Saturday, February 9, 2013

ತುಳುಗಾದೆ-೬


"ಕಾಳಗ್ ಬತ್ತಿ ಬಡು ಬೊಳ್ಳೆಗುಲಾ ಬರು" { ತುಳುನಾಡಿನಲ್ಲಿ ಗದ್ದೆಯನ್ನ ಹೂಡಲಿಕ್ಕೆ ಕೋಣದ ಜೋಡಿಯನ್ನ ಕಟ್ಟಲಾಗುತ್ತದೆ. ಅದರಲ್ಲಿ ಸಾಮಾನ್ಯವಾಗಿ ಒಂದನ್ನ ಕಾಳ ಅಂದರೆ ಕರಿಯ ಮತ್ತು ಇನ್ನೊಂದನ್ನ ಬೊಳ್ಳ ಅಂದರೆ ಬಿಳಿಯ ಅಂತ ಸಾಮಾನ್ಯವಾಗಿ ಕರೆಯಲಾಗುತ್ತದೆ. ಕೆಲಸದ ಹೊತ್ತಲ್ಲಿ ಕಾಳನಿಗೆ ಬಾರುಕೋಲಿನ ಪೆಟ್ಟು ಬಿದ್ದಾಗ ಬೊಳ್ಳ 'ಅವನಿಗೆ ಹಾಅಗೆಯೆ ಆಗಬೇಕು! ಸರಿಯಾದ ಶಾಸ್ತಿಯಾಯ್ತು" ಅಂತ ಮನಸಿನಲ್ಲೆ ಖುಷಿ ಪಡುತ್ತದಂತೆ, ಆದರೆ ಅದೆ ವೇಳೆಗೆ ಆ ಬೆತ್ತದ ಏಟಿನ ರುಚಿ ನನಗೂ ಬೀಳುತ್ತದೆ ಅನ್ನೋದನ್ನ ಅದು ಮರೆತಿರುತ್ತದೆ! ಇದು ಈ ಗಾದೆಯ ವಾಚ್ಯಾರ್ಥ. ನಿಜವಾಗಿ ಇನ್ನೊಬ್ಬರಿಗೆ ಕಷ್ಟ ಬಂದಾಗ ನೆರೆಯವರಿಗೆ ಸಂಕಟ ಬಂದಾಗ ನಾವು ಅವರಿಗಾದ ನೋವಿಗೆ ಮರುಗಬೇಕಲ್ಲದೆ ವಿಕೃತವಾಗಿ ಒಳಗೊಳಗೆ ಖುಷಿ ಪಡಲೇಬಾರದು. ಅವರಿಗೆ ಬಂದ ಸಂಕಟ ಮುಂದೊಮ್ಮೆ ನಮಗೂ ಒದಗಿ ಬಂದೀತು. ಆಗ ನಮ್ಮ ಸಂಕಟಕೂ ಯಾರಾದರು ನಕ್ಕರೆ ನೋವಿನ ಬಾಧೆ ನಮಗೆ ಹೆಚ್ಚಾಗಬಹುದು ಅನ್ನುವುದನ್ನ ಯಾವಾಗಲೂ ಮರೆಯಬಾರದು ಎನ್ನುವ ಸಾರ ಈ ಗಾದೆಯದು. "ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ" ಎನ್ನುವ ಕನ್ನಡ ಗಾದೆ ಇದಕ್ಕೆ ಸಂವಾದಿಯಾದ್ದದ್ದು.) ( ಕಾಳಗ್ ಬತ್ತಿ ಬಡು ಬೊಳ್ಳೆಗುಲಾ ಬರು = ಕಾಳನಿಗೆ ಬಂದ ಬೆತ್ತ ಬೊಳ್ಳನಿಗೂ ಬಂದೀತು.)

