Monday, April 22, 2013

His master's voice-1

Sripathi Panditaradhyula Balasubrahmanyam born 4 June 1946 is an Indian playback singer, actor, music director, voice actor and film producer. He is sometimes referred to as S. P. B. or Balu. He won the National Film Award for Best Male Playback Singer six times and the Nandi Awards 25 times from Government of Andhra Pradesh.

He has sung over 40,000 songs in various Indian languages. He is the only playback singer in India to have won National Film Awards across four languages. He has also won a Filmfare Award, three Filmfare Awards South and numerous state awards from Tamil Nadu and Karnataka. He is a recipient of civilian awards such as Padmashri (2001) and Padma Bhushan (2011) from the government of India

ತುಳುಗಾದೆ-೬೧










"ಬಂಗಾರ್‍‍‍‍‍‍‍‍‍‍‍‍‍ದ್ ಬಿಸತ್ತಿಂದ್ ಬಂಜಿಗ್ ಪಾಡೋನರೆಗಾಪುಂಡ?"


{ ಅತಿ ಮುದ್ದು ಮುಚ್ಚಟೆ ಮಕ್ಕಳನ್ನ ಕೆಡಿಸಬಲ್ಲದು, ಕರುಳಿನ ವಾಂಛಲ್ಯ ಹೆತ್ತವರಿಗೆ ಹೆಗ್ಗಣವನ್ನೂ ಮುದ್ದಗಿಸುವುದು ವಾಸ್ತವ. ಹಾಗಂತ ಅದೆಷ್ಟೆ ಮುದ್ದು ಉಕ್ಕಿ ಸುರಿಯುತ್ತಿದ್ದರೂ ಮಕ್ಕಳು ಮಾಡಿದ ತಪ್ಪನ್ನೆಲ್ಲ ಹೆತ್ತವರು ಕಡೆಗಣಿಸಿ ಮುದ್ದಾಡುವುದು ಮಕ್ಕಳ ಹಿತಚಿಂತನೆಗೆನೆ ಕುಂದು. ಅಂತೆಯೆ ಅದೆಷ್ಟೆ ಅಮೂಲ್ಯವಾಗಿದ್ದರೂ ಇನ್ನೊಬ್ಬರ ಗುಣದಲ್ಲಿನ ದೋಷಗಳನ್ನ ಅವರ ಅಂತಸ್ತಿನ ಮರೆಯಲ್ಲಿ ಮುಚ್ಚಿಕೊಳ್ಳಲಾಗದು. ಸಿರಿವಂತಿಕೆ-ಹಣದ ಮದ ಅನಾಚಾರಕ್ಕೆ ಮುಕ್ತ ಪರವಾನಗಿಯಾಗಲಾರದು. ಹಣದ ಬಲವಿದೆ-ರಾಜಕೀಯ ಪ್ರಭಾವವಿದೆ ಅಂದ ಮಾತ್ರಕ್ಕೆ ಅಂತವರ ದರ್ಪಗಳನ್ನೆಲ್ಲ ಇನ್ನಿತರ ಬಡಪಾಯಿಗಳು ಹಲ್ಲು ಕಚ್ಚಿ ಸಹಿಸಿಕೊಳ್ಳಬೇಕಿಲ್ಲ.


ಹಾಗೆಯೆ ಬಂಗಾರ, ನೈಸರ್ಗಿಕವಾಗಿ ಲಭ್ಯವಾಗುವ ಲೋಹಗಳಲ್ಲಿ ಪ್ಲಾಟಿನಂ ಹೊರತು ಪಡಿಸಿದರೆ ಅತ್ಯಂತ ದುಬಾರು ಮಾರುಕಟ್ಟೆ ದರ ಹೊಂದಿರುವುದು ಬಂಗಾರ. ಮೌಲ್ಯದಲ್ಲಿ ಹಾಗೂ ಆಡಂಬರದ ಪ್ರದರ್ಶನದಲ್ಲಿ ಲೋಹಗಳಿಗೆ ರಾಜನಾದ ಬಂಗಾರವನ್ನ ಹೊಂದುವುದು ಧರಿಸುವುದು ಸಾಮಾಜಿಕವಾಗಿ ಪ್ರತಿಷ್ಠಿತ ಸಂಗತಿಯಾಗಿ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಆಭರಣ ಒಡವೆಗಳ ತಯಾರಿಕೆಯಲ್ಲಿ ಬಳಕೆಯಾಗುವ ಬಂಗಾರವನ್ನ ಕತ್ತಿ ತಯಾರಿಸಲು ಯಾರೂ ಬಳಸಲಾರರು. ದೇವಸ್ಥಾನಗಳಲ್ಲಿ ಅಪರೂಪಕ್ಕೆ ಪೂಜಾ ಮೂರ್ತಿಯ ಅಲಂಕಾರಕ್ಕೆ ಬಂಗಾರದ ಕತ್ತಿ ಮಾಡಿಸಿರುವುದುಂಟಾದರೂ ನಿತ್ಯದ ಬಳಕೆಗೆ ಬಂಗಾರದ ಕತ್ತಿ ಮಾಡಿಸಿರುವ ಉದಾಹರಣೆಗಳು ತುಳುನಾಡಿನ ಮಟ್ಟಿಗಂತೂ ಇಲ್ಲವೆ ಇಲ್ಲ.


