Wednesday, September 24, 2014

ಪುಸ್ತಕದೊಳಗೆ - ೨


"ಒರು ದೇಶತ್ತಿಂಡೆ ಕಥಾ'
ಲೇಖಕ; ಎಸ್ ಕೆ ಪೊಟ್ಟಕ್ಕಾಟ್,
ಪ್ರಕಾಶಕರು; ಡಿ ಸಿ ಬುಕ್ಸ್,
ಪ್ರಕಟಣೆ; ೧೯೮೦,
ಕ್ರಯ; ರೂಪಾಯಿ ೩೮೦.
" ಶ್ರೀಧರನ ಅತಿರಾಣಿಪಾಡದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದವು, ಆದರೆ ಮೂಲೆಯ ಕೊನೆ ತಿರುವಿನಲ್ಲಿದ್ದ ಕುರುಡ ಮೋಪನ ಹುಲ್ಲು ಹೊದೆಸಿದ ಗುಡಿಸಲ ಸ್ವರೂಪ ಮಾತ್ರ ಹೆಚ್ಚು ಕಡಿಮೆ ಹಾಗೆ ಇತ್ತು. ಶ್ರೀಧರ ದರೆಯ ಕೋಲುಗಳನ್ನ ಸರಿಸಿ ಅಂಗಳಕ್ಕೆ ಅಡಿ ಇಟ್ಟಾಗ ಎಲೆ ಅಡಿಕೆಯನ್ನ ಕುಟ್ಟಾಣಿಯಲ್ಲಿ ಕುಟ್ಟುತ್ತಿದ್ದ ಮೋಪನ ಕುರುಡನಾಗಿದ್ದರೂ ಕೇವಲ ಚುರುಕಾಗಿದ್ದ ಕಿವಿಯಲ್ಲಿ ಹೆಜ್ಜೆಯ ಸದ್ದನ್ನೆ ಆಲಿಸಿ "ಮೋಳೆ ಪುಂಡು ದನ ಮತ್ತೆ ಬೇಲಿ ಹಾರಿತು ಅಂತ ಕಾಣುತ್ತೆ, ಈ ಹಡಬೆ ಪಶುವನ್ನ ಸಾಕಿದವರಿಗೆ ಕಟ್ಟಿ ಹಾಕಲಿಕ್ಕೆ ಏನು ರೋಗ?" ಎನ್ನುತ್ತಾ ನಡೆಯಲಾಗದಿದ್ದರೂ ಕೂತಲ್ಲಿಯೆ ಕೋಲು ಬೀಸಿದ. ಮಾತುಮಾತಿಗೆ ತನ್ನ ಕರೆಯುವ ಅಜ್ಜನ ಉಪದ್ರ ತಾಳಲಾರದೆ ಅವನ ಕರೆಯನ್ನ ಕೇಳಲು ಮೊಮ್ಮಗಳು ಅಲ್ಲಿದ್ದಿರಲೆ ಇಲ್ಲ!"
- ಎಸ್ ಕೆ ಪೊಟ್ಟಕ್ಕಾಟ್
ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳ ಓದುಗರಿಗೆ ಸುಕುಮಾರನ್ ಕುಟ್ಟಿ ನಾಯರ್ ತಮ್ಮ ಪ್ರವಾಸ ಕಥನಗಳಿಗೋಸ್ಕರ ಹೆಚ್ಚು ಖ್ಯಾತರು,೧೯೬೬ರಲ್ಲಿ ಅವರ "ಒರು ತೀರತ್ತಿಂಟೆ ಕಥಾ" ಪ್ರಕಟವಾಗಿತ್ತು. ಅನಂತರದ ಅನೇಕ ಅವರ ಕೃತಿಗಳು ಭಾರತದಾಚೆಯೂ ಯುರೋಪಿಯನ್ ಭಾಷೆಗಳಿಗೆ ಭಾಷಾಂತರಿತಗೊಂಡಿವೆ. "ಒರು ದೇಶತ್ತಿಂಟೆ ಕಥಾ" ಅವರ ಒಟ್ಟು ಸಾಹಿತ್ಯಿಕ ಕೃಷಿಯಲ್ಲಿಯೆ ಉತ್ಕೃಷ್ಠವಾದ ಕೃತಿ. ಈ ಮೇರು ಕಾದಂಬರಿ ೧೯೮೦ರಲ್ಲಿ ಜ್ಞಾನಪೀಠ ಪ್ರಶಸ್ತಿಯ ಜೊತೆಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಗೂ ಭಾಜನವಾಗಿತ್ತು.
ಪೊಟ್ಟೆಕಾಟ್ಟರ ಕಾದಂಬರಿಗಳು ಸಾಮಾನ್ಯವಾಗಿ ಅವರ ಜೀವನ ಕಥನದ ನಿರೂಪಣೆಗಳೆ ಆಗಿರುತ್ತಿದ್ದವು. ಒಂದು ಅವಧಿಗೆ ತಲಚ್ಚೆರಿ ಕ್ಷೇತ್ರದಿಂದ ಎಡಪಕ್ಷಗಳ ಪ್ರತಿನಿಧಿಯಾಗಿ ಲೋಕಸಭೆಯ ಸದಸ್ಯರಾಗಿದ್ದ ಅವರು ಈ ಕಾದಂಬರಿಯಲ್ಲಿ ಅದರ ಅನುಭಗಳನ್ನ ಹಾಗೂ ಸಂಸತ್ತಿನ ಸದಸ್ಯನೊಬ್ಬ ತನ್ನ ಹುಟ್ಟೂರನ್ನ ಒಬ್ಬ ಸಾಮಾನ್ಯನಾಗಿ ಮರಳಿ ಬಂದು ಅವಲೋಕಿಸುವ ಧಾಟಿಯಲ್ಲಿ ನಿರೂಪಿಸಿದ್ದಾರೆ. ಶಾಲಾ ಮಾಸ್ತರರೊಬ್ಬರ ಎರಡನೆ ಸಂಸಾರದ ಕೊನೆಯ ಕೂಸು ಶ್ರೀಧರ ತನ್ನ ಕಣ್ಣಲ್ಲಿ ಕಾಣುವ ಹುಟ್ಟೂರು ಅತಿರಾಣಿಪಾಡದ ಕಳೆದ ಶತಮಾನದ ಅನೇಕ ಭೀಕರ ಸತ್ಯಗಳನ್ನ ಕಾದಂಬರಿ ಎಳೆ ಎಳೆಯಾಗಿ ಬಿಡಿಸಿಡುತ್ತದೆ.
ಸಮರಸ್ಯದ ಊರಿನಲ್ಲಿ ಒಮ್ಮಿಂದೊಮ್ಮೆಗೆ ಖಿಲಾಫತ್ ಹೆಂಡದ ಅಮಲೇರಿಸಿಕೊಂಡ ಮಾಪಿಳ್ಳೆಗಳ ಪುಂಡಾಟಿಕೆ. ಹಾಡಹಗಲೆ ಬಲವಂತದ ಮತಾಂತರದ ಪೈಶಾಚಿಕತೆ. ಆ ಕಾಲದಲ್ಲಿಯೆ ಮಲಬಾರಿನಾದ್ಯಂತ ೧೯೨೦ರ ಸುಮಾರಿಗೆ ಮುಸ್ಲಿಂ ಮೂಲಭೂತವಾದಿ ಮನಸ್ಸುಗಳು "ಬ್ರಿಟಿಷರು ಸೋತರು ಮೊದಲನೆ ಮಹಾಯುದ್ಧದಲ್ಲಿ ತುರ್ಕಿ ಗೆದ್ದಿತು ಇನ್ನು ಎಲ್ಲೆಡೆ ಅಲ್ಲಾನ ರಾಜ್ಯ" ಎನ್ನುವ ಗಾಳಿಸುದ್ದಿಗೆ ಕಿವಿಗೊಟ್ಟು ಸ್ಥಳಿಯ ನಾಯರ್ ಹಾಗೂ ನಂಬೂದರಿಗಳನ್ನೆ ಗುರಿಯಾಗಿಸಿ ನಡೆಸಿದ ಸಾಮೂಹಿಕ ಬಲವಂತದ ಮತಾಂತರ, ಅದರ ಭೀಭತ್ಸತೆಗೆ ಹೆದರಿದ ಬ್ರಿಟಿಷರು ಅದರ ನಿಯಂತ್ರಣಕ್ಕೆ ಅಂತಲೆ ಹುಟ್ಟು ಹಾಕಿದ ಅಷ್ಟೆ ಪೈಶಾಚಿಕ ನಡೆಯ "ಮಲಾಬಾರ್ ಪೊಲೀಸ್" ( ಈಗಲೂ ಇದೆ.) ಎಂಬ ವಿಶೇಷ ಅರಕ್ಷಕ ಪಡೆ. ಇಂದು ಆ ಮತೀಯ ದುರುಳತೆಯ ದೆಸೆಯಿಂದಲೆ ಮಲಬಾರ್ ಮುಸ್ಲಿಂ ಬಾಹುಳ್ಯ ಹೊಂದುವಂತಾಗಿದ್ದು. ಈಗಿನ ಮುಸ್ಲಿಂಮರ ಎರಡು ಪೀಳಿಗೆ ಹಿಂದಿನ ಧರ್ಮ ಹಿಂದೂವಾಗಿದ್ದದ್ದು ಎಲ್ಲವೂ ನಿರ್ಲಿಪ್ತವಾಗಿ ನಿರೂಪಣೆ ಹೊಂದಿದೆ. ಇನ್ನು ಗುಪ್ತನಿಧಿಯ ಆಸೆಗೆ ತರವಾಡು ಮನೆಯ ತಳಪಾಯವನ್ನೆ ಅಗೆದು ನಿಧಿಯ ರಕ್ಷಕ ನಾಗನ ಹೊಡೆತಕ್ಕೆ ಸಿಕ್ಕು ಸಾಯುವ ಕುಂಟ ನಾಯರನ ಕಥೆ ಮುಂದೆ "ಮಣಿಚಿತ್ರ ತಾಳ್" ಎನ್ನುವ ಚಿತ್ರಕ್ಕೂ ಸ್ಪೂರ್ತಿ ಆಗಿತ್ತು ಅನ್ನೋದು ನನ್ನ ಗುಮಾನಿ. ಅದೆ ಚಿತ್ರ "ಆಪ್ತಮಿತ್ರ"ನಾಗಿ ಕನ್ನಡಕ್ಕೂ, "ಚಂದ್ರಮುಖಿ"ಯಾಗಿ ತಮಿಳಿಗೂ, "ನಾಗವಲ್ಲಿ"ಯಾಗಿ ತೆಲುಗಿಗೂ ಹಾಗೂ "ಭೂಲ್ ಬುಲಯ್ಯ"ವಾಗಿ ಹಿಂದಿಗೂ ಸಾಗಿ ಗಲ್ಲಾಪೆಟ್ಟಿಗೆಯನ್ನ ದೋಚಿದ್ದನ್ನ ಇಲ್ಲಿ ನೆನಪಿಸಿಕೊಳ್ಳಬಹುದು.
ಒಬ್ಬ ಓದುಗನಾಗಿ ಮೊದಲು ಅನುವಾದವನ್ನೂ ಅನಂತರ ಅದರ ಮೂಲ ಕೃತಿಯನ್ನೂ ಓದುವ ಭಾಗ್ಯ ನನ್ನದಾಗಿತ್ತು. ಇದೆ ಕಾದಂಬರಿಯ ಕನ್ನಡ ಅನುವಾದವನ್ನ ಅಶೋಕಕುಮಾರ್ ಹಾಗೂ ಕೆ ಕೆ ನಾಯರ್ ಕನ್ನಡಕ್ಕೆ ಅನುವಾದಿಸಿದ್ದರೆ. ನ್ಯಾಷನಲ್ ಬುಕ್ ಟ್ರಸ್ಟ್ ಅದನ್ನು ಪ್ರಕಟಿಸಿದೆ. ಮೂಲ ಮಲಯಾಳಂನಷ್ಟು ನವಿರಾಗಿರದಿದ್ದರೂ ಅನುವಾದವೂ ಆಸಕ್ತಿಕರ ಓದಿಗೆ ಅಡ್ಡಿಯಿಲ್ಲದ ಕಾದಂಬರಿ.