ತುಳುಗಾದೆ-೫


"ಅಡಿತತ್ತುಂಡ ಆನೆಲಾ ಮುಗುರುಂಡು" { ಹೆಜ್ಜೆ ತಪ್ಪಿದರೆ ಆನೆಯೂ ಮಗುಚಿ ಬೀಳುತ್ತದೆ. ಸರಿಯಾದ ಹಾದಿಯಲ್ಲಿ ವಿಚಕ್ಷಣತೆಯನ್ನು ಉಪಯೋಗಿಸಿ ಹೆಜ್ಜೆ ಹಾಕದಿದ್ದರೆ ಎಂತಹ ನಿಸ್ಸೀಮರೂ ಎಡವಿ ಬೀಳುತ್ತಾರೆ. ಕೇವಲ ಹುಚ್ಚು ಹುಮ್ಮಸ್ಸು ಇದ್ದರಷ್ಟೆ ಸಾಲದು, ಸರಿಯಾದ ವಿವೇಚನೆಯೂ ಪ್ರತಿಕಾರ್ಯಕ್ಕೆ ತೊಡಗುವಾಗ ಇರಬೇಕಾದದ್ದು ಅತ್ಯಗತ್ಯ. ಆದ್ದರಿಂದ ಸೂಕ್ತ ಸಮಯ-ಸಲಹೆ-ಅವಕಾಶವನ್ನ ಪರಿಗಣಿಸಿ ವಿವೇಚಿಸಿ ನಿರ್ಧರಿಸಬೇಕು ಎನ್ನುತ್ತದೆ ಈ ಗಾದೆಯ ಸಾರ.) ( ಅಡಿ ತತ್ತುಂಡ ಆನೆಲಾ ಮುಗುರುಂಡು = ಹೆಜ್ಜೆ ತಪ್ಪಿದರೆ ಆನೆಯೂ ಎಡವಿ ಬೀಳುತ್ತದೆ.)

ತುಳುಗಾದೆ-೪


"ಅಜ್ಜೆರೆಗ್ ತೆಮ್ಮಲ್ಯೆಪ್ಯರ ಪಂಡ್ದ್ ಕೊರೊಡೋ" { ಅಜ್ಜನಿಗೆ ಮೊಮ್ಮಕ್ಕಳು ಕೆಮ್ಮುವ ಕಲೆ ಕಲಿಸಬೇಕಾಗಿಲ್ಲ ಎನ್ನುವ ಈ ಗಾದೆ ವಿಧೇಯತೆಯನ್ನು ಪ್ರತಿಪಾದಿಸುತ್ತದೆ. ತನ್ನ ವೃತ್ತಿ ಚಾತುರ್ಯದಲ್ಲಿ ನಿಪುಣರಾದ ಅನುಭವಿಗಳ ಮುಂದೆ ಹೊಸತಾಗಿ ಕಾರ್ಯಕ್ಷೇತ್ರಕ್ಕಿಳಿವ ಎಳೆಯರು ವಾದಕ್ಕಿಳಿಯಬಾರದು ಎನ್ನುವುದು ಈ ಗಾದೆಯ ಸಾರ. ತಮ್ಮ ವಯಸ್ಸು, ಅನುಭವ ಹಾಗೂ ಸಾಮರ್ಥ್ಯದ ಆಳವನ್ನು ಹೊಂದಿರುವ ಹಿರಿಯರ ಮಾರ್ಗದರ್ಶನ ಪಡೆಯಬೇಕೆ ವಿನಃ ಅವರನ್ನ ಹೀಗೆಳೆಯಬಾರದು ಎನ್ನುವುದು ವಾಚ್ಯಾರ್ಥ.} ( ಅಜ್ಜೆರೆಗ್ ತೆಮ್ಮಲ್ಯೆಪ್ಯರ ಪಂಡ್ದ್ ಕೊರೊಡೋ = ಅಜ್ಜನಿಗೆ ಕೆಮ್ಮಲು ಕಲಿಸಬೇಕೊ? )

