Friday, August 13, 2010

".....ಕಪಿತ್ತ ಜಂಬೋ ಫಲಸಾರ ಭಕ್ಷಿತಂ"

ಮೂರು ಸಂಜೆ ಅಂತನ್ನುವ ಆ ಹೊತ್ತಿನಲ್ಲಿ ದೇವರ ಮನೆಯಲ್ಲಿ ಶೃಂಗೇರಿ ಶಾರದೆ,ಕಟೀಲು ದುರ್ಗಾಪರಮೇಶ್ವರಿ,ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸಹಿತ ಅಷ್ಟೂ ದೇವರುಗಳು,ಕೊಲ್ಲೂರು ಮೂಕಾಂಬಿಕೆ,ಹೊರನಾಡ ಅನ್ನಪೂರ್ಣೆ,ಉಡುಪಿ ಕೃಷ್ಣ,ಕಾಶಿ ವಿಶ್ವನಾಥನ ಕಟ್ಟು ಹಾಕಿಸಿದ ಪಟಗಳ ಜೊತೆಗೆ ಬೀಡಿ-ಸೋಪು-ಬ್ಲೇಡ್-ಪೇಯಿಂಟ್ಗಳ ಪ್ರಚಾರ ಕ್ಯಾಲೆಂಡರ್ಗಳಲ್ಲಿ ಕಾರಣವೆ ಇಲ್ಲದೆ ಸೆರೆಸಿಕ್ಕವರಂತೆ ಮುದ್ರಿತರಾಗಿ,ಈಗ ನನ್ನಜ್ಜನ ಒತ್ತಡಕ್ಕೆ ಅನಿವಾರ್ಯವಾಗಿ ಮಣಿದು (ಬೇರೆದಾರಿಯಾದರೂ ಅವರೆಲ್ಲರಿಗೆ ಏನಿತ್ತು ಪಾಪ!) ಕಪ್ಪು ಅಂಚಿನ ಫ್ರೇಮ್ ಸೇರಿ ಸದ್ಯಕ್ಕೆ ಈ ಕ್ಷುಲ್ಲಕ ಜಗತ್ತಿನ ಗೋಳುಗಳಿಂದ ಸೇಫಾಗಿದ್ದ ಖಾದರ್ಸಾಬರ ಮೂರುಮಾರ್ಕ್ "ಬೀಡಿ" ಲಕ್ಷ್ಮಿ (ಜೂಲಿ ಲಕ್ಷ್ಮಿ ತರಹ),ಭಾರತ್ ಬೀಡಿ ಸರಸ್ವತಿ,ಸಂತೂರ್ ಸೋಪಿನ ಶಿವಪಾರ್ವತಿ,ಮಹಾಲಸ ಜುವೆಲ್ಲರ್ಸ್ ಗಣಪತಿ,ಏಷ್ಯನ್ ಪೇಯಿಂಟ್ ಸುಬ್ರಮಣ್ಯ,ಲಿಂಗೇಶ್ವರ ಕಟ್ಟಿಂಗ್ ಶಾಪ್,ಸವಳಂಗ ರಸ್ತೆ,ಶಿವಮೊಗ್ಗ ಇವರ ಅಕ್ಕಮಹಾದೇವಿ.,ಮಹಾವೀರ ಕ್ಲಾತ್ ಸೆಂಟರ್ನ ಗೊಮ್ಮಟೇಶ್ವರ ಹೀಗೆ ಆ ಉದ್ಯಮಗಳಿಗೆ ಚೂರೂ ಸಂಬಂಧಿಸದ ಮೂರೂ ಮುಕ್ಕಾಲು ದೇವತೆಗಳ (ಕೆಲವು ದೇವಾನುದೇವತೆಗಳ ಅಸಹಜ ಗಾತ್ರದ ಚಿತ್ರಗಳು ಫ್ರೇಮ್ ಗಾತ್ರಕ್ಕೆ ಅನುಗುಣವಾಗಿ ದೇಹದ "ಕೆಳಗಿನ" ಅವಯವಗಳನ್ನು ಕಳೆದು ಕೊಂಡು ಅಂಗವಿಕಲರಾಗಿರುತ್ತಿದ್ದುದೂ ಉಂಟು!) ಸಾಲಿಗೆ ದೀಪ ಹಚ್ಚಿ,ಅದರಲ್ಲೊಂದು ಹಣತೆ ದೀಪವನ್ನಿರಿಸಿ ಕಡೆಗೆ ಮನೆ ಮುಂದಿನ ತುಳಸಿ ಕಟ್ಟೆಗೆ ಕೊಂಡೊಯ್ದು ಇಟ್ಟು ಕೈ ಮುಗಿಯ ಬೇಕಿತ್ತು.