ಪುಸ್ತಕದೊಳಗೆ - ೧



"ನಟಿ ಶಕೀಲ ಆತ್ಮಕಥೆ"

ಅನುವಾದಕ; ಕೆ ಕೆ ಗಂಗಾಧರನ್,
ಪ್ರಕಾಶಕರು; ಸೀಮಾ ಬುಕ್ಸ್, ಬೆಂಗಳೂರು.
ಪ್ರಕಟಣೆ; 2014
ಕ್ರಯ; ರೂಪಾಯಿ 200.

" ಈ ಪುಸ್ತಕದಲ್ಲಿ ನನ್ನ ಬದುಕಿದೆ. ಅನುಭವಿಸಿದ ನೋವು ನಲಿವುಗಳಿವೆ. ನನ್ನ ಜೀವನದ ಕುರಿತು ನಾನಲ್ಲದೆ ಬೇರೆಯವರು ಹೇಳಲು ಸಾಧ್ಯವಿಲ್ಲ. ಎಲ್ಲವನ್ನೂ ಪ್ರಾಮಾಣಿಕವಾಗಿ ಹೇಳಲು ಪ್ರಯತ್ನಿಸಿದ್ದೇನೆ"
- ಶಕೀಲ
( ಪುಸ್ತಕದ ಮುನ್ನುಡಿಯಲ್ಲಿ.)

"ಆತ್ಮ ಇರುವವರು ಸಾಮಾನ್ಯವಾಗಿ ಆತ್ಮ ಕಥೆ ಬರೆಯುವುದಿಲ್ಲ, ತಮ್ಮ ಆತ್ಮಕಥೆಯ ಹೆಸರಿನಲ್ಲಿ ಬಹುತೇಕರು ಬರೆಯೋದು ಇನ್ನೊಬ್ಬರ ಕಥೆ ಹಾಗೂ ಮಾಡಿಕೊಳ್ಳುವುದು ಆತ್ಮ ವಂಚನೆ" ಅನ್ನೋದು ಆತ್ಮ ಕಥೆಗಳ ಹೆಸರಿನಲ್ಲಿ ಪ್ರಕಟವಾಗುವ ಅನೇಕ ಕಗ್ಗಗಳ ಕುರಿತ ನನ್ನ ಅನಿಸಿಕೆ.

ಇಲ್ಲಿಯವರೆಗೆ ಓದಿದ ಅನೇಕ ಆತ್ಮ ಕಥೆಗಳು ಇದನ್ನ ಇನ್ನಷ್ಟು ದೃಢ ಪಡಿಸಿವೆ. ಆದರೆ ಪ್ರಾಮಾಣಿಕತೆಯ ಸರಳ ನಿರೂಪರಣೆಯ ಕೆಲವೇ ಕೆಲವು ಪುಸ್ತಕಗಳಲ್ಲಿ ಒಂದು So called ಸೆಕ್ಸ್ ಬಾಂಬ್ ಶಕೀಲರ ಆತ್ಮಕಥೆ.

ಮೂಲ ಮಲಯಾಳಂ ಭಾಷೆಯಲ್ಲಿ ಹರಿದಾಸ್ ನಿರೂಪಿಸಿ ಪ್ರಕಟಿಸಿದ್ದ ಈ ಪುಸ್ತಕವನ್ನ ಖ್ಯಾತ ಅನುವಾದಕ ಕೆ ಕೆ ಗಂಗಾಧರನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೈ ಒಳಗಿನ ಮನಸನ್ನೂ ಕಾಣುವ ಆಸಕ್ತಿ ಇರುವವರಿಗೆ ಇದು ಒಳ್ಳೆಯ ಓದು.

Thursday, July 10, 2014

ಕನಸ ಬೀದಿಯುದ್ದ ಕವಿದ ಸಂಜೆ ಕತ್ತಲು.......





ಮೋಡದ ಮೋಸದ ಅರಿವಿರುವ ನೆಲದ ಮನಸಲ್ಲೂ
ಕನಸೊಂದು ನನಸಾಗಲಿ ಎನ್ನುವ
ಬಹುತೇಕ ಅಸಾಧ್ಯ ಸ್ವಪ್ನವೊಂದರ ಈಡೇರಿಕೆಯ ಅತಿಯಾಸೆ ಇದೆ.....
ಸೋಮಾರಿ ಬೆಳಗಿನಲ್ಲೊಂದು ಆಕಳಿಕೆ ಮರುಕಳಿಸಿ
ಮತ್ತೊಂದು ಚಿಕ್ಕ ನಿದಿರೆಯನ್ನು ಖಾತ್ರಿಪಡಿಸಿ ಹೋದ ಮೇಲೆ
ಮತ್ತೆ ಮನಸ ಕನಸು ತುಂಬಿ ಕಾಡಿತ್ತು.....
ವಾಸ್ತವ ಅರಿವಿಗೆ ನಾ ಮರಳೋದನ್ನೆ
ಅನಿವಾರ್ಯವಾಗಿ ಮತ್ತಷ್ಟು ಅದು ಕಾಯುವಂತಾಗಿತ್ತು./
ಭಾವದ ಹೊಳೆ ಉಕ್ಕಿ ಬಂದು
ಕಣ್ಣ ಅಂಚನ್ನ ತುಸು ತೋಯಿಸಿತ್ತು....
ಕಿಂಚಿತ್ತೂ ದಯೆ ತೋರದೆ ಕಲ್ಲೆದೆಗೆ ಅಪ್ಪಳಿಸಿ
ಮತ್ತೆ ಹುಟ್ಟ ಹೊರಟ ಮೃದು ಕಂಪನಗಳನ್ನ
ಭ್ರೂಣದಲ್ಲೆ ಮೌನವಾಗಿ ಸಾಯಿಸಿತ್ತು,
ಮರೆತು ಹಾಡಿದ ಮಧುರ ರಾಗವೊಂದು
ಮರುಕಳಿಸಿ ಕಾಡಿದ ಹೊತ್ತು
ಮನೆ ಮನದ ತುಂಬ ಕಡು ಕತ್ತಲಾವರಿಸಿತ್ತು.....
ಗೂಡಿನ ಹಂಗಿಲ್ಲದೆ ಸಿಕ್ಕ ಸಿಕ್ಕಲ್ಲೆಲ್ಲ ತಂಗುವೆ
ಹಸಿವಿಗೆ ಸಿಗುವ ಮಣ್ಣನ್ನಾದರೂ ಅನುಗಾಲ ನುಂಗುವೆ
ಆದರೆ ನಿಷ್ಠ ಮನೋಭಾವದಲ್ಲಂತೂ ರಾಜಿ
ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸಾಧ್ಯವೆ ಇಲ್ಲ.//



ಹೊಸೆದ ಸರಾಸರಿ ಸಾಲುಗಳೆಲ್ಲ
ಕೇವಲ ನನ್ನದೊಬ್ಬನದ್ದಲ್ಲ
ನಾ ಹೊಸೆದ ಸಾಲುಗಳಿಗೆ ಅನೇಕರ
ಅನುಗಾಲದ ತಲ್ಲಣಗಳೂ ಸಾಲ ಕೊಟ್ಟಿವೆಯಲ್ಲಾ?.......
ಮಾತಲೆ ನಾವಿಬ್ಬರೂ ಕಟ್ಟಿದ್ದ ಕನಸಿನ ಮನೆಯ
ಕೈಯ್ಯಾರೆ ತಾನೆ ಮುರಿದು
ಮೌನದ ಝೋಪಡಿಗೆ ನನ್ನ ನೂಕಿದ ನೀನೆಂದೆಂದಿಗೂ
ಸಂತಸ ಸೌಧದಲ್ಲಿಯೇ ಬಾಳುತ್ತಿರು,
ಸಮಯ ದಾಟಿದ ಮೇಲೆ
ಪ್ರವಾಹ ಹೆಚ್ಚಿದ ಮೇಲೆ....
ಬಾಳು ಹೊಳೆ ಎರಡನ್ನೂ
ಕಾಯೋದು ಬರಿ ವ್ಯರ್ಥ./
ಮಳೆಯ ನಿರೀಕ್ಷೆ ಹುಟ್ಟಿಸುವ ಮೋಡಗಳು
ಮತ್ತೆ ನೆಲವ ತಣಿಸದಿದ್ದರೆ ಅವಕ್ಕೆ ಎಂದೆಂದಿಗೂ ಕ್ಷಮೆಯಿಲ್ಲ.....
ಪೂರ್ತಿ ಗಾಳಿ ಹೋದ ಗಾಲಿಯೇ ಆಗಿದ್ದರೂ
ಕೊಂಚ ದೂರವಾದರೂ ನಂಬಿದ ಗಾಡಿಯನ್ನ,
ಮುಂದೆಳೆದೇ ತೀರುತ್ತದೆ
ವಿಫಲ ಪ್ರೇಮಿಯ ಪಾಡೂ ಕೊಂಚ ಹಾಗೇನೆ.//



ಕನಸ ಬೀದಿಯುದ್ದ ಕವಿದ ಸಂಜೆ ಕತ್ತಲು
ಇರುಳಗುರುಡ ನಾನಾದರೂ ನನ್ನ ಹೆಜ್ಜೆ ತಪ್ಪಲೇ ಇಲ್ಲವಲ್ಲ
ನಿನ್ನ ಅಮಲು ಸದಾ ನನ್ನ ಮುತ್ತಲು......
ಬದುಕು ನಿತ್ಯ ಅನಿರೀಕ್ಷಿತಗಳ ಹೊಸ ಹಾಡು
ರಾಗ ತಪ್ಪಿದರೆ ಅದರಲ್ಲಿ ಲಯಬದ್ಧವಾಗಿ ತಪ್ಪದೆ
ಮಿಡಿಯುತ್ತಲೇ ಇರುವ ತಾಳದ ತಪ್ಪೇನು?,
ಕರೆದು ಕಾದು ಸಾಕಾಗಿ ಮೌನವಾಗಿ
ಬಂದ ಹಾದಿಯನ್ನೆ ದಿಟ್ಟಿಸುತ್ತಾ
ನಿನ್ನ ಬರುವನ್ನೆ ಕಾದ ಕೃಷ್ಣ ನಾನು....
ಆಗಾಗ ಬೇಕಿದ್ದರೆ ರಾಧೆಯಾಗಿಯೂ ಕಾಣಿಸಿಯೇನು./
ತೀರಿಸಿಲಾಗದ ಮತ್ತೆ ಮರಳಿ ಮುಟ್ಟಿಸಲಾಗದ
ಕೆಲವೆ ಕೆಲವು ಋಣಗಳಲ್ಲಿ....
ನಿನ್ನ ಆ ದಿನಗಳ ನಿರ್ಮಲ ಒಲವಿನ ಋಣವೂ ಒಂದು,
ಅಪರೂಪಕ್ಕೆ ಆವರಿಸಿದ್ದ ಸ್ವಪ್ನ ಸಹಿತ ನಿದ್ರೆಯಲ್ಲಿ
ಕೊಂಚ ನಾನಿದ್ದೆ ಹಾಗೂ ಜೊತೆಗೆ ನೀನಿದ್ದೆ.....
ಮೌನದ ಮಂಜು ಕರಗಿ
ಮಾತಿನ ಧಾರೆಗಳಾಗಿ ಹರಿದು ಹೋಗುವ ಹೊತ್ತಿಗೆ
ನೆನಪಿನ ಮೋಡಗಳು ಬಾನಿನ ಮೇಘಗಳೊಂದಿಗೆ ಹನಿಯುವ ಮತ್ತಿಗೆ
ಮನ ಅನುಗಾಲ ಶರಣು.//


