆಚ್ಚಿನ ಗಿಳಿ ಅವರನ್ನ ವರ್ಷಗಳ ನಂತರ ಗುರುತಿಸಿದ ಭಾಗಗಳನ್ನ ಅಕ್ಷರಗಳಾಗಿಸುವಾಗ ಭಾರವಾದ ಮನಸಿನಿಂದ ಅತ್ತಿದ್ದೇನೆ.



ನನ್ನ ಅಜ್ಜನ ತಮ್ಮ "ಕೊಪ್ಪ ಚಿಕ್ಕಪ್ಪ"ನ ವಿಷಯದಲ್ಲೂ ಮೊನ್ನೆ ಹೀಗೆ ಆಯ್ತು. ನಾನು ಮನೆಯ ಹಿರಿಯ ಮೊಮ್ಮಗ, ಕೊಪ್ಪ ಚಿಕ್ಕಪ್ಪನ ಮೊದಲ ಮೊಮ್ಮಗಳು ಪವಿತ್ರ ನನ್ನಿಂದ ವರ್ಷಕ್ಕೆ ಹಿರಿಯವಳು. ನಾವಿಬ್ಬರು ಬಿಟ್ಟರೆ ಬಹುಷಃ ಈ ಅಣ್ಣ ತಮ್ಮಂದಿರ ಇನ್ಯಾವ ಮೊಮ್ಮಕ್ಕಳಿಗೂ ಕೊಪ್ಪ ಚಿಕ್ಕಪ್ಪನ ಒಡನಾಟ ಲಭ್ಯವಾಗಲಿಲ್ಲ. ಅವರ ಎರಡನೆ ಮಗಳು ಕಾಮಾಕ್ಷಕ್ಕನ ಮಗ ಅಭಿ ಹಾಗೂ ನನ್ನ ಚಿಕ್ಕಮ್ಮನ ಮಗಳು ಹರಿಣಿಗೆ ಅವರು ಎತ್ತಿ ಆಡಿಸಿದ್ದು ನೆನಪಿರಲಾರದಷ್ಟು ಸಣ್ಣ ವಯಸ್ಸು ಅವರು ಸಾಯುವಾಗ. ಪವಿತ್ರ ಅವರನ್ನ ಅಜ್ಜ ಅಂತಲೆ ಕರೆಯುತ್ತಿದ್ದರೂ ನಮ್ಮ ಮನೆಯಲ್ಲಿ ನಾನೊಬ್ಬನೆ ಮೂರನೆ ತಲೆಮಾರಿನವ ಮೊದಲು ಹುಟ್ಟಿದ್ದ ಕಾರಣ ನನ್ನಿಂದ ಚೂರೆಚೂರು ಪ್ರಾಯದಲ್ಲಿ ಹಿರಿಯರಾಗಿದ್ದ ಚಿಕ್ಕಮ್ಮಂದಿರನ್ನ ಹಾಗೂ ಮಾವಂದಿರನ್ನ ಅನುಕರಿಸಿ ಚಿಕ್ಕಪ್ಪ ಅಂತಲೆ ಕಡೆಯವರೆಗೂ ಕರೆಯುತ್ತಿದ್ದೆ. ಅವರು ಕೊಪ್ಪದಲ್ಲಿ ವಾಸವಿದ್ದ ಕಾರಣ ನಮ್ಮ ಪಾಲಿಗವರು "ಕೊಪ್ಪ ಚಿಕ್ಕಪ್ಪ!". ಬೆಳ್ಳನೆ ಹತ್ತಿಯಂತಹ ಕೂದಲ ಚಿಕ್ಕಪ್ಪನ ಮಾತುಗಳೂ ಕೂಡ ಮೃದು, ಅಷ್ಟೆ ಸಿಟ್ಟಿನ ಮನುಷ್ಯ ಅವರು. "ಶಂಕರ್ ಕಂಪನಿ"ಯ ಜನಪ್ರಿಯ ಬಸ್ ಚಾಲಕರಾಗಿದ್ದ ಕೊಪ್ಪ ಚಿಕ್ಕಪ್ಪ ಕಡೆಯುಸಿರೆಳೆವಾಗಲೂ ತಮ್ಮ ಸ್ಟಿಯರಿಂಗನ್ನ ಕೈಯಲ್ಲಿಯೆ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಅವರ ಬಗ್ಗೆ ನಾನು ನನ್ನ ಬ್ಲಾಗಿನಲ್ಲಿ ವಿವರವಾಗಿ ಬರೆದಿದ್ದೇನೆ. ಮುಂದೆಯೂ ಬರೆಯಲಿಕ್ಕೆ ಸುಮಾರಿದೆ. ಮೊನ್ನೆ ವಾರಪತ್ರಿಕೆಯೊಂದು ತನ್ನ ವಾರ್ಷಿಕ ಸಂಚಿಕೆಯಲ್ಲಿ ಮಲೆನಾಡಿನ ಬಗ್ಗೆ ಪ್ರಕಟಿಸಿದ್ದ ಕೆಲವು ಲೇಖನಗಳನ್ನ ಓದುತ್ತಿದ್ದಾಗ 'ಸುಂದರ್, ಶಿವಮೊಗ್ಗ' ಎನ್ನುವವರು ಬರೆದ "ಮಲೆನಾಡಿನ ಒಡನಾಡಿಗಳು" ಎನ್ನುವ ಲೇಖನದಲ್ಲಿ ಕೊಪ್ಪ ಚಿಕ್ಕಪ್ಪನ ಪ್ರಸ್ತಾಪ ಕಂಡು ಅದನ್ನ ಓದಿ ಭಾವುಕನಾದೆ. ಆ ಕೃತಜ್ಞತೆಯ ಸ್ಮ್ರರಣೆ ಹೊತ್ತ ಲೇಖನ ಆಪ್ತ ಎನ್ನಿಸಿ ನನ್ನ ಹಿಡಿತ ಮೀರಿ ಕಣ್ಣು ಉಕ್ಕಿ ಬಂತು, ಕಂಠ ಗದ್ಗದವಾಯಿತು. ಇದು ಅತಿರೇಕ ಅನ್ನಿಸುವಷ್ಟರ ಮಟ್ಟಿಗೆ ಇತ್ತೀಚಿಗೆ ಕಣ್ಣಂಚು ಒದ್ದೆಯಾಗುತ್ತಿದೆ.


ಅದೇ ಲೇಖನವನ್ನ ಯಥಾವತ್ ಅಕ್ಷರಕ್ಕಿಳಿಸುತ್ತಿದ್ದೇನೆ. ಮುಂದಿನ ಸಾಲುಗಳು ಸುಂದರ್'ರವು. ನನ್ನ ಮನಸಿನ ಪುಟಗಳನ್ನ ತಿರುವಲು ಸಹಕಾರಿಯಾದ ಆ ಬರಹಕ್ಕೆ ನಾನವರಿಗೆ ಕೃತಜ್ಞ.



"ಮಲೆನಾಡಿನ ಒಡನಾಡಿಗಳು"



ಚುಮುಚುಮು ಚಳಿಯಲ್ಲಿ ಕಣ್ಣುಜ್ಜಿಕೊಂಡು ಮನೆಯಂಗಳಕ್ಕೆ ಬಂದು ಕಣ್ಬಿಟ್ಟು ನೋಡಿದರೆ ದೂರದಲ್ಲಿ ಸದಾ ಗಗನಚುಂಬಿಯಾಗಿ ನಿಂತ ಬೆಟ್ಟ. ಸದಾ ಮೋಡಗಳಿಂದ ಆವೃತ್ತವಾಗಿ ಇದ್ದಕಿದ್ದಂತೆ ಧೋ ಎಂದು ಮಳೆ ಸುರಿದ ನಂತರ ತೊಳೆದಿಟ್ಟ ಶಿಲೆಯಂತೆ ಕಾಣಿಸುವ ಆ ಬೆಟ್ಟ ಮೋಡಗಳನ್ನ ಬಿತ್ತರಿಸಿ ಮಳೆ ಸುರಿಸುವ ಒಂದು ಕಾರ್ಖಾನೆಯೆ ಇರಬೇಕೆಂದು ನಾನು ಭಾವಿಸಿಕೊಂಡಿದ್ದೆ. ಅದುವೆ 'ಕುಂದಾದ್ರಿ ಬೆಟ್ಟ'.