ಲೋಹಗಳಲ್ಲಿ ಶ್ರೇಷ್ಠವೆಂದ ಮಾತ್ರಕ್ಕೆ ಬಂಗಾರದ ಕತ್ತಿ ಮಾಡಿಸಿದ್ದರೂ ಅದನ್ನ ಹೊಟ್ಟೆಗೆ ಚುಚ್ಚಿಕೊಳ್ಳಲು ಸಾಧ್ಯವಿಲ್ಲ. ಕಬ್ಬಿಣದ್ದೆ ಆಗಿರಲಿ, ಹಿತ್ತಾಳೆ ಅಥವಾ ಬಂಗಾರದ್ದೆ ಆಗಿರಲಿ ಕತ್ತಿಯಾದ ಮೇಲೆ ಅದರಿಂದ ಇರಿದು ಕೊಂಡರೆ ಕತ್ತರಿಸಿ ಹಾಕುವ ಅದರ ಗುಣದಲ್ಲೇನೂ ಬದಲಾವಣೆ ಕಾಣುವುದಿಲ್ಲ. ಬಂಗಾರದ ಕತ್ತಿಯಾದ ಮಾತ್ರಕ್ಕೆ ನೋವಿನ ಜಾಗದಲ್ಲಿ ಸಂತಸದ ಬುಗ್ಗೆಯೇಳುವುದೂ ಇಲ್ಲ. ಒಟ್ಟಿನಲ್ಲಿ ಅನುಭವಿಸುವ ನೋವಿನ ಪ್ರಮಾಣದಲ್ಲಿ ಗುಲಗಂಜಿಯಷ್ಟೂ ಕಡಿಮೆಯಾಗುವುದಿಲ್ಲ. ಈ ವಾಸ್ತವವನ್ನರಿತವರು ಮೂಲಗುಣಕ್ಕೆ ಮನ್ನಣೆ ಕೊಡುತ್ತಾರೆಯೆ ಹೊರತು ಗುಣವನ್ನ ಹೊಂದಿದ ವ್ಯಕ್ತಿಯ ಪ್ರಭಾವ ಹಾಗೂ ಅಂತಸ್ತಿನ ಹಿನ್ನೆಲೆಗಲ್ಲ ಎನ್ನುತ್ತದೆ ಈ ಗಾದೆ. ಕನ್ನಡದಲ್ಲಿಯೂ "ಚಿನ್ನದ ಸೂಜಿಯನ್ನ ಕಣ್ಣಿಗೆ ಚುಚ್ಚಿಕೊಳ್ಳಲಾಗದು" ಎನ್ನುವ ತದ್ರೂಪಿ ಗಾದೆಯಿದೆ.}



( ಬಂಗಾರ್‍‍‍‍‍‍‍‍‍‍‍‍‍ದ್ ಬಿಸತ್ತಿಂದ್ ಬಂಜಿಗ್ ಪಾಡೋನರೆಗಾಪುಂಡ? = ಬಂಗಾರದ ಕೈಕತ್ತಿಯೆಂದು ಹೊಟ್ಟೆಗೆ ಹಾಕಿಕೊಳ್ಳಲಾಗದು.)


Saturday, April 20, 2013

ತುಳುಗಾದೆ-೬೦









"ನುಪ್ಪುಗ್ ಗತಿ ಇಜ್ಯಂದೆ ನಟ್ಟುನಾಯೆಗ್ ಮೀಸೆ ತಿಕ್ಯರೆ ಒರಿಯೆಗೆ!"


{ ಇದು ಅಲ್ಪನ ಅಹಂಕಾರಕ್ಕೆ ಚುಚ್ಚು ಮಾತಾಗಿ ಬಳಸುವ ವ್ಯಂಗ್ಯದ ಗಾದೆ ಮಾತು. ತನ್ನ ಮಿತಿ ಮೀರಿ ಮೆರೆಯುವ, ಆದ್ಯತೆ ಮೀರಿ ಸೊಕ್ಕಿನಲ್ಲಿ ದುಂದು ವೆಚ್ಚಕ್ಕೆಳಸುವ ಮಂದಿಯನ್ನ ಹೀಯ್ಯಾಳಿಸಲು ತುಳುವರು ಈ ಗಾದೆಯ ಉಪಮೆಯನ್ನ ಧಾರಾಳವಾಗಿ ಬಳಸಿ ನಿವಾಳಿಸುತ್ತಾರೆ. ಯಾವಾಗಲೂ ಊರಿನ ಪಂಚಾಯ್ತಿ ಮಾಡುತ್ತಾ ಕಂಡವರ ವಿಷಯದಲ್ಲಿ ಮೂಗು ತೂರಿಸುತ್ತಾ ತನ್ನ ಅಮೂಲ್ಯ ತೀರ್ಪನ್ನ ಯಾರೂ ಸಹ ಕೇಳದಿದ್ದರೂ ಬಿಟ್ಟಿಯಾಗಿ ಕೊಡುತ್ತಾ ವ್ಯರ್ಥ ದಿನದುದ್ದ ಕಾಲ ಹಾಕುವ ಪೂಟು ಲಾಯರಿಗಳಂತಹ ಮಂದಿಯನ್ನ ಇನ್ನಿತರ ಎಡೆಗಳಂತೆ ಗ್ರಾಮೀಣ ತುಳುನಾಡಿನಲ್ಲೂ ಕಾಣಬಹುದು. ಇಂತಹ ಕೆಲಸಕ್ಕೆ ಬಾರದ ಸಮಾಜ "ಶೇವಕ"ರ ಬಾಲವಾಗಿ ಬಹಳ ಸಾರಿ ತೈನಾತಿಯೊಬ್ಬ ಇದ್ದೆ ಇರುತ್ತಾನೆ! ತನಗೆ ತಿನ್ನಲು ಗತಿಯಿಲ್ಲದೆ ಊರವರನ್ನ ಯಾಮಾರಿಸಿಕೊಂಡು ನಾಲ್ಕು ಕಾಸು ಹೊಂಚುವ ಇಂತಹ ಮೈಗಳ್ಳರು ಆ ಆಳಿನ ಸಂಬಳವನ್ನ ಅದೆಲ್ಲಿಂದ ತಂದು ಕೊಡುತ್ತಾರೆ ಅನ್ನುವ ವಿಸ್ಮಯಕ್ಕೆ ಉತ್ತರ ಸಿಗುವುದೆ ಇಲ್ಲ.


ಒಬ್ಬನಿಗೆ ಅನ್ನಕ್ಕೆ ಗತಿಯಿರಲಿಲ್ಲವಂತೆ. ನಿತ್ಯ ಬೆಳಗಾದರೆ ಸಾಕು ಅನ್ನದ ತಹತಹಿಕೆಯಲ್ಲಿ ಮನೆಮನೆ ಸುತ್ತುವ ಭಿಕ್ಷಾ ಪಾತ್ರೆಯನ್ನ ಮುಂದೊಡ್ಡಿ ಬೇಡುವ ಅನಿವಾರ್ಯತೆ ಅವನಿಗೆ ಇತ್ತಂತೆ. ಹೀಗಿದ್ದರೂ ಅವನಲ್ಲೂ ಒಂದು ಶೋಕಿಯಿತ್ತು! ಉದ್ದ ಮೀಸೆ ಬಿಟ್ಟಿದ್ದ ಅವನು ಅದರ ದೇಖಾರೇಕಿಗೆ ಆಳೊಬ್ಬನನ್ನ ನೇಮಿಸಿಕೊಂಡಿದ್ದನಂತೆ. ನಿತ್ಯ ತನ್ನ ಅನ್ನದ ಆಲೋಚನೆ ಮಾಡಬೇಕಿದ್ದರೂ ಬೆಳಗಾಗುತ್ತಲೆ ಆ ಗತಿಯಿಲ್ಲದವನ ಭರ್ಜರಿ ಮೀಸೆಗೆ ಆ ಆಳು ಬೆಳಗಾಗುತ್ತಲೆ ಎಣ್ಣೆ ತಿಕ್ಕಿ ಒಪ್ಪವಾಗಿ ಅದನ್ನ ಬಾಚಿ ಕೂದಲುಗಳನ್ನ ನವಿರಾಗಿರುವಂತೆ ನೋಡಿಕೊಳ್ಳುತ್ತಿದ್ದನಂತೆ. ತನ್ನ ಗಂಜಿಗೆ ಗತಿಯಿಲ್ಲದ ಆ ಭಿಕಾರಿ ಆಳಿಗೆ ಅದೆಲ್ಲಿಂದ ಸಂಬಳ ಕೊಡುತ್ತಿದ್ದನೋ ಅಂತ ಊರೆಲ್ಲ ಆಶ್ಚರ್ಯ ಪಡುತ್ತಿತ್ತಂತೆ!