ತುಳುಗಾದೆ-೩


‎""ಅಂಡೆದ ಬಾಯಿ ಕಟ್ಟೊಲಿ, ದೊಂಡೆದ ಬಾಯಿ ಕಟ್ಟೊಲಿಯೋ?" { ಹಂಡೆಯ ಬಾಯಿ ಅದೆಷ್ಟೇ ದೊಡ್ಡದಿದ್ದರೂ ಸರಿ ಸಾಹಸ ಮಾಡಿಯಾದರೂ ಅದನ್ನ ಕಟ್ಟಿ ಮರೆಮಾಡಬಹುದು. ಆದರೆ ಗಂಟಲನ್ನ ಒತ್ತಿ ಹಿಡಿದು ಆಡುವ ಬಾಯಿಯನ್ನೆಂದೂ ಕಟ್ಟಿಹಾಕಲಾಗದು. ಒಬ್ಬರು ನಮ್ಮ ಕುರಿತು ಬೆನ್ನ ಹಿಂದೆ ನೂರು ತರದಲ್ಲಿ ಅಪಪ್ರಚಾರ ಮಾಡುತ್ತಿರಬಹುದು. ಅದನ್ನ ನಿಲ್ಲಿಸಲು ಅಥವಾ ಆ ಕೆಟ್ಟ ವಿಷದ ನಾಲಗೆ ಹೊರಳುವ ಬಾಯಿಯನ್ನ ಕೊನೆಗೂ ಮುಚ್ಚಿಸುವ ಕಾರ್ಯ ಬಹುತೇಕ ಅಸಾಧ್ಯ ಅನ್ನುವುದು ಈ ಗಾದೆಯ ಒಳಾರ್ಥ. "ಊರ ಬಾಯಿಯನ್ನ ಯಾರೂ ಮುಚ್ಚಿಸಲಾರರು" ಎನ್ನುವ ಕನ್ನಡ ಗಾದೆ ಹಾಗೂ " ಹರಿದ ಬಾಯಿಯ ಹೊಲಿವ ಸೂಜಿ ಇನ್ನೂ ತಯಾರಾಗಿಲ್ಲ" ಎನ್ನುವ ಫ್ರೆಂಚ್ ಗಾದೆ ಅದನ್ನೆ ಧ್ವನಿಸುತ್ತವೆ.} ( ಅಂಡೆದ ಬಾಯಿ ಕಟ್ಟೊಲಿ, ದೊಂಡೆದ ಬಾಯಿ ಕಟ್ಟೊಲಿಯೋ? = ಹಂಡೆಯ ಬಾಯಿ ಕಟ್ಟಬಹುದು, ಗಂಟಲಿನ ಬಾಯಿ ಕಟ್ಟಲಾದೀತ? )

ತುಳುಗಾದೆ ೨


"ಅಂಚನೆ ಜರ್ಪುನೆಗ್ ಅರ್ಧ ರೊಟ್ಟಿ ಎಡ್ಡೆ" { ಈ ಗಾದೆಗೆ ಅರ್ಥ ಸ್ವಾರಸ್ಯಕರವಾಗಿದೆ, ರಾತ್ರಿಯಲ್ಲಿ ಹಾಗೆಯೆ ಬರಿ ಹೊಟ್ಟೆ ಹಸಿದು ಮಲಗುವವನಿಗೆ ಅರ್ಧ ರೊಟ್ಟಿಯಾದರೂ ಸಿಕ್ಕರೆ ಅದೇ ಸ್ವರ್ಗ. ಇದು ಪೂರ್ತಿ ಹಸಿವನ್ನ ತಣಿಸಲಾರದು ನಿಜ. ಆದರೆ, ಪೂರ್ತಿ ಉಪವಾಸ ಬೀಳುವುದಕ್ಕಿಂತ ಅರೆಹೊಟ್ಟೆ ತುಂಬಿಸಿ ಕೊಳ್ಳುವುದು ವಾಸಿ. ಒಬ್ಬರಿಂದ ತಕ್ಕಮಟ್ಟಿನ ಸಹಾಯ ಕಷ್ಟದಲ್ಲಿದ್ದಾಗ ನಿರೀಕ್ಷಿಸುವುದು ಇದ್ದದ್ದೆ. ಆಗ ಆ ಬಂಧು ತುಸುವಾದರೂ ನೆರವಾದರೆ ಪೂರ್ತಿ ಕಷ್ಟ ಪರಿಹಾರವಾಗಲಾರದಾದರೂ ಬೀಸುವ ದೊಣ್ಣೆಯಿಂದ ತತ್ಕಾಲಕ್ಕೆ ಖಂಡಿತ ತಪ್ಪಿಸಿ ಕೊಳ್ಳಬಹುದು. ಅಲ್ಲದೆ ಬಯಸಿದಷ್ಟು ಸಿಗದಾಗ ಸಿಕ್ಕಿದ್ದಷ್ಟಕ್ಕೆ ತೃಪ್ತಿ ಕಾಣಬೇಕು ಅನ್ನುವುದು ಇದರ ವಾಸ್ತವದ ತಾತ್ಪರ್ಯ. "ಕುರುಡುಗಣ್ಣಿಗಿಂತ ಮಳ್ಳೆಗಣ್ಣು ವಾಸಿ" ಅನ್ನುವುದು ಇದಕ್ಕೆ ಸಮಾನಾರ್ಥಕವಾದ ಕನ್ನಡ ಗಾದೆ.} (ಅಂಚನೆ ಜರ್ಪುನೆಗ್ ಅರ್ಧ ರೊಟ್ಟಿ ಎಡ್ಡೆ. = ಹಾಗೆಯೆ ಮಲಗುವ ಬದಲು ಅರ್ಧ ರೊಟ್ಟಿ ಒಳ್ಳೆಯದು.)