ಆ ಬೆಟ್ಟದ ಪಾದದಂತೆ ಹರಡಿಕೊಂಡಿರುವ ಗದ್ದೆ ಬಯಲಿನ ಅಂಚಿನಲ್ಲಿರುವ ಹುಲ್ಲಿನ ಮನೆಯಲ್ಲಿ ನಮ್ಮ ವಾಸ. ಮನೆ ತುಂಬ ಜನ, ಕೊಟ್ಟಿಗೆ ತುಂಬ ಜಾನುವಾರು, ಗದ್ದೆ ತುಂಬ ಪೈರು.... ಇಲ್ಲಿ ಕಳೆದ ಬಾಲ್ಯದ ದಿನಗಳು ಎಂದಾದರು ಮರೆಯಲುಂಟೆ? ಬರಿ ಮನುಷ್ಯರು ಮಾತ್ರವಲ್ಲ ಮಲೆನಾಡಿನ ಮಕ್ಕಳೆಂದರೆ ಅವರು ಪ್ರಾಣಿ-ಪಕ್ಷಿ, ಗಿಡ-ಮರ, ಸಕಲ ಜೀವರಾಶಿಗಳ ಮಾತುಗಳನ್ನೂ ಬಲ್ಲ ವಿಶಾರದರು. ಮನುಷ್ಯರೊಂದಿಗೆ ಎಷ್ಟು ಪ್ರೀತಿಯಿಂದ ಮಾತಾಡಬಲ್ಲರೊ ತಮ್ಮ ಕೊಟ್ಟೀಗೆಯ ಜಾನುವಾರುಗಳೊಂದಿಗೂ ಅಷ್ಟೆ ಆದರದಿಂದ ಮಾತನಾಡಬಲ್ಲರು. ಮಲೆನಾಡಿನ ಮಕ್ಕಳ ಮೂಗು-ಕಣ್ಣು-ಕಿವಿ ಎಲ್ಲವೂ ಬಹಳ ಚುರುಕು. ಇಲ್ಲೆಲ್ಲೋ ಜೇನಿದೆ! ಇಲ್ಲೆಲ್ಲೋ ಹಲಸು ಹಣ್ಣಾಗಿದೆ, ಇಲ್ಲೆಲ್ಲೋ ಇಪ್ಪೆ ಹೂ ಬಿಟ್ಟಿದೆ ಎಂದೆಲ್ಲಾ ಅವುಗಳಿಗೆ ಗೊತ್ತಾಗುತ್ತದೆ. "ಯಾಕೋ ಉಡಿ ಅಲ್ಲಾಡಿದಂಗ್ ಆತದಲ್ಲ" ಎಂದು ಗುಮಾನಿಯಿಲ್ಲದೆ ಕರಾರುವಕ್ಕಾಗಿ ಅಲ್ಲಿ ಹಾಗೆಯೆ ಆಗಿರುತ್ತದೆ. ಗಾಳಿ-ಬೆಳಕು ಮುತ್ತಿಟ್ಟು ಸಾಕಿದ ಮಕ್ಕಳು ನಾವು.


ಆ ದಿನಗಳಲ್ಲಿ ನಮ್ಮ ಅಲಾರಾಂ ಎಂದರೆ ಕೋಳಿಯ ಕೂಗು ಮಾತ್ರ.ನಮ್ಮ ಗಡಿಯಾರವೆಂದರೆ ಸೂರ್ಯನ ಬೆಳಕಿಗೆ ಅಂಗಳದಲ್ಲಿ ಅಥವಾ ಮನೆಯ ಗೋಡೆಯ ಮೇಲೆ ಬೀಳುತ್ತಿದ್ದ ನೆರಳು ಮಾತ್ರ. ನೆರಳು ಎಷ್ಟು ಮುಂದೆ ಬಂದಿದೆ? ಎಂಬುದರ ಮೇಲೆ ಈಗ ಎಷ್ಟು ಘಂಟೆಯಾಯಿತು ಎಂದು ಹೇಳುವ ಕಾಲಜ್ಞಾನಿಗಳು ನಾವಾಗಿದ್ದೆವು. ಇದು ಬಿಟ್ಟರೆ ನಮ್ಮ ಮನೆಗೆ ಶಬ್ದ ಕೇಳುವಷ್ಟು ದೂರದಲ್ಲಿ ಹಾದು ಹೋಗುತ್ತಿದ್ದ ಟಾರು ರಸ್ತೆಯಲ್ಲಿ ಸಂಚರಿಸುವ ಕೆಲವು ಬಸ್ಸುಗಳ ಹಾರನ್ ಕೂಡ ಗಡಿಯಾರದ ಘಂಟೆಯ ನಾದದಂತೆ ಮನೆಗೆ ಸಮಯ ಹೇಳುತ್ತಿದ್ದವು. ಇಂತ ಹಾರನ್ ಇದೆ ಬಸ್ಸಿನದು ಎಂದು ಹೇಳುವ ಶಬ್ದವೇಧಿಗಳು ನಾವಾಗಿದ್ದೆವು.


ಬೆಳಗ್ಯೆ ಎದ್ದು ಗದ್ದೆಯ ಹಿತ್ತಲಿಗೆ ನೀರು ಹಾಕಿ ಸ್ನಾನಕ್ಕೆ ಹೋಗಬೇಕೆನ್ನುವಾಗ ಪೆಪ್ಪರೆ ಪೆಪ್ಪ ಪಾಂಯ್ ಪಾಂಯ್... ಎನ್ನುವ ಶಬ್ದ ಕಿವಿಗೆ ಬಿದ್ದರೆ "ಓಹ್ಹೋ... ಕಣ್ಣನ ಬಸ್ಸು ಬಂತು. ಘಂಟೆ ಏಳಾಯ್ತು, ಹೊತ್ತಾಯ್ತು." ಅಂತ ನಮ್ಮ ಗಡಿಬಿಡಿ ಶುರುವಾಗುತ್ತಿತ್ತು.

ಇನ್ನು ತಿಂಡಿ ತಿಂದು ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಗದ್ದೆ ಬಯಲಿನಲ್ಲಿ ಓಡುವಾಗ ಗದ್ದೆ ಬಯಲಿನಲ್ಲಿ ಬೆಳೆದ ಹಿಡಿ ಹುಲ್ಲಿನ ಹೂಗಳು, ಅದರ ಮೇಲೆ ಪೋಣಿಸಿದ ಮಂಜಿನ ಮುತ್ತುಗಳು ನಮ್ಮ ಬಟ್ಟೆಗೆಲ್ಲ ಮೆತ್ತಿಕೊಂಡು ಮುತ್ತಿಕ್ಕುತ್ತಿದ್ದವು. ಹೀಗೆ ಹೊಸರೊಡ್ಲು ಗದ್ದೆ ಬಯಲಿನಲ್ಲಿ ಓಡುವಾಗ ನಮ್ಮ ಮೈಯೆಲ್ಲಾ ಕಿವಿ. ಸುಮಾರು ಒಂದು ಕಿಲೋಮೀಟರ್ ದುರದ ಬ್ರಹ್ಮನ ಉಬ್ಬಿನಲ್ಲಿ ಆ ಬಸ್ಸು ಏದುಸಿರು ಬಿಡುವ ಶಬ್ದ ನಮ್ಮ ಕಿವಿಗೆ ಕೇಳಿಸಿದರೆ ಇವತ್ತು ಬಸ್ಸು ಗ್ಯಾರೆಂಟಿ ಸಿಗುತ್ತದೆ ಎಂದು ಅರ್ಥ, ಇಲ್ಲವಾದರೆ ಏಳು ಕಿಲೋಮೀಟರ್ ನಡೆದೆ ಶಾಲೆಗೆ ಹೋಗಬೇಕಲ್ಲ!