ಇಷ್ಟಾದ ಮೇಲೆ ಯಾವ ರಾಗದ ಖಚಿತ ಹಂಗೂ ಇಲ್ಲದ ನಮ್ಮದೇ ಧಾಟಿಯಲ್ಲಿ ನಾಲ್ಕಾರು ಭಜನೆಗಳನ್ನೂ ಮನೆಯ ಮಕ್ಕಳೆಲ್ಲ ಸಾಮೂಹಿಕವಾಗಿ ಅರಚುತ್ತಿದ್ದೆವು.ಈ ಅಪಶ್ರುತಿಯ ಪ್ರಲಾಪವನ್ನು ಕೇಳಿ ಕೇಳಿ ದೇವರುಗಳಿಗೆಲ್ಲ ಸುಸ್ತಾಗಿಯೋ...ಇಲ್ಲ...ತಾಳ ಕುಟ್ಟುತ್ತಾ ಕೂಗಿ ಕೂಗಿ ಕಡೆಗೆ ನಮಗೆ ಸುಸ್ತಾಗಿಯೋ ಅಂತೂ ಮಂಗಳಕ್ಕೆ ಬಂದು ಮುಟ್ಟುತ್ತಿದ್ದೆವು.ಈ ಮಂಗಳದೊಂದಿಗೆ ಮಂಗಳಾರತಿ ಮುಗಿದರೂ ಬಾಯಿಪಾಠ ಮಾಡಿಕೊಂಡಿರುತ್ತಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಸಂಸ್ಕೃತ ಶ್ಲೋಕಗಳನ್ನು ಕೇಳಿದವರಿಗೆ ಶೋಕ ಒತ್ತರಿಸಿಕೊಂಡು ಬರುವಂತೆ ಅಪಭ್ರಂಶದಲ್ಲಿ ದೇವರನ್ನೇ ಹೆದರಿಸುವಂತೆ ಘರ್ಜಿಸದ ಹೊರತು ನಮ್ಮ ಪ್ರಾಥನೆಯ ಕಲಾಪ ಮುಗಿಯುತ್ತಿರಲ್ಲಿಲ್ಲ.ನಮ್ಮ ಈ ಎಲ್ಲ ಕಿರುಕುಳಗಳನ್ನು ಸಹಿಸಲು ಆ ಎಲ್ಲ ದೇವಗಣಗಳಿಗೆ ಆಗುತ್ತಿತ್ತಲ್ಲ ಎಂದು ಇಂದಿಗೂ ಸೋಜಿಗ ಪಡುತ್ತೇನೆ.ಇಷ್ಟಾಗಿ ಇಲ್ಲಿ ಭಜನೆ ಮುಗಿಸಿ ಎದುರು ಮನೆ ಬಪಮನ ಗಣಪತಿ ಕಡ್ಲೆಗಾಗಿ ಅವರ ಮನೆಯತ್ತ ಓದುತ್ತಿದ್ದೆ.ಅವರ ಮನೆ ಗಣಪತಿಯ ನೈವೇದ್ಯವಾಗಿ ಅವರು ನೆನೆಸಿದುತ್ತಿದ್ದ ಹಸಿ ಕಡಲೆಯ ಪಾಲಿಗಾಗಿ ಇನ್ನೂ ಅನೇಕ ಪ್ರತಿ ಸ್ಪರ್ಧಿಗಳು ಸುಟ್ಟ ಮುತ್ತಲ ಮನೆಗಳಿಂದ ದೊವ್ದಾಯಿಸುವ ಅಪಾಯ ಕಟ್ಟಿಟ್ಟ ಬುತ್ತಿ ಯಾಗಿರುತ್ತಿದ್ದರಿಂದ ಹೀಗೊಂದು ಅಕಾಲದ ರನ್ನಿಗ್ ರೇಸ್ ನನ್ನ ಬಾಲ್ಯದುದ್ದಕ್ಕೋ ಇದ್ದ ತುರ್ತು ಅಗತ್ಯಗಳಲ್ಲಿ ಒಂದಾಗಿತ್ತು.





ಬಪಮ ಕಡ್ಲೆ ಕೊಡುವಾಗ ಅವರ ಸೊಸೆ ಗೀತಮ್ಮ ತುಳಸಿಕಟ್ಟೆಗೆ ಸುತ್ತು ಹಾಕುತ್ತ ಮೂಗಿನಲ್ಲೇ ದೇವರ ನಾಮ ಹಾಡಿಕೊಳ್ಳುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ( ನೆನ್ನೆ ಅವರ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿಗೆ ಹೋಗಿದ್ದೆ!) ಅವರ ಮೂಗುರಾಗಕ್ಕೆ ನಮ್ಮದೂ ಶ್ರುತಿ ಅನಪೇಕ್ಷಿತವಾಗಿ"....ಕಪಿತ್ತ ಜಂಬೋ ಫಲಸಾರ ಭಕ್ಷಿತಂ" ಎಂದು ಸೇರುತ್ತಿತ್ತು.ಸರಿ ಸುಮಾರು ಹೀಗೆಯೇ ಇರುತ್ತಿದ್ದ ನನ್ನ ಬಹುಪಾಲು ಸಂಜೆಗಳು ಈಗ ಕೈಜಾರಿ ಹೋಗಿ ಯಾವುದೋ ಕಾದಿಟ್ಟ ನಿಧಿ ಕಳೆದು ಕೊಂಡ ಅರ್ಜೆಂಟ್ ನಿರ್ಗತಿಕನ ಫೋಸ್ ಕೊಟ್ಟುಕೊಳ್ಳುತ್ತಾ ನನ್ನನ್ನು ನಾನೇ ಸಂತೈಸಿಕೊಳ್ಳುತ್ತಿರುತ್ತೇನೆ.ಇವತ್ತಿಗೂ ಮುಕ್ತಿಯಿಲ್ಲದೆ ಅವವೇ ಫ್ರೇಮ್ ಗಳಲ್ಲಿ ಸಿಲುಕಿ ಒರಲೆಗಳಿಂದ ಕಚ್ಚಿಸಿಕೊಂಡು ಒದ್ದಾಡುತ್ತಿರುವ ದೇವಾನು ದೇವತೆಗಳಿಗೂ ಇಂತಹದ್ದೊಂದು ಶೂನ್ಯ ಕಾಡುತ್ತಿರಬಹುದು ಎಂಬ ಗುಮಾನಿ ನನಗಿದೆ.



