Monday, July 8, 2013

ಸಂತಸದ ಮಳೆ ಹನಿಗಳ ಹಿಂದೆ ಸಂಕಟದ ಸಿಡಿಲಿನ ಧ್ವನಿಯಿದೆ.

ಕಲೆಗಟ್ಟಿ ಅಲ್ಲೆ ಉಳಿದು ಹೋದ
ಕಣ್ಣೀರ ಬಿಂದುಗಳ ಹಳೆ ಗುರುತುಗಳಷ್ಟೆ ಹಚ್ಚ ಹಳೆಯದು....
ನನ್ನೊಲವೂ ಸಹ,
ರಾಧೆಗೆ ಕೃಷ್ಣನ ಮೇಲಿದ್ದ ತುಡಿತ
ಕೃಷ್ಣನಿಗೆ ಅರ್ಜುನನ ಮೇಲೆ ಮೊಳೆತಿದ್ದ ಸೆಳೆತ....
ಅರ್ಜುನನ ಮೇಲೆ ಕೃಷ್ಣೆ ತೋರುತ್ತಿದ್ದ ಮಿಡಿತ
ಇದೆ ಅಲ್ಲವ ಒಲವನ ಎಳೆ ಗರಿಕೆಯ ಗರಿ?/
ಕಣ್ಣ ಹನಿಗಳ ಕಡುಕಪ್ಪು ಕಡಲಿನಲ್ಲಿ
ಮೌನ ಮನದ ಕಾಗದ ದೋಣಿ ಯಾನ.....
ಬದುಕು ಇಷ್ಟೇನೆ ಅಲ್ಲವ?,
ಮೇಲೆ ಮುಸುಗಿದ ಮೋಡ
ತುಸು ನನ್ನೊಳಗೂ ಆವರಿಸಿಯೆ ಇದೆ....
ಕಂಡವರು ಅದನ್ನ ದುಗುಡ ಎನ್ನುತ್ತಾರಷ್ಟೆ.//


ತುಸುವಾದರೂ ಮಾಸಲಾಗದ ತಾರೆಗಳ
ಕಣ್ಗಳಲ್ಲೆಲ್ಲ ಹೊಳೆಯುತ್ತಿರೋದು....
ನಿತ್ಯ ನೂತನ ಕನಸುಗಳ ಜಾತ್ರೆ,
ಇರುಳ ದಾರಿಯಲ್ಲಿ ಚಂದ್ರಮನ ಲಾಂದ್ರ
ಕುರುಡು ಕನಸುಗಳಿಗೆಲ್ಲ ಆರ್ದ್ರ ಮನದ ದಾರಿಯನ್ನ....
ಸರಿಯಾಗಿ ತೋರುತ್ತಿವೆ/
ತಾನು ಸುರಿದ ಪ್ರತಿಹನಿ ಪ್ರೀತಿಯ ಲೆಕ್ಖ
ಬಡ ಬಾನಿಗೂ ಇಲ್ಲ....
ಪಡೆದ ಒಲವ ಧಾರೆಯ ಬಗ್ಗೆ ಅರಿವು ಸಿರಿ ಭುವಿಗೂ ಇಲ್ಲ
ಬದುಕು ಪ್ರತಿಫಲವನ್ನ ಎಂದಿಗೂ ಬಯಸದ ನಿಷ್ಕಾಮ ಮಳೆಯಾಗಿಯಷ್ಟೆ ಉಳಿದಿದೆ,
ನೂರು ಮುಳ್ಳುಗಳು ಮತ್ತೆ ಮತ್ತೆ ಚುಚ್ಚಿ ಕಾಡುತ್ತಿದ್ದರೂ
ನೆನಪಿನ ಬಳ್ಳಿಯಲ್ಲಿ ಅರಳಿದ ಹೂನಗೆಯೊಂದು....
ಆರದ ನೋವನೆಲ್ಲ ಮರೆಸುತಿದೆ.//



ಮೂಡಲ ಶುಭ್ರತೆಯಲ್ಲಿ ಮೂಡಿದ ಕಲೆ ರವಿ
ನಿತ್ಯ ಹತ್ತಿಸುವ ನಾಲ್ದೆಸೆಗೂ ಕೆಂಪು ಚಿತ್ತಾರದ ಸವಿ....
ಮೆಲ್ಲಗೆ ಮೂಡಲ ಕಣ್ಣು ತೆರೆದು ಮುಗಿಲನ್ನ ಮುತ್ತಿಟ್ಟಾಗ
ಕದ್ದು ಅದ ಕಂಡ ಇಬ್ಬನಿಯ ಮಣಿ ಮೂಡಿದ್ದಲ್ಲೆ ನಾಚಿ ನೀರಾಯ್ತು,
ಸದ್ದಿರದ ಇರುಳ ಹಿಂದೆ
ಮಾರ್ದವ ಮುಂಜಾನೆಯ ನೆರಳು....
ಬೆಳಕಿನ ಬೆನ್ನನ್ನ ಸೋಕುತ್ತಲೆ
ಸಂಜೆಯನ್ನಾವರಿಸೋದು ಕತ್ತಲ ಕುರುಳು/
ಗುರುತಿರದ ದೂರದ ಬಾನ ಚುಕ್ಕಿಯ ಕಣ್ಗಳಲ್ಲಿ
ಇರುಳನೆಲ್ಲ ತಬ್ಬಿ ಆವರಿಸಿಕೊಳ್ಳುವ ಆಸೆಯ ಹೊಳಪಿದೆ....
ಸಣ್ಣಗೆ ಹೊರಗೆ ಹನಿ
ಎದೆಯೊಳಗೆ ನಿನ್ನ ಪಿಸುದನಿ,
ಸಾಗುವ ಉಗಿಬಂಡಿಯಲ್ಲೂ ಸಾಲುಸಾಲು
ಸ್ವಪ್ನಗಳ ಬೋಗಿಗಳದ್ದೆ ಜಗ್ಗಾಟ.//