ಆ ಬಸ್ಸಿನ ಡ್ರೈವರ್ ವೆಂಕಟ್ರಮಣ ಸ್ವಲ್ಪ ಕುಳ್ಲನೆಯ ವ್ಯಕ್ತಿ. ಅವರಿಗೆ ಕ್ಲಚ್ಚು-ಬ್ರೇಕು ಸರಿಯಾಗಿ ಕಾಲಿಗೆ ಸಿಗ್ತಿರಲಿಲ್ಲವಂತೆ. ಆದ್ದರಿಂದ ಆ ಬಸ್ಸಿನ ಶಬ್ದ ಯಾವಾಗಲೂ ಸ್ವಲ್ಪ ಬಿಟ್ಟು ಬಿಟ್ಟು ಉಸಿರಾಡುವ ದಮ್ಮು ರೋಗಿಯ ಉಬ್ಬಸದ ಹಾಗೆ ಇರುತ್ತಿತ್ತು.


ನಮ್ಮೂರಿನಿಂದ ಹಾದು ಹೋಗುವ ಎಲ್ಲಾ ಬಸ್ಸುಗಳಿಗೂ ನಮ್ಮದೆ ನಾಮಕರಣ. ಕಣ್ಣನ ಗಾಡಿ, ಬೀರೂರ್ ಮಂಜಣ್ಣ ಗಾಡಿ, ನಾಗಪ್ಪ ಹೆಗಡೇರ ಬಸ್, ಗಜಾನನ ಮಾಮಿ ಬಸ್, ಹರಿಶ್ಚಂದ್ರಂಣ್ಣ ಬಸ್, ಸಿಎಂಟಿ ಮುಂತಾಗಿ ಇಟ್ಟಿದ್ದೆವು. ಒಂದೊಂದು ಬಸ್ಸುಗಳು ಕೂಡ ನಮ್ಮ ನಿತ್ಯದ ಒಡನಾಡಿಗಳಾಗಿ ಅವುಗಳಿಗೂ ಒಂದೊಂದು ವ್ಯಕ್ತಿತ್ವದ ಆರೋಪಣವಿತ್ತು. ಶಾಲೆಗೆ ಬೇಕಾದ ಪುಸ್ತಕಗಳನ್ನ ತಂದು ಕೊಡುವ ತಿಪ್ಪೆಸ್ವಾಮಿ ಕಂಡೆಕ್ಟರ್, ಅಜ್ಜಿಯ ಬಿಪಿ ಮಾತ್ರೆ ತಂದು ಕೊಡುವ ಕಣ್ಣನ್ ಡ್ರೈವರ್, ಮಕ್ಕಳನ್ನ ಜಾಗ್ರತೆಯಿಂದ ಊರಿಂದೂರಿಗೆ ಕರೆದೊಯ್ಯುವ ಜವಾಬ್ದಾರಿ ಹೊತ್ತ ಡ್ರೈವರ್ ಮಂಜಣ್ಣ, ಏನಾದರೂ ಪಾರ್ಸೆಲ್ ಕೊಟ್ಟರೆ ಬಸ್ಸನ್ನು ಮನೆಯೆದುರೆ ನಿಲ್ಲಿಸಿ ಹಾರನ್ ಮಾಡಿ ಮನೆಯೊಳಗೆ ತಲುಪಿಸುತ್ತಾರೆಂದು ಖ್ಯಾತಿ ಪಡೆದ ನಾಗಪ್ಪ ಹೆಗಡೇರು ಎಲ್ಲಾ ನಮ್ಮವರೆ. ಕೊನೆಗೆ ಲಾಸ್ಟ್ ಗಾಡಿ ಹರಿಶ್ಚಂದ್ರಣ್ಣ ಬಸ್ ಬಂದರೆ ಒಂಬತ್ತು ಘಂಟೆಯಾಯ್ತು, ಇನ್ನು ಮಲಗುವ ಸಮಯ ಅಂತಲೆ ಅರ್ಥ. ಅಕಸ್ಮಾತ್ ನಾವು ಎಚ್ಚರವಿದ್ದರೂ 'ಸಾಕ್ ಸಾಕ್ ಓದಿದ್ ಸಾಕ್! ಹರೀಶ್ಚಂದ್ರಣ್ನ ಬಸ್ ಬಂತು. ಚಿಮಣಿ ಕೆಡ್ಸಿ ಮಲ್ಕಳಿ, ಸೊಸೈಟಿಲಿ ಸರಿಯಾಗಿ ಸೀಮೆಎಣ್ಣೆನೂ ಕೊಡಲ್ಲ" ಎಂದು ದೊಡ್ಡವರು ಗದರಿಸುತ್ತಿದ್ದರು. ನಾವೂ "ಎನ್ ಅರ್ಧಾರಾತ್ರಿವರೆಗೆ ನಿದ್ದೆಗೆಟ್ಟು ಓದಿ ರಾಜ್ಯ ಆಳ್ಬೇಕಾ!" ಎಂದು ಹಾಯಾಗಿ ಕಂಬಳಿ ಹೊದ್ದು ಮಲಗುತ್ತಿದ್ದೆವು. ಹೀಗೆ ಅಂದಿನ ಗಡಿಯಾರಗಳು ಕಮ್ ನಮ್ಮ ಒಡನಾಡಿಗಳು ಆಗಿದ್ದ ಬಸ್ಸುಗಳ ಬಗ್ಗೆ ಹೇಳುತ್ತಾ ಹೋದರೆ ಅದೆ ಒಂದು ಕಥಾನಕವಾದೀತು.


ಮೊದಲೆಲ್ಲ ಊರಿಗೆ ಬಸ್ಸು ಬಂದು ಹೋಗುವುದೆ ಒಂದು ಸಂಭ್ರಮ ಮತ್ತು ಅಚ್ಚರಿಯಾಗಿದ್ದರಿಂದ ಎಲ್ಲರಿಗೂ ಅವರವರ ಮನೆಯೆದುರೆ ಬಸ್ಸು ನಿಂತರೆ ಏನೋ ಒಂದು ಹೆಮ್ಮೆ! ಹಾಗಾಗಿ ಬಸ್ಸು ಮಾರು ಮಾಅರಿಗೂ ನಿಲ್ಲುತ್ತಿತ್ತು. ಆದರೆ ಬಸ್ಸಿನ ಸಮಯ ಪಾಲನೆಯಲ್ಲಿ ತುಂಬಾ ಸ್ಟ್ರಿಕ್ಟ್ ಆಗಿದ್ದ ಕಣ್ಣನ್ ಡ್ರೈವರ್ ಮಾತ್ರ  ಜನ ಒಂದೆ ಸ್ಟಾಪಿನಲ್ಲಿ ನಿಲ್ಲದೆ ಮಾರು ಮಾರಿಗೂ ಕೈ ಅಡ್ಡ ಹಾಕುತ್ತಿದ್ದುದನ್ನು ಕಂಡು ಬಹಳ ಸಿಟ್ಟು ಮಾಡಿಕೊಳ್ಳುತ್ತಿದ್ದರು. "ಏನು ನೀನು ಕೊಡುವ ಐವತ್ತು ಪೈಸೆಗೆ ನನ್ನ ಐದುನೂರು ರೂಪಾಯಿ ಬ್ರೇಕು ಹಾಳು ಮಾಡ ಬೇಕನ?" ಎಂದು ತಮ್ಮ ಮಲಯಾಳಿ ಕನ್ನಡದಲ್ಲಿ ಅಬ್ಬರಿಸುತ್ತಿದ್ದರು. ಒಮ್ಮೊಮ್ಮೆ ತುಂಬ ಸಿಟ್ಟು ಬಂದರೆ ಸ್ಟಾಪಿನಲ್ಲಿ ನಿಲ್ಲದೆ ಕಂಡಲ್ಲಿ ಕೈ ಅಡ್ಡ ಹಾಕುವವರನ್ನ ಬಿಟ್ಟು ಬರುವುದೂ ಉಂಟು. ಬಸ್ಸು ಬಸ್ಟ್ಯಾಂಡ್ ಬಿಟ್ಟು ಊರ ಹೊರಗೆ ದಾಟುವವರೆಗೂ ಕಂಡೆಕ್ಟರ್ ಫುಟ್'ಬೋರ್ಡಿನಲ್ಲಿ ನಿಂತು ಆಗಾಗ ಹಿಂದಕ್ಕೆ ನೋಡುತ್ತಿರಬೇಕು. ಇಲ್ಲದಿದ್ದರೆ ಕಣ್ಣನ್'ನ ಬೈಗುಳ ಗ್ಯಾರೆಂಟಿ. "ಯಾರಾದರೂ ಬಸ್ಸಿಗಂತ ಓಡಿ ಬರ್ತಿರ್ತಾರೆ, ಸ್ವಲ್ಪ ತಲೆ ಹೊರ್ಗೆ ಹಾಕಿ ನೋಡ" ಎನ್ನದೆ ಬಿಡುತ್ತಿರಲಿಲ್ಲ. ಆದರೆ ಅಂತಹ ಕಣ್ಣನ್ ಬಸ್ಸು ಶಿವಮೊಗ್ಗ ಸಿಟಿಯಿಂದ ನಮ್ಮೂರ ಬಸ್ಟ್ಯಾಂಡಿಗೆ ಬಂದು ನಿಂತ ಕ್ಷಣ ನೀವು ನೋಡಬೇಕು. ಅವರ ಅಂಗಿ ತುಂಬ ಜೇಬುಗಳು. ಮೇಲೆರಡು, ಕೆಳಗೆರಡು, ಪ್ಯಾಂಟು ಜೇಬು ಎಲ್ಲವೂ ಭರ್ತಿ ಭರ್ತಿ. ಬಸ್ಸು ನಿಂತ ತಕ್ಷಣ ಅವರನ್ನ ಮುತ್ತಿಕೊಳ್ಳುವ ಜನ. " ತಗ ಇದು ನಿನ್ನದು, ಇದು ಅವನದು, ಇದು ಅವನಿಗೆ ಕೊಡು, ಇದು ಶ್ಯಾಮನ ಅಂಗಡಿದು, ಇದು ಖಾದ್ರಿಸಾಬರ ಅಂಗಡಿಗೆ" ಎಂದು ಅವರವರ ಅಂಚೆ ಬಟವಾಡೆ ಶುರುವಾಗುತ್ತಿತ್ತು. ಆತ ತುಂಬ ಕಟ್ಟುನಿಟ್ಟಿನ ಮನುಷ್ಯ. ಹಣೆಗೆ ವಿಭೂತಿ, ಮಧ್ಯದಲ್ಲೊಂದು ಗಂಧದ ಬೊಟ್ಟು, ದಪ್ಪಕ್ಕೆ ಹುರಿಗಟ್ಟಿದ ಬಿಳಿಮೀಸೆ, ಅವರ ಖಡಕ್ ಇಸ್ತ್ರಿ ಮಾಡಿದ ಖಾಕಿ ಯೂನಿಫಾರಂ, ಅದರ ಮೇಲೊಂದು ದೊಡ್ದ ಮೆಡಲ್'ನಂತಿದ್ದ ಬ್ಯಾಡ್ಜ್, ಅದರಲ್ಲಿ ಏನು ಬರೆದಿತ್ತೋ ಕಡೆಗೂ ಓದಲಾಗಲೆ ಇಲ್ಲ! ಅವರ ಮೇಲಿನ ಭಯಕ್ಕೆ.