ಹಳೆಯ ಊರಿನಲ್ಲಿ
ಅವೆ ಸವೆದ ಹಾದಿಗಳಲ್ಲಿ ಇರುಳ ಕತ್ತಲಿನಲ್ಲಿ.....
ಅನಾಥನಂತೆ ಒಬ್ಬನೆ ಮತ್ತೆ ಹೆಜ್ಜೆ ಹಾಕುವಾಗ
ಮನಸದೇಕೋ ಭಾರ ಭಾರ,
ಮನಸು ಮೃದುವಾದಷ್ಟೂ ನೋವಿನ ಬಿಂಬ ಆಳದಲ್ಲಿ ಮೂಡುತ್ತದೆ
ಬಾಳ ಪುಟ ಬಿಳಿಯಾಗಿದ್ದಷ್ಟೂ
ಬೀಳುವ ಸಂಕಟದ ಕಲೆ ಕೊನೆಯವರೆಗೂ ಕಾಡುತ್ತದೆ./
ದಾರಿಯುದ್ದ ಬಿಕ್ಕುತ್ತಾ ಬಂದ
ಹಾದಿ ಗುರುತಿನ ಸಿಹಿ ತುಂಡುಗಳನ್ನೆಲ್ಲ.....
ವಿಧಿ ಎಂಬ ಇರುವೆ ಕಬಳಿಸಿ
ಸುಗಮ ಬಾಳು ಬೋಳಾಗಿಹೋಯಿತು,
ಸರಿವ ಕಾಲದ ಜೀತ ಮಾಡಿತ್ತಾ
ಕೂಲಿಯ ಪ್ರತಿಫಲಕ್ಕಾಗಿ ಕಾಯುವಾಗ
ಸಿಕ್ಕಷ್ಟಕ್ಕೆ ಸುಖ ಪಡಬೇಕಿರೋದು ಅನಿವಾರ್ಯ ಕರ್ಮ.//

ತುಳುನಾಡು ಬಲು ವಿಸ್ತಾರವಂತೆ ಅದರ ಹಿರಿಮೆ ಘಟ್ಟದಲ್ಲೂ ಹರಡಿತ್ತಂತೆ!, ಯಾವನ್'ರಿ ಅದು ಮತಿಗೆಟ್ಟವ ಹೀಗೆಲ್ಲ ಹಾರಾಡುತ್ತಿರುವವ?








"ಒಂದು ಕಾಲದಲ್ಲಿ ಗೋಕರ್ಣ, ಸಿದ್ದಾಪುರ, ಹೊಸನಗರ, ತೀರ್ಥಹಳ್ಳಿ, ಕಿಗ್ಗ, ಶೃಂಗೇರಿ, ಬಾಳೆಹೊನ್ನೂರು, ಕಳಸ, ಮೂಡಿಗೆರೆ ತುಳುನಾಡಿನ ಭಾಗಗಳಾಗಿದ್ದವು. ತುಳುನಾಡನ್ನು ಪ್ರಾಕೃತಿಕವಾಗಿ ೨ ಭಾಗಗಳಾಗಿ ವಿಂಗಡಿಸಲಾಗಿತ್ತು. ಘಟ್ಟ ಪ್ರದೇಶಗಳು ಮತ್ತು ಕರಾವಳಿ ಪ್ರದೇಶಗಳು. ತುಳುನಾಡಿನ ದೈವಗಳು ಘಟ್ಟಕ್ಕೆ ಹೋಗಿ ಅಲ್ಲಿನ ತುಳುವರನ್ನು ಹರಸುವ ಕ್ರಮ ಇದ್ದಿತು. ಘಟ್ಟದ ತುಳುವರು ಹಾಗೂ ಕರಾವಳಿ ತುಳುವರು ವ್ಯಾಪಾರ ಸಂಪರ್ಕ ಇಟ್ಟುಕೊಂಡಿದ್ದರು. ತುಂಬಾ ಅನ್ಯೋನ್ಯವಾಗಿದ್ದರು.

ಚಿತ್ರದುರ್ಗದ ಪಾಳೆಗಾರ ವಂಶಜರಾದ ಶಿವಪ್ಪನಾಯಕ ಮತ್ತು ಅವರ ತಲೆಮಾರಿನವರು ತುಳುನಾಡನ್ನು ದಂಡೆತ್ತಿ ಬಂದರು. ಅವರು ಸಾಗರದಲ್ಲಿ ಕೋಟೆಯನ್ನು ಕಟ್ಟಿದರು. ತುಳುನಾಡಿನಲ್ಲಿ ಕನ್ನಡವನ್ನೇ ಆಡುಭಾಷೆಯನ್ನಾಗಿ ಉಪಯೋಗಿಸಬೇಕು, ಇಲ್ಲವಾದರೆ ಕಠಿಣ ಶಿಕ್ಷೆಯನ್ನು ನೀಡುವುದಾಗಿ ಬೆಧರಿಸಿ ತುಳುವನ್ನು ನಾಶಪಡಿಸಲಾರಂಭಿದರು. ಪಾಳೆಗಾರರು ಕರಾವಳಿ ತುಳುನಾಡಿಗೂ ಆಕ್ರಮಣ ಮಾಡಿ ತುಳುನಾಡಿನ ರಾಜಧಾನಿ ಬಾರ್ಕೂರನ್ನು ವಶಪಡಿಸಿಕೊಂಡರು. ಕ್ರಮೇಣ ಹೊಸನಗರ ತೀರ್ಥಹಳ್ಳಿ, ಕಿಗ್ಗ, ಶೃಂಗೇರಿ, ಬಾಳೆಹೊನ್ನೂರು, ಕಳಸ, ಮೂಡಿಗೆರೆ, ಸುಳ್ಯ, ಬಾರ್ಕೂರು, ಕುಂದಾಪುರ, ಸಿದ್ದಾಪುರ ಕನ್ನಡೀಕರಣ ಗೊಂಡಿತು. ವಿಶೇಷವೇನೆಂದರೆ ಇವರು ಕನ್ನಡದಲ್ಲೂ ತುಳುವಿನ ಧಾಟಿಯನ್ನು ಬಿಡಲಿಲ್ಲ. ತುಳು ಹಾಗೂ ಕನ್ನಡದ ಸಮಾಗಮವೇ ಕುಂದಭಾಷೆ, ಅರೆಭಾಷೆ ಗಳೆಂದು ಪ್ರಸಿದ್ಧವಾದವು. ಆದರೆ ತುಳುನಾಡಿನ ಮೂಲಭಾಷೆ ನಾಶವಾಗತೊಡಗಿತು.

ತುಳು ಭಾಷೆಯ ಪತನಕ್ಕೆ ಕಾರಣವಾದ ಕೆಲವು ಅಂಶಗಳು.
೧) ಚೋಳರ ಆಕ್ರಮಣ ತುಳುವಿಗೆ ತಂದ ಮೊದಲ ಆಘಾತ
೨) ಚೇರರ ಆಕ್ರಮಣ.
೩) ಹೊಯ್ಸಳರ ಆಕ್ರಮಣ
೪) ಪಾಳೆಗಾರರ ಆಕ್ರಮಣ
೫) ಬ್ರಿಟಿಶರಿಂದ ತುಳು ಲಿಪಿಯ ನಿರ್ಬಂಧ.
೬) ಭಾಷಾ ವೈವಿಧ್ಯತೆಯ ಮೇಲೆ ರಾಜ್ಯಗಳ ವಿಂಗಡನೆಯ ಸಂದರ್ಭದಲ್ಲಿ ತುಳುನಾಡನ್ನು ಕೇರಳಕ್ಕೂ ಕರ್ನಾಟಕಕ್ಕೂ ಪಾಲು.
೭) ಕರ್ನಾಟಕ ಸರ್ಕಾರದಿಂದ ತುಳು ನಿರ್ಬಂಧ.
( ತೆಂಕಣ ತುಳುನಾಡಿನ ಪತನದ ಬಗ್ಗೆ ಮುಂದಿನ ಪೋಸ್ಟ್ ನಲ್ಲಿ.)"

ಹೀಗೊಂದು ತಲೆಕೆಟ್ಟ ಬರಹ ಒಂದು ವ್ಯಾಪಕವಾಗಿ ಅಲ್ಲಿಲ್ಲಿ ಪಸರಿಸಿ ಹಂಚಿ ಹೋಗುತ್ತಿದೆ. ಅರೆಬೆಂದವನೊಬ್ಬ ಮನಸೋ ಇಚ್ಛೆ ಗಳಪಿದಂತಿರುವ ಈ ಬರಹಕ್ಕೆ ಮುಕುಳಿಬಾಯಿ ಇಲ್ಲ ಎನ್ನುವುದು ಅನಿವಾರ್ಯ.

ಸುಳ್ಳು, ಯಾವ ಕಾಲದಲ್ಲೂ ಗೋಕರ್ಣ, ಸಿದ್ಧಾಪುರ, ಹೊಸನಗರ, ತೀರ್ಥಹಳ್ಳಿ, ಬಾಳೆಹೊನ್ನೂರು, ಕಳಸ, ಶೃಂಗೇರಿ, ಮುಡಿಗೆರೆ ಹಾಗೂ ಕಿಗ್ಗಾ ತುಳುನಾಡಿನ ಭಾಗವಾಗಿರಲೇ ಇಲ್ಲ. ಅವು ಕರುನಾಡ ಮಲೆನಾಡಿನ ಭಾಗಗಳಾಗಿದ್ದವು, ಇದ್ದಾವೆ ಹಾಗೂ ಇನ್ನು ಮುಂದೆಯೂ ಇರುತಾವೆ. ಇನ್ನು ಆ ಕಾಲಕ್ಕೆ ಹೇಳಿಕೊಳ್ಳುವ ಯಾವೊಂದು ಉತ್ಪತ್ತಿಯೂ ಇಲ್ಲದ ಕರಾವಳಿಯ ಬಡ ಜನ ಮಲೆನಾಡಿಗೆ ಅನ್ನ ಅರಸಿ ಉದ್ಯೋಗ ನಿಮಿತ್ತ ತಾವೆ ಬಿಕನಾಸಿಗಳಂತೆ ಬೇಡಿಕೊಂಡು ಘಟ್ಟ ಹತ್ತಿ ಹೋಗುತ್ತಿದ್ದರೆ ಹೊರತು, ಹಾಗೆ ಹೋದ ಮಾತ್ರಕ್ಕೆ ಇಡಿ ಘಟ್ಟವನ್ನೆ ತಮ್ಮದು ಎನ್ನುವ ತಿಕ್ಕಲಿಗೆ ಇಳಿದಿದ್ದರೆ ತಿಕದ ಮೇಲೆ ನಾಲ್ಕು ಒದ್ದು ಓಡಿಸುತ್ತಿದ್ದರು ಅಲ್ಲಿನವರು ಎನ್ನುವದನ್ನ ನೆನಪಿಟ್ಟುಕೊಂಡು ಹೀಗೆಲ್ಲ ಅಸಂಬದ್ಧವಾಗಿ ಬಡಬಡಿಸಬೇಕು ಅಷ್ಟೆ.