ಇಷ್ಟೆಲ್ಲಾ ಆಗಿ ಮುಗಿಯುವಾಗ ಶಾಲೆಯ ಚೀಲ-ಅದರೊಳಗೆ ಬಿಲದೊಳಗಣ ಇಲಿಯಂತೆ ಹುದುಗಿರುತ್ತಿದ್ದ ಮನೆಕೆಲಸದ ಪುಸ್ತಕಗಳನ್ನು ಇಷ್ಟವಿಲ್ಲದಿದ್ದರೂ ಹೊರಗೆ ತೆಗೆಯಲೇ ಬೇಕಾಗಿದ್ದ ದಿನದ ಅತಿ ಕೆಟ್ಟ ಘಳಿಗೆಗಳು ಬಂದೆ ಬಿಟ್ಟಿರುತ್ತಿದ್ದವು. ಇಷ್ಟವಿಲ್ಲದಿದ್ದರೂನು ಈ ಪ್ರಾರಬ್ಧ ಕರ್ಮದಿಂದ ಪಾರಾಗಲು ಬೇರೆ ದಾರಿ ಇರುತ್ತಿರಲಿಲ್ಲವಾಗಿ ಅನಿವಾರ್ಯವಾಗಿ ಹೋಂ ವರ್ಕ್ ಮಾಡಲು ಸನ್ನದ್ಧನಾಗುತ್ತಿದ್ದೆ.ವಾಸ್ತವವಾಗಿ ನಾನು ಓದಿನಲ್ಲಿ ಸಾಕಷ್ಟು ಜಾಣನಾಗಿದ್ದೆ.ಕಾಪಿ ಬರೆಯುವುದೂ ಸೇರಿದಂತೆ ಶಾಲೆಯಲ್ಲಿ ಕೊಡುತ್ತಿದ್ದ-ನನ್ನ ಪಾಲಿಗೆ ತೀರಾ ಚಿಲ್ಲರೆ ಅನ್ನಿಸುತ್ತಿದ್ದ ಮನೆಕೆಲಸಗಳಿಗೆ ಇನ್ನೂ ಕಡೆಯ ಘಂಟೆ ಹೊಡೆಯುವ ಮೊದಲು ಅಲ್ಲೇ ಮೋಕ್ಷ ಕಲ್ಪಿಸಿರುತ್ತಿದ್ದೆ.ಆದರೀಗ ಇಲ್ಲದ ಮನೆಗೆಲಸವನ್ನು ಈ ಟ್ಯೂಬ್ ಲೈಟ್ ಅಡಿ ಕೂತು ಮಾಡೋದಾದರೂ ಎಲ್ಲಿಂದ? ಹೀಗಾಗಿ ಓದುವ ನಾಟಕ ನಿರಂತರವಾಗಿ ಮಾಡುತ್ತಿದ್ದೆ.ನಡುವೆ ನಿದ್ದೆಯ ಸೆಳೆತ ವಿಪರೀತವಾದಾಗ ತಲೆಯನ್ನು ಹಿಡಿತ ಮೀರಿ ತೂಗದಂತೆ ನಿಗಾವಹಿಸುವ ಕೆಲಸಕ್ಕೆ ಯಾರ ಅಪ್ಪಣೆ ಇಲ್ಲದಿದ್ದರೂ ಸದಾ ಸಿದ್ದ ವಾಗಿರುತ್ತಿದ್ದ ನನ್ನ ಕಡೆಯ ಚಿಕ್ಕಮ್ಮ ಟಪ್ ಎಂದು ಜೋರಾಗಿ ತಲೆಯ ಮೇಲೊಂದು ಏಟು ಹಾಕುತ್ತಿದ್ದಳು.ಅವಳು ತನ್ನ ಹೋಮ್ವರ್ಕ್ ಮಾಡಲು ಕೂತಿದಾಳೋ ಇಲ್ಲ ನನಗೆ ತಲೆ ಮೊಟಕಲೋ ಎಂಬ ಸಂಶಯ ನನಗಿವತ್ತಿಗೂ ಇದೆ.ಈ ಪ್ರಹಸನ ಕಷ್ಟದಲ್ಲಿ ಮುಗಿಯುವಾಗ ಕಡೆಗೂ ಊಟದ ಸಮಯ ಆಗಿರುತ್ತಿತ್ತು.



ಮತ್ತೆ ಅಗೋಳಿ ಮಂಜಣನ ಸಾಕ್ಷಾತ್ಕಾರವಾಗುವ ಹೊತ್ತದು.ಊಟಕ್ಕೆ ಕಳ್ಳತನ ಮಾಡುತ್ತಿದ್ದ ನನಗೆ "ಬೇಗ ಉಂಡವರು ಗಿಳಿಯಂತೆ; ನಿಧಾನವಾಗಿ ಉಣ್ಣುವವರು ಕಾಗೆಯಂತೆ!!" ( ಗಿಳಿಯಾಗಿ ಬರುವ ಭಾಗ್ಯವೇನು? ಕಾಗೆಯಾದರೆ ನಷ್ಟವೇನು ಎಂಬ ಪ್ರಶ್ನೆಗೆ ಇನ್ನೂ ಅರ್ಥ ಹುಡುಕುತ್ತಿದ್ದೇನೆ!) ಎನ್ನುವ ಪುಸಲಾವಣೆ ಮಾವ ಹಾಗು ಚಿಕ್ಕಮ್ಮಂದಿರದು.ಗಿಳಿಯಾಗಲು ನನ್ನ ಅಳತೆ ಮೀರುತ್ತಿರುವ ಸಂಪೂರ್ಣ ಅರಿವಿದ್ದರೂ ಒತ್ತಾಯದಲ್ಲಿ ತುರುಕಿಕೊಂಡು ಕಾದರೆ ಗಿಳಿಯಾಗುವ ಮೊದಲೇ ಅಗೋಳಿ ಮಂಜಣನೆಂಬ ಬಿರುದು ಉಚಿತವಾಗಿ ಸಿಕ್ಕಿರುತ್ತಿತ್ತು! ನನ್ನ ಊಟ ಮಾಡುವುದರಲ್ಲಿದ್ದ ನಿರಾಸಕ್ತಿಗೆ ಅವರು ಅರಿಯುತ್ತಿದ್ದ ಇಂತಹ ಭೀಕರ ಮದ್ದುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೊ? ತಿಳಿಯದೆ ಗಲಿಬಿಲಿಯಾಗುತ್ತಿತ್ತು. ಅಸಹಾಯಕತೆಯೆ ಮಡುಗಟ್ಟಿರುತ್ತಿದ್ದ ಜಲಪಾತ ಇನ್ನೇನು ನನ್ನ ಬೋಳೆ ಕಣ್ಣುಗಳಿಂದ ಉದುರೋಕೆ ಸರ್ವ ಸನ್ನದ್ಧವಾಗಿರುತ್ತಿದ್ದವು.ಆದರೆ ಊಟದ ಬಗ್ಗೆ ನನಗಿದ್ದ ನಿರಾಸಕ್ತಿಯ ಅಸಲು ಕಾರಣ ಅವರ್ಯಾರಿಗೂ ಗೊತ್ತಿರಲೇ ಇಲ್ಲ!.
{ನಾಳೆಗೆ ಮುಂದುವರಿಸುವೆ}

Thursday, August 12, 2010

ಸಂಜೆ ಸೂರ್ಯನೇ..