ಇನ್ನು ನಾಗಪ್ಪ ಹೆಗಡೆರ ಬಸ್ಸೆ ಒಂದು ಮಜಾ.ಅದಕ್ಕೆ ಸಮಯದ ಹಂಗೆ ಇರಲಿಲ್ಲ."ಬದುಕು ಜಟಕಾ ಬಂಡಿ"ಯೆಂದು ಡಿವಿಜಿಯವರು ಇದೇ ಬಸ್ಸನ್ನ ನೋಡಿ ಬರೆದಿರಬೇಕು! ಅವರಿಗೆ ಜನ ಮಾರು ಮಾರಿಗೆ ಕೈ ಅಡ್ದ ಹಾಕಿ ನಿಲ್ಲಿಸಿದರು ಏನು ಬೇಜಾರಿಲ್ಲ. ಸದಾ ಹಸನ್ಮುಖಿಯಾಗಿ ಬಸ್ಸಿಗೆ ಹತ್ತಿದವರೆಲ್ಲರ ಉಭಯ ಕುಶಲೋಪರಿ ವಿಚಾರಿಸುವುದರಲ್ಲಿ ಅವರಿಗೆ ಅತೀವ ಆಸಕ್ತಿ. "ಈ ಸಾರಿ ಅಡಿಕೆ ರೇಟು ಏರುತ್ತಾ? ಇಳಿಯುತ್ತಾ?" "ಭತ್ತ ಯಾವಾಗ ಕೊಟ್ರೆ ಒಳ್ಳೇದು?" "ಅವರ ಲೈನಿನಲ್ಲಿ ಬರುವ ಮನೆಗಳಲ್ಲಿ "ಯಾರ್ಯಾರಿಗೆ ಮದುವೆ ಆಗಿದೆ? ಯಾ ಆಗಿಲ್ಲ?" "ಮಕ್ಕಳ ಸಮಾಚಾರವೇನು?" "ಯಾವ ಖಾಯಿಲೆಗೆ ಯಾವ ಡಾಕ್ಟರ್ ಆಗಬಹುದು?" "ಯಾರ್ಯಾರು ಮದುವೆಗೆ ರಡಿಯಿದಾರೆ?" ಫುಲ್'ಡೀಟೇಲ್ಸ್ ಅವರ ಬಳಿ! ಇಂತಹ ಜನಾನುರಾಗಿ ಹೆಗಡೆರು ಒಂದು ದಿನ ಹಾಗೆ ನಸುನಗುತ್ತಾ ಡ್ರೈವ್ ಮಾಡುತ್ತಿದ್ದವರು ಗಾಡಿಯನ್ನ ಸೈಡಿಗೆ ನಿಲ್ಲಿಸಿ ಸ್ಟೆಯರಿಂಗ್ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದರೆಂಬ ಸುದ್ದಿ ನನ್ನನ್ನು ಬಹಳ ದಿನಗಳವರೆಗೆ ಕಾಡದೆ ಬಿಡಲಿಲ್ಲ. ನಮ್ಮಜ್ಜಿಯಂತೂ "ಪುಣ್ಯಾತ್ಮ ನೋಡು, ಯಾರಿಗೂ ತೊಂದ್ರೆ ಮಾಡ್ದೆ ಹಾಗೆ ಹೋಗ್ಬಿಟ್ಟ" ಎಂದು ಊರಿಗೆ ಹೋದಾಗ ಹೇಳಿದ ಮಾತು ಇನ್ನೂ ನೆನಪಿದೆ.


ಅಂದಿನ ಕಾಲದ ಡ್ರೈವರ್'ಗಳಿಗೆ ಮಲೆನಾಡಿನಲ್ಲಿ ಸಿಗುತ್ತಿದ್ದ ರಾಜ ಮರ್ಯಾದೆಯನ್ನು ಸ್ವತಃ ಒಬ್ಬ ಡ್ರೈವರ್ರ ಮಗನಾಗಿ ನಾನೂ ಕಂಡಿದ್ದೇನೆ. ಸ್ವಲ್ಪ ಮಟ್ಟಿಗೆ ದ್ರಾವಿಡ ಬಣ್ಣದ ಆಫ್ರಿಕನ್ ಗುಂಗುರು ಕೂದಲಿನ ನನ್ನ ತಂದೆಗೆ ತನ್ನ ಸಹಪಾಠಿಗಳಿಂದ "ಮಿನುಗು ತಾರೆ ಕಲ್ಪನ" ಎಂದೆ ಕರೆಸಿಕೊಳ್ಳುತ್ತಿದ್ದ ನನ್ನಮ್ಮನನ್ನು "ದ್ರೈವರ್" ಎಂಬ ಒಂದೆ ಕಾರಣಕ್ಕೆ (ಏರೋಪ್ಲೇನ್ ಪೈಲೆಟ್ ತರಾ!) ನಮ್ಮಜ್ಜ ಮದುವೆ ಮಾಡಿ ಕೊಟ್ಟರಂತೆ! ತಮ್ಮ ಬಸ್ಸಿನಲ್ಲಿ ಓಡಾಡುತ್ತಿದ್ದ ಶಾಲಾ ಮಕ್ಕಳಿಗೆ, ದೂರದೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದವರಿಗೆ, ಉದ್ಯೋಗದಲ್ಲಿದ್ದವರಿಗೆ ಎಲ್ಲರಿಗೂ ಪರಮಾಪ್ತರಾಗಿ ಬಾಳಿದ್ದ ನನ್ನ ತಂದೆ ತಮ್ಮ ಇಳಿವಯಸ್ಸಿನ ದಿನಗಳಲ್ಲಿ "ಈಗ ಯಾರೂ ಡಿಮ್ ಡಿಪ್ ಮಾಡುವುದೆ ಇಲ್ಲ. ಯಾವ ತರ ಡ್ರೈವಿಂಗ್ ಮಾಡ್ತಾರೋ ಏನೋ? ರಾತ್ರೆ ಹೊತ್ತು ಡ್ರೈವಿಂಗ್ ಮಾಡುವಾಗ ಎದುರುಗಡೆಯ ಗಾಡಿ ಹೆಡ್'ಲೈಟ್ ಕಣ್ಣಿಗೆ ಚುಚ್ಚಿದ ಹಾಗಾಗುತ್ತೆ. ಕಣ್ಣು ಬಿಡುವುದಕ್ಕೆ ಆಗಲ್ಲ" ಎನ್ನುತ್ತಿದ್ದರು. "ನನ್ನಂತವರಿಗೆ ಇನ್ನು ಮುಂದೆ ಡ್ರೈವಿಂಗ್ ಕಷ್ಟ" ಎಂದು ಒಲ್ಲದ ಮನಸ್ಸಿನಿಂದಲೆ ತಮ್ಮ ಪ್ರೀತಿಯ ಕೆಲಸವನ್ನ ಬಿಟ್ಟು ಬಿಟ್ಟರು.