ಇನ್ನೊಂದು ಮನಸು ಬೀಸಿದ
ಹೊಸ ಕನಸಿನ ಬಲೆ ಹಿತವಾಗಿಯೇನೋ ಇತ್ತು....
ಆದರೂ ನಿನ್ನ ನೆನಪು ಮುಂದುವರೆಯದಂತೆ
ನನ್ನ ಕೈಜಗ್ಗಿ ತಡೆಯುತ್ತಿತ್ತು!,
ಗೆರೆ ದಾಟದಂತೆ ನಾ ಹಿಡಿದಿಟ್ಟ
ಮನದ ಕುದುರೆ ಕಡಿವಾಣ ಕಳಚುವ ತವಕಕ್ಕೆ ಈಡಾದಾಗಲೆಲ್ಲ....
ಮತ್ತೆ ನೀನು ನೆನಪಾಗಿ ಬಚಾಯಿಸುತ್ತೀಯ/
ಇದಕ್ಕಾಗಿ ನಿನ್ನ ನಾ ದೂಷಿಸಲಾರೆ
ಆದರೆ ನಿನ್ನ ನೆನಪು ಭದ್ರವಾಗಿರುವ ತನಕ....
ಎದೆ ಚಿಪ್ಪೊಳಗೆ ಇನ್ನೊಂದು ಹನಿ
ಅಲ್ಲಿ ಮುತ್ತಾಗಲಿಕ್ಕೆ ಎಡೆಕೊಡಲಾರೆ,
ಕನಸಿನ ಕುದುರೆಯ ಬೆತ್ತಲೆ ಬೆನ್ನೇರಿ ಹೊರಟ
ಮನಸ ಮೆರವಣಿಗೆ....
ಆಸೆಯೋ-ನಿರಾಸೆಯೋ
ಯಾವುದಾದರೊಂದು ನಿಲ್ದಾಣ ತಲುಪಿ ನಿಲ್ಲಲೇಬೇಕು.//

ಕಮರಿದ ಕನಸಿನ ಬೀದಿಯಲ್ಲಿ ಬೆಳಕಿಲ್ಲ.... ಬರಿ ಕತ್ತಲೆ.

ನೀರಿಲ್ಲದಿದ್ದರೂ ಜೊತೆ ತೇಲುವ ಮೀನಾಗಿ ನೀನಿಲ್ಲದಿದ್ದರೂ
ಬತ್ತಿದ ಜಲರಾಶಿಯಲ್ಲಿ ನೆಲದ ಮೇಲ್ಮೈ ಕಾಣುತ್ತಿದ್ದರೂ.....
ಬಾಳ ನೌಕೆ ನೋವಿನ ಕಡಲಿನಲ್ಲಿ ಹೇಗಾದರೂ ಸರಿ ಸಾಗಲೆಬೇಕಲ್ಲ?
ತೇಲಿಕೊಂಡೋ....
ಇಲ್ಲಾ ತೆವಳಿಕೊಂಡೋ
ಬೇಡದಿದ್ದರೂ ದಡವೊಂದ ಮುಟ್ಟಲೆಬೇಕಲ್ಲ?,
ಹಗಲಿನಲ್ಲಿ ಭಾವಗಳನ್ನ ಹತ್ತಿಕ್ಕಿದ ಸಂಯಮ
ಇರುಳಿನ ಕಡುಗತ್ತಲಲ್ಲಿ ಕರಗಿ ಕರಗಿ....
ಯಾರಿಗೂ ಕಾಣದಂತೆ ನೀರಾಗುವಾಗ
ನಾನು ನಿರಂತರ ನಿರುಪಾಯ/
ಸಂತಸದ ತಲಾಷಿನಲ್ಲಿ ಹೊರಟವ
ಸಂಕಟದ ಸಂಕ ದಾಟಬೇಕಾಗಿ ಬಂದರೂ ಸಹ....
ಮನಸ ಮೂಲೆಯಲ್ಲಿ ಅಶಾವಾದದ ಕಿರು ಸೊಡರಿನ್ನೂ
ಆರದಂತೆ ಉರಿಯುತ್ತಲೆ ಇದೆ,
ಇರುಳ ಮೌನದಾವರಣದೊಳಗೆ
ದುರುಳ ಸ್ವಪ್ನಗಳ ಸಲುಗೆ....
ಸಲುಗೆಯಲ್ಲ ಇದು
ನವಿರು ಭಾವಗಳ ಸುಲಿಗೆ.//


ಕಳ್ಳ ಹೆಜ್ಜೆಗಳ ಮಳ್ಳ ಕನಸುಗಳಿಗೆ
ಇರುಳೇನು? ಹಗಲೇನು?
ಮನ ಬಂದಾಗ ಸ್ವಚ್ಛಂದವಾಗಿ....
ಮನಸಿನ ಛಿದ್ರ ಕೋಟೆಗೆ
ಏಕಾಏಕಿ ದಾಳಿಯಿಡುತ್ತವೆ,
ಚಳಿಯ ಗುಂಗಿಗೆ ಹಬೆಯಾಡುವ ಚಹಾ
ಹುಟ್ಟಿಸುವ ಬೆಚ್ಚನೆ ಮುದದಂತೆ ನೀನು....
ನಿನ್ನ ನೆನಪು
ನನ್ನ ಮುದುಡಿದ ಮನಸಿಗೆ/
ಸಹಜ ಬದುಕಿನ ಸಂತಸದ ನಿರೀಕ್ಷೆಗಳೆಲ್ಲ
ಅವಸರದ ಅನಿರೀಕ್ಷಿತ ಸಂಕಟಗಳ ಪ್ರವಾಹಗಳಲ್ಲಿ ಕೊಚ್ಚಿ ಹೋದವು....
ಸೋತ ಹೆಜ್ಜೆಗಳಿಗೆ ಮತ್ತೆ
ಸ್ವಪ್ನದ ಹೊರಳು ಹಾದಿಯಲ್ಲಿ
ಕಷ್ಟದ ದಾರಿ ಸವೆಸುವ ಉಮೇದು ಖಂಡಿತ ಉಳಿದಿಲ್ಲ,
ಒಂಟಿ ಬಾಳು ಗೋಳಿನ ಹಾದಿ ನಿಜ
ಆದರೆ ನಿನ್ನ ನೆನಪಿನ ಕಿರುಬೆರಳ ಆಸರೆ ಇದ್ದೇ ಇದೆಯಲ್ಲ.//



ಮತ್ತರಳಲು ತವಕಿಸುವ ಕನಸ ಮೊಗ್ಗು
ಸ್ವಪ್ನ ಸುಮವಾಗುವ ಮುನ್ನ.....
ಮುರುಟಿ ಬಾಡದಿರದಂತೆ ಕಾಯುವ ಪ್ರಾಮಾಣಿಕತೆ
ದುರುಳ ವಿಧಿಗೆ ಎಂದೆಂದಿಗೂ ಇರಲಾರದೇನೋ,
ಅಲ್ಪಸ್ವಲ್ಪ ನೆಮ್ಮದಿಗಾಗಿ
ನಿರಂತರ ಮಿಡಿಯುವ ಮೌನಿ ಮನ....
ಒಂದರ್ಥದಲ್ಲಿ ನಿಶ್ಪಾಪಿ ಪಾಪ/
ಬಿಡಿಸಲಾಗದ ಕಗ್ಗಂಟಾದ ಬದುಕಿನ ತೆಳು ಎಳೆಗಳಿಗೆ
ಮತ್ತೆ ನವಿರಾದ ಕನಸ ಚಾದರ ಹೊಲೆಯುವ ಭಾಗ್ಯವಿಲ್ಲ.....
ಕನಸಿನ ತೆರೆಯಾಚಿನ ಅವಾಸ್ತವಗಳಿಗೆಲ್ಲ
ಖಚಿತ ರೂಪ ಕೊಡುವ ಹುಮ್ಮಸ್ಸು ಹನಿಹನಿಗಳಾಗಿ,
ನಿತ್ಯ ಕರಗುತಿದ್ದರೂ
ಮನಸು ನಿರಂತರ ಆಶಾವಾದಿ.//