ಯಾವಾಗಲೂ ನಮ್ಮ ಮಿತಿಯಲ್ಲಿಯೆ ಕಾಲು ಚಾಚಬೇಕು. ನಮ್ಮ ಆದ್ಯತೆಗಳು ವಸ್ತುನಿಷ್ಠವಾಗಿದ್ದಷ್ಟೂ ನಾವು ಗೆಲ್ಲುತ್ತಿರುತ್ತೇವೆ. ಮೂಲಭೂತ ಅಗತ್ಯಗಳನ್ನ ಪೂರೈಸಿ ಕೊಂಡ ನಂತರವಷ್ಟೆ ನಮ್ಮ ಶೋಕಿಗಳೆಡೆಗೆ ಗಮನ ನೀಡುವುದು ಕ್ರಮವಾಗಬೇಕು. ತಿನ್ನುವ ಅನ್ನಕ್ಕೆ ಗತಿಯಿಲ್ಲದಾಗ ವೈಭವದ ಅಮಲಿಗೆ ಏರುವುದು ನಮ್ಮನ್ನ ಇನ್ನಷ್ಟು ಅಧಃಪತನಕ್ಕಷ್ಟೆ ಒಯ್ದು ನೂಕಬಲ್ಲದು. ಹೀಗಾಗಿ ನಾವು ಸದಾ ಅಲ್ಪತನದ ಐಶ್ವರ್ಯ ಮೆರೆಯ ಕೂಡದು ಅನ್ನುವ ತಾತ್ಪರ್ಯ ಈ ಗಾದೆಯದ್ದು.}



( ನುಪ್ಪುಗ್ ಗತಿ ಇಜ್ಯಂದೆ ನಟ್ಟುನಾಯೆಗ್ ಮೀಸೆ ತಿಕ್ಯರೆ ಒರಿಯೆಗೆ! = ಅನ್ನಕ್ಕೆ ಗತಿಯಿಲ್ಲದೆ ಬೇಡುವವನಿಗೆ ಮೀಸೆ ತಿಕ್ಕಲಿಕ್ಕೆ ಒಬ್ಬನಂತೆ!. )

Monday, April 15, 2013

ಕೊನೆ ಕೊನೆಗೆ ನೀ ಬದಲಾದರೂ, ನಾ ಮಾತ್ರ ಅದೆ ಹಚ್ಚ ಹಳಬ....







ತೊಳೆದಿಟ್ಟ ಮನೆಯಂತಹ ಮನ ಹೊತ್ತ ನನಗೆ
ನಿನ್ನ ಹೊರತು ಇನ್ಯಾರದೆ ಪಾದದ ಕೆಸರು.....
ಅಲ್ಲಿ ಚಿತ್ತಾರ ಮೂಡಿಸುವುದು ಬೇಕಿಲ್ಲ,
ಬೇರೆ ಇನ್ನೇನಿಲ್ಲ ನಿನ್ನ ನೆನಪಿನ ಪಸೆಯಷ್ಟೆ ಉಳಿದಿರೋದು
ಅದರಿಂದಲೆ ಸುದೀರ್ಘ ಇನ್ನೊಂದು ವರ್ಷವನ್ನ....
ನಾ ಸಂಯಮದಿಂದ ಕಳೆದಿರೋದು/
ಸರಿಯದ ಕ್ಷಣಗಳ ಹೊರತೂ ನಡೆಯದ ದಿನಗಳ ಮರೆತೂ....
ಸಂವತ್ಸರವೊಂದು ಮತ್ತೆಂದೂ ಸಿಗದಂತೆ ಕಳೆದೆ ಹೋಗಿದೆ,
ನೋವಿನ ಜಾರುಬಂಡಿಯ ಮೇಲೆ
ನಲಿವು ಸಲೀಸಾಗಿ ಜಾರಿದೆ.//


ಎಳೆಯ ಚಿಗುರ ಮಾವಿನೆಲೆಗಳನ್ನ
ಮನೆಯಂಗಳದಲ್ಲಿ ಕಾಣುವಾಗ.....
ನನಗದರಲ್ಲೂ ನಿನ್ನ ಮುಖವೆ
ಅದೇಕೆ ಕಂಡು ಕಾಡುತ್ತದೆಯೋ ಗೊತ್ತಾಗುತ್ತಿಲ್ಲ,
ತುಂಬಿದ ಮಾತುಗಳ ಗಲಭೆಯ ಸಭೆಯಲ್ಲಿ
ನನ್ನ ತಪ್ತ ಮನ ಮಾತ್ರ ಚಿರ ಮೌನ/
ಉಸುರಲಾಗದ ಕೆಲವು ಗುಟ್ಟುಗಳನ್ನ
ಗಾಳಿಯಲ್ಲಿ ತೇಲಿ ಬಿಟ್ಟಿದ್ದೇನೆ.....
ನಿನ್ನ ಹೆಸರ ವಿಳಾಸ ಅದಕ್ಕೂ ಗೊತ್ತು,
ಅದಕ್ಕೆ ನೋಡು ಅದು ನಿನಗೇನೆ ಹಾಕುತ್ತಿದೆ ಸುತ್ತು.//