ಮನೆಯಿಂದ ಸುಮಾರು ಒಂದೂವರೆ ಫಾರ್ಲಂಗ್ ದೂರದಲ್ಲಿದ್ದ ನಮ್ಮ ಶಾಲೆ ಬಿಟ್ಟ ತಕ್ಷಣ ಮನೆಯತ್ತ ಓಟ ಹೂಡುವ ನನಗೆ ಮರಳಿ ಮನೆ ಸೇರೋಕೆ ಹೆಚ್ಚೆಂದರೆ ಹತ್ತು ನಿಮಿಷ ಸಾಕಾಗುತ್ತಿತ್ತು.ತೀರಾ ಸಂಪ್ರದಾಯ ಬದ್ಧತೆಯೂ-ಅದೇ ವೇಳೆಗೆ ವಿಶಾಲ ಮನೋಭಾವವೂ ಸಮಾಸಮ ವಾಗಿದ್ದ ಕುಟುಂಬದ ಹಿನ್ನೆಲೆ ನನ್ನದು.ಶಾಲೆ ಮುಗಿಸಿ ಮನೆಗೆ ಬಂದವನಿಗೆ ಮೊದಲು ಮನೆಯ ಸುತ್ತಲೂ ಬೆಳಸಿದ್ದ ಗಿಡಗಳಿಗೆ ನೀರು ಹಾಕುವ ಕೆಲಸವಿರುತ್ತಿತ್ತು.ಬರಿ ಚಡ್ಡಿಯಲ್ಲಿ ಭರಪೂರ ನೀರಾಡುವ ಸುವರ್ಣಾವಕಾಶವಿದು,ಬಿಟ್ಟರೆ ಕೆಟ್ಟಂತೆ! (ಇನ್ನುಳಿದ ದಿನದ ವೇಳೆಯಲ್ಲಿ ಅಪ್ಪಿತಪ್ಪಿ ಸುಮ್ಮನೆ ನೀರಿನಲ್ಲಿ ಕೈ ಬಿಟ್ಟರೂ ಬೆನ್ನ ಮೇಲೆ ಉಚಿತ ಹಾಗು ಖಚಿತವಾದ ಗುದ್ದುಗಳು ತಪ್ಪದೆ ಸಿಗುತ್ತಿದ್ದವು) ನೀರಾಟವಾಡಿದ ನಂತರ ಮನೆಯ ಹಟ್ಟಿಯಲ್ಲಿದ್ದ ಅಸಂಖ್ಯ ದನಗಳ ಹಿಂಡಿನಿಂದ ಅಮ್ಮ ಕರೆದಿಟ್ಟು ಅನಂತರ ಸಮ ಪ್ರಮಾಣದಲ್ಲಿ ನೀರು ಬೆರಿಸಿ ಕೊಟ್ಟ ಹಾಲನ್ನು ಪಾವು,ಕುಡ್ತೆ,ಲೋಟಗಳ ಲೆಕ್ಖದಲ್ಲಿ ವರ್ತನೆ ಮನೆಗಳಿಗೆ ಕೊಟ್ಟು ಬರಬೇಕಿತ್ತು.ಇದೊಂಥರಾ ಕಿರಿಕಿರಿಯ ಬಾಬತ್ತು.ಓಡೋಡುತ್ತ ಈ ಕೆಲಸ ಮಾಡುವಂತಿಲ್ಲ,ಕೊಂಚ ಅಲುಗಾಡಿದರೂ ವಯರಿನ ಚೀಲದಲ್ಲಿ ಜಾಗರೂಕತೆಯಿಂದ ಜೋಡಿಸಿಟ್ಟ ಹಾಲು ಚೆಲ್ಲಿ ಅವಾಂತರ.ಹಾಗೂ ಹೀಗೂ ಈ ಕೆಲಸವನ್ನು ಮುಗಿಸಿ-ಸಂಜೆಯ ಚಹದೊಟ್ಟಿಗೆ ಸಿಗುತ್ತಿದ್ದ ತಿಂಡಿಗೆ ಗತಿ ಕಾಣಿಸಿ ನೋಡುವಾಗ ಸುಮಾರಾಗಿ ಹೊತ್ತು ಕಂತಿರುತ್ತಿತ್ತು.ಆದರೂ ಛಲ ಬಿಡದ ತ್ರಿವಿಕ್ರಮನಂತೆ ನನ್ನ ಸಮ ವಯಸ್ಕರು ಆಡುವ ಮನೆ ಹತ್ತಿರದ ಬಯಲಿಗೆ ಓಡಿದರೂ ಅವರೆಲ್ಲರ ಆಟ ಮುಗಿಯುವ ಕೊನೆಯ ಕೆಲವು ಕ್ಷಣಗಳಷ್ಟೇ ಉಳಿದಿರುತ್ತಿದ್ದವು.ತಥ್ ತೆರಿಕಿ! ಯಾವಾಗಲೂ ನನ್ನದು ಇದೇ ಹಣೆಬರಹ.



ಅಂತೂ ಆಟದ ಶಾಸ್ತ್ರ ಮುಗಿಸಿ ಮನೆಗೆ ಬರುವಾಗ ನಿಚ್ಚಳ ಕತ್ತಲು ಕವಿದಿರುತ್ತಿತ್ತು.ಮನೆಗೆ ಬಂಡವ ಆಗಷ್ಟೇ ನನ್ನ ಚಿಕ್ಕಮ್ಮಂದಿರು ಗುಡಿಸಿ ಒರೆಸಿಟ್ಟಿರುತ್ತಿದ್ದ ನೆಲದ ಮೇಲೆ ಅಪ್ಪಿತಪ್ಪಿ ಕಾಲಿಟ್ಟೆನೋ ಕೆಟ್ಟೆ! ಆಕಾಶ ಭೂಮಿ ಒಂದಾಗಲು ಅಂತಹ ಸಂದರ್ಭದಲ್ಲಿ ಹೆಚ್ಚು ಸಮಯ ಬೇಕಾಗುತ್ತಿರಲಿಲ್ಲ.ತೀರಾ ಸೊಕ್ಕು ಹೆಚ್ಚಿದಾಗ ಇದ್ಯಾವದಕ್ಕೂ ಕೇರ್ ಮಾಡದೆ ಬಿಡುಬೀಸಾಗಿ ಒರೆಸಿದ ನೆಲದ ಮೇಲೆ ಬೇಕಂತಲೆ ಮಣ್ಣು-ಕೆಸರಾದ ಕಾಲುಗಳ ಚಿತ್ತಾರ ಮೂಡಿಸುತ್ತ ಮನೆ ಹೊಕ್ಕುತ್ತಿದ್ದೆ.ತೀರಾ ಕುನ್ನಿಯಂತೆ ನಯವಂಚಕ ನರಿ ಮಾದರಿಯಲ್ಲಿ ಬಾಲ ಮಡಚಿಕೊಂಡು ಮನೆ ಪಕ್ಕದ ಓಣಿಯಿಂದ ಹಿತ್ತಲು ಹೊಕ್ಕು :ಮುಟ್ಟಾದವರಂತೆ ಮೈ-ಕೈ ಕಾಲನ್ನೆಲ್ಲ ಅಗತ್ಯಕ್ಕಿಂತ ಜಾಸ್ತಿ ತಿಕ್ಕೀ ತಿಕ್ಕೀ ತೊಳೆದುಕೊಂಡು ಅತಿ ಮಡಿಯಿಂದ ಒಂದುವೇಳೆ ಹಿಂಬಾಗಿಲ ಪ್ರವೇಶ ಮಾಡುತ್ತಿದ್ದೇನೆಂದರೆ ಅವತ್ತು ನನ್ನಿಂದ ಎಲ್ಲೋ ಏನೋ ಘನಘೋರ ಅಪರಾಧವಾಗಿರೋದು ಖಚಿತ! ಇದರ ಮುಂದಿನ ಭೀಕರ ಪರಿಣಾಮಗಳು,ಮನೆಯ ಹಿರಿಯರ ಕಿವಿಗೆ ನನ್ನ ಪ್ರತಾಪ ಬಿದ್ದು ಬೀಳಬಹುದಾದ ಪೆಟ್ಟುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದು ಈ ಅತಿವಿನಯದ ನಡವಳಿಕೆಯನ್ನು ನೇರವಾಗಿ ಅವಲಂಬಿಸುತ್ತಿದ್ದುದು ಮಾತ್ರ ಸುಳ್ಳಲ್ಲ.
{ನಾಳೆಗೆ ಮುಂದುವರಿಸುವೆ}