ಹರಿವಿನ ಪಾತ್ರವಿದ್ದ ಮಾತ್ರಕ್ಕೆ ಸಾಲದು
ಅಲ್ಲಿ ನೀರಿನ ಧಾರೆಯೂ ಇರಬೇಕು....
ಬರಡು ಬಾಳೂ ಒಂಥರಾ ಹಾಗೇನೆ
ಅದರದೂ ಸ್ಥಿತಿ ಒಲವ ಧಾರೆ ಇಲ್ಲದೆ ಬತ್ತಿ ಹೋದ ನದಿಯ ಪಾಡೇನೆ,
ಕಾಯುವ ನೋಯುವ ಅಭ್ಯಾಸ
ಒಮ್ಮೆಯಾದ ನಂತರ....
ಸಾಯುವವರೆಗೂ ಸಾವಿರ ಸಂಕಟ ಎದುರಾದರೂ ಮುದುಡಿದ ಮನ
ಸಹನೆಯ ಚರಮ ಸೀಮೆಯನ್ನ ಮುಟ್ಟಿ ಜಡ್ಡುಗಟ್ಟಿ ಹೋಗಿರುತ್ತದೆ/
ಕಣ್ಣ ಆಳದಲ್ಲಡಗಿದ ನೋವುಗಳ ಪ್ರತ್ಯಕ್ಷ ರೂಪ ಹನಿ
ಅದರೆದೆಯಾಳದಲ್ಲೂ ಹುದುಗಿರೋದು....
ಕೇವಲ ಕಡು ಸಂಕಟದ ದನಿ,
ಹಸಿರು ಹುಟ್ಟದ ಬಟಾಬಯಲಾದ ಮನದ ಬರಡಿನಲ್ಲಿ
ಅದು ಹೇಗೋ ಉಳಿದೇ ಇರುವ ನಿರೀಕ್ಷೆಯ ಗರಿಕೆ....
ನನ್ನ ದುರಾಸೆಯನ್ನೆ ಅನುಗಾಲ ಅಣಗಿಸುತ್ತಿದೆ.//

Sunday, July 7, 2013

ಹೂವ ಗಂಧವ ದೋಚಿದ ಗಾಳಿಯ ಕನಸಿಗೆ ಸಂತಸದ ಪರಿಮಳ ದಾಟಿದೆ.

ಸಾಕಾದ ಪಯಣದ ಕೊನೆ ನಿಲ್ದಾಣ
ನಿನ್ನೆದೆಯ ಒಂದು ಮೂಲೆಯೆ ಆಗಿರಲಿ....
ಅನ್ನೋದು ನನ್ನೊಳಗಿನ ಸಣ್ಣ ತಹತಹಿಕೆ,
ಕಳೆದ ನೆನ್ನೆಯ ಬಗ್ಗೆ ಕಳವಳ ಉಳಿದಿಲ್ಲ
ನಾಳಿನ ನಿರೀಕ್ಷೆಗಳಿಗೂ ಕುಟುಕು ಜೀವ ಕೊಡುವ ಹುಮ್ಮಸ್ಸಿಲ್ಲ....
ಮರಗಟ್ಟಿ ಹೋಗಿರುವ ಮನಕ್ಕೆ
ಸಂತಸ ಹಾಗೂ ಸಂಕಟದ ನಡುವಿನ ವ್ಯತ್ಯಾಸವೆ ಅರಿವಾಗುತ್ತಿಲ್ಲ/
ಮನದೊಳಿಗಿನ ತಂತುಗಳೆಲ್ಲ ಕಡಿದು ಹೋಗಿದ್ದರೂ
ಕನಸ ಮರಕತ ವೀಣೆ.....
ಮತ್ತೆ ಮತ್ತೆ ನೋವಿನ ಗುಂಗನ್ನ ಮಿಡಿಯುವುದು
ಊಹೆಯನ್ನೂ ಮೀರಿದ ವಿಸ್ಮಯ ಮಾತ್ರ,
ಮುಗಿಲಿಂಚಿನಿಂದ ತೇಲಿ ಬರುವ ಗಾಳಿಯ ಆಲಾಪಕ್ಕೆ
ತಾಳ ಮಿಡಿಯುವ ಅಂಗಳದಲ್ಲಿ ತೂಗು ಬಿಟ್ಟಿರುವ ಘಂಟೆಗಳಿಂದ.....
ಹೊಮ್ಮುತ್ತಿರೋದು ಒಲವಿನ ಮಧುರ ಸುನಾದ ಮಾತ್ರ.//



ಹೆಜ್ಜೆ ತಪ್ಪದೆ ಮೌನವಾಗಿ
ನಿನ್ನೆದೆಯ ಮನೆಯವರೆಗೆ ತಲುಪುವ ನಾನು....
ತಲೆ ಬಾಗಿಲನ್ನ ಮೆಲುವಾಗಿಯಾದರೂ
ತಟ್ಟುವ ಧೈರ್ಯ ಸಾಲದೆ ನಿತ್ಯವೂ ಮಾತಿಲ್ಲದೆ ಹಿಂದಿರುಗುತ್ತೇನೆ,
ನಗುವ ನೂರು ಹೂಗಳ ಹಿಂದೆ
ಸಾವಿರ ಮೊಗ್ಗುಗಳ ಕನಸುಗಳು ಕರಗಿದ ಕಥೆಗಳಿವೆ/
ಮತ್ತದೆ ಮೌನ ರಾಗ
ನೊಂದ ಎದೆಯ ನಿರಂತರ ಏಕತಾಳ....
ಭಿಕಾರಿ ಮನಕ್ಕೆ ನೆನಪಿನ ನಾಲ್ಕು ಸಾಲುಗಳಷ್ಟೆ
ಅಗಣಿತ ಸಿರಿ ಸಂಪತ್ತು,
ಮುಗಿದ ಮಾತಿನ ಕೊನೆಯಲ್ಲೂ ಮತ್ತದೇನೋ ಉಳಿದಂತೆ
ನೀನು....
ಸನಿಹವಿರದೆಯೂ ಗಾಳಿಯಲ್ಲಿಯೇ ತೇಲಿ ನನ್ನೊಳಗಿನ ಮೌನದ ಮೊಗ್ಗಿಗೆ
ಪರಾಗಸ್ಪರ್ಶ ಮಾಡುವ ಪುಷ್ಪದ ರೇಣುವಂತೆ ಅಲ್ಲವೇನು?.//