ನೆಲವ ಸೋಕದ ನವಿರು ಕನಸುಗಳಿಗೆಲ್ಲ
ನಯವಾದ ಒಲವಿನ ತೋಳ್ತೆಕ್ಕೆಯಲ್ಲಿ.....
ಇರುಳೆಲ್ಲ ಅರೆಬಿರಿದ ಕಣ್ಗಳ ಸುಖದ ನಿದಿರೆ ಕಾದಿದೆ,
ಗಂಭೀರ ಒಲವಿನ ನಿಯತ್ತು ಸಂಶಯಕ್ಕೀಡಾದಾಗ
ಸ್ವ ಸಮರ್ಥನೆಯ ನೂರು ಮಾತುಗಳಿಗಿಂತ......
ಒಂದೆ ಒಂದು ದೀರ್ಘ ಮೌನವೆ ಉತ್ತಮ ಮನದೊಡವೆ/
ಮೊದಲ ಭೇಟಿಯ ನಲಿವು
ಕೊನೆಯ ವಿದಾಯ ಭೇಟಿಯ ಕಾಠಿಣ್ಯದ ನೋವು....
ನೆನಪಲ್ಲಿ ಲೀನವಾದ ನನ್ನ ಬಾಳು ಇಷ್ಟೆ,
ಅದೇನೆ ಆದರೂ ನಿನ್ನನೆ ನಾನಿಷ್ಟ ಪಟ್ಟೆ.//


ಮತ್ತೆ ನಿನ್ನ ನೆನಪು ಕಾಡುವಾಗ
ಅದರ ಹಿನ್ನೆಲೆಯಲ್ಲಿ ನನ್ನ ಮನಸು ಬಾಡುವಾಗ...
ನಾನು ನಿನ್ನ ಹೆಸರನೆ ಗುನುಗುತೀನಿ
ನೋವಲೂ ಸೊರಗಿದ ಕಣ್ಣನ್ನ ತುಸು ಮಿನುಗುತೀನಿ.
ಕತ್ತಲ ತೋಳ್ತೆಕ್ಕೆಯಲ್ಲಿ ಬೆತ್ತಲಾದ ಕನಸುಗಳ
ನರನರಗಳಲ್ಲೂ ಕಾತರದ ತಹತಹಿಕೆಯಿದೆ/
ಪಿಸುಪಿಸು ಮನದ ಮಾತುಗಳಿಗೆ
ತುಸುತುಸು ಕನಸ ಹನಿಗಳ ಬೆರಸಿ.....
ಹಸಿಬಿಸಿ ಕನವರಿಕೆಗಳನ್ನೆಲ್ಲ ನಸುನಸು ಕನವರಿಸುವುದೆ
ನಿಜವಾದ ನಿಷ್ಕಲ್ಮಶ ಪ್ರೀತಿ,
ಗುಣವಾಗದ ಖಾಯಿಲೆ ನನಗೆ
ಅದಕ್ಕೆ ಇಂಬುಕೊಡುವ ವಿರಹದ ಮದ್ದನ್ನ ಜೊತೆಯಲ್ಲೆ ಕಂಡಾಗ....
ಎಲ್ಲರಿಗೂ ಅದರ ಹೆಸರು
ಒಲವೆನ್ನೋದು ಖಚಿತವಾಯ್ತು.//


ಹೂಮನ ಅಕಾಲದಲ್ಲಿ ಬಿರಿದು
ನಗುವನೆಲ್ಲೂ ಕಾಣದೆ....
ಮತ್ತೆ ಮೊಗ್ಗಾಗಿ ಮುದುಡಿ ಹೋಯಿತು,
ಗತಿಸುವ ಪ್ರತಿಘಳಿಗೆಯೂ ನಾನಂದುಕೊಳ್ಳುತ್ತೇನೆ
ನಾವಿಬ್ಬರೂ ಒಬ್ಬರನ್ನೊಬ್ಬರು ಕ್ಷುಲ್ಲಕ ಕಾರಣಗಳಂದಾಗಿ ಕಳೆದುಕೊಂಡು......
ಅಸಲಿಗೆ ಬದುಕಿನಲ್ಲಿ, ಕಳೆದುಕೊಂಡದ್ದಾದರೂ ಏನನ್ನ?/
ಮತ್ತೆಂದೂ ಮೂಡದ ನಿರೀಕ್ಷೆಯ ರವಿ
ಮುಳುಗದ ನಿರಾಸೆಯ ಶಶಿ....
ಬಾಳೆಂದುಬು ಹುಸಿ ಭರವಸೆಗಳ ನಿತ್ಯ ದೊಂಬರಾಟ,
ಮಾಸಿದ ಹೆಜ್ಜೆಗುರುತುಗಳು
ಸೊರಗಿ ಕ್ಷೀಣವಾದ ನಿರೀಕ್ಷೆಯ ಹಸಿರು ಹಾದಿ....
ಕೊನೆಯುಸಿರಲ್ಲೂ ಕನವರಿಸುತಿರೋದು ಕೇವಲ ನಿನ್ನನೆ.//


ಘಳಿಗೆಗೊಮ್ಮೆ ಎದೆಯ ದಂಡೆ ಸೋಕುವ
ನೆನಪಿನ ಅಲೆಗಳಿಂದ ಮನದ ತೀರವೆಲ್ಲ ಒದ್ದೆ ಒದ್ದೆ.....
ಗಾಳಿ ಹೇಳಿದ ಪೋಲಿ ಗುಟ್ಟಿಗೆ
ಹೂವಿನೆದೆಯಲ್ಲಿ ಎದ್ದಿರೋದು ಲಜ್ಜೆಯ ಕಂಪನ,
ನಿನ್ನ ನಿರ್ಲಕ್ಷ್ಯದ ಅರಿವಿದ್ದರೂ
ನಿನ್ನನೆ ಕಾಯುವ ನನ್ನ ಮೊಂಡ ಮನಕ್ಕೆ.....
ವಿವೇಕದ ಮಾತುಗಳು ಖಂಡಿತ ಅರ್ಥವಾಗಲಾರವು/
ಗುಡಿಸಿ ಹಾಕಿದರೂ ಸವೆದು ಹೋಗದ
ನಿನ್ನ ನೆನಪಿನ ಧೂಳೆಲ್ಲ ಮನದ ನೆಲವನ್ನ ಗಾಢವಾಗಿ ಆವರಿಸಿವೆ.....
ನೀನಿಲ್ಲದ ನಿನ್ನ ಸ್ಥಾನದಲ್ಲಿ ಇನ್ಯಾರನ್ನೋ ಕಲ್ಪಿಸಿಕೊಳ್ಳೋದೂ
ನನಗೆ ಅಸಾಧ್ಯ,
ಇದ್ದರೂ ಇಲ್ಲದಿದ್ದರೂ
ಆ ಜಾಗ ನಿನಗಷ್ಟೆ ಮೀಸಲು.//

Sunday, April 14, 2013

ಹಾಗೆ ಸುಮ್ಮನೆ ನಿನ್ನ ನೆನಪಿನಲ್ಲಿ....