Tuesday, August 10, 2010

ನನಗೊಂದು ಕಥೆಬೇಕು...

ನನಗೆ ಬುದ್ದಿ ತಿಳಿದಲ್ಲಿಂದಲೂ ನಾನು ಸುತ್ತಾಟದ ಶೂರ.ಚಿಕ್ಕಂದಿನಲ್ಲಿ ಅಷ್ಟೇನೂ ವಿಶೇಷ ಪ್ರವಾಸಗಳಿಗೆ ಅವಕಾಶವಿರಲಿಲ್ಲ ಅದರಲ್ಲೂ ನಮ್ಮ ಮನೆಯ ಮಟ್ಟಿಗೆ ಪ್ರವಾಸದ ವ್ಯಾಖ್ಯೆ ಧರ್ಮಸ್ಥಳ,ಕಟೀಲು ಸುಬ್ರಮಣ್ಯ,ಉಡುಪಿ,ಮಂದಾರ್ತಿ,ಶೃಂಗೇರಿ,ಹೊರನಾಡುಗಳಿಗಷ್ಟೇ ಸೀಮಿತವಾಗಿರುತ್ತಿದ್ದವು.ಇಂತಹ ಪ್ರವಾಸಗಳು ಅಷ್ಟು ಇಷ್ಟ ಆಗದಿದ್ದರೂ ಅದನ್ನೂ ಬಿಟ್ಟರೆ ಬೇರೆ ಗತಿರ್ನಾಸ್ತಿ ಆಗಿದ್ದರಿಂದ ಅನಿವಾರ್ಯವಾಗಿ ಕರೆದರೆ ಸಾಕು ಬರಗೆಟ್ಟವನಂತೆ ಹೊರಟುಬಿಡುತ್ತಿದ್ದೆ.ಆದರೆ ಮುಂದೆ ಅಂತಹ ತಿರುಗಾಟಗಳಲ್ಲಿ ಯಾವ ಸ್ವಾರಸ್ಯವೂ ಉಳಿಯಲಿಲ್ಲ.ವಾಸ್ತವವಾಗಿ ಅಧ್ಯಯನ ಪ್ರವಾಸ ನನ್ನ ಆಸಕ್ತಿಯ ವಿಷಯ.ಯಾವುದಾದರೂ ಒಂದು ಸ್ಥಳದ ಹಿನ್ನೆಲೆ ಈ ದೃಷ್ಟಿಯಿಂದ ಪ್ರಚೋದನಕಾರಿಯಾಗಿದ್ದರೆ ನಾನು ಸುಲಭವಾಗಿ ಅದಕ್ಕೆ ಬಲಿ ಬೀಳುತ್ತೀನಿ.ಹೀಗೆ ಅನೇಕ ಸ್ಥಳಗಳನ್ನ ಸುತ್ತಿದ್ದೇನೆ.ಪ್ರಾಚೀನ ದಂತಕಥೆಗಳನ್ನ-ಐತಿಹಾಸಿಕ ಸಂಗತಿಗಳನ್ನ ತಮ್ಮೊಳಗೆ ಗಂಟು ಹಾಕಿಕೊಂಡ ಜಾಗಗಳು ಅದೆಷ್ಟೇ ಹಿಂದುಳಿದ ದರಿದ್ರ ಸ್ಥಿಯಲ್ಲಿದ್ದರೂ ನನ್ನ ಗಮನ ಸೆಳೆಯುತ್ತವೆ.ಐಶಾರಾಮ-ಸುಖಲೋಲುಪತೆ ನನ್ನ ಪ್ರವಾಸಾಸಕ್ತಿಗೆ ಚುಂಬಕವಲ್ಲ.ಹೀಗಾಗಿಯೇ ವಿದೇಶಿ ಪ್ರವಾಸದ ವಿಷಯಕ್ಕೆ ಬಂದರೆ ಅಮೆರಿಕೆ ಸೇರಿದಂತೆ ಅನೇಕ ಐರೋಪ್ಯ ದೇಶಗಳು ನನ್ನ ಆಯ್ಕೆ ಪಟ್ಟಿಯಲ್ಲಿಲ್ಲ.ಅತಿ ಸಿರಿವಂತಿಕೆಯ ಬಿಟ್ಟಿ ಪ್ರದರ್ಶನದ ಮಾದರಿಯನ್ನು ಸಿಂಗಾಪುರದಲ್ಲಿ ಕಂಡು ಹೇಸಿಗೆ ಪಟ್ಟುಕೊಂಡಿದ್ದೆ.ಅದೇ ಆಫ್ರಿಕೆಯ ದೇಶಗಳು,ಶ್ರೀಲಂಕ,ಬ್ರಜಿಲ್,ಪಾಕಿಸ್ತಾನ,ಈಜಿಪ್ತ,ನೇಪಾಳ,ಕಾಂಬೋಡಿಯ,ಬರ್ಮಾ,ಮೆಕ್ಸಿಕೋ ನನ್ನಾಯ್ಕೆಯ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿ ರಾರಾಜಿಸುತ್ತವೆ.ಅವ್ಯಕ್ತವಾಗಿ ಈ ದೇಶಗಳಲ್ಲಿ ಇರುವ ಸೆಳೆತ socalled ಸುಖಿ ಕಲ್ಪನೆಯ ರಾಷ್ಟ್ರಗಳಲ್ಲಿ ಇರದೆ ಇರುವುದಕ್ಕೆ ಯಾವುದೇ ಐತಿಹಾಸಿಕ ಕಥಾ ಹಿನ್ನೆಲೆಯ ಬಲ ಅವುಗಳಲ್ಲಿ ಇಲ್ಲದಿರೋದೆ ಕಾರಣವೇನೋ ಅನ್ನಿಸುತ್ತೆ ಕೆಲವೊಮ್ಮೆ.