ಮೌನದ ಬೆನ್ನೇರಿದ ಮಾತಿನ ವದಂತಿಗಳು
ಪೂರ್ತಿ ಸುಳ್ಳೂ ಅಲ್ಲವಲ್ಲ?.....
ಕಾವಲಿದೆ ಕದಲದ ಸ್ವಪ್ನಗಳು
ಅದಕ್ಕೇನೆ ಬಿಕ್ಕುವಾಗಲೂ ಮನಸು ಮೌನವನ್ನ,
ಅನಿವಾರ್ಯವಾಗಿ ನಟಿಸಿ ಕದ್ದು ಕಣ್ಣೊರಸಿಕೊಳ್ಳುತ್ತವೆ/
ಇರುಳ ಹಾದಿ ಹುಟ್ಟುವಲ್ಲಿ
ಹಗಲ ಹಲವು ತಲ್ಲಣಗಳು ತುಸು ಮಿಡುಕುತ್ತಿವೆ....
ನಿರೀಕ್ಷೆಯ ಚಿಪ್ಪಿನಲ್ಲಿ ಬಿದ್ದು
ಕಾದು ಕೂತ ಹನಿ ಮುತ್ತಗದಿದ್ದರೇನಂತೆ,
ಮುತ್ತಿನ ಕನಸಾದರೂ ಕೆಲಕಾಲ ಬಿದ್ದಿತ್ತಲ್ಲ ಅದಕ್ಕಷ್ಟೆ ಸಾಕು
ಬಾಳಿನ ಕಿರು ಸಂತೋಷಗಳು ಅಡಗಿರೋದೆ ಅಲ್ಪತೃಪ್ತಿಯಲ್ಲಿ.//


ಪ್ರತಿ ಮಾತಿಗೂ ಒಂದು ಗಹನ ಅರ್ಥ
ಇರಲೆಬೇಕಂತೇನಿಲ್ಲ....
ಪ್ರತಿಯೊಂದು ಮೌನವೂ ಆಳದಲ್ಲಿ
ಅರ್ಥ ಹೀನವೂ ಆಗಿರೋದಿಲ್ಲ,
ಕಂಬನಿ ಪ್ರವಾಹವೂ ಬರಿದಾಗಿ ಮೌನವಾದ ಜಲಪಾತದಿಂದೀಚೆಗೆ
ಏನೊಂದೂ ಧುಮುಕುತ್ತಿಲ್ಲ....
ಆಸೆಯಿರಲಿ ನಿರಾಸೆಯ ಸುಳಿವೂ ಅಲ್ಲಿಲ್ಲ/
ಆವರಿಸಿ ನನ್ನ ಕಾಡು
ನೇವರಿಸಿ ಹೀಗೆ ನಿತ್ಯ ಜೊತೆಗೂಡು....
ನೆನಪಿನಲ್ಲಾದರೂ ಸರಿ
ನಿನ್ನ ಹಾಜರಿ ನಿರಂತರವಾಗಿರಲಿ,
ಭಾವದ ಲೇಖನಿಗೆ ಕಂಬನಿಯೆ ಮಸಿ
ಅದರಲ್ಲಿ ಬರೆದ ಬಾಳ ಸಂಕಟದ ಸಾಲುಗಳೆಲ್ಲ
ಮುಚ್ಚುಮರೆಯಿಲ್ಲದೆ ಹಸಿಹಸಿ.//

ಮೌನದ ತೂಕ ಯಾವತ್ತೂ ಮಾತಿಗಿಂತ ಮಿಗಿಲು.

ಬತ್ತಲೆ ಪಾದಗಳಲ್ಲಿ-ಕತ್ತಲೆ ಹಾದಿಯಲ್ಲಿ
ಅಂಡಲೆಯುವ ನಾನು ಎಂದಾದರೂ....
ನೀನಿರುವಲ್ಲಿ ಹೋಗಿ ಮುಟ್ಟುತೀನ?
ನಿನ್ನೆದೆ ಮನೆಯ ತಲೆ ಬಾಗಿಲ ಕದವನ್ನ
ಕಾತರದ ಕೈಗಳಿಂದ ತಟ್ಟುತ್ತೀನ?,
ಗುರಿ ತಪ್ಪಿರಲಿಲ್ಲ
ನನ್ನ ನೆನಪುಗಳಲ್ಲಿದ್ದ ಹಾದಿಯ ಗುರುತು ಕೂಡ ಅಷ್ಟಾಗಿ ತಪ್ಪಾಗಿರಲಿಲ್ಲ....
ಆದರೂ ನಿನ್ನೆದೆಯ ಗಮ್ಯವನ್ನ ಕಡೆಗೂ ನನಗೆ ಸೇರಲಾಗಲೆ ಇಲ್ಲ/
ಕಪ್ಪು ಕಣ್ಣಿನ ಕೊಳದಲ್ಲಿ ಉಕ್ಕಿದ ಹನಿಯ ಸೆಲೆಗಳೆಲ್ಲ
ಸಂತಸದ್ದೆ ಆಗಿರಲಿ ಅನ್ನೋದು ಸುಂದರ ಕನಸು.....
ಆದರದರಲ್ಲಿ ಬಹುಪಾಲು
ಸಂಕಟದ್ದೆ ಆಗಿರೋದು ಮಾತ್ರ ವಾಸ್ತವದ ವ್ಯಂಗ್ಯ ನನಸು//


ಮೌನದ ಚಿಪ್ಪಿನಲ್ಲಿ ಅನಿವಾರ್ಯವಾಗಿ ಸಿಲುಕಿ
ನಲುಗುವ ಮಾತುಗಳೆಲ್ಲ ಮುತ್ತಾಗುತಾವೆ....
ನಿನ್ನ ನೆನಪಿನ ತಂಗಾಳಿ ಹೊತ್ತು ತರುವ
ಇಂತಹ ಸುಮಧುರ ಗೀತೆಗಳ ಸಾಂಗತ್ಯವೂ ಇಲ್ಲದಿದ್ದಿದ್ದರೆ
ಈಗಲೆ ಅರೆಜೀವವಾಗಿರುವ ನಾನು ಅದೆಂದೋ ಇಲ್ಲವಾಗಿರುತ್ತಿದ್ದೆ,
ಮತ್ತಿರದ ಹೊತ್ತಲೂ ತೇಲುವ ವಿಸ್ಮಯಕ್ಕೆ
ಒಲವ ನಶೆ ಎನ್ನಬಹುದು/
ಮೋಡದಲ್ಲಿ ತಲೆ ಮರೆಸಿಕೊಂಡಿದ್ದ ಬಾನಿನೊಡೆಯನನ್ನ
ಮತ್ತೆ ನೋಡುವಾಗ ಆಗುವ ಅವ್ಯಕ್ತ ಆನಂದದಂತೆಯೆ....
ದುಗುಡದ ಮೋಡ ಮುಸುಗಿದ
ಮನದ ಬಾನಲಿ ನಿನ್ನ ನೆನಪ ಪಾತ್ರ,
ಕರೆದು ಕರೆದು ಸಾಕಾಗಿ ಮೌನವಾದ ಹೊತ್ತಲೂ
ನಿನ್ನ ನೆನಪಿನಾ ಪರಿಮಳವೆ ಆವರಿಸಿ....
ಕಾಡುತಿದೆ ನನ್ನ ಸುತ್ತಲೂ//