ಅಸ್ತಂಗತವಾದ ಕೂಡಲೆ ಕನಸು ಕರಗುವುದಿಲ್ಲ 
ಅದರ ಪಸೆಯಿನ್ನೂ ಕಣ್ಣಲ್ಲಿ ಹನಿಹನಿಯಾಗಿ ಉಳಿದೆ ಇರುತ್ತದೆ.....
ಹಳೆಯ ಹೊರಳು ಹಾದಿಯಲ್ಲಿ ಕೊಂಚ ವಿಶ್ರಮಿಸುವ ಮುನ್ನ, 
ಮನ ಹುಡುಕಿದ್ದು ಮತ್ತದೆ 
ಹಚ್ಚ ಹಳೆಯ ಕನಸುಗಳನ್ನೆ/
ಕತ್ತಲ ಕೂಪದಲ್ಲಳುವ ನಿತ್ಯದ ಭಗ್ನ ಸ್ವಪ್ನಗಳಿಗೆ 
ಸಾಂತ್ವಾನ ನಿರೀಕ್ಷೆಯ ಕ್ಷೀಣ ಹಣತೆ,
ತಳ ಕಾಣದ ಆಳ 
ತುದಿ ಸಿಗದ ಎತ್ತರ ಒಲವಿಗೆ ಸರಿಯಾದ ಹೋಲಿಕೆ//



ನೂರು ನುಡಿಗಳ ಹಂಗೇಕೆ? 
ಒಂದೆ ಒಂದು ಮೌನದ ನೆನಹು ಮಿಗಿಲಲ್ಲವ 
ಅದೇ ಸಾಕೆ?.....
ಕನಸ ಮುಸುಗಿನಲ್ಲಿ ಮನಸಲ್ಲರಳಿದ ಮುಂಜಾನೆಯ ಮೌನದಲ್ಲಿ 
ನನ್ನ ಜೊತೆಗೆ ನೀನಿದ್ದಿ,
ದಿನದ ಪತ್ರಿಕೆಗಳಲ್ಲಿ ನನ್ನ ಕಣ್ಣೋಡುವಾಗಲೂ 
ಅದರಲ್ಲದು ಅರಸೋದು ನಿನ್ನ ನಗುವಿನದೆ ಸುದ್ದಿ/
ಖಾಲಿ ಕನಸಿನ ಬೆನ್ನು ಹತ್ತಿದ ಮನಸಿಗೆ 
ಸೋಲಿನ ಭೀತಿ ಇಲ್ಲದೆಯೇನೂ ಇರಲಿಲ್ಲ.....
ಸತ್ತ ನಿರೀಕ್ಷೆಗಳ ಸೂತಕದ ಛಾಯೆಯಡಿಯಲ್ಲಿ 
ಕೂತ ಕನಸುಗಳದ್ದು ತೀರಲಾರದ ಸಂಕಟ,
ಹೆಜ್ಜೆಗಳು ಕುರುಹನ್ನುಳಿಸುತ್ತವೆ 
ಹಾಗುಳಿದ ಒತ್ತಾಯದ ಗುರುತು 
ನಿತ್ಯ ಮೌನದಲಳಿಸುತ್ತವೆ.//



ಹಗುರಾಗಿ ಹರಿದ ಸಾಲುಗಳನ್ನೆಲ್ಲ 
ಹಾಡೆಂದೆ ಭ್ರಮಿಸುವ ನನಗೆ..... 
ಇನ್ನೂ ನಿನಗೆ ನನ್ನೆಡೆಗೆ ಸಹಜ ಒಲವಿದ್ದ ಬಗ್ಗೆ 
ಗಾಢ ಗುಮಾನಿಗಳಿವೆ!,
ಹಗಲ ನಿಸ್ವಾರ್ಥ ಪ್ರಾರ್ಥನೆ-ಇರುಳ ಆರ್ತನಾದ
ದಿನದುದ್ದ ಕಾಡುವ ಸ್ವಪ್ನ-ಇರುಳಲ್ಲಿ.... 
ಕಣ್ಣೊಂದಾಗಲು ಬಿಡದೆ ಕಾಡುವ ಸಂಕಟ 
ಇವಕ್ಕೆಲ್ಲ ಒಟ್ಟಾಗಿ ಮುರಿದ ಒಲವೆನ್ನಬಹುದು./
ಎದೆಯಂಗಳದಲ್ಲಿ ಅರಳಿದ ಮೊಗ್ಗುಗಳಿಗೆ 
ಸುಮವಾಗಿ ಘಮಘಮಿಸುವ ಅದೃಷ್ಟ ಸಿಗದಿದ್ದರೂ.... 
ನಿನ್ನ ನೀಳ ಕೈಬೆರಳು ಒಂದೊಮ್ಮೆ 
ಅದ ಸೋಕಿದ ಗುರುತುಳಿದಿದೆಯಲ್ಲ ಅಷ್ಟೆ ಸಾಕು,
ಮರಳಿ ಮೂಡಿದ ಹಗಲ ನಿಚ್ಚಳ ಬೆಳಕಿನಲ್ಲಿ
ನಿನ್ನ ಮೊಗದ ನೆನಹಿನೊಂದಿಗೆ ಮುದದೊಂದಿಗಗೇನೆ ನಾ ಕಣ್ತೆರೆದೆ//



ಸುಂದರ ಕನಸಿನ ಬಲೆಯೊಳಗೆ ಸಿಕ್ಕಿ ನರಳುವ ಮನ 
ಹೇಳಲಾಗದ ಕೆಲವು ಕಾರಣಗಳಿಗೆ..... 
ಇತ್ತೀಚಿನ ಕೆಲ ದಿನಗಳಿಂದ ಚಿರಮೌನ,
ಇರುಳ ರಾಗಕೆ ಕನಸ ತಾಳ ಬಿದ್ದರೆ ಸಾಕು 
ನಿನ್ನ ನನ್ನ ವಿರಹಗೀತೆ ತಯಾರ್!/
ಬರೆಯಲಾಗದ ನಾಲ್ಕು ಸಾಲುಗಳನ್ನ 
ಹಾಡಿ ಹಗುರಾಗುವ ನನಗೆ.... 
ಅದ ನಿನ್ನ ಕಿವಿ ಕೇಳುತ್ತದಾ ಅನ್ನುವ ಕುತೂಹಲವಿದೆ,
ಮಲಗದ ಮನ-ಕರಗದ ಕ್ಷಣ.... 
ವಿರಹ ಭೀಕರ 
ಸಂತಸ ಹುಟ್ಟಿಸೋದು ಕೇವಲ ನಿರೀಕ್ಷೆ ಕನಸ ಸಾಕಾರ//

Monday, April 1, 2013

ತುಳುಗಾದೆ-೫೯










"ನಮನ ಭೂತ ಏತು ಕುಂಬಾರುಡ್‍ಂದು ನಮಕ್ ಗೊತ್ತಿಜ್ಜಾ?"