ಅನುಕ್ಷಣ ಹೋರಾಟದ ಜೀವಂತ ಘಳಿಗೆಗಳು ಬದುಕಿನಲ್ಲಿ ಉಪ್ಪಿನಕಾಯಿಯ ಹಾಗಿದ್ದರೆ ವಿಷಯ ಬೇರೆ:ಆದರೆ ಮನಸ್ಸೇ ಇಲ್ಲದಿದ್ದರೂ ಬದುಕುವ ಸವಾಲಿನ ಭೀತಿಯ ಮುಂದೆ ವಾಸ್ತವಗಳ ಗೋಡೆಗೆ ಅನಿವಾರ್ಯವಾಗಿ ತಲೆಚಚ್ಚಿಕೊಳ್ಳುವುದೇ ಅಭ್ಯಾಸವಾಗುತಿರುವಾಗ ಈ ಸುಖಲೋಲುಪತೆಗಳು ಆಕರ್ಷಕ ಅನ್ನಿಸದೆ ಹೋದವೇನೋ! ಹೀಗಾಗಿ ತಮ್ಮ ಕನಿಷ್ಠ ಅಗತ್ಯಗಳಿಗಿಂತ ಹೆಚ್ಚಿನ ಐಭೋಗದ ಮೇಲೆ ಹಕ್ಕು ಸಾಧಿಸೋದು ಇನ್ನೊಬ್ಬ ಅರ್ಹನ ಅನ್ನಕ್ಕೆ ಕನ್ನ ಹಾಕಿದಂತೆ ಎನ್ನುವ ಭಾವನೆ ದಟ್ಟವಾಗಿ ನನ್ನೊಳಗೆ ಬೇರು ಬಿಟ್ಟಿದೆ.

ಯಾವುದೇ ಜಾಗ ನನ್ನ ಆಸಕ್ತಿ ಕೆರಳಿಸಲು ಅದರೊಳಗೊಂದು ಕಥೆ ಹುದುಗಿರಬೇಕು ಅನ್ನಿಸುತ್ತೆ,ಬಾಲ್ಯದಲ್ಲಿ ಬಾಲವಾಡಿ-ಶಿಶುವಿಹಾರದಲ್ಲಿ ಕೇಳಿದ್ದ ಕಥೆಗಳು,ಎದುರು ಮನೆ ಬಪಮನಿಂದ ( ಕೊಂಕಣಿಯಲ್ಲಿ ಬಪಮ ಎಂದರೆ ಅಪ್ಪನ ಅಮ್ಮ ,ಅಜ್ಜಿ) ಬಾಯಿಂದ ಕೇಳಿ ಕಲ್ಪಿಸಿಕೊಳ್ಳುತ್ತಿದ್ದ ಪಿಳಿಪ-ಪಿತರನ ಕಥೆಗಳು,ಆಗುಂಬೆ ಘಾಟಿಯ ಭಯಾನಕ ಡಕಾಯಿತರ ಕಥೆಗಳು,ನನ್ನಜ್ಜನ ಬಾಯಿಂದ ಕೇಳುತ್ತಿದ್ದ ಹಳೆ ತೀರ್ಥಹಳ್ಳಿಯ ಆಗುಹೋಗಿನ ಕಥೆಗಳು,ಅಮ್ಮನೊಟ್ಟಿಗೆ (ಅಜ್ಜಿಗೆ ನಾನು ಅಮ್ಮ ಎನ್ನುತ್ತೇನೆ) ಅವರ ತವರು ಸಾಗಿನಬೆಟ್ಟಿಗೆ ಶಾಲಾರಜೆಯಲ್ಲಿ ಹೋಗಿದ್ದಾಗ ಕೇಳಲು ಸಿಗುತ್ತಿದ್ದ ಹೇರಳ ಕಥೆಗಳು,ಅಲ್ಲಿನ ಚಾವಡಿ ದೈವಗಳ ಕೋಲ-ತಂಬಿಲಗಳ ಪ್ರತ್ಯಕ್ಷ ದರ್ಶನ,ನಾಗಮಂಡಲಗಳ ಪ್ರಾತ್ಯಕ್ಷಿಕೆ,ಸತ್ಯದೈವಗಳಾದ ಭೂತಗಳ ಹಿನ್ನೆಲೆ ವಿವರಿಸುತ್ತಿದ್ದ ಕಥೆಗಳು,ಕಲ್ಕುಡ-ಕಲ್ಲುರ್ಟಿ..ಕೋಟಿ-ಚೆನ್ನಯ...ಆಗೋಳಿ ಮಂಜಣನ ಬೆರಗು ಹುಟ್ಟಿಸುವ ಕಥೆಗಳು,ರಾಂಪಣ್ಣನ ಹಾಸ್ಯ ಕಥೆಗಳು,ಇನ್ನು ಗದ್ದೆ ಕಾಯುವವರ ಸಾಹಸದ ಕಥೆಗಳು,ಒಂಚೂರು ಅಕ್ಷರ ಓದಲು ಬಂದಾಗ ಎದುರು ಮನೆ ರಾಘಣ್ಣನವರ ಮನೆಯಿಂದ ಕಡ ತಂದು ಓದಿ ಮರಳಿಸಲು ಮನಸ್ಸಾಗದಿದ್ದ "ಚಂದಾಮಾಮ"ನ ವಿಕ್ರಮ-ಬೇತಾಳ,ಭೋಧಿಸತ್ವನ ಜಾತಕಕಥೆಗಳು,ರಾಮಾಯಣ,ಶ್ರೀಮಧ್ಭಾಗವತದ ಕಥೆಗಳು,"ಬಾಲಮಿತ್ರ"ದ ಮಂಡೂಕ ದ್ವೀಪದಲ್ಲಿ ರಾಜಕುಮಾರಿ,ಮಿನಿ ಕಾದಂಬರಿ,ಮೇಲ್ಮವತ್ತೂರಿನ ಆದಿಪರಾಶಕ್ತಿಯ ಕಥೆಗಳು,"ಬೊಂಬೆಮನೆ"ಯ ವಿಕ್ರಮಶೀಲ,ನಳ-ದಮಯಂತಿ,ಆಡುಗೂಲಜ್ಜಿ,ದುಷ್ಯಂತ-ಶಾಕುಂತಳೆಯರ ಕಥೆಗಳು ಹೀಗೆ ಬಾಲ್ಯವೆಲ್ಲ ಬಣ್ಣಿಸಲಸದಳ ಕಥೆಗಳ ಜಡಿಮಳೆಯಲ್ಲಿ ಅಕ್ಷರಶಃ ಕೊಚ್ಚಿಕೊಂಡೆ ಹೋಗಿತ್ತು.ಹೀಗಿದ್ದೂ ಈ ಕಥಾಸರಿತ್ಸಾಗರದ ದಾಹ ತೀರಿರಲಿಲ್ಲ.ಆಸೆ-ಅತಿಯಾಸೆಯ ಮಟ್ಟ ದಾಟಿ ದುರಾಸೆಯ ಆಜುಬಾಜುಗಳಲ್ಲಿ ಓಡಾಡುತ್ತಿತ್ತು.