ಮಲೆನಾಡಿನಲ್ಲಿ ಹುಟ್ಟಿ ಬೆಳೆದು ನಾಲ್ಕೈದು ದಶಕಗಳನ್ನ ಕಳೆದಿರುವ ನನಗೆಮಲೆನಾಡಿನ ಇಂದಿನ ವಿದ್ಯಾಮಾನಗಳು ಯುಕ್ತಾ ಯುಕ್ತಾ ವಿವೇಚನೆಯಿಲ್ಲದ ಡಿಮ್ ಡಿಪ್ ಮಾಡದ ಹೆಡ್'ಲೈಟಿನ ಬೆಳಕಿನಂತೆಯೆ ಕಣ್ಣು ಚುಚ್ಚುತ್ತಿವೆ. ಕೃಷಿಯಿಂದ ವಿಮುಖರಾಗಿ, ಸಂಬಂಧಗಳೆ ಕಣ್ಮರೆಯಾಗಿ ಮಲೆನಾಡು ಬರಿದಾಗುತ್ತಿರುವ ಈ ಹೊತ್ತಲ್ಲಿ ನಮ್ಮೆಲ್ಲರ ಆತಂಕವನ್ನು ಅರಿತು ಡಿಮ್ ಡಿಪ್ ಮಾಡುವ ಡ್ರೈವರ್ ಯಾರು?  ಎಂದು ಹುಡುಕುತ್ತಿದ್ದೇನೆ.

Sunday, March 17, 2013

ತುಳುಗಾದೆ-೪೬









"ಬಂಟೆರ್ ಪೋಯಿನಲ್ಪ ಮೊಡಂಕ್ ತಪ್ಪಂದ್, ಮೊಡೆಂಜಿ ಪೋಯಿನಲ್ಪ ಕಳಂಕ್ ತಪ್ಪಂದ್"


{ ತುಳುನಾಡಿನಲ್ಲಿ ಜಾತಿವಾರು ಪ್ರಾತಿನಿಧ್ಯವನ್ನ ಗಣನೆಗೆ ತೆಗೆದುಕೊಂಡರೆ ಬಹುಷಃ ಬಂಟರ ಮತ್ತು ಜೈನರ ನಡುವೆ ಮೊದಲನೆ ಸ್ಥಾನಕ್ಕಾಗಿ ಪೈಪೋಟಿ ಏರ್ಪಡಬಹುದು. ಆದರೆ ಇಲ್ಲಿ ಜೈನ ಮತಕ್ಕೆ ಮತಾಂತರವಾದವರೆಲ್ಲರೂ ಬಂಟರೆ ಆಗಿರುವುದರಿಂದ ಅವರನ್ನ ಬಂಟ ಮೂಲದವರೆಂದೆ ಪರಿಭಾವಿಸಿದರೆ ನಿಸ್ಸಂಶಯವಾಗಿ ಬಂಟರೆ ಇಲ್ಲಿ ಬಹುಸಂಖ್ಯಾತರಾಗುತ್ತಾರೆ. ಬಂಟರದ್ದು ಕ್ಷಾತ್ರ ಗುಣ. ಹಿಂದೆ ಆಳರಸರ ಸೇನೆಯಲ್ಲಿ ಸೇನಾಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದುದರಿಂದಲೋ ಎನೋ ಕಾದಾಡುವ ಗುಣ ಅವರ ರಕ್ತದಲ್ಲಿ ಹರಿದುಬಂದಿದೆ. ಅದೆಷ್ಟರ ಮಟ್ಟಿಗೆ ಎಂದರೆ ಇಂದು ಊರೊಟ್ಟಿನ ಕೆಲಸಗಲಲ್ಲಿ ಸಹಜವಾಗಿ ಯಜಮಾನಿಕೆ ವಹಿಸಿ ಓಡಾಡುವ ಬಂಟ ಪ್ರತಿನಿಧಿಗಳು ಚರ್ಚೆ-ವಿಚಾರ ಭಿನ್ನಾಭಿಪ್ರಾಯ ತಲೆದೋರುವ ಹೊತ್ತಿಗೆಲ್ಲ ಮಾತಿಗೆ ಮುಂಚೆ ತಮ್ಮ ತೋಳೇರಿಸಿಕೊಂಡು ತಯಾರಾಗುತ್ತಾರೆ! ತುಳುನಾಡಿನ ಗುತ್ತು-ಬರ್ಕೆ-ಬೀಡುಗಳನ್ನ ಆಳಿ ಜೈನ- ಹೆಗಡೆಗಳೊಂದಿಗೆ ಆಡಳಿತದಲ್ಲಿ ಪಾಲುದಾರರಾಗಿರುತ್ತಿದ್ದ ಬಂಟರದ್ದು ಮುಂಗೋಪದ ಸ್ವಭಾವ. ಅವರಲ್ಲಿ ನಾಲಗೆಗಿಂತಲೂ ಕೈಗೆ ಹೆಚ್ಚು ಕೆಲಸ ಅನ್ನುವುದು ಒಂದು ಉತ್ಪ್ರೇಕ್ಷಿತ ನಂಬಿಕೆ. ಹೃದಯ ವೈಶಾಲ್ಯದಲ್ಲಿ ಸಾಟಿಯಿಲ್ಲದ ಬಂಟರು ಸಂಧಿ ಸಾಧಿಸುವ ಸೂಕ್ಷ್ಮಗುಣದಲ್ಲಿ ಮಾತ್ರ ಪರಮ ಹೆಡ್ಡರು. ಯುದ್ಧ ಮಾಡಿ ಗೆದ್ದು ಬರುವ ಆವೇಶ ಹುಮ್ಮಸ್ಸು ತುಸು ಹೆಚ್ಚೆ ಇರುವ ಇವರು ನಂಬಿದವರಿಗೆ, ಅಭಯ ಬಯಸಿ ಬಂದವರಿಗೆ ತಮ್ಮ ಪ್ರಾಣವನ್ನೆ ಬೇಕಿದ್ದರು ಬರೆದು ಕೊಟ್ಟಾರು ವಿನಃ ಇನ್ನೊಬ್ಬರಿಗೆ ಕತ್ತೆ ಕಾಲು ಕಟ್ಟಲಾದರೂ ಡೊಗ್ಗು ಸಲಾಮು ಹೊಡೆಯಲೊಲ್ಲರು!