ತೇಲುವ ಮೋಡದ ಅಂತರಾಳದೊಳಗೆ
ಬೆಚ್ಚಗೆ ಹುದುಗಿದ ಹನಿಯೆದೆಯಲ್ಲೋ....
ನೆಲದೆಡೆಗೆ ಸ್ನೇಹವ ಮೀರಿದ ಸೆಳೆತವಿದೆ,
ಮನಸಿನ ಮೂಲೆಯಲ್ಲಿ ಮಿಡುಕಾಡುತ್ತಿರುವ
ಕನಸಿನ ಕಳವಳಕ್ಕೆ....
ನನಸಿನಲ್ಲಿ ನೆಮ್ಮದಿ ಸಿಗುವ ಸಂಶಯ
ನಿಜದಲ್ಲೂ ಸಾಬೀತಾಗುತ್ತಿದೆ/
ಶಾಂತ ಸಾಗರದ ಒಡಲೊಳಗೂ
ಅಶಾಂತಿಯ ಅಲೆಗಳು ಸುಪ್ತವಾಗಿ ಆಗಾಗ ಏಳುತ್ತಿರುತ್ತವೆ....
ಯಾಕೆ ಇವೆಲ್ಲ ರಗಳೆ?
ಹನಿ ಪಾಷಣವನ್ನ ಅಂದೆ ನೀ ಕೊಟ್ಟಿದ್ದರೂ ಸಾಕಿತ್ತು,
ಇರುತ್ತಿರಲಿಲ್ಲ ಪರೋಕ್ಷವಾಗಿಯೂ
ನನ್ನ ಈ ನಿರಂತರ ಕಿರುಕುಳ ನಿನಗೀ ವೇಳೆ.//


ಹದವರಿತು ಬಿದ್ದರೆ ಪ್ರತಿಯೊಂದು ಮಳೆಹನಿಗಳೂ
ನೆಲದೊಡಲಲ್ಲಿ ಹುದುಗಿದ ಕನಸಿನ ಬೀಜಗಳನ್ನ....
ಮತ್ತೆ ಮೊಳಕೆಯೊಡೆಸಬಲ್ಲವು,
ಅನಗತ್ಯ ಸೊಕ್ಕಿ ಸುರಿದರೆ ಮಾತ್ರ
ಮಧುರಭಾವಗಳೆಲ್ಲ ಮುಲಾಜಿಲ್ಲದೆ....
ಕೊಚ್ಚಿ ಹೋಗೋದು ಮಾತ್ರ ಖಾತ್ರಿ/
ಗಾಬರಿಯ ಚಿನ್ಹೆ ಮುಖದ ಮೇಲಿಲ್ಲ ನಿಜ
ಆದರೆ ಮನದೊಳಗಿನ ಅನುಕ್ಷಣದ ಆತಂಕದ ಗಾಬರಿಯನ್ನ....
ನಿನ್ನ ಹೊರತು ಇನ್ಯಾರ ಎದುರೂ ಸಹ
ನಾನು ವ್ಯಕ್ತ ಪಡಿಸಲಾರೆ,
ಕಣ್ಣು ಕನವರಿಸುವ ಕನಸುಗಳೆಲ್ಲ ಸಾಕಾರವಾಗುವಂತಿದ್ದರೆ
ಬದುಕಿನ ಪ್ರತಿ ಪುಟಗಳೂ....
ಮುತ್ತಿನ ಮಣಿಗಳಂತಹ ಅಕ್ಷರಗಳಿಂದಲೆ ಬರೆದಿರಲಾಗುತ್ತಿತ್ತು.//

ಸಂಕಟ ಸದಾ ಒಂಟಿ, ಸಂತಸಕ್ಕಷ್ಟೆ ಇರೋದು ನೂರು ನೆಂಟರು.....

ಇರುಳು ಸರಿಯದ ದುಗುಡದ ಚಾಪೆಯ ಮೇಲೆ
ನಿಜೀವ ಕನಸು ತೂಕಡಿಸುತ್ತಿದೆ....
ಮನ ಮೌನದಲ್ಲಿ ನೋವಿನಾಲಾಪವ ಮಂದ್ರದಲ್ಲಿಯೆ ಹೊರಡಿಸುತ್ತಿದೆ,
ಅನುಕ್ಷಣ ಕರಗಿ ನೀರಾದರೂ ಸಹ
ನೆನಪುಗಳ ನಿತ್ಯ ಸಾಂಗತ್ಯ....
ಮೌನಿ ಮನದ ಒಳಗೊಳಗೆ ಅವ್ಯಕ್ತ ಆಹ್ಲಾದವನ್ನೆ ಹೊತ್ತು ತರುತ್ತವೆ/
ಸ್ವಪ್ನದಲ್ಲಿಯೂ ನೀ ಕಳೆದು ಹೋಗುವ ಹೆದರಿಕೆಯ ಹಿನ್ನೆಲೆಯಲ್ಲಿ
ನಿದಿರೆ ಮರೆತ ಕಣ್ಣುಗಳು ನಿಶೆಯಿಡೀ.....
ತೂಕಡಿಸದೆ ನೆನಪ ನಶೆಯಲ್ಲಿ ತೇಲುತ್ತಿರುತ್ತದೆ,
ಕೆಲವೊಮ್ಮೆ ಕಾಡುವ ಈಡೇರದ ಕನಸುಗಳ ಜಾಡಿನಲ್ಲಿ
ಸತ್ತರೂ ಸರಿ ಮತ್ತೊಮ್ಮೆ ಸಾಗುವ ಅದಮ್ಯ ಹಂಬಲ....
ಎದೆಯೊಳಗಿನ್ನೂ ಅಡಗಿಯೆ ಇದೆ//