ಅಗೋಳಿ ಮಂಜಣ ಈಗಲೂ ನನ್ನ ಆಸಕ್ತಿ ಕೆರಳಿಸುವ ಕಥಾಪುರುಷ.ಅಗೋಳಿ ಎಂದರೆ ತುಳುವಿನಲ್ಲಿ ಊಟದ ಹರಿವಾಣ ಅಥವಾ ಅಗಲವಾದ ಊಟದ ತಟ್ಟೆ ಎಂದರ್ಥ.ತುಳುನಾಡಿನಲ್ಲಿ ಅವನು ತನ್ನ ಹುಂಬ ಸಾಹಸಗಳಿಗಾಗಿ-ಬಕಾಸುರ ಭೋಜನಕ್ಕಾಗಿ ಪ್ರಸಿದ್ದ.ಪಂಜೆ ಮಂಗೇಶರಾಯರು ಮಕ್ಕಳಿಗಾಗಿ ಬರೆದಿದ್ದ ಅವನ ಕಥೆ ಸಹಿತ ಪದ್ಯ ಓದಿ ನಾನೂ ಅವನನ್ನು ತಪ್ಪಾಗಿ ಅರ್ಥೈಸಿದ್ದೆ.ಆದರೆ ಸಂಶೋಧಕಿ ಇಂದಿರಾ ಹೆಗ್ಗಡೆ ಯವರು ಬರೆದ "ಚೇಳಾರುಗುತ್ತು ಮಂಜನ್ನಯ್ಗೆರ್" ಕೃತಿ ಓದಿ ತಪ್ಪು ತಿಳುವಳಿಕೆಯನ್ನು ತಿದ್ದಿಕೊಂಡಿದ್ದೇನೆ. ( ಅಂದಹಾಗೆ ಈ ಚೇಳಾರುಗುತ್ತು ಮಂಗಳೂರಿನ ಬಳಿ ಇದೆ ಹಾಗು ಇದು ಸ್ವತಹ ಲೇಖಕಿಯ ಗಂಡನ ಮನೆ) ಅವನ ಕುರಿತು ನನ್ನ ಆಸಕ್ತಿ ಕೆರಳಿಸಿದ್ದ ಪಂಜೆಯವರ ಕವನ ಹೀಗಿತ್ತು.ಮಂಜಣ ಹೇಳ್ತಾನೆ ನೋಡಿ


"ಕಾರ್ಲದ ಬಾಕ್ಯಾರ್ ಕನ್ಜನ ಆವೋಡು,
ಕೊಡನ್ಜದಕಲ್ ಉದಾರ್ಗೆ ಆವೋಡು,
ಗುಜ್ಜೆರೆ ಕೆದು ಪೆರಾವೋಡು,
ಎನ್ನಪ್ಯೇ ದುಗ್ಗು ಬಳಸೋಡು,
ಯಾನ್ ಮಗೆ ಮಂಜಣೆ ಕುಲ್ಲುದು ಉಣೋಡು!"
(ಕಾರ್ಕಳದ ಬಾಕಿಮಾರು ಗದ್ದೆ ತಟ್ಟೆಯಾಗಬೇಕು,
ಕೊಣಾಜೆಯ ಅವಳಿ ಕೊಡುಗಲ್ಲುಗಳು ಉದಾರ್ಗೆ ಅಂದರೆ ಕಡುಬಾಗಬೇಕು,
ಗುಜ್ಜೆರೆ ಕೆರೆಯ ನೀರೆಲ್ಲ ಹಾಲಾಗಬೇಕು,
ನನ್ನಮ್ಮ ದುಗ್ಗು ಬಡಿಸಬೇಕು,
ಮಗ ನಾನು ಮಂಜಣ್ಣ ಕೂತುನ್ನಬೇಕು!)