ಇನ್ನು ತುಳುನಾಡಿನ ಭೂತಗಳು ಮೂಲದಲ್ಲಿ ಘಟ್ಟವನ್ನ ಇಳಿದುಕೊಂಡು ಬಂದವು ಎನ್ನುವ ನುಡಿಕಟ್ಟಿದೆ. ಅದರ ಅರ್ಥ ಆ ಭೂತಾರಾಧನೆಯ ಸಂಸ್ಕೃತಿ ಬಹುಷಃ ತುಳುನಾಡಿಗೆ ಕರುನಾಡ ಕೊಡುಗೆ ಅನ್ನುವ ಅರ್ಥ ಹೊಮ್ಮಿಸುತ್ತವೆಯೆ ಹೊರತು. ಘಟ್ಟವನ್ನ ಯಾರೂ ತುಳುವರಿಗೆ ಜಹಗೀರು ಬರೆದುಕೊಟ್ಟಿದ್ದರು ಅಂತಲ್ಲ. ಇಂತಹ ಸಾಂಸ್ಕೃತಿಕ ಅನನ್ಯತೆ ದಯಪಾಲಿಸಿದ ನೆಲಕ್ಕೆ ಕೃತಜ್ಞರಾಗಿರುವ ಬದಲಿಗೆ ಆ ಸೀಮೆಯೆ ನಮ್ಮದು ಎನ್ನುವುದು ಅರೆ ಹುಚ್ಚರು ಮಾತ್ರ.

ಎರಡನೆಯ ಪಂಕ್ತಿಯಂತೂ ಭಯಂಕರ ಸುಳ್ಳಿನ ಬೊಂತೆ. ಎಲ್ಲಿಯ ಚಿತ್ರದುರ್ಗ? ಯಾರವ ಶಿವಪ್ಪನಾಯಕ? ಎಲ್ಲಾ ಬಿಟ್ಟು ಅವನ್ಯಾಕೆ ಖಾಯಿಲೆಯ ಬೀಡಾಗಿದ್ದ ಮಲೆಸೀಮೆಯನ್ನ ಕಷ್ಟಪಟ್ಟು ದಾಟಿ ಆ ಕಾಲದಲ್ಲಿ ಮೂರು ಕಾಸಿನ ಉತ್ಪತ್ತಿ ಇಲ್ಲದೆ ಮಲೆನಾಡಿಗೆ ಅನ್ನ ಅರಸಿಕೊಂಡು ಘಟ್ಟ ಹಟ್ಟುತ್ತಿದ್ದ ಕೈಸೋತ ತುಳುವರ ಬರಡು ಭಂಡಾರದಂತಹ ಕರಾವಳಿಗೆ ಮುತ್ತಿಗೆ ಹಾಕುತ್ತಿದ್ದ. ಒಂದು ವೇಳೆ ಆ ಹೆಸರಿನ ಪಾಳೆಗಾರನೊಬ್ಬ ಇದ್ದು ಅವನಿಗೇನಾದರೂ ಹುಚ್ಚುನಾಯಿ ಕಚ್ಚಿದ್ದರೆ ಮಾತ್ರ ಈ ಲಾಭವೆ ಇಲ್ಲದ ವ್ಯರ್ಥ ಶ್ರಮಕ್ಕೆ ಅವ ಇಳಿಯಬೇಕಿತ್ತೇನೋ! ಹಾಸ್ಯಾಸ್ಪದ ಬೊಂತೆ.

ಅವ ಬಂದ ಬೆದರಿಸಿ ತುಳು ಆಡದಂತೆ ಸ್ಥಳಿಯರನ್ನ ನಿರ್ಬಂಧಿಸಿದ ಅಂತೆಲ್ಲ ಸುಳ್ಳಿನ ಮಾಲೆ ಹೊಸೆವ ಮಡೆಯನಿಗೆ ಮೊದಲು ಗೊತ್ತಿರಬೇಕಾದ ಸತ್ಯವೇನೆಂದರೆ ಮಲೆನಾಡನ್ನ ಆಳಿದ ನಾಯಕ ಮನೆತನಕ್ಕೆ ಮಲೆನಾಡಿನಲ್ಲಿ ಪಾಳೆಪಟ್ಟು ಇದ್ದದ್ದು ಹೌದಾದರೂ ಅವರಿಗೂ ಚಿತ್ರದುರ್ಗದ ನಾಯಕರಿಗೂ ಸೂತ್ರ ಸಂಬಂಧವಿಲ್ಲ! ಚಿತ್ರದುರ್ಗದ ನಾಯಕರು ಜಾತಿಯಿಂದ ಬೇಡರಾಗಿದ್ದು ಅವರ ಹುಟ್ಟು ಉಪನಾಮ ನಾಯಕ. ಆದರೆ ನಗರ, ಕೆಳದಿ, ಬಿದನೂರು ಹಾಗೂ ಇಕ್ಕೇರಿಯನ್ನ ರಾಜಧಾನಿಗಳನ್ನಾಗಿಸಿಕೊಂಡು ಮಲೆನಾಡನ್ನ ಆಳುತ್ತಿದ್ದ ನಾಯಕರು ಶುದ್ಧ ಸಸ್ಯಾಹಾರಿ ಲಿಂಗಾಯತರು. ಇವರಿಗೆ ಪಟ್ಟವಾದ ನಂತರ ಮಾತ್ರ ನಾಯಕರೆಂದು ಕರೆಯಲಾಗುತ್ತಿತ್ತೇ ಹೊರತು ಹುಟ್ಟಿನಿಂದ ಅಲ್ಲ.

ಇನ್ನು ಎಲ್ಲಕ್ಕೂ ಪ್ರಮುಖವಾಗಿ ಕೆಳದಿಯ ನಾಯಕರು ಮಲೆನಾಡಿನಲ್ಲಿ ಆಳ್ವಿಕೆ ಆರಂಭಿಸಿದಾಗ ತುಳುನಾಡಿನ ರಾಜಧಾನಿಯಾಗಿ ಬಾರ್ಕೂರು ಇದ್ದಿರದೆ ನಾಲ್ಕು ವರೆ ಶತಮಾನ ಸುಖವಾಗಿ ಸರಿದುಹೋಗಿತ್ತು. ಸಾಗರ ಎನ್ನುವ ಊರು ಇನ್ನೂ ಹುಟ್ಟಿರಲೇ ಇಲ್ಲ! ಅದಿನ್ಯಾರ ಕನಸಿನಲ್ಲಿ ಶಿವಪ್ಪನಾಯಕ ಕೋಟೆ ಕಟ್ಟಿ ಬಂದನೋ ಅರ್ಥವೆ ಆಗುತ್ತಿಲ್ಲ! ಏಕೆಂದರೆ ಆತ ಹುಟ್ಟಿದ್ದೆ ಮುಂದೆ ನೂರೈವತ್ತು ವರ್ಷದ ನಂತರ! ಕೇಳಲಿಕ್ಕೆ ಮಜವಾಗಿದೆ ಕಥೆ.

ತನ್ನ ಕೊನೆಗಾಲದಲ್ಲಿ ಕೆಳದಿಯ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವನಾಯಕನ ಹೆಸರಿನಲ್ಲಿ ಒಂದು ಕೆರೆ ಕಟ್ಟಿಸಿ ಅದರ ಪಕ್ಕ ಒಂದು ಗಣಪತಿ ದೇವಸ್ಥಾನವನ್ನೂ ಸ್ಥಾಪಿಸಿ ಅದಕ್ಕೆ "ಸದಾಶಿವ ಸಾಗರ" ಎನ್ನುವ ಹೆಸರಿಟ್ಟ ಮುಂದೆ ಅದೆ ಕೆರೆಯ ಸುತ್ತ ಬೆಳೆದ ಊರು ಸಾಗರ ಎನ್ನಿಸಿಕೊಂಡಿತು. ಇದು ನಡೆದದ್ದು ೧೬೧೫ರಲ್ಲಿ. ಇಂದಿಗೂ ಸಾಗರದಲ್ಲಿ ಅದು  "ಗಣಪತಿ ಕೆರೆ"ಯ ಹೆಸರಿನಲ್ಲಿ ಅಸ್ತಿತ್ವದಲ್ಲಿದೆ. ಆಗ ತುಳುನಾಡಿನಲ್ಲಿ ಸುಮಾರು ಎಂಟು ವಿವಿಧ ಪಾಳೆಪಟ್ಟುಗಳು ಅಸ್ತಿತ್ವದಲ್ಲಿದ್ದವು ಹಾಗೂ ಮುಲ್ಕಿ ಸಾವಂತರ ರಾಜಧಾನಿಯಾಗಿಯೂ, ವೇಣೂರು ಅಜಿಲರ ರಾಜಧಾನಿಯಾಗಿಯೂ, ಕಾರ್ಕಳ ಭೈರರಸರ ರಾಜಧಾನಿಯಾಗಿಯೂ, ಮೂಡುಬಿದಿರೆ ಚೌಟರ ರಾಜಧಾನಿಯಾಗಿಯೂ, ಎಣ್ಮಕಜೆ ಬಲ್ಲಾಳರ ರಾಜಧಾನಿಯಾಗಿಯೂ ಚಾಲ್ತಿಯಲ್ಲಿದ್ದವೆ ಹೊರತು ಬಾರ್ಕೂರು ಪಾಳುಬಿದ್ದು ಇತಿಹಾಸದ ಪುಟ ಸೇರಿ ಹೋಗಿತ್ತು. ಇನ್ನೂ ಹುಟ್ಟದೆ ಇದ್ದ ಶಿವಪ್ಪನಾಯಕ ಬಂದು ಇವರ ಹುಟ್ಟಡಗಿಸಿದ ಅನ್ನುವ ಸವಿಯಾದ ಸುಳ್ಳು ಕೇಳಲಿಕ್ಕಷ್ಟೆ ಚಂದ ಇದೆ. ಆತ ಆಕ್ರಮಿಸಿ ತುಳುವರನ್ನ ತುಳಿದ ಎಂದು ಬರೆದ ಖಾಲಿ ಮಂಡೆಯವನಿಗೆ ಮೆದುಳು ಎನ್ನುವ ಅಂಗ ಇರುವುದು ಅನುಮಾನ ಅನ್ನುವುದು ಸ್ಪಷ್ಟ.

ಇನ್ನು ತುಳುಭಾಷೆಗೂ ಕುಂದಗನ್ನಡಕ್ಕೂ, ಅರೆಭಾಷೆಗೂ ಸಂಬಂಧವಿಲ್ಲ. ಅವೆಲ್ಲ ಪ್ರಗ್ಧ್ರಾವಿಡದ ಇನ್ನಿತರ ಲಿಪಿ ರಹಿತ ಕೂಸುಗಳಷ್ಟೆ ಇವು ಕನ್ನಡಕ್ಕೆ ನಿಷ್ಠವಾಗಿವೆಯೆ ಹೊರತು ತುಳುವಿಗೆ ಖಂಡಿತಕ್ಕೂ ಅಲ್ಲ. ತುಳು ಭಾಷೆಯ ಪತನಕ್ಕೆ ಅದನ್ನಾಡುವವರ ನಿರಭಿಮಾನ ಹಾಗೂ ಮಾತೃಭಾಷಾಭಿಮಾನ ಮರೆತ ವಾಣಿಜ್ಯ ಮನಸ್ಸಿನ ಅವರ ವ್ಯಾಪಾರಿ ಮನೋವೃತ್ತಿಯ ಪರಾಕೇಷ್ಠೆ ಕಾರಣವೆ ಹೊರತು ಯಾವ ಕಾಲಕ್ಕೂ ಚೋಳ ಹಾಗೂ ಚೇರರು ತುಳುನಾಡನ್ನ ಆಕ್ರಮಿಸಿರಲೇ ಇಲ್ಲ. ಹೊಯಸಳರು ಹಾಗೂ ಇವರು ಹೇಳಿದ ಪಾಳೆಗಾರರು (ಯಾವ ಊರಿನ ಪಾಳೆಗಾರ!.) ಇವರಿಗೂ ಇದೆ ಮಾತನ್ನ ಹೇಳಬೇಕು. ಹಾಗೆ ಯಾವ ಆಕ್ರಮಣವೂ ನಡೆದ ದಾಖಲೆಗಳಿಲ್ಲ.  ಇದಿನ್ನೊಂದು ಸುಳ್ಳು.