ಮನಸೋಲೋದೆಂದೂ ನಿಶ್ಚಿತವಲ್ಲ-ಯೋಜಿತವಲ್ಲ
ಅದಕ್ಕೆ ಬಹುಷಃ ಧಾರಾಳ ತಪ್ಪುಗಳು....
ಒಲವ ದಾರಿಯಲ್ಲಿ ಹಾಗೆಯೆ ಸಾಗುವಾಗ ಆಗಿಯೇ ತೀರುತ್ತವಲ್ಲ,
ಗಾಳಿಯ ನಿರ್ದಯ ನಿರಂತರ ದಾಳಿಗೆ ಸಿಲುಕಿ
ನಲುಗಿ ನೆಗ್ಗಾದರೂ ನಗುತಲೆ ಇರುವ ಹಳೆಯ ಸುಮದೆದೆಯೊಳಗೆ....
ತುಂಬಿರೋದು ಮಾತ್ರ ಮಂದ್ರ ಮಾರುತ
ಹಿಂದೊಮ್ಮೆ ಸೋಕಿದ್ದ ಮೋಹಕ ನೆನಪು ಮಾತ್ರ/
ಸಲುಗೆಯ ಪರಿಮಿತಿಯೆ ವಿರಹ
ಅತಿಯಾಗಿದ್ದಾಗಲೆ ಅಲ್ಲವ....
ಅದನ್ನ ಕರೆಯೋದು ಒಲವ ನವಿರು ಭಾವ?,
ಕಳುವಾದ ಕನಸಿನ ಬೆನ್ನು ಹತ್ತಿದ ಮನಸಿಗೆ
ನಿರಾಸೆ ಸದಾ ಕಟ್ಟಿಟ್ಟಿರೋದು ಅಭಾಸಕಾರಿ ವಾಸ್ತವ.//


ಮೌನದ ಚಾದರ ಹೊದ್ದು ಹೊರಬಿದ್ದ ಮನಕ್ಕೆ
ಮಾತಿನ ಝಡಿಮಳೆಯಲ್ಲಿ ತೋಯುವ ಅನಿವಾರ್ಯತೆಯಿಲ್ಲ.....
ಹೃದಯ ಹೊಕ್ಕು ಹೊರಬಂದ ನನ್ನ ಪ್ರತಿ ನೆತ್ತರ ಕಣಗಳೂ
ಸಹ ನಿನ್ನ ಹೆಸರ ಹಚ್ಚೆಯನ್ನ ಹೊತ್ತಿವೆ,
ಒಡಲಾಳದ ಒಲವಿನ ಮೂಕಭಾವಗಳಿಗೆ
ಮಾತಿನ ಒರತೆಯ ದಾರಿ ಕಾಣಿಸಿದ....
ನಿನ್ನ ಕನಸುಗಳಿಗೆ ನಾನು ಋಣಿ./
ಬೂದು ಮೋಡಗಳ ಒಡಲಲ್ಲಿ
ಸ್ಪಟಿಕ ಶುದ್ಧ ಮಳೆ ಹನಿಗಳು ಖಂಡಿತಾ ಇವೆ....
ನನ್ನೆದೆಯ ಚಿಪ್ಪಲ್ಲಿ ನಿನ್ನೆಡೆಗೆ ಸುರಿವ
ಒಲವ ಮುತ್ತುಗಳು ಹುದುಗಿರುವ ಹಾಗೆ,
ಕಣ್ಣ ಅಂಚಿನ ಕೊನೆಯಲ್ಲಿ
ಅವಿತು ಕುಳಿತ ಕಂಬನಿಯ ಕಿರು ಹನಿಗೂ....
ಅದ್ಯಾರದೋ ವಿರಹದ ವೇದನೆ.//


ನಂಬಿಕೆಯ ಬುನಾದಿಯೆ ಕುಸಿದು ಬೀಳುವಾಗಲೂ
ಆಳದಲ್ಲೊಂದು ಆಶಾವಾದ ಕುಟುಕು ಜೀವವನ್ನ ಹಿಡಿದೆ ಇರುತ್ತದೆ.....
ನೋವ ನೆಲೆಯಲ್ಲಿಯೂ ಭರವಸೆಯ ಎಳೆಗಳಿವೆ
ಕ್ಷಣ ಭಂಗುರ ಮಾತಿಗಿಂತ ಮೌನದ ಲೇಪವೆ ಬಾಳಿನ ಕುರೂಪಕ್ಕೆ ಭೂಷಣ,
ನೆನಪ ಜೊತೆಯಿರದ ಏಕಾಂತ
ಸ್ಮೃತಿ ಸೆಲೆ ಬತ್ತಿ ಹೋದ ಲೋಕಾಂತ.....
ಎರಡೂ ಬರಿ ಬರಡು/
ಇಳಿಸಂಜೆಯ ಆವರಣಕ್ಕೆ
ಕನಸಿನ ಗಗನನೌಕೆ ಮೆಲ್ಲಗೆ ಇಳಿದು ಬರುತಿದೆ....
ತುಂಟ ತಾವರೆ ಕಣ್ಗಳಿಗೆ
ಸೋಕಲಿ ಸವಿನಿದಿರೆ ಅರೆಘಳಿಗೆ,
ಮುಂಜಾವು ಸುಂದರವಾಗೋದು
ಕಾರಿರುಳು ಸವಿ ಗುಂಗಾಗಿ ಕಾಡೋದು....
ನಿನ್ನ ನೆನಪುಕ್ಕುವಾಗ ಮಾತ್ರ.//

ಮೋಡದ ದುಗುಡ ಹೊತ್ತ ಬಾನ ಮನದ ಒಳಗೆ ಮೌನ ಮರ್ಮರವಿದೆ.....

ಸಣ್ಣ ಸಣ್ಣ ಕನಸುಗಳ ಬಣ್ಣ
ಅನಿರೀಕ್ಷಿತ ದುಗುಡದ ಮೋಡಗಳ ಮುಸಲಧಾರೆಗೆ.....
ತೊಳೆದು ಹೋಗುವಾಗ ಅಸಹಾಯಕವಾಗಿ ಮನ ಕಂಪಿಸುತ್ತದೆ,
ಬಿಸಿಲ ಕೋಲಿನಲ್ಲಿ ನೆಲದೆದೆಯ ಸೋಕಿದ ಬಾನಿನೊಡೆಯನಿಗೆ
ಸಿಕ್ಕಿದ್ದು ನವಿರಾದ ಹುಸಿ ರೋಮಾಂಚನ ಮಾತ್ರ/
ಕತ್ತಲ ಕಡಲೊಳಗೆ ಬೆಳಕ ಸಾವಿರ ಮುತ್ತುಗಳಿವೆ
ಮನ ಮಾಸಿದ್ದರೂ ನಿರೀಕ್ಷೆ ಮಿನುಗಿಸುವ ಕೋಟಿ ಹೊಳೆವ ನತ್ತುಗಳಿವೆ.....
ಕವಿಯಾದ ಕರ್ಮಕ್ಕೆ ಬರೆಯುತ್ತೇನೆ
ಮೌನದ ರಾಗಕ್ಕೆ ಅನಿವಾರ್ಯ ಕಿವಿಯಾಗುತ್ತೇನೆ,
ಹಾಗೆಯೆ ಸಾಗುವ ಹಾದಿಯಲ್ಲಿ ಒಂಟಿತನ ಕಾಡುವ ಕ್ಷಣಗಳೆಲ್ಲ
ಕಣ್ಣ ಹನಿಗಳು ಸಾಂಗತ್ಯದ ಸಾಮಿಪ್ಯ ನೀಡುತ್ತವೆ.//