ಮಾರಾಯ ಅಬ್ಬ! ಕಾರ್ಕಳದ ಕಾಬೆಟ್ಟಿನ ಏಲ್ನಾಡುಗುತ್ತಿನ ೧೨೦ ಎಕರೆ ಬಾಕಿಮರು ಗದ್ದೆಯಷ್ಟು ದೊಡ್ಡತಟ್ಟೆ ಇದ್ದರೇನೆ ಕೊಣಾಜೆ ಕಲ್ಲಿನಷ್ಟು ಗಾತ್ರದ ಕಡುಬು ಹಿಡಿಸಲು ಸಾಧ್ಯ,ಇನ್ನು ಅದಕ್ಕೆ ನಂಚಿಕೊಳ್ಳಲು ಗುಜ್ಜೆರೆ ಕೆರೆಯ ನೀರಿನಷ್ಟು ಹಾಲು ಬೇಕೇಬೇಕು! ಅಷ್ಟನ್ನು ಅದೊಡ್ಡ ಇಕ್ಕುಗೈಯ ಅವನಮ್ಮ ಬಡಿಸಬೇಕಂತೆ! ಇವ ಮಗ ಮಂಜಣ ಕೂತು ಉಣ್ಣಬೇಕಂತೆ!!! ನೀವೇ ಹೇಳಿ ಇಂತಹ ಉತ್ಪ್ರೇಕ್ಷಿತ ಕಥಾ ನಾಯಕ ಬಾಲ್ಯದಲ್ಲಿ ಬೆರಗು ಹುಟ್ಟಿಸಲಾರನೆ?
{ನಾಳೆಗೆ ಮುಂದುವರೆಸುವೆ}

ಸುಳ್ಳಲ್ಲ...

ಮೋಹದ ಕಿಡಿ ಭಾವದ ಅರಗಿಗೆ ತಾಕಿ ಹೊತ್ತಿ ಉರಿದಾಗಲೂ ನನಗೆ ಅರ್ಥವಾಗಿರಲಿಲ್ಲ,
ನಿನ್ನದೇ ನೆನಪು ಮೂರು ಹೊತ್ತು ಕಾಡಲಾರಂಭಿಸಿದಾಗಲೂ...ಮನಸ ಆಸೆ ಉಸುರೋದು ಶರ್ತವಾಗಿರಲಿಲ್ಲ/
ಆದರೆ ನೀನೊಮ್ಮೆ ಬಾಳಲಿ ಬಂದ ಮೇಲೆ... ನಿನ್ನೊಲವ ಸಾಕ್ಷಾತ್ಕಾರದಲಿ ನಾನು ಪರಿಶುದ್ಧನಾದೆ,
ನಿನ್ನೆದೆ ಬೋಧಿ ಮರದಡಿ ಕೂತು ಬುದ್ಧನಾದೆ//


ಆಸೆಯೇ ಇಲ್ಲದೆ ಬರಿಬತ್ತಲಾಗಿಸಿದ್ದೆ ಮನಸನೆಲ್ಲ,
ನೀ ಬಂದೆ ನೋಡು...ಕನಸ ನೀ ತಂದೆ ನೋಡು/
ನಿನ್ನೊಲವ ಜಾಲದಲಿ ಜೀವದ ಹಂಗು ಬಿಟ್ಟು ಕಾದುವ ಕಲಿಯಾದೆ,
ಜಗದ ಮೋಹವನೆಲ್ಲ ನಿನಗಾಗಿ ಬಿಟ್ಟ ಬಾಹುಬಲಿಯಾದೆ//

Monday, August 9, 2010

ಮಳೆಯ ಹಾದಿಯಲ್ಲಿ...

ಮತ್ತಿನಲಿ..ಗಮ್ಮತ್ತಿನಲಿ,
ಬಿಗಿದ ಮುಖ ಸಡಿಲಿಸಿ ಕರಿಮೋಡ ನಕ್ಕಾಗ/
ಸುರಿದದ್ದು ಮುತ್ತಿನ ಮಳೆಹನಿ,
ನೆಲಕೂ ಸೌಂದರ್ಯದ ಸೋಂಕು ತಾಗಿಸಿದ ಶೃಂಗಾರದ ಖನಿ!//


ನಳನಳಿಸುವ ಬಾನಿಗೆ ನೀಲಿ ಹಚ್ಚಿಸಿದವರ್ಯಾರು?,
ಮೋಡದ ಎದೆಯೊಳಗೆ ನೆಲದೆಡೆಗಿನ ಪ್ರೀತಿ ಹೆಚ್ಚಿಸಿದವರ್ಯಾರು?/
ಬೀಸುವ ಗಾಳಿಯ ಕಿವಿಯಲ್ಲಿ ಗುಟ್ಟನೊಂದನು ಉಸುರಿ,
ಭೂಮಿಯ ಕಣ್ಣಲಿ ಕಾತರದ ಉನ್ಮಾದ ಹುಚ್ಚೆಬ್ಬಿಸಿದವರ್ಯಾರು?//

Sunday, August 8, 2010

ಆ ಕ್ಷಣಗಳಿಗೆ ಚಿರಋಣಿ...

ಆ ರಾತ್ರಿ ಅಷ್ಟು ಮಧುರವಾಗಿರುತ್ತಿತ್ತೆ?
ನನ್ನೊಳಗೆ ನರಳುತ್ತಿದ್ದ ಒಂಟಿತನ ಹಂಚಿಕೊಳ್ಳಲು...
ಜೊತೆಗೆ ನೀನಿಲ್ಲದಿದ್ದರೆ/
ನಡುಗಿಸುತ್ತಲೆ ಕಾಡುತ್ತಿದ್ದ ಛಳಿಯ ಮುಂಬೆಳಗು ಇನ್ನಷ್ಟು ಆಪ್ತವಾಗುತ್ತಿತ್ತೆ?
ಹಬೆಯಾಡುವ ಚಹದ ಬಟ್ಟಲೊಂದಿಗೆ....
ನೀನಿತ್ತ ಬೆಚ್ಚನೆಯ ಸ್ಪರ್ಶ ಜೊತೆಗೂಡದಿದ್ದರೆ?//

ಹೇಗೆ ಹೇಳಲಿ ಇನ್ನು?

ಕಣ್ಣೀರು ಹರಿಯಲಿಬಿಡು ಮಳೆನೀರಿಗಿಂತ ಕಡೆಯಾಗಿ,
ಮನಸಿನ ತೂಬಿಗೆ ನಿನ್ನೊಂದಿಗೆ ಕಳೆದ ಜೇನು ನೆನಪುಗಳು ನಿಲ್ಲದಿರಲಿ ತಡೆಯಾಗಿ/
ನೀನಿಲ್ಲಿಲ್ಲ,ಮರಳಿ ಬರುವುದೂ ಇಲ್ಲ ಎನ್ನುವುದು ಸತ್ಯ,
ಭಾವ ಸಂಕಟಕೆ ಬಾಯಾರಿದರೂ...ಅಳುವಲ್ಲೇ ಅರ್ಥ ಹುಡುಕಬೇಕಿದೆ ನಾ ನಿತ್ಯ//