ಇನ್ನು ಬ್ರಿಟಿಷರಾಗಲಿ ಕರ್ನಾಟಕ ಸರಕಾರವಾಗಲಿ ತುಳು ಲಿಪಿ ಹಾಗೂ ಭಾಷೆಯ ಮೇಲೆ ನಿರ್ಬಂಧ ಎಲ್ಲೂ ವಿಧಿಸಿಯೆ ಇಲ್ಲ. ಹಾಗನ್ನುವವನಿಗೆ ಬಹುಷಃ ಗುಣವೆ ಆಗದ ಖಾಯಿಲೆ ಮಾತ್ರ ಆಗಿರಲಿಕ್ಕೆ ಸಾಧ್ಯ. ಹೌದು, ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ತುಳುನಾಡು ಪರಿಗಣಿತವಾಗಲಿಲ್ಲ. ಇಲ್ಲಿನ ಒಂದು ತಾಲ್ಲೂಕನ್ನ ಬಲವಂತವಾಗಿ ಕೇರಳಕ್ಕೆ ಸೇರಿಸಿ ಉಳಿದ ಭಾಗವನ್ನ ಕರ್ನಾಟಕದ ಮರು ಸುಪರ್ದಿಗೆ ಕೊಡಲಾಯಿತು ( ಬ್ರಿಟಿಷರಿಗಿಂತ ಮೊದಲು ಇದು ಮೈಸೂರು ರಾಜ್ಯ, ಅದಕ್ಕೂ ಮೊದಲು ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು ಅನ್ನುವುದು ನೆನಪಿಡಿ.). ಇದಕ್ಕೆ ಕಾರಣ ಆಡಳಿತದ ಹಿತದೃಷ್ಟಿ ಹಾಗೂ ಬಿಗಿ ಕಾನೂನು ಹಾಗೂ ಸುವ್ಯವಸ್ಥೆಗೆ ಸಣ್ಣ ರಾಜ್ಯಗಳ ಸೃಷ್ಟಿ ಕಂಟಕ ಎನ್ನುವ ಅಂದಿನ ಪ್ರಧಾನಿ ನೆಹರೂರವರ ವಯಕ್ತಿಕ ಅಭಿಪ್ರಾಯವೆ ಹೊರತು ಇದಕ್ಕೂ ಭಾಷೆಗೂ ತಳುಕು ಹಾಕೋದೆ ಹುಚ್ಚಾಟ. ಇದೆ ತತ್ವದಾಧಾರದಲ್ಲಿ ಅಲ್ಲಿಯವರೆಗೂ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಹಾಗೂ ಜಮಖಂಡಿಗಳನ್ನೂ ಕರ್ನಾಟಕದಲ್ಲಿ ವಿಲೀನಗೊಳಿಸಿದ್ದು. ಹೀಗೆಲ್ಲ ಸುಳ್ಳು ಹರಡುವ ಬೃಹಸ್ಪತಿಗಳಿಗೆ ಈ ವಿಚಾರ ಗೊತ್ತಿರಲಿಕ್ಕಿಲ್ಲ.


ಇನ್ನೊಂದು ವಿಷಯವೊಂದನ್ನ ಇಲ್ಲಿ ಪ್ರಸ್ತಾವಿಸ ಬಯಸುತ್ತೇನೆ. ಕಾಸರಗೋಡು ತಾಲ್ಲೂಕು ಕೇರಳ ಪಾಲಾಗಿ ತುಳುನಾಡಿಗೆ ಅನ್ಯಾಯವಾಗಿದೆ ಅನ್ನೋದು ಮೇಲ್ನೋಟದ ಸತ್ಯವಾದರೂ ವಾಸ್ತವವಾಗಿ ತುಳುನಾಡಿಗೆ ಇದರಿಂದ ಅಂತಹ ಅನ್ಯಾಯವೇನೂ ಆಗಿಲ್ಲ!. ಏಕೆಂದರೆ ಹದಿನೆಂಟನೆ ಶತಮಾನದ ಉತ್ತರಾರ್ಧದಲ್ಲಿ ಚಿಕ್ಕ ವೀರರಾಜೇಂದ್ರನ ಪದಚ್ಯುತಿ ಹಾಗೂ ಬನಾರಸ್ಸಿಗೆ ಅತನ ಗಡಿಪಾರಾದ ನಂತರ ಆತನ ಕೊಡಗನ್ನು ರಾಜಕೀಯವಾಗಿ ಒಡೆದು ಅದರ ಅವಿಭಾಜ್ಯ ಅಂಗವಾಗಿದ್ದ ಸುಳ್ಯ ತಾಲ್ಲೂಕನ್ನ ಆಡಳಿತಾತ್ಮಕ ಅನುಕೂಲಕ್ಕಾಗಿ ತಮ್ಮ ನೇರ ನಿಗಾರನಿಯಲ್ಲಿದ್ದ ಮದ್ರಾಸ್ ಸಂಸ್ಥಾನದ ದಕ್ಷಿಣ ಕನ್ನಡ ಜಿಲ್ಲೆಗೆ ಬ್ರಿಟಿಷರು ಸೇರಿಸಿದ್ದರು. ಬ್ರಿಟಿಷರು ಭಾರತದಿಂದ ಕಾಲ್ತೆಗೆದ ನಂತರ ಈ ಒಡೆದಾಳುವ ನೀತಿಯ ನೇರ ಫಲಾನುಭವಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯವನ್ನ ಉಚಿತ ಕೊಡುಗೆಯಾಗಿ ಉಳಿಸಿಕೊಂಡಿತು. ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗೆಜೆಟಿಯರ್ ಓದಿ ಸಂದೇಹಿತರು ತಮ್ಮ ಅನುಮಾನಗಳನ್ನ ಬಗೆಹರಿಸಿಕೊಳ್ಳಬಹುದು.

ಒಂದು ಸುಳ್ಳನ್ನ ಕಂಡಕಂಡಲ್ಲಿ ಕೋಟಿ ಬಾರಿ ಊಳಿಟ್ಟರೂ ಅದು ಕಡೆಗೂ ಸತ್ಯವಾಗಲಾರದು. ಈ ಅಲ್ಪ ಬುದ್ಧಿಯ "ತುಳುನಾಡ" ಹಗಲು ಕನಸುಗಾರಿಗೂ ಇದು ನೆನಪಿರಬೇಕು. ಅವರ ಈ ಬೊಬ್ಬೆ ತುಳುವಿಗೆ ಹೆಚ್ಚು ಹಾನಿಯನ್ನೆ ಉಂಟು ಮಾಡುತ್ತದೆಯೆ ಹೊರತು ಲಾಭವಾಗುವ ಮಾತಂತೂ ಬಲು ದೂರ.

{ ಅನುಬಂಧ;  Sadashiva Nayaka (1530–1566) was an important chieftain in the Vijayanagar Empire and earned the title Kotekolahala from emperor Aliya Rama Raya for his heroics in the battle of Kalyani. The coastal provinces of Karnataka came under his direct rule. He moved the capital to Ikkeri some 20 km. from Keladi.

 Venkatappa Nayaka (1586–1629) is considered by scholars as ablest monarch of the clan. He completely freed himself from the overlordship of the relocated Vijayanagar rulers of Penugonda. Italian traveller Pietro Della Valle, who visited his kingdom in 1623, called him an able soldier and administrator. In his reign the kingdom expanded so that it covered coastal regions, Malnad regions, and some regions to the east of the western Ghats of present day Karnataka. He is also known to have defeated the Adilshahis of Bijapur in Hanagal. Though a Virashaiva by faith, he built many temples for Vaishnavas and Jains and a mosque for Muslims.

Shivappa Nayaka (1645–1660) is widely considered as the ablest and greatest of the Keladi rulers. He was the uncle of Virabhadra Nayaka. Shivappa deposed his nephew to gain the throne of Keladi. He was not only an able administrator; he also patronised literature and fine arts. His successful campaigns against the Bijapur sultans, the Mysore kings, the Portuguese, and other Nayakas of the neighbouring territories east of the western ghats helped expand the kingdom to its greatest extent, covering large areas of present day Karnataka. He gave importance to agriculture and developed new schemes for collection of taxes and revenues which earned him much praise from later British officials. A statue of him and the palace built by him containing many artifacts of his times are reminders of the respect he has earned even from the present generation of people of the region.}

Thursday, July 3, 2014

ವಯಸ್ಸು ಮಿತಿ ಮೀರಿದ್ದರೂ ಸಾಂವಿಧಾನಿಕ ಮಾನ್ಯತೆ ಮಾತ್ರ "ತುಳುವಪ್ಪೆ" ( ತುಳುವಮ್ಮ.)ಗೆ ಇನ್ನೂ ಮರೀಚಿಕೆ......





ದ್ರಾವಿಡ ಭಾಷೆಗಳ ಇತಿಹಾಸವನ್ನ ನೋಡಿದರೆ ಮೊದಲು ಪ್ರಗ್ದ್ರಾವಿಡ ಎನ್ನುವ ಅಮ್ಮನಿಂದ ಒಟ್ಟಿಗೆ ಹುಟ್ಟಿ ಬೇರೆಯಾದ ಎರಡು ಅವಳಿ ಭಾಷೆಗಳು ತುಳು ಹಾಗೂ ತಮಿಳು. ಇವೆರಡೂ ಭಾಷೆಗಳು ನಾಲ್ಕೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು ಕೂಡಲೆ ಲಿಪಿ ಸಂಸ್ಕಾರ ಪಡೆದುಕೊಂಡವು.


ಅನಂತರ ಸುಮಾರು ಒಂದು ಸಾವಿರ ವರ್ಷಗಳ ನಂತರ ಹುಟ್ಟಿದ ಮೊದಲ ತಂಗಿ ಭಾಷೆ ಕನ್ನಡ. ಇದರ ಹಿಂದೆಯೆ ಮತ್ತೆ ಆರುನೂರು ವರ್ಷಗಳಾಚೆ ತೆಲುಗು ತೆಲ್ಲಿ ಹುಟ್ಟಿದಳು. ಇವರಿಬ್ಬರಿಗೂ ಕೂಡಲೆ ಲಿಪಿ ಸಂಸ್ಕಾರಗಳಾದವು ಸಹ.

ಆದರೆ ಕೊನೆಗೆ ಹುಟ್ಟಿದ ಹಾಗೂ ಕೇವಲ ಒಂದೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮಲಯಾಳಂ ಮಾತ್ರ ಲಿಪಿ ಬದ್ಧವಾಗಲು ಮತ್ತೆ ಸಾವಿರ ವರ್ಷ ನಿರೀಕ್ಷಿಸಬೇಕಾಯಿತು! ನೆರೆಯ ತುಳು ನಾಡಿನ ಲಿಪಿ ಇದರ ಅಗತ್ಯಕ್ಕೆ ಮುಂದಿನ ದಿನಗಳಲ್ಲಿ ಒದಗಿ ಬಂತು. ಇದಕ್ಕೆ ಒಂದು ಸ್ಪಷ್ಟ ನಿದರ್ಶನ ಎಂದರೆ ಹುಟ್ಟು ಮಲಯಾಳಿಯಾಗಿದ್ದರೂ ಶ್ರೀಶಂಕರಾಚಾರ್ಯರು ಔಷಧಕ್ಕೆ ಬೇಕೆಂದರೂ ಒಂದೇ ಒಂದು ಕೃತಿಯನ್ನ ತಮ್ಮ ಮಾತೃಭಾಷೆಯಲ್ಲಿ ರಚಿಸಿಲ್ಲ! ಲಿಪಿ ಇಲ್ಲದ್ದೂ ಇದಕ್ಕೊಂದು ಕಾರಣವಾಗಿದ್ದಿರಬಹುದು. ಅವರ ಕೃತಿಗಳೆಲ್ಲ ದೇವನಾಗರಿ ಲಿಪಿ ಹಾಗೂ ಸಂಸ್ಕೃತ ಭಾಷೆಯಲ್ಲಿವೆ.