{ ನಮ್ಮವರ, ನಮ್ಮ ಆಪ್ತರ, ನಮ್ಮ ಬಾಳ ಸಂಗಾತಿಗಳ ನಡೆಯನ್ನ ಕುರಿತು ಅದನ್ನ ಹಾಸ್ಯವಾಗಿ ಅನಾವರಣ ಮಾಡುತ್ತಾ ಅವರ ಪ್ರಸ್ತುತಿಯಲ್ಲಿಯೆ ಇನ್ನೊಬ್ಬರ ಎದುರಿನಲ್ಲಿ ಗೇಲಿ ಮಾಡಿಕೊಂಡು ಅವರನ್ನ ಚುಡಾಯಿಸುತ್ತಾ ಆಡುವ ತಮಾಷೆಯ ಮಾತಿದು. ಂತಹ ಬಹಿರಂಗದ ತಮಾಷೆಯ ಪ್ರಸಂಗಗಳು ಸಂಬಂಧದ ಸಡಿಲವಾಗುತ್ತಿರುವ ದಾರಗಳನ್ನ ಮತ್ತೆ ಬಿಗಿಯಾಗಿಸಿ ಒಬ್ಬರಲ್ಲೊಬ್ಬರು ಲೀನವಾಗುವಂತೆ ಮಾಡುವಲ್ಲಿ ಸಹಕಾರಿಯಾಗಿರುತ್ತದೆ. ಇಬ್ಬರು ಸ್ವತಂತ್ರ್ಯ ವ್ಯಕ್ತಿಗಳ ನಡುವಿನ ಸಲುಗೆ, ಪರಸ್ಪರರ ಮೇಲಿರುವ ಹಕ್ಕು ಸಾಧಿಸುವ ಗುಣದ ಗಾಢತೆಯನ್ನ ಈ ತರಹದ ಪರಸ್ಪರರ ಕಾಲೆಳೆತಗಳು ಆಗಾಗ ಖಚಿತ ಪಡಿಸುತ್ತವೆ.  


ತುಳುನಾಡು ಈ ಮೊದಲೆ ತಿಳಿಸಿದಂತೆ ಭೂತಾರಾಧನೆಯ ನೆಲ. ಇಲ್ಲಿ ವೈದಿಕ ದೇವರು-ದಿಂಡರಿಗಿಂತ ತುಳುನಾಡಿಗರ ಪಿತೃದೈವಗಳಾದ ಭೂತಗಳಿಗೆ ಭಕ್ತಿ ಹಾಗೂ ಸಮರ್ಪಣ ಭಾವದಲ್ಲಿ ಹೆಚ್ಚು ಆದ್ಯತೆಯಿದೆ. ಕೋಲ-ತಂಬಿಲ-ಮೆಚ್ಚಿ-ನಡಾವಳಿ-ಮಹಾನಡಾವಳಿ ಹೀಗೆ ಬಗೆಬಗೆಯಲ್ಲಿ ನಡೆಯುವ ಭೂತಾರಾಧನೆ ಅದು ಸಾರ್ವಜನಿಕ ಗೆರೋಡಿಗಳಲ್ಲಿ ಆಯೋಜಿತವಾಗಿದ್ದರೂ ಅಥವಾ ಗುತ್ತಿನ ಮನೆಯ ಚಾವಡಿಗಳಲ್ಲಿ ನಡೆಯಬೇಕಿದ್ದರೂ ಅದರಲ್ಲಿ ಪರವ-ಪಂಬದ-ನಲ್ಕೆಯವರು ಆದ್ಯತೆಯ ಮೇರೆಗೆ ಭಾಗಿಯಾಗದೆ, ಅವರು ಭೂತದ ಪಾತ್ರಿಗಳಾಗಿ ಶೃಂಗರಿಸಿಕೊಂಡು ಭೂತವನ್ನ ತಮ್ಮ ಮೈಮೇಲೆ ಆವಾಹಿಸಿಕೊಂಡು ದೈವವಾಣಿಗಳನ್ನ ಅಭಯಗಳನ್ನ ನುಡಿಗಟ್ಟಿನ ಮೂಲಕ ಅಭಿವ್ಯಕ್ತಿಸದೆ ಹೋದಲ್ಲಿ ಅದು ಅಪೂರ್ಣ. ಅವರು ನಡುಗುತ್ತಾ ಭೂತಗಳ ಮಾಧ್ಯಮವಾಗುವುದು ಕ್ಷಣಕಾಲ ಸ್ಥಳದಲ್ಲಿ ಒಂದು ರೀತಿಯ ಅಲೌಖಿಕ ಕಳೆಯನ್ನ ಮೂಡಿಸುತ್ತದೆ. ಆದರೆ ಇಲ್ಲೊಂದು ಧರ್ಮ ಸೂಕ್ಷ್ಮವಿದೆ. ನಮ್ಮ ಮನೆಯ ಭೂತ, ಸಾಮಾನ್ಯವಾಗಿ ರಾಜನ್ ದೈವಗಳ ಪರಿವಾರದ ಭೂತಗಳು ಅಭಯ ನೀಡುವಾಗ 'ಏನನ್ನ ನುಡಿಯಬೇಕು' ಅನ್ನುವ ಪೂರ್ವ ನಿರ್ಧಾರವನ್ನ ಮೌಖಿಕವಾಗಿ ಗುತ್ತಿನ ಯಜಮಾನ ಗುತ್ತಿನಾರ್ ಭೂತ ಪಾತ್ರಧಾರಿಗಳಿಗೆ ಗತ್ತಿನಿಂದ ನೀಡಿ ಆದೇಶಿಸುವುದೂ ಇದೆ. ಆದರೆ ಇವೆಲ್ಲ ಕೇವಲ ಅನೌಪಚಾರಿಕವಾಗಿ ಕದ್ದುಮುಚ್ಚಿ ಮಾತ್ರ ನೀಡಬಲ್ಲಂತಹ ಅನಧಿಕೃತ ಆದೇಶಗಳು ಮಾತ್ರ ಆಗಿರುತ್ತವೆ ಹಾಗೆಲ್ಲಾ ತಾಕೀತು ಮಾಡಲು ಗುತ್ತಿನ ಯಜಮಾನನಿಗೆ ಅಧಿಕಾರವಿಲ್ಲ ಎನ್ನುವುದು ಸ್ಪಷ್ಟ.