ಇದನ್ನೆ ಶೆಟ್ಟರ ಗತ್ತು ಎನ್ನುವುದು. ಸಾಮಾನ್ಯವಾಗಿ ಅಧಿಕಾರ ಕೇಂದ್ರಗಳಾದ ಗುತ್ತು-ಬರ್ಕೆಗಳ ಬೆಂಬಲ ಹಾಗೂ ಹಿನ್ನೆಲೆಯಿಲ್ಲದ ಬಂಟರನ್ನ ತುಳುನಾಡಿನ ಇತರ ವರ್ಗದವರು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಈ ಶೆಟ್ಟರಲ್ಲಿ ಮಾತ್ರ ಗುತ್ತಿಲ್ಲದಿದ್ದರೂ ಗತ್ತಿಗೆ ಕಿಂಚಿತ್ತೂ ಬರವಿರುವುದಿಲ್ಲ. ಯಾವುದಾದರೂ ಸಮೂಹ ಕೆಲಸ ಒದಗಿಬಂದರೆ ತಾನೂ ಒಬ್ಬ ಯಜಮಾನನಾಗಿ ಹೆಗಲ ಮೇಲೊಂದು ಬೈರಾಸು ಹಾಕಿಕೊಂಡು ಮುಂಡು ಸುತ್ತಿಕೊಂಡ ಬಂಟ ಅಲ್ಲಿಗೆ ಹೊರಟೆ ಬಿಡುತ್ತಾನೆ! ಸ್ಥೂಲವಾಗಿ ಬಂಟರೆಂದು ಗುರುತಿಸಲ್ಪಡುವ ಬಂಟರಲ್ಲಿ ಶೆಟ್ಟಿ, ಭಂಡಾರಿ, ಬಲ್ಲಾಳ, ರೈ, ಅಜಿಲ, ಚೌಟ, ಪೂಂಜ, ಹೆಗ್ಗಡೆ, ಪರಾರಿ, ಸಮಾನಿ ಹೀಗೆ ಅನೇಕ ಉಪನಾಮಗಳು ಚಾಲ್ತಿಯಲ್ಲಿವೆ. ತುಳುನಾಡಿನ ಬಂಟರ ಹತ್ತಿರದ ನೆಂಟರೆಂದರೆ ಉತ್ತರ ಕನ್ನಡದ ನಾಡವರು. ಮೂಲತಃ ಅವೈದಿಕ ಪರಂಪರೆಯವರಾದ ಬಂಟರ ಕುಲಪುರೋಹಿತ್ಯವನ್ನ ಅವರ ಜಾತಿಯ ಗುರಿಕಾರ ಅಂದರೆ ಮುಖಂಡನೆ ವಹಿಸುವುದು ಪದ್ಧತಿ. ಒಟ್ಟಿನಲ್ಲಿ ಯಾರಿಗೆ ಗುರುಮಠವಿಲ್ಲವೋ, ಮದುವೆಯಲ್ಲಿ ಯಾರು ಧಾರೆಯನ್ನ ಎರೆಯದೆ ಏರಿಸುತ್ತಾರೋ, ಯಾರು ಮಕ್ಕಳ ಕಟ್ಟಿಗೆ ಒಳಪಡದೆ ಅಳಿಯ ಕಟ್ಟನ್ನ ಅನುಸರಿಸುತ್ತಾರೋ ಅವರನ್ನ ವಿಶಾಲಾರ್ಥದಲ್ಲಿ ಬಂಟರೆಂದು ಕರೆಯಬಹುದು. ಈ ಬಂಟರನ್ನ ಒಕ್ಕಲು ವೃತ್ತಿ ಮಾಡುತ್ತಾರೆಂಬ ಏಕೈಕ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಧಿವಶರಾದ ಮಠಾಧೀಶರೊಬ್ಬರು ರಾಜಕೀಯವಾಗಿ ತಮ್ಮ ಕುಲದೊಂದಿಗೆ ಒಗ್ಗೂಡಿಸಿ ಅವರ ಕುಲಗುರು ಎನ್ನಿಸಿಕೊಳ್ಳುವ ವಿಫಲ ಪ್ರಯತ್ನ ಮಾಡಿದರು. ಇದೀಗ ಬೆಜ್ಜವಳ್ಳಿಯಲ್ಲಿ ಅಪಾಪೋಲಿಯಾಗಿ "ವಿಶ್ವ"ವನ್ನೆ "ಸಂತೋಷ"ವಾಗಿ ಸುತ್ತು ಹಾಕುತ್ತಿದ್ದ ಎಡಬಿಡಂಗಿಯೊಬ್ಬ ವಯಕ್ತಿಕ ತೆವಲಿನ ಹಿಕಮತ್ತನ್ನ ಸಾಧಿಸಿಕೊಳ್ಳಲು ತನ್ನ ಹಳೆಯಹೆಸರಿನ ಮುಂದೆ "ಭಾರತಿ ಶ್ರೀಪಾದಂಗಳ್" ಎನ್ನುವ ದೊಂಬರ ಹಾಗಿನ ಉತ್ತರ ನಾಮ ಸಿಕ್ಕಿಸಿಕೊಂಡು ಹಾಸ್ಯಾಸ್ಪದನಾಗಿ ಕಂಗೊಳಿಸುತ್ತಿದ್ದಾನೆ, ಅದೆಷ್ಟೆ ಲಾಗ ಹೊಡೆದರೂ ಆತನೂ ಬಂಟರಲ್ಲಿ ಮಠ ಪರಂಪರೆ ಹುಟ್ಟು ಹಾಕುವುದು ಅಸಾಧ್ಯ.


ಇಂತಿಪ್ಪ ಬಂಟರು ಶೀಘ್ರ ಕೋಪಿಗಳಾಗಿರುವುದರಿಂದ ನ್ಯಾಯ ಪಂಚಾಯ್ತಿಯೋ- ಊರ ದೇವಸ್ಥಾನದ ಉತ್ಸವವೊ ಎಲ್ಲೆ ಅವರು ಹೋದಲ್ಲಿ, ಅಲ್ಲೊಂದು ಹೊಡೆದಾಟವಾಗುವುದು ನಿಶ್ಚಿತ! ಎನ್ನುತ್ತದೆ ಈ ಗಾದೆಯ ಪೂರ್ವಾರ್ಧ. ಈ ಮೊದಲೆ ಹೇಳಿದಂತೆ ಬಂಟರ ಸಾಮಾನ್ಯ ನೆಲೆಯಲ್ಲಿನ ಸ್ವಭಾವವನ್ನ ಈ ಹೇಳಿಕೆ ಆಧರಿಸಿದೆ. ಅಂತೆಯೆ ಮೊಡಂಜಿ ಮೀನಿನ ಗುಣ. ಸಿಹಿ ನೀರಿನ ಬೃಹತ್ ಮೀನಾದ ಮೊಡಂಜಿ ತನ್ನ ಗಾತ್ರವೆ ಹೆಚ್ಚು ಎಂದು ಮೆರೆಯುತ್ತದಂತೆ. ಕಡಲಿನ ಒಡಲಿನಲ್ಲಿರಬಹುದಾದ ತನಗಿಂತ ದೊಡ್ದ ಮೀನುಗಳ ಗಾತ್ರದ ಅರಿವಿಲ್ಲದ ಮೊಡಂಜಿ ತಾನಿರುವಲ್ಲಿ ಮಾತ್ರ ಕೆಸರೆಬ್ಬಿಸಿಕೊಂಡು ದರ್ಬಾರು ಮಾಡುತ್ತಾ ಇನ್ನಿತರ ಸಣ್ಣಪುಟ್ಟ ಮೀನುಗಳ ಸಹಿತ ಜಲಚರಗಳನ್ನ ಹೆದರಿಸಿಕೊಂಡು ಕಾಲ ಹಾಕುತ್ತದೆ. ಬಂಟರ ನೇರ ನಡೆ, ಒಂದು ಏಟು ಎರಡು ತುಂಡು ಎನ್ನುವ ಖಡಕ್ಕಾದ ಮಾತುಗಾರಿಕೆಯ ವರ್ತನೆಯನ್ನ ವಕ್ರವೆಂದು ತಪ್ಪಾಗಿ ಗ್ರಹಿಸಿದ ಮಂದಿ ಮೊಡಂಜಿಯ ದಾದಾಗಿರಿಯನ್ನ ಬಂಟರಿಗೆ ಸಮೀಕರಿಸಿ ಈ ಗಾದೆಯನ್ನ ಹುಟ್ಟು ಹಾಕಿಕೊಂಡಿರಬಹುದು.}


( ಬಂಟೆರ್ ಪೋಯಿನಲ್ಪ ಮೊಡಂಕ್ ತಪ್ಪಂದ್, ಮೊಡೆಂಜಿ ಪೋಯಿನಲ್ಪ ಕಳಂಕ್ ತಪ್ಪಂದ್ = ಬಂತರು ಹೋದಲ್ಲಿ ವಕ್ರತೆ ತಪ್ಪದು, ಮೊಡಂಜಿ ಹೋದಲ್ಲಿ ಕೆಸರು ತಪ್ಪದು.)