ಮಲಯಾಳಂನ ಅತಿ ಪುರಾತನ ಸಾಹಿತ್ಯ ಕೃತಿಗಳ ವಯಸ್ಸು ಐದು ಶತಮಾನ ದಾಟುವುದಿಲ್ಲ. ಒಟ್ಟಿನಲ್ಲಿ ಮನೆಯ ಹಿರಿಯಕ್ಕಂದಿರಲ್ಲಿ ಒಬ್ಬಳಾಗಿದ್ದರೂ ಕಿರಿಯ ಕನ್ನಡ ಹಾಗೂ ಮಲಯಾಳಂನ ಮರ್ಜಿಯಲ್ಲಿ ಕಾಲ ಹಾಕಬೇಕಾದ ಸಂದಿಗ್ಧಕ್ಕೆ ತುಳುವಪ್ಪೆ ಸಿಲುಕಿ ಅನಿವಾರ್ಯವಾಗಿ ಪರಿತಪಿಸುತ್ತಿದ್ದಾಳೆ.


ಸಂಸ್ಕೃತ ಸಹಿತ ಆರ್ಯ ಕುಟುಂಬದ ಭಾಷೆಗಳು ಬಹುತೇಕ ದೇವನಾಗರಿ ಅಥವಾ ಅದರ ವಿವಿಧ ಪರಿಷ್ಕೃತ ಆವೃತ್ತಿಗಳನ್ನ ಬರವಣಿಗೆಗೆ ಬಳಸುತ್ತವೆ. ಸಂಸ್ಕೃತದ ಅಪಭ್ರಂಶಗಳಾದ ಅರ್ಧ ಮಾಗಧಿ, ಪಾಳಿ, ಪೈಶಾಚಿ ಹಾಗೂ ಪ್ರಾಕೃತ ಬ್ರಾಹ್ಮಿ ಲಿಪಿಯನ್ನ ಬರವಣಿಗೆಗೆ ಆಧರಿಸಿವೆ. ಒಟ್ಟಿನಲ್ಲಿ ಸಂಸ್ಕೃತವೂ ಸೇರಿ ಬಹುತೇಕ ಆರ್ಯ ಮೂಲದ ಭಾಷೆಗಳಿಗೆ ಸ್ವಂತ ಲಿಪಿ ಇಲ್ಲ.


ತುಳುವಿಗೆ ಲಿಪಿ ಇಲ್ಲ ಅನ್ನುವುದು ಒಂದು ಜನಪ್ರಿಯ ನಂಬಿಕೆ. ಆದರೆ ಲಿಪಿಯೇ ಇದ್ದಿಲ್ಲದ ಮಲಯಾಳಂ ಭಾಷೆಗೆ ಕಡವಾಗಿ ಕೊಟ್ಟು ತನಗೆ ಇದ್ದ ಲಿಪಿಯ ಬೆಂಬಲವನ್ನ ಕಳೆದುಕೊಂಡು ಕಾಲಾನುಕ್ರಮದಲ್ಲಿ ಬಡವಾದ ನತದೃಷ್ಟ ಭಾಷೆ ತುಳು ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ. ಆಚಾರ್ಯ ಮಾಧ್ವರು ತುಳು ಲಿಪಿಯಲ್ಲಿಯೇ ಧರ್ಮ ಜಿಜ್ಞಾಸೆಗಳನ್ನ ದಾಖಲಿಸಿದ್ದಾರೆ. ಇತ್ತೀಚಿನವರೆಗೂ ತುಳುನಾಡಿನ ಹಿರಿಯರು "ತಿಗಳಾರಿ" ಎಂದು ಕರೆಯಲಾಗುವ ಈ ಲಿಪಿಯನ್ನ ಬಳಸಿ ಬರವಣಿಗೆ ಸಾಗಿಸುತ್ತಿದ್ದರು.

ಇದರಲ್ಲಿ ಬರೆಯಲಾಗಿರುವ ಓಲೆಗರಿಗಳನ್ನ ಇಂದಿಗೂ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯ, ಉಡುಪಿಯ ಫಲಿಮಾರು ಮಠ ಹಾಗೂ ತಿರುವನಂತಪುರದ ಸರಕಾರಿ ವಸ್ತು ಸಂಗ್ರಹಾಲಯಗಳಲ್ಲಿ ನೋಡಬಹುದು. ತುಳು ಭಾಷಾಭಿಮಾನಿಗಳಿಗೆ ಇಲ್ಲಿದೆ ಅವರದ್ದೆ ಮಾತೃಭಾಷೆಯ ಸ್ವಂತ ಲಿಪಿ. ಇದರ ಪರಿಷ್ಕರಣೆಯೇ ಇಂದು ಚಾಲ್ತಿಯಲ್ಲಿರುವ ಮಲಯಾಳಂ ಲಿಪಿ ಎನ್ನುವುದು ಉಳಿದವರ ಮಾಹಿತಿಗಾಗಿ.


ನನ್ನ ಮಾತೃಭಾಷೆ ಕನ್ನಡ. ಆದರೆ ತುಳುವಿಗೆ ಆದ, ಆಗುತ್ತಿರುವ ಅನ್ಯಾಯಕ್ಕೆ ಮನ ಮಿಡಿಯುತ್ತದೆ. ಇಂದು ಬಳಕೆಯಲ್ಲಿ ರೂಢಿಗೆ ಬಂದಿರುವ ತಮಿಳು ಲಿಪಿಯನ್ನ ಆಧರಿಸಿ ಕೆಲವರು ಕನಿಷ್ಠ ಅಕ್ಷರಗಳಿರುವ ಅದು ಬೆಳೆದಿಲ್ಲ ಎನ್ನುವುದುಂಟು. ಆದರೆ ಅಕ್ಷರ ಸಮೃದ್ಧ ಸಂಗಂ ಕಾಲದ ತಮಿಳಿನಲ್ಲಿ ಈ ಸಮಸ್ಯೆ ಇರಲಿಲ್ಲ. ವಿಕಾಸ ಕೂಡುವುದರಲ್ಲಿ ಅಷ್ಟೇ ಇಲ್ಲ ಹಿತ ಮಿತ ಗೊಳಿಸುವುದರಲ್ಲಿಯೂ ಇರುತ್ತದೆ. ಅಂತೆಯೇ ಇನ್ನುಳಿದ ದ್ರಾವಿಡ ಭಾಷೆಗಳು ಸರಿಸುಮಾರು ೫೪ ಲಿಪಿಗಳಿಗೆ ತಮ್ಮ ವಿಕಸನವನ್ನು ಅಂತಿಮಗೊಳಿಸಿಕೊಂಡರೆ ತಮಿಳು ಮಾತ್ರ ಸೂಕ್ತ ಚಿನ್ಹೆಗಳನ್ನು ಸಮಯೋಚಿತವಾಗಿ ಬಳಸುವ ಸ್ವ ಶಿಸ್ತಿಗೆ ಒಳಪಟ್ಟು ತಾನೊಂದೇ ಭಿನ್ನ ಹಾದಿಯನ್ನು ತುಳಿಯಿತು. ಸೀಮಿತ ಅಕ್ಷರಗಳ ತಮಿಳು ವಿಫುಲ ಅಕ್ಷರಗಳ ಸಂಸ್ಕಾರವಿರುವ ನಮ್ಮಲ್ಲಿ ಗೊಂದಲ ಹುಟ್ಟಿಸಿದರೆ ಅದು ನಮ್ಮ ಕಲಿಕೆಯ ದೋಷವೆ ಹೊರತು, ಇದರಲ್ಲಿ ಆ ಭಾಷೆಯ ತಪ್ಪೇನೂ ನನಗೆ ಗೋಚರಿಸುತ್ತಿಲ್ಲ. ಸಹೋದರಿ ಭಾಷೆಗಳ ತುಲನೆಯಲ್ಲಿ ತುಳುವಿಗೂ ಸಮಾನ ಪಟ್ಟ ಸಿಗಬೇಕಿತ್ತು, ಆದರೆ ಇನ್ನೂ ಸಿಕ್ಕಿಲ್ಲ. ತಡವಾಗಿದೆ ನಿಜ ಆದರೆ ಮಾನ್ಯತೆ ಮತ್ಯಾವತ್ತಿಗೂ ತರಲಾಗದಂತಾಗಬಾರದು.

Thursday, June 26, 2014

ಆರೋಗ್ಯ ಸಚಿವನೆಂಬ ಕೊಬ್ಬಿದ ಹೆಗ್ಗಣವೂ, ಇಲಿ ಪಾಲಾಗುವ ಬಡ ರೋಗಿಗಳೂ......



ಯು ಟಿ ಖಾದರನೆಂಬ ಅವಿವೇಕಿಯ ಇತ್ತೀಚಿನ ನಡೆಗಳು ನೋಡುತ್ತಿರುವ ಕನ್ನಡಿಗರ ಕಣ್ಣಲ್ಲಿ ಹೇಸಿಗೆ ಹುಟ್ಟಿಸುತ್ತಿವೆ. ಸಿರಿವಂತ ತಂದೆಯೊಬ್ಬನ ಭಂಡ ಮಗನಂತಹ ಈ ದುರಹಂಕಾರಿಯ ದುರ್ವರ್ಥನೆ, ದಿನ ಕಳೆದಂತೆ ಅಧಿಕಾರದ ಅಮಲು ಸರ್ರನೆ ತಲೆಗೇರಿ ಈತನ ಉಢಾಫೆಗಳಿಗೆ ಮೇರೆ ಇಲ್ಲದಂತಾಗುತ್ತಿದೆ. ಪೊಗದಸ್ತಾಗಿ ಕೊಬ್ಬಿದ ಊರ ಹಂದಿ ಗಾತ್ರದ ಈ ಮೂರು ಕಾಸಿನ ರಾಜಕಾರಣಿ ಕೇವಲ ತನ್ನ ಪಾಳೆಪಟ್ಟಿನಲ್ಲಿ ಹೀಗೆ ಹಾರಾಡಿಕೊಂಡಿದ್ದರೆ ಕ್ಯಾಕರಿಸಿ, ಸಾಧ್ಯವಾದಲ್ಲಿ ಕೊಂಚ ಕನಿಕರಿಸಿ ಸುಮ್ಮನಾಗಬಹುದಿತ್ತು. ಆದರೆ ನಮ್ಮ ನಿಮ್ಮೆಲ್ಲರ ದುರಾದೃಷ್ಟಕ್ಕೆ ಈ ದುರಹಂಕಾರಿ ರಾಜ್ಯದ ಆರೋಗ್ಯ ಸಚಿವನಾಗಿ ವಕ್ಕರಿಸಿಕೊಂಡಿದೆ ಹಾಗೂ ಇದೆ ಕಾರಣಕ್ಕೆ ರಾಜ್ಯದ ಅಷ್ಟೂ ಸರಕಾರಿ ಆಸ್ಪತ್ರೆಗಳ ಆರೋಗ್ಯ ಮಾತ್ರ ಗುಣ ಪಡಿಸಲಾಗದಷ್ಟು ಹದಗೆಟ್ಟು ಹೇಸುಗೆಟ್ಟು ಹೋಗಿದೆ.