ದೈವ ಮಾಧ್ಯಮನಾಗಿ ತನಗೆ ಸಿಗುವ ಈ "ಅಪಾರ ಮರ್ಯಾದೆ" ಹಾಗೂ ಭಕ್ತಿ ಇವೆಲ್ಲ ಕ್ಷಣಿಕ ಸುಖ! ಹಾಗೂ ಭೂತದ ಆವೇಶ ತನ್ನ ಮೈಯಿಂದ ಇಳಿದ ನಂತರ ಅವರು ತನಗೆ ಧಣಿ, ಜಾತಿಯಿಂದ ಅಸ್ಪರ್ಶ್ಯನಾದ ತಾನು ಅವರ ಆಳು ಎನ್ನುವ ಸ್ಪಷ್ಟ ವಾಸ್ತವದ ಅರಿವಿರುವ ಯಾವೊಬ್ಬ ಭೂತದ ವೇಷಧಾರಿಯು ಧಣಿಗಳ ಅಪೇಕ್ಷೆಗೆ ವಿರುದ್ಧದ ದೈವ ತೀರ್ಪನ್ನ ತನ್ನ ನಾಲಗೆಯಿಂದ ಉದುರಿಸಿ ತನ್ನ ತಿನ್ನುವ ಅನ್ನಕ್ಕೆ ಕಲ್ಲು ಹಾಕಿಕೊಳ್ಳುವ ಧೈರ್ಯ ಮಾಡಲಾರ! ಆವೇಶದಲ್ಲಿ ಮಗ್ನನಾಗಿರುವಾಗ ರಾಶಿ ಹಾಕಿದ ಬೆಂಕಿಯ ಕೆಂಡದ ಮೇಲೆ ಹೊರಳಾಡಿ ತನ್ನ ಪ್ರಭಾವ ಪ್ರದರ್ಶಿಸುವ ಆಮೂಲಕ ನೆರೆದ ಭಕ್ತಾದಿಗಳ ಎದೆಯಲ್ಲಿ ಭಯ ಹುಟ್ಟಿಸುವಲ್ಲಿ ಸಫಲನಾಗುವ ಭೂತ ವೇಷಧಾರಿ ಅನಂತರ ಮಾತ್ರ ಸಕಲರ ತಿರಸ್ಕಾರಕ್ಕೆ ಸಿಲುಕುವುದು ಸಾಮಾನ್ಯ. ವೇಷ ಕಳಚಿದ ನಂತರದ ಲೌಕಿಕ ಬಾಳಿನಲ್ಲಿ ತನ್ನ ಮಿತಿಯ ಅರಿವು ಅವನಿಗಿರುವ ತನಕ ಹೆಚ್ಚಾಗಿ ಭೂವಿವಾದ ಹಾಗೂ ಆಸ್ತಿ ಹಂಚಿಕೆಗಳಲ್ಲಿ ಭೂಮಾಲಿಕರು ನಯವಾಗಿ ಬೆದರಿಕೆಯೊಡ್ಡಿ ಭೂತಗಳ ನುಡಿಗಳಲ್ಲಿ ತಮ್ಮ ಮನಧಾಭಿಲಾಷೆಗೆ ದೈವದ ಸಮ್ಮತಿಯ ಮುದ್ರೆಯನ್ನ ಸಾರ್ವಜನಿಕವಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರು. ಅಂತಹ "ನಿಗದಿತ ತೀರ್ಪಿನ ಪಂದ್ಯ"ಗಳನ್ನ ಈ ಬಗ್ಗೆ ಸುಳಿವಿರುವ ಕಿಡಿಗೇಡಿಗಳು "ನಮ್ಮ ಭೂತ ಎಷ್ಟು ನಡುಗುತ್ತದೆ ಅಂತ ನಮಗೆ ಗೊತ್ತಿಲ್ಲವ!" ಅಂತ ಆಡಿಕೊಂಡು ನಗುತ್ತಾರೆ. ಕನ್ನಡದಲ್ಲಿಯೂ "ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ವಾ" ಎನ್ನುವ ಗಾದೆ ಇದೆ ಅರ್ಥವನ್ನ ಸೂಸುತ್ತಲಿದೆ.}



( ನಮನ ಭೂತ ಏತು ಕುಂಬಾರುಡ್‍ಂದು ನಮಕ್ ಗೊತ್ತಿಜ್ಜಾ? = ನಮ್ಮ ಭೂತ ಎಷ್ಟು ನಡುಗುತ್ತದೆ ಅಂತ ನಮಗೆ ಗೊತ್ತಿಲ್ವಾ? )

ತುಳುಗಾದೆ-೫೮









"ಬೇಲೆ ದಾಂತಿನ ಆಚಾರಿ ಬಾಲೆದ ಪೀಂಕಾನ್ ಕೆತ್ಯೆ!"




{ ತುಳುನಾಡಿನ ಗ್ರಾಮೀಣರಲ್ಲಿ ಹಾಸ್ಯಪ್ರಜ್ಞೆ ವಿಪರೀತ.ಅವರ ಈ ಹಾಸ್ಯಾಸಕ್ತಿ ಅವರು ಸೃಷ್ಟಿಸಿ ಬಳಸುತ್ತಿರುವ ಗಾದೆಗಳಲ್ಲೂ ವಿಪರೀತವಾಗಿ ಬಳಕೆಯಾಗಿದೆ. ಅದಕ್ಕೊಂದು ಅತ್ಯುತ್ತಮ ಉದಾಹರಣೆ ಈ ತಮಾಷೆಯ ಗಾದೆ. ತಮಗೆ ನೈಪುಣ್ಯವಿಲ್ಲದ ವಿಷಯದಲ್ಲಿ ಅತ್ಯಾಸಕ್ತಿ ವಹಿಸಿ ತಮ್ಮ ಪರಿಣತ ಕ್ಷೇತ್ರವನ್ನ ಕಡೆಗಣಿಸುವ ಮಂದಿಯನ್ನ ಅಣಗಿಸಲು ಈ ಗಾದೆಮಾತನ್ನ ಬಳಸಲಾಗುತ್ತದೆ. ತಾವು ನಿಪುಣರಾಗಿರುವಲ್ಲಿ ಸಾಮರ್ಥ್ಯ ತೋರುವ ಅವ್ಕಾಶಕ್ಕೆ ಕೊರತೆಯಿರದಿದ್ದರೂ ಕೆಲವರಿಗೆ ಇನ್ಯಾವುದರಲ್ಲಾದರೂ ಅತಿ ನೈಪುಣ್ಯ ತೋರಿ ಲೋಕದ ಕಣ್ಣಲ್ಲಿ ಹೊಗಳಿಸಿಕೊಳ್ಳುವ ಉಮೇದಿರುತ್ತದಲ್ಲ ಅದೆ ಈ ಗಾದೆಗೆ ಮೂಲ ವಸ್ತು.