ತುಳುಗಾದೆ-೪೭





"ನೀರಾಂಡಲ ಅಲೆಗೆ, ಮರ್ಲಾಂಡಲ ಅಪ್ಪೆಗೆ"


{ ಕರುಳಿನ ಬಾಂಧವ್ಯ ಗ್ರಹಿಕೆಗೆ ಮೀರಿದ್ದು. ಹೊತ್ತ ತಾಯಿ ಹೆತ್ತ ನಂತರ ತನ್ನ ಕೂಸನ್ನ ಲಾಲಿಸಿ ಪಾಲಿಸ ಬೇಕಾದದ್ದು ಲೋಕಾರೂಢಿ. ಆದರೆ ಈ ಸುಮಧುರ ಸಂಬಂಧ ಆಕೆಯೊಂದಿಗೆ ಆಕೆ ಹೆತ್ತ ಪ್ರತಿ ಮಕ್ಕಳಿಗೂ ಇರಲೆ ಬೇಕಂದೇನಿಲ್ಲ. ಅದು ಕೇವಲ ತೋರಿಕೆಯ, ವ್ಯಾವಹಾರಿಕ ಹಾಗೂ ಕೃತಕ ಬಾಂಧವ್ಯವಾಗಿರುವ ಸಂಭವಗಳೂ ಇವೆ. ಇದು ಸಂಬಂಧಗಳಲ್ಲಿನ ಸಂಕೀರ್ಣತೆಗಿರುವ ನಿದರ್ಶನ. ಅದೇನೆ ಇದ್ದರೂ, ತಾಯಿ ಮಕ್ಕಳ ನಡುವಿನ ಸಂಬಂಧದ ಸೌಹಾರ್ದತೆ ಅದೆಷ್ಟೆ ಲೆಕ್ಖಾಚಾರದ ಬುನಾದಿಯ ಮೇಲೆ ನಿಂತಿದ್ದರೂ ನೈಸರ್ಗಿಕವಾಗಿ ಏರ್ಪಟ್ಟ ಪರಸ್ಪರರ ಸಂಬಂಧವನ್ನ ಸುಲಭವಾಗಿ ತಿರಸ್ಕರಿಸಲಾಗದು ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ.


ಬಡತನ ಹೆಚ್ಚು ಕಡಿಮೆ ಗ್ರಾಮೀಣ ಭಾರತದಾದ್ಯಂತ ಸಾರ್ವತ್ರಿಕವಾಗಿದ್ದ ದಿನಗಳಲ್ಲಿ ಈ ಗಾದೆಗೆ ಜೀವ ಬಂದಿರಬಹುದು ಅನ್ನಿಸುತ್ತದೆ. ಊಟದಲ್ಲಿ ಅದೆಷ್ಟೆ ಮೇಲೋಗರಗಳಿದ್ದರೂ ಮಜ್ಜಿಗೆ ಅದಕ್ಕೊಂದು ವಿಶಿಷ್ಟ ಮೆರಗು ತರುತ್ತದೆ. ಆರೋಗ್ಯದ ಹಿತದೃಷ್ಟಿಯಿಂದಲೂ ಮಜ್ಜಿಗೆ- ಮೊಸರು ಒಳ್ಳೆಯದು. ಆದರೆ ನೆಟ್ಟಗೆ ನಾಲ್ಕು ಹನಿ ಹಾಲಿಗೂ ತತ್ವಾರವಾಗಿದ್ದ ನಮ್ಮಲ್ಲನೇಕರ ಬಾಲ್ಯದಲ್ಲಿ ಮೊಸರು ಅತ್ತಲಾಗಿರಲಿ ಮಜ್ಜಿಗೆಗೆ ಕೂಡ ಅಷ್ಟು ಅನುಕೂಲವಿರುತ್ತಿರಲಿಲ್ಲ. ಮನೆ ತುಂಬ ಮಕ್ಕಳಿರುತ್ತಿದ್ದ ಸಂಸಾರಗಳಲ್ಲಂತೂ ಒಂದಷ್ಟು ನೀರನ್ನ ಇರುತ್ತಿದ್ದ ಚೂರು ಮಜ್ಜಿಗೆಗೆ ಧಾರಾಳವಾಗಿಯೆ ಬೆರೆಸಿ ಎಲ್ಲರಿಗೂ ತಕ್ಕಷ್ಟು ಮಜ್ಜಿಗೆ ಮುಟ್ಟುವಂತೆ ಮಾಡಲಾಗುತ್ತಿತ್ತು. ಇಲ್ಲಿ ಹೀಗೆ ಸಿಗುತ್ತಿದ್ದ ಮಜ್ಜಿಗೆಯ ಗುಣ ಮಟ್ಟಕ್ಕಿಂತಲೂ ಅದನ್ನ ಎಲ್ಲರಿಗೂ ಮುಟ್ಟಿಸುವ ಮನಸಿನ ಪ್ರೀತಿ ತುಂಬಿದ ಕಾಳಜಿಯನ್ನ ಗಮನಿಸಬೇಕಾದುದು ಇಲ್ಲಿ ಮುಖ್ಯ ಎನ್ನುತ್ತದೆ ಈ ಗಾದೆಯ ಪೂರ್ವಾರ್ಧ.


ಹಾಗೆಯೆ ಸರಿಯಿದ್ದರೂ, ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡ ಮರುಳಾಗಿದ್ದರೂ ತಾಯಿ ತಾಯಿಯೆ ಅಂತೆ. ಅದು ಬದಲಿಸಲಾಗದ ನಿತ್ಯ ಸತ್ಯ. ಹುಚ್ಚಿಯೆಂದ ಮಾತ್ರಕ್ಕೆ ಅದನ್ನ ಎಲ್ಲರ ಕಣ್ಣಿನಿಂದ ಮುಚ್ಚಿಟ್ಟು ನಮಗೂ ಆಕೆಗೂ ಏನೊಂದೂ ಸಂಬಂಧವಿಲ್ಲವೆಂದು ಸಾಧಿಸಲಾಗದು. ಇರುವ ಮಿತಿಯಲ್ಲಿಯೆ ಆಕೆಯನ್ನ ಸಾಧ್ಯವಾದಷ್ಟು ಕಕ್ಕುಲಾತಿಯಿಂದ ನೋಡಿಕೊಳ್ಳುವುದೆ ಧರ್ಮ ಎನ್ನುವ ವಿವೇಕ ಬೋಧನೆ ಮಾಡುತ್ತದೆ ಈ ಗಾದೆಯ ಉತ್ತರಾರ್ಧ. ಸಂಬಂಧ ಹಾಗೂ ಅದರ ಸಂಕೀರ್ಣತೆಯನ್ನ ಸೂಕ್ಷ್ಮವಾಗಿ ವಿವರಿಸುವ ಸರಳ ಸುಂದರ ಗಾದೆಯಿದು.}






( ನೀರಾಂಡಲ ಅಲೆಗೆ, ಮರ್ಲಾಂಡಲ ಅಪ್ಪೆಗೆ = ನೀರಾದರೂ ಮಜ್ಜಿಗೆಯಂತೆ, ಹುಚ್ಚಾದರೂ ತಾಯಿಯಂತೆ.)

Friday, March 15, 2013

ತುಳುಗಾದೆ-೪೫







"ಕೈತಲ್'ದ ಇಲ್ಲಗ್ ಸೂ ಪತ್ತುದ್ ಉರಿದ್ ಪೋಂಡ ದಾನೆ? ಯನ್ನ ಕಂಡೊಗ್ ಸೊಂಟಾನ್ ಆಂಡ್!"