ಹಾಗೆ ನೋಡಿದರೆ ಹಿಂದಿನ ಭಾಜಪದ ಸರಕಾರದಲ್ಲಿಯೆ "ಅಂದ್ರಾಗಿನ" ಪುಡಿ ಗಣಿ ರೌಡಿಯ ಆರೈಕೆಯಲ್ಲಿ ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳು ಈಗಿಗಿಂತ ಹೆಚ್ಚು ಸುಸ್ಥಿತಿಯಲ್ಲಿ ನಳನಳಿಸುತ್ತಿದ್ದವು. ಆದರೆ ಈ ಶನಿ ವಕ್ಕರಿಸಿಕೊಂಡದ್ದೆ ತಡ ರಾಜ್ಯದಾದ್ಯಂತ ಉತ್ತಮ ಸೇವೆ ಒದಗಿಸುತ್ತಾ ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಗ್ಗುಲ ಮುಳ್ಳಾಗಿದ್ದ ಎಲ್ಲ ಸರಕಾರಿ ಆಸ್ಪತ್ರೆಗಳನ್ನ ವ್ಯವಸ್ಥಿತವಾಗಿ ಮುಗಿಸಿ ಕಂಡವರಿಗೆ ಕಾಸು ಸಂಪಾದನೆಯ ದಾರಿ ತೋರಿಸುವ ಸತ್ಕಾರ್ಯ ಆರಂಭವಾಗಿ ಹೋಯಿತು. ಆರಂಭದಲ್ಲಿ ತಾನು ಬಹಳ ದಕ್ಷ ಎಂದು ತೋರಿಸಿಕೊಳ್ಳಲು ಅಲ್ಲೊಂದು - ಇಲ್ಲೊಂದು ಆಸ್ಪತ್ರೆಗಳಿಗೆ ಅನಿರೀಕ್ಷಿತ ದಾಳಿಯಿಟ್ಟು ಪರಿಶೀಲನೆಯ ನಾಟಕವಾಡಿದ ಈ ಕೊರಮ "ಶ್ರೀಸಾಮಾನ್ಯರ ಬಾಯಲ್ಲಿ "ಭಲೆ ಭಲೆ" ಎಂದೆನೆಸಿಕೊಂಡವ ಆಮೇಲಾಮೇಲೆ ಅಗಸರ ಕತ್ತೆಯಂತೆ ಹೇಳ ಕೇಳದೆ ನಾಪತ್ತೆಯಾದ.


ಇಲ್ಲಿಂದ ಕಾಣೆಯಾದ ಸಚಿವ ಪ್ರಾಣಿ ಅಲ್ಲಿ ತನ್ನ ಸ್ವ-ಕ್ಷೇತ್ರದ ಪಕ್ಕದ ಛರ್ಬಿ ಹೆಚ್ಚಾಗಿ ಸತ್ತ ಪುಂಡ ದನಗಳ್ಳರಿಗೆ ಲಕ್ಷಾಂತರ ರೂಪಾಯಿ ಪರಿಹಾರ ಕೊಡಿಸುವುದರಲ್ಲಿಯೂ, ಕಂಡಕಂಡ ಅಂಗಡಿಗಳ ಟೇಪು ಕತ್ತರಿಸುತ್ತಾ, ಮದುವೆ - ಮುಂಜಿಗಳಿಗೆ ಓಡಾಡುತ್ತಾ ಆಕಳಿಯ ಜೊತೆಯಲ್ಲಿಯೆ ಕಾಲ ಹಾಕುವುದರಲ್ಲಿಯೂ ಪುರುಸೊತ್ತಾಗಲಾರದಷ್ಟು ಬ್ಯುಸಿಯಾಗಿ ಹೋಯಿತು. ಹಾಗೂ ಎಡೆಯಲ್ಲಿ ಒಂಚೂರು ಸಮಯ ಸಿಕ್ಕಿದ್ದೇ ಹೌದಾದರೆ ಸಚಿವನೆಂಬ ಈ ಕೋಣಕ್ಕೆ ತನ್ನ ರಕ್ತ ಸಂಬಂಧಿಗಳ ಖಾಸಗಿ ಆಸ್ಪತ್ರೆಗಳ ಹಿತ ಕಾಯುವ ಘನಂದಾರಿ ಕಾರ್ಯಭಾರವೆ ವಿಪರೀತವಾಗಿರುತ್ತದೆ. ಹೀಗಾಗಿ ರಾಜ್ಯದ ಆಸ್ಪತ್ರೆಗಳ ಮಾತೆತ್ತಿದರೆ "ಸುಮ್ನೆ ಬೊಬ್ಬೆ ಹೊಡೆಯಬೇಡ್ರಿ!, ಅದರಿಂದ ಏನೂ ಆಗಲ್ಲ!!" ಅಂತ ಈ ಗಡವ ಕಂಡ ಕಂಡಲ್ಲಿ ಅಬ್ಬರಿಸಿ ತನ್ನನ್ನ ನಿಲ್ಲಿಸಿ ಕೇಳಿದವರ ಮೇಲೆಯೆ ಬೊಬ್ಬಿರಿಯುವುದನ್ನ ರೂಢಿ ಮಾಡಿಕೊಂಡಿದೆ.


ತಿಂಗಳಾನುಗಟ್ಟಲೆಯಿಂದ ಎಳೆ ಮಗು ಕೌಸರ್'ಬಿ ವೈದ್ಯಕೀಯ ನಿರ್ಲಕ್ಷ್ಯದಿಂದ ಇನ್ನೂ ತೀವೃ ನಿಗಾ ಘಟಕದಲ್ಲಿ ಜೀವಚ್ಛವವಾಗಿ ಒದ್ದಾಡುತ್ತಿದ್ದರೆ ಅದನ್ನ ಕಾಣುವ ಕಣ್ಣಿಲ್ಲದ ಈ ಹಡಬೆ ಸಚಿವ, "ತನ್ನ ಇಲಾಖೆಯ ಆಕ್ಷೇಪ ಏನಾದರೂ ಇದೆಯೆ?" ಎನ್ನುವ ಟಿಪ್ಪಣಿ ಹೊತ್ತು ಬಂದ ಭಿಕ್ಷೆಗೆ ನಿಂತ ಜ್ಣಾನಪಿತ್ಥ ವಿಕಾರಿ ಸಾಹಿತಿಯೊಬ್ಬನ ಲಕ್ಷಾಂತರ ರೂಪಾಯಿ ವೈದ್ಯಕೀಯ ವೆಚ್ಚವನ್ನ ಭರಿಸುವ ಕಡತಕ್ಕೆ ಕಣ್ಣುಮುಚ್ಚಿ ಸಹಿ ಝಡಿದು ಮುಂದಿನ ಕ್ರಮಕ್ಕಾಗಿ ಅತಿ ಶೀಘ್ರವಾಗಿ ಮರಳಿ ಮುಖ್ಯಮಂತ್ರಿಗಳ ಕಛೇರಿಗೆ ರವಾನಿಸಿ ಕೃತಾರ್ಥನಾಗುತ್ತದೆ.


ಕುಡಿದು ಓಲಾಡಿ ಮೈ ಮನಸು ಎರಡನ್ನೂ ಕೆಡಿಸಿಕೊಂಡ ಈ ಕೊರಮನ ಸಂಪುಟ ಸಹುದ್ಯೋಗಿಯೊಬ್ಬ ಸಾರಾಯಿ ಅಮಲು ಹೆಚ್ಚಾಗಿ, ತನ್ನ ಪರಮ ಅಶಿಸ್ತಿನ ಜೀವನ ಶೈಲಿಗೆ ಸ್ವಯಂ ಬಲಿಯಾಗಿ ನಿತ್ಯದಂತೆ ನೆಲಕಚ್ಚಿದರೆ ಖುದ್ದು ಮುತುವರ್ಜಿ ವಹಿಸಿ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ರವಾನಿಸಿ ಬೀಗಿದ ಈತ, ಅದೆ ತನಗೆ ವಹಿಸಿದ ಕರ್ತವ್ಯ ನಿರ್ವಹಣೆಯ ಹೊತ್ತಿನಲ್ಲಿ ಜೀವದ ಹಂಗು ತೊರೆದು ಗುಂಡಿನ ದಾಳಿಗೆ ಸಿಕ್ಕಿದ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಯನ್ನ ಸುಸಜ್ಜಿತ ಪರದೇಶಿ ಆಸ್ಪತ್ರೆಗೆ ಆದಷ್ಟು ಬೇಗ ರವಾನಿಸಿ ಬದುಕಿಸಿಕೊಳ್ಳುವ ಸಕಲೆಂಟು ಸಾಧ್ಯತೆಗಳಿದ್ದರೂ ಜೋಭದ್ರನಂತೆ ಕಾಲ ಹಾಕಿ ನಾಡೆಲ್ಲ ಕಾತರದಿಂದ ಬೇಡುತ್ತಿದ್ದರೂ ಆ ಅಮೂಲ್ಯ ಜೀವವನ್ನ ಉಳಿಸಿಕೊಳ್ಳಲಾಗದೆ ಹೋದ. ಅಂದಹಾಗೆ ರಾಜ್ಯದ ಆರೋಗ್ಯ ಸಚಿವನಾಗಿ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದದ್ದು ಇದೆ ಸಚಿವನೆಂಬ ಶೋಕಿಲಾಲ ಅನ್ನುವುದು ನಿಮ್ಮ ಗಮನಕ್ಕೆ.



ಹೋಲಿಕೆಯಲ್ಲಿ ನಿಷ್ಕೃಷ್ಟ ಸ್ಥಿತಿಯಲ್ಲಿರುವ ಬಯಲುಸೀಮೆಯ ಸರಕಾರಿ ಆಸತ್ರೆಗಳಿಗಿಂತ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ಆಸ್ಪತ್ರೆಗಳು ತಕ್ಕಮಟ್ಟಿಗೆ ಸುಸಜ್ಜಿತವಾಗಿದ್ದವು. ಆದರೆ ಈ ಮೂರೂ ಬಿಟ್ಟವನ ಅಂಧಾ ದರ್ಬಾರಿನಲ್ಲಿ ಕೊಪ್ಪಳದ ಸರಕಾರಿ ಆಸ್ಪತ್ರೆ ಎನ್ನುವ ದೊಡ್ಡಿಗೂ, ಬರು ಬರುತ್ತಾ ಕತ್ತೆಯಾದ ರಾಯರ ಕುದುರೆಯಂತಹ ಕೊಪ್ಪ ಹಾಗೂ ತೀರ್ಥಹಳ್ಳಿಗಳಲ್ಲಿರುವ ಸರಕಾರಿ ಆಸ್ಪತ್ರೆಗಳ ಅಧೋಗತಿಗೂ ಹೆಚ್ಚು ವ್ಯತ್ಯಾಸವೇನೂ ಉಳಿದಿಲ್ಲ. ಉದಾಹರಣೆಗೆ ಮೊನ್ನೆ ಮೊನ್ನೆ ಹಾಸನದ ಸರಕಾರಿ ಆಸ್ಪತ್ರೆಯಲ್ಲಿ ಇಲಿಗಳು ರಾಜಾರೋಷವಾಗಿ ಹಸುಗೂಸೊಂದರ ಕೆನ್ನೆ ಮೂಗನ್ನ ಕಿತ್ತು ತಿಂದಿವೆ. ಆ ಮುಗ್ಧ ಮಗುವಿನ ಬಡ ಪೋಷಕರ ರೋಧನವನ್ನ ಕೇಳುವ ಕಿವಿಗಳೆ ಗತಿ ಇಲ್ಲ. ಹಾಗೂ ಒತ್ತಾಯಿಸಿ ಈ ಭಂಡನನ್ನ ಹಿಡಿದು ಕೇಳಿದರೆ "ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯ ಬಾರದಿತ್ತ!" ಎನ್ನುತ್ತದೆ ಸಚಿವ ಮೃಗ. ಇನ್ನೂ ಅಡ್ಡಗಟ್ಟಿ ನ್ಯಾಯವಾಗಿ ಆತ ಮಾಡಬೇಕಾದ ಕೆಲಸ ನೆನಪಿಸಿದರೆ "ಬೊಬ್ಬೆ ಹೊಡೆಯುವುದರಿಂದ ಕೆಲಸ ಆಗ್ತದೇನ್ರಿ?!" ಅಂತ ಉಢಾಫೆಯಿಂದ ಅಬ್ಬರಿಸುತ್ತದೆ ಈ ಹೆಗ್ಗಣ.