ತುಳುಗಾದೆ-೧

Friday, February 8, 2013

ಸುಳ್ಳೇ ಸುಳ್ಳು, ಎಲ್ಲಾ ಸುಳ್ಳೆ ಸುಳ್ಳು....


ಮೂರು ಮುಕಾಲು ಘಂಟೆ ಬಂಡಲ್ ಕಟ್ಟುತ್ತಾ ಶೆಟ್ಟರ್ ಓಡಿಸಿದ ಹಳಿಯಿಲ್ಲದ ರೈಲು ಕಡೆಗೂ ನಿಲ್ತಲ್ಲಪ್ಪ ರಾಮ ರಾಮ!.... ಇಷ್ಟು ದಭ ದಭೆ ಕೇಳಿಯೂ ಬಡ ಕನ್ನಡಿಗರ ಕಿವಿ ಹೊಟ್ಟಿ ಹೋಗಲಿಲ್ಲವಲ್ಲ ಏನಾಶ್ಚರ್ಯ?!
ಮೂರು ಮುಕ್ಕಾಲು ಘಂಟೆ ನಾಲ್ಕು ವರ್ಷದಿಂದ ಹಾಡಿದ್ದನ್ನೆ ಹಾಡಿ, ಹೊಗಳಿಕೊಂಡರು ತಮ್ಮನ್ನೆ ತಾವು.... ತೆಗೆದಿದ್ದರೂ ನಾಡನ್ನ-ನಾಡಿನ ಮಾನವನ್ನ ಮುಲಾಜಿಲ್ಲದೆ ಲಗಾಡಿ/ ಬಜೆಟ್ ಎಂಬ ಕ"ಮಲ"ದ ಹೂವನ್ನ ಬಡ-ಎಬಡ-ನಡು ಕನ್ನಡದಲ್ಲಿ ಜೊತೆಗೊಂದಿಷ್ಟು ಇಂಗ್ಲಿಸ್.... ನಂಚಿಕೊಂಡು ಒತ್ತಾಯಿಸಿ ಸುರಿದೆ ಬಿಟ್ಟರ್, ನಮ್ಮ ಅಳಿದೂರಿಗೆ ಉಳಿದ ಗೌಡ ಶೆಟ್ಟರ್ ಬೇಡದಿದ್ದರೂ ತೋಯ್ದು ತೊಪ್ಪೆಯಾಗಿ ಕನ್ನಡಿಗರು ಹಗಲ್ಲಲ್ಲೆ ಕೆಟ್ಟರ್,,,, ಅಸಹಾಯಕವಾಗಿ ಕಣ್ ಕಣ್ ಬಿಟ್ಟರ್//