{ ಇದು ಸ್ವಾರ್ಥ, ವ್ಯಕ್ತಿ ಕೇಂದ್ರಿತ ವ್ಯಕ್ತಿತ್ವದ ಹೃದಯಹೀನತೆಯನ್ನ ವರ್ಣಿಸುವ ಗಾದೆ. ವ್ಯಕ್ತಿಯೊಬ್ಬ ತನ್ನ ಸ್ವಂತ ಲಾಭದ ಬಗ್ಗೆ ಮಾತ್ರ ಯೋಚಿಸುವಾಗ, ತನ್ನ ತುತ್ತಿನ ಚೀಲ ತುಂಬಿಸಿಕೊಳ್ಳುವ ದುರಾಸೆಯಲ್ಲಿ ಇನ್ನೊಬ್ಬರ ಕತ್ತು ಹಿಸುಕಿ ಕೊಲ್ಲಲಿಕ್ಕೂ ಹೇಸದಿದ್ದಾಗ. ಇನ್ನೊಬ್ಬರ ಸಂಕಟದ ಹಳಹಳಿಕೆಯಲ್ಲೂ ಸ್ವಂತದ ಹೋಳಿ ಹುಣ್ಣಿಮೆಯ ಲೆಕ್ಕಾಚಾರ ಹಾಕುವಾಗ ಅವರ ಆ ಅಸಹ್ಯದ ವರ್ತನೆಯನ್ನ ತುಚ್ಛೀಕರಿಸಲಿಕ್ಕೆ ಹಿರಿಯರು ಈ ಗಾದೆಯನ್ನ ಹುಟ್ಟು ಹಾಕಿರಬಹುದು.


ಹಿಂದೆ ಹೇಳಿದಂತೆ ತುಳುನಾಡು ಭಾರತ ಉಪಖಂಡದ ಇನ್ನಿತರ ಭಾಗಗಳಂತೆ ಕೃಷಿಯನ್ನೆ ಬಾಳ್ವೆಯ ಮೂಲಾಧಾರ ಮಾಡಿಕೊಂಡಿರುವ ನೆಲ. ಇಲ್ಲಿನ ಜನರ ಅನೇಕ ಗಾದೆಗಳು ಸಹ ಈ ಕಾರಣಕ್ಕೆ ಕೃಷಿ ಚಟುವಟಿಕೆಗಳೊಂದಿಗೆ ತಳುಕು ಹಾಕಿಕೊಂಡಿವೆ. ಹಾಗಾಗಿ ಬಹುಪಾಲು ಹೋಲಿಕೆಗಳನ್ನು ಕೃಷಿಗೆ ಸಮೀಕರಿಸಿಯೆ ನೀಡಲಾಗುತ್ತದೆ. ಒಬ್ಬನ ಮನೆಯ ಸಮೀಪವಿರುವ ನೆರೆಯವನ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅದು ಹೊತ್ತಿ ಉರಿಯಿತಂತೆ. ಸಾಮಾನ್ಯವಾಗಿ ಸ್ಥಿತಿವಂತರೂ ಮನೆಯ ಛಾವಣಿಗೆ ಮುಳಿ ಹುಲ್ಲು ಹೊದಿಸುಸುವ ಕಾಲ ಅದಾಗಿದ್ದು ಆ ಮನೆ ಧಗಧಗ ಹೊತ್ತಿ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆಯೂ ಚಾಚಿ ಸಮಸ್ತವನ್ನೂ ನುಂಗಿ ನೊಣೆದು ಬೂದಿ ಮಾಡಿರಲಿಕ್ಕೆ ಸಾಕು. ಆದರೆ ಈ ದೊಡ್ಡ ಮನುಷ್ಯ ಅದಕ್ಕೆ ಮರುಗಿ ತನ್ನಿಂದ ಸಾಧ್ಯವಾದಷ್ಟು ಸಹಾಯ ಹಸ್ತ ಚಾಚುವುದು ಅತ್ತಲಾಗಿರಲಿ, ಒಳಗೊಳಗೆ "ಸುಟ್ಟರೆ ಸುಡಲಿ! ಈ ಸಾರಿ ನನಗೆ ಸುಡುಮಣ್ಣೂ ಮಾಡುವ ಕೆಲಸ ಉಳಿಯಿತು. ಆ ಸುಟ್ಟ ಮನೆಯ ಗೋಡೆಯ ಮಣ್ಣನ್ನೆ ತಂದು ಗದ್ದೆಗೆ ಸುರಿದರಾಯ್ತು?!" ಎಂದು ತನಗಾಗಬಹುದಾದ ಲಾಭದ ಲೆಕ್ಖಾಚಾರ ಹಾಕಿದನಂತೆ. ಎಂತಾ ಹೃದಯಹೀನನಿದ್ದಾನು ಆತ?


ಸುಡುಮಣ್ಣು ಕೃಷಿಗೆ ಅತಿಮುಖ್ಹ್ಯ ವಸ್ತು. ಗದ್ದೆ ಬೇಸಿಗೆಯಲ್ಲಿ ಒಣಗಿ ಒಡೆದು ನಿಂತಾಗ ಕಸ ಕಡ್ಡಿ ಕಿತ್ತ ಕಳೆ ಹಾಗೂ ಸುತ್ತ ಮುತ್ತಲ ಮರಗಳ ಉದುರಿದ ಎಲೆಗಳ ದರಗು ಇವೆಲ್ಲವನ್ನು ರಾಶಿ ಹಾಕಿ ಅದರ ಮೇಲೆ ಮಣ್ಣು ಸುರಿದು ಗದ್ದೆಯ ನಡುವೆಯೆ ಬೆಂಕಿ ಹಚ್ಚಿ ಅವೆಲ್ಲ ಸುಟ್ಟೂ ಒಂದಾಗಿ ಬೂದಿಯೊಂದಿಗೆ ಬೆರೆತ ಸುಡುಮಣ್ಣನ್ನ ತಯಾರಿಸಲಾಗುತ್ತದೆ. ಗದ್ದೆಯ ಬರಡು ಗುಣವನ್ನ ನಿವಾರಿಸುವ ಫಲವತ್ತಾದ ಸುಡುಮಣ್ಣು ಕೃಷಿಕರಿಗೆಲ್ಲ ಚಿರಪರಿಚಿತ. ಇದನ್ನೆ ಮಾಧ್ಯಮವಾಗಿಸಿ ದುಷ್ಟ ಗುಣವನ್ನ ವರ್ಣಿಸುವ ವಿಶಿಷ್ಟ ಗಾದೆಯಿದು. "ನೆರೆಮನೆಗೆ ಬೆಂಕಿ ಬಿದ್ದರೆ ಅದರಲ್ಲಿ ಚಳಿ ಕಾಯಿಸಿಕೊಳ್ಳೂವವರು" ಎನ್ನುವ ಕನ್ನಡದ ಸಮಯಸಾಧಕರ ಹಣೆಬರಹವೂ ಇದೆ ತಾನೆ?. ಈ ಗಾದೆ ಕಂಡವರ ಮನೆಯೊಡೆದರೆ ಹಬ್ಬ ಮಾಡಿ ಟಿಆರ್'ಪಿ ಕನಸು ಕಾಣುವ ಕನ್ನಡದ ವಾರ್ತಾವಾಹಿನಿಗಳ ದುರುಳ ಬುದ್ಧಿಯನ್ನ ನೋಡಿಯೆ ಸೃಷ್ಟಿಸಿದಂತೆ ನಿಮಗೆ ಗೋಚರಿಸಿದರೆ ಅದು ಕೇವಲ ಆಕಸ್ಮಿಕ! }

( ಕೈತಲ್'ದ ಇಲ್ಲಗ್ ಸೂ ಪತ್ತುದ್ ಉರಿದ್ ಪೋಂಡ ದಾನೆ? ಎನ್ನ ಕಂಡೊಗ್ ಸೊಂಟಾನ್ ಆಂಡ್! = ಹತ್ತಿರದ ಮನೆಗೆ ಬೆಂಕಿ ಹೊತ್ತಿ ಉರಿದು ಹೋದರೆ ಏನು? ನನ್ನ ಗದ್ದೆಗೆ ಸುಡು ಮಣ್ಣಾಯಿತು! )