ಆಷ್ಟಕ್ಕೂ ಜನಸೇವಕನಾಗಿ ಸಚಿವ ಹುದ್ದೆಗೆ ಏರಿರುವ ಈ ದಪ್ಪ ಚರ್ಮದವನ ಆದ್ಯತೆಗಳಾದರೂ ಏನು?  ಇಂತಹ "ಅಯೋಗ್ಯ ಸಚಿವ"ನೆಂಬ ಹೆಗ್ಗಣಗಳನ್ನ ಬೇಲಿ ಕಾಯುವುದಕ್ಕೆ ಬಿಟ್ಟಿರುವಾಗ ಯಕಶ್ಚಿತ್ ಇಲಿಗಳು ಆಟಾಟೋಪಕ್ಕೆ ಇಳಿಯುವುದರಲ್ಲಿ ಆಶ್ಚರ್ಯವಾದರೂ ಏನಿದೆ?

Tuesday, June 24, 2014

ಎರಡಾಗಿ ನೀನೊಡೆದ ಬಾಳನ್ನ .......




ಋತುಮಾನದ ಬದಲಾವಣೆಯಲ್ಲಿ ಮಗ್ನವಾಗಿ ಹೋದ ಮನ
ಮಳೆಯ ನಿರಂತರ ಧಾರೆಗೆ ತೋಯಲು ಕಾತರಿಸಿ ಕಾದು ಕೂತಿದೆ.....
ನಮ್ಮ ನಾಳೆ ನಮ್ಮ ಇಂದಿನಂತೆಯೆ ಇರುತ್ತೆ
ಇಂದಿನ ನಮ್ಮ ಆಲೋಚನೆಗಳು ನಮ್ಮ ನಾಳೆಯ ಭವಿಷ್ಯವನ್ನು ಹೊತ್ತು ತರುತ್ತೆ,
ಗಾಳಿಯ ಸೋಕುವ ಸ್ಪರ್ಶದಂತೆ
ನೀರಿನ ಅಲೆಯ ಆಪ್ತತೆಯಂತೆ....
ಕುರುಡ ನಾನು ನನ್ನೊಳಗಿನ ನಿನ್ನನ್ನ ನಿತ್ಯ ಕಾಣಬಲ್ಲೆ./
ಸುತ್ತಲೂ ಸಾವಿರ ಸಂಗತಿಗಳು ಸರಾಗವಾಗಿ ಸರಿದು ಸಾಗುತ್ತಲಿದ್ದರೂ
ನಿನ್ನ ಕನವರಿಕೆಯಲ್ಲಿಯೇ ಸದಾ ಮುಳುಗಿರುವ ಮನಸು
ಒಂದು ಬಗೆಯ ಅನ್ಯಮನಸ್ಕತೆಯಿಂದಲೆ ಅದರಲ್ಲಿ ಪಾಲ್ಗೊಳ್ಳುತ್ತದೆ....
ಹರಿಸಿದಲ್ಲಿ ಹರಿವ ನೀರಾಗಿದ್ದರೇನೆ ಚೆನ್ನ
ಕೂಡಿಟ್ಟರೆ ಖಂಡಿತಾ ಚಿಂತೆ ಕಾಡದಿರದು,
ಹರಿಯ ಬಿಟ್ಟರೆ ಮುಖದಲ್ಲಿ
ಚಿಂತೆಯ ಗೆರೆಯೂ ಸಹ ಮೂಡದು....
ಅನಿರೀಕ್ಷಿತಗಳ ಪ್ರವಾಹ ಬಾಳು
ಕೊಚ್ಚಿ ಹೋಗುವ ಹುಲು ಹುಲ್ಲುಗರಿ ನಾನು
ಆಯ್ಕೆಗಳು ಅಷ್ಟಾಗಿ ನನಗಿಲ್ಲವೇ ಇಲ್ಲ.//


ಕಳೆದು ಹೋಗುವಂತಿದ್ದರೆ ಸಂತೆಯಲ್ಲಿ
ಕೊಚ್ಚಿಕೊಂಡು ಸಾಗುವಂತಿದ್ದರೆ ನೆರೆಯಲ್ಲಿ....
ದುಸ್ತರ ಬಾಳನ್ನ ಇನ್ನಷ್ಟು ಭರಿಸುವುದಕ್ಕಿಂತ
ಅದೇನೆ ಸರಿಯಾದ ಆಯ್ಕೆ,
ಸರಿದ ನೂರು ಸಂಕಟದ ಸಾಲುಗಳ
ಕೊನೆಯದೊಂದು ಪದ ಮತ್ತೆ ಬಳಿ ಬಾಗಿ
ನೆಮ್ಮದಿಯ ನೆತ್ತಿಯ ಪುನಃ ಚುಂಬಿಸದಿರಲಿ./
ಹತ್ತರಲ್ಲಿ ಹನ್ನೊಂದಿರಬಹುದು ನಾ ನಿನ್ನ ಪಾಲಿಗೆ
ಆದರೆ ನನ್ನೆದೆಯ ಪಿಸುದನಿಯನೆಲ್ಲ
ಮೀಸಲಿಟ್ಟು ಬಿಟ್ಟೆ ನಾ ನಿನ್ನೆಲ್ಲ ನಾಳೆಗೆ.....
ಪಿಸು ಮಾತಿನ ತುಸು ಕನಸುಗಳಲ್ಲಿ
ಕೆಲವಾದರೂ ನಸು ನನಸಾಗಲಿ
ಕೊನೆಯ ಉಸುರಿನ ಕೊಸರಳಿಯುವ ಮೊದಲು,
ನೆನ್ನೆ ಬಿದ್ದು ತಣಿಸಿದ ಮಳೆಗೆ
ಇವತ್ತು ಮಾತ್ರ ನೆಲದ ಮೇಲೆ ಕಿಂಚಿತ್ತೂ ಕರುಣೆಯಿಲ್ಲ....
ಕಳೆದ ಕ್ಷಣಗಳ ಸವಿನುಡಿಗಳ ಭ್ರಮೆಯಲ್ಲಿಯೇ ಉಳಿದವರಿಗೆ
ನಾಳಿನ ವಾಸ್ತವದ ಭೀಕರತೆಗಳ ಅರಿವಿರೋದಿಲ್ಲ.//



ನಿದಿರೆ ಬಾರದ ರಾತ್ರಿಗಳು
ನೆಮ್ಮದಿ ತಾರದ ಹಗಲುಗಳಿರಲು.....
ಖುಷಿಯ ಹನಿಗೆ ಬಾಯಾರಿದವ
ನಿರೀಕ್ಷೆಯ ಬಿಸಿಲ ಹಾದಿಯುದ್ದ ಹೆಜ್ಜೆ ಹಾಕಲೇ ಬೇಕಲ್ಲ,
ವಿಶಾಲ ಜಗದ ನಿಬಿಡ ಹುಚ್ಚರ ಸಂತೆಯಲ್ಲಿ ನಾನೂ ಒಬ್ಬ
ಬೆಳಕ ಹಾದಿ ಹಲವಿದ್ದರೂ ತಬ್ಬಲು ಕಾತರಿಸುತ್ತೇನೆ
ನಿತ್ಯ ಮಾಸಲು ನೆರಳ ಮಬ್ಬ./
ಗರಿ ಬೀಸಿ ಕರೆದ ಗಂಡು ನವಿಲ
ಮೋಹಕ ಮೋಡಿಗೆ ಮರುಳಾದ ಹೆಣ್ಣು....
ತನ್ನೆಲ್ಲ ಬಿಂಕವನ್ನೂ ಬಿಟ್ಟು
ದಾಸಾನುದಾಸಿಯಾಗಿ ಹೋಯಿತು,
ಕೊರಳ ತೆರೆದು ಕೇವಲ ಇಂಪ ಸುರಿದ
ಪುಂಡು ಕೋಗಿಲೆಯ ಹಸಿಹಸಿ ಸುಳ್ಳುಗಳಿಗೂ....
ಸೊಕ್ಕಿನ ಕೋಕಿಲ ತಲೆದೂಗುತ್ತಾ
ತನ್ಮಯವಾಗಿ ಮೋಡಿಗೆ ಒಳಗಾಯಿತು.//


ತಂಪು ಹೊತ್ತಲಿ ಬೆಚ್ಚಗೆ ತುಡಿಯಿತ್ತಾ
ನೋವಿನ ಮದ್ಯದ ಸೀಸೆಯ ತಳಕ್ಕಂಟಿದ ನಾಲ್ಕು ಹನಿಗಳನ್ನೆ
ಮತ್ತೆ ಮರುಕಳಿಸಿ ಕುಡಿಯುತ್ತಾ.....
ಎಂದಿನಂತೆ ಅನಾಥ ಭಾವ ಹೊತ್ತ
ಎದೆಭಾರದೊಂದಿಗೆ ಕುಳಿತಿದ್ದೇನೆ,
ಎರಡಾಗಿ ನೀನೊಡೆದ ಬಾಳನ್ನ
ಒಂದಾಗಿಯೇ ಬಿಗಿದು ಕಾದುಕೊಂಡು ಬಂದಿರುವ ನನಗೆ
ಕೊನೆಯವರೆಗೂ ಅದನ್ನ ಸುರಕ್ಷಿತವಾಗಿ ಕಾಪಾಡಿ....
ಇನ್ನೊಂದು ದಡ ಮುಟ್ಟಿಸುವುದು ಕಷ್ಟವೇನಲ್ಲ./
ಮದ್ದಿಲ್ಲದ ಹುಚ್ಚಿಗೆ ಒಳಗಾಗಿ
ಬಾರದ ನಿನ್ನ ಹಾದಿಯನ್ನೆ ಎಡೆಬಿಡದೆ ಕಾದೆ....
ನಟ್ಟಿರುಳಲೂ ನಿದಿರೆ ತಾರದ ಅದರ ಸಂಚಿಗೆ
ಸುಖಾಸುಮ್ಮನೆ ಬಯಸಿ ಬಯಸಿ ಬಲಿಯಾಗಿಹೋದೆ,
ಸ್ವಪ್ನದ ದಿಂಬಿನಲ್ಲಿ ತಲೆ ಇಟ್ಟು
ಕನಸ ಮಂದರಿ ಹೊದ್ದು ನಿತ್ಯ ಮಲಗುವ ಭಾಗ್ಯವೊಂದು
ಕೊನೆಯವರೆಗೂ ಇದ್ದರೆ ಸಾಕೇ ಸಾಕು.....
ಗೋಳಿನ ಸಹೋದರ ಸಂಬಂಧಿ ಬಾಳನ್ನ
ಹೇಗಾದರೂ ಸವೆಸಬಹುದು.//