ಆಚಾರಿ ಅಂದರೆ ತುಳುನಾಡಿನ ಕರಕುಶಲಗಾರ. ಈ ಆಚಾರಿಗಳು ಮರದ ವಸ್ತುಗಳ, ಸ್ಮರಣಿಕೆಗಳ ಕುಸರಿ ಕೆತ್ತನೆ, ಮರದ ಪೀಠೋಪಕರಣಗಳ, ಗೃಹೋಪಯೋಗಿ ವಸ್ತುಗಳ ತಯಾರಿಕೆ ಹಾಗೂ ದುಬಾರಿ ಲೋಹಗಳಾದ ಚಿನ್ನ, ಬೆಳ್ಳಿ ಹಾಗೂ ಅಮೂಲ್ಯ ಕಲ್ಲುಗಳಾದ ವಜ್ರ, ಪಚ್ಚೆ, ಪುಷ್ಯರಾಗ, ನೀಲ, ಹವಳಗಂತಹ ರತ್ನಗಳ ಆಭರಣಗಳ ತಯಾರಿಯಲ್ಲಿ ಸಾಟಿಯಿಲ್ಲದವರಾಗಿ ಗುರುತಿಸಿಕೊಳ್ಳುತ್ತಾರೆ. ಒಟ್ಟಾರೆ ಈ ಎಲ್ಲರನ್ನೂ ಒಟ್ಟಾರೆಯಾಗಿ ತುಳುವರೆಂದೆ ಗುರುತಿಸುವುದು ಹೌದಾದರೂ ಇವರಲ್ಲಿ ಕರಕುಶಲತೆಯ ಸಮಾನ ಅಂಶಗಳ ಹೊರತೂ ಸಹ ವೃತ್ತಿ ಭೇದವಿದೆ. ಇಂತಹ ಆಚಾರಿಗಳಲ್ಲೊಬ್ಬನಾದ ಮರದ ಕೆಲಸದ ಆಚಾರಿಯನ್ನ ಈ ಗಾದೆ ಅವಲಂಬಿಸಿದೆ. ಕೊರಡಾದ ಒಣ ಮರವನ್ನ ಕೊಟ್ತರೆ ಅದರಿಂದ ಗುಣಮಟ್ತದ ಪೀಠೋಪಕರಣಗಳನ್ನ ತಯಾರಿಸುವ ಸಾಮರ್ಥ್ಯವುಳ್ಳ ಆಚಾರಿ ಅದನ್ನ ನಿಯತ್ತಾಗಿ ಮಾಡುವುದನ್ನ ಬಿಟ್ಟು ಆದ ಎಡವಟ್ತಿನ ಕತೆಯಿದು.


ಆಚಾರಿಯೊಬ್ಬ ಮೈತುರಿಸಿಕೊಳ್ಳುವಷ್ಟು ಬಿಡುವಿಲ್ಲದಿದ್ದರೂ ತನ್ನ ಮರಗೆಲಸ ಬಿಟ್ಟು ಹೊಸ ಅನ್ವೇಷಣೆಗೆ ಹೊರಟನಂತೆ. ಅವನ ಅನ್ವೇಷಕ ಕಣ್ಣಿಗೆ ಅಂಗಳದಲ್ಲಾಡುತ್ತಿದ್ದ ದುರಾದೃಷ್ಟಶಾಲಿ ಮಗು ಕಂಡಿದೆ! ಸರಿ ಇನ್ನೇಕೆ ತಡ? ಉರುಟುರುಟಾಗಿರುವ ಆ ಎಳೆ ಆಡುವ ಮಗುವಿನ ಅಂಡನ್ನು ತನ್ನ ಒರಟು ಮರವನ್ನ ಸಪಾಟಾಗಿಸಲು ಬಳಸುವ ಕಿಸೋಳಿಯನ್ನ ಬಳಸಿ ಅತ್ತಿಂದಿತ್ತ ಅದನ್ನ ಮಗುವಿನ ಕುಂಡೆಯ ಮೇಲೆ ಎಳೆದೆಳೆದು ಸಪಾಟಾಗಿಸಿ ನಯಗೊಳಿಸಿ ಎಲ್ಲರ ಮೆಚ್ಚುಗೆ ಗಳಿಸಿಯೆ ತೀರುವ ಅತ್ಯುತ್ಸಾಹದಿಂದ ಆ ಅಮಾಯಕ ಮಗುವಿನ ಮೇಲೆ ತನ್ನ ಪ್ರಯೋಗವನ್ನ ಜಾರಿಗೊಳಿಸಿಯೆ ಬಿಟ್ಟನಂತೆ! ಮುಂದೇನಾಗಿರಬಹುದು ಎನ್ನುವುದು ನಿಮ್ಮ ಊಹೆಗೆ ಬಿಟ್ಟದ್ದು! "ಮಾಡ ಬಾರದ್ದು ಮಾಡಿದರೆ ಆಗ ಬಾರದ್ದೆ ಆಗುತ್ತದೆ!" ಎನ್ನುವ ಸಿರಿಗನ್ನಡದ ಗಾದೆಯ ಆಶಯವೂ ಇದೇನೆ.}



( ಬೇಲೆ ದಾಂತಿನ ಆಚಾರಿ ಬಾಲೆದ ಪೀಂಕಾನ್ ಕೆತ್ಯೆ! = ಕೆಲಸಕ್ಕೆ ಅತೀತನಾದ ಆಚಾರಿ ಮಗುವಿನ ಅಂಡು ಕೆತ್ತಿದ!.)