ಮರೆತ ಹಾದಿಯಲ್ಲಿ ಹೊರಳಿ ಹೆಜ್ಜೆಯಿಡುವಾಗ
ಹಳೆಯ ಮುಳ್ಳುಗಳು ಮತ್ತೆ ಮತ್ತೆ ಯಾತನಾಮಯವಾಗಿ ಚುಚ್ಚಿ ಕಾಡುತ್ತವೆ......
ದೂರ ತೀರದ ಕನಸಿನ ನೌಕೆಗೆ
ನಡುಗಡಲಲ್ಲೆ ತಳ ತೂತು ಬಿದ್ದ ಸಂಕಟ,
ನನಸಿನ ಆಸೆ ಕ್ಷೀಣವಾಗುತ್ತಿದ್ದರೂ ಸಹ
ಕನಸಿನ ಕೈಹುಟ್ಟು ಇನ್ನೂ ಸಕ್ರಿಯವಾಗಿರೋದಂತೂ ದಿಟ/
ಸುರಿವ ಹನಿ ಹನಿಯಲ್ಲೂ ಒಲವ ಸೋನೆ
ನನ್ನ ಪ್ರತಿ ಕನವರಿಕೆಯಲ್ಲೂ ನೀನೆ ಬರಿ ನೀನೆ....
ಮೌನ ಮನದ ಕತ್ತಲಿಗೆ ಬಿದ್ದ ಭೀಕರ ಬೆಂಕಿಗೆ
ಸಂಭ್ರಮದ ದೊಂದಿ ಬಲಿಯಾದದ್ದು,
ಒಲವ ದೀಪ ಆರುವ ಮೊದಲು ಸಿಡಿಸಿದ
ನಿರಾಕರಣೆಯ ಅನಿರೀಕ್ಷಿತ ಸೊಡರಿನಿಂದಲೆ.//


ಬಾಳ ಬಡ ಗುಡಿಸಲು ಉರಿದು
ಬೂದಿಯಾಗಿ ಇನ್ನಿಲ್ಲವಾಗಿದ್ದು.....
ಅದರೊಳಗೆ ಬೆಳಕ ನಿರೀಕ್ಷೆಯಲ್ಲಿ ಹಚ್ಚಿರಿಸಿದ್ದ
ಪ್ರೇಮದ ಮಣ್ಣ ಹಣತೆಯ ಕಿರು ಕಿಡಿಯಿಂದಲೆ,
ಆಸೆಯ ತೀರ ಸುದೂರ ಬಲು ದೂರ
ನಾವೆಯ ಹುಟ್ಟು ನೆಲ ಮುಟ್ಟದು....
ಒಡಕು ದೋಣಿಯೆಂದೂ ನಿರೀಕ್ಷೆಯ ದಡ ಸೇರಿ
ಅಲ್ಲೆಂದೂ ಸಂತಸದ ಗೂಡು ಕಟ್ಟದು/
ಹಸುರಿನ ಕನಸು ಬಿದ್ದರೂ ಸಾಕು
ಕೋಗಿಲೆಯ ಕಂಠ ತನ್ನಷ್ಟಕ್ಕೆ ತಾನೆ ಇಂಪಾಗುತ್ತದೆ....
ನಿನ್ನ ನೆನಪು ಸುಳಿದರೂ ಸಾಕು ನನ್ನ ಮೌನ ಮಾರ್ದವವಾಗಿ
ಸುಡು ಸೆಖೆಯಲ್ಲೂ ಮನ ತಂಪಾಗುತ್ತದೆ,
ಗಾಳಿಯಲ್ಲಿ ಹಾರಿಬಿಟ್ಟ ಕನಸಿನ ಹೂಮರಿಗಳಿಗೆಲ್ಲ
ರೆಕ್ಕೆ ಬಲಿತು ಸತತ ಹಾರಾಟದಿಂದ ಹೈರಾಣಾದರೂ ಸಹ....
ಅವಕ್ಕಿನ್ನೂ ನಿನ್ನ ಹೆಗಲ ರೆಂಬೆಯ ಗುರಿಯನ್ನ ಇನ್ನೂ ಮುಟ್ಟಲಾಗಿಯೆ ಇಲ್ಲ!//


ನಾದದ ಅಂತರಾಳ ಹೊಕ್ಕ ತಾಳದ ಮೈತುಂಬ
ಗಾನದ ಗಂಧ ಆವರಿಸಿ ಘಮಘಮಿಸುತ್ತಿದೆ....
ಗಾಳಿಗೂ ಎಡೆಯಿರದಷ್ಟು ಹತ್ತಿರದಲ್ಲಿ ಅಂಟಿಕೊಂಡ
ಒಲವ ಜೀವ ಅದೆಷ್ಟೆ ದೂರವಿದ್ದರೂ
ವಾಸ್ತವದಲ್ಲಿ ಇನ್ನಷ್ಟು ಹತ್ತಿರವಾಗಿರೋದು ವಿಸ್ಮಯ,
ಕರೆದು ಕರೆದು ಸಾಕಾಗಿ ಹೂತು ಹೋದ
ಕಂಠದ ಆಳದಲ್ಲಿ ಹಳೆಯ ಸ್ವರಗಳದೆ ಮಾರ್ದನಿ/
ಕುಡಿಯೊಡೆದ ಕನಸಿನ ಮೊಗ್ಗುಗಳೆಲ್ಲ
ಸಾಕಾರ ಸುಮಗಳಾಗಿ ಅರಳುವಂತಾಗಿದ್ದಾರೆ....
ಬದುಕು ಖಂಡಿತ ಕಿಲುಬು ಬಂಗಾರಕ್ಕಿಂತ ಅತ್ಯಮೂಲ್ಯವಾಗುತ್ತಿತ್ತು,
ಕರಗಿ ನೀರಾದರೂ ಸಹ
ನೆನಪುಗಳ ನಿತ್ಯ ಸಾಂಗತ್ಯ.....
ಮೌನಿ ಮನದ ಒಳಗೊಳಗೆ
ಅವ್ಯಕ್ತ ಆಹ್ಲಾದವನ್ನೆ ಹೊತ್ತು ತರುತ್ತವೆ// 

Sunday, June 16, 2013

ನಿರ್ಜೀವ ಸಂಸತ್ತಿನಲ್ಲಿ ಕೆಲಸಕ್ಕೆ ಬಾರದ ಸಂಸದರು.......




( ಕರಾವಳಿ ಕರ್ನಾಟಕದ ಸಂಸದರಿಗೆ ಈ ಮಾತನ್ನು ಬರೆದದ್ದು, ಈ ಸಂದೇಶವನ್ನ ಅವರಲ್ಲಿ ಇಬ್ಬರ ಗಮನಕ್ಕೆ ತರಲಾಗಿದೆ, ಮೂರು ಕಾಸಿನ ಪ್ರಯೋಜನ ಇದರಿಂದ ಇಲ್ಲ ಎನ್ನುವ ಅರಿವಿದ್ದೂ ಸಹ.)


ಇದೇನಿದು ಸಂಸದರೆ ಮಂಗಳೂರಿಗೆ, ಅದು ಸಹ ವಾರಕ್ಕೊಮ್ಮೆ ಕಳೆದ ರೈಲ್ವೆ ಬಜೆಟ್‍ನಲ್ಲಿ ಘೋಷಿಸಿದ್ದ ಹೊಸ ರೈಲು ಕೇವಲ "ರೈಲು" ಬಿಟ್ಟಂತಾಗಿದೆಯಲ್ಲ!

ಸೇಲಂ, ಕೊಯಮತ್ತೂರು, ಪಾಲ್ಘಾಟ್, ಕಣ್ಣೂರು ದಾರಿಯಾಗಿ ಈ ಕಣ್ಣೊರೆಸುವ ರೈಲು ಬಿಟ್ಟಿರೋದು ಯಾವ ಕರ್ಮಕ್ಕಾಗಿ? ಮಲಯಾಳಿ ಸಂಸದರು ಲಾಬಿ ಮಾಡುವಾಗ ನೀವೆಲ್ಲ ನಿದ್ದೆಯಲ್ಲಿದ್ದಿರಾ ಸ್ವಾಮಿ? ನಿಮ್ಮನ್ನೆ ನಂಬಿದ್ದೆವಲ್ಲ ನಾವೆಲ್ಲ.

ಈಗಾಗಲೆ ಕೊಂಕಣ ರೈಲ್ವೆ ಮಾರ್ಗಕ್ಕೆ ಸಂಪರ್ಕವಾಗುವ ಪಾಲ್ಘಾಟ್ ಸೀಳುದಾರಿಯಿಂದ ಈ ಮಾರ್ಗವಾಗಿ ಕೇರಳ ಹಾಗೂ ತಮಿಳುನಾಡಿನ ಉದ್ದಗಲದಿಂದ ಬರೋಬ್ಬರಿ ೩೮ ರೈಲುಗಳು ನಿತ್ಯ ಸಿಟಿ ಬಸ್ಸಿನಂತೆ ಮಂಗಳೂರಿನ ಕಡೆಗೆ ಓಡಾಡುತ್ತಿವೆ. ಅದರಲ್ಲಿ ಒಂದು ರೈಲಂತೂ ನೇರ ಬೆಂಗಳೂರಿನಿಂದ ಇದೇ ಮಾರ್ಗವಾಗಿ ಕಣ್ಣೂರಿನವರೆಗೆ ನಿತ್ಯ ಸಂಪರ್ಕ ಕಲ್ಪಿಸುತ್ತಿದೆ. ಇದು ಸಾಲದು ಅಂತ ಮಂಗಳೂರಿನ ನಿತ್ಯ ಇರುಳಿನ ರೈಲಿಗೂ ಕಣ್ಣೂರಿನವರೆಗೆ ಅನಗತ್ಯ ವಿಸ್ತರಣೆ! ಈಗ ಅದೆ ಸಾಲಿಗೆ ಇನ್ನೊಂದು ಹೊಸ ರೈಲು ಸಿಕ್ಕ ಮಲಯಾಳಿಯ ಮನ ಪ್ರಸನ್ನವಾಗಿರಲಿಕ್ಕೆ ಸಾಕು. ನಮ್ಮವರ ನಿಷ್ಕ್ರಿಯತೆಯ ಫಲಾಭವಿ ಮಲಯಾಳಿಯಾಗುತ್ತಿದ್ದರೆ ಕರಾವಳಿ ಕನ್ನಡಿಗ ಮಾತ್ರ ಎಂದಿನ ಹಾಗೆ ಪೆಕರನಂತೆ ಬಾಯಿಬಾಯಿ ಬಿಡುತ್ತಿದ್ದಾನೆ.


ಇಷ್ಟೆಲ್ಲಾ ನಾಟಕ ಮಾಡೊದಕ್ಕಿಂತ ಒಂದೊಳ್ಳೆ ರೇಟು ಬಂದರೆ ಸಮಯ ನೋಡಿಕೊಂಡು ನಮ್ಮ ಕರಾವಳಿ ಜಿಲ್ಲೆಗಳನ್ನ ಮಲಯಾಳಿಗಳಿಗೂ, ಮೈಸೂರು ಭಾಗದ ನಾಲ್ಕಾರು ಜಿಲ್ಲೆಗಳನ್ನ ತಮಿಳುನಾಡಿಗೂ, ಅಳಿದುಳಿವ ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳನ್ನ ಮರಾಠಿಗರಿಗೂ ಹರಾಜು ಹಾಕೋದು ವಾಸಿ. ಸದ್ಯದ ಪರಿಸ್ಥಿತಿಯಲ್ಲಿ ಹಂಗಾದರೂ ನಾವು ಬಡ ಎಬಡ ಕನ್ನಡಿಗರು ಸುಖವಾಗಿದ್ದೇವು ಅನ್ನಿಸುತ್ತೆ!

ಅಲ್ಲಾ ಮಂಗಳೂರು, ಉಡುಪಿ, ಕಾರವಾರ ಇವೆಲ್ಲಾ ಬಡಪಾಯಿ ಪಟ್ಟಣಗಳು ನಮ್ಮ ರಾಜ್ಯದಲ್ಲಿಯೆ ಇವೆಯೋ ಇಲ್ಲಾ ಕೇರಳದಲ್ಲಿದೆಯೋ? ಒಂದು ಕೆಲಸ ಮಾ,ಡಿ ಈ ಪರಿ ನಮ್ಮನ್ನ ಮಂಗ ಮಾಡಿ ಮಾನಸಿಕವಾಗಿ ಹಿಂಸಿಸೋದಕ್ಕಿಂತ ಇಡಿ ಈ ಮೂರು ಕರಾವಳಿ ಜಿಲ್ಲೆಗಳ ಹಣೆಬರಹ ನಿರ್ಧರಿಸುವ ಹಕ್ಕನ್ನ ಪೂರ್ತಿ ಮಲೆಯಾಳಿಗಳಿಗೆ ಧಾರೆ ಎರೆದು ಕೊಟ್ಟು ನೀವೆಲ್ಲ ನಿರಮ್ಮಳವಾಗಿದ್ದು ಬಿಡಿ. ನಮ್ಮಂತಹ ನೊಂದ ತಲೆತಿರುಕರ ಕಾಟವಾದರೂ ನಿಮಗಾಗ ತಪ್ಪುತ್ತದಲ್ಲ.

ನಿಮಗೆ ಮತ್ತು ಇನ್ನುಳಿದ ಕರಾವಳಿ ಕರುನಾಡಿನ ಇನ್ನಿಬ್ಬರು ಸಂಸದರಿಗೆ ಒಳ್ಳೆಯದಾಗಲಿ.